ಇತರೆ ಕವನಗಳು
೧. ತುಂಬಿ ಬಂದಿತ್ತು
ಹೆಚ್ಚಿನ ಓದಿಗೆ: http://sallaap.blogspot.com/2009/05/blog-post_20.html
ಬಸವಣ್ಣನ ಜೀವನದ ಕೊನೆಯ ದಿನಗಳಿಗೆ ಸಂಬಂಧಿಸಿದಂತೆ, ಬೇಂದ್ರೆಯವರು ’ತಲೆದಂಡ’ ಎನ್ನುವ ನಾಟಕವನ್ನು ರಚಿಸಿದ್ದರು. ಬಸವಣ್ಣನವರ ಸಮಾಧಿಯ ಕೆಲಸ ನಡೆದಿರುವಾಗ ಅಲ್ಲಿಗೆ ಬಂದ ಮುದುಕ ಜಂಗಮನೊಬ್ಬನು ಈ ಹಾಡನ್ನು ಹೇಳುವನು.
ಈ ಹಾಡನ್ನು ಸ್ವತಃ ಬೇಂದ್ರೆಯವರೇ ಏಕತಾರಿಯ ಹಿನ್ನೆಲೆಯಲ್ಲಿ ೧೯೪೭ರಲ್ಲಿ ಹಾಡಿದ್ದರು. ಅದು HMV ಕಂಪನಿಯಿಂದ ಮುದ್ರಿತವಾಯಿತು.
ಅನೇಕ ವರ್ಷಗಳ ನಂತರ, ಗಿರೀಶ ಕಾರ್ನಾಡರು ಬಸವಣ್ಣನ ಬಗೆಗೆ ತಾವೂ ಒಂದು ನಾಟಕ ರಚಿಸಿದರು ಹಾಗೂ ಬೇಂದ್ರೆಯವರ ಅನುಮತಿಯನ್ನು ಪಡೆದುಕೊಂಡು ತಮ್ಮ ನಾಟಕಕ್ಕೆ ‘ತಲೆದಂಡ’ ಎಂದು ಹೆಸರು ಕೊಟ್ಟರು.
ಕವನದ ಪೂರ್ತಿಪಾಠ ಹಿಗಿದೆ:
……………………………………………………………..
ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್
ತುಂಬಿ ಬಂದಿತ್ತ ತಂಗೀ
ತುಂಬಿ ಬಂದಿತ್ತು ||ಪಲ್ಲವಿ||
೧
ಬೆಳಕಿಗಿಂತ ಬೆಳ್ಳಗೆ ಇತ್ತ
ಗಾಳಿಗಿಂತ ತೆಳ್ಳಗೆ ಇತ್ತ
ಜಡಿಯಿಂದಿಳಿದ ಗಂಗಿ ಹಾಂಗ
ಚಂಗನೆ ನೆಗೆದಿತ್ತ
ಮೈಯೊಳಗಿರುವ ಮೂಲಿಮೂಲಿಗೂ
ಮೂಡಿ ಬಂದಿತ್ತ
ಅಡಿಮುಡಿಗೂಡಿ ನಡುವಂತೆಲ್ಲಾ
ಮುಳುಗಿಸಿ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು || ತುಮ್ ತುಮ್……
೨
ಹೂವಿಗಿರುವ ಕಂಪು ಇತ್ತ
ಹಾಡಿಗಿರುವ ಇಂಪು ಇತ್ತ
ಜೀವದ ಮಾತು ಕಟ್ಟಿಧಾಂಗ
ಎದ್ಯಾಗ ನಟ್ಟಿತ್ತ
ವರ್ಮದ ಮಾತು ಆಡಿಧಾಂಗ
ಮರ್ಮಕ ಮುಟ್ಟಿತ್ತ
ಬೆಳಕಿಗೆ ಮರಳಿ ಕಮಲವರಳಿ
ಜೇನ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು || ತುಮ್ ತುಮ್……
೩
ಕಾಲದ್ಹಾಂಗ ಕಪ್ಪಗಿತ್ತ
ಸಾವಿನ್ಹಾಂಗ ತೆಪ್ಪಗಿತ್ತ
ಹದ್ದು ಬಂದು ಹಾವಿನ ಮ್ಯಾಲೆ
ಎರಗಿದಂತಿತ್ತ
ಇರುಳ ಮಬ್ಬಿನ್ಯಾಗ ಹಗಲಿನ ಬೆಳಕು
ಕರಗಿದಂತಿತ್ತ
ಗುಂಗು ಹಿಡಿದು ತಂಗಿದಾಗ
ತುಂಬಿ ನಿಂತಿತ್ತ ಈಗ
ತುಳಿಕಿ ಹೋಗಿತ್ತ
ತಂಗೀ ತುಂಬಿ ಬಂದಿತ್ತು || ತುಮ್ ತುಮ್……
…………………………………………………………………………………….
ಬೇಂದ್ರೆಯವರು ರಚಿಸಿದ ಈ ಕವನಕ್ಕೆ ಬಸವಣ್ಣನಿಂದ ಹಾಗೂ ಅಲ್ಲಮಪ್ರಭುವಿನಿಂದ ಪ್ರೇರಣೆ ದೊರೆತಿರಬಹುದು.
ಬಸವಣ್ಣನವರೇ ರಚಿಸಿದ ವಚನವೊಂದು ಹೀಗಿದೆ:
ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ
ಮನದಲ್ಲಿ ನಿಮ್ಮ ನೆನಹು ತುಂಬಿ
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ
ಕೂಡಲಸಂಗಮದೇವಾ
ನಿಮ್ಮ ಚರಣಕಮಲದೊಳಗಾನು ತುಂಬಿ.
ಅಲ್ಲಮಪ್ರಭುವಿನ ವಚನ ಈ ರೀತಿಯಾಗಿದೆ:
ಗಿಡದ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು, ತುಂಬಿ ನೋಡಾ!
ಆತುಮ ತುಂಬಿ ತುಂಬಿ ನೋಡಾ!
ಪರಮಾತುಮ ತುಂಬಿ ತುಂಬಿ ನೋಡಾ!
ಗುಹೇಶ್ವರ ಲಿಂಗಕ್ಕೆರಗಿ ನಿಬ್ಬೆರಗಾಯಿತ್ತು ತುಂಬಿ ನೋಡಾ!!
ಅಲ್ಲಮಪ್ರಭು, ಅಕ್ಕಮಹಾದೇವಿ ಹಾಗೂ ನವೋದಯ ಕಾಲದ ಸಾಹಿತಿಯಾದ ಮಧುರಚೆನ್ನರನ್ನು ಕನ್ನಡದಲ್ಲಿ ಶ್ರೇಷ್ಠ ಅನುಭಾವಸಾಹಿತ್ಯವನ್ನು ನೀಡಿದವರೆಂದು ಗುರುತಿಸಬಹುದು.
ಅಲ್ಲಮಪ್ರಭುವಿನ ವಚನವು ಗಿಡವನ್ನು ಪ್ರಪಂಚಕ್ಕೆ ಹಾಗೂ ಗಿಡದ ಮೇಲಿರುವ ತುಂಬಿಯನ್ನು ಆತ್ಮಕ್ಕೆ ಹೋಲಿಸುತ್ತದೆ. ಆತ್ಮದ ವಿಕಸನ ಹಾಗೂ ಪರಮಾತ್ಮದ ಆನಂದವನ್ನು ಅಲ್ಲಮಪ್ರಭುಗಳು ಈ ವಚನದಲ್ಲಿ ಬಣ್ಣಿಸಿದ್ದಾರೆ.
ಬೇಂದ್ರೆಯವರು ತಮ್ಮ ಕವನದಲ್ಲಿ ಬಸವಣ್ಣ ಹಾಗೂ ಅಲ್ಲಮಪ್ರಭುವಿನ ವಚನಗಳಲ್ಲಿಯ ತುಂಬಿಯ ಹೋಲಿಕೆಯನ್ನು ಅನುಕರಿಸಿಲ್ಲ. ಆದರೆ ಆ ಪದವನ್ನು ಬಳಸುವದಕ್ಕೆ ಈ ವಚನಗಳಿಂದ ಪ್ರೇರಣೆಯನ್ನು ಪಡೆದಿರಬಹುದು.
ವೀರಶೈವ ಆಂದೋಲನ ಜಗತ್ತಿನ ಅತ್ಯಂತ ಮಹತ್ವದ ಆಂದೋಲನಗಳಲ್ಲಿ ಒಂದು. ಇದರ ಕಾರ್ಯಕ್ಷೇತ್ರ ಕನ್ನಡ ನಾಡಾಗಿತ್ತಷ್ಟೆ. ಈ ಆಂದೋಲನದ ಕೇಂದ್ರವ್ಯಕ್ತಿಯಾದ ಬಸವೇಶ್ವರರ ಬಗೆಗೆ ಶರಣರಿಗೆ ಇದ್ದಂತಹ ಭಾವನೆಗಳನ್ನು ಈ ಹಾಡಿನಲ್ಲಿ ವಿವರಿಸಲಾಗಿದೆ.
ಆಧುನಿಕ ಕಾಲದಲ್ಲಿ ಮಹಾತ್ಮಾ ಗಾಂಧಿಯವರು ‘ಅಹಿಂಸಾಮೂರ್ತಿ’ ಎಂದು ಗುರುತಿಸಲ್ಪಟ್ಟಿದ್ದರು. ಅದರಂತೆ ವೀರಶೈವ ಆಂದೋಲನದ ಕಾಲದಲ್ಲಿ ಬಸವಣ್ಣನವರು ಯಾವ ರೀತಿಯಲ್ಲಿ ಗುರುತಿಸಲ್ಪಟ್ಟಿದ್ದರು? ಬೇಂದ್ರೆಯವರು ಜಂಗಮನೋರ್ವನ ಹಾಡಿನ ಮೂಲಕ ಕಲ್ಯಾಣದ ಜನರ ಮನೋಭಾವಗಳನ್ನು ತೋರಿಸಿದ್ದಾರೆ. ಈ ಹಾಡಿನ ಮೂರು ನುಡಿಗಳಲ್ಲಿ ಆ ಜಂಗಮನು ಬಸವಣ್ಣನವರ ವ್ಯಕ್ತಿತ್ವವನ್ನು, ಸಾಧನೆಯನ್ನು ಹಾಗೂ ಅವರ ಕೊನೆಯನ್ನು ವರ್ಣಿಸುತ್ತಾನೆ.
ಮೊದಲನೆಯ ನುಡಿಯನ್ನು ನೋಡಿರಿ:
ಬೆಳಕಿಗಿಂತ ಬೆಳ್ಳಗೆ ಇತ್ತ
ಗಾಳಿಗಿಂತ ತೆಳ್ಳಗೆ ಇತ್ತ
ಜಡಿಯಿಂದಿಳಿದ ಗಂಗಿ ಹಾಂಗ
ಚಂಗನೆ ನೆಗೆದಿತ್ತ
ಮೈಯೊಳಗಿರುವ ಮೂಲಿಮೂಲಿಗೂ
ಮೂಡಿ ಬಂದಿತ್ತ
ಅಡಿಮುಡಿಗೂಡಿ ನಡುವಂತೆಲ್ಲಾ
ಮುಳುಗಿಸಿ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು || ತುಮ್ ತುಮ್……
ಬಸವಣ್ಣನವರು ಕನ್ನಡನಾಡು ಕಂಡ ಮಹಾಪುರುಷರು. ಅಧ್ಯಾತ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಇವರದು ಮಹತ್ತಮ ವ್ಯಕ್ತಿತ್ವ. ಬಸವಣ್ಣನವರ ಒಳಗೆ ಅರಳಿದ ಸೂಕ್ಷ್ಮ ದೈವೀ ಚೈತನ್ಯವನ್ನು ಬಣ್ಣಿಸಲು ನಿಸರ್ಗದ ಚೈತನ್ಯಗಳಾದ ಬೆಳಕು, ಗಾಳಿ ಹಾಗೂ ಗಂಗೆ ಇವುಗಳನ್ನೇ ಪ್ರತೀಕಗಳಾಗಿ ಬಳಸುವದು ಸಹಜ. ಆದುದರಿಂದಲೇ ಇಲ್ಲಿ ಹಾಡುತ್ತಿರುವ ಜಂಗಮನು ಈ ಸೂಕ್ಷ್ಮ ಚೈತನ್ಯವು ಬೆಳಕಿಗಿಂತಲೂ ಬೆಳ್ಳಗೆ ಇತ್ತು ಹಾಗೂ ಗಾಳಿಗಿಂತಲೂ ತೆಳ್ಳಗೆ ಇತ್ತು ಎಂದು ಬಣ್ಣಿಸುತ್ತಿದ್ದಾನೆ. ಬೆಳಕು ಜ್ಞಾನವನ್ನು ಕೊಡುತ್ತದೆ, ಗಾಳಿ ನಿಮಗೆ ತಿಳಿಯದಂತೇ ನಿಮ್ಮನ್ನು ಆವರಿಸುತ್ತದೆ ಹಾಗು ನಿಮ್ಮ ಪ್ರಾಣಕ್ಕೆ ಆಧಾರವಾಗಿದೆ. ಗಂಗೆ ಜೀವಿಗಳ ಕೊಳೆಯನ್ನು ತೊಳೆದು ಅವರನ್ನು ಪಾವನಗೊಳಿಸುವಳು. ಬಸವಣ್ಣನವರ ಲೋಕಕಲ್ಯಾಣಕರ ವ್ಯಕ್ತಿತ್ವವು ಬೆಳಕು, ಗಾಳಿ ಹಾಗೂ ಗಂಗೆಯಂತೆ ಪರಿಶುದ್ಧವಾಗಿದೆ, ಅಲ್ಲದೆ ಸಮಾಜಕ್ಕೆ ಒಳಿತನ್ನು ಮಾಡಿದೆ. ಈ ರೂಪಕವು ಬಸವಣ್ಣನವರ ಆಧ್ಯಾತ್ಮಿಕ ವ್ಯಕ್ತಿತ್ವವನ್ನು ವರ್ಣಿಸುವಂತೆ, ಅವರ ಸಾಮಾಜಿಕ ವ್ಯಕ್ತಿತ್ವವನ್ನೂ ಸಹ ವರ್ಣಿಸುತ್ತದೆ.
ಬಸವಣ್ಣನವರ ಒಳಗಿದ್ದ ದೈವೀ ಚೈತನ್ಯವು ಶಿವನ ಜಡೆಯಲ್ಲಿದ್ದ ಗಂಗೆ ಧುಮ್ಮಿಕ್ಕುವಂತೆ ಬಸವಣ್ಣನವರ ಸೂಕ್ಷ್ಮ ನಾಡಿಗಳಲ್ಲೆಲ್ಲ ಧುಮುಕಿ, ಅವರನ್ನು ಅಡಿಯಿಂದ ಮುಡಿಯವರೆಗೆ ಶಿವಮಯವನ್ನಾಗಿಸಿತು. ಅವರ ವ್ಯಕ್ತಿತ್ವವು ಈ ದೈವೀ ಚೈತನ್ಯದಿಂದ ತುಂಬಿಕೊಂಡಿತು.
ಎರಡನೆಯ ನುಡಿಯಲ್ಲಿ ಬಸವಣ್ಣನವರ ಈ ಮಹಾಚೈತನ್ಯವು ಯಾವ ರೀತಿಯಲ್ಲಿ ಜನರನ್ನು, ಶರಣರನ್ನು ಪ್ರಭಾವಿಸುತ್ತಿತ್ತು ಎನ್ನುವದನ್ನು ಹೇಳಲಾಗಿದೆ:
ಹೂವಿಗಿರುವ ಕಂಪು ಇತ್ತ
ಹಾಡಿಗಿರುವ ಇಂಪು ಇತ್ತ
ಜೀವದ ಮಾತು ಕಟ್ಟಿಧಾಂಗ
ಎದ್ಯಾಗ ನಟ್ಟಿತ್ತ
ವರ್ಮದ ಮಾತು ಆಡಿಧಾಂಗ
ಮರ್ಮಕ ಮುಟ್ಟಿತ್ತ
ಬೆಳಕಿಗೆ ಮರಳಿ ಕಮಲವರಳಿ
ಜೇನ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು || ತುಮ್ ತುಮ್……
ಬೆಳಕು, ಗಾಳಿ ಹಾಗೂ ಗಂಗೆ ಇವು ನಕಾರಾತ್ಮಕ ಗುಣಗಳನ್ನು ನಿವಾರಿಸುತ್ತವೆ. ಅಷ್ಟಾದರೆ ಸಾಕೆ? ಸಕಾರಾತ್ಮಕ ಗುಣಗಳೂ ಸಹ ಬೇಕಲ್ಲವೆ? ಎರಡನೆಯ ನುಡಿಯಲ್ಲಿ ಬಸವಣ್ಣನವರ ಆಚಾರ-ವಿಚಾರಗಳು ಜನರನ್ನು ಸಕಾರಾತ್ಮಕವಾಗಿ ಪ್ರಭಾವಿಸುವ ರೀತಿಯನ್ನು ಹೇಳಲಾಗಿದೆ. ಹೂವಿನ ಕಂಪಿನಂತೆ, ಹಾಡಿನ ಇಂಪಿನಂತೆ ಅವರ ಆಚಾರ-ವಿಚಾರಗಳು ಜನರನ್ನು ಪ್ರಭಾವಿಸುತ್ತಿದ್ದವು.
ಅವರ ಮಾತುಗಳು ಕಾಲಹರಣದ ಮಾತುಗಳಾಗಲೀ, ಮನೋರಂಜನೆಯ ಮಾತುಗಳಾಗಲೀ ಆಗಿರಲಿಲ್ಲ. (‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎನ್ನುವ ವಚನವನ್ನು ನೆನಪಿಸಿಕೊಳ್ಳಿರಿ.) ಹೃದಯದ ಒಳಗಿಂದ ಹೊರಬರುವ ನೈಜವಾದ ಮಾತುಗಳು ಅವು. ಹೀಗಾಗಿ ಅವು ಕೇಳುಗರ ಮನಕ್ಕೆ ತಟ್ಟುತ್ತಿದ್ದವು. ಹೂವಿನ ಕಂಪಿನಂತೆ ಹಾಗೂ ಹಾಡಿನ ಇಂಪಿನಂತೆ ಅವರ ಮಾತುಗಳು ಮನಸ್ಸನ್ನು ಉಲ್ಲಾಸಗೊಳಿಸುತ್ತಿದ್ದವು, ಅರಳಿಸುತ್ತಿದ್ದವು. ಬಸವಣ್ಣನವರೇ ಹೇಳಿದಂತೆ, ಅವರ ವಚನಗಳಲ್ಲಿ ನಾಮಾಮೃತ ತುಂಬಿದೆ, ಈ ಅಮೃತಪಾನ ಮಾಡುವ ತುಂಬಿ ಅವರು. ಈ ವಚನಗಳ ಕಂಪು ಹಾಗೂ ಇಂಪು ಎಲ್ಲೆಡೆ ಹರಡಿವೆ, ತುಂಬಿಕೊಂಡಿವೆ.
ಈ ನುಡಿಯಲ್ಲಿಯ ಒಂದು ಸಾಲು, “ವರ್ಮದ ಮಾತು ಆಡಿಧಾಂಗ ಮರ್ಮಕ ಮುಟ್ಟಿತ್ತ” ಎನ್ನುವದು ವಿಚಿತ್ರವಾಗಿ ತೋರಬಹುದು. ವರ್ಮ ಎಂದರೆ ವಿರೋಧ ಹಾಗೂ ದ್ವೇಷ. ಬಸವಣ್ಣನವರು ಇಂತಹ ಮಾತುಗಳನ್ನು ಆಡಬಹುದೆ ಎನ್ನುವ ಸಂಶಯ ಬರಬಹುದು. ಆದರೆ ಇಂತಹ ಮಾತುಗಳು ತಪ್ಪು ನಡತೆಯವರಿಗಾಗಿ ಇರುತ್ತಿದ್ದವು.
ಉದಾಹರಣೆಗಾಗಿ:
(೧) ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಅನ್ಯರಿಗೆ ಅಸಹ್ಯಪಡಬೇಡ………………………
(೨) ಛಲ ಬೇಕು ಶರಣಂಗೆ ಪರಧನವನೊಲೆನೆಂಬ,
ಛಲ ಬೇಕು ಶರಣಂಗೆ ಪರಸತಿಯನೊಲೆನೆಂಬ……
ಈ ವಚನಗಳು ತಪ್ಪುಗಾರರ ಎದೆಗೆ ನಟ್ಟರೆ ಆಶ್ಚರ್ಯವಿಲ್ಲ.
ಬೆಳಕಿಗೆ ಮುಖ ಮಾಡಿದ ಕಮಲವು ಅರಳಿರುವಂತೆ ಅವರದು ಜ್ಞಾನಸೂರ್ಯನಿಂದ ಅರಳಿದಂತಹ ಮನಸ್ಸು. ಆ ಕಮಲದಲ್ಲಿರುವದು ಉತ್ತಮ ವಿಚಾರ ಹಾಗೂ ಆಚಾರಗಳ ಜೇನು. ಅವರು ಸಮಾಜಕ್ಕೆ ಕೊಡುವದು ಇಂತಹ ಜೇನನ್ನು. ಈ ಪರಿಶುದ್ಧ ಆಚಾರ-ವಿಚಾರಗಳ ಇಂಪು, ಕಂಪು ಹಾಗೂ ಜೇನು ಬಸವಣ್ಣನವರ ವ್ಯಕ್ತಿತ್ವವನ್ನೆಲ್ಲ ತುಂಬಿ ಹೊರಸೂಸಿದ್ದವು ಎಂದು ಜಂಗಮನು ಹೇಳುತ್ತಿದ್ದಾನೆ.
ಮೂರನೆಯ ನುಡಿಯಲ್ಲಿ, ಬಸವಣ್ಣನವರ ಕೊನೆಯನ್ನು ವರ್ಣಿಸಲಾಗಿದೆ.
ಕಾಲದ್ಹಾಂಗ ಕಪ್ಪಗಿತ್ತ
ಸಾವಿನ್ಹಾಂಗ ತೆಪ್ಪಗಿತ್ತ
ಹದ್ದು ಬಂದು ಹಾವಿನ ಮ್ಯಾಲೆ
ಎರಗಿದಂತಿತ್ತ
ಇರುಳು ಮಬ್ಬಿನ್ಯಾಗ ಹಗಲಿನ ಬೆಳಕು
ಕರಗಿದಂತಿತ್ತ
ಗುಂಗು ಹಿಡಿದು ತಂಗಿದಾಗ
ತುಂಬಿ ನಿಂತಿತ್ತ ಈಗ
ತುಳಿಕಿ ಹೋಗಿತ್ತ
ತಂಗೀ ತುಂಬಿ ಬಂದಿತ್ತು || ತುಮ್ ತುಮ್……
ಬಸವಣ್ಣನವರ ಕೊನೆಯದಿನಗಳು ಸಾಮಾಜಿಕವಾಗಿ ಭಯಂಕರ ದಿನಗಳು.
ಕಾಲ ಅಂದರೆ ಎಲ್ಲವನ್ನೂ ನಾಶಗೊಳಿಸುವ ಕಾಲಪುರುಷ. ಆತನು ಎಲ್ಲ ಬಣ್ಣಗಳನ್ನೂ ನುಂಗಿಹಾಕುವ ಕಪ್ಪು ಬಣ್ಣದವನು. ಜೀವಿಗಳ ಆಪೋಶನವನ್ನು ಸಾವು ಮೌನವಾಗಿ ತೆಗೆದುಕೊಳ್ಳುತ್ತದೆ. ಆದುದರಿಂದ ’ಕಾಲಧಾಂಗ ಕಪ್ಪಗಿತ್ತ, ಸಾವಿನ್ಹಾಂಗ ತೆಪ್ಪಗಿತ್ತ’ ಎಂದು ಜಂಗಮನು ಹೇಳುತ್ತಿದ್ದಾನೆ. ಬಸವಣ್ಣನವರ ಕೊನೆಯ ದಿನಗಳಲ್ಲಿ ನಡೆದ ಸಾಮಾಜಿಕ ವಿಪ್ಲವವು ’ಹದ್ದು ಹಾವಿನ ಮೇಲೆ ಎರಗುವಂತೆ’ ಕ್ರೂರವೂ, ಕ್ಷಿಪ್ರವೂ ಆಗಿತ್ತು!
ಸಮಾಜದ ಮೇಲೆ ಮತ್ತೆ ಕತ್ತಲೆ ಆವರಿಸಿತು. ಸುಧಾರಣೆಯ ಹಗಲಿನ ಬೆಳಕು ವಿಪ್ಲವದ ಇರುಳಿನ ಮಬ್ಬಿನಲ್ಲಿ ಮತ್ತೆ ಕರಗಿತು! (ಇರುಳು ಶಾಶ್ವತವಲ್ಲ ಎನ್ನುವ ತಿಳಿವಳಿಕೆ ಇಲ್ಲಿ ಮನೋಗತವಾಗಿದೆ.)
ಸಾಮಾಜಿಕ ಹಾಗು ಆಧ್ಯಾತ್ಮಿಕ ಸುಧಾರಣೆಯಲ್ಲಿ ಬಸವಣ್ಣನವರು ಒಂದೇ ಮನಸ್ಸಿನಿಂದ ನಿರತರಾಗಿದ್ದರು. ಈ ಕ್ರಿಯೆಯನ್ನು ‘ಗುಂಗು ಹಿಡಿದು ತಂಗಿದಾಗ’ ಎಂದು ಬಣ್ಣಿಸಲಾಗಿದೆ. ಗುಂಗಿ ಹುಳವು ಅಂದರೆ ಭ್ರಮರವು ಒಂದೇ ಧ್ವನಿಯನ್ನು ಹೊರಡಿಸುತ್ತ ಹಾರುತ್ತಿರುತ್ತದೆ. ಬಸವಣ್ಣನವರದೂ ಸಹ ಅದರಂತೇ ಒಂದೇ ಧ್ವನಿ. ಅದು ಶಿವಾಚಾರದ ಧ್ವನಿ. ಶಿವಾಚಾರವನ್ನು ತುಂಬಿಕೊಂಡ ಅವರ ವ್ಯಕ್ತಿತ್ವವು ತುಂಬಿದ ಕೊಡವಾಗಿತ್ತು. ಆ ತುಂಬಿದ ಚೈತನ್ಯಜಲ ವಿಪ್ಲವ ಸಮಯದಲ್ಲಿ ತುಳುಕಿ ಹೋಯಿತು.
ಈ ಮೂರೂ ನುಡಿಗಳಲ್ಲಿ ಕೊನೆಯ ಚರಣವಾಗಿ ‘ತುಂಬಿ ಬಂದಿತ್ತು’ ಎನ್ನುವ ಪಲ್ಲವಿಯನ್ನು ಬಳಸಲಾಗಿದೆ.
ಮೊದಲನೆಯ ನುಡಿಯು ಬಸವಣ್ಣನವರ ವ್ಯಕ್ತಿತ್ವವನ್ನು ವರ್ಣಿಸುವದರಿಂದ, ಅಲ್ಲಿ ‘ತುಂಬಿ ಬಂದಿತ್ತು’ ಎನ್ನುವದು ಅವರ ಪರಿಪೂರ್ಣತೆಯನ್ನು ತೋರಿಸುತ್ತದೆ.
ಎರಡನೆಯ ನುಡಿಯಲ್ಲಿ ಈ ಪರಿಪೂರ್ಣ ವ್ಯಕ್ತಿತ್ವವು ಸಾಮಾಜಿಕ ಕಾರ್ಯದಲ್ಲಿ ತುಂಬಿಕೊಂಡಿರುವದನ್ನು ತೋರಿಸುತ್ತದೆ.
ಮೂರನೆಯ ನುಡಿಯಲ್ಲಿ ತುಂಬಿ ಎನ್ನುವದು ಭ್ರಮರವನ್ನು ಹಾಗೂ ‘ತುಂಬಿ ಬಂದಿತ್ತು’ ಎನ್ನುವದು ‘ಕಾಲವು ತುಂಬಿ ಬಂದಿತ್ತು’ ಎನ್ನುವದನ್ನು ಸೂಚಿಸುತ್ತದೆ.
ಕಾಡಬೆಳದಿಂಗಳಿನ ಗೋದಾವರಿಯವರು ತಮ್ಮ ಪ್ರತಿಕ್ರಿಯೆಯಲ್ಲಿಈ ಕವನದಲ್ಲಿಯ ವಿಶೇಷ ಗೂಢಾರ್ಥವನ್ನು ಈ ರೀತಿ ತಿಳಿಸಿದ್ದಾರೆ:
ಬಸವಣ್ಣನು ವ್ಯಕ್ತಿಯಲ್ಲ, ಒಂದು ಅಭಿವ್ಯಕ್ತಿ ಅಲ್ಲವೇ?
"ಬೆಳಕಿಗಿಂತ ಬೆಳ್ಳಗೆ ಇತ್ತ
ಗಾಳಿಗಿಂತ ತೆಳ್ಳಗೆ ಇತ್ತ" ಎನ್ನುತ್ತಾ ಬಸವಣ್ಣ ಎಂಬ ಶಕ್ತಿ ದೇಶಕಾಲಗಳನ್ನು ಮೀರಿದ ಬಗೆಗೆ (ಬೇಂದ್ರೆಯವರು) ಹೇಳುತ್ತಾರೆ..
ಅಂತೆಯೇ ಕೊನೆಯಲ್ಲಿ
"ಕಾಲದ್ಹಾಂಗ ಕಪ್ಪಗಿತ್ತ
ಸಾವಿನ್ಹಾಂಗ ತೆಪ್ಪಗಿತ್ತ" ಎಂದು ಕಾಲದ ದುರ್ನಿರೀಕ್ಷ್ಯವನ್ನೂ ಹೇಳುತ್ತಾರೆ..
ಆರಂಭ ಬೆಳಕಿನಂತೆ, ಜಟೆಯಿಂದ ಇಳಿವ ಗಂಗೆಯಂತೆ ಚುರುಕು.. ಆದರೆ ಅಂತ್ಯದಲ್ಲಿ ಬೆಳಕು ಕರಗಿದಂತೆ ಈ ಚಟುವಟಿಕೆಗಳೆಲ್ಲ ಕಳೆದು ತೆಪ್ಪಗಾಗಿ ಹೋಗುತ್ತದೆ!!!
.................................................
ಬೇಂದ್ರೆಯವರ ಕವನಗಳು ತಮ್ಮ ಗುಟ್ಟುಗಳನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವದಿಲ್ಲ, ಅಲ್ಲವೆ? ಗೋದಾವರಿಯವರಿಗೆ ಧನ್ಯವಾದಗಳು.
೨. ಬೆಕ್ಕು ಹಾರುತಿದೆ ನೋಡಿದಿರಾ?
ಹೆಚ್ಚಿನ ಓದಿಗೆ: http://sallaap.blogspot.com/2009/07/blog-post_12.html
ಬೇಂದ್ರೆಯವರ ಪ್ರತಿಭೆ ಕೇವಲ ಗಂಭೀರ ಸಾಹಿತ್ಯಕ್ಕೆ ಮಾತ್ರ ಮೀಸಲಾಗಿರಲಿಲ್ಲ. ವಿನೋದಸಾಹಿತ್ಯದಲ್ಲೂ ಅವರು ಕುಶಲರೇ. ಅವರ ಅಣಕುವಾಡುಗಳು ಹಾಗೂ ಅವರ ‘ಸಾಯೋ ಆಟ’ ನಾಟಕವು ಅವರ ಈ ಪ್ರತಿಭೆಗೆ ಉದಾಹರಣೆಗಳಾಗಿವೆ.
‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನವನ್ನು ಬರೆದು, ಹಾಡಿ, ಕನ್ನಡಿಗರನ್ನು ಮೋಡಿ ಮಾಡಿದ ಬೇಂದ್ರೆಯವರು ಇದೇ ಹಾಡನ್ನು ಅಣಗಿಸಿ ‘ಬೆಕ್ಕು ಹಾರುತಿದೆ ನೋಡಿದಿರಾ?’ ಎನ್ನುವ ಕವನವನ್ನು ಬರೆದರು. ಇಂತಹ ಕವನಗಳಿಗೆ ‘ಅಣಕುವಾಡು’ ಎಂದು ಕರೆದರು. ‘ಒರದಾ ತಗಣಿ ಒರದಾ’ ಎನ್ನುವದು ಅವರ ಇನ್ನೊಂದು ಅಣಕುವಾಡು. ಇದು ‘ವರದಾ ಕಂಚಿ ವರದಾ’ ಎನ್ನುವ ದಾಸರ ಹಾಡಿನ ಮೇಲೆ ರೂಪಿತವಾಗಿದೆ.
‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನವನ್ನು ಓದಿದಾಗ, ಬೇಂದ್ರೆಯವರ ವೈನೋದಿಕ ಕಲ್ಪನಾಸಾಮರ್ಥ್ಯದ ಅರಿವಾಗುವದು. ‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನದಲ್ಲಿ ಆಟವಾಡಿದ ಕಲ್ಪನೆಯೇ ಈ ಕವನದಲ್ಲಿಯೂ ಆಟವಾಡಿದೆ. ಭಾಷೆ, ಛಂದಸ್ಸು ಎಲ್ಲವೂ ಮೂಲಕವನದ ಅನುಕರಣೆಗಳು. ಅಲ್ಲದೆ, ಪ್ರತಿಯೊಂದು ಸಾಲಿನಲ್ಲಿಯೂ ಮೂಲಕವನದ ಅಣಕನ್ನು ಕಾಣಬಹುದು.
‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನದ ಪೂರ್ತಿಪಾಠ ಹೀಗಿದೆ:
ಈರುಳ್ಳ್ಯುರುಳಲು ಮಾಡವು ಬೆಳಗೆ
ಅತ್ತಲೆತ್ತಲು ಕತ್ತಲೆಯೊಳಗೆ
ಯಾವುದ ! ಯಾವುದ ! ಯಾವುದ ಎಂದು
ಕೇಳುವ ಹೇಳುವ ಹೊತ್ತಿನ ಒಳಗೆ
ಬೆಕ್ಕು ಹಾರುತಿದೆ ನೋಡಿದಿರಾ? ||೧||
ಕರಿ-ನೆರೆ ಬಣ್ಣದ ಮೊಸಡೆಯ ಗಂಟು
ಬಿಳಿ-ಹೊಳೆ ಬಣ್ಣದ ಮೀಸೆಗಳೆಂಟು
ಹಚ್ಚನ ಬೆಚ್ಚನ ಪಚ್ಚೆಯ ಪೈರಿನ
ಬಣ್ಣದ ಕಣ್ಣು ಕಿವಿ ಬದಿಗುಂಟು
ಬೆಕ್ಕು ಹಾರುತಿದೆ ನೋಡಿದಿರಾ? ||೨||
ಕಾಡಿಗೆಗಿಂತಲು ಕಪ್ಪೋ ಬಣ್ಣಾ
ಕತ್ತಲಕೇ ಕಾಲೊಡೆದವೊ ಅಣ್ಣಾ
ಕೂದಲ ಕೂದಲ ನಿಗುರಿಸಿಕೊಂಡು
ಸೂರ್ಯ-ಚಂದ್ರರೊಲು ಮಾಡಿದೆ ಕಣ್ಣಾ
ಬೆಕ್ಕು ಹಾರುತಿದೆ ನೋಡಿದಿರಾ? ||೩||
ರಾಜ್ಯದ ಹೆಗ್ಗಣಗಳ ತಾನೊಕ್ಕಿ
ಜೊಂಡಿಗದಾ ಹುಲುಗಡಣವ ಮುಕ್ಕಿ
ಹಾರಿಸಿ ಹೇಂಟೆಯ ಹಿಂಡುಹಿಂಡುಗಳ
ಜಂಭದ ಕೋಳಿಯ ನೆತ್ತಿಯ ಕುಕ್ಕಿ
ಬೆಕ್ಕು ಹಾರುತಿದೆ ನೋಡಿದಿರಾ? ||೪||
ಹಾಲಿನ ಗಡಿಗೆಯ ತಳವನು ಒರಸಿ
ಮೊಸರಿನ ಮಡಿಕೆಯ ಮುಚ್ಚಳ ಸರಿಸಿ
ಉರುಳಿಸಿ ಹೊರಳಿಸಿ ಭಾಂಡ ಭಾಂಡಗಳ
ಬಿಸಿ ಹಾಲಲಿ ತುಸು ಮಜ್ಜಿಗೆ ಬೆರಸಿ
ಬೆಕ್ಕು ಹಾರುತಿದೆ ನೋಡಿದಿರಾ? ||೫||
ಇಲಿಗಳು ಬೆಳ್ಳಗೆ ಇದ್ದರು ಬಿಡದು
ಬೆಳ್ಳಗಿದ್ದದನು ಕುಡಿದೂ ಕುಡಿದೂ
ನೋಡಿ ಚಂದ್ರನನು ಬೆಣ್ಣೆಯದೆಂದೊ
ಮುಗಿಲಿನಂಗಳಕೆ ಸಿಟ್ಟನೆ ಸಿಡಿದು
ಬೆಕ್ಕು ಹಾರುತಿದೆ ನೋಡಿದಿರಾ? ||೬||
ಹಿಂದಕೆ ಮುಂದಕೆ ಚಾಚಿದೆ ಕಾಲ
ಉಬ್ಬಿಸೆಬ್ಬಿಸಿದೆ ಜೊಂಡಿನ ಬಾಲ
ಬೆಳುದಿಂಗಳ ಹಾಲೆನೆ ತಿಳುಕೊಂಡೊ
ಬಲ್ಲರು ಯಾರಿವರಪ್ಪನ ಸಾಲ!
ಬೆಕ್ಕು ಹಾರುತಿದೆ ನೋಡಿದಿರಾ? ||೭||
…………………………………………………………….
‘ಹಕ್ಕಿ ಹಾರುತಿದೆ ನೋಡಿದಿರಾ?’ ಮೂಲಕವನದ ಪೂರ್ತಿಪಾಠ ಹೀಗಿದೆ:
ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ? ||೧||
ಕರಿನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ? ||೨||
ನೀಲಮೇಘಮಂಡಲ-ಸಮ ಬಣ್ಣ !
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ? ||೩||
ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ? ||೪||
ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನೆಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ? ||೫||
ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ? ||೬||
ಮುಟ್ಟಿದೆ ದಿಗ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ? ||೭||
………………………………………………………………………………….................
‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನದ ಮೊದಲ ನುಡಿಯನ್ನು ನೋಡಿರಿ:
ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ? ||೧||
ಈಗ ‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನದ ಮೊದಲ ನುಡಿಯನ್ನು ನೋಡಿರಿ:
ಈರುಳ್ಳ್ಯುರುಳಲು ಮಾಡವು ಬೆಳಗೆ
ಅತ್ತಲೆತ್ತಲು ಕತ್ತಲೆಯೊಳಗೆ
ಯಾವುದ ! ಯಾವುದ ! ಯಾವುದ ಎಂದು
ಕೇಳುವ ಹೇಳುವ ಹೊತ್ತಿನ ಒಳಗೆ
ಬೆಕ್ಕು ಹಾರುತಿದೆ ನೋಡಿದಿರಾ? ||೧||
ಮೂಲಕವನದ ಮೊದಲ ಸಾಲಿನಲ್ಲಿ ‘ಇರುಳಿರುಳಳಿದು ದಿನ ದಿನ ಬೆಳಗೆ’ ಎನ್ನುವ ವಾಕ್ಯವಿದ್ದರೆ, ಅಣಕುಕವನದಲ್ಲಿ ‘ಈರುಳ್ಳ್ಯುರುಳಲು ಮಾಡವು ಬೆಳಗೆ’ ಎನ್ನುವ ಸಾಲಿದೆ.
ಇವೆರಡೂ ಸಾಲುಗಳು ಶ್ರವಣಕ್ಕೆ ಒಂದೇ ತೆರನಾಗಿವೆ. ಆದರೆ ಮೂಲಕವನದ ಸಾಲು ಹಕ್ಕಿಯ ಬೆಳಗಿನ ಹಾರಾಟದೊಂದಿಗೆ ಕಾರ್ಯಾರಂಭ ಮಾಡಿದರೆ, ಅಣಕುವಾಡಿನ ಸಾಲು ಕತ್ತಲೆಯಲ್ಲಿ ಬೆಕ್ಕು ಮಾಡುವ ಹಾರಾಟವನ್ನು ಚಿತ್ರಿಸುತ್ತದೆ.
ಈ ಬೆಕ್ಕು ಮಾಡಕ್ಕೆ ಜಿಗಿದು ಅಲ್ಲಿ ಇಟ್ಟ ಈರುಳ್ಳಿಗಳನ್ನೆಲ್ಲ ಉರುಳಿಸುವದರೊಂದಿಗೆ ಕವನ ಪ್ರಾರಂಭವಾಗುತ್ತದೆ.
ಮೂಲಕವನದ ಮುಂದಿನ ಸಾಲುಗಳಲ್ಲಿ
‘ಗಾವುದ ಗಾವುದ ಗಾವುದ ಮುಂದೆ,
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ ’
ಎನ್ನುವ ವರ್ಣನೆ ಇದ್ದರೆ, ಅಣಕವಾಡಿನಲ್ಲಿ
‘ಯಾವುದ ! ಯಾವುದ ! ಯಾವುದ ಎಂದು,
ಕೇಳುವ ಹೇಳುವ ಹೊತ್ತಿನ ಒಳಗೆ’
ಎನ್ನುವ ವರ್ಣನೆ ಇದೆ.
ಈ ರೀತಿಯಾಗಿ, ಬೇಂದ್ರೆ ಮೂಲಕವನದ ಸಾಲುಗಳ alliteration ಅನ್ನು ಅಣಕುವಾಡಿನಲ್ಲಿ ಅನುಸರಿಸಿದ್ದಾರೆ.
ಮೂಲಕವನವದ ಎರಡನೆಯ ನುಡಿಯಲ್ಲಿ ಹಕ್ಕಿಯ ಗರಿಗಳನ್ನು ವರ್ಣಿಸಲಾಗಿದೆ:
ಕರಿನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ? ||೨||
ಅಣಕುವಾಡಿನಲ್ಲಿ ಬೆಕ್ಕಿನ ಮುಖವರ್ಣನೆ ಇದೆ.
ಕರಿ-ನೆರೆ ಬಣ್ಣದ ಮೊಸಡೆಯ ಗಂಟು
ಬಿಳಿ-ಹೊಳೆ ಬಣ್ಣದ ಮೀಸೆಗಳೆಂಟು
ಹಚ್ಚನ ಬೆಚ್ಚನ ಪಚ್ಚೆಯ ಪೈರಿನ
ಬಣ್ಣದ ಕಣ್ಣು ಕಿವಿ ಬದಿಗುಂಟು
ಬೆಕ್ಕು ಹಾರುತಿದೆ ನೋಡಿದಿರಾ? ||೨||
ಮೂಲಕವನದ ಮೂರನೆಯ ನುಡಿ ಹೀಗಿದೆ:
ನೀಲಮೇಘಮಂಡಲ-ಸಮ ಬಣ್ಣ !
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ? ||೩||
ಅಣಕುವಾಡಿನ ಮೂರನೆಯ ನುಡಿಯೂ ಸಹ ಬೆಕ್ಕಿನ ಬಣ್ಣದ ಬಣ್ಣನೆಯನ್ನು ಮಾಡುತ್ತದೆ.
ಕಾಡಿಗೆಗಿಂತಲು ಕಪ್ಪೋ ಬಣ್ಣಾ
ಕತ್ತಲಕೇ ಕಾಲೊಡೆದವೊ ಅಣ್ಣಾ
ಕೂದಲ ಕೂದಲ ನಿಗುರಿಸಿಕೊಂಡು
ಸೂರ್ಯ-ಚಂದ್ರರೊಲು ಮಾಡಿದೆ ಕಣ್ಣಾ
ಬೆಕ್ಕು ಹಾರುತಿದೆ ನೋಡಿದಿರಾ? ||೩||
ಮೂಲಕವನದಲ್ಲಿ ಹಕ್ಕಿಗೆ ಮಾಡಲಾದ ವರ್ಣನೆಯ ಸಮಾಂತರ ವರ್ಣನೆ ಅಣಕುವಾಡಿನಲ್ಲಿಯೂ ಇದೆ. ಅಲ್ಲದೆ ‘ಕತ್ತಲಕೇ ಕಾಲೊಡೆದವೊ ಅಣ್ಣಾ’
ಎನ್ನುವ ಸಾಲು ನಗುವನ್ನು ಉಕ್ಕಿಸುತ್ತದೆ.
ಮೂಲಕವನದ ನಾಲ್ಕನೆಯ ನುಡಿ ಕಾಲಪಕ್ಷಿಯ ಗಂಭೀರ-ಭಯಂಕರ ಕಾರ್ಯವನ್ನು ವರ್ಣಿಸುತ್ತದೆ:
ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ? ||೪||
ಅಣಕುವಾಡಿನಲ್ಲಿ ಬೆಕ್ಕು ಮಾಡುವ ಭಯಂಕರ ಕಾರ್ಯ(!)ಗಳ ವರ್ಣನೆ ಇದೆ:
ರಾಜ್ಯದ ಹೆಗ್ಗಣಗಳ ತಾನೊಕ್ಕಿ
ಜೊಂಡಿಗದಾ ಹುಲುಗಡಣವ ಮುಕ್ಕಿ
ಹಾರಿಸಿ ಹೇಂಟೆಯ ಹಿಂಡುಹಿಂಡುಗಳ
ಜಂಭದ ಕೋಳಿಯ ನೆತ್ತಿಯ ಕುಕ್ಕಿ
ಬೆಕ್ಕು ಹಾರುತಿದೆ ನೋಡಿದಿರಾ? ||೪||
ಕಾಲಪಕ್ಷಿ ಹಾಗೂ ಬೆಕ್ಕು ಇವುಗಳ ಘನತೆ ಬೇರೆಯಾಗಿರಬಹುದು. ಇವುಗಳ ಕಾರ್ಯರಂಗಗಳು ಬೇರೆಯಾಗಿರಬಹುದು. ಬೆಕ್ಕು ಮಾಡುವ ಕಾರ್ಯ ಹಾಸ್ಯವಾಗಿ ಕಾಣಲೂಬಹುದು. ಆದರೆ ಈ ಎರಡೂ ಕಾರ್ಯಗಳಲ್ಲಿಯ ಅಂತರಂಗ ಒಂದೇ ಆಗಿದೆ:
King or Cock, they meet their end!
ಸಮಾಂತರವಾಗಿ ಚಲಿಸುತ್ತಿದ್ದ ಈ ಎರಡೂ ಕವನಗಳು ಇನ್ನು ಮುಂದಿನ ನುಡಿಗಳಲ್ಲಿ ಸ್ವಲ್ಪ ಬೇರೆಯಾಗಿ ಸಾಗುತ್ತವೆ.
ಮೂಲಕವನದ ಐದನೆಯ ನುಡಿ ಹೀಗಿದೆ:
ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನೆಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ? ||೫||
ಮೂಲಕವನವು ಇಲ್ಲಿ ಶುಭ ಕೋರುವ ಕಾಲಪಕ್ಷಿಯಾಗಿದೆ. ಆದರೆ ಬೆಕ್ಕು ಮಾತ್ರ ತನ್ನ ಚಾಳಿಯನ್ನು ಬಿಡದು:
ಹಾಲಿನ ಗಡಿಗೆಯ ತಳವನು ಒರಸಿ
ಮೊಸರಿನ ಮಡಿಕೆಯ ಮುಚ್ಚಳ ಸರಿಸಿ
ಉರುಳಿಸಿ ಹೊರಳಿಸಿ ಭಾಂಡ ಭಾಂಡಗಳ
ಬಿಸಿ ಹಾಲಲಿ ತುಸು ಮಜ್ಜಿಗೆ ಬೆರಸಿ
ಬೆಕ್ಕು ಹಾರುತಿದೆ ನೋಡಿದಿರಾ? ||೫||
ಹಾಲಿನ ಗಡಿಗೆಯನ್ನು ಸ್ವಚ್ಛ ಮಾಡುವ ಈ ಬೆಕ್ಕು ಮೊಸರನ್ನೂ ಸಹ ನೆಕ್ಕುತ್ತದೆ. ಅಲ್ಲಿರುವ ಪಾತ್ರೆಗಳನ್ನೆಲ್ಲ ಉರುಳಿಸುತ್ತದೆ. ಇಷ್ಟಕ್ಕೆ ಇದರ ಕಿಡಿಗೇಡಿತನ ನಿಲ್ಲುವದಿಲ್ಲ. ಮನೆಯವರು ತೆಗೆದಿಟ್ಟ ಬಿಸಿ ಹಾಲಿನಲ್ಲಿ ತುಸು ಮಜ್ಜಿಗೆ ಬೆರಸಿಬಿಡುತ್ತದೆ. ಬೇಂದ್ರೆಯವರ ವಿನೋದಸೃಷ್ಟಿಗೆ ಈ ಸಾಲು ಅತ್ಯುತ್ತಮ ಉದಾಹರಣೆಯಾಗಿದೆ.
ಆರನೆಯ ನುಡಿಗಳಲ್ಲಿ ರಚನಾ ಸಾದೃಶ್ಯವಿದೆ.
ಮೂಲಕವನ ಹೀಗಿದೆ:
ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ? ||೬||
ಅಣಕುವಾಡು ಹೀಗಿದೆ:
ಇಲಿಗಳು ಬೆಳ್ಳಗೆ ಇದ್ದರು ಬಿಡದು
ಬೆಳ್ಳಗಿದ್ದದನು ಕುಡಿದೂ ಕುಡಿದೂ
ನೋಡಿ ಚಂದ್ರನನು ಬೆಣ್ಣೆಯದೆಂದೊ
ಮುಗಿಲಿನಂಗಳಕೆ ಸಿಟ್ಟನೆ ಸಿಡಿದು
ಬೆಕ್ಕು ಹಾರುತಿದೆ ನೋಡಿದಿರಾ? ||೬||
ಕಾಲಪಕ್ಷಿ ಮುಗಿಲಿನಲ್ಲಿ ಹಾರಾಡಿದರೆ, ಈ ಬೆಕ್ಕು ತಾನೂ ಸಹ ಮುಗಿಲಿನಲ್ಲಿರುವ ಚಂದ್ರನನ್ನು ಹಿಡಿಯಲು ಜಿಗಿಯುತ್ತದೆ, ಬೆಣ್ಣೆಯೆಂದು ತಿಳಿದು!
ಮೂಲಕವನದ ಏಳನೆಯ ನುಡಿಯಲ್ಲಿ ಕಾಲಪಕ್ಷಿಯ ಭವಿಷ್ಯತ್ ಯೋಜನೆಗಳ ಹೊಳಹು ಇದೆ:
ಮುಟ್ಟಿದೆ ದಿಗ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ? ||೭||
ಅಣಕುವಾಡಿನಲ್ಲಿಯೂ ಸಹ ಬೆಕ್ಕು ತನ್ನ ಭವಿಷ್ಯದ ಕಾರ್ಯಗಳಿಗಾಗಿ ಹೊಂಚಿ ನಿಂತಿರುವ ವರ್ಣನೆ ಇದೆ:
ಹಿಂದಕೆ ಮುಂದಕೆ ಚಾಚಿದೆ ಕಾಲ
ಉಬ್ಬಿಸೆಬ್ಬಿಸಿದೆ ಜೊಂಡಿನ ಬಾಲ
ಬೆಳುದಿಂಗಳ ಹಾಲೆನೆ ತಿಳುಕೊಂಡೊ
ಬಲ್ಲರು ಯಾರಿವರಪ್ಪನ ಸಾಲ!
ಬೆಕ್ಕು ಹಾರುತಿದೆ ನೋಡಿದಿರಾ? ||೭||
ಈ ರೀತಿಯಾಗಿ ಮೂಲಕವನದ ತದ್ವತ್ ಅನುಕರಣೆಯನ್ನು ಈ ಅಣಕುವಾಡು ಮಾಡುತ್ತದೆ.
ಮೂಲಕವನವು ಬೇಂದ್ರೆಯವರ ದಾರ್ಶನಿಕ ಪ್ರತಿಭೆಯನ್ನು ತೋರಿಸಿದರೆ, ಅಣಕುವಾಡು ಅವರ ವಿನೋದಸೃಷ್ಟಿಯ ಪ್ರತಿಭೆಯನ್ನು ತೋರಿಸುತ್ತದೆ. ಆದರೆ, ಈ ಎರಡೂ ರಚನೆಗಳಲ್ಲಿ ಕಂಡುಬರುವ ಕಾವ್ಯರಚನಾ ಕೌಶಲ್ಯವು ಅಪ್ರತಿಮವಾಗಿದೆ.
‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನವನ್ನು ಸ್ವತಂತ್ರ ಕವನವೆಂದು ಓದಿದರೂ ಸಹ , ಇದು ಅಷ್ಟೇ ಸ್ವಾರಸ್ಯಪೂರ್ಣವಾದ ಕವನವಾಗಿದೆ.
೩. ವಸಂತಮುಖ
ಹೆಚ್ಚಿನ ಓದಿಗೆ: http://sallaap.blogspot.com/2010/07/blog-post_25.html
ಬೇಂದ್ರೆಯವರು ಬರೆದ ‘ವಸಂತಮುಖ’ ಕವನವನ್ನು ಕವಿಗಳ ಕೈಪಿಡಿ ಎಂದು ಬಣ್ಣಿಸಬಹುದು.
ಕವನ ಇಲ್ಲಿದೆ:
೧
ಉದಿತ ದಿನ! ಮುದಿತ ವನ
ವಿಧವಿಧ ವಿಹಗಸ್ವನ
ಇದುವೆ ಜೀವ, ಇದು ಜೀವನ
ಪವನದಂತೆ ಪಾವನ
೨
ಏನೊ ವಿಧ! ಏನೊ ಹದ
ಗಾಳಿಗೊಡೆದ ಬುದ್ಬುದ
ಬೆಳಕೆ ಬದುಕು ಎಂಬ ಮುದ
ಜೀವ ಹೊಮ್ಮಿ ಚಿಮ್ಮಿದ
೩
ನೂರು ಮರ! ನೂರು ಸ್ವರ
ಒಂದೊಂದು ಅತಿ ಮಧುರ
ಬಂಧವಿರದೆ ಬಂಧುರ
ಸ್ವಚ್ಛಂದ ಸುಂದರ
ಬೇಂದ್ರೆಯವರಿಗೆ ಪ್ರಕೃತಿಯು ಕೇವಲ ದೃಶ್ಯವೈಭವವಲ್ಲ. ಅವರ ಪಾಲಿಗೆ ಅದು ಸಜೀವವಾದ ಚೈತನ್ಯದ ಚಿಲುಮೆ. ಪ್ರಕೃತಿಯ ಚಟುವಟಿಕೆಗಳಿಗೆ ಪ್ರೇರಣೆ ಕೊಡುವ ‘ಬೆಳಗು’ ಆಗಲೀ, ದಣಿದ ಜೀವಿಗಳನ್ನು ಮಡಿಲಲ್ಲಿ ಮಲಗಿಸಿ, ಮುದ್ದಿಸುವ ಬೆಳದಿಂಗಳೇ ಆಗಲಿ ಅಥವಾ ರಾವಣನಂತೆ ಕುಣಿಯುವ ಶ್ರಾವಣವೇ ಆಗಲಿ, ಇವೆಲ್ಲ ಬೇಂದ್ರೆಯವರ ಪಾಲಿಗೆ ನಿಸರ್ಗದ ಸಜೀವ ಚೇತನಗಳು. ಅಷ್ಟೇ ಏಕೆ, ಒಂದು ಹೂತ ಹುಣಿಸೆಯ ಮರವೂ ಸಹ ಬೇಂದ್ರೆಯವರಿಗೆ ಬದುಕಿನ ಸಜೀವ ಭಾಗವೇ ಆಗಿದೆ. ಈ ಮನೋಧರ್ಮದ ಪರಾಕಾಷ್ಠೆಯನ್ನು ನಾವು ‘ವಸಂತಮುಖ’ ಕವನದಲ್ಲಿ ನೋಡಬಹುದು.
ವಸಂತ ಋತುವಿನ ಒಂದು ಉಷಃಕಾಲದಲ್ಲಿ ಕವಿ ಅನುಭವಿಸಿದ ಆನಂದವನ್ನು ‘ವಸಂತಮುಖ’ ಕವನವು ವರ್ಣಿಸುತ್ತದೆ. ಕನ್ನಡ ಕವಿಗಳು ಸೂರ್ಯೋದಯದ ಸಮಯದಲ್ಲಿ ತಾವು ಅನುಭವಿಸಿದ ಆನಂದದ ಬಗೆಗೆ ಅನೇಕ ಕವನಗಳನ್ನು ಬರೆದಿದ್ದಾರೆ. ಸಾಮಾನ್ಯವಾಗಿ ಈ ಕವನಗಳಲ್ಲಿ ಸೂರ್ಯೋದಯ ಸಮಯದ ನಿಸರ್ಗಸೌಂದರ್ಯದ ವರ್ಣನೆಯೇ ಪ್ರಧಾನವಾಗಿದೆ. ಬೇಂದ್ರೆಯವರೇ ಬರೆದ ಕವನ ‘ಬೆಳಗು’ ಅಂತೂ ಅತಿ ಪ್ರಸಿದ್ಧವಾದ ಕವನವೇ ಹೌದು. ಈ ಕವನದಲ್ಲಿಯೂ ಸಹ ಸೂರ್ಯೋದಯ ಸಮಯದ ಪ್ರಕೃತಿಯ ವೈಭವವನ್ನು ವರ್ಣಿಸಿ, ಕವಿಯು ಅದರಿಂದಾಗಿ ಹೇಗೆ ಆನಂದಪರವಶನಾದನು ಎನ್ನುವ ವರ್ಣನೆ ಇದೆ. ಆದರೆ, ‘ವಸಂತಮುಖ’ ಕವನವು ಹಾಗಿಲ್ಲ. ಈ ಕವನದಲ್ಲಿ ಕವಿಯು ಅಖಿಲ ವಿಶ್ವವೇ ಉಷಃಕಾಲದಲ್ಲಿ ಚೇತನಗೊಂಡು, ಆನಂದಪರವಶವಾದುದರ ದರ್ಶನವಿದೆ. ಕನ್ನಡದಲ್ಲಿ ನಾವು ಕೇಳುವ ಇಂತಹ ಇನ್ನೊಂದೇ ಗೀತೆಯೆಂದರೆ ಪುರಂದರದಾಸರು ಹಾಡಿದ ಕೀರ್ತನೆ.
ಅದರ ಪಲ್ಲ ಹೀಗಿದೆ:
“ರಂಗ ಕೊಳಲನೂದಲಾಗಿ ಮಂಗಳಮಯವಾಯ್ತು ಜ-
ಗಂಗಳು ಚೈತನ್ಯ ಮರೆದು ಅಂಗಪರವಶವಾದವು”
ರಂಗನ ಕೊಳಲಿನ ಸ್ವರದಿಂದ ಅಖಿಲ ಪ್ರಕೃತಿಯೇ ಹೇಗೆ ಸಚೇತನವಾಯ್ತು, ಹೇಗೆ ಆನಂದಪರವಶವಾಯ್ತು ಎಂದು ಪುರಂದರದಾಸರು ಹಾಡಿ, ಕುಣಿದು ಹೇಳುವ ಕೀರ್ತನೆ ಇದು.
ಈಗ ಬೇಂದ್ರೆಯವರ ‘ವಸಂತಮುಖ’ವನ್ನು ನೋಡೋಣ:
(ಮೊದಲ ನುಡಿ:)
ಉದಿತ ದಿನ! ಮುದಿತ ವನ
ವಿಧವಿಧ ವಿಹಗಸ್ವನ
ಇದುವೆ ಜೀವ, ಇದು ಜೀವನ
ಪವನದಂತೆ ಪಾವನ
‘ಉದಿತ ದಿನ’ ಅಂದರೆ, ಇದೀಗ ಬೆಳಕು ಒಡೆದಿದೆ. ಇದು ಉಷ:ಕಾಲ. ಉಷಃಕಾಲದ ಆನಂದವು ಕೇವಲ ಮನುಷ್ಯನಷ್ಟೇ ಅನುಭವಿಸಬಹುದಾದ ಸುಖವಲ್ಲ. ಸುತ್ತಲಿರುವ ವನವೆಲ್ಲ ಸಚೇತನವಾಗಿದೆ, ಉಷಃಕಾಲದಿಂದ ಮುದಗೊಂಡಿದೆ. ವನರಾಜಿಯ ಈ ಆನಂದವು ‘ವನವಾಸಿ’ಗಳಾದ ಹಕ್ಕಿಗಳ ಚಿಲಿಪಿಲಿಯಲ್ಲಿ ಕೇಳಬರುತ್ತಿದೆ. ಇದು ಕಣ್ಣಿಗೆ ಬೀಳುವ ದೃಶ್ಯ ಸೌಂದರ್ಯವಷ್ಟೇ ಅಲ್ಲ, ಕಿವಿಗೆ ಬೀಳುವ ಶ್ರಾವ್ಯ ಸೌಭಾಗ್ಯವೂ ಹೌದು.
ಕೇವಲ ಒಂದು ಹಕ್ಕಿಯ ಸ್ವರ ಇಲ್ಲಿ ಕೇಳಬರುತ್ತಿಲ್ಲ. ಅನೇಕ ವಿಧದ ಹಕ್ಕಿಗಳು ಇಲ್ಲೀಗ ಹಾಡುತ್ತಿವೆ. ಇಲ್ಲಿ ಕೇಳಿಬರುತ್ತಿರುವದು ಈ ಸಾಮುದಾಯಿಕ ಸ್ವರಮೇಳ. ನಿಸರ್ಗದಲ್ಲಿರುವ ಈ ಸಾಮರಸ್ಯವನ್ನು ಕಂಡ ಕವಿ ‘ಇದುವೆ ಜೀವ, ಇದು ಜೀವನ’ ಎಂದು ಉದ್ಗರಿಸುತ್ತಾನೆ. ಅಲ್ಲದೆ ಇಂತಹ ಸಾಮರಸ್ಯದ ಜೀವನವೇ ಪಾವನಗೊಂಡ ಜೀವನ. ಪವನ ಅಂದರೆ ಗಾಳಿ. ಗಾಳಿಯು ಎಲ್ಲೆಡೆಗೆ ಬೀಸುತ್ತ ಸುಗಂಧವನ್ನು ಹರಡುತ್ತದೆ. ಅದರಂತೆ ದುರ್ಗಂಧವನ್ನು ದೂರೀಕರಿಸುತ್ತದೆ. ಉಷಃಕಾಲವೂ ಸಹ ವಾತಾವರಣವನ್ನು ಅದೇ ರೀತಿಯಲ್ಲಿ ಪಾವನಗೊಳಿಸುವದರಿಂದ, ಕವಿಯು, ‘ಪವನದಂತೆ ಪಾವನ’ ಎಂದು ಹೇಳುತ್ತಾನೆ.
(ಎರಡನೆಯ ನುಡಿ:)
ಏನೊ ವಿಧ! ಏನೊ ಹದ
ಗಾಳಿಗೊಡೆದ ಬುದ್ಬುದ
ಬೆಳಕೆ ಬದುಕು ಎಂಬ ಮುದ
ಜೀವ ಹೊಮ್ಮಿ ಚಿಮ್ಮಿದ
ಈ ಚೈತನ್ಯಪೂರ್ಣ, ಉಲ್ಲಾಸಮಯ ವಾತಾವರಣವು ಕವಿಯಲ್ಲಿ ಯಾವ ಭಾವನೆಯನ್ನು ಮೂಡಿಸುತ್ತಿದೆ? ಅದು ಅನಿರ್ವಚನೀಯವಾದ, ಆಧ್ಯಾತ್ಮಿಕತೆಗೆ ಹತ್ತಿರವಾದ ಭಾವನೆಯಾಗಿದೆ. ಬ್ರಹ್ಮಭಾವನೆ, ವಿಶ್ವ-ಏಕಾತ್ಮ ಭಾವನೆ ಎಂದು ಹೇಳಬಹುದೇನೊ? ಅದು ಕವಿಯ ಅನುಭವಕ್ಕೆ ಬರುತ್ತಿದೆಯೇ ಹೊರತು, ಏನೆಂದು ಹೇಳಲು ಬರದಂತಿದೆ. (ಶಂಕರಾಚಾರ್ಯರು ಬ್ರಹ್ಮವನ್ನು ‘ನೇತಿ, ನೇತಿ’ ಎಂದು ಬಣ್ಣಿಸಿದ್ದನ್ನು ನೆನಪಿಸಿಕೊಳ್ಳಬಹುದು.) ಆದುದರಿಂದ ಕವಿ ಅದನ್ನು ‘ಏನೊ ವಿಧ!’ ಎಂದು ಬಣ್ಣಿಸುತ್ತಾನೆ. (ಆಮೂಲಕ ಅದು ‘ಬ್ರಹ್ಮಾನಂದ’ ಎಂದು ಸೂಚಿಸುತ್ತಾನೆ.) ಆ ಭಾವನೆ ಏನೆಂದು ಹೇಳಲು ಬರದಿದ್ದರೂ,ಅದು ಕವಿಯಲ್ಲಿ ಒಂದು ಭಾವಪಕ್ವತೆಯನ್ನು ಹುಟ್ಟಿಸಿದೆ. ಅದು ಕವಿಯ ಅನುಭವಕ್ಕೆ ಬರುತ್ತಿರುವ ‘ಹದ’! ಇಂತಹ ಹದ ಅಥವಾ ಪಕ್ವತೆ ಬರಲು ಕಾರಣವೆಂದರೆ, ಕವಿಯ ಅಹಂಭಾವವು ಇಲ್ಲಿ ಗಾಳಿಗೊಡೆದ ಬುದ್ಬುದ ಅಂದರೆ ನೀರಗುಳ್ಳೆಯಾಗಿದೆ. ಪ್ರಕೃತಿಚೈತನ್ಯದ ಎದುರಿಗೆ ಮನುಷ್ಯ ತಾನೆಷ್ಟು ಅಲ್ಪ ಎನ್ನುವದನ್ನು ಅರಿಯುತ್ತಾನೆ. ಆ ಕ್ಷಣದಲ್ಲಿ ಅವನಿಗೆ ‘ಯಾವುದು ಮಹತ್?’ ಎನ್ನುವ ಸತ್ಯದ ದರ್ಶನವಾಗುತ್ತದೆ. ಅದೇನೆಂದರೆ, ‘ಬೆಳಕೆ ಬದುಕು!’ ನಿಸರ್ಗದಲ್ಲಿರುವ ಗಿಡ,ಮರಗಳಿಗೆ ಬೆಳಕು ಬೇಕು; ಅಲ್ಲಿರುವ ಪಕ್ಷಿಗಳಿಗೆ ಬೆಳಕು ಬೇಕು. ಬೆಳಕು ಅವುಗಳಿಗೆ ಜೀವನವನ್ನು ಕೊಡುತ್ತದೆ. ಮನುಷ್ಯನಿಗೂ ಸಹ ಬೆಳಕು ಬೇಕು. ಆದರೆ ಇದು ಬರಿ ಹೊರಗಿನ ಬೆಳಕಲ್ಲ. ಮನುಷ್ಯನಿಗೆ ಬೇಕಾಗಿರುವದು ಅಂತರಂಗದ ಬೆಳಕು. ಈ ಸತ್ಯದರ್ಶನವೇ ಕವಿಗೆ ಮುದವನ್ನು ಅಂದರೆ ಸಂತೋಷವನ್ನು ಕೊಡುತ್ತದೆ. ಈ ಸಂತೋಷವು ಸ್ವಯಂಸ್ಫೂರ್ತ ಸಂತೋಷವು. ತನ್ನಿಂದ ತಾನೇ ಹೊರಹೊಮ್ಮಿದ್ದು. ಆದುದರಿಂದ ಕವಿ ಈ ಸಂತೋಷವನ್ನು ‘ಜೀವ ಹೊಮ್ಮಿ ಚಿಮ್ಮಿದ ಮುದ’ ಎಂದು ಕರೆಯುತ್ತಾನೆ.
