ಸುನೀತ (ಶೇಕ್ಸಪಿಯರನ ಸಾನೆಟ್ ಚಕ್ರ).

೧.ನಿಜ ಹೇಳಲೇ ಕೇಳು ನನ್ನ ಈ ಕಣ್ಣುಗಳು.

ನಿಜ ಹೇಳಲೇ ಕೇಳು ನನ್ನ ಈ ಕಣ್ಣುಗಳು

ನಿನ್ನನೊಲಿದಿಲ್ಲ, ಏಕೆಂದರಾಕಣ್ಣುಗಳು

ಒಂದು ಸಾವಿರ ತಪ್ಪ ನಿನ್ನಲ್ಲಿ ಕಾಣುವುವು;

ಆದರವು ಒದ್ದುದನು ಈ ಹೃದಯ ಒಲಿಯುವುದು,

ಕಂಡು ಕಂಡೂ ನಿನ್ನ ಬಯಸುವುದು ಮರುಳಿನಲಿ,

ನನ್ನ ಕಿವಿಗಳಿಗೆ ಹಿತವೆನ್ನಿಸದು ನಿನ್ನ ದನಿ,

ಕಾಮಚೋದಕ ಸ್ಪರ್ಶ ಎಬ್ಬಿಸುವ ಕಚಗುಳಿ

ರುಚಿ ವಾಸನೆಗಳು ಸಹ ನಿನ್ನೊಡನೆ ವಿಷಯ ತನಿ-

ಭೋಜನವ ಬಯಸವು. ಆದರಿದೆ ಆಶ್ಚರ್ಯ.

ನನ್ನೆಲ್ಲ ಬುದ್ದಿಯೂ ಎಲ್ಲ ಇಂದ್ರಿಯಗಳೂ

ಈ ಹುಚ್ಚು ಹೃದಯ ನಿನ್ನನ್ನು ಓಲೈಸುತ್ತ

ಸ್ವಾಭಿಮಾನಿಯು ದಾಸನಾಗುವುದ ತಡೆಯವು.

ಆದರೀ ಪಿಡುಗು ನನ್ನೊಂದು ಲಾಭವೂ ಕೂಡ,

ತಪ್ಪಿಗೆಳೆವವಳೆ ನೀಡುವಳು ಶಿಕ್ಷೆಯ ಕೂಡ.

೨.ಚಳಿಗಾಲದಂತಿದ್ದ ನಿನ್ನ ಅಗಲಿಕೆ ಹೇಗೆ.

ಚಳಿಗಾಲದಂತಿದ್ದ ನಿನ್ನ ಅಗಲಿಕೆ ಹೇಗೆ

ಕರಗಿ ಓಡುತ್ತಿರುವ ಸಂವತ್ಸರದ ಸುಖದ

ಕೊಡುಗೆಯಾಗಿದೆ ಈಗ ! ಎಷ್ಟು ಜಡಗಟ್ಟಿದ್ದೆ,

ಎಂಥ ಕತ್ತಲೆ ಕಾಲ ಕಂಡೆ ! ಮುದಿ ಫಾಲ್ಗುಣದ

ಬರಿತನವೆ ಎಲ್ಲೆಲ್ಲೂ. ಕಳೆದ ಸಲ ನೀನಿರದ

ಚೈತ್ರ-ಕಾರ್ತಿಕ ಅವಧಿ ಮಧುವಸಂತನ ಸಿರಿಯ

ತನ್ನ ಒಳಗಡೆ ಹೊತ್ತು ಫಲಿಸಿತ್ತು ಸಮೃದ್ಧ,

ಹೋಲಿತ್ತು ವಿಧವೆಮೈ ತಾಳಿರುವ ಸಿರಿಬಸಿರ.

ಅಷ್ಟು ಸಮೃದ್ಧವಿದ್ದೂ ತಂದೆಯೇ ಇರದ ಮಗು

ಎನುವಂತೆ ಮಧುಮಾಸ. ಕಾಯುವುವು ನಿನಗಾಗಿ

ಮಧುಮಾಸದೆಲ್ಲ ಸವಿ ; ನೀನೆ ಇಲ್ಲದೆ ಇರಲು

ಹಕ್ಕಿಗಳು ಕೂಡ ಹಾಡುವುದಿಲ್ಲ ದನಿ ಬೀಗಿ.

ಹಾಡಿದರು ಕೂಡ ಬರಿಸಪ್ಪೆ ಹಕ್ಕಿಯ ಕೊರಳು,

ಎಲೆಯ ಮುಖದಲಿ ಬರುವ ಶಿಶಿರ ಋತುವಿನ ನೆರಳು.