ನವಿಲದನಿ.

೧.ಮಾತು ಮುತ್ತು.

ಮಾತು ಬರುವುದು ಎಂದು ಮಾತಾಡುವುದು ಬೇಡ;

ಒಂದು ಮಾತಿಗೆ ಎರಡು ಅರ್ಥವುಂಟು.

ಎದುರಿಗಿರುವವ ಕೂಡ ಮಾತ ಬಲ್ಲವ ಗೆಳೆಯ;

ಬರಿದೆ ಆಡುವ ಮಾತಿಗರ್ಥವಿಲ್ಲ.

ಕಡಲ ತಟಿಯಲಿ ತರುಣ ಬಲೆಯ ಬೀಸಿದ್ದಾನೆ;

ಮೀನು ಬೇಳುವ ತನಕ ಕಾಯ ಬೇಕು.

ಮೀನ ಹೊರೆಯನು ಹೊತು ಮನೆಗೆ ಬಂದಿದ್ದಾನೆ;

ಹುಡುಕುತ್ತಲಿಹನವನು ಮುತ್ತಿಗಾಗಿ.

ಮಾತು ಮುತ್ತೆನ್ನುವುದು ಬಲ್ಲವರ ಉಕ್ತಿ; ಬಿಡು.

ಮೀನಿನಿಂದಲು ನಮಗೆ ಲಾಭವುಂಉ.

ಮುತ್ತ ಹುಡುಕಲು ಹೋಗಿ ಮೀನತಂದಿದ್ದಾನೆ.

ಅವನ ದುಡಿಮೆಗೆ ಕೂಡ ಅರ್ಥವುಂಟು.

ಮನೆಗೆ ಬಂದಾಗವನ ಮಡದಿ ಮೆಲ್ಲನೆ ನಕ್ಕು

ಮುತ್ತಕೊಟ್ಟಳು ಅವನ ಹಸಿದ ತುಟಿಗೆ.

ಹೃದಯವನು ಕಲಕಿತ್ತು ಅವಳ ಮೌನದ ಮುತ್ತು.

ಮುತ್ತು ಸಿಕ್ಕಿತು ಎಂದು ನಕ್ಕವನು.

೨.ಪದ್ಯ ಮುಗಿದ ಬೆಳಗು.

ಕರೆದಾಗ ಬರುವುದೇತರ ಸೊಗಸು, ನನ್ನವಳೆ

ಕರೆಸಿಕೊಳ್ಳದೆ ಬಾರ ನನ್ನ ಬಳಿಗೆ ;

ಬೀಸಣಿಗೆ ಇಲ್ಲದೆಯೆ ಬೇಸಗೆಯ ಕಳೆದೇನು

ನನ್ನೊಡನೆ ನೀನಿರುವ ತನಕ, ಚೆಲುವೆ !

ನನಗೆ ತಿಳಿಯದು ನೋಡು ನಿನ್ನ ಒಲವಿನ ಜಾಡು

ಮುಡಿದ ಹೂವೆಸೆದು ಬಿಡು ನನ್ನ ಮೇಲೆ ;

ಪದ್ಯವನು ಬದಿಗಿಟ್ಟೆ ನಾನು, ನೀನೇ ಕವಿತೆ

ನಿನ್ನಾಚೆಗೂ ನೀನೇ, ನನ್ನ ನಲಿದೆ !

ನಿನ್ನ ಕೆಳದುಟಿಯಲ್ಲಿ ಇರುವ ಸಿಡುಬಿನ ಕಲೆಯ

ನನ್ನ ಸಾವಿರ ಮುತ್ತು ತೊಡೆಯಲಿಲ್ಲ ;

ನಿನ್ನ ಪಾಲಿಗೆ ನಾನು ತಂತಿಯಿಲ್ಲಿದ ವೀಣಿ,

ವೀಣೆ ಬಂದರು ನೀನು ಮಿಡಿಯಲಿಲ್ಲ !

