Page 13

ಮಂತ್ರ: ಕರ್ದಮೇನ ಪ್ರಜಾಭೂತಾ ಮಯಿ ಸಂಭವ ಕರ್ದಮ |

ಶ್ರಿಯಂ ವಾಸಯ ಮೇ ಕುಲೇ ಮಾತರಂ ಪದ್ಮಮಾಲಿನೀಮ್ ||

ಸಾಹಿತ್ಯಿಕ ಅರ್ಥ: ಹೇ ಪದ್ಮಮಾಲಿನಿ, ಲಕ್ಷ್ಮಿ, ನೀನು ನಮ್ಮ ಮನೆಯಲ್ಲಿ ವಾಸವಾಗಿರು ಎನ್ನುವುದು ಎರಡನೆಯ ಪಾದದ ಅರ್ಥವಾಗಿದೆ.

ವ್ಯಾಖ್ಯಾನ: ಕರ್ದಮನು ಒಬ್ಬ ಪ್ರಜಾಪತಿ. ಈ ಭೂಮಿಯನ್ನು ಪಾಲಿಸುವ ಅವನ ಜವಾಬ್ದಾರಿಯ ಸೃಷ್ಟಿ ಇದು. ಈ ಸಂಪತ್ತಿನ ಕ್ಷುಲ್ಲಕ ಅಪೇಕ್ಷೆಗಳು ಏನಿವೆ ಅವು ಕರ್ದಮನ ಪ್ರವೃತ್ತಿ, ನಿಮ್ಮ ಪ್ರವೃತ್ತಿ ಅಲ್ಲ. ಪ್ರಜಾಪತಿಯಾದ ಅವನ ಪ್ರವೃತ್ತಿಯಂತೆ ಸಮಾಜದ ವ್ಯವಸ್ಥೆ ಇದೆ. ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ. ಅವನ ಪ್ರವೃತ್ತಿ ಸಂಪತ್ತಿನ ಅಪೇಕ್ಷೆ. ಹಾಗಾಗಿ ಅದು ಪ್ರಜೆಗಳಾದ ನಮ್ಮಲ್ಲೂ ಇದೆ. ಆದರೆ ನಿಜವಾಗಿಯೂ ಅದು ನಮ್ಮದ್ದಲ್ಲ, ನಮ್ಮ ಉದ್ದೇಶ ಮಾತ್ರ ಅದಲ್ಲ. ಪದ್ಮ ಮಾಲಿ'ನೀಂ ಎಂದಿದೆ. ಮಾಲಿನೀಂ ಅಲ್ಲ, ಅದು ಮಾಲಿ'ನೀಂ ಎಂಬುದಾಗಿದೆ. ಪದ್ಮದಲ್ಲಿರುವ ಗುಣಗಳಿಗಿಂತ ಶ್ರೇಷ್ಠವಾದಂತಹ ಗುಣಗಳನ್ನು ನಾವು ಸ್ವೀಕರಿಸಬಲ್ಲೆವು. ಏಕೆಂದರೆ ನಮ್ಮಲ್ಲಿ ಮನುಷ್ಯತ್ವ ಇದೆ, ಸ್ವತಂತ್ರತೆ ಇದೆ, ಬುದ್ಧಿ ಇದೆ, ಬುದ್ಧಿಯಂತೆ ಪ್ರವರ್ತಿಸುವ ಜ್ಞಾನವಿದೆ. ಆದರೆ ಪದ್ಮವು ಕೆಸರಿನಲ್ಲಿ ಹುಟ್ಟಿದೆ, ನೀರಿನಲ್ಲಿ ಮೇಲೆ ಬಂದಿದೆ, ಆದರೆ ಅದು ಪರಾಶ್ರಯಿ, ಯಾವುದೇ ಸ್ವತಂತ್ರತೆ ಇಲ್ಲ. ಮನುಷ್ಯನಿಗೆ ಹಾಗಲ್ಲ, ಸ್ವತಂತ್ರತೆ ಇದೆ. ಹಾಗಾಗಿ ಪದ್ಮಕ್ಕಿಂತ ಶ್ರೇಷ್ಠವಾದ ಇನ್ನೂ ಹಲವು ಗುಣಗಳನ್ನು, ಅದರಲ್ಲಿರುವ ಮೂರು ಗುಣಗಳನ್ನು ಮಾತ್ರವಲ್ಲ ೩೬ ಗುಣಗಳನ್ನೂ ಕೂಡಾ ನಾವು ಸೇರಿಸಿಕೊಳ್ಳಬಲ್ಲೆವು ಎನ್ನುವುದೇ "ಮಾಲಾ" ಶಬ್ದದ ಅರ್ಥ. ೩೬ ಗುಣಗಳು ಸೇರಿದಾಗ ಮಾತ್ರ ಮಾಲಾ, ಹಾಗಾಗಿ ಸ್ತ್ರೀಯರಿಗೆ ಮಾಲಿನಿ ಎಂಎಂಬ ಹೆಸರಿದೆ. ಮಾಲಿನಿ ಎಂದರೆ ಆ ೩೬ ಗುಣಗಳನ್ನೂ ಸೇರಿಸಿಕೊಂಡವಳು ಎಂದರ್ಥ. ಅದನ್ನು ಋಗ್ವೇದದ ಐದನೇ ಮಂಡಲದ ೨೬ನೇ ಸೂಕ್ತದಲ್ಲಿರುವ ಗಾಯತ್ರೀ ಛಂದಸ್ಸಿನ ವಿಶ್ವೇದೇವತೆಗಳು (ಪಂಡಿತರು, ವಿದ್ವಾಂಸರು ಎಂದರ್ಥ) ಹೇಳಿರುವ ಮಂತ್ರವು ಇನ್ನಷ್ಟು ಸ್ಪಷ್ಟಪಡಿಸುತ್ತದೆ. ಎಲ್ಲ ಕರ್ಮಾಂಗಗಳಲ್ಲೂ ಈ ಮಂತ್ರವು ಹೆಚ್ಚಾಗಿ ಬಳಕೆಯಾಗುತ್ತದೆ. ಪ್ರತಿಯೊಂದು ಕರ್ಮಾಂಗವೂ ಪ್ರಜಾಜನರಿಗೆ ಸಂಸ್ಕಾರವನ್ನು ಕೊಡುವ, ಅವರನ್ನು ಒಳ್ಳೆಯತನದತ್ತ ಕೊಂಡೊಯ್ಯುವ ಉದ್ದೇಶವನ್ನು ಹೊಂದಿರುತ್ತದೆ. ಹಾಗಾಗಿ ಯಜುರ್ವೇದ ಪ್ರಯೋಗಗಳಲ್ಲಿ ಈ ಮಂತ್ರವು ತುಂಬಾ ಬಳಕೆಯಲ್ಲಿದೆ. ಈ ಕರ್ದಮ ಪ್ರಜಾಪತಿಯ ಸೃಷ್ಟಿಯ ಬಳಿಕ ದಕ್ಷ ಮುಂತಾದ ಬಹಳ ಜನ ಪ್ರಜಾಪತಿಗಳಾಗಿ ಹೋಗಿದ್ದಾರೆ. ಆದರೆ ಪ್ರತಿಯೊಬ್ಬ ಪ್ರಜಾಪತಿಯೂ ತನ್ನ ಆಳ್ವಿಕೆಯ ಕಾಲದಲ್ಲಿ, ತನ್ನ ಮನೋಭೂಮಿಕೆಯ ಆಧಾರದಲ್ಲಿ ಪ್ರಜಾಜನರ ಸೃಷ್ಟಿಯ ವ್ಯವಸ್ಥೆ ಮಾಡುತ್ತಾನೆ. ಪ್ರಜಾಪತಿಯ ಆದೇಶದಂತೆ ಬ್ರಹ್ಮನು ಸೃಷ್ಟಿ ಮಾಡುತ್ತಾನೆ. ಪ್ರಜಾಪತಿಯಾದ ಕರ್ದಮನ ಆದೇಶದಂತೆ ಸೃಷ್ಟಿಯಾದ ಈ ಪ್ರಕೃತಿಯಲ್ಲಿ ಇರತಕ್ಕ "ಬೇಕು" ಎನ್ನುವ ಪ್ರವೃತ್ತಿ ಅಪೇಕ್ಷೆ. ಆ ಅಪೇಕ್ಷೆಗೆ ಅವನು ಮಿತಿಯನ್ನು ಕೊಡುವುದಿಲ್ಲ. ಏಕೆಂದರೆ ಆಳುವುದಕ್ಕೆ ಬೇಕಾಗಿ ಯಾವುದಾದರೂ ಒಂದು ನ್ಯೂನತೆಯನ್ನು ಸಮಾಜದಲ್ಲಿ ಅವನು ಇಟ್ಟುಕೊಳ್ಳಬೇಕು. ಉದಾಹರಣೆಗೆ ಹತ್ತು ಜನರನ್ನು ನಮ್ಮೊಂದಿಗೆ ಕರೆದುಕೊಂಡು ಹೋಗಬೇಕಾದರೆ ನಮ್ಮ ಜೇಬಿನಲ್ಲಿ ತುಂಬಾ ದುಡ್ಡಿರಬೇಕು. ಆಗ ದುಡ್ಡಿನ ಆಕರ್ಷಣೆಗೆ ಜನರು ಹಿಂದೆ ಬರುತ್ತಾರೆ. ಹಾಗೆಯೇ ಬೇಕು ಎನ್ನುವ ಪ್ರವೃತ್ತಿಯ ಪ್ರಲೋಭನೆಗಳನ್ನು ಇಟ್ಟು ಕರ್ದಮನು ಪ್ರಜಾಸೃಷ್ಟಿ ಮಾಡಿದನು. "ರೋಜಿಷಾಮಂದ್ರಯಾ" - ಸಹಜವಾದಂತಹ ಮಾನವೀಯ ಗುಣದ ವಿಕೃತಿ ಎನ್ನುವುದು "ರೋಜಿಷ" ಪ್ರವೃತ್ತಿ, ತಾನಾಗಿಯೇ ಯಾವುದನ್ನೂ ಮಾಡದೆ ಯಾವುದೋ ಒಂದು ಕರ್ತವ್ಯಕ್ಕೆ ಬದ್ಧವಾಗಿಯೋ, ಅನಿವಾರ್ಯವಾಗಿಯೋ ಮಾಡುವುದು, ಉದ್ದೇಶ ಅಥವಾ ಗುರಿಯನ್ನಿಟ್ಟು ಕೆಲಸ ಮಾಡದೆ ಇರುವುದು "ಮಂದ್ರ" ಪ್ರವೃತ್ತಿ. ಇವಿಷ್ಟು ಕರ್ದಮನಿಂದ ಪ್ರೇಷಿತವಾಗಿ ಭೂಮಿಗೆ ಬಂದಂತಹ ದುರ್ಗುಣಗಳು. ಇದಕ್ಕೆ ಸಂಬಂಧಪಟ್ಟಂತಹ ಸೂತ್ರವೇ ಇದೆ. ಅದನ್ನು ಸಾಮವೇದ ಭಾಷ್ಯದಲ್ಲಿ ಬರೆದಿದ್ದೇನೆ. ವಸಿಷ್ಠರ ವಿಚಾರ ಬರೆಯುವಾಗ ಬರೆದಿದ್ದೇನೆ. ಅದನ್ನು ನೀವು ನಂತರ ಓದಿಕೊಳ್ಳಬಹುದು. ಆ ಪ್ರವೃತ್ತಿಯನ್ನು ಕರ್ದಮನ ಕಾಲದಲ್ಲಿ ಜನರಲ್ಲಿ ಪ್ರೇಷಿಸಬೇಕಾಯಿತು. ಏಕೆಂದರೆ ಅದನ್ನು ಪ್ರೇಷಿಸದೆ ಇದ್ದರೆ ಜನರು ಪ್ರಾಪಂಚಿಕದಲ್ಲಿ ತೊಡಗುತ್ತಲೇ ಇರಲಿಲ್ಲ. ಪ್ರಾಪಂಚಿಕವನ್ನು ಬಿಟ್ಟು ಎಲ್ಲರೂ ಸನ್ಯಾಸಕ್ಕೆ ಹೋಗುತ್ತಿದ್ದರು. ಅದಕ್ಕಾಗಿ ಈ ಬೇಕು ಎನ್ನುವ ಪ್ರವೃತ್ತಿಯನ್ನೂ, ರೋಜಿಷವನ್ನೂ, ಮಂದ್ರವನ್ನೂ ಸೇರಿಸಿ ಅದು ಶ್ರೇಷ್ಠ, "ದೇವಜಿಹ್ವಯಾ" ಎಂದು ಘೋಷಿಸಿದರು. ಇವೆಲ್ಲ ಶ್ರೇಷ್ಠವಾದ ವಿಚಾರಗಳು, ಇದನ್ನು ಎಲ್ಲರೂ ಬಳಸಬೇಕು, ಎಲ್ಲರಲ್ಲೂ ಇಚ್ಚಾಶಕ್ತಿ ಇರಬೇಕು ಎಂದರು. ಇನ್ನೊಬ್ಬರು ನಂತರ ಬಂದು ಕ್ರಿಯಾಶಕ್ತಿ ಬೇಕು ಎಂದರು. ಆದರೆ ಇಚ್ಚಾಶಕ್ತಿ ಹಾಗೂ ಕ್ರಿಯಾಶಕ್ತಿಗಳ ಪ್ರಯೋಗ ಸಾಕಾಗುವುದಿಲ್ಲ. ಇವೆರಡರ ಪರಿಣಾಮವಾಗಿ ಹುಟ್ಟುವ ಜ್ಞಾನಶಕ್ತಿಯು ಮಾತ್ರ ಮನುಷ್ಯನನ್ನು ಭಗವಂತನನ್ನಾಗಿ ಮಾಡಲು ಶಕ್ತವಾದುದು. ಆದರೆ ಆ ಜ್ಞಾನಶಕ್ತಿಯ ಕಲ್ಪನೆಯನ್ನು ಕೊಡಲಿಲ್ಲ. ಇಚ್ಚಾಶಕ್ತಿಯಿಂದ ಕ್ರಿಯಾಶಕ್ತಿಯು ಕಾರ್ಯರೂಪಕ್ಕೆ ಇಳಿದರೆ ತನ್ಮೂಲಕ ಉತ್ಪನ್ನವಾಗುವುದು ಜ್ಞಾನಶಕ್ತಿ. ಜ್ಞಾನಶಕ್ತಿ ಇದ್ದರೆ ಮಾತ್ರ ಮನುಷ್ಯ, ಮನುಷ್ಯತ್ವ ಎಲ್ಲವೂ. ಇಲ್ಲದಿದ್ದರೆ ಅದು ಮನುಷ್ಯತ್ವವೇ ಅಲ್ಲ. ಆದರೆ ಅದನ್ನು ಪ್ರೇಷಿಸಲೇ ಇಲ್ಲ. ಇವೆಲ್ಲ ಮರ್ತ್ಯರಿಗೆ, ಮರ್ತ್ಯರ ವ್ಯಯಸ್ಥೆಯಲ್ಲಿಯೇ ಇದ್ದು ಅವರು ಬಾಳಿ ಬದುಕುತ್ತಿರಲಿ ಎನ್ನುವುದಕ್ಕಾಗಿ, ಸಮಾಜವನ್ನು ಸುವ್ಯವಸ್ಥೆಗೆ ತರುವುದಕ್ಕಾಗಿ ಕೊಟ್ಟ ಪ್ರಲೋಭನೆಗಳು. ಅದನ್ನು ಅರ್ಥಮಾಡಿಕೊಂಡು ಪ್ರಲೋಭನೆಯಿಂದ ಹೊರಗೆ ಬರಬೇಕು ಎನ್ನುವುದೇ ಶ್ರೀಸೂಕ್ತದ ವಿಶೇಷವಾದ ಆದರ್ಶ. ಅದನ್ನೇ ಈ ಮಂತ್ರ ಹೇಳಿದೆ.

