ಜಗನ್ನಾಥ ಪಂಡಿತ ... ಗಂಗಾಲಹರಿ - ಸುನಾಥ

ಹೆಚ್ಚಿನ ಓದಿಗೆ: http://sallaap.blogspot.com/2010/08/blog-post_06.html

ಬೇಂದ್ರೆಯವರು ಕಾಶಿ ಕ್ಷೇತ್ರಕ್ಕೆ ಹೋದಾಗ, ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ ಬಳಿಕ ‘ಗಂಗಾಷ್ಟಕ’ ಎನ್ನುವ ಕವನವನ್ನು ರಚಿಸಿದರು. ಆ ಕವನದಲ್ಲಿಯ ಒಂದು ನುಡಿ ಹೀಗಿದೆ:

‘ರಾಜರಮಣಿಯರೆದೆಗೆ ಬೆಳಗಿನಲ್ಲುಳಿದಂಥ ಕಸ್ತೂರಿ ಬಿದ್ದು ಕೆಳಕೆ

ಮೈತೊಳೆದ ನೀರಿನೊಡ ಗಂಗೆಯಲಿ ಕೂಡಿದರೆ ಮುಕ್ತಿ ಕಸ್ತೂರಿ ಮೃಗಕೆ’

---ಹೀಗೆ ಹಾಡಿದ ಕವಿಯ ನಂಬಿ ನಿನ್ನಲ್ಲಿ ಮಿಂದೆ; ನಾನವನ ಬಟ್ಟೆಯವನು

ನನ್ನ ತಾಯಿಗೆ ಮುಕ್ತಿ ಮಿಂದಂದೆಯಾಗಿತ್ತು; ನಾನವಳ ಹೊಟ್ಟೆಯವನು.

ಈ ನುಡಿಯ ಮೊದಲೆರಡು ಸಾಲುಗಳು ಕವಿ ಜಗನ್ನಾಥ ಪಂಡಿತನ ‘ಗಂಗಾಲಹರಿ’ ಕಾವ್ಯದಿಂದ ಎತ್ತಿಕೊಂಡದ್ದು. ಸಂಸ್ಕೃತ ಕಾವ್ಯದ ಮೂಲಸಾಲುಗಳು ಹೀಗಿವೆ:

“ಪ್ರಭಾತೇ ಸ್ನಾಂತೀನಾಂ ನೃಪತಿ-ರಮಣೀನಾಂ ಕುಚತಟೀ-

ಗತೋ ಯಾವನ್ ಮಾತರ್ ಮಿಲತಿ ತವ ತೋಯೈರ್ಮೃಗಮದ:

ಮೃಗಾಸ್ತಾವದ್ ವೈಮಾನಿಕ ಶತಸಹಸ್ರೈಃ ಪರಿವೃತಾಃ

ವಿಶಂತಿ ಸ್ವಚ್ಛಂದಂ ವಿಮಲವಪುಷೋ ನಂದನವನಮ್”

ಈ ನುಡಿಯ ಭಾವಾರ್ಥ ಹೀಗಿದೆ:

ರಾಜಸ್ತ್ರೀಯರು ಸುಗಂಧಕ್ಕಾಗಿ ಕಸ್ತೂರಿ ಮೃಗದ ಮದವನ್ನು ಪೂಸಿಕೊಂಡಿರುತ್ತಾರೆ. ಬೆಳಗಿನಲ್ಲಿ ಆ ಸ್ತ್ರೀಯರು ಗಂಗಾಸ್ನಾನವನ್ನು ಮಾಡಿದಾಗ ಈ ಮದವು ಗಂಗಾನದಿಯ ನೀರಿನಲ್ಲಿ ಸೇರಿಕೊಳ್ಳುತ್ತದೆ.ಈ ಮದವನ್ನು ನೀಡಿದ ಕಸ್ತೂರಿ ಮೃಗಕ್ಕೆ ಸ್ವರ್ಗಪ್ರಾಪ್ತಿಯಾಗಲು ಇಷ್ಟೇ ಸಾಕು. ಅದು ವಿಮಲದೇಹದೊಂದಿಗೆ ನಂದನವನದಲ್ಲಿ ವಿಹರಿಸುತ್ತದೆ.

ಬೇಂದ್ರೆಯವರು ತಾವೂ ಸಹ ಕವಿಯಾದುದರಿಂದ, ಜಗನ್ನಾಥ ಪಂಡಿತನ ಕಾವ್ಯದ ಅಭಿಮಾನಿಯಾದುದರಿಂದ, ಏಕಲವ್ಯನಂತೆ ಅವನ ಮಾನಸಿಕ ಶಿಷ್ಯರಾದದ್ದರಿಂದ, ’ನಾನವನ ಬಟ್ಟೆಯವನು’ ಎಂದು ಹೇಳುತ್ತಾರೆ. ಬಟ್ಟೆ ಎಂದರೆ ಮಾರ್ಗ, ಪಥ ಎಂದರ್ಥ. ಕವಿ ಜಗನ್ನಾಥ ನಡೆದ ಹಾದಿಯಲ್ಲಿ ನಡೆದೇ ಬೇಂದ್ರೆಯವರು ‘ಗಂಗಾವತರಣ’ ರಚಿಸಿದರು.

ಕಸ್ತೂರಿ ಮೃಗದಿಂದ ಹುಟ್ಟಿದ ಮದವು ಗಂಗೆಯಲ್ಲಿ ಸೇರಿದಾಗ, ಆ ಮೃಗಕ್ಕೆ ಸ್ವರ್ಗಪ್ರಾಪ್ತಿಯಾಯಿತು ಎಂದು ಜಗನ್ನಾಥ ಪಂಡಿತ ಕವನಿಸಿದ್ದಾನೆ. ಅದೇ ರೀತಿಯಲ್ಲಿ, ತಾವು ಗಂಗೆಯಲ್ಲಿ ಮಿಂದದ್ದರಿಂದ, ತಮ್ಮ ತಾಯಿಗೂ ಸ್ವರ್ಗಪ್ರಾಪ್ತಿಯಾಗಬೇಕು ಎನ್ನುವದು ಬೇಂದ್ರೆಯವರ ಆಶಯ.

ಬೇಂದ್ರೆಯವರಿಗೆ ಈ ರೀತಿ ಸ್ಫೂರ್ತಿ ನೀಡಿದ ಜಗನ್ನಾಥ ಪಂಡಿತನು ಸಂಸ್ಕೃತದ ಉದ್ದಾಮ ಪಂಡಿತ ಹಾಗು ಕವಿ. ಈತನು ಮೊಗಲ ಬಾದಶಹರಾದ ಜಹಾಂಗೀರ, ಶಹಾಜಹಾನ ಹಾಗು ಔರಂಗಜೇಬ ಇವರ ಕಾಲದಲ್ಲಿ ಜೀವಿಸಿದ್ದನು.