ಸಿರಿಮೌನದಲ್ಲಿ ನಾನೊಲವ ಹುಡುಕಲು ನಡೆದೆ

ಉಸಿರ ಕಟ್ಟೋಡಿದೆನು ಹೊಳೆಯವರೆಗೆ ;

ನಿನ್ನ ಹಿಡಿದಾಗ ಮೈತುಂಬ ಏರಿತು ಕಾವು -

ಕವಿತೆಯಾಯಿತು ಪದ್ಯ ಕಟ್ಟಕಡೆಗೆ !

೩.ಬೆಳಕಿನ ಹಾಡು.

ನಾನು ಬೆಳಕಿನು ಕುರಿತು ಹಾಡಬಂದಿದ್ದೇನೆ,

ನೀವು ಕತ್ತಲೆಯತ್ತ ನನ್ನ ಸೆಳೆವಿರದೇಕೆ?

ಮೊತ್ತ ಮೊದಲಿತ್ತು ಕತ್ತಲೆಯೆ ; ಆಮೇಲೆಂದೊ

ಬೆಳಕು ಹುಟ್ಟಿತು ಬೆಳ್ಳಿ ಗೆರೆಯಾಗಿ ಮೂಡಲಲಿ.

ಕಿಕ್ಕಿರಿದ ಚಪ್ಪರದ ತುಂಬಾ ನಡೆಯಿತು ಭಜನೆ,

ಬೀದಿ ದೀಪಗಳಿಂದ ಹುಣ್ಣಿಮೆಯ ರಾತ್ರಿಯಲಿ

ಬೆಳಕ ಸಲುವಾಗಿ ; ಈ ಬೆಳಕೆನ್ನುವುದು ಕೂಡ

ಭ್ರಮೆಯೆಂದವರ ನಾನು ಹಿಂದೆ ಕಂಡಿದ್ದೇನೆ.

ಸಪ್ತರ್ಷಿ ಮಂಡಲ ಕೆಳಗೆ ನಿಂತಿದ್ದೇನೆ

ಚಂದ್ರರೋಹಿಣಿಯರಂತರವನ್ನು ಅಳೆಯುತ್ತ ;

ಚಂದ್ರನಲ್ಲಿಹ ಮಣ್ಣನಿವರು ತಂದಿದ್ದಾರೆ

ವರುಷಗಳ ಕಾಲ ಹೋರಾಡಿ ಪ್ರಕೃತಿಯ ಒಡನೆ.

ಹಸಿದವರ ಕಣ್ಬೆಳಕು ಏಕೋ ಮಂಕಾಗುತಿದೆ

ಮತ್ತೆ ತೆರೆ ಬೀಳಲಿದೆ ನಾಟಕ ಮುಗಿವ ಮೊದಲೆ ;

ಗುಡಿಸಿಲಲಿ ತಪ್ಪಲೆಯ ಅನ್ನ ಕೆದಕಿದ್ದಾಳೆ

ಎಂಬತ್ತು ವರುಷಗಳ ಮುದುಕಿ ಬೆಂಕಿಯ ಮುಂದೆ.

ಅವಳ ಕೆನ್ನೆಯ ಕಡೆಗೆ ಒಲೆಯ ಕಿಡಿ ಹಾರುತಿದೆ

ಹಳೆಯ ಕನ್ನಡಿಯಲ್ಲಿ ನೋಡಿಕೊಂಡಿದ್ದಾಳೆ-

ತನ್ನ ಗತವೈಭವದ ಸಂಪೂರ್ಣ ಚಿತ್ರವನು,

ಈ ಕೆನ್ನೆಗಿತ್ತ ಆ ಮುತ್ತು ಕನಸಾದುದನು.

ಒಂದೊಂದು ಹೂವು ಒಂದೊಂದು ದೀಪದ ಹಾಗೆ,

ಹಣತೆಗಳ ತೇಲಿ ಬಿಟ್ಟಿದ್ದೇನೆ ಹೊಳೆಯಲ್ಲಿ ;

ಬೆಂಕಿಯಿಲ್ಲದೆ ಅನ್ನವಿಲ್ಲ ; ಬೆಳಕಿಲ್ಲದೆಯೆ

ಬೆಂಕಿಯೂ ಇಲ್ಲ . ಇದೆ ಬೆಳಕಿನ ಹಾಡು.

