ಬೇಲಿಯಾಚೆಯ ಹೂವು.

೧.ವಸಂತ ಗೀತೆ.

ನೇರಳೆ ಹೊಳಪಿನ ಸಂಜೆಯ

ನೀರವ ತಂಗಾಳಿ

ಮುದ್ದಿಸುತ್ತದೆ ನನ್ನ ಚಿತ್ತವನ್ನ

ಯಾರೂ ತಿಳಿಯರು ನನ್ನ

ಸಂಭ್ರಮ ಪ್ರೀತಿಗಳನ್ನ

ಪಡೆಯುತ್ತಿದೆ ನನ್ನ ಕವಿತೆ

ಈವರೆಗೂ ದನಿಗೊಳ್ಳದ

ಬಗೆಬಗೆ ಸೂಕ್ಷ್ಮಗಳನ್ನ.

ಮೂಲ - ಅಡಾಲ್ಡ್ ಸ್ಟೀನ್ ಕ್ರಿಸ್ ಮಂಡ್ ಸನ್

೨.ಬೆಳಕಿನ ಹಾಡು.

ಕಣ್ಣಿನ ಬೆಳಕನ್ನು

ಅಳಿಸಿ ಬಿಡುವ

ಚೆಂದುಟಿ ನಗುವನ್ನೂ

ನಂದಿಸಿ ಬಿಡುವ

ಆಳ ಕರಾಳರಾತ್ರಿಗೆ

ತನ್ನದೇ ಆದ ಬೆಳಕಿದೆ

ತನ್ನದೇ ಉಲ್ಲಾಸವಿದೆ

ಅದು

ಎಂದೂ ಹತ್ತದ ಬೆಳಕಿನ ಹಾಸ

ಅದು

ಎಲ್ಲೂ ಇಲ್ಲದ ಉಲ್ಲಾಸದ ಪ್ರಕಾಶ.

ಮೂಲ - ಅಡಾಲ್ಡ್ ಸ್ಟೀನ್ ಕ್ರಿಸ್ ಮಂಡ್ ಸನ್

೩.ವಂದನೆ ನಿಗೂಢ ದನಿಗೆ.

ಬಂದೇ ಬಿಟ್ಟಿತು ನಾ ಹೊರಡುವ ದಿನ

ಉದಯಿಸಿ ಬಂದ ಸೂರ್ಯ,

ದೇವರ ಬೆರಗಿನ ನೋಟ ಹಾಗೆ

ಬಾನು ದಿಟ್ಟಿಸಿದೆ ಬುವಿಯ.

ಎಲ್ಲಿಯ ಕರೆಯೋ ಏನೋ ತಿಳಿಯದೆ

ಖಿನ್ನವಾಗಿದೆ ಹೃದಯ,

ಯಾಕೆ ಹೀಗೆ ಅದು ಸೆಳೆವುದೊ ಎದೆಯ

ತಿಳಿಯೆನು ಸೆಳೆತದ ನೆಲೆಯ.

ಬಿಟ್ಟು ಸಾಗುವೀ ಪರಿಚಿತ ಲೋಕದ

ಕಂಬನಿ ತುಂಬಿದ ದನಿಯೋ,

ಬರಲಿಹ ದೂರದ ದ್ವೀಪದ ಹೂಗಳ

ಪರಿಮಳ ತುಂಬಿದ ಉಸಿರೋ

ಯಾವುದು ನನ್ನನು ಹೀಗೆ ಕರೆಯುವುದು ?

ಏನೂ ತಿಳಿಯದು ನನಗೆ

ವಂದನೆ ನಿಗೂಢ ದನಿಗೆ.

ಮೂಲ - ಗೀತಾಂಜಲಿ.... ರವೀಂದ್ರನಾಥ ಠಾಕೂರ್

೪.ವಿಸ್ಮೃತಿ.

ಯಾರ ಬಳಸಿ ನಿಂತಿರುವೆನೊ

ನನ್ನ ಹೆಸರಿನಲ್ಲಿ,

ಅಳುತಿರುವನು ಸಿಲುಕಿ ಅವನು

ಈ ಕೂಪದಲ್ಲಿ.

