ದೀಪದ ಸಾಲಿನ ನಡುವೆ.
೧.ಕಾಯಬಲ್ಲೆ.
ನಿನ್ನ ದನಿಯನು ಕೇಳಿ ಎಚ್ಚರಾಯಿತು ನನಗೆ,
ಎಲ್ಲ ಕಿಟಕಿಗಳಿಂದ ಬಂತು ಬೆಳಕು;
ನಿನ್ನದೋ ಕೋಗಿಲೆಯ ದನಿಗಿಂತ ಬಲು ಇಂಪು,
ಬೆಚ್ಚಗಾಯಿತು ನನ್ನ ಜೀವದೊಳಗು.
ಹೊರಗೆ ತೆಂಗಿನ ತೋಟದಲ್ಲಿ ಹಾಡಿತು ಹಕ್ಕಿ,
ನನ್ನ ಹಾಡಿಗೆ ಸಿಕ್ಕಿತೊಂದು ಹಾದಿ;
ನಿನ್ನ ತಾಳೆಯ ಜಡೆಯನೆಳೆದು ಬೆನ್ನಟ್ಟಿದೆನು,
ಅರನಿದ್ರೆಯಲ್ಲಿ ನಾ ಹೋಗೆಂದನು.
ನಿನ್ನ ಕಂಬನಿಯಿಂದ ತಣ್ಣಗಾಯಿತು ಕೆನ್ನೆ,
ಹೋಗಿ ಬರುವೆನು ಎಂದು ಎದ್ದು ನಿಂತೆ;
ಮುಂಬೆಳಗ ಮೌನದಲಿ ಬೆಳ್ದಿಂಗಳಿಳಿದಿತ್ತು,
ಬೆಳಗಾದ ಮೇಲೆ ನೋಡೋಣವೆಂದೆ.
ನಿನ್ನ ಕೈಬೆರಳೊಂದು ನನ್ನ ಮುಟ್ಟಿತು, ನಕ್ಕೆ,
ನಾನು ಬೆಳಗಿನ ತನಕ ಕಾತಬಲ್ಲೆ;
ಇರುಳ ಹಕ್ಕಿಯ ಹಾಡು ಮುಗಿಯಿತಿಲ್ಲಿಗೆ ಎಂದೆ,
ನಮಗೆ ಇರುಬೇಕಲ್ಲ ಒಬ್ಬ ತಂದೆ!
೨.ನನ್ನ ನೆರಳು.
ನಾನು ನಿಂತರೆ ನಿಂತು, ನಾನು ನಡೆದರೆ ನಡೆದು
ನನ್ನ ಜೊತೆಗೂ ಬರುವುದೆನ್ನ ನೆರಳು;
ಇಲ್ಲಿ ನಾನೇ ವೀಣೆ, ಅದರ ತಂತಿ ಮಿಡಿದು
ಇಂಪ ಹೊರಚಲ್ಲುವುದು ನನ್ನ ಬೆರಳು.
ಅಗ್ನಿಪರ್ವತ ನಾನು ; ಪಕ್ಕದಲಿ ಮನೆಮಾಡಿ
ಅದರಂಚಿನಲಿ ಬೆಳೆವ ವೃಕ್ಷ ನಾನು ;
ಸಿಡಿಲಾಗಿ ಮಿಂಚಾಗಿ ನಾನೆ ಕಾಣಿಸಿಕೊಂಡು
ದಾರಿಯನು ತೋರುತಿಹ ಮನುಜ ನಾನು.
ಸೋಲು ಗೆಲುವುಗಳಲ್ಲಿ ಮುಂಬರಿಯುವೆನು ನಾನು,
ನಾನು ಅಂಜುವುದಿಲ್ಲ ಬಿರುಗಾಳಿಗೆ ;
ನನ್ನ ನಂಬಿಕೆಯಲ್ಲಿ ಅಡಿಯನಿಡುವೆನು ನಾನು,
ನಾನೆ ನಕ್ಷತ್ರ , ನೀಲಾಕಾಶ ನಾನೆ.
೩.ಕಾಣುವುದಷ್ಟೆ ನೋಟವೆ?
ನಮಗೆ ಕಾಣುವುದಷ್ಟೆ ನೋಟವೆಂದರೆ ಹೇಗೆ ?
