ಮಂತ್ರ: ಅಶ್ವಪೂರ್ವಾಂ ರಥಮಧ್ಯಾಂ ಹಸ್ತಿನಾದ ಪ್ರಬೋಧಿನೀಮ್ |
ಶ್ರಿಯಂ ದೇವೀಮುಪಹ್ವಯೇ ಶ್ರೀರ್ಮಾ ದೇವೀರ್ಜುಷತಾಮ್ ||
ಸಾಹಿತ್ಯಿಕ ಅರ್ಥ: ಅಶ್ವ, ರಥ ಮತ್ತು ಆನೆ ಈ ಮೂರರ ಉಲ್ಲೇಖ ಇದೆ. ಎರಡು ಯುದ್ಧದಲ್ಲಿ ಬಳಸುವ ಪ್ರಾಣಿಗಳು, ಇನ್ನೊಂದು ಯುದ್ಧರಂಗದಲ್ಲಿ ಬಳಸುವ ಪರಿಕರ. ಅಶ್ವಪೂರ್ವಾಮ್ - ಮೊದಲು ಅಶ್ವ ಇರಬೇಕು, ರಥಮಧ್ಯಾಮ್ - ಅದರ ಹಿಂದೆ ರಥ ಇರಬೇಕು. ರಥವನ್ನು ಅಶ್ವ ಎಳೆದುಕೊಂಡು ಹೋಗಬೇಕು. ಈಗ ಸಂಸಾರವೆಂಬ ರಥವನ್ನು ಎಳೆಯಬೇಕಾದರೆ ಒಂದು ಅಶ್ವ, ಹಿಂಭಾಗದಲ್ಲಿ ಒಂದು ಆನೆ, ಪುರುಷ ಮತ್ತು ಸ್ತ್ರೀ ಇಬ್ಬರೂ ಒಟ್ಟಾಗಿ ಮುನ್ನಡೆಸಬೇಕು. ಈ ಪುರುಷ ಸ್ತ್ರೀಯರ ಪ್ರಭೋಧಿನೀಂ - ಎಚ್ಚರದ ಮಾತು, ಎಚ್ಚರದ ಬದುಕು, ಈ ಸಂಸಾರ ರಥವು ಚೆನ್ನಾಗಿ ನಡೆಯಲು ಅನುಕೂಲವಾಗಬೇಕು. ಇದರಿಂದಾಗಿ "ಶ್ರಿಯಂ ದೇವೀಮುಪಹ್ವಯೇ" - ನಾವು ಸಂಪತ್ತಿನ ದೇವತೆಯನ್ನು ಅಥವಾ ಸಂಪತ್ತನ್ನು ಪಡೆದುಕೊಳ್ಳುತ್ತೇನೆ. "ಶ್ರೀರ್ಮಾದೇವೀಜುಷತಾಮ್" - ಯಾವುದು ನಮ್ಮ ಬದುಕನ್ನು ಅಪಮಾರ್ಗಕ್ಕೆ ಕೊಂಡೊಯ್ಯುತ್ತದೋ, ಅಂತಹ ಸಂಪತ್ತು ಬೇಡ. ಆ ಸಂಪತ್ತು ತರುವಂತಹ ಸ್ಥಾನದಲ್ಲಿ ಸ್ತ್ರೀ ಪುರುಷರಿದ್ದಾರೆ. ಆ ಸ್ತ್ರೀ ಪುರುಷರು ಚೆನ್ನಾಗಿ ಸಂಪತ್ತನ್ನು ವಿನಿಯೋಗಿಸಿದರೆ, ಆ ಕುಟುಂಬ, ಆ ಸಮಾಜ, ಅತ್ಯಂತ ವ್ಯವಸ್ಥಿತವಾಗುತ್ತದೆ. ಅಂತಹ ಸಮರ್ಥವಾದ ಸಮಾಜವನ್ನು ಮುನ್ನಡೆಸುವುದಕ್ಕಾಗಿ ಬೇಕಾದಂತಹ "ಶ್ರೀಯಂ" - ಸಂಪತ್ತನ್ನು ನನಗೆ ಕೊಡು ಎಂದು ಈ ಶ್ಲೋಕದಲ್ಲಿ ಕೇಳಲಾಗಿದೆ.
