ಮಂತ್ರ: ಹಿರಣ್ಯವರ್ಣಾಂ ಹರಿಣೀಂ ಸುವರ್ಣರಜತಸ್ರಜಾಮ್ |
ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋಮ ಆವಹ ||
ಸಾಹಿತ್ಯಿಕ ಅರ್ಥ: ಈ ಸೂಕ್ತ ಭಾಗದಲ್ಲಿ ಲಕ್ಷ್ಮಿಯನ್ನು, ಸಂಪತ್ತಿನ ಅಧಿದೇವತೆಯನ್ನು ಸ್ತುತಿಸುವಂತಹ ಪ್ರಯತ್ನವನ್ನು ಋಷಿಮುನಿಗಳು ಕಂಡುಕೊಂಡಿದ್ದಾರೆ. ಮ ಅವಹ - ನನ್ನಲ್ಲಿ ಬಂದು ಸೇರಿಕೋ. ಏನು ತಿಳಿದುಕೊಳ್ಳಬೇಕೆಂದರೆ, ಎಲ್ಲ ಸಂಪತ್ತಿನ ಮೂಲವಾದ, ಸಂಪತ್ತಿನ ಒಡತಿಯಾದ ಲಕ್ಶ್ಮಿಯು ನನ್ನಲ್ಲಿ ಬಂದು ವಾಸವಾಗಿರಲಿ. ಅವಳು ಹೇಗಿದ್ದಾಳೆ ಅಂದರೆ ಹಿರಣ್ಯವರ್ಣಾಮ್ - ಬಂಗಾರದ ಮೈಕಾಂತಿಯನ್ನು ಹೊಂದಿದ್ದಾಳೆ. ಹರಿಣೀಮ್ - ಚಂಚಲ ಸ್ವರೂಪ. ಹರಿಣಿ ಎಂದರೆ ಜಿಂಕೆ ಅಂದರ್ಥ. ಜಿಂಕೆಗೆ ಚಂಚಲತ್ವ ಇದೆ. ಸಂಪತ್ತು ಯಾವಾಗಲೂ ಚಂಚಲತ್ವದಿಂದಲೇ ಇರುತ್ತದೆ. ಯಾವನಲ್ಲಿಯೂ ಅದು ಸ್ಥಿರವಾಗಿರುವುದಿಲ್ಲ. "ಮನೋ ಮಧುಕರೋ ಮೇಘೋ ಮಾನಿನೀ ಮದನೋ ಮರುತ್ ಮಾ ಮದೋ ಮರ್ಕಟೋ ಮತ್ಸ್ಯೋ ಮಕಾರಾಃ ದಶ ಚಂಚಲಾಹ್ "- ಈ ಹತ್ತು ಚಂಚಲ. ಅದರಲ್ಲಿ ಲಕ್ಷ್ಮಿಯೂ ಚಂಚಲ. ಅಂತಹ ಚಂಚಲ ಸ್ವರೂಪಳಾದ, ನಾವು ಆರಾಧನೆ ಮಾಡಿದರೆ ಎಲ್ಲ ಬಗೆಯ ಸು-ವರ್ಣವನ್ನು ಕೊಡುವ ಸುವರ್ಣ ಎಂದರೆ ಒಂದು ಅರ್ಥ ಬಂಗಾರ ಎಂಬುದಾಗಿ, ನಮ್ಮ ಬದುಕಿಗೆ ಹೊಸ ವರ್ಣವನ್ನು ಕೊಡುವ (ಹೊಸತನವನ್ನು ಕೊಡುವಂತಹ) ಆ ಲಕ್ಷ್ಮಿ ನನ್ನಲ್ಲಿರಲಿ. ಚಂದ್ರಾಮ್ ಅಂದರೆ ಚಂದ್ರನಂತೆ ಪ್ರಭೆ ಉಳ್ಳವಳು. ಅಂತಹ ಎಲ್ಲ ಸಂಪತ್ತಿನ ಒಡತಿಯಾದಂತಹ ಲಕ್ಹ್ಮೀ ನನ್ನಲ್ಲಿ ಆವಾಸವಾಗಿರಲಿ. ಇದು ಮೇಲ್ನೋಟಕ್ಕೆ ಸಂಸ್ಕೃತ ಶಬ್ಧದ ಆಧಾರವಾದ ಸಾಹಿತ್ಯಿಕ ಅರ್ಥ.
