ಉತ್ತರಾಯಣ ಮತ್ತು..

ಉತ್ತರಾಯಣ ಮತ್ತು......

ದೇವಾ ವೈ ಮೃತ್ಯೋಭ್ಯತಸ್ತಯೀಂ ವಿದ್ಯಾಂ

ಪ್ರಾವಿಶಂಸ್ತೇ ಛಂದೋಭಿರಚ್ಛಾದಯನ್

ಉತ್ತರಾಯಣ

ಬತ್ತಿ ಸುಟ್ಟು, ಎಣ್ಣೆ ತೀರಿ, ಉದ್ವಿಗ್ನದೀಪ ನಿಷ್ಪಂದ ಶಾಂತ.

ಮತ್ತೆ ಬತ್ತಿ ಪೋಣಿಸಿ, ಎಣ್ಣೆ ರೆಡಿ ಮಾಡಿ, ದೀಪ ಹಚ್ಚಿಟ್ಟಾಗ

ಖಾಲಿ ಗೋಡೆಯ ನಡುವೆ ಒಂದು ನಿಶ್ಯಬ್ದ ನಿರುಂಬಳ ನಗೆ.

ದೀಪಶಿಖೆಯಿಂದೇಳೂತ್ತಿದೆ ಸುರುಳಿ ಸುರುಳಿ ಕಪ್ಪು ಹೊಗೆ.

ಕಣ್ಣಿಂದ ನೀರು ಸುರಿಯುತ್ತೆ ತನಗೆ ತಾನೇ, ಗಂಟಲಲ್ಲಿ

ಬೆಂಕಿ ಉರಿಯುತ್ತೆ ತನಗೆ ತಾನೇ, ಶುರುವಾಗಿದೆ ಬಟ್ಟಂಬಯಲಲ್ಲಿ

ನಿರಂತರ ನೆಪ್ಪಿನ ನಾಟಕ. ಶಬ್ದದ ಹಂಗಿಲ್ಲದ ಮಾತು;

ಬಣ್ಣದ ಹಂಗಿಲ್ಲದ ರೂಪು; ಗಾಳಿಯ ಹಂಗಿಲ್ಲದ ಉಸಿರಾಟ.

ಈಗ ನನ್ನ ನಾಟಕದಲ್ಲಿ ನಾನೇ ಅಭಿನೇತೃ, ನಾನೇ ಪ್ರೇಕ್ಷಕ.

ನೋಡುತ್ತಿದ್ದೇನೆ ನನ್ನನ್ನ ನಾನೇ... ಮುಗಿಲಿಲ್ಲದೆ ಮಳೆ ಸುರಿಯುತ್ತಿದೆ...

ಗಾಳಿಯಿಲ್ಲದೆ ಸೆರಗು ಹಾರುತ್ತಿದೆ... ಚಂದ್ರನಿಲ್ಲದ ಬೆಳದಿಂಗಳಲ್ಲಿ

ನಗುತ್ತಿದ್ದಾಳೆ ನನ್ನಾಕೆ- ಯಾವ ಗುರಿಯೂ ಇಲ್ಲದ ಕಟ್ಟಾ ಖಾಸಗಿ ನಗೆ.

ಕನ್ನಡಿಯಾಚೆ ಪ್ರತಿಬಿಂಬ... ಹಿಡಿಯಲು ಕೈ ಚಾಚಿದರೆ

ಅಡ್ಡ ನಿಂತಿದೆ ಬೂತುಗನ್ನಡಿ... ಕನ್ನಡಿಯನ್ನು ಒಡೆಯುವಂತಿಲ್ಲ

ಪ್ರತಿಬಿಂಬವನ್ನು ಹಿಡಿಯುವಂತಿಲ್ಲ... ಕನ್ನಡಿಯ ಸುತ್ತಾ

ಕತ್ತಲು... ಕನ್ನಡಿಯಳಗಿದೆ ಬೆಳಕು- ದೀಪದ ಕಣ್ಣು ಧಿಗ್ಗನುರಿಯುತ್ತ.

