ವಿಚಾರಸ್ವಾತಂತ್ರ್ಯ ಹಾಗು ವಿಚಾರಕ್ರಾಂತಿ - ಸುನಾಥ

ಹೆಚ್ಚಿನ ಓದಿಗೆ: http://sallaap.blogspot.com/2009/01/blog-post.html

೧೨ನೆಯ ಶತಮಾನದಲ್ಲಿ ಜರುಗಿದ ಶರಣರ ಕ್ರಾಂತಿಯು ಕರ್ನಾಟಕದಲ್ಲಿ ನಡೆದ ಅದ್ಭುತ ವೈಚಾರಿಕ ಕ್ರಾಂತಿ ಎನ್ನಬಹುದು.

ಬಸವಣ್ಣನವರನ್ನು ಈ ಕ್ರಾಂತಿಯ ನೇತಾರ ಎನ್ನಲಾಗುತ್ತದೆ.

ಆದರೆ ಈ ಕ್ರಾಂತಿ ಬಸವಣ್ಣನವರಿಗಿಂತಲೂ ಸಾಕಷ್ಟು ಪೂರ್ವದಲ್ಲಿಯೇ ಪ್ರಾರಂಭವಾಗಿತ್ತು.

ಈ ಪೂರ್ವಿಕರನ್ನು ಬಸವಣ್ಣನವರು ಆದ್ಯರು ಎಂದು ಕರೆದಿದ್ದಾರೆ.

ಅವರ ವಚನಗಳನ್ನು “ಆದ್ಯರ ವಚನ ಪರುಷದಂತೆ ಕಾಣಯ್ಯ” ಎಂದು ಬಣ್ಣಿಸಿದ್ದಾರೆ.

ಈ ವೈಚಾರಿಕ ಕ್ರಾಂತಿಯಲ್ಲಿ ಶರಣರು ಆರು ಅಂಶಗಳನ್ನು ಪ್ರತಿಪಾದಿಸಿದ್ದಾರೆ:

(೧) ಸಾಂಪ್ರದಾಯಕ ಅಂಧಶ್ರದ್ಧೆಗಳನ್ನು ತಿರಸ್ಕರಿಸುವದು,

(೨) ಮತೀಯ ಶ್ರೇಣೀಕರಣವನ್ನು ಹಾಗೂ ಮತೀಯ ಭಿನ್ನತೆಯನ್ನು ತಿರಸ್ಕರಿಸುವದು,

(೩) ಧಾರ್ಮಿಕ ಆಚರಣೆಗಳಲ್ಲಿಯ ಅನಾಚಾರವನ್ನು/ಡಾಂಭಿಕತೆಯನ್ನು ತಿರಸ್ಕರಿಸುವದು,

(೪) ಧಾರ್ಮಿಕ ಆಚರಣೆಗಳ ಸರಳೀಕರಣ,

(೫) ವೈಯಕ್ತಿಕ ಉತ್ತಮಿಕೆಗೆ ಒತ್ತು,

(೬) ಸಾಮಾಜಿಕ ಸುಧಾರಣೆ.

ಈ ಅಂಶಗಳು ಬಸವಣ್ಣನವರ ಅನೇಕ ವಚನಗಳಲ್ಲಿ ವ್ಯಕ್ತವಾಗುತ್ತವೆ.

ಅಂತಹ ಕೆಲವು ವಚನಗಳು ಹಿಗಿವೆ:

(೧) ಸಾಂಪ್ರದಾಯಕ ಶ್ರದ್ಧೆಗಳನ್ನು ತಿರಸ್ಕರಿಸುವದು (Rational thinking):

ಶುಭಕಾರ್ಯಗಳನ್ನು ಶುಭ ಮುಹೂರ್ತದಲ್ಲಿ ಮಾಡುವದು ಒಂದು ಸಾಂಪ್ರದಾಯಕ ಶ್ರದ್ಧೆ.