ಮಂತ್ರ: ಆಪಃ ಸೃಜಂತು ಸ್ನಿಗ್ದಾನಿ ಚಿಕ್ಲೀತ ವಸ ಮೇ ಗೃಹೇ |

ನಿ ಚ ದೇವೀಂ ಮಾತರಂ ಶ್ರಿಯಂ ವಾಸಯ ಮೇ ಕುಲೇ ||

ಸಾಹಿತ್ಯಿಕ ಅರ್ಥ: ಸ್ನಿಗ್ದಾನಿ ಆಪಃ ಸೃಜಂತು - ಮಧುರವಾದ ನೀರು ನನ್ನ ಮೇಲೆ ಸಿಂಪಡಿಸಲ್ಪಡಲಿ. ಚಿಕ್ಲೀತ ವಸ ಮೇ ಗೃಹೇ - ನೀನು ನಮ್ಮ ಮನೆಯಲ್ಲಿ ಇರು. ನಿನ್ನ ಕರುಣೆಯ ಧಾರೆ ನನ್ನ ಮೇಲೆ ಸಿಂಪಡಿಸಲ್ಪಡಲಿ. ನನ್ನ ಮನೆಯ ಮೇಲೆ ಕರುಣೆಯ ಕಟಾಕ್ಷವನ್ನು ಬೀರಿ, ನನ್ನ ಮನೆಯಲ್ಲಿ ನೀನು ನಿಲ್ಲು. ಸಂಪತ್ತಿನ ಸ್ವರೂಪವಾದ ತಾಯಿಯೇ ನನ್ನ ಮನೆಯಲ್ಲಿ ನಿಲ್ಲು.

ವ್ಯಾಖ್ಯಾನ: ಇಲ್ಲಿ "ಕುಲೇ" ಎಂದರೆ ಮನೆ ಎಂದರ್ಥ. ಇಲ್ಲಿ "ನಿ ಚ ದೇವೀಂ ಮಾತರಂ" ಎನ್ನುವುದು ಪ್ರಧಾನ. ಏಕೆಂದರೆ ಪ್ರಕೃತಿಯಲ್ಲಿ ಒಂದು ನಿಯಮವಿದೆ. ಅದು ಪ್ರಥ್ವಿಯ ನಿಯಮ. ಪಂಚಭೂತಾತ್ಮಕ ಸಿದ್ಧಾಂತದಲ್ಲಿ ಆಕಾಶ, ಆಕಾಶದಲ್ಲಿ ಶಬ್ದ ವಾಹ, ಶಬ್ದ ಕರ್ಷಣೆಯಿಂದ ವಾಯು ಉತ್ಪನ್ನವಾಗುತ್ತದೆ. ವಾಯುವಿನಲ್ಲಿರುವ ಗಂಧ ಕಾರಣದಿಂದಾಗಿ ಶಾಖವು ಉತ್ಪನ್ನವಾಗುತ್ತದೆ. ವಾಯುವಿನಲ್ಲಿರುವ ಗಂಧ ಕಾರಣದಿಂದಾಗಿ ಶಾಖ ಉತ್ಪನ್ನವಾಗುತ್ತದೆ. ಅದು ಅಗ್ನಿಯಾಗುತ್ತದೆ. ಅಗ್ನಿಯ ಜ್ವಲನ ಕಾರಣದಿಂದಾಗಿ ನೀರು, ನೀರಿನಿಂದ ಪ್ರಥ್ವಿ. ಹಾಗೆ ಆಪ ಸೃಜಂತು, ನೀರಿನಿಂದ ಪ್ರಥ್ವಿ ಹುಟ್ಟುತ್ತದೆ. ಆ ಪ್ರಥ್ವಿಯ ಪ್ರಭಾವ ಏನಿದೆ ಅದು ಮನುಷ್ಯನ ಮೇಲೆ ಪರಿಣಾಮ ಮಾಡಿಯೇ ಮಾಡುತ್ತದೆ. ಅದನ್ನೇ ಋಗ್ವೇದದ ೨೪ನೇ ಸೂಕ್ತದ ಮಂತ್ರವೊಂದರಲ್ಲಿ ಹೇಳಲಾಗಿದೆ. ಅದರ ಹಿನ್ನಲೆಯಲ್ಲಿ ಈ ಮಂತ್ರವು ಈ ರೀತಿಯ ಅರ್ಥವನ್ನು ಕೊಡುತ್ತದೆ. ಪ್ರಥ್ವಿಯ ತತ್ವಕ್ಕೆ ಆಧರಿಸಿ ಭೌತಿಕ ದೇಹ. ಭೌತವು ಪ್ರಧಾನವಾದದ್ದು. ಇತರ ಪಂಚಭೂತಗಳು ಅಷ್ಟಷ್ಟು ಪ್ರಮಾಣದಲ್ಲಿರುತ್ತವೆ. ಪ್ರಥ್ವಿ ಪ್ರಧಾನ ದೇಹಕ್ಕೆ ಸಹಜ ಮೃತ್ ಸ್ವರೂಪ. "ಮೃತ್"ವಿನಂತೆ ಅದಕ್ಕೆ ನಿರಂತರ ಚಲನೆ ಇರುತ್ತದೆ. ಹಾಗಾಗಿ ಅದಕ್ಕೆ ಕ್ಷೀಣ ಯೋಗ. ಆ ಕ್ಷೀಣ ಯೋಗವನ್ನು ದಾಟಲು ಕುದುರೆಯ ಪ್ರವೃತ್ತಿಯಂತೆ ನೆಗೆದು, ಜಯಿಸಿ ಮುಂದಕ್ಕೆ ಹೋಗುವಂತೆ ಮಾಡಬೇಕು. ಪಂಚಭೂತಗಳಿಂದಲೂ ಬಿಡುಗಡೆಹೊಂದಿಕೊಳ್ಳಬೇಕಾಗುತ್ತದೆ. ಅಂತಹದ್ದನ್ನು ಪಡೆಯುವ ಶಕ್ತಿ ಎಂದರೆ "ಸ್ನಿಗ್ಧ", "ಚಿಕ್ಲೀತ" ಎನ್ನುವ ನಿಮ್ಮಲ್ಲಿರುವ ವಿಶಿಷ್ಟವಾದ ಶಕ್ತಿಗಳು. ಸ್ವಲ್ಪ ಮೃದು, ಸಮಾಧಾನವಾಗಿದ್ದರೆ ಅದಕ್ಕೆ ಸ್ನಿಗ್ಧ ಗುಣ ಎನ್ನುತ್ತಾರೆ. ನಿಮಗೆ ಬೇಕಾದ್ದು ನಿರಂತರ ಸಮಾಧಾನಕರವಾದ, ಶಾಂತವಾಗಿರುವ ಪ್ರವೃತ್ತಿ. ಅದನ್ನು ರೂಡಿಸಿಕೊಳ್ಳಬೇಕು. ಹಾಗೆಯೇ "ಚಿಕ್ಲೀತ" - ಯಾವುದೇ ವಿಚಾರ ಮನಸ್ಸಿಗೆ ಬರಲಿ, ಕಿವಿಗೆ ಕೇಳಲಿ - ಗ್ರಹಿಸುವುದು ಎಂದರೆ ೫ ರೀತಿಯಲ್ಲಿ ಗಂಧವನ್ನು ಸ್ವೀಕರಿಸುವುದು - ಗೃಹಿಸಿದ ವಿಚಾರಗಳನ್ನು ಪುನರ್ವಿಮರ್ಶೆ, ಪರಾಮರ್ಶೆ ಮಾಡದೆ ವಿಚಾರಕ್ಕೆ ಪ್ರವರ್ತನೆ ಮಾಡಬಾರದು. ಆ ಗುಣವೇ ಚಿಕ್ಲೀತ ಗುಣ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎನ್ನುವ ಗಾದೆಯೇ ಇದೆ. ಕಣ್ಣಿಗೆ ಸ್ಪಷ್ಟವಾಗಿ ಕಂಡರೂ, ಸತ್ಯವೇ ಅನ್ನಿಸಿದರೂ ಅದು ಸುಳ್ಳಾಗಿರಬಹುದು. ಹಾಗೆಯೇ ಆ ಚಿಕ್ಲೀತ ಗುಣವನ್ನೂ, ಸ್ನಿಗ್ಧ ಗುಣವನ್ನೂ ಸೇರಿಸಿ, ಆ ಗುಣಗಳ ಯುಕ್ತವಾಗಿ ನಾನು ಈ ಮನೆಯಲ್ಲಿ ವಾಸವಾಗುತ್ತೇನೆ. ಆಗ ನೀನು ನನ್ನ ಜೊತೆಯಲ್ಲಿ ಈ ಮನೆಯಲ್ಲಿ ಇರುತ್ತೀಯ ಎನ್ನುವ ಅರ್ಥದಲ್ಲಿ ಈ ಮಂತ್ರ ಇದೆ.

ಚಿಕ್ಲೀತ ಎಂದರೆ ಪ್ರತಿಯೊಂದನ್ನೂ ವಿಮರ್ಶಿಸಿ ಚಿಕಿತ್ಸಕ ಗುಣದಿಂದ ಚಿಂತಿಸುವ ಪ್ರವೃತ್ತಿ. ಶುದ್ಧಪಡಿಸುವುದು, ಪುನಃ ಪುನಃ ಪುಟಕ್ಕಿಡುವುದು, ಕ್ರಿಯಾತ್ಮಕ ಕಾರ್ಯವಿಲ್ಲದೆ ಮನಸ್ಸಿನಲ್ಲಿ ಚಿಂತನೆ ಮಾಡುವುದು ಎಂದೂ ಅರ್ಥವಾಗುತ್ತದೆ. ಚಿತ್ತದಿಂದ ಶುದ್ಧ ಮಾಡುತ್ತಾ, ವಿಚಾರಗಳ ವಿಮರ್ಶೆ ಮಾಡಿ, ಯಾವುದು ಸೂಕ್ತ, ಸತ್ಯ ಎನ್ನುವುದನ್ನು ಅರ್ಥಮಾಡಿ ತೆಗೆದುಕೊಳ್ಳಬೇಕು, ಎಲ್ಲದನ್ನೂ ತೆಗೆದುಕೊಳ್ಳುವುದಲ್ಲ. ಶಬ್ದಗಳ ರೂಪದಲ್ಲಿ ಬೇಕಾದಷ್ಟು ವಿಚಾರಗಳು ಬರುತ್ತವೆ. ಬಂದ ಎಲ್ಲ ಶಬ್ದಗಳೂ ಸತ್ಯವಲ್ಲ. ಹಾಗೆಯೇ ಏನೇನೋ ವಿಚಾರಗಳ ವಾಸನೆ ಬರುತ್ತದೆ, ವಾಯು ಪ್ರವರ್ತಿತ, ಅವು ಸತ್ಯವಲ್ಲ. ಹಾಗೆಯೇ ನಮಗೆ ನಮ್ಮದ್ದೇ ಆದಂತಹ ವಿಚಾರಗಳ ಶಾಖ ಉತ್ಪನ್ನವಾಗುತ್ತದೆ. ವಿಚಾರಗಳ ರೋಷ ಹುಟ್ಟುತ್ತದೆ, ದ್ವೇಷ, ಕ್ಲೇಶಗಳು ಹುಟ್ಟುತ್ತವೆ. ಅದಕ್ಕೆ ಅಗ್ನಿ ಕಾರಣ. ಅದು ಸತ್ಯವಾಗಿರಲಿಕ್ಕೆ ಸಾಧ್ಯವಿಲ್ಲ, ಹಾಗೆಯೇ ಕೆಲವೊಂದಿಷ್ಟು, ನಮಗೆ ಬೇಕು ಎನ್ನುವ ದಾಹವನ್ನು ಹುಟ್ಟಿಸುತ್ತವೆ, ಅದಕ್ಕೆ ನೀರು ಕಾರಣ. ವಿಚಾರಗಳ ಪ್ರವೃತ್ತಿ ಬೇಕು ಎನ್ನುವುದು, ಇದ್ಯಾವುದೂ ಸತ್ಯವಲ್ಲ. ಹಾಗಂತ ಅವೆಲ್ಲ ಸ್ವೀಕಾರಕ್ಕೆ ಅನರ್ಹವೂ ಅಲ್ಲ. ಅವುಗಳನ್ನು ಚಿಕ್ಲೀತಗೊಳಿಸಬೇಕು, ಪುನಃ ಪುನಃ ಪುಟಕ್ಕಿಟ್ಟು ಚಿಂತನೆ ಮಾಡಬೇಕು. ಆಗ ಮಾತ್ರ ಮೃತ್ ಸ್ವರೂಪ ಅಂದರೆ ಭೂಮಿ, ಭೌತಿಕ ಸ್ವರೂಪದ ದೇಹಕ್ಕೆ ರಕ್ಷಣೆ ಸಿಗುತ್ತದೆ. ಆ ಶಬ್ದ, ಗಂಧ, ಶಾಖ, ದಾಹ, ಇವುಗಳನ್ನು ದೂರ ಮಾಡಿದರೆ ಪ್ರಥ್ವಿಗೆ ಒಳ್ಳೆಯದಾಗುತ್ತದೆ. ಅವುಗಳ ಕಾರಣದಿಂದ ಈ ಪ್ರಥ್ವಿ, ಭೌತಿಕ ಸ್ವರೂಪ ಕೆಡುತ್ತಾ ಇರುವುದು. ಹಾಗಾಗಿ ಆ ದಾಹವನ್ನೂ, ಗಂಧವನ್ನೂ, ಶಬ್ಧವನ್ನೂ, ಶಾಖವನ್ನೂ ಬಿಟ್ಟು ಅವುಗಳಲ್ಲಿರುವ ಒಳ್ಳೆಯದನ್ನು ಮಾತ್ರ ಸ್ವೀಕರಿಸಿದರೆ ಪೃಥ್ವಿಯಲ್ಲಿ ಎಲ್ಲರೂ ಪಾರ್ಥರೇ.

ಪ್ರಶ್ನೆ: ಆ ಗುಣಗಳನ್ನು ಬೆಳೆಸಿಕೊಂಡು ನಾನು ಇರುತ್ತೇನೆ ಎನ್ನುವ ಪ್ರಾರ್ಥನೆಯೇ ಇದು?

ಉತ್ತರ: ಇದು ಪ್ರಾರ್ಥನೆ ಅಲ್ಲ. "ಸೋಹಂ ಭಾವೇನ ಪೂಜಯೇತ್" - ನಾನೇ ಎಂದರ್ಥ. ಸ್ತ್ರೀಯಾದವಳೇ ಸ್ವತಃ ಈ ಗುಣಗಳನ್ನು ಬೆಳೆಸಿಕೊಂಡು ಇರುತ್ತೇನೆ ಎಂದೇ ಅರ್ಥ. "ಶ್ರಿಯಂ ವಾಸಯ ಮೇ ಕುಲೇ" - ನಾನೇ ಆ ಗುಣಗಳನ್ನು ಬೆಳೆಸಿಕೊಳ್ಳುತ್ತೇನೆ. ನಾನೇ ಹಾಗಾಗಿ ಶ್ರೀ, ನಾನೇ ಲಕ್ಷ್ಮಿ ಎನ್ನುವ ಅರ್ಥ.