ಪಶ್ಚಿಮವಾಹಿನಿಯಲ್ಲಿ ನಡುಹಗಲ ಬಿಸಿಲಲ್ಲೂ ತಣ್ಣ್ಗೆ

ಕೊರೆಯುವ ನದಿ. ಮೆಲ್ಲಗೆ ಕಾಲೂರಿ ನದಿಗಿಳಿದಾಗ

ಗದಗುಟ್ಟುತ್ತಿದೆ ಇಡೀ ಶರೀರ... ಗಂಟು ಬಿಚ್ಚಿ

ಕುಡಿಕೆಯಲ್ಲಿದ್ದ ಕನಕಾಂಬರಿ, ಮಲ್ಲಿಗೆ ತೆಗೆದು ಮೆಲ್ಲಗೆ

ಅಲೆಯ ಮೇಲಿಟ್ಟಾಗ ಹೊತ್ತುಕೊಂಡೊಯ್ಯುತ್ತಿವೆ

ಹೆಗಲ ಬದಲಾಯಿಸುತ್ತ ಓಡೋಡಿ ಬರುವ ಅಲೆ.

ಬೆಳ್ಳಗೆ ಹುಡಿ ಹುಡಿ ಮೂಳೆ ತುಂಡ

ಕನಸೊಡೆಯದಂತೆ ಮೆಲ್ಲಗಿಳಿಸಿ ನಿದ್ದೆಗೆ

ನೀರಲ್ಲಿ ಡಬಕ್ಕನೆ ಅದ್ದಿದರೆ ತಲೆ, ಬರೀ ಕತ್ತಲೆ.

ಕಿವಿಯನ್ನೊತ್ತುವ ಪ್ರವಾಹದ ಸದ್ದು. ತಿರುಗಿ

ತಲೆ ಎತ್ತಿದಾಗ ಕಡಲ ಕಡೆ ಯಾನ ಹೊರಟಿವೆ

ಅಸಂಖ್ಯ ಪುಟ್ಟ ಪುಟಾಣಿ ಹಾಯಿ ದೋಣಿ. ತನ್ನ ಗುರಿಯತ್ತ

ಹರಿವ ಹೊಳೆಯಲ್ಲಿ ಮೆಲ್ಲಗೆ ಕರಗುತ್ತಾ ಕರಗುತ್ತಾ...

ಇಷ್ಟದೀಪ

ಒಂದು: ಆವತ್ತು

ನೋಡಿದೆವು ಹಾರುವಾಗಷ್ಟೇ ಕಾಣುವ ರೆಕ್ಕೆ;

ದಳ ಬಿಚ್ಚಿದಾಗ ಹೂಹೂವಿನೋಣಿ.

ಕಣ್ಮಿಟುಕು ನಕ್ಷತ್ರಗಳ ಜೋಡಿ ಆಡಿದೆವು,

ಇದ್ದಲ್ಲಿಯೇ ಮೀಟಿ ಬಿದಿಗೆ ದೋಣಿ.

ಹಿಂದೆ ಎಂದೂ ಹಾಯದೋಣೀಗಳ ಹಾಯುತ್ತ

ಬೆಚ್ಚಿದೆವು ನೋಡಿ ಉಕ್ಕಳಿಕೆ ಬುಗ್ಗೆ.

ಪಡುಬೆಟ್ಟಾದಲ್ಲೊಂದು ಹಳದಿಗೆಂಪಿನ ಬುಗುರಿ

ನವಿಲಿನುತ್ಕಟ ಕೇಕೆ ಆ ಕಣಿವೆಯೊಳಗೆ.

ಕಪಿಲೆ ಬಾವಿಯ ನಿಗೂಢ ನೀರ ನಿಕ್ಷೇಪಗಳ

ತಳ ಸೋಸಿ ಎತ್ತಿದೆವು ಉಸಿರ ಮುತ್ತ

ನೋಡಿದೆವು ಕಲ್ಲ ಗುಡಿ ಹಿಂಬದಿಯ ಶಿಲ್ಪಾಂಗಿ

ತೊಡೆ ತೆರೆದು ತೋರಿಸಿದ ಒಳ ಜಗತ್ತ.

ಎಲ್ಲೆಲ್ಲಿ ಬಯಲೋ ಅಲ್ಲೆಲ್ಲ ಅಕ್ಷರ ಚದುರಿ-

ಬಿದ್ದಿರಲು ಆಯ್ದಾಯ್ದು ವಾಕ್ಯರಚನೆ.

ಕಟ್ಟಿದೆವು ಕಾಣೋದ ಒದ್ದು ಕಾಣದ್ದನ್ನು

ಹೂ ದಿಬ್ಬ-ಗಂಧರಥದುಡ್ಡಯಣಕೆ.

ಒಟ್ಟಿಗೇ ಮೆಟ್ಟಿಲನ್ನೇರುತ್ತಾ ಇಳಿಯುತ್ತಾ

ಭ್ರಮರ ಸಂಭ್ರಮಣ ಹೂಮರದ ಸುತ್ತ.

