ಮಂತ್ರ: ಆದಿತ್ಯವರ್ಣೆ ತಪಸೋSಜಾತೋ ವನಸ್ಪತಿಸ್ತವ ವೃಕ್ಷೋSಥ ಬಿಲ್ವಃ |
ತಸ್ಯ ಫಲಾನಿ ತಪಸಾನುದಂತು ಮಾಯಾಂತರಾಯಾಶ್ಚ ಬಾಹ್ಯಾ ಅಲಕ್ಷ್ಮೀಃ ||
ಸಾಹಿತ್ಯಿಕ ಅರ್ಥ: ಸೂರ್ಯನ ವರ್ಣದಿಂದ, ತಪಸ್ಸಿನ ಪ್ರಭಾವದಿಂದ ಹುಟ್ಟಿದ ಬಿಲ್ವ ಮೊದಲಾದ ವನಸ್ಪತಿಗಳೆಲ್ಲ, ಈ ಚರಾಚರ ಪ್ರಪಂಚವೆಲ್ಲ ನಿನ್ನಿಂದ ಹುಟ್ಟಿದೆ. ನಿನ್ನಿಂದ ಸೃಷ್ಟಿಯಾದ ಪ್ರಪಂಚದ ಫಲವನ್ನು ನಾನು ಪಡೆಯುತ್ತಾ ಇದ್ದೇನೆ. ಅದರಿಂದಾಗಿ ನನ್ನಿಂದ ಕೆಡುಕಾಗುವುದಿದ್ದರೆ ಅದನ್ನು ದೂರಮಾಡು. ನಿನ್ನದೇ ವಸ್ತುವನ್ನು ಬಳಸಿಕೊಂಡು ನನ್ನ ಜೀವನ ನಿರ್ವಹಣೆ ಮಾಡುತ್ತಾ ಇದ್ದೇನೆ. ಇದ್ಯಾವುದಾದರೂ ನನ್ನ ಅಲಕ್ಷ್ಮಿಗೆ, ಅಜ್ಞಾನಕ್ಕೆ ಕಾರಣವಾದರೆ ಅದನ್ನು ನನ್ನಿಂದ ದೂರಮಾಡು. ಅಂತೂ ನನ್ನನ್ನು ಒಳ್ಳೆಯವನನ್ನಾಗಿ ಮಾಡು ಎಂದು ಈ ಮಂತ್ರದ ಮೂಲಕ ಕೇಳಿಕೊಳ್ಳುವುದು.
ವ್ಯಾಖ್ಯಾನ: ಇಲ್ಲಿ ಕೆಲವೊಂದು ಅನ್ವಯಗಳೂ, ಬಹಳ ಗಮನಿಸಬೇಕಾದ ಮುಖ್ಯ ಅಂಶಗಳೂ ಇವೆ. ಆದಿತ್ಯವರ್ಣೆ - ಇಲ್ಲಿ ವರ್ಣೆ ಎನ್ನುವುದು ಛಂದಸ್ಸಿಗೆ ಬೇಕಾಗಿ "ಸ್ವೀಕರಿಸಬೇಕು" ಎನ್ನುವ ಅರ್ಥ ಪಡೆಯುತ್ತದೆ. ಯಾವುದು ಅಧಿಜಾತವಿದೆ, ಯಾವುದು ನಿಮ್ಮ ಬುದ್ಧಿಪ್ರವೃತ್ತಿಯಿಂದ (ಪುನರುತ್ಪತ್ತಿ ಭಾಗ, ಸ್ವಭಾವಜನ್ಯವಾದ, ಪ್ರಕೃತಿದತ್ತವಾದ ಉತ್ಪನ್ನ ಭಾಗಗಳಲ್ಲದ), ಬುದ್ಧಿಯ ಮಂಥನದಿಂದ ಉತ್ಪನ್ನವಾಗತಕ್ಕ ಭಾಗ ಅಂದರೆ ಜ್ಞಾನ ಭಾಗ ಎಂದರ್ಥ. ಯಾವುದನ್ನು ನೀವು ಜ್ಞಾನಭಾಗವಾಗಿ ಆದಿತ್ಯನನ್ನು ಸ್ವೀಕರಿಸುತ್ತೀರಿ, ಆ ಜ್ಞಾನವನ್ನು ಯಥಾವತ್ತಾಗಿ ಸ್ವೀಕರಿಸಲಿಕ್ಕೆ ಆಗುವುದಿಲ್ಲ. ಅದಕ್ಕೆ ವನಸ್ಪತಿಯ ಸಹಾಯ ಬೇಕು. ಆ ವನಸ್ಪತಿಯ ಸಹಾಯ ಎನ್ನುವುದಕ್ಕೆ ಬಿಲ್ವ ಎನ್ನುವ ಒಂದು ವೃಕ್ಷವನ್ನು ಹೆಸರಿಸಿದ್ದಾರೆ. ಬಿಲ್ವ ಮಾತ್ರವಲ್ಲ, ವನಸ್ಪತಿಗಳು ಎನ್ನುವ ಎಲ್ಲವೂ ಆಗುತ್ತದೆ. ಅವೆಲ್ಲ ನಿಮ್ಮ ಜ್ಞಾನ ಚಿಂತನ ಮಂಥನದಿಂದ ಹುಟ್ಟತಕ್ಕ ಜ್ಞಾನ ಪ್ರತ್ಯುತ್ಪಾದನೆಗಳು. ಅವನ್ನು