ನೀಲಿ ಮಳೆ.

ಅರಿಕೆ

ಸಂತೆಯಲ್ಲಿ ಕವೀ ಎಂಬ ಬೈಗುಳ ಕೂಗಿ ತಲೆ ಕುಟ್ಟಿ

ಕಾಲರು ಹಿಡಿದು ಮಾಯವಾಗುವ ಅದೃಶ್ಯ ವ್ಯಕ್ತಿಗಳು

ಜನರಲ್ ವಾರ್ಡಿನ ಅನಾಮಿಕರಿಗೆ ಹಾಲು ಅನ್ನ

ಉಣಿಸಿ ಜೋಗುಳ ಹಾಡುವ ರಾತ್ರಿ ಪಕ್ಷಿಗಳು

ರಿಮಾಂಡ್ ಹೋಮಿನ ಕತ್ತಲಲ್ಲಿ ಹೊಳೆವ ಕಣ್ಣುಗಳು

ಶ್ರಾವಣ ಮಧ್ಯಾಹ್ನದ ಹತ್ತು ವರ್ಷಗಳ ನಂತರ

ತುಂತುರು ತುಂತುರು ನೀಲಿ ಮಳೆ.

ಪ್ರಕಟಿಸುತ್ತಿರುವ ಲಂಕೇಶ್ ಗೆ ನಷ್ಟವಾಗದಿರಲಿ.

- ಜಯಂತ್

೨೨.೧.೧೯೯೭

೧. ಜಾಗರದ ಕೊನೆಗೆ

ರಾತ್ರಿ ಪಾಳಿ ಮುಗಿಸಿದ ದಾದಿ

ಬಸ್ಟಾಪಿನಲ್ಲಿದ್ದಾಳೆ. ಆಗಷ್ಟೆ ಊದಿನ ಕಡ್ಡಿ

ಹಚ್ಚಿಕೊಂಡ ರಿಕ್ಷಾ ಹಾಲಿನವ್ಯಾನು ಹಾದಿವೆ

ಎಮರ್ಜನ್ಸಿಗೆಂದು ಪಜಾಮದಲ್ಲೆ ಬಂದಿದ್ದ ಡಾಕ್ಟ್ರು

ಗೇಟಿನ ಬಳಿ ಹಾರ್ನು ಬಾರಿಸಿ ಹೊರಟಿದ್ದಾರೆ

ಕನಸಿನ ಸುರಂಗಗಳಲ್ಲೂ ಓಡಿ ಓಡಿ ದಣಿದವರು

ರಸ್ತೆ ಬದಿ ಮೆಲ್ಲಗೆ ವಿಗ್ರಹಗಳಂತೆ ಏಳುತ್ತಿದ್ದಾರೆ

ಟಿಫಿನ್ ಕ್ಯಾರಿಯರ್ಗಳು ಹೂವಿನ ಅಂಗಡಿಗಳನ್ನು

ಹಲೋ ಅಂದಿವೆ. ಸೈಕಲ್ ಬೆಲ್ ಗಳು ಕೊಳದೊಳಗಿನ

ಪ್ಲಾಸ್ಟಿಕ್ ಕಮಲಗಳನ್ನ ಕರೀತಿವೆ.

ಸಿಪ್ಪೆಯನ್ನು ಕಿತ್ತಳೆಯೆಂದು ತಿಳಿದು

ಮೋಸ ಹೋಗಿದ್ದಾನೆ ಊದ್ದ ಕಸಬರಿಕೆಯ ವಾರ್ಡ್ ಬಾಯ್.

ಮಚ್ಚರದಾನಿಗೆಂದು ಯಾರೋ ರಾತ್ರಿ

ಆಕಾಶಕ್ಕೆ ಹೊಡೆದ ಮೊಳೆಗಳು ಹಾಗೆ ಇವೆ

ರೆಕ್ಕೆಗಳ ಫಡಫಡಿಸಿ ಮರ

ಕತ್ತಲ ಕೊಡವಿಕೊಳ್ಳುತ್ತಿದೆ

ಎಲ್ಲ ಆಸ್ಪತ್ರೆಗಳ ಬಾಗಿಲು ತೆರೆಯಲಿ

ಜ್ವರದ ಕಣ್ಣಿನ ಮಕ್ಕಳು ನನ್ನ ಮಡಿಲಿಗೆ ಬರಲಿ

ಕಿರಣ ಸೋಕಿದರೆ ಸಾಕು ಮಾಯಲಿ ಗಾಯ

ಒಡೆಯದಿರಲಿ ಕಂಬನಿಗೆ ಎದೆಯ ಹಾಲು.

೨. ಬಾ ಗೆಳೆಯ

ಬಾ ಬಾ ಬಾ ಗೆಳೆಯ ಪಾರಿವಾಳ

ಕೂತುಕೋ ಬಾಲ್ಕನಿಯ ಹತ್ತ ಕಾಡಿನ ಕುಂಡದಲ್ಲಿ

ಆಗಷ್ಟೆ ಹನಿಸಿದೆ ನೀರು

ನಿನ್ನೆ ನೀನಿಲ್ಲೇ ಕೂತಿದ್ದೆ ಅಂತ

ಮಣ್ಣಿಗಂಟಿದ ಸಣ್ಣ ಬಿಳಿ ಗರಿ ಪಿಸುಗುಟ್ಟಿದೆ

ಮಕ್ಕಳನ್ನು ಕೇಳಿದೆಯಂತೆ

ಕನಸಲ್ಲಿ ಯಾರಾರು ಬಂದರೂ ಅಂತ

ಮಕ್ಕಳ ಬಾಯಿಗೆ ಬರಲಿಲ್ಲ ಅದು

ಹೆದರಿ ಎಂದೋ ಎದ್ದು ಹೋದರು

ಹಗಲಿನ ಎದೆಯ ಮೇಲೆ

ಗರಿಯಂತೆ ಪಟಪಟ ಪರ್ಣ ಬಡಿಯುವ

ಬಿಸಿಲಿನ ಮರಗಳು ನೋಡು

ರಾತ್ರಿಯ ಆಕಾಶವನ್ನು ಸಣ್ಣಗೆ ಊದ್ದ

ಕತ್ತರಿಸಿ ನಾದಿನುದ್ದಕೂ ಮಾಡಿದ ರಸ್ತೆ ಮೇಲೆ

ಗೋಡೆ ಜಿಗಿದು ಓಡಿದಾರೆ ರಿಮಾಂಡ ಹೋಮಿನ ಮಕ್ಕಳು

ನಿನ್ನ ರೆಕ್ಕೆಗಳಲ್ಲಿ ಜಾಗವುಂಟು ಎತ್ತಿಕೋ ಅವರ

ದಂಡೆಗಳ ದಯಪಾಲಿಸಿ ದೋಣಿಗಳ ಕಾಪಾಡು

ಕೇಳಿಸು ಸಮುದ್ರಗಳ ಹಾಡು

ಕಾಗದ ತಿನ್ನುವ ಹಾಲುಹಸುಗಳ ಕಂಬನಿ ಒರೆಸು

ಬಾಗೆಳೆಯ ಬಾ ಈ ಪಂಜರದಿಂದ

ನನ್ನ ಬಿಟ್ಟು ಬಿಡು

೩. ಸನಿಹ

ಬದಿಯಲ್ಲಿ ಕೂತಿರುವ ಅಪರಿಚಿತ ಪ್ರವಾಸಿ ನಿದ್ದೆ ಹೋಗಿದ್ದಾನೆ

ಬಿಗಿದ ಮೈ ಸಡಿಲಾಗಿ ತಲೆ ವಾಲಿದೆ ನನ್ನ ಹೆಗಲಿಗೆ

ಸ್ವಂತ ನಿದ್ದೆಯಲ್ಲಿ ಎಷ್ಟೊಂದು ನಿರುಪಾಯನಾಗಿದ್ದಾನೆ

ಕೈತುಂಬ ರೋಮಗಳು ಅಲುಗುತ್ತಿವೆ ಬೆಳ್ಳಗೆ

ಗಾಳಿಗೆ ಮುಂಗುರುಳು ತೀಡಿದೆ ಎಣ್ಣೆಗಟ್ಟಿದ ಹಣೆಗೆ

ಕಣ್ಣಬದಿಗೆ ಚೀನಿ ಚಿಕ್ಕದಾಗಿ ಅಲ್ಲಿ ನಿರಿಗೆ ಬೀಳುತ್ತಿರಲೇಬೇಕು

ಮನೆಯಲ್ಲಾಗಿದ್ದರೆ ಉದ್ರಕ್ಕೆ ಮೊಣಕಾಲು ತಂದು

ಎಡಗೈ ಮೇಲೆ ತಲೆಯಿಡುತ್ತಿದ್ದನೆ

ಹೇಗೆ ಅಲುಗುತ್ತಿದೆ ಜೋತ ತುಟಿ ಗಲಗಲ

ತಲೆಗೆ ಅವ್ವ ಎಣ್ಣೆ ಹಾಕುತಿರುವಂತೆ

ಒಂದು ಬೆರಳಿನ ತುದಿಗೆ ಗಂಟುಗಾಯ

ಹೇಗಿರಬಹುದು ಇವನ ದನಿ ಈ ನರೆಗೂದಲಿನಂತೆ

ಅಥವ ಈ ಕಾಲರಿನ ಮೇಲಷ್ಟೆ ತಿಕ್ಕಿ ಇಂಗಿ ಹೋಗಿರುವ

ಅಂಗಿಯ ಚಿತ್ರದಂತೆ

ಹದಿಹರೆಯದಲ್ಲಿ ಉಗ್ಗುತ್ತಿದ್ದನೆ

ಸಾಮಾನು ತರಲು ಮೊದಲ ಸಲ ಒಬ್ಬನನ್ನೇ ಅಂಗಡಿಗೆ

ಕಳಿಸಿದ್ದಾಗ ಹೇಗೆ ತೊದಲಿ ಕಂಪಿಸಿದ

ದೀಪ ಹಚ್ಚುವ ವೇಳೆ ಯಾರನ್ನು ನೆನೆದ

ಒಂದು ಚಪ್ಪಲಿ ಮೆಲ್ಲಗೆ ಬೆರಳಿಂದ ಕಳಚಿಕೊಂಡಿದೆ

ಕಾಲಿನ ಉಗುರುಗಳು ದಪ್ಪಗೆ ಬೆಳೆಯುತ್ತಿವೆ

ದಿಕ್ಕಿಗೊಂದು ದಣಿದ ಅವಯವ ಬಿಟ್ಟು ಹಗುರಾಗಿರುವ

ಈ ನ್ರಾಯುಧನ್ ನಿದ್ದೆಗೆ ಕಾವಲಿದೆ ದೊಡ್ಡದೊಂದು ರೆಕ್ಕೆ

ಇವನ ಈ ಏರಿಳಿವ ಎದೆಯೊಳ್ಗಿನ ಬಿಸಿ ಉಸಿರೆ ಸಾಕು

ಇಡೀ ಈ ಲೋಕವನ್ನು ಬೆಚ್ಚಗಿಡಲಿಕ್ಕೆ

೪. ಟಿಕ್ ಟಿಕ್ ಗೆಳತಿ

ಗೋಪುರ ಗಡಿಯರದ ಮುಳ್ಳೀನ ಮೇಲೆ

ಟಿಕ್ ಟಿಕ್ ಕುಣಿಯುವ ಮದರಂಗಿ ಪೋರಿ

ಒಮ್ಮೆ ಇತ್ತ ಕಡೆ ನೋಡು

ಕೈದಿಗಳನ್ನು ಒಮ್ಮೆಗೇ ಬೀದಿಗೆ ಬಿಟ್ಟುಕೊಟ್ಟಿವೆ ಜೇಲು

ಓಣಿಕೇರಿಯಲ್ಲಿ ಮೇಲ್ಮುಖ ಮಾಡಿ ಎಲ್ಲ

ನಿನ್ನನೇ ನೋಡುತ್ತ

ಅಪರಾಧಗಳ ಮರೆತು ನಿಂತಿರುವರು

ನಿನ್ನ ಮೈಯ ಹಳದಿಗೆ ಮುತ್ತಿವೆ ಚಿಟ್ಟೆ

ಕನ್ನಡಿಲಂಗದ ನೆಳಲು ಬೆಳಕಿನ ಹರಿಣ

ಓಡಾಡಿದೆ ಎಲ್ಲರ ಮೊಗದ ಮೇಲೆ

ಮುತ್ತೊಂದ ತೂರಿ ಬಿಡು ಸಾಕು

ನಿಂತೇ ನಿದ್ರಿಸುವರು ಅವರು ಬೊಂಬೆಗಳಂತೆ

ನಿನ್ನ ಮುತ್ತಿನಗಾಳಿಯ ಉಯ್ಯಲೆಯಲ್ಲಿ

ಈಗವರ ಕಿಸೆಗಳಲ್ಲಿ ಮೆಲ್ಲಗೆ ಮರಳಿ ಇಡು

ಪೆಪ್ಪರಮಿಂಟು ಬಳಪದ ಚೂರು

ಬಂದುಬಿದ್ದ ಗಡಿಯಾರದಂತಿರುವ ಅವರ ಮೊಗ

ಟಿಕ್ ಟಿಕ್ ಜೀವ ತಳೆದು

ಚಲಿಸುವದ ನೋಡು

೫. ದೋಣಿ

ದಿನರಾತ್ರಿ ಅನ್ನದೆ ಹೊಳೆವ ರಟ್ಟೆಗಳಲ್ಲಿ

ದೋಣಿ ಹೊತ್ತುಕೊಂಡು ನಡೆದಿದ್ದಾರೆ. ಪ್ರತಿ ಘಟ್ಟ

ಏರಿದಾಗಲೂ ಕಂಡೀತು ಎಂದು ದೆಸೆಗೆಟ್ಟು

ಮತ್ತೆ ಇಳಿದಿದ್ದಾರೆ ಕಂದಕ ಬೆಳಕಿನ ಧೂಳಿಯಲ್ಲಿ

ವಿಶ್ವದ ಉಡದಾರವೊಂದು ಸಣ್ಣ ನೂಲಿನಂತೆ

ಕಿಸೆಯಲ್ಲಿದೆ. ಅದರಲ್ಲಿ ಬಿಸ್ಕತ್ತು ಚಂದಿರನ ತೂರಿಸಿ

ರಿವ್ವ ರಿವ್ವ ಬೆರಳುಗಳ ನಡುವೆ ತಿರುಗಿಸಿ

ಮನದಲ್ಲೆ ತಿನ್ನುವರು. ಕುಡಿಯುವರು ಗಾಳಿ.

ಇದೆಲ್ಲ ಮುಗಿಯುವಲ್ಲಿ ಹೋಗಿ ನಿಂತು ಅದರಾಚೆಯ

ಆ ಸಮುದ್ರದಲ್ಲಿ ಇಳಿಬಿಡುವರಂತೆ ದೋಣಿ

ಅದರಲ್ಲಿಟ್ಟು ಹಣ್ಣು ಕುಲಾವಿ ಕೋವಿ. ಉಕ್ಕುವ

ಸಮುದ್ರದ ಬಣ್ಣ ಯಾವ ಕಣ್ಣಿನಂತಿದೆಯೋ

ಮಾತಿಲ್ಲದೆ ಹೊರಟು ನಿಂತವರು ಅವರು. ಇಲ್ಲಿ

ಕಾದಿವೆ ಕೆಂಡ ಒಲೆಗಳಲ್ಲಿ. ಮೀನಿಗಾಗಿ ಬಯಕೆ

ಪಟ್ಟಿದ್ದಾಳೆ ಹೆರಿಗೆಗೆ ಬಂದ ಬೇಬಿ. ರೇಡಿಯೋ

ಡಿಪ್ಲೋಮಾ ಮಾಡುವೆನೆಂದು ಊಟ ಬಿಟ್ಟಿದ್ದಾನೆ ತಮ್ಮ

ಪಟ್ಟಣಗಳ ಬಿಟ್ಟೇ ಹರಿದಿವೆ ನದಿ ಅರಣ್ಯಗಳ

ಕಾಲು ತೊಳೆದು. ಸೊಂಟಮಟ ನೀರು ದಾಟಿ ಪಾರಾಗಿದ್ದಾರೆ

ಪ್ರೇಮಿಗಳು. ಸಮುದ್ರವೊಂದು ಕರೆದಂತೆ ಆಗಸದಲ್ಲಿ ಅಮ್ಮ

ರಾತ್ರಿ ಎದ್ದು ಕೂತಿದ್ದಾಳೆ ದೇವರೇ ದಡ ಬಿಡಲಿ ದೋಣಿ

ಬಿಟ್ಟು ಹೋಗಿರುವ ಉಡುಪುಗಳಲ್ಲಿ ಕಾದಿವೆ ನೆರಳು

ಚಾದರು ಚಾಪೆಗಳಲ್ಲಿ ನಿದ್ರೆ ಗಾಳಿಯಲ್ಲಿ ಬೆವರು

ಸಿಕ್ಕೆತೆ ಸಿಕ್ಕಿತೇ ಸಮುದ್ರ ಅವರಿಗೆ ಸಿಕ್ಕ ಚಣ ಒಂಟಿ

ಕರೆಯಲ್ಲಿ ಅತ್ತು ಬಿಡುವರೇ ಅವರು ಮಕ್ಕಳಂತೆ

೬. ಸೂರ್ಯದಳ

ಸೂರ್ಯದಳ ಒಂದೊಂದೇ ಉದುರುವಾಗ

ಹೊಲದ ಕೆಲಸ ಬಿಟ್ಟು ಜನ

ಹೊಳೆಗೆ ಬಂದಿರುವರು

ಮೊಣಕಾಲಮಟ ನಿಂತು ಕರೆದು

ವಲಸೆ ಹಕ್ಕಿಗಳ

ಸನ್ನೆಯಲ್ಲಿ ಕೇಳುವರು

ಊಳಿಗಕ್ಕೆಂದು ಹೋದವರು ಉಂಡರೆ

ಕಾಳಗಕ್ಕೆಂದು ಹೋದವರು ಕಾದು

ನಿದ್ರಿಸಿದರೆ

ಸುದ್ದಿಯಿಲ್ಲ ಪತ್ರಗಳೇ ಬಂದಿಲ್ಲ

ನಿಟ್ಟುಸಿರ ಬಿರುಗಾಳಿ ಬವಳಿ ಬಿದ್ದು

ದಂಡೆಯಲಿ ದೋಣಿ ಅಲುಗುತ್ತಿಲ್ಲ

ನಿಂತಲ್ಲೇ ಹೇಗೆ ರತ್ರಿ

ಸ್ತಬ್ಧ ಹರಿದು

ಒಂದು ಬೆಳ್ಳಂಬೆಳಗು

ಪೇಟೆ ತೆರೆಯುವ ಮೊದಲೆ

ಬಂದಿಳಿದು ನೋಡುತ್ತಾರೆ

ಒಲೆತನಕ ಬೆಂದು ಉರಿದೆದೆ ಕಾಡು

ತಂಪು ಅಂಗಳ

ನಿದ್ದೆಗಣ್ಣಿನ ಪುಟ್ಟಿ

ಹಾಕುತಿದ್ದಾಳೆ ರಂಗವಲ್ಲಿ

ಸಿಕ್ಕುಬಿದ್ದಿದೆ ಒಂದು

ಸೂರ್ಯದಳ

ಅವಳ ಜಡೆಯಲ್ಲಿ

೭. ರೆಕ್ಕೆ ಹೆಜ್ಜೆ

ಅರೆ ಹಕ್ಕಿಯೊಂದು ಓಡ್ತಾ ಇದೆ ನೆಲದ ಮೇಲೆ

ಪುಂಡ ಹಟವೆ ರೆಕ್ಕೆವಾತವೆ

ದೋಸ್ತರಿಲ್ಲವೆ ಅದಕೆ ಗಗನಪಥದಲ್ಲಿ

ಕಿಸೇಲಿ ರೆಕ್ಕೆ ಹಾಕಿ ನಡೆಯೋಕೆ ಇಲ್ಲಿ

ಗರಾಜುಗಳ ಈ ಹಾದಿಯಲ್ಲೊ ತಲೆಸುಟ್ಟ

ವಾಹನಗಳು ಚಕ್ರ ಕಿತ್ತಿಟ್ಟ ಕುರುಡು ಗೂಡು

ಡೊಂಕು ನಡೆವ ಎರಡೇ ಕಾಲಿನ ಕುಂಟರು

ಒದೆಯಭುದೆ ಹೆಜ್ಜೆಗೆ ತೊಡಕೆಂದು

ಎತ್ತಿಕೊಳಬಹುದೆ ಜೋಪಡಿಯ ಪೋರಿ

ಕುಪ್ಪಸದಿ ಬಚ್ಚಿಟ್ಟು ಬೇಯಿಸಿಬಿಡಲು

ದೀಪ ಹಚ್ಚುವ ಹೊತ್ತು

ರಾಜ್ಯಗಳ ತೊರೆದು ಬಂದ ಪಟ್ಟದರಸಿಯರು

ಮೂಗುತಿ ಮಿನುಗಿಸುವರು ಮೂಲೆಯಲ್ಲಿ

ನಿಶ್ಯಬ್ದ ವಾಸನೆಯ ಛೇಡಿಸುತ್ತ.

ತಗಡಿನ ಮನೆಯಿಡೀ ಹರಿದಾಡುವುದು ಮಗು

ಮೈಗೆ ಜಂಗು ಹತ್ತಿಸಿಕೊಂಡು.

ಹಕ್ಕಿ ನಡೆವುದು ಇದೇ

ರಸ್ತೆಯ ಮೇಲೆ ಒಗೆದ ಬ್ಯಾಂಡೇಜುಗಳ

ಉಗಿದ ಶಬ್ದಗಳ ಕುಕ್ಕುತ್ತ

ಹೆಕ್ಕುತ್ತ ಮಣ್ಣಲ್ಲಿ ಹೂತ ಕಿರಣ

ಆಕಾಶದಿಂದಲೇ ನೋಡಬಹುದಿತ್ತೇನೋ ಇದನ್ನು

ಆಗ ಕಾಣುತ್ತಿತ್ತು ಕವಿತೆಯೊಂದು

ಗಾಯಗೊಂಡು ಕಾಗದದ ಮೇಲೆ ನಡೆದಂತೆ

ನರನಾಡಿಗಳಲ್ಲಿ ಮಾತ್ರ

ಜುಮ್ಮೆನಿಸುವ ಗಾಳಿ

ತಂತಾನೇ ರೆಕ್ಕೆಗಳು ಬೀಸಿದಂತೆ

೮. ಚೆನ್ನಪ್ಪನ ಮಕ್ಕಳು

ಎಲ್ಲಿಂದ್ಲೋ ಬಂದು ಈಗಷ್ಟೆ ಸ್ಟಾಂಡಿನಲ್ಲಿ ಖಾಲಿಯಾಯಿತು ಬಸ್ಸು.

ಸುರಳೀತ ತಂದುಬಿಟ್ಟ ಡ್ರೈವರ್ ಚೆನ್ನಪ್ಪ ಥಟ್ಟಂತ

ಹಿಂದೆ ಜಾಲರಿಗೆ ಕಟ್ಟಿದ್ದ ಟಿಫಿನ್ ಕ್ಯಾರಿಯರ್ ಚೀಲದ ಗಂಟು ಬಿಡಿಸಿ

ಹಾರಿ ಇಳಿದು ಹೋದ.

ದಣಿದ ಟಾಯರುಗಳಲಿನ್ನೂ ಹೆದ್ದಾರಿಯ ಬಿಸುಪು.

ಖಾಲಿ ಸೀಟುಗಳ ಮೇಲೆಲ್ಲ ಸಣ್ಣ ತಗ್ಗು ಅದೃಶ್ಯ ಮಾನವರಾರೋ

ಇನ್ನೂ ಕೂತೇ ಇರುವಂತೆ. ಸಿಪ್ಪೆ ನಿಪ್ಪಲು ಬಿಸ್ಕೀಟು ಚಪ್ಪಟೆ ಕನಕಾಂಬರ

ಮೇಲಿನ ರಾಕಿನಲ್ಲಿ ದಿನಪರಚುವ ಪತ್ರಿಕೆ

ಮೆಟ್ಟಿಲಲಿ ಒಂಟಿ ಚಪ್ಪಲಿ ಮೋಟು ಬೀಡಿ

4225ಡಿಪೋಕ್ಕೆ ಹೋಗಲೀ- ಹೌದು ಈಗ ಈ ಬಸ್ಸು

ಡಿಪೋಕ್ಕೆ ಹೋಗುವುದು.

ದಿನವಿಡೀ ಆಡಿ ದಣಿದು ತಾಯಿಗಂಜಿ ನಿಂತ ಈ

ಮಗುವಿನ ಮೈಮೇಲೆ ಅಬಬಾ ಅದೆಷ್ಟು ಅದೆಂಥ ಮಣ್ಣು

ಯಾವ ಘಟ್ಟದಿಂದೆದ್ದು ಬೆನ್ನಟ್ಟಿ ಬಂದ ಧೂಳು

ಯಾವೂರ ನೆನಪಿಗೆಂದು ತಂದ ಹರಿದ್ರಾ ಕುಂಕುಮ

ಡಿಪೋದಲ್ಲಿ ನಿರ್ಮಾನುಷವಾಗಿ ಗುಡಿಸಿ

ಛಕ್ಕಂತ ತೊಳೆದು ಬಸ್ಸನ್ನು

ಮಾಡಿ ಬಿಡುವರೇ ಬರೇ ತಗಡಿನ ಗೂಡು

ಊರಿನ ಸಂಜೆ ಬೆಳಕಿಗೂ ಕವಿದಂತೆ ಅದೇ ಮಣ್ಣು

ಚೆನ್ನಪ್ಪನ ಬಾಡಿಗೆ ಗೂಡಲ್ಲಿ ಓದಲು ಕೂತಿರುವಳು ಸಣ್ಣ ಮಗಳು

ಅವಳ ಅಂಕಲಿಪಿಯಲ್ಲಿ ಖರೇ ನವಿಲುಗರಿ ಮತ್ತು ಸುಳ್ಳು ಹಕ್ಕಿಗಳು

ಬ ಅಂದರೆ ಬಸ್ಸು ಅಂತ ಇದೆ ಒಂದು ಚಪ್ಪಟೆ ಚಿತ್ರವೂ.

ಅಪ್ಪನ ಚಿತ್ರ ಯಾಕಿಲ್ಲ ಎಂದವಳು ಕೇಳಹೋದರೆ

ಅಪ್ಪನ ನಿದ್ದಿಗೆಡಿಸಬ್ಯಾಡಾ ಎಂದೆಲ್ಲ ರೇಗುವರು

ಜತನದಿಂದ ಜೀವ ತಂದ ಬಸ್ಸನ್ನು ತೊರೆದು ಊರಿಡೀ ಹರಿದು

ತಮ್ಮ ತಮ್ಮ ಚಾದರ ಸೇರಿಕೊಂಡವರಿದಾರಲ್ಲ- ಅವರಿಗೆಂದೂ-

ಈ ಚೆನ್ನಪ್ಪ ಅಕ್ಕಿ ಬೇಳೆ ಕೊಳ್ಳುತ್ತಿರುವುದು

ನಗೆ ನಾಟಕದಲ್ಲಿ ಹೋ ಎಂದು ಎದ್ದೆದ್ದು ನಗುವುದು

ಸೈಕಲ್ ಹಿಂಭಾಗದಲ್ಲಿ ಮಗಳನ್ನು ಊರಿಡೀ ತಿರುಗಿಸಿ

ಕೈ ತುಂಬ ಹಲ್ವ ತೆಗೆಸಿಕೊಡುವದು- ಯಾಕೆ ಕಂಡಂತಿಲ್ಲ

ಅಪವೇಳೆಯಲ್ಲಿ ಕತ್ತಲ ಮೋರಿಯಲ್ಲಿ ಚೆನ್ನಪ್ಪನ

ಹಿರೇ ಪೋರಿ ಟಿಫಿನ್ ಕ್ಯಾರಿಯರ್ ಬಿಚ್ಚಿ ಸ್ ಎಂದು ತಿಕ್ಕಿ ತೊಳೆಯುವ

ಸದ್ದು ಡಿಪೋದಲ್ಲೀಗ ಬಿಕೋ ನಿಂತಿರುವ

ತಗಡಿನ ಗೂಡಿಗಷ್ಟೆ ಕೇಳಿಸುವದೆ

೯. ಶಾಯಿ

ಮುಗಿದ ರಿಫಿಲ್ಲು ಮುರಿದ ಬಾಲ್ ಪೆನ್ನುಗಳ ಮಧ್ಯ

ಎಲ್ಲಿ ಹೋಯಿತು ಆ ಇಂಕುಪೆನ್ನು

ಕರಕರ ಟಾಪು ತಿರುವಿದ ಸದ್ದಿನ ಮುದ್ದು ಸಂಗಾತಿ

ಹಿಡಿದ ಬೆರಳಿಗೆಲ್ಲ ಘಮ್ಮನೆ ನೀಲಿ

ಸುತ್ತಿದ ಸಣ್ಣ ಕಾಗದದಂಚಿಗೂ ಪಸರಿ ಎಲ್ಲಿ ಬಿದ್ದಿತ್ತು

ನಿಬ್ಬು ಕೆಳಮುಖವಾಗಿ ಶಾಲೆಯ ದಾರಿಯಲ್ಲೆ

ನಿರ್ಮಲಳ ಜಂಬುನೇರಳೆ ಮರದ ಕೆಳಗೆ

ಸಂಜೆಗೆಂಪಿನ ಹೊತ್ತು ನಿಬ್ಬಿನ ಕಣ್ಣಲ್ಲಿ

ಕೊರೆವ ಮಣ್ಣು ನೀಲಿ ಉಸುಕಿನ ಹರಳು

ಹೀಗೆ ಹಿಡಿದರೆ ಸರಾಗ ಸರಿತೆ ಕೊಂಚ

ಡೊಂಕಾದರು ಕರ್ಕಶ ನಡಿಗೆ ಉಲ್ಟಾ ಹಿಡಿದರೋ

ಬಸ್ ಅಂಗಾತ ಜಿರಳೆಯ ಕುಂಟು ಲಿಪಿ

ಕಿನಾರೆಗಾಳಿಗೆ ತೆರೆದರೆ ತಂಪು ನೀಲಿ ಮುಂಜಾವು

ದೇವಳದ ನಗಾರಿ ಅಬ್ಬರಿಸುತಿರುವಂತೆ ಅಲ್ಲಾಡದೆ

ಬೆಳಕಿಗೆ ಹಿಡಿದು ಇಂಕು ತುಂಬುವ ಜಾದು

ಖಾಲಿಯಾಗಲು ಬಂತೋ ಕುಡುಗಿದರೆ ನೀಲಿ ಮಳೆ

ಕಾಗದದ ಮೇಲೆ ಹನಿಗಳ ಹಿಡಿದೆಳೆದರೆ

ನೂರುಕಾಲಿನ ನೀಲಿಜೀವ ತೆವಳುವದು ಬಳಿಗೆ

ದೋಣಿ ಹೊರಡದ ಮುಂಗಾರೊಮ ಸಮುದ್ರ

ಹರಿದು ಬಂದಂತೆ ಊರಿಗೆ

ಕಾರ್ತಿಕದ ಗೋಪುರ ಶ್ರಾವಣದ ಗಂಧ

ಸರ್ಕಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಪಡೆದು

ಬಸ್ಸಿಗೆ ಕಾದ ಬಾಣಂತಿಯ ಕೈಕೂಸಿನ ಕಣ್ಣು

ಎಲ್ಲ ಸೇರಿ ಎಲೆ ಎಲೆಯಿಂದ ಸುರಿದ

ಅಮೃತವಾಹಿನಿ ಶಾಯಿ ಹೋಯಿತೆಲ್ಲಿ

ಪುಟ್ಟ ನೀಲಿ ಬೆರಳಲ್ಲಿ ಕಲಸಿ ಉಂಡ ಗಂಜಿ ತಿಳಿಯು

ಎಲ್ಲಿ ತನಕ ಬರುವದೋ ನೆತ್ತರಲ್ಲಿ

೧೦. ಬಟನ್ ಮೊಲ

ರಸ್ತೆಯಲ್ಲಿ ಕೆಟ್ಟು ನಿಂತಿದೆ ಕಹಿಮುಖದ ಟೆಂಪೋ

ಬೆನ್ನಲ್ಲಿ ಹೊತ್ತುಕೊಂಡು ಒಂದು ಮನೆತನ.

ವಾಲುವಂತೆ ಪೇರಿಸಿಟ್ಟ ಕಬ್ಬಿಣದ ಟ್ರಂಕು

ಹೊಟ್ಟೆ ಅದುಮಿ ಒದ್ದಾಡುವ ಬಟ್ಟೆ ಮೂಟೆ

ಕೈಕಾಲು ಮಡಿಸಿ ನಿಂತ ಯೋಗ ಮುದ್ರೆಯ ಮಂಚ

ಸವೆದ ಶಾಯಿ ಗುರುತಿನ ಮೇಜಿನ ಮೇಲಲ್ಲಾಡುವ

ಕಪ್ಪು ದಕ್ಷಿಣ ಗೋಲಾರ್ಧದ ಅನ್ನದ ಪಾತ್ರೆ

ಅದರಲ್ಲಿ ಕಡೇಗಳಿಗೆ ಇಟ್ಟ ಒಗ್ಗರಣೆ ಸವುಟು

ಚಾ ಪುಡಿ ಇನ್ನೂ ಅಂಟಿರುವ ಸಡಿಲ ಚಿಮ್ಮಟ

ಎಷ್ಟೋ ಸಂವತ್ಸರದ ಸೊಗಡು ಸುತ್ತಿಟ್ಟ ಕ್ಯಾಲೆಂಡರು ಯಶೋಧೆ

ಅವಳ ಉದ್ರಕ್ಕೆ ಚುಚ್ಚಿಟ್ಟ ಟಾಚಣಿ ನೂಲಿನ ಜಡೆಯ ಜಂಗು ಸೂಜಿ

ಮಡಿಸಿಟ್ಟ ಹಾಸಿಗೆ ಮಲಗಿದ ಕಪಾಟು

ಅಂಗಾತಬಿದ್ದ ಕನ್ನಡಿಯಲ್ಲಿ ಹಾರುತ್ತಿರುವ ಕಾಗೆ

ಒಲೆ ಇದ್ದಿದ್ದರೆ ಬಾವಿಯ ನೀರಿದ್ದರೆ ಎಲ್ಲದಕೂ ಜೀವ

ಬರಭುದಿತ್ತು ಇಲ್ಲಿ. ಯಾರಿಲ್ಲವೆ ಹೋದರೆಲ್ಲಿ

ಎಂದಿನ್ನೇನು ಕೇಳಬೇಕು ಅಷ್ಟರಲ್ಲಿ ಅಗೋ

ಆ ಬೋರಲು ಬಾಲ್ದಿಗೆ ಆತು ನಿಂತು ಕಣ್ಣಿಟ್ಟು

ಕಾವಲು ಕಾಯುತ್ತಿದೆ ಸ್ತಬ್ಧ ಬೆಳ್ಳನೆ ಬಟನ್ ಮೊಲ.

