ಪ್ರಶ್ನೆ: ಶ್ರೀಸೂಕ್ತದಲ್ಲಿ ಹಲವು ಕಡೆ "ಜಾತವೇದೋಮ ಅವಹ" ಎಂದು ಬರುತ್ತದಲ್ಲ ಯಾಕೆ ಸ್ವಾಮೀಜಿ? ಅದರ ಅರ್ಥ ಏನು?
ಸ್ವಾಮೀಜಿ: ಸುಮಾರು ಆರು ಬಾರಿ "ಜಾತವೇದೋಮ ಅವಹ" ಅಂತ ಬರುತ್ತದೆ. ಅದರಲ್ಲಿ ಎರಡು ಬಾರಿ ಬಂದದ್ದರಲ್ಲಿ ವೇದವು ಏನು ಹೇಳುತ್ತದೆ ಅಂದರೆ ವೇದದ ವ್ಯುತ್ಪತ್ತಿಗಳೇನಿದೆ ಅದು ಜಾತ ಅಂದರೆ ಹುಟ್ಟಿದೆ ಅಂದರೆ ವೇದದಿಂದ ಹೇಳಲ್ಪಟ್ಟದ್ದು ಎನ್ನುವ ಅರ್ಥದಲ್ಲಿ "ಜಾತವೇದೋಮ ಅವಹ" ಅಂತ ಬರುತ್ತದೆ, ಅದನ್ನು ನಾವು ಅಂಗೀಕರಿಸುತ್ತೇವೆ, ಅದರ ಉಪಾಸನೆಯನ್ನು ಮಾಡುತ್ತಿದ್ದೇವೆ ಅನ್ನುವುದು. ಯಾಕೆಂದರೆ ಇದು ವೇದಕ್ಕೆ ಸಮಾನವಾದದ್ದೇ, ವೇದದಷ್ಟೇ ಶಕ್ತಿಯುತವಾದದ್ದೇ ಮಂತ್ರ. ಸಂಶಯವೇ ಇಲ್ಲ. ಪರಿಶಿಷ್ಟ ಎಂದ ತಕ್ಷಣ ವೇದಮಂತ್ರ ಅಲ್ಲ ಅಂತ ಹೇಳಿಲ್ಲ. ಅಷ್ಟೇ ಸಮಾನವಾದದ್ದರಿಂದ ಆ ರೀತಿಯ ಗೌರವ ಸದ್ಭಾವದಿಂದ ಇದನ್ನು ನಾವು ಉಪಾಸಿಸುತ್ತಾ ಇದ್ದೇವೆ. ಅಂದರೆ ನಾರಾಯಣೀ ಅಥವಾ ಶ್ರೀಯನ್ನು ಉಪಾಸಿಸುತ್ತಾ ಇದ್ದೇವೆ ಎಂದು ಅರ್ಥ. ಅಲ್ಲಿ ಶ್ರೀಯನ್ನು ಉಪಾಸಿಸುತ್ತಾ ಇದ್ದೇವೆ ಎನ್ನುವುದನ್ನು ಹೇಳುವುದಕ್ಕಾಗಿಯೇ "ಜಾತವೇದೋಮ ಅವಹ" ಅಂತ ಬಂತು. ಮುಂದೆ ಮತ್ತೆ ಮೂರು ಕಡೆಗಳಲ್ಲಿ ಅದೇ ಶಬ್ದ ಬರುತ್ತದೆ. ಆದರೆ ಸ್ವಲ್ಪ ಅರ್ಥ ವ್ಯತ್ಯಾಸ ಇದೆ. ಆ ಎರಡನೇ ಅರ್ಥದಲ್ಲಿ ಈ ಪ್ರಕೃತಿಗೆ ಸಹಜವಾದಂತಹ ಹುಟ್ಟು ಅನ್ನುವ ಸ್ವಾಭಾವಿಕ ಗುಣ, ಅದನ್ನು ಅನುಸರಿಸಿಕೊಂಡು ವರ್ಗಭೇದದಿಂದ ಆಯಾಯ ವೃತ್ತಿಗಳು ನಿರ್ಣಯವಾಗುತ್ತವೆ. ಒಂದು ದನ ಕರು ಹಾಕುತ್ತದೆ. ಅದಕ್ಕೆ ದನದ ವರ್ಗದ ಒಂದು ಭೇದ ವ್ಯತ್ಯಾಸಗಳಿವೆ. ಅದರದ್ದೇ ಆದ ಜೀವನ ವ್ಯವಹಾರವಾಗುತ್ತದೆ. ಒಂದು ಹುಲಿ ಮರಿ ಹಾಕುತ್ತದೆ. ಆ ಹುಲಿಯ ವರ್ಗಕ್ಕೆ ಒಂದು ವ್ಯವಸ್ಥೆ ಇದೆ. ಅದರದ್ದೇ ಆದ ಜೀವನವನ್ನು ರೂಪಿಸಿಕೊಳ್ಳುತ್ತದೆ. ಹಾಗೆಯೇ ಒಂದು ಮೀನು ಮೊಟ್ಟೆ ಇಡುತ್ತದೆ. ಅದರದ್ದೇ ಆದ ವರ್ಗ, ಅದಕ್ಕೆ ಸಂಬಂಧಪಟ್ಟ ವ್ಯವಹಾರದಲ್ಲಿ ಜೀವನವನ್ನು ಮಾಡುತ್ತದೆ. ಹಾಗೆಯೇ ಮನುಷ್ಯನಿಗೂ ಒಂದು ಹುಟ್ಟು ಇದೆ. ಈ ಮಾನವ ವರ್ಗಕ್ಕೆ ಏನೇನು ನಿಯಮಗಳಿವೆಯೋ ಅದರದ್ದೇ ಆದ ಜೀವನವನ್ನು ರೂಪಿಸಿಕೊಳ್ಳಬೇಕು. ಹಾಗೇ ಯಾವುದು ಜಾತ (ಹುಟ್ಟು) ಇದೆ, ಆ ಹುಟ್ಟಿಗೆ ಆಧರಿಸಿದ ಮೂಲಮಾತೃಕೆ, ಅಂದರೆ ತಾಯಿಯ ಸ್ವರೂಪ ಗುಣದಂತೆ, ಅಂದರೆ ಮೂಲ ತಿಳುವಳಿಕೆಯಂತೆ, ಮೂಲ ಜ್ಞಾನದಂತೆ ನಾನು ಅಭಿವೃದ್ಧಿ ಹೊಂದಲು ಪ್ರಯತ್ನಿಸುತ್ತೇನೆ ಎನ್ನುವ ಅರ್ಥದಲ್ಲಿಎರಡನೇ ಬಾರಿ "ಜಾತವೇದೋಮ ಅವಹ", ನನ್ನ ವಾಹನ ಅಂದರೆ ನನ್ನ ಸಂಚಾರ ಮೂಲಮಾತೃಕೆಯನ್ನು ಆಧರಿಸಿ ಇರುತ್ತದೆ. ನಾನು ಮತ್ತೊಂದರಂತೆ ಬದುಕುವುದಿಲ್ಲ ಅನ್ನುವ ಉದ್ದೇಶದಲ್ಲಿ ಕೂಡ ಆ ಮಂತ್ರಕ್ಕೆ ಪೂರಕವಾಗಿ "ಜಾತವೇದೋಮ ಅವಹ" ಅಂತ ಮಂತ್ರದ ಕೊನೆಯ ಪಾದದಲ್ಲಿ ಬರುತ್ತದೆ. ಮಂತ್ರದಲ್ಲಿ ನಾಲ್ಕು ಪಾದ ಇದೆ, ಕೊನೆಯ ಪಾದದಲ್ಲಿ ಈ ಉದ್ದೇಶವನ್ನು ಹೇಳುವುದಾಗಿರುತ್ತದೆ. ಒಂದು "ಜಾತವೇದೋಮ ಅವಹ" ಮಾತ್ರ ಇವೆಲ್ಲವನ್ನೂ ಹೊರತುಪಡಿಸಿದ ಬೇರೆ ಅರ್ಥವನ್ನು ನೀಡುತ್ತದೆ. "ತಾಮ ಅವಹ ಜಾತವೇದೋ" ಅಂದರೆ ಹಿಂದು ಮುಂದೆ ಹೇಳಿರುತ್ತದೆ. ಇಲ್ಲಿ ನನ್ನ ಹುಟ್ಟು ಅಂತ, ನಾನು ಎನ್ನುವ ವೈಯುಕ್ತಿಕತೆ ಬರುತ್ತದೆ. ನನ್ನ ಹುಟ್ಟಿನ ಹಿನ್ನಲೆಯಲ್ಲಿ ನನಗೇನಿದೆ? ಯಾವುದೊ ಜನ್ಮಾಂತರದ ಪುಣ್ಯವೋ ಪಾಪವೋ ಯಾವುದೊ ಒಂದು ಕಾರಣದಿಂದ ನಾವು ಹುಟ್ಟಿಬಂದಿರಲೇಬೇಕು. ಇಲ್ಲದಿದ್ದರೆ ಹುಟ್ಟಲಿಕ್ಕೆ ಆಗುವುದಿಲ್ಲ. ಅದನ್ನು ದಾಟುವುದು ಕೂಡ ಈ ಆತ್ಮದ ಗುರಿಯಾಗಿರುತ್ತದೆ. ಹಾಗಾಗಿ ವೈಯುಕ್ತಿಕವನ್ನು ಚಿಂತಿಸಿ ನನ್ನ ಆತ್ಮೋದ್ಧಾರಕ್ಕಾಗಿಯೂ ಕೂಡ ನಾನಿದನ್ನು ಉಪಾಸಿಸುತ್ತೇನೆ ಎಂದು ಹೇಳುವಲ್ಲಿ "ತಾಮ ಅವಹ ಜಾತವೇದೋ..... ಭಜೇಹಮಾದ್ಯಾಮ್ ಜಗದೀಶ್ವರೀಂ ತಾಮ್". ಇಲ್ಲಿ ನನ್ನ ಉಪಾಸನೆ ಆತ್ಮೋನ್ನತಿಗಾಗಿಯೂ ಕೂಡ ಆಗಿರುತ್ತದೆ ಅನ್ನುವುದಕ್ಕಾಗಿ ಈ ಅರ್ಥದಲ್ಲಿ ಸೇರಿದೆ.
ಪ್ರಶ್ನೆ: ಈ ಪೂಜೆಯಲ್ಲಿ ನಮ್ಮ ಜೊತೆ ವಿಧವೆಯರು ಕೂಡ ಭಾಗವಹಿಸಬಹುದೇ ಅಥವಾ ಗೃಹಿಣಿಯರು ಮಾತ್ರ ಭಾಗವಹಿಸಬೇಕು ಅಂತ ಇದೆಯೇ?