ಸ್ವೀಕರಿಸಿದಾಗ ನಿಮಗೆ ಸ್ವಾಭಾವಿಕವಾಗಿ ಯಾವುದು ಸತ್ಯ ಎಂದು ಮನಸ್ಸಿನಲ್ಲಿ ದ್ವಂದ್ವ ಹುಟ್ಟುತ್ತದೆ. ಜನಕರಾಜನಿಗೇ ಈ ದ್ವಂದ್ವ ಹುಟ್ಟಿತ್ತಂತೆ ಆದ್ದರಿಂದ ನಮಗೆ ಹುಟ್ಟುವುದರಲ್ಲಿ ತಪ್ಪೇನೂ ಇಲ್ಲ. ಜನಕರಾಜ ರಾಜರ್ಷಿ, ಆದರೂ ಗೃಹಸ್ಥ, ಬಹಳ ದೊಡ್ಡ ಚಿಂತಕ, ಅವನಿಗೆ ಹುಟ್ಟಿದ ದ್ವಂದ್ವದ ಬಗ್ಗೆ ಒಂದು ಕಥೆಯೇ ಇದೆ. ಕೊನೆಗೆ ಅಷ್ಟಾವಕ್ರನು ಬಂದು ಅವನ ಚಿಂತನೆಗೆ ಸರಿಯಾದ ಉತ್ತರವನ್ನು ನೀಡಿ ತನ್ನ ತಂದೆಯ ಬಿಡುಗಡೆ ಮಾಡಿಸುತ್ತಾನೆ ಎಂಬುದಾಗಿ ಇದೆ. ಆದರೆ ವನಸ್ಪತಿಯಿಂದ ಪಡೆದ ಜ್ಞಾನವು ನಿಮ್ಮ ಮಂಥಿತ ಜ್ಞಾನವಾಗಿರುತ್ತದೆ. ಅದರಲ್ಲಿ ದ್ವಂದ್ವ ಇರುತ್ತದೆ. ಯಾವುದು ಸತ್ಯ, ಯಾವುದು ಸುಳ್ಳು ಎನ್ನುವ ಚಿಂತೆ ಇರುತ್ತದೆ. ಅದರಲ್ಲಿ ಅಸತ್ಯವಾದ ಮಾಯೆಯನ್ನು ಬಿಟ್ಟು, "ರಾಯ"ವನ್ನು ಮಾತ್ರ ಸ್ವೀಕರಿಸಲು ನೀವು ಹೋರಡಬೇಕು. ಅದಕ್ಕೇ "ಮಾಯಾಂತರಾಯಾಶ್ಚ ಬಾಹ್ಯಾ ಅಲಕ್ಷ್ಮೀಃ" ಎಂದು ಹೇಳಿದರು. ಯಾವುದು ಚಿಂತನೆ ಮಾಡಿದಾಗ ಹುಟ್ಟಿದ ದ್ವಂದ್ವದಲ್ಲಿ ನಿಮಗಲ್ಲದ್ದು ಅದು ಅಲಕ್ಷ್ಮಿ. ಅದನ್ನು ದೂರವಿಟ್ಟು, ಯಾವುದು ರಾಯವಿದೆ-ರಾಯಸ್ಪೋಶವಿದೆ, ಯಾವುದು ನಿಮ್ಮನ್ನು ಎತ್ತರಕ್ಕೆ ಏರಿಸಬಲ್ಲದೋ ಅದನ್ನು ನಾನು ಸ್ವೀಕರಿಸುತ್ತೇನೆ ಎನ್ನುವ ಅರ್ಥದಲ್ಲಿ ಈ ಮಂತ್ರವಿದೆ. ಅಂತರಾಯ ಎಂದರೆ ಶ್ರೇಷ್ಠವಾದದ್ದು ಎಂದರ್ಥ. ನಿಮ್ಮ ಅಂತರ್ಮನದಲ್ಲಿ ಹುಟ್ಟಿದಂತಹ ಆಯ ಅಂದರೆ ಸರಿಯಾದ ಜ್ಞಾನ. ಅಂತರ್ಮನದಲ್ಲಿ ಯಾವಾಗಲೂ ಸರಿಯಾದ ಜ್ಞಾನವೇ ಇರುತ್ತದೆ, ಬಾಹ್ಯಮನದಲ್ಲಿ ಮಾತ್ರ ವಿರುದ್ಧ ಪ್ರವೃತ್ತಿ ಕಂಡುಬರುವುದು. ಹಾಗೇ ಅಂತರ್ಮನವನ್ನು ಸ್ವೀಕರಿಸುತ್ತೇನೆ. ಇದಕ್ಕೆ ಮನಸ್ಸು ಒಪ್ಪುವ ಕಾರ್ಯ ಮಾಡುವುದು ಎನ್ನುತ್ತಾರೆ. ಆತ್ಮ ಒಪ್ಪುವ ಕೆಲಸವೆಂತಲೂ ಹೇಳುತ್ತಾರೆ. ಅಂದರೆ ಅಂತರಾಯದಲ್ಲಿ ಹುಟ್ಟುವ ಸತ್ಯವನ್ನು ಮಾತ್ರ ಸ್ವೀಕರಿಸುತ್ತೇನೆ, ಉಳಿದದ್ದನ್ನಲ್ಲ ಎನ್ನುವ ಅರ್ಥದಲ್ಲಿ ಅಂತರಾಯ ಶಬ್ದ ಇದೆ.