ಜಗನ್ನಾಥನ ಹುಟ್ಟೂರು ಆಂಧ್ರಪ್ರದೇಶದ ವೆಂಗಿನಾಡು. ತಾಯಿ ಲಕ್ಷ್ಮೀ ಹಾಗು ತಂದೆ ಪೇರುಭಟ್ಟ. ತಂದೆಯಿಂದಲೇ ಶಿಕ್ಷಣ ಪಡೆದ ಈತನು ತನ್ನ ಅಪ್ರತಿಮ ಪಾಂಡಿತ್ಯದಿಂದ ಅನೇಕ ವಿದ್ವಾಂಸರನ್ನು ವಾದದಲ್ಲಿ ಜಯಿಸಿದ. ಇವನೊಡನೆ ವಾದಿಸಲು ಯಾರೂ ಮುಂದಾಗದಿರಲು, ‘ನಖಾನಾಂ ಪಾಂಡಿತ್ಯಂ ಪ್ರಕಟಯತು ಕಸ್ಮಿನ್?’ ಎಂದು ಅಬ್ಬರಿಸಿದ. ಸಿಂಹದ ಶೌರ್ಯವಿರುವದು ಅದರ ನಖ(=ಉಗುರು)ಗಳಲ್ಲಿ. ತಾನೂ ಸಹ ಆ ಸಿಂಹದಂತೆ; ಇತರ ವಿದ್ವಾಂಸರನ್ನು ಸಿಗಿದು ಹಾಕುವ ಈತನ ಪಾಂಡಿತ್ಯಕ್ಕೆ ಈಗ ಬಲಿಯೇ ಸಿಗುತ್ತಿಲ್ಲವಲ್ಲ ಎನ್ನುವದು ಈ ಗರ್ಜನೆಯ ತಾತ್ಪರ್ಯ. ಜಗನ್ನಾಥನು ಅನೇಕ ಪ್ರಾಚೀನ ವಿದ್ವಾಂಸರ ಶಾಸ್ತ್ರೀಯ ಸಿದ್ಧಾಂತಗಳನ್ನು ಖಂಡಿಸಿ ಉದ್ಗ್ರಂಥಗಳನು ರಚಿಸಿದ. `ಸಿದ್ಧಾಂತ ಕೌಮುದೀ’ ಎನ್ನುವ ಗ್ರಂಥಕ್ಕೆ ಭಟ್ಟೋಜಿ ದೀಕ್ಷಿತರು ಬರೆದ ‘ಮನೋರಮಾ’ ಎನ್ನುವ ವ್ಯಾಖ್ಯಾನಗ್ರಂಥಕ್ಕೆ ಪ್ರತಿಯಾಗಿ ‘ಮನೋರಮಾ ಕುಚಮರ್ದಿನೀ’ ಎನ್ನುವ ಗ್ರಂಥರಚನೆಯನ್ನು ಈತ ಮಾಡಿದ್ದನ್ನು ನೋಡಿದರೆ, ಈತನ ಉದ್ಧಟ ಪಾಂಡಿತ್ಯದ ಅರಿವಾಗದಿರದು.

ಏನಾದರೇನು, ಈತನ ದಾರಿದ್ರ್ಯ ಮಾತ್ರ ಹಿಂಗಲಿಲ್ಲ. ಆದುದರಿಂದ ಜಗನ್ನಾಥನು ರಜಪುತಾನಾದಲ್ಲಿರುವ ಜಯಪುರಕ್ಕೆ ಬಂದು, ಅಲ್ಲಿಯ ರಾಜನ ಆಶ್ರಯದಲ್ಲಿ ನೆಲೆ ನಿಂತ. ಜಯಪುರದಲ್ಲಿ ಓರ್ವ ಮುಸಲ್ಮಾನ ಧರ್ಮಗುರು ಅಲ್ಲಿಯ ಹಿಂದೂ ಪಂಡಿತರನ್ನೆಲ್ಲ ವಾದದಲ್ಲಿ ಸೋಲಿಸಿದ್ದ. ಜಗನ್ನಾಥನು ಅರಬ್ಬಿ ಭಾಷೆಯನ್ನು ಅಭ್ಯಾಸ ಮಾಡಿ ಆ ಯವನ ಪಂಡಿತನೊಡನೆ ವಾದಗೈದು, ಆತನನ್ನು ಸೋಲಿಸಿದ ಬಳಿಕ, ಈತನ ಕೀರ್ತಿಯು ದಿಲ್ಲಿಯವರೆಗೂ ಹಬ್ಬಿತು. ಆ ಸಮಯದಲ್ಲಿ ದಿಲ್ಲಿಯ ಬಾದಶಹನಾದ ಜಹಾಂಗೀರನ ಆಮಂತ್ರಣದ ಮೇರೆಗೆ ಜಗನ್ನಾಥನು ದಿಲ್ಲಿಯ ದರಬಾರಿಗೆ ತೆರಳಿ, ಅಲ್ಪ ಸಮಯದಲ್ಲಿಯೇ ಬಾದಶಹನಿಗೆ ಆಪ್ತನಾದ. ಜಹಾಂಗೀರನ ನಿಧನದ ನಂತರ ಬಾದಶಹನಾದ ಶಹಾಜಹಾನನಿಗೂ ಸಹ ಜಗನ್ನಾಥನು ಆಪ್ತಮಿತ್ರನೇ ಆಗಿದ್ದ. ಜಗನ್ನಾಥನ ಕಾವ್ಯಪಾಂಡಿತ್ಯವನ್ನು ಮೆಚ್ಚಿದ ಶಹಾಜಹಾನನು ಈತನಿಗೆ ‘ಕವೀಶ್ವರ’ ಎನ್ನುವ ಬಿರುದನ್ನು ನೀಡಿದ್ದ.

ಜಗನ್ನಾಥ ಪಂಡಿತ ಹಾಗು ಶಹಾಜಹಾನರು ರಾಜಮಂದಿರದಲ್ಲಿ ಒಮ್ಮೆ ಚದುರಂಗವಾಡುತ್ತ ಕುಳಿತಿದ್ದರು. ಆ ಸಮಯದಲ್ಲಿ ನೀರಡಿಸಿದ ಬಾದಶಹನಿಗೆ, ಓರ್ವ ತರುಣಿ ಚಿನ್ನದ ಹೂಜೆಯಲ್ಲಿ ನೀರು ನೀಡಿದಳು. ಆಟವಾಡುವ ಬದಲು, ಅವಳನ್ನೇ ನೋಡುತ್ತಲಿದ್ದ ಜಗನ್ನಾಥನಿಗೆ ಬಾದಶಹನು ಆ ತರುಣಿಯನ್ನು ವರ್ಣಿಸುವೆಯಾ ಎಂದು ತುಂಟಾಟದಲ್ಲಿ ಕೇಳಿದ. ಜಗನ್ನಾಥನು ಥಟ್ಟನೇ ನುಡಿದ ಆ ಕವನವು ಹೀಗಿದೆ:

“ಇಯಂ ಸುಸ್ತನೀ ಮಸ್ತಕನ್ಯಸ್ತಕುಂಭಾ

ಕುಸುಂಭಾರುಣಂ ಚಾರು ಚೇಲಂ ವಸಾನಾ

ಸಮಸ್ತಸ್ಯ ಲೋಕಸ್ಯ ಚೇತಃಪ್ರವೃತ್ತೀಮ್

ಗೃಹೀತ್ವಾ ಘುಟೇ ವಿನ್ಯಸ್ಯ ಯಾತೀವ ಭಾತಿ”

(ಅರುಣವರ್ಣದ ಬಟ್ಟೆಯನ್ನುಟ್ಟ, ತಲೆಯ ಮೆಲೆ ಕಳಶವನ್ನು ಹೊತ್ತ, ಈ ಪೀನಪಯೋಧರಿಯು ಸಮಸ್ತ ಲೋಕದ ಚೈತನ್ಯವನ್ನೇ ಹೊತ್ತು ತರುತ್ತಿರುವಂತೆ ಹೊಳೆಯುತ್ತಿದ್ದಾಳೆ.)

ಈ ವರ್ಣನೆಯನ್ನು ಕೇಳಿದ ಶಹಾಜಹಾನನು ಸಂತೋಷಗೊಂಡು ಕವಿಗೆ ಬಹುಮಾನ ಕೊಡಬಯಸಿದ. ಅವರೀರ್ವರ ನಡುವೆ ಆಗ ನಡೆದ ಸಂಭಾಷಣೆ ತುಂಬ ಸ್ವಾರಸ್ಯಕರವಾಗಿದೆ:

ಶಹಾಜಹಾನ: ಕವೀಶ್ವರ, ನನ್ನ ಅರಮನೆಯ ಆನೆಗಳನ್ನೆಲ್ಲ ನಿನಗೆ ಸಮ್ಮಾನವಾಗಿ ಕೊಡುತ್ತೇನೆ.

ಜಗನ್ನಾಥ: ‘ನ ಯಾಚೇ ಗಜಾಲೀಂ’ (ನನಗೆ ಆನೆಗಳ ಹಿಂಡು ಬೇಡ.)

ಶಹಾಜಹಾನ: ನನ್ನ ಎಲ್ಲ ಕುದುರೆಗಳನ್ನು ನಿನಗೆ ಕೊಡುವೆ.

ಜಗನ್ನಾಥ: ‘ನ ವಾ ವಾಜಿರಾಜೀಂ’ (ಕುದುರೆಗಳೂ ಬೇಡ.)

ಶಹಾಜಹಾನ: ದಿಲ್ಲೀಶ್ವರನ ಸಕಲ ಸಂಪತ್ತನ್ನೇ ನಿನಗೆ ಕೊಡಲೆ?

