ಮಂತ್ರ: ಆರ್ದ್ರಾಂ ಪುಷ್ಕರಿಣೀಂ ಪುಷ್ಟಿಂ ಪಿಂಗಲಾಮ್ ಪದ್ಮಮಾಲಿನೀಮ್ |
ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀ ಜಾತವೇದೋ ಮ ಆವಹ ||
ಸಾಹಿತ್ಯಿಕ ಅರ್ಥ: ತಾಯಿಯಲ್ಲಿರುವಂತಹ ಆರ್ದ್ರತೆಯ ಗುಣವುಳ್ಳವಳೂ, ಪುಷ್ಕರಿಣಿ - ಸದ್ಗುಣಗಳ ತೀರ್ಥವಾಗಿರುವವಳೂ, ಬೇರೆಯವರ ಬದುಕಿಗೆ ತುಷ್ಟಿಯನ್ನೂ, ಪುಷ್ಟಿಯನ್ನೂ ತುಂಬುವಂತಹ ಗುಣವುಳ್ಳವಳೂ, ಪಿಂಗಲ ವರ್ಣದವಳೂ, ಪದ್ಮದ ಮಾಲೆಯನ್ನು ಧರಿಸಿದವಳೂ, ಚಂದ್ರನಂತಹ ಮೃದು ಸ್ವಭಾವದವಳೂ, ಹಿರಣ್ಮಯಿಯೂ ಆದಂತಹ ಲಕ್ಷ್ಮಿಯನ್ನು ಉಪಾಸಿಸುತ್ತೇನೆ. ನೀನು ನನ್ನೊಳಗೆ ಸೇರಿಕೋ.
ವ್ಯಾಖ್ಯಾನ: ಆರ್ದ್ರತೆಯಲ್ಲಿ ೧೬ ಅಂಶಗಳಿವೆ. ಅಂದರೆ ದಯಾಗುಣ ಸಹಿತವಾದ ೧೬ ಶ್ರೇಷ್ಠ ಗುಣಗಳನ್ನು ಆರ್ದ್ರತೆ ಎನ್ನುತ್ತಾರೆ. ಒಬ್ಬರು ಕಷ್ಟದಲ್ಲಿದ್ದಾಗ ಸ್ಪಂದಿಸುವುದು, ಯಾರಾದರೂ ಅಳುತ್ತಿದ್ದರೆ ಅವರ ಅಳುವಿಗೆ ಕಾರಣ ಕೇಳಿ ಅದಕ್ಕೆ ಪರಿಹಾರ ನೀಡುವುದು, ಹಸಿದವನಿಗೆ ಅನ್ನವನ್ನು ನೀಡುವುದು, ಇವೆಲ್ಲವೂ ಆರ್ದ್ರತೆಯೇ. ಅಂತಹ ವಿಶಿಷ್ಟವಾದ ಆರ್ದ್ರತೆಯ ಗುಣಗಳು, ಹಾಗೆಯೇ ಪುಷ್ಕರಗಳು. ಪುಷ್ಕರಗಳು ಒಂದು ವ್ಯವಸ್ಥೆಯನ್ನು ಸನ್ಮಾರ್ಗಕ್ಕೆ ಕೊಂಡೊಯ್ಯುವ ಜ್ಞಾನ. ಈ ಅಂಶಗಳೆಲ್ಲ ಪುಷ್ಕರಗಳು. ಹಾಗಾಗಿ ನಿಮ್ಮನ್ನು ಪಾಪ ಮುಕ್ತರನ್ನಾಗಿ ಮಾಡುವುದಕ್ಕೆ, ತೀರ್ಥಕ್ಷೇತ್ರಗಳಿಗೆ ಪುಷ್ಕರಿಣಿ ಎನ್ನುತ್ತಾರೆ. ನಿಮ್ಮನ್ನು ಪಾಪದಿಂದ ಮುಕ್ತರನ್ನಾಗಿ ಮಾಡಿ ಸನ್ಮಾರ್ಗಕ್ಕೆ ಕೊಂಡೊಯ್ಯುವ ಒಂದು ಭಾಗ ಮುಕ್ತಮಾಡುವುದು ಎಂದರ್ಥ. ಯಾವಾಗ ಪುಣ್ಯಶೇಷವು ಪ್ರಬಲವಾಗುತ್ತದೆಯೋ ಆಗ ಪುಣ್ಯ ಸಂಚಯನವಾಗುತ್ತದೆ. ಆಗ ಅವನು ಸನ್ಮಾರ್ಗದಲ್ಲಿ ಹೋಗುತ್ತಾನೆ. ಪಾಪವು ಪ್ರಬಲವಾಗುತ್ತಾ ಹೋದಾಗ ಅವನು ಕೆಟ್ಟ ಮಾರ್ಗಕ್ಕೆ ಇಳಿಯುತ್ತಾನೆ. ಪುಷ್ಕರವು ಯಾವುದು ಶ್ರೇಷ್ಠಮಾರ್ಗ ಎಂದು ತೋರಿಸಿಕೊಡತಕ್ಕಂತಹ ಮಾರ್ಗಸೂಚಿಗಳು - ಅವು ೮ ಭಾಗ. ಹಾಗೆಯೇ ಪುಷ್ಟಿದಾಯಕವಾದ ತುಷ್ಟಿ, ಪುಷ್ಟಿ, ಸೃಷ್ಟಿ ಎಂದು ಹೇಳತಕ್ಕ ೮ ವಿಧಗಳು. ಈ ಆರ್ದ್ರತೆ, ಪುಷ್ಕರ, ಪುಷ್ಟಿ, ಇವುಗಳ ೧೬ + ೮ + ೮ = ೩೨ ಭಾಗಗಳು ಸೇರಿ, "ನಾನು" ಎನ್ನುವುದನ್ನು ಸೇರಿಸಿದಾಗ ೩೩, ಅದು ದೇವತೆ. ಹಾಗಾಗಿಯೇ ೩೩ ಕೋಟಿ ದೇವತೆಗಳು ಎನ್ನುತ್ತಾರೆ. ಈ ೩೨ ಸದ್ಗುಣಗಳ ಸಂಯೋಗವಾದಂತಹ ಆತ್ಮನೇ ದೇವತೆ ಎಂದರ್ಥ. ಇಲ್ಲಿ ಪಿಂಗಳ ಎಂದರೆ ವರ್ಣವಲ್ಲ, ದೇವತೆ ಎಂದರ್ಥ. ದೇವತೆಯ ಪದ್ಮಮಾಲಿನೀಮ್, ಮಾಲಿನೀಮ್ ಶಬ್ದದಲ್ಲಿ 'ಮಾ' ಗೆ ಸ್ವರಿತ್ತು ಇದೆ, ಅಂದರೆ ಒಬ್ಬ ದೇವತೆಯಲ್ಲಿ ಏನೇನು ಗುಣಗಳಿರಬಹುದೋ ಅಂತಹ ಎಲ್ಲ ಗುಣಗಳ ಒಂದು ಸಮಗ್ರ ಸೃಷ್ಟಿ ಎಂದರೆ ತಾಯಿ, ಅದು ನಾನಾಗಿದ್ದೇನೆ. ಒಬ್ಬ ದೇವತೆಯಲ್ಲಿರುವಂತಹದ್ದಲ್ಲ, ಅಂತಹ ಎಲ್ಲ ಗುಣಗಳ ಸಮಗ್ರತೆಯ ಸ್ವರೂಪ ಕಾಣುವುದು ತಾಯಿಯಲ್ಲಿ. ಅಂತಹ ತಾಯಿ ನಾನಾಗುತ್ತೇನೆ, ನಾನಾಗಿದ್ದೇನೆ, ಎಂದು ಹೇಳುವುದು ಈ ಮಂತ್ರದ ಅರ್ಥ. ಆ ರೀತಿಯಲ್ಲಿ ಎಲ್ಲವನ್ನೂ ನನ್ನಲ್ಲಿ ಆವೇಶಿಸಿಕೊಂಡಿದ್ದೇನೆ. ಅದಕ್ಕಾಗಿಯೇ ನಾನು ತಾಯಿಯಾಗಿ - ಜಾತವೇದ - ಹುಟ್ಟಿದ್ದೇನೆ ಎಂದು ಈ ಮಂತ್ರವು ಹೇಳುತ್ತದೆ. ಹಾಗೆಯೇ ಅದರ ಇನ್ನೊಂದು ಸ್ವರೂಪವನ್ನು ಮುಂದಿನ ಮಂತ್ರವು ಹೇಳುತ್ತದೆ.