(ಮೂರನೆಯ ನುಡಿ:)
ನೂರು ಮರ! ನೂರು ಸ್ವರ
ಒಂದೊಂದು ಅತಿ ಮಧುರ
ಬಂಧವಿರದೆ ಬಂಧುರ
ಸ್ವಚ್ಛಂದ ಸುಂದರ
ನಾವು ಸಂಸ್ಕೃತಿ ಎಂದು ಕರೆಯುವ ಮಾನವ-ನಾಗರಿಕತೆಗಳಲ್ಲಿ ಎಲ್ಲ ಮಾನವರನ್ನು ಒಂದೇ ಶಿಸ್ತಿನ ಏಕತಾನತೆಗೆ ಒಳಪಡಿಸುವ ವಿಕೃತಿ ಇದೆ. ಆದರೆ ಪ್ರಕೃತಿಯಲ್ಲಿ ಇರುವದು ಸ್ವಚ್ಛಂದತೆ; ಏಕತಾನತೆ ಅಲ್ಲ. ಈ ವನರಾಜಿಯಲ್ಲಿ ನೂರಾರು ತರದ ಮರಗಳಿವೆ. ಅಲ್ಲಿರುವ ಹಕ್ಕಿಗಳು ನೂರಾರು ತರದ ಸ್ವರ ಹೊರಡಿಸುತ್ತಿವೆ. ಇಂತಹದೇ ಸ್ವರ ಹೊರಡಿಸಬೇಕೆನ್ನುವ ಕಟ್ಟುನಿಟ್ಟು ಅವುಗಳಿಗೂ ಇಲ್ಲ. ಇಂತಹ ಬಂಧನವು ಇರದ ಕಾರಣದಿಂದಲೆ ಇವುಗಳ ಹಾಡು ಬಂಧುರ ಅಂದರೆ ಉಲ್ಲಾಸದಾಯಕವಾಗಿದೆ. ಇವುಗಳ ಹಾಡು ಹಾಗು ಹಾರಾಟ ಸ್ವಚ್ಛಂದ ವಾಗಿರುವದರಿಂದಲೇ ಇವುಗಳ ಬದುಕು ಸುಂದರವಾಗಿದೆ. ಬದುಕಿನಲ್ಲಿ ವಿವಿಧ ಸ್ವರಗಳು ಬೇಕು. ಆದರೆ ಮಧುರವಾದ ಸ್ವರಮೇಳಕ್ಕಾಗಿ ಸಾಮರಸ್ಯವೂ ಬೇಕು. ಇದು ಕವಿಯು ಇಲ್ಲಿ ಅನುಭವಿಸಿದ ದರ್ಶನವಾಗಿದೆ. ಪ್ರಕೃತಿಯಲ್ಲಿ ಒಂದಾಗಿ, ಪ್ರಕೃತಿಯ ಉಲ್ಲಾಸವೇ ತನ್ನ ಉಲ್ಲಾಸವಾಗಿದ್ದನ್ನು ಕವಿ ಅನುಭವಿಸಿದ ಕಾವ್ಯವು ಇದಾಗಿದೆ.
...........................................................................
ಈ ಕವನದ ವೈಶಿಷ್ಟ್ಯ:
ಸೂರ್ಯೋದಯದಿಂದಾಗಿ ಮೂಡುವ ನಿಸರ್ಗವೈಭವವು ಕವಿಗಳಲ್ಲಿ ಉಲ್ಲಾಸವನ್ನು ಮೂಡಿಸುವದು ಸಹಜ ಹಾಗು ಸಾಮಾನ್ಯ. ಇಂತಹ ಕವನಗಳು, ಸ್ವತಃ ಬೇಂದ್ರೆಯವರೇ ಬರೆದಂತಹವು, ಅನೇಕವಿವೆ. ಸಾಮಾನ್ಯವಾಗಿ, ಪ್ರಕೃತಿ ಅನುಭವಿಸುವ ಸಂವೇದನೆಗಳು ಮಾನವನ ಅನುಭವಕ್ಕೆ ಹೊರತಾಗಿವೆ. ಆದರೆ, ಈ ಕವನದಲ್ಲಿ, ಉಷಃಕಾಲವು ನಿಸರ್ಗದಲ್ಲಿ ಮೂಡಿಸಿದ ಉಲ್ಲಾಸದ ಅನುಭವವಿದೆ. ಈ ಅನುಭವವು ಕವಿಯನ್ನು ಮೂಕನನ್ನಾಗಿಸುತ್ತದೆ. (“ಏನೊ ವಿಧ! ಏನೊ ಹದ.”) ಪ್ರಕೃತಿಯ ಅಗಾಧತೆಯ ಎದುರಿಗೆ ತಾನು ಅಲ್ಪ ಎನ್ನುವ ಸತ್ಯವನ್ನು ತಿಳಿಸುತ್ತದೆ. ಬದುಕಿನಲ್ಲಿ ಸ್ವಾತಂತ್ರ್ಯ ಬೇಕು, ಅದರೊಡನೆಯೆ ಸಾಮರಸ್ಯವೂ ಬೇಕು ಎನ್ನುವ ದರ್ಶನವನ್ನು ಕವಿಯಲ್ಲಿ ಹುಟ್ಟಿಸುತ್ತದೆ. ಇಂತಹ ಬೃಹದ್ದರ್ಶನವನ್ನು ಮಾಡಿಸುವ ಈ ಕವನದಲ್ಲಿ ಇರುವದು ಕೇವಲ ಮೂರು ನುಡಿಗಳು ಅಥವಾ ಮೂವತ್ತಾರು ಪದಗಳು! ‘ಕಿರಿದರೊಳ್ ಪಿರಿದರ್ಥವನು’ ಪೇಳುವದು ಎಂದರೆ ಇದೇ ಇರಬೇಕು!
ಬೇಂದ್ರೆಯವರದು ಅಸೀಮ ಕಲ್ಪನಾವಿಲಾಸ ಹಾಗು ಅಪಾರವಾದ ಪದಸಾಮರ್ಥ್ಯ. ಅವರ ‘ಪಾತರಗಿತ್ತಿ ಪಕ್ಕಾ’, ‘ಹಕ್ಕಿ ಹಾರುತಿದೆ ನೋಡಿದರಾ’ ಮೊದಲಾದ ಕವನಗಳನ್ನು ಓದಿದವರಿಗೆ ಇದರ ಅನುಭವವಿದೆ. ಆದರೆ ‘ವಸಂತಮುಖ’ ಕವನದಲ್ಲಿ, ಬೇಂದ್ರೆಯವರು ನಿಸರ್ಗದ ಆನಂದದಲ್ಲಿ ಎಷ್ಟು ಪರವಶರಾಗಿದ್ದಾರೆಂದರೆ, ಅತಿ ಚಿಕ್ಕದಾದ ಕವನದಲ್ಲಿ ಅತಿ ಮಹತ್ವದ ದರ್ಶನ ಇಲ್ಲಿ ಹೊಮ್ಮಿದೆ. ಇದೇ ಈ ಕವನದ ವೈಶಿಷ್ಟ್ಯವಾಗಿದೆ.
……………………………………………
ಟಿಪ್ಪಣಿ:
(೧) ಪಾಂಡವರು ವನವಾಸದಲ್ಲಿದ್ದಾಗ, ಓರ್ವ ಮುನಿಯನ್ನು ಅವಮಾನಿಸಿದ್ದಕ್ಕಾಗಿ ಅರ್ಜುನನು ಶಪಿತನಾದನು. ಶಾಪಮುಕ್ತಿಗಾಗಿ ಆತನು ತೀರ್ಥಯಾತ್ರೆಯನ್ನು ಮಾಡಬೇಕಾಯಿತು.‘ಬುದ್ಬುದಾ’ ಎನ್ನುವ ಅಪ್ಸರೆಯು ಈ ಪ್ರಸಂಗಕ್ಕೆ ಸಂಬಂಧಿಸಿದ್ದಾಳೆ. ಬೇಂದ್ರೆಯವರು ಎರಡನೆಯ ಸಾಲಿನಲ್ಲಿ ಬಳಸಿದ ‘ಬುದ್ಬುದ’ ಪದವು ಈ ಕಾರಣದಿಂದಾಗಿ ಬಂಧ ಹಾಗು ಮೋಕ್ಷವನ್ನು ಸೂಚಿಸುತ್ತದೆ.
(೨) ಬೇಂದ್ರೆಯವರ ಅನೇಕ ಶ್ರೇಷ್ಠ ಕವನಗಳು ದೇಸಿ ಶೈಲಿಯಲ್ಲಿವೆ ಎನ್ನುವದು ಕೆಲವು ವಿಮರ್ಶಕರ ಅಭಿಪ್ರಾಯ. ಈ ಕವನವು ಮಾರ್ಗ ಭಾಷೆಯಲ್ಲಿದ್ದೂ ಸಹ ಬೇಂದ್ರೆಯವರ ಕವನಗಳಲ್ಲಿಯೇ ಶಿಖರಸ್ಥಾಯಿಯಾಗಿರುವದನ್ನು ಗಮನಿಸಬೇಕು.
ಹೆಚ್ಚಿನ ಟಿಪ್ಪಣಿ:
(೧) ಒಂದೇ ಸಾಲಿನಲ್ಲಿ ಜೀವನದರ್ಶನವನ್ನು ಮಾಡಿಸುವ ಕವನಗಳು ಕನ್ನಡದಲ್ಲಿ ಇದ್ದೇ ಇವೆ. ಅನೇಕ ವರ್ಷಗಳ ಹಿಂದೆ, ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ‘ಕನ್ನಡ ಕವಿಗಳ ಪ್ರತಿಭೆಯ ಮಿಂಚು’ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಕೆಲವು ಕವನಗಳ ಒಂದೊಂದು ಸಾಲನ್ನು ಕೊಡಲಾಗಿತ್ತು. ಸೂರ್ಯೋದಯಕ್ಕೆ ಸಂಬಂಧಿಸಿದಂತೆ ಅಂತಹ ಒಂದು ಸಾಲು ಇಲ್ಲಿದೆ:
“ಶಿವ ಬರೆದ ಕತೆಯ ಪುಟವೊಂದು ತೆರೆದು ನನ್ನ ಮನೆ ಮೂಡಲಲಿ ಬೆಳಕಾಯಿತು.”
ಕವಿಯ ದೈವಶ್ರದ್ಧೆಯನ್ನು, ಈ ಶ್ರದ್ಧೆ ಅವನಲ್ಲಿ ಮೂಡಿಸುವ ಸ್ಥೈರ್ಯವನ್ನು, ಶಿವವಾದುದನ್ನು ಅಂದರೆ ಮಂಗಲವನ್ನೇ ಬಯಸುವ ಅವನ ಮನೀಷೆಯನ್ನು ಈ ಸಾಲು ಅದ್ಭುತವಾಗಿ ಬಿಂಬಿಸುತ್ತದೆ. ಈ ಸಾಲಿನ ಕೆಳಗೆ ‘ಮಸಳಿ’ ಎನ್ನುವ ಅಂಕಿತವಿದ್ದುದ್ದಾಗಿ ನನ್ನ ಮಸುಕಾದ ನೆನಪು ಹೇಳುತ್ತಿದೆ. ಆದರೆ ಇದು ಹೀಗೇ ಎಂದು ಹೇಳಲು ಈಗ ಸಾಧ್ಯವಾಗದು.
(೨) ಇಂಗ್ಲಿಶ್ ಭಾಷೆಯಲ್ಲಿ ಪ್ರಕಟವಾಗುತ್ತಿದ್ದ Reader’s Digest ತರಹದ ಮಾಸಿಕವನ್ನು ಕನ್ನಡದಲ್ಲಿ ತರಲು ಉದ್ದೇಶಿಸಿದ ಲೋಕಶಿಕ್ಷಣ ಸಂಸ್ಥೆಯು ‘ಕಸ್ತೂರಿ’ ಮಾಸಿಕವನ್ನು ಹೊರತಂದಿತು. Reader’s Digestನಲ್ಲಿ ಪ್ರಕಟವಾಗುತ್ತಿದ್ದ ಸ್ಥಿರಶೀರ್ಷಿಕೆ ‘Life’s like that’ ಗೆ ಸಂವಾದಿಯಾಗಿ ಕಸ್ತೂರಿ ಮಾಸಿಕದಲ್ಲಿ ’ಇದುವೇ ಜೀವ ಇದು ಜೀವನ’ ಶೀರ್ಷಿಕೆಯನ್ನು ತರಲಾಯಿತು. ಕನ್ನಡದ ಶೀರ್ಷಿಕೆಯು ‘ವಸಂತಮುಖ’ ಕವನದ ಮೊದಲನೆಯ ನುಡಿಯ ಮೂರನೆಯ ಸಾಲೇ ಆಗಿರುವದನ್ನು ಗಮನಿಸಬಹುದು.
೪. ಗಣಪತಿ
ಹೆಚ್ಚಿನ ಓದಿಗೆ: http://sallaap.blogspot.com/2010/04/blog-post_29.html
ನಾನು ಹೊಲಸಿನ ಹೊಲಿಗೆ ಬಿಚ್ಚಿ ಬಂದ ಸುಗಂಧ
ನಾನು ಬಣ್ಣಕೆ ಸಿಗದೆ ಹರಿವ ರುಚಿ ಮಕರಂದ
ನಾನು ಅಪರೂಪ ಗೆರೆ ಗುರುತು ತೋರದ ಕಟ್ಟು
ನಾನು ಮೈತುಂಬ ಹುರಿ ತುಂಬಿ ಮುಟ್ಟುವ ಗುಟ್ಟು
ನಾನು ಬರಿಸದ್ದು, ತಾನಿದ್ದದ್ದು ಇಲ್ಲದ್ದು
ನಾನು ಎಣಿಕೆಗೆ ಹೊರಗೆ, ಒಳಗೆ ಇರುವೆನು ಕದ್ದು
ನಾನು ಕಾಣಿಕೆಗಳನು ಕುಣಿಗೆ ಎಸೆಯುವೆ ಹೊತ್ತು
ನಾನು ಬೇರೆ ಅಲ್ಲ; ತುಟಿಯ ಮೇಲಿನ ಮುತ್ತು.
ನಾನು ನೀನಿನ ನೂಲು ಈ ದಿಗಂಬರ ಪಟವು
ಉಸಿರಿಗೇಕೊ ಬೆಸಿಗೆ? ಆರೆಂಟರೀ ಹಠವು?
ನಾ ತಂದ ಸಾಹಿತ್ಯ ನಿನ್ನ ಪಾಕ ಪದಾರ್ಥ!
ರಸವಿಲ್ಲವರಸರಿಗೆ ಊಟಕೂಟವೆ ವ್ಯರ್ಥ.
ನಾನು ಧರ್ಮಾರ್ಥ ಕಾಮಗಳ ನೀಡುವ ಸಾಕ್ಷಿ
ನೀ ಮುಕ್ತನೋ ರಸಿಕ, ಧನ್ಯ ಸಾರಸ ಪಕ್ಷಿ
ನಾ ಪಡುವ ಹದುಳ ನೀ ಪಡೆವ ನೋಂಪಿಯ ಗಂಟು
ಶಿವಶಕ್ತಿ ಒಳಕೀಲ ನಮ್ಮ ಗಣಪತಿಗುಂಟು, ಎಲ್ಲ ಗಣಪತಿಗುಂಟು.
……………………………………………………………………………………………
ಬೇಂದ್ರೆಯವರ ಕಾವ್ಯಜೀವನವನ್ನು ಸ್ಥೂಲವಾಗಿ ಮೂರು ಘಟ್ಟಗಳಲ್ಲಿ ವಿಭಾಗಿಸಬಹುದು. ೧೯೨೨ನೆಯ ಇಸವಿಯಲ್ಲಿ ಅಂದರೆ ಬೇಂದ್ರೆಯವರು ೨೬ ವರ್ಷದವರಿದ್ದಾಗ ಅವರ ಮೊದಲ ಕೃತಿ “ಕೃಷ್ಣಾಕುಮಾರಿ” ಪ್ರಕಟವಾಯಿತು. ಅಲ್ಲಿಂದ ೧೯೫೧ರಲ್ಲಿ ‘ಗಂಗಾವತರಣ’ ಕವನಸಂಕಲನವು ಪ್ರಕಟವಾಗುವವರೆಗಿನ ಅವಧಿಯು ಬೇಂದ್ರೆಯವರ ಕಾವ್ಯಜೀವನದ ಮೊದಲ ಘಟ್ಟ. ಈ ಘಟ್ಟವು ಬೇಂದ್ರೆ-ಕಾವ್ಯವು ಸಿದ್ಧಿಯ ಹಾಗು ಪ್ರಸಿದ್ಧಿಯ ಪರಮೋಚ್ಚ ಶಿಖರವನ್ನು ತಲುಪಿದ ಘಟ್ಟ. ಈ ಅವಧಿಯಲ್ಲಿ ಪ್ರಕಟವಾದ ಬೇಂದ್ರೆ ಕಾವ್ಯರಚನೆಗಳು ಇಂತಿವೆ:
(೧) ಕೃಷ್ಣಾಕುಮಾರಿ, (೨) ಗರಿ, (೩) ಸಖೀಗೀತ, (೪) ಮೂರ್ತಿ, (೫) ಕಾಮಕಸ್ತೂರಿ, (೬) ಉಯ್ಯಾಲೆ, (೭) ನಾದಲೀಲೆ, (೮) ಮೇಘದೂತ (ಅನುವಾದ), (೯) ಹಾಡು-ಪಾಡು ಹಾಗು (೧೦) ಗಂಗಾವತರಣ.
೧೯೫೬ರಲ್ಲಿ ಬೇಂದ್ರೆಯವರಿಗೆ ೬೦ ವರ್ಷಗಳು ತುಂಬಿದವು. ೧೯೫೭ರಲ್ಲಿ ‘ಅರಳು ಮರಳು’ ಕವನಸಂಕಲನ ಪ್ರಕಟವಾಯಿತು. ಈ ಬೃಹತ್ ಸಂಕಲನದಲ್ಲಿ ೫ ಉಪಸಂಕಲನಗಳಿವೆ:
(೧) ಹೃದಯ ಸಮುದ್ರ, (೨) ಸೂರ್ಯಪಾನ, (೩) ಮುಕ್ತಕಂಠ, (೪) ಚೈತ್ಯಾಲಯ ಹಾಗು (೫) ಜೀವಲಹರಿ.
ಬೇಂದ್ರೆಯವರ ಕಾವ್ಯಪಥವು ಬದಲಾದದ್ದನ್ನು ಈ ಸಂಕಲನಗಳಲ್ಲಿ ಕಾಣಬಹುದು. ನಿಸರ್ಗಪ್ರೀತಿ, ಆದರ್ಶ ಹಾಗು ಬದುಕಿನ ಒಲವನ್ನು ಬಿಂಬಿಸುತ್ತಿದ್ದ ಜೀವನ್ಮುಖಿ ಕಾವ್ಯವು ಇದೀಗ ಸೂರ್ಯಪಾನದಂತೆ ಪರಮಾರ್ಥಮುಖಿಯಾಗಿ ಬದಲಾಯಿತು. ಯಾವುದೇ ವ್ಯಕ್ತಿಯ ಜೀವನದಲ್ಲಿ ಇದು ಸಹಜವಾದದ್ದೇ. ೧೯೪೩ರಲ್ಲಿ ಬೇಂದ್ರೆಯವರು ಶ್ರೀ ಅರವಿಂದ ಹಾಗು ಶ್ರೀಮಾತಾ ಇವರ ದರ್ಶನ ಪಡೆದರು. ಬೇಂದ್ರೆಯವರ ಗೆಳೆಯರ ದೊಡ್ಡ ಗುಂಪೇ ಅರವಿಂದರಿಂದ ಪ್ರಭಾವಿತವಾಗಿತ್ತು. ಇವರಲ್ಲಿ ‘ಮಧುರಚೆನ್ನ ’ ಕಾವ್ಯನಾಮದಿಂದ ಖ್ಯಾತರಾದ ಹಲಸಂಗಿ ಚೆನ್ನಮಲ್ಲಪ್ಪನವರು, ಶ್ರೀ ಸಿಂಪಿ ಲಿಂಗಣ್ಣನವರು ಹಾಗು ಶ್ರೀ ವಿನಾಯಕ ಗೋಕಾಕರು ಪ್ರಮುಖರು. ೧೯೪೮ರಲ್ಲಿ ಬೇಂದ್ರೆಯವರಿಗೆ ತತ್ವಜ್ಞಾನಿ ಶ್ರೀ ಜಿಡ್ಡು ಕೃಷ್ಣಮೂರ್ತಿಯವರ ಭೆಟ್ಟಿ ಹಾಗು ಶ್ರೀ ಗುಳವಣಿ ಮಹಾರಾಜರ ದರ್ಶನವಾಯಿತು. ೧೯೫೨ರಲ್ಲಿ ಪ್ರಭಾಕರ ಮಹಾರಾಜರ ದರ್ಶನ ಪಡೆದರು. ೧೯೫೪ರಲ್ಲಿ ಶ್ರೀ ರಾಮದಾಸರ ದರ್ಶನಲಾಭವಾಯಿತು. ಬೇಂದ್ರೆಕುಟುಂಬವು ಪಾರಂಪರಿಕವಾಗಿ ಗೋಂದಾವಲಿಯ ಶ್ರೀ ಬ್ರಹ್ಮಚೈತನ್ಯರ ಶಿಷ್ಯವರ್ಗಕ್ಕೆ ಸೇರಿದ್ದು. ಇದೆಲ್ಲದರ ಪರಿಣಾಮವು ಅವರ ಸಾಹಿತ್ಯದಲ್ಲಿ ಬಿಂಬಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಈ ಅವಧಿಯ ಕಾವ್ಯದಲ್ಲಿ ಕಾವ್ಯ ಹಾಗು ಪಾರಮಾರ್ಥಿಕತೆಯ ಸಂಯೋಗವನ್ನು ಕಾಣುತ್ತೇವೆ.
೧೯೫೭ರ ನಂತರದ ಬೇಂದ್ರೆ-ಕಾವ್ಯವು ಮೂರನೆಯ ಘಟ್ಟದ ಕಾವ್ಯ. ಈ ಅವಧಿಯಲ್ಲಿ ಪ್ರಕಟಗೊಂಡ ಸಂಕಲನಗಳು ಇಂತಿವೆ:
(೧) ನಮನ, (೨) ಸಂಚಯ, (೩) ಉತ್ತರಾಯಣ, (೪) ಮುಗಿಲ ಮಲ್ಲಿಗೆ, (೫) ಯಕ್ಷ ಯಕ್ಷಿ, (೬) ನಾಕು ತಂತಿ, (೭) ಮರ್ಯಾದೆ, (೮) ಶ್ರೀಮಾತಾ, (೯) ಇದು ನಭೋವಾಣಿ, (೧೦) ಮತ್ತೆ ಶ್ರಾವಣಾ ಬಂತು ಹಾಗು (೧೧) ಚತುರೋಕ್ತಿ ಮತ್ತು ಇತರ ಕವನಗಳು.
ಅವರ ಮರಣೋತ್ತರ (೧೯೮೧ರ ನಂತರದಲ್ಲಿ) ಪ್ರಕಟವಾದ ಕವನಸಂಕಲನಗಳು ಇಂತಿವೆ:
(೧) ಪರಾಕಿ, (೨) ಕಾವ್ಯವೈಖರಿ, (೩) ತಾ ಲೆಕ್ಕಣಕಿ ತಾ ದೌತಿ, (೪) ಬಾಲಬೋಧೆ, (೫) ಪ್ರತಿಬಿಂಬಗಳು ಹಾಗು (೬) ಶತಮಾನ.
ಈ ಮೂರನೆಯ ಘಟ್ಟದ ಕಾವ್ಯವು ಐಹಿಕ ಸಿದ್ಧಿ ಹಾಗು ಪ್ರಸಿದ್ಧಿಯ ಆಚೆಗಿನ ಕಾವ್ಯ. ಕವಿಯು ಧ್ಯಾನಸ್ಥನಾದ ಸಮಯದ ಕಾವ್ಯವಿದು. ಈ ಕಾವ್ಯದಲ್ಲಿ ಬೆಡಗು, ಬಿನ್ನಾಣಗಳಿಲ್ಲ. ಬದಲಿಗೆ ನಿಗೂಢತೆ ಇದೆ. ಹೀಗಾಗಿ ಇದೆಂತಹ ಕಾವ್ಯ ಎಂದು ಕೆಲವರಿಗೆ ಅನ್ನಿಸಬಹುದು. ‘ಅರಳು ಮರಳು’ ನಂತರದ ಬೇಂದ್ರೆ ಕಾವ್ಯವು ಕಾವ್ಯವೇ ಅಲ್ಲ ಎಂದು ಕೆಲವು ವಿಮರ್ಶಕರು ಹೇಳಿದ್ದುಂಟು. ಅವರ ದೃಷ್ಟಿದೋಷವೇ ಈ ಹೇಳಿಕೆಗೆ ಕಾರಣ. ಬೇಲೂರು ಶಿಲಾಬಾಲಿಕೆಯಂತಹ ಕುಸುರಿ ಕೆಲಸದ ಶಿಲ್ಪಸೌಂದರ್ಯವನ್ನು ನೋಡಿದ ಬಳಿಕ, ಗೊಮ್ಮಟೇಶ್ವರನನ್ನು ನೋಡಿ, ಈ ಕೆತ್ತನೆಯಲ್ಲಿ ಏನಿದೆ ಎಂದು ಹೀಯಾಳಿಸುವ ಕುರುಡುತನ ಈ ವಿಮರ್ಶಕರದು.
ಬೇಂದ್ರೆಯವರು ರಚಿಸಿದ ‘ಗಣಪತಿ’ ಕವನವು ಅವರ ಧ್ಯಾನಸ್ಥ ಘಟ್ಟದ ಕವನ. ಗಣಪತಿಯನ್ನು ಧ್ಯಾನಿಸುತ್ತಿರುವಾಗ, ಆ ದೇವತೆಯು ಅವರ ಅಂತರಂಗದಲ್ಲಿ ಮೂಡುತ್ತಿದ್ದಾನೆ. ಆ ದೇವತೆಯೇ ಸಾಧಕನಿಗೆ ತನ್ನ ಸ್ವರೂಪವನ್ನು ತೆರೆಯುತ್ತಿರುವ ರೀತಿಯಲ್ಲಿ ಈ ಕವನವಿದೆ.
ಕವನದ ಮೊದಲ ನುಡಿಯನ್ನು ನೋಡಿ:
“ನಾನು ಹೊಲಸಿನ ಹೊಲಿಗೆ ಬಿಚ್ಚಿ ಬಂದ ಸುಗಂಧ
ನಾನು ಬಣ್ಣಕೆ ಸಿಗದೆ ಹರಿವ ರುಚಿ ಮಕರಂದ
ನಾನು ಅಪರೂಪ ಗೆರೆ ಗುರುತು ತೋರದ ಕಟ್ಟು
ನಾನು ಮೈತುಂಬ ಹುರಿ ತುಂಬಿ ಮುಟ್ಟುವ ಗುಟ್ಟು”
“ನಾನು ಹೊಲಸಿನ ಹೊಲಿಗೆ ಬಿಚ್ಚಿ ಬಂದ ಸುಗಂಧ”:
ತಾಯ ಗರ್ಭದಲ್ಲಿ ಇರುವ ಕೂಸು ಗರ್ಭಚೀಲದಲ್ಲಿ (placenta) ಇರುತ್ತದೆ. ಇದಕ್ಕೆ ‘ಮಾಸ’ ಎಂದೂ ಹೇಳುತ್ತಾರೆ. ಇದು ಹೊಲಸಿನ ಚೀಲ. ಶಿಶುವು ಪ್ರಸವ ಸಮಯದಲ್ಲಿ ಈ ಹೊಲಸಿನ ಚೀಲವನ್ನು ಹರಿದುಕೊಂಡು ಹೊರಬರುತ್ತದೆ. ಸಾಧಕನ ಅಂತರಂಗವೂ ಸಹ ಅರಿಷಡ್ವರ್ಗಗಳಿಂದ ಮಲಿನವಾದದ್ದೇ. ಇಂತಹ ಅಶುದ್ಧ ಅಂತರಂಗದಲ್ಲಿಯೂ ಸಹ ಭಕ್ತನ ಸಾಧನೆಯಿಂದಾಗಿ ಗಣಪತಿಯು ಮೂಡುತ್ತಾನೆ. ಸಾಧನೆಯ ಅಂತಿಮ ಹಂತದಲ್ಲಿ ಶಿಶುರೂಪದಲ್ಲಿ ಇರುವ ಗಣಪತಿಯು, ಭಕ್ತನಿಗೆ ವ್ಯಕ್ತವಾಗುವಾಗ, ಈ ಹೊಲಸಿನ ಚೀಲವನ್ನು ಬಿಚ್ಚಿ ಹೊರಬರುತ್ತಾನೆ. ದೇವಶಿಶುವಿನ ಆಗಮನದಿಂದ ಮಲಿನ ಅಂತರಂಗವು ಪಾವನವಾಗಿ, ಅಲ್ಲಿ ಸುಗಂಧ ಹರಡುತ್ತದೆ.
ಈ ಸುಗಂಧವು ಅತೀಂದ್ರಿಯ ಅನುಭವಕ್ಕೆ ಮಾತ್ರ ಸಿಲುಕುವಂತಹದು. ಸುಗಂಧವು ನಮ್ಮನ್ನು ಆಹ್ಲಾದಗೊಳಿಸುವಂತೆ, ದೇವನ ಆಗಮನವೂ ಸಹ ನಮ್ಮ ಅಂತರಂಗವನ್ನು ಆಹ್ಲಾದಗೊಳಿಸುತ್ತದೆ.
“ನಾನು ಬಣ್ಣಕೆ ಸಿಗದೆ ಹರಿವ ರುಚಿ ಮಕರಂದ”:
ಗಣಪತಿಯ ಸಾಕ್ಷಾತ್ಕಾರದಿಂದ ಅಂತರಂಗದ ಸದ್ಗುಣಗಳು ಪುಷ್ಟಿಗೊಳ್ಳುತ್ತವೆ. ಇದುವೇ ಭಕ್ತನಿಗೆ ಗಣಪತಿಯು ಉಣ್ಣಿಸುವ ಮಕರಂದ. ಆದರೆ ಈ ಮಕರಂದವೂ ಸಹ ಇಂದ್ರಿಯಗಳ ಅನುಭವಕ್ಕೆ ಸಿಗದ ಅಲೌಕಿಕ ಪದಾರ್ಥ.
“ನಾನು ಅಪರೂಪ ಗೆರೆ ಗುರುತು ತೋರದ ಕಟ್ಟು
ನಾನು ಮೈತುಂಬ ಹುರಿ ತುಂಬಿ ಮುಟ್ಟುವ ಗುಟ್ಟು”:
ಅಪರೂಪದ ಗೆರೆ ಎಂದರೆ ಮಿಂಚಿ ಮಾಯವಾಗುವ ಗೆರೆ. ಯೋಗಿಗಳು ಸಮಾಧಿಸ್ಥಿತಿಯಲ್ಲಿ ಭಗವದ್ದರ್ಶನ ಪಡೆದಾಗ ಅದನ್ನು “ತಟಿಲ್ಲತಾ ಸಮರುಚಿಃ” ಎಂದರೆ ಕೋಲ್ಮಿಂಚು ಎಂದು ವರ್ಣಿಸುತ್ತಾರೆ. ಗಣಪತಿಯು ವ್ಯಕ್ತವಾಗುವದೂ ಸಹ ಕೋಲ್ಮಿಂಚಿನಂತೆ. ಸಾಧಕನ ಅಂತರಂಗದ ಬಾನಿನಲ್ಲಿ ಗಣಪತಿಯು ಮಿಂಚಿನಂತಹ ಅಪರೂಪದ ಗೆರೆಯಾಗಿ ಕಾಣುತ್ತಾನೆ. ಇಂತಹ ಸತತ ಕೋಲ್ಮಿಂಚುಗಳ ಕಟ್ಟೇ ಅವನಾಗಿದ್ದಾನೆ. ಆದರೆ ಸಾಧಕನಿಗೆ ಆ ಕಟ್ಟಿನ ಗುರುತು ಸರಳಸಾಧ್ಯವಲ್ಲ! ಆ ಕೋಲ್ಮಿಂಚು ಸಾಧಕನಿಗೆ ಕಾಣಬೇಕಾದರೆ, ಆ ದೇವತಾದರ್ಶನವು ಅವನಿಗೆ ಆಗಬೇಕಾದರೆ ಅವನ ಶರೀರಗಳು (ಸ್ಥೂಲ ಹಾಗು ಸೂಕ್ಷ್ಮ ಶರೀರಗಳು), ಸಾಧನೆಯಿಂದ ಹುರಿಗೊಳ್ಳಬೇಕು.