ಜಗನ್ನಾಥ: ‘ನ ವಿತ್ತೇಷು ಚಿತ್ತಂ ಮದೀಯಂ ಕದಾಪಿ’

(ಸಂಪತ್ತನ್ನು ನಾನು ಎಂದೂ ಬಯಸುವದಿಲ್ಲ.)

ಶಹಾಜಹಾನ: ಹಾಗಾದರೆ ನಿನಗೆ ಬೇಕಾದುದಾದರೂ ಏನು?

ಜಗನ್ನಾಥ: ‘ಇಯಂ ಸುಸ್ತನೀ ಮಸ್ತಕನ್ಯಸ್ತಕುಂಭಾ’ (ಈ ಚೆಲುವೆ!)

ಶಹಾಜಹಾನ: ‘ಅವಳು ನನ್ನ ಮಗಳು*, ‘ಲವಂಗಿ’! (*ದಾಸೀಪುತ್ರಿ)

ಜಗನ್ನಾಥ: ‘ಲವಂಗೀ ಕುರಂಗೀ ದೃಗಂಗೀಕರೋತು’ (ಈ ಚೆಲುವೆ ಲವಂಗಿ ನನ್ನವಳಾಗಬೇಕು.)

ಶಹಾಜಹನನು ಈ ಮದುವೆಯಿಂದ ಜಗನ್ನಾಥನಿಗೆ ಆಗಬಹುದಾದ ಸಮಸ್ಯೆಗಳ ಕಡೆಗೆ ಅವನ ಗಮನವನ್ನು ಸೆಳೆದ. ಆದರೆ ಜಗನ್ನಾಥನ ಬಯಕೆ ದೃಢವಾಗಿತ್ತು. ಜಗನ್ನಾಥ ಅರಮನೆಯ ಅಳಿಯನಾದ.

‘ಬೆಚ್ಚನಾ ಅರಮನೆಯು, ವೆಚ್ಚಕ್ಕೆ ಬಲು ಹೊನ್ನು

ಇಚ್ಚೆಯಾನರಿವ ಲವಂಗಿ ತಾ ಇರಲು

ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಜಗನ್ನಾಥ!’

ಜಗನ್ನಾಥನ ಆಶ್ರಯದಾತ ಶಹಾಜಹಾನನನ್ನು ಆತನ ಮಗ ಔರಂಗಜೇಬನು ಬಂಧಿಸಿ ಆಗ್ರಾದಲ್ಲಿ ಸೆರೆಯಲ್ಲಿಟ್ಟ ಬಳಿಕ, ಜಗನ್ನಾಥನು ಅರಮನೆಯನ್ನು ತೊರೆದು ಅಲೆಯಬೇಕಾಯಿತು. ಲವಂಗಿಯು ಬೇಕಾದರೆ ರಾಜಕುಟುಂಬದವರ ಜೊತೆಗೇ ಉಳಿಯಬಹುದೆಂದು ಜಗನ್ನಾಥನು ಹೇಳಿದರೂ ಸಹ ಅವಳು ತನ್ನ ಪತಿಯನ್ನೇ ಅನುಸರಿಸಿದಳು. ಜಗನ್ನಾಥನು ಅಲ್ಲಿಂದ ಕಾಮರೂಪಕ್ಕೆ (ಇಂದಿನ ಅಸ್ಸಾಮ) ತೆರಳಿ, ಅಲ್ಲಿಯ ರಾಜನಾದ ಪ್ರಾಣನಾರಾಯಣನ ಆಶ್ರಯ ಪಡೆದ. ಔರಂಗಜೇಬನು ಕಾಮರೂಪವನ್ನೂ ಆಕ್ರಮಿಸಿದ್ದರಿಂದ, ಜಗನ್ನಾಥನದು ಮತ್ತೆ ಅಲೆಮಾರಿ ಜೀವನವಾಯಿತು.

ತನ್ನ ಯೌವನದಲ್ಲಿ ಪಂಡಿತಕುಲವನ್ನೆಲ್ಲ ಚಂಡಾಡಿದ, ಮುಸ್ಲಿಮ್ ದೊರೆಯ ಆಶ್ರಯದಲ್ಲಿದ್ದು ಮುಸ್ಲಿಮ್ ಯುವತಿಯನ್ನು ಮದುವೆಯಾದ ಜಗನ್ನಾಥ ಪಂಡಿತನಿಗೆ ಹಿಂದು ಧರ್ಮೀಯರಿಂದ ಬಹಿಷ್ಕಾರ ಶಿಕ್ಷೆ ಪ್ರಾಪ್ತವಾಯಿತು.