ಕಂಡ ನೋಟಗಳೆಲ್ಲ ರೇಷ್ಮೆ ವಸ್ತ್ರದ ಮೇಲೆ
ಮುತ್ತ ಚೆಲ್ಲಿದ ಹಾಗೆ ! ಕಣ್ಣಿರುವ ತನಕ
ನೋಡಿದ್ದಾಯ್ತು ಅದನಿದನು : ಬೇಕಾದ್ದು, ಬೇಡದ್ದು.
ನೋಟ ಒಳಮುಖವಾಯ್ತು, ಅಲ್ಲಿ ಕಂಡದ್ದೇನು?
ಚೆಂಜೇನು ಕಾಣಿಸಿತು ಗೂಡಿನ ಚಿಟ್ಟಿಜೇನು,
ಅಂಚೆ ಪೆಟ್ಟಿಗೆಯಲ್ಲಿ ಅದರದ್ದೆ ಝಂಕಾರ.
ಅರಿಯದೆಯೆ ಕೈಯಿಟ್ಟರಾಗ ಅವು ಕಚ್ಚುವುವು :
ಕಚ್ಚಿದ ಬೆರಳಿಗುಂಟು ಅಂಥಿಂಥ ಔಷಧ.
ಕಣ್ಣೇ ಹೋಯಿತೆಂದು ನನಗೆ ಬಂದಿದೆ ಚಿಂತೆ.
ಒಳಗಣ್ಣು ಕವಿತೆಯನು ನೇಯುವುವು ಒಳಗೊಳಗೆ :
ಪ್ರಾಸಗಳು ಬಂದು ನಿಲ್ಲುವುವು ಮಲ್ಲಿಗೆಯಂತೆ.
ಬಿರುಗಾಳಿಯಲ್ಲಿ ಉಯ್ಯಾಲೆಯಾಡುವ ಹುಡುಗಿ
ನನ್ನನ್ನು ಕಂಡು ನಕ್ಕಂತೆ ತೋರಿತು ನನಗೆ !
ಒಂದೊಂದು ಪಂಕ್ತಿಗೂ ಛಂದಸ್ಸು ಉಂಟು,
ಕಣ್ಣು ಹೋಗಿದ್ದರೂ ಕವಿತೆ ನಿಲ್ಲಲೆ ಇಲ್ಲ ;
ಒಳಗಣ್ಣ ಮುಂದೆ ನಾನು ನನ್ನ ಕವಿತೆಯ ಕಂಡೆ,
ಕವಿತೆ ಸಾವಿರ ಕಣ್ಣ ತೆರೆದು ಕಂಡಿತು ನನ್ನ.
೪.ತಿಳಿದಷ್ಟನ್ನೆ ಹಾಡಿ.
ಬೆಟ್ಟ ನಿಂತಿರುವುದೂ ಹೊಳೆ ಹರಿಯುತಿರುವುದೂ
ನನಗಾಗಿ ಅಲ್ಲವೆಂಬುದು ನನಗೆ ಗೋತ್ತು;
ನಾನು ಹುಟ್ಟುವ ಮೊದಲೆ ಹುಟ್ಟಿದುವು ಇವು, ಗೊತ್ತು-
ಪ್ರಶ್ನಿಸುವ ಅಧಿಕಾರ ಯಾರಿಗಿತ್ತು?
ನನ್ನ ಕೇಳಿದೆ ನೀನು ಹೊಳೆಯಾಳವೆಷ್ಟೆಂದು,
ಎಲ್ಲಿಂದ ತರಲಿ ನಾನುತ್ತರವನು?
ದಡದ ಬಳಿ ಆಳುದ್ದ; ತೆಪ್ಪ ಸರಿದಂತೆಲ್ಲ
ಹೆಚ್ಹುವುದದರ ಆಳ, ನನಗೆ ಗೊತ್ತು.
ಹೊಳೆಯ ವೇಗದ ಪ್ರಶ್ನೆಯನ್ನ ಕೇಲಿದೆ ನೀನು,
ಉತ್ತರವ ಹೊಂದಿಸುವೆನದಕೆ ನಾನು;
ನೀರ ವೇಗವೆ ಬೇರೆ, ತೆಪ್ಪದ ವೇಗವೆ ಬೇರೆ
ಅಳದಿ ಸರಿವ ಮರಳಿನ ವೇಗ ಬೇರೆ.
ಯಾವುದು ಹೊಳೆಯ ವೇಗ , ನನಗೆ ತಿಳಿಯದು ನೋಡಿ-
ನಿಮಗೆ ತಿಳಿದಷ್ಟನ್ನೆ ನನ್ನ ಹತ್ತಿರ ಹಾಡಿ.
೫.ನಾಡ ಪಾಡು.
