Page 1

।। ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಪ್ರಸೀದತು ।।

ವೇದ ಕೃಷಿಕ ಶ್ರೀ ಕೆ. ಎಸ್. ನಿತ್ಯಾನಂದರ ಶ್ರೀಸೂಕ್ತ ಅಂತರಂಗ ಅನಾವರಣ

ದಿನಾಂಕ ೦೫-೦೫-೨೦೧೬ ರಂದು ಪಾವಂಜೆ ಜ್ಞಾನಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಶಾರಧ್ವತ ಸಭಾಂಗಣದಲ್ಲಿ ಆಗಾಮೀ ಬ್ರಹ್ಮಕಲಶದ ಪ್ರಯುಕ್ತ ನೆಡೆಸಲುದ್ದೇಶಿಸಿದ್ದ ಶ್ರೀಸೂಕ್ತ ಅಭಿಯಾನಕ್ಕೆ ಸಂಬಂಧಿಸಿದ ವಿಚಾರ ವಿನಿಮಯಗಳ ಸಂದರ್ಭದಲ್ಲಿ ವೇದ ಕೃಷಿಕ ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದರು ಶ್ರೀಸೂಕ್ತದ ಬಗ್ಗೆ ನೀಡಿದ ಪೂರ್ಣಪಾಠವನ್ನು ಲೇಖನಾವಾಗಿ ಪರಿವರ್ತಿಸಿ ನಿಮ್ಮ ಮುಂದಿಡುತ್ತಿದ್ದೇವೆ.

ಮೊದಲಿಗೆ ಸ್ವಾಮೀಜಿಯವರು ಪಾಠಮಾಡಿಸಿದ್ದ ಶ್ರೀಸೂಕ್ತವನ್ನು ಅವರ ಇಚ್ಛೆಯಂತೆ ಸಾಮೂಹಿಕವಾಗಿ ಪಠಿಸಲಾಯಿತು. ಬಳಿಕ ಆ ಸಂಬಂಧೀ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸ್ವಾಮೀಜಿಯವರು ಶ್ರೀಸೂಕ್ತದ ಅಂತರಂಗವನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಸ್ವಾಮೀಜಿಯವರು ಶ್ರೀಸೂಕ್ತದ ಆಂದೋಲನವನ್ನು ಹೇಗೆ ಮಾಡಬೇಕು ಎಂದು ಹೀಗೆ ವಿವರಿಸಿದರು.

ಸದ್ಯಕ್ಕೆ ಸಹ್ಯಾದ್ರಿಯ ಕೆಳಭಾಗದಲ್ಲಿ ಪ್ರತೀ ಮನೆ ಮನೆಯಲ್ಲೂ ಶ್ರೀಸೂಕ್ತ ಹೇಳುವಂತೆ ಮಾಡುವ ಮೂಲಕ ನಿಮ್ಮ ಪ್ರಯತ್ನವು ಆರಂಭವಾಗಬೇಕು. ಅದು ಮುಂದೆ ರಾಜ್ಯದ್ದಾದ್ಯಂತ, ದೇಶದಾದ್ಯಂತ ಹಬ್ಬುತ್ತದೆ. ನೀವಿಲ್ಲಿ ಆರಂಭ ಮಾಡಿದರೆ ಮುಂದೆ ಅದು ಎಲ್ಲ ಕಡೆ ಹಬ್ಬುವ ಸಾಧ್ಯತೆ ಇದೆ. ಜೊತೆಯಲ್ಲಿ ಶ್ರೀಸೂಕ್ತ ಮಂತ್ರ ಹೇಳುವುದು ಮಾತ್ರವಲ್ಲ, ಒಂದಿಷ್ಟು ಜನ ಜಾಗೃತಿ ಹುಟ್ಟುವಂತೆಯೂ ನಿಮ್ಮ ಪ್ರಯತ್ನ ಇರಬೇಕು. ಅದರಲ್ಲಿ ಪ್ರತೀ ಮನೆಯಲ್ಲೂ ಒಂದು ತುಳಸಿ ಕಟ್ಟೆ ಇರುವಂತೆ ಮಾಡುವಂಥದ್ದು. ಹೇಗೆ ಎಂದರೆ ನೀವು ಶ್ರೀಸೂಕ್ತ ಪೂಜೆಗೆ ಹೋದ ಮನೆಯಲ್ಲಿ, ನಿಮ್ಮ ಮನೆಯಲ್ಲಿ ತುಳಸಿ ಪೂಜೆ ಆಗಬೇಕು ಅಂತ ಹೇಳಿ. ಎಲ್ಲರ ಮನೆಯಲ್ಲೂ ದನ ಕಟ್ಟುವ ಶಕ್ತಿ ಇಲ್ಲ, ಆದರೆ ಗೋಪೂಜೆ ಆಗಬೇಕು ಎನ್ನಿ. ಅಕ್ಕ ಪಕ್ಕದ ಮನೆಯಲ್ಲಿ ಇರುವ ದನಕ್ಕೆ ಗೋಪೂಜೆ ಮಾಡಿದರೆ, ಆಗ ಒಂದಿಷ್ಟು ತುಳಸಿ ಮತ್ತು ಗೋವಿನ ಬಗ್ಗೆ ಸದಭಿಪ್ರಾಯ ಮೂಡಿದಂತೆಯೂ ಆಗುತ್ತದೆ. ಶಕ್ತರು ಗೋವನ್ನು ಕಟ್ಟಲೂಬಹುದು. ತುಳಸೀಕಟ್ಟೆಯನ್ನು ಇಡುವುದು ಕಷ್ಟವೇನಲ್ಲ, ತುಳಸೀಕಟ್ಟೆಯು ಅಗತ್ಯವಾಗಿ ಇರಲೇಬೇಕು. ನೀವು ಅಭಿಯಾನಕ್ಕೆ ಹೋಗುವಾಗ ಪ್ರತೀಮನೆಯಲ್ಲೂ ತುಳಸೀಕಟ್ಟೆ ಇರಲೇಬೇಕು ಎನ್ನುವುದನ್ನು ಕಡ್ಡಾಯಮಾಡಿ. ಅಲ್ಲದೆ ನಮ್ಮಲ್ಲಿ ಪುರಾತನ ಕಾಲದಿಂದಲೂ ಮನೆಯಲ್ಲಿ ಹೊಸಿಲು ಬರೆಯುವ ಪದ್ಧತಿ ಇತ್ತು. ಈಗ ಎಷ್ಟೋ ಮನೆಗಳಲ್ಲಿ ಹೊಸಿಲೇ ಇರುವುದಿಲ್ಲ. ಸಾಧ್ಯವಿದ್ದಲ್ಲಾದರೂ ಆ ಹೊಸಿಲಿಗೆ ಪೂಜೆ ಮಾಡುವಂತಹ ರೀತಿಯಲ್ಲಿ, ಕಡೇಮಾತು ಆ ಶ್ರೀಸೂಕ್ತ ಪೂಜೆ ಇದ್ದ ದಿವಸವಾದರೂ ಹೊಸಿಲಿನ ಎದುರು ಬಾಗಿಲಿನ ಕೆಳಕ್ಕೆ ಒಂದು ಮಣೆಯನ್ನಾದರೂ ಇಟ್ಟು, ಒಂದು ರಂಗೋಲಿಯನ್ನು ಬರೆದು, ಆ ಮಣೆಯ ಮೇಲೆ ಪೂಜೆ ಮಾಡುವ ಪದ್ದತಿಯನ್ನು ನೀವು ತನ್ನಿ. ಇದು ಈ ಆಂದೋಲನಕ್ಕೆ ಹೋಗುವವರು ಮಾಡಬೇಕಾದ ಕೆಲಸ. ಯಾವ ಮನೆಯಲ್ಲೇ ಕರೆದಿರಲಿ, ಅದಕ್ಕೆ ಸಮಯ ನಿರ್ಬಂಧ ಇಲ್ಲ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಎಷ್ಟು ಹೊತ್ತಿಗೂ ಮಾಡಬಹುದು ಈ ಶ್ರೀಸೂಕ್ತ ಪಾರಾಯಣ. ಹೋದಾಗ ಮುಖ್ಯವಾಗಿ ತುಳಸಿಗೆ ಒಂದು ಪೂಜೆ. ದೀಪ ಇಟ್ಟು, ಅರಸಿನ ಕುಂಕುಮ ಹಾಕಿ, ಒಂದು ಗಂಧದ ಕಡ್ಡಿ ಬೆಳಗಿ, ಪೂಜೆ ಪ್ರಾರ್ಥನೆ ಮಾಡಿಕೊಳ್ಳುವುದು. ಹೊಸಿಲಿದ್ದರೆ, ಹೊಸಿಲಿಗೆ ಬರೆಯುವ ಪದ್ಧತಿ ನಿಮಗಾರಿಗೂ ಹೇಳಿ ಕೊಡಬೇಕಾದ್ದಿಲ್ಲ, ನನಗೆ ಗೊತ್ತು. ಇಲ್ಲದಿದ್ದರೆ ಒಂದು ಮಣೆಯನ್ನಾದರೂ ಇಟ್ಟು, ಅಲ್ಲಿ ಹೊಸಿಲಿನಲ್ಲಿರುವ ಭಾಗ್ಯಲಕ್ಷ್ಮಿ ಅಂತ ಹೇಳುತ್ತದೆ, ಆ ಹೊಸಿಲಿಗೆ ಭಾಗ್ಯಲಕ್ಷ್ಮಿಯ ಧ್ಯಾನ ಮಾಡಿ, ಪೂಜೆ ಮಾಡಿ, ಮತ್ತೆ ಅವರ ಮನೆಯಲ್ಲಿ ಜಾಗ ಇದ್ದ ಸ್ಥಳದಲ್ಲಿ, ಎಲ್ಲರೂ ಕುಳಿತುಕೊಳ್ಳುವ ವಿಶಾಲ ಸ್ಥಳ ಅಥವಾ ದೇವರ ಮನೆ ಎದುರು, ದೇವರಿಗೆ ಪೂಜೆ ಪ್ರಾರ್ಥನೆ ಮಾಡಿಕೊಂಡು ಶ್ರೀಸೂಕ್ತದ ಪಾರಾಯಣ ಮಾಡಬೇಕು. ಒಂದು ಮನೆಯಲ್ಲಿ ನನ್ನ ಲೆಕ್ಕದಲ್ಲಿ ಸಾಧ್ಯವಾದರೆ ೮ ಸಾರಿಯಾದರೂ ಮಾಡಿದರೆ ತುಂಬಾ ಒಳ್ಳೆಯದು. ಒಂದೇ ಸಾರಿ ಪಾರಾಯಣ ಮಾಡಿಬಿಡುವುದಲ್ಲ, ೮ ಸಾರಿ ಪಾರಾಯಣವನ್ನು ಹೇಳುವುದು. ಆ ಮನೆಯವರೂ ಅದರ ಜೊತೆ ಸೇರಿಕೊಳ್ಳುವಂತೆ ಮಾಡಬೇಕು. ಅವರಿಗೆ ಪುಸ್ತಕ ಕೊಟ್ಟು ನಿಮ್ಮ ಜೊತೆ ಅವರೂ ಹೇಳುವ ಹಾಗೆ ಮಾಡಬೇಕು. ಹಾಗೆ ಮಾಡಿದಾಗ ನೀವು ೮ ಸಾರಿ ಹೇಳುವಷ್ಟರಲ್ಲಿ ಅವರಿಗೂ ಓದಲಿಕ್ಕೆ ಬಂದುಬಿಡುತ್ತದೆ, ಕಷ್ಟವಾಗುವುದಿಲ್ಲ. ನಂತರ ಅವರೂ ಅಭ್ಯಾಸ ಮಾಡುತ್ತಾರೆ. ಹೀಗೆ ಮಾಡುತ್ತಾ ಕೊನೆಯಲ್ಲಿ ಅಲ್ಲಿ ಒಂದು ಆರತಿ ಮಾಡಿ, ಪ್ರಸಾದ ರೂಪದ ಬನಿವಾರ ಏನಾದರೂ ಹಂಚಿ ಮುಂದಿನ ಮನೆಗೆ ಹೋಗಬಹುದು. ಆ ಮನೆಯವರಿಗೆ ಒಂದು ವೃತವನ್ನು ಹೇಳಿ. ನೀವು ಶ್ರೀಸೂಕ್ತವನ್ನೂ, ಸಂಸ್ಕೃತಿಯನ್ನೂ ಬೆಳೆಸುವ ಆಚಾರದ ಉದ್ದೇಶ ಒಂದು, ಮತ್ತೊಂದು ಪಾವಂಜೆಯಲ್ಲಿ ಬ್ರಹ್ಮಕಲಶ ಮಾಡುತ್ತೇವೆ, ಅದರ ಒಂದು ಪೂರ್ಣ ಸಿದ್ಧಿಗಾಗಿ ಈ ನಮ್ಮ ಹೋರಾಟವಿದೆ. ಈ ಸಂಚಾರ ಅದಕ್ಕಾಗಿದೆ. ಹಾಗಾಗಿ ಪಾವಂಜೆಯಲ್ಲಿ ೨೦೧೮ನೇ ಇಸವಿ ಜೂನಿನ ಹೊತ್ತಿಗೆ ಬ್ರಹ್ಮಕಲಶವಾಗುತ್ತದೆ. ಅಲ್ಲಿಯವರೆಗೆ ಈ ಪಾರಾಯಣ ಮಾಡಿದ ಮನೆಗಳಲ್ಲಿ ಸಾಧ್ಯವಾದರೆ ನಿತ್ಯ ಪಾರಾಯಣ ಮಾಡಿ. ಪಾರಾಯಣ ಮಾಡದಿದ್ದರೂ ಅಡ್ಡಿ ಇಲ್ಲ. ಮಾಡಿದರೆ ಒಳ್ಳೆಯದು, ಅಕಸ್ಮಾತ್ ಮಾಡಲಿಕ್ಕೆ ಆಗದೇ ಇದ್ದರೂ ಯಾವುದೇ ಕಾರಣಕ್ಕೂ ಮಾಂಸಾಹಾರ ಮಾಡಬೇಡಿ ಅಂತ ಹೇಳಿ. ಅಷ್ಟು ಮಾಡಿ ನೀವು ಅವರನ್ನು ಬದ್ಧಗೊಳಿಸಿದರೆ, ಅವರು ಹೆಚ್ಚು ಕಡಿಮೆ ೨ ವರ್ಷ ಮಾಂಸಾಹಾರ ಬಿಟ್ಟರೆ, ಆಮೇಲೆ ಅವರು ಮತ್ತೆ ಯಾವತ್ತೂ, ಯಾವುದೇ ಕಾರಣಕ್ಕೂ ಮಾಂಸಾಹಾರ ಸೇವನೆಗೆ ಹೋಗುವುದಿಲ್ಲ. ಅದು ಒಂದು ಒಳ್ಳೆಯ ಆಂದೋಲನವಾಗುತ್ತದೆ. ಸಾತ್ವಿಕ ಆಹಾರ ತಿನ್ನುವ ಜನರ ಸಂಖ್ಯೆ ಹೆಚ್ಚಿದರೆ, ಈಗ ಮಳೆ ಇಲ್ಲ ಎಂದು ಕಷ್ಟಪಡುತ್ತೇವಲ್ಲ ಅದು ಖಂಡಿತ ಬರುವುದಿಲ್ಲ. ಎಲ್ಲಿ ಸಾತ್ವಿಕ ಆಹಾರ ಪದ್ಧತಿಗಳಿವೆಯೋ ಅಲ್ಲಿ ಸಾತ್ವಿಕತೆ ಇದೆ, ಅಲ್ಲಿ ಅನಾವೃಷ್ಟಿಯೂ ಇಲ್ಲ ಅತಿವೃಷ್ಟಿಯೂ ಇಲ್ಲ. ಹಾಗಾಗಿ ಈ ಆಂದೋಲನವು ಒಂದು ಗುರಿಯಿಂದಲ್ಲ, ಹಲವು ಗುರಿಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಗುರಿಯಾಗಿರಬೇಕು. ಅದಕ್ಕೆ ಈ ವಿಚಾರವನ್ನು ನೀವು ಅವರಿಗೆ ಮುಂಚಿತವಾಗಿ ತಿಳಿಸಿ, ಅವರನ್ನು ಈ ರೀತಿಯ ಮದ್ಯ ಮಾಂಸ ಇತ್ಯಾದಿಗಳಿಂದ ದೂರ ಉಳಿಯುವಂತೆ ಮಾಡುವ ಪ್ರಯತ್ನ ನಿಮ್ಮದ್ದಾಗಬೇಕು. ಇಷ್ಟು ಪ್ರಯತ್ನಗಳೊಂದಿಗೆ ಶ್ರೀಸೂಕ್ತ ಆಂದೋಲನವನ್ನು ಒಂದು ಒಳ್ಳೆಯ ಮಹೂರ್ತದಿಂದ (೯ನೇ ತಾರೀಕಿನಂದು) ಆರಂಭ ಮಾಡಿ, ನಂತರ ೨೦೧೮ನೇ ಇಸವಿಯ ಬ್ರಹ್ಮಕಲಶದ ದಿನದವರೆಗೂ, ಎಲ್ಲಾ ದಿವಾಸವೂ ನಿಮಗೆ ಪುರುಸೊತ್ತಾದಾಗಲೆಲ್ಲ ಯಾವುದಾದರೊಂದು ಮನೆಯಲ್ಲಿ ನಿಗದಿ ಮಾಡಿಕೊಳ್ಳಿ. ವ್ಯವಸ್ಥೆ ಮಾಡಿಕೊಂಡು ಮಾಡುತ್ತಾ ಬನ್ನಿ. ಈ ಸಂಬಂಧಿಯಾಗಿ ಮಧ್ಯದಲ್ಲಿ ನಿಮಗೆ ಯಾವ ಯಾವ ಸಂಶಯಗಳು ಹುಟ್ಟುತ್ತವೆ, ಆ ಸಂಶಯಗಳಿಗೆಲ್ಲ ಉತ್ತರ ಕೊಡುವುದಕ್ಕೆ ನಾನು ಬದ್ಧನಾಗಿದ್ದೇನೆ. ನಿಮಗೆ ಯಾವ ಹೆದರಿಕೆಯೂ ಬೇಡ. ಈಗ ಏನೆಲ್ಲಾ ಸಂಶಯ ಹುಟ್ಟಿದೆ, ಅದೆಲ್ಲವನ್ನೂ ಮುಕ್ತವಾಗಿ ಕೇಳಿ. ಅದಕ್ಕೆ ಆಧಾರ ಸಹಿತವಾದ, ಶಾಸ್ತ್ರೀಯವಾದ ಉತ್ತರವನ್ನು ಕೊಡುತ್ತೇನೆ. ಆ ಉತ್ತರವನ್ನು ಯಾರೇ ಖಂಡಿಸಿದರೂ ಅದನ್ನು ಸರಿಪಡಿಸುವ ಜವಾಬ್ದಾರಿ ನನ್ನದು. ನಿಮಗೆ ಆ ಹೆದರಿಕೆ ಬೇಡ. ನೀವು ಆ ಉತ್ತರವನ್ನು ಗಟ್ಟಿಯಾಗಿ ಹೇಳಬಹುದು. ಹಾಗಾಗಿ ಈಗ ಏನಾದರೂ ಆ ರೀತಿಯ ಪ್ರಶ್ನೆಗಳು, ಸಂಶಯಗಳು ಇದ್ದರೆ ಮೊದಲು ಕೇಳಿ.