ಆದರೆ, ಶರಣರು ‘ಶುಭಮುಹೂರ್ತ’ ಎನ್ನುವ conceptಅನ್ನೇ ತಿರಸ್ಕರಿಸಿದರು.

ಇದರ ಬಗೆಗೆ ಬಸವಣ್ಣನವರ ವಚನವೊಂದು ಹೀಗಿದೆ:

“ ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ,

ರಾಶಿಕೂಟ, ಋಣಸಂಬಂಧವುಂಟೆಂದು ಹೇಳಿರಯ್ಯಾ,

ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ,

ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯಾ,

ಕೂಡಲಸಂಗಮ ದೇವನ ಪೂಜಿಸಿದ ಫಲ ನಿಮ್ಮದಯ್ಯಾ.”

“ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ,

ಗ್ರಹಣ, ಸಂಕ್ರಾಂತಿಯಿಂದ ವೆಗ್ಗಳ,

ಏಕಾದಶಿ, ವ್ಯತಿಪಾತದಿಂದ ವೆಗ್ಗಳ,

ಸೂಕ್ಷ್ಮ ಶಿವಪಥನರಿದವಂಗೆ

ಹೋಮ, ನೇಮ, ಜಪ, ತಪದಿಂದ ವೆಗ್ಗಳ,

ಕೂಡಲಸಂಗಮ ದೇವಾ ನಿಮ್ಮ ಮಾಣದೆ ನೆನೆವವಂಗೆ”

ಪಾರಮಾರ್ಥಿಕ ಸಾಧನೆಗೆ ದೇಹದಂಡನೆಯು ಅವಶ್ಯವೆನ್ನುವದು ಮತ್ತೊಂದು ಸಾಂಪ್ರದಾಯಕ ಶ್ರದ್ಧೆ.

ಬಸವಣ್ಣನವರ ಒಂದು ವಚನವು ಈ ಪರಿಕಲ್ಪನೆಯನ್ನು ವಿರೋಧಿಸುವ ಪರಿ ಹೀಗಿದೆ:

“ಹುತ್ತವ ಬಡಿದೊಡೆ ಹಾವು ಸಾಯಬಲ್ಲುದೆ ಅಯ್ಯಾ

ಅಘೋರ ತಪವ ಮಾಡಿದೊಡೇನು?

ಅಂತರಂಗ ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯಾ

ಕೂಡಲಸಂಗಮ ದೇವಾ?”

ಈ ವಚನದಲ್ಲಿ ಬಸವಣ್ಣನವರು ಸಾಂಪ್ರದಾಯಕ ಶ್ರದ್ಧೆಯನ್ನು ಟೀಕಿಸಿದ್ದಷ್ಟೇ ಅಲ್ಲ,

ತಮ್ಮ ವೈಚಾರಿಕ ಧಾರ್ಷ್ಟ್ಯವನ್ನೂ ನಿಚ್ಚಳವಾಗಿ ತೋರಿಸಿದ್ದಾರೆ.

ಭಾರತೀಯ ಸಾಂಪ್ರದಾಯಕ ವಿಚಾರಧಾರೆಯ ಮೇರೆಗೆ ಹಾವು ಅಥವಾ ಸರ್ಪವೆಂದರೆ ಕುಂಡಲಿನಿ ಶಕ್ತಿ.

ಈ ಶಕ್ತಿಯನ್ನು ಜಾಗೃತಗೊಳಿಸುವದು ಯೋಗಿಯ ಗುರಿಯಾಗಿದೆ.

ಕನಸಿನಲ್ಲಿ ಹಾವು ಕಂಡರೆ ಅದು ಕುಂಡಲಿನಿ ವ್ಯಕ್ತವಾಗುವ ಬಗೆ ಎಂದು ಸಾಂಪ್ರದಾಯಕವಾಗಿ ಭಾವಿಸಲಾಗುತ್ತದೆ.

ಆದರೆ ಬಸವಣ್ಣನವರು ಕನ್ನಡ ನಾಡಿನಲ್ಲಿ (ಬಹುಶಃ ಭಾರತದಲ್ಲಿಯೇ) ಮೊದಲ ಬಾರಿಗೆ ಹಾವನ್ನು ಕಾಮಪೂರಿತ ಮನಸ್ಸಿಗೆ ಹೋಲಿಸಿದ್ದಾರೆ.

ಜರ್ಮನಿಯ ಮನೋವಿಜ್ಞಾನಿ ಫ್ರಾ:ಯ್ಡನು ಕನಸುಗಳಲ್ಲಿ ಕಂಡುಬರುವ ಹಾವು ಲೈಂಗಿಕ ಪ್ರತೀಕ ಎಂದು ಹೇಳುವದಕ್ಕಿಂತ ಏಳುನೂರು ವರ್ಷ ಮೊದಲಿಗೇ, ಬಸವಣ್ಣನವರು ಹಾವನ್ನು ‘lust’ ಪ್ರತೀಕವಾಗಿ ಬಳಸಿದ್ದಾರೆ.

ಇದು ಅವರ ವೈಚಾರಿಕ ಧಾರ್ಷ್ಟ್ಯವನ್ನು ಎತ್ತಿ ತೋರಿಸುತ್ತದೆ.

ವಿಚಿತ್ರವೆಂದರೆ, ಎರಡು ಶತಮಾನಗಳ ನಂತರದ ಕವಿಯಾದ ಸರ್ವಜ್ಞನು ಇದಕ್ಕೆ ವಿರುದ್ಧವಾದ ತನ್ನ ಅಭಿಪ್ರಾಯವನ್ನು ಹೀಗೆ ಹೇಳಿದ್ದಾನೆ:

“ದಂಡಿಸದೆ ದೇಹವನು, ಖಂಡಿಸದೆ ಕಾಯವನು

ಉಂಡುಂಡು ಸ್ವರ್ಗಕ್ಕೆ ಹೋಗಲಿಕೆ ಅದನೇನು,

ರಂಡೆಯಾಳುವಳೆ ಸರ್ವಜ್ಞ?”

(೨) ಮತೀಯ ಶ್ರೇಣೀಕರಣವನ್ನು ಹಾಗೂ ಮತೀಯ ಭಿನ್ನತೆಯನ್ನು ತಿರಸ್ಕರಿಸುವದು:

ಮತೀಯ ಶ್ರೇಣೀಕರಣವು ವೈದಿಕ ಧರ್ಮದ ಒಂದು ವಿರೂಪ ಸ್ವರೂಪವಾಗಿದೆ.

ಬಸವಣ್ಣನವರ ಅನೇಕ ವಚನಗಳಲ್ಲಿ ಇದರ ವಿರುದ್ಧದ ಹೋರಾಟವನ್ನು ನೋಡಬಹುದು.

ಒಂದು ಉದಾಹರಣೆ ಹೀಗಿದೆ:

“ಸೆಟ್ಟಿಯೆಂಬೆನೆ ಸಿರಿಯಾಳನ?

ಮಡಿವಾಳನೆಂಬೆನೆ ಮಾಚಯ್ಯನ?

ಡೋಹಾರನೆಂಬೆನೆ ಕಕ್ಕಯ್ಯನ?

ಮಾದಾರನೆಂಬೆನೆ ಚೆನ್ನಯ್ಯನ?

ಆನು ಹಾರುವನೆಂದೆಡೆ ಕೂಡಲಸಂಗಮ ನಗುವನಯ್ಯಾ!”

“ ಶ್ವಪಚನಾದಡೇನು? ಲಿಂಗಭಕ್ತನೇ ಕುಲಜನು.

ನಂಬಿ, ನಂಬದಿದ್ದಡೆ ಸಂದೇಹಿ, ನೋಡಾ.

ಕಟ್ಟಿದಡೇನು, ಮುಟ್ಟಿದಡೇನು, ಹೂಸಿದಡೇನು

ಮನ ಮುಟ್ಟದನ್ನಕ್ಕ?