ಸ್ವಾಮೀಜಿ: ಅವೆಲ್ಲ ಯಾವ ಕಲ್ಪನೆಗಳೂ ಬೇಕಿಲ್ಲ. ಅಲ್ಲಿ ಮಾತೃತ್ವವನ್ನು ಅವಳು ಕಳೆದುಕೊಂಡಿರುವುದಿಲ್ಲ. ವಿಗತಾ ಧವಾ ಅಂದರೆ ಗಂಡನನ್ನು ಕಳೆದುಕೊಂಡವಳು ಎಂದರ್ಥ ಅಷ್ಟೇ. ಅಷ್ಟು ಬಿಟ್ಟರೆ ಬೇರೆ ಏನನ್ನೂ ಕಳೆದುಕೊಂಡಿರುವುದಿಲ್ಲ. ಹೌದು ತಾನೇ? ಹಾಗಿದ್ದಾಗ ಭಾಗವಹಿಸುವ ಅರ್ಹತೆ ಹೋಗುತ್ತದೆ ಎನ್ನುವ ಅರ್ಥ ಎಲ್ಲಿಯೂ ಇಲ್ಲ. ಅವರಿಗೆ ಭಾಗವಹಿಸಲು ಹೆಚ್ಚು ಅವಕಾಶ ಸಿಗುತ್ತದೆ. ಹೆಚ್ಚು ಅರ್ಹತೆ ಬರುತ್ತದೆ. ಏಕೇಂದರೆ ಅವಳು ಮಾತೃಧರ್ಮ ಪಾಲನೆಯಲ್ಲಿ ಪೂರ್ಣಳೆ. ಯಾವುದೇ ಕೊರತೆ, ಗಂಡ ತೀರಿ ಹೋದ ತಕ್ಷಣ ಅನರ್ಹತೆ, ಮಾತೃಧರ್ಮದಲ್ಲಿ ಕೊರತೆ ಯಾವುದೂ ಆಗುವುದಿಲ್ಲ. ಮಾತೃಧರ್ಮದಲ್ಲಿ ಪೂರ್ಣತೆ, ಹಾಗೆಯೇ ಭಾರ್ಯಾಧರ್ಮ ಪಾಲಿಸುವ ಕೆಲಸದಲ್ಲಿ ಗಂಡ ತೀರಿ ಹೋದ ನಂತರ ಅದು ಇರುವುದಿಲ್ಲ, ಹಾಗಾಗಿ ಹೆಚ್ಚು ಭಾಗವಹಿಸಲು ಆಗುತ್ತದೆ. ಅಂದರೆ ಹೆಚ್ಚು ಅರ್ಹತೆ ಬರುತ್ತದೆ ಎಂದು ಅರ್ಥ. ಇಲ್ಲದಿದ್ದರೆ ಪತಿಸೇವೆ, ಪತಿಯ ಅಗತ್ಯಗಳನ್ನು ಪೂರೈಸಿಕೊಡುವುದು, ಇವೆಲ್ಲ ಕರ್ತವ್ಯಗಳು ಅಂತ ಇರುತ್ತವೆ. ಈಗ ಅದು ಇಲ್ಲದಿರುವುದರಿಂದ ಹೆಚ್ಚಿನ ಅರ್ಹತೆ ಆಗುತ್ತದೆ.
ಪ್ರಶ್ನೆ: ನಾವು ಪ್ರತೀ ಮನೆಗೆ ಹೋಗಿ ನೀವು ಮದ್ಯ-ಮಾಂಸ ಬಿಡಬೇಕು ಅಂತ ಹೇಳಬೇಕಲ್ಲ, ಅವರು ಬಿಡದೆ ಮುಂದುವರೆಸಿದರೆ ಆ ದೋಷ ನಮಗೆ ಬರುತ್ತದೆಯೇ?
ಸ್ವಾಮೀಜಿ: ಅದನ್ನು ಹೀಗೆ ಮಾಡಿ. ಯಾರು ನಿಮ್ಮನ್ನು ಕರೆಯುತ್ತಾರೋ ಅವರಿಗೆ ಈ ವಿಚಾರವನ್ನು ಮೊದಲು ಹೇಳಿ. ಅವರು ಬಿಡುವ ಪ್ರಯತ್ನ ಮಾಡಲಿ. ಬಿಡುತ್ತೇವೆ ಅಂತ ಹೇಳಲಿ. ನಂತರ ಬರುತ್ತೇವೆ ಅಂತ ಹೇಳಿ. ನೀವು ಮೊದಲು ಸಮಯಾವಕಾಶವನ್ನು ಮಾತ್ರ ಕೊಡುವುದರಿಂದ ಹೆಚ್ಚಿನವರು ಒಪ್ಪುತ್ತಾರೆ. ನಾವು ಇನ್ನೆರಡು ವರ್ಷ ಮಾಂಸವನ್ನು ತಿನ್ನುವುದಿಲ್ಲ, ಆಮೇಲೆ ಮಾಡುತ್ತೇವೆ ಅಂತ ಹೇಳುತ್ತಾರೆ. ಅಷ್ಟು ಹೊತ್ತಿಗೆ ಅದು ಬೇಡವಾಗುತ್ತದೆ. ಮತ್ತೆ ಅವರು ಅದನ್ನು ತಿನ್ನುವುದಿಲ್ಲ. ಆಮೇಲೆ ಬಾಯಿಗೆ ತುರುಕಿಸಿದರೂ ತಿನ್ನಲು ಅವರಿಗೆ ಮನಸ್ಸು ಬರುವುದಿಲ್ಲ. ಅದೊಂದು ವ್ಯಾಪಕವಾಗಿ ಬೆಳೆಯಬೇಕಾದ ಆಂದೋಲನ. ಸಾತ್ವಿಕ ಆಹಾರದ ಕಾರಣದಿಂದಾಗಿ ದೇಶದಲ್ಲಿ ಆಗತಕ್ಕಂತಹ ಅನಾವೃಷ್ಟಿ, ಅತಿವೃಷ್ಟಿ, ದೊಂಬಿ ಇತ್ಯಾದಿಗಳನ್ನು ತುಂಬಾ ಹಿಡಿತಕ್ಕೆ ತರಲು ಸಾಧ್ಯ. ಹಾಗಾಗಿ ಈ ಪ್ರಯತ್ನವನ್ನು ಇದರ ಜೊತೆಯಲ್ಲಿ ಸೇರಿಸಿಕೊಳ್ಳಿ.
ಪ್ರಶ್ನೆ: ನಾವು ದಿನದಲ್ಲಿ ತುಂಬಾ ಸಲ ಪಾರಾಯಣ ಮಾಡುವಾಗ ಮನಸ್ಸಿನಲ್ಲೇ ಇದನ್ನು ಓದಬಹುದೇ?
ಸ್ವಾಮೀಜಿ: ಗಟ್ಟಿಯಾಗಿಯೇ ಹೇಳಿ. ಮನಸ್ಸಿನಲ್ಲಿ ಯಾಕೆ ಹೇಳಬೇಕು?
ಪ್ರಶ್ನೆ: ತುಂಬಾ ಸಾರಿ ಹೇಳುವಾಗ ಸ್ವರ ಬರದಿದ್ದರೆ? ಕಷ್ಟವಾದರೆ?
