Page 11

ಮಂತ್ರ: ಕ್ಷುತ್ಪಿಪಾಸಾಮಲಾಂ ಜ್ಯೇಷ್ಠಾಮಲಕ್ಷೀಂ ನಾಶಯಾಮ್ಯಹಮ್ |

ಅಭೂತಿಮಸಮೃದ್ಧಿಂ ಚ ಸರ್ವಾಂ ನಿರ್ಣುದ ಮೇ ಗೃಹಾತ್ ||

ಸಾಹಿತ್ಯಿಕ ಅರ್ಥ: ನಿನ್ನ ಅನುಗ್ರಹಕ್ಕೋಸ್ಕರ ನಾನು ಹಸಿವು, ಬಾಯಾರಿಕೆ, ಅಲಕ್ಷ್ಮಿ (ಕೆಟ್ಟತನ) ಇವುಗಳನ್ನೆಲ್ಲವನ್ನೂ ದೂರವಿಡಲು ಸಿದ್ಧನಿದ್ದೇನೆ. ಅತ್ಯಂತ ಶ್ರೇಷ್ಠವಾದ ಭೂತಿ (ಸಂಪತ್ತನ್ನೂ), ಸಮೃದ್ಧಿಯನ್ನೂ, ಈ ಎಲ್ಲ ಒಳ್ಳೆಯತನವನ್ನೂ ನನ್ನ ಮನೆಯಲ್ಲಿ ಇರುವಂತೆ ಮಾಡು.

