ಮಂತ್ರ: ಉಪೈತು ಮಾಂ ದೇವಸಖಃ ಕೀರ್ತಿಶ್ಚ ಮಣಿನಾ ಸಹ |
ಪ್ರಾದುರ್ಭೂತೋSಸ್ಮಿ ರಾಷ್ಟ್ರೇSಸ್ಮಿನ್ ಕೀರ್ತಿಮೃದ್ಧಿಂ ದದಾತುಮೇ ||
ಸಾಹಿತ್ಯಿಕ ಅರ್ಥ: ಉಪ ಏತು - ನನ್ನನ್ನು ಜೀವನದಲ್ಲಿ ಮೇಲಕ್ಕೆ ಕೊಂಡುಹೋಗು. ದೇವತೆಗಳಿಗೆ ಅತ್ಯಂತ ಪ್ರೀತಿಪಾತ್ರನಾಗುವ ಮಟ್ಟಕ್ಕೆ ನನ್ನನ್ನು ಏರಿಸು. ನನ್ನ ಕೀರ್ತಿಯು ಆ ಭಗವಂತನ ಕೀರ್ತಿಯ ಮಾಲೆಯಲ್ಲಿ ಒಂದು ಮಣಿಯಂತೆ ಇರಲಿ. ನನ್ನ ಅಲಕ್ಷ್ಮಿಯನ್ನೂ, ದೋಷವನ್ನೂ ದೂರಮಾಡಿ ಭಗವಂತನ ಸಾನ್ನಿಧ್ಯ ದೊರೆಯುವಂತೆ ಮಾಡು. ಈ ಸೃಷ್ಟಿಯಲ್ಲಿರುವ ಅನೇಕ ಚರಾಚರ ಜಂತುಗಳ ಜೊತೆಯಲ್ಲಿ ನಾನೂ ಒಬ್ಬ ಪ್ರಾಣಿಯಾಗಿ ಹುಟ್ಟಿದವನು. ನನ್ನ ಕೀರ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಬೇಕಾದಂತಹ ಸಂಪತ್ತನ್ನು ಕೊಡು.
ವ್ಯಾಖ್ಯಾನ: ಹುಟ್ಟಿಯಾಗಿದೆ. ಆತ್ಮನ ಗುರಿ ಎತ್ತರಕ್ಕೆ ಏರುವುದು, ಅದು ಸಹಜ. "ಪ್ರಾದುರ್ಭೂತೋSಸ್ಮಿ ರಾಷ್ಟ್ರೇSಸ್ಮಿನ್" - ನಿನ್ನ ಸೃಷ್ಟಿಯಲ್ಲಿ ಹುಟ್ಟಿಬಿಟ್ಟಿದ್ದೇನೆ. ರಾಷ್ಟ್ರ ಎಂದರೆ ಒಂದು ದೇಶವೋ ಅಥವಾ ಒಂದು ಪ್ರದೇಶವೋ ಅಲ್ಲ, ಸೃಷ್ಟಿ ಎಂದರ್ಥ. ನನ್ನ ಗುರಿ ಕೀರ್ತಿ, ಅದು ವೃದ್ಧಿಯತ್ತ ಕೊಂಡೊಯ್ಯುವ ಕೀರ್ತಿ, ಅದನ್ನು ನೀನು ಕೊಡು. ಅದು ಹೇಗಿರಬೇಕು ಎಂದರೆ "ದೇವಸಖಾ" - ದೇವತೆಗಳೇ ಮೆಚ್ಚುವಂತಿರಬೇಕು. ಅವರ ಸ್ನೇಹಿತನಾಗಬೇಕು. ದೇವತೆಗಳ ಮಗನೋ, ಅಣ್ಣನೋ ಅಥವಾ ತಮ್ಮನೋ ಆಗುವುದಲ್ಲ, ಸ್ನೇಹಿತನಾಗಬೇಕು. ಸ್ನೇಹಿತನಿಗೆ ವಿಶೇಷ ಸ್ಥಾನವಿದೆ. ದೇವತೆಗಳಿಗಿಂತ ಹೆಚ್ಚಿನ ಸ್ಥಾನ ಎಂಬ ಅರ್ಥದಲ್ಲಿ ಬಳಸಲಾಗಿದೆ. ಅದಕ್ಕೇ ದೇವಾಸಖಾ ಎಂದು ಹೇಳಿದ್ದು. ದೇವಬಂಧುತ್ವವನ್ನು ಕೇಳಿಲ್ಲ, ದೇವಾ ಸಖತ್ವವನ್ನು ಕೇಳಿದೆ. ಏಕೆಂದರೆ ದೇವತೆಗಳಿಗೆ ಒಂದು ಸ್ಥಿರತೆ ಇದೆ. ಇಂದ್ರನ ಉದಾಹರಣೆಯನ್ನು ತೆಗೆದುಕೊಂಡರೆ ಅವನು ಇಂದ್ರ, ಇಂದ್ರನಾಗುವುದು ಅಷ್ಟೇ. ಮುಂದಿನ ಆಶ್ರಮವೆಂಬುವುದಿಲ್ಲ, ಅಲ್ಲೇ ಇರಬೇಕು. ನಮಗೆ ಹಾಗೆ ಇರಲು ಇಷ್ಟವಿಲ್ಲ. ದೇವತೆಗಳ ಸ್ನೇಹ ಸಂಪಾದಿಸಿ ನಾವು ಮತ್ತಷ್ಟು ಎತ್ತರಕ್ಕೆ ಏರಬೇಕು. ಹಾಗೆ "ಕೀರ್ತಿಶ್ಚ ಮಣಿನಾ ಸಹ" - ದೇವತೆಗಳ ಸಖತ್ವದ ಕೀರ್ತಿ ಮಾತ್ರ ಸಾಲದು, ಮಣಿ ಅಂದರೆ ಶ್ರೇಷ್ಠ, ಆ ಶ್ರೇಷ್ಠವಾದ ಕೀರ್ತಿ ನಮಗೆ ಬೇಕು. ದೇವತೆಗಳಾಗಿ, ಇಂದ್ರನಾಗಿ ಕುಳಿತುಕೊಳ್ಳಲು ನಮಗೆ ಇಷ್ಟ ಇಲ್ಲ. ನಾವು ಇಂದ್ರನಿಗಿಂತಲೂ ಎತ್ತರಕ್ಕೆ ಏರುವುದಕ್ಕೆ ಪ್ರಯತ್ನಶೀಲರಾಗಿದ್ದೇವೆ. ಹಾಗಾಗಿ ಅಂತಹ ಶ್ರೇಷ್ಠಮಾರ್ಗವನ್ನು ನಮಗೆ ತೋರಿಸಿಕೊಡು ಎನ್ನುವುದು ಈ ಮಂತ್ರದ ಅರ್ಥವಾಗಿದೆ.
ಪ್ರಶ್ನೆ: ದೇವತೆಗಳಿಗಿಂತ ನಮ್ಮ ಕೀರ್ತಿ ಹೆಚ್ಚಾಗಬೇಕು ಅಂದರೆ ಅದು ದುರಾಸೆಯಾಗುವುದಿಲ್ಲವೇ?