ಮಂತ್ರ: ಆರ್ದ್ರಾಂ ಯಃ ಕರಿಣೀಂ ಯಷ್ಟಿಂ ಸುವರ್ಣಾಮ್ ಹೇಮಮಾಲಿನೀಮ್ |
ಸೂರ್ಯಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ||
ಸಾಹಿತ್ಯಿಕ ಅರ್ಥ: ಹಿಂದಿನ ಮಂತ್ರದಲ್ಲಿ ಲಕ್ಷ್ಮಿಯನ್ನು ಪುಷ್ಕರಿಣಿ ಎಂದಿದ್ದರೆ, ಇಲ್ಲಿ ಯಃ ಕರಿಣೀಮ್ ಎಂದಿದ್ದಾರೆ. ಯಾವುದನ್ನು ಮಾಡುವುದಕ್ಕೆ ಸಮರ್ಥಳೂ, ನಮ್ಮ ಯಾವೆಲ್ಲ ಬೇಡಿಕೆಯನ್ನು ಪೂರೈಸುವುದಕ್ಕೆ ಸಮರ್ಥಳೂ, ಸುವರ್ಣದಂತಹ ಮನಸ್ಸುಳ್ಳವಳೂ, ಬಂಗಾರದ ಮಾಲೆಯಂತಹ ಗುಣಗಳ ಗಣಿಯೂ, ಸೂರ್ಯನಂತೆ ಹಿರಣ್ಮಯವಾದ ರಶ್ಮಿಯನ್ನು ಹೊಂದಿದವಳೂ, ಆದ ಹೇ ಲಕ್ಷ್ಮಿ ನೀನು ನನ್ನಲ್ಲಿ ವಾಸ ಮಾಡು.
ವ್ಯಾಖ್ಯಾನ: ಇದು ಹಿಂದಿನ ಮಂತ್ರದ ಮುಂದುವರೆದ ಭಾಗವಾಗಿದೆ. ಸಹಜ, ಸ್ವಭಾವ ಸಿದ್ಧವಾದ ಮಾತೃಕೆಯಾಗಿ, ಪ್ರಕೃತಿಯಾಗಿ ಹುಟ್ಟುವುದಕ್ಕೆ ನಿಮಗೆ ಸಂಪೂರ್ಣ ಅಧಿಕಾರವಿದೆ. ನಿಮ್ಮದ್ದಾದ ಸ್ವಯಂ ಅಧಿಕಾರಗಳನ್ನು ಹಿಂದಿನ ಮಂತ್ರದಲ್ಲಿ ಹೇಳಲಾಗಿದೆ. ನಂತರದ ಸಿದ್ಧ ಅಧಿಕಾರಗಳನ್ನು ಈ ಮಂತ್ರ ಹೇಳುತ್ತದೆ. ಸಿದ್ಧ ಅಧಿಕಾರಗಳು ಎಂದಾಗ ಅಲ್ಲಿ "ಯಃ ಕರಿಣೀಮ್ ಯಷ್ಟಿಮ್" - ಅಂದರೆ ನಿಮ್ಮ ಜೀವನ ವಿಧಾನದಲ್ಲಿ ನೀವು ರೂಢಿಸಿಕೊಂಡು ಹೋಗುವುದರಿಂದ ಏನೇನು ಮಾಡಲಿಕ್ಕೆ ಸಾಧ್ಯ, ತನ್ಮೂಲಕ ಆಗತಕ್ಕ ಉತ್ತಮಿಕೆ. ಇನ್ನು ಯಜ್ಞ, ಯಾಗಗಳು ಇತ್ಯಾದಿ. ನೀವು ಇಲ್ಲದೆ ಯಜ್ಞ, ಯಾಗ ಮಾಡಲಿಕ್ಕೆ ಪುರುಷನಿಗೆ ಅಧಿಕಾರ ಇಲ್ಲ. ಅದರರ್ಥ ಯಜ್ಞ, ಯಾಗಗಳು ನಡೆಯುವುದು ನಿಮ್ಮಿಂದ. ಇಂತಹೆ ಬೇಕಾದಷ್ಟು ಪ್ರಕ್ರಿಯೆಗಳು, ಇವೆಲ್ಲ ಮಾಡುವುದರಿಂದಲೂ ನೀವು ಹೇ"ಮಾಮಾಲಿನೀಂ - ಇಲ್ಲಿ ಚಿನ್ನ ಎಂದು ಹೇಳುವುದಕ್ಕಿಂತ ಹೆಚ್ಚಾಗಿ, ಚಿನ್ನವು ತನ್ನಲ್ಲಿ ಅಂತರ್ಗತಗೊಳಿಸಿಕೊಂಡಂತಹ ಇತರ ಲೋಹಗಳ ಪ್ರಕಟಣೆಗೆ ಬಿಡದೇನೆ, ತಾನು ಅವೆಲ್ಲವನ್ನೂ ಚಿನ್ನವಾಗಿ ತೋರಿಸುವ ಗುಣ. ನಿಮ್ಮನ್ನು ಆಶ್ರಯಿಸಿರುವ ಎಲ್ಲರನ್ನೂ ಒಳ್ಳೆಯದು ಮಾಡುವ, ಒಳ್ಳೆಯವರಾಗಿ ತೋರಿಸುವ ಗುಣ. ಚಿನ್ನವು ತನ್ನಲ್ಲಿ ತಾಮ್ರ ಮಾತ್ರವಲ್ಲ, ಇನ್ನೂ ಮೂರು ರೀತಿಯ ಲೋಹಗಳ ಸಂಯೋಗ ಹೊಂದಿರುತ್ತದೆ. ಆ ಲೋಹಗಳನ್ನ್ಯಾವುದೋ ತೋರಿಸಿಕೊಡದೇನೆ, ಎಲ್ಲವನ್ನೂ ಚಿನ್ನವೆಂದು ತೋರಿಸಿಕೊಡುತ್ತದೆ. ಹಾಗೆ ನಿಮ್ಮನ್ನು ಆಶ್ರಯಿಸಿದ ಎಲ್ಲರನ್ನೂ ಶ್ರೇಷ್ಠರನ್ನಾಗಿ ಮಾಡುವ ಸದ್ಗುಣದ ಹಾರವೇ ನೀವು ಎನ್ನುವುದು ಈ ಮಂತ್ರದ ಅರ್ಥ. ಚಂದ್ರನಿಂದ ಸ್ವಯಂ ಅಧಿಕಾರ, ಸೂರ್ಯನಿಂದ ಕೃತ ಅಧಿಕಾರ ಎಂದರ್ಥ. ನಂತರ ಜೀವನದಲ್ಲಿ ರೂಢಿಸಿಕೊಂಡು ಬೆಳೆಸಿಕೊಳ್ಳುವಂತಹ ಅಧಿಕಾರ. ಇನ್ನೊಂದನ್ನು ಜೊತೆಯಲ್ಲಿ ಸೇರಿಸಿಕೊಂಡು ಮಾಡುವ ಅಧಿಕಾರಗಳು ಎಂದರ್ಥ.
