ಬೇಂದ್ರೆ ಕಾವ್ಯದಲ್ಲಿ ಪದಸಂಧಾನ (concordance) (‘ಗರಿ’ ಸಂಕಲನ) - ಸುನಾಥ

ಹೆಚ್ಚಿನ ಓದಿಗೆ: http://sallaap.blogspot.com/2010/10/concordance_7563.html

ಪಾಶ್ಚಾತ್ಯ ಸಾಹಿತ್ಯದ ಅಧ್ಯಯನಕಾರರು concordance ಎನ್ನುವ ಒಂದು ಭಾಷಾಸಾಧನವನ್ನು ಬಳಸುತ್ತಾರೆ. ಓರ್ವ ಲೇಖಕನು ತನ್ನ ಸಾಹಿತ್ಯದಲ್ಲಿ ಬಳಸಿದ ಪದಗಳ ಅಂಕಿ ಸಂಖ್ಯೆಗಳನ್ನು ಆಧರಿಸಿ ಲೇಖಕನ ಅಂತರಂಗವನ್ನು ಅಭ್ಯಸಿಸುವ ಯತ್ನವಿದು. ಸಾಹಿತಿಯ ಶೈಲಿಯನ್ನು ಕಟ್ಟಡದ ವಾಸ್ತುಶಿಲ್ಪ ಎಂದು ಕರೆಯಬಹುದಾದರೆ, concordanceಅನ್ನು ಕಟ್ಟಡಕ್ಕೆ ಬಳಸಲಾದ ಸಾಮಗ್ರಿ ಎಂದು ಕರೆಯಬಹುದು. ಶೈಲಿಯು ಲೇಖಕನ ಸಾರ್ವಜನಿಕ ಮುಖವಾದರೆ, concordance ಆತನ ಅಂತರಂಗದ ಮುಖ ಎನ್ನಬಹುದು.

ಪದಸಂಧಾನ:

Concordance ಅನ್ನುವ ಪದಕ್ಕೆ ಕನ್ನಡದಲ್ಲಿ ಸದ್ಯಕ್ಕೆ ಯಾವುದೇ ಬದಲು ಪದವಿಲ್ಲ. ಇದು ಪದಗಳ ಬಳಕೆಯನ್ನು ಹಾಗು ವಿಶ್ಲೇಷಣೆಯನ್ನು ಅವಲಂಬಿಸಿರುವ ಕಾರಣದಿಂದ ಪದಶ್ಲೇಷಣೆ, ಪದಯೋಜನೆ, ಪದವಣಿಕೆ, ಪದಸಂಧಾನ ಇತ್ಯಾದಿ ಪದಗಳೆಲ್ಲ ನನ್ನ ಆಲೋಚನೆಯಲ್ಲಿ ಸುಳಿದು ಹೋದವು. ಆಬಳಿಕ ‘ಸಂಧಾನ’ ಪದವು ಓರ್ವ ವ್ಯಕ್ತಿ ಹಾಗು ಆತನು ಬಳಸಬಯಸುವ ಪದದ ನಡುವಿನ ಅನುಸಂಧಾನವನ್ನು ಸೂಚಿಸುವ ಸಂಕೇತವೆಂದುಕೊಂಡು concordance ಪದಕ್ಕೆ ‘ಪದಸಂಧಾನ’ ಎನ್ನುವ ಪದವನ್ನು ಉಪಯೋಗಿಸುವದೇ ಉಚಿತವೆಂದು ಭಾವಿಸಿ ಇಲ್ಲಿ ‘ಪದಸಂಧಾನ’ ಎನ್ನುವ ಪದವನ್ನು ಬಳಸಿದ್ದೇನೆ.

ಕನ್ನಡದಲ್ಲಿ ಪದಸಂಧಾನದ ಪ್ರಯತ್ನವೊಂದು ಈವರೆಗೂ ನಡೆದಂತೆ ಕಾಣುವದಿಲ್ಲ. ಬೇಂದ್ರೆಯವರ ಕಾವ್ಯವನ್ನು ಈ ಪದಸಂಧಾನಕ್ಕೆ ಅಳವಡಿಸಲು ನಾನು ಕೆಲವು ತಿಂಗಳುಗಳ ಹಿಂದೆ ಇಂತಹ ಪ್ರಯೋಗವನ್ನು ಕೈಗೆತ್ತಿಕೊಂಡೆ. ಪ್ರಯತ್ನವನ್ನು ಪ್ರಾರಂಭಿಸಿದ ಬಳಿಕ, ಇದು ಹಿಮಾಲಯವನ್ನು ಹತ್ತುವಂತಹ ಸಾಹಸವೆಂದು ಅರ್ಥವಾಯಿತು. ಏಕೆಂದರೆ ಬೇಂದ್ರೆಯವರು ೧೫೦೦ಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದಾರೆ. ಅವೆಲ್ಲವನ್ನೂ ಪುನಃ ಬರೆದು, ಪದಗಳನ್ನು ವಿಂಗಡಿಸಿ ಮಾಡಬೇಕಾದ ಕಾರ್ಯಕ್ಕೆ ಕಠಿಣ ಶ್ರಮ ಹಾಗು ದೀರ್ಘ ಕಾಲ ಬೇಕಾಗುತ್ತವೆ. ಆದುದರಿಂದ ಅವರ ಮೊದಲ ಕಾವ್ಯಸಂಕಲನಗಳಲ್ಲಿ ಒಂದಾದ ‘ಗರಿ’ ಸಂಕಲನವನ್ನು ಮಾತ್ರ ಆರಿಸಿಕೊಂಡು ಮುನ್ನಡೆದೆ. ಈ ಸಂಕಲನದಲ್ಲಿ ೫೫ ಕವನಗಳಿವೆ. ಅವೆಲ್ಲವನ್ನೂ ಪುನಃ ಬರೆದು, ಪದಗಳನ್ನು ವಿಂಗಡಿಸಲು ನನಗೆ ಕೆಲವು ತಿಂಗಳುಗಳೇ ಬೇಕಾದವು. ಗಣಕಯಂತ್ರದ ಸಹಾಯದಿಂದ ಅವುಗಳನ್ನು ಅಕಾರಾದಿ ಕ್ರಮದಲ್ಲಿ ಅಳವಡಿಸಲು ಕಷ್ಟವಾಗಲಿಲ್ಲ. ಆ ಬಳಿಕ ಆ ಪದಗಳ ಲಕ್ಷಣವನ್ನು ಗುರುತಿಸಲು ಪ್ರಯತ್ನಿಸಿದೆ. ನನ್ನ ಪ್ರಯತ್ನದ ಫಲವನ್ನು ಪ್ರಾಜ್ಞರಾದ ನಿಮ್ಮ ಎದುರಿಗೆ ಇಡುತ್ತಿದ್ದೇನೆ.