ಹಗಲಿರುಳೂ ಮನಸುರುದು

ಗೋಡೆಯೊಂದ ಸುತ್ತಲೂ

ಕಟ್ಟುತಿರುವೆ, ಚಕ್ರಬಂಧ

ಮುಟ್ಟುತ್ತಿದೆ ಮುಗಿಲು.

ಗೋಡೆಗೋಡೆ ನಡುವೆ ತೆರೆವ

ಕಾಳತಿಮಿರ ಕೂಪ,

ಮೆಲುಮೆಲ್ಲನೆ ನುಂಗುತ್ತಿದೆ

ನನ್ನ ನೈಜರೂಪ.

ಆದರೇನು ನನ್ನ ಕಣ್ಣು

ಗೋಡೆ ನೆತ್ತಿಯೆಡೆಗೆ,

ಹೆಮ್ಮೆ ಒಳಗೆ ಈ ಮಣ್ಣಲಿ

ಎತ್ತಿದಂಥ ನಿಲುವಿಗೆ ;

ಸಣ್ಣದೊಂದು ಬಿರುಕು ಕೂಡ

ನನ್ನ ಹೆಸರ ಗೀರದಂತೆ

ಮಣ್ಣುಮರಳ ಒತ್ತಿಯೊತ್ತಿ

ಮೆತ್ತಿರುವೆನು ಗೋಡೆಗೆ

ಈ ಎಚ್ಚರ ಇಷ್ಟು ಶ್ರಮಕೆ

ಪಡೆದುದೇನು ಕಡೆಗೆ,

ಸರಿಯುತ್ತಿದೆ ನನ್ನ ನೈಜ -

ಬಿಂಬ ಕಣ್ಣ ಮರೆಗೆ !

ಮೂಲ - ಗೀತಾಂಜಲಿ.... ರವೀಂದ್ರನಾಥ ಠಾಕೂರ್

೫.ನಿರೀಕ್ಷೆ.

ನುಡಿಯದಿದ್ದರೇನು ನೀನು

ನಿನ್ನ ಮೌನವನ್ನೆ ನಾನು

ಹೃದಯದಲ್ಲಿ ತುಂಬಿ,

ವಿರಹದಲ್ಲಿ ಬೇಯುತಿರುವೆ

ಅಲುಗದೆಯೆ ಕಾಯುತಿರುವೆ

ನಿನ್ನನ್ನೇ ನಂಬಿ.

ಚುಕ್ಕಿಗಣ್ಣ ಬಿಚ್ಚಿ ಇರುಳು

ತಲೆ ತಗ್ಗಿಸಿ ತಾಳಿ

ಕಾಯುವಂತೆ ಬಾಳುವೆನು

ನನ್ನ ನೋವ ಹೂಳಿ.

ಬೆಳಗು ಬಂದೆ ಬರುವುದು,

ಇರುಳ ಹರಿವೆ ಹರಿವುದು ;

ನಿನ್ನ ದನಿಯ ಸ್ವರ್ಣವರ್ಷ

ಆಗಸವನೆ ಭೇದಿಸಿ

ಜುಳಜುಳನೆಯೆ ತಿರೆಗಿಳಿವುದು

ವಿಶ್ವವನ್ನೆ ತೋಯಿಸಿ.

ನನ್ನ ಹಕ್ಕಿಗೂಡಿನಿಂದ

ಹರಿವ ಹಾಡುಗಳಲಿ

ನಿನ್ನ ನುಡಿಗೆ ರೆಕ್ಕೆ ಬಂದು

ವನಸ ತುಂಬ ಹೊರಳಿ,

ನನ್ನ ತೋಟದಲ್ಲಿ ಮೂಲೆ

ಮೂಲೆಯಲ್ಲು ಗಿಡಗುಂಪಲಿ

ನಿನ್ನ ಮಧುರ ದನಿ ಪುಟಿವುದು

ಹೂ ಮೈಯನು ತಾಳಿ.

ಮೂಲ - ಗೀತಾಂಜಲಿ.... ರವೀಂದ್ರನಾಥ ಠಾಕೂರ್