Page 8

ಮಂತ್ರ: ಚಂದ್ರಾಂ ಪ್ರಭಾಸಾಂ ಯಶಸಾ ಜ್ವಲಂತೀಂ ಶ್ರಿಯಂ ಲೋಕೇ ದೇವಜುಷ್ಟಾಮುದಾರಾಮ್ |

ತಾಂ ಪದ್ಮಿನೀಮೀಂ ಶರಣಮಹಂ ಪ್ರಪದ್ಯೇ‌Sಲಕ್ಷ್ಮೀರ್ಮೇ ನಶ್ಯತಾಂ ತ್ವಾಂ ವೃಣೇ ||

ಸಾಹಿತ್ಯಿಕ ಅರ್ಥ: ​ಆ ಲಕ್ಷ್ಮಿಗೆ, ಪದ್ಮಿನಿಗೆ ನಾನು ಶರಣು ಹೋಗುತ್ತೇನೆ. ಏಕೆಂದರೆ ಅಲಕ್ಷ್ಮಿಯನ್ನು, ಆಲಸ್ಯವನ್ನು, ದುಷ್ಟಸಂಪತ್ತನ್ನು ನೀನು ದೂರಮಾಡು. ನನ್ನಲಿರುವ ಆಲಸ್ಯ, ದುರ್ಗುಣವನ್ನೆಲ್ಲವನ್ನೂ ದೂರಮಾಡಿ ಸದ್ಗುಣಗಳನ್ನು ತಂದುಕೊಡು. ಅದಕ್ಕಾಗಿ ನಾನು ನಿನ್ನನ್ನು ನಮಿಸುತ್ತೇನೆ. ಲಕ್ಷ್ಮಿಗೆ ವಿಶೇಷಣಗಳನ್ನು ನೀಡುತ್ತಾ, ಚಂದ್ರಾಮ್ - ಕಾಂತಿಪೂರ್ಣಳಾದ, ಪ್ರಭಾಸಾಂ - ಪ್ರಕೃಷ್ಟವಾಗಿ ಶೋಭಿಸುವ, ಯಶಸ್ಸಿನಿಂದ ಪ್ರಕಾಶಿಸುವ, ಲೋಕದಲ್ಲಿ "ದೇವಜುಷ್ಟಾಮುದಾರಾಂ" - ದೇವತಾಮಾರ್ಗವನ್ನು ಅನುಸರಿಸಿದವರಿಗೆ ಉದಾರವಾದ ಸಂಪತ್ತನ್ನು ಕೊಡುವ ಆ ಪದ್ಮಿನಿಯನ್ನು ನಾನು ಶರಣುಹೋಗುತ್ತೇನೆ. ​