ವ್ಯಾಖ್ಯಾನ: ತ್ಯಾಗ ಪ್ರಧಾನವಾದದ್ದು, "ಜುಷತಾಮ್" - ಬಿಡುತ್ತೇನೆ ಎನ್ನುವುದೇ ಇಲ್ಲಿ ಬಹಳ ಮುಖ್ಯವಾಗಿದೆ. ತ್ಯಾಗ ಪ್ರಧಾನವಾದ ಜೀವನವನ್ನು ಹೇಳುತ್ತದೆ. "ಅಶ್ವಪೂರ್ವಾಮ್" - ನಿಮ್ಮ ಕಲ್ಪನೆಯಲ್ಲಿ ಇಲ್ಲದಂತಹದ್ದು, ನಿಮ್ಮ ಪೂರ್ವ. ಹಾಗೇ "ರಥಮಧ್ಯಾಮ್" - ಜೀವನ ಕಾಲ, ಅಂದರೆ ನೀವು ಜೀವನ ರಥರಾದಾಗ. ರಥ ಅಂದರೆ ೪ ಚಕ್ರದ ಅಥವಾ ೨ ಚಕ್ರದ ವಾಹನ ಅಂತ ಅರ್ಥ ಅಲ್ಲ. ನಿಮ್ಮ ಜೀವನ ರಥ ಅಂದರೆ ನೀವು ಸಂಚರಿಸುವ ಕಾಲ ಅಥವಾ ಜೀವನ ಪ್ರವೃತ್ತಿ ಅನ್ನುವ ಅರ್ಥ. ಜೀವನ ಕಾಲದಲ್ಲಿ ನಿಮ್ಮ ಪೂರ್ವವು ನಿಮ್ಮನ್ನು ಅಶ್ವ ರೂಪದಲ್ಲಿ, ಅಶ್ವ ಅಂದರೆ ನಿಮ್ಮ ಋಣ, ಕರ್ಮ, ಆಗಾಮಿ, ಪ್ರಾಪ್ತಿ, ಸಂಚಿತ ಇತ್ಯಾದಿ. ಈ ಪೂರ್ವವು ನಿಮ್ಮ ಜೀವನ ಮಧ್ಯದಲ್ಲಿ ತನ್ನ ಪ್ರಭೋಧನೆಯನ್ನು ಅಥವಾ ಪ್ರಲೋಭನೆಯನ್ನು ಇಟ್ಟು ನಿಮ್ಮನ್ನು ನಡೆಸುವ ಪ್ರಯತ್ನ ಮಾಡುತ್ತದೆ. ಆ ನಡಿಗೆ ಹೇಗಿರುತ್ತದೆ ಎಂದರೆ ಆನೆಯ ನಡಿಗೆಯಂತಿರುತ್ತದೆ. ಆ ಆನೆಯ ಪ್ರವೃರ್ತನೆಯನ್ನು ನೀವು ಹೊಂದಿದ್ದೇ ಆದರೆ ನಿಮ್ಮ ಗುರಿ ನೆರವೇರಲಿಕ್ಕೆ ಸಾಧ್ಯವಿಲ್ಲ. ನಿಮ್ಮ ಗುರಿ ನೆರವೇರಬೇಕೆಂದಿದ್ದರೆ ನಿಮ್ಮಲ್ಲಿ ಕ್ಷಿಪ್ರತೆ ಬೇಕು, ಬುದ್ಧಿ ವಿಚಕ್ಷಣತೆ ಬೇಕು, ಪ್ರತ್ಯುತ್ಪನ್ನ ಮತಿ ಬೇಕು. ಅವನ್ನು ರೂಢಿಸಿಕೊಳ್ಳಬೇಕಾದರೆ ಪ್ರವೃರ್ತನೆಯಾದಂತಹ ಆ ಹಸ್ತಿಯ ಚಲನೆಯ ಪ್ರಭೋಧನೆಯನ್ನು ನೀವು ತ್ಯಾಗಮಾಡಬೇಕಾಗುತ್ತದೆ. ಆ ಹಸ್ತಿಯ ನಡಿಗೆಯ ಪ್ರಭೋಧನೆಯನ್ನು ಸ್ವೀಕರಿಸಿದರೆ ನಿಮಗೆ ಜೀವನಾನಂದ ಸಿಗಬಹುದು. ಆದರೆ ಮುಕ್ತಿ ಸಿಗಲಿಕ್ಕಿಲ್ಲ. ಪ್ರತ್ಯುತ್ಪನ್ನ ಮತಿ ಪ್ರಾಪ್ತವಾಗಲಿಕ್ಕಿಲ್ಲ, ಜೀವನದಲ್ಲಿ ಯಶಸ್ಸು ಸಾಧಿಸಲಿಕ್ಕೆ ಸಾಧ್ಯವಿಲ್ಲ. ಕೇವಲ ನೆಮ್ಮದಿ ಮಾತ್ರ ಸಿಗಬಹುದು.