ಒಮ್ಮೆಗೇ ಅಗಲಿದೆವು ದಾರಿ ಕವಲೊಡೆದ ಕಡೆ

ಮತ್ತೆ ಮುಂದೆಂದೊ ಸಿಕ್ಕೋಣವೆನುತ.

ಹೊಸ ಭಾಷೆ (ಸಂಹಿತಾಗೆ)

ಸಕ್ಕರೆಯ ಪಾಕದಲ್ಲದ್ದಿರುವ ಜಾಮೂನು

ನಿದ್ದೆ ಮಾಡುತ್ತಿರುವ ಮುದ್ದು ಮಗಳು.

ಕಿರುಗೊಳದ ಮೇಲೆ ಬಾಗಿರುವ ಕಾಮನಬಿಲ್ಲು

ಬಣ್ಣಗನಸಿನ ಅಮ್ಮ ಕೂತಿರುವಳು.

ಒಂದು ಅರಿಯದ ಭಾಷೆ! ಅದರ ಅಕ್ಷರದಂತೆ

ಮಗಳ ಹಣೆಯಲ್ಲಿ ಮುಂಗುರುಳ ಸುರುಳಿ.

ಹೊಸದಾಗಿ ಅಕ್ಷರವ ತಿದ್ದೂ ಮಕ್ಕಳ ಹಾಗೆ

ಕರುಳ ತಿದ್ದುವ ಅಮ್ಮ ಮರಳಿ ಮರಳಿ.

ಕ್ಷಣ ಕ್ಷಣಕು ಬದಲಾಗುವಕ್ಷರದ ಆಕಾರ

ಅದನು ತಿದ್ದುವ ಹಠದ ತಾಯ ಬೆರಳು.

ನಾಲಗೆಯ ಹಲ್ಲಲ್ಲಿ ಕಚ್ಚಿ ತಿದ್ದುವ ತಾಯಿ

ಹೆಗಲಲ್ಲಿ ಇಣುಕುತಿದೆ ಅವಳ ಹೆರಳು.

ಮೈಗೊಳ್ಳುತಿದೆ ಹೀಗೆ ಒಂದು ಅಕ್ಷರಮಾಲೆ!

ಭಾಷೆ ಯಾವುದು? ಬರೆವೆ ತಿಳಿದ ಮೇಲೆ.

ತಂದೆಯ ತೊಡೆ ಮೇಲೆ

ತಂದೆಯ ತೊಡೆ ಮೇಲೆ

ಗೋಪಿಕಂದನು ಕೂತು

ಅನ್ನ ತಿನ್ನುವಾಗ ಬರೀ ಮಾತೇ ಮಾತು

ಬಾಯಿಗಿಷ್ಟು! ಬಟ್ಟೆಗಿಷ್ಟು!

ಅಮ್ಮ ಗದರುತಾಳೆ

ಅನ್ನತಿನ್ನ ಬೇಡ! ತಲೆಗೆ

ಕಟ್ಟುತ್ತೀನಿ ನಾಳೆ

ಪಾಯಸ ಗಾರ್ಗೆ ಲಡ್ಡುಗೆ

ಬೇಡಾ ಅವನಿಗೇನೂ

ನೋಡುತ್ತಾನೆ ಕದ್ದು ಕದ್ದು

ಮೊಸರ ಬಟ್ಟಲನ್ನು

ಹಾಲ ಕೆನೆ ಬೆಣ್ಣೆ ಮೊಸರು

ಎಲ್ಲವನ್ನು ಕಲಸಿ

ನೆಕ್ಕಿ, ನಗುತ್ತಾನೆ ಶ್ಯಾಮ

ತಂದೆಯ ಮುಖಕ್ಕೊರೆಸಿ

ಜಾರುಬೆಣ್ಣೆಯಿದೆ ಕೈಯೊಳಗೆ

ಜಾರುಬೆಣ್ಣೆಯಿದೆ ಕೈಯೊಳಗೆ

ಅಂಬೆಗಾಲನಡೆ! ಧೂಳಡರಿದ ಮೈ!

ಮೊಸರಿನ ಕೊಸರಿದೆ ಮುಖದೊಳಗೆ

ಕನ್ನಡಿ ಕೆನ್ನೆ! ನೇರಿಲೆ ಕಣ್ಣು!

ಹಣೆಯಲಿ ಗೋರೋಚನ ತಿಲಕ

ನೊಸಲಿನ ತುಂಬ ಗುಂಗುರಿನುಂಗುರ

ಮುಖಕಮಲಕೆ ಕವಿದಿವೆ ಭೃಂಗ

ಕೊರಳಲಿ ತಾಯತಿ! ಹುಲಿಯುಗುರಿನ ಸರ!