ಭಾವಶುದ್ಧವಿಲ್ಲದವಂಗೆ ಭಕ್ತಿ ನೆಲೆಗೊಳ್ಳದು,

ಕೂಡಲಸಂಗಯ್ಯನೊಲಿದಂಗಲ್ಲದೆ.”

“ಜಾತಿವಿಡಿದು ಸೂತಕವನರೆಸುವೆ,

ಜ್ಯೋತಿವಿಡಿದು ಕತ್ತಲೆಯನರೆಸುವೆ!

ಇದೇಕೊ ಮರುಳುಮಾನವಾ?

ಜಾತಿಯಲ್ಲಿ ಅಧಿಕನೆಂಬೆ!

ವಿಪ್ರಶತಕೋಟಿಗಳಿದ್ದಲ್ಲಿ ಫಲವೇನು?

ಭಕ್ತಶಿಖಾಮಣಿ ಎಂಬುದು ವಚನ.

ನಮ್ಮ ಕೂಡಲಸಂಗನ ಶರಣರ ಪಾದಪರುಶವ ನಂಬು,

ಕೆಡಬೇಡ ಮಾನವಾ.”

ಶರಣರೆಲ್ಲರೂ ಒಂದೇ. ಯಾರಲ್ಲೂ ಮೇಲು, ಕೀಳಿಲ್ಲ ಎನ್ನುವ ತತ್ವವು

ಬಸವಣ್ಣನವರ ಈ ಮುಂದಿನ ವಚನದಲ್ಲಿ ವ್ಯಕ್ತವಾಗುತ್ತದೆ:

“ಇವನಾರವ, ಇವನಾರವ ಇವನಾರವನೆಂದೆನಿಸದಿರಯ್ಯಾ

ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ

ಕೂಡಲಸಂಗಮ ದೇವಾ

ನಿಮ್ಮ ಮನೆಯ ಮಗನೆಂದೆನಿಸಯ್ಯಾ!”

(೩) ಧಾರ್ಮಿಕ ಆಚರಣೆಗಳಲ್ಲಿಯ ಅನಾಚಾರವನ್ನು/ಡಾಂಭಿಕತೆಯನ್ನು ತಿರಸ್ಕರಿಸುವದು:

ವೈದಿಕ ಧರ್ಮದಲ್ಲಿ ಬೇರೂರಿದ ಅನಾಚಾರ ಹಾಗೂ ಡಾಂಭಿಕತೆಯನ್ನು ತೊಳೆಯಲು, ಶರಣರು ಪ್ರಯತ್ನ ಪಟ್ಟಿದ್ದಾರೆ. ಇದರ ಉದಾಹರಣೆಯಾಗಿ ಅಕ್ಕಮಹಾದೇವಿಯ ವಚನವೊಂದನ್ನು ನೋಡಬಹುದು:

“ತನು ಕರಗದವರಲ್ಲಿ ಪುಷ್ಪವನೊಲ್ಲೆಯ್ಯ ನೀನು,

ಮನ ಕರಗದವರಲ್ಲಿ ಗಂಧಾಕ್ಷತೆಯನೊಲ್ಲೆಯ್ಯ ನೀನು,

ಹದುಳಿಗರಲ್ಲದವರಲ್ಲಿ ಮಜ್ಜನವನೊಲ್ಲೆಯ್ಯ ನೀನು,

ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯ್ಯ ನೀನು,

ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯ್ಯ ನೀನು,

ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯ್ಯ ನೀನು,

ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯ್ಯ ನೀನು,

ಹೃದಯಕಮಲವರಳದವರಲ್ಲಿ ಇರಲೊಲ್ಲೆಯ್ಯ ನೀನು,

ಎನ್ನಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ

ಚೆನ್ನಮಲ್ಲಿಕಾರ್ಜುನಯ್ಯಾ!”

ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ ಈ ಐದು ಉಪಕರಣಗಳನ್ನು ಬಳಸಿ ಮಾಡುವ ಪೂಜೆಗೆ ‘ಪಂಚೋಪಚಾರ ಪೂಜೆ’ ಎಂದು ಕರೆಯಲಾಗುತ್ತದೆ.

ಇದರಂತೆ ಶೋಡಷೋಪಚಾರ ಪೂಜೆಯೂ ಇದೆ.

ಪರಮಾತ್ಮನ ಪೂಜೆಯ ಅಂತಿಮ ಉದ್ದೇಶವೇ ‘ತನ್ನತನ’ ಕರಗುವದು.

ಇದನ್ನೇ ಕನಕದಾಸರು “ ‘ನಾನು’ ಹೋದರೆ ಹೋಗಬಹುದು” ಎಂದು ಹೇಳಿದ್ದು.

‘ನಾನು’ ನಾಶವಾಗದೆ, ಈ ಪಂಚೋಪಚಾರ ಅಥವಾ ಶೋಡಷೋಪಚಾರ ಪೂಜೆಯ ಸಾರ್ಥಕತೆ ಏನು?

ಅಕ್ಕಮಹಾದೇವಿ ತನ್ನ ವಚನದ ಮೂಲಕ ಇಂತಹ ವ್ಯರ್ಥ ಪೂಜೆಯನ್ನು ಟೀಕಿಸಿದ್ದಾರೆ.

ತನು ಹಾಗು ಮನಸ್ಸನ್ನು ಅಪರೋಕ್ಷವಾಗಿ ಪುಷ್ಪ ಹಾಗೂ ಅದರ ಗಂಧಕ್ಕೆ ಹೋಲಿಸಿರುವದು ಈ ವಚನದ ವೈಶಿಷ್ಟ್ಯವಾಗಿದೆ.

ಇದರಂತೆಯೇ, ಯಜ್ಞ ಯಾಗಾದಿಗಳಲ್ಲಿ ಜರಗುತ್ತಿದ್ದ ಪ್ರಾಣಿಬಲಿಯನ್ನು ಖಂಡಿಸಿ ಬಸವಣ್ಣನವರು ಹೇಳಿದ ವಚನವೊಂದು ಹೀಗಿದೆ:

“ ವಿಷ್ಣು ವರಾಹಾವತಾರದಲ್ಲಿ ಹಂದಿಯಂ ತಿಂಬುದಾವಾಚಾರವೊ?

ವಿಷ್ಣು ಮತ್ಸ್ಯಾವತಾರದಲ್ಲಿ ಮೀನಂ ತಿಂಬುದಾವಾಚಾರವೊ ?

ವಿಷ್ಣು ಕೂರ್ಮಾವತಾರದಲ್ಲಿ ಆಮೆಯ ತಿಂಬುದಾವಾಚಾರವೊ?

ವಿಷ್ಣು ಹರಿಣಾವತಾರದಲ್ಲಿ ಎರಳೆಯ ತಿಂಬುದಾವಾಚಾರವೊ?

ಇಂತಿವನೆಲ್ಲ ಅರಿಯದೆ ತಿಂದರು.

ಅರಿದರಿದು ನಾಲ್ಕು ವೇದ, ಹದಿನಾರು ಶಾಸ್ತ್ರ,

ಹದಿನೆಂಟು ಪುರಾಣ, ಇಮ್ಮತ್ತೆಂಟಾಗಮ

ಇಂತಿವೆಲ್ಲನೋದಿ, ಕೇಳಿ, ಹೋಮವನಿಕ್ಕಿ, ಹೋತನ ಕೊಂದು

ತಿಂಬುದಾವಾಚಾರದೊಳಗೋ?

ಇಂತೀ ಶ್ರುತಿಗಳ ವಿಧಿಯ ಜಗವೆಲ್ಲ ನೋಡಿರೆ.