೪.ಶುಭವ ಕೋರಿದ್ದೆನೆ.

ಮೊಗ್ಗು ಅರಳುವುದನ್ನು ನಾನು ನೊದಿದ್ದೇನೆ,

ಹಕ್ಕಿ ಹಾಡುವುದನ್ನು ನಾನು ಕೇಳಿದ್ದೇನೆ,

ತುಂಬ ಓದಿದ್ದೆನೆ ತುಂಬಾ ಬರೆದಿದ್ದೆನೆ,

ಚೆಲುವೆಂದು ಒಲವೆಮ್ದು ನಾನು ಕುಣಿದಿದ್ದೇನೆ.

ಕವಿಯಾಗಿ ನಕ್ಷತ್ರಗಳನು ಎಣಿಸಿದ್ದೇನೆ,

ನನ್ನ ಲೆಕ್ಕವು ತಪ್ಪಿ ತುಂಬ ನೊಂದಿದ್ದೆನೆ,

ಒಳ್ಳೊಳ್ಳೆ ಸಂಗೀತಗಳನು ಕೇಳಿದ್ದೇನೆ,

ಸ್ನೇಹಿತರ ಜೊತೆಯಲ್ಲಿ ಆಟವಾಡಿದ್ದೇನೆ.

ಹಳೆಯ ಕವಿಗಳ ಶುಭದ ಹಾದಿ ಹಿಡಿದಿದ್ದೇನೆ,

ನೊಂದ ಮಂದಿಯ ಕೈಗೆ ದೀಪ ಕೊಟ್ಟಿದ್ದೇನೆ,

ಅವರ ಪಯಣಕ್ಕೆ ಶುಭಮಸ್ತು ಎಂದಿದ್ದೇನೆ,

ಹೂದೋಟದಲ್ಲಿ ಹೊರಳಾಡಿ ಬಂದಿದ್ದೇನೆ.

ಎಲ್ಲರೊಡನೊಂದಾಗಿ ಬದುಕ ಬಯಸಿದ್ದೇನೆ,

ಚೆಲುವನ್ನು ಮುಟ್ಟದೆಯೆ ಆರಾದಿಸಿದ್ದೇನೆ,

ನುಡಿದಂತೆ ನಡೆಯಲೆತ್ನಿಸಲು ಶ್ರಮಿಸಿದ್ದೇನೆ,

ಎಲ್ಲರಿಗೆ ಕೈಕುಲುಕಿ ಶುಭವ ಕೋರಿದ್ದೆನೆ.

೫.ಬಾರದ ಮಳೆ.

ಹೊಸ ವರ್ಷದ ಮೊದಲಿನಿಂದ ಮಳೆ ಬಾರದೆ ಹೋಗಿದೆ,

ಬೇಲಿ ಸುಟ್ಟು ಹೂವು ಬೆಂದು ಹಾದಿ ಕೆಂಡವಾಗಿದೆ,

ನೀರಿಲ್ಲದ ಕೆರೆಗಳಲ್ಲಿ ಜಲಚರಗಳು ಸತ್ತಿವೆ,

ಬತ್ತಿದ ಮೊಲೆಯನ್ನು ಚೀಪಿ ಮಕ್ಕಳು ಮರಿ ಅಳುತಿವೆ.

ಬಿಸಿಲಿನಲ್ಲಿ ಸಾಲು ಸಾಲು ಹೆಣ್ಣು ಗಂಡು ಹೊರಟಿವೆ,

ಬಾಯಾರಿದ ಬಾವಿಯೊಳಗೆ ನೀರಿಲ್ಲದ ಬಿಂದಿಗೆ,

ಎಷ್ಟು ದೂರ ಹೋಗಬೇಕೊ ಒಂದು ಚಮಚ ನೀರಿಗೆ,

ಎಲ್ಲರ ಜಪ, ಎಲ್ಲರ ತಪ 'ನೀರು ಬರುವುದೆಂದೆಗೆ?'

ಹೆಣ್ಣ ಹಣಿಯ ಕುಂಕುಮಕ್ಕೆ ಬೆವರಿವ ಹನಿ ಇಳಿದಿದೆ,

ಉಟ್ತ ಸೀರೆ ಬೆವರಿನಿಂದ ಪೂರ್ತಿ ಒದ್ದೆಯಾಗಿದೆ,

ನೆರಳಿನಲ್ಲಿ ಕುಳಿತು ಬರೆದ ಕವಿತೆಯಲ್ಲಿ ಏನಿದೆ,

ಕವಿತೆಯೇನೊ ಕೈಚಾಚಿದೆ ಪಾತಾಳದ ಆಳಕೆ !

ಬಾರದ ಮಳೆಗೊಂದು ಹೆಸರಿಟ್ಟರೇತಕೊ ಹಿರಿಯರು,

ಅದರಂತೆಯೆ ಮಾಡುತಿಹರು ನಮ್ಮೂರಿನ ಕಿರಿಯರು,

ಪಂಚಾಂಗದ ಹಾಗೆ ಈಗ ಮಳೆಯು ಬಾರದೆನ್ನಲೆ,

ನೀರಿಲ್ಲದ ಕವನದಲ್ಲಿ ಕನಸೊಂದನು ಹುಡುಕಲೆ ?

೬.ಮೊದಲ ಸಲ ಕಂಡಾಗ.

ಗಿರಿಗಳೆತ್ತರದಲ್ಲಿ ಬೆಳ್ದಿಂಗಳಿಳಿದಾಗ

ನರುಗೆಂಪು ಸುಳಿದಾಗ ಹೂಬನದಲಿ,

ಕೆರೆಯ ಏರಿಯ ಮೇಲೆ ನಾನು ಬುರುತಿರುಆಗ

ನಿನ್ನ ನೆನಪಾಗುವುದು ಸಂಜೆಯಲ್ಲಿ.

ಮೊದಲ ಸಲ ಕಂಡದ್ದು ಸೇವಂತಿಯ ನಡುವೆ

ಹತ್ತು ಹನಿ ಮಳೆ ಬಿದ್ದ ಬಳಿಕ ;

ಹೊಸತು ಚೈತನ್ಯ ನನ್ನೊಳಗೆ ಹರಿದಾಡುತ್ತ

ಹೊಸ ಹಾಡು ಹುಟ್ಟಿತ್ತು ಜೀವನದಲಿ.

ಸಂಜೆಗೆಂಪಿನ ನಡುವೆ ನನ್ನ ಹತ್ತಿರ ಬಂದ

ನಿನ್ನ ಕೇಳಿದೆ ನಾನು "ಏನು ಹೆಸರು ?"

"ನನಗೆ ತಿಳಿಯದು" ಎಂದು ನಕ್ಕು ಓಡಿದೆ ನೀನು,

ನಿನ್ನ ಉತ್ತರವಿತ್ತು ಕಣ್ಣಿನಲ್ಲೆ.

ಸಂಕೋಚವಿತ್ತು, ನಾಚಿಕೆಯಿತ್ತು ನಿನ್ನೊಳಗೆ-

ಅರ್ಥವಾಯಿತು ನನಗೆ ನಿನ್ನ ಪಾಡು ;

ಇದರೊಳಗೆ ಏನಿದೆ ರಹಸ್ಯ , ನಕ್ಕೆನು ನಾನು,

ನನಗೆ ನೀನೇ ಒಂದು ಒಲುಮೆ ಹಾಡು !

೭.ಹುಣ್ಣಿಮೆ.

