ಚಟುವಟಿಕೆಗಳು:-
ಕೃಷಿ ಮೇಳ (KRISHIMELA)
ಕೃಷಿ ವಿಶ್ವವಿದ್ಯಾಲಯ ಧಾರವಾಡವು ಪ್ರತಿ ವರ್ಷ ನಡೆಸಿಕೊಂಡು ಬಂದಿರುವ ಪ್ರಮುಖ ಚಟುವಟಿಕೆಗಳಲ್ಲಿ ಕೃಷಿ ಮೇಳವೂ ಒಂದು. ಲಕ್ಷಾಂತರ ರೈತರು, ವಿಜ್ಞಾನಿಗಳು, ಜನಸಾಮಾನ್ಯರೂ ಹಾಗೂ ವಿವಿಧ ರಾಜ್ಯಗಳಿಂದಲು ಆಗಮಿಸಿ ಈ ಮೇಳದಲ್ಲಿ ಪಾಲ್ಗೊಳ್ಳುತ್ತಾರೆ. ಕೃಷಿ ವಿಶ್ವವಿದ್ಯಾಲಯದಲ್ಲಿ ರೈತರಿಗಾಗಿ ತನ್ನದೇ ಆದ ಹೊಸದಾದ ಛಾಪು ಮೂಡಿಸುತ್ತಿರುವ ಸ್ನೇಹತಂಡವೂ ವಿಶ್ವವಿದ್ಯಾಲಯದ ಪ್ರಮುಖ ಚಟುವಟಿಕೆಯಾದ ಕೃಷಿಮೇಳದಲ್ಲಿ ಪಾಲ್ಗೊಂಡು ರೈತಬಾಂಧವರಿಗೆ ಕಡಿಮೆ ಖರ್ಚಿನ ತಂತ್ರಜ್ಞಾನ ಕೊಟ್ಟು ಅಳಿಲು ಸೇವೆಯನ್ನು ಮಾಡುತ್ತಿದೆ.
ಆರಂಭದ ದಿನಗಳಲ್ಲಿ ಅನೇಕ ಏಳು-ಬೀಳುಗಳನ್ನು ಕಂಡ ಸ್ನೇಹ ತಂಡವು ತನ್ನ ದೃಢಸಂಕಲ್ಪ ಹಾಗೂ ಮುಖ್ಯ ಸಲಹೆಗಾರರಾಗಿದ್ದ ಹಾಗೂ ಇಂದಿನ ಕುಲಪತಿಗಳಾಗಿರುವ ಮತ್ತು ಮಾರ್ಗದರ್ಶಿಯಾಗಿರುವ ಡಾ.ಮಹಾದೇವ ಬಿ ಚಿಟ್ಟಿ ಅವರ ಸಹಾಯ ಹಸ್ತದಿಂದ ೨೦೦೪ ರ ಕೃಷಿ ಮೇಳದಲ್ಲಿ ಮೊದಲ ಬಾರಿಗೆ ಭಾಗವಹಿಸಿತು. ನಂತರ ಅವರ ಸತತ ಸಹಕಾರದಿಂದ ಪ್ರತಿವರ್ಷವೂ ಕೃಷಿ ಮೇಳದಲ್ಲಿ ಪಾಲ್ಗೊಳ್ಳುತ್ತಿದೆ.