ಮಂತ್ರ: ತಾಂ ಮ ಆವಹ ಜಾತವೇದೋ ಲಕ್ಷೀಮನಪಗಾಮಿನೀಮ್ |
ಯಸ್ಯಾಂ ಹಿರಣ್ಯಂ ಪ್ರಭೂತಂ ಗಾವೋ ದಾಸ್ಯೋSಶ್ವಾನ್, ವಿಂದೇಯಂ ಪುರುಷಾನಹಮ್ ||
ಸಾಹಿತ್ಯಿಕ ಅರ್ಥ: ಹಿಂದೆ ನಾನು ಏನು ಕೇಳಿದ್ದೇನೋ ಆ ಎಲ್ಲ ಗುಣಗಳನ್ನು ನೀನು ತಂದು ಕೊಡುವುದರ ಜೊತೆಗೆ, ಅನಪಗಾಮಿನೀಂ - ನಾನು ಕೆಟ್ಟ ಮಾರ್ಗದಲ್ಲಿ ನಡೆಯದಂತೆ ಮುನ್ನಡೆಸು. ನಾವು ಕೇಳಿದ್ದೆಲ್ಲ, ಎಣಿಸಿದ್ದೆಲ್ಲ, ಸಿಕ್ಕಿಬಿಟ್ಟರೆ ಅದು ನಮ್ಮನ್ನು ಕೆಟ್ಟ ಮಾರ್ಗದಲ್ಲಿ ಹೋಗುವುದಕ್ಕೆ ಪ್ರೇರೇಪಿಸುತ್ತದೆ. ರಾಕ್ಷಸನಿಗೆ ದೇವತೆಗಳು ವರಕೊಟ್ಟಂತೆ ಆಗುತ್ತದೆ. ಹಾಗಾಗಿ ನಾನು ಕೇಳಿದ್ದನ್ನು ಕೊಡುವುದಷ್ಟೇ ಅಲ್ಲ, ಕೊಟ್ಟಮೇಲೆ ನಿನಗೂ ಒಂದು ಜವಾಬ್ದಾರಿ ಇದೆ. ನಾನು ಪಥಭ್ರಷ್ಟನಾಗದಂತೆ, ದಾರಿ ತಪ್ಪದಂತೆ ಮಾಡು. ಇದರಿಂದ ನಾನು ಪ್ರಭೂತವಾದ ಗೋ, ಅಶ್ವ, ಸಂಪತ್ತುಗಳೆಲ್ಲವನ್ನೂ ಪಡೆದುಕೊಂಡು, ನನ್ನೊಬ್ಬ ಸಮಾಜಕ್ಕೆ ಬೇಕಾದಂತಹ ಪುರುಷ, ಸತ್ಕಾರ್ಯಕ್ಕೆ ಬೇಕಾದ ವ್ಯಕ್ತಿಯಾಗಿ ಬೆಳೆಯುವಂತೆ ಮಾಡು. ಪುರುಷ ಎಂದರೆ ಕೇವಲ ಗಂಡಸು ಎಂದರ್ಥವಲ್ಲ, ದೇಹದಲ್ಲಿ ಆತ್ಮರೂಪಿ ಭಗವಂತನನ್ನು ಹೊಂದಿರುವುದು ಎಂದರ್ಥ. ಅಂತಹ ಮನುಷ್ಯನನ್ನಾಗಿ ಮಾಡು, ಎಲ್ಲ ಸಂಪತ್ತನ್ನೂ ಕೊಡುವುದರ ಜೊತೆಗೆ ನಾನು ದಾರಿ ತಪ್ಪಿ ನಡೆಯದಂತೆ ಮಾಡು ಎನ್ನುವುದು ಇದರ ಅರ್ಥವಾಗಿದೆ.