‘ಹುರಿಗೊಳ್ಳುವದು’ ಎಂದರೇನು? ನೂಲಿನ ಬೇರೆ ಬೇರೆ ಎಳೆಗಳು ಒಂದಾಗಿ ಗಟ್ಟಿಯಾಗುವದಕ್ಕೆ ಹುರಿಗೊಳ್ಳುವದು ಎನ್ನುತ್ತಾರೆ. ಹಾಗಾದಾಗ ಮಾತ್ರ ಆತ ತನ್ನ ಅಂತರಂಗದಲ್ಲಿಯ ದೇವತೆಯನ್ನು ಮುಟ್ಟಬಲ್ಲ, ಅನುಭವಿಸಬಲ್ಲ. ‘ನಾನು ಮೈತುಂಬ ಹುರಿ ತುಂಬಿ ಮುಟ್ಟುವ ಗುಟ್ಟು’ ಎನ್ನುವದರ ಅರ್ಥವಿದು.
ಈಗ ಎರಡನೆಯ ನುಡಿಯನ್ನು ನೋಡಿರಿ:
“ನಾನು ಬರಿಸದ್ದು, ತಾನಿದ್ದದ್ದು ಇಲ್ಲದ್ದು
ನಾನು ಎಣಿಕೆಗೆ ಹೊರಗೆ, ಒಳಗೆ ಇರುವೆನು ಕದ್ದು
ನಾನು ಕಾಣಿಕೆಗಳನು ಕುಣಿಗೆ ಎಸೆಯುವೆ ಹೊತ್ತು
ನಾನು ಬೇರೆ ಅಲ್ಲ; ತುಟಿಯ ಮೇಲಿನ ಮುತ್ತು.”
“ನಾನು ಬರಿಸದ್ದು, ತಾನಿದ್ದದ್ದು ಇಲ್ಲದ್ದು
ನಾನು ಎಣಿಕೆಗೆ ಹೊರಗೆ, ಒಳಗೆ ಇರುವೆನು ಕದ್ದು”
‘ನಾನು ಬರಿಸದ್ದು’ ಎನ್ನುವದರ ಒಂದು ಅರ್ಥ ‘ನಾನು ಬರಿಸದೇ ಇದ್ದದ್ದು’, ಎಂದರೆ ಸೃಷ್ಟಿಸದೇ ಇದ್ದದ್ದು ಎಂದು ಆಗಬಹುದು. ‘ತಾನು (=ಭಗವಂತ) ಇದ್ದದ್ದು’ ಎಂದರೆ ‘ಸತ್’ ಎನ್ನುವ ಅರ್ಥ; ‘ಇಲ್ಲದ್ದು’ ಎಂದರೆ ‘ಅಸತ್’ ಎನ್ನುವ ಅರ್ಥ. ಸತ್ ಹಾಗು ಅಸತ್ ಈ ಎರಡೂ ಪ್ರಪಂಚಗಳು ಅವನು ಬರಿಸದೇ ಇದ್ದದ್ದು, ಅವನು ಮಾಡದೇ ಇದ್ದದ್ದು. ಗಣಪತಿಯು ಈ ಸತ್ ಹಾಗು ಅಸತ್ ಪ್ರಪಂಚಗಳನ್ನು ಸೃಷ್ಟಿಸದೇ ಇದ್ದರೆ, ಈ ಪ್ರಪಂಚಗಳು ವ್ಯಕ್ತವಾಗುವದೇಕೆ ಎನ್ನುವ ಸಂದೇಹ ಬರುತ್ತದೆ. ಈ ಸಂದೇಹಕ್ಕೆ ಉತ್ತರ ಶಂಕರಾಚಾರ್ಯರ ‘ದಕ್ಷಿಣಾಮೂರ್ತಿ ಸ್ತೋತ್ರ’ದಲ್ಲಿದೆ.
“ಯಸ್ಯೈವ ಸ್ಫುರಣಂ ಸದಾತ್ಮಕಮಸತ್ ಕಲ್ಪಾರ್ಥಕಂ ಭಾಸತೇ”. ಅಂದರೆ, ಭಗವಂತನ ಸ್ಫುರಣಕ್ರಿಯೆಯಿಂದಾಗಿ ಸತ್ ಮತ್ತು ಅಸತ್ ಎನ್ನುವ ಪ್ರಪಂಚಗಳು ನಿರಂತರವಾಗಿ ಭಾಸವಾಗುತ್ತವೆ. ಅರ್ಥಾತ್ ಅವು ವಾಸ್ತವಿಕವಾಗಿ ಇಲ್ಲ. ಈ ಅವಾಸ್ತವ ಪ್ರಪಂಚಗಳ ಹೊರಗೆ ಇರುವದರಿಂದಲೇ ಗಣಪತಿಯು ‘ನಾನು ಎಣಿಕೆಗೆ ಹೊರಗೆ’ ಎನ್ನುತ್ತಾನೆ. ಇದೇ ಮಾತನ್ನು ‘ಅತ್ಯತಿಷ್ಠತ್ ದಶಾಂಗುಲಮ್’ ಎಂದೂ ಹೇಳಲಾಗಿದೆ. ಅಂದರೆ, ಈ ಪ್ರಪಂಚಗಳನ್ನೆಲ್ಲ ವ್ಯಾಪಿಸಿಯೂ, ಭಗವಂತನು ಇದರ ಹೊರಗೆ ಸಹ ಇರುತ್ತಾನೆ. ಆ ಕಾರಣದಿಂದಾಗಿ ಅವನು ಪ್ರಾಪಂಚಿಕರ ಎಣಿಕೆಗೆ ಸಿಗಲಾರ. ಪ್ರಪಂಚಗಳಲ್ಲಿ ಇರುವ ಭಗವಂತನು ಪ್ರಾಪಂಚಿಕರ ಅನುಭವಕ್ಕೆ ಬರದಂತೆ ಇರುತ್ತಾನೆ. ಆದುದರಿಂದಲೇ ಗಣಪತಿಯು ಹೇಳುವದು: “ನಾನು ಇರುವೆನು ಕದ್ದು.”
‘ನಾನು ಬರಿಸದ್ದು’ ಎನ್ನುವ ಪದಪುಂಜವನ್ನು ‘ನಾನು ಬರಿ ಸದ್ದು’ ಎಂದು ಬಿಡಿಸಿಯೂ ಓದಬಹುದು. ಸದ್ದು ಎಂದರೆ ನಾದ. ಭಗವಂತನು ‘ಓಂ’ ನಾದದ ಮೂಲಕ ಪ್ರಕಟವಾಗುತ್ತಾನೆ ಎಂದು ಹೇಳುತ್ತಾರೆ. ಗಣಪತಿಯೂ ಸಹ ಸಾಧಕನಿಗೆ ಓಂಕಾರದ ಮೂಲಕ ಪ್ರಕಟವಾಗಬಹುದು. ‘ತಾನಿದ್ದದ್ದು’ ಎಂದರೆ ಈ ಓಂಕಾರ ನಾದಕ್ಕೆ ಸಂಗೀತದ ‘ತಾನ್’ ಇರಲೂ ಬಹುದು, ಇರದಿರಲೂ ಬಹುದು. ಸಾಧಕನ ಸಾಧನೆಯ ಮಟ್ಟದ ಮೇಲೆ ಇದು ಹೋಗುತ್ತದೆ.
“ನಾನು ಕಾಣಿಕೆಗಳನು ಕುಣಿಗೆ ಎಸೆಯುವೆ ಹೊತ್ತು
ನಾನು ಬೇರೆ ಅಲ್ಲ; ತುಟಿಯ ಮೇಲಿನ ಮುತ್ತು.”
ಈ ಭಗವಂತನು ಭಕ್ತರ ಕಾಣಿಕೆಗಳಿಗೆ ಮರುಳಾಗುತ್ತಾನೆಯೆ? ಇಲ್ಲ. ಏಕೆಂದರೆ ಕಾಣಿಕೆಗಳಲ್ಲಿ ‘ತಾನು ಕೊಟ್ಟಿದ್ದು’ ಎನ್ನುವ ಅಹಂಕಾರವಿರುತ್ತದೆ ಮತ್ತು ಕಾಣಿಕೆಗಳು ಅಲ್ಪಾಯುಗಳು. ಪ್ರೀತಿ ಮಾತ್ರ ನಿರಂತರವಾದದ್ದು. ಆದುದರಿಂದ ಗಣಪತಿಯು ಅಹಂಕಾರದ ಈ ಅಲ್ಪಾಯು ಕಾಣಿಕೆಗಳನ್ನು ಕುಣಿಗೆ (ಅಂದರೆ burial pitಗೆ) ಎಸೆಯುತ್ತಾನೆ. ಆತನಿಗೆ ಬೇಕಾದದ್ದು ಭಕ್ತರ ನಿರ್ವ್ಯಾಜ ಪ್ರೇಮ. ಹಾಗೆಂತಲೇ ಆತ ತನ್ನನ್ನು ‘ತುಟಿಯ ಮೇಲಿನ ಮುತ್ತು’ ಎಂದು ಕರೆದುಕೊಳ್ಳುತ್ತಾನೆ. ತುಟಿಯ ಮೇಲಿನ ಮುತ್ತು ಅನ್ಯೋನ್ಯ ಪ್ರೀತಿಯ ದ್ಯೋತಕ. ಮುತ್ತು ಕೊಟ್ಟ ಮೇಲೂ ಸಹ, ಆ ಭಾಸ ನಿರಂತರವಾಗಿ ಉಳಿಯುತ್ತದೆ. ಗಣಪತಿಯು ದೇವತೆಯೂ ಹೌದು; ಭಕ್ತ ಹಾಗು ದೇವತೆಯ ನಡುವಿನ ಪ್ರೀತಿಯೂ ಹೌದು.
ಬೇಂದ್ರೆಯವರು ಅಪಾರ ಶ್ರದ್ಧೆ ಹಾಗು ನಿಷ್ಠೆಯನ್ನು ಇಟ್ಟಿದ್ದ ಬ್ರಹ್ಮಚೈತನ್ಯ ಮಹಾರಾಜರಿಗೆ ಅವರ ಶಿಷ್ಯರೊಬ್ಬರು ಒಮ್ಮೆ ತಕರಾರು ಹೇಳಿದರು: “ಮಹಾರಾಜ, ನಾನು ನನ್ನ ಸರ್ವಸ್ವವನ್ನೆಲ್ಲ ದೇವರಿಗೆ ಅರ್ಪಿಸಿದ್ದೇನೆ. ಆದರೂ ದೇವರು ನನಗೇಕೆ ದರ್ಶನ ಕೊಟ್ಟಿಲ್ಲ?”
ಅದಕ್ಕೆ ಮಹಾರಾಜರ ಉತ್ತರ ಹೀಗಿತ್ತು: “ನೀವು ನಿಮ್ಮ ಸರ್ವವನ್ನೂ ಕೊಟ್ಟಿದ್ದೀರಿ. ಆದರೆ ‘ಸ್ವ’ವನ್ನು ಮಾತ್ರ ಇನ್ನೂ ಕೊಟ್ಟಿಲ್ಲ!”
ಇದರಂತೆಯೇ, ಸಾಧಕನು ಕೊಟ್ಟ ಸರ್ವ ಕಾಣಿಕೆಗಳನ್ನು ಗಣಪತಿಯು ಕುಣಿಗೆ ಎಸೆಯುತ್ತಾನೆ. ಅವನಿಗೆ ಬೇಕಾದದ್ದು ‘ಸ್ವ’ ಮಾತ್ರ!
ಈಗ ಮೂರನೆಯ ನುಡಿಯನ್ನು ನೋಡಿರಿ:
ನಾನು ನೀನಿನ ನೂಲು ಈ ದಿಗಂಬರ ಪಟವು
ಉಸಿರಿಗೇಕೊ ಬೆಸಿಗೆ? ಆರೆಂಟರೀ ಹಠವು?
ನಾ ತಂದ ಸಾಹಿತ್ಯ ನಿನ್ನ ಪಾಕ ಪದಾರ್ಥ!
ರಸವಿಲ್ಲವರಸರಿಗೆ ಊಟಕೂಟವೆ ವ್ಯರ್ಥ.
“ನಾನು ನೀನಿನ ನೂಲು ಈ ದಿಗಂಬರ ಪಟವು”:
ಬಸವಣ್ಣನವರು ತಮ್ಮ ವಚನವೊಂದರಲ್ಲಿ ದೇವರಿಗೆ ಹೇಳುತ್ತಾರೆ: “ಹಳೆಯ ನಾನು, ಕೆಳೆಯ ನೀನು.”
ಈ ಪ್ರಪಂಚ ಕೂಡ ದೇವರಷ್ಟೇ ಸನಾತನವಾದದ್ದು. ದೇವರು ಈ ಪ್ರಪಂಚದ ಪ್ರಿಯಕರ. ಬೇಂದ್ರೆಯವರು ಸಹ ‘ನಾನು’ ಹಾಗು ‘ನೀನು’ ಎನ್ನುವ ನೂಲುಗಳು ಹಾಸು ಮತ್ತು ಹೊಕ್ಕು ಇದ್ದಂತೆ ; ಇವೆರಡೂ ಇದ್ದರೇ, ಸೃಷ್ಟಿ ಎನ್ನುವ ‘ಪಟ’ (=ಬಟ್ಟೆ, ನಕಾಶೆ) ತಯಾರಾಗುವದು ಎಂದು ಹೇಳುತ್ತಾರೆ. ಆದರೆ ಈ ಪಟವು ‘ದಿಗಂಬರ ಪಟ’ ವಾಗಿದೆ. ದಿಕ್ಕುಗಳೇ ಅಂಬರವಾಗಿರುವದು ಅಂದರೆ ಬಟ್ಟೆಯಾಗಿರುವದು ದಿಗಂಬರ. ಭಕ್ತ ಹಾಗು ಭಗವಂತರ ಈ ಪಟವು ಎಷ್ಟು ವಿಶಾಲವಾಗಿದೆ ಎಂದರೆ, ಅದು ದಿಕ್ಕುಗಳನ್ನೆಲ್ಲ ವ್ಯಾಪಿಸಿದೆ. ಈ ಎಲ್ಲ ಪ್ರಪಂಚಗಳು ಭಗವಂತನ ಹಾಗು ಭಕ್ತರ ದಿಗಂಬರ ಪಟವೇ ಆಗಿವೆ.
ದಿಗಂಬರ ಎನ್ನುವದು ದತ್ತಾತ್ರೇಯನ ವರ್ಣನೆಯೂ ಅಹುದು. ಆತನಿಗೆ ದಿಕ್ಕುಗಳೇ ಅಂಬರ ಎಂದರೆ ಆತ ಬತ್ತಲೆ ಯತಿ. ಭಕ್ತ ಹಾಗು ಭಗವಂತರ ಜೋಡಣೆಯಿಂದಾದ ಈ ಪಟಕ್ಕೆ ದಿಗಂಬರನೇ ಅಂದರೆ ಭಗವಂತನೇ ಒಡೆಯ. ಆದುದರಿಂದ ಈ ಪಟವು (=ನಕಾಶೆಯು) ದಿಗಂಬರ ಬರೆದ, ಆತನ ಒಡೆತನದ ಪಟ(=ನಕಾಶೆ).
“ಉಸಿರಿಗೇಕೊ ಬೆಸಿಗೆ?”
ತಾಯ ಗರ್ಭದಲ್ಲಿದ್ದ ಶಿಶುವಿನ ಉಸಿರು ಹಾಗು ಶಿಶುವನ್ನು ಹೊತ್ತ ತಾಯಿಯ ಉಸಿರು ಬೇರೆಯಾಗಿಲ್ಲ. ಅದೇ ರೀತಿಯಲ್ಲಿ ಭಕ್ತ ಹಾಗು ಭಗವಂತನ ನಡುವಿನ ಉಸಿರು ಒಂದೇ ಆಗಿದೆ. ಬೇರೆಯಾಗಿದ್ದರೆ ಮಾತ್ರ ಬೆಸುಗೆ ಬೇಕು. ಭಕ್ತನು ಭಗವಂತನ ಶಿಶು; ಭಗವಂತನೂ ಸಹ ಭಕ್ತನ ಅಂತರಂಗದಲ್ಲಿಯ ಶಿಶು. ಇವರಿಬ್ಬರಿಗೂ ಇರುವದು ಪರಸ್ಪರ ತಾಯಿ-ಮಗುವಿನ ಸಂಬಂಧ. ಹೀಗಿರುವಾಗ ಈ ಉಸಿರಿಗೆ ಬೆಸುಗೆ ಏತಕೆ ಬೇಕು?
ಉಸಿರಿನ ಬೆಸುಗೆ ಎಂದರೆ ಪ್ರಾಣಾಯಾಮ ಎಂದೂ ಅರ್ಥವಾಗುವದು. ಭಗವತ್-ದರ್ಶನಕ್ಕೆ ಪ್ರಾಣಾಯಾಮ ಮೊದಲಾದ ಹಠಸಾಧನೆಗಳ ಅವಶ್ಯಕತೆ ಏನಿದೆ ಎಂದು ಗಣಪತಿಯು ಕೇಳುತ್ತಾನೆ.
” ಆರೆಂಟರೀ ಹಠವು?”:
ಆರೆಂಟು ಅರ್ಥಾತ್ ಆರು ಹಾಗು ಎಂಟುಗಳನ್ನು ಅನೇಕ ರೀತಿಯಲ್ಲಿ ಅರ್ಥೈಸಬಹುದು.
ಮೊದಲನೆಯ ಅರ್ಥವನ್ನು ನೋಡೋಣ:
‘ಆರು’ ಎಂದರೆ ಷಟ್-ದರ್ಶನಗಳು:
ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಪೂರ್ವಮೀಮಾಂಸಾ ಹಾಗು ಉತ್ತರಮೀಮಾಂಸಾ ಇವು ಆರು ಆಸ್ತಿಕ ದರ್ಶನಗಳು ; ಚಾರ್ವಾಕ, ಆರ್ಹತ, ವೈಭಾಷಿಕ, ಸಾತ್ರಾಂತಿಕ, ಯೋಗಾಚಾರ, ಮಾಧ್ಯಮಿಕ ಇವು ಆರು ನಾಸ್ತಿಕ ದರ್ಶನಗಳು.
‘ಎಂಟು’ ಅಂದರೆ ಅಷ್ಟಾಂಗ ಯೋಗ: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಹಾಗು ಸಮಾಧಿ ಇವು ಯೋಗದ ಎಂಟು ಅಂಗಗಳು.
ಭಕ್ತ ಹಾಗು ಭಗವಂತರು ಹಾಸು-ಹೊಕ್ಕಾಗಿ ಪಟವನ್ನು ನೇಯ್ದಾಗ ಆರು ದರ್ಶನಗಳ ಹಾಗು ಎಂಟು ಯೋಗಗಳ ಅವಶ್ಯಕತೆ ಉಳಿಯುವದಿಲ್ಲ ಎನ್ನುವದು ಮೊದಲನೆಯ ಅರ್ಥ.
ಈಗ ಎರಡನೆಯ ಅರ್ಥವನ್ನು ನೋಡೋಣ:
ಅಂತರಂಗದಲ್ಲಿ ಅಮೂರ್ತವಾಗಿ ಇರುವ ಗಣಪತಿ ಎನ್ನುವ ಭಾವನೆಯು ಮೂರ್ತರೂಪ ತಾಳಬೇಕಾದರೆ ಅವನಿಗೆ ಘನರೂಪ ಬೇಕು. ಘನಕ್ಕೆ ಇರುವದು ಆರು ಪಾತಳಿಗಳು ಹಾಗು ಎಂಟು ಕೋನಬಿಂದುಗಳು. ಈ ಆರು ಹಾಗು ಎಂಟರ ಅಂದರೆ ಘನರೂಪವನ್ನು ತಾಳುವ ಅರ್ಥಾತ್ ಮೂರ್ತರೂಪ ತಾಳುವ ಅವಶ್ಯಕತೆ ಇಲ್ಲವೆಂದು ಗಣಪತಿಯು ಭಕ್ತನಿಗೆ ಹೇಳುತ್ತಾನೆ. ಇದಕ್ಕೆ ಎರಡು ಕಾರಣಗಳಿವೆ. ಮೂರ್ತರೂಪವನ್ನು ತಾಳಿದಾಗ, ಆತನು ಅಂತರಂಗದ ಹೊರಗೆ ಬಂದು ಬಹಿರಂಗನಾಗಬೇಕಾಗುತ್ತದೆ. ಎರಡನೆಯದಾಗಿ ಮೂರ್ತರೂಪಕ್ಕೆ ಅಂತ್ಯವೆನ್ನುವದಿದೆ. ‘ಗಣಪತಿ ಅಥರ್ವ ಶೀರ್ಷ’ದಲ್ಲಿ ಗಣಪತಿಯನ್ನು ‘ತ್ವಂ ಗುಣತ್ರಯಾತೀತಃ, ತ್ವಂ ದೇಹತ್ರಯಾತೀತಃ, ತ್ವಂ ಕಾಲತ್ರಯಾತೀತ:’ ಎಂದು ಬಣ್ಣಿಸಿದ್ದಾರೆ. ಗಣಪತಿಯು ಸತ್ವ, ರಜಸ್ ಹಾಗು ತಮಸ್ ಎನ್ನುವ ಮೂರು ಗುಣಗಳಿಲ್ಲದವನು. ಈ ಮೂರು ಗುಣಗಳ ವಿವಿಧ ಪ್ರಮಾಣದ ಬೆರಕೆಯಿಂದಲೆ, ಸೃಷ್ಟಿಯ ವಿವಿಧ ಜೀವಿಗಳಿಗೆ ವಿವಿಧ ರೂಪದ ದೇಹಗಳು ಬರುವವು. ದೇಹವು ವಿನಾಶಕ್ಕೆ ಒಳಪಟ್ಟಿದೆ. ಗಣಪತಿಯು ನಿರ್ಗುಣನು, ಆದುದರಿಂದ ನಿರ್ದೇಹಿಯು, ಆದುದರಿಂದ ಅವಿನಾಶನು. ಅಂತಹ ದೇವತೆಯನ್ನು ಮೂರ್ತರೂಪದಲ್ಲಿ, ಬಹಿರಂಗದಲ್ಲಿ ಕಾಣಬೇಕೆನ್ನುವ ಭಕ್ತನ ಹಠವು ಸರಿಯಲ್ಲ ಎಂದು ಗಣಪತಿಯು ಹೇಳುತ್ತಿದ್ದಾನೆ.
ಈಗ ಮೂರನೆಯ ಅರ್ಥವನ್ನು ನೋಡೋಣ:
ಸಾಧಕನು ದೇವತೆಯನ್ನು ಪೂಜಿಸುವಾಗ, ತನ್ನ ದೇಹದ ಆರು ಅಂಗಗಳಲ್ಲಿ ದೇವತೆಯನ್ನು ನ್ಯಾಸ ಮಾಡಿಕೊಳ್ಳುತ್ತಾನೆ. ಆ ಅಂಗಗಳು ಇಂತಿವೆ: ಹೃದಯ, ತಲೆ, ಶಿಖೆ, ಭುಜಗಳು, ಕಣ್ಣುಗಳು ಹಾಗು ಕರತಲ. ಇದು ಪಿಂಡಾಂಡ. ಇದೇ ದೇವತೆಯು ಬ್ರಹ್ಮಾಂಡದಲ್ಲಿ ಎಂಟು ರೂಪಗಳಲ್ಲಿ ಸ್ಥಿತನಾಗಿರುತ್ತಾನೆ. ಅವು ಇಂತಿವೆ: ಬ್ರಹ್ಮ, ವಿಷ್ಣು, ರುದ್ರ, ಇಂದ್ರ, ಅಗ್ನಿ,ವಾಯು, ಸೂರ್ಯ ಮತ್ತು ಚಂದ್ರ (ಗಣಪತಿ-ಅಥರ್ವಶೀರ್ಷದ ಮೇರೆಗೆ.)
ಪಿಂಡಾಂಡದಲ್ಲಿಯೇ ಆಗಲಿ ಅಥವಾ ಬ್ರಹ್ಮಾಂಡದಲ್ಲಿಯೇ ಆಗಲಿ, ದೇವತೆಯ ಮೂರ್ತರೂಪವನ್ನು ಕಾಣುವ ಹಟ ಭಕ್ತನಿಗೆ ಬೇಡವೆನ್ನುವದು ಗಣಪತಿಯ ಅಭಿಮತವಾಗಿರಬಹುದು.
ಯಾಕೆ? ಇದಕ್ಕೆ ಉತ್ತರ ಮುಂದಿನ ಸಾಲುಗಳಲ್ಲಿದೆ.
“ನಾ ತಂದ ಸಾಹಿತ್ಯ ನಿನ್ನ ಪಾಕ ಪದಾರ್ಥ!
ರಸವಿಲ್ಲವರಸರಿಗೆ ಊಟಕೂಟವೆ ವ್ಯರ್ಥ.”
ಭಕ್ತ ಹಾಗು ಭಗವಂತನ ನಡುವೆ ಇರುವ ಸಂಬಂಧವು ಪೂರಕ ಸಂಬಂಧ.
(ಬಸವಣ್ಣನವರ ವಚನವೂ ಸಹ ಈ ಪೂರಕ ಸಂಬಂಧವನ್ನೇ ಬಣ್ಣಿಸುತ್ತದೆ:
“ಅಯ್ಯಾ ನೀನು ನಿರಾಕಾರವಾಗಿರ್ದಲ್ಲಿ, ನಾನು ಜ್ಞಾನವೆಂಬ ವಾಹನವಾಗಿರ್ದೆ ಕಾಣಾ;
ಅಯ್ಯಾ ನೀನು ನಾಟ್ಯಕ್ಕೆ ನಿಂದಲ್ಲಿ, ನಾನು ಚೈತನ್ಯವೆಂಬ ವಾಹನವಾಗಿರ್ದೆ ಕಾಣಾ;
ಅಯ್ಯಾ ನೀನು ಆಕಾರವಾಗಿರ್ದಲ್ಲಿ,ನಾನು ವೃಷಭನೆಂಬ ವಾಹನವಾಗಿರ್ದೆ ಕಾಣಾ;
ಅಯ್ಯಾ ನೀನೆನ್ನ ಭವವ ಕೊಂದಿಹೆನೆಂದು ಜಂಗಮ-ಲಾಂಛನವಾಗಿ ಬಂದೆಡೆ
ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ, ಕೂಡಲ ಸಂಗಮ ದೇವಾ.”)
ಈ ಪೂರಕ ಸಂಬಂಧವು ಎಂತಹದು?
ಭಕ್ತನು ಮಾಡಬೇಕಾದ ಅಡುಗೆಗೆ, ಸಾಹಿತ್ಯವನ್ನು ಪೂರೈಸುವವನೇ ಭಗವಂತನು.
ಭಕ್ತನು ಮಾಡುವ ಅಡುಗೆ ಯಾವುದು? ಭಕ್ತಿಯೇ ಅವನು ಅಟ್ಟು ಬಡಿಸುವ ನೈವೇದ್ಯ. ಆ ಭಕ್ತಿಗೆ ಬೇಕಾದ ಸಾಹಿತ್ಯವನ್ನು ಅಂದರೆ ಭಾವನೆಯನ್ನು ಕೊಡುವವನೇ ಗಣಪತಿ.
ಪಾಕಪದಾರ್ಥಕ್ಕೆ ಇನ್ನೂ ಹಲವು ಅರ್ಥಗಳಿವೆ. ಪಾಕವಾದದ್ದು ಎಂದರೆ ಹದವಾದದ್ದು, maturityಯನ್ನು ಪಡೆದದ್ದು ಎಂದು ಅರ್ಥ. ಭಕ್ತನು ಪಾಕಗೊಳ್ಳಲು ಅಂದರೆ maturityಯನ್ನು ಪಡೆಯಲು ಬೇಕಾಗುವ ಸಾಹಿತ್ಯವನ್ನು ಕೊಡುವವನು ಭಗವಂತನೇ!
ಮೂರನೆಯ ಅರ್ಥವೊಂದನ್ನು ಗಮನಿಸಿರಿ.
ಬೇಂದ್ರೆಯವರು ಸಾಹಿತ್ಯರಸಿಕರಿಗೆ ಉಣ್ಣಿಸಿದ ಪಾಕ(=ಅಡುಗೆ) ಯಾವುದು? ಅದು ಪದಾರ್ಥ(=ಪದ+ಅರ್ಥ)ದ ಅಡುಗೆ, ಅಂದರೆ ಸಾಹಿತ್ಯದ ಅಡುಗೆ. ಅವರು ಪಾಕಗೊಳ್ಳದೆ (=ಹಣ್ಣಾಗದೆ,) ಅಂತಹ ಸಾಹಿತ್ಯವನ್ನು ಉಣ್ಣಿಸಲು ಸಾಧ್ಯವೆ? ಸ್ವತಃ ಬೇಂದ್ರೆಯವರೆ ಹೇಳಿಲ್ಲವೆ?
“ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ……..”
ಬೇಂದ್ರೆಯವರು ಪಾಡು ಆಗದೆ(=ಹಣ್ಣು ಆಗದೆ), ಇಂತಹ ಸಾಹಿತ್ಯ ಕೊಡಲು ಸಾಧ್ಯವೆ? ಆದರೆ ಅವರು ಪಾಡಾಗಲು, ಪಾಕವಾಗಲು ಸಾಹಿತ್ಯವನ್ನು(=ಪರಿಸ್ಥಿತಿಯನ್ನು) ಕೊಟ್ಟವನು ಗಣಪತಿಯೇ!
ಈ ಸಂದರ್ಭದಲ್ಲಿ ಕವಿಗುರು ಕಾಳಿದಾಸನ ನಾಂದೀಪದ್ಯವೊಂದು ನೆನಪಿಗೆ ಬರುತ್ತದೆ:
“ವಾಗರ್ಥಾವಿವ ಸಂಪೃಕ್ತೌ, ವಾಗರ್ಥಪ್ರತಿಪತ್ತಯೇ
ಜಗತ: ಪಿತರೌ ವಂದೇ ಪಾರ್ವತೀಪರಮೇಶ್ವರೌ.”
“ವಾಕ್ ಮತ್ತು ಅರ್ಥ ಇವುಗಳ ಸುಸಂಯೋಗಕ್ಕಾಗಿ, ವಾಕ್ ಮತ್ತು ಅರ್ಥಗಳಂತೆ ಒಂದಾಗಿರುವ ಪಾರ್ವತೀ-ಪರಮೇಶ್ವರರಿಗೆ ವಂದಿಸುತ್ತೇನೆ”, ಎಂದು ಕಾಳಿದಾಸನು ಪ್ರಾರ್ಥಿಸುತ್ತಾನೆ. ಬೇಂದ್ರೆಯವರೂ ಸಹ ಪದ(=ವಾಕ್) ಮತ್ತು ಅದರ ಅರ್ಥಗಳ ಸುಸಂಯೋಗಕ್ಕಾಗಿ ಗಣಪತಿಯಿಂದಲೇ ಪದಾರ್ಥ-ಸಾಹಿತ್ಯವನ್ನು ಪಡೆಯುತ್ತಾರೆ.
(ಆಂಗ್ಲ ವಿಮರ್ಶಕನೊಬ್ಬನ ಹೇಳಿಕೆಯೊಂದನ್ನು ಇಲ್ಲಿ ಸೇರಿಸಿದರೆ ಅಪ್ರಸ್ತುತವಾಗಲಿಕ್ಕಿಲ್ಲ:
“ಒಂದು ಪದವನ್ನು ಕೇಳಿದಾಗ, ಆ ಪದದ ಎಲ್ಲ ಪುರಾತನ, ನೂತನ ಅರ್ಥಗಳು ಯಾರಿಗೆ ಹೊಳೆಯುತ್ತವೆಯೋ ಅವನೇ ಕವಿ.”)
ಗಣಪತಿಯ ಈ ಪ್ರಸಾದವನ್ನು ರಸಿಕರು ಮಾತ್ರ ಮೆಚ್ಚಿಕೊಂಡು ಭುಂಜಿಸಬಲ್ಲರು. ಅರ್ಥ ತಿಳಿಯದ ಅರಸಿಕರಿಗೆ ಈ ಊಟವೂ ವ್ಯರ್ಥ ; ಈ ಕೂಟವೂ ವ್ಯರ್ಥ!
ಇನ್ನು ನಾಲ್ಕನೆಯ ನುಡಿಯನ್ನು ನೋಡೋಣ:
“ನಾನು ಧರ್ಮಾರ್ಥ ಕಾಮಗಳ ನೀಡುವ ಸಾಕ್ಷಿ
ನೀ ಮುಕ್ತನೋ ರಸಿಕ, ಧನ್ಯ ಸಾರಸ ಪಕ್ಷಿ
ನಾ ಪಡುವ ಹದುಳ ನೀ ಪಡೆವ ನೋಂಪಿಯ ಗಂಟು
ಶಿವಶಕ್ತಿ ಒಳಕೀಲ ನಮ್ಮ ಗಣಪತಿಗುಂಟು, ಎಲ್ಲ ಗಣಪತಿಗುಂಟು.”
ಭಕ್ತನ ಅಂತರಂಗದಲ್ಲಿ ಅರಳುವ ಗಣಪತಿಯ ಸ್ವರೂಪವನ್ನು ಅನುಭವಿಸಿದ್ದಾಯ್ತು. ಈ ಗಣಪತಿಯ ಹಾಗು ಭಕ್ತರ ನಡುವಿನ ಸಂಬಂಧವನ್ನು ತಿಳಿದದ್ದಾಯ್ತು. ಇನ್ನು ಗಣಪತಿಯು ಭಕ್ತರಿಗೆ ನೀಡುವ ಫಲವೇನು ಎಂದು ಫಲಶ್ರುತಿಯನ್ನು ಹೇಳುವ ಕೊನೆಯ ಭಾಗವು ಇದಾಗಿದೆ.
“ನಾನು ಧರ್ಮಾರ್ಥ ಕಾಮಗಳ ನೀಡುವ ಸಾಕ್ಷಿ”:
ಭಕ್ತರಿಗೆ ಧರ್ಮ, ಅರ್ಥ ಹಾಗು ಕಾಮಗಳನ್ನು ನೀಡುವ ಸಾಕ್ಷಿಪುರುಷನು ತಾನಾಗಿದ್ದೇನೆ ಎಂದು ಗಣಪತಿಯು ಹೇಳುತ್ತಾನೆ. ಭಗವಂತನು ಯಾವಾಗಲೂ ಎಲ್ಲ ಜೀವಿಗಳ ಅಂತರಂಗದಲ್ಲಿ ಸಾಕ್ಷಿಯಾಗಿ ನಿಂತುಕೊಂಡಿರುತ್ತಾನೆ. ಈ ಜೀವಿಗಳು ಮಾಡುವ ಕರ್ಮಕ್ಕೆ ಅನುಸಾರವಾಗಿ ಆತ ಫಲ ನೀಡುತ್ತಾನೆ ಎಂದು ಹೇಳಲಾಗುತ್ತಿದೆ. ಗಣಪತಿ-ಸಹಸ್ರನಾಮಾವಳಿಯಲ್ಲಿ ‘ಸಾಕ್ಷಿ’ ಎಂದು ಗಣಪತಿಯನ್ನು ಕರೆಯಲಾಗಿದೆ.
“ನೀ ಮುಕ್ತನೋ ರಸಿಕ, ಧನ್ಯ ಸಾರಸ ಪಕ್ಷಿ
ನಾ ಪಡುವ ಹದುಳ ನೀ ಪಡೆವ ನೋಂಪಿಯ ಗಂಟು”:
ಭಗವಂತನಿಗೆ ‘ರಸ’ ಎಂದು ಕರೆಯಲಾಗಿದೆ. (‘ರಸೋ ವೈ ಸಃ.’) ರಸಿಕ ಎಂದರೆ ಭಗವಂತನನ್ನು ಅರಿತುಕೊಂಡವನು. ಆ ರಸಿಕನಿಗೆ ಧರ್ಮ, ಅರ್ಥ ಹಾಗು ಕಾಮಗಳನ್ನು ಮೀರಿದ ನಾಲ್ಕನೆಯ ಪುರುಷಾರ್ಥವಾದ ಮುಕ್ತಿ ದೊರೆತಿದೆ. ಆದುದರಿಂದ ಆತ ಮುಕ್ತನು. ಆತ ಸಾರಸ ಪಕ್ಷಿಯಂತೆ ಧನ್ಯನು. ಸಾರಸ ಪಕ್ಷಿಯು (ಅಂದರೆ ಬಕಪಕ್ಷಿಯು) ನೀರಿನ ಅಂಚಿನಲ್ಲಿ ಧ್ಯಾನಸ್ಥವಾಗಿ ನಿಂತುಕೊಂಡಿರುತ್ತದೆ. ಅದೇ ರೀತಿಯಲ್ಲಿ ಸಾಧಕನೂ ಸಹ ಪ್ರಪಂಚದ ಅಂಚಿನಲ್ಲಿ ಧ್ಯಾನಸ್ಥನಾಗಿ ನಿಂತಿರುತ್ತಾನೆ. ‘ಸಾರಸ’ ಪದಕ್ಕೆ ‘ಸಹ ರಸ’ ಎಂದು ಅರ್ಥೈಸಬಹುದು. ಅಂದರೆ ಈ ಪಕ್ಷಿಯು ಭಗವಂತನ ಧ್ಯಾನದಲ್ಲಿಯೇ ಇರುತ್ತದೆ. ಅದು ಭಕ್ತನ ನೋಂಪಿ(=ತಪಸ್ಸು). ಭಕ್ತನ ಈ ತಪಸ್ಸಿನ ಗಂಟೇ(=ಐಶ್ವರ್ಯವೇ), ಭಗವಂತನು ಪಡುವ ಸುಖ (=ಹದುಳ). ಭಕ್ತ ಮತ್ತು ಭಗವಂತನಿಗಿರುವ ಪರಸ್ಪರ ಸಂಬಂಧವಿದು. “ಪರಸ್ಪರಂ ಭಾವಯಂತಃ” ಎನ್ನುವ ಗೀತಾವಾಕ್ಯವನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
“ಶಿವಶಕ್ತಿ ಒಳಕೀಲ ನಮ್ಮ ಗಣಪತಿಗುಂಟು, ಎಲ್ಲ ಗಣಪತಿಗುಂಟು.”:
ಇಲ್ಲಿಯವರೆಗೂ ಗಣಪತಿಯ ಸ್ವಸ್ವರೂಪ ವರ್ಣನೆಯನ್ನು ಅನುಭವಿಸಿದ ಕವಿ-ಋಷಿ ಈಗ ಹಿಗ್ಗಿನಿಂದ ಹೇಳುತ್ತಾನೆ:
“ಶಿವಶಕ್ತಿ ಒಳಕೀಲ ನಮ್ಮ ಗಣಪತಿಗುಂಟು, ಎಲ್ಲ ಗಣಪತಿಗುಂಟು.”
ದೇವತೆಯಿಂದ ಸ್ಫುರಣವಾದದ್ದು ಮಂತ್ರ. ಪ್ರತಿಯೊಂದು ಮಂತ್ರಕ್ಕೆ ‘ಕೀಲಕ’ ಎನ್ನುವದಿರುತ್ತದೆ. ಗಣಪತಿ ಮಂತ್ರಕ್ಕೆ ಶಿವ-ಶಕ್ತಿಯೇ ಕೀಲಕ.
ಗಣಪತಿ-ಮಂತ್ರವನ್ನು ಬೇಂದ್ರೆಯವರು ಧ್ಯಾನಸ್ಥ ಸ್ಥಿತಿಯಲ್ಲಿ ನೋಡಿದರು. (ಅವರು ‘ಮಂತ್ರ-ದೃಷ್ಟಾರರು’.)
ಸೂತ್ರರೂಪದಲ್ಲಿ ನಮ್ಮೆದುರಿಗೆ ಇಟ್ಟರು. ತಿಳಿದುಕೊಳ್ಳುವದು ನಮ್ಮ ಹೊಣೆ.
“ಕಂಡವರಿಗಲ್ಲ, ಕಂಡವರಿಗಷ್ಟೆ ಹೊಳೆಯುವದು ಇದರ ಕಳೆಯು!”(---ಹೃದಯ ಸಮುದ್ರ)
ಬೇಂದ್ರೆಯವರು ಕಾವ್ಯಾಕಾಶದಲ್ಲಿ ಹಕ್ಕಿಯಂತೆ ಹಾರಾಡಿದ್ದನ್ನು ನೋಡಿದವರು, ಮೆಚ್ಚಿಕೊಂಡವರು ಅನೇಕರಿದ್ದಾರೆ. ಈ ರಾಜಹಂಸವು ಆಗಸದಲ್ಲಿ ಹಾರಾಟ ನಿಲ್ಲಿಸಿ, ಧ್ಯಾನಸ್ಥವಾಗಿ ನಿಂತುಕೊಂಡಾಗ, ಆ ಚೆಲುವನ್ನು ಕಾಣದವರೂ ಇದ್ದಾರೆ. ಇಂತಹ ವಿಮರ್ಶಕರ ನಿಲುವಿನಿಂದ ಆ ರಾಜಹಂಸದ ಚೆಲುವಿಗೆ ಕುಂದಿಲ್ಲ!
(ಈ ಕವನವನ್ನು ನನಗೆ ಒದಗಿಸಿದ ಶ್ರೀ ವ್ಯಾಸ ದೇಶಪಾಂಡೆಯವರಿಗೆ ನಾನು ಕೃತಜ್ಞನಾಗಿದ್ದೇನೆ.)
೫. ಗೃಹಿಣಿ
ಹೆಚ್ಚಿನ ಓದಿಗೆ: http://sallaap.blogspot.com/2011/03/blog-post_07.html
ಮಾರ್ಚ ೮, ೨೦೧೧-- ಇದು ಅಂತರರಾಷ್ಟ್ರೀಯ ಮಹಿಳಾದಿನದ ಶತಮಾನೋತ್ಸವದ ದಿನ.
ಈ ಸಂದರ್ಭದಲ್ಲಿ ಬೇಂದ್ರೆಯವರು ಸ್ತ್ರೀಯ ಜೊತೆಗೆ ಯಾವ ರೀತಿಯ ಭಾವಸಂಬಂಧವನ್ನು ಹೊಂದಿದ್ದರು ಎನ್ನುವದನ್ನು ಅರಿಯಲು, ಈ ಮೂರು ಕವನಗಳನ್ನು ಪರಿಶೀಲಿಸಬಹುದು:
(೧) ನಾನು
(೨) ಗಂಡಸು ಹೆಂಗಸಿಗೆ
(೩) ಗೃಹಿಣಿ
‘ನಾನು’ ಕವನದಲ್ಲಿ ಬೇಂದ್ರೆಯವರು ತಾನು ಐದು ತಾಯಂದಿರ ಕೂಸು ಎಂದು ಹೇಳಿಕೊಳ್ಳುತ್ತಾರೆ. ಕವನದಲ್ಲಿಯ ಕ್ರಮದ ಮೇರೆಗೆ, ಈ ತಾಯಂದಿರು ಹೀಗಿದ್ದಾರೆ: ವಿಶ್ವಮಾತೆ, ಭೂಮಿತಾಯಿ, ಭಾರತಮಾತೆ, ಕನ್ನಡ ಮಾತೆ ಹಾಗು ತನ್ನ ಹೆತ್ತ ತಾಯಿ.
‘ಈ ಐದು ಐದೆಯರೆ ಪಂಚಪ್ರಾಣಗಳಾಗಿ, ಈ ಜೀವ ದೇಹನಿಹನು.’
ಬೇಂದ್ರೆಯವರಿಗೆ ಹೆಣ್ಣು ಅಂದರೆ ಪೋಷಣೆಯ ಮೂರ್ತಿ. ಈ ಐದೂ ಮುತ್ತೈದೆಯರು ಬೇಂದ್ರೆಯವರಿಗೆ ವಿಭಿನ್ನ ರೀತಿಯಲ್ಲಿ ಪೋಷಣೆ ಇತ್ತಿದ್ದಾರೆ. ಅವರಿಂದಲೇ ಬೇಂದ್ರೆಯವರು ‘ಕವಿ ಅಂಬಿಕಾತನಯದತ್ತ’ರಾಗಿದ್ದಾರೆ. ತಮ್ಮ ಮಾತೆಯರನ್ನು ಕೃತಜ್ಞತೆಯಿಂದ ನೆನೆದು, ಅವರ ಋಣ ತೀರಿಸುವ ಕೈಂಕರ್ಯವನ್ನು ಬೇಂದ್ರೆಯವರು ಹೊತ್ತಿದ್ದಾರೆ.
ಎರಡನೆಯದಾದ ‘ಗಂಡಸು ಹೆಂಗಸಿಗೆ ’ ಕವನದಲ್ಲಿ, ಬೇಂದ್ರೆಯವರು ಹೆಂಗಸು ಗಂಡಸಿಗೆ ಕೊಡುವ ಪ್ರೀತಿಯ ವಿವಿಧ ಮುಖಗಳನ್ನು ವರ್ಣಿಸುತ್ತಾರೆ:
ತಾಯಿ ಕನಿಮನೆಯೇ, ನೀ ಅಕ್ಕ ಅಕ್ಕರತೆಯೇ
ಬಾಯೆನ್ನ ತಂಗಿ ಬಾ ಮುದ್ದು ಬಂಗಾರವೇ
ನೀಯೆನ್ನ ಹೆಂಡತಿಯೊ ಮೈಗೊಂಡ ನನ್ನಿಯೋ
ಮಗಳೊ ನನ್ನೆದೆಯ ಮುಗುಳೊ?
ಯಾವುದೇ ಗಂಡಸಿಗೆ, ಹೆಣ್ಣಿನ ಜೊತೆಗೆ ಬರುವ ಮೊದಲ ಸಂಬಂಧವು ತಾಯಿ-ಮಗುವಿನದು;
ಕಾಲಾನುಕ್ರಮದಲ್ಲಿ ಬಳಿಕ ಬರುವದು ಅಕ್ಕ-ತಮ್ಮ;
ನಂತರ ಅಣ್ಣ-ತಂಗಿ;
ಹರೆಯದಲ್ಲಿ ಗಂಡ-ಹೆಂಡತಿ.
ಕೊನೆಗೆ ಬರುವದು ಅಪ್ಪ-ಮಗಳು.
ಈ ಎಲ್ಲ ಸಂಬಂಧಗಳಲ್ಲಿ ಪ್ರೀತಿಯ ಸ್ವರೂಪವೂ ಸಹ ಭಿನ್ನವಾಗಿರುತ್ತದೆ.
ತಾಯಿಗೆ ಮಗುವಿನ ಮೇಲಿರುವದು ಅನುಕಂಪ ತುಂಬಿದ ವಾತ್ಸಲ್ಯ. ಅವಳು ‘ಕನಿಮನೆ’ ಅಂದರೆ ಮರುಕದ ಉಗ್ರಾಣ.
ಅಕ್ಕನಿಗೆ ತಮ್ಮನ ಮೇಲಿರುವದು ಅಕ್ಕರತೆ.
ತಂಗಿಯು ಅಣ್ಣನಿಗೆ ಮುದ್ದು ಬಂಗಾರ.
ಹೆಂಡತಿಯು ಇವನ ಪುರುಷಾರ್ಥಗಳ ಸಹಧರ್ಮಿಣಿ. ಆದುದರಿಂದ ಅವಳು ಮೈಗೊಂಡ ನನ್ನಿ.
ಮಗಳಂತೂ ಇವನ ಹಂಬಲದಿಂದ ರೂಪು ತಳೆದ ಮುಗುಳು ಅಂದರೆ ಹೂಮೊಗ್ಗು!
ಇವೆಲ್ಲ ವೈಯಕ್ತಿಕ ಸಂಬಂಧಗಳು.
ಸಾಂಸ್ಕೃತಿಕ ನೆಲೆಯಲ್ಲಿ ಗಂಡು ಹಾಗು ಹೆಣ್ಣಿನ ಪಾತ್ರಗಳೇನು ಎನ್ನುವದನ್ನು ಬೇಂದ್ರೆಯವರು ತಮ್ಮ‘ಗೃಹಿಣಿ’ ಕವನದಲ್ಲಿ ಈ ರೀತಿಯಾಗಿ ಹಿಡಿದಿಟ್ಟಿದ್ದಾರೆ:
೧
ಏಳು ಮೆಟ್ಟಿನ ಹುಲಿಯ ಬೀರಬೇಂಟೆಯ ಬಿಡಿಸಿ
ಮಗುವ ಮುದ್ದಾಡುವೊಲು ಮಾಡಿದಾಕೆ.
ಗುರಿಯಿಟ್ಟ ಕಣ್ಣುಗಳ, ಕಿವಿಯೂದಿ, ಹೊರಳಿಸುತ
ತಾನೆ ತನ್ನಷ್ಟಕ್ಕೆ ಹಾಡಿದಾಕೆ.
೨
ತಳಿರಿನುಡುಗೆಯನುಟ್ಟು ಗರಿತೊಡವುಗಳ ತೊಟ್ಟು
ಅಡವಿಯಲಿ ಹೂದೋಟ ಹೂಡಿದಾಕೆ.
ಗಿಡಕೆ ಗುಡಿಯನು ಕಟ್ಟಿ, ಬೇರೊಂದು ಲೋಕವನು
ಮೂಕಮಾತುಗಳಿಂದ ಬೇಡಿದಾಕೆ.
೩
ಮನೆಯ ಹೊಸ್ತಿಲಕೆ ಶುಭ ಬರೆಯುವಾಕೆ.
ಮಂಗಲವೆ ಬಾರೆಂದು ಕರೆಯುವಾಕೆ.
ಬಾಳ ಸುಳಿಯಲಿ ಬೆಳೆದು ತೋರುವಾಕೆ.
ದಿನದಿನವು ನವಜಯವ ಕೋರುವಾಕೆ.
. . . . . . . . . . . . . . . . . . . . . . . . . . . . . . . . . . . . . . . . . .. . . . . . ..
೧
ಏಳು ಮೆಟ್ಟಿನ ಹುಲಿಯ ಬೀರಬೇಂಟೆಯ ಬಿಡಿಸಿ
ಮಗುವ ಮುದ್ದಾಡುವೊಲು ಮಾಡಿದಾಕೆ.
ಗುರಿಯಿಟ್ಟ ಕಣ್ಣುಗಳ, ಕಿವಿಯೂದಿ, ಹೊರಳಿಸುತ
ತಾನೆ ತನ್ನಷ್ಟಕ್ಕೆ ಹಾಡಿದಾಕೆ.
ಈ ಕವನದ ಮೊದಲ ನುಡಿಯ ಮೊದಲ ಸಾಲು ಮಾನವ ಸಂಸ್ಕೃತಿಯ ಮೊದಲ ಮೆಟ್ಟಲನ್ನು ಚಿತ್ರಿಸುತ್ತದೆ. ಇದಿನ್ನೂ ಬೇಟೆಯಾಡುವ ಹಂತ. ಈ ಹಂತದಲ್ಲಿ ಗಂಡಿಗಿರುವ ಶೌರ್ಯದ, ಕ್ರೌರ್ಯದ ಹಮ್ಮನ್ನು ಬೇಂದ್ರೆಯವರು ‘ಏಳು ಮೆಟ್ಟಿನ ಹುಲಿ’ ಹಾಗು ‘ಬೀರಬೇಂಟೆ’ ಪದಗಳಿಂದ ವ್ಯಕ್ತಪಡಿಸಿದ್ದಾರೆ. ಗಂಡಸಿನಲ್ಲಿರುವ ಈ ಜೀವಿ-ವಿರೋಧಿ, ಭಾವೋನ್ಮಾದವನ್ನು ಜೀವನ್ಮುಖಿ ಭಾವವನ್ನಾಗಿ ತಿದ್ದಿದವಳೇ ಹೆಣ್ಣು. ಜೀವವಿನಾಶಕ್ಕಾಗಿ ಹೊರಟು ನಿಂತ ಗಂಡಸನ್ನು ಅಲ್ಲಿಯೇ ತಡೆದು ನಿಲ್ಲಿಸಿ, ಸೃಷ್ಟಿಸಂಕೇತವಾದ ಮಗುವನ್ನು ಮುದ್ದಿಸುವಂತೆ ಮಾಡಿದವಳೇ ಹೆಣ್ಣು. ಇದನ್ನು ಸಾಧಿಸುವ ಅವಳ ಶಾಂತ ರೀತಿಯನ್ನು ಬೇಂದ್ರೆ ಹೀಗೆ ಬಣ್ಣಿಸುತ್ತಾರೆ:
‘ಗುರಿಯಿಟ್ಟ ಕಣ್ಣುಗಳ, ಕಿವಿಯೂದಿ, ಹೊರಳಿಸುತ,ತಾನೆ ತನ್ನಷ್ಟಕ್ಕೆ ಹಾಡಿದಾಕೆ.’
ಬೇಟೆಯ ಹುಮ್ಮಸ್ಸಿನಲ್ಲಿಯೇ ಏಕಲಕ್ಷ್ಯನಾದ ಗಂಡಿನ ಕಿವಿಯಲ್ಲಿ ಇವಳು ಮೃದುವಾಗಿ ಪಿಸು ನುಡಿಯುತ್ತಾಳೆ. ಗರ್ವದ ಗಂಡಸನ್ನು ಈ ರೀತಿಯಾಗಿ ಅವಳು ಬದಲಾಯಿಸುತ್ತಾಳೆ. ಹಿಂಸಾತ್ಮಕ ಸಂಸ್ಕೃತಿಯನ್ನು ಅಹಿಂಸಾತ್ಮಕ ಸಂಸ್ಕೃತಿಗೆ ಪರಿವರ್ತಿಸುವ ಮೊದಲ ಹೆಜ್ಜೆ ಇದು. ಇದನ್ನು ಸಾಧಿಸುವಲ್ಲಿ ಅವಳು ಯಾವುದೇ ಅಬ್ಬರವನ್ನು ತೋರುವದಿಲ್ಲ.
ತನ್ನಷ್ಟಕ್ಕೆ ಹಾಡುತ್ತ, ಮುಂದುವರೆಯುವ ಮಾದರಿ ಅವಳದು. ಹಾಡುವದು ನಾಗರಿಕ ಜೀವನದ ಮೊದಲ ಕಲೆ ಎನ್ನುವದನ್ನೂ ಬೇಂದ್ರೆ ಸೂಚಿಸುತ್ತಾರೆ. ಈ ಕಲೆಗೆ ಮೂಲಳಾದವಳು ತಾಯಿ ಸರಸ್ವತಿ ಅಂದರೆ ಹೆಣ್ಣು.
೨
ತಳಿರಿನುಡುಗೆಯನುಟ್ಟು ಗರಿತೊಡವುಗಳ ತೊಟ್ಟು
ಅಡವಿಯಲಿ ಹೂದೋಟ ಹೂಡಿದಾಕೆ.
ಗಿಡಕೆ ಗುಡಿಯನು ಕಟ್ಟಿ, ಬೇರೊಂದು ಲೋಕವನು
ಮೂಕಮಾತುಗಳಿಂದ ಬೇಡಿದಾಕೆ.
ಎರಡನೆಯ ನುಡಿಯು ನಾಗರಿಕತೆಯ ಬೆಳವಣಿಗೆಯನ್ನು ಸೂಚಿಸುತ್ತದೆ. ಅಡವಿಯಲ್ಲಿರುವ ಪ್ರಾಣಿಗಳಂತೆಯೇ ಜೀವಿಸುತ್ತಿದ್ದ ಮನುಷ್ಯನ ಸಾಂಸ್ಕೃತಿಕ ಪ್ರಜ್ಞೆ ಬದಲಾಗಿರುವದನ್ನು ಈ ನುಡಿ ವರ್ಣಿಸುತ್ತದೆ. ಸೌಂದರ್ಯದ ಸೃಷ್ಟಿಯಲ್ಲಿ ಮಾನವನಿಗೆ ಅಭಿರುಚಿ ಬೆಳೆದದ್ದನ್ನು, ‘ತಳಿರಿನುಡುಗೆಯನುಟ್ಟು ಗರಿತೊಡವುಗಳ ತೊಟ್ಟು ಅಡವಿಯಲಿ ಹೂದೋಟ ಹೂಡಿದಾಕೆ.’ ಎನ್ನುವ ವರ್ಣನೆಯ ಮೂಲಕ ಬೇಂದ್ರೆ ಸೂಚಿಸುತ್ತಾರೆ. ಏನೇ ಆದರೂ ತನ್ನ ಹಾಗು ತನ್ನವರ ಶೃಂಗಾರಕ್ಕೆ ಈ ನಾಗರಿಕತೆ ಸೀಮಿತವಾಗಿ ಉಳಿಯಲಿಲ್ಲ. ತಿಂದುಂಡು ಸಾಯುವ ಭೌತಿಕ ಲೋಕದಾಚೆಗೆ ಇರುವ ಪಾರಮಾರ್ಥಿಕ ಲೋಕದ ಅರಿವು ಹೆಣ್ಣಿನಲ್ಲಿ ಮೂಡತೊಡಗಿದೆ. ಅವಳು ತನ್ನ ಗೂಡಿನ ಪಕ್ಕದ ಗಿಡಗಳಿಗೆ ಬಾವುಟವನ್ನು ಕಟ್ಟುತ್ತಾಳೆ. ಇದು ಮಾನವನ ಸೌಂದರ್ಯಾಭಿರುಚಿಯ ಹಾಗು ಉನ್ನತಿಯ ಅಭೀಪ್ಸೆಯನ್ನು ತೋರುತ್ತದೆ. ತಾವಿರುವ ಲೋಕವು ಪ್ರಾಣಿಲೋಕವಾಗದೆ, ಅಂತರಂಗವನ್ನು ಬೆಳಗುವ ಲೋಕವಾಗಲಿ ಎಂದು ಅವಳು ಬೇಡಿಕೊಳ್ಳುತ್ತಾಳೆ. ಮಾನವಶಕ್ತಿಯನ್ನು ಮೀರಿದ ಚೈತನ್ಯವೊಂದಿದೆ ಎಂದು ಅವಳಿಗೆ ಅರಿವಾಗತೊಡಗಿದ್ದು ಈ ‘ಬೇಡಿಕೊಳ್ಳುವ ’ ಪದದಿಂದ ವ್ಯಕ್ತವಾಗುತ್ತದೆ. ಈ ಬೇಡಿಕೆಯಲ್ಲಿ ಅಬ್ಬರವಿಲ್ಲ. ಅವಳದು ಮೂಕ ಮಾತುಗಳು, ವಿನಯಪೂರ್ಣ ಸುಸಂಸ್ಕೃತಿ.
ದೇವರ ಕಲ್ಪನೆ ಮೂಡುತ್ತಿರುವ ಈ ಕಾಲಾವಧಿಯು ನಾಗರಿಕತೆಯ ಪ್ರಾಥಮಿಕ ಸಂಶೋಧನೆಗಳ ಕಾಲಾವಧಿಯೂ ಆಗಿದೆ. ಬತ್ತಲೆ ಮಾನವಿಯು ಇದೀಗ ಗಿಡಮರಗಳ ತೊಪ್ಪಲನ್ನು ಕಟ್ಟಿಕೊಳ್ಳಲು ಕಲಿತಳು. ತನ್ನ ಚೆಲುವಿಗೆ ಮೆರಗು ಕೊಡಲೆಂದು ಹಕ್ಕಿಯ ಗರಿಯನ್ನು ತಲೆಗೆ ಆಭರಣವಾಗಿ ಬಳಸತೊಡಗಿದಳು. ಇದೆಲ್ಲವೂ ನಾಗರಿಕತೆಯ ಬೆಳವಣಿಗೆಗೆ ಹೆಣ್ಣು ಕೊಟ್ಟ ಕಾಣಿಕೆ. ನಮ್ಮ ದೇವತೆಗಳ ಉಡುಗೆ, ತೊಡುಗೆಗಳಲ್ಲಿಯೂ ಈ ಕಾಲಾವಧಿಯು ಬಿಂಬಿತವಾಗಿದೆ. ಸವದತ್ತಿಯ ಎಲ್ಲಮ್ಮನು ತನ್ನ ಭಕ್ತರಿಗೆ ಬೇವಿನ ತೊಪ್ಪಲನ್ನು ತೊಡಿಸುತ್ತಾಳೆ; ಬನಶಂಕರಿ ದೇವಿಯು ‘ಶಾಕಾಂಬರಿ’, ಅಂದರೆ ಗಿಡದ ತೊಪ್ಪಲನ್ನು ಉಟ್ಟವಳು. ಶ್ರೀಕೃಷ್ಣನು ತನ್ನ ತಲೆಗೊಂದು ನವಿಲಗರಿಯನ್ನು ಸಿಕ್ಕಿಸಿಕೊಂಡವನು. ನಮ್ಮಂತೆ ನಮ್ಮ ದೇವರುಗಳೂ ಸಹ ‘ಬತ್ತಲೆ ಕಾಳಿದೇವಿ’ಯಿಂದ, ಸಕಲಾಭರಣಶೋಭಿತೆಯಾದ ಲಕ್ಷ್ಮೀದೇವಿಯವರೆಗೂ ವಿವಿಧ ನಾಗರಿಕ ಸ್ತರಗಳಲ್ಲಿ ಹಾಯ್ದು ಬಂದವರೇ.
೩
ಮನೆಯ ಹೊಸ್ತಿಲಕೆ ಶುಭ ಬರೆಯುವಾಕೆ.
ಮಂಗಲವೆ ಬಾರೆಂದು ಕರೆಯುವಾಕೆ.
ಬಾಳ ಸುಳಿಯಲಿ ಬೆಳೆದು ತೋರುವಾಕೆ.
ದಿನದಿನವು ನವಜಯವ ಕೋರುವಾಕೆ.
ಬಯಲಲ್ಲಿ ಬಿದ್ದ ಪ್ರಾಣಿಯನ್ನು ಮನೆಯಲ್ಲಿ ಬೆಳೆಯುವ ಮಾನವನನ್ನಾಗಿ ಮಾಡಿದವಳೇ ಹೆಣ್ಣು. ಆದುದರಿಂದಲೇ ಅವಳು ಗೃಹಿಣಿ.ನಾಗರಿಕತೆಯ ಬೆಳವಣಿಗೆ ಹಾಗು ಸಂಸ್ಕೃತಿಯ ಉನ್ನತೀಕರಣ ಇವು ಹೆಣ್ಣಿನ ಕೊಡುಗೆ. ಇದನ್ನೆಲ್ಲ ಅವಳು ಮೌನವಾಗಿಯೇ ಸಾಧಿಸುತ್ತ ಬಂದಿದ್ದಾಳೆ. ಈ ಸಾಧನೆಯ ಹಿಂದಿನ ಅಪೇಕ್ಷೆ ಏನು? ಲೋಕಕ್ಕೆಲ್ಲ ಶುಭವಾಗಲಿ ಎನ್ನುವದೇ ಅವಳ ಹಿರಿಹಂಬಲ. ಅದನ್ನು ಅವಳು ಸಾಧಿಸುವದು ಮುಂಜಾವಿನಲ್ಲೆದ್ದು ಮನೆಯ ಹೊಸ್ತಿಲಕೆ ರಂಗೋಲಿ ಎಳೆಯುವ ಕ್ರಿಯೆಯೊಂದಿಗೆ. ಇದನ್ನು ಬೇಂದ್ರೆಯವರು ’ಶುಭವನ್ನು ಬರೆಯುವ ಕ್ರಿಯೆ’ ಎಂದು ಬಣ್ಣಿಸುತ್ತಾರೆ. ಕುಟುಂಬವೇ ಸಮಾಜದ ಪ್ರಾಥಮಿಕ ಘಟಕ. ಈ ಕುಟುಂಬಕ್ಕೆ ಅವಳು ಆಡಂಬರದ ಸಂಪತ್ತನ್ನು ಬಯಸುವದಿಲ್ಲ, ಕೇವಲ ಶುಭಮಂಗಲವನ್ನು ಬಯಸುತ್ತಾಳೆ. ತಾನು ಬೆಳೆಯುವದೇ ಸಮಾಜದ ಬೆಳವಣಿಗೆ, ಸಂಸ್ಕೃತಿಯ ಬೆಳವಣಿಗೆ ಎನ್ನುವದನ್ನು ಅರಿತ ಅವಳು ‘ಬಾಳ ಸುಳಿಯಲಿ ಬೆಳೆದು ತೋರಿಸುತ್ತಾಳೆ ’.
ರಂಗೋಲಿಯನ್ನು ಬರೆಯುವದು ಒಂದು ಚಿತ್ರಕಲೆ. ನಾಗರಿಕ ಕಲೆಗಳ ಮತ್ತೊಂದು ಸಂಶೋಧನೆಯ ಪ್ರವರ್ತಕಿ ಹೆಣ್ಣೇ ಆಗಿದ್ದಾಳೆ!
ಗಂಡಸಿನ ಜಯವು ಪ್ರಕೃತಿಯ ಮೇಲಿನ ಬಾಹ್ಯಜಯವಾಗಿದ್ದರೆ, ಹೆಣ್ಣಿನ ಜಯವು ಸಾಂಸ್ಕೃತಿಕ ಜಯ. ಇಂತಹ ಜಯವು ಮಾನವಲೋಕಕ್ಕೆ ಪ್ರತಿದಿನವೂ ಲಭಿಸಲಿ ಎಂದು ಅವಳು ತಾನು ನಂಬುತ್ತಿರುವ ಆ ದೈವೀಚೈತನ್ಯಕ್ಕೆ ಪ್ರಾರ್ಥಿಸುತ್ತಾಳೆ. ಈ ಕೊನೆಯ ಸಾಲಿನ ಮೂಲಕ, ಬೇಂದ್ರೆಯವರು ಹೆಣ್ಣಿನ ಮನೋಧರ್ಮವನ್ನು ತೋರುತ್ತಿದ್ದಾರೆ.