ಸ್ವಾಮೀಜಿ: ದೇವತೆಗಳು ಎನ್ನುವ ಈಗಿನ ಭಾಗದಲ್ಲಿ ನಿಮ್ಮ ಕಲ್ಪನೆ ಇರುವಂಥದ್ದು ಇಂದ್ರಾದಿ ದೇವತೆಗಳು ಎನ್ನುವುದಾಗಿ. ಆದರೆ ಅದೊಂದು ಸ್ಥಾನ, ಜವಾಬ್ದಾರಿಯುತ ಹುದ್ದೆ. ಅದು ಕರ್ತವ್ಯ ಬದ್ಧತೆಯ ಒಂದು ವ್ಯವಸ್ಥೆ. ಅದು ಬಲು ಎತ್ತರದ ಸ್ಥಾನ ಎಂದು ಅರ್ಥವಲ್ಲ. ಆದರೆ ಸದ್ಗುಣಗಳನ್ನೇ ಮೈಗೂಡಿಸಿಕೊಂಡು, ಸನ್ಮಾರ್ಗದಲ್ಲೇ ಬೆಳೆದದ್ದರಿಂದ ಅವರಿಗೆ ಆ ಸ್ಥಾನಕ್ಕೆ ಹೋಗಲಿಕ್ಕೆ ಆಗಿದೆ. ಆದರೆ ಅದಕ್ಕಿಂತ ಹೆಚ್ಚಿನ ಸ್ಥಾನ ಇದೆ. ಹಾಗಾಗಿ ಅದು ತುರೀಯವಲ್ಲ. ಅವರಿಗೆ ಅವರದ್ದೇ ಆದ ಕರ್ತವ್ಯ, ಜವಾಬ್ದಾರಿಗಳೆಲ್ಲ ಇವೆ. ಅದರಲ್ಲಿ ಅವರು ಸದಾ ಕ್ರಿಯಾಶೀಲರಾಗಿಯೇ ಇರಬೇಕು. ಅವರಿಗಾಗಿ ಏನೂ ಇಲ್ಲ. ತಿನ್ನುವುದಕ್ಕೆ, ಉಣ್ಣುವುದಕ್ಕೆ ಏನೂ ಇಲ್ಲ, ಅವರು ಕೇವಲ ಸಾರಗ್ರಾಹಿಗಳು. ಬೇರೇನನ್ನೂ ಗ್ರಹಿಸುವುದಿಲ್ಲ, ಸಾರಗ್ರಾಹಿಗಳು ಮಾತ್ರ. ಭೂಮಿಯಲ್ಲಿರುವವರಿಗೆ ಅದು ಖಂಡಿತ ಸುಖವೆನ್ನಿಸುವುದಿಲ್ಲ. ಕೇವಲ ನಮ್ಮ ಕಲ್ಪನೆಯಲ್ಲಿ ಅಲ್ಲೇನೋ ಒಂದು ಸುಖವಿದೆ ಎಂದು ಅನ್ನಿಸಿದರೂ ನಿಜವಾಗಿ ಅದು ಸುಖವಲ್ಲ. ಆದರೆ ಸಾಹಿತ್ಯಿಕವಾಗಿ, ಪೌರಾಣಿಕವಾಗಿ ಆ ಸ್ಥಾನವನ್ನು ಎತ್ತರದಲ್ಲಿ ಇಟ್ಟಿದ್ದೇವೆ. ಏಕೆಂದರೆ ಒಳ್ಳೆಯತನದತ್ತಲೇ ಮನುಷ್ಯನ ನಡೆ ಇರಬೇಕೆಂಬ ಕಾರಣಕ್ಕಾಗಿ. ಆ ಸ್ಥಾನವನ್ನು ಗಳಿಸಲು ಒಳ್ಳೆಯತನ, ಸದ್ವಿಚಾರಗಳ ಚಿಂತನೆ, ಸದ್ಭಕ್ತಿ, ಸತ್ಶ್ರಮಗಳ ಮೂಲಕ ಪ್ರಯತ್ನಶೀಲರಾಗಬೇಕು. ಆಗ ಮಾತ್ರ ದೇವತಾಸ್ಥಾನ ಹೊಂದಲು ಸಾಧ್ಯ. ಆದರೆ ಅದಕ್ಕಿಂತಲೂ ತುರೀಯವಾದ ಸ್ಥಾನವನ್ನು ಹೊಂದುವುದು ಆತ್ಮನ ಗುರಿಯಾಗಬೇಕು. ಭಗವಂತನನ್ನು ಸೇರುವುದು ಗುರಿಯೇ ವಿನಃ ಇಂದ್ರನಾಗುವುದಲ್ಲ. ಇಂದ್ರನಾದರೆ ಮುಗಿಯುವುದಿಲ್ಲ, ಆದರೆ ಪರಮಾತ್ಮನ್ನಲ್ಲಿ ಐಕ್ಯವಾದರೆ ಮುಕ್ತಾಯವಾಗುತ್ತದೆ. ಸಾಲೋಕ್ಯವೂ ಅಲ್ಲ, ಸಾಯುಜ್ಯವೂ ಅಲ್ಲ, ಸಾರೂಪ್ಯವಾಗಬೇಕು. ಸಾಮೀಪ್ಯವೂ ಅಲ್ಲ, ಸಾರೂಪ್ಯವಾಗಬೇಕು. ಆಗ ಮಾತ್ರ ಮುಕ್ತಿ. ಅದೇ ಭಗವಂತನಲ್ಲಿ ಸೇರುವಂತಹದ್ದು, ಭಗವಂತನಾಗುವಂತಹದ್ದು.