ಅದರ್ ಕಣ್ಣಿಗೆ ಕೆಂಪು ಮಣಿ

ಕಟ್ಟು ಹಾಕಿಸಿದ ಕಾಜು ಕಪ್ಪುಬಟ್ಟೆ. ಕೆಳಗೆ

ನೂಲಿನಿಂದೆ ಬರೆದ- ಕುಸುಮ ಕೌಸಲ್ಯ ಮೃದುಲ- ಇಂಥದೇ

ಮಳೆಯ ಹೂವಿನಂಥ ಹೆಸರು

ಅವಳಿಗೇನಾಯಿತು ಈಗ ಎಲ್ಲಿರುವಳು

ಅಪರಾಹ್ನ ಅಳುವ ಮೂಗ ಸೊರಕ್ ಕೈಯುದ್ದ ಒರೆಸುತ್ತ

ಒಂದೊಂದೇ ಬಟನ್ ಪೋಣಿಸಿದವಳು

ಹೊರಗಿನವರು ಬಂದರೆ ಥಟ್ಟನೆದ್ದು ಅದನ್ನಲ್ಲೇ ಬಿಟ್ಟು ಹಿತ್ತಲಿಗೋಡಿದವಳು

ತಂಗಿಯ ನೋಡಲು ಬಂದಾಗ ಅಡಗಿ ಕೂತವಳು

ಅಮ್ಮನ ಲಂಗದ ಮೇಲೆ ತಮ್ಮನ ಅಂಗಿ ಹಾಕಿ

ಎಲ್ಲೆಲ್ಲೋ ಹಪ್ಪಳ ಮಾಡಲು ಹೋಗಿ ಅಲ್ಲೇ

ಅಂದಿನ ಊಟ್ ಉಂಡವಳು

ಕತ್ತಲಲ್ಲಿ ಕಳೆದುಹೋಗುವ ಸೂಜಿ

ಸಂದಿಯಲ್ಲಿ ಬಿಚ್ಚಿಬೀಳುವ ನೂಲಿನುಂಡೆ

ಪೇಟೆ ತುಂಬ ಅಬ್ಬ ಎಷ್ಟೊಂದು ಗುಂಡಿಗಳು

ಮೆಲ್ಲಗೆ ಕಾಜು ಮುರಿದು ಸದ್ದಿಲ್ಲದೆ ಹೊರಬೀಳುತ್ತಿದೆ ಮೊಲ

ಕತ್ತು ಚಾಚಿ ಅತ್ತಿತ್ತ ನೋಡಿ ಮನೆ ತುಂಡಿಗಳ ಮೂಸುತ್ತ

ಚಂಗನೆ ಟೆಂಪೋದಿಂದ ನೆಗೆದು ನಡುಬೀದಿಯಲ್ಲಿ ಓಡುತ್ತಿದೆ

ಪೋಣಿಸಿದ ತಾಯನ್ನು ಅರಸಿಕೊಂಡು

೧೧. ನನ್ನ ಅಕ್ಕ ಸುಂದರಿ

ಹಾಗೆ ನೋಡಿ ಕಾಡಬೇಡಿ ನನ್ನ ಅಕ್ಕ ಸುಂದರಿ

ಧೂಳಿನಲ್ಲಿ ಬೆಳಕಿನಲ್ಲಿ ಬಿದ್ದುಕೊಂಡ ಕಿನ್ನರಿ

ನವಿರು ಕತ್ತು ಬೆವರು ಸಾಲೆ ಮಡಿಲು ಪಾರಿಜಾತ

ಮುಂಗುರುಳಿನ ತೋಟದಲ್ಲಿ ತಂಗಾಳಿಯ ಆಟ

ಎಷ್ಟು ಅಡಗಿಸಿಟ್ಟರೂ ಹೂಡುಕಿ ಬಂತು ಕಿರಣ

ದಾವಣಿಯ ಹರಕಿನಲ್ಲಿ ಹಾರಿದಂತೆ ಹರಣ

ದಮ್ಮಯ್ಯ ಆ ಅಂಗಡಿಗೆ ಕಳಿಸಬೇಡಿ ಇನ್ನು

ಮತ್ತೆ ಮನೆಗೆ ಕರೆಯಬೇಡಿ ನಿನ್ನೆ ನೆಂಟನನ್ನು

ಅವಳಿಗಿಷ್ಟ ಲಾರಿಗಳ ಹಿಂದೆ ಬರೆವ ಸಾಲು

ಹಳದಿ ನವಿಲಿಗಲ್ಲಿ ನೀಲ್ ಕೊಕ್ಕರೆಯ ಕಾಲು

ದಿನವಿಡೀ ಧೂಳೆಬ್ಬಿಸಿ ಹೋದವೆಷ್ಟು ಬಾರಿ

ಹಿತ್ತಲಲ್ಲಿ ಅಡಗಿ ಕೂತು ಲೆಕ್ಕವಿಡುವ ಚಾಳಿ

ನದಿಯಲರ್ಧ ಲಾರಿ ಇಳಿಸಿ ತೊಳೆದು ತಾನೆ ಬಂದ

ಬಗ್ಗಿ ಕಾಜು ಉಜ್ಜುತಿರುವ ಡ್ರೈವರೆಷ್ಟು ಅಂದ

ರಾತ್ರಿಯೊಂದು ಜೀಕಿ ಬಂದು ಅಲ್ಲಾಡಿತೆ ಕೊಂಬೆ

ಬೆಚ್ಚಿಬಿದ್ದು ಕನಸಿನಲ್ಲಿ ಕರಗುತಿರುವ ಗೊಂಬೆ

ಎದ್ದಿರದೀ ಹೂವಿಗೆಂದೆ ಮುದ್ದಿನ ಬಿರುಗಾಳಿ

ಭೋರೆಬ್ಬಿಸಿ ನಸುಕಿನಲ್ಲಿ ಹೋಯಿತೆಲ್ಲಿ ಲಾರಿ

ಹಾಗೆ ನೋಡಿ ಕಾಡಬೇಡಿ ನನ್ನ ಅಕ್ಕ ಸುಂದರಿ

ಧೂಳಿನಲ್ಲಿ ಬೆಳಕಿನಲ್ಲಿ ಬಿದ್ದುಕೊಂಡ ಕಿನ್ನರಿ

೧೨. ಮೋಡಗಳು ಬಾಗಿಲಲ್ಲೆ

ಮೋಡಗಳು ಬಾಗಿಲಲ್ಲೆ ಎದೆ ಒಡೆದು ಬೀಳುತಿವೆ

ಬೇಸಿಗೆಗೆ ಬಂದ ಅಕ್ಕ ಮರಳುತಿಲ್ಲ

ಮತ್ತೆ ಮತ್ತೆ ಅಡಗುತಾಳೆ ಕಂದನನ್ನು ಗದರುತಾಳೆ

ಗರಿಯ ನೇಯ್ದು ಜಂತಿ ಗುಡಿಸಿ ಹುಡುಕಿ ಹುಡುಕಿ

ಹೊಲಿಯುತಾಳೆ

ಕರೆ ಅಟ್ಟಿ ಬಂದಂತೆ ಹೆದರಿ ತೋಟ ಸುತ್ತುತಾಳೆ

ಎಲೆ ಎಲೆ ಹನಿಗಳಲ್ಲಿ ಶತಶೃಂಗ ಕೂತಿವೆ

ಕಪಿಲೆ ಕರೆದ ಹಾಲಿನಲ್ಲಿ ಹಳೆಯ ಹಾಡು ಬೆಳಗಿವೆ

ಅಮ್ಮ ನಾನು ಚಿಕ್ಕೋಳಿದ್ದಾಗ ಎಲ್ಲಿ ಜಾರಿಬಿದ್ದಿದ್ದೆ

ಅಮ್ಮ ನಾನು ಪೀಪಿಗೆಂದು ಹೇಗೆ ನಿನ್ನ ಕಾಡಿದ್ದೆ

ಮಣ್ಣು ಬಾಯಿಗಿಟ್ಟು ಮಡಿಲಕಂದನ ಮರೆತು

ಗೋಗರೆದು ಒಲೆಯೆದುರು ನಾಳೆ ನಾಳೆ ಅನ್ನುತ್ತಾಳೆ

ಮೋಡಗಳು ಬಾಗಿಲಲ್ಲೆ ಎದೆ ಒಡೆದು ಬೀಳುತಿವೆ

ಬೇಸಿಗೆಗೆ ಬಂದ ಅಕ್ಕ ಮರಳುತಿಲ್ಲ

೧೩. ಕಿಟಕಿ

ಎದುರಿನ ಕಟ್ಟಡದಲ್ಲಿ ಅದೊಂದೇ ಕಿಟಕಿ

ಯಾಕೆ ಹಾಗೆ ಮುಚ್ಚಿದೆ

ಉಳಿದೆಲ್ಲ ಎವೆ ತೆರೆದೇ ಇವೆ

ಹಾರುವಂತೆ ಒಳಗಿನ ಶ್ವಾಸ್ ಕಾಗದಗಳಾಗಿ ತೆಳ್ಳಗೆ

ಹರಿದು ಬರುವಂತೆ ಉಡುಪು ಹೊರಗೆ

ದೇಹಗಳ ತೊರೆದು ಬರೆಗಂಧದಲ್ಲಿ.

ನೇರ ನಿಂತ ಗರ ಬಡಿದ ಶ್ವೇತ ಸ್ತಂಭ

ನಡುರಾತ್ರಿಯ ಆಸ್ಪತ್ರೆಯಂತೆ.

ಅದೊಂದೇ ಕಿಟಕಿ ಯಾಕೆ ತೆರೆಯುತ್ತಿಲ್ಲ

ಒಳಗೆ ಮಲಗಿರಬಹುದೆ ಯಾರೋ ಹಾಗೇ

ವರುಷಗಟ್ಟಲೆ. ನಾಲ್ವರು ಅಕ್ಕತಂಗಿಯರು ಜತೆಗೇ

ನೇತು ಬಿದ್ದಿರುವರೆ ದಾವಣಿಯಲ್ಲಿ. ಇಕೋ ಈಗ ಬಂದೆ

ಎಂದು ಶರ್ಟಿಲ್ಲದೆ ರಸ್ತೆಗಿಳಿದು ಬಾವುಟದಂತೆ ಓಡಿದ ಪೋರ

ಈಗ ಓಡುತ್ತಲೇ ಇರುವನೆ ಬೇರೆ ದಾರಿಗಳಲ್ಲಿ.

ಉಳಿದ ಬಾಗಿಲುಗಳಿಗೆ ಅವುಗಳದೇ ಹಿಡಿಕೆ ಬವೆತ ಗಾಳಿ

ಚಪ್ಪಲಿ ಒಣ ಮರದ ಖುರ್ಚಿ

ಮತ್ತೆ ಮತ್ತೆ ಬೀಸಿ ಬಲೆಯಂತೆ ರದ್ದಿ ಆಕಾಶದಲ್ಲಿ

ಒಣ ಹಾಕುತ್ತಾರೆ ಒಗೆದು ಬಟ್ಟೆ

ನೋಡನೋಡುತಿದ್ದಂತೆ ಸದ್ದಿಲ್ಲದೆ ಅರರೇ

ಏಳುತ್ತಿದೆ ಕಟ್ಟಡ ನೆಲದಿಂದ ಕಿತ್ತುಕೊಂಡು ಮೇಲಕ್ಕೆ

ತನ್ನೆಲ್ಲ ಪಾತ್ರ ಪಗಡೆ ಕಪಾಟು ಮಂಗಳಸೂತ್ರ

ಓಡಿ ಹೋದ ತಮ್ಮನ ಆಟಿಗೆ ಬೇಬಿಯ ಗರ್ಭಪಾತದ ರಸೀದಿ

ಮಂಚಕ್ಕೆ ಸರಪಳಿ ಕಟ್ಟಿಟ್ಟ ಮತಿಗೆಟ್ಟ ಆಯಿ

ಎಲ್ಲವ ಹೊತ್ತುಕೊಂಡು ಗಲಗಲ ಬಾಗಿಲುಗಳ ಅಲ್ಲಾಡಿಸುತ್ತ

ಅಂತರಿಕ್ಷದಲ್ಲಿ ಈರುತ್ತಿದೆ ಮೇಲೆ ಉಪಗ್ರಹದಂತೆ

ಯಾಕೆ ಯಾಕೆ ತೆರೆಯುತ್ತಿಲ್ಲ ಆ ಒಂದು ಕಿಟಕಿ

೧೪. ರಂಗೀಲಾ

ಹಳದಿ ಹೂವು ಎದ್ದು ನಿಂತು

ಮೈ ಮುರಿದರೆ

ಸ್ವಪ್ನದ ಹೊಳೆ ಹಾದಿ ತಪ್ಪಿ

ಹೊರಗೆ ಹರಿದರೆ

ಜೈಲುಗಲಿದ್ದಲ್ಲಿ ಕಾಡು ಬೆಳೆದರೆ

ಅದು ರಂಗೀಲಾ ರಂಗೀಲಾರೆ

ನಸುಕಿಗೇ ಬೀದಿಯಲ್ಲಿ

ಮಕ್ಕಳೆದ್ದರೆ

ರಿಮಾಂಡ್ ಹೋಮಿನ ಅಡುಗೆಗೆ

ಆಯಿ ಬಂದರೆ

ಮೂಡಣದ ಕಿತ್ತಳೆಯ ಸುಲಿದು ಕೊಟ್ಟರೆ

ಅದು ರಂಗೀಲಾ ರಂಗೀಲಾರೆ

ಕಣ್ಣೆವೆಯಲ್ಲಿ ಬಣ್ಣದ

ಮೋಡ ಬಂದರೆ

ಅಲ್ಲಿ ಒಡೆದ ಅಕ್ಕಂದಿರ

ಬಳೆ ಕಂಡರೆ

ಅಜ್ಜನನ್ನು ಅರಸಿ ಚಿಣ್ಣ ವೃದ್ಧಾಶ್ರಮಕೆ ಬಂದರೆ

ಅದು ರಂಗೀಲಾ ರಂಗೀಲಾರೆ

೧೫. ಒಂದು ಮಧ್ಯಾಹ್ನ ಫೇರಿವಾಲಾ

ಮಧ್ಯಾಹ್ನ ಗಂಡಸರ ಎರಡನೇ ಶಿಫ್ಟಿಗೆ ತರುವ

ಉರಿವ ತಗಡಿನ ಬಸ್ಸು

ಬಟ್ಟೆಯಂಗಡಿ ಪಕ್ಕ ಹಾಯುವಾಗ ಆಗಷ್ಟೆ

ಆರುತ್ತದೆ ಮಣಿಬೇನಳ ವಿವಿಧಭಾರತಿ

ನಂತರ ಉದ್ವಿಗ್ನ ಶಾಂತಿ. ನಿದ್ದೆಯ ಅಂಚಿನಲ್ಲಿ

ಚೆಂಡಾಡುವ ಮಕ್ಕಳು. ಮೇಲಿನ ಮಜಲಿನ ದರ್ಜಿ.

ತಿರುತಿರುವಿ ಚೂಪಾಗಿಯೂ ಸೂಜಿ ಹೊಗದ ದಾರದಂತೆ

ಕೂಗಿಯೇ ಕೂಗುತ್ತಾನೆ ಫೇರಿವಾಲಾ

ಏನನ್ನೂ ಏನಕ್ಕೂ ಕೊಡಕೊಳ್ಳುವ ಫೇರಿವಾಲಾ

ಮಣಿಬೇನ್ ಅರಸುವಳು ಮನೆ ತುಂಬ ಬಿಚ್ಚಿಗಂಟು

ಏನ ಕೊಡಲಿ ಏನಕೊಡಲಿ

ತೊರೆದುಬೂರಸು ಕಪಾಟು.

ನಾಶಿಕದ ನಾದಿನ್ಇ ಕೊಟ್ಟ ಅಗ್ಗದ ಸೀರೆಗೆ

ಸಿಗಭುದು ಮೂರು ಪಾವು ಬಳ್ಳೊಳ್ಳಿ

ಅತ್ತೆಯ ಅಲ್ಯುಮಿನಿ ಪಾತ್ರೆ ಕಿವಿಯಿರದ ಕಪ್ಪುಬಸಿಗೆ

ಝರಿದಡಿಯ ಸಣ್ಣ ಪರ್ಸು

ಮದುವೆಯ ಜಂಗು ಗುಲಾಬದಾನಿಗೆ ಪ್ಲಾಸ್ಟಿಕ್ ಮಗ್ಗು

ಚಿಂದಿನಿದ್ದೆಯ ಹೊರಗೆ ಪೇಟೆ ಬೆಳಕಿನ ಗದ್ದಲ

ಮನೆ ಒರೆಸಲೆಂದೆ ಚಿಕ್ಕ ಚೌಕಗಳಾಗಿ ಕತ್ತರಿಸಿ

ಅಂಚು ಹೊಲೆದಿಟ್ಟ ಅತ್ತೆಯ ಕಂದು ಸೀರೆ

ಅತ್ತೆಯ ಮಗ ಗುಟ್ಟಾಗಿ ತಿಂತಿದ್ದ ಮಾತ್ರೆಗಳ ಶೀಷೆ

ಹೊಳಪು ಸವೆದ ಬಿರಡೆಯ ಪುಟ್ಟ ಮೂಕ ರೇಡಿಯೋ

ಕಿತ್ತು ಕಿತ್ತು ಎಸೆದ ಬೂರಸು ಮನೆತನವನ್ನೆ

ತೂಗಿ ಕೊಂಡು ಇಳಿದುಹೋದ ಫೇರಿವಾಲಾ

ರಸ್ತೆಯಲ್ಲಿ ಕಣ್ಮರೆಯಾಗುವವರೆಗು ನಿಂತಳು ಮಣಿಬೇನ್

ಹೊಸಬಳಾಗಿ

೧೬. ಹಳಿಗಳ ಮೇಲೆ

ಹಳಿಯ ಮೇಲೆ ಕೂತಿದ್ದಾಳೆ ಅವಳು ತುಂಡು

ವಸ್ತ್ರದಲ್ಲಿ ಕಬ್ಬಿಣದ ಬಾಲ್ದಿಯಿಂದ ನೀರೆರೆಯುತ್ತ ತಲೆಗೆ

ತಿಕ್ಕುತ್ತ ತುಂಡು ಅವ್ಯವ ಸುರಿಯುವ ಮಳೆಯಲ್ಲಿ

ಎರಡೂ ಕಡೆ ಸದ್ದಿಲ್ಲದೆ ಬಂದು ಗಕ್ಕನೆ ನಿಂತಿವೆ

ಜನದಟ್ಟಣೆಯ ಧಡೂತಿ ರೈಲುಗಳು. ಡಬ್ಬಿ ತುಂಬ

ಕಂಬಿ ಹಿಡಿದು ಕೋಳಕ್ಕೆ ಜೋತ ಕೈಗಳು

ಎತ್ತಿದ ಅವಳು ಕಂಕುಳಿಂದ ಹೊರಬಿದ್ದಿವೆ ಹುಲಿಮರಿ

ಅತ್ತಿತ್ತ ಸುಳಿದ ನೆಕ್ಕುತ್ತ ಅವಳ ಬಡ ತೊಡೆಯ

ಕಾಯುತ್ತಿವೆ. ಸಣ್ಣ ಡಬ್ಬಗಳಲ್ಲಿ ಪರ್ಜನ್ಯ ಹಿಡಿದು

ಇದೇ ಹಳಿಗುಂಟ ಕೂತಿದ್ದಾರೆ ಗಂಡಸರು ತಲೆ ಎತ್ತಿ

ಉರಿವ ಮರ್ಮಾಂಗಗಳ ಹಿರಿದು

ಹಳಿಗಳಲ್ಲಿ ಧ್ವನಿ ಇಲ್ಲ. ಬದಲಿಗೆ ಚಕ್ರಗಳ ಮೇಲೆ ಕಾದು ನಿಂತು

ಪಟ್ಟಣದ ನಿರ್ಲಜ್ಜ ಕಂಪನ. ಸಹಸ್ರಾರು ಮೈಲು ಓಡುತ್ತ

ಬಂದು ಹೆಸರು ಮರೆತು ನಿಂತವರ ಎದೆಗೆ

ಗೋಪುರದ ಗಡಿಯಾರ ಢಣಢಣ ಗುಂಡಿಕ್ಕಿದಂತೆ.

ಇವರ ಪ್ರಾಂತ ಎಲ್ಲಿ ಕಾಲ್ ಎಲ್ಲಿ. ಮುಂಡು ಕೊಡವಿ ಎದ್ದವರು

ಹೀಗೆ ಈ ಇವಳ ತುಂಡು ಮೊಲೆಯಷ್ಟೇ ಹಗುರಾಗಿ

ತಲೆ ಕೊಡುವರು ಹಳಿಗೆ

ಮಳೆಗೆ ವಿದ್ಯುತ್ ತಂತಿಯ ಕಾಗೆ ತೊಟ್ಟು ತೊಟ್ಟಾಗಿ

ಕರಗಿ ಉರಿವ ಕಣ್ಣಿಗೆ ಇಳಿದ ಕಾಡಿಗೆ.

ಕೈಕಾಲು ಅಲ್ಲಾಡದೆ ಸೆಟೆದು ಛತ್ರಿಯಂತೆ ಒತ್ತಿನಿಂತ ದೇಹಗಳ

ದಬ್ಬೊಯ ಹೊರಗೆ ಹುಲಿಮರಿಗಳು ಓಡಿವೆ ಹಳಿಯುದ್ದಕ್ಕೂ

ಮೂಸುತ್ತ ನರವಾಸನೆ.

ಚಲಿಸುವಂತಿಲ್ಲ ಏನೂ ಈಗ

ಇವಳ ಅಭ್ಯಂಜನ ಮುಗಿವ ತನಕ. ಮುಗಿಯಿತೋ

ಘಮಘಮಿಸುವ ಅವಳನ್ನು ಹಳಿಗಳ ಮೇಲೇ ಮಲಗಿಸಿ

ಒಬ್ಬೊಬ್ಬರಾಗಿ ಎಲ್ಲರೂ ಹರಿದು ಹೋಗುವ ತನಕ.

೧೭. ಹಕ್ಕಿ

ಪುಟ್ಟ ಹಕ್ಕಿಯ ರೆಕ್ಕೆಯ ಮೇಲೆ

ಕೂತು ಬಂದ ಸಂಜೆಯೊಂದು

ಕಿಟಕಿಯಾಚೆಯಿಂದ ನನ್ನ ಅಣುಕಿಸಿತು

ಅದಕ್ಕೆ ನೋಡಲು ನನ್ನ ಕಣ್ಣು

ಕೇಳಲು ನನ್ನ ಕಿವಿ ಇತ್ಯಾದಿ ಬೇಕಂತೆ

ಹದರಿ ಹಕ್ಕಿಯನ್ನು ಅವುಚಿ ಬಚ್ಚಿಟ್ಟುಕೊಂಡೆ

ಇಡೀ ಜಗತ್ತಿಗೇ ಒಂದು ಕಪ್ಪನೆ

ತಲ್ಲಣ ದೊರಕಿತು.

೧೮. ಜಾಡು

ನಿನ್ನ ತೋಳುಗಳ ತಣಿವಲ್ಲಿ ಒಂದು

ಚಿರತೆಯ ಗಾಯ ಇದೆ

ನಾಲಗೆಗೆ ರಕ್ತದ ಬಿಂದು

ರಸ್ತೆಯಲ್ಲಿ ಟೈರು ಓಡಿಸುವ ಪೋರರು

ಒಂದಲ್ಲ ಒಂದು ದಿನ ಈ ವಾಸನೆ ಹಿಡಿದು

ಬೆಳೆದು ಬರುವರು ಬಿಡು.

೧೯. ಲಿಪಿ

ನೆಲದ ಮೇಲೆ ಹಾಸಿಕೊಂಡ ದಿನಪತ್ರಿಕೆಯ ಮೇಲೆ

ಇರುವೆಯೊಂದು ಚಲಿಸಿದೆ

ಮೊದಲೇ ಇತ್ತೋ ಅದಕೆ ಈಗ ರುಚಿ ಹತ್ತಿತೋ

ಒಮ್ಮೆಗೇ ಅದು ಅಕ್ಷರಗಳ ಸುದ್ದಿ ತಿನ್ನಲು ಆರಂಭಿಸಿದೆ

ಮೊದಲು ದಪ್ಪಕ್ಷರಗಳ ರಾಷ್ಟ್ರಿಯ ಮರಣ ನಂತರ

ಮೀಡಿಯಂ ಸೈಜ್ ವಧೂದಹನ ನಂತರ ಅಕ್ಷರದಿಂದ

ಪರಸ್ಪರ ಕುತ್ತಿಗೆ ಕುಯ್ದುಕೊಂಡವರು

ನಾಲ್ಕಾಣೆಗಾಗಿ ಕರುಳಿಗೇ ಚೂರಿ ಹೆಟ್ಟವರು ಕೊನೆಗೆ ಸಣ್ಣಪುಟ್ಟ

ಆತ್ಮಘಾತ ಹೀಗೆ

ಒಂದೊಂದು ಹೆಕ್ಕಿ ನೆಕ್ಕಿ ನೆಕ್ಕಿ ಸಾಫು ಮಾಡಿ

ಇರುವೆ ಹೊರಟು ಹೋಗಿದೆ

ಈಗ ಕಾಗದ ಖಾಲಿ

ರಕ್ತ ಸಿಗದೆ ಅಸುನೀಗಿದ ಬಾಣಂತಿಯ ಕೆನ್ನೆಯಂತೆ

ಈಗಿದರ ಸುರುಳಿ ಮಾಡಿ ಕಣ್ಣಿಗೆ ಹಿಡಿದರೆ

ಕೊಳವೆಯಾಚೆ ಗಾಯಗೊಂಡ ಶುಕ್ರತಾರೆ

ಕಿವಿಗಿಟ್ಟರೆ ಏನೋ ಆಳದಲ್ಲಿ ಅಗೆವಂಥ ಸದ್ದು

ಮತ್ತು ತುಟಿಗಿಟ್ಟು ಉಸಿರೂದಿದರೆ ಇದು ಕೊಳಲಬಿದಿರು

ಕಾಡಂತೂ ಸಮೀಪವಿದೆ ಬಿಟ್ಟುಬರುವದು ಕಷ್ಟವಿಲ್ಲ

ಆದರೆ ಒಂದೇ ಭಯ

ಆ ಇರುವೆ ಎಲ್ಲಿದೆ ಈಗ

ಮತ್ತದರ ಕಾಲಗಂಟಿದ ರಕ್ತದ ಲಿಪಿಯ ದಾರಿ.

೨೦. ಒಂಟಿ ಕೂದಲ ದಾರಿ

ಬಯಲುಸೀಮೆಯ ಕುದಿವ ಹೆದ್ದಾರಿ ನಡುವೆ

ತಿಕೀಟಿಲ್ಲ ಅಂತ ಇಳಿಸಿಬಿಟ್ಟರು ಅವನನ್ನು

ಝಳದ ಗಾಳಿಗೆ ಕಣ್ಮುಚ್ಚಿದ ಮರಗಳ ಕಾಲಿಗೆ ಬಿದ್ದ ದಾರಿ

ಬಯಲಿನುದ್ದಕೂ ಸಾಬೂನಿನ ಮೇಲಿನ ಒಂಟಿ ಕೂದಲು

ಗೋರಿಯಂತೆ ನಿಂತ ಸುಡುಸುಣ್ಣದ ಮೈಲಿಗಲ್ಲು

ಅದಕ್ಕಾತು ನಿಂತ ಅವನ ಸುತ್ತ

ಸಂಪಿನ ನಿರ್ಜನ ಗಿರಣಿಗೆ ಬೆಂಕಿ ಬಿದ್ದಂತೆ ಬಿಸಿಲು

ಎಲ್ಲಿಂದ ಯಾರೂ ಅಟ್ಟಿಸಿಕೊಂಡು ಬರುವ ಭಯವಿಲ್ಲ ಈಗ

ಹಾಗೆ ಆತ ಸ್ವಲ್ಪ ನಿದ್ದೆ ಹೋಗಿ ಎದ್ದ

ಒಂದು ಕಾಲಾಂಶವಾದರೂ ಜಗ ಹಾದು ಹೋಗಿರಬೇಕು

ಊದಿ ಕವುಚಿಟ್ಟ ಬ್ಯಾಂಡಿನ ತುತ್ತೂರಿಗಳಂಥ ಮರಗಳಲ್ಲಿ

ಹೌದೋ ಅಲ್ಲವೋ ಎಂಬಂತೆ ಸೇರತೊಡಗಿದೆ ಕತ್ತಲು

ಇದ್ದಲ್ಲೆ ಕರಗತೊಡಗಿದೆಯೆ ತಂಪಗೆ ಆಕಾಶ

ಗಂಜಿ ತಿಳಿ ಚೆಲ್ಲಿದಂತೆ ನೂಲಿನ ಮೋಡ

ಒಂದು ದಿಕ್ಕಿನಲ್ಲಷ್ಟೆ ಅಬ್ಬ ಎಷ್ಟು ಬೆಳಕಿನ ಧೂಳು

ಎಂದು ಉಂಡಿದ್ದೆ ಎಲ್ಲಿ ಹತ್ತಿದ್ದೆ ಹೆಸರೇನಿತ್ತು ಇಲ್ಲಿ

ಇಳಿಸಿದ ಮೊದಲು ಯಾರಿದ್ದರು ಜತೆಗೆ

ಜೀವನ ತೇರೆಳೆದು ಫೂಟು ಜಾಗದಲ್ಲೆ ದೇವರ

ಪೋಟೋ ತೊಳೆದವರು

ಯಾವ ಏಣಿಯ ಕೆಳಗೆ ಹೊರ ಬಂತು ಕರುಳು

ಎಲ್ಲಿ ಸುಳ್ಳುಗಳ ಚೂರಿ ನುಂಗಿರು ಕೊರಳು

ವಾರಕ್ಕೊಮ್ಮೆ ಉಡುಪಿಗೆ ಸಬಕಾರ ಹಾಕಿ ಹಿಂಡುವಾಗ

ಕೋಡಿ ಹರಿಯಿತೆ ಒಳನದಿಯ ಕೆಸರು

ಈ ಹಾದಿಗೆ ಖಡಿ ಹಾಕುವಾಗಲೆ ಶಿಶುವಾಗಿದ್ದೆನೆ ಇಲ್ಲಿ

ಬಿಟ್ಟು ಹೋದಳೆ ಆಯಿ ಬೇರೆ ಮಕ್ಕಳ ಹೆರಲು

ನಿದ್ದೆಯಲಿ ಬಡಬಡಿಸುವ ಬ್ರಹ್ಮಚಾರಿ ವೃದ್ಧನಲ್ಲಿ

ನಂಬಿಕೆ ಯಾಕೆ ಕಳಕೊಂದಿತು ಊರು

ಪಿಳಿ ಪಿಳಿ ಕಣ್ತೆರೆದೆವು ತಂಪು ನಕ್ಷತ್ರ

ನರನಾಡಿಯಲ್ಲೀಗ ಸುಳಿವ ಚಿಗುರು ಗಾಳಿ

ಈತ ಈಗ ಮಗು ಬಟ್ಟೆಬಿಚ್ಚಿ ಒಗೆದ ಕವುಚಿ ಕೂತ ಆಡಿದ

ಮಣ್ಣು ತಿಂದು ನೋಡಿದ

ಸದ್ದಿಲ್ಲದೆ ತನ್ನೊಳಗೆ ಸರಿಯುತಿರುವ ಸುತ್ತಲನ್ನು

ಅವುಚಿಕೊಂಡು ಗಲಗಲಗಲ ಅಲ್ಲಾಡಿಸ್ತೊಡಗಿದ

ಹಕ್ಕಿಯಂಥ ಪ್ರಾಣಿಯೊಂದು ಕತ್ತಲೆ ಬೆಳಕು

ಮಿಕ್ಸ್ ಮಾಡುತ್ತಿರುವ ಈ ದಿವ್ಯ ವಿಲಕ್ಷಣವನ್ನು

ನೋಡಿಯೂ ನೋಡದಂತೆ

ಹಗಲಿನ ಹೆಣ ಹೊತ್ತ ಟ್ರಕ್ಕುಗಳು ಹಾದು ಹೋದವು.

೨೧. ಕರೆ

ಶಿಶುಗಳುತ್ತ ಈ ಶಹರದ ಗದ್ದೆಗಳಲ್ಲಿ ನಡೆವಾಗ ರಾತ್ರಿ

ದೂರ ಚಂಡೆಯ ದನಿಯದೊಂದೆ ದಾರಿ

ನೀರು ಬೆಳಕಲ್ಲಿ ತೊಯ್ದಪೊದೆ ಕಾಡು ಕಿಟಕಿ

ಬಟ್ಟೆ ಮೇಲೆ ಬರೆದಂಥ ಮೂಕಿಚಿತ್ರಗಳ ಸೀನರಿ. ಹೌದು

ಕಪ್ಪು ಬಿಳುಪು ಎರಡೇ ಬಣ್ಣ ರಾತ್ರಿಗೆ

ದಾರಿಯಲ್ಲಿ ಕೊಳಗಳು. ಲೈಫ್ ಬಾಯ್ ಹಿಡಿದು ಅವುಗಳಲ್ಲಿ

ಮುಳುಗೇಳುವ ಮುದಿಗಂಡಸರು. ಮನೆಯಿಲ್ಲ

ಮಠವಿಲ್ಲ. ದಂಡೆಯ ಮೇಲಿಟ್ಟಿರುವ ವಾಚು ಬಟ್ಟೆ ಕೈಚೇಲ.

ವಾಚಿನ ಡೈಲಿಗೆ ಬೆಮರ ಕಲೆ.

ಈ ಮುದಿಯ ಎಂಥ ಹದಿ ಚೆಲುವೆಯಲ್ಲೂ

ಮಗಳನ್ನು ಕಾಣಲಾರ. ಕಾರಣ ಹಾಗಂದರೇನು ಅವಗೆ

ಮಗಳಿಲ್ಲ. ಅವನ ಕಣ್ಣುಗಳಲ್ಲಿ ಬೆಳ್ಳಿರೆಪ್ಪೆಗಳ ಜತೆಗೇ

ಒಂದು ಬಗೆ ಅನಾಥ ಹಸಿವು.

ಅದನ್ನು ಮಾರಲು ಆತ ಸಿದ್ಧ

ಆದರೆ ಮೊದಲಿಗನಾಲ್ಲ. ಒಬ್ಬನೇ ಅಲ್ಲ.

ತನ್ನೆಲ್ಲ ರೋಮಗಳನ್ನಡವಿಡುತ್ತೇನೆಂದು ಮುಂದೆ ಬಂದರೆ ಆತ

ಸಹಿ ಎಲ್ಲಿ ಮಾಡಬೇಕು

ಗರಾಜಿನ ಕಾರುಗೂಡುಗಳ ಮೈಧೂಳಿನಲ್ಲೋ

ಸತ್ತ ಚಿಟ್ಟೆಯ ರೆಕ್ಕೆಹುಡಿಯ ಮೇಲೋ ಅಥವಾ

ಒಲೆಯೆದುರು ಧಳಧಳ ಬೆವರುಮಣಿ ಹೊಳೆವ

ತನ್ನದೇ ಹೊಂಬಣ್ಣದ ಕಿಬ್ಬೊಟ್ಟೆಯ ಮೇಲೋ

ಈ ಮುದಿಯ ಕೊಳದಿಂದೆದ್ದು ಬರುವದನ್ನೇ

ನೋಡಲು ಅವಿತು ಕಾದವರೆಲ್ಲ ಈಗ ನಿದ್ರಾವಶ.

ಎಲ್ಲರ ನೆತ್ತಿಯ ಮೇಲೂ ತಿರುಗುತ್ತಿವೆ ಸ್ತಬ್ಧ ಬುಗುರಿಗಳು

ವಿಗ್ರಹದಂತೆದ್ದು ತೊಟ್ಟಿಕ್ಕುತ್ತ ಈಗ ಈತ ದಂಡೆಗೆ

ಬರಬೇಕು ಒದ್ದೆಮೈಯಲ್ಲಿ ಬಗ್ಗಿ ಎತ್ತಿಕೊಳ್ಳಬೇಕು

ಬಾಯಲ್ಲಿ ಬೀಡಿ ಕಚ್ಚಿ ಇನ್ನೇನು ಕಡ್ಡಿಗೀರುವ ಮುನ್ನ

ಅಳುಕಿ ಅಲ್ಲಾಡುವದು ಸರ್ವಸ್ವ

ಕತ್ತಲಿಗೆ ಪೂರ ಬಂದಂತೆ

೨೨. ಮಾಫಿ

ಸ್ವಪ್ನದ ಹಕ್ಕಿಯಂತಿರುವ

ಆ ಗುಡ್ಡದ ಹಿಂದೆ

ಮಾಫಿ ಸಿಗುವುದಂತೆ

ನಾಕು ರಸ್ತೆ ಸೇರಿದಲ್ಲಿ ಜಮಖಾನೆ ಹಾಸಿ

ಮಕ್ಕಳ ಮಾರ ನಿಂತವನೆ

ಹಸಿದು ಕೂತೀ ಪುಟ್ಟ ದೇವತೆಗಳ ಕಣ್ಣಲ್ಲಿ

ಜಗದ ಹೆಣ ಕಾಣು

ಕರೀತಿದೆ ಸಮುದ್ರ ಗುಡ್ಡದ ಹಿಂದೆ

ಸಿಗುವದಂತೆ ಮಾಫಿ ಇಲ್ಲೇ

ಬೇರೆ ಬಾಗಿಲುಗಳಿಂದ

ಗಪ್ ಚುಪ್ ತಾಯಂದಿರ ಪೇಟೆಗೆ ಕಳಿಸಿದ್ದೇವೆ

ತಿಂಡಿಗಳ ಆದಗಿಸಿಟ್ಟು

ಆಟಿಗೆಗಳ ಮಾರಿದ್ದೇವೆ

ನಿಯಂತ್ರಿಸಿದ್ದೇಎ ಸ್ಖಲನ

ಈ ನಡುರಾತ್ರಿ ಈಗ ಬಾಗಿಲು ಬಡಿಯುತ್ತಿರುವವರನ್ನ

ಉಸಿರು ಬಿಗಿ ಹಿಡಿದು ಶ್

ದೀಪ ಹಾಕದೆ

ಹಾಗೇ ನಿಂತು

ಬಿಟ್ಟು ಬಿಡುವಾ

ಸ್ವಪ್ನದ ಕೇರಿಯಲ್ಲೂ ಏರಿ ಬಂದರೋ ಅವರು

ಐಡಿಯಾ!