ಸ್ನೇಹ ತಂಡವು ಕಡಿಮೆ ಖರ್ಚಿನ ತಾಂತ್ರಿಕತೆಗಳನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ರೈತರಿಗೆ ಅತ್ಯಲ್ಪ ದರದಲ್ಲಿ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸಿದೆ. ಸತತ ೧೫ ವರ್ಷಗಳಿಂದ ನಿಸ್ವಾರ್ಥ ಸೇವೆಯನ್ನು ಮಾಡುತ್ತಾ ಬಂದಿರುವ ಸ್ನೇಹ ತಂಡವು, ಕೃಷಿ ಮೇಳಕ್ಕಾಗಿ, ತಂಡದ ಹಿರಿಯ ಮತ್ತು ಕಿರಿಯ ಸದಸ್ಯರೆಲ್ಲರೂ ಸೇರಿ ಕಡಿಮೆ ಖರ್ಚಿನ ರೈತ
ಸ್ನೇಹಿ ತಾಂತ್ರಿಕತೆಗಳನ್ನು ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಮಾರ್ಗದರ್ಶನದೊಂದಿಗೆ ತಯಾರಿಸಿ ಅವುಗಳನ್ನು ಕೃಷಿಮೇಳದ ಮಳಿಗೆಗಳಲ್ಲಿ ಪ್ರದರ್ಶಿಸುತ್ತಾರೆ.
ಉದಾ : ಶೇಂಗಾ ಬಿಡಿಸುವ ಯಂತ್ರ, ಗೊಬ್ಬರ ಹಾಕುವ ಸುಲಭ ಸಾಧನ, ಕಡಿಮೆ ವೆಚ್ಚದ ಕಳೆ ಕತ್ತರಿಸುವ ಯಂತ್ರ, ಕಡಿಮೆ ಖರ್ಚಿನ ನೀರೆತ್ತುವ ಯಂತ್ರ, ಹಕ್ಕಿ ಬೆದರಿಸುವ ಯಂತ್ರ, ಸಮಗ್ರ ಕೃಷಿ ಪದ್ಧತಿ ಇತ್ಯಾದಿ. ಇಂತಹ ತಾಂತ್ರಿಕತೆಗಳು ತುಂಬಾ ಜನಪ್ರಿಯವಾಗಿವೆ.
ಶಿಕ್ಷಕರ ದಿನಾಚರಣೆ (TEACHERS DAY)
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ಎಂಬ ಹಿರಿಯರ ಮಾತಿನಂತೆ, ಕಲಿಕೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಒಬ್ಬ ಗುರು ಬೇಕೆ ಬೇಕು. ಜಗತ್ತಿನಲ್ಲಿ ಅಮ್ಮನ ಹೊರತಾಗಿ ಎಲ್ಲಾ ಸಮಸ್ಯೆಗಳಿಗೂ ದಾರಿದೀಪವಾಗಿ ನಿಲ್ಲಬಲ್ಲವರು ಶಿಕ್ಷಕರು ಮಾತ್ರ. ವಿದ್ಯೆ, ಜ್ಞಾನ ಮಾಹಿತಿ ಪಡೆಯುವುದು ಈಗ ಸುಲಭವಾದರೂ, ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿ ಹೇಳಲು ಒಬ್ಬ ಗುರುವಿನ ಅವಶ್ಯಕತೆ ಇದ್ದೆ ಇರುತ್ತದೆ. ಸರಳತೆ, ತಾಳ್ಮೆ, ನಮ್ರತೆಯ ಪ್ರತಿರೂಪವಾಗಿ ಎಲ್ಲ ಶಿಕ್ಷಕರನ್ನು ನಾವು ಕಾಣುತ್ತೇವೆ. ಶಿಕ್ಷಕರೇ ನಿಜವಾದ ಅನುಕರಣೀಯ ವ್ಯಕ್ತಿಗಳು, ನಮ್ಮ ಜೀವನದಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸಿ ಸಲಹೆ ಮಾರ್ಗವನ್ನು ತೋರುವವರು ಅವರೇ. ಈ ನಿಟ್ಟಿನಲ್ಲಿ ಸ್ನೇಹ ತಂಡವು ಶಿಕ್ಷಕರ ದಿನಾಚರಣೆಯ ದಿನದಂದು ಸ್ನೇಹ ತಂಡದ ಸದಸ್ಯರೆಲ್ಲರೂ ಸೇರಿ ಕಾಲೇಜಿನ ಎಲ್ಲಾ ಶಿಕ್ಷಕರಿಗೆ ಹೂಗುಚ್ಛ ಕೊಟ್ಟು ಶುಭಕೋರುತ್ತಾರೆ. ಪ್ರತಿ ವರ್ಷವು ಈ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಜೊತೆಗೆ ಉತ್ಸಾಹದಿಂದ ತಾವೇ ತಮ್ಮ ಕೈಯಾರ ಭಕ್ತಿಯಿಂದ ತಯಾರಿಸಿದ ಶುಭಾಶಯ ಪತ್ರ ಹಾಗೂ ಸವಿನೆನಪಿನ ಕಾಣಿಕೆಯನ್ನು ಕೊಟ್ಟು ಗೌರವಿಸುತ್ತಾರೆ.