ಜಗನ್ನಾಥನಿಗೆ ಹಾಗು ಲವಂಗಿಗೆ ಈಗ ನಿಲ್ಲಲು ನೆರಳಿಲ್ಲ, ಬಾಯಾರಿಕೆ ತೀರಿಸಲು ಒಂದು ಬೊಗಸೆ ನೀರು ಸಹ ದೊರೆಯಲಿಲ್ಲ. ವ್ಯರ್ಥ ಅಲೆದಾಟದಿಂದ ಬಳಲಿದ ಗಂಡ ಹೆಂಡಿರು ಕಾಶಿಯಲ್ಲಿಯ ಗಂಗಾ ಘಾಟಿಗೆ ಬಂದು ಅಲ್ಲಿಯೇ ಸೋಪಾನದ ಮೇಲೆ ಮಲಗಿಕೊಂಡರು.

ಕಾಶಿಯಲ್ಲಿ ಅರುಣೋದಯದ ಸಮಯ. ಗಂಗಾಸ್ನಾನಕ್ಕಾಗಿ ಜನ ಬರುತ್ತಿದ್ದಾರೆ. ಕಾಶಿಯ ಪಂಡಿತಚಕ್ರವರ್ತಿಗಳಾದ, ಆಧ್ಯಾತ್ಮಗುರುಗಳಾದ ಅಪ್ಪಯ್ಯ ದೀಕ್ಷಿತರು ಸ್ನಾನ ಪೂರೈಸಿ ಬರುತ್ತಿದ್ದಾಗ, ಒಂದು ಸೋಪಾನದ ಮೇಲೆ ಹರಕು ಬಟ್ಟೆಯನ್ನೆ ಹೊದ್ದುಕೊಂಡು ನಿರ್ಲಜ್ಜರಂತೆ ಮಲಗಿದ ದಂಪತಿಯನ್ನು ನೋಡಿದರು. ಆ ಹರಕು ಬಟ್ಟೆಯೊಳಗಿಂದ ಕಂಡ ಬಿಳಿ ಕೂದಲಿನ ಪೊದೆ ಅವರನ್ನು ಮತ್ತಿಷ್ಟು ಕೋಪಗೊಳಿಸಿತು. ಆ ದಂಪತಿಯತ್ತ ತಾತ್ಸಾರದ ದನಿಯಲ್ಲಿ ದೀಕ್ಷಿತರು ಗುಡುಗಿದರು:

‘ಕಿಂ ನಿಃಶಂಕಂ ಶೇಷೇ ಶೇಷೇ ವಯಸಿ ತ್ವಮಾಗತೇ ಮೃತ್ಯೌ’

(ಇದೇನು, ಮರಣ ಸಮೀಪಿಸಿರುವ ಈ ಇಳಿ ವಯಸ್ಸಿನಲ್ಲಿ ನಿರ್ಲಜ್ಜೆಯಿಂದ ಮಲಗಿರುವಿರಲ್ಲ?)

ಮಲಗಿಕೊಂಡಾತ ಮುಸುಕು ಸರಿಸಿದ. ಅಪ್ಪಯ್ಯ ದೀಕ್ಷಿತರು ತಬ್ಬಿಬ್ಬಾದರು. ತಮ್ಮ ಗ್ರಂಥಗಳನ್ನೆಲ್ಲ ಖಂಡಿಸಿ ಒಗೆದ, ತಮ್ಮ ಪರಮ ವಿರೋಧಿ ಜಗನ್ನಾಥ! ತೊದಲುತ್ತಲೇ ದೀಕ್ಷಿತರು ಮತ್ತೆ ನುಡಿದರು:

‘ಅಥವಾ ಸುಖಂ ಶಯೀಥಾ: ತವ ನಿಕಟೇ ಜಾಗರ್ತಿ ಜಾಹ್ನವೀ ಜನನೀ.’

