ಎಂ. ಗೋಪಾಲಕೃಷ್ಣ ಅಡಿಗ.
ಎಂ. ಗೋಪಾಲಕೃಷ್ಣ ಅಡಿಗ (೧೮ ಫೆಬ್ರುವರಿ ೧೯೧೮ - ೧೪ ನವಂಬರ್ ೧೯೯೨) - ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ. ಪುರೋಹಿತ ಮನೆತನಕ್ಕೆ ಸೇರಿದ ಅಡಿಗರ ತಂದೆ ಸಂಸ್ಕೃತದಲ್ಲಿ ಶ್ಲೋಕಗಳನ್ನೂ, ಕನ್ನಡದಲ್ಲಿ ದೇಶಭಕ್ತಿಯ ಗೀತೆಗಳನ್ನೂ ರಚಿಸುತ್ತಿದ್ದರಂತೆ. ದಕ್ಷಿಣ ಕನ್ನಡ ಜಿಲ್ಲೆ ಯಕ್ಷಗಾನದ ತವರೂರು. ಚಿಕ್ಕಂದಿನಲ್ಲಿ ಅಡಿಗರು ಯಕ್ಷಗಾನ ಪ್ರಸಂಗಗಳು ಸುತ್ತಮುತ್ತ ಎಲ್ಲಿ ನಡೆದರೂ ತಪ್ಪಿಸಿಕೊಳ್ಳದೆ ನೋಡುತ್ತಿದ್ದರಂತೆ. ಆ ಹಾಡುಗಳ, ಮಟ್ಟುಗಳ ಕುಣಿತದ ಭಂಗಿಗಳು ಅವರ ಮನಸ್ಸಿನಲ್ಲಿ ಸದಾ ಅನುರಣನಗೊಳ್ಳುತ್ತಿತ್ತಂತೆ. "ಈ ವಾತಾವರಣದಲ್ಲಿ ನಾನು ನನ್ನ ಹದಿಮೂರನೇ ವಯಸ್ಸಿನಲ್ಲೇ ಪದ್ಯ ರಚನೆಗೆ ಕೈ ಹಾಕಿದೆನೆಂದು ತೋರುತ್ತದೆ. ಭಾಮಿನಿ ಷಟ್ಪದಿ, ವಾರ್ಧಕ ಷಟ್ಪದಿ, ಕಂದ ಪದ್ಯಗಳನ್ನು ರಚಿಸುತ್ತಿದ್ದೆ" ಎಂದು ಅವರೇ ಹೇಳಿದ್ದಾರೆ.
ಅಡಿಗರು ತಮ್ಮ ಪ್ರಾರಂಭದ ವಿದ್ಯಾಭ್ಯಾಸವನ್ನು ದಕ್ಷಿಣ ಕನ್ನಡದಲ್ಲಿ ಮುಗಿಸಿ, ನಂತರ ಮೈಸೂರಿಗೆ ಬಂದರು. ಬಿ.ಎ.(ಆನರ್ಸ್), ಎಂ.ಎ.(ಇಂಗ್ಲೀಷ್) ಪದವಿಗಳನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಅವರು ಮೈಸೂರು ಶಾರದಾವಿಲಾಸ ಕಾಲೇಜು, ಸೆಂಟ್ ಫಿಲೋಮಿನಾ ಕಾಲೇಜು ಹಾಗೂ ಕುಮಟಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜು, ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದ ಅಡಿಗರು ನ್ಯಾಷನಲ್ ಬುಕ್ ಟ್ರಸ್ಟ್‌ನ ನಿರ್ದೇಶಕರಾಗಿ, ಸಿಮ್ಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಿದರು. ಐವತ್ತೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟ ಅಡಿಗರು ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ ಹಾಗೂ ಕಬೀರ್ ಸಂಮಾನ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. "ಸಾಕ್ಷಿ" ಪತ್ರಿಕೆಯ ಸಂಪಾದಕರಾಗಿ ಹೊಸ ಸಂವೇದನೆ ಹಾಗೂ ಹೊಸ ಅಭಿವ್ಯಕ್ತಿ ವಿಧಾನಗಳಿಗೆ ಮಾರ್ಗದರ್ಶಕರಾದರು.