ಬರುತಿದೆ ಶ್ಯಾಮಾಂಗನ ಡೋಲಿ

ಗಾಳೀಗಾಡುತಿದೆ ಸಿರಿ ಮುಂಗುರುಳು

ಮಧು ಹೀರಿದ ದುಂಬಿಯ ಹೋಲಿ

ಆಹ! ಬೃಂದಾವನವೆ

ಆಹ! ಬೃಂದಾವನವೆ

ಹಚ್ಚಗೆ ಹೇಗೆ ಕಣ್ಣನು ತುಂಬುವೆ!

ಕೃಷ್ಣ ವಿರಹದ ಬೆಂಕಿ ನಿನ್ನನು ಇನ್ನು ತಾಕಲೆ ಇಲ್ಲ್ವೇ?

ಮರದ ರೆಂಬೆಗೆ ಒರಗಿ ಹಗುರ ಹರಿಯು ಮುರಳಿಯ ನುಡಿಸುವ

ನುಡಿಸಿ ಬೃಂದಾವನದ ಅಚ್ರಾಚರಕೆ ಮರುಳನು ಹಿಡಿಸುವ

ಇಂಥ ನಾದವ ಕೇಳಿಯೂ ನೀನಿಂದು ವ್ಯಾಕುಲಗೊಳ್ಳದೆ

ಬಣ್ಣ ಬಣ್ಣದ ಹೂವ ಅರಳಿಸಿ ಹೀಗೆ ಬೀಗುತ ನಿಲುವುದೆ?

ಎಂಥ ನಿರ್ದಯಿ ನೀನು? ಹಚ್ಚಗೆ ಹೇಗೆ ಕಣ್ಣನು ತುಂಬುವೆ?

ಕೃಷ್ಣವಿರಹದ ಬೆಂಕಿ ನಿನ್ನನ್ನು ಇನ್ನು ತಾಕಲೆ ಇಲ್ಲವೆ?

ವಿರಹ ದಾವಾನಲದ ದಳ್ಳುರಿ ನಖಶಿಖಾಂತವು ದಹಿಸದೆ

ಹಸಿರ ಬೃಂದಾವನವೆ ನಿನ್ನನು ಹೇಗೆ ತಣ್ಣಗೆ ಉಳಿಸಿದೆ?

ದೂರವಿಡೆ ಸಖಿ

ದೂರವಿಡೆ ಸಖಿ

ದೂರವಿಡೆ

ಕೈಯವೀಣೆಯನು ದೂರವಿಡೆ

ವೀಣೆಯ ನಾದವ ಕೇಳಿ ಚಂದ್ರಮನ

ರಥದ ಜಿಂಕೆಗಳು ಓಡದಿವೆ

ನೆರಳು ಹೊರಳುತಿದೆ; ಇರುಳು ಕೆರಳುತಿದೆ

ಬೆಳದಿಂಗಳ ಮಳೆ ಬಾರದಿದೆ

ನೋವಿನ ಪರಿಯನು ನೊಂದವರರಿವರು

ನೋಯದೆ ನೋಯುವ ಬಗೆಯುಂಟೆ?

ಚಂದಿರನಾದನು ಬೆಂಕೆಯ ಗೂಡು

ನೊಂದ ಬಳಿಕ ನೀನದ ನೋಡು

ಮರುಳುಗೊಳ್ಳುವುವು ಚುಕ್ಕಿಯ ಜಿಂಕೆ

ವೀಣೆಯ ಮುಚ್ಚಿಡೆ ಜೀವಸಖೀ

ಚಂದ್ರ ಮಹೋತ್ಸವ ಮುಂದಕೆ ಸಾಗಲಿ

ವಿರಹಿಗಳಿಗೆ ಕಾರಿರುಳೆ ಸಖೀ

ವನಮಾಲಿಯನು

ವನಮಾಲಿಯನು

ಮಾಲು ಸಮೇತ

ಗಕ್ಕನೆ ಹಿಡಿದಳು ರಾಧಾ

ಮೇಘಶ್ಯಾಮನು ಮೊಸರ ಗಡಿಗೆಯಲಿ

ಇರುಳು ಕೈಯ ಚಾಚಿದ್ದ

ಹೇಳೋ ಶ್ಯಾಮ! ಚೋರ ಚದಾಮ!

ಎಂದು ಗದರಿದಳೂ ರಾಧಾ

ಹಿಡಿದು ಕೇಳಿದರೆ ಮಾತೇ ಇಲ್ಲ!

ಉತ್ತರ ಮೆಲುನಗೆ ಮೌನ!

ನೀನೇ ಸಿಕ್ಕಲು ಬೇರೆಯ ಹೆಸರನು

ಹೇಗೆ ಹೇಳೂವೆಯೊ ಜಾಣ

ನಿನ್ನ ಮನೆಯನೆ ನನ್ನ ಮನೆಯೆಂದು

ದಾರಿ ತಪ್ಪಿ ನಾ ಬಂದೆ

ಕೈಯ ಮುಗಿಯುವೆನು ಕಾಲಿಗೆ ಬೀಳೂವೆ!

ಕೈಯ ಬಿಡೇ ಸಖೀ ರಾಧೆ

ಮೇಘ ಶ್ಯಾಮನು ಮೊಸರ ಗಡಿಗೆಯಲಿ

ಇರುಳು ಕೈ ಚಾಚಿದ್ದ

ಮೊಸರ ಗಡಿಗೆಯ ನಡುವಿನಿರುವೆಯ

ತೆಗೆವೆನೆಂದು ನಗುತ್ತಿದ್ದ

ರಾಧೆ ನಾಚಿದಳು! ಕಣ್ಣ ಮುಚ್ಚಿದಳು!

ಮೊಸರ ಗೋವಿಂದಗೆ ಬಿಟ್ಟು

ನೀಲಿಯ ಬಾನಲಿ ಬೆಣ್ಣೆಯ ಮುದ್ದೆ

ಮೆಲ್ಲಗೆ ಜಾರುತಲಿತ್ತು

ಅಮ್ಮ ನೋಡೆ

ಅಮ್ಮ ನೋಡೆ ನಾನೆಷ್ಟುದ್ದ!

ಸರಬರ ಕಡಗೋಲಷ್ಟುದ್ದ

ಆಕಳ ಕಾಯಲು ಅಡವಿಗೆ ಹೋಗಲು

ಸಾಕಲ್ಲವೆ ಹೇಳಿಷ್ಟುದ್ದ?

ಒದ್ದೆ ಬಟ್ಟೆಗಳ ಹರೆಯಲಿ ಹರವಿ

ಬಿಸಿಲಲಿ ಕಾಯಲು ನಾ ಸಿದ್ಧ

ಬೇಲದ ಹಣ್ಣನು ಬಡಿಗೆಲಿ ಬಡಿಯಲು

ಸಾಕಲ್ಲ್ವೆ ಹೇಳಿಷ್ಟುದ್ದ?

ಯಮುನೆಯ ಮಡುವಲಿ ನೀರನು ಮುಟ್ಟಿದೆ

ಥೈಥಕ ಕುಣಿಯಲು ನಾ ಸಿದ್ಧ

ಮಗುವಿನ ಒಡವೆಯ ಅಮ್ಮ ತೆಗೆಯುವಳು

ಮಗುವಿನ ಒಡವೆಯ ಅಮ್ಮ ತೆಗೆಯುವಳೂ

ಆಗಾಗಿದೆ ಮಲಗೋ ಸಮಯ

ನೋವಾಗುವುದು ಮೆಲ್ಲಗೆ ತೆಗಿಯೇ

ಕೈಯ ಮುಗಿಯುವೆನು ದಮ್ಮಯ್ಯ

ಶ್ಯಾಮನ ಮುಡಿಯ ಗರಿಯ ಬಿಡಿಸಿದಳು

ಮುತ್ತಿಡುತಲಿ ನೆತ್ತಿಯ ಮೇಲೆ

ಕಿವಿಗಳ ಓಲೆ ಭುಜದ ಕೇಯೂರ

ಕೊರಳ ಹೊಳೆವ ಮುತ್ತಿನ ಮಾಲೆ

ಕಾಲ ಕಡಗ ಸೊಂಟದ ಕಿರುಪಟ್ಟಿ

ನಾಚಿ ನುಲಿಯುವನು ನೀಲಾಂಗ

ಸಾಕು ಬಡಿವಾರ ನಾನು ಕಾಣದುದೆ?

ನಗುವಳು ಅಮ್ಮ ಯಶೋದ!!

ಪೀತಾಂಬರವನು ಉಗುಚಿ ಮೆತ್ತನೆಯ

ಹತ್ತಿಯ ಧೋತರ ಉಡಿಸುತ್ತಾ

ನಿರಾಭರಣನಿಗೆ ದೃಷ್ಟಿಯ ತೆಗೆದಳು

ನೆಟಿಗೆ ಮುರಿದು ಪಿಟಿ ಪಿಟಿಸುತ್ತಾ!!

