ಗುಂಡಣ್ಣ ಬಹುದೊಡ್ಡ ಕಂಪನಿಯ ಪುಟ್ಟ ಕೆಲಸ. ಅವನ ಕಾರ್ಯವೆಂದರೆ ದಿನನಿತ್ಯ ಆಡಳಿತ ವಿಭಾಗದ ಕಚೇರಿಯ ಕಿಟಕಿಯ ಗಾಜುಗಳನ್ನು ಒರೆಸಿ ಶುದ್ಧವಾಗಿಡುವುದು, ಮೇಜುಗಳನ್ನು ಸ್ವಚ್ಛವಾಗಿಡುವುದು ಮತ್ತು ಕೆಲಸಗಾರರಿಗೆ ಆಗಾಗ ಚಹಾ, ಕಾಫಿ ತಂದುಕೊಡುವುದು. ಒಂದು ದಿನ ಎತ್ತರದ ಕಿಟಕಿಯ ಗಾಜನ್ನು ಒರೆಸಲು ಏಣಿ ಹತ್ತಿ ನಿಂತಿದ್ದ. ಬಾಗಿ ಮೇಲಿನ ಗಾಜನ್ನು ಒರೆಸುವಾಗ ಏಣಿ ಜಾರಿತು. ಗುಂಡಣ್ಣ ಮುಂದೆ ಗಾಜಿನ ಮೇಲೆ ಬಿದ್ದ. ಬೀಳುವಾಗ ಗಾಜು ಒಡೆದು ತಲೆಯೊಳಗೆ ತೂರಿತು. ಸುಮಾರು ಇಪ್ಪತ್ತು ಅಡಿ ಎತ್ತರದಿಂದ ನೆಲಕ್ಕೆ ದೊಪ್ಪನೇ ಬಿದ್ದ. ಅಲ್ಲಿದ್ದವರು ಅವನನ್ನು ಆಸ್ಪತ್ರೆಗೆ ಸೇರಿಸಿದರು.
ಬಲಗಾಲು ಮುರಿದಿತ್ತು ಆದರೆ ಜೀವ ಉಳಿಯಿತು. ಅವನಿಗೆ ಎಚ್ಚರವಾದಾಗ ತಲೆ ತುಂಬ ಬ್ಯಾಂಡೇಜು. ಆತ ನನ್ನ ತಲೆಗೇನಾಗಿದೆ ಎಂದು ಕೇಳಿದ. ಅವನ ಹೆಂಡತಿ ಹೋ ಎಂದು ಅಳುತ್ತ, "ಪುಣ್ಯಕ್ಕೆ ಜೀವ ಉಳಿಯಿತು. ಕಿವಿ ಹೋದರೆ ಹೋಗಲಿ ಬಿಡಿ" ಎಂದು ಮೂಗು ಒರೆಸಿಕೊಂಡಳು. "ಕಿವಿ ಹೋಯಿತು ಎಂದರೆ ಏನರ್ಥ?" ಕೇಳಿದ ಗಾಬರಿಯಾದ ಗುಂಡಣ್ಣ. ಮತ್ತೆರಡು ಬಕೆಟ್ ಕಣ್ಣೀರು ಸುರಿಸಿ ಆಕೆ "ನೀವು ಗಾಜಿನ ಮೂಲಕ ಬೀಳುವಾಗ ನಿಮ್ಮ ಎರಡೂ ಕಿವಿಗಳು ಪೂರ್ತಿ ಕತ್ತರಿಸಿ ಹೋಗಿವೆ" ಎಂದಳು. ಗುಂಡಣ್ಣನಿಗೆ ಕಿವಿಗಳಿಲ್ಲದ ತನ್ನ ಮುಖವನ್ನು ಕಲ್ಪ್ಪಿಸಿಕೊಳ್ಳಲೂ ಅಸಹ್ಯವೆನಿಸಿತು. ಆದರೆ ಏನು ಮಾಡುವುದು? ಗುಂಡಣ್ಣನ ದೈವ ಚೆನ್ನಾಗಿತ್ತು. ಎರಡೂ ಕಿವಿ ಹೋದರೂ ಲಕ್ಷ್ಮಿ ಒಲಿದು ಬಂದಳು.
ದೊಡ್ಡ ಕಂಪನಿಯವರು ಮತ್ತು ವಿಮಾ ಕಂಪನಿಯವರು ಸೇರಿ ಅವನಿಗೆ ಪರಿಹಾರ ಧನವೆಂದು ಎರಡು ಕೋಟಿ ರೂಪಾಯಿಗಳನ್ನು ಕೊಟ್ಟರು. ಗುಂಡಣ್ಣನಿಗೆ ನಂಬಲಿಕ್ಕೇ ಆಗಲಿಲ್ಲ. ಇನ್ನು ತನಗೆ ಯಾಕೆ ಕಿಟಕಿಗಳನ್ನು ಒರೆಸುವ ಕೆಲಸ, ತಾನೇ ಒಂದು ಕಂಪನಿ ಮಾಡುತ್ತೇನೆಂದು ತೀರ್ಮಾನಿಸಿದ. ಆದರೆ ತನಗೆ ಅದರ ಕೆಲಸ ತಿಳಿದಿಲ್ಲವಲ್ಲ. ಅದಕ್ಕೆ ಮುಖ್ಯಸ್ಥರನ್ನು ನೇಮಿಸಬೇಕೆಂದು ಜಾಹೀರಾತು ನೀಡಿದ. ಅವನೇ ನೇಮಿಸಿದ್ದ ಆಯ್ಕೆ ಸಮಿತಿಯವರು ಕೊನೆಗೆ ಮೂರು ಜನರನ್ನು ಆರಿಸಿ ಗುಂಡಣ್ಣನಿಗೇ ಒಬ್ಬರನ್ನು ಆಯ್ಕೆ ಮಾಡುವಂತೆ ತಿಳಿಸಿದರು. ಮೊದಲನೆಯ ಅಭ್ಯರ್ಥಿ ಒಳಗೆ ಬಂದ. ಅವನಿಗೆ ವಿಷಯ ತುಂಬ ಚೆನ್ನಾಗಿ ತಿಳಿದಿದೆ ಎನ್ನಿಸಿತು ಗುಂಡಣ್ಣನಿಗೆ. ಕೊನೆಗೆ ಒಂದು ಪ್ರಶ್ನೆ "ನನ್ನನ್ನು ನೋಡಿದರೆ ಏನಾದರೂ ವಿಶೇಷ ಕಾಣುತ್ತದೆಯೇ?" ಎಂದು ಕೇಳಿದ. ಆತ ಥಟ್ಟನೇ "ಹೌದು, ವಿಚಿತ್ರವೆಂದರೆ ನಿಮಗೆ ಕಿವಿಗಳೇ ಇಲ್ಲ" ಎಂದ. ಗುಂಡಣ್ಣನಿಗೆ ಕೋಪ ನುಗ್ಗಿ ಬಂದು ಅವನನ್ನು ಹೊರಗೆ ಹಾಕಿದ.
ನಂತರ ಎರಡನೆಯವನು ಬಂದ. ಅವನು ಸ್ವಲ್ಪ ವಯಸ್ಸಿನಲ್ಲಿ ಹಿರಿಯ, ಅನುಭವಿಕ. ಅವನು ಮೊದಲನೆಯವನಿಗಿಂತ ಹೆಚ್ಚು ತಿಳುವಳಿಕೆ ಉಳ್ಳವನು. ಎಲ್ಲ ಪ್ರಶ್ನೆಗಳಿಗೂ ಸರಿಯಾಗಿ ಉತ್ತರಿಸಿದ. ಮತ್ತೆ ಗುಂಡಣ್ಣ ಕೊನೆಗೆ "ನನ್ನಲ್ಲಿ ಏನಾದರೂ ವಿಶೇಷ ಕಂಡಿರಾ?" ಎಂದು ಕೇಳಿದ. ಆತ ನಸು ನಕ್ಕು "ವಿಶೇಷವೇನೂ ಇಲ್ಲ, ಆದರೆ ನಿಮ್ಮ ಕಿವಿಗಳು ಕಾಣುತ್ತಿಲ್ಲ. ಅಪರೂಪಕ್ಕೆ ಕೆಲವೊಮ್ಮೆ ಹಾಗಾಗುತ್ತದೆ. ಆನುವಂಶಿಕವಾಗಿಯೋ, ಅಪಘಾತದಿಂದಲೋ ಹೀಗೆ ವಿಕೃತಿ ಕಾಣಿಸಿಕೊಳ್ಳುತ್ತದೆ" ಎಂದ. ಗುಂಡಣ್ಣನಿಗೆ ಮೊದಲಿನಷ್ಟು ಕೋಪ ಬರದಿದ್ದರೂ ಉತ್ತರ ಇಷ್ಟವಾಗಲಿಲ್ಲ, ಅವನನ್ನೂ ಕಳಿಸಿಬಿಟ್ಟ.
ಮೂರನೆಯವಳು ತರುಣಿ. ಆಕೆ ತುಂಬ ಬುದ್ಧಿವಂತೆ. ಮೊದಲಿನ ಇಬ್ಬರಿಗಿಂತ ಪಟಪಟನೇ ಉತ್ತರಗಳನ್ನು ನೀಡಿದಳು. ಆಕೆ ಕಂಪನಿಯನ್ನು ಚೆನ್ನಾಗಿ ನಡೆಸಬಹುದು ಎಂಬ ನಂಬಿಕೆ ಬಂತು ಗುಂಡಣ್ಣನಿಗೆ. ಆದರೂ ತನ್ನ ಮೆಚ್ಚಿನ ಪ್ರಶ್ನೆಯನ್ನು "ನನ್ನ ಮುಖದಲ್ಲೇನಾದರೂ ವಿಶೇಷ ಕಾಣುತ್ತದೆಯೇ?" ಕೇಳಿಯೇ ಬಿಟ್ಟ. ಆಕೆ ಒಂದು ಕ್ಷಣ ಅವನ ಮುಖವನ್ನೇ ನೋಡಿ, "ಸರ್, ನೀವು ಅತ್ಯಂತ ಗುಣಮಟ್ಟದ ಕಾಂಟಾಕ್ಟ ಲೆನ್ಸ್ ಬಳಸುತ್ತೀರಿ" ಎಂದಳು.
ಗುಂಡಣ್ಣನಿಗೆ ಆಶ್ಚರ್ಯ. "ಶಹಬಾಷ್, ನಿಮ್ಮ ದೃಷ್ಟಿ ತುಂಬ ನಾಜೂಕಾಗಿದೆ. ನಿಮಗೆ ಹೇಗೆ ಅದು ಗೊತ್ತಾಯಿತು?" ಎಂದು ಕೇಳಿದ. ಆಕೆ, "ನಿಮ್ಮ ವಯಸ್ಸಿಗೆ ಕನ್ನಡಕ ಬರದೇ ಇರುತ್ತದೆಯೇ? ಕಾಂಟಾಕ್ಟ ಲೆನ್ಸ್ ತುಂಬ ಒಳ್ಳೆಯದಾದ್ದರಿಂದ ಹಾಕಿಕೊಂಡದ್ದು ಗೊತ್ತೇ ಆಗುವುದಿಲ್ಲ. ಕನ್ನಡಕ ಹಾಕಿಕೊಳ್ಳಬೇಕಾದರೆ, ಕಿವಿಗಳು ಬೇಕಲ್ಲವೇ?" ಎಂದಳು. ಗುಂಡಣ್ಣನಿಗೆ ತುಂಬ ಹಿತವಾಯಿತು. ಆಕೆಯನ್ನೇ ಆಯ್ಕೆ ಮಾಡಿಕೊಂಡ. ಆಕೆ ಸತ್ಯ ಹೇಳಿದ್ದರೂ ಮನಸ್ಸಿಗೆ ನೋವಾಗದಂತೆ ಹೇಳಿದ್ದಳು.
ನೀತಿ :-- ಕೆಲವರು ಒರಟು ಮಾತನಾಡುವುದನ್ನೇ ನೇರವಾಗಿ ಮಾತನಾಡುವುದು ಎಂದುಕೊಳ್ಳುತ್ತಾರೆ. ನೇರವಾದ ಮಾತನ್ನು ಮೃದುವಾಗಿಯೂ ಹೇಳಬಹುದು. ಅದಕ್ಕೇ "ಸತ್ಯವನ್ನೇ ಹೇಳು, ಆದರೆ ಪ್ರಿಯವಾಗುವಂತೆ ಹೇಳು" ಎಂದು ಸುಭಾಷಿತ ಹೇಳಿತ್ತದೆ. "ಸತ್ಯವನ್ನು ಅಪ್ರಿಯವೆನಿಸುವ ಹಾಗೆ ನುಡಿಯಬೇಡ". ಹಾಗೆ ಮನಸ್ಸಿಗೆ ನೋವಾಗದಂತೆ ಆದರೆ ಸತ್ಯವನ್ನು ಮರೆಮಾಚದಂತೆ ಹೇಳುವುದೂ ಒಂದು ವಿಶೇಷ ಕಲೆ. ಅದನ್ನು ನಾವು ಸಾಧಿಸಿಕೊಳ್ಳಬೇಕು.
ಒಬ್ಬ ಗುರು ತನ್ನ ಬಳಿಗೆ ವಿದ್ಯಾಭ್ಯಾಸ ಮಾಡಲು ಬರುವ ಶಿಷ್ಯರನ್ನು ಒಂದು ವರ್ಷಕ್ಕಿಂತ ಹೆಚ್ಚು ಕಾಲ ತನ್ನ ಆಶ್ರಮದಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ. ತನ್ನ ಬಳಿ ಇದ್ದ ಹತ್ತು ಜನ ಶಿಷ್ಯರಲ್ಲಿ ಕುಶ ಎನ್ನುವವನಿಗೆ ಹೆಚ್ಚು ಕಾಲ ಪಾಠಗಳನ್ನು ಬೋಧಿಸುತ್ತಿದ್ದರು. ಇದರಿಂದ ಆ ವರ್ಷ ವಿದ್ಯಾಭ್ಯಾಸ ಮಾಡಲು ಬಂದ ಉಳಿದ ಶಿಷ್ಯರಿಗೆ ಕುಶನ ಬಗ್ಗೆ ಹೊಟ್ಟೆಕಿಚ್ಚುಂಟಾಯಿತು.
ವರ್ಷವು ಮುಗಿಯುತ್ತಿದ್ದಂತೆ ಕಡೆಯ ದಿವಸ ಹತ್ತೂ ಜನರನ್ನು ಕರೆದು ಅವರ ಮುಂದೆ ಹತ್ತು ಬೀಜಗಳನ್ನು ಇರಿಸಿ ತಲಾ ಒಂದೊಂದು ಬೀಜಗಳನ್ನು ತೆಗೆದುಕೊಳ್ಳುವಂತೆ ಆ ಗುರು ತನ್ನ ಶಿಷ್ಯರಿಗೆ ಹೇಳಿದರು. ಆಮೇಲೆ ನೀವೆಲ್ಲರೂ ನಿಮ್ಮ ನಿಮ್ಮ ಮನೆಗಳಿಗೆ ಹಿಂದಿರುಗಿ ಈ ಬೀಜಗಳನ್ನು ನಾಟಿ ಮಾಡಿ. ಒಂದು ಬೀಜದಿಂದ ಮಾತ್ರವೇ ನೀಲಿ ಬಣ್ಣದ ಹೂವು ಬಿಡುತ್ತದೆ, ಯಾರ ಮನೆಯಲ್ಲಿ ಆ ನೀಲಿ ಬಣ್ಣದ ಹೂವು ಬಿಡುತ್ತದೆಯೋ ಅವರು ಆ ಹೂವನ್ನು ತಂದು ನನಗೆ ಗುರುದಕ್ಷಿಣೆಯಾಗಿ ಕೊಡಬೇಕು. ಅಂತಹವರಿಗೆ ನಾನು ಹೇಳಿಕೊಟ್ಟ ವಿದ್ಯೆ ಚಿರಕಾಲ ನೆನಪಿರುತ್ತದೆ ಎಂದು ಹೇಳಿದರು. ಉಳಿದವರು ನಿರಂತರವಾಗಿ ಅಧ್ಯಯನ ಮಾಡುತ್ತಿದ್ದರಷ್ಟೇ ನಾನು ಹೇಳಿದ ವಿಷಯಗಳು ಜ್ಞಾಪಕದಲ್ಲಿರುತ್ತವೆ ಎಂದು ಹೇಳಿದರು.
ಹೀಗೆ ಹೂವೊಂದನ್ನು ಗುರುದಕ್ಷಿಣೆಯಾಗಿ ತೆಗೆದುಕೊಳ್ಳುವುದು ವಿಚಿತ್ರವಾಗಿದೆ, ಅದೇಕೆ ಹಾಗೆ ಗುರುಗಳೇ ಎಂದು ಶಿಷ್ಯನೊಬ್ಬ ಪ್ರಶ್ನಿಸಿದ. ಅದಕ್ಕೆ ಗುರುಗಳು, "ಆ ಹೂವನ್ನು ಜಗಿದು ತಿಂದರೆ ಮಳೆಗಳು ಯಾವಾಗ ಬೀಳುತ್ತವೆ ಎಂದು ಒಂದು ತಿಂಗಳ ಮುಂಚೆಯೇ ಗೊತ್ತಾಗುವ ಜ್ಞಾನವು ಉಂಟಾಗುತ್ತದೆ" ಎಂದು ಹೇಳಿದರು. ಎಲ್ಲಾ ಶಿಷ್ಯರೂ ಗುರುಗಳಿಂದ ಬೀಳ್ಕೊಂಡು ತಮ್ಮ ತಮ್ಮ ಮನೆಗಳಿಗೆ ಹೊರಟು ಹೋದರು.
ಗಣನಾಥನೆನ್ನುವ ಶಿಷ್ಯನ ಹಿತ್ತಲಿನಲ್ಲಿ ನಾಟಿ ಮಾಡಿದ ಬೀಜವು ಮೊಳಕೆಯೊಡೆದು ಅದರಿಂದ ಹೊರಟ ಬಳ್ಳಿಯಿಂದ ನೀಲಿ ಬಣ್ಣದ ಹೂವು ಬಿಟ್ಟಿತು. ಅವನು ಸಂತೋಷದಿಂದ ಅದನ್ನು ಕೊಯ್ದನು. ಅದನ್ನು ಗುರುದಕ್ಷಿಣೆಯಾಗಿ ಗುರುಗಳಿಗೆ ಸಮರ್ಪಿಸಬೇಕು. ಆದರೆ ತನ್ನ ಗುರುಗಳು ಕುಶನ ವಿಷಯದಲ್ಲಿ ಬೇಧಭಾವ ತೋರಿಸಿ ಅವನಿಗೆ ಹೆಚ್ಚಿನ ವಿದ್ಯೆಯನ್ನು ಕಲಿಸಿಕೊಟ್ಟರು ಎಂದು ಗುರುಗಳ ಮೇಲಿನ ಕೋಪದಿಂದ ತಾನೇ ಅದನ್ನು ಜಗಿದು ತಿಂದನು. ತಕ್ಷಣವೇ ಗಣನಾಥನಿಗೆ ಮಳೆಗಳ ಕುರಿತಾದ ಜ್ಞಾನವು ಉಂಟಾಯಿತು. ಇದರಿಂದ ಅವನು ತನ್ನ ಗ್ರಾಮದಲ್ಲಷ್ಟೇ ಅಲ್ಲ ಪಕ್ಕದ ಗ್ರಾಮದಲ್ಲಿಯೂ ಸಹ ಮಳೆಗಳು ಯಾವಾಗ ಬೀಳುತ್ತವೆ ಎನ್ನುವುದನ್ನು ಹೇಳತೊಡಗಿದ.
ಹೀಗಿರುವಾಗ ಮುಂದಿನ ವರ್ಷ ಆ ಪ್ರಾಂತದಲ್ಲಿ ಬರಗಾಲ ಬಂದಿತು. ಎರಡು ವರ್ಷಗಳ ಕಾಲ ಮಳೆಗಳೇ ಬೀಳುವುದಿಲ್ಲ ಎಂದು ಗಣನಾಥನು ಹೇಳಿದ. ಅದೇ ಸಮಯದಲ್ಲಿ ಪಕ್ಕದೂರಿನವನೊಬ್ಬನು ಗಣನಾಥನಿದ್ದ ಊರಿಗೆ ಬಂದು, "ನಮ್ಮ ಊರಿಗೆ ಮಹಾತ್ಮನೊಬ್ಬ ಬಂದು ಎರಡು ದಿನಗಳಲ್ಲಿ ಮಳೆಯಾಗುತ್ತದೆ ಎಂದು ಹೇಳಿದ ನಂತರ ಅದೇ ವಿಧವಾಗಿ ಮಳೆಯಾಯಿತು. ಆದ್ದರಿಂದ ನೀವೂ ಸಹ ಅವನನ್ನು ನಿಮ್ಮೂರಿಗೆ ಆಹ್ವಾನಿಸಿ ಕರೆತಂದಲ್ಲಿ ನಿಮ್ಮ ಊರಿನಲ್ಲೂ ಮಳೆಯಾಗುತ್ತದೆ ಎಂದು ಹೇಳಿದ.
ಪಕ್ಕದೂರಿನವನ ಮಾತಿನಂತೆ ಆ ಊರಿನ ಗ್ರಾಮಾಧಿಕಾರಿ ಆ ಮಹಾತ್ಮನನ್ನು ತಮ್ಮ ಊರಿಗೆ ಬರಮಾಡಿಕೊಂಡ. ಅವನು ಬಂದು ನಾಡಿದ್ದು ಮಳೆಯಾಗುತ್ತದೆ ಎಂದು ಹೇಳಿದ ನಂತರ ಅದರ ಪ್ರಕಾರವೇ ಈ ಊರಿನಲ್ಲಿಯೂ ಮಳೆಯಾಯಿತು. ಹಾಗೆ ಬಂದ ಮಹಾತ್ಮ ಯಾರೆಂದು ನೋಡಿದರೆ ಅವನೇ ಕುಶ. ಅವನನ್ನು ಭೇಟಿಯಾದ ಗಣನಾಥನು ಗುರುಗಳು ಏನೋ ತಂತ್ರ ಹೂಡಿದ್ದಾರೆಂದು ಅವನಿಗೆ ಹೇಳಿದನು. ಅದಕ್ಕೆ ಕುಶನು, ಇದರಲ್ಲಿ ಗುರುಗಳ ತಪ್ಪೇನೂ ಇಲ್ಲ. ಅವರು ಪ್ರತಿಯೊಬ್ಬರಿಗೂ ನೀಲಿ ಬಣ್ಣದ ಹೂವು ಬಿಡುವ ಬೀಜಗಳನ್ನೇ ಕೊಟ್ಟಿದ್ದರು. ಆದರೆ ನನ್ನ ಹೊರತು ನೀವಾರೂ ಗುರುಗಳಿಗೆ ಹೂವು ತೆಗೆದುಕೊಂಡು ಗುರುದಕ್ಷಿಣೆಯನ್ನು ಕೊಡಲು ಹಿಂದಿರುಗಿ ಹೋಗಲಿಲ್ಲ. ನಾನು ಹೂವನ್ನು ಅವರಿಗೆ ಅರ್ಪಿಸಲು ಹೋದಾಗ ಅವರು ಅಕಾಲ ಮಳೆಯನ್ನು ಸುರಿಸುವ ಶಕ್ತಿಯನ್ನು ನನಗೆ ಹೆಚ್ಚುವರಿಯಾಗಿ ಪ್ರಸಾದಿಸಿದರು ಎಂದು ಹೇಳಿದ. ಅದನ್ನು ಕೇಳಿದ ಗಣನಾಥನಿಗೆ ಭಕ್ತಿ ಮತ್ತು ಅರ್ಹತೆಗಳನ್ನು ಅವಲಂಬಿಸಿ ಜ್ಞಾನವು ಲಭಿಸುತ್ತದೆ ಎನ್ನುವ ಸತ್ಯವು ತಿಳಿಯಿತು.
ಭಗವಾನ್ ಬುದ್ಧರು ಅನೇಕ ದಿನಗಳ ವಿಹಾರದ ಬಳಿಕ ಮಗಧ ದೇಶದ ರಾಜಧಾನಿಯತ್ತ ಹೊರಟರು. ಆಗ ಗ್ರಾಮೀಣ ಪ್ರದೇಶದ ಜನರು ಓಡೋಡಿ ಬಂದು ಬಗೆಬಗೆಯ ಕಾಣಿಕೆಗಳನ್ನು ತಂದರು. ಸಾಮ್ರಾಟ್ ಬಿಂಬಸಾರನಾದರೋ ಅತ್ಯಮೂಲ್ಯ ಉಡುಗೊರೆಗಳನ್ನು ತಂದೊಪ್ಪಿಸಿದ. ಆಗ ಭಗವಾನ್ ಬುದ್ಧರು ದಾನ ಸ್ವೀಕಾರ ಮಾಡಲೆಂದು ಬಲಗೈಯನ್ನೆತ್ತುತ್ತಿದ್ದರು.
ಅಷ್ಟರಲ್ಲಿ ಸಾವಿರಾರು ಮಂದಿಯ ಜನಸಂದಣಿಯ ನಡುವೆ ನುಗ್ಗಿ, ಒಬ್ಬ ಮುದುಕಿ ತನ್ನ ಕಾಣಿಕೆಯನ್ನು ಕೊಡಲೆಂದು ಬಂದವಳೇ ಕೈ ಮುಗಿದು "ಹೇ ಮಹಾಪ್ರಭು, ನಾನೋ ಬಡವಿ. ನಿಮಗೊಪ್ಪಿಸಲು ಅರ್ಹವಾದ ವಸ್ತು ನನ್ನ ಬಳಿ ಇಲ್ಲವೇ ಇಲ್ಲ. ನನಗೆ ಮರದಿಂದ ಬಿದ್ದ ಒಂದು ಮಾವಿನ ಹಣ್ಣು ಸಿಕ್ಕಿತು. ಅದನ್ನೇ ನಿಮಗೆ ಅರ್ಪಿಸುತ್ತಿದ್ದೇನೆ ಎಂದು ಅರ್ಧ ತಿಂದ ಮಾವಿನ ಹಣ್ಣನ್ನು ಮುಂದಕ್ಕೆ ಚಾಚಿದಳು" ಬುದ್ಧ ಅರ್ಧ ಮಾವಿನ ಹಣ್ಣನ್ನು ಕಂಡು ಬುದ್ಧರು "ಅಮ್ಮ, ಇದರ ಉಳಿದರ್ಧ ಎಲ್ಲಿ ಹೋಯ್ತು?" ಎಂದು ಪ್ರಶ್ನಿಸಿದರು. ಆಗ ಮುದುಕಿ "ನಾನು ಮಾವಿನ ಹಣ್ಣು ತಿನ್ನುತ್ತಿರುವಾಗಲೇ ನೀವು ತೆರಳುವ ಸಮಾಚಾರ ಸಿಕ್ಕಿತು. ನನ್ನ ಬಳಿ ಬೇರೇನೂ ಇಲ್ಲದ್ದರಿಂದ ಇದನ್ನೇ ಅರ್ಪಿಸಲೆಂದು ಬಂದೆ" ಎಂದಳು. ಈ ಮಾತನ್ನು ಕೇಳಿದ ಬುದ್ಧರು ತಮ್ಮ ಆಸನದಿಂದ ಇಳಿದು ಬಂದು, ಹಣ್ಣು ಸ್ವೀಕಾರ ಮಾಡಿದರು.
ಆಗ ಬಿಂಬಸಾರ "ಹೇ ಭಗವಾನ್, ನೀವು ಬಹುಮೂಲ್ಯ ಕಾಣಿಕೆಗಳನ್ನು ಕೇವಲ ಕೈಯಾಡಿಸಿ ಸ್ವೀಕಾರ ಮಾಡಿದಿರಿ. ಆದರೆ ಮುದುಕಿಯ ಅರ್ಧ ಎಂಜಲು ಹಣ್ಣನ್ನು ಸ್ವೀಕರಿಸಲು ಕೆಳಗಿಳಿದು ಬಂದಿರಿ. ಇದೇಕೆ ಹೀಗೆ?" ಮುಗುಳ್ನಗುತ್ತಾ ಬುದ್ಧ "ನೀವುಗಳೆಲ್ಲ ಕೊಟ್ಟದ್ದು ನಿಮ್ಮ ಸಂಪತ್ತಿನ ಒಂದು ಸಣ್ಣ ಅಂಶ ಮಾತ್ರ! ಅದಲ್ಲದೆ ಅಹಂಕಾರದಿಂದ ದಾನ ನೀಡುತ್ತೀರಿ. ಆದರೆ ಈ ಅಜ್ಜಿ ತನ್ನ ಬಳಿ ಇದ್ದುದೆಲ್ಲವನ್ನೂ ಪ್ರೀತಿ ಪೂರ್ವಕವಾಗಿ ಒಪ್ಪಿಸಿದ್ದಾರೆ. ಇಂತಹ ನಿರ್ಮಲ ಅಂತಃಕರಣದ ಪ್ರೀತಿ ಮುಖ್ಯ. ಕಾಣಿಕೆಯ ವೌಲ್ಯವಲ್ಲ" ಎಂದರು. ಈ ಮಾತನ್ನು ಕೇಳಿ ಬಿಂಬಸಾರ ತಲೆದೂಗಿ ಬಾಗಿದ. ಇಲ್ಲೆಂತಹ ಉನ್ನತ ಆದರ್ಶ ಹುದುಗಿದೆ. ಇತರರಿಗೆ, ವಿಶೇಷವಾಗಿ ಗಣ್ಯರಿಗೆ ನಾವು ಒಪ್ಪಿಸುವ ವಸ್ತುವಿಗಿಂತಲೂ, ಅದರ ಹಿನ್ನೆಲೆಯಲ್ಲಿರುವ ಭಾವನೆಗಳು ಮುಖ್ಯ.
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ |
ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನ: ||ಭಗವದ್ಗೀತೆ 9.26||
ನೀತಿ :-- ಶುದ್ಧ ಅಂತಃಕರಣದಿಂದ, ಪ್ರೀತಿ- ಸ್ನೇಹ- ಭಕ್ತಿ ಭಾವದಿಂದ ಅರ್ಪಿಸಿದ ಸಣ್ಣ ವಸ್ತುವೂ ಮಹತ್ವದ್ದಾಗಬಲ್ಲುದು. ವಸ್ತುವಲ್ಲ ಮನಸ್ಸು ಮುಖ್ಯ.
ವಿಜಯಪುರದ ಅರಸ ಮತ್ತು ಮಂತ್ರಿ, ಆಗಾಗ್ಗೆ ವೇಷಮರೆಸಿಕೊಂಡು ರಾಜ್ಯದೆಲ್ಲಿಡೆ ಸಂಚರಿಸುತ್ತಾ ಪ್ರಜೆಗಳ ಕಷ್ಟಸುಖಗಳನ್ನು ನೇರವಾಗಿ ತಿಳಿಯಲು ಪ್ರಯತ್ನಿಸುತ್ತಿದ್ದ. ಒಂದು ದಿನ ಹೀಗೆ ಹೋಗುತ್ತಿದ್ದಾಗ ಅಲ್ಲೊಬ್ಬ ವ್ಯಕ್ತಿ ತಲೆ ಮೇಲೆ ಕೈ ಹೊತ್ತು ಚಿಂತಕ್ರಾಂತನಾಗಿ ಕುಳಿತಿದ್ದ. ಇದನ್ನು ನೋಡಿದ ರಾಜನು ಮಂತ್ರಿಗಳಿಗೆ ಹೇಳಿದ, ಈ ಮನುಷ್ಯ ಹೇಗೆ ಕೂತಿದ್ದಾನೆ, ಕೆಟ್ಟ ಮನುಷ್ಯನಂತೆ ನನಗೆ ಅನ್ನಿಸುತ್ತಿದೆ ಇವನ ಬಗ್ಗೆ ಸರಿಯಾಗಿ ವಿಚಾರಿಸಿ ತಿಳಿಸಿ. ಒಂದು ವೇಳೆ ಇವನು ಅಪರಾಧಿಯಾಗಿ ಕಂಡುಬಂದರೆ ತಕ್ಕ ಶಿಕ್ಷೆ ವಿಧಿಸೋಣ ಎಂದು ಆದೇಶಿಸಿದ.
ರಾಜ ಹೇಳಿದ ಮಾತನ್ನು ಮಂತ್ರಿ ಕೇಳಿ, ಸ್ವಲ್ಪ ಹೊತ್ತು ಸುಮ್ಮನಿದ್ದು ಪ್ರಭುಗಳೇ ಇವನ ಕುರಿತಾಗಿ ನಾನು ನಿಮಗೆ ಎಲ್ಲಾ ತಿಳಿಸುತ್ತೇನೆ. ಸ್ವಲ್ಪ ಕಾಲಾವಕಾಶ ಬೇಕು ಎಂದ. ನಂತರ ಅರಮನೆಗೆ ಬಂದರು. ಮರುದಿನ ಮಂತ್ರಿ ಒಬ್ಬ ಗೂಡಾಚಾರಿಯನ್ನು ಆ ಮನುಷ್ಯನ ಬಗ್ಗೆ ಸರಿಯಾಗಿ ತಿಳಿದುಕೊಂಡು ಬರಲು ಕಳಿಸಿದ. ಗೂಡಾಚಾರಿ ಒಂದೆರಡು ದಿನದೊಳಗೆ ನೋಡಿ ಬಂದು, ಆ ಮನುಷ್ಯನ ಕುರಿತು ಎಲ್ಲ ವಿಷಯ ತಿಳಿಸಿದ, ಆನಂತರ ರಾಜನ ಬಳಿ ಬಂದ ಮಂತ್ರಿಯು ಪ್ರಭು ನಮ್ಮ ಅರಮನೆಗೆ ಶ್ರೀಗಂಧದಿಂದ ಮಾಡಿದ ಕೆಲವು ಪೀಟೋಪಕರಣಗಳು ಹಾಗೂ ಕೆತ್ತನೆಯ ವಿಗ್ರಹಗಳ ಅಗತ್ಯವಿದೆ. ದೇವಸ್ಥಾನಕ್ಕೆ ರಥೋತ್ಸವಕ್ಕೆ ರಥದ ಅವಶ್ಯಕತೆಯೂ ಇದೆ. ನೀವು ಅನುಮತಿ ಕೊಟ್ಟರೆ ಅವುಗಳನ್ನು ಶ್ರೀಗಂಧ ಕೆತ್ತನೆ ಮಾಡುವ ಕುಶಲಕರ್ಮಿಗಳನ್ನು ಕರೆಸಿ ಮಾಡಿಸುತ್ತೇನೆ ಎಂದ. ಮಂತ್ರಿಗಳೇ ನೀವು ಮಾಡು ವ ಕೆಲಸವೆಲ್ಲ ಒಳ್ಳೆಯದೇ ಆಗಿರುತ್ತದೆ. ದೇವಸ್ಥಾನಕ್ಕೆ ರಥ ಪೂಜಾ ಮಂದಿರಕ್ಕೆ ಬೇಕಾದ ಎಲ್ಲಾ ತರಹದ ಉತ್ತಮ ಕೆತ್ತನೆ ಕೆಲಸಗಳನ್ನು ಮಾಡಿಸಿ ಎಂದ.
ಕೂಡಲೇ ಮಂತ್ರಿಯೂ ಕೆತ್ತನೆ ಮಾಡಲು ಗಂಧದ ಮರಗಳ ತುಂಡುಗಳನ್ನು ತರಿಸಿದ. ದೇವಸ್ಥಾನಕ್ಕೆ ಒಂದು ರಥ, ಅರಮನೆಯ ಪೂಜಾ ಮಂದಿರದ ಪೀಠೋಪಕರಣಗಳು, ಅಲಂಕಾರದ ಕೆತ್ತನೆಗಳು ಮತ್ತು ಅರಮನೆಗೆ ಕೃಷ್ಣನು ಸಾರಥಿಯಾಗಿ ಅರ್ಜುನನಿಗೆ ಗೀತೋಪದೇಶ ಮಾಡುವ ಕೆತ್ತನೆ, ಜೊತೆಗೆ ಒಂದಷ್ಟು ಆನೆ ಬುದ್ಧ ರಥ ಹೀಗೆ ಹಲವಾರು ಪೀಠೋಪಕರಣಗಳು ಮತ್ತು ವಿಗ್ರಹ ಕೆತ್ತನೆಗಳ ಕೆಲಸಗಳನ್ನು ಮಾಡಿಸಿದ. ಕೆಲಸಗಳೆಲ್ಲ ಮುಗಿಯಿತು. ರಾಜನನ್ನು ಕರೆಸಿ ತೋರಿಸಿದ ರಾಜನಿಗೂ ಸಂತೋಷವಾಯಿತು, ಕುಶಲಕರ್ಮಿಗಳ ಕೈಚಳಕಕ್ಕೆ ರಾಜನೇ ಬೆರಗಾದ. ಹೀಗಾಗಿ ಮರದ ಕೆತ್ತನೆಗಳ ಕುಶಲಕರ್ಮಿಗಳ ಒಂದು ಮಳಿಗೆಯನ್ನು ಸ್ಥಾಪಿಸಲು ಹೇಳಿದ.
ಇದೆಲ್ಲಾ ಮುಗಿದ ಮೇಲೆ ರಾಜ ಮತ್ತು ಮಂತ್ರಿ ವೇಷ ಮರೆಸಿಕೊಂಡು ಎಂದಿನಂತೆ ಸಂಚಾರಕ್ಕೆ ಹೊರಟ. ಅದೇ ಜಾಗದಲ್ಲಿ ಆ ವ್ಯಕ್ತಿ ಕುಳಿತಿರುವುದನ್ನು ರಾಜ ನೋಡಿದ. ಮಂತ್ರಿಗಳೇ ಆ ದಿನ ಕುಳಿತಿದ್ದ ವ್ಯಕ್ತಿ ಇಂದು ಅಲ್ಲೇ ಕುಳಿತಿದ್ದಾನೆ. ಆದರೆ ಆ ದಿನ ಅವನ ಬಗ್ಗೆ ಕೆಟ್ಟ ಅಭಿಪ್ರಾಯವಿತ್ತು. ಇಂದು ಅವನ ಬಗ್ಗೆ ಸಹಾನು ಭೂತಿ ಇದೆ ಹೀಗೇಕೆ ಎಂದು ಕೇಳಿದ. ಆಗ ಮಂತ್ರಿ ಹೇಳಿದ ಪ್ರಭು, ಅಂದು ಅಪರಾಧಿಯಾಗಿ ಕಂಡಿದ್ದ ಆ ವ್ಯಕ್ತಿ ಈ ದಿನ ನಿಮಗೆ ಒಳ್ಳೆಯ ರೀತಿಯಲ್ಲಿ ಕಾಣಿಸುತ್ತಾನೆ. ಇದಕ್ಕೆ ಕಾರಣವೂ ಇದೆ ಅರಮನೆಗೆ ಹೋದ ಮೇಲೆ ತಿಳಿಸುತ್ತೇನೆ ಎಂದ.
ರಾಜನಿಗಂತೂ ತಿಳಿಯುವ ಕುತೂಹಲವಿತ್ತು. ಮಂತ್ರಿ ಬಂದು ಪ್ರಭುಗಳೇ ಅವನು ಶ್ರೀಗಂಧದ ವ್ಯಾಪಾರಿ ಆ ದಿನ ನೀವು ನೋಡಿದಾಗ ಅವನ ವ್ಯಾಪಾರ ನಷ್ಟದಲ್ಲಿತ್ತು ಶ್ರೀಗಂಧವನ್ನು ಅವನ ಹತ್ತಿರ ಯಾರು ತೆಗೆದುಕೊಳ್ಳುತ್ತಿರಲಿಲ್ಲ ಈ ಚಿಂತೆ ಅವನನ್ನು ಕಾಡಿತ್ತು ವ್ಯಾಪಾರ ಸಾಗದಿದ್ದರೆ ತನ್ನ ಮುಂದಿನ ಗತಿ ಏನು ಎಂದು ಯೋಚಿಸುತ್ತಿದ್ದ ಆ ಸಮಯದಲ್ಲಿ ಅವನ ಮನಸ್ಸಿನಲ್ಲಿ ಒಂದು ಯೋಚನೆ ಬಂದಿತ್ತು. ಒಂದು ವೇಳೆ ರಾಜ ಏನಾದರೂ ಮರಣ ಹೊಂದಿದ್ದರೆ ಶವ ಸಂಸ್ಕಾರಕ್ಕೆ ತನ್ನಿಂದ ಶ್ರೀಗಂಧದ ಮರಗಳನ್ನು ಅರಮನೆಯ ಪರಿಚಯಕರು ತೆಗೆದು ಕೊಂಡು ಹೋಗುತ್ತಾರೆ ಆಗ ಒಂದಷ್ಟು ಹಣ ಬರುತ್ತದೆ ಎಂದು ನಿಮ್ಮ ಬಗ್ಗೆ ಅವನಲ್ಲಿ ಕೆಟ್ಟ ಯೋಚನೆ ಬಂದಿತ್ತು.
ಅವನ ಯೋಚನೆಗಳು ನಿಮ್ಮ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಲು ಕಾರಣವಾಯಿತು.
ರಾಜ ಕೇಳಿದ ನೀವು ಹೇಳಿದ್ದು ನಿಜ. ಈ ದಿನ ಏಕೆ ಒಳ್ಳೆ ಭಾವನೆ ಬಂದಿತು ಎಂದು ಕೇಳಿದಾಗ ಮಂತ್ರಿಯು, ನಾವು ಒಳ್ಳೆಯ ಉದ್ದೇಶದಿಂದ ಅರಮನೆಯ ಪೀಠೋಪಕರಣಗಳು, ಕುಶಲ ಕೆಲಸಗಳನ್ನು ಮಾಡಿಸಿದೆವು. ಅದಕ್ಕೆ ಬೇಕಾದ ಗಂಧದ ಸಾಮಾಗ್ರಿಗಳನ್ನು ಅವನಿಂದಲೇ ಕೊಂಡೆವು. ಇದರಿಂದ ಅವನ ಆರ್ಥಿಕ ಪರಿಸ್ಥಿತಿ ಸುಧಾರಿಸಿತು ಈ ಕೆಟ್ಟ ಯೋಚನೆಗಳು ಕಡಿಮೆಯಾಯಿತು. ಮುಖದಲ್ಲಿ ಗೆಲುವು ಬಂದಿತು ಎಂದ. ರಾಜ ಕೇಳಿದ ನನಗೂ ಒಳ್ಳೆಯ ಭಾವನೆ ಬಂದಿತ್ತಲ್ಲ ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ.
ಮುಖ್ಯಮಂತ್ರಿ ಹೇಳಿದ ಪ್ರಭು ಅರಮನೆಯಿಂದ ಶ್ರೀಗಂಧ ತೆಗೆದುಕೊಂಡಿದ್ದರಿಂದ ಅವನಿಗೆ ಇಮ್ಮಡಿ ಸಂತೋಷವಾಯಿತು. ಅವನ ಮನಸ್ಸಿನಲ್ಲಿ ನಮ್ಮ ರಾಜರು ಚೆನ್ನಾಗಿರಬೇಕು. ನೂರು ಕಾಲ ಬದುಕಬೇಕು ಎಂದು ಮನದಲ್ಲಿ ಹಾರೈಸಿದ. ಅದರಿಂದ ನಿಮಗೂ ಅವನ ಬಗ್ಗೆ ದ್ವೇಷ ಭಾವನೆ ಇಲ್ಲವಾಯಿತು ಎಂದನು. ರಾಜನು ಮತ್ತೆ ಕೇಳಿದ ಯಾರು, ಯಾರ ಮೇಲೆ ಕೆಡುಕನ್ನು ಬಯಸುತ್ತಾರೋ, ಅದು ಅವರಿಗೆ ಗೊತ್ತಿಲ್ಲದಂತೆ ಅವರ ಬಗ್ಗೆ ಕೆಟ್ಟ ಚಿಂತನೆಗಳೇ ಬರುತ್ತವೆ ಎಂಬುದು ನಿಮ್ಮ ಮಾತಿನ ಅರ್ಥವೇ ಎಂದು ರಾಜನು ಕೇಳಿದ.
ಹೌದು ಪ್ರಭು ಬೇರೆಯವರಿಗೆ ನಾವು ಒಳಿತನ್ನು ಬಯಸಿದರೆ ನಮಗೆ ಅವರು ಒಳ್ಳೆಯದನ್ನೇ ಬಯಸುತ್ತಾರೆ. ಹೀಗೆ ನಮ್ಮ ಮನಸ್ಸು ನಮಗೆ ಗೊತ್ತಿಲ್ಲದಂತೆ ಕೆಲಸ ಮಾಡುತ್ತದೆ. ಅದರ ಪರಿಣಾಮ ನಮ್ಮ ಮುಖದ ಮೇಲೆ ಎದ್ದು ಕಾಣುತ್ತದೆ ನಡೆನುಡಿಯಲ್ಲೂ ಹೊರ ಹಾಕುತ್ತದೆ ರಾಜನಿಗೆ ಮಂತ್ರಿಗಳ ಮಾತಿನ ಅರ್ಥ ತಿಳಿಯಿತು ಈಗ ರಾಜನು ಪ್ರಜೆಗಳನ್ನು ಚೆನ್ನಾಗಿ ನೋಡಿಕೊಳ್ಳಲು ಮತ್ತಷ್ಟು ಸಲಹೆ ಸೂಚನೆಗಳನ್ನು ಪಡೆದು ರಾಜ್ಯದಲ್ಲಿದೆಲ್ಲೆಡೆ ಸಂಚರಿಸಿ ಅಲ್ಲಿನ ಸ್ಥಿತಿಗತಿಗಳನ್ನು ಸಂಗ್ರಹಿಸಿ ಅವರಿಗೆ ಅಗತ್ಯವಿರುವ ಅನುಕೂಲಗಳನ್ನು ಮಾಡಿಕೊಡುತ್ತಾ ಬಂದನು ಕೆಲವೇ ವರ್ಷಗಳಲ್ಲಿ, "ಯಥಾ ರಾಜ ತಥಾ ಪ್ರಜೆ" ಎಂಬಂತೆ ರಾಜ್ಯದ ಪ್ರಜೆಗಳೆಲ್ಲ ಸಂತೋಷದಿಂದ ಜೀವನ ನಡೆಸುತ್ತಿದ್ದ.
ನೀತಿ :-- ಪ್ರಯತ್ನಿಸುವ ಗುಣ ಸಾಹಸ ಧೈರ್ಯ ಬುದ್ಧಿ ಶಕ್ತಿ ಮತ್ತು ಬಲ ಈ ಆರು ಗುಣಗಳಿದ್ದವನಿಗೆ ಖಂಡಿತ ಸಹಾಯ ಮಾಡುತ್ತದೆ.
ಪೂರ್ವಕಾಲದಲ್ಲಿ ಇಂದ್ರದ್ಯುಮ್ನ ಎಂಬ ಮಹಾರಾಜನು ಧರ್ಮ ಮತ್ತು ನ್ಯಾಯದಿಂದ ರಾಜ್ಯವಾಳುತ್ತಿದ್ದನು. ಅವನಿಗೆ ಪ್ರಜೆಗಳೆಂದರೆ ತುಂಬಾ ಪ್ರೀತಿ ವಿಶ್ವಾಸವಿತ್ತು. ಎಲ್ಲರಂತೆ ಕಾಲ ಮುಗಿದಮೇಲೆ ಅವನು ಕೂಡ ಸತ್ತು ಸ್ವರ್ಗವನ್ನು ಸೇರಿದನು. ಸ್ವರ್ಗದಲ್ಲಿ ಸಂತೋಷದಿಂದ ಕಾಲ ಕಳೆಯುತ್ತಿದ್ದಾಗ ಒಂದು ದಿನ ದೇವತೆಗಳು ಅವನನ್ನು ಕುರಿತು
"ರಾಜ, ನೀನು ಮಾಡಿದ ಪುಣ್ಯದ ಫಲ ಮುಗಿದುಹೋಗಿದೆ. ಆದ್ದರಿಂದ ಇನ್ನು ನೀನು ಭೂಲೋಕಕ್ಕೆ ಹೋಗಿ, ನಿನ್ನ ಜೀವನ ನಡೆಸಬೇಕು. ಉತ್ತಮ ಕಾರ್ಯಗಳನ್ನು ಮಾಡಿ ಪುನ: ಪುಣ್ಯ ಗಳಿಸಿ ಸ್ವರ್ಗಕ್ಕೆ ವಾಪಸು ಬಾ"ಎಂದು ಕಳಿಸಿಕೊಟ್ಟರು.
ಅಂತೆಯೇ ರಾಜನು ಭೂಲೋಕಕ್ಕೆ ಇಳಿದು ಬಂದನು. ತಾನು ಆಡಳಿತ ನಡೆಸಿದ ರಾಜ್ಯಗಳ ಎಲ್ಲ ಭಾಗಗಳಲ್ಲೂ ತಿರುಗಾಡತೊಡಗಿದನು. ಎಲ್ಲಾ ಕಡೆ ಹುಡಕಿದರೂ ತನ್ನ ಕಾಲದವರಾರೂ ಅವನ ದೃಷ್ಟಿಗೆ ಬೀಳಲಿಲ್ಲ. ಹೀಗೆ ಒಂದು ಕಾಡಿನ ಮಾರ್ಗವಾಗಿ ಬರುವಾಗ ಅಲ್ಲಿ ಮರದ ಮೇಲೆ ಕುಳಿತುಕೊಂಡಿದ್ದ ಒಂದು ಮುದಿಯಾದ ಗೂಬೆಯನ್ನು ನೋಡಿದನು. ಅದು ತುಂಬಾ ವಯಸ್ಸಾದ ಗೂಬೆಯಾಗಿರುವುದರಿಂದ, ಅದಕ್ಕೆ ನನ್ನ ಪರಿಚಯ ಇರಬಹುದೇ ಎಂದು ಯೋಚಿಸಿದ ರಾಜನು,
"ಅಯ್ಯಾ ಗೂಬೆಯೇ, ನೀನು ಬಹಳ ವರ್ಷಗಳಿಂದ ಇಲ್ಲಿ ವಾಸವಾಗಿದ್ದೀಯ ಎಂದು ತೋರುತ್ತದೆ. ನಿನಗೆ ಇಂದ್ರದ್ಯುಮ್ನ ಎಂಬ ಮಹಾರಾಜನು ಇಲ್ಲಿ ಆಳುತ್ತಿದ್ದನು ಎಂಬ ವಿಷಯ ಗೊತ್ತಿದೆಯೇ?" ಎಂದು ಕೇಳಿದನು. ಅದಕ್ಕೆ ಗೂಬೆಯು,
"ನೀನು ಹೇಳುತ್ತಿರುವುದು ಸರಿ. ನಾನು ಈ ಕಾಡಿನಲ್ಲಿ ಬಹಳ ವರ್ಷಗಳಿಂದ ವಾಸವಾಗಿದ್ದೇನೆ. ಆದರೆ ನೀನು ಹೇಳಿದ ರಾಜನ ಹೆಸರನ್ನು ನಾನು ಎಂದೂ ಕೇಳಿಲ್ಲ. ಬಹುಶಃ ನಾನು ಹುಟ್ಟುವುದಕ್ಕೂ ಮೊದಲು ಇಲ್ಲಿ ರಾಜ್ಯವಾಳಿರಬಹುದು. ಪಕ್ಕದ ಕಾಡಿನಲ್ಲಿ ನನಗಿಂತ ಭಾರಿ ಹಿರಿಯನಾದ ಬಕಪಕ್ಷಿ ವಾಸವಾಗಿದ್ದಾನೆ.ಅವನು ಆ ರಾಜನ ಹೆಸರನ್ನು ಕೇಳಿದರು ಕೇಳಿರಬಹುದು ಹೋಗಿ ಅವನನ್ನು ವಿಚಾರಿಸು" ಎಂದಿತು.