ಮೂರು ನುಡಿಗಳ ಈ ಪುಟ್ಟ ಕವನದಲ್ಲಿ ನಾಗರಿಕತೆಯ ಬೆಳವಣಿಗೆಯ ವಿವಿಧ ಹಂತಗಳನ್ನು ಹಾಗು ಗೃಹಿಣಿಯೇ ಮಾನವಸಂಸ್ಕೃತಿಯ ಸ್ರೋತ ಎನ್ನುವ ಸತ್ಯವನ್ನು ಬೇಂದ್ರೆಯವರು ತೆರೆದು ತೋರಿಸುತ್ತಿದ್ದಾರೆ. ತನ್ನ ಕುಟುಂಬವನ್ನು ಮುನ್ನಡೆಸುವ ಮೂಲಕ ಹೆಣ್ಣು ಸಮಾಜವನ್ನು ಮುನ್ನಡೆಸುತ್ತಾಳೆ. ಆದುದರಿಂದ ಅವಳು ವಿಶ್ವಕುಟುಂಬಿನಿಯಾದ ಗೃಹಿಣಿ. ಲೋಕಕಲ್ಯಾಣವೇ ಅವಳ ಪರಮಾರ್ಥ.
ಇದು ಸ್ತ್ರೀಯ ಬಗೆಗಿರುವ ಬೇಂದ್ರೆ ದೃಷ್ಟಿ.
೬. ಶುಭ ನುಡಿಯೆ ಶಕುನದ ಹಕ್ಕಿ
ಹೆಚ್ಚಿನ ಓದಿಗೆ: http://sallaap.blogspot.com/2011/01/blog-post_24.html
`ಶುಭ ನುಡಿಯೆ ಶಕುನದ ಹಕ್ಕಿ’ ಕವನವು ಬೇಂದ್ರೆಯವರ ನಾದಲೀಲೆ ಕವನಸಂಕಲನದಲ್ಲಿ ಅಡಕವಾಗಿದೆ.ಕಳವಳದಲ್ಲಿ ಮುಳುಗಿದ ಮನಸ್ಸಿನ ಸ್ಥಿತಿಯನ್ನು ಬೇಂದ್ರೆಯವರು ಈ ಕವನದಲ್ಲಿ ವರ್ಣಿಸಿದ್ದಾರೆ.ಪ್ರತಿಯೊಬ್ಬ ಮನುಷ್ಯನ ಬಾಳಿನಲ್ಲಿಯೂ ಕಷ್ಟದ ಅನೇಕ ಪ್ರಸಂಗಗಳು ಬರುತ್ತವೆ. ಪುರುಷಪ್ರಯತ್ನವೆಲ್ಲವೂ ಸೋತಾಗ, ಮನುಷ್ಯನು ದೈವದ ಮೊರೆ ಹೋಗುತ್ತಾನೆ. ತಾನು ನಂಬಿದ ದೈವ ತನ್ನ ಕೈಹಿಡಿಯುವುದೊ,ಕೈ ಬಿಡುವುದೊ ಎಂದು ಅರಿಯದೆ, ಮನುಷ್ಯನು ತಳಮಳಿಸುತ್ತಾನೆ. ತನ್ನ ದೈವವನ್ನು ಊಹಿಸಲು ಆತನು ದೈವೀ ಸಂಕೇತಗಳಿಗೆ ಅಂದರೆ ಶಕುನಗಳಿಗೆ ಶರಣಾಗುತ್ತಾನೆ. ಆತನ ತಾರ್ಕಿಕ ಬುದ್ಧಿಯು ಸೋತು ಹೋಗಿ, ನಿಗೂಢತೆಗೆ ಅವನ ಮನಸ್ಸು ಒಲಿಯುತ್ತದೆ. ಇದು ಈ ಕವನದಲ್ಲಿಯ ಭಾವ.
ಕವನದ ಪೂರ್ಣಪಾಠ ಹೀಗಿದೆ:
.....................................................................................................
ಶುಭ ನುಡಿಯೆ ಶಕುನದ ಹಕ್ಕಿ
(ರಾಗ : ಸಾವೇರಿ--ಏಕತಾಳ)
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ |
ಶುಭ ನುಡಿಯೆ || ಪಲ್ಲ ||
ಮುಂಗಾಳು ಕವಿಯುವಾಗ
ಹಸುಗೂಸಿಗೆ ಕಸಿವಿಸಿಯಾಗಿ
ಕಕ್ಕಾವಿಕ್ಕಿಬಡುತ ಪಾಪ
ಕಿರಿ ಕಿರಿ ಅಳುತಲಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಇರುಳು ಗಾಳಿ ಬೀಸುವಾಗ
ಹಣತಿಸೊಡರು ಹೆದರಿದಂತೆ
ತಾನು ತಣ್ಣಗಾದೇನೆಂದು
ಚಿಳಿ ಚಿಳಿ ನಡುಗುತಲಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ನಿದ್ದೆ ಬಳಲಿ ಬಳಿಯಲಿ ಬಂದು
ಕೂಡಿದೆವೆಗಳಾಸರೆಯಲ್ಲಿ
ಮೆsಲ್ಲಗೆ, ಒರಗುವ ಅದನು
ಒಂಟಿ ಸೀನು ಹಾರಿಸುತಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಕತ್ತಲೆಯ ಕೆಸರಿನ ತಳಕೆ
ಮಿನಮಿನಗುವ ಹರಳುಗಳಂತೆ
ಚಿಕ್ಕೆ ಕೆಲವು ತೊಳಗುತಲಿರಲು
ಗಳಕನೊಂದು ಉಲಿಯುತಲಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಉಸಿರು ತೂಗು-ತೊಟ್ಟಿಲಲ್ಲಿ
ಜೀವ ಮೈಯ ಮರೆತಿರಲಾಗಿ
ಒಳಗಿನಾವ ಚಿಂತೆಯ ಎಸರೋ
ತಂತಾನೆ ಕನವರಿಸುತಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ನಟ್ಟಿರುಳಿನ ನೆರಳಿನಲ್ಲಿ
ನೊಂದ ಜೀವ ಮಲಗಿರಲಾಗಿ
ಸವಿಗನಸು ಕಾಣುವಾಗ
ಗೂಗೆಯೊಂದು ಘೂಕ್ಕೆನುತಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಎಚ್ಚರಾದ ಪೆಚ್ಚು ಮನವು
ಹುಚ್ಚೆದ್ದು ಹರಿಯುತಿರಲು
ನಿದ್ದೆಯಿಲ್ಲ ಆಕಳಿಸಿದರೂ
ಹಲ್ಲಿಯೊಂದು ಲೊಟಗುಡತಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಬೆಳಗಿನ ತಂಗಾಳಿ ಬಂದು
ನಸುಕು ಮಸುಕು ಮೂಡುತಲಿರಲು
ಚಿಲೀ ಪಿಲೀ ಚಿಲಿಪಿಲಿ ಎಂದು
ಹಾಲಕ್ಕಿ ಉಲಿಯುತಲಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ನಿನ್ನ ಸೊಲ್ಲ ನಂಬಿ ಎದ್ದೆ
ಮೈಯೆಲ್ಲ ನಡುಕವಿದ್ದು
ನೀನೆ ಶುಭ ನುಡಿಯುವಾಗ
ಏನಿದ್ದೇನು? ಎಲ್ಲಾ ಶುಭವೇ !
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
-----------------------------------------------------------------------------------------------
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ |
ಶುಭ ನುಡಿಯೆ || ಪಲ್ಲ ||
ಕವನದ ಮೊದಲಿಗೆ ಬೇಂದ್ರೆಯವರು `ಶುಭ ನುಡಿಯೆ’ ಎಂದು ಶಕುನದ ಹಕ್ಕಿಯನ್ನು ಪ್ರಾರ್ಥಿಸುತ್ತಾರೆ.ಹಾಗು ಈ ಪ್ರಾರ್ಥನೆಯನ್ನು ಕವನದ ಪಲ್ಲವನ್ನಾಗಿ ಮಾಡಿದ್ದಾರೆ. ಯಾವುದೇ ಒಂದು ಶಕುನವು ಉದಾಹರಣೆಗೆ ಹಲ್ಲಿ ಲೊಚಗುಟ್ಟುವದು ಕಿವಿಗೆ ಬಿದ್ದಾಗ, ದೇವರನ್ನು ಸ್ಮರಿಸಬೇಕು ಅಥವಾ `ಒಳಿತು’ಎಂದು ಅನ್ನಬೇಕು. ಇದು ಹಿರಿಯರು ಹೇಳುವ ಮಾತು. ನಮ್ಮ ದೈವ ನಮಗೆ ಅಮಂಗಳವನ್ನು ತರದಿರಲಿ ಎನ್ನುವದು ಈ ಮಾತಿನ ಅರ್ಥ. ಈ ಪ್ರಾರ್ಥನೆಯೇ ಈ ಕವನದಲ್ಲಿ ಮತ್ತೆ ಮತ್ತೆ ಮರುಕಳಿಸುವ ಆಶಯವಾಗಿದೆ.
ಮೊದಲ ನುಡಿ:
ಮುಂಗಾಳು ಕವಿಯುವಾಗ
ಹಸುಗೂಸಿಗೆ ಕಸಿವಿಸಿಯಾಗಿ
ಕಕ್ಕಾವಿಕ್ಕಿಬಡುತ ಪಾಪ
ಕಿರಿ ಕಿರಿ ಅಳುತಲಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಕವನದ ಮೊದಲ ನುಡಿಯು ಕತ್ತಲೆ ಕವಿಯುತ್ತಿರುವ ಮುಸ್ಸಂಜೆಯ ಕಾಲವನ್ನು ಸೂಚಿಸುವ ಮೂಲಕ ಪ್ರಾರಂಭವಾಗುತ್ತದೆ. ಆದರೆ ಬೇಂದ್ರೆಯವರು ಈ ಕಾಲವನ್ನು ‘ಮುಸ್ಸಂಜೆ’ ಎಂದು ಕರೆಯದೆ‘ಮುಂಗಾಳು’ ಎಂದು ಕರೆದಿದ್ದಾರೆ. ಕಾಳು ಎಂದರೆ ಕಪ್ಪು ಎಂದೂ ಅರ್ಥವಾಗುತ್ತದೆ, ಕಾಲ ಎಂದೂ ಅರ್ಥವಾಗುತ್ತದೆ. ಒಟ್ಟಿನಲ್ಲಿ ಇದು ಅಶುಭದ ಭಯವನ್ನು ಸೂಚಿಸುವ ಪ್ರಯೋಗವಾಗಿದೆ. ಈ ಭಯಕ್ಕೆ ಕಾರಣವೇನು? ಇದು ಅನಿಶ್ಚಿತತೆಯಿಂದ ಹಾಗು ಅಸಹಾಯಕತೆಯಿಂದ ಹುಟ್ಟಿದ ಭಯ. ಹಸುಗೂಸಿಗೆ ಕಸಿವಿಸಿಯಾದಾಗ ಅದರ ಕಾರಣವನ್ನು ಊಹಿಸುವದು ಯಾರಿಗೂ ಸಾಧ್ಯವಾಗದು. ಕೂಸು ಕಕ್ಕಾವಿಕ್ಕಿಯಾಗಿ, ಭೋರೆಂದು ಅಳುತ್ತದೆ; ಕಿರಿಕಿರಿ ಮಾಡುತ್ತದೆ. ಹಿರಿಯರು ದಿಕ್ಕುಗಾಣದವರಾಗುತ್ತಾರೆ.ಕೊನೆಗೆ ತಾಯಿಯು ಕೂಸಿನ ಮುಖಕ್ಕೆ ‘ದೃಷ್ಟಿ ತೆಗೆಯುತ್ತಾಳೆ’. ಎಲ್ಲ ಕೆಟ್ಟ ದೃಷ್ಟಿಗಳು ಹೋಗಲಿ ಎಂದು ದೈವಕ್ಕೆ ಬೇಡಿಕೊಳ್ಳುತ್ತಾಳೆ.
ಇಲ್ಲಿ ಕೂಸು ಅಸಹಾಯಕ ಜೀವಿಯ ಸಂಕೇತವಾದರೆ, ಮುಂಗಾಳು ಕಠಿಣ ಪರಿಸ್ಥಿತಿಯ ಅನಿಶ್ಚಿತ ಪರಿಣಾಮದ ಸಂಕೇತವಾಗಿದೆ. ಈ ಪರಿಸ್ಥಿತಿಯನ್ನು ನಿರ್ವಹಿಸುವದು ಪುರುಷಪ್ರಯತ್ನದ ಮೂಲಕ ಅಸಾಧ್ಯವಾದಾಗ, ವ್ಯಕ್ತಿಯು ದೈವದ ಮೊರೆ ಹೋಗುತ್ತಾನೆ. ದೈವವನ್ನು ಅರಿತುಕೊಳ್ಳಲೆಂದು ‘ದೈವೀ ಸಂಕೇತ’ಗಳಲ್ಲಿ ಅಂದರೆ ಶಕುನಗಳಲ್ಲಿ ನಂಬಿಕೆ ಇರಿಸುತ್ತಾನೆ. ನಿಸರ್ಗಜೀವಿಗಳಾದ ಗೂಗೆ, ಹಾಲಕ್ಕಿ ಹಾಗು ಹಲ್ಲಿಯಂತಹ ಜೀವಿಗಳು ಹೊರಡಿಸುವ ಧ್ವನಿಯನ್ನು ಶಕುನವೆಂದು ಭಾವಿಸಿ ಒಳ್ಳೆಯ ಶಕುನಗಳಿಗಾಗಿ ಪ್ರಾರ್ಥಿಸುತ್ತಾನೆ.
ಆ ಮೂಲಕ ದೈವೀ ಸಹಾಯ ಬರಬಹುದೆಂದು ನಂಬುತ್ತಾನೆ.
ಎರಡನೆಯ ನುಡಿಯಲ್ಲಿ ಬೇಂದ್ರೆಯವರು ಇರುಳು ಗಾಳಿಯ ಹಾಗು ಹಣತಿಯ ಸೊಡರಿನ ಪ್ರತಿಮೆಗಳನ್ನು ಬಳಸುತ್ತಾರೆ.
ಇರುಳು ಗಾಳಿ ಬೀಸುವಾಗ
ಹಣತಿಸೊಡರು ಹೆದರಿದಂತೆ
ತಾನು ತಣ್ಣಗಾದೇನೆಂದು
ಚಿಳಿ ಚಿಳಿ ನಡುಗುತಲಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಇರುಳ ಗಾಳಿ ಎಂದರೆ ಹೆಚ್ಚುತ್ತಿರುವ ಸಂಕಟಗಳು. ಪುರುಷಪ್ರಯತ್ನ ವ್ಯರ್ಥವಾದ ಬಳಿಕ ಮನುಷ್ಯನು ದೈವದ ಮೊರೆ ಹೋಗುತ್ತಾನೆ. ಕಷ್ಟದ ತಮಂಧದಲ್ಲಿ ಈ ನಂಬಿಕೆಯು ಪ್ರಣತಿಯ ಬೆಳಕಿನಂತೆ ಅವನನ್ನು ಮುನ್ನಡೆಸಬೇಕು. ಆದರೆ ಪರಿಸ್ಥಿತಿಯ ಕಾಠಿಣ್ಯ ಹೆಚ್ಚಿದರೆ, ಅವನಿಗೆ ದೈವದಲ್ಲಿಯ ನಂಬಿಕೆಯೂ ನಷ್ಟವಾಗಬಹುದು. ಮೊದಲ ನುಡಿಯಲ್ಲಿ ‘ಮುಂಗಾಳು’ ಎಂದರೆ ಕತ್ತಲೆಯ ಸಂಧಿಕಾಲವನ್ನು ಸೂಚಿಸಿದ ಬೇಂದ್ರೆಯವರು ಎರಡನೆಯ ನುಡಿಯಲ್ಲಿ ಕಗ್ಗತ್ತಲ ರಾತ್ರಿಯಲ್ಲಿ ‘ಬಿರ್’ ಎಂದು ಬೀಸುತ್ತಿರುವ ಗಾಳಿಯ ಸಂಕೇತದ ಮೂಲಕ, ಪರಿಸ್ಥಿತಿಯ ಕಾಠಿಣ್ಯ ಹೆಚ್ಚಿರುವದನ್ನು ಸೂಚಿಸುತ್ತಿದ್ದಾರೆ. ಗಾಳಿ ಹೆಚ್ಚಾದರೆ ಹಣತಿಯಲ್ಲಿಯ ಸೊಡರು ತಾನು ‘ತಣ್ಣ’ಗಾದೇನೆಂದು ಅಂದರೆ ಸತ್ತೇ ಹೋಗುವೆನು ಎಂದು ಭಯಪಡುತ್ತದೆ. ಅರ್ಥಾತ್ ನಂಬುಗೆಯೇ ತನ್ನಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ ಎಂದು ಬೇಂದ್ರೆ ಹೇಳುತ್ತಾರೆ.
[ಟಿಪ್ಪಣಿ : ನೋಬೆಲ್ ಪ್ರಶಸ್ತಿ ವಿಜೇತ, ರಶಿಯನ್ ಸಾಹಿತಿ ಅಲೆಗ್ಝಾಂಡರ್ ಸೋಲ್ಝೆನಿತ್ಸಿನ್ ಅವರು ತಮ್ಮCandle in the wind ಎನ್ನುವ ನಾಟಕದಲ್ಲಿ ‘ಮಾನವ-ವಿಶ್ವಾಸ’ದ ಹೆಗ್ಗಳಿಕೆಯನ್ನು ಬರೆದಿದ್ದಾರೆ.ಬಸವಣ್ಣನವರು ತಮ್ಮ ವಚನದಲ್ಲಿ ’ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ?’ ಎಂದು ನುಡಿದಿದ್ದಾರೆ.ಆದರೆ ಗಾಳಿ ಬೀಸಿದರೆ, ಜ್ಯೋತಿಯೂ ನಿಲ್ಲಲಾರದು.]
ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಮನುಷ್ಯನು ಅತಿಯಾಗಿ ಬಳಲಿದಾಗ, ನಿದ್ದೆಗೆ ಜಾರುವದು ಸಹಜ.ಆದರೆ, ನಿದ್ದೆಯೂ ಸಹ ಬರಲಾಗದೇ ಒದ್ದಾಡುತ್ತಿದೆ. ಅದೂ ಸಹ ಬಳಲಿ ಬೆಂಡಾಗಿ ಕೊನೆಗೊಮ್ಮೆ ಆಯಾಸದಿಂದ ಕಣ್ಣುರೆಪ್ಪೆಗಳು ಮುಚ್ಚಿಕೊಳ್ಳುತ್ತವೆ, ನಿದ್ರೆಯು ಆ ಮುಚ್ಚಿದ ರೆಪ್ಪೆಗಳಲ್ಲಿ ಆಸರೆಯನ್ನು ಪಡೆಯುತ್ತದೆ ಎಂದು ಬೇಂದ್ರೆ ಹೇಳುತ್ತಾರೆ. ಈ ರೀತಿಯಲ್ಲಿ ಮನುಷ್ಯನು ನಿದ್ರೆಗೆ ಜಾರಬಹುದು. ಆದರೆ ಅಪಶಕುನದ ಹೆದರಿಕೆಯಲ್ಲಿರುವ ಮನುಷ್ಯನ ಮನಸ್ಸು ಹೇಗೆ ವರ್ತಿಸುತ್ತದೆ ಎನ್ನುವದನ್ನು ಬೇಂದ್ರೆಯವರು ಮೂರನೆಯ ನುಡಿಯಲ್ಲಿ ಹೀಗೆ ಬಣ್ಣಿಸಿದ್ದಾರೆ :
ನಿದ್ದೆ ಬಳಲಿ ಬಳಿಯಲಿ ಬಂದು
ಕೂಡಿದೆವೆಗಳಾಸರೆಯಲ್ಲಿ
ಮೆsಲ್ಲಗೆ, ಒರಗುವ ಅದನು
ಒಂಟಿ ಸೀನು ಹಾರಿಸುತಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಒಂಟಿ ಸೀನು ಅಪಶಕುನದ ಸಂಕೇತ. ನಿದ್ದೆಗೆ ಜಾರುತ್ತಿರುವ ಮನುಷ್ಯನು ತನ್ನ ಒಂಟಿ ಸೀನಿನಿಂದ ಭಯಗೊಂಡು ತಾನೇ ಎಚ್ಚರಾಗಿ, ಅಪಶಕುನದ ಹೆದರಿಕೆಯಿಂದ ಮತ್ತೆ ಕಳವಳಕ್ಕೀಡಾಗುತ್ತಾನೆ.
ಒಂಟಿ ಸೀನಿನ ಅಪಶಕುನದಿಂದಾಗಿ, ಈ ಬಡಪಾಯಿಗೆ ಹತ್ತುತ್ತಿರುವ ನಿದ್ದೆಯೂ ಹಾರಿಹೋಯಿತು. ಕತ್ತೆತ್ತಿ ಮೇಲೆ ನೋಡಿದರೆ ಅಲ್ಲಿ ಕಾಣುವದೇನು? ಕಪ್ಪು ಆಕಾಶವು ಅವನಿಗೆ ಕತ್ತಲೆಯ ಕೆಸರಿನಂತೆ ಕಾಣುತ್ತಿದೆ.ಅಲ್ಲಿರುವ ಚಿಕ್ಕೆಗಳು ಈತನಿಗೆ ಕಾಣುವ ಪರಿಯನ್ನು ನಾಲ್ಕನೆಯ ನುಡಿಯಲ್ಲಿ ನೋಡಬಹುದು:
ಕತ್ತಲೆಯ ಕೆಸರಿನ ತಳಕೆ
ಮಿನಮಿನಗುವ ಹರಳುಗಳಂತೆ
ಚಿಕ್ಕೆ ಕೆಲವು ತೊಳಗುತಲಿರಲು
ಗಳಕನೊಂದು ಉಲಿಯುತಲಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಚಿಕ್ಕೆಗಳೆಲ್ಲ ತಮ್ಮ ಪ್ರಕಾಶವನ್ನು ಕಳೆದುಕೊಂಡು ಕೆಸರಿನ ತಳದಲ್ಲಿ ಸಿಲುಕಿದ ಹರಳುಗಳಂತೆ ಮಿಣುಕುತ್ತಿವೆ. ಅಲ್ಲಿಂದ ಹೊರಬರಲು ಕೆಲವು ಚಿಕ್ಕೆಗಳು ತೊಳಲಾಡುತ್ತಿವೆ. ದೈವೀ ಭರವಸೆಯನ್ನು ಬಿಂಬಿಸಬೇಕಾದ ಈ ಚಿಕ್ಕೆಗಳೇ ತೊಳಲುತ್ತಿರುವಾಗ, ಮನುಷ್ಯ ಯಾರಲ್ಲಿ ನಂಬಿಕೆ ಇಡಬೇಕು?ಅಂತಹದರಲ್ಲಿಯೇ ಒಂದು ಚಿಕ್ಕೆ ಗಳಕ್ಕನೇ ಉಲಿದಂತೆ, ಈ ವ್ಯಕ್ತಿಗೆ ಭಾಸವಾಗುತ್ತದೆ. ಆದರೆ ಅದರ ಉಲಿವು ಶುಭಸೂಚಕ ಉಲಿವೊ, ಅಶುಭಸೂಚಕವೋ ಎನ್ನುವದು ಈತನ ಅರಿವಿಗೆ ಬರುತ್ತಿಲ್ಲ. ಕೆಸರಲ್ಲಿ ಸಿಲುಕಿದ ಚಿಕ್ಕೆಗಳಂತೆಯೇ ಈತನ ಮನಸ್ಸೂ ಸಹ ತೊಳಲಾಟದಲ್ಲಿ ಸಿಲುಕಿದೆ.
ಈ ತೊಳಲಾಟವು ಮನುಷ್ಯನನ್ನು ಒಂದು ಅರೆಪ್ರಜ್ಞಾವಸ್ಥೆಯ ಜೊಂಪಿಗೆ ನೂಕುತ್ತದೆ. ಈ ಸ್ಥಿತಿಯನ್ನು ಬೇಂದ್ರೆ ಐದನೆಯ ನುಡಿಯಲ್ಲಿ ಹೀಗೆ ಬಣ್ಣಿಸುತ್ತಾರೆ:
ಉಸಿರು ತೂಗು-ತೊಟ್ಟಿಲಲ್ಲಿ
ಜೀವ ಮೈಯ ಮರೆತಿರಲಾಗಿ
ಒಳಗಿನಾವ ಚಿಂತೆಯ ಎಸರೋ
ತಂತಾನೆ ಕನವರಿಸುತಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಈ ಅರೆಪ್ರಜ್ಞಾವಸ್ಥೆಯಲ್ಲಿ ಮನುಷ್ಯನ ಉಳಿದೆಲ್ಲ ಐಚ್ಛಿಕ ಕ್ರಿಯೆಗಳು ಸ್ತಬ್ಧವಾಗಿ, ಕೇವಲ ಉಸಿರಾಟವಷ್ಟೆ ವ್ಯಕ್ತವಾಗುತ್ತಿರುತ್ತದೆ. ಒಳಉಸಿರು ಹಾಗು ಹೊರಉಸಿರುಗಳನ್ನು ಬೇಂದ್ರೆ ತೂಗುತೊಟ್ಟಿಲು ಎಂದು ಬಣ್ಣಿಸುತ್ತಾರೆ. ಈ ತೂಗುತೊಟ್ಟಿಲಿನಲ್ಲಿ ಜೀವಿ ಮೈಮರೆತು ಮಲಗಿಕೊಂಡಿರುತ್ತಿದೆ. ಇದು ಗಾಢನಿದ್ದೆಯ ಸ್ಥಿತಿ. ಬಳಲಿಕೆಯನ್ನು ಪರಿಹರಿಸಲು ಇಂತಹ ಗಾಢನಿದ್ರೆಯು ಮನುಷ್ಯನನ್ನು ಆವರಿಸುತ್ತದೆ. ಆದರೆ ಒಳಒಳಗೇ ಕುದಿಯುತ್ತಿರುವ ಚಿಂತೆಯು ಹೊರಗೆ ಉಕ್ಕಿ ಬರಲೇ ಬೇಕಲ್ಲ. ಅದನ್ನು ಬೇಂದ್ರೆಯವರು ‘ಚಿಂತೆಯ ಎಸರು’ ಎಂದು ಬಣ್ಣಿಸುತ್ತಾರೆ. ಈ ಎಸರು ಉಕ್ಕಿ ಹೊರಬಂದಾಗ ಮಲಗಿಕೊಂಡಿರುವ ಮನುಷ್ಯನು ಕನವರಿಸುತ್ತಾನೆ. ಈತನ ಕನವರಿಕೆಯ ಆಶಯ ಒಂದೇ: ‘ಶುಭ ನುಡಿಯೆ ಶಕುನದ ಹಕ್ಕಿ, ಶುಭ ನುಡಿಯೆ’!
ಆರನೆಯ ನುಡಿ ಹೀಗಿದೆ:
ನಟ್ಟಿರುಳಿನ ನೆರಳಿನಲ್ಲಿ
ನೊಂದ ಜೀವ ಮಲಗಿರಲಾಗಿ
ಸವಿಗನಸು ಕಾಣುವಾಗ
ಗೂಗೆಯೊಂದು ಘೂಕ್ಕೆನುತಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಹಗಲು ಮನುಷ್ಯನನ್ನು ಹಿಂಡಬಹುದಾದ ಸಮಯವಾದರೆ, ಇರುಳು ಆತನಿಗೆ ನಿದ್ದೆಯ ನೆಮ್ಮದಿಯನ್ನು ಕೊಡುವ ಸಮಯ. ಅಂತಲೇ ಬೇಂದ್ರೆಯವರು ನಟ್ಟಿರುಳಿನ(=ನಡು ಇರುಳಿನ=ಮಧ್ಯ ರಾತ್ರಿಯ)ಸಮಯವನ್ನು ‘ನೆರಳು’ ಎಂದು ಬಣ್ಣಿಸುತ್ತಾರೆ. ನೊಂದ ಜೀವವು ಈ ನೆರಳಿನಲ್ಲಿ ನೆಮ್ಮದಿಯನ್ನು ಪಡೆದು ಸವಿಗನಸು ಕಾಣುತ್ತಿರುತ್ತದೆ. ಆದರೆ, ಮಧ್ಯರಾತ್ರಿಯು ಗೂಗೆಗೆ ಜಾಗರಣೆಯ ಸಮಯವಲ್ಲವೇ! ಹಾಗಾಗಿ ಇದೇ ಹೊತ್ತಿನಲ್ಲಿ ಗೂಗೆಯೊಂದರ ಘೂಕ್ ಎನ್ನುವ ಧ್ವನಿ ನೊಂದವನನ್ನು ಎಚ್ಚರಿಸಿ, ಅಪಶಕುನದ ಸೂಚನೆಯಾಗಿ ಮತ್ತೆ ಕಾಡುತ್ತದೆ.
ಆ ಸಂದರ್ಭದ ಮನೋಸ್ಥಿತಿಯನ್ನು ಬೇಂದ್ರೆಯವರು ಏಳನೆಯ ನುಡಿಯಲ್ಲಿ ಹೀಗೆ ಬಣ್ಣಿಸಿದ್ದಾರೆ:
ಎಚ್ಚರಾದ ಪೆಚ್ಚು ಮನವು
ಹುಚ್ಚೆದ್ದು ಹರಿಯುತಿರಲು
ನಿದ್ದೆಯಿಲ್ಲ ಆಕಳಿಸಿದರೂ
ಹಲ್ಲಿಯೊಂದು ಲೊಟಗುಡತಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಅಪಶಕುನದ ಧ್ವನಿಯಿಂದಾಗಿ ಎಚ್ಚರಾದ ಜೀವಿಯು ಏನು ಮಾಡುವದೆಂದು ತಿಳಿಯದೆ ಪೆಚ್ಚಾಗಿ ಕೂರುತ್ತಾನೆ. ಆತನ ಮನಸ್ಸಿಗೆ ಒಂದು ಗುರಿ ಇಲ್ಲದಂತಾಗಿ, ಅದು ಹುಚ್ಚೆದ್ದು ಎಲ್ಲೆಡೆಗೂ ಹರಿಯುತ್ತದೆ.ಆಕಳಿಕೆಗಳು ಬರುತ್ತಲೇ ಇರುತ್ತವೆ. ಆದರೆ ನಿದ್ದೆ ಮಾತ್ರ ಬಾರದು. ಇದೇ ಹೊತ್ತಿನಲ್ಲಿ ಗೋಡೆಯ ಮೇಲಿನ ಹಲ್ಲಿಯೊಂದು ಲೊಚಗುಡುತ್ತದೆ. ಇದು ಮತ್ತೊಂದು ಅಪಶಕುನ!
ಎಂಟನೆಯ ನುಡಿ ಹೀಗಿದೆ:
ಬೆಳಗಿನ ತಂಗಾಳಿ ಬಂದು
ನಸುಕು ಮಸುಕು ಮೂಡುತಲಿರಲು
ಚಿಲೀ ಪಿಲೀ ಚಿಲಿಪಿಲಿ ಎಂದು
ಹಾಲಕ್ಕಿ ಉಲಿಯುತಲಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಅಂತೂ ಇಂತೂ ಬೆಳಗು ಮೂಡುತ್ತದೆ. ಆದರೆ ನಸುಕು ಇನ್ನೂ ಮಸುಕಾಗಿಯೇ ಇದೆ. ಬೆಳಗಿನ ತಂಗಾಳಿಯು ಸ್ವಲ್ಪ ಮಟ್ಟಿಗಾದರೂ ಉಲ್ಲಾಸವನ್ನು ಮೂಡಿಸಬೇಕು. ಬದುಕಿನ ಸಂಕೇತಗಳಾದ ಹಕ್ಕಿಗಳು ಚಿಲಿಪಿಲಿಗುಟ್ಟುತಿವೆ. ಇವುಗಳ ಜೊತೆಗೇ ಅಪಶಕುನದ ಹಕ್ಕಿಯಂದೇ ಕರೆಯಲಾದ ಹಾಲಕ್ಕಿಯೂ ಸಹ ತನ್ನ ಧ್ವನಿಯನ್ನು ಈ ಚಿಲಿಪಿಲಿಗೆ ಸೇರಿಸಿದೆ! ಅಪಶಕುನಗಳು ಈ ರೀತಿ ಬೆಂಬತ್ತಿರುವಾಗ, ಮನುಷ್ಯನು ದೈವದಲ್ಲಿ ಹೇಗೆ ನಂಬಿಗೆ ಇಟ್ಟಾನು?
ಕೊನೆಯ ನುಡಿಯಲ್ಲಿ ಬೇಂದ್ರೆಯವರು ದೈವಕ್ಕೆ ಶರಣು ಹೋಗದೇ, ಬೇರೆ ಮಾರ್ಗವಿಲ್ಲವೆಂದು ಹೇಳುತ್ತಾರೆ :
ನಿನ್ನ ಸೊಲ್ಲ ನಂಬಿ ಎದ್ದೆ
ಮೈಯೆಲ್ಲ ನಡುಕವಿದ್ದು
ನೀನೆ ಶುಭ ನುಡಿಯುವಾಗ
ಏನಿದ್ದೇನು? ಎಲ್ಲಾ ಶುಭವೇ !