ಬೃಂದಾವನದಲಿ ಒಂದಿರುಳು!

ಬೃಂದಾವನದಲಿ ಒಂದಿರುಳು!

ಮುಗಿಲನು ಮೋಡವು ಮುಸುಕಿರಲು

ತಣ್ಣಗೆ ಬೀಸಲು ಚಳಿಗಾಳಿ

ಒಮ್ಮೆಗೆ ದೀಪವು ಆರಿತ್ತು!

ಕತ್ತಲೆಯೋ ಆವರಿಸಿತ್ತು

ಕೃಷ್ಣ ಕರೆದ ಅಮ್ಮಾ ಎಂದು

ಕತ್ತಲೆಗಂಜುವೆ ನಾನೆಂದು!

ತಾಳೋ ಎಂದಳು ಗೋಪಮ್ಮ

ತರುವೆನು ದೇವರ ದೀಪವನು!

ಬೇಗಮ್ಮಾ ಮಗ ಕೂಗುವನು

ಯಾರೋ ಸಿಕ್ಕರು! ಯಾರೋ ನಕ್ಕರು!

ಕುರುಡುಗತ್ತಲಲಿ ಅಮೃತಕ್ಷಣ!

ಬಿಡು ಬಿಡು ಎನ್ನುವ ಸವಿ ನುಡಿಯೊಂದು

ತೇಲಿತು ಮುಳುಗಿತು ಒಂದು ಕ್ಷಣ

ತೇಲಿತು ಮುಳುಗಿತು ಒಂದು ಕ್ಷಣ

ದೀಪದೊಡನೆ ಬಂದಮ್ಮಗೆ ಕೃಷ್ಣ

ಸುಳ್ಳೆ ನಾಚಿ ಅಂಗಲಾಚುವನು!

ಕತ್ತಲಲ್ಲಿ ಈ ರಾಧೆಯ ನಾನು

ಕಂಬವೆಂದಂಜಿ ತಬ್ಬಿದೆನು!