ಶಿಕ್ಷಕರು ಹಾಗೂ ಸ್ನೇಹ ತಂಡದ ಸದಸ್ಯರ ಸಂಬಂಧ ಹಿಂದಿನಿಂದಲೂ ಅನ್ಯೋನ್ಯವಾಗಿ ಬೆಳೆದುಕೊಂಡು ಬಂದಿದೆ. ಶಿಕ್ಷಕ ವೃಂದವು ಸ್ನೇಹ ತಂಡದ ಆಧಾರಸ್ತಂಭವೆಂದರೆ ತಪ್ಪಾಗಲಾರದು. ತಂಡದ ಪ್ರತಿಯೊಂದು ಕಾರ್ಯ ಚಟುವಟಿಕೆಗಳಲ್ಲಿ ಶಿಕ್ಷಕರು ಮಾರ್ಗದರ್ಶಿಗಳಾಗಿದ್ದಾರೆ.
ವ್ಯಕ್ತಿತ್ವ ವಿಕಸನ (PERSONALITY DEVELOPMENT)
ಸ್ನೇಹ ತಂಡದ ಸದಸ್ಯರಾದ ನಾವು ನಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ ಗುರುಗಳು ಮತ್ತು ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನದಲ್ಲಿ ರಸಪ್ರಶ್ನೆ ಕಾರ್ಯಕ್ರಮ, ಗುಂಪು ಚರ್ಚೆ ರೈತರೊಂದಿಗೆ ಸಂವಾದ, ಪಠ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಗುಂಪಿನಲ್ಲಿ ಚರ್ಚಿಸುವುದು ಇನ್ನೂ ಹತ್ತು ಹಲವಾರು ವೈವಿಧ್ಯಮಯ ಚಟುವಟಿಕೆಗಳನ್ನು ನಡೆಸುತ್ತೇವೆ. ಈ ಮೂಲಕ ನಮ್ಮ ವ್ಯಕ್ತಿತ್ವ ವಿಕಸನವನ್ನು ಸಾಧಿಸುತ್ತೇವೆ.
ಪ್ರಗತಿಪರ ರೈತರ ಭೇಟಿ (PROGRESSIVE FARMER FIELD VISIT)
ಕೃಷಿ ಅಭಿವೃದ್ಧಿಯಲ್ಲಿ ರೈತರು ಮತ್ತು ಕೃಷಿ ವಿಶ್ವವಿದ್ಯಾಲಯಗಳ ನಡುವಿನ ಸಂಬಂಧ ಅತಿ ಮುಖ್ಯವಾಗಿದೆ. ಈ ನಿಕಟ ಸಂಬಂಧವು ಕೃಷಿ ಏಳಿಗೆಗೆ ಪೂರಕವಾಗಿದ್ದು ಇದನ್ನೂ ವೃದ್ಧಿಸುವಲ್ಲಿ ಸ್ನೇಹತಂಡವು ಹಲವಾರು ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಹಮ್ಮಿಕೊಳ್ಳುತ್ತಾ ಬಿಡುವಿನ ಸಮಯದಲ್ಲಿ ಹಾಗೂ ರಜೆಯ ದಿನಗಳಲ್ಲಿ ಹಳ್ಳಿಗಳಿಗೆ ತೆರಳುವ ಸ್ನೇಹ ತಂಡದ ಸದಸ್ಯರು ಪ್ರಗತಿಪರ ರೈತರು ಹಾಗೂ ಇತರ ಸಣ್ಣ ಹಿಡುವಳಿದಾರರ ತೋಟ ಗದ್ದೆಗಳಿಗೆ ಭೇಟಿ ನೀಡಿ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ. ಅದರೊಂದಿಗೆ ರೈತರು ತಾವೇ ಸ್ವಂತ ಕಂಡುಕೊಂಡ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆದುಕೊಂಡು ಮತ್ತು ವಿಶ್ವವಿದ್ಯಾಲಯದ ನೂತನ ತಾಂತ್ರಿಕತೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತಾರೆ. ತಾವು ಕಲೆ ಹಾಕಿದ ಕೃಷಿ ತಂತ್ರಜ್ಞಾನಗಳನ್ನು ಇನ್ನಷ್ಟು ಉನ್ನತೀಕರಿಸಿ ಕೃಷಿ ಮೇಳದಲ್ಲಿ ನೈಜ ಪ್ರಾತ್ಯಕ್ಷಿಕೆ ಮಾಡುವುದು ಸ್ನೇಹ ತಂಡದ ಸಂಪ್ರದಾಯ.
ಸ್ನೇಹ ತಂಡದ ಪ್ರಾರಂಭದಿಂದಲೂ ರೈತರ ಹಾಗೂ ತಂಡದ ಸಂಪರ್ಕ ಅನ್ಯೋನ್ಯವಾಗಿದ್ದು ರೈತರ ಜ್ಞಾನ ದಾಸೋಹಕ್ಕೆ ಸ್ನೇಹ ತಂಡವು ತನ್ನ ಕೈಲಾದ ಮಟ್ಟಿನ ಅಳಿಲು ಸೇವೆ ಮಾಡುತ್ತಾ ಬಂದಿದೆ. ಧಾರವಾಡ, ಬೆಳಗಾವಿ, ಕೊಪ್ಪಳ, ಗದಗ ಸೇರಿದಂತೆ ಇನ್ನು ಹಲವಾರು ಜಿಲ್ಲೆಗಳ ರೈತರೊಂದಿಗೆ ನೇರ ಸಂಪರ್ಕ ಹೊಂದಿರುವ ಸ್ನೇಹತಂಡದ ಸದಸ್ಯರು ರೈತರಿಗೆ ನೆರವಾಗುವ ಮೂಲಕ ಇತರರಿಗಿಂತ ಭಿನ್ನವಾಗಿ ನಿಲ್ಲುತ್ತಾರೆಂದರೆ ಅತಿಶಯೋಕ್ತಿ ಎನಿಸದು.