ಸ್ವಾಮೀಜಿ: ಏನೂ ಆಗುವುದಿಲ್ಲ. ಅದರ ಬಗ್ಗೆ ನಿಮಗೆ ಯಾವ ಸಂಶಯವೂ ಬೇಡ. ನೀವು ಬೆಳಿಗ್ಗೆ ಒಂದು ಸಾರಿ ಒಂದು ಮನೆಯಲ್ಲಿ ಹೇಳುತ್ತೀರಿ. ಎರಡನೇ ಮನೆಗೆ ಹೋದಾಗ ಅದಕ್ಕಿಂತ ಹೆಚ್ಚು ಸ್ವರಭಾರ ನಿಮಗೆ ಬರುತ್ತದೆ. ಮೂರನೇ ಮನೆಗೆ ಹೋದಾಗ ಮತ್ತೂ ಹೆಚ್ಚು ಬರುತ್ತದೆ. ನಾಲ್ಕನೇ ಮನೆಗೆ ಹೋದಾಗ ಮತ್ತೂ ಚೆನ್ನಾಗಿ ನೀವು ಹೇಳುತ್ತೀರಿ. ಅದು ಈ ಮಂತ್ರದಲ್ಲಿರುವ ವಿಶೇಷತೆ. ಅದು ನಿಮ್ಮನ್ನು ಮತ್ತೂ ಮತ್ತೂ ಪ್ರಚೋದಿಸಿ ನಿಮ್ಮನ್ನು ಹೆಚ್ಚು ಚೆನ್ನಾಗಿ ಹೇಳುವಂತೆ ಮಾಡುತ್ತದೆ ಬಿಟ್ಟರೆ ಸುಸ್ತಾಯಿತು, ಆಗುವುದಿಲ್ಲ ಎನ್ನುವ ಪ್ರಶ್ನೆ ಇಲ್ಲ. ನೀವೇ ಪರೀಕ್ಷೆ ಮಾಡಿ ಬೇಕಾದರೆ ನೋಡಿ. ಪ್ರತೀ ಬಾರಿ ಹೇಳಿದಾಗಲೂ ಮತ್ತಷ್ಟು ಚೆನ್ನಾಗಿ ಹೇಳುವಂತೆ ಮಾಡುವುದು ಈ ಮಂತ್ರದ ವಿಶೇಷತೆ. ಮನಸ್ಸಿನ ಆಳಕ್ಕೆ ಇಳಿಯತಕ್ಕಂತಹ ಮಂತ್ರಗಳಲ್ಲಿ ಶ್ರೇಷ್ಠವಾದ ಮಂತ್ರವೆಂದರೆ ಶ್ರೀಸೂಕ್ತ. ಅದು ಆಳಕ್ಕೆ ಇಳಿಯುತ್ತದೆ. ನಿಮಗೆ ಮಾತ್ರವಲ್ಲ ಕೇಳುಗರ ಮನಸ್ಸಿನ ಆಳಕ್ಕೂ ಇಳಿಯುತ್ತದೆ.
ಪ್ರಶ್ನೆ: ಪ್ರತೀ ಮನೆಗೆ ಹೋಗಿ ಪೂಜೆ ಮಾಡುವಾಗ ನಮಗೆ ಅವಮಾನವಾಗುವ ಹಾಗೆ ಯಾವುದಾದರೂ ಮಾತಾಡಿದರೆ ಅದಕ್ಕೆ ತಕ್ಕುದಾದ ಉತ್ತರವನ್ನು ನಾವು ಕೊಡಬೇಕೇ ಅಥವಾ ಸಹಿಸಿಕೊಂಡು ವಾಪಾಸು ಬರಬೇಕೆ?
ಸ್ವಾಮೀಜಿ: ಅಗತ್ಯವಿದ್ದಲ್ಲಿ, ಉತ್ತರಕೊಡಬೇಕಾದರೆ ಉತ್ತರ ಕೊಡಿ. ಮತ್ತೆ ಯಾವ ಭಯವೂ ಬೇಡ. ಆದರೆ ನನ್ನ ಲೆಕ್ಕದಲ್ಲಿ ಆರಂಭಿಕ ಒಂದೆರಡು ತಿಂಗಳು ಹತ್ತಾರು ಮನೆಗಳಿಗೆ ಹೋಗುವಷ್ಟರಲ್ಲಿ ಈ ಎಲ್ಲ ಮಾತುಗಳು ಬರಬಹುದು. ನಂತರ ಆ ಮಾತನ್ನು ಮೆಟ್ಟುವ ಶಕ್ತಿ ನಿಮ್ಮಲ್ಲಿ ಬಂದುಬಿಡುತ್ತದೆ. ಯಾರೂ ಹೇಳುವುದೇ ಇಲ್ಲ, ಮತ್ತೆ ಮಾತಾಡುವುದೇ ಇಲ್ಲ, ಬಿಟ್ಟು ಬಿಡುತ್ತಾರೆ. ಆ ಸ್ವಭಾವ, ಶಕ್ತಿ ನಿಮ್ಮಲ್ಲೇ ಬಂದುಬಿಡುತ್ತದೆ. ಆ ಮಾತಾಡುವವರನ್ನು ಅದು ಸ್ವಾಭಾವಿಕವಾಗಿ ನಿಲ್ಲಿಸಿಬಿಡುತ್ತದೆ.
ಪ್ರಶ್ನೆ: ನಾವು ಒಬ್ಬೊಬ್ಬರಾಗಿ ಹೋಗಿ ಹೇಳಿಕೊಡುವುದಕ್ಕಿಂತ ನಾಲ್ಕು ಜನ ಒಟ್ಟಿಗೆ ಹೋಗಿ ಹೇಳಿಕೊಟ್ಟರೆ ಸಂಘಟನೆಗೆ ಬಲ ಜಾಸ್ತಿ ಅಲ್ಲವೇ? ಹಾಗೆ ಹೇಳಿಕೊಡಬಹುದೇ?