ಅಂತೆಯೇ ರಾಜನು ಪಕ್ಕದ ಕಾಡಿನತ್ತ ಬಕಪಕ್ಷಿಯನ್ನು ಹುಡುಕಿಕೊಂಡು ಹೊರಟನು. ಬಹಳಷ್ಟು ಹುಡುಕಾಡಿದ ಮೇಲೆ ರಾಜನಿಗೆ ಆ ಬಕಪಕ್ಷಿಯ ದರ್ಶನವಾಯಿತು ಆಗ ರಾಜನು ಅದನ್ನು ಕುರಿತು,
"ಅಯ್ಯಾ, ಬಕಪಕ್ಷಿ ನೀನೇನಾದರೂ ಈ ರಾಜ್ಯವನ್ನು ಹಿಂದೆ ಆಳಿದ ಇಂದ್ರದ್ಯುಮ್ನ ಎಂಬ ಮಹಾರಾಜನ ಹೆಸರನ್ನು ಅವನ ಸಾಧನೆಯ ಬಗ್ಗೆ ಏನಾದರೂ ತಿಳಿದುಕೊಂಡಿರುವೆಯಾ?" ಎಂದು ಕೇಳಿದನು. ಅದಕ್ಕೆ ಉತ್ತರಿಸುತ್ತಾ ಆ ಬಕಪಕ್ಷಿಯು ಗೂಬೆ ಹೇಳಿದಂತೆಯೇ,
"ಇಲ್ಲ ನಾನು ಬಹಳ ವರ್ಷಗಳಿಂದ ಇಲ್ಲಿ ವಾಸವಾಗಿದ್ದರೂ ನನ್ನ ಕಾಲದಲ್ಲಂತೂ ಇಂದ್ರದ್ಯುಮ್ನ ಮಹಾರಾಜನ ಹೆಸರನ್ನು ಕೇಳಿಲ್ಲ ಅವನು ಯಾರೋ ನನಗಂತೂ ಗೊತ್ತಿಲ್ಲ ತಿಳಿಯಬೇಕೆಂದಿದ್ದರೆ ಇಲ್ಲಿಂದ ದೂರದಲ್ಲಿ ಒಂದು ದೊಡ್ಡ ಸರೋವರ ಇದೆ. ಆ ಸರೋವರದಲ್ಲಿ ತುಂಬಾ ಮುದಿಯಾದ ಒಂದು ದೂಡ್ಡ ಆಮೆಯಿದೆ. ಆ ಹಿರಿಯ ಆಮೆಯನ್ನು ವಿಚಾರಿಸಿದರೆ ನಿನಗೆ ಏನಾದರೂ ಮಾಹಿತಿ ದೊರೆಯಬಹುದು" ಎಂದು ಹೇಳಿತು.
ಅಂತೆಯೇ ರಾಜನು ಪ್ರಯತ್ನಪಟ್ಟು ಆ ಸರೋವರದ ಬಳಿಗೆ ಹೋದನು. ಆ ಸರೋವರವು ತುಂಬಿ ಹರಿಯುತ್ತಿದ್ದು ಅದರ ತುಂಬೆಲ್ಲ ಮೊಸಳೆ, ಆಮೆ, ಮೀನು ಮಂತಾದ ವಿವಿಧ ತೆರನಾದ ಪ್ರಾಣಿಗಳು ವಾಸವಾಗಿದ್ದು ಸಂತೋಷದಿಂದ ನಲಿದಾಡುತ್ತಿದ್ದವು. ಅವುಗಳ ಬಳಿ ಮಾತನಾಡುತ್ತಾ ರಾಜನು ಅವರ ಮಧ್ಯದಲ್ಲಿ ತುಂಬಾ ಹಿರಿಯರಾದ ಆಮೆಯೊಂದು ಇದೆಯೇ? ಎಂದು ಕೇಳಿದನು. ಆ ಪ್ರಾಣಿಗಳು ಸಕಾರಾತ್ಮಕವಾಗಿ ಉತ್ತರಿಸುತ್ತಾ ಕೆಲವೇ ನಿಮಿಷಗಳಲ್ಲಿ ಹಿರಿಯ ಆಮೆಯನ್ನು ರಾಜನ ಬಳಿ ಕರೆದುಕೊಂಡು ಬಂದವು. ರಾಜನನ್ನು ನೋಡಿದ ಆಮೆಯು ಅವನನ್ನು ಗುರುತಿಸಿದ್ದೇ ಅಲ್ಲದೆ ಅವನಿಗೆ ಮತ್ತೆ ಮತ್ತೆ ನಮಸ್ಕರಿಸುತ್ತ ಅವನನ್ನು, ಅವನ ರಾಜ್ಯಭಾರವನ್ನು, ಗುಣಗಳನ್ನು ಹೊಗಳತೊಡಗಿತು.
"ಪ್ರಭು, ನಿನ್ನನ್ನು ಹೇಗೆ ತಾನೇ ಮರೆಯಲು ಸಾಧ್ಯ? ನೀನಲ್ಲವೇ ಈ ಸರೋವರವನನ್ನು ಕಟ್ಟಿಸಿದುದು? ನೀನಲ್ಲವೇ ನಮಗೆಲ್ಲರಿಗೂ ನೆಮ್ಮದಿಯಿಂದ ಬದುಕುವಂತೆ ಮಾಡಿರುವುದು? ನೀನು ಇಲ್ಲದಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತಿತ್ತು. ರೈತ ಬಾಂಧವರೆಲ್ಲ ಅನ್ನ ನೀರಿಲ್ಲದೆ ಅಲೆಯ ಬೇಕಾಗಿತ್ತು. ಮರಗಿಡಗಳು ನೀರು ಇಲ್ಲದೆ ನಾಶವಾಗಿ ಪಕ್ಷಿಗಳ ಸಂತತಿಯೇ ನಾಶವಾಗುತ್ತಿತ್ತು. ಅನ್ನ ನೀರಿಲ್ಲದೆ ಮಾನವ ಸಂತತಿ ನಿರ್ನಾಮವಾಗುತ್ತಿತ್ತು. ಇಷ್ಟೆಲ್ಲಾ ಅಭಿವೃದ್ಧಿಯನ್ನು ಮಾಡಿದ ನಿನ್ನನ್ನು ಹೇಗೆ ತಾನೇ ಮರೆಯಲು ಸಾಧ್ಯ? ನೀನೊಬ್ಬ ಪುಣ್ಯಾತ್ಮ ಮತ್ತೊಮ್ಮೆ ರಾಜನಾಗಿ ಬಂದು ನಮಗೆ ಎಲ್ಲ ರೀತಿಯ ಸಹಕಾರಗಳನ್ನು ಕೊಡು, ನಮ್ಮ ನಾಡನ್ನು ಸ್ವರ್ಗವಾಗಿ ಮಾಡು" ಎಂದು ಬೇಡುತ್ತಾ ಮತ್ತೊಮ್ಮೆ ನಮಸ್ಕರಿಸಿತು. ರಾಜನಿಗೆ ತುಂಬಾ ಸಂತೋಷವಾಗಿ ಆಮೆಯನ್ನು ಹಿಡಿದುಕೊಂಡು ಅಪ್ಪಿಕೊಳ್ಳುತ್ತಾ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿದನು.
ಆ ಸಮಯಕ್ಕೆ ಸರಿಯಾಗಿ ಸ್ವರ್ಗದಿಂದ ವಿಮಾನವೊಂದು ಕೆಳಗಿಳಿಯಿತು. ಅದರಿಂದ ಕೆಳಗಿಳಿದ ದೇವತೆಗಳು,
"ಮಹಾರಾಜ, ಆಮೆಯು ನಿನ್ನನ್ನು ನಿನ್ನ ಕಾರ್ಯವನ್ನು ನೆನಪಿಸಿಕೊಂಡು ಸ್ತುತಿಸತೊಡಗಿದ ಮೇಲೆ ಸ್ವರ್ಗದಲ್ಲಿ ನಿನ್ನ ಪುಣ್ಯದ ಪ್ರಮಾಣವು ಬೆಳೆಯುತ್ತಾ ಹೋಗುತ್ತಿದೆ. ಆದ್ದರಿಂದ ನಮ್ಮ ಜೊತೆಗೆ ಮತ್ತೊಮ್ಮೆ ಸ್ವರ್ಗಕ್ಕೆ ಬಂದು ಅಲ್ಲಿ ಸುಖ ಸಂತೋಷಗಳಿಂದ ನೆಲೆಸು" ಎಂದು ಆಹ್ವಾನಿಸಿದರು. ಆದರೆ ಅದಕ್ಕೆ ಒಪ್ಪದ ರಾಜನು,
"ಇಲ್ಲ ನಾನು ಇಲ್ಲಿ ಭೂಮಿಯಲ್ಲೇ ಇದ್ದು ಇನ್ನೂ ಕೆಲವು ಕಾಲ ರಾಜ್ಯಭಾರ ಮಾಡುತ್ತೇನೆ. ಸಾಧ್ಯವಾದಷ್ಟು ಹೆಚ್ಚು ಹೆಚ್ಚಾಗಿ ಪ್ರಜಾಹಿತಕಾರ್ಯಗಳನ್ನು ಮಾಡುತ್ತೇನೆ. ಹೀಗೆ ಮಾಡಿ ಅವರ ಪ್ರೀತಿಪಾತ್ರಕ್ಕೆ ಪಾತ್ರನಾಗುತ್ತೇನೆ, ನನಗೆ ಸ್ವರ್ಗ ಸುಖಕ್ಕಿಂತಲೂ ಜನಸೇವೆಯೇ ಹೆಚ್ಚಿನ ಸುಖ ಕೊಡುತ್ತದೆ." ಎಂದು ಹೇಳುತ್ತಾ ದೇವತೆಗಳನ್ನು ಖಾಲಿ ವಿಮಾನದ ಜೊತೆಯಲ್ಲಿ ತಿರುಗಿ ಕಳಿಸಿದನು.
ಅದಕ್ಕೆ ಹೇಳುವುದು "ಜನಸೇವೆಯೇ ಜನಾರ್ದನ ಸೇವೆ " ಎಂದು. ಇಲ್ಲಿ ನಾವು ಮಾಡಿದ ಪುಣ್ಯ ಕಾರ್ಯಗಳು ಕಾಲಕಾಲಕ್ಕೆ ಸ್ವರ್ಗದಲ್ಲಿ ಬೆಳೆಯುತ್ತಾ ಹೋಗುತ್ತವೆ.
ಒಂದು ದಟ್ಟವಾದ ಕಾಡು. ಅಲ್ಲಿ ಆನೆಯೊಂದಿತ್ತು. ದಿನಾಲೂ ನೀರು ಕುಡಿಯಲು ಸಮೀಪದ ಕೊಳಕ್ಕೆ ಹೋಗಿ, ನೀರು ಕುಡಿದು ಸಂಗಡಿಗರೊಂದಿಗೆ ಕೊಳದಲ್ಲಿ ಈಜುತ್ತಿತ್ತು. ಆ ಕೊಳದಲ್ಲೊಂದು ಕಪ್ಪೆ ವಾಸವಾಗಿತ್ತು. ಆನೆ ನೀರು ಕುಡಿದು ಈಜಾಡುವುದನ್ನು ಅದು ದಿನವೂ ನೋಡುತ್ತಿತ್ತು. ಅದಕ್ಕೆ ಒಮ್ಮೆಯಾದರೂ ಆನೆಯ ಬೆನ್ನನ್ನೇರಿ ಸವಾರಿ ಮಾಡಬೇಕೆಂಬ ಆಸೆಯಾಗಿತ್ತು. ಆದರೆ ಆನೆಯನ್ನು ಕೇಳಲು ಭಯ. ಹಾಗೂಹೀಗೂ ಒಂದು ದಿನ ಧೈರ್ಯ ಮಾಡಿ "ಆಯ್ಯಾ, ಆನೆ ನನ್ನದೊಂದು ಕೋರಿಕೆ ಇದೆ. ಸಾಯುವ ಮೊದಲು ನಿನ್ನ ಬೆನ್ನನ್ನು ಏರಿ ಕಾಡಿನಲ್ಲಿ ಸವಾರಿ ಮಾಡಬೇಕು" ಎಂದು ಕೇಳಿಯೇ ಬಿಟ್ಟಿತು. ಆನೆಗೆ ಕಪ್ಪೆಯ ಮೇಲೆ ಕನಿಕರ ಪಟ್ಟು ಅಷ್ಟೇ ತಾನೇ ಎಂದು ಅನುಮತಿ ನೀಡಿತು.
ಒಂದು ದಿನ ಬಿಡುವು ಮಾಡಿಕೊಂಡು ಆನೆ, ಕಪ್ಪೆ ಬಳಿಗೆ ಬಂದಿತು. ಕಪ್ಪೆಯ ಮುಂದೆ ಮಂಡಿಯೂರಿ ನೆಲದತ್ತ ಬಾಗಿತು. ಕಪ್ಪೆ ಆನೆಯ ಬೆನ್ನ ಮೇಲೆ ಹಾರಿತು. ಆನೆ ಕಪ್ಪೆಯನ್ನು ಸವಾರಿ ಕರೆದೊಯ್ಯಿತು. ಕಡೆಗೂ ಕಪ್ಪೆಯ ಬಹುದಿನಗಳ ಕನಸು ನೆರವೇರಿತ್ತು. ಆನೆ ಮತ್ತೆ ಕೊಳದ ಬಳಿ ತಂದುಬಿಟ್ಟಿತು. ಆದರೆ ಕಪ್ಪೆಗೆ ಆನೆಯ ಬೆನ್ನ ಮೇಲಿನ ಸವಾರಿ ತುಂಬಾ ಹಿಡಿಸಿತ್ತು. ಅದು ಕೆಳಕ್ಕಿಳಿಯಲು ಒಪ್ಪಲಿಲ್ಲ. ಆನೆ ಕಪ್ಪೆಯನ್ನು ಎಷ್ಟು ಕೇಳಿಕೊಂಡರೂ ಕಪ್ಪೆ ಹಿಡಿದ ಹಠವನ್ನು ಬಿಡಲಿಲ್ಲ. ಆನೆಗೆ ಸಿಟ್ಟು ಬಂದು ಸೊಂಡಿಲಿನಲ್ಲಿ ಕಪ್ಪೆಯನ್ನು ಬೀಳಿಸಲು ಯತ್ನಿಸಿತು. ಆದರೆ ಆಗಲಿಲ್ಲ. ಕಡೆಗೆ ಒಂದುಪಾಯ ಮಾಡಿತು. ದಾರಿಯಲ್ಲಿ ಸಿಕ್ಕ ಹಾವನ್ನು ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿತು. ಹಾವು ಆನೆಯ ಬೆನ್ನನ್ನೇರಿತು. ಹಾವನ್ನು ನೋಡುತ್ತಲೇ ದಿಗಿಲು ಬಿದ್ದ ಕಪ್ಪೆ ಜಾಗ ಖಾಲಿ ಮಾಡಿತು.
ಹಾವು ಆನೆಯನ್ನು ಸವಾರಿ ಮಾಡಿಸುವಂತೆ ಕೇಳಿಕೊಂಡಿತು. ಕಪ್ಪೆಯನ್ನು ಓಡಿಸಿ ಸಹಾಯ ಮಾಡಿದ್ದರಿಂದ ಆನೆ ಅದರ ಕೋರಿಕೆಯನ್ನು ಮನ್ನಿಸಿತು. ಸವಾರಿ ಮುಗಿಯುವಷ್ಟರಲ್ಲಿ ಹಾವಿಗೆ ಆನೆಯ ಬೆನ್ನು ತುಂಬಾ ಹಿಡಿಸಿತ್ತು. ಅದು ಮೆತ್ತನೆಯ ಹಾಸಿಗೆಯಂತೆ ತೋರಿತ್ತು. ಹೀಗಾಗಿ ಹಾವು ಕೂಡಾ ಬೆನ್ನ ಮೇಲಿಂದ ಕೆಳಕ್ಕಿಳಿಯಲು ಒಪ್ಪಲಿಲ್ಲ. ಇದ್ಯಾವ ಗ್ರಹಚಾರವೆಂದು ಆನೆ ಹಣೆ ಚಚ್ಚಿಕೊಂಡಿತು. ಅದೇ ಸಮಯಕ್ಕೆ ಮುಂಗುಸಿಯೊಂದು ಬಂದಿತು. ಹಾವು ಮುಂಗುಸಿಯ ಶತ್ರುವಾಗಿದ್ದರಿಂದ ಆನೆ ಅದರ ಸಹಾಯ ಕೋರಿತು. ಮುಂಗುಸಿ ಒಂದೇ ಏಟಿಗೆ ಆನೆಯ ಬೆನ್ನನ್ನೇರಿದ ಮರುಕ್ಷಣವೇ ಹಾವು ಕೆಟ್ಟೆನೋ ಬಿಟ್ಟೆನೋ ಎಂದು ಸರಸರನೆ ಪಲಾಯನಗೈದಿತು.
ಆನೆಗೆ ನೆಮ್ಮದಿಯಾಯಿತು. ಆದರೆ ಅದರ ನೆಮ್ಮದಿ ಬಹಳ ಕಾಲ ಉಳಿಯಲಿಲ್ಲ. ಆನೆಯ ಗ್ರಹಾಚಾರಕ್ಕೆ ಮುಂಗುಸಿ ಕೂಡಾ ಕೆಳಕ್ಕಿಳಿಯಲಿಲ್ಲ. ಆನೆಯ ಬೆನ್ನ ಮೇಲೆಯೇ ಅದೂ ಲಂಗರು ಹಾಕಿತು. ಮುಂಗುಸಿಯನ್ನು ಕೆಳಗಿಳಿಸಲು ಆನೆ ತನ್ನ ಕೈಲಾದ ಪ್ರಯತ್ನವನ್ನೆಲ್ಲಾ ಮಾಡಿ ನೋಡಿತು. ಅದೆಲ್ಲವೂ ನಿರರ್ಥಕ ಎಂದು ಆನೆಗೆ ಅನಿಸಿದಾಗ ಅದು ಕೆಂಡಾಮಂಡಲವಾಯಿತು. ನಾಯಿಯೊಂದು ಅಲೆಯುತ್ತಾ ಆ ದಾರಿಯಾಗಿ ಬಂದಿತು. ಆನೆ, ನಾಯಿಯನ್ನು ಸಹಾಯ ಮಾಡುವಂತೆ ಕೇಳಿಕೊಂಡಿತು. ನಾಯಿ ಬೊಗಳಿ ಬೊಗಳಿ ದಂತಕೋರೆಗಳನ್ನು ಪ್ರದರ್ಶಿಸಿ ಮುಂಗುಸಿಯನ್ನು ಹೆದರಿಸಿತು. ಮುಂಗುಸಿಯೂ ಅಲ್ಲಿಂದ ಓಡಿ ಹೋಯಿತು. ಈಗ ಮುಂಗುಸಿಯ ಸ್ಥಾನವನ್ನು ನಾಯಿ ಅಲಂಕರಿಸಿತು. ರಾಜಾರೋಷವಾಗಿ ಆನೆಯ ಬೆನ್ನ ಮೇಲೆ ಸವಾರಿ ಮಾಡಿತು.
ಆನೆಯ ಬೆನ್ನ ಮೇಲೆ ಕೂತಾಗ ಇತರೆ ಪ್ರಾಣಿಗಳು ತನ್ನನ್ನು ಗೌರವಯುತವಾಗಿ ಕಾಣುವುದನ್ನು ನಾಯಿ ಗಮನಿಸಿತು. ಹೀಗಾಗಿ ಅದು ಕೂಡಾ ಅಲ್ಲಿಂದ ಕಾಲ್ದೆಗೆಯಲು ಒಪ್ಪಲಿಲ್ಲ. ಆನೆಗೆ ಯಾಕೋ ಇದು ಅತಿಯಾಯಿತು ಎಂದೆನಿಸಿತು. ಯಾರ ಸಹಾಯವನ್ನು ಕೇಳಲೂ ಹಿಂದೆಗೆಯಿತು. ನಾಯಿಯನ್ನು ಬೆನ್ನ ಮೇಲಿಂದ ಓಡಿಸಲು ಉಪಾಯ ಹೊಳೆಯಿತು. ಆನೆ ಕೊಳದ ಬಳಿ ಬಂದಿತು. ಅದಕ್ಕೆ ನಾಯಿಯ ದೌರ್ಬಲ್ಯ ಗೊತ್ತಿತ್ತು. ನಾಯಿಗೆ ನೀರನ್ನು ಕಂಡರೆ ಆಗುತ್ತಿರಲಿಲ್ಲ. ಆನೆ ಕೊಳದಲ್ಲಿ ಎರಡು ಮೂರು ಡುಬುಕಿ ಹೊಡೆಯಿತು. ಜನ್ಮದಲ್ಲಿ ಮೈಗೆ ನೀರು ಸೋಕಿಸಿಕೊಳ್ಳದ ನಾಯಿ ಬೊಬ್ಬೆ ಹೊಡೆಯುತ್ತಾ ಕೊಳದಿಂದ ಎದ್ದು ಓಡಿ ಹೋಯಿತು. ಆನೆ ಕಡೆಗೂ ನಿಟ್ಟುಸಿರು ಬಿಟ್ಟಿತು. ಸಂಗಡಿಗರೆಲ್ಲ ಅದರ ಬುದ್ಧಿವಂತಿಕೆಗೆ ಬೆನ್ನುತಟ್ಟಿದವು.
ನೀತಿ :-- ಅತಿಯಾದ ಆಸೆ ಒಳ್ಳೆಯದಲ್ಲ. ಕಪ್ಪೆ, ಹಾವು, ಮುಂಗುಸಿ ಮತ್ತು ನಾಯಿ ತಮ್ಮ ಆಸೆಗೆ ಆನೆಯ ಸಹಾಯ ಪಡೆಯಲು ಪ್ರಯತ್ನಿಸಿದವು. ಆದರೆ ಅವುಗಳ ಆಸೆ ಅತಿಯಾಗಿಯಾದರೆ ಆಗುವ ಪರಿಣಾಮ ಇಲ್ಲಿ ಕಾಣಬಹುದು.
ಅಗಾಧ ಸಾಗರದ ಮಧ್ಯದಲ್ಲಿ ಒಂದು ದೊಡ್ಡ ಹಡಗು ಸಾಗುತ್ತಿತ್ತು. ಹಡಗಿನೊಳಗೆ ಸಾವಿರಾರು ಜನರು ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದರು. ಆದರೆ, ಅವರಲ್ಲಿ ಒಬ್ಬ ಸಂತನ ಆಗಮನವು ಎಲ್ಲರ ಗಮನವನ್ನು ಸೆಳೆಯಿತು. ಅವರ ನಗುಮುಖ, ಸರಳ ಉಡುಪು ಮತ್ತು ಮೌನವು ಎಲ್ಲರನ್ನು ಆಕರ್ಷಿಸುತ್ತಿತ್ತು.
ಹಡಗಿನ ಪ್ರಯಾಣಿಕರು ಸಂತರನ್ನು ಕಂಡ ಕೂಡಲೇ ಅವರಿಗೆ ಗೌರವ ಸೂಚಿಸಲು ಅವರ ಕಾಲಿಗೆ ಬೀಳುತ್ತಿದ್ದರು. ಆದರೆ, ಸಂತರು ತಮ್ಮ ಮೇಲಿನ ಈ ಗೌರವವನ್ನು ಸ್ವೀಕರಿಸಲು ಇಷ್ಟಪಡುತ್ತಿರಲಿಲ್ಲ. ಅವರು ಎಷ್ಟೇ ಬೇಡಿಕೊಂಡರೂ ಜನರು ತಮ್ಮ ಮನಸ್ಸನ್ನು ಬದಲಾಯಿಸಲಿಲ್ಲ. ಅವರು ಸಂತರಿಂದ ಆಶೀರ್ವಾದವನ್ನು ಪಡೆಯಲು ಮತ್ತು ಉಪದೇಶವನ್ನು ಕೇಳಲು ಆತುರದಲ್ಲಿದ್ದರು.
ಅಂತಿಮವಾಗಿ, ಸಂತರು ತಾಳ್ಮೆಯಿಂದ ಎಲ್ಲರನ್ನು ನೋಡಿ, "ಎಲ್ಲರಿಗೂ ಸಾವು ನಿಶ್ಚಿತ, ಅದರ ಆಗಮನ ಅನಿಶ್ಚಿತ, ಅದರ ಸಾಮೀಪ್ಯ ಖಚಿತ" ಎಂದು ಹೇಳಿದರು. ಇಷ್ಟು ಸರಳವಾದ ವಾಕ್ಯವನ್ನು ಕೇಳಿ ಎಲ್ಲರ ಮುಖಗಳು ಕುಗ್ಗಿದವು. ಅವರಿಗೆ ಈ ಮಾತುಗಳು ಹೊಸದಾಗಿರಲಿಲ್ಲ. ಆದರೆ, ಸಂತರು ಹೇಳಿದ ರೀತಿಯಲ್ಲಿ ಅವರು ಈ ಮಾತನ್ನು ಎಂದಿಗೂ ಯೋಚಿಸಿರಲಿಲ್ಲ.
ಸಂತರ ಈ ಮಾತುಗಳನ್ನು ಕೇಳಿ ಜನರು ಸ್ವಲ್ಪ ಕೋಪಗೊಂಡರು. ಅವರು ಸಂತರನ್ನು ಮಹಾನ್ ವ್ಯಕ್ತಿ ಎಂದು ಭಾವಿಸಿದ್ದರು ಆದರೆ, ಅವರು ಹೇಳಿದ ಮಾತುಗಳು ಅಷ್ಟು ಮಹತ್ವದ್ದಾಗಿರಲಿಲ್ಲ ಎಂದು ಅವರಿಗೆ ಅನಿಸಿತು. ಆದರೆ, ಅವರ ಈ ಭಾವನೆಗಳು ಬಹಳ ಕಾಲ ಇರಲಿಲ್ಲ. ಸ್ವಲ್ಪ ಸಮಯದ ನಂತರ, ಹಡಗು ಭೀಕರ ಸುಂಟರಗಾಳಿಗೆ ಸಿಲುಕಿಕೊಂಡಿತು. ದೊಡ್ಡ ದೊಡ್ಡ ಅಲೆಗಳು ಹಡಗನ್ನು ಒದೆಯುತ್ತಿದ್ದವು. ಎಲ್ಲೆಡೆ ಕೂಗಾಟ ಮತ್ತು ಆಕ್ರಂದನ ಕೇಳಿಬರುತ್ತಿತ್ತು. ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಆದರೆ, ಸಂತರು ಮಾತ್ರ ಶಾಂತವಾಗಿ ಕುಳಿತು ಧ್ಯಾನ ಮಾಡುತ್ತಿದ್ದರು. ಅವರ ಮುಖದಲ್ಲಿ ಸ್ವಲ್ಪವೂ ಭಯವಿರಲಿಲ್ಲ. ಅವರು ಸಾವನ್ನು ಸ್ವೀಕರಿಸಲು ಸಿದ್ಧರಾಗಿದ್ದರು.
ಸ್ವಲ್ಪ ಸಮಯದ ನಂತರ, ಚಂಡಮಾರುತ ಶಮನವಾಯಿತು. ಹಡಗು ಸುರಕ್ಷಿತವಾಗಿ ತನ್ನ ಗಮ್ಯಸ್ಥಾನವನ್ನು ತಲುಪಿತು. ಜನರು ತಮ್ಮ ಜೀವವನ್ನು ಉಳಿಸಿಕೊಂಡಿದ್ದಕ್ಕೆ ಭಗವಂತನಿಗೆ ಕೃತಜ್ಞತೆ ಸಲ್ಲಿಸಿದರು. ಅವರು ಸಂತರ ಬಳಿಗೆ ಹೋಗಿ, ಅವರ ಶಾಂತಿ ಮತ್ತು ಧೈರ್ಯವನ್ನು ನೋಡಿ ಆಶ್ಚರ್ಯಚಕಿತರಾದರು. ಅವರು ಸಂತರಿಗೆ, "ನಿಮಗೆ ಏಕೆ ಭಯವಾಗಲಿಲ್ಲ? ನಾವು ಸಾವಿನ ಬಗ್ಗೆ ಯೋಚಿಸಿದಾಗ ನಮಗೆ ತುಂಬಾ ಭಯವಾಗುತ್ತದೆ. ಆದರೆ ನೀವು ಏಕೆ ಹಾಗೆ ಇದ್ದೀರಿ?" ಎಂದು ಕೇಳಿದರು.
ಸಂತರು ನಗುತ್ತಾ, "ಸಾವು ನಿಶ್ಚಿತ. ಆದರೆ ಅದರ ಆಗಮನ ಅನಿಶ್ಚಿತ. ನಾವು ಅದರ ಬಗ್ಗೆ ಚಿಂತಿಸುತ್ತಾ ಕಾಲವನ್ನು ವ್ಯರ್ಥ ಮಾಡುವ ಬದಲು, ಪ್ರಸ್ತುತ ಕ್ಷಣವನ್ನು ಆನಂದಿಸಬೇಕು. ನಾವು ಎಷ್ಟು ಕಷ್ಟಪಟ್ಟರೂ ಸಾವನ್ನು ತಪ್ಪಿಸಲು ಸಾಧ್ಯವಿಲ್ಲ. ಆದ್ದರಿಂದ, ನಾವು ಸಾವಿಗೆ ಹೆದರಬೇಕಾಗಿಲ್ಲ. ನಾವು ಸಾವನ್ನು ಸ್ವೀಕರಿಸಲು ಸಿದ್ಧರಾಗಬೇಕು" ಎಂದು ಹೇಳಿದರು.
ಸಂತರ ಈ ಮಾತುಗಳು ಎಲ್ಲರ ಮನಸ್ಸಿನಲ್ಲಿ ಆಳವಾಗಿ ನೆಲೆಸಿದವು. ಅವರು ತಮ್ಮ ಜೀವನದ ಬಗ್ಗೆ ಹೊಸದಾಗಿ ಯೋಚಿಸಲು ಪ್ರಾರಂಭಿಸಿದರು. ಅವರು ಸಾವಿನ ಭಯವನ್ನು ಬಿಟ್ಟು, ಜೀವನವನ್ನು ಸಂಪೂರ್ಣವಾಗಿ ಆನಂದಿಸಲು ಪ್ರಾರಂಭಿಸಿದರು.
ನೀತಿ :-- ಸಾವು ನಿಶ್ಚಿತ. ಪ್ರಸ್ತುತ ಕ್ಷಣವನ್ನು ಆನಂದಿಸಿ. ಸಾವು ನಮ್ಮೆಲ್ಲರ ಅಂತಿಮ ಸತ್ಯ. ಆದರೆ, ಅದರ ಬಗ್ಗೆ ಚಿಂತಿಸುತ್ತಾ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಪ್ರಸ್ತುತ ಕ್ಷಣವನ್ನು ಆನಂದಿಸಬೇಕು ಮತ್ತು ಜೀವನವನ್ನು ಸಂಪೂರ್ಣವಾಗಿ ಬದುಕಬೇಕು.
ಒಂದು ಊರಿನಲ್ಲಿ ಗೂಳಿಯೊಂದು ಬೇಕಾಬಿಟ್ಟಿ ಅಡ್ಡಾಡುತ್ತಿತ್ತು. ಅದನ್ನು ಸಾಕಿದ ಒಡೆಯನಿಗೆ ತಿವಿದು ನಾಡಿನಿಂದ ಕಾಡಿಗೆ ಸೇರಿಕೊಂಡಿತ್ತು. ಅದನ್ನು ಹಿಡಿಯಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಸೊಕ್ಕಿನಿಂದ ಮೆರೆಯುವ ಗೂಳಿ ಹಗಲು ರಾತ್ರಿಯೆನ್ನದೇ ರೈತರ ಹೊಲಗಳಿಗೆ ನುಗ್ಗಿ ಫಸಲನ್ನು ತಿನ್ನುತ್ತಿತ್ತು. ಜನರಿಗೆ ಗೂಳಿ ದೊಡ್ಡ ತಲೆನೋವಾಗಿತ್ತು.
ಒಂದು ದಿನ ರೈತ ರಾಮಣ್ಣ ಹೊಲದಲ್ಲಿ ಉಳುತ್ತಿರುವಾಗ ಆಕಸ್ಮಿಕವಾಗಿ ಹಸಿವಿನಿಂದ ತತ್ತರಿಸಿದ ಹುಲಿಯೊಂದು ಎತ್ತಿನ ಮೇಲೆ ದಾಳಿ ಮಾಡಿತ್ತು. ಆಗ ಭಯಭೀತನಾದ ರಾಮಣ್ಣ, ಅಯ್ನಾ ಹುಲಿರಾಯ, ನನ್ನ ಎತ್ತನ್ನು ತಿನ್ನಬೇಡ ಎಂದನು. "ಹಾಗಾದರೆ ನಿನ್ನನ್ನೇ ತಿನ್ನಲೇ?" ಎಂದು ಹುಲಿ ರಾಮಣ್ಣನ ಮೇಲೆರಗಿತು. "ತಡೆ ಹುಲಿರಾಯ. ನಿನ್ನ ಹೊಟ್ಟೆ ತುಂಬುವ ಉಪಾಯ ನನ್ನಲ್ಲಿದೆ' ಎಂದ ರಾಮಣ್ಣ. "ಏನದು ಬೇಗ ಬೊಗಳು" ಎಂದಿತು ಹುಲಿ. "ಇಲ್ಲಿಯೇ ದಾರಿಯಂಚಿನಲ್ಲಿ ದಷ್ಟಪುಷ್ಟವಾದ ಗೂಳಿ ಇದೆ. ಅದನ್ನು ತಿನ್ನು. ಆದರೆ ಅದು ನಿನ್ನನ್ನು ಕಂಡಕೂಡಲೇ ಓಡಿಹೋಗುತ್ತೆ. ಹಾಗಾಗಿ ನೀನು ಒಂದು ಹುಲ್ಲಿನ ಹೊರೆಯನ್ನು ಹೊತ್ತಕೊಂಡು ಹೋಗು. ಆ ಹುಲ್ಲನ್ನು ತಿನ್ನಲು ಗೂಳಿ ಬಂದೇ ಬರುತ್ತೆ. ಆಗ ಗೂಳಿ ಮೇಲೆ ದಾಳಿ ಮಾಡು. ನಿನಗೆ ಹೊಟ್ಟೆತುಂಬ ಆಹಾರ ಸಿಗುತ್ತೆ" ಎಂದ. ರಾಮಣ್ಣನ ಉಪಾಯ ಹುಲಿಗೆ ಸಮಂಜಸವೆನಿಸಿತು.