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ದೇವರಲ್ಲಿ ವಿಶ್ವಾಸ ಇಟ್ಟೇ ಮನುಷ್ಯನು ಏಳಬೇಕಾಗುತ್ತದೆ, ಅಂದರೆ ತನ್ನ ಪ್ರಯತ್ನಗಳಿಗೆ ಸಿದ್ಧನಾಗಬೇಕಾಗುತ್ತದೆ. ಆ ಪ್ರಯತ್ನಗಳು ಫಲಿಸಲಿಕ್ಕಿಲ್ಲ ಎನ್ನುವ ಹೆದರಿಕೆಯನ್ನು ಬೇಂದ್ರೆ ‘ಮೈಯೆಲ್ಲ ನಡುಕವಿದ್ದು’ ಎಂದು ಹೇಳುವ ಮೂಲಕ ಸೂಚಿಸುತ್ತಾರೆ. ಅಪಶಕುನಗಳ ಸರಣಿಯೇ ಈ ಹೆದರಿಕೆಗೆ ಕಾರಣ.ಈ ಹೆದರಿಕೆಯನ್ನು ಮೆಟ್ಟಲು ಆತ ತನಗೆ ತಾನೆ ಅಂದುಕೊಳ್ಳುತ್ತಾನೆ: “ ದೇವರೆ, ನಾನು ನಿನಗೆ ಶರಣು ಬಂದಿರುವಾಗ, ಶುಭಶಕುನವನ್ನು ನೀನೇ ನುಡಿಯುವಿ. ಆ ಸಮಯದಲ್ಲಿ ಉಳಿದ ಅಪಶಕುನಗಳಿಗೆ ಬೆಲೆ ಎಲ್ಲಿದೆ?”
ದೇವರಲ್ಲಿ ಅಚಲ ನಂಬಿಕೆ ಇದ್ದಾಗೆ ಎಲ್ಲವೂ ಶುಭವೇ.
....................................................................................
ಕಳವಳದ ಕತ್ತಲಲ್ಲಿ ಮುಳುಗಿದ ಮನಸ್ಸು ಬೆಳಕಿನ ಕಿರಣ ಕಂಡೀತೇನೊ ಎಂದು ಹಂಬಲಿಸುತ್ತಿರುತ್ತದೆ. ಶುಭಶಕುನಗಳು ಬೆಳಕು ಬಂದೀತೆನ್ನುವ ಭರವಸೆಯಾಗಿವೆ. ಆದರೆ ಅಪಶಕುನಗಳೇ ಸುತ್ತಲೆಲ್ಲ ಮುತ್ತುತ್ತಿರುವಾಗ ಮನಸ್ಸು ಮತ್ತೆ ಮತ್ತೆ ತಳಮಳದಲ್ಲಿ ಮುಳುಗುತ್ತದೆ. ಶುಭಶಕುನಗಳಿಗಾಗಿ ಹಾತೊರೆಯುತ್ತದೆ. ಇಂತಹ ಮನೋಸ್ಥಿತಿಯ ಚಿತ್ರಣ ಈ ಕವನದಲ್ಲಿದೆ.
{ಟಿಪ್ಪಣಿ: ಕಳವಳಿಸುತ್ತಿರುವ ಮನಸ್ಸನ್ನು ಚಿತ್ರಿಸುವ ಕವನಗಳು ಕಡಿಮೆ. ಮನಸ್ಸು ನಿರಾಶೆಯಲ್ಲಿ ಸಿಲುಕಿದಾಗ, ಮತ್ತೆ ಮೇಲೆತ್ತುವಂತಹ ಕವನವನ್ನು ಶ್ರೀ ವಿವೇಕಾನಂದರು ಬರೆದಿದ್ದಾರೆ. `Hold on yet a while brave heart, the victory is sure to come’ ಎನ್ನುವ ಅವರ ಕವನವನ್ನು ಓದುವ ಕೊಂಡಿಇಲ್ಲಿದೆ.]
೭. ನನ್ನ ಹಾಡು
ಹೆಚ್ಚಿನ ಓದಿಗೆ: http://sallaap.blogspot.com/2011/05/blog-post.html
ನನ್ನ ಹರಣ
ನಿನಗೆ ಶರಣ
ಸಕಲ ಕಾರ್ಯ ಕಾರಣಾ
ನಿನ್ನ ಮನನ-
ದಿಂದ ತನನ-
ವೆನುತಿದೆ ತನು ಪಾವನಾ.
ಸುಖದ ಮಿಷವು
ದುಃಖ ವಿಷವು
ಹಿಗ್ಗಿ ಪ್ರಾಣಪೂರಣಾ
ಪಂಚಕರಣ-
ಗಳೀ ಗಡಣ
ಕಟ್ಟಿತು ಗುಡಿ ತೋರಣಾ.
ನಿನ್ನ ಚರಣ
ಸುಸಂತರಣ
ಜಗದ್ಭರಿತ ಭಾವನಾ
ಹಾಸ್ಯಕಿರಣ
ತದನುಸರಣ
ತದಿತರ ಪಥ ಕಾಣೆ ನಾ.
ಹರುಷ ರಸವೆ
ಕರುಣದಸುವೆ
ಜೀವಧರ್ಮಧಾರಣಾ.
ರಸವೆ ಜನನ
ವಿರಸ ಮರಣ
ಸಮರಸವೆ ಜೀವನ.
..............................................................................................................
ಬೇಂದ್ರೆಯವರ ‘ನನ್ನ ಹಾಡು’ ಕವನವು, ಭಗವಂತನಲ್ಲಿ ಅನನ್ಯ ಶರಣಾಗತಿಯನ್ನು ಸೂಚಿಸುವ ಕವನವಾಗಿದೆ. ಈ ಕವನವು ನಾಲ್ಕು ನುಡಿಗಳಲ್ಲಿದೆ. ಮೊದಲನೆಯ ನುಡಿಯಲ್ಲಿ ಕವಿಯು ತನ್ನ ಸಕಲಚೈತನ್ಯವು ಭಗವಂತನಿಗೆ ಶರಣಾಗತವಾಗಿದೆ ಎಂದು ಹೇಳುತ್ತಾನೆ. ಎರಡನೆಯ ನುಡಿಯಲ್ಲಿ ಶರಣಾಗತನಾದ ಭಕ್ತನ ಲಕ್ಷಣವನ್ನು ವರ್ಣಿಸುತ್ತಾನೆ ಮೂರನೆಯ ನುಡಿಯಲ್ಲಿ ಶರಣು ನೀಡುತ್ತಿರುವ ಭಗವಂತನ ಲಕ್ಷಣವನ್ನು ಸೂಚಿಸುತ್ತಾನೆ. ನಾಲ್ಕನೆಯ ನುಡಿಯಲ್ಲಿ ಕವಿಯು ತನ್ನ ಜೀವನದರ್ಶನವನ್ನು ವಿವರಿಸುತ್ತಾನೆ.
ನುಡಿ ೧:
ನನ್ನ ಹರಣ
ನಿನಗೆ ಶರಣ
ಸಕಲ ಕಾರ್ಯ ಕಾರಣಾ
ನಿನ್ನ ಮನನ-
ದಿಂದ ತನನ-
ವೆನುತಿದೆ ತನು ಪಾವನಾ.
ಬಾಳಿನಲ್ಲಿ ಬೆಂದ ವ್ಯಕ್ತಿಯು ಭಗವಂತನೆಂಬ ದಿವ್ಯ ಚೈತನ್ಯಕ್ಕೆ ಶರಣು ಹೋಗುವದು ಒಂದು ಸಹಜ ಕ್ರಿಯೆ. ‘ವಿಶ್ವದ ಎಲ್ಲ ಘಟನೆಗಳಿಗೂ ಭಗವಂತನೇ ಕಾರಣಪುರುಷ ; ಲೋಕಮುಖಿಯಾದ ತನ್ನನ್ನು ಭಗವನ್ಮುಖಿಯಾಗಿ ಮಾಡುವ ಉದ್ದೇಶದಿಂದಲೇ ಭಗವಂತನು ತನ್ನನ್ನು ಇಷ್ಟೆಲ್ಲ ಸಂಕಷ್ಟಗಳಿಗೆ ಒಡ್ಡುತ್ತಿದ್ದಾನೆ’ ಎನ್ನುವ ತಿಳಿವಳಿಕೆ ಭಕ್ತನಿಗೆ ಬರಬೇಕು. ಆವಾಗ ಆತನು ‘ನನ್ನ ಹರಣ, ನಿನಗೆ ಶರಣ’ ಎನ್ನುವ ಮೂಲಕ ತನ್ನ ಪ್ರಾಣವನ್ನು ಅಂದರೆ ಜೀವಚೈತನ್ಯವನ್ನು ಭಗವಂತನಿಗೆ ಅಂದರೆ ವಿಶ್ವಚೈತನ್ಯನಿಗೆ ಒಪ್ಪಿಸಿಕೊಳ್ಳುತ್ತಾನೆ. ಈ ಭಾವನೆಯನ್ನು ಬೇಂದ್ರೆಯವರು ‘ಸಕಲ ಕಾರ್ಯ ಕಾರಣಾ’ ಎನ್ನುವ ಸಂಬೋಧನೆಯ ಮೂಲಕ ಸ್ಪಷ್ಟ ಪಡಿಸುತ್ತಿದ್ದಾರೆ.
ವ್ಯಕ್ತಿಯ ಜೀವಾತ್ಮವು ಪರಿಮಿತ ಚೈತನ್ಯ ; ಪರಮಾತ್ಮನು ಅಪರಿಮಿತ ಚೈತನ್ಯ. ಈ ತಿಳಿವು ಭಕ್ತನ ಮನಸ್ಸಿನಲ್ಲಿ ಹುಟ್ಟಿ, ಅವನು ಆ ತಿಳಿವನ್ನು ಮತ್ತೆ ಮತ್ತೆ ಮನನ ಮಾಡುತ್ತಿದ್ದಂತೆಯೆ, ಆತನ ಮನಸ್ಸು ಪುಳಕಗೊಳ್ಳುತ್ತದೆ ಹಾಗೂ ನಿರ್ಮಲವಾಗುತ್ತದೆ. ಮನಸ್ಸಿನ ನಿರ್ಮಲತೆಯು, ಮನದ ಆವರಣವಾದ ಶರೀರಕ್ಕೂ ಸಹ ಹಬ್ಬಲೇಬೇಕಲ್ಲವೆ? ಹೀಗಾಗಿ ಆತನ ತನುವೂ ಸಹ ಪವಿತ್ರವಾಗುತ್ತದೆ. ‘ತನುವು ಪವಿತ್ರಗೊಳ್ಳುವದು’ ಅಂದರೇನು? ಪವಿತ್ರ ದೇಹದ ಮೂಲಕ ನಡೆಯಿಸುವ ಕಾರ್ಯಗಳು ನೀಚ ಕಾರ್ಯಗಳಾಗದೆ, ಒಳ್ಳೆಯ ಕಾರ್ಯಗಳಾಗುವವು ಎನ್ನುವದು ‘ತನು ಪಾವನಾ’ ಎನ್ನುವದರ ಅರ್ಥ. ಇಂತಹ ಮನಸ್ಸು ಹಾಗು ಇಂತಹ ದೇಹವು ಭಗವಚ್ಚಿಂತನೆಯಲ್ಲಿ ಮುಳುಗಿರುವದರಿಂದ ಸದಾಕಾಲವೂ ಉಲ್ಲಸಿತ ಭಾವದಲ್ಲಿ ಇರುತ್ತದೆ.
ನುಡಿ ೨:
ಸುಖದ ಮಿಷವು
ದುಃಖ ವಿಷವು
ಹಿಗ್ಗಿ ಪ್ರಾಣಪೂರಣಾ
ಪಂಚಕರಣ-
ಗಳೀ ಗಡಣ
ಕಟ್ಟಿತು ಗುಡಿ ತೋರಣಾ.
ಭಗವಂತನ ಅರಿವನ್ನು ಪಡೆದ ಭಕ್ತನು ಲೌಕಿಕವನ್ನು ಹೇಗೆ ನೋಡುತ್ತಾನೆ?
ಆತನ ಈವರೆಗಿನ ಜೀವನದಲ್ಲಿ ಲೌಕಿಕ ಸುಖದ ಮಿಷವು ಅಂದರೆ ಬಯಕೆಯು ಪ್ರಬಲವಾಗಿತ್ತು. ಈ ಬಯಕೆಯೇ ದುಃಖವೆಂಬ ವಿಷದ ಮೂಲವೂ ಹೌದು. ಇದು ಅವನಿಗೆ ಅರಿವಾದಾಗ, ಆತನು ಈ ಲೌಕಿಕ ಬಯಕೆಯನ್ನು ತ್ಯಜಿಸುತ್ತಾನೆ. ಭಗವಂತನ ಸಂಗದಿಂದ ಆತನ ಪರಿಮಿತ ವ್ಯಾಪ್ತಿಯ ಚೈತನ್ಯವು ಅಪರಿಮಿತವಾಗಿ, ಅನಂತವಾಗಿ ಹಿಗ್ಗುತ್ತದೆ. ಇದು ಒಂದು ಅರ್ಥ.
ಹಿಗ್ಗು ಅಂದರೆ ತೃಪ್ತನಾಗು ಎನ್ನುವ ಅರ್ಥವೂ ಇದೆ. ಭಗವಂತನ ಸಂಗವನ್ನು ಪಡೆದ ಜೀವವು ಸದಾಕಾಲವೂ ಸಂತೃಪ್ತವಾಗಿರುತ್ತದೆ ಎನ್ನುವದು ಎರಡನೆಯ ಅರ್ಥ.
ಈ ರೀತಿಯಾಗಿ ಹಿಗ್ಗಿದ ಹಾಗು ಹಿಗ್ಗುಗೊಂಡ ಭಕ್ತನ ಪ್ರಜ್ಞೆಯಲ್ಲಿ ಭಕ್ತ ಹಾಗು ಭಗವಂತ ಲಯವಾಗುತ್ತಾರೆ. ಇದು ಸತ್-ಚಿತ್-ಆನಂದದ ಸ್ಥಿತಿ. ಇಂತಹ ಮನಸ್ಸು ದೇವಾಲಯವಿದ್ದಂತೆ. ಈ ಮನಸ್ಸಿನ ಸಾಧನಗಳಾದ ಪಂಚಕರಣಗಳ ಸಮೂಹವು ( ಐದು ಜ್ಞಾನೇಂದ್ರಿಯಗಳು ಹಾಗು ಐದು ಕರ್ಮೇಂದ್ರಿಯಗಳು) ಈ ದೇವಾಲಯಕ್ಕೆ ಕಟ್ಟಿದ ಬಾವುಟ ಹಾಗು ತೋರಣಗಳಾಗುತ್ತವೆ. ಈ ಸ್ಥಿತಿಯಲ್ಲಿ ಆತನ ಕ್ರಿಯೆಗಳೆಲ್ಲ ಭಗವಂತನಿಗಾಗಿ ಇರುತ್ತವೆ.
[ ಇಂತಹ ಸ್ಥಿತಿಯನ್ನು ಶ್ರೀ ಶಂಕರಾಚಾರ್ಯರು ‘ಸೌಂದರ್ಯಲಹರಿ’ಯಲ್ಲಿ ಹೀಗೆ ವರ್ಣಿಸಿದ್ದಾರೆ:
ಜಪೋ ಜಲ್ಪ: ಶಿಲ್ಪಂ ಸಕಲಮಪಿ ಮುದ್ರಾವಿರಚನಾ
ಗತಿಃ ಪ್ರಾದಕ್ಷಿಣ್ಯಕ್ರಮಣ ಮಶನಾದ್ಯಾಹುತಿ ವಿಧಿ:
ಪ್ರಣಾಮಃ ಸಂವೇಶಃ ಸುಖಮಖಿಲ ಮಾತ್ಮಾರ್ಪಣ ದೃಶಾ
ಸಪರ್ಯಾಪರ್ಯಾಯಸ್ತವ ಭವತು ಯನ್ಮೇ ವಿಲಸಿತಮ್|
ಭಾವಾನುವಾದ:
ನುಡಿದದ್ದು ಎಲ್ಲ ಜಪವು, ಕೈಯಾಟವೆಲ್ಲ ಮುದ್ರೆ,
ನಡೆದದ್ದೇ ಪ್ರದಕ್ಷಿಣೆ, ನನ್ನೂಟ ನಿನಗೆ ಬಲಿಯು,
ಒರಗಿರಲು ಅದುವೆ ನಮನ, ಆತ್ಮಾರ್ಪಣೆಯೆ ಸುಖವು
ಈ ರೀತಿ ಬೆಳೆಯಲಮ್ಮ ನನ್ನ ಪೂಜೆಯಾ ವಿಧಿಯು!]
ನುಡಿ ೩:
ನಿನ್ನ ಚರಣ
ಸುಸಂತರಣ
ಜಗದ್ಭರಿತ ಭಾವನಾ
ಹಾಸ್ಯಕಿರಣ
ತದನುಸರಣ
ತದಿತರ ಪಥ ಕಾಣೆ ನಾ.
ಭಕ್ತನ ಮನಸ್ಸು ಎನ್ನುವ ದೇವಾಲಯದಲ್ಲಿ ಸ್ಥಿತನಾಗಿರುವ ಈ ಭಗವಂತನ ಲಕ್ಷಣವೇನು? ಶರಣಾಗತಿಯು ಭಕ್ತನ ಲಕ್ಷಣವಾದರೆ, ಅನುಗ್ರಹವು ಭಗವಂತನ ಲಕ್ಷಣವಾಗಿದೆ. ತನ್ನ ಭಕ್ತನನ್ನು ಸಂಸಾರಸಾಗರದ ತೆರೆನೊರೆಗಳಿಂದ ರಕ್ಷಿಸುತ್ತ, ಪಾರು ಮಾಡುವದೇ, ‘ಶರಣಾಗತವತ್ಸಲ’ ಎನ್ನುವ ಬಿರುದುಳ್ಳ ಭಗವಂತನ ಪ್ರಮುಖ ಲಕ್ಷಣವಾಗಿದೆ. ಇದನ್ನು ಕವಿಯು ‘ನಿನ್ನ ಚರಣ, ಸುಸಂತರಣ’ ಎನ್ನುವ ಪದಪುಂಜದಿಂದ ಸೂಚಿಸುತ್ತಾನೆ. ಸುಸಂತರಣ ಎಂದರೆ ಸುಲಭವಾಗಿ ದಾಟಿಸಬಲ್ಲಂತಹದು ಎನ್ನುವ ಅರ್ಥ. ಭಗವಂತನ ಈ ಶಕ್ತಿಯು ವಿಶ್ವವ್ಯಾಪಿಯಾಗಿದೆ ಹಾಗು ಆತನ ಭಕ್ತವತ್ಸಲತೆಯೂ ಸಹ ಸರ್ವವ್ಯಾಪಿಯಾಗಿದೆ ಹಾಗು ಇದನ್ನು ಆತನ ಭಕ್ತರೆಲ್ಲರೂ ಪೂರ್ಣವಾಗಿ ಅರಿತಿದ್ದಾರೆ ಎನ್ನುವ ಅರ್ಥದಲ್ಲಿ ಬೇಂದ್ರೆಯವರು ‘ಜಗದ್ಭರಿತ ಭಾವನಾ’ ಎಂದು ಹೇಳುತ್ತಾರೆ.
‘ಹಾಸ್ಯಕಿರಣ’ವು ಭಗವಂತನ ಅನುಗ್ರಹದ ಪ್ರತೀಕವಾಗಿದೆ. ಭಗವಂತನದು ಯಾವಾಗಲೂ ಮಂದಹಾಸ. ಆ ಮಂದಹಾಸವು ರವಿಕಿರಣದಂತೆ ಮನಸ್ಸಿಗೆ ಬೆಳಕನ್ನು ನೀಡಿದರೆ, ಚಂದ್ರಕಿರಣದಂತೆ ಮನಸ್ಸನ್ನು ತಂಪುಗೊಳಿಸುತ್ತದೆ. ಭಕ್ತನ ಮನಸ್ಸು ಇಂತಹ ಭಗವಂತನ ಸ್ಮರಣೆಯಲ್ಲಿಯೇ ಸದಾ ನಿರತವಾಗಿರುತ್ತದೆ. ಲೌಕಿಕವನ್ನು ದಾಟುವ ಇತರ ಮಾರ್ಗಗಳು ಇಲ್ಲ. ಇದ್ದರೂ ಸಹ ಅವು ಅವನ ಮನಸ್ಸನ್ನು ಸೆಳೆಯಲಾರವು.
ನುಡಿ ೪:
ಹರುಷ ರಸವೆ
ಕರುಣದಸುವೆ
ಜೀವಧರ್ಮಧಾರಣಾ.
ರಸವೆ ಜನನ
ವಿರಸ ಮರಣ
ಸಮರಸವೆ ಜೀವನ.
ಭಗವಂತನಲ್ಲಿ ಈ ರೀತಿಯಾಗಿ ಶರಣಾಗತನಾಗಿ, ಭಗವಂತ ತೋರಿದ ದಾರಿಯಲ್ಲಿ ಮುನ್ನಡೆಯುತ್ತಿರುವ ಭಕ್ತನಿಗೆ ಕಂಡ ಕಾಣ್ಕೆ ಯಾವುದು? ಸೃಷ್ಟಿ ಇಲ್ಲದೆ ಭಗವಂತ ಇರಲಾರ. ಸೃಷ್ಟಿಯ ಸಕಲ ಜೀವಿಗಳಿಗೆ ಭಗವಂತನ ಕರುಣೆ ಇದೆ. ಆ ಅನುಗ್ರಹದಲ್ಲಿ ಎಲ್ಲ ಜೀವಿಗಳು ಹರುಷದಿಂದ ಬಾಳುತ್ತವೆ ಎನ್ನುವದೇ ಈ ಅರಿವು. ಸೃಷ್ಟಿ, ಸ್ಥಿತಿ, ಲಯ, ತಿರೋಧಾನ ಹಾಗು ಅನುಗ್ರಹ ಇವು ಭಗವಂತನ ಐದು ನಿರಂತರ ಕ್ರಿಯೆಗಳು. ಇದು ಅವನ ಧರ್ಮವೂ ಹೌದು. ಬಸವಣ್ಣನವರು ಇದನ್ನೇ ‘ಸಕಲ ಜೀವಿಗಳಿಗೆ ಲೇಸನೆ ಬಯಸುವನು ನಮ್ಮ ಕೂಡಲ ಸಂಗಮ ದೇವ’ ಎಂದಿದ್ದಾರೆ. ಈ ದರ್ಶನಕ್ಕೆ ಬೇಂದ್ರೆಯವರು ‘ಜೀವಧರ್ಮಧಾರಣಾ’ ಎನ್ನುತ್ತಾರೆ.
ಭಗವಂತನ ಹರುಷರಸವೇ ಅವನ ಸೃಷ್ಟಿಗೆ ಕಾರಣ, ಇದುವೇ ಜೀವನ. ಈ ಹರುಷರಸ ಇಲ್ಲದಲ್ಲಿ ಅದು ‘ವಿ-ರಸ’ ಆಗುತ್ತದೆ. ಅದುವೇ ಮರಣ. ಈ ರಸ ಹಾಗೂ ವಿರಸಗಳ ನಡುವೆ ಇರುವದೇ ಜೀವನ. ಆದುದರಿಂದಲೇ ಈ ಜೀವನವು ಸುಖ ಹಾಗು ದುಃಖಗಳ ಸಮರಸವಾಗಿದೆ. ಇದು ಬೇಂದ್ರೆಯವರು ಕಂಡ ಕಾಣ್ಕೆ!
‘ನನ್ನ ಹಾಡು’ ಮೇಲ್ ನೋಟದಲ್ಲಿ ಅತಿ ಸರಳವಾದ ಕವನ. ಕವನದಲ್ಲಿ ಬಳಸಲಾದ ಪದಗಳು ಸರಳವಾಗಿವೆ ಹಾಗು ಮೃದುವಾಗಿವೆ. ಕವನದ ಛಂದಸ್ಸು ಸರಳವಾಗಿದೆ. (ಇದು ‘ಶರ ಷಟ್ಪದಿ’ ಛಂದಸ್ಸು ಎನ್ನುವದು ನನ್ನ ಗ್ರಹಿಕೆ. ತಪ್ಪಿದ್ದರೆ, ಬಲ್ಲವರು ತಿದ್ದಬೇಕೆಂದು ಕೋರುತ್ತೇನೆ.) ಕವನದ ಭಾವವೂ ಸಹ ಸರಳವಾಗಿಯೇ ಇದೆ. ಆದರೆ ಕವನದ ಪ್ರತಿ ಪದವೂ ಸಂಕೀರ್ಣ ಅರ್ಥವನ್ನು ಹೊಂದಿದೆ. ಹೀಗಾಗಿ ಬೇಂದ್ರೆಯವರ ಅನೇಕ ಸರಳ ಕವನಗಳಂತೆ, ‘ನನ್ನ ಹಾಡು’ ಸಹ ಸಂಕೀರ್ಣ-ಅರ್ಥ-ಗರ್ಭಿತ ಕವನವಾಗಿದೆ.
ಪ್ರತಿಯೋರ್ವ ವ್ಯಕ್ತಿಗೂ ಹುಟ್ಟಿದ ಕ್ಷಣದಿಂದಲೇ ಒಂದು identity ಪ್ರಾರಂಭವಾಗುತ್ತದೆ. ದೈಹಿಕ identity, ಕೌಟಂಬಿಕ identity,ಸಾಮಾಜಿಕ identity ಹೀಗೆಲ್ಲ ಇವು ಸಂಗ್ರಹಗೊಳ್ಳುತ್ತಲೇ ಹೋಗುತ್ತವೆ. ಸಂಕಷ್ಟಗಳ ಹೊಡೆತಕ್ಕೆ ಸಿಲುಕಿ, ಹಣ್ಣಾದ ಭಕ್ತನು ಈ ಎಲ್ಲ identityಗಳನ್ನು ಕಳೆದುಕೊಳ್ಳುತ್ತಾನೆ. ಅವನ ಲೌಕಿಕ identityಗಳೆಲ್ಲ ನಾಶವಾಗಿ ಹೋಗುತ್ತವೆ. ಆತನು ಭಕ್ತ ಎನ್ನುವ identity ಒಂದೇ ಉಳಿದುಕೊಳ್ಳುತ್ತದೆ. ಅದೇ ಅವನ ಕೊನೆಯ ಭಾವ. ಆದುದರಿಂದಲೇ ಬೇಂದ್ರೆಯವರು ಈ ಕೊನೆಯ ಭಾವದ ಸೂಚನೆಯಾಗಿ ಈ ಕವನವನ್ನು ‘ನನ್ನ ಹಾಡು’ ಎಂದು ಕರೆದಿದ್ದಾರೆ.
[ಟಿಪ್ಪಣಿ:
ವಿನಾಯಕ ಕೃಷ್ಣ ಗೋಕಾಕರು ತಮ್ಮ ಬೃಹತ್ ಕಾದಂಬರಿಯ ಶೀರ್ಷಿಕೆಯನ್ನು ( ‘ಸಮರಸವೇ ಜೀವನ’ ) ಈ ಕವನದಿಂದಲೇ ಎತ್ತಿಕೊಂಡಿದ್ದಾರೆ.]
8. ಕರಡಿ ಕುಣಿತ
ಹೆಚ್ಚಿನ ಓದಿಗೆ:http://sallaap.blogspot.com/2011/08/blog-post.html
ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು
ಕಂಬಳಿ ಹೊದ್ದಾವಾ ಬಂದಾನ.
ಗುಣುಗುಣು ಗುಟ್ಟುತ, ಕಡಗವ ಕುಟ್ಟುತ
ಕರಡಿಯನಾಡಿಸುತ ನಿಂದಾನ.
ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
ಜಾಂಬುವಂತನ ಹಿಡಿದು ತಂದಾನ
‘ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ,
ಧಣಿ ದಾನ ಕೊಡುವನು’ ಅಂದಾನ
ತ್ರೇತಾಯುಗ ರಾಮನ್ನ, ದ್ವಾಪರದ ಕೃಷ್ಣನ್ನ
ಕಲಿಯುಗದ ಕಲ್ಕೀನ ಕಂಡಾನ
ಜಾಂಬುನದಿ ತೀರದ ಜಂಬುನೀರಲ ಹಣ್ಣು
ಕೃತಯುಗದ ಕೊನೆಗೀವಾ ಉಂಡಾನ
ಬಂದಾರ ಬರ್ರೆವ್ವ, ಕಂದನ ತರ್ರೆವ್ವ
ಅಂಜೀಕಿ ಗಿಂಜೀಕಿ ಕೊಂದಾನ
ರೋಮರೋಮಗಳಲ್ಲಿ ಭೀಮರಕ್ಷಿಯ ಬಲ
ಕೊರಳಾಗ ಕೊಟ್ಟಿರಿ ಒಂದಾನ
‘ಕುಣಿಯಲೆ ಮಗನ ನೀ’ ಅನ್ನೋದೊಂದೆ ತಡ
ತನ್ನsನ ತಾsನನ ತಂದಾsನ
ಮುದ್ದುಕೂಸಿನ ಹಾಗೆ ಮುಸುಮುಸು ಮಾಡುತ್ತ
ಕುಣಿದಾನ ಕುಣಿತವ ಛಂದಾನ
ಹೊಟ್ಟೆಗಿಲ್ಲದವರ ಹೊಟ್ಟೆಗೆ ಹಾಕಲು
ನಡೆದಾನ ಪಡೆದಾನ ಬಂದಾsನ
`ಕುಣಿಸುವವರ ಹೊಟ್ಟಿ ತಣ್ಣಗಾಗಲಿ’ ಎಂದು
ಮುಗಿಲಿಗೆ ಕೈಮುಗಿದು ನಿಂದಾನ
ಮನಬಲ್ಲ ಮಾನವ ಕುಣಿದಾನ, ಕುಣಿಸ್ಯಾನ
ಪ್ರಾಣದ ಈ ಪ್ರಾಣಿ ಹಿಂದಾsನ
ಕರಡೀಯ ಹೆಸರೀಲೆ ಚರಿತಾರ್ಥ ನಡಿಸ್ಯಾನ
ಪರಮಾರ್ಥ ಎಂಬಂತೆ ಬಂದಾನ
ಈ ಮನುಷಾ ಎಂದಿಂದೊ ಕವಲೆತ್ತು, ಕೋಡಗ
ತನಗಾಗಿ ಕುಣಿಸುತ್ತ ನಡೆದಾನ
ಕರಡಿ ಕುಣಿತಕ್ಕಿಂತ ನರರ ಬುದ್ಧಿಯ ಕುಣಿತ
ಮಿಗಿಲಹುದು ಕವಿ ಕಂಡು ನುಡಿದಾನ.
……………………………………………………………………………
೧೯ನೆಯ ಶತಮಾನದಲ್ಲಿ ಬಾಳಿದ ಸಂತ ಶರೀಫರಿಗೂ, ೨೦ನೆಯ ಶತಮಾನದಲ್ಲಿ ಬಾಳಿದ ಬೇಂದ್ರೆಯವರಿಗೂ ಒಂದು ಸಾಮ್ಯವಿದೆ. ಇವರೀರ್ವರೂ ಜನರಿಗಾಗಿ, ಜನರ ನಡುವೆ ಹಾಡಿದ ಕವಿಗಳು. ಈರ್ವರೂ ಒಂದು ಸಾಮಾನ್ಯ ಘಟನೆಯನ್ನು ವರ್ಣಿಸುತ್ತ ಅದರಲ್ಲಿಯ ಅಸಾಮಾನ್ಯ ತಿರುಳನ್ನು ಬೋಧಿಸುತ್ತಿದ್ದರು. ಇವರೀರ್ವರ ನಡುವಿನ ಭೇದವೆಂದರೆ ಶರೀಫರು ಸಂತಕವಿಗಳು, ಬೇಂದ್ರೆಯವರು ಲೋಕಕವಿಗಳು.
‘ಸರಳತೆ’ಯು ಲೋಕಕವಿಯಾದ ಬೇಂದ್ರೆಯವರ ಅನೇಕ ಕವನಗಳ ಲಕ್ಷಣವಾಗಿದೆ. ಆಡಂಬರದ ಸಂಸ್ಕೃತಾಲಂಕಾರ ಅವರ ಕವನಗಳಲ್ಲಿ ಕಾಣಸಿಗದು. ಒಂದು ರೀತಿಯಲ್ಲಿ ಇದು ಅವರ ಶೈಲಿಯ ದೌರ್ಬಲ್ಯ ಎನ್ನಬಹುದೇನೊ? ಏಕೆಂದರೆ ಬಗೆಬಗೆಯ ಸಂಸ್ಕೃತ ಪದಗಳಿಂದ ಅಲಂಕಾರಗೊಂಡ ಕಾವ್ಯವು `ಸುಲಭ ಓದುಗ’ನನ್ನು ಮರಳು ಮಾಡುವಂತೆ, ಸರಳ ದೇಸಿ ಪದಗಳ ಕವನಗಳು ಮಾಡಲಾರವು. ಬೇಂದ್ರೆಯವರ ಕವನಗಳನ್ನು ಸಹಜಸೌಂದರ್ಯದ ನಿರಾಭರಣ ಸುಂದರಿಗೆ ಹೋಲಿಸಬಹುದು. ನಿಜವಾದ ರಸಿಕಹಂಸರೇ ಈ ಕವನಗಳ ಚೆಲುವನ್ನು ಸವಿಯಬಲ್ಲರು.
