ಮೈ ಕರಗದವರಲ್ಲಿ - ಸುನಾಥ

ಹೆಚ್ಚಿನ ಓದಿಗೆ: http://sallaap.blogspot.com/2009/01/blog-post_17.html

ಬಸವಣ್ಣನು ಹುಟ್ಟು ಕನ್ನಡಿಗ,ಅವನಿಗೆ ಸಂಸ್ಕೃತದಿಂದ ಕಡ ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು ಎನ್ನುವದು ಕೆಲವರ ಅನುಮಾನ. ಅವರಿಗೆ ಇಲ್ಲಿದೆ ಸಮಾಧಾನ:

ಸಂಸ್ಕೃತ ಹಾಗೂ ಕನ್ನಡ ಇವೆರಡೂ ಪರಸ್ಪರ ಪೋಷಕ ಭಾಷೆಗಳಾಗಿವೆ.

ಕಲ್ಯಾಣದ ಶರಣರು ಕನ್ನಡದ ವೃಕ್ಷಕ್ಕೆ ಸಂಸ್ಕೃತದ ಕಸಿಯನ್ನು ಮಾಡಿ ಸುಮಧುರವಾದ ಫಲಗಳನ್ನು ಪಡೆದಿದ್ದಾರೆ.

ಬಲ್ಲವರೇ ಬಲ್ಲರು ಆ ಹಣ್ಣಿನ ಸವಿಯ!

ಆದರೆ, ವೈಯಕ್ತಿಕ ಕಾರಣಕ್ಕಾಗಿ ಕೆಲವರು ಸಂಸ್ಕೃತದ ವಿರುದ್ಧ ರಾಜಕೀಯ ಮಾಡುತ್ತಲೇ ಬಂದಿದ್ದಾರೆ.

ಹಳೆಗನ್ನಡ ಕವಿ ಆಂಡಯ್ಯನು ತನ್ನ ಕಾವ್ಯದಲ್ಲಿ ಸಂಸ್ಕೃತವನ್ನು ಬಳಸುವದಿಲ್ಲವೆಂದು ಪ್ರತಿಜ್ಞೆ ಮಾಡಿ, ತದ್ಭವಗಳನ್ನು ತುರುಕಿದ್ದು ಎಲ್ಲರಿಗೂ ಗೊತ್ತಿದ್ದ ಸಂಗತಿಯೇ.

ಆದರೆ, ಬಸವಾದಿ ಶರಣರು ಇಂತಹ ಹುಚ್ಚುತನ ಮಾಡಲಿಲ್ಲ.

ಸಾಮಾನ್ಯ ಜನತೆಗಾಗಿಯೇ ರಚಿಸಿದಂತಹ ಬಸವಣ್ಣ, ಅಕ್ಕಮಹಾದೇವಿ ಮೊದಲಾದ ಶರಣರ ವಚನಗಳಲ್ಲಿ ಸಂಸ್ಕೃತವನ್ನು ಧಾರಾಳವಾಗಿ ಬಳಸಲಾಗಿದೆ.

ಅಲ್ಲದೆ, ಸಂಸ್ಕೃತ ವಾಕ್ಯಗಳನ್ನು ಹಾಗು ಶ್ಲೋಕಗಳನ್ನು ಉದ್ಧರಿಸಲಾಗಿದೆ.

ಹದವರಿತು ಸಂಸ್ಕೃತವನ್ನು ಬಳಸಿದಾಗ ಆ ಪಾಕಕ್ಕೆ ಒಂದು ವಿಶಿಷ್ಟ ರುಚಿ ಬರುತ್ತದೆ.

ಈ ಕಾರಣದಿಂದಲೇ, ಶರಣರ ವಚನಗಳು ಕನ್ನಡ ನಾಡಿನಲ್ಲಿ ಶ್ರೇಷ್ಠ ತತ್ವಜ್ಞಾನ ಮಾತ್ರವಲ್ಲ, ಶ್ರೇಷ್ಠ ಸಾಹಿತ್ಯವಾಗಿ ಸಹ ಪ್ರಸಿದ್ಧವಾಗಿವೆ.