‘ಗರಿ’ ಕವನಸಂಕಲನದಲ್ಲಿಯ ೫೫ ಕವನಗಳನ್ನು ಈ ರೀತಿಯಾಗಿ ವರ್ಗೀಕರಿಸಬಹುದು:

ಈ ವರ್ಗೀಕರಣದಲ್ಲಿ ದೋಷಗಳು ಇರಬಹುದು. ಇದ್ದರೆ, ದಯವಿಟ್ಟು ಮನ್ನಿಸಿರಿ. ಬೇಂದ್ರೆಯವರ ಕವನಗಳನ್ನು ಎಂಟು ವಿಭಾಗಗಳಲ್ಲಿ ವರ್ಗೀಕರಿಸಿದರೂ ಸಹ, ಈ ಎಲ್ಲ ಕವನಗಳಲ್ಲಿ ಅವರು ಯಾವ ಪದಗಳ ಬಳಕೆಯನ್ನು ಎಷ್ಟು ಮಾಡಿದ್ದಾರೆ ಎನ್ನುವದೇ ಈ ‘ಪದಸಂಧಾನ’ದ ಸ್ವಾರಸ್ಯವಾಗಿದೆ. ಪದಸಂಧಾನದ ಎಲ್ಲ ಅಂಕಿ ಅಂಶಗಳನ್ನು ಇಲ್ಲಿ ಕೊಡುತ್ತಿದ್ದೇನೆ.

‘ಗರಿ’ ಕವನಸಂಕಲನ ಪ್ರಕಟವಾಗಿದ್ದು ೧೯೩೨ರಲ್ಲಿ. ಅದು ಸ್ವಾತಂತ್ರ್ಯಹೋರಾಟದ ಹಾಗು ಆದರ್ಶಸ್ಫೂರ್ತಿಯ ಕಾಲ. ಆದುದರಿಂದಲೇ, ಈ ಸಂಕಲನದಲ್ಲಿ ೧೫ ಕವನಗಳು ಸಮಾಜ, ದೇಶ, ದೇಶಪ್ರೇಮ ಹಾಗು ಕನ್ನಡ ನಾಡು-ನುಡಿಯ ಬಗೆಗೆ ಇವೆ ; ೧೧ ಕವನಗಳು ವೈಯಕ್ತಿಕ ಆದರ್ಶದ ಕವನಗಳಾಗಿವೆ; ನಿಸರ್ಗ ಕವನಗಳ ಸಂಖ್ಯೆ ಕೇವಲ ೫.

ಇನ್ನು ಪದಸಂಧಾನದ ಅಂಕಿ ಅಂಶಗಳನ್ನು ವಿಶ್ಲೇಷಿಸೋಣ:

ಬೇಂದ್ರೆಯವರ ಕವನಗಳಲ್ಲಿ ಅತ್ಯಧಿಕವಾಗಿ ಬಳಕೆಯಾದ ಪದಗಳು ಆತ್ಮೀಯವಾಚಕ ಪದಗಳು (೨೯೩), (ಉದಾ: ನಾನು, ನೀನು, ಆನು ಇತ್ಯಾದಿ). ಇದು ಅವರ ಕವನಗಳಲ್ಲಿ ಕಂಡು ಬರುವ motif ಆಗಿದೆ. ಈ ಆತ್ಮೀಯವಾಚಕ ಪದಗಳು ಅವರ ಅಂತರಂಗಕ್ಕೆ ಹಿಡಿದ ಕನ್ನಡಿಯಾಗಿವೆ.

ಬೇಂದ್ರೆಯವರು ತಮ್ಮ ಓದುಗರೊಂದಿಗೆ ಯಾವಾಗಲೂ interactionಅನ್ನು ಬಯಸುತ್ತಾರೆ. ಅವರ ಕಾವ್ಯವಿರುವದು ಸಹೃದಯ ರಸಿಕರಿಗಾಗಿ. ಇದು ಬೇಂದ್ರೆ ಕಾವ್ಯದ ಮಹತ್ವದ ಲಕ್ಷಣ. ಈ ಕಾವ್ಯ-ನೀತಿಯು ಅವರ ಕವನವೊಂದರಲ್ಲಿ ಸ್ಪಷ್ಟವಾಗಿಯೇ ಕಾಣುತ್ತದೆ:

ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ

ನೀಡುವೆನು ರಸಿಕ ನಿನಗೆ;

ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ

ಆ ಸವಿಯ ಹಣಿಸು ನನಗೆ.”