ಸ್ವಾಮೀಜಿ: ನಿಮ್ಮ ನಿಮ್ಮಲ್ಲೇ ೪ ಜನ, ೬ ಜನರನ್ನು ಕೂಡಿಸಿಕೊಳ್ಳಿ. ಅದು ಎಷ್ಟೋ ಒಳ್ಳೆಯದು. ಒಬ್ಬರೇ ಹೋಗುವುದಕ್ಕಿಂತ ನಾಲ್ಕಾರು ಜನ ಒಟ್ಟಾಗಿ ಹೋಗಿ. ನೀವು ೪ ಜನ ಹೋದರೆ ಆ ಮನೆಯಲ್ಲಿ ಇಬ್ಬರು ಸಿಕ್ಕಿದರೆ ೬ ಜನ ಆಗ್ತೀರಿ. ೬ ಜನ ಒಟ್ಟಾಗಿ ಹೋಗಿ ಆ ಮನೆಯಲ್ಲಿ ಇಬ್ಬರು ಸಿಕ್ಕಿದರೆ ೮ ಜನ ಆಗ್ತೀರಿ. ಹಾಗೆ ಸಂಘಟನೆ ದೊಡ್ಡದು ಮಾಡುತ್ತಾ ಹೋಗಿ. ಆಗ ಹೆಚ್ಚಿನ ಜನರಲ್ಲಿ ಆಸಕ್ತಿ ಹುಟ್ಟುತ್ತಾ ಹೋಗುತ್ತದೆ. ಆಸಕ್ತಿಯನ್ನು ಹುಟ್ಟಿಸುವುದಕ್ಕೆ ನೀವು ಹೆಚ್ಚು ಕಷ್ಟಪಡಬೇಕಾಗಿಲ್ಲ. ಪರಮಾವಧಿ ಒಂದು ೬ ರಿಂದ ೮ ಕಾರ್ಯಕ್ರಮ ಮಾಡುವುದರ ಒಳಗೆ ನೀವು ಪೂರ್ಣ ಆಸಕ್ತರ ದಂಡನ್ನೇ ಕಟ್ಟಲಿಕ್ಕೆ ಸಾಧ್ಯವಾಗುತ್ತದೆ.
ಪ್ರಶ್ನೆ: ಕೆಲವು ಸಾರಿ ನಮಗೆ ಹೋಗಿ ಹೇಳಿಕೊಡಲಿಕ್ಕೆ ಮನೆಗಳು ಸಿಗದೇ ಹೋದರೆ ಮನೆಯಲ್ಲೇ ಈ ಪಾರಾಯಣ ಮಾಡಬಹುದಾ?
ಸ್ವಾಮೀಜಿ: ಅವಕಾಶ ಇದ್ದಾಗ ನಿತ್ಯ ನಿಮ್ಮ ನಿಮ್ಮ ಪಾರಾಯಣ ಮಾಡಿ. ಹೊರಗೆ ಇನ್ನೊಬ್ಬರ ಮನೆಗೆ ಹೋಗುವಾಗ ಹೋಗುವಾಗ ೩-೪-೫ ಜನ ಹೀಗೆ ಒಟ್ಟಾಗಿ ಹೋಗಿ. ನಿಮ್ಮ ಧ್ವನಿಗೂ ಒಂದು ಬಲ ಬರುತ್ತದೆ ಮತ್ತು ಅವರನ್ನು ನಿಮ್ಮತ್ತ ಸೆಳೆದುಕೊಳ್ಳುವುದಕ್ಕೆ ಸುಲಭವಾಗುತ್ತದೆ. ಅದರ ಮುಖೇನ ಸಂಘಟನೆ ದೊಡ್ಡದು ಮಾಡುತ್ತಾ ಹೋಗಬೇಕು. ಒಂದೇ ಸಾರಿ ಆಗುವುದಿಲ್ಲ.
ಪ್ರಶ್ನೆ: ಶ್ರೀಸೂಕ್ತ ಮಂತ್ರಗಳನ್ನು ಹೇಳುವಾಗ ತಪ್ಪಾದರೆ ಏನಾದರೂ ಅಡ್ಡಪರಿಣಾಮಗಳಾಗುತ್ತವೆಯೇ?
ಸ್ವಾಮೀಜಿ: ಈ ಬಗ್ಗೆ ಇನ್ನೂ ಸ್ಪಷ್ಟವಾದ ಉತ್ತರಗಳನ್ನು ಮುಂದೆ ಕೊಡಲಿದ್ದೇನೆ. ನೀವು ಅದನ್ನು ಅಧಿಕೃತವಾಗಿ ಹೇಳಬಹುದು. ಅದಕ್ಕೇನೂ ಚಿಂತೆ ಬೇಡ. ತಪ್ಪಾಯಿತು ಎನ್ನುವ ಪ್ರಶ್ನೆ ಇಲ್ಲ. ಅವರು ಹಾಗೆ ಹೇಳುತ್ತಾರೆ ಯಾಕೆಂದರೆ ಅವರಿಗೆ ಅಷ್ಟು ವ್ಯಾಪಕವಾದ ಸಂಶೋಧನೆ ಅವರ ಕೈಯಲ್ಲಿ ಇಲ್ಲ.
ಪ್ರಶ್ನೆ: ಮನೆ ಮನೆಗೆ ಹೋಗಿ ಹೇಳುವಾಗ ಅಲ್ಲಿಯ ಹೆಂಗಸರೆಲ್ಲ ನಮಗೆ ಸ್ಪಷ್ಟವಾಗಿ ಹೇಳಲಿಕ್ಕೆ ಬರುವುದಿಲ್ಲ, ನಮ್ಮ ಮಂತ್ರ ತಪ್ಪಾಗುತ್ತದೆ, ಹೆದರಿಕೆ ಆಗುತ್ತದೆ, ಆದ್ದರಿಂದ ನಿಮ್ಮೊಂದಿಗೆ ಬರುವುದಿಲ್ಲ ಅಂತ ಹೇಳಿದರೆ ಏನು ಮಾಡುವುದು?