ವ್ಯಾಖ್ಯಾನ: ​​"ನಶ್ಯತಾಮ್ ತ್ವಾಮ್ ವೃಣೆ" - ಯಾವುದು ಸ್ವೀಕರಿಸಲು ಅರ್ಹವಾದದ್ದಿದೆ ಅದನ್ನು ನಾನು ಸ್ವೀಕರಿಸುತ್ತೇನೆ, ಅಂದರೆ ವರಣೆ, ವೃಣೀಮಹೇ, ನಾನು ಸ್ವೀಕರಿಸುತ್ತೇನೆ ಎಂದರ್ಥ. " ಚಂದ್ರಾಂ ಪ್ರಭಾಸಾಂ ಯಶಸಾ ಜ್ವಲಂತೀಂ" - ಚಂದ್ರನ ಸ್ವಭಾವಗಳೇನಿವೆ, ೧೬ ಕಲೆಗಳಿಂದ ಯುಕ್ತವಾಗಿ, ನಿರಂತರವಾಗಿ ಈ ಭೂಮಿಯಲ್ಲಿರುವ ಜೀವಿಗಳಿಗೆ ನಿರಂತರ ತ್ಯಾಗ ಮಾಡುತ್ತಾ ಇರುತ್ತದೆ. ಮಾಡುತ್ತಾ ಮಾಡುತ್ತಾ, ತನ್ನದೆಲ್ಲವನ್ನೂ ಕಳೆದುಕೊಳ್ಳುತ್ತದೆ, ಕ್ಷೀಣವಾಗುತ್ತದೆ. ನಂತರ ಪುನಃ ಚೈತನ್ಯವನ್ನು ಸೂರ್ಯನಿಂದ ಪಡೆದು ಮತ್ತೆ ಪ್ರಾದುರ್ಭಾವಕ್ಕೆ ಬರುತ್ತದೆ. ಚಂದ್ರನು ತಾನು ಕ್ಷೀಣನಾದೆ ಎಂದು ಪ್ರಕೃತಿಗೆ ಕೊಡುವುದನ್ನು ಕಡಿಮೆ ಮಾಡುವುದಿಲ್ಲ. ಪುನಃ ಸಂಪಾದನೆ ಮಾಡಿಕೊಂಡು ಮತ್ತೆ ಕೊಡಲಿಕ್ಕೆ ಆರಂಭಿಸುತ್ತಾನೆ. ಚಂದ್ರನಿಂದ ಈ ಕೊಡುವಂತಹ ಪ್ರವೃತ್ತಿಯ ವಿಚಾರಗಳನ್ನು ನೀವು ಅರ್ಥಮಾಡಿಕೊಂಡು, ನಿಮಗೆ ಏನು ಭಾಸವಾಗುತ್ತದೆ, ಯಾವುದನ್ನು ನೀವು ಸ್ವೀಕರಿಸುತ್ತಾ ಇದ್ದೀರಿ, ಅಂತಹ ಶ್ರೇಷ್ಠವಾದ ಕಲಾಸ್ವರೂಪವಾದ ರಸಗಳನ್ನು ನೀವು ಸ್ವೀಕರಿಸಬೇಕು. ಅದನ್ನು ಸ್ವೀಕರಿಸುವ ಪೂರ್ವದಲ್ಲಿ, ಚಂದ್ರನು ಹೇಗೆ ತ್ಯಾಗವನ್ನು ಮಾಡುವಾಗ ತನ್ನದನ್ನು ಕಳೆದುಕೊಳ್ಳುತ್ತಾ, "ಜ್ವಲಂತೀಮ್" - ಅನೇಕ ರೀತಿಯ ಕಷ್ಟಗಳನ್ನು ಹೊಂದುತ್ತಾನೆಯೋ ಹಾಗೆ ಅನುಸರಿಸಬೇಕು. "ಶ್ರಿಯಂ ಲೋಕೇ ದೇವಜುಷ್ಟಾಮುದಾರಾಂ" - ಆಹಾರದಲ್ಲಿನ ಸಾರವನ್ನು ಮಾತ್ರ ಸ್ವೀಕರಿಸುವ ಗುಣವನ್ನು ದೇವತೆಗಳು ಹೇಗೆ ಹೊಂದಿದ್ದಾರೋ ಹಾಗೆ ಸಾರವನ್ನು ಮಾತ್ರ ನಾನು ಭುಂಕ್ತಿ ಮಾಡುತ್ತೇನೆ. ದೇವತೆಗಳು ನಾವು ಇಟ್ಟ ನೈವೇದ್ಯವನ್ನು ತಿನ್ನುವುದಿಲ್ಲ. ಆದರೆ ರಸಗ್ರಾಹಿಗಳು ಅವರು, ಸಾರಗ್ರಾಹಿಗಳು. ನೈವೇದ್ಯವನ್ನು ಇಟ್ಟರೆ ಅದರ ಸಾರವನ್ನು ಮಾತ್ರ ಸ್ವೀಕರಿಸುತ್ತಾರೆ. ಆ ಸಾರವನ್ನು ಸ್ವೀಕರಿಸುವುದರಿಂದ ದೇವತೆಗಳು ಬೆಳೆಯುತ್ತಾರೆ. ಉಳಿದ ಮೃತ್ ವಸ್ತುಗಳನ್ನು ತಿನ್ನುವುದರಿಂದ ನಾವು ಮನುಷ್ಯರಾಗಿಯೇ ಉಳಿಯುತ್ತೇವೆ. ನಾವು ದೇವತೆಗಳಾಗಬೇಕಿದ್ದರೆ ಸಾರ ಸ್ವೀಕರಿಸುವ ಪ್ರವೃತ್ತಿಯನ್ನು ಹೊಂದಬೇಕು, ಆಗ ದೇವತೆಗಳಾಗಲು ಸಾಧ್ಯ. ದೇವತೆಗಳಂತೆ ನಾನು ಸಾರವನ್ನು ಮಾತ್ರ ಸ್ವೀಕರಿಸುತ್ತೇನೆ. ಅದರ ಮುಖೇನ ಚಂದ್ರನಂತೆಯೇ ಈ ಪ್ರಕೃತಿಗೆ ಸಹಜ ಸ್ವಭಾವದ ಮಾತೆಯಾಗುತ್ತೇನೆ. ಚಂದ್ರನು ಈ ಮೂಲಕ ತಾಯಿಯ ಸ್ಥಾನವನ್ನು ಹೊಂದುತ್ತಾನೆ. ಚಂದ್ರನಂತೆಯೇ ಪ್ರಕೃತಿಗೆ ನಿರಂತರವಾಗಿ ನನ್ನ ಕೊಡುಗೆ ಇದೆ ಬಿಟ್ಟರೆ ನಾನು ಪ್ರಕೃತಿಯಿಂದ ಏನನ್ನೂ ಅಪೇಕ್ಷಿಸುವುದಿಲ್ಲ. ಸಾರಗ್ರಾಹಿಯಾಗುತ್ತೇನೆ ಎನ್ನುವುದು ಇದರ ಅರ್ಥ.