ವ್ಯಾಖ್ಯಾನ: ಮೊದಲು ತಿಳಿದುಕೊಳ್ಳಬೇಕಾದ್ದು ಇಷ್ಟನ್ನೇ. ಸಾಹಿತ್ಯಿಕವಾಗಿ ಅದು ಏನನ್ನು ಹೇಳುತ್ತದೆ ಅನ್ನುವುದನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಹಾಗೆಯೇ ಅದರ ಬಗ್ಗೆ ಅಷ್ಟೇ ಪೂಜ್ಯ ಗೌರವ ಭಾವನೆಯೂ ಇರಬೇಕು. ಸಾಹಿತ್ಯಿಕ ಎಂದು ಯಾವತ್ತೂ ನಿಷೇಧ ಇಲ್ಲ. ಯಾಕೆಂದರೆ ಅದನ್ನು ಯಥಾವತ್ತಾಗಿ ಕಾಯ್ದುಕೊಂಡು ಬರಲಿಕ್ಕೆ ಆಗುವುದು ಕೇವಲ ಸಾಹಿತ್ಯಿಕ ಅರ್ಥದಿಂದ ಮಾತ್ರ ಸಾಧ್ಯ. ಇಲ್ಲದಿದ್ದರೆ ನಾಳೆ ಇನ್ನೊಂದು ರೀತಿಯಲ್ಲಿ ಬರೆಯಬಹುದಲ್ಲ! ಯಾವಾಗ ಸಾಹಿತ್ಯಿಕ ಮೂಲದಲ್ಲಿ ಸೂತ್ರವಿದೆ, ಶ್ಲೋಕವಿದೆ ಅದು ಯಥಾವತ್ತಾಗಿ ಉಳಿದುಬರುತ್ತದೆ. ಯಾವುದೇ ಕಾರಣಕ್ಕೂ ಬದಲಾಯಿಸುವುದಕ್ಕೆ ಆಗುವುದಿಲ್ಲ. ಹಾಗೆಯೇ ಇರುತ್ತದೆ. ನಂತರ ನಿಮಗೆ ಪ್ರಯೋಗಕ್ಕೆ ಬೇಕಾದಾಗ ಅಥವಾ ಯಾವುದೊ ಒಂದು ಉದ್ದೇಶಕ್ಕೆ ಬೇಕಾಗಾದ ಅದರ ಅರ್ಥ ವ್ಯತ್ಯಾಸ ಮಾಡುವಂತೆ ಅದಕ್ಕೆ ಕೊಡುವಂಥದ್ದು ಚಿಹ್ನೆಗಳು. ಆಗ ಅರ್ಥ ವ್ಯತ್ಯಾಸ ಮಾಡಿಕೊಳ್ಳಲಿಕ್ಕೆ ಆಗುತ್ತದೆ. ಹಾಗಾಗಿ ಉದಾತ್ತ, ಸ್ವರಿತ್ತ ಇವೆಲ್ಲ ಬಂತು. ಉದಾತ್ತ, ಸ್ವರಿತ್ತಗಳನ್ನು ಸೇರಿಸಿ ಸಾಹಿತ್ಯಿಕ ಅರ್ಥ ಮಾಡುವುದಿಲ್ಲ. ಹಿರಣ್ಯ ಅಂದರೆ ಅಷ್ಟೇ, ಹಿರ’ಣ್ಯ ಅಂತ ಹೇಳಿ, ಅಂತ ಹಿರ”ಣ್ಯ ಹೇಳಿ, ಸಾಹಿತ್ಯಿಕವಾಗಿ ಅದೇ ಅರ್ಥ ಬರುವುದು. ಆದರೆ ಇತರ ಉದ್ದೇಶಕ್ಕಾಗಿ ಅರ್ಥ ವ್ಯತ್ಯಾಸಗೊಳಿಸುವಾಗ ಮಾತ್ರ ಅದು ಹಿರ”ಣ್ಯವರ್ಣಾಂ ಹರಿ’ಣೀಂ ಅಂತ ಬರುತ್ತದೆ. ಮೂಲಾರ್ಥಕ್ಕೆ ಭಿನ್ನವಲ್ಲದ ರೀತಿಯಲ್ಲಿ ಸ್ಪಷ್ಟವಾಗಿ ಅರ್ಥವ್ಯತ್ಯಾಸಗೊಳಿಸಲ್ಪಟ್ಟಿತು. ಚಿನ್ನಕ್ಕೆ ಸಾಹಿತ್ಯಿಕವಾಗಿ ಹಿರಣ್ಯವೆನ್ನುತ್ತಾರೆ. ಆದರೆ ಇಲ್ಲಿ "ರ"ವನ್ನು ಅಗತ್ಯಕ್ಕಿಂತ ಉಚ್ಚಾರ ಅವಧಿಯನ್ನು ಮೀರಿ ಉಚ್ಚಾರ ಮಾಡಬೇಕು. ಹಿರಣ್ಯ ಎಂದರೆ ಚಿನ್ನದ ಬಣ್ಣ ಎಂಬ ಶಬ್ದವು ವ್ಯತ್ಯಾಸವಾಗಿ "ರ"ವನ್ನು ಹೆಚ್ಚು ಅಂದರೆ ಪ್ರಾಪಂಚಿಕದಲ್ಲಿ ರಜಸ್ಸು (ರಜಸ್ಸು ಎಂದರೆ ಅಗ್ನಿಸ್ವರೂಪ ಎಂದರ್ಥ) ಅದಕ್ಕೆ ಬಣ್ಣ (ಅಂದರೆ ರೂಪ) ಕೊಡುವುದು ಹೇಗೆ, ಪ್ರಪಂಚ ಬೆಳೆಯುವಂತೆ ಮಾಡುವುದು ಹೇಗೆ, ಪ್ರಪಂಚದ ರಜಸ್ಸಿಗೆ ರೂಪವನ್ನು ಕೊಡುವುದು ಹೇಗೆ? "ಸುವರ್ಣ ರಜತಸೃಜಾಮ್" ಸುವರ್ಣ ರಜಗಳಲ್ಲಿ ಅಂದರೆ ಚಿನ್ನದ ಪುಡಿಯಲ್ಲಿ. ಯಾವ ಯಾವ ಬಣ್ಣದಲ್ಲಿ ಹುಟ್ಟಿರುತ್ತಾರೋ, ಯಾವ ಯಾವ ಬಣ್ಣದ ವಸ್ತುಗಳಿರುತ್ತವೆಯೋ, ಅವೆಲ್ಲದಕ್ಕೂ ಚಿನ್ನದ ಬಣ್ಣದ ಲೇಪವಾಗಬೇಕು, ರಜ ಲೇಪವಾಗಬೇಕು. ಎಲ್ಲರಿಗೂ ಚಿನ್ನದ ಅಪೇಕ್ಷೆ ಇದೆ, ಎಲ್ಲರಿಗೂ ಅದು ಇಷ್ಟ. ಹಾಗಾಗಿ ಅದೇ ಬಣ್ಣದಿಂದ ಎಲ್ಲವೂ ಕಂಡರೆ, ಎಲ್ಲರೂ ಎಲ್ಲರಿಗೂ ಸಮಾನವಾಗುತ್ತಾರೆ. ಹಾಗಾಗಿ "ಸುವರ್ಣ ರಜತಸೃಜಾಮ್" ಅಂದರೆ ಚಿನ್ನದ ಲೇಪನ ಮಾಡುವುದು. ಎಲ್ಲ ಸುಖ ಕಷ್ಟಕ್ಕೂ ಚಿನ್ನದ ಲೇಪನವನ್ನೇ ಮಾಡಿದರೆ ಕಷ್ಟ ಸುಖ ನಮಗೆ ಬೇರೆ ಅನ್ನಿಸುವುದಿಲ್ಲ. ಎಲ್ಲ ಒಂದೇ ತಾನೇ! ಎಲ್ಲದಕ್ಕೂ ಚಿನ್ನದ ಲೇಪನವನ್ನೇ ಕೊಟ್ಟರೆ ನಮಗೆ ಬೇಧ ಕಾಣಿಸಲು ಸಾಧ್ಯವಿಲ್ಲ. ಕಷ್ಟ ಸುಖಗಳ ಬೇಧ ಇಲ್ಲ, ಈರ್ಷ್ಯೆ ಅಸೂಯೆಗಳಿಲ್ಲ, ದ್ವೇಷ ಕ್ರೋಧಗಳಿಲ್ಲ, ಎಲ್ಲ ಒಂದೇ ಆಗುತ್ತದೆ. ಹಾಗಾಗಿ ಎಲ್ಲವನ್ನೂ ಸಮಾನವಾಗಿ, ಅಣಿಗೊಳಿಸಿಕೊಳ್ಳುವುದಕ್ಕಾಗಿ ಎಲ್ಲವಕ್ಕೂ ಚಿನ್ನದ ಲೇಪನವನ್ನು ಮಾಡಿಕೊ. ಅಂದರೆ ಚಿನ್ನದ ಲೇಪನ, ಚಿನ್ನ ಎಂದರ್ಥವಲ್ಲ. ಎಲ್ಲವನ್ನೂ ಸಮಾನದೃಷ್ಟಿಯಿಂದ ಕಾಣುವ, ನಿನ್ನ ಲೇಪನವನ್ನು ಸರಿಪಡಿಸಿಕೊ ಅನ್ನುವುದು ಅದರ ಅರ್ಥವಾಗಿರುತ್ತದೆ. ಅದಕ್ಕೆ ಹೇಗೆ ಸಿದ್ಧನಾಗಿರಬೇಕು ಎಂದರೆ ನೀನು ಚಂದ್ರನಾಗಿರಬೇಕು. ಚಂದ್ರನಿಗೆ ಸ್ವಂತ ಆಸ್ತಿ ಇಲ್ಲ. ಆದರೆ ಚಂದ್ರನು ಸತತವಾಗಿ ತ್ಯಾಗಿಯೇ. ಭೂಮಿಯ ಎಲ್ಲ ಜೀವಿಗಳಿಗೂ ಚಂದ್ರನೇ ರಸಾಧಿಪ. ಭೂಮಿಗೆ ಎಲ್ಲವನ್ನೂ ಕೊಡುತ್ತಾನೆ. ತನ್ನದ್ದೆಲ್ಲವನ್ನೂ ತ್ಯಾಗಮಾಡುತ್ತಾನೆ. ತನ್ನ ೧೫ ಕಲೆಗಳನ್ನು ತ್ಯಾಗಮಾಡುತ್ತಲೇ ಪ್ರಪಂಚವನ್ನು ಬೆಳೆಸುತ್ತಿರುವುದರಿಂದಾಗಿಯೇ ಅವನು ರಸಾಧಿಪತಿ. ಅದೇ ಮನಸ್ಸಿನ ೧೫ ಪ್ರವೃತ್ತಿಗಳಿಂದಾಗಿ ನಾವು ಚಂದ್ರನೇ ಆಗಬಹುದು. ಚಂದ್ರನನ್ನು (ಚಂದ್ರ ಎಂದರೆ ಮನಸ್ಸು ಎಂದರ್ಥ) ನಾವು ಮನಃಪೂರ್ವಕವಾಗಿ ಸ್ವೀಕರಿಸಿದರೆ ಯಾವುದೇ ಕೆಡುಕೂ ನಮಗಿಲ್ಲ. ನಾವು ಸ್ವೀಕರಿಸದೆ ಇದ್ದಾಗ ಕೆಡುಕುಂಟಾಗುತ್ತದೆ. ಯಾವ ಕೆಡುಕನ್ನೂ ಗಮನಿಸದೆ, ಎಲ್ಲದರಲ್ಲೂ ಇರತಕ್ಕಂತಹ ಒಳ್ಳೆಯ ಅಂಶವನ್ನು ಚಿಂತಿಸುವುದು. ಅದಕ್ಕೆ "ಚಂದ್ರಾಮ್ ಹಿರಣ್ಮಯೀಮ್" - ಹಿರಣ್ಮಯೀಮ್ ಅಂದರೆ ಒಳ್ಳೆಯದ್ದಾಗಿದೆ, ಎಲ್ಲವೂ ಒಳ್ಳೆಯದರಲ್ಲೇ ಆವೇಶವಾಗಿದೆ, ಅಂದರೆ ಒಳ್ಳೆಯದರಲ್ಲೇ ಒಗ್ಗೊಡಿಸಿದೆ, ಎನ್ನುವ ರೀತಿಯಲ್ಲಿರತಕ್ಕಂತಹ ಪ್ರವೃತ್ತಿಯ ಶ್ರೀಮಂತಿಕೆ (ಲಕ್ಷ್ಮಿ ಅಂದರೆ ಶ್ರೀಮಂತಿಕೆ ಎಂದರ್ಥ) "ಜಾತವೇದೋಮ ಆವಹ" ಅದಕ್ಕಾಗಿ ಹುಟ್ಟಿತು, ಆ ಪ್ರವೃತ್ತಿಯನ್ನು ಹುಟ್ಟಿಸಿಕೊಳ್ಳು ಅಥವಾ ಆ ಪ್ರವೃತ್ತಿಯು ನನ್ನಲ್ಲಿ ಆವೇಶವಾಗಲಿ. ಈ ಅರ್ಥದಲ್ಲಿ ಸಾಹಿತ್ಯಿಕಕ್ಕೆ ವಿರೋಧವಾಗದ ರೀತಿಯಲ್ಲಿ ಇದು ನಿಮಗೆ ಒಬ್ಬ ಯೋಗಿಗೆ ಇರುವಂತಹ ಶಕ್ತಿಯನ್ನು ಕೊಡುತ್ತದೆ. ಒಬ್ಬ ಯೋಗಿಗೆ ಇರುವ ಶಕ್ತಿ ನಿಮ್ಮಲ್ಲಿ ಆವೇಶವಾಗಬೇಹು. ಅದೇನೆಂದರೆ ಪ್ರಪಂಚದ ಎಲ್ಲವನ್ನೂ ಸಮಾನವಾಗಿ ಕಾಣುವುದು. ತಾಯಿಯಂದಿರು ಕಾಣುತ್ತಾರೆ ಎಂಬುದು ನನಗೆ ಗೊತ್ತು. ಯಾವ ತಾಯಿಯೂ ತನ್ನ ಮುಂದಿರತಕ್ಕಂತಹ ಎಲ್ಲವೂ ತನ್ನ ಮಕ್ಕಳು ಎನ್ನುವ ಭಾವ ಬಂತೆಂದರೆ ಆ ತಾಯಿಗೆ ಯಾವ ಬೇಧವೂ ಗೊತ್ತಾಗುವುದಿಲ್ಲ. ಆ ಪ್ರವೃತ್ತಿ ಎಲ್ಲಿ ಹುಟ್ಟುತ್ತದೆ ಎಂದರೆ ನಿಮ್ಮಲ್ಲಿ, ನೀವು ಅದನ್ನು ಅಭಿವೃದ್ಧಿಪಡಿಸಿಕೊಳ್ಳಿ. ಎಲ್ಲರಲ್ಲೂ ಸಮ್ಮಾನವಾದ ಪ್ರವೃತ್ತಿಯನ್ನು ಹೊಂದಿಸಿಕೊಳ್ಳಿ ಅನ್ನುವುದು ಈ ಮಂತ್ರದ ಉದ್ದೇಶ. ಅದು ಮೂಲ ಪೀಠಿಕೆ. ಹಾಗೆ ನೀವು ಹೊಂದಿಸಿಕೊಳ್ಳುವುದರಿಂದ ನಿಮಗೆ ಏನು ಆಗುತ್ತದೆ, ಯಾವ ರೀತಿಯ ಶಕ್ತಿ ಬರುತ್ತದೆ ಎನ್ನುವುದನ್ನು ನಂತರ ನಾಲ್ಕನೇ ಮಂತ್ರ " ಪುತ್ರ ಪೌತ್ರ ಧನಂ ಧಾನ್ಯಮ್ ಹಸ್ತ್ಯಶ್ವಾದಿ ಗವೇ ರಥಮ್, ಪ್ರಜಾನಾಮ್ ಭವಸಿ ಮಾತಾ ಆಯುಷ್ಮನ್ತಂ ಕರೋತು ಮಾಂ" ಎಂದು ಹೇಳಲಾಗಿದೆ. ನಿಮ್ಮ ಪ್ರವೃತ್ತಿ ಹೇಗಿರುತ್ತೆ ಅಂದರೆ ಹೀಗೆ, ಈ ಸಂಪತ್ತನ್ನು ಹೇಳುವ ರೀತಿಯಲ್ಲಿ ಹೇಳಲಾಗಿದೆ. ಪುತ್ರ, ಪೌತ್ರ, ಧನ, ಧಾನ್ಯ ಎಂಬುದಾಗಿ. ಅಂದರೆ ಅವೆಲ್ಲವೂ ಎಲ್ಲರಲ್ಲೂ ಸಮಾನವಾಗಿರಲಿ. ಯಾರಿಗೂ ಕೊರತೆ ಎನ್ನುವುದು