ಕೃಷಿ ಸಮುದಾಯ ಬಾನುಲಿ ಕೇಂದ್ರ ಕೃವಿವಿ,ಧಾರವಾಡ (90.4 MHz) (RADIO TALK)
ದೇಶದ ಮೊಟ್ಟ ಮೊದಲ ಕೃಷಿ ಸಮುದಾಯ ಬಾನುಲಿ ಕೇಂದ್ರ ಇದಾಗಿದ್ದು ತನ್ನ ವಿಶಿಷ್ಟ ಮತ್ತು ವಿಭಿನ್ನ ಕಾರ್ಯಕ್ರಮಗಳ ಮೂಲಕ ಜಿಲ್ಲೆಯ ರೈತಸಮುದಾಯದ ಏಳಿಗೆಗೆ ಶ್ರಮಿಸುತ್ತಿದೆ. ಹವಾಮಾನಕ್ಕನುಗುಣವಾಗಿ ರೈತರ ಬೆಳೆಗೆ ಉಪಯುಕ್ತವಾದ ಮಾಹಿತಿ ತಂತ್ರಜ್ಞಾನವನ್ನು ತಲುಪಿಸುತ್ತಾ ಬಂದಿದೆ. ಅದರ ಸಹಕಾರದೊಂದಿಗೆ ಸ್ನೇಹತಂಡವು ಸಹ ನೂತನ ತಂತ್ರಜ್ಞಾನಗಳನ್ನು ಹಾಗೂ ಬೆಳೆಗೆ ಸಂಬಂಧಿಸಿದ ಮಾಹಿತಿಗಳನ್ನು ವಿಜ್ಞಾನಿಗಳ ಸಲಹೆ ಪಡೆದು ರೈತರಿಗೆ ವರ್ಗಾವಣೆ ಮಾಡುವ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ನೀಡಲು, ಕೆಲಸ ಮಾಡಲು ಬಾನುಲಿ ಕೇಂದ್ರವು ಸ್ನೇಹ ತಂಡಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಮಾತನಾಡುವ ಕಲೆ, ಪಠ್ಯೇತರ ಸಾಂಸ್ಕೃತಿಕ ಕಾರ್ಯಕ್ರಮಗಳ ಧ್ವನಿ ಮುದ್ರಣದಲ್ಲಿ ಪ್ರೋತ್ಸಾಹ ನೀಡುತ್ತಿರುವ ಕೃಷಿ ಸಮುದಾಯ ಬಾನುಲಿ ಕೇಂದ್ರದೊಂದಿಗೆ ಸಕ್ರಿಯವಾಗಿ ಸ್ನೇಹ ತಂಡದ ಸದಸ್ಯರು ಸಂಪರ್ಕ ಹೊಂದಿದ್ದು, ತಮ್ಮ “ಕಲೆ ಹಾಗೂ ವ್ಯಕ್ತಿತ್ವವನ್ನೂ ಬೆಳೆಸಿಕೊಳ್ಳುತ್ತಿದ್ದಾರೆ.
ನುಡಿ ಮುತ್ತುಗಳ ಫಲಕ (QUOTATION BOARDS)
ಈಗಿನ ಕಾಲಮಾನದಲ್ಲಿ ಪರಿಸರ ನಶಿಸಿ ಹೋಗುತ್ತಿದ್ದು, ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ತುಂಬಾ ಅವಶ್ಯಕ. ಈ ನಿಟ್ಟಿನಲ್ಲಿ ಸ್ನೇಹ ತಂಡ ಕೈಗೊಂಡಿರುವ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿ ಮೂಡಿಸುವತ್ತ ಒಂದು ಪುಟ್ಟ ಹೆಜ್ಜೆಯನ್ನು ಇಟ್ಟಿದೆ. ಅದರೊಂದಿಗೆ ಈ ಕಾರ್ಯಕ್ರಮಗಳು ಕೃಷಿಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿವೆ. ನುಡಿ ಮುತ್ತುಗಳನ್ನು ಹೊತ್ತ ಫಲಕಗಳು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ರಾರಾಜಿಸುತ್ತಿರುವುದು ನಮ್ಮ ಜಾಗೃತಿ ಅಭಿಯಾನಕ್ಕೆ ನಿದರ್ಶನವಾಗಿ ನಿಂತಿದೆ.