ರಾಮಣ್ಣನು ಹುಲ್ಲನ್ನು ಕಡಿದು ಹೊರೆ ಕಟ್ಟಿದ. ಹುಲಿಯು ಆ ಹೊರೆಯನ್ನು ಹೊತ್ತುಕೊಂಡು ನಿಧಾನವಾಗಿ ಊರಕಡೆ ಸಾಗುತ್ತಿತ್ತು. ಇದೇ ಸಮಯಕ್ಕಾಗಿ ಹೊಂಚುಹಾಕಿ ಕುಳಿತಿದ್ದ ಗೂಳಿ ಅರ್ಭಟದಿಂದ ಓಡಿಬಂತು. ಹುಲ್ಲು ಹೊರೆ ಹೊತ್ತ ರೈತ ಎಂದು ಅವನನ್ನು ಓಡಿಸಿ ಹುಲ್ಲು ತಿನ್ನಬೇಕೆಂದು ಹತ್ತಿರ ಬಂತು. ಆಗ ಹುಲಿಯು ಹೊರೆ ಕೆಳಗೆ ಕೆಡವಿ ಒಮ್ಮೆಲೆ ಗೂಳಿಯ ಮೇಲೆ ದಾಳಿ ಮಾಡಿ ಅದರ ಕುತ್ತಿಗೆಗೆ ಬಾಯಿ ಹಾಕಿತು. ಅದರ ಮೈ ಕೈಗೆ ಪರಚಿ ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿತು. ಆದರೆ ಗೂಳಿಯೂ ಬಲಾಡ್ಯವಾಗಿದ್ದದರಿಂದ ಹುಲಿಯ ಬಾಯಿಗೆ ತುತ್ತಾಗಲಿಲ್ಲ. ಹುಲಿಯ ಬಾಯಿಂದ ತಪ್ಪಿಸಿಕೊಂಡು ಜೀವದ ಹಂಗು ತೊರೆದು ಓಡಿತು.
ಮತ್ತೆಂದೂ ಗೂಳಿಯು ಆ ಊರಿನತ್ತ ತಲೆ ಕೂಡ ಹಾಕಿ ಮಲಗಲಿಲ್ಲ. ಕೊಬ್ಬಿದ ಗೂಳಿಯ ಕಿರುಕುಳ ತಪ್ಪಿದ್ದರಿಂದ ರಾಮಣ್ಣನ ಸಹಿತ ಉಳಿದೆಲ್ಲ ರೈತರಿಗೂ ನೆಮ್ಮದಿಯಾಯಿತು.
ನೀತಿ :-- ಇನ್ನೊಬ್ಬರಿಗೆ ತೊಂದರೆ ಮಾಡಿದರೆ ನಮಗೂ ಅಪಾಯ ಕಟ್ಟಿಟ್ಟ ಬುತ್ತಿ.
ಒಬ್ಬ ಶ್ರೀಮಂತ ತನ್ನ ಮುದ್ದು ಮಗನಿಗೆ ಸಾಯುವ ಸಮಯದಲ್ಲಿ ವಿಲ್ ಪತ್ರದ ಜೊತೆ ತನ್ನ ಪಾದರಕ್ಷೆಗಳನ್ನು ನೀಡಿ "ವಿಲ್ ಪತ್ರದಲ್ಲಿ ನಿನಗೆ ನನ್ನೆಲ್ಲಾ ಆಸ್ತಿಯನ್ನು ಬರೆದಿದ್ದೇನೆ. ನೀನು ಸುಖವಾಗಿ ಬಾಳು ಆದರೆ ನನ್ನ ಕೊನೆಯ ಆಸೆಯೊಂದಿದೆ ಅದನ್ನು ನೆರವೇರಿಸು ಅಷ್ಟು ಸಾಕು. ಅದೇನೆಂದರೆ ನಾನು ಸತ್ತ ಮೇಲೆ ನನ್ನ ಪಾದಕ್ಕೆ ಈ ಹಳೆಯ ಚಪ್ಪಲಿಯನ್ನು ತೊಡಿಸಿ ಅಂತ್ಯ ಕ್ರಿಯೆ ನೆರವೇರಿಸು!" ಎಂದು ಹೇಳಿದ.
ಮಗ ತನ್ನ ಕೆನ್ನೆಯ ಮೇಲೆ ಜಾರುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಈ ಸಣ್ಣ ಆಸೆಯನ್ನು ನಾನು ಖಂಡಿತ ನೆರವೆರಿಸುತ್ತೇನೆ ಎಂದು ಅಪ್ಪನಿಗೆ ಮಾತು ಕೊಡುತ್ತಾನೆ. ತಂದೆಯು ಕೊನೆಯುಸಿರೆಳೆದ ದಿನ ವಿಧಿ ವಿಧಾನ ಕಾರ್ಯಗಳನ್ನು ಮಾಡಿದ ಪಂಡಿತರಿಗೆ ಮಗ ಅಪ್ಪನಿಗೆ ಹಳೆಯ ಚಪ್ಪಲಿ ತೊಡಿಸಲು ಕೋರುತ್ತಾನೆ. ಆದರೆ ಪಂಡಿತರು ಸಾಧ್ಯವೇ ಇಲ್ಲ ಇದು ನಮ್ಮ ಅಂತ್ಯಕ್ರಿಯೆ ಸಂಪ್ರದಾಯದಲ್ಲೇ ಇಲ್ಲವೆಂದು ನಿರಾಕರಿಸುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರು ಆ ಶ್ರೀಮಂತ ವ್ಯಕ್ತಿಗೆ ಹಳೆಯ ಚಪ್ಪಲಿ ತೊಡಿಸಲು ಸಾಧ್ಯವಾಗುವುದಿಲ್ಲ.
ಈ ವಿಚಾರವಾಗಿ ಸಂಬಂಧಿಕರು, ಊರಿನ ಹಿರಿಯ ಮುಖಂಡರು ಬುದ್ಧಿವಂತರು ಇತರೆ ಎಲ್ಲರೂ ಸೇರಿ ಈ ವಿಷಯದ ಕುರಿತು ಚರ್ಚಿಸುತ್ತಿರುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಓಡೋಡಿ ಬಂದ ಆ ಶ್ರೀಮಂತನ ಸ್ನೇಹಿತ ಮಗನಿಗೆ ಪತ್ರ ನೀಡಿ "ನಿಮ್ಮ ತಂದೆಯವರು ಕೆಲ ದಿನಗಳ ಹಿಂದೆ ನನ್ನನ್ನು ಕರೆದು ಈ ಪತ್ರವನ್ನು ನನ್ನ ಮಗನಿಗೆ ನನ್ನ ಅಂತ್ಯ ಸಂಸ್ಕಾರದ ಕೊನೆಗಳಿಗೆಯಲ್ಲಿ ನೀಡಲು ತಿಳಿಸಿದ್ದರು" ಎಂದು ಹೇಳುತ್ತಾನೆ.
ತುಂಬಾ ಕೂತುಹಲದಿಂದ ಆ ಪತ್ರವನ್ನು ತೆರೆದು ನೋಡಿದಾಗ ಅವರ ತಂದೆ "ಪ್ರಿಯ ಪುತ್ರನೇ ನೋಡಿದೆಯಾ? ದೊಡ್ಡ ಫ್ಯಾಕ್ಟರಿ ಭವ್ಯ ಬಂಗಲೆ ಕಾರು ಚಿನ್ನ ಒಡವೆ ಫಾರಂ ಹೌಸ್ ಇದೆಲ್ಲರ ಒಡೆಯನಾಗಿದ್ದರೂ ನಾನು ಒಂದು ಜೊತೆ ಹಳೆಯ ಚಪ್ಪಲಿಯನ್ನು ಕೂಡ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಇಷ್ಟೇ ಬದುಕಿನ ಸತ್ಯ! ನಿನಗೂ ಒಂದು ದಿನ ಸಾವು ಹತ್ತಿರವಾಗುತ್ತದೆ ನೀನು ಕೇವಲ ಬಿಳಿ ಬಟ್ಟೆಯಲ್ಲಿ ಇಹಲೋಕ ತ್ಯಜಿಸಬೇಕು ಈಗಲೇ ಎಚ್ಚರಗೊಳ್ಳು ದುಡ್ಡಿಗಾಗಿ ಯಾರನ್ನು ನೋಯಿಸಬೇಡ ಪೀಡಿಸಬೇಡ ಅನ್ಯಾಯ ಮತ್ತು ಅಧರ್ಮದಿಂದ ಹಣ ಸಂಪಾದನೆ ಮಾಡಬೇಡ ನೀನು ಗಳಿಸಿದ ಹಣದಲ್ಲಿ ಕೆಲ ಭಾಗವನ್ನು ನಿರ್ಗತಿಕರಿಗೆ ಇಲ್ಲದವರಿಗೆ ದಾನ ಮಾಡು ಸತ್ಕಾರ್ಯಗಳಿಗೆ ಹಣವನ್ನು ಬಳಸು ಸತ್ತಾಗ ನಿನ್ನ ಹಿಂದೆ ಬರುವುದು ನಿನ್ನ ಕರ್ಮಗಳು ಮಾತ್ರ" ಎಂದು ಪತ್ರ ಬರೆದಿರುತ್ತಾನೆ.
ಈ ಪತ್ರ ಓದುತ್ತಾ ಕಣ್ಣುಗಳು ತುಂಬಿ ಬಂದವು. ಮನುಷ್ಯ ಎಷ್ಟೇ ಗಳಿಸಿದರು ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗಬೇಕು. ಏನೇ ಆಗಿದ್ದರೂ ಏಕಿಷ್ಟು ಅಹಂಕಾರ, ನೀಚತನ ಕ್ರೂರತನ ಅಂತ ಯೋಚಿಸುತ್ತಿದ್ದ. ಆಗ ಮೊಬೈಲ್ ರಿಂಗ್ ಆಗುತ್ತಿತ್ತು ಅದರಲ್ಲಿ "ಒಳಿತು ಮಾಡು ಮನುಸ, ನೀ ಇರೋದು ಮೂರು ದಿವಸ, ಉಸಿರು ನಿಂತ ಮ್ಯಾಗೆ ನಿನ್ನ ಹೆಸರು ಹೇಳುತಾರ, ಹೆಣ ಅನ್ನುತ್ತಾರ, ಮಣ್ಣಾಗ ಹೂಳುತಾರ" ಈ ಹಾಡು ಮತ್ತಷ್ಟು ಬದುಕಿನ ವಾಸ್ತವದ ಬಗ್ಗೆ ಎಚ್ಚರಿಸಿದಂತಿತ್ತು. ಇದೆ ಜೀವನದ ಸತ್ಯ.
ಕತ್ತೆಯೊಂದು, ಹುಲಿಗೆ "ಹುಲ್ಲಿನ ಬಣ್ಣ ನೀಲಿ" ಎಂದು ಹೇಳಿತು. ಹುಲಿ "ಇಲ್ಲ, ಹುಲ್ಲು ಹಸಿರು ಬಣ್ಣದ್ದು." ಎಂದು ಉತ್ತರಿಸಿತು. ಈ ಚರ್ಚೆಯ ಬಿಸಿ ಯದ್ವಾತದ್ವಾ ಏರಿತು. ವಾದ ಬಗೆ ಹರಿಯುವ ಸೂಚನೆ ಕಾಣದೆ ಇದ್ದಾಗ ಇಬ್ಬರು ಸೇರಿ ಒಂದು ಮಧ್ಯಸ್ಥಿಕೆಗೆ ಒಪ್ಪಿಸಲು ನಿರ್ಧಾರ ಮಾಡಿ, ಕಾಡಿನ ರಾಜನಾದ ಸಿಂಹದ ಹತ್ತಿರ ಹೋರಟವು.
ಸಿಂಹರಾಜ ತನ್ನ ಸಿಂಹಾಸನದ ಮೇಲೆ ಗಂಭೀರವದನನಾಗಿ ವಿರಾಜಮಾನನಾಗಿದ್ದ. ಸಿಂಹವನ್ನು ದೂರದಿಂದ ನೋಡುತ್ತಲೇ ಕತ್ತೆರಾಯ ಕೂಗಲು ಪ್ರಾರಂಭಿಸಿತು. "ಓ ಮಹಾಪ್ರಭುಗಳೇ, ನೀವೇ ಹೇಳಿ, ಹುಲ್ಲಿನ ಬಣ್ಣ ನೀಲಿ ಎಂಬುದು ನಿಜವಲ್ಲವೇ?". ಎಂದಿತು. ತಡಮಾಡದಲೇ ಸಿಂಹ "ಹೌದು, ನಿಜ, ಹುಲ್ಲು ನೀಲಿ ಬಣ್ಣದ್ದು" ಎಂದು ಉತ್ತರಿಸಿತು.
ಇದನ್ನು ಕೇಳಿದ ಕತ್ತೆಗೆ ಎಲ್ಲಿಲ್ಲದ ಖುಷಿ, ಆತುರದಿಂದ ಮುಂದುವರಿದು "ಇಲ್ಲಿ ನೋಡಿ ಮಹಾಸ್ವಾಮಿ ಈ ಹುಲಿಯಪ್ಪ ನನ್ನ ಮಾತನ್ನು ಒಪ್ಪುವುದಿಲ್ಲ, ವಿರೋಧಿಸುತ್ತಾನೆ ಮತ್ತು ನನಗೆ ಕಿರಿಕಿರಿ ಉಂಟುಮಾಡುತ್ತಿದ್ದಾನೆ, ದಯವಿಟ್ಟು ಇವನನ್ನು ಶಿಕ್ಷಿಸಿ." ಎಂದಿತು. ಆಗ ಸಿಂಹರಾಜ "ಹುಲಿಗೆ 5 ವರ್ಷಗಳ ಕಾಲ ವಾಗ್ದಂಡನೆಯ (ಮೌನದಿಂದ ಇರಬೇಕು ಎಂಬ) ಶಿಕ್ಷೆ ನೀಡಲಾಗಿದೆ, ಇದನ್ನು ಹುಲಿ ಪಾಲಿಸತಕ್ಕದ್ದು."ಎಂದು ಘೋಷಿಸಿತು.
ಕತ್ತೆಗೆ ಯುದ್ಧಗೆದ್ದ ಸಂಭ್ರಮ. ಹರ್ಷಚಿತ್ತದಿಂದ "ಹುಲ್ಲಿನ ಬಣ್ಣ ನೀಲಿ, ಹುಲ್ಲಿನ ಬಣ್ಣ ನೀಲಿ" ಎನ್ನುತ್ತಾ ಇನ್ನಷ್ಟು ಪ್ರಾಣಿಗಳಿಗೆ ತನ್ನ ಮಾತನ್ನು ಹೇಳುತ್ತಾ, ಜಿಗಿ ಜಿಗಿದು ಕೇಕೆ ಹಾಕುತ್ತಾ ಕತ್ತೆ ಓಡಿ ಹೋಯಿತು. ಇತ್ತ ಹುಲಿ ತನ್ನ ಶಿಕ್ಷೆಯನ್ನು ಒಪ್ಪಿಕೊಂಡಿತು. ಆದರೆ "ಮಹಾಸ್ವಾಮಿ ನಿಮಗೂ ಗೊತ್ತು , ಹುಲ್ಲಿನ ಬಣ್ಣ ಹಸಿರು. ಅದಾಗ್ಯೂ ನೀವು ನನ್ನನ್ನು ಏಕೆ ಶಿಕ್ಷಿಸಿದ್ದೀರಿ?" ಎಂದು ಸಿಂಹವನ್ನು ಅಮಾಯಕ ಹುಲಿ, ಮುಗ್ಧವಾಗಿ ಕೇಳಿತು.
ಸಿಂಹ "ಹುಲಿಯಪ್ಪಾ ವಾಸ್ತವವಾಗಿ, ಹುಲ್ಲಿನ ಬಣ್ಣ ಹಸಿರು." ಎಂದು ಉತ್ತರಿಸಿತು. ಹುಲಿ "ಅದೇ ಪ್ರಭುವೇ, ನಾನು ಹೇಳಿದ್ದು ಅದನ್ನೇ. ಹಾಗಾದರೆ ನೀವು ನನ್ನನ್ನು ಏಕೆ ಶಿಕ್ಷಿಸುತ್ತಿದ್ದೀರಿ?" ಎಂದು ಹುಲಿ ಸ್ವಲ್ಪ ಗಟ್ಟಿದನಿಯಿಂದಲೇ ಕೇಳಿತು. ಆಗ ಸಿಂಹ "ಹುಲ್ಲಿನ ಬಣ್ಣ ನೀಲಿಯೋ ಅಥವಾ ಹಸಿರೋ ಎಂಬುದು ತಳಬುಡವಿಲ್ಲದ ಪ್ರಶ್ನೆ. ಇಂತಹ ಯಕಃಶ್ಚಿತ್ ಪ್ರಶ್ನೆಯನ್ನು ಇಟ್ಟುಕೊಂಡು, ಹೋಗಿ ಹೋಗಿ ಕತ್ತೆಯೊಂದಿಗೆ ಜಗಳವಾಡುತ್ತಾ ಸಮಯ ಹಾಳು ಮಾಡುತ್ತಿದ್ದೀಯಾ, ಅದೂ ಅಲ್ಲದೆ ಆ ವಾದವನ್ನು ನನ್ನ ಬಳಿಗೆ ಎಳೆತಂದು ನನ್ನ ಕ್ಷಣಗಳನ್ನು ಸವೆಸಿದೆಯಲ್ಲಾ, ಇದೆಲ್ಲಾ ನಿನ್ನಂತಹ ಧೀರ ಬುದ್ಧಿ ಜೀವಿಗಳಿಗೆ ತಕ್ಕುದಾದುದಲ್ಲ. ಅದಕ್ಕೇ ಈ ಶಿಕ್ಷೆ, ಇನ್ನೊಮ್ಮೆ ಇಂತಹ ಅಚಾತುರ್ಯ ಘಟಿಸಕೂಡದು, ಎಚ್ಚರಿಕೆ!” ಎಂದು ಉತ್ತರಿಸಿ, ಸಿಂಹ ಘರ್ಜಿಸಿತು.
