ಮಂತ್ರ: ತಾಂ ಮ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಮ್ |
ಯಸ್ಯಾಂ ಹಿರಣ್ಯಂ ವಿಂದೇಯಂ ಗಾಮಶ್ವಂ ಪುರುಷಾನಹಮ್ ||
ಸಾಹಿತ್ಯಿಕ ಅರ್ಥ: ಲಕ್ಷ್ಮಿ ಯಾವಾಗಲೂ ಚಂಚಲೆ. ಲಕ್ಷ್ಮಿ ಬಂದಾಗ ನಮ್ಮ ದಾರಿ ವ್ಯತ್ಯಾಸವಾಗುತ್ತದೆ. ಒಳ್ಳೆಯ ಮಾರ್ಗದಲ್ಲಿ ಹೊಗುವಂತಹವರೂ ಸಂಪತ್ತು ಬಂದಾಗ ದುರ್ಮಾರ್ಗದಲ್ಲಿ ನಡೆಯುತ್ತಾರೆ. ಅದಕ್ಕಾಗಿ "ಅನಪಗಾಮಿನೀಂ ಲಕ್ಷ್ಮೀಮ್ ತಾಂ ಮ ಅವಹ" - ನಾನು ಪಥಭೃಷ್ಠನಾಗದಂತೆ, ನನ್ನ ಬದುಕನ್ನು ಬದಲಾಯಿಸಿಕೊಳ್ಳದಂತೆ, ಕೆಟ್ಟ ಮಾರ್ಗದಲ್ಲಿ ಹೋಗದ ರೀತಿಯಲ್ಲಿ ನನಗೆ ಸಂಪತ್ತನ್ನು ತಂದು ಕೊಡು. ಇವತ್ತು ನಮಗೆ ಹಣವೇ ದೊಡ್ಡ ಸಂಪತ್ತು. ಆದರೆ ಹಿಂದಿನ ಕಾಲದಲ್ಲಿ ದನ, ಕುದುರೆ, ಆನೆ ಇವೇ ಮೊದಲಾದವು ಸಂಪತ್ತು. ಆದ್ದರಿಂದ ನಮ್ಮ ಬದುಕಿಗೆ ಪೂರಕವಾದ ಹಸು, ಕುದುರೆ ಇಂತಹ ಸಂಪತ್ತನ್ನು ನಾನು ಪಥಭೃಷ್ಠನಾಗದ ರೀತಿಯಲ್ಲಿ ಹೇ ಲಕ್ಷ್ಮಿ ನನಗೆ ಕರುಣಿಸು. ನಾನು ಇರುವ ಸಂಸ್ಕೃತಿಯಿಂದ ದೂರಾಗಿ ವಿಕೃತಿಯತ್ತ ಕೊಂಡೊಯ್ಯುವ ಸಂಪತ್ತು ನನಗೆ ಬೇಡ. ನಾನು ಇರುವಲ್ಲಿಯೇ ಬೆಳೆಯುವಂತಹ ಒಳ್ಳೆಯ ಭೌತಿಕ ಸಂಪತ್ತನ್ನು ತಂದುಕೊಡು ಎಂದು ಈ ಶ್ಲೋಕದಲ್ಲಿ ಹೇಳಲಾಗಿದೆ.