ತಂಬೂರಿಯ ಮುಸುಕಿನಲ್ಲಿ
ಅಡಗಿದೆ ಸಂಗೀತ,
ಮೊಸರಿಲ್ಲವೆ ಹಾಲಿನಲ್ಲಿ
ಕಡೆದರೆ ನವನೀತ.
ಕೆರೆ ಬತ್ತಿದೆ, ಜನ ಸತ್ತಿದೆ
ಬೀಸುತ್ತಿದೆ ಗಾಳಿ,
ಬಿರುಗಾಳಿಯು ಬೀಸುತ್ತಿದೆ
ಕೆನ್ನಾಲಗೆ ಕಾಳಿ.
ಹಾಡಿಲ್ಲದ ಕೋಗಿಲೆಗಳು
ಮಾಂದಳಿರಿನ ಹಿಂದೆ,
ತಬ್ಬಲಿಗಳು ಕೇಳುತ್ತಿವೆ
'ನಮಗಿಲ್ಲವೆ ತಂದೆ?'
ಉತ್ತರದಲಿ ತಲೆಯೆತ್ತಿದೆ
ಹಿಮಪರ್ವತ ಮಾಲೆ,
ಹೊಸ ಹಕ್ಕಿಯು ಕುಳಿತಂತಿದೆ
ಹಳೆ ಬಂಡೆಯ ಮೇಲೆ.
ಬಂಗಾರದ ತೊಟ್ಟಿಲಲ್ಲಿ
ಬಡಮಗುವಿದೆ ನೋಡು,
ಸುಖವೇನಿದೆ ಪ್ರಾಯದಲ್ಲಿ
ಬಂದಂತೆಯ್ ಹಾಡು.
ಕಡಲಲ್ಲಿದೆ ಬಲು ಹಿಂಅದೆಯೆ
ಮುಳುಗಿದೊಂದು ಹಡಗು,
'ಮೇಲೇನಿದೆ'?- ಕೇಳುತ್ತಿದೆ
ಹೋಸ ಕಾಲದ ಬೆಡಗು.
ಹಸಿರಾಗಿದೆ ಭೂಮಿಯ ಮೈ
ಹಸಿವಾದರು ಅದಕ್ಕೆ,
ನರ್ತಿಸುತಿದೆ ಥಕ ಥಕ ಥೈ
ಏನಾಗಿದೆನೊ ಅದಕೆ!
ಉಣ್ಣಲು ಕೊಡು, ಕುಡಿಯಲು ಕೋಡು
ಎನ್ನುತ್ತಿದೆ ಭೂಮಿ,
ಹೊಸ ಹಾಡನು ಹಾಡುತ್ತಿದೆ-
'ಕವನ ಬೇಕೆ ಸ್ವಾಮಿ?'
೬.ನಿನ್ನ ಸ್ವತ್ತು.
ಅತ್ತ ನೀನು ಇತ್ತ ನಾನು,
ನಡುವೆ ಒಲವು ಸೇತುವೆ;
ಅದರುದ್ದಕು ದೀಪಮಾಲೆ,
ನಾನು ಅದನು ದಾಟುವೆ.
ಚೆಲುವೆಯರಲಿ ಚೆಲುವೆ ನೀನು,
ಮುಡಿದ ಹೋವು ಮಲ್ಲಿಗೆ;
ದಣಿದು ದಣಿದು ಬಂದೆ ನಾನು,
ನೀನೆ ಚೆಲುವೆ ಇಲ್ಲಿಗೆ.
ನನ್ನ ಮನಸ್ಸು ನನ್ನ ಕನಸು
ನಿನಗೆ ಬೇಡವಾಯಿಎ;
ತೆರ್ದ ಹೂವ ಕಂಪು ನೀನು,
ನಿನಗೆ ಅರ್ಥವಾಯಿತೆ?
ನೀನೆ ಚೆಲುವು ನೀನೆ ಒಲವು,
ನಿನ್ನೊಲವನು ನೆನೆವೆನು;
ಹಾಡಿಕೊಂಡು ಕುಣಿದು ಕುಣಿದು
ನಿನ್ನ ಎಡೆಗೆ ಬರುವೆನು.
ಮುತ್ತಿನಂಥ ಹೆಣ್ಣು ನೀನು,
ಬೇಕೆ ನಿನ್ಗೆ ಮುತ್ತು;
ಅದನು ಕೊಡಲು ಹಿಂದೆಗೆಯೆನು,
ನಾನೆ ನಿನ್ನ ಸ್ವತ್ತು!