ಮಂತ್ರ: ಗಂಧದ್ವಾರಾಂ ದುರಾಧರ್ಷಾಂ ನಿತ್ಯಪುಷ್ಟಾಂ ಕರೀಷಿಣೀಮ್ |
ಈಶ್ವರೀಮ್ ಸರ್ವಭೂತಾನಾಂ ತಾಮಿಹೋಪಹ್ವಯೇ ಶ್ರಿಯಮ್ ||
ವ್ಯಾಖ್ಯಾನ: ಈ ಮಂತ್ರದ ಹಿನ್ನಲೆಯಲ್ಲಿ ವೇದದಲ್ಲಿ ಇನ್ನೊಂದು ಕಡೆ ಹೇಳಿರುವ ಮಂತ್ರವೊಂದನ್ನು ಅರ್ಥಮಾಡಿಕೊಂಡರೆ ನೀವು ಹೇಗೆ ಗಂಧ ಸ್ವರೂಪರು ಎನ್ನುವುದು ನಿಮಗೆ ಗೊತ್ತಾಗುತ್ತದೆ. ಆ ಮಂತ್ರದ ಅರ್ಥ ಹೀಗಿದೆ. ಗಂಧ ಎಂದರೆ ಸಾಹಿತ್ಯಿಕವಾಗಿ ಪರಿಮಳ ಎಂದರ್ಥ ಅಥವಾ ಗ್ರಾಹ್ಯವಾದ ವಿಚಾರ, ವಿಚಾರ ಗಂಧ ಎಂದು ಹೇಳುತ್ತಾರೆ. ಶ್ರೇಷ್ಠವಾದ ವಿಚಾರಗಳನ್ನು ಕೇಳುವುದು ಅಥವಾ ನೋಡುವುದು ಇವೆಲ್ಲವೂ ಗಂಧವೇ ಆಗಿರುತ್ತದೆ. ಕೆಟ್ಟದ್ದೆಲ್ಲವೂ ದುರ್ಗಂಧ. ಒಳ್ಳೆಯದನ್ನು ಕೇಳುವುದಕ್ಕೆ ನಿಮ್ಮಲ್ಲಿ ಎಷ್ಟು ದ್ವಾರಗಳಿವೆ, ಎಷ್ಟು ಬಾಗಿಲುಗಳಿವೆ, ಎಷ್ಟು ಅವಕಾಶಗಳಿವೆ, ಆ ಸ್ವರೂಪದಲ್ಲಿ ಗಂಧದ್ವಾರ ಎನ್ನಲಾಗಿದೆ. ಒಮ್ಮೆ ನಿಮ್ಮಲ್ಲಿ ಶ್ರೇಷ್ಠವಾದದ್ದನ್ನು ಸ್ವೀಕರಿಸುವ ಪ್ರವೃತ್ತಿ ಆರಂಭವಾದರೆ ನಂತರ ನೀವು ಸ್ವೀಕರಿಸುವುದೆಲ್ಲ ಶ್ರೇಷ್ಠವೇ ಆಗಿರುತ್ತದೆ. ಭೌತ ಶಾಸ್ತ್ರದಲ್ಲಿ ಒಂದು ನಿಯಮವಿದೆ. ಖಾಲಿ ಪ್ರದೇಶ ಎನ್ನುವುದು ಎಲ್ಲಿಯೂ ಇಲ್ಲ. ಯಾವುದೊ ಒಂದು ಅಲ್ಲಿ ಯಾವಾಗಲೂ ತುಂಬಿರುತ್ತದೆ. ಅದನ್ನು ಹೊರಗೆ ಹಾಕಿದಾಗ ಮಾತ್ರ ಇನ್ನೊಂದು ತುಂಬಲಿಕ್ಕೆ ಸಾಧ್ಯ. ಹಾಗೆಯೇ ಯಾವುದು ದುರಾದಿಗಳಿವೆ, ಕೆಟ್ಟ ವಿಚಾರಗಳಿವೆ ಅವನ್ನು ಹೊರಗೆ ಹಾಕಿದರೆ ಸ್ವಾಭಾವಿಕವಾಗಿ ಅಲ್ಲಿ ಸದ್ವಿಚಾರಗಳು ತುಂಬಿಕೊಳ್ಳಲು ಅವಕಾಶವಾಗುತ್ತದೆ. ಹಾಗಾಗಿ ನೀವು ಸ್ವೀಕರಿಸುವ ಪ್ರವೃತ್ತಿಯನ್ನು ಬೆಳೆಸುವುದರ ಮುಖೇನ ಕೆಟ್ಟ ವಿಚಾರಗಳನ್ನು ನಿಮ್ಮಿಂದ ಹೊರ ಹಾಕುತ್ತಾ ಬಂದರೆ ಅಲ್ಲೆಲ್ಲ ಒಳ್ಳೆಯ ವಿಚಾರಗಳು ತುಂಬಿಕೊಳ್ಳುತ್ತವೆ. ತನ್ಮೂಲಕ ಎತ್ತರಕ್ಕೆ ಏರುತ್ತಾ ಹೋಗುತ್ತೀರಿ. ನಿತ್ಯಪುಷ್ಟಾಂ ಕರೀಷಿಣೀಮ್ - ನಿಮ್ಮಲ್ಲಿ ಪುಷ್ಟಿ, ಸೃಷ್ಟಿ, ತುಷ್ಟಿಗಳು ಸೇರುತ್ತಾ ಹೋಗುತ್ತವೆ. ಅದರಿಂದ ನೀವು ಎತ್ತರಕ್ಕೆ ಏರುತ್ತೀರಿ. ಯಾವಾಗ ಆ ಕೆಟ್ಟದ್ದನ್ನು ಹೊರಹಾಕಬೇಕೆಂಬ ಸಂಕಲ್ಪವನ್ನು ನೀವು ಮಾಡುತ್ತೀರಿ, ತನ್ಮೂಲಕ ಕೆಟ್ಟದ್ದು ನಿಮ್ಮಿಂದ ಹೊರಹೋಗುತ್ತಾ ಇರುತ್ತದೆ. ಆಗ ನಿಮಲ್ಲಿ ಗಂಧವು ಅಂದರೆ ಶ್ರೇಷ್ಠವಾದದ್ದು ಸೇರುತ್ತಾ ಬರುತ್ತದೆ. ಆಗ ಎಲ್ಲದರ ಮೇಲೆ ನಿಮಗೆ ಅಧಿಪತ್ಯ ಸಿಗುತ್ತದೆ. ಏಕೆಂದರೆ ನಿಮ್ಮಲ್ಲಿ ಶ್ರೇಷ್ಠತೆ ಇದೆ. ಹಾಗಾಗಿ ನಿಮ್ಮಲ್ಲಿ ಸಹಜ ಕರ್ಷಕ ಗುಣ ಬರುತ್ತದೆ. ತನ್ಮೂಲಕ ನಿಮಗೆ ಎಲ್ಲವನ್ನೂ ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಈಶ್ವರೀಮ್ ಸರ್ವಭೂತಾನಾಂ - ಪಂಚಭೂತಗಳ ಮೇಲೆ ಅಧಿಪತ್ಯ ಸಾಧಿಸುವ ಶಕ್ತಿ ನಿಮಗೆ ಬರಲು ಸಾಧ್ಯವಾಗುತ್ತದೆ. ನಾನು ಅಂತಹ ಯಜ್ಞಾಬದ್ಧಳಾಗಿದ್ದೇನೆ, ಅಧ್ವರ್ಯುವಾಗಿದ್ದೇನೆ ಎನ್ನುವುದು ಈ ಮಂತ್ರದ ಅರ್ಥ. ಯಜ್ಞ ಎಂಬ ಅರ್ಥದಲ್ಲಿ ಹೋಪ ಶಬ್ದ ಪ್ರಯೋಗವಾಗಿದೆ.
ಮಂತ್ರ: ಮನಸಃ ಕಾಮಮಾಕೂತಿಂ ವಾಚಃ ಸತ್ಯಮಶೀಮಹಿ |
ಪಶೂನಾಂ ರೂಪಮನ್ನಸ್ಯ ಮಯಿ ಶ್ರೀಃ ಶ್ರಯತಾಂ ಯಶಃ ||
ಸಾಹಿತ್ಯಿಕ ಅರ್ಥ: ಮನಸ್ಸು ಅನೇಕ ಆಸೆಗಳನ್ನು ಹೊಂದಿರುತ್ತದೆ. ಆ ಎಲ್ಲ ಆಸೆಗಳಿಗೆ ನಾವು ಶಬ್ದ ರೂಪವನ್ನು ಕೊಡುವುದಿಲ್ಲ. ಅವುಗಳಲ್ಲಿ ಕೆಲವೊಂದು ಭಾವನೆಗಳು ಮಾತ್ರ ಮಾತಿನ ರೂಪದಲ್ಲಿ ಹೊರಬೀಳುತ್ತವೆ. ನನಗೆ ಸಂಪತ್ತನ್ನೂ, ರೂಪವನ್ನೂ, ಅನ್ನವನ್ನೂ, ಯಶಸ್ಸನ್ನೂ ನೀನು ಕೊಡು. ಇಷ್ಟನ್ನು ನಾನು ಮಾತಿನ ಮೂಲಕ, ಶಬ್ದದ ಮೂಲಕ ಹೇಳುತ್ತೇನೆಯೇ ವಿನಃ ನನ್ನ ಮನಸ್ಸಿನ ಎಲ್ಲವನ್ನೂ ಹೊರಗೆ ಹೇಳಲಿಕ್ಕೆ ಆಗುವುದಿಲ್ಲ. ಅಂದರೆ ನನ್ನ ಮನಸ್ಸನ್ನು ಅರ್ಥ ಮಾಡಿಕೊಂಡು ನನ್ನ ಅಪೇಕ್ಷೆಗಳೆಲ್ಲವನ್ನೂ ಕೊಡು.
ವ್ಯಾಖ್ಯಾನ: ಹಿಂದಿನ ಮಂತ್ರಕ್ಕೆ ಪೂರಕವಾದ ಮಂತ್ರವಿದು. ಹಿಂದೆ ನೀವು ಗಂಧರಾಗಿ ಎನ್ನುವ ಆದರ್ಶವನ್ನು ಹೇಳಿದೆಯೋ ಹಾಗೆ ನೀವು ಗಂಧರಾಗಲಿಕ್ಕೆ ಇರುವ ತಡೆ ಎನ್ನುವುದು ಮನಸ್ಸು. ಮನಸ್ಸು ನಿರಂತರವಾಗಿ ನಿಮ್ಮಲ್ಲಿ ಅಪೇಕ್ಷೆಗಳನ್ನು ಹುಟ್ಟುಹಾಕುತ್ತಿರುತ್ತದೆ. ಆ ಅಪೇಕ್ಷೆಗಳನ್ನು ಸುಮ್ಮನೆ ಬಿಡಲಿಕ್ಕೆ ಆಗುವುದಿಲ್ಲ. ಏಕೆಂದರೆ ಮನಸ್ಸು ಕೇಳುವುದಿಲ್ಲ. ಆದರೆ ಒಳಮನಸ್ಸು, ಅಂತರ್ಮನವು ಇದು ಸರಿಯಲ್ಲ ಎಂದು ಹೇಳುತ್ತಲೇ ಇರುತ್ತದೆ. ಆದರೆ ನಿರಂತರವಾಗಿ ನಾವು ಅದರಲ್ಲೇ ಬದ್ಧರಾಗಿ ಇದ್ದು ಬಿಡುತ್ತೇವೆ. ಮನಸ್ಸಿನ ಜಂಜಾಟ ಬಹಳ ಕಷ್ಟವಾಗುತ್ತದೆ. ಋಗ್ವೇದದ ಐದನೆಯ ಮಂಡಲದ ೪೪ನೇ ಸೂಕ್ತದಲ್ಲಿ ಈ ವಿಚಾರವನ್ನು ಹೇಳಲಾಗಿದೆ. ಅದನ್ನು ಉದಾಹರಿಸಿಕೊಂಡು ವಿವರಿಸುತ್ತೇನೆ. ಅದರ ಪ್ರಕಾರ ಬೇಕು ಎನ್ನುವುದರ ಮೂಲ ಇರುವುದೇ ಪತ್ನಿಯಲ್ಲಿ. ಅಪೇಕ್ಷೆ ಹುಟ್ಟುವುದು ಹೆಂಡತಿಯಲ್ಲಿ ಎಂದು ಮಂತ್ರ ಹೇಳುತ್ತದೆ. ಅದನ್ನು ಆಧರಿಸಿ ಈ ಮಂತ್ರಕ್ಕೆ ಚಿಂತನೆಯನ್ನು ಮಾಡಬೇಕು. ಮನಸ್ಸು ಹಾಗಾದರೆ ಎಲ್ಲಿದೆ? ಮನಸ್ಸಿನ ಸ್ಥಾನ ಏನು? ಮನಸ್ಸಿನ ನಿರ್ದಿಷ್ಟ ಸ್ಥಾನವನ್ನು ವೇದವು ಕೂಡಾ ಹೇಳಿಲ್ಲ. ಭಗವಂತನು ಮನಸ್ಸನ್ನು ಮಡದಿಯಲ್ಲಿಟ್ಟು ಧರ್ಮವನ್ನು ಇಟ್ಟನು. ಹಾಗಾಗಿ ಗಂಡನ ಅಪೇಕ್ಷೆಯ ಹಿನ್ನಲೆಯಲ್ಲಿ ಹೆಂಡತಿಯ ಬೇಡಿಕೆ ಇದೆ ಎಂದು ಅರ್ಥ. ಅದನ್ನೇ ಈ ಮಂತ್ರದಲ್ಲಿ ಹೇಳಿದ್ದು. ಹಾಗೆಯೇ ಧರ್ಮವನ್ನು ಇಟ್ಟದ್ದರಿಂದ ಪ್ರತೀ ಗ್ರಹಿಣಿಯೂ ಧರ್ಮಪತ್ನಿ ಎಂದೆನಿಸಿಕೊಳ್ಳುತ್ತಾಳೆ. ಹಾಗಾಗಿ ಆ ಧರ್ಮದ ಹಿಡಿತದ ಆಧಾರದಲ್ಲಿ ಈ ಮಂತ್ರಕ್ಕೆ ಅರ್ಥ ಮಾಡಬೇಕು. ಮನಸ್ಸು ಅಪೇಕ್ಷೆ ಪಡುತ್ತದೆ. ಆ ಅಪೇಕ್ಷೆ ಪಟ್ಟದ್ದೆಲ್ಲವೂ ಕೂಡ ಪ್ರಾಪ್ತವಾಗಲೇಬೇಕೆಂಬ ಇಚ್ಛಾಶಕ್ತಿಯೂ ಇರುತ್ತದೆ. ವಾಚಃ ಸತ್ಯಮಶೀಮಹಿ - ಮನಸ್ಸಿನಲ್ಲಿ ಹುಟ್ಟಿದ ಬಯಕೆಯು ಸತ್ಯವಾಗುವ ವರೆಗೂ ಹೋರಾಟ ಇರುತ್ತದೆ. ಅವೆಲ್ಲ ಪಶೂನಾಂ ರೂಪಮನ್ನಸ್ಯ - ಅಂದರೆ ಪಶುಗಳು ಹೇಗೆ ಅನ್ನವನ್ನು ತಿನ್ನುತ್ತವೆಯೋ ಅದಕ್ಕೆ ಸಮಾನ. ಆದರೆ ನಾವು ತಿನ್ನುವ ಅನ್ನ ಅದಲ್ಲ. ನಾವು ಊಟ ಮಾಡುವಾಗ ಪರಿಶಿಂಚನೆ ಮಾಡುತ್ತೇವೆ. ಮೊದಲು ಎಲೆಗೆ ಊಟ ಬಡಿಸುತ್ತಾರೆ. ಬಳಿಕ ಅನ್ನಕ್ಕೆ ಸಂಪ್ರೋಕ್ಷಣೆ ಮಾಡಿ ಅನ್ನ ರೂಪಿ ಭಗವಂತನಾದ ವೈಶ್ವಾನರನಿಗೆ ನೈವೇದ್ಯ ಮಾಡುತ್ತೇವೆ. ನಂತರ ಅದನ್ನು ಹೊಟ್ಟೆಯಲ್ಲಿ ಉಪಸ್ಥರಣೆ ಮಾಡುತ್ತೇವೆ. ಹೊಟ್ಟೆಯು ಒಂದು ಕಲಶ, ಅಲ್ಲಿ ಉಪಸ್ಥರಣೆ ಮಾಡಿ ಅದರ ಮೇಲೆ ಅನ್ನವನ್ನು ಇಡುತ್ತೇವೆ, ಅಂದರೆ ಊಟ ಮಾಡುತ್ತೇವೆ. ನಂತರ ಅದು ನಮಗಲ್ಲ ಎನ್ನುವ ಭಾವನೆಯಿಂದ ಅದರ ಮೇಲೆ ಮುಚ್ಚುತ್ತೇವೆ. ಅದು ಪಶು ರೂಪದ ಆಹಾರವಾಗುತ್ತದೆ ಎಂದು ನಾವು ತಿನ್ನುವುದೇ ಇಲ್ಲ. ಹೊಟ್ಟೆಯೊಳಗಿರುವ ಭಗವಂತ ಬೇಕಾದರೆ ತಿಂದುಕೊಳ್ಳಲಿ ಎನ್ನುವ ಅರ್ಥದಿಂದ ಹೀಗೆ ಮಾಡುತ್ತೇವೆ. ಪಶೂನಾಂ ರೂಪಮನ್ನಸ್ಯ - ನಾವು ತಿಂದರೆ ಅದು ಪಶುವಿನ ಆಹಾರವಾಗುತ್ತದೆ. ಆದ್ದರಿಂದ ದರ್ಭೆ ಹಾಸಿಟ್ಟು, ಉಪಸ್ಥರಣ ಮಾಡಿ, ಉದರ ಕಲಶಕ್ಕೆ ಅನ್ನವನ್ನು ತುಂಬಿಸಿ, ಅದನ್ನು ಮುಚ್ಚಿಟ್ಟು ಭಗವಂತನಿಗೆ ಅರ್ಪಿಸುತ್ತೇವೆ. ಈ ಕಲ್ಪನೆಯಿಂದ ನೀವು ಊಟ ಮಾಡಿದರೆ ಉಂಡದ್ದೆಲ್ಲ ಅಮೃತವಾಗುತ್ತದೆ. ನಾನು ತಿನ್ನುತ್ತೇನೆ ಎಂದು ಹೇಳುವುದರಿಂದ, ಕೇವಲ ಎರಡಿಂಚು ಉದ್ದವಿರುವ ನಾಲಗೆಯ ರುಚಿಗೆ ಏನೇನನ್ನೋ ತಿನ್ನುವುದರಿಂದ ನಾವು ಹಾಳಾಗುತ್ತಿದ್ದೇವೆ. ನಾವು ತಿನ್ನುವುದು ಭಗವಂತನಿಗೆ ಎಂದು ಅರ್ಪಿಸಿದರೆ ಅದೆಲ್ಲ ಅಮೃತವಾಗುತ್ತದೆ. ನಮಗೆ ಆಗ ಯಾವ ತೊಂದರೆಯೂ ಆಗುವುದಿಲ್ಲ. ಹಾಗಾಗಿ ಪಶು ರೂಪದಲ್ಲಿ ಅನ್ನವನ್ನು ತಿನ್ನುತ್ತಾ ಇಲ್ಲ. ತಿನ್ನುವುದಕ್ಕೆ ಇಚ್ಛೆ ಪಡುವುದೂ ಇಲ್ಲ. ನಾನು ಏನನ್ನು ತಿನ್ನುತ್ತೇನೆ ಎಂದರೆ, ಮಯಿ ಶ್ರೀಃ ಶ್ರಯತಾಂ ಯಶಃ - ಅತಿ ಶ್ರೇಷ್ಠವಾದದ್ದು, ಸಾರವನ್ನು ಮಾತ್ರ ಸ್ವೀಕರಿಸುತ್ತೇನೆ. ಅದರಿಂದ ಶ್ರೇಯಸ್ಸನ್ನೂ, ಯಶಸ್ಸನ್ನೂ ಪಡೆಯುತ್ತೇನೆ. ಈ ಅನ್ನವನ್ನು ನಾನು ತಿನ್ನುತ್ತಾ ಇಲ್ಲ, ಅದು ಭಗವಂತನಿಗೆ. ಅವನಿಗೆ ಕೊಡಲೆಂದು ಅದನ್ನು ಉದರ ಕೋಶದಲ್ಲಿ ತುಂಬಿಸಿಟ್ಟಿದ್ದೇನೆ, ಭಗವಂತನು ತಿಂದು ಜೀರ್ಣಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ. ಭಗವದ್ಗೀತೆಯಲ್ಲಿ ಇದನ್ನು ಹೇಳಲಾಗಿದೆ, "ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ" ಎನ್ನುವುದಾಗಿ. ವೈಶ್ವಾನರನಾಗಿ ನಮ್ಮ ಹೊಟ್ಟೆಯಲ್ಲಿರುವ ಭಗವಂತನಿಗೆ ಅನ್ನವನ್ನು ಕೊಡುತ್ತೇನೆ, ನಾನು ತಿನ್ನುವುದೇ ಇಲ್ಲ, ನನಗೆ ಬೇಡ ಅದು. ನಾನು ಅದರಲ್ಲಿರುವ ಶ್ರೇಷ್ಠವಾದ ಸಾರವನ್ನು ಮಾತ್ರ ಗ್ರಹಿಸುತ್ತೇನೆ. ಅದರಿಂದಾಗಿ ಯಶಸ್ಸನ್ನೂ, ಕೀರ್ತಿಯನ್ನೂ ಪಡೆಯಲು ಪ್ರಯತ್ನ ಪಡುತ್ತೇನೆ. ಹಿಂದಿನ ಮಂತ್ರದಲ್ಲಿರುವ ಗಂಧವತಿಯರು ಅಥವಾ ಗಂಧದಂತೆಯೇ ನಮ್ಮ ಜೀವನವನ್ನು ರೂಪಿಸಿಕೊಳ್ಳುತ್ತೇನೆ. ಅದಕ್ಕೆ ಪೂರಕವಾಗಿ ಈ ಮಂತ್ರವನ್ನು ಹೇಳಲಾಗಿದೆ.