ವ್ಯಾಖ್ಯಾನ: ಸಾತ್ವಿಕವಾದ ಶಕ್ತಿಗೆ ಪ್ರಾಕೃತಿಕವಾಗಿ ಆಡುಭಾಷೆಯಲ್ಲಿ ಹೇಳುವುದು ಅವನು ಗೋವಿನಂತಹವನು ಎಂದು. ಅದರ ಬಹುದೊಡ್ಡ ದ್ಯೋತಕ ಗೋವು. ಅವನು ಸಾತ್ವಿಕ ವ್ಯಕ್ತಿ ಅಂದರೆ ಹಸುವಿನಂತಹ ಮನುಷ್ಯ ಅಂತ ಹೇಳುತ್ತಾರೆ. ಅಷ್ಟು ಒಳ್ಳೆಯವನು ಎಂದರ್ಥ. ಇಲ್ಲಿ ಎರಡನೇ ಮಂತ್ರದಲ್ಲಿ ನಿಮ್ಮ ಧೀಶಕ್ತಿಯನ್ನು, ಧೀಮಂತಿಕೆಯನ್ನು ಸ್ಪಷ್ಟಪಡಿಸಿಕೊಳ್ಳುತ್ತೀರಿ. ಯಾವಾಗ " ತಾಂ ಮ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಮ್ "- ಸನ್ಮಾರ್ಗವನ್ನು ಬಿಟ್ಟುಹೋಗತಕ್ಕಂತಹ ರಜಸ್ಸುಗಳು ಅಥವಾ ಪ್ರವೃತ್ತಿಗಳು. ಹಾಗೆ ಅಕಸ್ಮಾತ್ ಉಂಟಾದಲ್ಲಿ ನಾನು ಗೋವಾಗಿರುವುದಿಲ್ಲ, ನಾನು ಅಶ್ವವಾಗುತ್ತೇನೆ ಅಂತ ಅರ್ಥ. ಅಶ್ವವಾಗಿ ಅದನ್ನು ತಡೆಯಬಲ್ಲೆ, ಗೋವಾಗಿ ಅಲ್ಲ. "ಗಾಮ ಅಶ್ವ" - ಗಾಮ ಅಂದರೆ ಗೋವಲ್ಲ. ಗೋವಿನ ಪ್ರವೃತ್ತಿಯನ್ನು ಬಿಟ್ಟು ಅಶ್ವವಾಗಿ ತಡೆಯಬಲ್ಲೆ. ಅಶ್ವವು ರಜಸ್ಸಿನ ಸ್ವರೂಪ. ಗೋವು ಸಾತ್ವಿಕ ಸ್ವರೂಪ. ಗೋವಿನ ಸಾತ್ವಿಕ ಸ್ವರೂಪವನ್ನು ಬಿಟ್ಟಾದರೂ, ರಜಸ್ಸನ್ನೇ ಬದಲಾದ ಸ್ವರೂಪವಾಗಿ ಇಟ್ಟುಕೊಂಡು ಇದನ್ನು ತಡೆಯಬಲ್ಲೆ. ಯಾವುದೂ ಅನಪಗಾಮಿನಿಯಾಗುವುದಕ್ಕೆ ಬಿಡುವುದಿಲ್ಲ ಎನ್ನುವುದು ನಿಮ್ಮ ಪ್ರತಿಜ್ಞಾವಾಕ್ಯವಾಗಿರುತ್ತದೆ. ಅಂದರೆ ಆ ಶಕ್ತಿ ನನಗೆ ಆವೇಶಿಸು, ಆವಹ. ಆ ಶಕ್ತಿಯನ್ನು ಆವೇಶಿಸುವಂತೆ ಮಾಡಿಕೊಳ್ಳುತ್ತೇನೆ ಎನ್ನುವುದು ಎರಡನೇ ಶ್ಲೋಕದ ಅರ್ಥ. ನಾನು ಗೋವು, ಅಶ್ವವಾಗಬಲ್ಲೆ, ಅಶ್ವವಾದಾಗ ಅದು ಪುರುಷ. ನಾನು ಪ್ರಕೃತಿಯಲ್ಲಿ ಹೆಣ್ಣು ಆದರೆ ನಾನು ಪುರುಷ ಶಕ್ತಿಯನ್ನು ಹೊಂದುತ್ತೇನೆ. ನನಗೆ ಆ ಶಕ್ತಿ ಇದೆ. ನಿಮಗೆ ಇತಿಹಾಸದಲ್ಲಿ ಬೇಕಾದಷ್ಟು ಉದಾಹರಣೆ ಸಿಗುತ್ತದೆ. ಆ ರೀತಿ ಹೆಣ್ಣು ಗಂಡಾಗಿ ನಿಂತು, ಗಂಡಿನಂತೆ ಕಾರ್ಯವನ್ನು ನಿರ್ವಹಿಸಿದ ಉದಾಹರಣೆ ಪುರಾಣದಿಂದ ಹಿಡಿದು ಇಲ್ಲಿಯವರೆಗೆ ಎಷ್ಟೋ ಸಿಗುತ್ತದೆ. ಆ ಪುರುಷ ಶಕ್ತಿಯನ್ನು ಹೊಂದುವುದು ಎಲ್ಲಿಂದ, ಯಾವಾಗ ರಜಸ್ಸು ತಪ್ಪು ದಾರಿ ಹಿಡಿದರೆ ಮಾತ್ರ, ಆಗ ಅನಿವಾರ್ಯ. ಪ್ರಪಂಚವು ತಪ್ಪು ಮಾರ್ಗದಲ್ಲಿ ನಡೆಯುತ್ತಿದ್ದರೆ, ಸರಿದಾರಿಯಲ್ಲಿ ತರುವುದಕ್ಕೆ ಪ್ರಯತ್ನ ಮಾಡುವುದಿದ್ದರೆ, "ನಾನು" ಅಂತ ಉದ್ಘೋಷ ಮಾಡುತ್ತೀರಿ ಅಂತ ಅರ್ಥ. ಈ ಸಂಪತ್ತು ಅಡ್ಡದಾರಿಯಲ್ಲಿ ಹೋಗುತ್ತಿದೆ ಅಂದಾಗ, ಹೆಣ್ಣು ಅದನ್ನು ತಡೆಯುವುದಕ್ಕಾಗಿ ಪೌರುಷವನ್ನು ಹೊಂದುತ್ತಾಳೆ ಅಂತ ಅರ್ಥ. ಪುರುಷನಾಗುತ್ತಾಳೆ ಅಂತ ಅರ್ಥ ಅಲ್ಲ. ಪುಂಸವನ ಅಂತ ಒಂದು ಪ್ರಕ್ರಿಯೆ ಇದೆ. ಇದರಲ್ಲಿ ಮೂರು ಮಂತ್ರಗಳು ಬರುತ್ತವೆ. ಅಲ್ಲಿ ಗರಿಕೆಯನ್ನು ಹಿಂಡಿ ರಸವನ್ನು ಔಷಧವಾಗಿ ಮೂಗಿಗೆ ಬಿಡುತ್ತಾರೆ. ಪುಂಸವನ ಅಂದರೆ ಗಂಡಾಗಿ ಹುಟ್ಟಲಿಕ್ಕೆ ಅನ್ನುವ ಕಲ್ಪನೆ ಇದೆ. ನಿಜವಾಗಿಯೂ ಹಾಗಲ್ಲ. ದೃಢವಾದ, ಶಕ್ತಿಯುತವಾದ ಮಗುವಿನ ಜನನವಾಗಬೇಕು ಅಂತ. ಅಂದರೆ ಅಲ್ಲಿಯೂ ಕೂಡ ದೃಢ, ಶಕ್ತಿ ಎನ್ನುವಲ್ಲಿ ಒಂದು ಪೌರುಷಪ್ರಧಾನವಾದಂತಹ ಜೀವ ವ್ಯವಸ್ಥೆ ಬೆಳೆಯಬೇಕೆಂದಾಗ ಈ ಔಷಧಮುಖೇನ ಮಾಡುತ್ತೇವೆ ಅಂತ ಹೇಳುತ್ತಾರೆ. ಅಂದರೆ ಅದೇ ಔಷಧವು ಅಥವಾ ಗರಿಕೆ ಒಂದು ಔಷಧವಾಗಿ ಬಳಸುವಂಥದ್ದು, ನಿಮ್ಮ ಮನಸ್ಸಿನ ಗರಿಕೆಯ ಕವಲುಗಳಿವೆಯಲ್ಲ, ಇಷ್ಟು ಗರಿಕೆ ಹಿಡಿದುಕೊಂಡರೆ ಮೇಲೆ ಎಷ್ಟು ಕವಲು ಸಿಗುತ್ತದೋ ಅಷ್ಟು ಮನಸ್ಸಿನ ಕವಲುಗಳನ್ನು ನೀವು ಸರಿಪಡಿಸಿಕೊಂಡರೆ, ನೀವು ಗರಿಕೆಗಿಂತ ಶ್ರೇಷ್ಠರಾಗುತ್ತೀರಿ, ಸಮರ್ಥರಾಗುತ್ತೀರಿ, ಎಲ್ಲರ ಮೂಗಿಗೂ ನೀವು ಔಷಧ ಹಿಂಡಬಲ್ಲಿರಿ. ಅದನ್ನೇ ಆ ಪುಂಸವನದ ಮೂರು ಮಂತ್ರಗಳಲ್ಲಿ ಹೇಳಲಾಗುತ್ತದೆ.