( ಸರಿ ಸರಿ, ಸುಖವಾಗಿ ಮಲಗಿಕೊಳ್ಳಪ್ಪ; ನಿನ್ನ ಪಕ್ಕದಲ್ಲಿ ತಾಯಿ ಗಂಗಾದೇವಿ ಎಚ್ಚತ್ತೇ ಇದ್ದಾಳೆ.)

ಜಗನ್ನಾಥ ಪಂಡಿತನ ಪಾಲಿಗೆ ಇದು ಎಚ್ಚರಿಕೆಯ ಗಂಟೆಯಾಯಿತು. ತನ್ನ ಬಾಳಿನ ಕಲ್ಮಶಗಳನ್ನು ತೊಳೆಯಲು ಗಂಗಾದೇವಿಯೇ ಸಮರ್ಥಳೆಂದು ಭಾವಿಸಿದ ಜಗನ್ನಾಥ ಲವಂಗಿಯೊಡನೆ ಜಲಸಮಾಧಿಗೆ ಸಿದ್ಧನಾಗಿ, ಸೋಪಾನಗಳನ್ನು ಇಳಿಯತೊಡಗಿದ. ಆದರೆ ಸ್ನಾನಕ್ಕೆ ಬಂದಂತಹ ಅಲ್ಲಿಯ ಧರ್ಮನಿಷ್ಠರು ಈ ಪಾಖಂಡಿಯನ್ನು ಗಂಗಾಸ್ನಾನಕ್ಕೆ ಬರದಂತೆ ಪ್ರತಿಬಂಧಿಸಿದರು.

ಹತಾಶನಾದ ಜಗನ್ನಾಥ ನಿಂತಲ್ಲಿಯೇ ನಿಂತುಕೊಂಡು ಗಂಗಾದೇವಿಯ ಪ್ರಾರ್ಥನೆ ಮಾಡತೊಡಗಿದ. ಅದೇ ಜಗನ್ನಾಥನ ಪ್ರಸಿದ್ಧ ಕಾವ್ಯ:‘ಗಂಗಾಲಹರಿ’. ಇಲ್ಲಿಯವರೆಗೂ ಪಾಂಡಿತ್ಯದ ಕಾವ್ಯವನ್ನು ಸೃಷ್ಟಿಸಿದ್ದ ಜಗನ್ನಾಥ ಪಂಡಿತ, ಇದೀಗ ತನ್ನೆಲ್ಲ ಹಮ್ಮನ್ನು ತೊರೆದು, ಆರ್ತನಾಗಿ ಗಂಗಾದೇವಿಯನ್ನು ಭಕ್ತಿಯಿಂದ ಕೂಗಿ ಕರೆದ. ಇವನ ಒಂದೊಂದು ಶ್ಲೋಕಕ್ಕೂ ಒಂದೊಂದು ಮೆಟ್ಟಿಲೇರಿದ ಗಂಗೆ ಕೊನೆಯ ಅಂದರೆ ಐವತ್ತೆರಡನೆಯ ಶ್ಲೋಕಕ್ಕೆ ಇವನನ್ನು ಹಾಗು ಲವಂಗಿಯನ್ನು ತನ್ನಲ್ಲಿ ಸೆಳೆದುಕೊಂಡೊಯ್ದಳು. ಇದು ದಂತಕಥೆ ಇರಬಹುದು. ವಾಸ್ತವದಲ್ಲಿ ಗಂಗಾಪ್ರಾರ್ಥನೆಯ ನಂತರ ಜಗನ್ನಾಥನು ಲವಂಗಿಯೊಡನೆ ಗಂಗೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು. ಒಟ್ಟಿನಲ್ಲಿ ಹೀಗಿದೆ ಒಬ್ಬ ಉದ್ದಾಮ ಕವೀಶ್ವರ ಹಾಗು ಉದ್ಧಟ ಪಂಡಿತರಾಜನ ಜೀವನಕಥೆ!

ಜಗನ್ನಾಥ ಪಂಡಿತನ ಸಂಸ್ಕೃತ ಗಂಗಾಲಹರಿಯನ್ನು ಕನ್ನಡಕ್ಕೆ ತಂದವರು ಉಭಯಭಾಷಾ ವಿದ್ವಾಂಸರೂ, ಲೇಖಕರೂ ಆದ ಶ್ರೀ ಪಂಢರಿನಾಥಾಚಾರ್ಯ ಗಲಗಲಿಯವರು.