ಚಿತ್ರಕಲಾಮೇಳ (ART MELA)
“ಕಲೆ ಎನ್ನುವುದು ನಿನ್ನ ಚಿಂತನೆಗಳ ಸುತ್ತ ಎಳೆದಿರುವ ಒಂದುಗೆರೆ" ಎಂಬ ವಾಕ್ಯದಂತೆ ಸ್ನೇಹ ತಂಡ ಮಾಡಿಕೊಂಡು ಬಂದಿರುವ ಹಲವಾರು ಚಟುವಟಿಕೆಗಳಲ್ಲಿ ಚಿತ್ರಕಲಾಮೇಳವು ಒಂದು. ವಿಶ್ವವಿದ್ಯಾಲಯದಲ್ಲಿರುವ ಎಲ್ಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸಲು ಶಿಕ್ಷಕರ ಮಾರ್ಗದರ್ಶನದೊಂದಿಗೆ ಈ ವೇದಿಕೆಯನ್ನು ಪ್ರಾರಂಭಮಾಡಿತು. ವಿದ್ಯಾರ್ಥಿಗಳ ಚಿತ್ರಕಲೆ ಮತ್ತು ಪ್ರತಿಭೆಗಳು ನಶಿಸಿ ಹೋಗಬಾರದೆಂದು ಹಾಗೂ ಅವರಲ್ಲಿರುವ ಉತ್ಸಾಹವನ್ನು ಹೆಚ್ಚಿಸುವ ಸಲುವಾಗಿ ಈ ಮೇಳವನ್ನು ಆಯೋಜಿಸಲಾಗುತ್ತಿದೆ. ಸ್ನೇಹ ತಂಡದ ಸದಸ್ಯರು ಹಾಗೂ ಇತರ ಆಸಕ್ತಿಯುಳ್ಳ ವಿದ್ಯಾರ್ಥಿಗಳ ಜೊತೆಗೂಡಿ ಚಿತ್ರಪಟ, ಕಲ್ಲಿನ ಚಿತ್ತಾಕೃತಿ ಇತ್ಯಾದಿ ಚಿತ್ರಗಳನ್ನು ಸಂಗ್ರಹಿಸಿ ಪ್ರದರ್ಶನ ಮಾಡುತ್ತಾ ಬಂದಿದೆ.
ಚಿತ್ರಕಲೆ ಮತ್ತು ಛಾಯಾಗ್ರಹಣ ಸ್ಪರ್ಧೆ
ಹೆಮ್ಮಾರಿ ಕರೋನದಿಂದ ತಂಡದ ಸದಸ್ಯರೆಲ್ಲರೂ ತಮ್ಮ ಮನೆಗಳಲ್ಲಿ ಇದ್ದಾಗಲೂ ತಂಡದ ಅನುಪಸ್ಥಿತಿ ಕಾಲೇಜು ಆವರಣದಲ್ಲಿ ಕಾಡಬಾರದೆಂದು, ಸಾಮಾಜಿಕ ಜಾಲತಾಣಗಳಲ್ಲಿ ಜನಜನಿತವಾದ ಇನ್ಸ್ಟಾಗ್ರಾಮ್ ಮೂಲಕ ಚಿತ್ರಕಲೆ ಮತ್ತು ಛಾಯಾಗ್ರಹಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗೆ ತಂಡದ ಹಿರಿಯ ಸದಸ್ಯರು ತೀರ್ಪುಗಾರರಾಗಿದ್ದು, ಮೊದಲ ಮೂರು ಸ್ಥಾನ ಪಡೆದ ಸ್ಪರ್ಧಾರ್ಥಿಗಳಿಗೆ ಸೂಕ್ತ ನಗದು ಬಹುಮಾನಗಳನ್ನು ಕೊಡಲಾಯಿತು.