ಬೇಂದ್ರೆಯವರ ಅನೇಕ ಕವನಗಳು ಹಳ್ಳಿಯ ಕವಿಯೊಬ್ಬ ಮರದಕಟ್ಟೆಯ ಮೇಲೆ ಕುಳಿತುಕೊಂಡು ಸುತ್ತಲೂ ನೆರೆದ ಜನರೆದುರಿಗೆ ಕೈಯೆತ್ತಿ ಹಾಡುತ್ತಿರುವ ನೋಟವನ್ನು ನೆನಪಿಸುವಂತಿವೆ. ಬೇಂದ್ರೆಯವರ ಪಾಂಡಿತ್ಯವು ಅಗಾಧವಾಗಿದ್ದರೂ ಸಹ ಅವರು ಒಂದರ್ಥದಲ್ಲಿ ಜಾನಪದ ಕವಿಗಳು. ‘ಗರಿ’ ಕವನಸಂಕಲನದಲ್ಲಿ ಬಳಸಲಾದ ಒಟ್ಟು ೭೧೫೦ ಪದಗಳ ಪೈಕಿ, ೪೯೭ ಅಂದರೆ ಶೇಕಡಾ ೭ರಷ್ಟು ಪದಗಳು ಮಾತ್ರ ಸಂಸ್ಕೃತ ಪದಗಳು. ಹಾಗಿರಲು ಬೇಂದ್ರೆಯವರನ್ನು ‘ಅಚ್ಚಕನ್ನಡ ಕವಿ’ ಎಂದು ಕರೆಯುವದರಲ್ಲಿ ಏನೂ ತಪ್ಪಿಲ್ಲ.

(ಇಲ್ಲಿ ಒಂದು ವಿವರಣೆಯನ್ನು ಕೊಡುವದು ಅವಶ್ಯವಾಗಿದೆ. ಕನ್ನಡಿಗರು ಸಾಮಾನ್ಯವಾಗಿ ಬಳಸುವ ಸಂಸ್ಕೃತ ಪದಗಳನ್ನು ಕನ್ನಡ ಪದಗಳೆಂದೇ ಗ್ರಹಿಸಲಾಗಿದೆ. ಉದಾಹರಣೆಗೆ ಕನ್ನಡದಲ್ಲಿ ‘ಸಿದ್ಧ’ ಹಾಗು ‘ಶಿಖರ’ ಎನ್ನುವ ಸಂಸ್ಕೃತ ಪದಗಳನ್ನು ಕನ್ನಡ ಪದಗಳಂತೆಯೇ ಬಳಸಲಾಗುತ್ತಿದೆ. ಆದರೆ ‘ಸಿದ್ಧಶಿಖರ’ ಎನ್ನುವ ಪದವನ್ನು ಸಾಮಾನ್ಯವಾಗಿ ಬಳಸುವದಿಲ್ಲ. ಆದುದರಿಂದ, ‘ಸಿದ್ಧ’ ಹಾಗು ‘ಶಿಖರ’ ಪದಗಳನ್ನು ಕನ್ನಡ ಪದಗಳೆಂದು ಗ್ರಹಿಸಲಾದರೂ ಸಹ ‘ಸಿದ್ಧಶಿಖರ’ವನ್ನು ಸಂಸ್ಕೃತ ಪದವೆಂದು ಗ್ರಹಿಸಲಾಗಿದೆ. ಇನ್ನು ಬೇಂದ್ರೆಯವರು ಕನ್ನಡದಲ್ಲಿ ಅನೇಕ ಜೋಡು ಪದಗಳನ್ನು ಸೃಷ್ಟಿಸಿದ್ದು ಅವುಗಳನ್ನು ಮುಂದೆ ಕೊಡಲಾಗಿದೆ.)

ಆತ್ಮೀಯವಾಚಕ ಪದಗಳ ನಂತರ, ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪದಗಳು ದರ್ಶನಸೂಚಕ ಪದಗಳಾಗಿವೆ. ಇವುಗಳ ಸಂಖ್ಯೆ ೧೪೩ . ಬೇಂದ್ರೆಯವರು ಕನ್ನಡದ ಕನಸುಗಾರರಾಗಿದ್ದರು. ಅಲ್ಲದೆ ಅವರು ಆಧ್ಯಾತ್ಮಿಕ ಒಲವುಳ್ಳವರೂ ಆಗಿದ್ದರು. ಆದುದರಿಂದ ‘ಕಾಣ್ಕೆ’, ‘ನೋಟ’ ಮೊದಲಾದ ಪದಗಳು ಎರಡನೆಯ ಸ್ಥಾನ ಪಡೆದಿದ್ದರಲ್ಲಿ ಆಶ್ಚರ್ಯವಿಲ್ಲ. ಇನ್ನು ೧೩೭ ಪದಗಳುಳ್ಳ ಅಸ್ತಿತ್ವಸೂಚಕ ಪದಗಳು ೩ನೆಯ ಸ್ಥಾನದಲ್ಲಿ ಇವೆ. ಇದೂ ಸಹ ತಾತ್ವಿಕ ಒಲವಿನಿಂದಲೇ ಆದದ್ದು. ಮಹರ್ಷಿ ಅರವಿಂದರು ತಮ್ಮ ಕೃತಿಯೊಂದರಲ್ಲಿ ‘To be or to become is the whole endeavor of the Nature’ ಎಂದು ಹೇಳಿದ್ದಾರೆ. ಬೇಂದ್ರೆಯವರು ಅರವಿಂದರ ಭಕ್ತರು. ತತ್ವಶಾಸ್ತ್ರವನ್ನು ಅರೆದು ಕುಡಿದವರು. ಆದುದರಿಂದ ಅಸ್ತಿತ್ವಸೂಚಕವಾದ ಪದಗಳು ಬೇಂದ್ರೆಯವರ ಕವನಗಳಲ್ಲಿ ಮೂರನೆಯ ಸ್ಥಾನದಲ್ಲಿವೆ.

ನಾಲ್ಕನೆಯ ಸ್ಥಾನದಲ್ಲಿರುವ ಕ್ರಿಯಾತ್ಮಕ ಪದಗಳನ್ನು ಗಮನಿಸಿರಿ. ಇವು ಸಾಮಾನ್ಯವಾಗಿ ‘ಮಾಡು, ಆಡು, ಹಾಡು’ ಈ ತರಹದ ಪದಗಳಾಗಿವೆ. ಈ ಜಗದಲ್ಲಿ ನಡೆಯುತ್ತಿರುವದೆಲ್ಲವೂ ಭಗವಂತನ ಲೀಲೆ ಅಂದರೆ ಆಟ ಎನ್ನುವ ನಂಬಿಗೆಯ ಬೇಂದ್ರೆಯವರು ಮಾಡು, ಆಡು, ಹಾಡು ಮೊದಲಾದ ಕ್ರಿಯೆಗಳನ್ನು ಸೂಚಿಸುವ ೧೧೨ ಪದಗಳನ್ನು ಬಳಸಿದ್ದಾರೆ.

ಐದನೆಯ ಸ್ಥಾನದಲ್ಲಿ ಭಾವನಾತ್ಮಕ ಪದಗಳು (೧೧೦) ಬರುತ್ತವೆ. ಉದಾಹರಣೆಗೆ ಮನಸ್ಸು, ಅಂತರಂಗ ಇತ್ಯಾದಿ. ಬೇಂದ್ರೆಯವರ ಸಂಬಂಧಗಳು ಯಾವಾಗಲೂ ಭಾವನಾತ್ಮಕ ಸಂಬಂಧಗಳು. ನಾಡು ಅವರ ಪಾಲಿಗೆ ನಾಡತಾಯಿ; ಓದುಗ ಅವರ ಪಾಲಿಗೆ ಅಂತರಂಗದ ಗೆಳೆಯ. ಪ್ರೀತಿ ಹಾಗು ಕಲಹ ಇವು ಮಾನಸಸರೋವರದಲ್ಲಿ ನಿತ್ಯವೂ ಏಳುವ ತೆರೆಗಳು. ಇದರ ಪರಿಣಾಮವೇ ಅವರ ಕವನಗಳಲ್ಲಿ ಮನೋಸೂಚಕ ಪದಗಳ ಆಧಿಕ್ಯ.

ಇದೇ ರೀತಿ ಉಳಿದ ಪದಗಳನ್ನೂ ಸಹ ವಿಶ್ಲೇಷಿಸಬಹುದು.

ಬೇಂದ್ರೆಯವರ ಪದಸಂಪತ್ತು ಅಪಾರವಾದದ್ದು. ಈ ಕೆಳಗಿನ ಕೋಷ್ಟಕದಿಂದ ಅದು ಸ್ಪಷ್ಟವಾಗುತ್ತದೆ:

ಬೇಂದ್ರೆಯವರು ಇಲ್ಲಿ ಬಳಸಿದ ಒಟ್ಟು ೭೧೫೦ ಪದಗಳ ಪೈಕಿ ೨೧೨೮ ಅಂದರೆ ಶೇಕಡಾ ೩೦ರಷ್ಟು ಪದಗಳು ವಿಭಿನ್ನ ಪದಗಳು ಹಾಗು ೧೧೮೦ ಪದಗಳನ್ನು (ಅಜಮಾಸು ೧೬.೫%) ಒಂದೇ ಸಲ ಬಳಸಿದ್ದಾರೆ. ಅತ್ಯಧಿಕವಾಗಿ ಬಳಸಿದ ಪದವೂ ಸಹ ೧೩೨ ಬಾರಿ, ಅಂದರೆ ಶೇಕಡಾ ೧.೮೫ ಸಲ ಮಾತ್ರ. ಈ ಅಂಕಿ ಅಂಶಗಳು ಬೇಂದ್ರೆಯವರ ಅಪಾರ ಪದಸಂಪತ್ತಿಗೆ ಸಾಕ್ಷಿಯಾಗಿವೆ ಎಂದು ಹೇಳಬಹುದು.

ಬೇಂದ್ರೆಯವರ ಪದಭಾಂಡಾರದಲ್ಲಿ ಇರುವ ದೇಶಿ ಹಾಗು ಪ್ರಾದೇಶಿಕ ಪದಗಳೂ ಸಹ ಎಣಿಕೆಗೆ ಮಿಕ್ಕುವಂತಹವು. ಉದಾಹರಣೆಗೆ ‘ಗರಿ’ ಸಂಕಲನದ ಎರಡು ಕವನಗಳನ್ನು ಪರೀಕ್ಷಿಸಬಹುದು:

(೧) ‘ಚಳಿಯಾಕೆ’ ಕವನದಲ್ಲಿ ಬಳಸಲಾದ ಆಭರಣಸೂಚಕ ಪದಗಳು:

(೧) ಓಲೆಕೊಪ್ಪ (=ವಾಲೆ=ಕರ್ಣಾಭರಣ)

(೨) ಚಳತುಂಬ (=One kind of ear-drop)

(೩) ಹೊನ್ನ ಸೇವಂತಿಗೆ (=ಬಂಗಾರದ ಕೇಶಾಭರಣ)

(೪) ಹೆರಳು ಬಂಗಾರ (= ಜಡೆಗೆ ಹಾಕಿಕೊಳ್ಳುವ ಚಿನ್ನದ ಆಭರಣ)

(ಸ್ವತಃ ಬೇಂದ್ರೆಯವರು ಪತ್ನಿಗೆ ಒಂದೂ ಆಭರಣ ಕೊಡಿಸದಿದ್ದರೂ, ಕವನಕನ್ನೆ ‘ಚಳಿಯಾಕೆ’ಗೆ ಇಷ್ಟೆಲ್ಲ ಆಭರಣ ತೊಡಿಸಿದ್ದಾರೆ!)

