ಮಂತ್ರ: ಕಾಂ ಸೋಸ್ಮಿತಾಂ ಹಿರಣ್ಯಪ್ರಾಕಾರಾಮಾರ್ದ್ರಾಂ ಜ್ವಲಂತೀಂ ತೃಪ್ತಾಂ ತರ್ಪಯಂತೀಮ್ |
ಪದ್ಮೇ ಸ್ಥಿತಾಂ ಪದ್ಮವರ್ಣಾಂ ತಾಮಿಹೋಪಹ್ವಯೇ ಶ್ರಿಯಮ್ ||
ಸಾಹಿತ್ಯಿಕ ಅರ್ಥ: ಪದ್ಮದಲ್ಲಿ ಇರುವ, ಪದ್ಮದ ಮೈಕಾಂತಿಯನ್ನು ಹೊಂದಿರುವ ಆ ಲಕ್ಷ್ಮಿಯನ್ನು ನಾನು ಸಂಪತ್ತಿಗೋಸ್ಕರ ಇಲ್ಲಿ "ಉಪಹ್ವಯೇ" - ಆರಾಧಿಸುತ್ತೇನೆ. ಏಕೆಂದರೆ ತೃಪ್ತನಾಗಿರುವವನನ್ನು ಅದು ಸಂತೃಪ್ತನನ್ನಾಗಿ ಮಾಡುತ್ತದೆ. ಉದಾಹರಣೆಗೆ ರಘು ಮಹಾರಾಜ ವಿಶ್ವಜಿತ್ ಯಾಗವನ್ನು ಮಾಡಿ ಸಂಪತ್ತನ್ನು ಬಯಸಿದ. ಬಂದ ಸಂಪತ್ತನ್ನೆಲ್ಲವನ್ನೂ ದಾನ ಮಾಡಿ ತೃಪ್ತಿಯನ್ನು ಪಡೆದುಕೊಂಡ. ಅದನ್ನೇ "ತೃಪ್ತಾಮ್ ತರ್ಪಯಂತೀಮ್" - ತೃಪ್ತಿಯನ್ನು ಕೊಡುವುದರಿಂದ ಸಂತೋಷವನ್ನು ಹೊಂದುವಂತಹ, "ಸ್ಮಿತಾಂ" - ನಗುಮುಖದ, ಬಂಗಾರವೇ ಆವರಿಸಿಕೊಂಡಿರುವ, "ಜ್ವಲಂತೀಮ್" - ಆಸೆಯಿಂದ ಜ್ವಲಿಸುತ್ತಿರುವ ನನಗೆ ಸಂತೃಪ್ತಿಯನ್ನು ಉಂಟುಮಾಡುವ, ಅಂದರೆ ನನ್ನ ಬಯಕೆಯನ್ನು ಪೂರೈಸುವ ಸಂಪತ್ತನ್ನು ಹೇ ಲಕ್ಷ್ಮಿ ನನಗೆ ಕೊಡು.
ವ್ಯಾಖ್ಯಾನ: ತಾನು ತ್ಯಾಗಮಾಡಿಯೂ, ತನ್ನ ತ್ಯಾಗವೇ ಪ್ರಪಂಚದ ಬೆಳವಣಿಗೆಯಲ್ಲಿದ್ದರೂ, ತಾನು ಘೋಷಿಸಿಕೊಳ್ಳದೆ ಇರತಕ್ಕಂತಹ ವಿಶಿಷ್ಟ ಪ್ರವೃತ್ತಿಯನ್ನು ಹೇಳುತ್ತದೆ. ಹಾಗೆಯೇ ರಸಾಯನ ಶಾಸ್ತ್ರ, ಲೋಹಶಾಸ್ತ್ರದ ಅಂಶಗಳೂ ಕೂಡ ಇದರಲ್ಲಿ ಪ್ರಕಟವಾಗುತ್ತವೆ. ನೀವೆಲ್ಲ ಆಭರಣಗಳನ್ನು ಹಾಕಿಕೊಂಡಿದ್ದೀರಿ. ಆದರೆ ಬರಿಯ ಚಿನ್ನದಿಂದ ಆಭರಣಗಳನ್ನು ಮಾಡಿದರೆ ಹಾಕಿಕೊಳ್ಳಲಿಕ್ಕೆ ಆಗುವುದೇ ಇಲ್ಲ. ಚಿನ್ನಕ್ಕೆ ಆ ಬಣ್ಣ ಬರುವದೂ ಇಲ್ಲ. ನಾವು ಸುವರ್ಣ, ಚಿನ್ನ, ಅತಿ ಶ್ರೇಷ್ಠವಾದ ಬಣ್ಣ ಅಂತ ಹೇಳುತ್ತೆವೆ. ಆದರೆ ತಾಮ್ರ ಸೇರಿದರೆ ಮಾತ್ರ ಆ ಬಣ್ಣ, ಇಲ್ಲದಿದದ್ದರೆ ಬರುವುದಿಲ್ಲ. ತಾನು ಸೇರಿದ್ದರಿಂದ ಆ ಬಣ್ಣ ಬಂತೆಂದು ತಾಮ್ರ ಯಾವತ್ತೂ ಘೋಷಿಸಿಕೊಳ್ಳುವುದಿಲ್ಲ. ತಾಮ್ರ ಸೇರಿಸದೆ ಆಯಾ ಹೊಳಪು ಕೊಡಲಿಕ್ಕೆ ಯಾವ ಅಕ್ಕಸಾಲಿಗನಿಗೂ ಸಾಧ್ಯವಿಲ್ಲ. "ಕಾಂಸ" ಅಂದರೆ ತಾಮ್ರ. ನಿಮ್ಮ ಆಭರಣ ನಗುವುದು ಅಥವಾ ಅಂದವಾಗಿ ಕಾಣುವುದು ಕಾಂಸದಿಂದ "ಕಾಂಸೋಸ್ಮಿತಾಂ". ಆದರೆ ಅದನ್ನು ಹಿರಣ್ಯ ಎಂದು ಮಾತ್ರ ನೀವು ಹೇಳುತ್ತೀರಿ. ತಾಮ್ರ ಎಂದು ನೀವು ಹೇಳುವುದೇ ಇಲ್ಲ. ಅದು ತ್ಯಾಗ. ತನ್ನ ಕಾರಣದಿಂದಲೇ ಪ್ರಕೃತಿಯು ಬೆಳೆದರೂ ತನ್ನನ್ನು ಘೋಷಿಸಿಕೊಳ್ಳದೆ ಬೆಳೆಯುವಂತಹ ಪ್ರವೃತ್ತಿಯನ್ನು ಇಲ್ಲಿ ಹೇಳಲಾಗಿದೆ. "ಆರ್ದ್ರಾಮ್ ಜ್ವಲಂತೀಮ್" - ಪ್ರಕೃತಿಯ ಅಥವಾ ತನ್ನ ಸುತ್ತಮುತ್ತಲಿನ ಸಮಾಜದಲ್ಲಿನ ಜನರ ಕಷ್ಟಕ್ಕೂ ನಾವು ಆರ್ದ್ರರಾಗಿ, ನಾವು ಕಷ್ಟಪಟ್ಟದಾರೂ, ಆ ಕಷ್ಟಪಡುವುದನ್ನು ಸಂತೋಷವಾಗಿ ತೃಪ್ತಿಯಿಂದ ಸ್ವೀಕರಿಸಿ, "ತರ್ಪಯಂತೀಮ್" - ಇನ್ನೊಬ್ಬರನ್ನು ತೃಪ್ತಿಪಡಿಸುವುದೇ ಗುರಿ. ಅದು ಮಾತೆಯರ ಲಕ್ಷಣ ಅಂತ ಹೇಳುತ್ತದೆ. ತನ್ನ ತ್ಯಾಗವಿದ್ದರೂ, ತನ್ನ ತ್ಯಾಗವೆಂದು ಹೇಳಿಕೊಳ್ಳದೆ ಇನ್ನೊಬ್ಬನ ಕಷ್ಟಕ್ಕೆ ತಕ್ಷಣ ಆರ್ದ್ರತೆಯನ್ನು ಹೊಂದಿ, ಜ್ವಲಂತೀಮ್ - ನಾವು ಕಷ್ಟವನ್ನು ಸಹಿಸಿಕೊಂಡಾದರೂ ಇನ್ನೊಬ್ಬರನ್ನು ಸಂತೃಪ್ತಿಪಡಿಸಬೇಕು ಎನ್ನುವುದು ಗುರಿ, ಮಾತೃತ್ವದ ಲಕ್ಷಣ. ಅಂತಹ ವಿಶಿಷ್ಟವಾದ "ಪದ್ಮೇ ಸ್ಥಿತಾಮ್" - ಪದ್ಮದಲ್ಲಿ ಸದ್ಗುಣಗಳೇನಿವೆಯೋ ಅವನ್ನು, "ವರ್ಣಾಮ್" ಅಂದರೆ ಚಲನೆ - ಸತ್ಯವೆನ್ನುವ ಒಂದೇ ಆದರ್ಶದ ಗುರಿ ಇಟ್ಟು ಮಾತ್ರ ಪದ್ಮವು ಚಲಿಸುತ್ತದೆ, ಸತ್ಯ ಅಂದರೆ ಸೂರ್ಯ. ಕೆಸರಿನಲ್ಲಿ ಹುಟ್ಟುತ್ತದೆ, ಕೆಸರು ನೀರನ್ನು ಬಿಟ್ಟು ಮೇಲೆ ನಿಲ್ಲುತ್ತದೆ, ಸೂರ್ಯ ಹುಟ್ಟುವ ದಿಕ್ಕನ್ನು ನೋಡುತ್ತಾ ಇರುತ್ತದೆ. ಸೂರ್ಯ ಉದಯವಾದಾಗ ವಿಕಸನಗೊಳ್ಳುತ್ತದೆ. ಸೂರ್ಯನನ್ನೇ ನೋಡುತ್ತಾ ಅಂದರೆ ಸತ್ಯವನ್ನೇ ಆಶ್ರಯಿಸಿ, ಸೂರ್ಯ ಮುಳುಗಿದ ತಕ್ಷಣ ಮುಚ್ಚಿಕೊಂಡುಬಿಡುತ್ತದೆ. ಅದು ಸತ್ಯಾಶ್ರಯದ ಮಾರ್ಗ. ಹಾಗೆಯೇ ತನ್ನಲ್ಲಿ ವಿಪುಲವಾದ ಮಕರಂದವನ್ನು ತುಂಬಿಕೊಂಡು ಬಂದ ಅಥಿತಿಗಳಿಗೆಲ್ಲ ಸತ್ಕಾರ ಮಾಡುತ್ತಾ ದಾನ ಪ್ರವೃತ್ತಿಯ ಮಾರ್ಗ ತೋರಿಸಿತ್ತದೆ. ಹಾಗೆಯೇ ವಿಕಾಸನಗೊಂಡಾಗ ಸುತ್ತಲಿನ ಪ್ರಕೃತಿಯನ್ನು ಅಂದಗಾಣಿಸುವ ಶಕ್ತಿ ಕೂಡ ಅದಕ್ಕಿದೆ. ಅದು ಅದರದ್ದಾದ ಸತ್ಯಾಶ್ರಯವಾದ, ತ್ಯಾಗಶೀಲವಾದ ಮಾರ್ಗ. ಅದು ಪದ್ಮದಲ್ಲಿದೆ. ಪದ್ಮದಲ್ಲಿರುವ ಸದ್ಗುಣಗಳನ್ನು ಆಶ್ರಯಿಸುವೆ. ಅಂದರೆ ಆ ಸತ್ಯಾಶ್ರಯದ ಗುಣಗಳ ಚಲನೆಯನ್ನು ಆಶ್ರಯಿಸಿದ್ದೇ, "ತಾಮಿಹೋಪಹ್ವಯೇ ಶ್ರಿಯಂ" - ತಾನು ಈ ಜೀವನ ಯಜ್ಞವನ್ನು ಆಶ್ರಯಿಸಿ ಮಾಡುತ್ತಿದ್ದೇನೆ. ಇಲ್ಲಿ ಶ್ರೀ ಎಂದರೆ ಲಕ್ಷ್ಮಿ ಅಲ್ಲ. ಲಕ್ಷ್ಮಿಗೂ ಆಗುತ್ತದೆ. ಶ್ರೀ ಅಂದರೆ ಶ್ರೇಷ್ಠ, ಉದಾತ್ತವಾದ ವಿಚಾರ, ಸತ್ಯವಿಚಾರ, ಧರ್ಮ ವಿಚಾರ ಎಂಬುದಾಗಿ. ಒಬ್ಬ ಶ್ರೇಷ್ಠನಿದ್ದರೆ ಅವನನ್ನು ಶ್ರೀ, ಶ್ರೀಮಾನರೆ, ಶ್ರೀಮಂತರೇ, ಅಂದರೆ ಆ ಸಂಪತ್ತನ್ನು ಹೊಂದಿದ್ದರೆ ಶ್ರೀಮಂತ ಎಂದು ಅರ್ಥ. ಹಾಗೆಯೇ ಶ್ರೀ ಶಬ್ದವು ಲಕ್ಷ್ಮಿಗೆ ಬಳಸಲು ಕಾರಣ ಲಕ್ಷ್ಮಿಯಲ್ಲೂ ಇದೆ ಎನ್ನುವ ಕಾರಣಕ್ಕಾಗಿ. ಇಂತಹ "ಶ್ರೀ"ಯನ್ನು ಆಶ್ರಯಿಸುತ್ತೇನೆ ಅನ್ನುವ ಅರ್ಥದಲ್ಲಿ ಈ ಮಂತ್ರ ಇದೆ.