ಶರಣರು ಸಂಸ್ಕೃತ ಪದಗಳನ್ನು ಹಾಗೂ ಸಂಸ್ಕೃತಜನ್ಯ ಜ್ಞಾನವನ್ನು ಬಳಸಿದ ಕಾರಣಗಳು ಹೀಗಿವೆ:

(೧) ರೂಢ ಸಂಪ್ರದಾಯದ ಹಾಗು ತತ್ವಜ್ಞಾನದ ಪರಿಭಾಷೆಯನ್ನು ಬಳಸುವ ಅವಶ್ಯಕತೆ:-

ಶರಣರು ಭಾರತೀಯ ತತ್ವಜ್ಞಾನದ ಅನೇಕ ಅಂಶಗಳನ್ನು ಒಪ್ಪಿಕೊಳ್ಳುತ್ತಿದ್ದರು ;

ಎಲ್ಲವನ್ನೂ ಅವರು ತಿರಸ್ಕರಿಸಿರಲಿಲ್ಲ.

ಈ ಅಂಶಗಳಿಗೆ ಬಳಸಲಾದ ಪರಿಭಾಷೆ ಅಂದರೆ terminology ಸಹ ಎಲ್ಲರಿಗೂ ತಿಳಿದದ್ದೇ.

ಉದಾಹರಣೆಗೆ ಅರಿಷಡ್ವರ್ಗಗಳು ಹಾಗೂ ಅರಿಷಡ್ವರ್ಗಗಳನ್ನು ಗೆಲ್ಲುವದಕ್ಕೆ ಇರುವ ಮಹತ್ವ.

ಆದುದರಿಂದ ಬಸವಣ್ಣನವರು ಇಂತಹ ಸಂದರ್ಭದಲ್ಲಿ ಸಂಸ್ಕೃತಜನ್ಯ ಪರಿಭಾಷೆಯನ್ನೇ ಬಳಸಿದ್ದಾರೆ.

ಕನ್ನಡವನ್ನೇ ಮೂಲರೂಪದಲ್ಲಿ ಬಳಸಬೇಕೆನ್ನುವ ಹುಚ್ಚು ಅವರಿಗೆ ಇರಲಿಲ್ಲ.

ಉದಾಹರಣೆಗೆ ಬಸವಣ್ಣನವರ ಈ ವಚನ ನೋಡಿರಿ:

ಕಾಮವೇಕೊ ಲಿಂಗಪ್ರೇಮಿ ಎನಿಸುವಂಗೆ?

ಕ್ರೋಧವೇಕೊ ಶರಣವೇದ್ಯ ಎನಿಸುವಂಗೆ?

ಲೋಭವೇಕೊ ಭಕ್ತಿಯ ಲಾಭವ ಬಯಸುವಂಗೆ?

ಮೋಹವೇಕೊ ಪ್ರಸಾದವೇದ್ಯ ಎನಿಸುವಂಗೆ?

ಮದ, ಮತ್ಸರವುಳ್ಳವಂಗೆ ಹೃದಯಶುದ್ಧವೆಲ್ಲಿಯದೊ?

ಹದುಳಿಗರಾದಲ್ಲಿಪ್ಪ ನಮ್ಮ ಕೂಡಲ-ಸಂಗಮ-ದೇವ.

ಈ ಮೇಲಿನ ವಚನದ ೨೧ ಪದಗಳಲ್ಲಿ ೧೫ ಪದಗಳು ಸಂಸ್ಕೃತಪದಗಳು.

ಹುಟ್ಟುಕನ್ನಡಿಗರಾದ ಬಸವಣ್ಣನವರು ಹೀಗೇಕೆ ಮಾಡಿದರು?

ಸಂಸ್ಕೃತ ಪದಗಳನ್ನೇಕೆ ಧಾರಾಳವಾಗಿ ಬಳಸಿದರು?

ಇದಕ್ಕೆ ಉತ್ತರವನ್ನು ನೀಡುವಿರಾ?

(ಯಾಕೆಂದರೆ ಬಸವಣ್ಣನವರು ಹುಟ್ಟುಕನ್ನಡಿಗರೇ ಹೊರತು ಹುಚ್ಚುಭಟ್ಟರು ಕಚ್ಚಿದ ಕನ್ನಡಿಗರಲ್ಲ!?)