(೨) ‘ಪಾತರಗಿತ್ತಿ ಪಕ್ಕ’ ಕವನದಲ್ಲಿ ಬರುವ ಸಸ್ಯಗಳ ಹೆಸರುಗಳು:

ಇಲ್ಲಿ ಮತ್ತೊಂದು ಸ್ವಾರಸ್ಯವಿದೆ. ‘ವಿಷ್ಣುಗಂಟಿ’ ಎನ್ನುವ ಸಸ್ಯದ ನಿಜವಾದ ಹೆಸರು ‘ವಿಷ್ಣುಕಾಂತಿ’. ಹಾಗು ರುದ್ರಗಂಟಿ ಸಸ್ಯದ ನಿಜವಾದ ಹೆಸರು ದಾಸವಾಳ. ಬೇಂದ್ರೆಯವರು ಈ ಹೆಸರುಗಳನ್ನು ಬದಲಾಯಿಸಿಕೊಳ್ಳುವ ಉದ್ದೇಶವು ಪ್ರಾಸಾನುಕೂಲತೆಯಲ್ಲ. ಇದಕ್ಕೆ ಬೇರೊಂದು ಕಾರಣವಿದೆ. ಯೋಗಶಾಸ್ತ್ರದ ಮೇರೆಗೆ ಅನಾಹತ ಚಕ್ರದ ಮೇಲೆ ಇರುವದು ವಿಷ್ಣುಗ್ರಂಥಿ; ಆಜ್ಞಾಚಕ್ರದ ಮೇಲಿರುವದು ರುದ್ರಗ್ರಂಥಿ. ಕುಂಡಲಿನಿ ದೇವಿಯು ಈ ಗ್ರಂಥಿಗಳನ್ನು ಭೇದಿಸಿ, ಸಹಸ್ರಾರ ಚಕ್ರಕ್ಕೆ ಮುನ್ನಡೆಯುವಳು. ಗ್ರಂಥಿ ಎನ್ನುವ ಸಂಸ್ಕೃತ ಪದವು ಕನ್ನಡದಲ್ಲಿ ‘ಗಂಟಿ(=ಕಂಟಿ)’ ಎಂದಾಗುತ್ತದೆ. ಈ ರೀತಿಯಲ್ಲಿ, ಪಾತರಗಿತ್ತಿಯ ಬಳಸು ಹಾರಾಟವನ್ನು ಬೆನ್ನು ಹತ್ತಿದ ಬೇಂದ್ರೆಯವರು ಕುಂಡಲಿನಿಯ ಪಥವನ್ನು ಸೂಚಿಸುತ್ತಿದ್ದಾರೆ! ದಾಸವಾಳ ಸಸ್ಯಕ್ಕೆ ರುದ್ರಗಂಟಿ ಎಂದು ಹೇಳುವ ಮತ್ತೊಂದು ಕಾರಣವೆಂದರೆ, (ಕೆಂಪು) ದಾಸವಾಳವು ರುದ್ರಪುತ್ರ ಗಣೇಶನಿಗೆ ಪ್ರಿಯವಾದ ಪುಷ್ಪ!

ಇನ್ನು ಬೇಂದ್ರೆಯವರು ಟಂಕಿಸಿದ ಅಚ್ಚಕನ್ನಡ ಜೋಡುಪದಗಳನ್ನಷ್ಟು ನೋಡಬೇಕು. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಕೊಡಲಾಗಿದೆ ಹಾಗು ಸಂಸ್ಕೃತದ ಜೋಡುಪದಗಳಲ್ಲಿ ಒಂದೆರಡನ್ನು ಮಾತ್ರ ಇಲ್ಲಿ ನೀಡಲಾಗಿದೆ:

(೧) ಅರೆಬೆದರು

(೨) ಇಡುಗಂಗೆ

(೩) ಇದಿರುಗಣ್ಣು

(೪) ಇನಿಹನಿ

(೫) ಇಳಿಗೂದಲು

(೬) ಉದರದಂಗಳ

(೭) ಎದೆಮುಗಳು

(೮) ಎದೆಯಕಟುಕ

(೯) ಎಲ್ಲೆಕಟ್ಟು

(೧೦) ಒಳಹದುಳ

(೧೧) ಕಡಲಟ್ಟ

(೧೨) ಕಡೆಕೂಳು

(೧೩) ಕಡೆಗೋಲು (=oar)

(೧೪) ಕಣ್ಣನಂಜು

(೧೫) ಕತ್ತಲೆಕಾಳು

(೧೬) ಕನಿಮನೆ

(೧೭) ಕರುಳಮಲ್ಲಿಗೆ

(೧೮) ಕಾಲತೊಡರು

(೧೯) ಕೊನೆಬಿಕ್ಕು

(೨೦) ಗಂಡುಗಣ್ಣು

(೨೧) ಗುಬ್ಬಿಬೆಳಸಿ

(೨೨) ಗುಬ್ಬಿಮನೆ

(೨೩) ಗುಬ್ಬಿಮಾನವ

(೨೪) ಗೊನೆಮಿಂಚು

(೨೫) ಜನ್ನಗುದುರೆ

(೨೬) ಜೊನ್ನಮಗ್ಗ

(೨೭) ತನಿಗುಸುರು

(೨೮) ತಪ್ಪಡಿ (=ತಪ್ಪು ಅಡಿ)

(೨೯) ತಿರುಹಾಡು

(೩೦) ತುಟಿಹಾಲು

(೩೧) ತೊತ್ತುಳಿಗೊಳ್ಳು

(೩೨) ದೊರೆವಾಡು

(೩೩) ಧೂಳಿಸ್ನಾನ (=ಪರಾಗಸ್ಪರ್ಶ)

