ಚಿನ್ನದ ಹಕ್ಕಿ (ಏಟ್ಸ್ ಕವಿಯ ಕವನಗಳು).

೧.ಮೆಲ್ಲಗಡಿಯಿತು ಒಲವೆ.

ಬೆಳ್ಳಿ ಬಂಗಾರ ಕಿರಣಗಳಲ್ಲಿ ಹೆಣೆದ

ಸ್ವರ್ಗದ ಕಸೂತಿವಸ್ತ್ರ ನನ್ನಲ್ಲಿದ್ದಿದ್ದರೆ,

ನಡುಹಗಲು ಕಾರಿರುಳು ಸಂಜೆ ಬೆಳಕುಗಳ

ಬಿಳಿ ನೀಲಿ ಮಬ್ಬು ಪತ್ತಲಗಳಿದ್ದಿದ್ದರೆ,

ಹಾಸಿಬಿಡುತ್ತಿದ್ದೆ ನಿನ್ನಡಿಗೆ ಅವನ್ನೆಲ್ಲ;

ನಾ ಬಡವ, ಬರಿ ಕನಸು ಬಳಿಯಿರುವುದೆಲ್ಲ;

ಕನಸುಗಳನೇ ಹಾಸಿ ಬಿಡುವೆ ಕಾಲಡಿಗೆ.

ಮೆಲ್ಲಗಡಿಯಿತು ನೀನು ನಡೆವಾಗ ಒಲವೆ,

ನನ್ನ ಕನಸಿನ ಮೇಲೆಯೇ ನಡೆಯುತಿರುವೆ.

೨.ತನ್ನ ಇನಿಯಳನ್ನು ಹಳಿದವರ ಬಗ್ಗೆ.

ಕಣ್ಣನ್ನರೆ ಮುಚ್ಚಿಕೊ, ಹಾಯಾಗಿ ಸಡಿಲಿಸಿಕೊ ತಲೆಗೂದಲನ್ನು,

ಹಿರಿಜೀವಗಳ, ಅವರ ಹೆಮ್ಮೆಗಳ ಕುರಿತು ಕನಸು ಕಾಣು

ಅಲ್ಲಸಲ್ಲದ್ದೆಲ್ಲ ಆಡಿದ್ದಾರೆ ಜನ ಎಲ್ಲ ಕಡೆ ನಿನ್ನನ್ನು ಹಳಿದು,

ಆದರೀ ಗೀತವನು ಹಿರಿಜೀವಗಳ ಜೊತೆ, ಅವರ ಹೆಮ್ಮೆಗಳ ಜೊತೆ ಇಟ್ಟು ತೂಗು;

ಒಂದೇ ಉಸಿರಿನಲ್ಲಿ ಹೆಣೆದು ತಂದಿದ್ದೇನೆ ಈ ಗೀತವನ್ನು ನಿನಗೆಂದು,

ಆಡಿಕೊಂಡವರ ಮೊಮ್ಮಕ್ಕಳೇ ಹೇಳುವರು ಅಜ್ಜಂದಿರಾಡಿದ್ದು ಸುಳ್ಳು ಎಂದು.

೩.ನೀ ಮುದುಕಿಯಾದಾಗ.

ನೀ ಮುದುಕಿಯಾಗಿ ಕೂದಲು ನರೆತು ಕಣ್ಣಲ್ಲಿ ನಿದ್ದೆ ತುಂಬಿರಲು,

ಬೆಂಕಿಗೂಡಿನ ಬದಿಗೆ ಕುಳಿತು ಈ ಪುಸ್ತಕವ ಕೈಗೆತ್ತಿಕೊ.

ಓದು ನಿಧಾನವಾಗಿ, ಪ್ರಾಯದ ದಿನಗಳಲ್ಲಿ ನಿನ್ನ ಕಣ್ಣಲ್ಲಿ

ಹೊಮ್ಮುತ್ತಿದ್ದ ಮಧುರ ನೋಟ, ದಟ್ಟನೆ ನೆರಳ ಸ್ಮರಿಸು ಮನದಲ್ಲಿ.

ಪ್ರೀತಿಸಿದ್ದೆಷ್ಟು ಜನ ನಿನ್ನ ಹರ್ಷೋಲ್ಲಾಸಭರಿತ ಗಳಿಗೆಗಳನ್ನ?

ನಿಜದ ಪ್ರೀತಿಯೊ ಸುಳ್ಳೊ, ಪ್ರೀತಿಸಿದ್ದರು ಅವರು ನಿನ್ನ ಚೆಲುವನ್ನ.

ಪ್ರೀತಿಸಿದ್ದೊಬ್ಬನೇ ನಿನ್ನಲ್ಲಿ ಹುದುಗಿದ್ದ ಯಾತ್ರಿಕ ಪವಿತ್ರಾತ್ಮವನ್ನ,

ಪ್ರೀತಿಸಿದ ಹಾಗೆಯೇ, ಬದಲುತಿದ್ದ ನಿನ್ನ ಮುಖದ ದುಗುಡಗಳನ್ನ.

ಜಗಜಗಿಸಿ ಹೊಳೆವ ಉರಿ ಸರಳುಗಳ ಬಳಿ ಕೂತು ಮುಖ ಬಾಗಿಸಿ,

ಉಸಿರಿಕೋ ನಿನ್ನೊಳಗೆ ನೀನೆ ವ್ಯಥೆದನಿಯಲ್ಲಿ, ಹೇಗೆ ಪ್ರೀತಿ

ಓಡಿಹೋಯಿತು ಎಂದು ದೂರದಲ್ಲಿರುವ ಗಿರಿಶಿಖರವೇರಿ

ಮರೆಸಿಕೊಂಡಿತು ತನ್ನ ಮುಖವ ನಕ್ಷತ್ರಗಳ ಮಧ್ಯೆ ತೂರಿ.