ವ್ಯಾಖ್ಯಾನ: ಹಿಂದೆ ಹೇಳಿದುದಕ್ಕೆಲ್ಲ ಪೂರಕವಾಗಿ ನಾನು ಹೇಗೆ ನಡೆಯಬೇಕು ಎಂದು ಹೇಳುವ ವಿಧಿಯೇ ಈ ಮಂತ್ರ. ಸಾಹಿತ್ಯಿಕ ಅರ್ಥ ಹೇಳುವಾಗ ಇದನ್ನು ಚೆನ್ನಾಗಿ ಹೇಳಲಾಗಿದೆ. ಈ ಮಂತ್ರಗಳನ್ನು ನಾನೇನೂ ಕೊಟ್ಟದ್ದಲ್ಲ. ವೇದದಲ್ಲಿ ಇರುವಂತಹದ್ದು. ವೇದದಲ್ಲಿ ನಮ್ಮ ಹಿರಿಯರು, ಪೂರ್ವಿಕರು ಬಹಳ ಕಷ್ಟಪಟ್ಟು ಸಂಶೋಧಿಸಿ, ಇದೊಂದು ಶ್ರೇಷ್ಠ ಶಕ್ತಿ, ಇದರಿಂದ ಸಮಾಜವನ್ನು ಉತ್ತಮಿಕೆಯಲ್ಲಿ ನಡೆಸಲು ಸಾಧ್ಯ ಎಂದು ಕಂಡುಹಿಡಿದು ಕೊಟ್ಟಂತಹ ಮಂತ್ರಪುಂಜ. ಈ ೧೫ ಮಂತ್ರಗಳು, ಅದರಲ್ಲಿ ೧೪ ಮಂತ್ರಗಳು ವಿಚಾರವನ್ನು ಹೇಳಿಕೊಂಡು ಹೋಗುತ್ತವೆ. ನಿಮ್ಮ ಸ್ವಂತ ಶಕ್ತಿಯನ್ನು ಪುನಃ ಎಚ್ಚರಿಸುತ್ತವೆ. ನಿಮಗಿರತಕ್ಕ ಶಕ್ತಿ ನಿಮ್ಮಲ್ಲೇ ಇದೆ. ಆ ಮಂತ್ರಗಳು ನಿಮ್ಮನ್ನು ಎಚ್ಚರಿಸುತ್ತವೆ. ತನ್ಮೂಲಕ ನೀವು ಪ್ರಬುದ್ಧರಾಗುತ್ತೀರಿ. ನಿಮಗೆ ನಿಗ್ರಹ-ಅನುಗ್ರಹ ಶಕ್ತಿ ಬರುತ್ತದೆ. ಆದರೆ ನೀವು ಅನುಗ್ರಹ ಮಾಡಿ, ಯಾರನ್ನೂ ನಿಗ್ರಹ ಮಾಡಬೇಡಿ. ಎಲ್ಲರನ್ನೂ ಅನುಗ್ರಹಭಾವದಿಂದ ನೋಡಿಕೊಂಡು ಸಮಾಜವನ್ನು ಉತ್ತಮಿಕೆಯತ್ತ ಕೊಂಡೊಯ್ಯುವ ಪ್ರಯತ್ನ ಮಾಡಬೇಕು ಎನ್ನುವುದು ಈ ಮಂತ್ರದ ಗುರಿಯಾಗಿರಬೇಕು.
ಇದು ನನ್ನಿಂದ ಕೊಡಲ್ಪಟ್ಟದ್ದು ಎಂದು ತಿಳಿದುಕೊಳ್ಳಬೇಡಿ. ನಿಮಗೆ ದೇವದತ್ತವಾಗಿ, ದೇವತೆಗಳೇ ಆರಿಸಿ ಕೊಟ್ಟದ್ದಿದು. ಇದು ಸತ್ಯ. ಇಲ್ಲಿ ನೀವು ಯಾರು ಸೇರಿದ್ದೀರಿ, ಮಾತ್ರವಲ್ಲ, ಭಾರತಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ತಾಯಿಗೂ ಇದರ ಅಧಿಕಾರ ಇದೆ. ಅವರೆಲ್ಲರಿಗೂ ಅರ್ಹತೆ ಇದೆ. ಅವರೆಲ್ಲ ಸಾಧನೆ ಮಾಡಿದರೆ ಈ ಸಮಾಜವನ್ನು ಒಂದು ಉತ್ತಮ ಮಾರ್ಗದಲ್ಲಿ ಕೊಂಡುಹೋಗಲಿಕ್ಕೆ ಸಾಧ್ಯವಾಗುತ್ತದೆ. ಅದನ್ನು ಈಗ ಆರಂಭಿಸಬೇಕು. ಈಗ ಸಕಾಲ ಎಂದು ಹೇಳಿದ್ದು ದೇವತೆಗಳು, ನಾನಲ್ಲ. ನಾನು ಒಂದು ವಾರದ ಹಿಂದೆ ಇಲ್ಲಿಗೆ ಬಂದಿದ್ದೆನು. ಅದು ಶನಿವಾರ. ಶುಕ್ರವಾರ ಸಂಜೆ ಈ ವಿಚಾರವಾಗಿ ದೇವತೆಗಳೇ ಚಿಂತನೆ ಮಾಡಿ ಇದನ್ನು ಆದಷ್ಟು ಬೇಗ ಆರಂಭಿಸಬೇಕು, ಧರ್ಮ ಕ್ಷೀಣವಾಗುತ್ತಿದೆ. ಧರ್ಮ ಎಂದರೆ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಅಲ್ಲ, ಮಾನವ ಧರ್ಮ ಕ್ಷೀಣವಾಗುತ್ತಿದೆ. ಮಾನವಧರ್ಮದಲ್ಲಿ ಉನ್ನತಿಯನ್ನು ಕಾಣಬೇಕಾದರೆ, ಮಾತೆಯರು ತಮ್ಮ ನಿಗ್ರಹ-ಅನುಗ್ರಹ ಶಕ್ತಿಯನ್ನು ಪುನಃ ರೂಢಿಸಿಕೊಳ್ಳಬೇಕು. ಆದರೆ ಯಾವುದೇ ಕಾರಣಕ್ಕೂ ನಿಗ್ರಹ ಮಾಡಬಾರದು, ಅನುಗ್ರಹ ಮಾಡಬೇಕು. ಅನುಗ್ರಹದಾಯಿಗಳಾಗಿ ನೀವು ಈ ಆಂದೋಲನವನ್ನು ಆರಂಭಿಸಿದರೆ ಮುಂದೆ ನಿಮ್ಮ ಹಿಂದೆ ಇಡೀ ಪ್ರಪಂಚವಿದೆ. ಅದಕ್ಕೆ ದೇವತೆಗಳು ಅನುಗ್ರಹ ಮಾಡಿ, ನನಗೆ ಇದನ್ನು ಆರಂಭಿಸು ಎಂದು ಆದೇಶ ಕೊಟ್ಟಿದ್ದರಿಂದ, ಮರುದಿವಸವೇ ಬಂದು ಇದನ್ನು ಆರಂಭಿಸಿದ್ದೇನೆ. ಹಾಗಾಗಿ ಇದು ದೈವದತ್ತವಾಗಿ ನಿಮಗೆ ಪ್ರಾಪ್ತವಾದಂತಹ ವರ. ಇದನ್ನು ಸ್ವೀಕರಿಸಿ ಎಲ್ಲರೂ ಉತ್ತಮ ರೀತಿಯಲ್ಲಿ ಆಂದೋಲನವನ್ನು ಮಾಡಿ ಒಂದು ಒಳ್ಳೆಯ, ಶ್ರೇಷ್ಠವಾದ, ವಿಶಿಷ್ಟವಾದ, ಮನುಷ್ಯ ಎಂದು ಹೇಳತಕ್ಕದ್ದರಲ್ಲಿ ಯಾವುದು ಶ್ರೇಷ್ಠತೆ ಇದೆ ಅದನ್ನೆಲ್ಲ ಸಾಧಿಸುವ ಜನಾಂಗ ಸೃಷ್ಟಿಯಾಗಲಿ ಎಂದು ಹಾರೈಸುತ್ತೇನೆ.