ಸಾಹಿತ್ಯ
ಅಡಿಗರ ಮೊದಲ ಕವನ ಸಂಕಲನ ಭಾವತರಂಗ ಪ್ರಕಟವಾದದ್ದು ೧೯೪೬ರಲ್ಲಿ. ಅಲ್ಲಿಂದೀಚೆಗೆ ಅವರ ಹತ್ತು ಕವನ ಸಂಕಲನಗಳು ಪ್ರಕಟವಾಗಿವೆ. ಕಟ್ಟುವೆವು ನಾವು (೧೯೪೮), ನಡೆದು ಬಂದ ದಾರಿ (೧೯೫೨), ಚಂಡೆಮದ್ದಳೆ (೧೯೫೪), ಭೂಮಿಗೀತ (೧೯೫೯), ವರ್ಧಮಾನ (೧೯೭೨), ಇದನ್ನು ಬಯಸಿರಲಿಲ್ಲ (೧೯೭೫), ಮೂಲಕ ಮಹಾಶಯರು (೧೯೮೧), ಬತ್ತಲಾರದ ಗಂಗೆ (೧೯೮೩), ಚಿಂತಾಮಣಿಯಲ್ಲಿ ಕಂಡ ಮುಖ (೧೯೮೭) ಹಾಗೂ ಸುವರ್ಣ ಪುತ್ಥಳಿ (೧೯೯೦) ಪ್ರಕಟವಾಗಿವೆ. ೧೯೩೭ರಿಂದ ೧೯೭೬ರವರೆಗಿನ ಎಲ್ಲ ಸಂಕಲನಗಳನ್ನೂ ಒಳಗೊಂಡ ಅವರ ಸಮಗ್ರ ಕಾವ್ಯ (ಐ.ಬಿ.ಎಚ್. ಪ್ರಕಾಶನ, ೧೯೮೭) ಪ್ರಕಟವಾಗಿದೆ. ಅಡಿಗರು ಅನಾಥೆ, ಆಕಾಶದೀಪ ಎಂಬ ಎರಡು ಕಾದಂಬರಿಗಳನ್ನೂ ಬರೆದಿದ್ದಾರೆ. ಅನೇಕ ಅನುವಾದ ಕೃತಿಗಳೂ ಪ್ರಕಟವಾಗಿವೆ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ -ಹೀಗೆ ವಿವಿಧ ವಿಷಯಗಳ ಬಗ್ಗೆ ಅಡಿಗರು ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವರ ಈ ಎಲ್ಲ ವೈಚಾರಿಕ ಲೇಖನಗಳೂ "ಸಮಗ್ರ ಗದ್ಯ" (ಸಾಕ್ಷಿ ಪ್ರಕಾಶನ, ೧೯೭೭) ಎಂಬ ಸಂಪುಟವೊಂದರಲ್ಲಿ ಪ್ರಕಟವಾಗಿದೆ. ೧೯೮೭ರಲ್ಲಿ ಮತ್ತೊಮ್ಮೆ ಅಡಿಗರ ಸಮಗ್ರ ಕಾವ್ಯ ಪ್ರಕಟವಾಯಿತು.ಐಬಿಎಚ್ ಪ್ರಕಾಶನ ಇದನ್ನು ಪ್ರಕಟಿಸಿತ್ತು. ೧೯೯೯ರಲ್ಲಿ ಅಡಿಗರ ಎಲ್ಲಾ ಕವನಗಳು ಇರುವ ಸಮಗ್ರ ಕವನಗಳ ಪೂರ್ಣ ಆವೃತ್ತಿಯನ್ನು ಸಪ್ನ ಬುಕ್ ಹೌಸ್ ಪ್ರಕಟಿಸಿತು. ಅಡಿಗರು ಕೆಲವು ಸಣ್ಣ ಕಥೆಗಳನ್ನೂ ಬರೆದಿದ್ದಾರೆ. ಒಮ್ಮೆ ಬೆಂಗಳೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೂ ಸ್ಫರ್ಧಿಸಿದ್ದರು.