ಎದ್ದು ಬಿಡುವಾ

೨೩. ಕಾಗೆ ಮುಟ್ಟಿ

ಈ ಕಾಗೆಯನ್ನು ಮನುಜ ಮುಟ್ಟಿಬಿಟ್ಟ ಛೆ

ಅಂತ ಕಾಕಾಕಾಕಾ ಬಹಿಷ್ಕಾರ

ಬಳಗದಿಂದ

ಅದು ಸಣ್ಣ ಗಿಡದ ಬಳಿ ಕುಪ್ಪಳಿಸುತ್ತಿದೆ

ಕೆದರಿದ ಕಪ್ಪು ತಲೆಯನ್ನು

ಹವೆಯಲ್ಲಿ ತಿವಿಯುತ್ತ

ಬಾ ಮರಿ ಆಟಕ್ಕೆ. ನಂತರ ನಿನ್ನದೇ

ಮನೆಗೆ ಹೋಗು ಊಟಕ್ಕೆ

ಕಪಾಟಿನಲ್ಲಿಟ್ಟ ಆಟಿಗೆಗಳು ನಿನಗಲ್ಲ ಅವು

ಬರೇ ನನ್ನ ಮಕ್ಕಳಿಗೆ

೨೪. ಒದ್ದೆ ಬೆಳಕು

ಎಲ್ಲ ಕಡೆ ಬೀಳುತ್ತಿದೆ ಮಳೆ ಒಂದು

ಹೂವಿನ ಮೇಲೆ ಮಾತ್ರ ಬಿಟ್ಟು.

ಇದರ ಕೇಶರಕ್ಕೆ ತೊಟ್ಟಿಲ ಗಿಲಕಿ

ಪಕಳೆಗೆ ಸಣ್ಣ ಜೋಗುಳದ ದನಿ

ಬಟ್ಟೆ ಹಾರಿದ ಕೊಡೆಯ ನಗ್ನ ಕಡ್ಡಿಗಳಂತೆ

ತಿರುಗುವ ಆಕಾಶ ಗರಡಿ ಒಳಗೆ ಹೊರಗೆ

ರಸ್ತೆಗಿಳಿದು ರಾಡಿಯಾಗಿದೆ ಕಾಡಿನ ನೀರು

ಆನೆಯೊಂದು ತೊಯ್ಯುವಾಘ ತೊಪ್ಪೆಗೆ

ಅದರ ಕಾಲ್ಗಂಬಗಳ ಮಧ್ಯ ಹವೆಯಲ್ಲೆ

ಬೆಚ್ಚಿನಿಂತಿವೆ ಚಿಟ್ಟೆ

ಮರ್ಯಾದೆ ಮುಚ್ಚಿಕೊಳ್ಳಲು ಜಾಗ ಹುಡುಕಿದೆ ಗಾಳಿ

ಹೂವಿನ ಅಧರ ಸೀಳಿ

ಪೇಪರ್ ಆಮೇಲೆ ಮಾಡ್ತೀವಿ, ಬಾಡಿ ಒದ್ದೆಯಾಗ್ತಿದೆ

ಸ್ವಲ್ಪ ಒಳಗೆ ತಗಳ್ಳಿ ಸಾರ್.

ಮೊದಲು ರಕ್ತದ ಬಂದೋಬಸ್ತು ಮಾಡಿ

ಮಿಸ್ಟರ್, ಮುಖ ಯಾಕ್ರೀ ನೋಡ್ತೀರಿ.

ಸ್ತಬ್ಧ ದೀಪಗಳು ಹೊರಗೆ

ಕಾಲಿಟ್ಟಲೆಲ್ಲ ಹಾವಸೆಯ ಜಾರು.

ಪಕಳೆಗಳ ಕಿತ್ತು ಕಿತ್ತು ಅರಳಿಸಿದ ಮೊಗ್ಗು

ತೊಯ್ದ ಪೇಟೆಯಲ್ಲಿ ಕರೆಯುತ್ತಿದೆ

ಕಣ್ಮರೆಯಾದ ಮಕ್ಕಳ ಮುದ್ದು ಲೋಟ ತಾಟು ಚಡ್ಡಿ

ತಂತಾನೆ ಬಾಗಿಲು ದಾಟಿ ಪಂಚಭೂತಗಳಲ್ಲಿ ಒಂದದವೆ

ಅಥವ ಉಳಿದ ಮಕ್ಕಳ ಕಡೆಗೆ ಹೋದವೆ.

ಆನೆ ಗೀನೆ ಬಿಡಿ, ರಸ್ತೆ ಮಧ್ಯೆ

ಹುಪ್ಪಂತ ಮೋಡವೊಂದು ಜಾರಿ ಕೂತುಬಿಟ್ಟರೆ

ಟ್ರಾಫಿಕ್ ಎಲ್ಲಿ ಡೈವರ್ಟ್ ಮಾಡ್ತೀರಿ. ಅಥವ

ತೂತು ಕೊರೀತೀರೋ ಮೋಡದಲ್ಲಿ ಡ್ರಿಲ್ ಮಶೀನ್ ಹಿಡಿದು

ಆದರೆ ಜಾಗೃತಿ ಆ ಕಡೆ

ತಬ್ಬಿನಿಂತ ಬೆತ್ತಲೆ ಮಗು ಇದೆ. ಡ್ರಿಲ್ ಮಶೀನ್ ಜಾಗೃತೆ.

ಇಂಚರದ ನೆರಳ ತಡವುತ್ತಿದೆ

ಬೆರಳಿಲ್ಲದ ಕೈಲಿ ಮೊಂಡು ಮರ

ಮೆಲ್ಲಗೆ ಮೋಡಗಳ ಮೇಲೆ

ನೀಲಾಂಜನ ಹಿಡಿದು ಹತ್ತಿದ್ದಾನೆ ಪೋರ

ಏನು ನೋಡುತ್ತಾನೋ ಒದ್ದೆ ಬೆಳಕಲ್ಲಿ

ನೆತ್ತಿ ಮೇಲೆ ಹೊಳೆಯೊಂದು ಹರಿಯುವಾಗ

೨೫. ದಾಹ

ಗಾಳಿಯಲ್ಲಿ ಒಂದು ಸಂಭ್ರಮ ಬರುವದನ್ನು

ನೋಡಿದೆ. ನೀರಿನ ಸಾಣೆಗೆ ಉಜ್ಜಿ ಹೊಳೀತಿತ್ತು ಮೀನು.

ನೀರೊಳಗೆ ದೇವತೆಗಳೂ

ಮುಚ್ಚಿರಬೇಕು ಕಣ್ಣು

ದೇವರು ಉಸಿರಾಡೊದ ಗಾಳಿ ಮಾತ್ರ ಗುಳ್ಳೆ

ಮೇಲೇರಿ ಕೊಳವೊಂದು ಆಗಷ್ಟೆ ವಿಶ್ವಕರ್ಮ

ಸುರಿದು ಹೋದ

ಬೆಳ್ಳಿ ಬೀಯರು

ಮುತ್ತು ಚಿಪ್ಪು ಬಳ್ಳಿ ಕರುಳು

ಎಲ್ಲ ನೀರಿನಲ್ಲಿ

ಸ್ತಬ್ಧಗಾಳ ಸ್ತಬ್ಧ ಮೀನು

ಕರೆಯ ಮೇಲಿನ ಕೊರಡು

ಇಬ್ಬನಿಗೆ ತುಟಿ ತೆರೆದರೆ

ಲಗ್ಗೆಯಿಟ್ಟು ಮುದ್ದಾಡಿದೆ

ತಂಗಾಳಿಯ ಹೂವು

ಕೇವಲದ ಕೆನೆಯಂತೆ

ತೇಲುತಿದೆ ಒಂಟಿ ಮೊಲೆ ಮೇಲೆ

ಆಕಾಶ ಗರ್ಭದೊಳಗೆ

ಈ ಮೋಹ ಈ ದಾಹ

ನಳಲು ಬೆಳಕಿನ ನಡುವೆ

ದಣಿವ ಮಕ್ಕಳಿಗೆ

೨೬. ಯಾವುದೋ ತೀರದಲ್ಲಿ

ಅವನು ಓಡಿಬಂದು ಅಪರಾತ್ರಿ

ಎದೆ ಒಡೆಯುವಂತೆ ಬಾಗಿಲು ಬಡಿದಿದ್ದಾನೆ

ನೀರು ಕೊಟ್ಟರೆ ಬೇಡ ಅನ್ನಲಾರ

ಗಟಗಟ ಕುಡಿಯುತ್ತಾನೆ ಕೊರಳುಬ್ಬಿಸಿ

ಬೆನ್ನು ತುಸು ನೇವರಿಸಿದರೆ ಸಾಕು

ಜೀವದ ತೇವ ಒಸರಿ ಮಿನುಗುತ್ತವೆ

ಅಮಾಯಕ ಕಣ್ಣು

ಬೆಳಕಿನ ಹಣ್ಣೊಂದು ಹೋಳಾಗುತ್ತಿರುವಂತೆ

ತನ್ನ ಬಾಲ್ಯದ ಜೀಬುಗಳಲ್ಲಿ

ಕರಗಿ ಹೋದ ಪೆಪ್ಪರುಮಿಂಟುಗಳ ಬಗ್ಗೆ

ನಿದ್ದೆ ಬೀಳುವ ಮುನ್ನ ಅಮ್ಮ ಗುಣುಗುಣಿಸಿದ

ಸ್ವರಗಳ ಬಗ್ಗೆ ಯಾವದೋ ತಿರದಲ್ಲಿ ಬೊಗಸೆ ನೀರಲ್ಲಿ ಈಜಿ ಬಂದ ಮೀನುಮರಿಗಳ ಬಗ್ಗೆ

ತೊದಲುತ್ತ ಹೇಳುತ್ತಾನೆ ಮತ್ತು

ಕ್ಷಮಿಸಿ ನಿಮ್ಮ ಮಗುವಿಗಾಗಿ ನಾನೇನೂ

ತರಲಿಲ್ಲ ಎಂದು ಅತ್ತುಬಿಡುತ್ತಾನೆ

೨೭. ಗಾಯ

ಒಂದು ದೇಟಿನ ಮೇಲೆ ಒಂದೇ ಹೂವು

ನಿಲ್ಲಬೇಕು ಎಂದು ಹೇಳಿದವ ಯಾರೇ ಇರಲಿ, ಅವನು

ರೇಷನ್ ಕಾರ್ಡಿನೊಳಗಿನ ಚೊತ್ತು ಬೆವರು

ಅಕ್ಷರಗಳನ್ನು ಸರೀ ಬಿಡಿಸಿ ಓದುವನು

ನಂತರ ರದ್ದಿತೂಗುವ ದೊಡ್ಡ ತಕ್ಕಡಿಯಲ್ಲೇ

ಚೋಟು ಸಕ್ಕ್ರೆ ಸಿಂಪಡಿಸಿ ಕಟ್ಟುವನು

ಈ ಸಕ್ಕರೆಯ ಕಬ್ಬು ಬೆಳೆದ ಹೊಲದಲ್ಲಿ

ಯಾವ ಕೂಸು ಯುವತಿಯಾದಳು

ಯಾರಿಂದ ಎಂದು ಹೇಳಬಲ್ಲನು

ಕಾಡುಗನ್ನುರುಳಿಸಿ ಪೇಟೆ ಪಟ್ಟಣ ಕಟ್ಟಿದಿರಲ್ಲ

ಪ್ರಾಣಿಗಳೇನಾದವು ಎಂದೇನಾದರೂ ಕೇಳಿದರೆ

ಒಳಗೆ ಕರೆದು ಅಂಗಿ ಸರಿಸಿ ಮೊನಚಾದ ಗೊರಸು

ಉಗುರು ಕೊಂಬು ಕಾಣಿಸಿ ಕಣ್ಣು ಮಿಟುಕಿಸುವನು

ಯಾವುದೂ ಖರೆ ಅಲ್ಲ ಈ ದೇಟು ಈ ಹೂವು

ಬೇಕಿದ್ದರೆ ದೇಟು ಬದಲಾಯಿಸ್ತೀವಿ ಅಂದವನೇ

ಅಡಿಕೆ ಚೂರೊಂದು ಹಲ್ಲಿನ ಕುಳಿಯಲ್ಲಿ ಸಿಕ್ಕು

ಲೋಕವನ್ನೆ ಅಲ್ಲಾಡಿಸಿದ್ದಕ್ಕೆ

ಪಾನ್ ವಾಲಾವನ್ನು ಇರಿದು ಹಾಕುವನು.

ಈಗ ಆಕಾಶವನ್ನು ಯಾರೋ

ಕತ್ತರಿಸಿದ ಸದ್ದು ಕೇಳುವದು

ಮಕ್ಕಳು ಮೇಲೆ ನೋಡಬೇಡೀ

ಕಣ್ಣೀಗೆ ಬಿದ್ದೀತು ನೀಲಿಪುಡೀ

ಎಂದು ಸ್ಪೀಕರುಗಳಲ್ಲಿ ಎಚ್ಚರಿಸುತ್ತ ವಾಹನಗಳು ಓಡಾಡುವವು

ಸದ್ದಿಗೆ ಕಂಪಿಸುವದು ಕೇಸರ

ಮೊಗ್ಗಿನ ಕತ್ತಲಲ್ಲಿ

ಇನ್ನು ಡಿಬೇಟು,

ಎದುರು ಬಿದ್ದಿರುವ ಪಾನ್ ವಾಲನ ಗಾಯ ಖರೆಯೋ

ಅಥವ ಆಕಾಸದ್ದೋ.

೨೮. ಇಳಿಯುವದಿದೆಯೆ

ಸ್ಟೇಷನ್ನು ಬರಲಿನ್ನೆಷ್ಟು ತಡ ಎನುವಾಗಲೇ ಮೆಲ್ಲಗೆ

ತಟ್ಟಿ ಕಿವಿಯಲ್ಲುಸುರುವರು ಇಳಿಯುವದಿದೆಯೆ

ಹೌದೆಂದು ತಲೆಯಾಡಿಸುವೆವು ಚರ್ಮದ ಗೊಂಬೆಗಳು

ಇಲ್ಲೆಂದು ಅಲ್ಲಾಡುವೆವು ಬೆವರಿನ ಬೊಂಬೆಗಳು

ತುಸು ಅಬ್ಬರಿಸಿಯೇ ಕೇಳುವರು ಇಳಿಯುವದಿದೆಯೆ

ಹೌದೆಂದರೂ ಇಲ್ಲೆಂದ್ರೂ ಕೇಳಿಸಿಕೊಳ್ಳದೆಯೆ

ಚೀರುವರು ಎದೆ ಮೇಲೇ ಪಟರಿಗಳು ಹಾದಂತೆ

ಗರ್ಭಪಾತದ ಭಿತ್ತಿಚಿತ್ರ ನೋಡುತ್ತ

ಹಳದಿ ದೀಪಗಳ ರಾಡಿ ಸ್ಟೇಷನ್ನು ಇನ್ನೇನು ಬಂತೋ

ಕೈಕಾಲು ಹೆಸರು ಎಳಕೊಂಡು ಗುಂಡಿಗೆ ಹೋಳಾದಂತೆ ಜಿಗಿಯುವೆವು

ಪುಷ್ಪವೃಷ್ಟಿಗೈಯುವದ ಬಿಟ್ಟು ಗಗನದ ಹೊಗೆಯಲ್ಲಿ ತಲೆ

ಮರೆಸಿಕೊಂಡಿರುವ ದೇವತೆಗಳೆ ಇಳಿಯುವದಿದೆಯೆ

೨೯. ಒಂದು ಹೂವಿನ ನೆಳಲು

ಒಂದು ಹೂವಿನ ನೆಳಲು ಎಷ್ಟು ಸಣ್ಣ

ಒಂದು ಕಣ್ಣಿನಷ್ಟೆ

ಮೊಗ್ಗು ಬೆರಳಿಂದ ಮಗು ಮೀಟಿದ ಚಿಟಿಕೆಯಷ್ಟೆ

ಯಾರೋ ಬಿಟ್ಟ ಫ್ರಾಕು ತೊಡಿಸಲು

ಬಲವಂತ ಕತ್ತು ನುಗ್ಗಾಗಿಸಿ ಎಳೆದೂ ಎಳೆದೂ ಕೈಕಾಲು

ಹೀಗೆ ಊದ್ದ ಬೆಳೆದಿವೆ ಕಂದೀಲಿನೆದುರು

ಪಾಟಿಯ ಮೇಲಿನ ಬಳಪದ ನೆರಳಿನಂತೆ

ಕಣ್ಣಾಲಿ ಬಿಚ್ಚಿ ಕೇಳಿದಳೆ ಬಾಲೆ ಅಂಗಡಿ ಗಲ್ಲಾಕ್ಕೆ

ಮೊಣ ಕೈ ಕೊಟ್ಟು ಪಾವು ಕಿಲೋ ಅಕ್ಕಿ ನೂರು ಗ್ರಾಂ ಬೇಳೆ

ಹತ್ತು ಪೈಸೆಯ ಒಗ್ಗರಣೆಕಾಳೂ. ನೆಂಟರು ಬಂದಾರೇನೇ.

ಅಬಬ ಎಷ್ಟು ಪೊಟ್ಟಣ ಕಟ್ಟುವರು ಅಂಗಡಿಯವರು

ತಟ್ ತುಂಡರಿಸಿ ದೊಡ್ಡ ಉಂಡೆಯ ದಾರ ಹಾಗೇ ಬಿಡುವರು

ಚಂದ ಕಾಣೀಯಲ್ಲೇ ಅಕ್ಕನ ಸೀರೆ ಸುತ್ತಿಕೊಂಡು ಬಂದಿಯೇನೇ

ಜಳ್ಳೆ ಸೆರಗು ಪೇಟೆಯ ಮೊಳೆಗೆ ಸಿಕ್ಕು

ಮರಳಿ ಬಾಲೆ ನಡೆದಂತೆ ಬೀದಿಯಲ್ಲಿ ಬಿಚ್ಚಿ ಬಿಚ್ಚಿ ಬಿಚ್ಚಿ

ಹೀಚಲು ಹದಿ ಹರೆಯದ ಮೊಗ್ಗು

ತಲುಪಿತೆ ಬತ್ತೆ ಮನೆಗೆ

ಮನೆ ತುಂಬ ಗಂಟುಪೊಟ್ಟಣ

ಕತ್ತಲದಾರ ಹೊರಳುವದು ಮಡಿಲಲ್ಲಿ ಹಸಿವಿನ ಹಾವಿನಂತೆ.

ಬಿಸಿಲೊಂದು ಬಜಾರಿನ ಮೇಲೆ ಬಳಗುತಿರುವಂತೆ

ಖಡಕಡಕ್ ಎಂದು ಎಲ್ಲೋ ಹಳಿ ಬದಲಿಸುವದು ದೊಡ್ಡ ರೈಲು.

ರೈಲು ತುಂಬ ಯಾತ್ರೆಗೆ ಹೊರಟ ಒದ್ದೆ ಸೀರೆ ತೊಟ್ಟಿಲು

ಅಲುಗಾಡುವ ಸಿಂಕಿನಲ್ಲಿ ರಕ್ತದಂತೆ ತೊಳೆದು ಹೋಗುವ

ಹಣೆ ಕುಂಕುಮ

ನನ್ನಮಗು ನನ್ನ ಪಾಪು

ಶಾಲೆಯ ಸಲಾಕೆಯ ಹಿಂದೆ ಕೆದರಿದ ತಾಯಂದಿರು

ಹೇಗೆ ನೆನಪಿಟ್ಟರು ತಮ್ಮ ಹೆಸರು.

ದೀಪ ಕಾಣದ ಹಚ್ಚಡದ ಅನೆಯಜ್ಜಿ ರೇಷನ್ ಕಾರ್ಡಿನ ಹರುಕು ಹಾಳೆ ಹಿಡಿದು

ಒಂಟಿಕಾಲಲ್ಲಿ ಯಾಕೆ ಕುಣಿಯುವಳು

ಮತ್ತೆ ಮತ್ತೆ ಸೆರಗು ಮುಖಕಡ್ಡ ಹಿಡಿವ

ಅಂಗೈ ಹುರುಬುರುಕಲ್ಲಿ

ಕಪ್ಪುಮಣ್ಣಿನ ಎಷ್ಟು ಕಾಲುಹಾದಿಗಳು

ನಿಮ್ಮ ಪರಿಚಯದವರಾರೂ ಇಲ್ಲಿ ಇಲ್ವೇನಮ್ಮಾ

ಪೋಲೀಸ್ ಸ್ಟೇಷನ್ಗೇ ಹೋಗಿ ಕಂಪ್ಲೇಂಟು ಕೊಡಿ.

ಸದ್ದಿಲ್ಲದೆ ಚದುರುತ್ತಿರುವ ಈ ಗುಂಪಿನಲ್ಲಿ ಒಬ್ಬರೂ ಇಲ್ಲವೆ

ನಾನು ಮಗುವಾಗಿದ್ದಾಗಲೇ ತಾವೂ ಮಗುವಾಗಿದ್ದವರು

ಮೈತುಂಬ ಒದ್ದೆ ಸೀರೆ ಚಿಂದಿಗಳ ಒಣಗಲು ಬಿಟ್ಟು

ದುಡುದುಡು ಓಡುತ್ತಿದೆ ರೈಲು ಹಳಿಯಿಲ್ಲದ ಹಸಿರು ಹಾಡಿಯಲ್ಲಿ

ಪ್ರತಿ ಮರಕ್ಕೊಂದು ಪೊಟರೆ ಪಾವು ಕಿಲೋ ಪಕ್ಷಿ

ನೂರು ಗ್ರಾಂ ರೆಕ್ಕೆ ಒಂದು ಚಿಟಿಕೆ ಚಿಲಿಪಿಲಿ

ದಣಿದ ಜೀವಗಳ ಮೇಲೆ ಒಂಟಿ ಹೂವಿನ ನೆಳಲು

ಒಲೆ ಹೂಡಿ ಹೋದವರು ಆರಿಸದೆ ಬಿಟ್ಟ ಬೆಂಕಿ

೩೦. ತಂಗಿ

ಕಣ್ಣು ತೆರೆದೇ ಇರುವ ಅಗಡಿಯಲ್ಲಿ

ಮಧ್ಯಾಹ್ನ ಕಾಗೆಗಳು ಮಲಗಿವೆ

ಆರಿಸಿದ ಅಕ್ಕಿ

ಹಿಂಡಿದ ಬಟ್ಟೆಗಳಿವೆ ಗೋಡೆಯ ಆಚೆ

ಕಾಡು ಸುಲಿದು ನಾದಿ ಹುರಿದು

ಲಟ್ಟಿಸಿ ಮಾಡಿದ ಕಾಗದದಿಂದ

ಹೂ ಮಾಡುವ ಕಲೆ

ಕಲಿತುಕೋ ತಂಗಿ

ಬಂದವರು ಹೋಗುವದರೊಳಗೆ ಬಾ

ಒಂದು ಸಲ ಹೊರಗೆ

೩೧. ಅಘನಾಶಿನಿ ತಡಿಯಲ್ಲಿ ಸಂಪಿಗೆ ಮರ

ಅಘನಾಶಿನಿ ತಡಿಯಲ್ಲಿ ಸಂಪಿಗೆ ಮರ

ರಾಶಿ ಹೂವಿನ ಕಣ್ಣು ಮೈಯಿ ಪೂರ

ಹಿನ್ನೆಲೆಯ ನದಿ ನಿಂತುಬಿಟ್ಟಿತೆ ಒಮ್ಮೆ

ಮರಕೆ ಮರವೇ ಮುಂದೆ ಚಲಿಸಿದ ಥರ

ಇಕೊ ಕಳಚಿಬಿತ್ತೊಂದು ಹಗುರ ಹೂವು

ಶಬ್ದ ತಾನೆ ಜಾರಿದಂತೆ ಕವನದಿಂದ

ಕಂಪಿನ ಹುಡಿ ಚೆಲ್ಲಿತೆ ಮಣ್ಣಿನ ಕುಡಿಗೆ

ಹಾಡಿನಿಂದ ಹಾರಿದಂತೆ ಒಂದು ಸ್ವರ

ಹರಿಯು ನೀರಿನ ಎದೆಗು ಒಂದು ಹೂವು

ಬಿದ್ದು ತೇಲುವ ಅಲೆಗೆ ಹೂಕಂಪನ

ಜೇನು ತೊಟ್ಟಲಿ ಹನಿ ಅಘನಾಶಿನಿ

ಬಿದ್ದ ಹೂವಿನ ಒಳಗೆ ಸ್ತಬ್ಧತೀರ

ರಾತ್ರಿ ಅಲ್ಲಡುತಿದೆ ಮಿಣುಕುದೋಣಿ

ನೆಲ ಮುಗಿಲ ಮಥಿಸುತ್ತ ನಿಂತ ಮೂಕ ಮರ

ನೀಲ ನೀರ ಸ್ವಪ್ನದಲ್ಲಿ ತೇಲುತಿರುವ ಮರ್ಮರ

ಮರದ ಎದೆ ಗೂಡಲ್ಲಿ ತಣಿವ ಸಾಗರ

೩೨. ಶೆಟಗೇರಿಯ ರಸ್ತೆ

ಶೆಟಗೇರಿಯ ರಸ್ತೆ ಮಣ್ಣಿನದು

ಮಣ್ಣಿನದೇ ಇರಲಿ

ಉತ್ತ ಗದ್ದೆಗಳಲ್ಲಿ ಮದ್ದಲೆಯ ಸುಳಿವು

ರಾತ್ರಿಗಳ ಗೆದ್ದು ಬಂದ ರಂಗಸ್ಥಳ

ನಸುಕು ನೇವರಿಸುವ ಗಂಗಾವಳಿಯ ಗಾಳಿ

ಉಪ್ಪಿನ ದೋಣಿಗಳು ತಾಕುವ ದಂಡೆಯಲ್ಲಿ

ಗಂಜಿ ಇಕ್ಕಿದಳು ತಾಯಿ ಭೂಗತ ಯೋಧರಿಗೆ

ಯಿತ್ತಿಲಬಾಗಿಲು ತೆರೆದು ಬಾವುಟದ ಹಾದಿ

ಎಷ್ಟು ಖಾದಿಯ ಬಟ್ಟೆ ಒಣಗಿಸಿದೆ ಬಿಸಿಲು

ಘಟ್ಟಗಳ ದಾಟುತ್ತ ರಾತ್ರಿಯಲ್ಲಿ

ಯಾರಿದಿವು ಪಾಟಿ ಮುರುಕು ಕಡ್ಡಿ

ಎಷ್ಟು ಮುಗಿದವು ಮಗ್ಗಿ ಮುಸ್ಸಂಜೆಯಲ್ಲಿ

ಯಾವ ಮಳೆ ಸುರಿದಿತ್ತು ಉಪ್ಪಿನ ಆಗರದಲಿ

ಎದೆ ತೆರೆದ ಒಲೆ ಮೇಲೆ ಸದಾ ಅಂಬಲಿ

ಉಪ್ಪು ತುಂಬಿದ ದೋಣಿ ಸ್ತತ ಸೆಲೆಯುವ ಬಾವಿ

ಮಣ್ಣುಕಾಲಿಗೆ ಚಿಗಿತ ಅಕ್ಷರದ ಬಳ್ಳಿ

ಗೋಡೆಬಾಗಿಲು ಚಿಲಕ ತಾಮ್ರಪಟಗಳ ಆಚೆ

ನಮ್ಮನೊಯ್ಯುವ ರಸ್ತೆ ಮಣ್ಣಿನದೇ ಇರಲಿ

೩೩. ಕೆರೆಮನೆ ದಾಟುವಾಗ

ಬಾಳೆಯ ತೋಟದ ಪಕ್ಕದ ಕಾಡೊಳು

ವಾಸಿಸುತಿದ್ದವು ಮಂಕಿಗಳು.

ಮಂಕಿ. ಶರಾವತಿ ದಾಟಿದ ನಂತರ ಸಿಗುವ ಊರು.

ತಲೆಗೆ ಪಾಟಿಚೀಲ ತೂಗಿದ ಚಪ್ಪಲಿ ಇಲ್ಲದ ಪೋರರನ್ನು

ಈಗಷ್ಟೆ ದಾಮರು ರಸ್ತೆಗೆ ಬಿಟ್ಟಿದೆ ಟ್ರಸ್ಸಿನ ಸ್ಕೂಲು.

ನಂತರ ಕೆರೆಮೆನೆ ಮುರ್ಕಿ

ಮಳೆಗಾಲದ ತಪ್ಪಲಲ್ಲಿ ಹಸಿರು ಹೊನ್ನು

ಕೇದಗೆ ಪೊಗಡೆ ಭುಜಕೀರ್ತಿ ಬಾಣಬಿಲ್ಲು

ಇಟ್ಟುಕೊಂಡು ತೆಪ್ಪಗೆ

ಕೂತ ಚಿನ್ನದ ಪೆಟ್ಟಿಗೆ

ಮೇಳದ ಜರತಾರಿ ಚೌಕುಳಿ ಸೀರೆಗಳ ಅಹೋರಾತ್ರಿ

ಒಣಗಿಸುವ ಬೇಲಿ

ಕರಾವಳಿ ರಸ್ತೆ ನೇರವಾದರೂ

ಉದಯವಾಣಿಯ ತುಂಬ ಅಪಘಾತಗಳು

ಮೂರ್ನಾಲ್ಕು ಫೋಟೋಗಳೊಂದೆಗೆ ಇಹಲೋಕ

ತ್ಯಜಿಸಿದವರ ಮಧ್ಯ ನಗುವ

ಅಬುಧಾಬಿಗೆ ಹೊರಟುನಿಂತ ಶೆಟ್ಟರ ಮಗಳು ಅಳಿಯ

ಕತ್ತು ಹಿಸುಕುವ ಚಿನ್ನ

ಗ್ರೈನೈಟ್ ಪರ್ವತ ಹೊತ್ತ ಹತ್ತುಗಾಲಿಯ ಟ್ರಕ್ಕು

ರೊಂಯ್ಯೋ ಎಂದು ಸೀಳುತ್ತಿದೆ ನಸುಕನ್ನ

ಇಂಥ ಟ್ರಕ್ಕಿನಲ್ಲೇ ಮೇಳದ ದಂಡಯಾತ್ರೆ ಇಂಥ

ಟ್ರಕ್ಕಿನಲ್ಲೇ ವೇಷ ತೆಗೆದ ಭೀಷ್ಮ ಸುಧನ್ವರ ತುಂಡು ಮುಂಡು

ಪಕ್ಕಲವು ಓಲಾಡುವ ನಿದ್ರೆ. ಇಂಥ ಟ್ರಕ್ಕಿನಲ್ಲೇ

ಕತ್ತಲಲ್ಲಿ ಹೊರಳಾಡುವ ಬಿಳಿಯ ಹಾವು

ಕುತ್ತಿಗೆಗೆ ಸುತ್ತಿಕೊಂಡು

ಚಿನ್ನದ ಪೆಟ್ಟಿಗೆಯ ಮೇಲೆ ಕೂತಿದ್ದಾನೆ ಬೂದಿಯ ಬೈರಾಗಿ.

ಇವನು ಈ ಮೇಳದವನಲ್ಲ. ನಂಬಿ

ಶಿವರಾತ್ರಿಯ ಪರಿಷೆಯಲ್ಲ. ನಂಬಿ. ಇವನು

ಈಗಷ್ಟೆ ಈ ಟ್ರಕ್ಕು ಇಲ್ಲಿ ಹಾಯುವಾಗ

ಉದ್ಭವಿಸಿ ಅಲುಗಾಡುವ ದೇವ

೩೪. ಏಣಿ ಹೊತ್ತು

ಅಲ್ಲೊಂದು ಇಲ್ಲೊಂದು ದೀಪದ ಕಂಬ. ಸಂಜೆಯಾದರೆ

ಬರುವನು ಅವನು ಹೆಗಲಿಗೆ ಏಣಿ ಹಾಕಿ. ಕೈಲಿ ಲಾಂಧ್ರ.

ಕಂಬಕ್ಕೆ ಅನಿಸಿ ಹತ್ತಿ ಬುರುಡೆ ಉಜ್ಜಿ ಎಣ್ಣೆ ಹಾಕಿ ದೀಪ

ಹೊತ್ತಿಸುವನು. ಕೀಲಿಯಲ್ಲೆ ಕುದಿಯ ಅಲ್ಲಾಡಿಸಿ ಬೇಕಷ್ಟೆ ಬೆಳಗಿ

ಕಾಜು ಮುಚ್ಚಳ ಮುಚ್ಚಿ ಇಳಿಯುವನು

ಮತ್ತು ಏಣಿ ಹೊತ್ತು ಲಾಂಧ್ರ ಇಳಿಬಿಟ್ಟು ನಡೆಯುವನು ರಾತ್ರಿಯೊಳಗೆ

ಸಣ್ಣ ಊರಿಡೀ ಕಂಬಗಳು ಹೀಗೆ. ತುದಿಗೆ ಜೀವ ಹಿಡಿದ

ಆರ್ತ ಬೆಳಕು. ವಸತಿ ಬಸ್ಸಿನ ಕೆಳಗೆ ರಥಬೀದಿಯ ರಂಗೋಲಿ

ಸ್ವಪ್ನಗಳ ಉಗ್ರಗಾಳಿಗೆ ಅಲ್ಲಾಡದೆ ಮಲಗಿರುವ ಊರ

ಭದ್ರ ಕಾಯುವದು ಸಮುದ್ರ. ನಡುವೆ

ತೆರೆಗಳ ಎದೆ ಒಡೆದ ಸದ್ದು ದೇವಳದ ಗಂಟೆಯಲಿ

ಗುಂಯ್ ಗುಡುವದು.

ಕಂಬದ ದೀಪ ಏಕಾಕಿ ಹೋರಾಡುವವು ಕತ್ತಲ ಜತೆ ಇಡೀ ರಾತ್ರಿ

ಮರುದಿನ ನಸುಕಿಗೇ ಬರುವನು ಅವನು

ಮತ್ತೆ ಏಣಿ ಹಿಡಿದು. ಏರುವನು ಪ್ರತಿ ಕಂಬ

ನಂದದೆ ಉರಿದಿರುವ ವೀರದೀಪಗಳು

ಆರಿಸುವನು ಹುಡುಕಿ.

ಧೂಳು ಕಾಲುಗಳಲ್ಲಿ ಏಣಿ ಹೆಗಲಿಗೆ ಹೊತ್ತು

ಅಲೆಯುತ್ತಲೇ ಇರುವನು ಹುಡುಗ ಇನ್ನೂ

ನಂದದ ದೀಪಗಳ ಅರಸುತ್ತಲೇ

೩೫. ದೀಪೋತ್ಸವ

ಬಿರಿಯುತ್ತ ತಿಂಗಳ ಹಣ್ಣು ಕಾರ್ತಿಕ ಹುಣ್ಣಿಮೆಗೆ

ರಥಬೀದಿಯುದ್ದಕ್ಕೂ ಪಣತಿ ಸಾಲು

ರಂಗೋಲಿ ತುಳಿದಾಡುವ ಪರಿಷೆ

ಹೊಸ್ತಿಲ ಕದ ಹಿಡಿದು ಕಾಯುತಿರುವಳು ಪೋರಿ

ಬೀದಿಯಲ್ಲೀಗ ಪಲ್ಲಕ್ಕಿಯ ಮುಂದೆ

ಚಾಮರ ಬೀಸುತ್ತ ಹಾಯುವಳು ತಾಯಿ

ಉಂಡು ಹೋಗಿಲ್ಲ ರಾತ್ರಿಯಿಡೀ ಎದ್ದ ಮದ್ದಲೆಯ

ಸದ್ದಿಗೆ ನಿದ್ದೆ ಮಾಡಿಲ್ಲ ಸಪುರ ಆಯಿ

ಮಾಸಿದ ಬಳೆಗಳ ಎಳೆದೆಳೆದು ಮೊಣಕೈಗೆ

ಕೆಂಡದಂಥ ಪಲ್ಲಕ್ಕಿಗೆ ಬೀಸುವಳು ಚವರಿ

ಜ್ವರ ಏರಿತೆ ಬಸವಳಿದಳೆ

ಹಿಲಾಲಿಗೆ ಎಣ್ಣೆ ಹಿಂಡುವ ಒಕ್ಕಲ ಬದಿಗೆ

ಉಂಡಳೇ ಬೇಬಿ ಮುಗಿಸಿದಳೆ ಓದು ಕಸಮುಸುರೆ

ಒಬ್ಬಳೇ ಮನೆಯೊಳಗೆ

ಬೀದಿಯಲ್ಲಿ ನಡೆದಾಡುವ ಕತ್ತಲು ಮನೆ ಹೊಕ್ಕರೆ

ಹಾಯುತಿವೆ ವಾದ್ಯಗಳು ನಿಲ್ಲುತ್ತ ಆರತಿಗೆ

ಬಂತೀಗ ಉತ್ಸವ ಮನೆಯ ಎದುರು

ಆರತಿಯ ಮೊಗದಲ್ಲಿ ನೀಲಾಂಜನ ಎರಡು

ಹೂವುಗಳು ಸುಡುತಿರಲು ಪಲ್ಲಕ್ಕಿಯೊಳಗೆ

ಕಣ್ಣಲ್ಲೆ ಹಾಲೆರೆಇವೆ ಕರುಳು

ಊರಡೀ ಸದ್ದಿರದ ಬೆಳದಿಂಗಳು

೩೬. ಚಾಡಿ

ಹೊಳೆಯಲ್ಲೆ ಬಿಟ್ಟು ಬಂದ ದೋಣಿ

ಅಲೆಗೆ ಏಳುತ್ತ ತೇಲುತ್ತ

ಗುಟ್ಟಾಗಿ ಚಂದ್ರೋದಯವನ್ನು ತಿಂದುಬಿಟ್ಟಿತು

ಬೀಸುವ ಗಾಳಿ ನಾವಿಕನ ಗುಡಿಸಲಿಗೆ ಹೋಗಿ

ಚಾಡಿ ಹೇಳಿದರೆ ಅವನಿಗೆ

ಕೇಳಲು ಪುರುಸೊತ್ತೆಲ್ಲಿದೆ ಹೇಳಿ

೩೭. ಮಾ ಲಿ

ಐದಾರು ಹೂಗಳನ್ನು ಕೊಯ್ದಾದ ನಂತರ

ಮಾಲಿಗೆ ನೆನಪಾಯಿತು ಮಗಳ ಜನ್ಮದಿನ.

ಆರನೆಯದನ್ನು ಅಕ್ಕರೆಯಿಂದ

ಕಿಸೆಯಲ್ಲಿಟ್ಟುಕೊಂಡು

ಮರುದಿನ ಅಂಗಿ ಒಗೆಯಲು ಹಾಕುವ ಮುನ್ನ

ಅದು ಅವಳಿಗೆ ಸಿಕ್ಕಿತು

೩೮. ಗಾಳಿ

ದಪ್ಪಗುರಾಣಿಯ ಹಿಂದಿನ ಕತ್ತಲಲ್ಲಿ

ಸತ್ತ ಮೂಷಕನ ಗಾಳಿ

ಮ್ಯೂಸಿಯಂ ಹೊರಗೆ ಬರಲು

ಕೆಲ ಪ್ರಕಾಶ ವರಷಗಳು ಬೇಕು

ಬಂದಾಗಲೂ ರಸ್ತೆಯ ಮೇಲೆ ಟಾರ್

ಕೆಲಸ ನಡೆದಿದ್ದರೆ ಅದು

ಗೊತ್ತಾಗದೇ ಹೋಗಬಹುದು

ಇದರಲ್ಲಿ ಯಾರದೇನೂ ತಪ್ಪಿಲ್ಲ

೩೯. ಕಿರಣವೊಂದು ಜಾರಿ

ಯಾಕವರು ಒಬ್ಬರೇ ಮಾತಾಡುವರು

ಬಚ್ಚಲಲ್ಲಿ ಏಣಿಯಲ್ಲಿ ತಮ್ಮಷ್ಟಕ್ಕೆ ತಾವೇ

ಪೋಸ್ಟರು ಹರಿದ ಗೋಡೆಯೆದುರು ಪೇಟೇಯಲ್ಲಿ

ಸರಕ್ಕನೆ ಕಿರಣವೊಂದು ಜಾರಿದಂತೆ

ಹುಡುಕಿ ಎಳೆದು ಕಿತ್ತು ಬಿಟ್ಟರೆ ಒಂದು ಬಿಳಿ ಕೂದಲು

ಹತ್ತು ಏಳುತ್ತವೆ ಹಿಂದೆ

ಸರೀಕರು ಕೋಳ್ಳುತ್ತಾರೆ ಭೂಮಿ ಕಟ್ಟುತ್ತಾರೆ ಮನೆ

ಟ್ರಕ್ಕುಗಟ್ಟಲೆ ರೇತಿ ಮಣ್ಣು ಬೀದಿಯಲ್ಲಿ

ಅಮೃತಶಿಲೆ ಕಚೇರಿಗಳ ದೊಡ್ಡ ಕಂಬಗಳ ಹಿಂದೆ

ಮೂಕ ಬೆರಳಭಿನಯ. ಅವರಿಂದ ಹೇಳಿಸಿ. ಆಗತ್ತೆ ಕೆಲಸ.

ಅರೆ ನಿನ್ನೆಯೇ ಯಾಕೆ ಬರ್ಲಿಲ್ಲ. ಅಡ್ನುಶನ್ ಕೊಡಿಸ್ಬೋದಾಗಿತ್ತು.

ಯಾರವನು ಹುಡುಗ ಶಾಲೆಯ ತಿಪ್ಪೆಯ ಬಳಿ ನಿಂತವ

ಕಸ ಕಡ್ಡಿ ಕಾಗದ ಹೆಕ್ಕುತ್ತಲೇ ನೆರೆದ ಪಾಲಕರ

ಎದೆಗೂಡಿಗೆ ಕೈ ಇಕ್ಕಿ ಕಂಗೆಡಿಸಿದವ

ಕೇಳುತ್ತಿದೆ ಸಂಬಂಧದಲ್ಲಿ ರಕ್ತದ ಕಲೆ ತೊಳೆಯುವ ಸದ್ದು.

ಚಿಕ್ಕಮ್ಮನ ನಾದಿನಿಯ ತಮ್ಮ

ದೂರದ ರೈಲಿಂದಿಳಿದು ಬಂದವನೇ ಶಹರವನ್ನು ಕೇಳುವ

ಏನು ಬೇಕು ನನಗೆ ಏನು ಬೇಕು ನನಗೆ

ಪಾರ್ಕಿನಿಂದ ಮಂದಿ ಬಲೂನು ಮಕ್ಕಳೊಡನೆ ಮರಳುವಾಗ

ಸಂಜೆಯೆದುರು ಮಂಡಿಯೂರಿ ಅಂಗಲಾಚುವನು

ಏನು ಬೇಕು ನನಗೆ

ನಿದ್ದೆಯಲ್ಲಿ ಮೈಯಿಡೀ ಹರಿಯುವದು ಚೂರಿ

ರಕ್ತದ ಒಳ ಚರಂಡಿಗಳಲ್ಲಿ.

ಹಗಲಿಗೆ ಹೊಸ ಹುಡುಗಿಯನ್ನು ತಯಾರು ಮಾಡಿ

ಸಿಪ್ಪೆ ಸುಲಿದು ಕುಡಿಮೊಲೆಯ ತಿರುಪಿ ನಿಲ್ಲಿಸಿದ್ದಾರೆ ಚೌಕದಲ್ಲಿ

ಬೇಬೀ ಎಂದು ಯಾರೋ ಕೂಗಿದ ಭಾಸವೆ

ಕಿಪ್ಪೊಟ್ಟೆ ನೋವಿಗೆ ನೇವರಿಸುವ ಕೈ

ಜಾರುತ್ತಿದೆಯೆ ಲಂಗದೊಳಗೆ.

ಗಾಳಿಯ ಪಿಸುನುಡಿಗೂ ಹಣದ ದುರ್ಗಂಧ

ತೊಳೆಯದ ಬಟ್ಟೆಗಳ ಮುಸುರೆ ಪಾತ್ರೆಗಳ ಬೆಟ್ಟ

ರಾಶಿ ಶಿಶುಗಳ ಬದಿಗೆ.

ಬರ್ಥ್ ಸರ್ಟಿಫಿಕೇಟು ತರಲೋ ಎಂಬಂತೆ ನಸುಕಿಗೇ

ಎದ್ದು ಮನೆಬಿಟ್ಟು ಹೋಗಿದ್ದಾರೆ ಮಕ್ಕಳು.

ಹಳದಿಗಟ್ಟಿದ ಮಗುವು ಎದೆಗವಚಿ ಆಯಿ ಮಳೆಯಲ್ಲಿ

ಓಡುತ್ತಿದ್ದಾಳೆ ಆಸ್ಪತ್ರೆಯಿಂದ ಆಸ್ಪತ್ರೆಗೆ

ಅವರು ಮಾತಾನಾದುತ್ತಲೇ ಇರುವರು ಒಬ್ಬರೇ

ಅಖಂಡ ರತ್ರಿಯ ಜತೆ

ಶ್ವಾಸಗಳ ಪೂರವನ್ನೆ ತರುವ ಸಮುದ್ರಗಾಳಿಯ ಜತೆ

ಮಣ್ಣಿನೊಳಗಿನ ಮರಗಳಂತೆ

೪೦. ಪಟ

ನಡುರಾತ್ರಿ ಕಿಟಕಿಯಿಂದ ಬೀಸುವ

ನಸುಬೆಳಕಿನಲ್ಲಿ

ಮೂರ್ಖ ಕಪಾಟುಗಳು ಕೈದಿಗಳಂತೆ ನಿಂತಿವೆ

ತೂಗಿವೆ ಸ್ತಬ್ದ ಉಡುಪು

ಮಂಚದಡಿ ನಲ ಪರಚುವ ದಿನ ಪತ್ರಿಕೆ

ಈಚೆಗೆ ಈತ ಆಚೆಗೆ ಆಕೆ

ನಡುವೆ

ಅಂಬೆಗಾಲೂರಿ ಹೊಳಿತಿವೆ ಕಣ್ಣು

ಅನಿಮೇಷ ಲೋಕದ ತಂತಿ ಮೀಟುತ್ತ

ಕಂದ ಆಡಿಸುತ್ತಿದೆ ಪುಟ್ಟ ಕೈಲಿ

ಸಹಸ್ರ ನಕ್ಷತ್ರಗಳ ಗಾಳಿಪಟ

೪೧. ಗೊಂಟಿಯ ತಮ್ಮ

ಗೊಂಟಿಯ ಶಾಲೆಯ ಬಸ್ಸಿನ ವೇಳೆಗೇ ಪಾಟಿ ಪೆನ್ಸಿಲ್ ಅದೃಶ್ಯ

ರಂಪದ ಗೊಂಟಿ ಅತ್ತರೆ ಸಾಕು ಕಳ್ಳನು ಪ್ರತ್ಯಕ್ಷ

ಪಿತೂರಿ ನಗೆಯಲಿ ಒಂದೊಂದಾಗಿ ಎಲ್ಲ ತಂದು ಕೊಡುವ

ಟಾಟಾ ಎನ್ನಲು ಬಾಯಿ ತೆರೆದವ ಬರುವನೆಂದು ಅಳುವ

ಅಕ್ಕನ ಊಟದ ತಾಟೇ ಇವಗೆ ಆಟದ ಚದುರಂಗ

ಮೂಗಿಗೆ ಉಪ್ಪಿನ ಹರಳು ಕಣ್ಣಿಗೆ ಚಟ್ನಿಯ ಬೆರಳು

ಕೈ ಮೊಸರಾದರೆ ಬಾಯ್ ಕೆಸರು ಪುಟ್ಟ ಗುಲಾಬಿ

ಪಾದಕೆ ಒಂಟಿ ಬೆಳ್ಳನೆ ಅನ್ನದ ಅಗುಳು

ಅಕ್ಕನಿಗೆಷ್ಟೋ ಗೆಳತಿಯರು ನನಾ ಆಟದ ಸಂತೆ

ಪಿಳಿ ಪಿಳಿ ಮೇಲಕೆ ನೋಡುತ ನಿಲ್ಲುವ ಏಕಲವ್ಯನಂತೆ

ಬಚ್ಚಲಮನೆಯಲಿ ನೀರಿನ ಓಕುಳಿ ಪಿಟಿಪಿಟಿ ಗೊಮ್ಮಟ ದೇವ

ಕಣ್ಣಿಗೆ ಸೋಪು ಸೋಕಿದ್ದೇ ತಡ ಶರಣಾಗತ ವೀರ

ಅಕ್ಕನ ಆಟಿಗೆ ಅಕ್ಕನ ಗಿಲಕಿ ಅಕ್ಕನವೇ ಹಳೆ ಫ್ರಾಕು

ಹಬ್ಬದ ದಿನಕೋ ಲಂಗದ ಪುಂಡಗೆ ಹೂವನು ಮುಡಿಸಲೆಬೇಕು

ಕಣ್ಣುತಪ್ಪಿಸಿ ಚೂಟುವ ಅಕ್ಕ ಕಸಿಯುವಳೇಕೆ ಎಲ್ಲ

ತನಗೂ ಜೋಗುಳ ಬೇಕೆಂದೆಲ್ಲಾ ಗೋಗರೆಯುವಳಲ್ಲ

ಗೊಂಟಿಯ ತಮ್ಮನ ನಿದ್ದೆ ವೇಳೆಗೆ ವಿಶ್ವದ ಮಿಕ್ಸರ್ ಬಂದು

ಪೋರನ ಹೂವಿನ ಹಾಸದ ಹಿಂದೆ ದೇವತೆಗಳು ಹಿಂಡು

ಸಿಗ್ನಲ್ ಬಳಿ ಶಾಲೆಯ ಬಸ್ಸಲಿ ಬೆಚ್ಚಿದಳೆ ಗೊಂಟಿ

ಕಿಟಕಿಗೆ ಬಂದು ಬೇಡುವ ಕೈ ಮೊರದಲಿ ತಮ್ಮನ ಕಂಡು

೪೨. ಬೆಳ್ಳಿ

ಮಗ್ಗುಲಾಗಿ ಮಲಗಿದವಳ ಬೆನ್ನಲ್ಲಿ

ಹೂಬಳ್ಳಿ

ಕಿಟಕಿ ಎಲೆಗಳ ನೆಳಲಿಂದ ಚಂದಿರ ಬಿಡಿಸಿದ್ದು

ಅವಳ ಸ್ವಪ್ನದ ಭರತಕ್ಕೆ ಅದು

ಮೆಲ್ಲಗೆ

ನನ್ನೆಡೆ ಚಿಗುರುವದು

ಅವಳ ಎಡಕಿವಿಯ ಮೇಲೋ

ಬೈತಲೆಯ ಬದಿಗೋ ಒಂದು

ಬೆಳ್ಳಿಕೂದಲು ಕಂಡ ಕ್ಷಣ

ಎಂದಿನ ಅವಳ ತೊಟ್ಟಿಲ ಅಳು

ಗಿಲಕಿ ಗೆಜ್ಜೆಯ ನಾದ

ಕಿವಿ ತುಂಬಿ ಮುದ್ದುಗರೆಯುವದು

ಜೋಗುಳವಾಗುವೆ ನನ್ನ ಈ ಕೂಸಿಗೆ

೪೩. ತಲತ್ ನೀನೇಕೆ ಹಾಡುತಿಲ್ಲ

ಹಾದಿಗಳು ಹಾಗೆ ಇವೆ ರಾತ್ರಿಯ ಕಡೆಗೆ

ನಿಂತ ಮರಗಳ ಕೈ ಸೋತಿಲ್ಲ ಇನ್ನೂ

ನಿನ್ನ ಹಾಡಿಗೆ ಕಂಪಿಸಿ ಹೂವಾದ ಮನವು

ಹಣ್ಣಾಗಿಸಿದೆ ಮುಸ್ಸಂಜೆಯನ್ನು

ನದಿ ದಾಟುವ ರಸಿಕನಿಗೆ ದಡ ತೋರಲಿಲ್ಲ

ವಿರಹಿಯನು ಮಸೆಯುವದು ಜನ ಜಂಗುಳಿ

ಬೆಳದಿಂಗಳ ಹೊಳೆಯೆಡೆಗೆ ನಡೇದಿರುವ ಸಂತ

ಎದೆ ತೆರೆದು ಹಾದಿದವಗೆ ದಣಿವೆ ಇಲ್ಲ

ಯಾವ ಕಿಂದರಜೋಗಿ ಸೆಳೆದನೋ ಮಕ್ಕಳ

ಕಳೂ ಕೊಲೆಗೆ ಸುಳ್ಳಿಗೆ ಮುದ್ದಿಲ್ಲದ ಸೆರೆಗೆ

ಸಂತೆ ಮುಗಿದ ಪೇಟೆ ರೋದಿಸುವ ಮಹಿಳೆ

ಎಂದಿನ ಚಿಣ್ಣರಿಗಿಂದು ವೃದ್ಧಾಶ್ರಮ

ಕನಸಲ್ಲಿ ಬರುವಳೆ ಕಂಡಿರದ ತಾಯಿ

ಮೈತುಂಬ ಹಸಿರನುಟ್ಟು ಹಿಡಿದು ಬುತ್ತಿ

ಮಧ್ಯಾಹ್ನದೆಚ್ಚರಕೆ ದುಃಸ್ವಪ್ನದಮಲು

ನಿರ್ಗತಿಕ ಶವಕೆಂದೆ ಯಾಕೆ ಬೀದಿ

ಮೊಂಡಾದ ಮರಮರಕೆ ಮರುಕಳಿಸುವ ಹಕ್ಕಿ

ನೋವಿನ ಸ್ವರ ಸಂಚಯಿಸುವ ರಾಣಿಜೇನು

ಹಳೆ ಪುಸ್ತಕದ ಆಪ್ತಗಂಧ ನೀನು ತಲತ್

ಎಲ್ಲಿರುವೆ ಈಗೇಕೆ ಹಾಡುತಿಲ್ಲ

೪೪. ದೀಪವಿಲ್ಲದ ಟ್ರಕ್ಕು

ಸಂಜೆಯ ಹೊತ್ತು ಸಮುದ್ರ ಬೇಲೆಯಂಚಿಗೆ

ಬಂದು ನಿಂತಿರುತ್ತದೆ ಆ ಟ್ರಕ್ಕು

ಕಪ್ಪು ಕಣ್ಣಲ್ಲಿ ಪ್ರತಿಫಲಿಸುತ ಕೇಸರಿ ಗಗನ

ನೋಡಿದವರು ಹೇಳಲು ಹೆದರುತ್ತಾರೆ ಆ ಟ್ರಕ್ಕು ರಾತ್ರಿ

ಊರು ಕೇರಿ ಗಲ್ಲಿಗಳಲ್ಲಿ ದೀಪವಿಲ್ಲದೆ ಓಡುತ್ತ

ಮಕ್ಕಳನ್ನು ಅನಾಮತ್ತು ಎತ್ತಿಕೊಂಡು ಹೋಗುತ್ತದೆ

ಸಣ್ಣ ಮಕ್ಕಳು ಹಸಿವು ಹೇಳಲು ಬಾರದವರು

ತಿವಿದರೆ ಬರೆ ಅಮ್ಮ ಅಮ್ಮ ಎಂದು ಕಾಲು ಬಡಿದು ಓಡುವವರು

ಪುಟ್ಟ ಕೈಗಳಲ್ಲಿ ಹೇಗೋ ಹಿಡಿಸುವರು ದೊಡ್ಡ ದೊಡ್ಡ

ಪಾತ್ರೆ ಪಗಡೆ. ತಿಕ್ಕಲು ಸುಡುಗಾಡಿನ ಬೂದಿ. ಹಿಂಡಿ ಹಿಂಡಿ

ಹರವಿ ಒಣ ಹಾಕಲು ನೂರಾರು ಮೊಳದ ಭಾರೀ ಸೀರೆ

ತುಂಡು ಶಬ್ದಗಳಂಥ ವಿಲಿ ವಿಲಿ ಪುಟ್ಟ ಬೆರಳುಗಳ ಮಧ್ಯ

ಭಗ್ಗನೆ ಸಿಡಿಯುವ ಮದ್ದು

ದೊಡ್ಡ ಗಾರೆಯ ಭಾರೀ ಕಟ್ಟಡವನ್ನು

ಹಗೂರ ತೋಲ ತಪ್ಪದ ಹಾಗೆ

ಮಣ್ಣಿನ ಸಪೂರ ಕಾಲು ಕಂಪಿಸುತ್ತಿರುವಂತೆಯೇ

ತಲೆಯ ಮೇಲೆ ಏರಿಸುವರು

ನಂತರ ಗಣಪತಿ ಬಿಡುವವರಂತೆ ತಲೆ ಮೇಲೆ

ಕಟ್ಟಡಗಳ ಹೊತ್ತುಕೊಂಡು ಮಕ್ಕಳು

ಯಾವುದೋ ಸಮುದ್ರದಲ್ಲಿ ನಡೆದು ಹೋಗುವರು

ಸಣ್ಣ ಪಾಲೀಶಿನ ಡಬ್ಬಿ ಬ್ರಶ್ಶು ಕಳುವಾಗದಂತೆ ಬಚಾವು

ಮಾಡಲು ಉದರದಲ್ಲಿ ಅವಿತಿಟ್ಟು ಕವುಚಿ ಮಲಗಬೇಕು

ಪ್ಲಾಟಫಾರ್ಮಿನ ಮೇಲೆ. ಶರವೇಗದ ತೂಫಾನ್ ಮೇಲ್ ನಿಂದ

ಜಿಗಿಯಬೇಕು ಸುರಂಗದೊಳಗೆ ಮಾಲಿನ ಜತೆ.