ಪ್ರಶ್ನೆ: ಯಜ್ಞ ಯಾಗಾದಿಗಳಲ್ಲಿ ನಿಜವಾಗಿಯೂ ಪ್ರಾಣಿ ಹಿಂಸೆ, ಬಲಿ ಇತ್ಯಾದಿಗಳಿಗೆ ಅವಕಾಶವಿದೆಯೇ? ವೇದಗಳಲ್ಲಿ ಅದರ ಬಗ್ಗೆ ಉಲ್ಲೇಖ ಇದೆಯೇ?
ಸ್ವಾಮೀಜಿ: ಈ ಉತ್ತರವು ಯಾವುದೇ ದಾಖಲೆಗಾಗಿ ಹೇಳುತ್ತಿರುವುದಲ್ಲ. ಆದರೆ ಸತ್ಯವನ್ನೇ ಹೇಳುತ್ತೇನೆ, ನಮ್ಮ ಯಾಗ, ಯಜ್ಞಗಳಲ್ಲಾಗಲೀ ಅಥವಾ ಯಾವುದೇ ರೀತಿಯ ಕಾಮ್ಯೇಷ್ಟಿಗಳಲ್ಲಿಯೂ ಕೂಡ ಹಿಂಸೆಗೆ ಅವಕಾಶ ಇಲ್ಲ. ಒಂದು ಸಣ್ಣ ಕ್ರಿಮಿಯನ್ನೂ ಕೂಡ ನಾಶಮಾಡುವ ಪ್ರವೃತ್ತಿ ಯಾಗ ಯಜ್ಞಗಳಲ್ಲಿ ಇಲ್ಲ. ಇದನ್ನು ಖಂಡಿತವಾಗಿ ಹೇಳುತ್ತೇನೆ. ಅದನ್ನು ಸಾಧಿಸಿಯೂ ತೋರಿಸುತ್ತೇನೆ. ನಂತರ ಬಂದ ದುರಾಶಾಪೀಡಿತರಾದ, ಸ್ವಯಂ ಸಂಶೋಧನೆ, ಸ್ವಪ್ರಯತ್ನಗಳಿಲ್ಲದೇನೇ ಕೇವಲ ಮಂತ್ರಬಲದಿಂದಲೇ ಸಾಧಿಸಬಹುದು, ಮಂತ್ರ ಹೇಳುವುದು ನಮಗೆ ಗೊತ್ತು ಎನ್ನುವ ಪ್ರವೃತ್ತಿಯಿಂದ ಹೊರಟಂತಹ ಕೆಟ್ಟ ಜನರ, ಅವರನ್ನು ನನ್ನ ಬ್ರಾಹ್ಮಣರು ಎಂದು ಕರೆಯುವುದಿಲ್ಲ, ಅವರ ಪ್ರವೃತ್ತಿಯಿಂದಾಗಿ ಹೀಗೊಂದಿಷ್ಟು ಅಪಭ್ರಂಶ ವಿಚಾರಗಳು ರೂಢಿಯಲ್ಲಿ ಬಂದಿವೆ. ಆದರೆ ಎಲ್ಲಿಯೂ ಗ್ರಂಥಸ್ಥವಾಗಿಲ್ಲ. ಗ್ರಂಥಸ್ಥವಾದ ವಿಚಾರಗಳಲ್ಲಿ ಎಲ್ಲಿಯೂ ಕೂಡ ಒಂದೇ ಒಂದು ಅಂಶ ಹಿಂಸಾತ್ಮಕವಾದ ವಿಚಾರವನ್ನು ನಿಮಗೆ ತೋರಿಸಿಕೊಡಲಿಕ್ಕೆ ಸಾಧ್ಯವಿಲ್ಲ. ಅಲ್ಲೆಲ್ಲ ಅರ್ಥ ಬೇರೆಯಾಗಿರುತ್ತದೆ. ಪಶುಬಲಿ ಇತ್ಯಾದಿಗಳೆಲ್ಲ ತೀರಾ ಅಜ್ಞಾನದ ಪರಮಾವಧಿ. ಯಾವುದೇ ಪ್ರಾಣಿ ಹಿಂಸೆ ಇಲ್ಲದ ಪ್ರಕ್ರಿಯೆಯಲ್ಲಿ ಅದನ್ನು ಸೇರಿಸಿದ್ದಾರೆ ಅಷ್ಟೇ. ನಂತರ ಅದಕ್ಕೆ ಪರ್ಯಾಯವಾಗಿ ಹಿಟ್ಟಿನಿಂದ ಮಾಡುತ್ತೇವೆ ಎನ್ನುತ್ತಾರೆ. ಆದರೆ ಅದನ್ನು ಮಾಡುವುದೇ ತಪ್ಪು. ಹಿಟ್ಟಿನಿಂದ ಏಕೆ ಮಾಡಬೇಕು? ಸಾಂಕೇತಿಕವಾಗಿಯಾದರೂ ಹಿಂಸೆ ಎಂದು ಆಯಿತು ತಾನೇ? ಸಾಂಕೇತಿಕವಾಗಿಯೂ ಹಿಂಸೆ ಮಾಡದ ಪ್ರವೃತ್ತಿ ಉಳ್ಳದ್ದು ವೇದ ಅಥವಾ ಯಾಗಸೂತ್ರಗಳು. ಸಾಂಕೇತಿಕವಾಗಿಯೂ ಯಾಗಸೂತ್ರಗಳಲ್ಲಿ ಹಿಂಸೆ ಇಲ್ಲ. ವಾಜಪೇಯ ಯಾಗದಲ್ಲಿ ನೀವು ನೋಡಿರಬಹುದು. ಇದ್ದ ಎಲ್ಲ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಅಲ್ಲಿ ನ್ಯಾಸಗೊಳಿಸಿದಮೇಲೆ ಯಾಗ ಆರಂಭವಾಗುತ್ತದೆ. ಭೂಮಿಯಲ್ಲಿ ಅಸ್ತ್ರಗಳು ಇರಬಾರದು ಎನ್ನುವ ಕಾರಣಕ್ಕಾಗಿ ಎಲ್ಲ ಶಸ್ತ್ರಾಸ್ತ್ರಗಳನ್ನೂ ಕ್ಷತ್ರಿಯರಿಂದ ವಾಪಾಸು ಪಡೆಯಲಾಗುತ್ತದೆ. ಕತ್ತಿ, ಬಿಲ್ಲು ಬಾಣ ಹೀಗೆ ಪ್ರತಿಯೊಂದನ್ನೂ ಕ್ಷತ್ರಿಯರಿಂದ ವಾಪಾಸು ಪಡೆದು, ಅದನ್ನು ಒಂದು ಕಡೆ ಕಟ್ಟಿ ಇಟ್ಟು ಯಾಗ ಆರಂಭ ಮಾಡುತ್ತಾರೆ. ಏಕೆಂದರೆ ಯಾಗ ಕಾಲದಲ್ಲಿ ಆಕಸ್ಮಾತ್ ಮದ್ಯದಲ್ಲಿ ಯಾರಿಗೂ ಹಿಂಸೆ ಕೊಡಬಾರದು ಎನ್ನುವ ಕಾರಣಕ್ಕಾಗಿ. ಯಾಗದಲ್ಲಿ ಮಾತ್ರವಲ್ಲ, ಆ ಶಸ್ತ್ರಾಸ್ತ್ರಗಳನ್ನು ಹೊಂದಿರುವ ವ್ಯಕ್ತಿ ಮತ್ತೆಲ್ಲೋ ಹೋಗಿ ಹಿಂಸೆ ಕೊಟ್ಟಾನು, ಅದನ್ನು ತಡೆಯಬೇಕು ಎನ್ನುವ ಉತ್ತಮ ಆದರ್ಶ ಇರತಕ್ಕಂತಹ ಯಾಗ ಪ್ರಕ್ರಿಯೆಯಲ್ಲಿ ಇವರು ಹಿಂಸೆಯನ್ನು ತಂದಿದ್ದಾರೆ ಎಂದರೆ ಅದು ಶುದ್ಧ ಮೂರ್ಖತನ. ಆದರೆ ಅವರು ಮಾಡಿಕೊಂಡು ಹೋದದ್ದಕ್ಕೆ ಅವರು ಸ್ವತಂತ್ರರು. ಭಾರತ ದೇಶದಲ್ಲಿ ಪ್ರಸಕ್ತ ಕಾಲದಲ್ಲಿ ಯಾವುದಕ್ಕೂ ಯಾರೂ ಕೇಳುವವರಿಲ್ಲ. ಹಾಗಾಗಿ ಅದನ್ನು ಖಂಡಿಸುತ್ತೇನೆ ಎನ್ನುವುದರಲ್ಲಿ ಅರ್ಥವಿಲ್ಲ. ಆದರೆ ಅದು ಮಾತ್ರ ಸರಿ ಅಲ್ಲ. ಸುಮಾರು ೮೪,೦೦೦ ದಷ್ಟು ಯಾಗ ಸೂತ್ರಗಳು, ಬೇರೆ ಬೇರೆ ರೀತಿಯ ಯಾಗಗಳೂ ಇವೆ. ಆಮೇಲೆ ೩೨,೦೦೦ ಯಜ್ಞಗಳಿವೆ, ೧,೬೪,೦೦೦ ಕಾಮ್ಯೇಷ್ಟಿಗಳಿವೆ. ಇದೆಲ್ಲ ಈ ಭೂಮಿಯಲ್ಲಿ. ಇನ್ನು ಬೇರೆ ಲೋಕಗಳಲ್ಲಿ ಇನ್ನಷ್ಟಿವೆ. ಇನ್ನು ಶಾಂತಿ ಪ್ರಕ್ರಿಯೆಗಳು, ಉಪಸಂಹಾರಗಳು, ಇವೆಲ್ಲ ಬೇರೆ ಬೇರೆ ಇವೆ. ಅವುಗಲ್ಲಿಯೂ ಕೂಡ ಒಂದೇ ಒಂದು ಸಣ್ಣ ಕ್ರಿಮಿಯನ್ನೂ ನಾಶ ಮಾಡುವ ವಿಚಾರ ಹೇಳಿಲ್ಲ. ಇವರು ಏಕೆ ಹೀಗೆ ಹೇಳುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ನನ್ನ ಹತ್ತಿರ ಕೇಳಬೇಡಿ. ನಾನು ಉತ್ತರ ಕೊಡುವವನೂ ಅಲ್ಲ. ನಾನು ಬದ್ಧನೂ ಅಲ್ಲ. ನನಗೆ ಅದರ ಜವಾಬ್ದಾರಿಯೂ ಇಲ್ಲ. ಉತ್ತರ ಕೊಡಬೇಕಾದ ಸ್ಥಾನದಲ್ಲಿ ಕುಳಿತವರು ಯಾರೂ ಕೊಡುತ್ತಾ ಇಲ್ಲ. ಅದಕ್ಕೆ ನಾನೇನು ಮಾಡಲಿಕ್ಕೆ ಆಗುತ್ತದೆ!
ಪ್ರಶ್ನೆ: ಹೋಮಕ್ಕೆ ಹಾಕುವ ಸಮಿತ್ತುಗಳು ಸಸ್ಯಜನ್ಯ. ಆದರೂ ಅವಕ್ಕೆ ಜೀವ ಇರುತ್ತವೆ. ಎಳೆಯ ಸಸ್ಯದ ಭಾಗಗಳನ್ನು ತರುವುದು ಅವಕ್ಕೆ ಹಿಂಸೆ ಕೊಟ್ಟ ಹಾಗೆ ಅಲ್ಲವೇ?
ಸ್ವಾಮೀಜಿ: ಕಾಮ್ಯೇಷ್ಟಿಗಳಲ್ಲಿ ಸಮಿತ್ತುಗಳ ಬಳಕೆಯನ್ನು ಪ್ರಧಾನವಾಗಿ ಹೇಳುತ್ತಾರೆ. ಇಂತಿಂತಹ ಸಮಿತ್ತುಗಳೇ ಆಗಬೇಕು ಎಂದು ಹೇಳಲಾಗಿದೆ. ಆದರೆ ಅಲ್ಲೆಲ್ಲ ಒಣಗಿ ಬಿದ್ದ ಕಡ್ಡಿಗಳನ್ನು ಸಮಿತ್ತುಗಳಾಗಿ ಬಳಸಲು ಹೇಳಲಾಗಿದೆ. ಮರವನ್ನು ಕಡಿದು ತನ್ನಿ ಎಂದು ಹೇಳಿಲ್ಲ. ಇನ್ನು ದರ್ಭೆಯನ್ನು ಸಂಗ್ರಹಿಸಲು ಕಾಲ ಹೇಳಿದ್ದಾರೆ. ಬೇರೆ ಕಾಲದಲ್ಲಿ ದರ್ಭೆಯು ಬೆಳೆಯುವ ಪ್ರವೃತ್ತಿಯನ್ನು ಹೊಂದಿರುತ್ತದೆ. ದರ್ಭೆಯು ಗರ್ಭಧರಿಸಿರುತ್ತದೆ, ಹಾಗಾಗಿ ಕೊಯ್ಯಬಾರದು. ದರ್ಭೆಯನ್ನು ಕೊಯ್ಯುವುದು ಯಾವಾಗ ಎಂದರೆ ದರ್ಭೆ ಅಮಾವಾಸ್ಯೆಯ ದಿನ. ಆಗ ಮಾತ್ರ ಕೊಯ್ಯಬೇಕು, ಬೇರೆ ದಿನ ಕೊಯ್ಯಬಾರದು. ಆ ಕಾಲಕ್ಕೆ ದರ್ಭೆಯು ತನ್ನ ಬೆಳವಣಿಗೆಯಲ್ಲಿ ಮುಕ್ತತೆಯನ್ನು ಸಾಧಿಸಿಯಾಗಿರುತ್ತದೆ. ಹಾಗಾಗಿ ಅದನ್ನು ಆಗ ಕೊಯ್ಯಬೇಕು. ಅದರ ಬೆಳವಣಿಗೆಯ ಉದ್ದೇಶ ಪ್ರಾಣಿಗಳ ಆಹಾರವಾಗಿ ಬಳಕೆಯಾಗುವಂತಹದ್ದಲ್ಲ. ಪ್ರಾಣಿಗಳು ತಿನ್ನುವುದಾಗಿದ್ದರೆ ಅದು ತನ್ನ ಮೈಮೇಲೆ ದೊರಗನ್ನು ಬೆಳೆಸಿಕೊಳ್ಳುತ್ತಿರಲಿಲ್ಲ. ಸಮಸ್ಯೆಯನ್ನು ಉಪಸಂಹಾರ ಮಾಡುವುದಕ್ಕಾಗಿ ತನ್ನ ಮೈಯಲ್ಲಿ ದೊರಗಾದ ಪ್ರವೃತ್ತಿಯನ್ನು ಬೆಳೆಸಿಕೊಂಡು, ಆ ರೀತಿಯ ನಾರಿನ ಗುಣವನ್ನು ಅದು ಪಡೆದಿದೆ. ಅದನ್ನು ನೀವು ಹೋಮದಲ್ಲಿ ಬಳಸುವುದರಿಂದ ಸಮಸ್ಯೆಯನ್ನು ಉಪಸಂಹಾರ ಮಾಡುವುದಕ್ಕೆ ಸಾಧ್ಯವಾಗುತ್ತದೆ. ನಾಶ ಮಾಡುತ್ತದೆ ಎಂದು ಅಲ್ಲಿ ಹೇಳಿಲ್ಲ. ದನಕ್ಕೆ ದರ್ಭೆಯನ್ನು ಮೇಯಲಿಕ್ಕೆ ಆಗುವುದಿಲ್ಲ. ದನ ಮೇಯ್ದರೆ ಅದಕ್ಕೆ ಗರ್ಭಪಾತವಾಗುತ್ತದೆ ಎಂದು ನಿಮಗೆ ಗೊತ್ತಿರಬಹುದು. ದರ್ಭೆ ಬೆಳೆದದ್ದೇ ಅಗೋಚರವಾದ ಸಮಸ್ಯೆಗಳನ್ನು ಉಪಸಂಹಾರ ಮಾಡುವುದಕ್ಕಾಗಿ. ಅದನ್ನು ಎಲ್ಲ ದಿನಗಳಲ್ಲಿ ಕೊಯ್ಯುವಂತಿಲ್ಲ, ಆ ಅಮಾವಾಸ್ಯೆಯ ದಿನ ಮಾತ್ರ ಕೊಯ್ದು ಬಳಸಬೇಕು ಎಂದಿದೆ. ಅಷ್ಟು ಅಹಿಂಸಾತ್ಮಕವಾದ ಚಿಂತನೆ ಇದೆ. ಆ ದರ್ಭೆಯನ್ನು ಮನೆಯಲ್ಲಿ ತಂದಿಟ್ಟರೆ ಹೋಮಕ್ಕೆ ಬಳಸುವ ಮೊದಲು ಅದನ್ನು ನೀರಿನಲ್ಲಿ ನೆನೆಸಬೇಕು. ನೆನೆಸಿದ ತಕ್ಷಣ ಅದನ್ನು ಆಶ್ರಯಿಸಿದ ಕ್ರಿಮಿಗಳಿದ್ದರೆ ಅದಕ್ಕೆ ಶಾಖವಾಗುವುದಿಲ್ಲ, ತಂಪಾಗುತ್ತದೆ, ಅವು ಹೊರಗೆ ಹೋಗುತ್ತವೆ. ನಂತರ ಅದನ್ನು ಬೇಕಾದ ಅಳತೆಗೆ ಕತ್ತರಿಸಿಕೊಂಡು ಬಳಸಬೇಕು. ಮೊದಲು ಇಡೀ ದರ್ಭೆಯನ್ನು ಪರಿಸ್ತರಣೆ ಹಾಕಿ ಎಂದು ಹೇಳುತ್ತದೆ. ಪರಿಸ್ತರಣೆ ಮಾಡಿಕೊಂಡು ನಂತರ ದರ್ಭೆ ಛೇದನ. ಷೋಡಶ ಪಾತ್ರ ಪ್ರಯೋಗದಲ್ಲಿ ಇದನ್ನು ವಿವರಿಸಲಾಗಿದೆ. ದರ್ಭೆಯ ಪರಿಸ್ತರಣವನ್ನು ಉದ್ದವಾಗಿ ಹಾಕಿದಾಗ ಆ ಹೋಮಕುಂಡದ ಶಾಖಕ್ಕೆ ಅಕಸ್ಮಾತ್ ಅದರಿಂದ ಹೊರಹೋಗುವ ಕ್ರಿಮಿಗಳಿದ್ದರೆ ಅಲ್ಲಿಂದ ಹೊರಹೋಗಿಬಿಡುತ್ತದೆ. ನಂತರ ಕತ್ತರಿಸಿಕೊಳ್ಳಬೇಕು. ಏಕೆಂದರೆ ಸೂಕ್ಷ್ಮವಾದ, ಕಣ್ಣಿಗೆ ಗೋಚರಿಸದ ಕ್ರಿಯಿಗಳಿದ್ದರೂ ಹೊರಹೋಗಲಿ ಎಂದು. ನಂತರ ಹೋಮ ಆರಂಭಿಸಿದಾಗ ಆಜ್ಯ-ಪಾಜ್ಯ ಶುದ್ಧಮಾಡುವುದಕ್ಕೂ ದರ್ಭೆಯನ್ನು ಬಳಸುತ್ತಾರೆ. ಹಿಂದೆ ದರ್ಭೆಯಲ್ಲಿದ್ದ ಕ್ರಿಮಿಗಳು ಈಗಾಗಲೇ ಗಮನಿಸಿ ಹೊರಹೋಗಿದ್ದಾವೆ. ಹಾಗಾಗಿ ಆ ದರ್ಭೆ ಎಲ್ಲಿ ಹೋದರು ಕೂಡಲೇ ಆ ಕ್ರಿಮಿಗಳಿದ್ದರೆ ಅವಕ್ಕೆ ಗೊತ್ತಾಗುತ್ತವೆ. ಏಕೆಂದರೆ ಅದು ದೂಷಿತ ಎನ್ನುವ ಹಿಂದಿನ ಅನುಭವ ಕಾರಣದಿಂದಾಗಿ. ಹಾಗಾಗಿ ಪಾತ್ರೆಯಲ್ಲಿ ಯಾವುದಾದರೂ ಕ್ರಿಮಿ ಇದ್ದರೆ ದರ್ಭೆ ತಾಗಿದ ತಕ್ಷಣ ಹೊರಟುಹೋಗುತ್ತದೆ. ಸುತ್ಸುವದಲ್ಲಿ ಆಜ್ಯ ಹಾಕುತ್ತೀರಿ. ಹಿಂದಿನ ದಿನ ಹೋಮ ಮಾಡಿದ್ದರಿಂದ ಅಲ್ಲಿ ಆಜ್ಯದ ಪರಿಮಳಕ್ಕೆ ಕ್ರಿಮಿಗಳು ಬಂದು ವಾಸವಾಗಿದ್ದರೆ ಅಲ್ಲಿಗೂ ದರ್ಭೆ ತಾಗಿದ ತಕ್ಷಣ ಶುದ್ಧವಾಗುತ್ತದೆ, ಅಂದರೆ ಕ್ರಿಮಿಗಳು ಹೊರಟುಹೋಗುತ್ತವೆ. ಇದು ಪಾತ್ರ ಶುದ್ಧ ಮಾಡುವ ಉದ್ದೇಶ ಅಲ್ಲದೆ ಇದ್ದರೂ ಹೇಳುವುದು ಮಾತ್ರ ಶುದ್ಧಮಾಡುವುದು ಎಂದು. ಆದರೆ ನಿಜವಾಗಿ ಕ್ರಿಮಿಗಳನ್ನು ದೂರಮಾಡುವುದೇ ಈ ಕ್ರಮದ ಉದ್ದೇಶವಾಗಿರುತ್ತದೆ. ನಿಮ್ಮ ಮನೆಯಲ್ಲಿ ಇರುವೆಯ ಕಾಟ ಇದ್ದರೆ ದರ್ಭೆ ಹಾಸಿ ಮಲಗಿದರೆ ಒಂದು ಇರುವೆಯೂ ಮೈಗೆ ಹತ್ತುವುದಿಲ್ಲ. ಇದಕ್ಕೆ ದರ್ಭೆಯಲ್ಲಿರುವ ಕ್ರಿಮಿ ದೂರೀಕರಿಸುವ ಗುಣವೇ ಕಾರಣ. ಆದ್ದರಿಂದ ನೀವು ಮಾಡುವ ಯಾಗ ಪ್ರಕ್ರಿಯೆಗಳಿಗೆ ದರ್ಭೆ ಅತೀ ಅಗತ್ಯ. ಏಕೆಂದರೆ ಕ್ರಿಮಿಕೀಟಗಳಿಗೂ ಕೂಡ ಹಿಂಸೆಯಾಗದಂತೆ ಪ್ರಕ್ರಿಯೆ ಮಾಡಲು ದರ್ಭೆ ಬೇಕೇಬೇಕು. ಇಷ್ಟು ಅಹಿಂಸಾತ್ಮಕ ಚಿಂತನೆಯಿಂದ ಪ್ರತಿಯೊಂದು ಪ್ರಯೋಗವೂ, ಆಕೂತಿಯಾಗಲೀ, ಆಕಾರತಂತ್ರವಾಗಲೀ, ಅಥವಾ ಇನ್ನು ವಷಟ್ಕಾರ, ಔಷಟ್ಕಾರ, ಲಂಫಟ್ಕಾರ ಇತ್ಯಾದಿ ಹಲವು ತಂತ್ರಗಳ ಪ್ರಯೋಗವಾಗಲೀ ಇದ್ದರೂ ದರ್ಭೆ ಮಾತ್ರ ಬೇಕೇಬೇಕು. ಏಕೆಂದರೆ ಸೂಕ್ಷ್ಮ ಕ್ರಿಮಿಗೂ ಹಿಂಸೆಯಾಗದ ರೀತಿಯಲ್ಲಿ ಕ್ರಿಯೆಯಾಗಬೇಕಿದ್ದರೆ ದರ್ಭೆ ಅಗತ್ಯ. ಇಷ್ಟು ಅಹಿಂಸಾತ್ಮಕ ಚಿಂತನೆಯಿಂದ ತಂತ್ರವೂ ಕೂಡ ಕೆಲಸ ಮಾಡಿದೆ ಎಂದ ಮೇಲೆ ವೇದವೂ ಸಹ ಎಲ್ಲಿಯೂ ಹಿಂಸೆಗೆ ಅವಕಾಶ ಕೊಟ್ಟಿಲ್ಲ. ವೇದದಲ್ಲಿ ಎಂದೂ ಹಿಂಸೆಗೆ ಅವಕಾಶ ಇದ್ದದ್ದೇ ಇಲ್ಲ. ಅದು ಇಲ್ಲದೆಯೂ, ತಿಳಿದಂತಹ ಬುದ್ಧಿವಂತರು ಇನ್ನೂ ಅಂತಹದ್ದನ್ನೇ ಮಾಡುತ್ತಾ ಇದ್ದಾರೆ ಎಂದರೆ ಅವರನ್ನು ಖಂಡಿಸುವುದಕ್ಕೆ ನನಗಂತೂ ಅಧಿಕಾರವಿಲ್ಲ. ಅವರು ಮಾಡುವುದನ್ನು ಮಾಡಿಕೊಳ್ಳಲಿ ನಾನಂತೂ ಸುಮ್ಮನಿರುತ್ತೇನೆ. ಎಲ್ಲರಿಗೂ ಮಾತನಾಡುವ ಹಕ್ಕಿದೆ. ಅದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುತ್ತಾರೆ. ಅದನ್ನು ಹೇಳುವದಕ್ಕೂ ಖಂಡಿಸುವುದಕ್ಕೂ ಅವಕಾಶ ಇರುವುದರಿಂದ ಇದಕ್ಕೆಲ್ಲ ಉದಾಸೀನವೇ ಮದ್ದು. ನಮ್ಮ ಕಣ್ಣು, ಕಿವಿಗಳಿರುವುದು ಅವರು ಏನು ಹೇಳಿದರು, ಇವರು ಏನು ಮಾಡಿದರು ಎಂದು ಕೇಳುವುದಕ್ಕಾಗಿ, ನೋಡುವುದಕ್ಕಾಗಿ ಅಲ್ಲ. ಉತ್ತಮವಾದದ್ದನ್ನು, "ಗಂಧವನ್ನು" ಸ್ವೀಕರಿಸುವುದಕ್ಕೆ, ದುರ್ಗಂಧವನ್ನಲ್ಲ. ಕೆಟ್ಟದ್ದಾಗಿದ್ದರೆ ನೋಡುವುದೇ ಬೇಡ, ಕೆಟ್ಟದ್ದನ್ನು ಕೇಳುವುದೇ ಬೇಡ. ನಮಗೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ ಗಾಂಧೀಜಿಯು ತಮ್ಮ ಮೂರು ಮಂಗಗಳ ಮೂಲಕ ಅದನ್ನೇ ಹೇಳಿದ್ದು.
"ಲೋಕಾ ಸಮಸ್ತಾ ಸುಖಿನೋ ಭವಂತು"