‘ಕರಡಿ ಕುಣಿತ’ವು ಬೇಂದ್ರೆಯವರ ‘ಸರಳ ಕವನ’ಗಳಲ್ಲೊಂದು. ಕವನವನ್ನು ಓದುತ್ತ ಹೋದಂತೆ, ಈ ಸರಳ ಕವನದ ಒಡಲಲ್ಲಿರುವ ಶೋಷಣೆಯ ಸಂಕೀರ್ಣತೆಯು ಓದುಗರ ಗಮನಕ್ಕೆ ಬಾರದಿರಲಾರದು.
‘ಕರಡಿ ಕುಣಿತ’ ಕವನದ ಮೊದಲ ನುಡಿಯನ್ನು ಗಮನಿಸೋಣ.
ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು
ಕಂಬಳಿ ಹೊದ್ದಾವಾ ಬಂದಾನ.
ಗುಣುಗುಣು ಗುಟ್ಟುತ, ಕಡಗವ ಕುಟ್ಟುತ
ಕರಡಿಯನಾಡಿಸುತ ನಿಂದಾನ.
ಕರಡಿಯನ್ನು ಆಡಿಸುವವನ ಚಿತ್ರಣದಿಂದ ಈ ಕವನ ಪ್ರಾರಂಭವಾಗುತ್ತದೆ. ನೋಡುಗನ ಕಣ್ಣಿಗೆ ಮೊದಲು ಕಾಣುವದು ಇವನ ಉಡುಗೆ-ತೊಡುಗೆ. ಈ ವೇಷಭೂಷಣಗಳು ಇವನ ವ್ಯಕ್ತಿತ್ವದ ಪ್ರತೀಕಗಳೂ ಆಗಿವೆ. ಈತನು ಹೆಗಲ ಮೇಲೆ ಕರಿಯ ಕಂಬಳಿಯನ್ನು ಹೊದ್ದುಕೊಂಡಿದ್ದಾನೆ ಹಾಗು ಮಣಿಕಟ್ಟಿನಲ್ಲಿ ಕಬ್ಬಿಣದ ಕಡಗವನ್ನು ತೊಟ್ಟುಕೊಂಡಿದ್ದಾನೆ. ಅಲ್ಲದೆ ಕೈಯಲ್ಲಿ ಕುಣಿಗೋಲನ್ನೊಂದನ್ನು ಹಿಡಿದುಕೊಂಡಿದ್ದಾನೆ. ಇದು ಕರಡಿಯನ್ನು ತಿವಿಯಲು ಅವನು ಬಳಸುವ ಉಪಕರಣ. ಜೊತೆಗೆ ಕರಡಿಯದೇ ಕೂದಲುಗಳ ಗುಚ್ಛವೊಂದು ಅವನ ಮತ್ತೊಂದು ಕೈಯಲ್ಲಿ. ಇವೆಲ್ಲವು ಈ ಮನುಷ್ಯನ ನಿಷ್ಕರುಣತೆಯನ್ನು ಗಾಢವಾಗಿ ಬಿಂಬಿಸುತ್ತವೆ. ನೋಡುಗರನ್ನು ಆಕರ್ಷಿಸಲು ಈತ ಕಡಗವನ್ನು ಕುಟ್ಟುತ್ತ, ಏನೇನೋ ಗುಣುಗುಟ್ಟುತ್ತ ಕರಡಿಯನ್ನು ಆಡಿಸಲು ಬರುತ್ತಿದ್ದಾನೆ. ಈತನ ಕರ್ಕಶ ವ್ಯಕ್ತಿತ್ವವನ್ನು ನೋಡಿದಾಗ ಕವಿಯ ಮನಸ್ಸು ಕರಡಿಯ ಅಸಹಾಯಕ ಸ್ಥಿತಿಯನ್ನು ಚಿಂತಿಸುತ್ತದೆ. (ಈ ನುಡಿಯ ಸಾಲುಗಳಲ್ಲಿ ಪ್ರಧಾನವಾಗಿರುವ ‘ಕ’ಕಾರವು ಕರ್ಕಶತೆಯನ್ನು ಧ್ವನಿಸುವದನ್ನು ಗಮನಿಸಬೇಕು.)
ಎರಡನೆಯ ನುಡಿ:
ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
ಜಾಂಬುವಂತನ ಹಿಡಿದು ತಂದಾನ
‘ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ,
ಧಣಿ ದಾನ ಕೊಡುವನು’ ಅಂದಾನ
ಅಡವಿಯಲ್ಲಿ ಸ್ವತಂತ್ರವಾಗಿ ಬದಕುತ್ತಿದ್ದ ಪ್ರಾಣಿ ಈ ಕರಡಿ. ಹೇರಳವಾಗಿ ಸಿಗುವ ಜೇನುತುಪ್ಪವನ್ನು ಮೆಲ್ಲುತ್ತ ನೆಮ್ಮದಿಯಿಂದ ಜೀವಿಸುತ್ತಿದ್ದ ಜೀವಿಯಿದು. ಅಲ್ಲದೆ, ಕರಡಿಯೆಂದರೇನು ಸಾಮಾನ್ಯ ಪ್ರಾಣಿಯೆ? ಇದು ಜಾಂಬುವಂತ. ಪರಮಾತ್ಮನು ರಾಮಾವತಾರ ಎತ್ತಿದಾಗ ಅವನಿಗೆ ನೆರವು ನೀಡಿದ ಪ್ರಾಣಿ. ಕೃಷ್ಣಾವತಾರದಲ್ಲಿ ಭಗವಂತನೊಡನೆಯೇ ಸೆಣಸಾಡಿಸಿದಂತಹ ಬಲಿಷ್ಠ ಪ್ರಾಣಿ. ಇದೀಗ ಮಾನವನ ಕುಟಿಲ ಜಾಲದಲ್ಲಿ ಸೆರೆಯಾಗಿ ಅವನ ಕೈಗೊಂಬೆಯಾಗಿದೆ. ಇಂತಹ ಪ್ರಾಣಿಗೆ ಈ ಮಾನವನ ತುಚ್ಛ ಆದೇಶವೇನು?---‘ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ’ ಎನ್ನುವ ಗುಲಾಮಗಿರಿಯ ಆದೇಶ! ಇದಕ್ಕೆ ಪ್ರತಿಫಲವೆಂದರೆ ಧಣಿ ಬಿಸಾಕುವ ‘ದಾನ’. ಈ ದಾನ ದೊರೆಯುವದೂ ಸಹ ಕುಣಿಸುವವನಿಗೇ! ಎಂತಹ ಹೃದಯವಿದ್ರಾವಕ ಚಿತ್ರವಿದು!
ಮೂರನೆಯ ನುಡಿ:
ತ್ರೇತಾಯುಗ ರಾಮನ್ನ, ದ್ವಾಪರದ ಕೃಷ್ಣನ್ನ
ಕಲಿಯುಗದ ಕಲ್ಕೀನ ಕಂಡಾನ
ಜಾಂಬುನದಿ ತೀರದ ಜಂಬುನೀರಲ ಹಣ್ಣು
ಕೃತಯುಗದ ಕೊನೆಗೀವಾ ಉಂಡಾನ
ಕೃತಯುಗ ಅಥವಾ ಸತ್ಯಯುಗದಲ್ಲಿ ಎಲ್ಲ ಜೀವಿಗಳು ನಿಸರ್ಗಸಹಜ ಜೀವನ ನಡೆಯಿಸುತ್ತಿದ್ದರು. ಈ ಯುಗದ ಅಂತ್ಯದವರೆಗೆ ಜಾಂಬುವಂತನು ಅಂದರೆ ಕರಡಿಯು ಜಾಂಬುನದಿಯ ದಂಡೆಯ ಮೇಲೆ ಬೆಳೆಯುತ್ತಿದ್ದ ಜಂಬುನೀರಲ ಹಣ್ಣುಗಳನ್ನು ತಿಂದು ಜೀವಿಸುತ್ತಿತ್ತು. ಆನಂತರದ ತ್ರೇತಾಯುಗ, ದ್ವಾಪರಯುಗ ಹಾಗು ಕಲಿಯುಗಗಳಲ್ಲಿ ಭಗವಂತನು ರಾಮಾವತಾರ, ಕೃಷ್ಣಾವತಾರ ಹಾಗು ಕಲ್ಕಿಯ ಅವತಾರಗಳನ್ನು ಎತ್ತಿ ದುಷ್ಟಸಂಹಾರ ಮಾಡಿದನು. ಇವು ನಾಗರಿಕ ಯುಗಗಳಾಗಿದ್ದುದರಿಂದ ಜಾಂಬುವಂತನು ನಿಸರ್ಗಸಹಜ ಜೀವನಕ್ಕೆ ಕೊನೆ ಹಾಡಿದನು. ಈ ಎಲ್ಲ ಯುಗಗಳನ್ನು ಕಂಡವನಾದುದರಿಂದ ಜಾಂಬುವಂತನು ಪುರಾಣಪುರುಷನು.
[ಟಿಪ್ಪಣಿ: ಹಿಮಾಲಯಪರ್ವತಶ್ರೇಣಿಯ ಭಾಗವಾದ ಕೈಲಾಸ ಶಿಖರದ ಸಮೀಪದಲ್ಲಿರುವ ಮಾನಸ ಸರೋವರದ ಸುತ್ತಲೂ ಏಳು ದ್ವೀಪಗಳಿವೆ ಎಂದು ಪುರಾಣಗಳು ಹೇಳುತ್ತವೆ. ಇವು ಬಹುಶಃ ಏಳು ಖಂಡಗಳು. ದಕ್ಷಿಣ ದಿಕ್ಕಿನಲ್ಲಿರುವ ಖಂಡಕ್ಕೆ ಜಂಬೂದ್ವೀಪ (=ಭಾರತ) ಎಂದು ಕರೆಯುತ್ತಾರೆ. ಈ ಜಂಬೂದ್ವೀಪದಲ್ಲಿ ಹರಿಯುತ್ತಿರುವ ನದಿಯೇ ಜಾಂಬುನದಿ. ಅಲ್ಲಿಯ ನಿವಾಸಿಗಳು ಜಾಂಬುವಂತರು. ಇವರೇ ಭಾರತದ ಮೂಲನಿವಾಸಿಗಳು. ಈ ನದೀತೀರದಲ್ಲಿ ಬೆಳೆಯುವ ವೃಕ್ಷಗಳು ಜಂಬು ನೀರಲ ವೃಕ್ಷಗಳು. ಜಾಂಬುವಂತರು ಈ ಮರದ ನೀರಲ ಹಣ್ಣುಗಳನ್ನು ತಿಂದು ಬದಕುತ್ತಿದ್ದರು. ಮಾನಸ ಸರೋವರದ ನಡುವಿನಲ್ಲಿಯೂ ಸಹ ಒಂದು ಬೃಹತ್ ಜಂಬೂವೃಕ್ಷ ಅಂದರೆ ನೀರಲ ಮರವಿದೆ. ಇದರಿಂದ ಬೀಳುವ ಜಂಬೂಫಲಗಳನ್ನು ಅಲ್ಲಿಯ ವಾಸಿಗಳಾದ ‘ನಾಗ’ರು ತಿಂದು ಜೀವಿಸುತ್ತಿದ್ದರು. ಸ್ವತಂತ್ರವಾಗಿ ಬಾಳುತ್ತಿದ್ದ ಈ ಆದಿವಾಸಿಗಳು ಆಯುಧಕುಶಲವಾದ ಜನಾಂಗಕ್ಕೆ ಸೋತು ಆಳಾಗಿ ಬಾಳಬೇಕಾಯಿತು.
ಜಂಬುದ್ವೀಪದಲ್ಲಿರುವ ಜಾಂಬುನದಿಯ ದಂಡೆಗಳಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಜಂಬುನೀರಲ ಹಣ್ಣುಗಳನ್ನು ತಿನ್ನುತ್ತ ಈ ಜಾಂಬುವಂತರು ಸ್ವತಂತ್ರವಾಗಿ, ಸುಖವಾಗಿ ಇರುತ್ತಿದ್ದರು. ಇದು ಕೃಷಿ ಸಂಸ್ಕೃತಿಗಿಂತಲೂ ಮೊದಲಿನ ಜೀವನಪದ್ಧತಿಯನ್ನು ಸೂಚಿಸುತ್ತದೆ. ಈ ಯುಗದ ಅಂದರೆ ಕೃತಯುಗದ ಲಕ್ಷಣವೇನು? ಈ ಯುಗದಲ್ಲಿ ಕಬ್ಬಿಣದ ಆವಿಷ್ಕಾರವಾಗಿರಲಿಲ್ಲ. ಆದುದರಿಂದ ಕೃಷಿಸಂಸ್ಕೃತಿಯೂ ಪ್ರಾರಂಭವಾಗಿರಲಿಲ್ಲ. ಸಸ್ಯಾಹಾರಿಗಳು ಗಡ್ಡೆ ಗೆಣಸುಗಳನ್ನು ಹಾಗು ಹಣ್ಣು ಹಂಪಲಗಳನ್ನು ತಿಂದು ಬದಕುತ್ತಿದ್ದರು. ಈ ಯುಗದಲ್ಲಿ ‘ಗುಂಪು ಜೀವನ’ವಿತ್ತು. ಯಾವುದೇ ಒಬ್ಬ ವ್ಯಕ್ತಿಯ ಆಳ್ವಿಕೆ ಪ್ರಾರಂಭವಾಗಿರಲಿಲ್ಲ; ಹಾಗು ಈ ಯುಗದ ಮನುಷ್ಯರು ‘ಆಟವಿಕರು’, ಅಂದರೆ ಅಡವಿಯ ನಿವಾಸಿಗಳು.
ಈ ನಿಸರ್ಗಸಹಜ ಜೀವನ ಕೊನೆಗೊಂಡಿದ್ದು ಕೃತಯುಗದ ಅಂದರೆ ಸತ್ಯಯುಗದ ಕೊನೆಯಲ್ಲಿ. ಸತ್ಯಯುಗದ ಬಳಿಕ ಬಂದದ್ದು ತ್ರೇತಾಯುಗ, ಆನಂತರ ಬಂದದ್ದು ದ್ವಾಪರ ಯುಗ. ತ್ರೇತಾಯುಗದಲ್ಲಿ ಕಬ್ಬಿಣದ ಶೋಧವಾಗಿತ್ತು. ಈ ಯುಗದಲ್ಲಿಯೇ ಸೂರ್ಯವಂಶದವರ ವಂಶಪಾರಂಪರಿಕ ಪ್ರಭುತ್ವ ಬೆಳೆದು ಬಂದಿತು. ಇವರು ನಗರಿಗಳಲ್ಲಿ ಜೀವಿಸುವವರು ಅಂದರೆ ‘ನಾಗರಿಕರು.’ ಶ್ರೀರಾಮಚಂದ್ರನು ಕಬ್ಬಿಣದ ಬಿಲ್ಲು ಬಾಣಗಳನ್ನು ಉಪಯೋಗಿಸಿ, ಶಿಲಾಯುಧ ಹಾಗು ಕಟ್ಟಿಗೆಯ ಗದೆಗಳನ್ನು ಬಳಸುತ್ತಿದ್ದ ಮೂಲನಿವಾಸಿಗಳನ್ನು ಅಂದರೆ ‘ಆಟವಿಕ’ರನ್ನು ಸೋಲಿಸಿದನು. ಆಯುಧಕುಶಲ ಜನಾಂಗವುನಿಸರ್ಗಸಹಜ ಜೀವಿಗಳನ್ನು ಮಣಿಸಿತು. ಅವರನ್ನು ತನ್ನ ಅಧೀನರನ್ನಾಗಿ ಮಾಡಿತು. ಸಮಾಜದಲ್ಲಿ ವಿವಿಧ ವರ್ಣಗಳು ಪ್ರಾರಂಭವಾದವು. ಪ್ರಭುತ್ವದಿಂದ ಗುಲಾಮಗಿರಿಯವರೆಗಿನ pyramid ರೂಪುಗೊಂಡಿತು. ಇದು ಯಜಮಾನ ಸಂಸ್ಕೃತಿಯ ಪ್ರಾರಂಭವನ್ನು ಸೂಚಿಸುತ್ತದೆ.
ವಿಭಿನ್ನ ಜನಾಂಗಗಳ ಅಥವಾ ಗುಂಪುಗಳ ನಡುವೆ ಹೋರಾಟ ನಡೆದಾಗ ಗೆದ್ದವನೇ ಯಜಮಾನ, ಸೋತವನೇ ಗುಲಾಮ!
ಸತ್ಯಯುಗದ ಕೊನೆಯಲ್ಲಿ ಸೋತು ಹೋದ ‘ಜಾಂಬುವಂತರು’ ತ್ರೇತಾಯುಗ, ದ್ವಾಪರಯುಗ ಹಾಗು ಕಲಿಯುಗಗಳಲ್ಲಿ ವಿಭಿನ್ನ ಅಧಿಪತಿಗಳನ್ನು ಕಂಡರು. ತಾವು ಮಾತ್ರ ಗುಲಾಮರಾಗಿಯೇ ಉಳಿದರು.]
ನಾಲ್ಕನೆಯ ನುಡಿ:
ಬಂದಾರ ಬರ್ರೆವ್ವ, ಕಂದನ ತರ್ರೆವ್ವ
ಅಂಜೀಕಿ ಗಿಂಜೀಕಿ ಕೊಂದಾನ
ರೋಮರೋಮಗಳಲ್ಲಿ ಭೀಮರಕ್ಷಿಯ ಬಲ
ಕೊರಳಾಗ ಕೊಟ್ಟಿರಿ ಒಂದಾನ
ಮೊದಲನೆಯ ನುಡಿಯಲ್ಲಿ ಕರಡಿಯನ್ನು ಆಡಿಸುವವನ ಚಿತ್ರಣವನ್ನು ಹಾಗು ಎರಡನೆಯ ಮತ್ತು ಮೂರನೆಯ ನುಡಿಗಳಲ್ಲಿ ಕರಡಿಯ ಚರಿತ್ರೆಯನ್ನು ಬಣ್ಣಿಸಿದ ಬೇಂದ್ರೆಯವರು ನಾಲ್ಕನೆಯ ನುಡಿಯಲ್ಲಿ ಕರಡಿಯನ್ನು ಆಡಿಸುವವನ ಮಾಯದ ಮಾತುಗಳನ್ನು ವರ್ಣಿಸುತ್ತಾರೆ.
ಕುಣಿತವನ್ನು ನೋಡಲು ಬರುವವರನ್ನು ಮರಳು ಮಾಡಿ ತನ್ನ ಹೊಟ್ಟೆ ತುಂಬಿಕೊಳ್ಳುವದೇ ಕುಣಿಸುವವನ ಮುಖ್ಯ ಉದ್ದೇಶವಾಗಿರುತ್ತದೆ. ಈ ಉದ್ದೇಶ ಸಾಧಿಸಲು ಆತನು ಅಲ್ಲಿ ನೆರೆದ ತಾಯಂದಿರ ಭಾವನೆಗಳ ಮೇಲೆ ಆಟ ಆಡುತ್ತಾನೆ. ಚಿಕ್ಕ ಮಕ್ಕಳು ಯಾವಾಗಲೋ ಅಳುತ್ತಿರುತ್ತಾರೆ. ಮಗು ಅಂಜಿರಬಹುದು ಅಥವಾ ಅದಕ್ಕೆ ಕೆಟ್ಟ ದೃಷ್ಟಿ ತಾಗಿರಬಹುದು ಎಂದು ಹೆದರಿದ ತಾಯಂದಿರು ‘ದೃಷ್ಟಿಯನ್ನು ನಿವಾಳಿಸಿ’ ಚೆಲ್ಲುತ್ತಾರೆ. ‘ಕಣ್ಣಿಗೆ ಕಾಮನ ರಕ್ಷಿ, ಬೆನ್ನಿಗೆ ಭೀಮನ ರಕ್ಷಿ’ ಎಂದು ದೈವದ ರಕ್ಷಣೆ ಕೋರುತ್ತಾರೆ. ಅಂತಹ ಅಮಾಯಕ ತಾಯಂದಿರ ಎದುರಿಗೆ ಕರಡಿ ಕುಣಿಸುವವನು ‘ಈ ಕರಡಿಯ ಕೂದಲುಗಳಲ್ಲಿ ಭೀಮರಕ್ಷಿಯ ಬಲವಿದೆ’ ಎಂದು ಹೇಳುವಾಗ ಕರಡಿಯ ದೈಹಿಕ ಸಾಮರ್ಥ್ಯದ ಜೊತೆಗೇ ಅದಕ್ಕೊಂದು ದೈವಿಕ ಸಾಮರ್ಥ್ಯವನ್ನು ಆರೋಪಿಸುತ್ತಾನೆ. ಅದು ನಿಜವಿದ್ದರೆ, ಕರಡಿ ಮನುಷ್ಯನ ಆಳಾಗಿ ಬಾಳುತ್ತಿತ್ತೆ!?
ಐದನೆಯ ನುಡಿ:
‘ಕುಣಿಯಲೆ ಮಗನ ನೀ’ ಅನ್ನೋದೊಂದೆ ತಡ
ತನ್ನsನ ತಾsನನ ತಂದಾsನ
ಮುದ್ದುಕೂಸಿನ ಹಾಗೆ ಮುಸುಮುಸು ಮಾಡುತ್ತ
ಕುಣಿದಾನ ಕುಣಿತವ ಛಂದಾನ
ನೆರೆದವರ ಮನರಂಜನೆಗಾಗಿ ಕರಡಿಯನ್ನು ಕುಣಿಸಬೇಕಲ್ಲವೆ? ಕರಡಿಯಾದರೇನು ಮನುಷ್ಯನಾದರೇನು, ಜೀವಜಗತ್ತಿನಲ್ಲಿ ಎಲ್ಲರೂ ಸಮಾನರೇ. ಆದರೆ ಮನುಷ್ಯನು ತಾನೇ ಜೀವಜಗತ್ತಿನ ಅಂತಿಮ ಸೃಷ್ಟಿ ಎಂದು ಭಾವಿಸಿಬಿಟ್ಟಿದ್ದಾನೆ. ಹಾಗೆಂದುಕೊಂಡು ಕರಡಿಯನ್ನು ತನಗಿಂತ ಕೆಳದರ್ಜೆಯ ಪ್ರಾಣಿಯನ್ನಾಗಿ ಮಾಡಿದ ಮನುಷ್ಯನು ಆ ಜೀವಿಗೆ ‘ಕುಣಿಯಲೆ ಮಗನ ನೀ’ ಎಂದು ಆದೇಶ ನೀಡುತ್ತಾನೆ. ಪಾಪದ ಕರಡಿಗಂತೂ ಮೊದಲೇ ತರಬೇತಿ ಸಿಕ್ಕಿರುತ್ತದೆ. ಕುಣಿಸುವವನಿಂದ ಹೊರಡುವ ಧ್ವನಿ ಹಾಗು ಕುಣಿಗೋಲಿನ ಸನ್ನೆಗೆ ಅದು ಆಳಾಗಿ ಬಿಟ್ಟಿದೆ. ಇಂತಹ ವರ್ತನೆಯನ್ನು ೧೯ನೆಯ ಶತಮಾನದಲ್ಲಿದ್ದ ರಶಿಯಾದ ಖ್ಯಾತ ವರ್ತನಾ-ವಿಜ್ಞಾನಿ ಪಾವ್ಲೋವರು ‘ರೂಢಿಸಿದ ಪ್ರತಿಕ್ರಿಯೆ’ (=Conditioned Reaction) ಎಂದು ಕರೆದಿದ್ದಾರೆ. ಆದುದರಿಂದ ಅದರ ಕುಣಿತವು ಸುಖದ ಕುಣಿತವಲ್ಲ. ಕುಣಿಗೋಲಿಗೆ ಹೆದರಿಕೊಳ್ಳುವ ಮುಗ್ಧ ಕರಡಿಯ ಕುಣಿತವನ್ನು ಬೇಂದ್ರೆಯವರು ‘ಮುದ್ದು ಕೂಸಿನ ಮುಸುಮುಸು’ ವರ್ತನೆಗೆ ಹೋಲಿಸುತ್ತಿದ್ದಾರೆ. ಕೂಸು ಎಂದರೆ ಅಸಹಾಯಕ ಜೀವಿ. ಅದಕ್ಕೆ ಅಸಮಾಧಾನವಾದಾಗ ಅದು ಮುಸುಮುಸು ಮಾಡುತ್ತದೆ. ಅದರಂತೆ ಕರಡಿಯ ಕುಣಿತವೂ ಸಹ ಅಸಹಾಯಕ ಜೀವಿಯ ಮುಸುಮುಸು ಕುಣಿತ. ಆದರೆ ನೋಡುಗರಿಗೆ ಅದು ‘ಛಂದಾನ ಕುಣಿತ’!
ಆರನೆಯ ನುಡಿ:
ಹೊಟ್ಟೆಗಿಲ್ಲದವರ ಹೊಟ್ಟೆಗೆ ಹಾಕಲು
ನಡೆದಾನ ಪಡೆದಾನ ಬಂದಾsನ
`ಕುಣಿಸುವವರ ಹೊಟ್ಟಿ ತಣ್ಣಗಾಗಲಿ’ ಎಂದು
ಮುಗಿಲಿಗೆ ಕೈಮುಗಿದು ನಿಂದಾನ
ಕರಡಿಯ ಕುಣಿತವು ತನ್ನ ಹೊಟ್ಟೆಪಾಡಿಗಲ್ಲ. ಅದನ್ನು ಹಿಡಿದುಕೊಂಡು ಬಂದವನ ಹೊಟ್ಟೆಪಾಡಿಗಾಗಿ. ‘ನಡೆದಾನ’ ಎಂದರೆ ಅನಾದಿಕಾಲದಿಂದಲೂ ಇದು ನಡೆದು ಬಂದಿದೆ. ‘ಪಡೆದಾನ’ ಅಂದರೆ ಇದು ಕರಡಿಯ ಹಣೆಬರಹ! ‘ಬಂದಾನ’ ಎಂದರೆ ಈ ಸಂಕಟಕಾರ್ಯಕ್ಕಾಗಿ ಆತ ಜನರೆದುರಿಗೆ ಬಂದು ಕುಣಿಯುತ್ತಿದ್ದಾನೆ. ಕರಡಿಯನ್ನು ಆಡಿಸುವವನ ಹೊಟ್ಟೆ ಭಗಭಗ ಎನ್ನುತ್ತಿರುವಷ್ಟು ಸಮಯವೆಲ್ಲ, ಕರಡಿ ಕುಣಿಯುತ್ತಲೇ ಇರಬೇಕು. ಅವನ ಹೊಟ್ಟೆ ತಣ್ಣಗಾದಾಗಲೇ ಕರಡಿ ಪಡುವ ಕಷ್ಟವೂ ಕಡಿಮೆಯಾದೀತು. ಅದಕ್ಕೆಂದೇ ಇದು ಮುಗಿಲಿಗೆ ಕೈ ಮಾಡಿ ದೇವರನ್ನು ಪ್ರಾರ್ಥಿಸುತ್ತದೆ: “ನನ್ನನ್ನು ಕುಣಿಸುತ್ತಿರುವವನ ಹೊಟ್ಟೆ ತಣ್ಣಗಿರಲಿ, ದೇವರೆ!”
ಅನಾಥೋ ದೇವರಕ್ಷಕಃ!
ಏಳನೆಯ ನುಡಿ:
ಮನಬಲ್ಲ ಮಾನವ ಕುಣಿದಾನ, ಕುಣಿಸ್ಯಾನ
ಪ್ರಾಣದ ಈ ಪ್ರಾಣಿ ಹಿಂದಾsನ
ಕರಡೀಯ ಹೆಸರೀಲೆ ಚರಿತಾರ್ಥ ನಡಿಸ್ಯಾನ
ಪರಮಾರ್ಥ ಎಂಬಂತೆ ಬಂದಾನ
ಪ್ರಾಣಿಗಳಿಗೆ ಹಾಗು ಮನುಷ್ಯರಿಗೆ ಇರುವ ಭೇದವೇನು? ಪ್ರಾಣಿಗಳಲ್ಲಿ ಇರುವದು ಪ್ರಾಣಶಕ್ತಿ (vitality). ಮನುಷ್ಯನಲ್ಲಿರುವದು ಬುದ್ಧಿಶಕ್ತಿ. ಬುದ್ಧಿಶಕ್ತಿ ಎನ್ನುವದು ಧೂರ್ತತನವೂ ಆಗಬಲ್ಲದು. ಮನಬಲ್ಲ ಮಾನವ ಎನ್ನುವಾಗ ಬೇಂದ್ರೆಯವರು ಮನುಷ್ಯನ ಈ ಧೂರ್ತ ಬುದ್ಧಿಯನ್ನು ಸೂಚಿಸುತ್ತಿದ್ದಾರೆ ಹಾಗು ಪ್ರಾಣದ ಪ್ರಾಣಿ ಎನ್ನುತ್ತ ಕರಡಿ ಹಾಗು ಇತರ ಪ್ರಾಣಿಗಳ ಪ್ರಾಣಶಕ್ತಿಯನ್ನು ಸೂಚಿಸುತ್ತಿದ್ದಾರೆ. ಈ ಧೂರ್ತಬುದ್ಧಿಯಿಂದಲೇ ಮಾನವನು ಪ್ರಾಣಶಕ್ತಿಯ ಪ್ರಾಣಿಗಳನ್ನು ಸೋಲಿಸಿದ್ದಾನೆ. ಈ ಧೂರ್ತಬುದ್ಧಿಯಿಂದಲೇ ಇತರ ಅಮಾಯಕ ಮಾನವರನ್ನು ಮರಳು ಮಾಡಿದ್ದಾನೆ. ತನ್ನ ಹೊಟ್ಟೆಪಾಡಿಗೆ ಪರಮಾರ್ಥದ ವೇಷವನ್ನು ತೊಡಿಸಿದ್ದಾನೆ.
ಈ ಮನುಷಾ ಎಂದಿಂದೊ ಕವಲೆತ್ತು, ಕೋಡಗ
ತನಗಾಗಿ ಕುಣಿಸುತ್ತ ನಡೆದಾನ
ಕರಡಿ ಕುಣಿತಕ್ಕಿಂತ ನರರ ಬುದ್ಧಿಯ ಕುಣಿತ
ಮಿಗಿಲಹುದು ಕವಿ ಕಂಡು ನುಡಿದಾನ.
ಬೇಂದ್ರೆಯವರು ಕೊನೆಯಲ್ಲಿ ಕವನದ ತತ್ವಸಾರವನ್ನು ಹೇಳಿದ್ದಾರೆ. ಸಾಧಾರಣವೆಂದು ಕಾಣಿಸುವ ಈ ತತ್ವಸಾರವನ್ನು ಯಾವ ಉದ್ದೇಶಕ್ಕಾಗಿ ಬೇಂದ್ರೆಯವರು ಇಲ್ಲಿ ಹೇಳಿದ್ದಾರೆ? ಕವನಕ್ಕಿಂತ ಹೆಚ್ಚಾಗಿ ಕವಿಯ ಅಸ್ಮಿತೆಯನ್ನು ಗುರುತಿಸುವದು ಈ ಕೊನೆಯ ನುಡಿಯ ಉದ್ದೇಶವಾಗಿದೆ. ಬೇಂದ್ರೆಯವರು ತಮ್ಮನ್ನು ಯಾವಾಗಲೂ ಸಾಧಾರಣ ಜನರ ನಡುವಿನ ಕವಿ ಎಂದು ಗುರುತಿಸಿಕೊಳ್ಳುತ್ತಿದ್ದರು. ಹಳ್ಳಿಯಲ್ಲಿಯ ಕಟ್ಟೆಯೊಂದರ ಮೇಲೆ ಹತ್ತು ಜನರ ನಡುವೆ ಕುಳಿತುಕೊಂಡು ಕೈಯೆತ್ತಿ ಹಾಡುವ ಕವಿಯೊಬ್ಬನನ್ನು ಕಲ್ಪಿಸಿಕೊಳ್ಳಿರಿ. ಬಹುಶಃ ಬೇಂದ್ರೆಯವರ ಸ್ವ-ಕಲ್ಪನೆಯೂ ಅದೇ ಇದ್ದಿತೇನೋ? ಅಂತಹ ಕವಿಯೊಬ್ಬ ತನ್ನ ಕೇಳುಗರಿಗೆ ಕೊನೆಯಲ್ಲಿ ಕವನದ ತಿರುಳನ್ನು ಹೇಳುತ್ತಾನೆ, ಒಂದು ನೀತಿಬೋಧೆಯನ್ನು ಮಾಡುತ್ತಾನೆ. ಆದುದರಿಂದಲೇ ಬೇಂದ್ರೆಯವರು ಕವಿಯಾಗಿ ತನಗೆ ಕಂಡ ದರ್ಶನವನ್ನು ಇಲ್ಲಿ ಇತರರಿಗೂ ತಿಳಿಸುತ್ತಿದ್ದಾರೆ. ತಾವು ‘ಲೋಕಕವಿ’ ಎನ್ನುವ ಅಸ್ಮಿತೆಯನ್ನು ಸಮರ್ಥಿಸಿಕೊಂಡಿದ್ದಾರೆ.