ಪ್ರತಿಭಾವಂತ ಕಲೆಗಾರರನ್ನು ಗುರುತಿಸಿ ಗೌರವಿಸುತ್ತಾ ಬಂದಿದೆ. ಹೀಗೆ ತಂಡದ ಸದಸ್ಯರು ತಮ್ಮ ಏಳಿಗೆಗಷ್ಟೇ ಅಲ್ಲದೆ ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಸ್ನೇಹ ತಂಡವು ಅತ್ಯುತ್ತಮ ವೇದಿಕೆಯನ್ನು ಕಲ್ಪಿಸಿ ಕೊಟ್ಟಿದೆ. ಇಂತಹ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡು ಸ್ನೇಹತಂಡದ ವಿದ್ಯಾರ್ಥಿಗಳ ಮನೋಲ್ಲಾಸವನ್ನು ಹೆಚ್ಚಿಸುತ್ತಾ ಬಂದಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸುಂದರ ಪರಿಸರ, ಸಮರ್ಥ ಆಡಳಿತಗಾರರು, ಚುಕ್ಕಾಣಿ ಹಿಡಿದಿರುವ ವಿದ್ಯಾರ್ಥಿ ಸ್ನೇಹಿ ಕುಲಪತಿಗಳಾದ ಡಾ. ಮಹಾದೇವ ಬಿ. ಚೆಟ್ಟಿ ಪಾಲಕರ ಪ್ರೀತಿ ತೋರಿಸುತ್ತಿರುವ ಅಧ್ಯಾಪಕ ಹಾಗೂ ಇತರ ಸಿಬ್ಬಂದಿಗಳ ಮದ್ಯ ಸ್ನೇಹ ತಂಡವು ವರ್ಷ ವರ್ಷಕ್ಕೆ ಬೆಳೆಯುತ್ತಲಿದ್ದು ಸ್ನೇಹ ತಂಡದ ಸದಸ್ಯರಲ್ಲಿ ಧನ್ಯತಾ ಭಾವನೆ ಮೂಡಿದೆ.
ಅದೆ ರೀತಿ ಪ್ರತಿ ವರ್ಷವು ಸ್ನೇಹತಂಡದ ಸದಸ್ಯರನ್ನಾಗಿ ಮೊದಲನೆ ವರ್ಷದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ರೈತರ ದಿನಾಚರಣೆ (FARMERS DAY)
ಸ್ನೇಹ ತಂಡವು ರಾಷ್ಟ್ರೀಯ ರೈತರ ದಿನವಾದ ದಿನಾಂಕ: 23/12/2021 ರಂದು ಕೃಷಿ ವಸ್ತು ಪ್ರದರ್ಶನವನ್ನು ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿತ್ತು. ಕಾಲೇಜಿನ ಪ್ರಾಧ್ಯಾಪಕರು ಸೇರಿದಂತೆ ಹಲವಾರು ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೆಲವು ಕೃಷಿ ಸಾಧನ ಮತ್ತು ತಂತ್ರಜ್ಞಾನಗಳನ್ನು ರೈತರಿಗೆ ವರ್ಗಾಹಿಸುವಲ್ಲಿ ತಂಡವು ಯಶಸ್ವಿಯಾಯಿತು. ಇದರಲ್ಲಿ ರಾಶಿ ತುಂಬುವ ಸಾಧನ, ಪಾರ್ಶ್ವ ಕೊಳವೆ ಸುತ್ತುವ ಸಾಧನ, ಸೌರಶಕ್ತಿಯಿಂದ ಕುಡಿ ಚಿವುಟುವ ಸಾಧನ ಎಲ್ಲರ ಗಮನ ಸೆಳೆದವು.
ಮಾಸಿಕ ವಿಶೇಷ (MONTHLY SPECIAL)
'ಮಾಸಿಕ ವಿಶೇಷ' ಚಟುವಟಿಕೆಯು ಸ್ನೇಹ ತಂಡದ ಸಕ್ರಿಯತೆಯನ್ನು ಬಿಂಬಿಸುತ್ತದೆ ಎಂದರೆ ತಪ್ಪಾಗಲಾರದು. ಕಾರಣ ಪ್ರತಿ ತಿಂಗಳ 17ನೇ ತಾರೀಖಿನಂದು ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತಂಡವು ತೊಡಗಿಸಿಕೊಂಡು ಬಂದಿದೆ. ಇದರಲ್ಲಿ ಶ್ರಮ ದಾನವೂ ಒಂದು. ಈ ಚಟುವಟಿಕೆಗೆ ಕಾಲೇಜಿನ ವಿದ್ಯಾಧಿಕಾರಿಗಳಾದ ಬಿ ಡಿ ಬಿರಾದರ್ ಸರ್ ರವರು ಸಾಥ್ ಕೊಟ್ಟಿದ್ದಲ್ಲದೆ ಬಿಡುವಿದ್ದಾಗ ಸ್ವತಃ ಅವರು ಪಾಲ್ಗೊಂಡಿದ್ದರು.