ಕಮಟು ಮಂಚದ ಸಾಲು ಪಂಜರಗಳ ಹೊರಗೆ

ಚಾ ಗ್ಲಾಸುಗಳಲ್ಲಿ ಹಳಸಲು ಮುಂಜಾವನ್ನು ಹಿಡಿದು ತರಬೇಕು.

ಬಿಸಿಲಿಗೆ ಅಂಜುವ ಟ್ರಕ್ಕು ಮತ್ತೆ

ಅದೇ ಸಂಜೆ ಸಮುದ್ರದಂಚಿಗೆ ಸದ್ದಿಲ್ಲದೆ ಬಂದು ಕಾದು ನಿಂತಿದೆ.

ಸಂಜೆಗತ್ತಲಾದರೂ ಮನೆ ಸೇರದ ಮಕ್ಕಳು

ನಿರ್ಭೀತಿಯಿಂದ ಬೇಲೆಯಲ್ಲಿ ಆಡುತ್ತಿವೆ

೪೫. ಬ್ರಹ್ಮಲಿಪಿ

ತೊಂಬತ್ತೆಂಟು ಡಬ್ಬಗಳಿವೆ ಈ ಸೀಮೆ

ಎಣ್ಣೆ ಕ್ಯೂನಲ್ಲಿ ವಿವಿಧ ಸೈಜು ಬಣ್ಣ ಶೇಪು

ಮೈ ತುಂಬ ಮಸಿ

ಮಾಸಿದ ಲಂಗದ ನೂಲಿನಂಚಿನ ಗಾಳಿ

ಬೆಮರು ಬೆರಳಿನ ಗುರುತು

ಒಡಕು ಬಳೆಗಳು ನಿನಾದ

ಈ ಡಬ್ಬಿಗಳ ಡೊಂಕು ರೈಲು

ಹಠಾತ್ತನೆ ಚಲಿಸತೊಡಗಿತೋ ನೋಡಿ

ಎಲ್ಲ ಶಾಲೆಗಳ ಸ್ಟಾಫ್ ರೂಮಿನಲ್ಲಿಟ್ಟ

ಗ್ಲೋಬುಗಳು ಗಹಗಹಿಸಲಾರಂಭಿಸಿವೆ

ಅವು ಎನೌನ್ಸ್ ಮಾಡ್ತಿವೆ

ಈ ರೇಷನ್ ಕಾರ್ಡುಗಳ ಬ್ರಹ್ಮಲಿಪಿ

ಬಿಡಿಸಿ ಓದಿದವರಿಗೆ ಬಹುಮಾನ

ಬೇಡದೆ ಬಂದ ಹೆಸರಿಲ್ಲದ ಒಂದು ಶಿಶುವಿನ

ತಾಜಾ ಬಹುಮಾನ

೪೬. ಯಾರದೋ ಕೈಲಿ

ಯಾರದೋ ಕೈಲಿ ನನ ಕಂದ

ತಲೆಗೆಣ್ಣೆ ಹಾಕಿಲ್ಲ ಬಾಚಿಲ್ಲ ತೀಡಿಲ್ಲ

ಎಲ್ಲೋ ನೋಡ್ತಾನೆ

ಅವನದಲ್ಲವೆ ಅಲ್ಲ ಆ ದೊಗಳೆ ಅಂಗಿ

ಮಂಡಿಗಾಯದ ಕಲೆಯ ನನ ಕಂದ

ಯಾರದೋ ಕೈಲಿ

ಅವನಿಗಿಷ್ಟದ ಗಿರಿಗಿಟ್ಲೆ ಅಲ್ಲಿ

ಅಂಟುಂಡೆ ಇಲ್ಲಿ

ಗಾಳೀಯಲ್ಲೇ ಯಾಕೋ ಬೀಸಿದಾನೆ ಕೈಯ

ಜಾತ್ರೆಗೆ ಬಂದರೂ ತೇರನು ನೋಡದೆ

ಯಾರದೋ ಕೈಲಿ

ಹಡಬಿಟ್ಟುಕೊಟ್ಟಾವನ ಕಣ್ಣೆ

ಹಾಕಿದ್ದ ಉಂಡವನ ಕೊರಳ ಶೆರೆಯೆ

ಗಿಡದಂತೆ ಮಣಿದವನ ಉಗುರೆ

ಕತ್ತಾಲಗಾಳಿಯೂ ತುಳಿಯದಂತೆ ಮಲಗಿದವನ

ಎತ್ಯಾಕೆ ತಂದೆರೇ

ಮುಂಡಗಳು ತೇರೆಳೆಯುವಲ್ಲಿ

೪೭. ಅಡವಿ

ರಾತ್ರಿಯೊಂದು ಇಂಗುವಾಗ ಮೈಮರದೊಳಗೆ

ಹಣ್ಣುಗಳೆಲ್ಲ ಸದ್ದಿಲ್ಲದೆ ಹೋಳಾದವೆ

ತೇಲಿದವೆ ಮಾಯಾ ಸರೋವರ ಎತ್ತಿಕೊಂಡು ನೆರಳುಗಳು

ಉಸಿರು ನೇಯ್ದವೆ ಹೊಸತೊಂದೆ ಮೌನದ ಬಟ್ಟೆ

ಕತ್ತಲ ಕೆರೆಯಲ್ಲಿ ಮಿಂದವರಿಗೆ

ಟೊಂಗೆ ಟಿಸಿಲಿಗೆ ತೂಗಿದವೆ ಅಂಗಿ ಕುಲಾವಿ

ಮುಚ್ಚಿದ ಪೇಟೆಯಲಿ ಸ್ತಬ್ಧ ನಿಂತಿರಲು ಆಯಿ

ಅಳಿಸಿ ಹಾಕಿತೆ ಗಾಳಿ ಮನೆಯ ದಾರಿ

ಜೋಗುಳವಿಲ್ಲದೆ ಜಾಗರದಲ್ಲಿ ಹೊರಳಾಡಿದವೆ ಜನ ಸಮುದ್ರ

ಸುಟ್ಟ ಹಾಡುಗಳ ದಂಡೆಗೆಸೆದವೆ ಅಲೆ

ಒಣಗಿದಂಗಳದಲ್ಲಿ ಚಂಡಿ ಹಿಡಿದವೆ ಕೂಸು

ಬಾನಲ್ಲಿ ಬಿದ್ದಿರುವ ಹಾಲ ಹನಿಗೆ

೪೮. ಇದು ಶಿಶು ಕಾಶಿ

ಜಲಪಾತ ಹಿಮಪಾತದ ಚಿತ್ರ ಮಾತ್ರ

ಗೊತ್ತಿದ್ದವರಿಗೆ ಹೊಸತು ಗರ್ಭಪಾತದ ಪೋಸ್ಟರು.

ನಿಂತೇ ನೇಣುಹೋದವರನ್ನು ದರದರ

ಹೊತ್ತೊಯ್ಯುವ ರೈಲುಗಳು ನಡುರಾತ್ರಿ ಯಾರ್ಡಿನಲ್ಲಿ

ನಗ್ನವಾಗಿ ನಿಂತಾಗ ಮೈಮೇಲೆ ಟಕ ಟಕ

ಸ್ಕ್ರೀನ್ ಪ್ರಿಂಟ್ ಮಾಡುತ್ತಾರೆ

ಆಮೆಛಾಫ್ ಸೊಳ್ಳೆ ಅಗರುಬತ್ತಿಯ ಪಕ್ಕ

ಒಂದು ಗರ್ಭಪಾತಕ್ಕೆ ರೂಪಾಯಿ ತೊಂಬತ್ತು

ಕಪ್ಪು ಇಂಕಿನ ಆ ಕಿಪ್ಪೊಟ್ಟೆಯಲ್ಲಿ

ಎಲ್ಲೋ ಮಲಗಿರುವ ಬೃಹತ್ ರಾಕ್ಷಸನೊಬ್ಬನ ಉಸಿರಾಟ

ಹೊರಳಿದರೆ ಆತ ಅವನಡಿಗೆ ರೈಲುಗಳೇನು ಪೇಟೆ

ದವಾಖಾನೆ ಜೈಲುಗಳ ಜತೆ ಜನನ ದಾಖಲಾತಿಯ ಫೈಲುಗಳೂ

ಅಪ್ಪಚ್ಚಿ. ಮುನಿಸಿಪಾಲಿಟಿ ಲಾರಿ ಎಲ್ಲವನ್ನೂ ಬಾಚಿ ದೂರ ಒಯ್ದು

ಖಾಡಿಯಲ್ಲಿ ಖಾಳಿ ಮಾಡಿದ್ದೇ

ಮುಗಿಬೀಳುವರು ಕಡ್ಡಿಕೈಕಾಲು ಗ್ಲೋಬು ತಲೆಯ ಮಕ್ಕಳು

ಮುತ್ತು ಹೆಕ್ಕಲು.

ಒಗ್ಗರಣೆಯ ಸದ್ದುಗಳಿರದ ಒಂದು ಮಧ್ಯಾಹ್ನ

ಗುರ್ತಿರದ ಆಸ್ಪತ್ರೆಯ ಬೆಂಚಿನ ಮೇಲೆ ಕಾದಿರುವ

ಸಣ್ಣ ಹೆಣ್ಣನ್ನು ಇತರ ರೋಗಿಗಳು ನೋಡುತ್ತಿರುವರು

ನಿದ್ದೆಗೆಟ್ಟು ಐದು ವರ್ಷದ ಪೋರ

ಕೊರಳ ಕರಿದಾರದ ತಗಡಿನ ತಾಯತ ಮಾರಲು

ಬಂದಿದ್ದಾನೆ ಬೆಳ್ಳಿ ಅಂಗಡಿಗೆ

ಎಲ್ಲರೂ ಅವನ ಗೇಲಿ ನಡೆಸಿದ್ದಾರೆ ಮತ್ತೆ ಮತ್ತೆ

ಅನ್ನುತ್ತಾನೆ ಎಷ್ಟು ಬರುತ್ತೋ ಕೊಡಿ.

ಹರಕು ನೋಟಿನಂತೆ ಜೀವ

ಕದ್ದು ದಾಟುತ್ತಿದೆ ಮತ್ತೊಂದು ದಿನದ ಕೈಗೆ

ತಲೆ ಗೆಟ್ಟ ಸೂಳೆಅಯರು ರೈಲು ಹೊರಡಿಸಿದ್ದಾರೆ

ಸ್ಪೇಷಲ್ ರೈಲು. ಅವರು ಪ್ರತಿ ಸ್ಟೇಷನ್ನಿನಲ್ಲಿ ಕಿಲೋ ಲೆಕ್ಕದಲ್ಲಿ

ಶಿಶುಗಳನ್ನು ಮಾರಲಿದ್ದಾರೆ. ಬನ್ನಿ

೪೯. ಒಂದೇ ಪಕ್ಷಿ

ಒಂದು ಪಕ್ಷಿ ಸಾಕು ಸಂಜೆ ಹಳದಿಯಲ್ಲಿ

ಆಸ್ಪತ್ರೆಗಳನೆತ್ತಿ ನೇವರಿಸಲು

ಗಾಯಗಳ ಮೇಲೆ ರೆಕ್ಕೆಗಾಳಿಯ ಬೀಸಿ

ನಿದ್ದೆ ನೀಡುವ ಮುದ್ದು ಹಾಡಾಗಲು

ಒಂದು ಪಕ್ಷಿ ಸಾಕು ನಡುಹಗಲ ನಡುವೆ

ಓಡುವ ಸುಡುವಾಹನಗಳ ನಿಂದರಿಸಲು

ಮರಗಟ್ಟಿದ ಮುಂಡಗಳೆದುರು ಶಾಂತ

ಕುರುಡರ ಕೈ ಹಿಡಿದು ರಸ್ತೆ ದಾಟಿಸಲು

ಒಲೆಯೆದುರು ಸುಡುವ ಕಲ್ಪವೃಕ್ಷದ ಹೂವು

ಪಂಜರದ ಹುಡುಗಿಯರು ಕಿತ್ತು ಮುಡಿಯುವರು

ಸಾಕೊಂದು ಪಕ್ಷಿ ಈ ಹೂವಿನೊಳಗಿಂದ

ನಿತ್ತರಿನ ಅತ್ತರವ ಶೇಖರಿಸಲು

ರದ್ದಿರಾಶಿ ಸಿಡಿಮದ್ದುಗಳ ನಡುವಿಂದ

ಚಪ್ಪಟೆ ಮಕ್ಕಳ ಹೊರಗೆಳೆಯಲು

ಮುರುಕು ಆಟಿಗೆ ಹರುಕು ಅಂಗಿಗಳ ತೋರಣ

ಮೋಡಗಳ ಕೊರಳಲ್ಲಿ ಬೀಸಾಕಲು

ಸಾಕೊಂದೆ ಪಕ್ಷಿ ಪದದ ಕೊಂಬು ಮುರಿಯಲು

ಶೂರನ ಪರವಶ ಚಣದಿ ಕಣ್ಣೊರೆಸಲು

ದಾದಿಯರ ಜಾಗರಕೆ ಕನಸಾಗಿ ಬಂದು

ಕೈದಿಯನು ಕಿಟಕಿಯಲಿ ಮೈಮರೆಸಲು

೫೦. ಬಿಳೀ ಅಂಗಿ

ಮುಗಿಲು ಕವಿದ ಗದ್ದೆಯಲ್ಲಿ ನಡೇದು ಹೋದ ಮಾಸ್ತರು

ಎಂದೋ ಜಬರಿಸಿದ್ರು

ಬಿಳೇ ಅಂಗಿ ಹಾಕ್ಕೊಂಡ್ ಮಾತ್ರಕ್ಕೆ ಗಣಿತ ಬರೂದಿಲ್ಲ

ಕಿಟಕಿಯಲ್ಲಿ ಅರಳಿದವು ನೀಲಿ ಹೂ

ಬಟ್ಟೆ ತಂತಿಯ ಮೇಲೆ ಚೆಂಗನೆ ನೆಗೆದು ಓಡಿದವು

ಚಿಗರೆ ರಾತ್ರಿ ಹೊಳೆದು

ಡಾರ್ಕರೂಮಲ್ಲಿ ಕೂತುನಮ್ಮ ನೆರಳುಗಳ

ತೊಳೆಯುತಿದ್ದ ಸೂರ್ಯನನ್ನು

ಕೇಳಿದಳು ಬೇಬಿ ಎಲ್ಲರ ಮನೆಗೇಕೆ ದೀಪವಿಲ್ಲ

ಇದ್ದ ಒಂದೇ ಅಂಗಿ ಕತ್ತಲಲ್ಲಿ ಒಣಗುವಾಗ

ಬರಿಮೈಲಿ ಬರೆದಳು ಮಗ್ಗಿ

ಪಾಟಿ ಗಗನದಲ್ಲಿ ಕುಸುರೆಳ್ಳಿನ ಚುಕ್ಕಿ

ಸೋಲಾಪುರ ಸ್ಟೇಷನ್ನಿನಲ್ಲಿ ರಾತ್ರಿ ರೈಲು ನಿಂತಾಗ

ಚಳಿಯಲ್ಲಿ ಕಿಟಕಿಯಿಂದ ಚಾದರಗಳ ಕದ್ದು

ಓಡಿದವು ಪ್ರೇತಗಳು

ನಾಳೆ ಅವೇ ಚಾದರಗಳ ಮಡಿಸಿ ಮಾರುವವು

ಪೇಟೆಯಲ್ಲಿ. ಮುದ್ದು ಪ್ರೇತಗಳು

ಶಾಲೆಗೆ ಬರಲಿಲ್ಲ ಎಂದು ಮಾಸ್ತರು ಊರಿಡೀ

ಸುತ್ತಿ ಬಂದರು. ಜಾತಕ ಹಿಡಿದು ಎಂದೋ

ಮಾಸ್ತರರಿಗೆ ಸ್ಥಳ ಕೇಳಿ ಬಂದವರು

ಮರಲಿದ್ದರಂತೆ ಹಣ್ಣಾದ ಕಣ್ಣು ಕಂಡು

ಊರ ಮಕ್ಕಳ ಎದೆಗವಚಿಕೊಂಡ ಮಾಸ್ತರು

ಕನಸು ಮುಡಿದ ರಾತ್ರಿಯಂಥ ಸುಂದರ ಪಣತಿ

ಎಲ್ಲರೆದೆಯಲ್ಲಿ ತೇಲಿಬಿಟ್ಟರು

ಒಲೆಯೆದುರು ಬೆಚ್ಚಗಿದೆ ಗಾಳಿ. ಹೊರಗೆ

ಕರೆಗೆ ಕಾದ ಮಕ್ಕಳು. ಹೌದು ಸರ್

ಬಿಳೀ ಅಂಗಿ ಹಾಕ್ಕೊಂಡ್ ಮಾತ್ರಕ್ಕೆ ಗಣಿತ ಬರೂದಿಲ್ಲ