ಬಸವಣ್ಣನವರು ಕೇವಲ ಸಂಸ್ಕೃತ ಪದಗಳನ್ನು ಬಳಸುವದಷ್ಟೇ ಅಲ್ಲ, ಸಂಸ್ಕೃತಶ್ಲೋಕಗಳನ್ನೇ ತಮ್ಮ ವಚನಗಳಲ್ಲಿ ಉದ್ಧರಿಸುತ್ತಿದ್ದರು ಎನ್ನುವದಕ್ಕೆ ಇಲ್ಲೊಂದು ಸಣ್ಣ ಉದಾಹರಣೆ ಇದೆ:

ಅಗ್ನಿಯಾಧಾರದಲ್ಲಿ ಕಬ್ಬುನ ನೀರುಂಬುದಯ್ಯಾ

ಭೂಮಿಯಾಧಾರದಲ್ಲಿ ವೃಕ್ಷ ನೀರುಂಬುದಯ್ಯಾ

ಜಂಗಮವಾಪ್ಯಾಯನವಾದೊಡೆ ಲಿಂಗ ಸಂತುಷ್ಟಿಯಹುದಯ್ಯಾ

‘ವೃಕ್ಷಸ್ಯ ವದನಮ್ ಭೂಮಿ: ಸ್ಥಾವರಸ್ಯ ತು ಜಂಗಮಃ

ಅಹಮ್ ತುಷ್ಯೋಸ್ಮುಮಾದೇವಿ ಉಭಯೋರ್ಲಿಂಗಜಂಗಮಾತ್’

ಇದು ಕಾರಣ ಕೂಡಲಸಂಗಮದೇವರಲ್ಲಿ

ಜಂಗಮಾಪ್ಯಾಯನವಾದೆಡೆ ಲಿಂಗಸಂತುಷ್ಟಿ.

ಈ ವಚನದಲ್ಲಿ ಬಸವಣ್ಣನವರು

ವೃಕ್ಷಸ್ಯ ವದನಮ್ ಭೂಮಿ: ಸ್ಥಾವರಸ್ಯ ತು ಜಂಗಮಃ

ಅಹಮ್ ತುಷ್ಯೋಸ್ಮುಮಾದೇವಿ ಉಭಯೋರ್ಲಿಂಗಜಂಗಮಾತ್ ”,

ಎನ್ನುವ ಸಂಸ್ಕೃತ ಶ್ಲೋಕವನ್ನು ಉದ್ಧರಿಸುವ ಅವಶ್ಯಕತೆ ಏನಿತ್ತು?

ಈ ಉದ್ಧರಣೆ ಇಲ್ಲದೆಯೇ ವಚನ ಅರ್ಥಪೂರ್ಣವಾಗುತ್ತಿರಲಿಲ್ಲವೆ?

ಅಥವಾ ಬಸವಣ್ಣನವರು ಅಮಾಯಕರನ್ನು ಮರಳುಗೊಳಿಸಲು

ಸಂಸ್ಕೃತ ಶ್ಲೋಕವನ್ನು ಉಪಯೋಗಿಸಿದರೆಂದು ಹೇಳುವಿರಾ?

ಕನ್ನಡವನ್ನು ಅಪ್ಪಿಕೊಂಡವರಿಗೆ ಸಂಸ್ಕೃತ ಶ್ಲೋಕದ ಹಂಗೇಕೆ?

It means ಬಸವಣ್ಣನವರು ಕನ್ನಡ ಹಾಗೂ ಸಂಸ್ಕೃತಗಳ ಪರಸ್ಪರ ಅವಲಂಬನವನ್ನು ಅರಿತವರಾಗಿದ್ದರು.

ಈ ಎರಡು ಭಾಷೆಗಳ ನಡುವೆ ಅನವಶ್ಯಕ ಭೇದಬುದ್ಧಿಯನ್ನು ಹುಟ್ಟಿಸುವ ರಾಜಕಾರಣಿ-ಕನ್ನಡಿಗರ ಗುಂಪಿಗೆ ಅವರು ಸೇರಿರಲಿಲ್ಲ.

(೨) ಕನ್ನಡ ಪದಗಳ ಬದಲಾಗಿ ಸಂಸ್ಕೃತ ಪದಗಳನ್ನು ಕೆಲವೊಂದು ಸಂದರ್ಭದಲ್ಲಿ ಬಳಸಲೇ ಬೇಕಾಗುತ್ತದೆ.

ಉದಾಹರಣೆಗೆ ಅಕ್ಕಮಹಾದೇವಿಯ ಒಂದು ಖ್ಯಾತ ವಚನದ ಒಂದು ಸಾಲನ್ನು ನೋಡಿರಿ:

ತನು ಕರಗದವರಲ್ಲಿ ಪುಷ್ಪವನೊಲ್ಲೆಯ್ಯ ನೀನು.”

ತನು ಮತ್ತು ಪುಷ್ಪ ಎನ್ನುವ ಸಂಸ್ಕೃತ ಪದಗಳನ್ನೇಕೆ ಅಕ್ಕ ಇಲ್ಲಿ ಬಳಸಿದಳು?

ಹುಟ್ಟುಕನ್ನಡತಿಯಾದ ಅವಳು ಕನ್ನಡ ಪದಗಳನ್ನೇ ಬಳಸಿದ್ದರೆ ಹೀಗಿರುತ್ತಿತ್ತು:

ಮೈ ಕರಗದವರಲ್ಲಿ ಹೂವನ್ನೊಲ್ಲೆಯ್ಯ ನೀನು!

ಈ ಸಾಲಿನ ಅರ್ಥ?

ಶಿವ ಶಿವಾ! ಬೊಜ್ಜು ಮೈಯವಳು ಹೂವು ಕೊಟ್ಟರೆ ನೀನು ಬೇಡವೆನ್ನುತ್ತಿದ್ದೆಯಾ, ಮಲ್ಲಿಕಾರ್ಜುನಾ?

ಕೇವಲ slim and trim ಇರುವವಳು ಹೂವು ಕೊಟ್ಟರೆ ಮಾತ್ರ ನೀನು ಒಪ್ಪಿಸಿಕೊಳ್ಳುತ್ತಿದ್ದೆಯಾ?

…………………………………………………

ಪ್ರಾಚೀನ ಭಾರತದಲ್ಲಿ ಭಾಷಾಭೇದಬುದ್ಧಿಯು ಯಾವಾಗಲೂ ಇರಲಿಲ್ಲ.

ಜನರು ಅವಶ್ಯಕತೆಗೆ ತಕ್ಕಂತಹ ಭಾಷೆಯನ್ನು ಉಪಯೋಗಿಸುತ್ತಿದ್ದರು.

ಉದಾಹರಣೆಗೆ, ಸನಾತನಧರ್ಮದ ಪುನರುತ್ಥಾನಕ್ಕಾಗಿ ಶಂಕರ ಎನ್ನುವ ಮಲೆಯಾಳಿ ತರುಣ ಸಂಸ್ಕೃತದಲ್ಲಿಯೇ ಏಕೆ ಜ್ಞಾನಪ್ರಸಾರ ಮಾಡಿದ, ಮಲೆಯಾಳಿಯಲ್ಲಿ ಏಕೆ ಮಾಡಲಿಲ್ಲ?

ಅಖಿಲ ಭಾರತವು ತಮ್ಮ ಧರ್ಮಭೂಮಿಯಾಗಿದ್ದರಿಂದ ಸಂಸ್ಕೃತವನ್ನೇ ಅವಲಂಬಿಸುವದು ಶಂಕರಾಚಾರ್ಯರಿಗೆ ಅನಿವಾರ್ಯವಾಗಿತ್ತು.

ಅದೇ ರೀತಿ ಕೇವಲ ಕನ್ನಡನಾಡನ್ನಷ್ಟೇ ಕರ್ಮಭೂಮಿಯಾಗಿ ಹೊಂದಿದ್ದ ಶರಣರು ಕನ್ನಡದಲ್ಲೇ ವಚನಗಳನ್ನು ರಚಿಸಿದರು.

ಭೂರಂಗವೇ ಈಗ ನಮ್ಮ ರಂಗಭೂಮಿಯಾಗಿರುವದರಿಂದ ನಮ್ಮ ತಾಂತ್ರಿಕ ಹಾಗೂ ವೈಜ್ಞಾನಿಕ ತಜ್ಞರು (ಅವರಲ್ಲಿ ಅನೇಕರು ಹುಟ್ಟುಕನ್ನಡಿಗರು) ಇಂಗ್ಲೀಶನ್ನು ಈಗ ಬಳಸುವದಿಲ್ಲವೆ?