ಪ್ರಶ್ನೆ: ಮನುಷ್ಯರಲ್ಲಿ ಶ್ರೀ ಅಥವಾ ಶ್ರೀಮತಿ ಅಂತ ಬಳಸುತ್ತಾರೆ. ಆದರೆ ದೇವರಿಗೆ "ಶ್ರೀ" ಅಂತ ಮಾತ್ರ ಬಳಸುತ್ತಾರಲ್ಲ ಏಕೆ?
ಸ್ವಾಮೀಜಿ: ಲಿಂಗವಾಚಕ ವ್ಯತ್ಯಾಸ ಮಾಡಬೇಕಾದ ಅನಿವಾರ್ಯತೆಯು ಪ್ರಪಂಚಿಕ ಭಾಷಾಶಾಸ್ತ್ರದಲ್ಲಿ ಬಂದದ್ದರಿಂದ ಶ್ರೀಮತಿ ಶಬ್ದದ ಬಳಕೆ ಬಂದಿತು. ಇಲ್ಲದಿದ್ದರೆ "ಶ್ರೀ" ಯೇ ಸೂಕ್ತ. ಯಾವುದು ಶ್ರೇಷ್ಠವೋ ಅದು ಶ್ರೀ. ಮುಂದೆ ಅದನ್ನು ಸ್ವಲ್ಪ ಸ್ಪಷ್ಟಪಡಿಸಿದರು. ಹೇಗೆಂದರೆ ಸಾಮಾನ್ಯವಾಗಿ ಗಂಡಸರಲ್ಲಿ ಸ್ವಾಭಾವಿಕವಾಗಿ ರಾಗ ದ್ವೇಷಗಳು ಬಹಳ ಬೇಗ ಪ್ರಕಟಗೊಳ್ಳಬಲ್ಲವು. ಆದರೆ ಹೆಂಗಸರಲ್ಲಿ ಹಾಗಲ್ಲ. ಶ್ರೇಷ್ಠವಾದ ಗುಣವನ್ನು ಹೊಂದಿರುವವಳು "ಶ್ರೀಮತಿ" ಎಂಬುದಾಗಿ ಸ್ಪಷ್ಟವಾಗಿ ಘೋಷಿಸಿದರು. ಅಲ್ಲಿ ಮತಿ ಎನ್ನುವುದನ್ನು ಗುಣವಾಚಕವಾಗಿ ಹೇಳುತ್ತೇವೆ. ಒಳ್ಳೆಯ ಮನಸ್ಸನ್ನು ಹೊಂದಿದವಳು ಎನ್ನುವುದಕ್ಕಾಗಿ ಸ್ವಲ್ಪ ಉದ್ದ ಮಾಡಿ ಹೇಳಿದರು. ಹಾಗೆ ಹೇಳಲೇ ಬೇಕೆಂದಿಲ್ಲ. ಶ್ರೀ ಎಂದರೂ ಶ್ರೀಮತಿ ಎಂದರೂ ಎರಡೂ ಒಂದೇ. ಹಾಗೆ ಮುಂದುವರೆದು ಅರ್ಥ ಸ್ಪಷ್ಟಪಡಿಸುವ ಉದ್ದೇಶದಿಂದ "ಶ್ರೀಮಾನ್" ಶಬ್ದ ಬಳಕೆಗೆ ಬಂದಿತು.