ತೆರೆದ ಕಿಟಕಿಯ ತುಂಬ ಹೂಬಳ್ಳಿ ನುಗ್ಗುತಿದೆ

ಪರಿಮಳವ ಚೆಲ್ಲಿತಿದೆ ತಂಬೆಲರಲಿ;

ಹುಣ್ಣಿಮೆಯ ಬಾಂದಳದ ಹಕ್ಕಿಗಳು ಹಾಡಿತಿವೆ

ಗೂಡ ಸೇರುತ್ತಲಿವೆ ಸಂತಸದಲಿ.

ನಾಡು ಹೆಂಚಿನ ಮನೆಯ ಮುಂಬಾಗಿಲಿನವರೆಗೆ

ಕಿರುದಾರಿ ಹಬ್ಬಿಹುದು ಹಾವಿನಂತೆ;

ಹಸಿರು ಸೀರೆಯನುಟ್ಟ ನಮ್ಮೂರ ಬಲುಚಲುವೆ

ನೆರಿಗೆಯನು ಎಳೆಯುತ್ತ ನಗುತಲಿಹಳು.

ಪನ್ನೀರ ಕೊಳದಲ್ಲಿ ಕೆಂದಾವರೆಗಳರಳಿ

ಹಕ್ಕಿಗಳು ನೀರಲ್ಲಿ ರೆಕ್ಕೆ ಬಡಿದು

ಹುಣ್ಣಿಮೆಯ ಚಂದಿರನ ಬಿಳಿಬೆಳಕ ಮಾಯೆಯಲಿ

ಲಕ್ಷ ನಕ್ಷತ್ರಗಳು ಮಿನುಗುತಲಿವೆ.

ಮಿಂಚಿನಲಿ ಬರೆದ ಕವಿತೆಯ ಹಾಗೆ ಹೊಳೆಯುವುದು

ಆಕಾಶಮಂಡಲದ ಬೆಳಕ ಚೆಲುವು;

ಹಸಿರ ಬೇಲಿಯ ಹೊರಗೆ ಎದ್ದ ಕೆಂಧೂಳಿಯಲಿ

ಹಸುಕರುಗಳುತ್ಸವವೆ ಸಾಗುತಿಹುದು.

ಮುಪ್ಪಿನನುಭವದೊಡನೆ ಯೌವನದ ಉತ್ಸಾಹ

ಜೊತೆಯಾಗಿ ನಡೆಯುತಿದೆ ಊರ ಬದುಕು;

ನಕ್ಕ ನಗೆಗಳ ತಳದ ನೋವ ಕಣ್ಣೀರಿನಲಿ

ಸುಖದುಖಃಗಳ ಹಾಡು ಬಿತ್ತು ಕಿವಿಗೆ.

ಬಾನಿನಾನೆಯ ಕಣ್ಣು ಚಂದ್ರ, ನಕ್ಷತ್ರಗಳು

ಅದರ ಹೊದಿಕೆಗೆ ಹೆಣಿದ ಮುತ್ತು ಹವಳ;

ಹುಣ್ಣಿಮೆಯ ಬದುಕು ಪನ್ನೀರ ಸಿಂಪಡಿಸುತಿದೆ,

ಹುಣ್ಣಿಮೆಯ ಕನಸು ಬಲು ಧನ್ಯಧವಳ.

೮.ಪಾಠ ಕಲಿಯುತ್ತಾನೆ.

ಕಂಬಳಿಯ ಮೇಲೆ ಈ ಮುದುಕ ಕೂತಿದ್ದಾನೆ,

ಹಿಂದಾದುದನ್ನು ನೆನೆಯುತ್ತ. ಜಗುಲಿಯ ಮೇಲೆ

ಆಡುತ್ತಲಿರುವ ಮಗುವಿಗೆ ಇವನ ಎಚ್ಚರಿಕೆ -

'ಮುಂದಕ್ಕೆ ಹೋಗದಿರು' ಎಂದು. ಇನ್ನೊಂದು ಮಗು

ತೊಟ್ಟಿಲಿನ ಒಳಗೆ ಕಾಲನ್ನು ಬಡಿಯುತಿಹುದು.