ಇರಬಾರದು ಎನ್ನುವ ಭಾವನೆ ಹುಟ್ಟುವುದು ತಾಯಿಯಲ್ಲಿ ಮಾತ್ರ, ಅದಕ್ಕಾಗಿ "ಮಾತಾ ಆಯುಷ್ಮನ್ತಂ ಕರೋತು ಮಾಂ" - ಹೆಚ್ಚು ವರ್ಷ ನನ್ನ ಕಣ್ಮುಂದೆ ಬದುಕಿರಲಿ ಎಂದರ್ಥ. ಅಂದರೆ ಎಲ್ಲರಿಗೂ ಯಾವುದೇ ಕೊರತೆಯಾಗದ, ಒಂದು ಕ್ಷಣಕ್ಕಲ್ಲ ಅಥವಾ ಯಾರೋ ಒಬ್ಬ ಕೊಟ್ಟು ತೃಪ್ತಿಪಡಿಸುವುದಲ್ಲ. ಯಾರೂ ಕೊಡಬೇಕಾದ ಅಗತ್ಯ ಇಲ್ಲ ಅಲ್ಲಿ. ಅವರವರಲ್ಲೇ ಈ ಪ್ರವೃತ್ತಿ ಪ್ರವೃದ್ಧಮಾನಕ್ಕೆ ಬರಲಿ. ಎಲ್ಲರಲ್ಲೂ ಆ ಸಂಪತ್ತೆಲ್ಲವೂ ಸಮೃದ್ಧವಾಗುವಂತೆ ತಾನು ತಾಯಿಯಾಗಿ ಹರಸುತ್ತೇನೆ ಎನ್ನುವ ಅರ್ಥದ ಪೂರಕತೆ ಈ ಮಂತ್ರದಲ್ಲಿ ಸಿಗುತ್ತದೆ.
ಪ್ರಶ್ನೆ: ಯಜುರ್ವೇದದಲ್ಲಿ "ಹಿರಣ್ಯವರ್ಣಾಗುಂ ಹರಿಣೀಗುಂ" ಅಂತ ಪದಪ್ರಯೋಗ ಮಾಡುತ್ತೇವಲ್ಲಾ ಅದು ಸರಿಯೇ?
ಸ್ವಾಮೀಜಿ: ಅದು ತಪ್ಪಲ್ಲ, ಯಜುರ್ವೇದ ಪಾಠದ ಪದ್ಧತಿ. ಇದಕ್ಕೆ ಸ್ಪಷ್ಟ ಕಾರಣ ಇದೆ. ಅಲ್ಲಿ ಹಾಗೆ ಹೇಳಬೇಕಾದ ಅನಿವಾರ್ಯತೆ ಇದೆ. ಯಜುರ್ವೇದದಲ್ಲಿ ಅನುನಾಸಿಕದ ಮುಂದೆ ಸೊನ್ನೆ ಉಚ್ಚಾರ ಬಂದರೆ "ಗುಮ್" ಆಗಬೇಕು ಅನ್ನುವ ನಿಯಮ ಇದೆ. ಏಕೆಂದರೆ "ಗ" ಎನ್ನುವುದು ಪ್ರಕೃತಿ. ಆ "ಗ"ವನ್ನು ಅನುನಾಸಿಕವಾಗಿ, ಪ್ರಕೃತಿಯು ಅನುನಾಸಿಕವಾಗುತ್ತದೆ ಎನ್ನುವುದೇ ಅದರ ಅರ್ಥ. ಆದರೆ ಬೇರೆ ವೇದಗಳಲ್ಲಿ ಸೊನ್ನೆ ಬಂದಾಗ ಸೊನ್ನೆಯ ಉಚ್ಚಾರ ಮಾಡುತ್ತೇವೆ. ಸೊನ್ನೆ "ಆಮ್" ಸ್ವರ. ನಾವು ಸ್ವರವನ್ನು ಹೇಳುತ್ತೇವೆ, ನೀವು ಅನುನಾಸಿಕವನ್ನು ಸ್ಪಷ್ಟಪಡಿಸುತ್ತೀರಿ. ಅಷ್ಟೇ ವ್ಯತ್ಯಾಸ. ಈ ರೀತಿ ಪಾಠಾಂತರ ವೇದಗಳು ನಮ್ಮ ದೇಶದಲ್ಲಿ ತುಂಬಾ ಇವೆ. ಖಂಡಿತಾ ಯಾವುವೂ ತಪ್ಪಲ್ಲ. ಯಜುರ್ವೇದದಲ್ಲಿ ಮೂಲಾಕ್ಷರಗಳಿಗೆ ಪ್ರಾಧಾನ್ಯತೆ. ಯಜುರ್ವೇದದ ನಿಯಮ ಅದು. ಅದೇ ಇತರ ವೇದಗಳಲ್ಲಿ ಮೂಲ ಅಕ್ಷರಗಳಲ್ಲ, ಯಾವುದು ಕೊನೆಯೋ ಅದಕ್ಕೆ ಪ್ರಾಧಾನ್ಯತೆ ಇದೆ. ಅದಕ್ಕಾಗಿ ಹಿರಣ್ಯವರ್ಣಾಮ್, "ಆಮ್"ಕಾರವನ್ನು ಹೇಳಿದರೆ, ನೀವು "ಗುಮ್", ಅಲ್ಲಿ "ಮ"ಕಾರವು ಅನುನಾಸಿಕವಾಗಿ ಅರ್ಧಾಕ್ಷರ ಉಚ್ಚಾರ ಆಗಿ "ಮ" ಪೂರ್ಣವಾಗಿರುವುದಿಲ್ಲ. ಪ್ರಯೋಗಭಾಗದಲ್ಲಿ ಮಾತ್ರ ಕೆಲವೊಮ್ಮೆ ಬದಲಾಯಿಸಿಕೊಂಡು ಪ್ರಯೋಗ ಮಾಡುವ ವಿಧಾನಗಳೆಲ್ಲ ಇವೆ. ಹೀಗೆ ಪ್ರಯೋಗ ಮಾಡಬೇಕು ಅಂತ ಇದೆ. ಅಷ್ಟು ಬಿಟ್ಟರೆ ಬೇರೆಲ್ಲ ಸಂದರ್ಭಗಳಲ್ಲೂ ಸ್ಪಷ್ಟ ಉಚ್ಚಾರ, ಸಮರ್ಥ ಉಚ್ಚಾರ ಅಂದರೆ ಯಜುರ್ವೇದದ್ದು.
ಪ್ರಶ್ನೆ: ಋಗ್ವೇದದಲ್ಲಿ "ಹಿರಣ್ಯ" ಶಬ್ದಕ್ಕೆ ಉದಾತ್ತದಲ್ಲಿ ಎರಡು ಸ್ವರ ಇದೆ, ಯಜುರ್ವೇದದಲ್ಲಿ ಅನುದಾತ್ತದಲ್ಲಿ ಎರಡು ಸ್ವರ ಇದೆ. ಇವು ಬೇರೆ ಬೇರೆ ಅಲ್ಲವೇ?
ಸ್ವಾಮೀಜಿ: ಇಲ್ಲಿ ಅರ್ಥ ವ್ಯತ್ಯಾಸಕ್ಕಾಗಿ ಮಾತ್ರ ಗೆರೆಗಳು ಬಳಸಲ್ಪಡುತ್ತವೆ, ಸಾಹಿತ್ಯಿಕ ಕಾರಣದಿಂದಲ್ಲ. "ಹಿರಣ್ಯ"ದಲ್ಲಿ ಎರಡು ಉದಾತ್ತ ಹೇಳುವುದು ರಜಸ್ಸು ಎಂಬ ಕಾರಣಕ್ಕೆ. ಪ್ರಾಪಂಚಿಕವು ನಡೆಯುವುದೇ ರಜಸ್ಸಿನಿಂದ. ಆ ರಜಸ್ಸನ್ನು ಹೇಗೆ ನಮ್ಮಲ್ಲಿ ಆವೇಶಿಸಿಕೊಳ್ಳಬೇಕು ಎನ್ನುವುದೇ ಶ್ರೀಸೂಕ್ತದ ಉದ್ದೇಶ. ಅದೇ ಬೇರೆ ಕಡೆ "ಹಿರಣ್ಯ" ಶಬ್ದ ಬರುತ್ತದೆ. ಅಲ್ಲಿ "ಹಿರಣ್ಯ" ಹಿರಣ್ಯವೇ ಆಗಿರುತ್ತದೆ. ಸಂದರ್ಬೋಚಿತವಾದ ಅರ್ಥ ವ್ಯತ್ಯಾಸಕ್ಕೆ ಬೇಕಾಗಿ ಹಾಗೆ ಮಾಡಲಾಗುತ್ತದೆ.