ಪ್ರಶ್ನೆ: ದೇವತೆಗಳು ನೈವೇದ್ಯ ಸ್ವೀಕರಿಸುವಾಗ ಕೇವಲ ಸಾರಾಗ್ರಹಣ ಮಾಡುತ್ತಾರೆ ಎಂದು ಹೇಳಿದ್ದೀರಿ. ಅವರು ಸಾರಾಗ್ರಹಣ ಮಾಡಿದ್ದಾರೆ ಎಂದು ಗೊತ್ತಾಗುವುದು ಹೇಗೆ? ರುಚಿ ಅಥವಾ ಪ್ರಮಾಣದಲ್ಲಿ ಏನಾದರೂ ಬದಲಾವಣೆ ಆಗುತ್ತದೆಯೇ? ಸಾರಾಗ್ರಹಣ ಮಾಡುವುದು ಹೇಗೆ?
ಸ್ವಾಮೀಜಿ: ಸಾರಗ್ರಾಹಣ ಮಾಡುವುದರ ಬಗ್ಗೆ ಒಂದು ಕಥೆಯೇ ಇದೆ. ಅದು ಶುನಶ್ಯೇಪನ ಕಥೆ. ಇನ್ನು ಕೆಲವೇ ದಿನಗಳಲ್ಲಿ ನಾನು ಬರೆದ ಸಾಮವೇದ ಭಾಷ್ಯ ಬರಲಿದೆ. ಅದರಲ್ಲಿ ಈ ಕಥೆ ಬರುತ್ತದೆ. ಶುನಶ್ಯೇಪನು ಸಾರಗ್ರಾಹಿಯಾದ್ದರಿಂದ ದೇವತೆಗಳು ಅವನನ್ನು ಬಲಿಕೊಡಲು ಪ್ರಯತ್ನಿಸುತ್ತಾರೆ. ಸಾರಗ್ರಾಹಿಯಾಗಲು ಏನೂ ಕಷ್ಟವಿಲ್ಲ. ಒಂದು ಮಂತ್ರವಿದೆ, ಅದನ್ನು ಸಿದ್ಧಿ ಮಾಡಿಕೊಂಡರೆ ನೀವೂ ಸಾರಗ್ರಾಹಿಗಳಾಗಬಹುದು. ಆದರೆ ನಾವು ಸಾರ ಸ್ವೀಕರಿಸಿದ್ದನ್ನು ಇನ್ನೊಬ್ಬರಿಗೆ ಆಹಾರವಾಗಿ ಕೊಡುವುದು ಸೂಕ್ತವಲ್ಲ ಎಂದು ಹೇಳಲಾಗಿದೆ. ಆದರೆ ದೇವತೆಗಳು ಅದನ್ನೇ ನಮಗೆ ಕೊಡುತ್ತಿದ್ದಾರೆ. ಅದಕ್ಕಾಗಿಯೇ ತಿನ್ನುವುದನ್ನು ಕರ್ಮ ಎಂದು ಹೇಳುವುದು. ಅನ್ನದ ಋಣವಿತ್ತು ಅದಕ್ಕೆ ತಿನ್ನುತ್ತಾನೆ ಎನ್ನುತ್ತೇವೆ. ನಾವು ಏಕೆ ಋಣವನ್ನು ತಿನ್ನುತ್ತೇವೆ ಎಂದು ಚಿಂತನೆ ಮಾಡುವುದಿಲ್ಲ. ಆದ್ದರಿಂದಲೇ ನಾವು ಋಣಮುಕ್ತರಾಗುವ, ಸಾರಗ್ರಾಹಿಗಳಾಗುವ ಪ್ರಯತ್ನವನ್ನು ಮಾಡಬೇಕು.