ಸ್ವಾಮೀಜಿ: ಅವರಿಗೆ ನೀವು ಧೈರ್ಯ ತುಂಬಬೇಕು. ಅಸ್ಪಷ್ಟತೆಯ ಪ್ರಶ್ನೆ ಇಲ್ಲಿ ಇಲ್ಲ ಅನ್ನುವುದನ್ನು ಸ್ಪಷ್ಟಪಡಿಸಬೇಕು. ಅದಕ್ಕೆ ನಾನಿದನ್ನು ಮುಂದೆ ವಿವರಿಸುತ್ತೇನೆ. ನೀವು ಶ್ರೀಸೂಕ್ತ ಹೇಳುತ್ತಾ ಹೋದಾಗ ಅವರಿಗೆ ಹೇಗೆ ಧೈರ್ಯ ತುಂಬಬೇಕು ಎನ್ನುವುದು ನಿಮಗೆ ಗೊತ್ತಾಗುತ್ತದೆ. ನೀವು ನಾಲ್ಕು ಮನೆಗಳಲ್ಲಿ ಕಾರ್ಯಕ್ರಮ ಮಾಡುತ್ತಲೇ ನಿಮಗೆ ಸಹಜವಾಗಿ ಅದರದ್ದೇ ಅದ ಧೀಮಂತಿಕೆ ಬರುತ್ತದೆ. ಅಧಿಕೃತವಾಗಿ ಹೇಳುತ್ತೀರಿ. ಅದಕ್ಕೆ ಶಕ್ತಿ ಎಷ್ಟಿದೆ, ಎಷ್ಟು ಉಪಯುಕ್ತತೆ ಇದೆ ಅಂತ ನಿಮಗೆ ಗೊತ್ತಾಗುತ್ತದೆ. ಇಷ್ಟು ವಿವರಣೆ ಹೇಳುವ ಶಕ್ತಿ ಸ್ವಾಭಾವಿಕವಾಗಿ ಬರುತ್ತದೆ. ಎಲ್ಲ ಮನೆಯಲ್ಲೂ ನೀವು ಅದನ್ನು ಇನ್ನೂ ಹೆಚ್ಚು ಸಮರ್ಥವಾಗಿ ವಿವರಿಸಿ, ಎಲ್ಲರಿಗೂ ಸಾಧ್ಯ ಎಂದು ತೋರಿಸಿಕೊಡುವ ಶಕ್ತಿ ನಿಮಗೆ ಬರುತ್ತದೆ. ಅದು ಕಷ್ಟ ಇಲ್ಲ. ಇವತ್ತು ನೀವು ಹೇಳಿದ ಶ್ರೀಸೂಕ್ತವನ್ನು ಕೇಳಿದ್ದೇನೆ. ಅವು ಒಂದು ರೀತಿಯಲ್ಲಿ ಸರಿಯಾಗಿವೆ. ಅಭ್ಯಾಸವಾಗಬೇಕಷ್ಟೇ, ಅಷ್ಟು ಬಿಟ್ಟರೆ ನಿಮ್ಮಲ್ಲಿ ನ್ಯೂನತೆಗಳೇನೂ ಕಂಡಿಲ್ಲ. ಅದಕ್ಕೇ ನಾನು ಆರಂಭದಲ್ಲಿ ನಿಮ್ಮಿಂದ ಹೇಳಿಸಿದ್ದು. ಹೇಳುವಾಗ ನಿಮಗೆ ಚೂರುಪಾರು ವ್ಯತ್ಯಾಸ ಅನ್ನಿಸಿರಬಹುದು. ಆದರೆ ಅದು ನ್ಯೂನತೆ ಅಲ್ಲ. ಯಾವುದೇ ನ್ಯೂನತೆ ನನಗೆ ಕಂಡುಬಂದಿಲ್ಲ ಅಥವಾ ಯಾವುದೊ ಒಂದು ವಿಪರೀತ ಪರಿಣಾಮವಗತಕ್ಕಂಥ ಅಥವಾ ವಿಕೃತ ಪ್ರಯೋಗವಾಗಿರತಕ್ಕಂಥ ವಿಧಿಗಳು ಯಾರ ಧ್ವನಿಯಲ್ಲೂ ಬಂದಿಲ್ಲ. ಏಕೆಂದರೆ ಅಲ್ಲಿ ಸದ್ಭಾವ ಇದ್ದಾಗ ಬರುವುದಿಲ್ಲ. ಭಾವನೆಯೇ ಬಹಳ ಮುಖ್ಯ. ನಿಮ್ಮಲ್ಲೆಲ್ಲ ಸದ್ಭಾವ ಇದೆ, ಹಾಗಾಗಿ ವಿಕೃತ ಪರಿಣಾಮವಾಗುವ ತರಂಗ ಪ್ರೇಷಣೆ ಆಗುವುದೇ ಇಲ್ಲ. ಸರಿಯಾಗಿದೆ, ಆದರೆ ಹೇಳುವ ಅಭ್ಯಾಸ ಜಾಸ್ತಿ ಮಾಡಿ. ಆಗ ಸಹಜವಾಗಿ ನಿಮ್ಮಲ್ಲಿ ನಿಮ್ಮದ್ದೇ ಅದ ಧೀಶಕ್ತಿ ಬರುತ್ತದೆ. ನೀವು ಅದನ್ನು ಅಧಿಕೃತವಾಗಿ ಹೇಳುತ್ತೀರಿ, ಕಷ್ಟವಾಗುವುದಿಲ್ಲ. ಅಲ್ಲಿಯವರೆಗೆ ನಿಮ್ಮದ್ದೇ ಅದ ಅಳುಕು, ಆದರೆ ತಪ್ಪಲ್ಲ. ಅದು ಅಳುಕು ಎನ್ನುವುದಕ್ಕಿಂತಲೂ ಹೆಚ್ಚಾಗಿ ಸದ್ಭಾವ ಇದ್ದಲ್ಲಿ ಗೌರವ ಇರುತ್ತದೆ. ವೇದಮಂತ್ರದ ಬಗ್ಗೆ ನಿಮಗಿರುವ ಗೌರವ "ನಾನು ತಪ್ಪು ಹೇಳಿದೆನೇನೋ!" ಎನ್ನುವ ಕಲ್ಪನೆಯತ್ತ ನಿಮ್ಮನ್ನು ತೆಗೆದುಕೊಂಡು ಹೋಗಿದೆ. ಅಷ್ಟು ಬಿಟ್ಟರೆ ಮತ್ತೇನೂ ಆಗಿಲ್ಲ. ಅದು ಸರಿ ಆಗುತ್ತದೆ, ಅದಕ್ಕೆ ಚಿಂತೆ ಬೇಡ.