ಕಟುಸತ್ಯ ಅಥವಾ ವಾಸ್ತವದ ಬಗ್ಗೆ ಕಾಳಜಿ ಇರದ ಮೂರ್ಖರೊಂದಿಗೆ ವಾದಮಾಡುವುದು ಅತ್ಯಂತ ಕೆಟ್ಟದ್ದು. ಅದರಿಂದ ಅಮೂಲ್ಯ ಸಮಯ ವ್ಯರ್ಥವಾಗುವುದು. ಆ ಮೂರ್ಖರಿಗೆ ಸತ್ಯಕ್ಕಿಂತ ಅವರ ನಂಬಿಕೆ ಮತ್ತು ಭ್ರಮೆಗಳ ಗೆಲುವುಗಳ ಬಗ್ಗೆ ಮಾತ್ರ ಒಲವಿರುತ್ತದೆ. ಹಾಗಾಗಿ ಅರ್ಥವಿಲ್ಲದ ವಾದಗಳಿಗಾಗಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಎಷ್ಟೇ ದಾಖಲೆ ಮತ್ತು ಪುರಾವೆಗಳನ್ನು ಪ್ರಸ್ತುತ ಪಡಿಸಿದರೂ, ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿಲ್ಲದ ಜನರಿದ್ದಾರೆ, ಅವರಿಗೆ ತಿಳಿ ಹೇಳುವ ದುಸ್ಸಾಹಸಕ್ಕೆ ಕೈ ಹಾಕಬೇಡಿ.
ಅಹಂಕಾರ, ದ್ವೇಷ ಮತ್ತು ಅಸಮಾಧಾನಗಳಿಂದ ಕುರುಡಾಗಿರುವ ಮೂರ್ಖ ಜನತೆ, ಸರಿಯಾಗಲೊಲ್ಲರು. ತಮ್ಮದೇ ತಪ್ಪಿದ್ದರು ತಾವೇ ಸರಿ ಎಂದು ಬೀಗುವವರ ಮುಂದೆ ನಿಮ್ಮ ಪಾಂಡಿತ್ಯದ ಪ್ರದರ್ಶನ ಅನವಶ್ಯಕ. ಅದುವೇ ಯಶಸ್ಸಿನ ಗುಟ್ಟ. ನಿಮ್ಮ ಶಾಂತಿ ಮತ್ತು ನೆಮ್ಮದಿಗಳು ಅತ್ಯಂತ ಮೌಲ್ಯಯುತವಾದವುಗಳು, ಅವುಗಳಿಗೆ ಧಕ್ಕೆಯಾಗುವುದು ಬೇಡ.
ನೀತಿ :-- ಅಜ್ಞಾನವು ಗಂಟಲು ಹರಿಯುವಂತೆ ಕಿರುಚುತ್ತಿರುವಾಗ, ಬುದ್ಧಿವಂತಿಕೆಯು ಮೌನವಾಗಿರಬೇಕು.
ಒಮ್ಮೆ ವಿಜಯನಗರದ ರಾಜ ಕೃಷ್ಣದೇವರಾಯನ ಆಸ್ಥಾನಕ್ಕೆ ರಾಜವರ್ಮನೆಂಬ ಚಿತ್ರ ಕಲಾಕಾರ ಬಂದು ಮಹಾರಾಜನ ಒಂದು ಸುಂದರವಾದ ಚಿತ್ರವನ್ನು ರಚಿಸಿದ. ಆ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿತು, ಆ ಚಿತ್ರ ನೋಡಿ ರಾಜ ದಂಗಾಗಿ ಹೋದ. ಕಲಾವಿದ ಬಿಡಿಸಿದ ಚಿತ್ರವನ್ನು ನೋಡಿ, ರಾಜ ಸಂತೋಷದಿಂದ ಆ ಚಿತ್ರ ಕಲಾವಿದನನ್ನು ತನ್ನ ಮಂತ್ರಿಯನ್ನಾಗಿ ಮಾಡಿಕೊಂಡ.
ರಾಜ್ಯಾಡಳಿತದ ಬಗೆ ಸ್ವಲ್ಪವೂ ಜ್ಞಾನವಿಲ್ಲದ ಕಲಾವಿದನನ್ನು, ಮಂತ್ರಿಯನ್ನಾಗಿ ಮಾಡಿದ್ದು, ಇತರ ಮಂತ್ರಿಗಳಿಗೂ ಹಾಗೂ ಪ್ರಜೆಗಳಿಗೂ ಇಷ್ಟವಾಗಲಿಲ್ಲ. ಅವನಿಗೆ ರಾಜ್ಯಾಡಳಿತದ ಕೆಲಸದಲ್ಲಿ ಯಾವ ಆಸಕ್ತಿ, ಕೌಶಲ್ಯತೆಯೂ ಇರಲಿಲ್ಲ. ಏನಾದರೂ ಸಮಸ್ಯೆ ಎದುರಾದಾಗ, ಏನೂ ಅರ್ಥವಾಗದೇ, ಏನೂ ಮಾಡಲಾಗದೆ, ಎಲ್ಲರ ಮುಖ ಮುಖ ನೋಡುತ್ತಾ, ಅದಕ್ಕೂ ತನಗೂ ಏನೂ ಸಂಬಂಧವಿಲ್ಲದಂತೆ ಸುಮ್ಮನೆ ಕೂತಿರುತ್ತಿದ್ದ. ಇವನ ಈ ವರ್ತನೆಯಿಂದಾಗಿ ಆಡಳಿತದಲ್ಲಿ ಏರುಪೇರು ಉಂಟಾಗತೊಡಗಿತು. ಕಂಗಾಲಾದ ಪ್ರಜೆಗಳು, ತೆನ್ನಾಲಿ ರಾಮಕೃಷ್ಣನ ಬಳಿಗೆ, ಹೋಗಿ ಇವನ ವಿಚಾರವನ್ನು ತಿಳಿಸಿ, ಇದಕ್ಕೆ ನೀವೇ ಏನಾದರೂ ಪರಿಹಾರ ಸೂಚಿಸಿ, ಈ ಕಲಾವಿದನನ್ನು ಮಂತ್ರಿ ಸ್ಥಾನದಿಂದ ಹೇಗಾದರೂ ಇಳಿಸಬೇಕೆಂದು ಕೇಳಿಕೊಂಡರು. ರಾಮಕೃಷ್ಣನು ಅವರಿಗೆಲ್ಲಾ, ಏನೂ ಯೋಚಿಸಬೇಡಿ ಸ್ವಲ್ಪ ದಿನದಲ್ಲಿ ಎಲ್ಲವೂ ಸರಿ ಹೋಗುವುದು, ನೀವೆಲ್ಲಾ ಸಧ್ಯಕ್ಕೆ ಇಲ್ಲಿಂದ ಹೊರಡಿ ಎಂದು ಹೇಳಿ ಅವರನ್ನೆಲ್ಲಾ ಕಳುಹಿಸಿದ.
ಸ್ವಲ್ಪ ದಿನಗಳ ನಂತರ, ತೆನ್ನಾಲಿ ರಾಮಕೃಷ್ಣನು, ರಾಜನನ್ನು ಹಾಗೂ ಅವನ ಪರಿವಾರದವರನ್ನೂ ತನ್ನ ಮನೆಗೆ ಔತಣಕ್ಕೆ ಕರೆದನು. ಜೊತೆಯಲ್ಲಿ , ಚಿತ್ರ ಕಲಾವಿದ, ಹೊಸ ಮಂತ್ರಿಯನ್ನೂ ಔತಣಕ್ಕೆ ಆಹ್ವಾನಿಸಿ, ತನಗೆ ಪರಿಚಯವಿದ್ದ ಬಡಗಿಯೊಬ್ಬನ ಕೈಲಿ ಅಡಿಗೆ ಮಾಡಿಸಿದ. ಇವನು ಹೇಳಿದ ಸಮಯಕ್ಕೆ ಸರಿಯಾಗಿ, ರಾಜ ಹಾಗೂ ಅವನ ಪರಿವಾರದವರೂ, ಕಲಾವಿದ ಮಂತ್ರಿಯೂ ಊಟಕ್ಕೆ ಬಂದರು.
ಎಲ್ಲರೂ ಊಟಕ್ಕೆ ಕುಳಿತರು. ಸ್ವತಹ ರಾಮಕೃಷ್ಣನೇ ಎಲ್ಲರಿಗೂ ಊಟ ಬಡಿಸತೊಡಗಿದ. ರಾಮಕೃಷ್ಣ ಎಲ್ಲರಿಗೂ ಸಾವಕಾಶವಾಗಿ ಊಟ ಮಾಡಿರೆಂದು ಉಪಚಾರ ಮಾಡಿದ. ಬಾಯಲ್ಲಿ ಇನ್ನೂ ಒಂದು ತುತ್ತು ಕೂಡಾ ಇಳಿದಿಲ್ಲ, ಅಷ್ಟರಲ್ಲಿ ಎಲ್ಲರೂ, ಬಿಕ್ಕಳಿಸುತ್ತಾ ನೀರು ನೀರು ಎಂದು ಕೂಗಾಡಿದರು. ಅಡಿಗೆ ಅಷ್ಟು ಖಾರವಾಗಿ ಕೆಟ್ಟದಾಗಿತ್ತು. ರಾಜನಿಗೆ ಬಹಳವಾಗಿ ಸಿಟ್ಟು ಬಂದು, ರಾಮಕೃಷ್ಣ! ಇದೇನಿದು? ನೀನು ನಮ್ಮನ್ನೆಲ್ಲಾ ಅವಮಾನಿಸಲಿಂದೇ, ಊಟಕ್ಕೆ ಕರೆದಿದ್ದಾ? ನಮ್ಮನ್ನೆಲ್ಲಾ ಊಟಕ್ಕೆ ಕರೆದು, ಅಡಿಗೆ ಮಾಡಲು ಬಾರದವನ ಕೈಲಿ ಅಡಿಗೆ ಮಾಡಿಸಿ, ಬೇಕೆಂದೇ ಅವಮಾನ ಮಾಡುತ್ತಿರುವೆಯಾ? ಎಷ್ಟು ಧೈರ್ಯ ನಿನಗೆ? ಈ ಅಡಿಗೆ ಮಾಡಿದ್ದು ಯಾರು? ಎಂದು ಕೂಗಿದ ರಾಜ.
ರಾಮಕೃಷ್ಣ ಬಡಗಿಯನ್ನು ಕರೆದು ಅವನತ್ತ ಕೈ ತೋರಿಸಿ, ಪ್ರಭೂ, ಇಂದಿನ ಅಡಿಗೆ ಮಾಡಿದ ವ್ಯಕ್ತಿ ಈತನೇ ಎಂದ. ಅವನನ್ನು ನೋಡಿ, ರಾಜನಿಗೆ ಈಗ ಸ್ವಲ್ಪ ನಗು ಬಂದಿತು, ಅವನು ನಗುತ್ತಾ, ಅಡುಗೆ ಮಾಡಿಕೊಡಲು ನಿನಗೆ ಬೇರೆ ಯಾರೂ ಸಿಗಲಿಲ್ಲವೇ? ಇವನೊಬ್ಬ ಮರಗೆಲಸದವ. ಅವನ ವೃತ್ತಿ , ಮರಗೆಲಸ ಮಾಡುವುದು, ಅದು ಬಿಟ್ಟು, ಅವನಿಂದ ರುಚಿಯಾಗಿ ಅಡಿಗೆ ಮಾಡಲು ಸಾಧ್ಯವೇ? ನೀನು ಮಹಾ ಬುದ್ಧಿವಂತನೆಂದು ನಾನು ತಿಳಿದಿದ್ದೆ ಎಂದ.
ಅದು ಯಾಕಾಗಬಾರದು ಪ್ರಭೂ? ರಾಜ್ಯದ ಆಡಳಿತದ ಬಗ್ಗೆ ಏನೂ ಅರಿಯದ, ಒಬ್ಬ ಚಿತ್ರಕಲಾವಿದ, ರಾಜ್ಯಕ್ಕೆ ಮಂತ್ರಿಯಾಗಬಹುದು! ಆದರೆ ಒಬ್ಬ ಬಡಗಿ, ಏಕೆ ಅಡಿಗೆ ಮಾಡಬಾರದು? ಎಂದು ಕೇಳಿದ ರಾಮಕೃಷ್ಣ. ತಕ್ಷಣ ಕೃಷ್ಣದೇವರಾಯನಿಗೆ, ರಾಮಕೃಷ್ಣನ ಕುಚೋದ್ಯ ಅರ್ಥವಾಯಿತು, ತನ್ನ ದಡ್ಡತನಕ್ಕೆ ಅವನಿಗೆ ನಾಚಿಕೆಯಾಯಿತು.
ರಾಜನ ಜೊತೆಗೆ, ಊಟಕ್ಕೆಂದು ಬಂದಿದ್ದ ಕಲಾವಿದ ಮಂತ್ರಿ ನಾಚಿಕೆಯಿಂದ ತಲೆತಗ್ಗಿಸಿದ. ಮುಂದೆ ಆತ, ತನ್ನ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟು, ಚಿತ್ರ ಕಲಾವಿದನಾಗಿಯೇ ಮುಂದುವರೆದ.
ನೀತಿ :-- ಯಾರಿಗೆ ಯಾವ ಯಾವ ಕೆಲಸ ಗೊತ್ತಿದೆಯೋ, ಅದನ್ನೇ ಮಾಡಬೇಕು. ಅದನ್ನು ಬಿಟ್ಟು ಗೊತ್ತಿಲ್ಲದ ಕೆಲಸಕ್ಕೆ ಎಂದೂ ಕೂಡಾ ಕೈಹಾಕಬಾರದು.
ರಾಜ ವಿಕ್ರಮಾದಿತ್ಯ ಒಮ್ಮೆ ತನ್ನ ಜನ್ಮ ಕುಂಡಲಿಯನ್ನು ಓದುತ್ತಾ ಕುಳಿತಾಗ ಒಂದು ಅನುಮಾನ ಉಂಟಾಯಿತು. ನಾನು ಹುಟ್ಟಿದ ದಿನವೇ ಅನೇಕರು ಈ ರಾಜ್ಯದಲ್ಲಿ ಹುಟ್ಟಿರುತ್ತಾರೆ ಆದರೆ ಅವರೆಲ್ಲ ರಾಜರಾಗಲಿಲ್ಲ ನಾನೇಕೆ ರಾಜನಾದೆ? ದೊಡ್ಡ ಸ್ಥಾನ ನನಗೇ ಯಾಕೆ ದಕ್ಕಿದೆ???
ಮರುದಿನ ಇದೇ ಪ್ರಶ್ನೆಯನ್ನು ಸಭೆಯಲ್ಲಿ ಪಂಡಿತರ ಮಂದಿಟ್ಟಾಗ ಅವರ ಯಾವ ಸಮಾಧಾನವು ಸರಿಯೆನಿಸಲಿಲ್ಲ ಕೊನೆಯಲ್ಲಿ ವೃದ್ಧ ಪಂಡಿತನೊಬ್ಬನು ರಾಜರೇ ಈ ನಗರದ ಪೂರ್ವ ದಿಕ್ಕಿನಲ್ಲಿ ಊರ ಹೊರಗಿನ ಅಡವಿಯೊಂದರಲ್ಲಿ ಸನ್ಯಾಸಿ ಓರ್ವನು ಇರುವನು ಅವನನ್ನು ಭೇಟಿಯಾದರೆ ನಿಮ್ಮ ಪ್ರಶ್ನೆಗೆ ಉತ್ತರ ಸಿಗಬಹುದು ಎಂದನು!
ರಾಜನು ಅಲ್ಲಿಗೆ ಹೊರಟಾಗ ಆ ಸನ್ಯಾಸಿಯು ಇದ್ದಿಲು ತಿನ್ನುತ್ತಿದ್ದನು ಅದನ್ನು ನೋಡಿ ರಾಜನು ಆಶ್ಚರ್ಯ ಪಟ್ಟು ತನ್ನ ಪ್ರಶ್ನೆಯನ್ನು ಅವನ ಮುಂದೆ ಇಟ್ಟಾಗ ಆ ಸನ್ಯಾಸಿ ಇಲ್ಲಿಂದ ನಾಲ್ಕು ಮೈಲು ದೂರ ಕ್ರಮಿಸಿದರೆ ಇಂಥಹುದೇ ಒಂದು ಜಾಗದಲ್ಲಿ ಮತ್ತೊಬ್ಬ ಸನ್ಯಾಸಿ ಇರುವನು ಅವನನ್ನು ಭೇಟಿಯಾಗಿರಿ ಎನ್ನುವನು ರಾಜನು ಅಲ್ಲಿಗೆ ಹೋದಾಗ ಆ ಸನ್ಯಾಸಿ ಮಣ್ಣು ತಿನ್ನುತ್ತಿದ್ದನು ರಾಜನಿಗೆ ಒಂದು ತರಹದ ಇರಿಸು ಮುರಿಸು ಉಂಟಾಯಿತು!.