(೩೪) ನಗಿಹೂ

(೩೫) ನಗೀನವಿಲು

(೩೬) ನನಿಕೊನೆ

(೩೭) ನನ್ನಿಕಾವ

(೩೮) ನನ್ನಿವಾತು

(೩೯) ನಿಡುದುದಿ

(೪೦) ನೀರಮಣಿ

(೪೧) ನೆತ್ತರಹೇಡಿ

(೪೨) ನೆತ್ತರಹೂವು

(೪೩) ಪಟ್ಟವಣೆ

(೪೪) ಪಡಿನೆಳಲು

(೪೫) ಪಣ್ಯಕಾವ್ಯ

(೪೬) ಪರಪ್ರಾಣ

(೪೭) ಪಿರಿಸೆರೆ

(೪೮) ಪೆರಗನ್ನಡಿ

(೪೯) ಬಣಗುಮಾತು

(೫೦) ಬಾನಬಟ್ಟೆ

(೫೧) ಬಾಳ್ವಣ್ಣು

(೫೨) ಬಿಚ್ಚುಜೀವ

(೫೩) ಬೀರಕಡಗ

(೫೪) ಬೀರಬೊಬ್ಬೆ

(೫೫) ಬೆಂಡುಗೊಳ್ಳು

(೫೬) ಬೆರಗುಗತೆ

(೫೭) ಬೆವರಬಳ್ಳಿ

(೫೮) ಬೆಳಕಿನೊಡೆಯ

(೫೯) ಮಳ್ಳಗಾಳಿ

(೬೦) ಮಿಕ್ಕುಗಾಳು

(೬೧) ಮುಂಗಾವಲು

(೬೨) ಮುಂಗುರುಹು

(೬೩) ಮುಂಗೆಲಸ

(೬೪) ಮುಗಿಲಿನಂಗಳ

(೬೫) ಮೆಚ್ಚುಬೆರಳು

(೬೬) ಸವಿಕೂಟ

(೬೭) ಸಿರಿಮುಖ

(೬೮) ಸುಖದ ಹೂವು

(೬೯) ಸುಳಿಗಾಲ

(೭೦) ಸುಳ್ಳೆಣಕಿ

(೭೧) ಸೂಳೆಬೆಡಗು

(೭೨) ಹಾದಿಹುಡಿ

(೭೩) ಹಾಲಗಂಗೆ

(೭೪) ಹಿಂಜಾಪು

(೭೫) ಹುಡಿಯಣು

(೭೬) ಹುಲುಗಡಣ

(೭೭) ಹೂತುಟಿನೀರು

(೭೮) ಹೊಂಗೆಳತಿ

(೭೯) ಹೊರಮಿಂಚು

ಇವಲ್ಲದೆ ಬೇಂದ್ರೆಯವರು ಕೆಲವೊಂದು ಪದಗಳನ್ನು ಸ್ವತಃ ಟಂಕಿಸಿಕೊಂಡಿದ್ದಾರೆ ಅಥವಾ ರೂಪಾಂತರಿಸಿಕೊಂಡಿದ್ದಾರೆ. ಅವು ಯಾವುದೇ ಶಬ್ದಕೋಶದಲ್ಲಿ ಸಿಗಲಿಕ್ಕಿಲ್ಲ.

ಉದಾಹರಣೆ:

ಅಟಮಟಿಸು, ಉಗೆವಾಡ, ಕಟ್ಟಡಕ, ಕಾಳವ, ಚಲಮಲ ಇತ್ಯಾದಿ.

ಈ ಪದಗಳ ಅರ್ಥವನ್ನು ಸಾಂದರ್ಭಿಕವಾಗಿಯೇ ಮಾಡಿಕೊಳ್ಳಬೇಕಾಗುತ್ತದೆ.

ಕೆಲವೊಂದು ಪದಗಳು ಕಾಲಾಂತರದಲ್ಲಿ ಕನ್ನಡದಿಂದ ಕಣ್ಮರೆಯಾಗಿವೆ. ಆದರೆ ಬೇರೆ ಭಾಷೆಗಳಲ್ಲಿ ಈ ಪದಗಳ ರೂಪಾಂತರಗಳು ಬಳಕೆಯಲ್ಲಿವೆ. ಉದಾಹರಣಗೆ ‘ನರಬಲಿ’ ಕವನದಲ್ಲಿ ಬೇಂದ್ರೆಯವರು ‘ಕಕ್ಕಡ’ ಎನ್ನುವ ಕನ್ನಡ ಪದವನ್ನು ಬಳಸಿದ್ದಾರೆ. ಇದರ ಅರ್ಥ ಹಿಲಾಲು, ಮಶಾಲ , torch. ಈ ಪದವು ಮರಾಠಿಯಲ್ಲಿ ‘ಕಾಕಡಾ’ ಅಗಿ ಬಳಕೆಯಲ್ಲಿದೆ. ದೇವಾಲಯಗಳಲ್ಲಿ ಸೂರ್ಯೋದಯಪೂರ್ವದ ಆರತಿಗೆ ‘ಕಾಕಡಾರತಿ’ ಎನ್ನುತ್ತಾರೆ. ವಿದ್ಯುಚ್ಛಕ್ತಿ ಇಲ್ಲದ ಹಳೆಯ ದಿನಗಳಲ್ಲಿ ಕಕ್ಕಡವನ್ನು ಬಳಸಿ, ಭಕ್ತರು ಆರತಿಗಾಗಿ ಗುಡಿಗೆ ಬರುತ್ತಿದ್ದರು. ಆದುದರಿಂದ ‘ಕಾಕಡಾರತಿ’ ಎನ್ನುವ ಹೆಸರು. ಅದರಂತೆ ಹಳೆಯ ಕಾಲದ ಅಡುಗೆ ಸ್ಟೋವುಗಳಿಗೆ ಬಿಸಿ ಮಾಡಲು ಬಳಸುವ ಉಪಕರಣಕ್ಕೆ ‘ಕಾಕಡಾ’ ಎನ್ನುತ್ತಿದ್ದರು. ಈ ಮರಾಠಿ ಪದಕ್ಕೆ ಕನ್ನಡದ ‘ಕಕ್ಕಡ’ವೇ ಮೂಲವಾಗಿದೆ.