ಬಯ್ಯೈರಮ್ಮಾ ಎನ್ನುವನು

ಕಾಲವಲ್ಲದ ಕಾಲ

ಕಾಲವಲ್ಲದ ಕಾಲ

ಧೋಮಳೆಯ ಸುರಿಸುತಿವೆ

ಮೋಡಗಳ ಅಣಕಿಸುತ ನಿನ್ನ ಕಣ್ಣು

ಮನೆಯೊಳಗೆ ಇದ್ದರೂ ಮಳೆಯಲ್ಲಿ ತೋಯುತಿಹೆ

ನಿಟ್ಟಿಸುತ ತೆರೆದಿರುವ ಬಾಗಿಲನ್ನು

ಮೋಡ ಮುಸುಕಿದ ಇರುಳು ಆಗಸದ ತಾರೆಗಳು

ಕಾಣದಾಗಿವೆ ಮೇಲೆ ಬಾನಿನಲ್ಲಿ

ಮೋಡ ಮುಸುಕಿದ್ದರೂ ಮಳೆ ಸುರಿಯುತಿದ್ದರೂ

ಜೋಡಿ ನಕ್ಷತ್ರಗಳು ಕಣ್ಣಿನಲ್ಲಿ

ಹೊರಗೆ ತಣ್ಣಗೆ ಗಾಳಿ ನಡುಗುತಿವೆ ಮರ ಗಿಡಾ

ಒಳಗೆ ಬಿಸಿಯುಸಿರ ಹಬೆ ಹಾಯುತ್ತಿದೆ

ಕಂಬನಿಯ ತನಿಮಳೆಗೆ ನೆಂದ ಮಾತಿನ ಹಕ್ಕಿ

ತುಟಿಯಂಚಿನಲಿ ತೊಪ್ಪ ತೋಯುತ್ತಿದೆ

ಸುರಿವ ಕಂಬನಿಯಲ್ಲಿ ಕಣ್ಣ ಕಾಡಿಗೆ ಕರಗಿ

ಕೆನ್ನೆಸರಪಳಿಯನ್ನು ಬರೆಯುತ್ತಿದೆ

ಮಾಮರದ ಮೇಲೊಂದು ಕೂ ಎಂಬ ಕೋಗಿಲೆ

ಕೂಗು ಬಾಗಿಲವರೆಗು ಹಾಯುತ್ತಿದೆ

ಸಂಜೆಯಾಗುತಿದೆ

ಸಂಜೆಯಾಗುತಿದೆ ನಡೆ

ನಡೆ ಗೆಳೆಯ

ಬೃಂದಾವನದ ಕಡೆ

ತಾಳೆಯ ಮರಗಳು ತಲೆಯ ತೂಗುತಿವೆ

ಕೆದರುತ ಇರುಳ ಜಡೆ

ಅಂಜೆಕೆಯಾಗುವ ಮುನ್ನವೆ ಸಾಗುವ

ಬೃಂದಾವನದ ಕಡೆ

ದಟ್ಟಡವಿಯಲಿ ಪುಟ್ಟ ಬಾಲಕರು

ಕತ್ತಲು ಇಳಿಯುತಿದೆ

ಮಲ್ಲಿಗೆ ಬಣ್ಣದ ಹಸುಗಳಿಗೆಲ್ಲ

ಕಪ್ಪನು ಬಳಿಯುತಿದೆ

ಕೃಷ್ಣೆ ಕಪಿಲೆಯರು ಕಾಣುವುದಿಲ್ಲ

ಅಂಜಿಕೆ ಬೆಳೆಯುತಿದೆ

ಅಂಜದಿರೆನುವನು ನಂದ ಕುಮಾರ

ಮುರಳಿಯ ತುಟಿಗಿಡುತ

ಅಭಯ ನಾದವನು ಬಹಲಲಿ ತುಂಬಿದ

ಕೊಳಲಲುಸಿರು ಬಿಡುತ

ಇರುಳ ಬಾನಿನಲಿ ತೇಲುತ ಬಂತು

ಹುಣ್ಣಿಮೆ ಬೆಳ್ಳಿ ರಥ

ಎಲ್ಲಿ ನೋಡಿದರು ಬೆಳದಿಂಗಳ ಮಳೆ

ಮಿದುವಾಯಿತು ನೆಲವು

ಹಾಲಿನ ಬಟ್ಟಲ ಎತ್ತಿ ಹಿಡಿಯುತಿದೆ

ಕೋ ಎನ್ನುತ ಕೊಳವು

ಬೆಣ್ಣೆಯ ಮೆತ್ತಿದ ತುಟಿಯನೊರೆಸುತಿದೆ

ಆ ಯಮುನಾ ಜಲವು

ಗೋಪ ಬಾಲಕರು ಕುಣಿಯುತಲಿಹರು

ಕೊಳಲುಲಿ ಕೇಳುತ್ತಾ

ಮರೆತ ಸಾಲುಗಳ ಒರತೆಯ ಬಗಿದು

ಗೀತವ ಪಲಕುತ್ತ

ಹಸುಗಳ ಕೊರ‍ಳಿನ ಗಂಟೆಯ ಅಲುಗಿಸಿ

ನಾದಕೆ ಸಿಲುಕುತ್ತಾ ತಾರ ಲೋಕವ ನಿಲುಕುತ್ತಾ

ಇರುಳ ಸಮಯ

ಇರುಳ ಸಮಯ ಸುರಿಮಳೆಯೊಳಗೆ

ದೋಣಿಗಳಿಳಿದಿವೆ ಹೊಳೆಯೊಳಗೆ

ಶ್ಯಾಮಲ ಸಾಗರವೇ ಗುರಿಯೆನ್ನುತ

ಸಾಗಿವೆ ಸಾವಿರ ದೋಣಿಗಳು

ಸೆರಗೇ ಹಾಯೀ! ಹೃದಯವೆ ಹುಟ್ಟು!

ದೋಣಿ ಹಿಂದೆ ಜಲವೇಣಿಗಳು

ಏರಿಳಿಯುವ ಅಲೆ! ಮುಂದೆ ಇದಿರು ಹೊಳೆ!

ಜಗ್ಗುವುವೇ ಈ ಹಾಯಿಗಳೂ?

ಎದೆಯನೆ ಸೀಳುವ ಹೋಳೂ ಬಂಡೆಗಳು

ಆ ಎನ್ನುವ ಸುಳಿಬಾಯಿಗಳು

ಮುಳುಗಿಸೊ ಅಥವಾ ತೇಲಿಸೊ ರಥವ

ಧೃತಿಯೊಂದೇ ಗತಿ ಹಾಡುತಿವೆ

ಮುಳುಗದ ಹೊರತೂ ತೇಲದು ದೋಣಿ

ಹಾಯಿ ವಿದಾಯವ ಹೇಳುತಿವೆ

ಕೃಷ್ಣನ ಶ್ಯಾಮಲ ವಕ್ಷದ ಮೇಲೆ

ಕೃಷ್ಣನ ಶ್ಯಾಮಲ ವಕ್ಷದ ಮೇಲೆ

ಕಾಳನಾಗರವುಹರಿಯುತಿದೆ!