ಮೂಲದ ಸಂಸ್ಕೃತ ಸೊಬಗನ್ನು ಕನ್ನಡಕ್ಕೆ ತರುವದರಲ್ಲಿ ಆಚಾರ್ಯರು ಯಶಸ್ವಿಯಾಗಿದ್ದಾರೆ. ಇದೇ ಪುಸ್ತಕದಲ್ಲಿ ಜಗನ್ನಾಥನ ಜೀವನಗಾಥೆಯನ್ನೂ ಸಹ ಅವರು ಬರೆದಿದ್ದಾರೆ. ಅದರ ಸಂಕ್ಷಿಪ್ತ ಅವತರಣಿಕೆಯನ್ನೇ ನಾನು ಮೇಲೆ ಕೊಟ್ಟಿದ್ದೇನೆ.

ಜಗನ್ನಾಥ ಪಂಡಿತನ ಸಂಸ್ಕೃತ ಗಂಗಾಲಹರಿಯ ಮೊದಲ ನುಡಿಯನ್ನು ಹಾಗು ಶ್ರೀ ಪಂಢರಿನಾಥಾಚಾರ್ಯ ಗಲಗಲಿಯವರ ಅನುವಾದವನ್ನು ಓದುಗರ ಅವಗಾಹನೆಗಾಗಿ ಕೆಳಗೆ ಕೊಡುತ್ತಿದ್ದೇನೆ:

ಮೂಲ:

ಸಮೃದ್ಧಂ ಸೌಭಾಗ್ಯಂ ಸಕಲ ವಸುಧಾಯಾ: ಕಿಮಪಿ ತನ್

ಮಹೈಶ್ವರ್ಯಂ ಲೀಲಾಜನಿತ ಜಗತಃ ಖಂಡಪರಶೋ:

ಶ್ರುತೀನಾಂ ಸರ್ವಸ್ವಂ ಸುಕೃತಮಥ ಮೂರ್ತಂ ಸುಮನಸಾಂ

ಸುಧಾಸೌಂದರ್ಯಂ ತೇ ಸಲಿಲಮಶಿವಂ ನಃ ಶಮಯತು.

ಅನುವಾದ:

ಜಗದ ಭಾಗ್ಯ, ಜನಕೆಲ್ಲ ಭೋಗ್ಯ, ಸೌಭಾಗ್ಯಪೂರ್ಣ ಸಿರಿಯು

ಲೀಲೆಯಿಂದ ಜಗಜನಿಪ ಶಿವನ ಐಸಿರಿಯು ದಿವ್ಯ ತೊರೆಯು

ವೇದಸಾರ ಸರ್ವಸ್ವ ದೇವಕುಲ ಪುಣ್ಯ ಮೂರ್ತಿಮಂತ

ಅಮೃತಕಾಂತಿ ಸವಿ ಸಲಿಲ ಸವೆಸಲಿದು ಅಶುಭಗಳನನಂತ.

‘ಗಂಗಾಲಹರಿ’ ಕಾವ್ಯವು ಗಂಗಾನದಿಯ ಪ್ರವಾಹದಂತೆಯೇ ಭೋರ್ಗರೆದಿದೆ. ಗಂಗಾಮಾತೆಯೇ ಕಾವ್ಯರೂಪ ತಾಳಿ ಗಂಗಾಲಹರಿಯಾಗಿದ್ದಾಳೆ ಎಂದರೆ ತಪ್ಪಾಗಲಿಕ್ಕಿಲ್ಲ. ಆದುದರಿಂದ ಗಂಗೆಯಲ್ಲಿ ಮಿಂದ ಅನುಭವವೇ ಗಂಗಾಲಹರಿಯನ್ನು ಓದಿದಾಗ ಸಹ ಆಗುವದು.

ಜಗನ್ನಾಥ ಪಂಡಿತನನ್ನು ಪಾವನಗೊಳಿಸಿದ ತಾಯಿ ಗಂಗೆ, ಗಂಗಾಲಹರಿಯ ಮೂಲಕ ನಮ್ಮನ್ನೂ ಅನುಗ್ರಹಿಸಲಿ.