ಬೇಂದ್ರೆಯವರ ಬಳಸಿದ ಕೆಲವು ಪದಗಳು ಸಾಮಾನ್ಯ ಅರ್ಥದ ವಿರೋಧಾಭಾಸದಲ್ಲಿ ಬಳಕೆಯಾಗಿವೆ. ಉದಾಹರಣೆಗೆ ‘ಸುಖ’ ಎನ್ನುವ ಪದವನ್ನು ಪರೀಕ್ಷಿಸೋಣ. ಬೇಂದ್ರೆಯವರು ‘ಗರಿ’ ಕವನ ಸಂಕಲನದ ೭ ಕವನಗಳಲ್ಲಿ ಒಟ್ಟು ೧೦ ಸಲ ‘ಸುಖ’ ಎನ್ನುವ ಪದವನ್ನು ಬಳಸಿದ್ದಾರೆ. ಆದರೆ ಒಂದು ಸಲವೂ ಈ ಪದದ ಅರ್ಥವು ಸುಖವನ್ನು ಕೊಡುವದಿಲ್ಲ . ಈ ಕವನಗಳನ್ನು ಪರೀಕ್ಷಿಸೋಣ:

ಸುಖವು ಮೃಗಜಲ ಎನ್ನುವ ಅರ್ಥದಲ್ಲಿ ಈ ನಾಲ್ಕು ಕವನಗಳಲ್ಲಿ ಬಳಸಲಾಗಿದೆ:

(೧) ಕುಣಿಯೋಣು ಬಾರs ಕುಣಿಯೋಣು ಬಾ:

ಬಿಸಿ ದುಃಖದರಿವ್ಯಾಕ

ಹುಸಿ ಸುಖದ ಪರಿವ್ಯಾಕ

ಕುಣಿಯೋಣು ಬಾರs ಕುಣಿಯೋಣು ಬಾ.

(೨) ಹುದುಗಲಾರದ ದುಃಖ:

ಮುಗುಳುನಗೆಯರಳಿಸುತ ಕರಿಯಾಲಿ ಹೊರಳಿಸುತ

ಸುಳ್ಳು ಸುಖ ಮೆರೆಸಬಹುದೆ?

ಮಮತಾಜಳನು ಹುಗಿದು ತಾಜಮಹಲನು ಕಟ್ಟಿ

ನಿಜದುಃಖ ಮರೆಸಬಹುದೆ?

(೩) ನನ್ನ ಕಿನ್ನರಿ:

ಬಾಡಿದ ಮುಖದಿಂದ

ಹತ್ತಿದೆ ಸುಖದ್ಹಿಂದ

ಸಿಗದsನ ಸಿಗದsನ ಸಿಗದsನ

ಸಿಗು ಬದುಕಲ್ಲೆಂದು ಬಗೆದೇನ.

(೪) ನನ್ನ ಹಾಡು:

ಸುಖದ ಮಿಷವು,

ದುಃಖ ವಿಷವು

ಹಿಗ್ಗಿ ಪ್ರಾಣಪೂರಣಾ

ಆದರ್ಶದ ಕವನಗಳಲ್ಲಿ ಸುಖವು ಆದರ್ಶಕಾಲದಲ್ಲಿ ದೊರೆಯಬೇಕಾದ ವಸ್ತುವಾಗಿದೆ!

(೧) ಕೋಗಿಲೆ:

ವ್ಯೋಮಮಂಡಲ ಸುಖಧಾಮವಾಗುsವಂತೆ

ಕಾಮರತಿಯ ಮೀರಿ ಕೋಗಿಲೇ!

ಪ್ರೇಮಕವಿಯು ಕಂಡ ಸಾಮವೇದವ ನೀನು

ಕೂಗುವಿಯಾ ಹೇಳು ಕೋಗಿಲೇ!

(೨) ಕೀರ್ತಿ:

ತನ್ನ ಹಿಗ್ಗಿಗೆ ತೆರೆದ ಆ ಸುಖಸರೋವರದ

ನಗೆಯ ನೈದಿಲವೆ ನಂದನದ ಕಂಪು

(೩) ಕೀರ್ತಿ:

ಸುಖದ ಬಂಗಾರ ಜೀವನದ ಸಿಂಗಾರ

ಹೆಸರ ಕೀರ್ತಿಯು ಮಾತ್ರ ವಜ್ರಪಾತ

ಕೆಲವು ಕವನಗಳಲ್ಲಿ ವ್ಯಂಗ್ಯರೂಪವಾಗಿ ‘ಸುಖ’ ಬಂದಿದೆ. ಉದಾಹರಣೆ:

(೧)ಕೆಲಸವಿಲ್ಲದವರ ಹಾಡು:

ಬಾರೈ ಬಣ್ಣದ ಮಾತಿನ ಅಣ್ಣ!

ಸುಖಸಾಮ್ರಾಜ್ಯದ ಕನಸಿಗ ನೀನು.

ಅಟ್ಟ ಮುರಿಯುವೀ ಕುಣಿತವಿದೇನು?

ಈ ರೀತಿಯಾಗಿ ಬೇಂದ್ರೆಯವರ ಕವನಗಳಲ್ಲಿ ‘ಸುಖ’ ಪದದ ಮರ್ಮವು ಅದರ ಅರ್ಥಕ್ಕಿಂತ ಭಿನ್ನವಾಗಿದೆ!