ಸೊಸೆ ತಂದ ಬಟ್ಟಲಲಿ ಹಬೆಯಾಡುತಿದೆ ಕಾಫಿ;

ಇವನದನು ಕುಡಿಯುತ್ತ ಚಿಟಿಕೆ ಹಾಕುತ್ತಿಹನು.

ದೂರದ ದಿಗಂತದಲಿ ತುಂಬು ಚಂದಿರ ಪದಕ,

ಬಿಡದಿಯನು ದಾಟಿಹುದು ಇವನ ಬದುಕಿನ ಬಂಡಿ.

ತುಂಬ ಆಟಗಳನ್ನು ಆಡಿದ್ದಾನೆ ಇವನು;

ಈ ಇವನ ಬದುಕೊಂದು ಪ್ರಾಸವಿಲ್ಲದ ಕವಿತೆ.

'ಬರೆದರಾಯ್ತೆ ಹೇಳಿ, ಬದುಕಬೇಕದರಂತೆ'

ಎನ್ನುವರು ತಿಳಿದವರು ; ಇವನು ಒಪ್ಪುತ್ತಾನೆ.

ದಿನ ಉರುಳಿದಂತೆ ಹೊಸ ಪಾಠ ಕಲಿಯುತ್ತನೆ.

೯.ಎಲ್ಲ ಮಲಗಿರುವಾಗ.

ಎಲ್ಲ ಮಲಗಿರುವಾಗ ಎಚ್ಚರಾಯಿತು ನನಗೆ,

ಕಣ್ತುಂಬ ಹೊಂಗನಸು ಬೆಳಗಿನಲ್ಲಿ;

ಎಲೆ ಮರೆಯ ಹಕ್ಕಿ ಹಾಡಿತ್ತು, ಹನಿಗಳು ಬಿದ್ದು

ಹೂವ ಹೊಳೆ ಹರಿದಿತ್ತು ಕಾಡಿನಲ್ಲಿ.

ಬೆಳಗಾಗ ಬಿರಿದ ಮೊಗ್ಗುಗಳು ಸಂಜೆಗೆ ಬಾಡಿ

ಸತ್ತ ಹೂಗಳ ರಾಶಿ ಲತೆಯ ಕೆಳಗೆ;

ತೆರೆದ ಪುಸ್ತಕದಂತೆ ಬದುಕು, ಮಳೆಬಿಲ್ಲಿನಲಿ

ನಾ ಕಂಡೆ ಹರುಷವನು ಮುಗಿಲ ಕೆಳಗೆ.

ಕೇಂದ್ರಬಿಂದುವಿಗೆ ಹತ್ತಿರವೊ ದೂರವೊ ಕಾಣೆ,

ಬೀಸುತ್ತಲೇ ಇತ್ತು ಮಂದಪವನ;

ಕಿಟಕಿಯನು ಮುಚ್ಚುದರೆ ತೆರೆದಿತ್ತು ಬಾಗಿಲು,

ಬಲು ಸೂಕ್ಷ್ಮ ಜೀವನದ ಚಲನವಲನ!

ಹಾಡಿನೀಚೆಗೆ ನೋವು ಕಾಡುತ್ತಲೆ ಇತ್ತು

ಬಾಯಿ ಮುಚ್ಚಿತ್ತೆನಗೆ, ಕಣ್ಣ ತೆರೆದೆ;

ಗೋಧೂಳಿಯಲ್ಲಿ ಹಸುಕರುಗಳನು ನಾ ಕಂಡೆ,

ನಡೆದದ್ದು ನಿಜವೆಂದು ಪದ್ಯ ಬರೆದೆ.

ನನ್ನ ಜೊತೆಗೂ ಬರುವ ಬೀದಿ ಮಕ್ಕಳ ಕಂಡೆ,

ಅವು ನಕ್ಕ ನಗೆ ದೇವರೆಂದುಕೊಂಡೆ;

ಹಸೆಯ ಮೇಲಿನ ಹೊಸತು ಜೋಡಿಯನು ನಾ ಕಂಡೆ,

ಇವರ ದೇವರು ಒಲವು ಎಂದುಕೊಂಡೆ!