ಭಾಷ್ಯ- ವ್ಯಾಖ್ಯಾನದ ನಿಯಮಗಳು
ಸ್ವಾಮೀಜಿ: ಪ್ರಪಂಚ ಬೆಳೆಯುವುದಕ್ಕೆ ಯಾವುದೇ ವ್ಯಾಖ್ಯಾನ ತಡೆಯಾಗಬಾರದು. ಅದು ಅರ್ಥ ಹೇಳುವವನ ಜವಾಬ್ದಾರಿ. ಒಂದು ಅರ್ಥ ಹೇಳುವುದರಿಂದ ಒಬ್ಬನನ್ನು ಪ್ರಪಂಚದಿಂದ ವಿಮುಖನನ್ನಾಗಿ ತಪ್ಪಾಗುತ್ತದೆ. ಆದ್ದರಿಂದ ಈ ನಿಯಮವನ್ನು ಪ್ರತಿಯೊಬ್ಬ ವ್ಯಾಖ್ಯಾನಕಾರರೂ ತಮ್ಮ ಮೂಲ ಪೀಠಿಕೆಯಲ್ಲಿ ಹೇಳುತ್ತಾರೆ. ಏಕೆಂದರೆ ಪ್ರಪಂಚ ಬೆಳೆಸುವುದು ಪ್ರತಿಯೊಬ್ಬನ ಗುರಿ. ಪ್ರಪಂಚ ವಿಮುಖವಾದರೆ ಶ್ರೀಸೂಕ್ತವೂ ಬೇಡ, ವೇದವೂ ಬೇಡ, ಯಾವುದೂ ಬೇಡ. ಪ್ರಾಪಂಚಿಕ ಇದ್ದಾಗ ಅವನಿಗೆ ಆಶ್ರಯಕ್ಕೆ ಇವು ಬೇಕು. ಬಳ್ಳಿಯೇ ಇಲ್ಲದಿದ್ದರೆ ಮರ ಬೇಡ. ಅದಕ್ಕೆ ಮರ ಯಾಕೆ ಬೇಕು? ಬಳ್ಳಿಗೆ ಆಶ್ರಯಕ್ಕೆ ಮರ ಬೇಕು. ಮರವು ತಾನು ದೊಡ್ಡವನೆಂದು ತಿಳಿದುಕೊಳ್ಳುವುದಲ್ಲ. ಬಳ್ಳಿಗೆ ಆಶ್ರಯವಾಗಿ ನಾನಿದ್ದೇನೆ ಎಂದು ತಿಳಿದುಕೊಳ್ಳುವುದೇ ಮರದ ದೊಡ್ಡಸ್ತಿಕೆ. ನನ್ನಿದಾಗಿ ಬಳ್ಳಿ ಬದುಕಿತು ಎಂದು ಭಾವಿಸಬಾರದು. ಆ ಮರದಿಂದಾಗಿ ಬಳ್ಳಿ ಬದುಕಿದ್ದಲ್ಲ, ಆದರೆ ಬಳ್ಳಿಗೆ ಆಶ್ರಯ ಕೊಡುವ ಶಕ್ತಿಯನ್ನು ಭಗವಂತ ಕೊಟ್ಟಿದ್ದಾನೆ ಎನ್ನುವ ಭಾವವನ್ನು ಅದು ಬಿಂಬಿಸಬೇಕು. ಈ ವೇದ ಅಥವಾ ಅಂತಹ ಆರ್ಷ ಗ್ರಂಥಗಳ ಭಾಷ್ಯದಲ್ಲಿ ಅದನ್ನು ಬಹಳ ಪ್ರಧಾನವಾಗಿ ತೆಗೆದುಕೊಳ್ಳುತ್ತಾರೆ. ಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದು. ಪ್ರಪಂಚ ನಿರಂತರವಾಗಿದ್ದಷ್ಟು ಕಾಲಕ್ಕೂ ನಮಗೆ ವೇದ ಬೇಕು. ಪ್ರಪಂಚವೇ ಇಲ್ಲದ ಮೇಲೆ ವೇದ ಯಾರಿಗೆ ಬೇಕು? ಪ್ರಪಂಚ, ಪ್ರಾಪಂಚಿಕ ಇದ್ದಾಗ ಮಾತ್ರ ವೇದ ಬೇಕು. ನಮ್ಮಿಂದ ಮುಂದೆ ಹೋದಂತಹ ಸನ್ಯಾಸಿಗಳು, ಗ್ರಹಸ್ಥಾಶ್ರಮ ಬಿಟ್ಟು ಸನ್ಯಾಸಕ್ಕೆ ಹೋದವರಿಗೆ ವೇದ ಬೇಡ. ಅವರು ಪ್ರಣವೋಪಾಸನೆ ಮಾತ್ರ ಮಾಡುವುದು. ವೇದ ಹೇಳುವುದೇ ಇಲ್ಲ. ಆದರೆ ಗ್ರಹಸ್ಥರಿಗೆ ವೇದ ಬೇಕು. ಅದರರ್ಥ ಪ್ರಾಪಂಚಿಕಕ್ಕೆ ವೇದ ಅನಿವಾರ್ಯ. ಆದ್ದರಿಂದ ನಾವು ಪ್ರಾಪಂಚಿಕಕ್ಕೆ ವಿರುದ್ಧವಾದ ಅಥವಾ ಅದರಿಂದ ನಿರಾಸನವಾಗುವ ರೀತಿಯಲ್ಲಿ ವೇದಕ್ಕೆ ಅರ್ಥವನ್ನು ಕಲ್ಪಿಸಬಾರದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಆಧ್ಯಾತ್ಮದ ಚಿಂತನೆ ಅದರಲ್ಲಿ ಇರಬೇಕು. ಚಿಂತನೆ ಬಿಟ್ಟು ಹೊರಗೆ ಹೋಗಬಾರದು. ಸಾಹಿತ್ಯಿಕವಾದ ಅರ್ಥಕ್ಕೆ ವಿರುದ್ಧವೂ ಹೇಳಬಾರದು, ಪೂರಕವಾಗಿರಬೇಕು. ಇವು ಮೂರು ನಿಯಮಗಳನ್ನು ಸೇರಿಸಿ ಭಾಷ್ಯಗಳನ್ನು ಹೇಳುತ್ತಾರೆ. ಸಾಹಿತ್ಯಿಕ ಅರ್ಥಗಳಿಗೆ ವಿರೋಧವಿಲ್ಲ, ಯಾಕೆಂದರೆ ಪ್ರತಿಯೊಂದು ಶಬ್ದಕ್ಕೂ ಸಾಹಿತ್ಯಿಕವಾದ ಅರ್ಥ ಇರುತ್ತದೆ. ಆದರೆ ಅಲ್ಲಿ ಸಾಹಿತ್ಯಿಕ ಅರ್ಥ ಹೇಳಿದ್ದು ಇದೇ ಅಂತ ಹೇಳುವುದೂ ಅಲ್ಲ, ಅದಕ್ಕೆ ಪೂರಕವಾದಂತಹ ರೀತಿಯಲ್ಲಿ ಅರ್ಥವನ್ನು ವಿವರಿಸಬೇಕು ಅಂತ ಹೇಳುತ್ತದೆ. ಆ ನೆಲೆಯಲ್ಲಿ ಸ್ವಲ್ಪ ಮಟ್ಟಿಗೆ ವಿಸ್ತಾರವಾಗಿ ಶ್ರೀಸೂಕ್ತಕ್ಕೆ ಪೂರ್ಣ ಅರ್ಥ ಹೇಳುವುದಾದರೆ ಕಡಿಮೆ ಅಂದರೆ ಮೂರು ದಿನ ಬೇಕು. ಅದರ ಶಕ್ತಿ, ಸಾಧ್ಯತೆಗಳು, ಅದರ ಪ್ರಯೋಗ, ಅದರ ತರಂಗಗಳು, ಕೀಲಕಗಳು, ನ್ಯಾಸಗಳು, ಇವೆಲ್ಲ ಹೇಳುತ್ತಾ ಹೋದರೆ ಅದು ತಿಂಗಳುಗಟ್ಟಲೆ ಮುಗಿಯಲಿಕ್ಕಿಲ್ಲ. ಅಷ್ಟು ವಿಶಿಷ್ಟವಾದ ಮಂತ್ರಪುಂಜಗಳಿವು. ಸ್ಥೂಲವಾಗಿ ತಿಳಿದುಕೊಂಡರೆ ಸಾಕು. ಸಂಪೂರ್ಣವಾಗಿ ತಿಳಿಯಬೇಕಾದ ಅಗತ್ಯವಿಲ್ಲ. ಅಂದರೆ ಯಾವುದೇ ಒಂದನ್ನು ತಿಳಿದುಕೊಳ್ಳಬೇಕಾದ್ದು ಅಷ್ಟೇ ಎನ್ನುವುದು ಪ್ರಾಪಂಚಿಕ ನಿಯಮ. ಅದಕ್ಕಿಂತ ಹೆಚ್ಚನ್ನು ತಿಳಿದುಕೊಳ್ಳಬಾರದು. ನಮಗೆ ಗೃಹಸ್ಥರಿಗೆ ಒಂದು ನಿಯಮವನ್ನೇ ಹಾಕಿದ್ದಾರೆ. ನದೀ ಮೂಲ, ಸ್ತ್ರೀಮೂಲ, ಋಷಿಮೂಲ ಇವನ್ನೆಲ್ಲ ಪೂರಾ ಹುಡುಕಲಿಕ್ಕೆ ಹೋಗಬೇಡ. ಅವರು ಋಷಿಗಳು, ಗೌರವಿಸು. ಮೂಲ ಹುಡುಕಲು ಹೇಳಲಿಲ್ಲ ಯಾಕೆಂದರೆ ಮೂಲ ಹುಡುಕುತ್ತಾ ಹೋದರೆ ನಮಗೆ ಅದು ನೆಲೆಯಾಗುವುದಿಲ್ಲ, ತೀರ್ಮಾನವಾಗುವುದಿಲ್ಲ ಎಂದು. ಹಾಗಾಗಿ ತೀರಾ ಮೂಲ ಅರ್ಥದ ಅಗತ್ಯ ಇಲ್ಲ. ಅದು ಪ್ರಾಪಂಚಿಕ ದೃಷ್ಟಿಯಿಂದ ನಮಗೆ ಹೇಗೆ ಪೂರಕ ಅನ್ನುವಷ್ಟು ಅರ್ಥವ್ಯಾಪ್ತಿಯನ್ನು ಮಾತ್ರ ತಿಳಿದುಕೊಳ್ಳಬೇಕು ಅಂತ ಹೇಳುವುದು ನಿಯಮ. ಅದರಂತೆ ಶ್ರೀಸೂಕ್ತದ ಮಂತ್ರಗಳಲ್ಲಿ ೧೫ ಮಂತ್ರ ಒಂದು ಭಾಗ. ಆಮೇಲೆ ಒಂದಿಷ್ಟು ಸ್ತೋತ್ರಭಾಗವೂ, ಮಂತ್ರವೂ ಆದ ಪ್ರಯೋಗ ಭಾಗದ ಒಂದಿಷ್ಟು ಮಂತ್ರಗಳಿವೆ. ಅವು ಒಂದಕ್ಕೊಂದು ಪೂರಕ, ಪ್ರತ್ಯೇಕವಾಗುವುದಿಲ್ಲ. ಈ ೧೫ ಮಂತ್ರದ ಅಂಗವೇ ಆಗಿ ಅದು ಕೂಡಾ ಇದೆ. ಅದನ್ನು ಆಧರಿಸಿ ಅರ್ಥವ್ಯಾಪ್ತಿ ಇರುತ್ತದೆ. ಮೊದಲಿಗೆ ನಿರಂಜನ ಭಟ್ಟರು ಮಂತ್ರ ಹೇಳಲಿ, ಭಾಸ್ಕರ ಭಟ್ಟರು ಸಾಹಿತ್ಯಿಕ ಅರ್ಥವನ್ನು ಹೇಳಲಿ, ನಂತರ ನಾನು ವ್ಯಾಖ್ಯಾನವನ್ನು ನೀಡುತ್ತೇನೆ.