ಆದರೂ ವಿಧಿ ಇಲ್ಲದೆ ತನ್ನ ಪ್ರಶ್ನೆ ಅವನ ಮುಂದಿಟ್ಟ. ಆಗ ಆ ಸನ್ಯಾಸಿ ಗಟ್ಟಿಯಾಗಿ ಅರಚಾಡುತ್ತಾ ಇಲ್ಲಿಂದ ಹೋಗೆಂದು ಕೋಪಗೊಂಡನು.! ರಾಜನಿಗೂ ಕೋಪ ಬಂದರೂ ಆತ ಸನ್ಯಾಸಿಯಾದ್ದರಿಂದ ಏನೂ ಅನ್ನಲಾರದೆ ತಿರುಗಿ ವಾಪಸು ಹೋಗುತ್ತಿದ್ದಾಗ, ಆ ಸನ್ಯಾಸಿಯೇ ಹೀಗೆ ಹೇಳುವನು- ಇದೇ ದಾರಿಯಲ್ಲಿ ಮುಂದೆ ಸಾಗಿದರೆ ಒಂದು ಗ್ರಾಮದಲ್ಲಿ ಸಾಯಲು ಸಿದ್ಧನಾಗಿರುವ ಒಬ್ಬ ಬಾಲಕನಿರುವನು ಕೂಡಲೇ ಹೋಗಿ ಅವನನ್ನು ಕಾಣಿರಿ ಎಂದು ಹೇಳುವನು!, ರಾಜನಿಗೆ ಅರ್ಥವಾಗದೆ ಅಯೋಮಯವೆನಿಸಿತು ಆದರೂ ಅವರು ಹೇಳಿದಂತೆ ಮುಂದುವರೆದು ಆ ಗ್ರಾಮ ತಲುಪುತ್ತಾನೆ ಅಲ್ಲಿ ಸಾಯಲು ಸಿದ್ದನಾಗಿರುವ ಆ ಬಾಲಕನನ್ನು ಭೇಟಿಯಾಗಿ ತನ್ನ ಪ್ರಶ್ನೆ ಅವನ ಮುಂದಿಡುತ್ತಾನೆ ಆಗ ಅವನು ಹೇಳುತ್ತಾನೆ- ಮಹಾರಾಜರೇ ಕಳೆದ ಜನ್ಮದಲ್ಲಿ ನಾಲ್ವರು ಮಿತ್ರರು ಒಂದು ರಾತ್ರಿ ಅಡವಿಯಲ್ಲಿ ಸಂಚರಿಸುವಾಗ ದಾರಿ ತಪ್ಪಿಸಿಕೊಳ್ಳುತ್ತಾರೆ. ಹಸಿವಾದಾಗ ಅವರಲ್ಲಿರುವ ರೊಟ್ಟಿಗಳನ್ನು ತಿನ್ನಲೆಂದು ದೊಡ್ಡ ಮರವೊಂದರ ಕೆಳಗೆ ಕುಳಿತುಕೊಳ್ಳುತ್ತಾರೆ. ಇನ್ನೇನು ರೊಟ್ಟಿ ತಿನ್ನಬೇಕೆನ್ನುವಷ್ಟರಲ್ಲಿ ತುಂಬಾ ಹಸಿದು ನೀರಸವಾಗಿದ್ದ ವೃದ್ಧನೊಬ್ಬನು ತನಗೂ ಸ್ವಲ್ಪ ತಿನ್ನಲು ಆಹಾರ ಕೊಡುವಂತೆ ಕೇಳಿದಾಗ ಆ ನಾಲ್ವರಲ್ಲಿ ಒಬ್ಬನು ಕೋಪದಿಂದ- ನಿನಗೆ ಕೊಟ್ಟರೆ ನಾನೇನು ಇದ್ದಿಲು ತಿನ್ನುವುದಾ ಎಂದು ಗದರಿ ಕೊಳ್ಳುತ್ತಾನೆ. ಇನ್ನೊಬ್ಬನು ನಾನು ನಿನಗೆ ರೊಟ್ಟಿ ಕೊಟ್ಟರೆ ನಾನೇನು ಮಣ್ಣು ತಿನ್ನುವುದಾ ಎಂದು ವ್ಯಂಗ್ಯವಾಡುತ್ತಾನೆ. ಮೂರನೆಯವನು ರೊಟ್ಟಿ ತಿನ್ನದಿದ್ದರೆ ಈ ರಾತ್ರಿಯೇ ಸತ್ತು ಬಿಡುವೆಯಾ ಹೇಗೆ ಎಂದು ನೀಚವಾಗಿ ಹಾಸ್ಯವಾಡುತ್ತಾನೆ. ಆದರೆ ಉಳಿದ ನಾಲ್ಕನೆಯವನು ಮಾತ್ರ- ತಾತ ನೀವು ಹಸಿದು ಬಹಳ ನೀರಸದಿಂದುರುವಿರಿ, ತಗೊಳ್ಳಿ ಈ ರೊಟ್ಟಿ ತಿನ್ನಿ ಎಂದು ತನ್ನ ಪಾಲಿನ ರೊಟ್ಟಿಯನ್ನು ಅವನಿಗೆ ಕೊಡುತ್ತಾನೆ.
ರಾಜರೇ ಆ ನಾಲ್ಕನೇ ವ್ಯಕ್ತಿ ನೀವೇ ಎಂದು ಮಹಾರಾಜರಿಗೆ ತಿಳಿಸುತ್ತಾನೆ. ಇದನ್ನು ಕೇಳಿದ ರಾಜನಿಗೆ ದಿಗ್ಭ್ರಮೆಯಾಗುತ್ತದೆ.
ರಾಜನೇ ನಿನ್ನ ಪುಣ್ಯದಿಂದ ನೀನು ರಾಜನಾಗಿ ಜನಿಸಿರುವೆ ಅನವಸರವಾದ ತರ್ಕ, ಮೀಮಾಂಸೆಗಳೊಡನೆ ಕಾಲ ವೃಥಾ ಮಾಡದೆ ಪ್ರಜೆಗಳನ್ನು ಮಕ್ಕಳಂತೆ ಪರಿಪಾಲಿಸು ಎಂದು ಕಣ್ಮುಚ್ಚುವನು
ಮಿತ್ರರೇ ಈ ಕಥೆಯ ಸಾರಾಂಶ ಇಷ್ಟೇ-- ದಾನ ಸಂಪತ್ತಿದ್ದಂತೆ, ನಮಗಿರುವುದರಲ್ಲಿ ಸ್ವಲ್ಪ ಪರರಿಗೆ ಹಂಚಿ- ಪ್ರತಿಫಲವಾಗಿ ಅದು ಪುಣ್ಯವನ್ನು ನೀಡುತ್ತದೆ, ಹಾಗೆಯೇ ಅಧರ್ಮವೆಂಬುದು ಸಾಲ ವಿದ್ದಂತ ಪ್ರತಿಯಾಗಿ ಬಡ್ಡಿ ಸಹ ಅದನ್ನು ನಾವೇ ತೀರಿಸಬೇಕಾಗಬಹುದು- ನೆನಪಿಡಿ!!!!
ಒಮ್ಮೆ ಸಂತನೊಬ್ಬ ಒಂದು ಪಟ್ಟಣಕ್ಕೆ ಬಂದ. ಅಲ್ಲಿ ಕೆಲವು ಜನರು ಅಳುತ್ತಾ, ಬಹಳ ದುಃಖದಿಂದ ಇದ್ದರು. ಅಷ್ಟೊಂದು ಜನ ದುಃಖದಿಂದ ಇರುವುದನ್ನು ಅವರು ಎಂದೂ ನೋಡಿರಲೇ ಇಲ್ಲ, ಬಹಳ ದುಃಖಕರವಾದ ಘಟನೆ ಏನೂ ಜರುಗಿರಬೇಕೆಂದುಕೊಂಡು, ಏನಾಯ್ತು, ಎಲ್ಲರೂ ಯಾಕಿಷ್ಟು ದುಃಖದಲ್ಲಿದ್ದೀರಾ?, ಏನು ತೊಂದರೆ? ಎಂದು ಕೇಳಿದ.
ಆಗ ಆ ಗುಂಪಿನ ಜನರು, "ನಾವೆಲ್ಲ ನರಕದ ಭಯದಿಂದ ನಡುಗುತ್ತಿದ್ದೇವೆ. ಅದರಿಂದ ಬಿಡುಗಡೆ ಆಗುವುದು ಹೇಗೆ, ಎಂಬ ಭಯದಿಂದ ಅಳುತ್ತಿದ್ದೇವೆ" ಎಂದು ದುಃಖಕ್ಕೆ ಕಾರಣ ಹೇಳುತ್ತ ಇದಕ್ಕೆ ಪರಿಹಾರ ಕಂಡುಕೊಳ್ಳುವವರೆಗೂ, ನಮಗ್ಯಾರಿಗೂ ನಿದ್ರೆಯೂ ಬಾರದು, ಶಾಂತಿ ನೆಮ್ಮದಿಯಿಂದ ಇರಲೂ ಸಾಧ್ಯವಿಲ್ಲ ಎಂದರು.
ಸಂತ ಮೌನದಿಂದಲೇ ಮುನ್ನಡೆದ. ಆ ಗುಂಪನ್ನು ಬಿಟ್ಟು ಅಲ್ಲಿಂದ ಸ್ವಲ್ಪ ದೂರದಲ್ಲಿ, ಇನ್ನೊಂದು ಪಟ್ಟಣದಲ್ಲಿ, ಒಂದು ಮರದ ಕೆಳಗೆ ಜನರ ಗುಂಪೊಂದು ಆತಂಕದಿಂದ ಚಿಂತಾಕ್ರಾಂತರಾಗಿ ಕುಳಿತಿರುವುದನ್ನು ಕಂಡರು. ಸಂತ ಏನು ಸಮಾಚಾರ? ಈ ಪಟ್ಟಣಕ್ಕೆ ಏನಾಗಿದೆ, ಎಲ್ಲವೂ ಚೆನ್ನಾಗಿರುವಂತೆ ತೋರುತ್ತಿದೆಯಲ್ಲಾ? ನೀವೆಲ್ಲಾ ಹೀಗೇ ಚಿಂತಿಸುತ್ತಾ ಕುಳಿತರೆ ಹುಚ್ಚರಂತಾಗುವಿರಿ, ಏನಾಗಿದೆ ನಿಮಗೆಲ್ಲಾ? ಎಂದು ಕೇಳಿದ.
ನಮಗೇನೂ ಆಗಿಲ್ಲಾ, "ಸ್ವರ್ಗವನ್ನು ಪಡೆದುಕೊಳ್ಳಲು ನಮಗೆ ಆಗುತ್ತದೋ, ಇಲ್ಲವೋ" ಎಂಬ ಭಯ ಮತ್ತು ಆತಂಕ ನಮಗೆಲ್ಲರಿಗೂ ಕಾಡುತ್ತಿದೆ, "ಹೇಗಾದರೂ ಮಾಡಿ, ಅದನ್ನು ನಾವು ಪಡೆಯಲೇಬೇಕು, ಒಂದುವೇಳೆ ಅದನ್ನು ಪಡೆಯಲು ನಮಗೆ ಆಗದಿದ್ದರೆ? ಎಂಬ ಭಯ, ಚಿಂತೆ ನಮ್ಮನ್ನು ಕಾಡುತ್ತಿದೆ" ಎಂದರು.
ಸಂತ, ಇವರಿಗೂ ಏನನ್ನೂ ಹೇಳದೆ ಮೌನದಿಂದ ಅಲ್ಲಿಂದ ಮುಂದೆ ಇನ್ನೊಂದು ಊರನ್ನು ತಲುಪಿ, ಅಲ್ಲಿ ಇನ್ನೊಂದು ಗುಂಪು ಕಂಡ. ಅಲ್ಲಿ ಒಂದಿಷ್ಟು ಜನ, ಒಂದು ತೋಟದಲ್ಲಿ ಹಾಡುತ್ತಾ, ನಲಿಯುತ್ತಾ, ನರ್ತಿಸುತ್ತಾ ಖುಷಿ, ಸಂಭ್ರಮದಿಂದ ಇರುವುದನ್ನು ಕಂಡ. ಸಂತ, "ನೀವಿಲ್ಲಿ ಯಾವ ಹಬ್ಬವನ್ನು ಆಚರಿಸುತ್ತಿದ್ದೀರಿ?" ಎಂದು ಕೇಳಿದ. ಆ ಗುಂಪಿನ ಜನ, "ಅಂತಾ ವಿಶೇಷವೇನೂ ಇಲ್ಲ, ನಮಗೆ ಯಾವ ಅರ್ಹತೆ ಇಲ್ಲದಿದ್ದರೂ, ಆ ಭಗವಂತ ನಮಗೆ ಏನೆಲ್ಲಾ ಕೊಟ್ಟಿರುವನೊ ಅದಕ್ಕೆ ಅವನಿಗೆ ಒಂದು ಧನ್ಯವಾದ, ಕೃತಜ್ಞತೆ ಅರ್ಪಿಸುತ್ತಿದ್ದೇವೆ ಅಷ್ಟೇ" ಎಂದರು.
ಸಂತನಿಗೆ ತುಂಬಾ ಆನಂದವಾಯಿತು. ನಾನು ಕೂಡ ನಿಮ್ಮೊಂದಿಗೆ ಸೇರಿಕೊಳ್ಳಲೇ? ನಿಮ್ಮಂತ ಜನರೊಂದಿಗೆ ಇರುವುದು ನನ್ನ ಸೌಭಾಗ್ಯ ಎಂದ.
ನೀತಿ :-- ಭಯದ ವಾತಾವರಣದಲ್ಲಿ ಬದುಕುವವರು, ಅಥವಾ ದುರಾಸೆಯಿಂದ ಜೀವಿಸುವವರು ಎಂದೂ ಕೂಡಾ ಸಂತೋಷ, ಸಂಭ್ರಮದಿಂದಿರಲು ಸಾಧ್ಯವಿಲ್ಲ. ಎಲ್ಲಿ, ಆನಂದ, ಸಂಭ್ರಮ, ಖುಷಿ ಮತ್ತು ಕೃತಜ್ಞತೆ ಹಾಗೂ ಧನ್ಯತಾ ಭಾವ ಇರುವುದೋ, ಅದುವೇ ಭಗವಂತನ ನಿವಾಸ.
ಒಂದು ಸಣ್ಣ ಊರು. ಆ ಊರು ಸಾಲದ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಒಬ್ಬರಿಗೊಬ್ಬರು ಸಾಲ ಮಾಡಿಕೊಂಡು ಬದುಕುತ್ತಿದ್ದರು. ಹೋಟೆಲ್ ಮಾಲೀಕ ಮಾಂಸದಂಗಡಿಯವನಿಗೆ, ಮಾಂಸದಂಗಡಿಯವನು ರೈತನಿಗೆ, ರೈತ ದೊಡ್ಡ ವ್ಯಕ್ತಿಗೆ, ದೊಡ್ಡ ವ್ಯಕ್ತಿ ವೇಶ್ಯೆಯಿಗೆ, ವೇಶ್ಯೆ ಮತ್ತೆ ಹೋಟೆಲ್ ಮಾಲೀಕನಿಗೆ ಹೀಗೆ ಸಾಲದ ಸರಪಳಿ ಒಂದರ ಮೇಲೊಂದು ಹೆಣೆದುಕೊಂಡಿತ್ತು.
ಒಂದು ದಿನ ಆ ಊರಿಗೆ ಒಬ್ಬ ಯಾತ್ರಿಕ ಬಂದ. ಹೋಟೆಲ್ಗೆ ಬಂದು ಒಂದು ರೂಂ ಬುಕ್ ಮಾಡಲು 500 ರೂಪಾಯಿ ನೋಟು ಕೊಟ್ಟ. ಹೋಟೆಲ್ ಮಾಲೀಕನಿಗೆ ಈ ಹಣ ದೇವದೂತನಂತೆ ಕಂಡಿತು. ತಕ್ಷಣ ಮಾಂಸದಂಗಡಿಯವನ ಬಳಿ ಓಡಿ ತನ್ನ ಸಾಲ ತೀರಿಸಿದ. ಮಾಂಸದಂಗಡಿಯವನೂ ಅಷ್ಟೇ ಖುಷಿಯಿಂದ ರೈತನ ಬಳಿ ಹೋದ. ರೈತ ದೊಡ್ಡ ವ್ಯಕ್ತಿಯ ಬಳಿ ಹೋದ. ದೊಡ್ಡ ವ್ಯಕ್ತಿ ವೇಶ್ಯೆಯ ಬಳಿ ಹೋದ. ವೇಶ್ಯೆ ಮತ್ತೆ ಹೋಟೆಲ್ ಮಾಲೀಕನ ಬಳಿ ಹೋದಳು.
ಹೋಟೆಲ್ ಮಾಲೀಕ ಆ ಹಣವನ್ನು ಜೇಬಿಗೆ ಹಾಕುವ ಮುನ್ನವೇ ಯಾತ್ರಿಕ ಬಂದು, "ಯಾವ ರೂಮೂ ಇಷ್ಟವಾಗಲಿಲ್ಲ, ಹಣ ವಾಪಸ್ ಕೊಡಿ" ಎಂದ. ಹೋಟೆಲ್ ಮಾಲೀಕನಿಗೆ ಆಗ ಏನಾಯಿತು ಎಂದರೆ ಪ್ರಾಣ ಬಂತು ಹೋಯಿತು. ಆದರೆ ಆಗಾಗಲೇ ಊರಿನಲ್ಲಿ ಸಾಲದ ಸರಪಳಿ ಕೊಂಡಿ ಕೊಂಡಿಯಾಗಿ ಕಟ್ಟಿ ಹೋಗಿತ್ತು. ಎಲ್ಲರೂ ತಮ್ಮ ಸಾಲ ತೀರಿಸಿಕೊಂಡು ಸುಖವಾಗಿ ಇದ್ದರು.
ಯಾತ್ರಿಕನ ಆಗಮನ ಅವರಿಗೆ ಅನಿರೀಕ್ಷಿತ ಉಡುಗೊರೆಯಾಗಿತ್ತು. ಆದರೆ ಹೋಟೆಲ್ ಮಾಲೀಕನಿಗೆ ಮಾತ್ರ ಅದು ಒಂದು ದೊಡ್ಡ ಆಘಾತವಾಗಿತ್ತು.
ನೀತಿ :-- ಸಾಲದ ಬಗ್ಗೆ ಜಾಗೃತಿ ಮೂಡಿಸುತ್ತದೆ. ಅತಿಯಾದ ಸಾಲ ಮಾಡುವುದರಿಂದ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ಈ ಕಥೆ ಹೇಳುತ್ತದೆ.