ವ್ಯಾಖ್ಯಾನ: ಹಿಂದಿನ ಮಂತ್ರಕ್ಕೆ ಪೂರಕವಾಗಿ ಈ ಮಂತ್ರವನ್ನು ಕೂಡಾ ಹೇಳಿದ್ದಾರೆ. ಮನುಷ್ಯನಿಗೆ ಸಹಜ ಸ್ವಾಭಾವಿಕವಾಗಿ ಹಸಿವೆ, ಬಾಯಾರಿಕೆ ಹಾಗೂ ಇತರ ಅಪೇಕ್ಷೆಗಳು (ಅಮಲ) ಇರುತ್ತವೆ. ಮಲ ಎಂದರೂ ಅಷ್ಟೇ, ಅಮಲ ಎಂದರೂ ಅಷ್ಟೇ, ಸ್ವೀಕರಿಸಲು ಅರ್ಹವಲ್ಲದ್ದು ಎಂದರ್ಥ. ಅನಿವಾರ್ಯವಾಗಿ ಮನಸ್ಸಿನ ಇಚ್ಛೆಯಿಂದ ಹುಟ್ಟುವ ಇಚ್ಛೆಗಳೆಲ್ಲವೂ ಅಮಲಗಳೇ. ಮಲ ಎಂದರೆ ಮುಟ್ಟಲೂ ಕೂಡ ಅರ್ಹವಲ್ಲದ್ದು ಎಂದರ್ಥ. ಅಮಲ ಎಂದರೆ ಬಳಸಬಾರದ್ದು, ಸ್ವೀಕಾರಾರ್ಹವಲ್ಲದ್ದು ಎಂದರ್ಥ. ಅವೆಲ್ಲ ನಮಗೆ ಅಗತ್ಯ ಎನ್ನುವ ಕಲ್ಪನೆ ನಮ್ಮಲ್ಲಿದೆ, ಹಾಗಾಗಿ ಜ್ಯೇಷ್ಠ ಎಂದು ತಿಳಿದುಕೊಂಡಿದ್ದೇವೆ.ಅದೇ ಉತ್ತಮ ಎಂದು ಅರ್ಥ ಮಾಡಿಕೊಂಡಿದ್ದೇವೆ. ಆದರೆ ಅವು ಯಾವುವೂ ನಮಗಲ್ಲ. ಹಸಿವು, ಬಾಯಾರಿಕೆಗಳು ಖಂಡಿತ ಜ್ಯೇಷ್ಠವಲ್ಲ. ಆದರೆ ಅವು ದೇಹ ವ್ಯಾಪಾರದಲ್ಲಿ ಹುಟ್ಟುವ ಪ್ರವೃತ್ತಿಗಳು. ಅದೇ ನಾವು ಸಾರಗ್ರಾಹಿಗಳಾಗುವ ಗುಣವನ್ನು ಬೆಳೆಸಿಕೊಂಡರೆ ಹಸಿವು, ಬಾಯಾರಿಕೆಗಳಾಗಲೀ, ಅಮಲಗಳ ಅಪೇಕ್ಷೆಯಾಗಲೀ ಹುಟ್ಟುವುದಿಲ್ಲ. ಅಂತಹ ಅಪೇಕ್ಷೆ ಎಂದು ಹೇಳತಕ್ಕಂತಹ ನಮ್ಮ ಮನಸ್ಸಿನ ಬೇಡಿಕೆಯ ತುರೀಯಾವಸ್ಥೆ ಏನಿದೆ ಅದೆಲ್ಲವನ್ನೂ ನಾನು ಬಿಡುತ್ತೇನೆ. ಹಾಗೆಯೇ ಅಭೂತಿಯನ್ನೂ, ಅಸಮೃದ್ಧಿಯನ್ನೂ ಬಿಡುತ್ತೇನೆ. ಸಮೃದ್ಧಿ ಬೇಕು ಆದರೆ ಅಸಮೃದ್ಧಿ ಬೇಡ. ನಿಮ್ಮ ಶ್ರಮವಿಲ್ಲದೆ ಸಿಗತಕ್ಕಂತಹ ಒಂದು ಪೈಸೆಯೂ ನಿಮ್ಮದ್ದಲ್ಲ, ಅದು ನಿಮಗೆ ಬೇಡ, ಅದನ್ನು ಅಸಮೃದ್ಧಿ ಎನ್ನಲಾಗಿದೆ. ಇದು ಸಮೃದ್ಧಿಯ ವಿರುದ್ಧಾರ್ಥಕ ಅಲ್ಲ. ಯಾವುದು ನಿಮಗೆ ಅಕಾರಣವಾಗಿ ಬಂದು ತಲುಪುತ್ತದೆಯೋ ಅದು ನಿಮ್ಮದ್ದಲ್ಲ. ಇನ್ನು ಅಭೂತಿ ಎಂದರೆ ವಿಭೂತಿ, ಬಹಳ ಶ್ರೇಷ್ಠವಾದದ್ದು, ತುರೀಯಾವಸ್ಥೆಯನ್ನು ತಲುಪಿದ್ದುದು. ಆದರೆ ಅಭೂತಿ ನಮ್ಮನ್ನು ಪ್ರಾಪಂಚಿಕದಲ್ಲಿಯೇ ಇಟ್ಟುಕೊಳ್ಳತಕ್ಕಂತಹ ವಿಚಾರ. ಅದಕ್ಕೆ ಆ ಪ್ರಾಪಂಚಿಕಕ್ಕೆ ಹೊರತುಪಡಿಸಿದ ಅಭೂತಿಯನ್ನೂ, ಅಸಮೃದ್ಧಿಯನ್ನೂ ಬಿಡುತ್ತೇನೆ. ಅದು ನನಗೆ ಬೇಕಿಲ್ಲ. "ಸರ್ವಾಮ್ ನಿರ್ಣುದ ಮೇ ಗೃಹಾತ್" - ಅವೆಲ್ಲವನ್ನೂ ಬಿಟ್ಟ, ಶ್ರೇಷ್ಠವಾದ ವಿಚಾರಗಳನ್ನು ಮಾತ್ರ ಸ್ವೀಕರಿಸುತ್ತ ಈ ಮನೆಯಲ್ಲಿ ವಾಸಿಸುತ್ತೇನೆ. ಹಾಗಾಗಿ ಈ ಮನೆಯೇ ಶ್ರೇಷ್ಠವಾಗಿರಲಿ. ಅದಕ್ಕಾಗಿಯೇ ನಿಮ್ಮನ್ನು ಗೃಹಿಣಿ ಎಂದು ಹೇಳಿದ್ದಾರೆ. ಆ ಮನೆಯನ್ನೇ ಶ್ರೇಷ್ಠವಾದದ್ದನ್ನಾಗಿ ಮಾಡುತ್ತಾಳೆ ಎನ್ನುವ ಕಾರಣಕ್ಕಾಗಿ. ನಿರ್ಣುದ ಎಂದರೆ ಯಾವುದು ಅತೀ ಉತ್ತಮ ಎನ್ನುವ ನನ್ನ ಕಲ್ಪನೆ, ಹಿಂದಿನ ಮಂತ್ರಕ್ಕೆ ಪೂರಕವಾಗಿ ಈ ಮಂತ್ರ ಇರುವುದರಿಂದ, ದೇವಸಖಾ ಎನ್ನುವ ಗುರಿ ಏನಿದೆ ಅದರ ಚಿಂತನೆಯಲ್ಲಿ ಈ ಮನೆಯಲ್ಲಿ ವಾಸವಾಗಿರುತ್ತೇನೆ. ಆದ್ದರಿಂದ ನಾನು ಗೃಹಿಣಿ. ಗೃಹಿಣಿ ಎನ್ನುವ ಶಬ್ದಕ್ಕೆ ವಿಶಾಲವಾದ ಅರ್ಥ ಇದೆ. ಇವೆಲ್ಲವನ್ನೂ ತ್ಯಾಗ ಮಾಡುವ ಗುಣ ಇದೆ. ವಾಡಿಕೆಯಲ್ಲಿ ಮಾತಿದೆ, ಅಡುಗೆ ಮಾಡಿದವರಿಗೆ ಊಟ ಸೇರುವುದಿಲ್ಲ ಎಂದು. ಜನ ಉಂಡದ್ದರಲ್ಲೇ ಮಾಡಿದವನಿಗೆ ತೃಪ್ತಿ. ತಾಯಿಗೆ ಹಸಿವೆ ಎಂಬುದೇ ಇಲ್ಲ, ಹಸಿವಾಗುವುದು ಮಗುವಿಗೆ. ಇವೆಲ್ಲ ಗೃಹಿಣಿಯ ಗುಣಗಳು. ನೀವೆಲ್ಲ ಸ್ವಲ್ಪ ಅಭ್ಯಾಸ ಮಾಡಿದರೆ ಈ ಎಲ್ಲ ಗುಣಗಳ ಮಹತ್ವ ಗೊತ್ತಾಗುತ್ತದೆ. ಇಂತಹ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತೇನೆ, ಇಂತಹ ಮನೆ ನನ್ನದ್ದಾಗಿರುತ್ತದೆ - ನಿರ್ಣುದ ಮೇ ಗೃಹಾತ್. ಹಾಗಾಗಿ ನಾನು ಗೃಹಿಣಿ ಎಂದೆನಿಸಿಕೊಳ್ಳುತ್ತೇನೆ. ಇನ್ನೂ ಗೃಹಿಣಿಯ ವಿಚಾರ ಹೇಳುವುದಿದ್ದರೆ ಸುಮಾರು ನಾಲ್ಕೂವರೆ ಗಂಟೆಗಳಷ್ಟಿದೆ. ಇನ್ನೊಮ್ಮೆ ನಾವೆಲ್ಲಾ ಅದಕ್ಕೋಸ್ಕರ ಸೇರಿದಾಗ ಹೇಳುತ್ತೇನೆ.