ವಿಶ್ವ ಪರಿಸರ ದಿನಾಚರಣೆ (ENVIRONMENTAL DAY)
ಪರಿಸರ ಮತ್ತು ಮಾನವ ಚಟುವಟಿಕೆಗಳು ಅದರಿಂದಾಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸಲು ಜೂನ್ ೫ ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಸರಳವಾಗಿ ಹೇಳುವುದಾದರೆ ನಾವು ಮಾಡುವ ಪರಿಸರ ಹಾನಿಗಳಿಗೆ ನಾವೇ ಜವಾಬ್ದಾರರಾಗಬೇಕಾಗಿರುವ ಎಚ್ಚರಿಕೆಯನ್ನು ನೀಡುವ ದಿನವಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡುವುದು ನಮ್ಮೆಲ್ಲರ ಕರ್ತವ್ಯ. ಪರಿಸರದ ಉಳಿವಿಗಾಗಿ ನಾವು ಸಾಕಷ್ಟು ಶ್ರಮವಹಿಸಬೇಕಾಗಿದೆ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸಾಧ್ಯವಾದಷ್ಟು ಕೆಲವು ಸಂಗತಿಗಳನ್ನು ನಿಯಂತ್ರಣ ಮಾಡಬೇಕಾಗಿದೆ.
ವಾಯುಮಾಲಿನ್ಯ, ಜಲಮಾಲಿನ್ಯ , ಮಣ್ಣು ಮಾಲಿನ್ಯ ಮಾಡುವುದನ್ನು ನಿಲ್ಲಿಸಬೇಕು. ನೀರನ್ನು ಮಿತವಾಗಿ ಬಳಸುವುದು, ವಿದ್ಯುತ್ ಬಳಕೆ ಕಡಿಮೆ ಮಾಡುವುದು, ಪೆಟ್ರೋಲ್- ಡೀಸೆಲ್ ವಾಹನಗಳ ಬಳಕೆ ಕಡಿಮೆ ಮಾಡುವುದು, ರಾಸಾಯನಿಕ ಮತ್ತು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಅರಣ್ಯವನ್ನು ಬೆಳೆಸುವದು, ಸೌರಶಕ್ತಿಯ ಬಳಕೆಯಂತಹ ಮುಂತಾದವುಗಳನ್ನು ಅಳವಡಿಸಿಕೊಳ್ಳುವುದರಿಂದ ನಮ್ಮ ಪರಿಸರವನ್ನು ಕಾಪಾಡಬಹುದು.
ಇದರ ಆಲೋಚನೆಯಲ್ಲಿ ಸ್ನೇಹ ತಂಡವು ಪ್ರತಿವರ್ಷವೂ ಜೂನ್ ೫ ರಂದು ಮಹಾವಿದ್ಯಾಲಯದ ಡೀನ್ ಅವರ ಜೊತೆ ತಮ್ಮ ಕಾರ್ಯವೈಕರಿ ಸಮಯದಲ್ಲಿ ಅನುವು ಮಾಡಿಕೊಂಡು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಪರಿಸರ ಸ್ವಚ್ಛತೆ, ಗಿಡ ನೆಡುವುದು ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಈ ತರಹದ ಮುಂತಾದ ವಿಶೇಷ ಯೋಜನೆಗಳನ್ನು ಸ್ನೇಹ ತಂಡವು ಹಮ್ಮಿಕೊಳ್ಳುತ್ತಾ ಬಂದಿದೆ.