ಪ್ರಶ್ನೆ: ದೇವಜುಷ್ಟಾಮ್ ಅಂದರೆ ಅರ್ಥ ಏನು?

ಸ್ವಾಮೀಜಿ: ದೇವತೆಗಳು ಇಷ್ಟಪಟ್ಟು ಸ್ವೀಕರಿಸುವಂಥದ್ದು. ಜುಷತಾಮ್ - ಸ್ವೀಕರಿಸುವಂಥದ್ದು ಎಂದು ಅರ್ಥ.

ಪ್ರಶ್ನೆ: ಹಾಗಿದ್ದರೆ ನಾವು ಕೊಟ್ಟದ್ದನ್ನೆಲ್ಲವನ್ನೂ ದೇವತೆಗಳು ಇಷ್ಟಪಟ್ಟು ಸ್ವೀಕರಿಸುತ್ತಾರೆಯೇ?

ಸ್ವಾಮೀಜಿ: ಸ್ವೀಕರಿಸುವುದಿಲ್ಲ. ಇಷ್ಟಪಟ್ಟದ್ದನ್ನು ಮಾತ್ರ ಸ್ವೀಕರಿಸುತ್ತಾರೆ. ಸಾರಗ್ರಾಹಿಗಳು ಎಂದರೆ ಹಾಗೆಯೇ, ಯಾವುದು ಸೂಕ್ತ ಅದನ್ನು ಮಾತ್ರ ತೆಗೆದುಕೊಳ್ಳುವುದು. ಪ್ರಪಂಚದಲ್ಲಿ ಸಿಕ್ಕಿದ್ದೆಲ್ಲವನ್ನೂ ಯಾರೂ ತಿನ್ನಬಾರದು. ಸಿಕ್ಕಿದ್ದನ್ನೆಲ್ಲ ಸ್ವೀಕರಿಸಲೂಬಾರದು. ನಮಗೆ ಪ್ರಾಪ್ತ ಏನಿದೆಯೋ ಅದನ್ನು ಮಾತ್ರ ತೆಗೆದುಕೊಳ್ಳಬೇಕು. ಸಾರವನ್ನು ಮಾತ್ರ ತೆಗೆದುಕೊಳ್ಳಬೇಕು, ಆಗ ಮಾತ್ರ ಅದು ಶ್ರೇಷ್ಠ ಆಹಾರವಾಗುತ್ತದೆ.

ಪ್ರಶ್ನೆ: ದೇವರಿಗೆ ನಾವು ಕೊಟ್ಟ ನೈವೇದ್ಯ ಇಷ್ಟವೋ ಇಲ್ಲವೋ ಎಂದು ನಮಗೆ ಹೇಗೆ ಗೊತ್ತಾಗುತ್ತದೆ?

ಸ್ವಾಮೀಜಿ: ಕೊಡುವುದು ನಿಮ್ಮ ಸ್ವಾತಂತ್ರ್ಯ. ಇಷ್ಟವಲ್ಲದ್ದನ್ನು ದೇವತೆ ಸ್ವೀಕರಿಸುವುದಿಲ್ಲ. ಸಾರವನ್ನು ಮಾತ್ರ ಸ್ವೀಕರಿಸುತ್ತಾನೆ. ಸಾರವು ಎಲ್ಲದರಲ್ಲೂ ಸಮಾನವೇ. ಸಾರವನ್ನು ಸ್ವೀಕರಿಸುತ್ತದೆಯೇ ವಿನಃ ನೀವು ಕೊಟ್ಟದ್ದನ್ನೆಲ್ಲವನ್ನೂ ಸ್ವೀಕರಿಸುವುದಿಲ್ಲ. ವಸ್ತುವನ್ನು ನಿಮಗೇ ಬಿಡುತ್ತದೆ, ಆದರೆ ಸಾರವನ್ನು ತೆಗೆದುಕೊಳ್ಳುತ್ತದೆ.