ಒಟ್ಟಿನಲ್ಲಿ ಬೇಂದ್ರೆಯವರ ‘ಗರಿ’ ಕವನಸಂಕಲನದ ಪದಸಂಧಾನವನ್ನು ಪರೀಕ್ಷಿಸಿದಾಗ ಈ ಕೆಳಗಿನ ನಿರ್ಣಯಗಳಿಗೆ ತಲುಪಬಹುದು:

(೧) ಸಹೃದಯ ಓದುಗರೊಡನೆ ಆತ್ಮೀಯತೆ ಬೇಂದ್ರೆ-ಕಾವ್ಯದ ಮುಖ್ಯ ಲಕ್ಷಣ.

(೨) ವೈಯಕ್ತಿಕ ಆದರ್ಶ, ನಾಡು ಹಾಗು ನುಡಿಯ ಪ್ರೇಮ ಇವು ‘ಗರಿ’ ಸಂಕಲನದ ಕವನಗಳ ಸ್ಫೂರ್ತಿಮೂಲಗಳು.

(೩) ತತ್ವಜ್ಞಾನ, ಯೋಗಶಾಸ್ತ್ರ ಇವೆಲ್ಲವೂ ಬೇಂದ್ರೆ-ಕಾವ್ಯದಲ್ಲಿ ಹಾಸುಹೊಕ್ಕಾಗಿವೆ.

(೪) ಬೇಂದ್ರೆ ಪದಭಾಂಡಾರ ಅಪಾರವಾದದ್ದು ಹಾಗು ಪದಗಳನ್ನು ಟಂಕಿಸುವ ಬೇಂದ್ರೆ ಪ್ರತಿಭೆ ಅಗಾಧವಾದದ್ದು.

(೫) ಬೇಂದ್ರೆಯವರು ಕನ್ನಡ ಪದಗಳನ್ನೇ ಅತಿ ಹೆಚ್ಚಾಗಿ ಬಳಸಿದ್ದಾರೆ.

ಇದು ಬೇಂದ್ರೆ ಸಮಗ್ರಕಾವ್ಯದ ಪದಸಂಧಾನವಲ್ಲ.

ಕೇವಲ ‘ಗರಿ’ ಕವನಸಂಕಲನದ ಕವನಗಳ ಪದಸಂಧಾನದ ವಿಶ್ಲೇಷಣೆಯಿಂದ ಇದಿಷ್ಟು ನನಗೆ ಹೊಳೆದ ತಿಳಿವು. ಸಮಗ್ರ ಪದಸಂಧಾನದಿಂದ ಹೆಚ್ಚಿನ ತಿಳಿವು ಸಾಧಿಸೀತು.

ಪದಸಂಧಾನ ತುಲನೆ:

ತುಲನಾತ್ಮಕ ಪದಸಂಧಾನವು ಈರ್ವರು ಕವಿಗಳ ತುಲನಾತ್ಮಕ ಅಧ್ಯಯನಕ್ಕೆ ನೆರವು ನೀಡುತ್ತದೆ. ಉದಾಹರಣೆಗೆ ಬೇಂದ್ರೆ ಹಾಗು ಕುವೆಂಪುರವರನ್ನು ಈ ರೀತಿಯಾಗಿ ಅಭ್ಯಸಿಸಬಹುದು. ನಾನು ಕುವೆಂಪುರವರ ಯಾವುದೇ ಕವನಸಂಕಲನದ ಪದಸಂಧಾನವನ್ನು ಮಾಡಿರದಿದ್ದರೂ ಸಹ ಎಲ್ಲರೂ ತಿಳಿದಿರುವಂತೆ, ಕುವೆಂಪುರವರಲ್ಲಿ ಸಂಸ್ಕೃತ ಪದಗಳ ಆಧಿಕ್ಯವಿದೆ. ಎರಡನೆಯದಾಗಿ ಕುವೆಂಪುರವರ ಕವನಗಳಲ್ಲಿ ಆದೇಶಾತ್ಮಕ ಪದಗಳ ಆಧಿಕ್ಯವಿದೆ. ಬೇಂದ್ರೆ ಹಾಗು ಕುವೆಂಪು ಈರ್ವರೂ ‘ಬೆಳಗಿ’ನ ಬಗೆಗೆ ಬರೆದ ಕವನಗಳನ್ನೇ ನೋಡಿರಿ.

ಬೇಂದ್ರೆ: “ಶಾಂತಿರಸವೆ ಪ್ರೀತಿಯಿಂದ ಮೈದೋರಿತಣ್ಣಾ, ಇದು ಬರಿ ಬೆಳಗಲ್ಲೊ ಅಣ್ಣಾ!”

ಕುವೆಂಪು: “ಸೂರ್ಯೋದಯ, ಚಂದ್ರೋದಯ ದೇವರ ದಯೆ ಕಾಣಾ!”

ಬೇಂದ್ರೆಯವರ ಕವನದಲ್ಲಿ ಆತ್ಮೀಯವಾಚಕ ಅಥವಾ ಸಂಬಂಧವಾಚಕವಾದ ‘ಅಣ್ಣಾ’ ಪದದ ಬಳಕೆಯ ಹಾಗು ವಿಸ್ಮಯದ ಸೂಚನೆ ಇದ್ದರೆ, ಕುವೆಂಪುರವರ ಕವನದಲ್ಲಿ ಆದೇಶಾತ್ಮಕ ‘ಕಾಣಾ’ ಪದದ ಹಾಗು ಓದುಗನನ್ನು ‘keeping at a distance’ ಭಾವನೆ ಎದ್ದು ಕಾಣುತ್ತದೆ.

ಈ ರೀತಿಯ ತುಲನಾತ್ಮಕ ಅಧ್ಯಯನವನ್ನು ಸಹ ಪದಸಂಧಾನದ ಮೂಲಕ ಮಾಡಬಹುದು.