ಅಪ್ಪ ಮಾಡಿಟ್ಟ ಆಸ್ತಿ ಇದೆ. ವರ್ಷಕ್ಕೊಂದು ೧೦ ಖಂಡಿಗೆ ಭತ್ತ ಗೇಣಿ ಬರುತ್ತದೆ. ಉಂಡುಕೊಂಡು ಮನೆಯಲ್ಲಿ ಬಿದ್ದಿರುತ್ತೇನೆ ಎಂದರೆ ಅವನು ಬಿದ್ದುಕೊಂಡಿರಬಹುದು. ಆದರೆ ಅವನು ಮನುಷ್ಯನಾಗಲಿಕ್ಕೆ ಆಗುವುದಿಲ್ಲ. ಅವನು ತನ್ನ ಮಾನವೀಯತೆಯನ್ನು ಸಮಾಜ ಮಧ್ಯದಲ್ಲಿ ತೊಡಗಿಸಿ ಬೆಳೆದರೆ ಮಾತ್ರ ಅವನು ಮಾನವನಾಗಿ ಬೆಳೆಯಲಿಕ್ಕೆ ಸಾಧ್ಯ. ಹಾಗೆ ಬೆಳೆಯಬೇಕಾದರೆ ಈ ಹಸ್ತಿ ಪ್ರವೃತ್ತಿಯನ್ನು ತ್ಯಾಗ ಮಾಡಿ, ಇದ್ದ ಸೌಲಭ್ಯಗಳಿಂದ ಸುಖ ಆನಂದಗಳು ಸಿಗುತ್ತವೆ ಅಂದುಕೊಳ್ಳುವುದಲ್ಲ, ಆ ಸೌಲಭ್ಯಗಳನ್ನು ತ್ಯಾಗ ಮಾಡಿ ತಾನು ಪ್ರವೃರ್ತನೆಗಳಿಗಿಳಿದಾಗ ಮಾತ್ರ ಸಾಧಕನಾಗಲಿಕ್ಕೆ ಸಾಧ್ಯವಾಗುತ್ತದೆ. ಆ ಸಾಧನೆಗೆ ಬೇಕಾದ್ದು, ಯಾವುದು ನಿಮಗೆ ಕೊಡಲ್ಪಡತಕ್ಕದ್ದಿದೆಯೋ (ನಿಮ್ಮ ಸಂಚಿತ, ಯಾವ ದೇವರೂ ಕೊಡುವಂಥದಲ್ಲ) ಅದನ್ನು ಪಡೆಯುವ "ದೇವೀಮುಪಹ್ವಯೇ" - ನಿಮ್ಮದ್ದೇ ಆಗಿದೆ ಅದು, ನಿಮ್ಮದ್ದಾಗಿ ನೀವು ಪಡೆಯುತ್ತೀರಿ. ಕೊಡಲ್ಪಡತಕ್ಕದ್ದು "ದೇವೀ", ಕೊಡಲ್ಪಡುವ ಅಲ್ಲ. "ದೇವ" - ಕೊಡುವ ಶಕ್ತಿ ಇರುವುದು ಅಂತ ಅರ್ಥ. ಇದು "ದೇವೀ" - ಕೊಡಲ್ಪಡತಕ್ಕದ್ದು, ನಿಮ್ಮ ಋಣ, ನಿಮ್ಮ ಕರ್ಮ, ಅದನ್ನು ಪಡೆಯುವುದು ಹೇಗಿರಬೇಕು, "ಶ್ರೀರ್ಮಾ" - ಅಂದರೆ "ಶ್ರೀ", "ರ" ಇವೆರಡೂ ಬೇಡ. ಇವೆರಡನ್ನೂ ಬಿಟ್ಟಂತಹ, ಕೊಡಲ್ಪಡತಕ್ಕದ್ದಾದಂತಹ, ನಿಮ್ಮ ಋಣ ಕರ್ಮಗಳಿಗೆ ಸಂಬಂಧಪಟ್ಟಂತಹ ಯೋಗಗಳೇನಿವೆ ಅವನ್ನು ಮಾತ್ರ ಪಡೆಯುತ್ತೇನೆ. ಉಳಿದದ್ದನ್ನೆಲ್ಲ ತ್ಯಾಗ ಮಾಡುತ್ತೇನೆ. ಉಳಿದದ್ದನ್ನೆಲ್ಲ ಬಿಟ್ಟರೆ ಮಾತ್ರ ಜೀವನ ಎನ್ನುವ ಅರ್ಥದಲ್ಲಿ ಈ ಮಂತ್ರ ಇದೆ.