ನಮ್ಮ ಕೂಡಲಸಂಗಮ ದೇವಂಗೆ ಅಧಿದೇವತೆಗಳು ಸರಿಯೆಂಬುವರ

ಬಾಯಲ್ಲಿ ಸುರಿಯವೆ ಬಾಲಹುಳಗಳು? ”

(೪) ಧಾರ್ಮಿಕ ಆಚರಣೆಗಳ ಸರಳೀಕರಣ:

ಧಾರ್ಮಿಕ ಡಂಭಾಚಾರವನ್ನು ತಿರಸ್ಕರಿಸಿದ ಶರಣರು, ಅದಕ್ಕೆ ಲಿಂಗಧಾರಣೆಯ ಪರ್ಯಾಯವನ್ನು ನೀಡಿದರು.

ಇಷ್ಟಲಿಂಗವನ್ನು ಸದಾಕಾಲ ಎದೆಯ ಮೇಲೆ ಧರಿಸುವದರಿಂದ ಶರಣನು ಸದಾಕಾಲ ಎಚ್ಚರದಿಂದ ನಡೆಯುತ್ತಾನೆ.

ಈ ಇಷ್ಟಲಿಂಗವನ್ನು ಕರಸ್ಥಳದಲ್ಲಿ ಇಟ್ಟುಕೊಂಡು ಮಾನಸಿಕ ಪೂಜೆಯನ್ನು ಮಾಡುವದರಿಂದ,

ಆತ ಸಾಧನಾಪಥದಲ್ಲಿ ಶೀಘ್ರವಾಗಿ ಮುಂದುವರೆಯಬಹುದು ಎನ್ನುವ ಹಾರೈಕೆ ಇಲ್ಲಿದೆ.

ಇದಕ್ಕೆ ಸಂಬಂಧಿಸಿದ ಬಸವಣ್ಣನವರ ವಚನವೊಂದು ಈ ರೀತಿಯಾಗಿದೆ:

“ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,

ಪಾತಾಳದಿಂದತ್ತ ನಿಮ್ಮ ಶ್ರೀಚರಣ,

ಬ್ರಹ್ಮಾಂಡದಿಂದತ್ತ ನಿಮ್ಮ ಶ್ರೀಮುಕುಟ!

ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ,

ಕೂಡಲಸಂಗಮ ದೇವಯ್ಯಾ,

ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ!”

(೫) ವೈಯಕ್ತಿಕ ಉತ್ತಮಿಕೆಗೆ ಒತ್ತು:

ಕೇವಲ ಲಿಂಗಧಾರಣೆಯಿಂದ ಅಥವಾ ಕರಸ್ಥಲಪೂಜೆಯಿಂದ ವ್ಯಕ್ತಿಯ ಉನ್ನತಿ ಆಗದು ಎದು ತಿಳಿದ ಶರಣರು ವೈಯಕ್ತಿಕ ಉತ್ತಮಿಕೆಗೆ ತಮ್ಮ ವಚನಗಳಲ್ಲಿ ಒತ್ತು ನೀಡಿದ್ದಾರೆ.

ಈ ವಿಷಯದಲ್ಲಿ ಬಸವಣ್ಣನವರು ಅನೇಕ ವಚನಗಳನ್ನು ರಚಿಸಿದ್ದಾರೆ.

ಉದಾಹರಣೆ:

“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,

ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,

ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ,

ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ

ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ.”

“ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?

ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?

ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ,

ಮನೆಯೊಳಗೆ ಮನೆಯೊಡೆಯನಿಲ್ಲಾ, ಕೂಡಲಸಂಗಮ ದೇವಾ!”

“ಲೋಕದ ಡೊಂಕ ನೀವೇಕೆ ತಿದ್ದುವಿರಿ?

ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ

ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ

ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ

ನಮ್ಮ ಕೂಡಲಸಂಗಮ ದೇವ.”

(೬) ಸಾಮಾಜಿಕ ಸುಧಾರಣೆ:

ಧಾರ್ಮಿಕ ಸುಧಾರಣೆ, ವೈಯಕ್ತಿಕ ಸುಧಾರಣೆ ಇವುಗಳ ಜೊತೆಗೇ ಸಾಮಾಜಿಕ ಸುಧಾರಣೆಯೂ ಸಹ ಮಹತ್ವದ ವಿಷಯವಾಗಿದೆ.

ಸಮಾಜದಲ್ಲಿ ಈವರೆಗೆ ಬೇರೂರಿದ ತಪ್ಪು ಧೋರಣೆಗಳನ್ನು ಬದಲಾಯಿಸುವ ಉದ್ದೇಶದಿಂದ ವಚನಕಾರರರು ಅನೇಕ ವಚನಗಳನ್ನು ಹಾಡಿದ್ದಾರೆ.

“ಕಾಯಕವೇ ಕೈಲಾಸ” ಎನ್ನುವ ವಚನವು dignity of labourಅನ್ನು ವ್ಯಕ್ತಪಡಿಸುವದಲ್ಲದೆ, ಪರಿಶ್ರಮ ಪಡದೆ ಉಣ್ಣುವದು ತಪ್ಪು ಎನ್ನುವ ಭಾವವನ್ನು ಸಹ ವ್ಯಕ್ತ ಮಾಡುತ್ತದೆ.

ಸಮಾಜಸುಧಾರಣೆಯ ಉದ್ದೇಶವನ್ನು ಸ್ಪಷ್ಟ ಪಡಿಸುವ ಬಸವಣ್ಣನವರ ಎರಡು ವಚನಗಳು ಹೀಗಿವೆ:

“ ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ,

ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ,

ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ,,

ಕೂಡಲಸಂಗಮ ದೇವಾ.”

“ಏನಿ ಬಂದಿರಿ, ಹದುಳವಿದ್ದಿರೆ ಎಂದರೆ

ನಿಮ್ಮ ಮೈಸಿರಿ ಹಾರಿ ಹೋಹುದೆ?

ಕುಳ್ಳಿರೆಂದರೆ ನೆಲ ಕುಳಿ ಹೋಹುದೆ?

ಒಡನೆ ನುಡಿದರೆ ಸಿರ ಹೊಟ್ಟೆಯೊಡೆವುದೆ?

ಕೊಡಲಿಲ್ಲದಿದ್ದರೊಂದು ಗುಣವಿಲ್ಲದ್ದೆಡೆ

ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲಸಂಗಮ ದೇವನು?”

ಬಸವಣ್ಣನವರ ವಚನಗಳು ಹಾಗೂ ಶರಣರ ವಚನಗಳು ಈ ರೀತಿಯಾಗಿ ವೈಚಾರಿಕ ಕ್ರಾಂತಿಯ ಸಂದೇಶವನ್ನು ಬೀರುತ್ತವೆ.

ಆದರೆ ಈ ವೈಚಾರಿಕ ಕ್ರಾಂತಿ ಈಗ ಉಳಿದಿಲ್ಲ ಎನ್ನುವದು ಕನ್ನಡ ನಾಡಿನ ದುರ್ದೈವ.

ಕರ್ನಾಟಕದ ಖ್ಯಾತ ಸಂಶೋಧಕರಾದ ಶ್ರೀ ಎಮ್. ಎಮ್. ಕಲಬುರ್ಗಿಯವರು ತಮ್ಮ ಸಂಶೋಧನಾ ಕೃತಿ “ಮಾರ್ಗ”ದಲ್ಲಿ ಚೆನ್ನಬಸವಣ್ಣನ ಬಗೆಗೆ ಬರೆದ ವಿಷಯಗಳು ಕರ್ನಾಟಕದ ಕೆಲವೆಡೆ ತೀವ್ರ ಕ್ಷೋಭೆಯನ್ನು ಉಂಟು ಮಾಡಿದವು.

ಶ್ರೀ ಕಲಬುರ್ಗಿಯವರು ಮಠಾಧೀಶರ ಕ್ಷಮೆ ಕೋರಿದ ಬಳಿಕ ಈ ಪ್ರಕರಣ ಮುಕ್ತಾಯವಾಯಿತು.

ಇತ್ತಿಚೆಗೆ ಶ್ರೀ ಜಯಪ್ರಕಾಶ ಬಂಜಗೆರೆಯವರು ಬಸವಣ್ಣನು ಹುಟ್ಟಿನಿಂದ ಬ್ರಾಹ್ಮಣನಿರಲಿಕ್ಕಿಲ್ಲ ಎನ್ನುವ ಅನುಮಾನವನ್ನು “ ಆನು ಹೊರಗಣವನಯ್ಯಾ ” ಎನ್ನುವ ತಮ್ಮ ಕೃತಿಯೊಂದರಲ್ಲಿ ವ್ಯಕ್ತ ಪಡಿಸಿದರು.

ಅದರ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿ, ಕರ್ನಾಟಕ ಸರಕಾರವು ಕೊನೆಗೊಮ್ಮೆ ಆ ಕೃತಿಯನ್ನು ಮುಟ್ಟುಗೋಲು ಹಾಕುವದರಲ್ಲಿ ಮುಕ್ತಾಯವಾಯಿತು.

ಆದರೆ, ಡಾಃನ್ ಬ್ರೌನ್ ಬರೆದ “ಡಾ ವಿಂಚಿ ಕೋಡ್” ಕೃತಿಯು ಯೇಸು ಕ್ರಿಸ್ತನ ಬಗೆಗೆ ಅನೇಕ ಸಂಶಯಗಳನ್ನು ವ್ಯಕ್ತ ಪಡಿಸಿದರೂ ಸಹ ಪಾಶ್ಚಾತ್ಯ ದೇಶಗಳಲ್ಲಿ ಅದರ ವಿರುದ್ಧ ಯಾವುದೇ ಚಳುವಳಿಯಾಗಲಿಲ್ಲ.

ಅಷ್ಟೇ ಏಕೆ, ಯೇಸುವು ಓರ್ವ ಸೂಳೆಯಲ್ಲಿ ರೋಮನ್ ಸೈನಿಕನಿಗೆ ಹುಟ್ಟಿದ ಮಗನು ಎನ್ನುವ ಸಂಶೋಧನಾತ್ಮಕ ಲೇಖನಗಳೂ ಸಹ ಪ್ರಕಟವಾಗಿವೆ.

ಆದರೆ ಇದರ ವಿರುದ್ಧ ಸಹ ಪಾಶ್ಚಾತ್ಯ ಲೋಕದಲ್ಲಿ ಯಾವುದೇ ಆಕ್ರೋಶ ವ್ಯಕ್ತವಾಗಿಲ್ಲ.

ಶರಣರು ತೋರಿಸಿದ ವೈಚಾರಿಕ ಸ್ವಾತಂತ್ರ್ಯ , ಆ ಸ್ವಾತಂತ್ರ್ಯಕ್ಕೆ ಬೇಕಾಗುವ ಸಹನೆ ನಮ್ಮಲ್ಲಿ ಮಾಯವಾಗಿದೆಯೆ?

ಹದಿನೇಳನೆಯ ಶತಮಾನದಲ್ಲಿ ಬಾಳಿದ, ಫ್ರೆಂಚ್ ಕ್ರಾಂತಿಗೆ ಪ್ರೇರಣೆ ನೀಡಿದ ಚಿಂತಕರಲ್ಲಿ ಒಬ್ಬನಾದ ವೋಲ್ಟೇರ್ ಎನ್ನುವ ಲೇಖಕ ಈ ರೀತಿ ಹೇಳಿದ್ದಾನೆ:

I do not agree with what you have to say, but I will defend to the death your right to say it.

ಭಾರತದಲ್ಲಿ ಈಗಿರುವ ಪರಿಸ್ಥಿತಿ ಹೇಗಿದೆಯೆಂದರೆ:

If you do not agree with me, I will do you to death!