ಪ್ರಶ್ನೆ: ಇಂತಹ ದೇವರಿಗೆ ಇಂತಹ ನೈವೇದ್ಯ ಕೊಡಬೇಕು ಎಂದಿಲ್ಲವೇ?

ಸ್ವಾಮೀಜಿ: ಇಲ್ಲ. ಯಾವುದು ಕೊಟ್ಟರೂ ಒಂದೇ. ಪುರಾಣದಲ್ಲಿ ಇದಕ್ಕೆ ಉದಾಹರಣೆ ಸಿಗುತ್ತದೆ. ಬೇಡನು ಮಾಂಸವನ್ನು ನೈವೇದ್ಯವಾಗಿ ಇಡುತ್ತಾನೆ. ಇದರ ಅರ್ಥ ದೇವರು ಮಾಂಸ ತಿನ್ನುತ್ತಾನೆ ಎಂದಲ್ಲ.

ಪ್ರಶ್ನೆ: ಸತ್ಯನಾರಾಯಣ ವೃತಕ್ಕೆ ಸಪಾದ ಭಕ್ಷ್ಯ ಇಡುತ್ತಾರೆ. ಇನ್ನೊಬ್ಬ ಬೇರೇನನ್ನೋ ಇಡಬಹುದಲ್ಲವೇ.

ಸ್ವಾಮೀಜಿ: ಅದೊಂದು ಪುರಾಣೋಕ್ತ ವಿಧಿ. ವೃತಕ್ಕೆ ಸಂಬಂಧಪಟ್ಟಂತಹ ಕ್ರಮವಾಗಿರುತ್ತದೆ. ಅಷ್ಟು ಬಿಟ್ಟರೆ ದೇವತೆ ಅದನ್ನು ಮಾತ್ರ ಸ್ವೀಕರಿಸುತ್ತಾನೆ ಎಂದಲ್ಲ. ನಿಮ್ಮಲ್ಲಿ ಹೊಸತು ಊಟ ಮಾಡುವುದು ಎನ್ನುವ ಕ್ರಮ ಇದೆ. ಬೇರೆ ಬೇರೆ ವ್ಯಂಜನಗಳಿದ್ದರೂ ಸಹ ಹೊಸ ಭತ್ತವನ್ನು ತಂದು ಶಾಸ್ತ್ರಕ್ಕಾದರೂ ಸ್ವಲ್ಪ ಗಂಜಿ ಮಾಡಿಯೇ ಹೊಸತು ಊಟ ಮಾಡುತ್ತಾರೆ. ಎರಡು ಭತ್ತದ ಸಿಪ್ಪೆಯನ್ನಾದರೂ ತೆಗೆದು ಅನ್ನ ಬೇಯುವಾಗ ಹಾಕುತ್ತಾರೆ. ಅಲ್ಲಿಗೆ ಹೊಸ ಅಕ್ಕಿಯನ್ನು ಬಳಸಿದ್ದೇವೆ ಎನ್ನುವ ಅರ್ಥವಾಗುತ್ತದೆ. ಅವೆಲ್ಲ ವಿಧಿಗಳು ಅಷ್ಟೇ.

ಹಿಂದಿನ ಶ್ಲೋಕದ ವ್ಯಾಖ್ಯಾನ ಮುಂದುವರೆದುದು:

ಮೇಲಿನ ಮಂತ್ರದಲ್ಲಿ ನೀವು ಎರಡು ಕಡೆಯಲ್ಲಿ ಸ್ಪಷ್ಟ ಮಾಡಿಕೊಳ್ಳಬೇಕು. "ಶರಣಮಹಂ ಪ್ರಪದ್ಯೇ‌Sಲಕ್ಷ್ಮೀರ್ಮೇ ನಶ್ಯತಾಂ" - ಇಲ್ಲಿ ಅಲಕ್ಷ್ಮಿ ಎಂಬ ಪ್ರಯೋಗ ಇಲ್ಲ. "ಪ್ರಪದ್ಯೇS" ಇಲ್ಲಿ "ಏ" ಎಂಬ ಸ್ವರವನ್ನೇ ಇನ್ನೊಂದು ಬಾರಿ ಹೇಳಿದೆ. ಹಾಗಾಗಿ S ಚಿಹ್ನೆ ಹಾಕಲಾಗಿದೆ. ಪೂರ್ವ ಅಕ್ಷರವು ಯಾವ ಸ್ವರವನ್ನು ಹೇಳುತ್ತದೆಯೋ ಆ ಅಕ್ಷರವನ್ನೇ ದೀರ್ಘ ಮಾಡಬೇಕು. ಅಕಾರವನ್ನು ಸೇರಿಸುವುದಲ್ಲ. ನಾಶ ಎನ್ನುವ ಶಬ್ಧವನ್ನು ತೆಗೆದುಕೊಂಡರೆ ಹಾಗೆ ಆಗುತ್ತದೆ. ಇಲ್ಲಿ "ನಶ್ಯತಾಂ" ಎಂದು ಸ್ಪಷ್ಟಪಡಿಸಲಾಗಿದೆ. ನಶ್ಯ ಎಂದರೆ ಸ್ವೀಕರಿಸಲು ಅರ್ಹವಾದದ್ದು ಎಂದು ಅರ್ಥ. ಅದಕ್ಕಾಗಿಯೇ ಮೂಗಿಗೆ ಹಾಕುವುದಕ್ಕೆ ನಶ್ಯ ಎಂದು ಹೆಸರು ಬಂದದ್ದು. ಆಯುರ್ವೇದದಲ್ಲಿ ನಶ್ಯ ಚಿಕಿತ್ಸೆ ಎನ್ನುವ ವಿಧಾನವೇ ಇದೆ. ಸಹಜವಾಗಿ ತಿನ್ನುವುದು ಬಾಯಿಯಿಂದ. ಅದನ್ನು ಹೊರತುಪಡಿಸಿ ಪಂಚೇಂದ್ರಿಯಗಳಿಂದ ಸ್ವೀಕರಿಸುವುದಕ್ಕೆ ಸಾಧ್ಯವಿದೆ. ಕಣ್ಣು, ಕಿವಿ, ಮೂಗು ಹಾಗೂ ಚರ್ಮದಿಂದಲೂ ಸ್ವೀಕರಿಸಲಿಕ್ಕೆ ಆಗುತ್ತದೆ. ಆದರೆ ಅದು ಆಹಾರವೆಂದು ಅನ್ನಿಸಿಕೊಳ್ಳುವುದಿಲ್ಲ. ಹಾಗೆಯೇ ಯಾವುದು ಸ್ವೀಕರಿಸಲು ಅರ್ಹ, ಅದನ್ನು ಸ್ವೀಕರಿಸುತ್ತೇನೆ ಎನ್ನುವ ಅರ್ಥದಲ್ಲಿ ನಶ್ಯ ಶಬ್ದದ ಬಳಕೆಯಾಗಿದೆ. ಅದೂ ಅಲ್ಲದೆ ಮುಂದೆ ಲಕ್ಷ್ಮಿ ಶಬ್ದದ "ಲ" ಅಕ್ಷರದ ಕೆಳಗೆ ಅನುದಾತ್ತ ಕೊಟ್ಟಿದ್ದಾರೆ. "ಅ"ಕಾರವಿದ್ದಿದ್ದರೆ ಲಕ್ಷ್ಮಿಗೆ ಅನುದಾತ್ತ ಉಚ್ಚಾರ ಮಾಡಲಿಕ್ಕೆ ಆಗುವುದಿಲ್ಲ. "ಲ" ಅಕ್ಷರದ ಕೆಳಗೆ ಗೆರೆ ಇರುವುದರಿಂದ ಲಕ್ಷ್ಮಿಯೇ ಪ್ರಧಾನ. ಆದ್ದರಿಂದ "ಪ್ರಪದ್ಯೇ ಏ ಲಕ್ಷ್ಮೀರ್ಮೆ" ಎಂದೇ ಆಗಬೇಕು. ಆದರೆ ಮುಂದಿನ ಮಂತ್ರದಲ್ಲಿ ಬರುವ ಶಬ್ದ "ಅಲಕ್ಷ್ಮಿ"ಯೇ ಹೌದು. ಅಲಕ್ಷ್ಮಿ ಎಂದರೆ ಶ್ರೇಷ್ಠವಲ್ಲ, ಸ್ವೀಕಾರಾರ್ಹವಲ್ಲ, ಅದನ್ನು ನಾವು ಬಿಡುತ್ತೇವೆ, ಅದನ್ನು ಹೊರಗಿಡಬೇಕು. ಬಾಹ್ಯ - ನಮ್ಮಿಂದ ದೂರ ಇಡುತ್ತೇವೆ ಎಂದರ್ಥ.