ಅಶ್ವ ಎಂದರೆ ಜನ್ಮಾಂತರ ಪ್ರಾಪ್ತಿ, ಕರ್ಮ ಎನ್ನುವ ಅರ್ಥ. ಕರ್ಮದ್ಯೋತಕವಾಗಿ ಅಶ್ವ ಶಬ್ದದ ಬಳಕೆ ಇದೆ. ಜೀವನ ಚಲನೆಯನ್ನು ರಥಮಧ್ಯ, ವರ್ತಮಾನಕಾಲ. ಭವಿಷ್ಯವೇ ಜುಷತಿ - ತ್ಯಾಗ. ಋಣ ಕರ್ಮಗಳಿಂದಾದ ಪ್ರವೃತ್ತಿಯನ್ನು ನಮ್ಮ ಮೇಲೆ ಆರೋಪ ಮಾಡುತ್ತಲೇ ಇರುತ್ತವೆ. ಅವನ ವಿಧಿ, ಅವನು ಅನುಭವಿಸುತ್ತಾನೆ, ಎನ್ನುವ ಮಾತುಗಳು ಬರುವುದು ಅದರಿಂದಲೇ. ಆದರೆ ಅದು ವಿಧಿಯಲ್ಲ. ಅದನ್ನು ಜಯಿಸಬೇಕು. ಅದು ಸಂಪತ್ತಿನ ರೂಪದಲ್ಲಿ ನಮಗೆ ಸುಖದಾಯಕವಾಗಿರಲೂಬಹುದು ಅಥವಾ ಕಷ್ಟದಾಯಕವಾಗಿರಲೂಬಹುದು. ಆದರೆ ಜಯಿಸುವುದೇ ಜೀವನದ ಗುರಿ. ಅದನ್ನು ಬಿಟ್ಟು ಜೀವನವಲ್ಲ. ಏನು ಬಂದರೂ ಅದನ್ನು ಜಯಿಸಿ ಮುಂದಕ್ಕೆ ಹೋಗುವ ಪ್ರಯತ್ನ ಮಾಡಬೇಕು. ಆತ್ಮೋನ್ನತಿಯ ಸಾಧನೆ ಮಾಡಬೇಕು. ಸಮಾಜವನ್ನು ಎತ್ತರಕ್ಕೆ ತರಬೇಕು ಅನ್ನುವುದೇ ಗುರಿಯಾಗಿರಬೇಕು. ಅದು ಪ್ರಭೋಧನೆಯನ್ನು ಮಾಡಿಯೇ ಮಾಡುತ್ತದೆ. ಪ್ರಲೋಭನೆಯನ್ನು ಒಡ್ಡುತ್ತದೆ. ಸುಖವನ್ನೂ, ಆನಂದವನ್ನೂ, ಬೇರೆ ಬೇರೆ ರೀತಿಯಲ್ಲಿ ಆಮಿಷವನ್ನೂ ತಂದುಕೊಡಬಹುದು. ಆದರೆ ಅದು ನಿಜವಾದ ಸುಖ, ಆನಂದವಲ್ಲ. ಸಮಾಜಕ್ಕೆ ಬೇಕಾದ ರೀತಿಯಲ್ಲಿ ಇರಬೇಕು. ಮೊದಲೇ ನಾನು ಉದಾಹರಿಸಿದ್ದೇನೆ. ಒಂದು ಮರವಾಗುವ ಹಿನ್ನಲೆಯ ಉದ್ದೇಶ ಬಳ್ಳಿಗೆ ಆಶ್ರಯ ಕೊಡುವ ಪುಣ್ಯದ ಕೆಲಸ ಮಾಡುತ್ತೇನೆ ಎನ್ನುವ ಕಾರಣಕ್ಕಾಗಿ. ಮರವಾಗಿ ಬೆಳೆಯುವುದು ಮುಖ್ಯ ಅಲ್ಲ. ಒಂದು ಬಳ್ಳಿಗೆ ಆಶ್ರಯ ಕೊಡುವ ಶಕ್ತಿಯು ನನಗೆ ಬರುತ್ತದಲ್ಲ ಎನ್ನುವ ಕಾರಣಕ್ಕೆ ಮನುಷ್ಯ ಮರವಾಗಿ ಬೆಳೆಯಬೇಕು.