ಪ್ರಶ್ನೆ: ಯಜುರ್ವೇದದಲ್ಲಿ "ಹಿರಣ್ಯ" ಅಂದರೆ ಹಿರಣ್ಯ, ಋಗ್ವೇದದಲ್ಲಿ "ಹಿರಣ್ಯ"ದ ಜೊತೆಯಲ್ಲಿ ರಜಸ್ಸೇ?
ಸ್ವಾಮೀಜಿ: ಹಾಗಲ್ಲ. ಯಜುರ್ವೇದದಲ್ಲಿ ಶ್ರೀಸೂಕ್ತವನ್ನು ಹೇಳುವಾಗ ಯಜುರ್ವೇದದ ಧಾಟಿಗೆ ಬದ್ಧವಾಗಿ ಹೇಳಿಕೊಂಡು ಹೋಗುವಾಗ ಹಾಗೆ ಹೇಳುತ್ತೇವೆ ಬಿಟ್ಟರೆ ಅಲ್ಲಿಯೂ ಅದು ಅಂಗೀಕೃತವಾದದ್ದು "ಹಿರಣ್ಯ" ಜೊತೆಯಲ್ಲಿ ರಜಸ್ಸು ಎಂಬುದಾಗಿಯೇ. ಸಹಜ ಮಡಿವಂತಿಕೆಯಿಂದಾಗಿ ಹೇಳುವ ಧಾಟಿ ಬೇರೆ ಇದ್ದರೂ ಅಂಗೀಕೃತ ಅರ್ಥ ಒಂದೇ ಆಗಿರುತ್ತದೆ. ಶ್ರೀಸೂಕ್ತವನ್ನು ಅರ್ಥಮಾಡಿಕೊಳ್ಳುವವನಿಗೆ ಅದು ಗೊತ್ತಾಗುತ್ತದೆ. "ರ" ವೇ ಪ್ರಧಾನ. ಪ್ರಪಂಚ ಬೆಳೆಯುವುದೇ ರಜಸ್ಸಿನಿಂದ ಎಂದು ಯಜುರ್ವೇದಿಗಳಿಗೂ ಅರ್ಥ ಗೊತ್ತಾಗುತ್ತದೆ. ಆದರೆ ಹೇಳುವ ಧಾಟಿ ಹಾಗೆ ಅಷ್ಟೇ. ಅದು ತಪ್ಪಲ್ಲ. ಎಲ್ಲ ವೇದಗಳ ಪರಿಚಯ, ಜ್ಞಾನಗಳನ್ನು ರೂಡಿಸಿಕೊಂಡಾಗ ಮಾತ್ರ ಈ ವ್ಯತ್ಯಾಸಗಳನ್ನು ಬಹಳ ಸುಲಭವಾಗಿ ಗುರುತಿಸಬಹುದು. ಸ್ವಲ್ಪ ಭಾಗವನ್ನು ಓದಿಕೊಂಡಾಗ ಮಾತ್ರ ಈ ವ್ಯತ್ಯಾಸಗಳು ಸಮಸ್ಯೆ ಎಂದೆನಿಸುತ್ತವೆ. ನೀವು ನಾಲ್ಕೂ ವೇದಗಳನ್ನು ಓದಿ, ನಿಮಗೇ ಗೊತ್ತಾಗುತ್ತದೆ. ನೀವು ಹೇಳುವಂತಹ ಎಲ್ಲಾ ತಪ್ಪುಗಳೂ ನಿಜವಾಗಿ ತಪ್ಪುಗಳಲ್ಲ, ಎಲ್ಲಾ ಸರಿಯಾಗಿದೆ ಎಂದು ಅನ್ನಿಸುತ್ತವೆ. ಎಲ್ಲಾ ಪಾಠಾಂತರಗಳೂ ಸರಿ ಇವೆ. ಮುದ್ರಣದಲ್ಲಾಗುವ ತಪ್ಪುಗಳು ಮಾತ್ರ ನಿಜವಾದ ದೋಷಗಳೇ, ಅಷ್ಟು ಬಿಟ್ಟರೆ ಚಾಲ್ತಿ ಪಾಠ ಎಂದಿತ್ತಲ್ಲ ಅದರಲ್ಲಾಗಲೀ ಅಥವಾ ದಕ್ಷಿಣ ಭಾರತದಲ್ಲಿರುವ ೩೨ ರೀತಿಯ ಪಾಠಾಂತರಗಳೂ ಯಾವುವೂ ತಪ್ಪಲ್ಲ. ಎಲ್ಲವೂ ಸರಿ ಇದೆ.