ನಾಗರವಲ್ಲ! ನಾಗವೇಣಿಯ

ನೀಳ್ಜಡೆ ಮೆರೆಯುತಿದೆ-ನೋಡು-ನೀಳ್ಜಡೆ ಮೆರೆಯುತಿದೆ

ಕೃಷ್ಣನ ನೈದಿಲೆ ಕೆನ್ನೆಯ ಮೇಲೆ

ರಕ್ತದ ಬಿಂದುವು ಕಾಣುತಿದೆ

ರಕ್ತವು ಅಲ್ಲ! ಬಿಂಬಾಧರೆಯ

ಬಿಂದಿಯು ಮೆರೆಯುತಿದೆ- ನೋಡು- ಬಿಂದಿಯು ಮೆರೆಯುತಿದೆ

ಕೃಷ್ಣನ ಚಾಚಿದ ತೋಳಿನ ಮೇಲೆ

ಹೆದೆಯಿಲ್ಲದ ಕಾಮನ ಬಿಲ್ಲು

ಬಿಲ್ಲದು ಅಲ್ಲ! ಮಾನಿನಿ ಅಲ್ಲೇ

ಮೇಲದು ಮರೆತಿಹಳು-ನೋಡು-ಮೇಲುದು ಮರೆತಿಹಳೂ

ಕೃಷ್ಣನ ಪಾದಾಂಬುಜಗಳ ಮೇಲೆ

ಮಂಜಿನ ಹನಿಗಳು ಹೊಳೆಯುತಿವೆ

ಇಬ್ಬನಿಯಲ್ಲ-ಶ್ರ‍ೀಹರಿಪಾದವ

ರಾಧೆಯ ಕಂಬನಿ ತೊಳೆಯುತಿವೆ- ರಾಧೆಯ ಕಂಬನಿ

ತೊಳೆಯುತಿವೆ

ತೂಗುಮಂಚದಲ್ಲಿ ಕೂತು

ತೂಗುಮಂಚದಲ್ಲಿ ಕೂತು

ಮೇಘಶ್ಯಾಮ ರಾಧೆಗಾತು

ಆಡುತಿಹನು ಏನೋ ಮಾತು- ರಾಧೆ ನಾಚುತಿದ್ದಳೂ

ತೂಗುಮಂಚದಲ್ಲಿ ಕೂತು

ತೂಗುಮಂಚದಲ್ಲಿ ಕೂತು

ಮೇಘಶ್ಯಾಮ ರಾಧೆಗಾತು

ಆಡುತಿಹನು ಏನೊ ಮಾತು- ರಾಧೆ ನಾಚುತಿದ್ದಳು

ಸೆರಗ ಬೆರಳಿನಲ್ಲಿ ಸುತ್ತಿ

ಜಡೆಯ ತುದಿಯ ಕೆನ್ನೆಗೊತ್ತಿ

ಜುಮ್ಮುಗುಡುವ ಮುಖವನ್ನೆತ್ತಿ-ಕಣ್ಣಮುಚ್ಚುತ್ತಿದ್ದಳು

ಮುಖವ ಎದೆಯ ನಡುವೆ ಒತ್ತಿ

ತೋಳಿನಿಂದ ಕೊರಳ ಸುತ್ತಿ

ತುಟಿ ಯ ತೀಡಿ ಬೆಂಕಿಹೊತ್ತಿ-ಹಮ್ಮನುಸಿರ ಬಿಟ್ಟಳು

ಸೆರಗು ಜಾರುತಿರಲು ಕೆಳಗೆ

ಬಾನು ಭೂಮಿ ಮೇಲು ಕೆಳಗೆ

ಅದುರುತಿರುವ ಅಧರಗಳಿಗೆ- ಬೆಳ್ಳಿ ಹಾಲ ಬಟ್ಟಲು

ಚಾಚುತಿರಳು ಅರಳಿದರಲು

ಯಮುನೆಯೆಡೆಗೆ ಚಂದ್ರ ಬರಲು

ಮೇಲೆ ತಾರೆಗಣ್ಣ ಹೊರ‍ಳು-ಹಾಯಿದೋಣಿ ತೇಲಿತು

ತನಗೆ ತಾನೆ ತೂಗುಮಂಚ

ತಾಗುತಿತ್ತು ದೂರದಂಚ

ತೆಗೆಯೊ ಗರುಡ ನಿನ್ನ ಚುಂಚ- ಹಾಲುಗಡಿಗೆ ಹೇಳಿತು