ಪ್ರಶ್ನೆ: ಪರಿಶಿಷ್ಟ ಮಂತ್ರಗಳು ಎಂದರೆ ಏನು? ಶ್ರೀಸೂಕ್ತವನ್ನು ಪರಿಶಿಷ್ಟ ಮಂತ್ರಗಳಲ್ಲಿ ಏಕೆ ಸೇರಿಸಿದ್ದಾರೆ?
ಸ್ವಾಮೀಜಿ: ನಮ್ಮಲ್ಲಿ ಕೆಲವೊಂದಿಷ್ಟು ವೇದಕ್ಕೆ ಅದರದ್ದೇ ಆದ ನಿರ್ಬಂಧಗಳಿವೆ. ಅದರ ಛಂದಸ್ಸಿಗೆ, ಅದರ ನಿರುಕ್ತಕ್ಕೆ ಅದರ ಜ್ಯೋತಿಷಕ್ಕೆ ಬದ್ಧತೆ ಇಲ್ಲದ್ದನ್ನು ಪ್ರತ್ಯೇಕಿಸಿ ಇಟ್ಟಿದ್ದಾರೆ. ಶ್ರೀ ಸೂಕ್ತದ ಸಂಯೋಜನೆಯಲ್ಲಿ ಕೆಲವೊಂದಿಷ್ಟು ನಿರುಕ್ತಕ್ಕೆ ಬದ್ಧವಾಗಿಲ್ಲ. ಹಾಗಾಗಿ ಅದನ್ನು ಪ್ರತ್ಯೇಕಿಸಿದರು. ಏಕೆಂದರೆ ವೇದಮಂತ್ರವನ್ನು ಯಾರೂ ಬರೆದು ಸೇರಿಸಬಹುದು. ಆದರೆ ಸೇರಿಸಬಾರದು. ಆದ್ದರಿಂದ ಸೇರಿಸದೆ ಇರಬೇಕಾದರೆ ಆ ಆರು ಸ್ಪಷ್ಟ ಲಕ್ಷಣಗಳು ಇರಬೇಕು. ಅದರ ಕಲ್ಪಗಳಾಗಲೀ, ಸೂತ್ರಗಳಾಗಲೀ ವ್ಯತ್ಯಾಸವಾಗಬಾರದು. ಸ್ವಲ್ಪ ವ್ಯತ್ಯಾಸವಾದ ಮಂತ್ರ ಸಮಾನ ಮಂತ್ರವಾದರೂ ಸ್ವಲ್ಪ ವ್ಯತ್ಯಾಸ ಕಂಡುಬಂದರೆ ಅದನ್ನು ಪ್ರತ್ಯೇಕವಾಗಿ ಇಡುತ್ತಾರೆ. ಏಕೆಂದರೆ ವೇದದಲ್ಲಿ ಅದು ಸೇರಿದರೆ ನಾಳೆ ಮತ್ತೊಬ್ಬ ಇನ್ನೊಂದು ಮಂತ್ರವನ್ನು ಬರೆದು ಸೇರಿಸುತ್ತಾನೆ. ಹಾಗೆ ಸೇರಿಸಲಿಕ್ಕೆ ಅವಕಾಶವಾಗಬಾರದು ಎನ್ನುವ ದೃಷ್ಟಿಯಿಂದ ಆ ಆರು ಸ್ಪಷ್ಟ ಲಕ್ಷಣಗಳ ಪರೀಕ್ಷೆಯಲ್ಲಿ ದೃಢಪಟ್ಟ ಮಂತ್ರಗಳು ಮಾತ್ರ ವೇದಕ್ಕೆ ಸೇರಿಸಲ್ಪಡುತ್ತವೆ. ಉಳಿದದ್ದನ್ನು ವೇದದಲ್ಲಿ ಪ್ರತ್ಯೇಕವಾಗಿ ಇಡುತ್ತಾರೆ. ಪರಿಶಿಷ್ಟ ಎಂದರೆ ಪ್ರತ್ಯೇಕಿಸಿ ಇಡಲ್ಪಟ್ಟ ಮಂತ್ರ ಎಂದು ಅರ್ಥ. ಅದು ಮಂತ್ರ ಸಮಾನವೇ. ಆದರೆ ಈ ಆರು ಸೂತ್ರಗಳಿಗೂ ಬದ್ಧವಾಗಿಲ್ಲ. ಅದರಲ್ಲಿ ಕೆಲವು ಮಂತ್ರಗಳು ಒಂದೋ ಛಂದಸ್ಸಿನ ನಿಯಮಗಳಿಗೆ ಬದ್ಧವಾಗಿವೆ ಅಥವಾ ಒಂದೋ ಅದರ ಕಾರಕೀಯ ನಿಯಮಗಳಿಗೆ ವಿರುದ್ಧವಾಗಿರುತ್ತವೆ ಅಥವಾ ಕಲ್ಪ ಸೂತ್ರದ ಪ್ರಕಾರ ಆ ಮಂತ್ರಕ್ಕೆ ಆ ಬದ್ಧತೆ ಇರುವುದಿಲ್ಲ, ಹೀಗೆಲ್ಲ ಇರುತ್ತವೆ. ಹಾಗಿದ್ದಾಗ ಅದನ್ನು ಪ್ರತ್ಯೇಕ ಇಡುತ್ತಾರೆ. ಹಾಗೆ ಪ್ರತ್ರೆಕಿಸಿಟ್ಟ ಮಂತ್ರ ಭಾಗ ಅದು. ಪರಿಶಿಷ್ಟ ಎಂದರೆ ಕಡಿಮೆಯ ಮಂತ್ರ ಎಂದರ್ಥವಲ್ಲ. ಮಂತ್ರಕ್ಕೆ ಶಕ್ತಿ ಅಷ್ಟೇ ಇದೆ. ಆದರೆ ಆ ಸೂತ್ರಗಳಿಗೆ ಬದ್ಧವಾಗಿಲ್ಲದ್ದರಿಂದ, ವೇದದಲ್ಲಿ ಹೊಸ ಹೊಸ ಪ್ರಕ್ಷಿಪ್ತಗಳು ಅನಾವಶ್ಯಕ ಬಂದು ಸೇರಲು ಅವಕಾಶ ಕೊಡಬಾರದು ಎನ್ನುವ ದೃಷ್ಟಿಯಿಂದ ಹಾಗೆ ಮಾಡಿದ್ದಾರೆ. ಹಾಗೆ ಪರಿಶಿಷ್ಟದಲ್ಲಿ ತುಂಬಾ ಮಂತ್ರಗಳು ಇವೆ. ನಾಲ್ಕು ವೇದಗಳಲ್ಲೂ ಈ ರೀತಿಯ ಪರಿಶಿಷ್ಟ ಮಂತ್ರಗಳು ಪ್ರತ್ಯೇಕವಾಗಿ ಇಡಲ್ಪಟ್ಟಿವೆ. ಏಕೆಂದರೆ ಆ ವೇದಕ್ಕೆ, ಆ ಶಾಖೆಗೆ ಬದ್ಧವಲ್ಲದ ಮಂತ್ರವಾದರೂ ಅದನ್ನು ಪ್ರತ್ಯೇಕಿಸಿಡುತ್ತಾರೆ. ಅದು ಪದ್ಧತಿ.
ಪ್ರಶ್ನೆ: ಬೇರೆಲ್ಲ ಮಂತ್ರಕ್ಕೆ ಆ ಮಂತ್ರ ದೃಷ್ಟಾರ ಋಷಿ ಯಾರು ಅಂತ ಹೇಳುತ್ತಾರೆ, ಪ್ರಧಾನ ದೇವತೆ ಯಾರು ಅಂತ ಹೇಳುತ್ತಾರೆ. ಈ ಮಂತ್ರವನ್ನು ಬರೆದ ಋಷಿ ಯಾರು?
ಸ್ವಾಮೀಜಿ: ಇದಕ್ಕೆ ಋಷಿ ಛಂದಸ್ಸನ್ನು ಹೇಳುವುದು ಚಾಲ್ತಿಯಲ್ಲಿಲ್ಲ. ಆದರೆ ಇದಕ್ಕೆ ಋಷಿ ಛಂದಸ್ಸು ಇದೆ. ನಾಲ್ಕು ಛಂದಸ್ಸಿನ ಮಂತ್ರಗಳಿವೆ, ಒಂದೇ ಛಂದಸ್ಸಿನದಲ್ಲ. ಇದರಲ್ಲಿ ಅನುಷ್ಟುಪ್, ಬೃಹತೀ, ತ್ರಿಷ್ಟುಪ್ ಮತ್ತು ಪಂಕ್ತೀ ಛಂದಸ್ಸಿನ ಮಂತ್ರಗಳಿವೆ. ಗಾಯತ್ರೀ ಛಂದಸ್ಸಿನ ಮಂತ್ರಗಳಿಲ್ಲ. ಹಾಗೇ ಋಷಿ ಕರ್ದಮ ಋಷಿ, ಕರ್ದಮ ಎನ್ನುವ ಪ್ರಜಾಪತಿಯೇ ಋಷಿ. ದೇವತೆ ನಾರಾಯಣೀ, ಲಕ್ಷ್ಮೀ ಅಂತ ಅಲ್ಲ. ನಾರಾಯಣೀ ಅಂತ ದೇವತಾ ಭಾಗದಲ್ಲಿದೆ. ನಂತರ ಅದು ನಾರಾಯಣೀ ಅಂದರೆ ಲಕ್ಷ್ಮಿ, ಹಾಗಾಗಿ ಲಕ್ಷ್ಮಿ ಎನ್ನುವುದು ಮತ್ತು ಲಕ್ಷ್ಮಿಶಬ್ದಗಳ ಬಳಕೆ ತುಂಬಾ ಇರುವುದರಿಂದ ಅದು ಲಕ್ಷ್ಮಿ ಎನ್ನುವುದೇ ದೇವತೆ ಎನ್ನುವ ಅಭಿಪ್ರಾಯ ಬಂತು. ಆದರೆ ಲಕ್ಷ್ಮಿಸೂಕ್ತ ಅಂತ ಮಾತ್ರ ಹೇಳಲಿಲ್ಲ. ಅದನ್ನು ಶ್ರೀಸೂಕ್ತ ಎಂದಿದ್ದಾರೆ. ಶ್ರೀ ಎನ್ನುವುದು ಯಾವುದೇ ಲಿಂಗವಾಚಕ ಶಬ್ಧವಲ್ಲ. ಅದೊಂದು ವಿಶಿಷ್ಟವಾದ ಗೌರವ ಸೂಚಕ ಶಬ್ದ. ನಾವು ಯಾವುದನ್ನೂ ಗೌರವಿಸಬೇಕು, ಯಾವುದನ್ನೂ ಭಾವನಾತ್ಮಕವಾಗಿ ನಂಬಬೇಕು, ಯಾವುದು ಅತಿ ಶ್ರೇಷ್ಠವೆಂದು ಗುರುತಿಸಲ್ಪಡುತ್ತದೆಯೋ ಅದು ಶ್ರೀ ಎಂದೆನಿಸಿಕೊಳ್ಳುತ್ತದೆ. ಹಾಗಾಗಿ ಶ್ರೇಷ್ಠ, ಭಾವನಾತ್ಮಕವಾಗಿ ಗೌರವಿಸುವಂತದ್ದು, ನಂಬುವಂತಹ ವಿಚಾರ ಎನ್ನುವ ಅರ್ಥದಲ್ಲಿ ಶ್ರೀಸೂಕ್ತ ಎಂದು ಹೇಳಿದರು. ಹಾಗಿದ್ದರೆ ಖಂಡಿತ ನಂಬಬಹುದು, ನಂಬಿದರೆ ಉಪಯುಕ್ತತೆ ಇದೆ ಎನ್ನುವ ವಿಚಾರವನ್ನು ಉಡು ಸ್ಪಷ್ಟವಾಗಿ ಸಾರುತ್ತದೆ. ಅದನ್ನು ಲಕ್ಷ್ಮಿಸೂಕ್ತ ಅಂತ ಹೇಳಲಿಲ್ಲ ಅಥವಾ ನಾರಾಯಣೀ ಸೂಕ್ತ ಅಂತ ಹೇಳಲಿಲ್ಲ, ಶ್ರೀಸೂಕ್ತ ಅಂತ ಹೇಳಿದರು, ಯಾಕೆಂದರೆ ಯಾವುದು ನಾವು ನಂಬುವುದಕ್ಕೆ ಅರ್ಹವಾದದ್ದು. ಶ್ರೀ ಎನ್ನುವ ಶಬ್ಧವೇ ಹಾಗೆ, ಯಾರಾದರೊಬ್ಬರು ಹಿರಿಯರು ಅಂದರೆ ಅವರಿಗೆ ಶ್ರೀಮಾನ್ ಅಂತ ಹೇಳುತ್ತೇವೆ. ಯಾಕೆಂದರೆ ನಂಬಿಕೆಗೆ ಅರ್ಹರು, ಶ್ರೇಷ್ಠರು, ಎತ್ತರದಲ್ಲಿರುವವರು, ತಿಳಿದವರು, ಜ್ಞಾನಿಗಳು ಅನ್ನುವ ಅರ್ಥದಲ್ಲಿ ಅವರನ್ನು ಶ್ರೀ ಅಂತ ಸೇರಿಸುತ್ತೇವೆ. ಹಾಗಾಗಿ ಅಂತಹ ಒಳ್ಳೆಯ ವಿಚಾರಗಳು ಅದರಲ್ಲಿವೆ. ಅಷ್ಟೇ ನಂಬಿಕೆಗೆ ಅರ್ಹವಾದ ವಿಚಾರ ಇದೆ, ಖಂಡಿತ ಅದರಿಂದ ನಮಗೆ ಉಪಯುಕ್ತತೆ ಆಗುತ್ತದೆ ಅನ್ನುವ ಸ್ಪಷ್ಟತೆ ಇದ್ದುದರಿಂದ ಅದು ಶ್ರೀಸೂಕ್ತವೆನಿಸಿಕೊಂಡಿತು. ಇಲ್ಲದಿದ್ದರೆ ಶ್ರೀಸೂಕ್ತ ಅಂತ ಅನ್ನಿಸಿಕೊಳ್ಳುತ್ತಿರಲಿಲ್ಲ. ಹಾಗಾಗಿ ಲಕ್ಷ್ಮಿಸೂಕ್ತ ಎನ್ನುವ ಅರ್ಥದಲ್ಲಿ ಶ್ರೀಸೂಕ್ತ ಹೇಳಿದ್ದಲ್ಲ ಅಥವಾ ಶ್ರೀ ಅಂದರೆ ಲಕ್ಷ್ಮಿ ಎನ್ನುವ ಅರ್ಥದಲ್ಲೂ ಹೇಳಿದ್ದಲ್ಲ. ಅದು ಶ್ರೇಷ್ಠ ವಿಚಾರಗಳು, ಆದರ್ಶ ವಿಚಾರಗಳು ಅನ್ನುವ ಕಾರಣದಿಂದ ಅದು ಶ್ರೀಸೂಕ್ತ ಅನ್ನಿಸಿಕೊಂಡಿತು. ಹಾಗಾಗಿ ಶ್ರೀಸೂಕ್ತ ಎಂದೇ ಚಾಲ್ತಿಯಲ್ಲಿ ಬಂತು. ಅದಕ್ಕೆ ದೇವತೆ ಶ್ರೀ ಎಂದು ಬರುವುದಿಲ್ಲ. ಶ್ರೀ ಯು ಒಂದು ಗೌರವ ಸೂಚಕ ಪದ ಅಥವಾ ಒಂದು ಶ್ರೇಷ್ಠತೆ ಸೂಚಿಸುವ ಪದವೇ ವಿನಃ ಅದು ನಾಮಪದವಲ್ಲ. ಹಾಗಾಗಿ ಅಲ್ಲಿ ದೇವತಾ ಭಾಗ ಬಂದಾಗ ನಾಮಪದ ಪ್ರಯೋಗವಾಗಬೇಕು, ಅದಕ್ಕೆ ನಾರಾಯಣೀ ಎಂದು ಹೇಳಿದರು. ನಾರಾಯಣೀ ಎಂದರೆ ಅರ್ಥ "ಜಗತ್ತಿನ ಎಲ್ಲಾ ಜೀವಿಗಳಿಗೂ ಅಗತ್ಯವಾದ, ಎಲ್ಲ ಜೀವಿಗಳಿಗೂ ಬೇಕಾದ, ಯಾವುದರಲ್ಲೂ, ಯಾವ ಜೀವಿಗಳಲ್ಲೂ (ಕಳ್ಳನಲ್ಲೂ ನೀರಿದೆ, ಸುಳ್ಳನಲ್ಲೂ ನೀರಿದೆ, ಪುಣ್ಯಾತ್ಮನಲ್ಲೂ ನೀರಿದೆ, ಹಾಗೆ ಎಲ್ಲರಲ್ಲೂ ಜೀವ ಇದೆ) ಹಾಗೆ ಎಲ್ಲರನ್ನೂ ಸಮಾನ ಭಾವದಿಂದ ಕಾಣುವ ಪ್ರವೃತ್ತಿ ಇರುವಂಥದ್ದು". ಅಲ್ಲಿ ವ್ಯತ್ಯಾಸವಿಲ್ಲ ಅದಕ್ಕೆ. ಹಾಗಾಗಿ ಅಲ್ಲಿ ನಾರಾಯಣಿಯೇ ದೇವತೆ. ಯಾಕೆಂದರೆ ಎಲ್ಲರನ್ನೂ ಸಮಾನವಾಗಿ ಕಾಣುವಂತಹ ಸದ್ಗುಣ ಅಲ್ಲಿ ಪ್ರೇಷಿತವಾಗಿದೆ ಎಂದರ್ಥ. ಲಕ್ಷ್ಮಿ ದೇವತಾ ಅಂತ ಹೇಳಲಿಲ್ಲ, ನಾರಾಯಣೀ ದೇವತಾ ಯಾಕೆಂದರೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು, ಎಲ್ಲರಿಗೂ ಬೇಕಾದ್ದಾರಿಗಬೇಕು, ಎಲ್ಲರೂ ಅದನ್ನು ಗೌರವಿಸುವಂಥ ವಿಚಾರವಾಗಿರಬೇಕು ಎಂದು ಅರ್ಥ.