ಹವ್ಯಕ/ಕನ್ನಡ ಸಾಹಿತ್ಯ

"ಎಲ್ಲಿದ್ದರೂ ಇರು, ಎಂತಾದರೂ ಇರು, ಎಂದೆಂದಿಗು ನೀ ಕನ್ನಡಿಗನಾಗಿರು"- ರಾಷ್ಟ್ರ ಕವಿ ಕುವೆಂಪು

(Elliddaru Iru, Entadaru Iru, Endendigu Nee Kannadiganagiru" - the national poet Kuvempu )

Ramesh Hegde (Dallas/Plano, Texas)

***ಹಬ್ಬ-ಹರಿದಿನ***

~ರಮೇಶ ಹೆಗಡೆ, ಡಾಲ್ಲಸ್/ಪ್ಲೇನೋ, ಟೆಕ್ಸಾಸ್

ಹಬ್ಬ-ಹರಿದಿನಗಳಿವು ಸಂಭ್ರಮದ ದಿನಗಳಿವು |

ನಮ್ಮ-ಧರ್ಮದ ಲಾಂಛನಗಳಿಹವು[ನಮ್ಮ-ಧರ್ಮದ ಲಾಂಛನಗಳಿಹವು] ಕಂದಮ್ಮ

ವೈದಿಕ ಧರ್ಮದ ರತ್ನಗಳಿವು ||ಪ||

ನವ ವರುಷ ಬಂದಿಹುದು, ಚೈತ್ರವಾಗಮಿಸಿಹುದು |

ಯುಗ-ಯುಗಾದಿ ಮರಳಿಹುದು...[ಯುಗ-ಯುಗಾದಿ ಮರಳಿಹುದು]ಕಂದಮ್ಮ

ಮರೆಯದಿರು ಬೇವು-ಬೆಲ್ಲವ ಮೆಲುವುದು ||೧||

ಕಿರೀಟಾಭರಣ ರಾಮನವಮಿಯ ಹಬ್ಬ|

"ರಾಮ ಜಯ-ಜಯ" ಶ್ರೀ ರಾಮ...["ರಾಮ ಜಯ-ಜಯ" ಶ್ರೀ ರಾಮ]ಕಂದಮ್ಮ

ಆದರ್ಶ-ಪುರುಷನ ನೆನೆಸೋಣ ||೨||

ಚೈತ್ರ-ಪೂರ್ಣಿಮೆಯಂದು ಹನೂಮಾನ್-ಜಯಂತಿಯು |

ರಾಮ ಕೀರ್ತನೆಯಲ್ಲಿ ಹನುಮನಿಹನು...[ರಾಮ ಕೀರ್ತನೆಯಲ್ಲಿ ಹನುಮನಿಹ]ಕಂದಮ್ಮ

ಬುದ್ಧಿ-ಬಲ-ಯಶ-ಧೈರ್ಯ ನೀಡುತಿಹನು ||೩||

ವೈಶಾಖ ಶುದ್ಧ ತದಿಗೆಯ ಶುಭ-ದಿನವು |

ಪುಣ್ಯದಾ ಅಕ್ಷಯ-ತೃತೀಯವಿದು...[ಪುಣ್ಯದಾ ಅಕ್ಷಯ-ತೃತೀಯವಿದು]ಕಂದಮ್ಮ

ಪರಶುಧರನಂದು ಧರೆಗಿಳಿದಿಹ ||೪||

ಆದಿ ಶಂಕರರ ಪುಣ್ಯ ಜಯಂತಿಯದು |

ವೈಶಾಖ ಶುಕ್ಲ ಪಂಚಮಿಯು...[ವೈಶಾಖ ಶುಕ್ಲ ಪಂಚಮಿಯು]ಕಂದಮ್ಮ

ಮಂಗಲದ-ಕಾರ್ಯಕ್ಕೆ ಶುಭ ದಿನವದು ||೫||

ಜ್ಯೇಷ್ಟ ಮಾಸದಿ ಹಬ್ಬಗಳಿಗೆಲ್ಲ ಬಿಡುವಿಹುದು |

ಬೇಸಿಗೆಯ ಬಿಗುಮಾನ ಏರಿಹುದು...[ಬೇಸಿಗೆಯ ಬಿಗುಮಾನ ಏರಿಹುದು]ಕಂದಮ್ಮ

ಮುಂಬರುವ ಹಬ್ಬಗಳ ನಿರೀಕ್ಷೆಯಲಿ ||೬||

ಗುರುಗಭಿವಂದಿಸು ಆಷಾಢ ಹುಣ್ಣಿಮೆಯು |

ಹೆಸರಾಂತ "ಗುರು ಪೂರ್ಣಿಮಾ" ಎಂಬುದು...[ಹೆಸರಾಂತ ಗುರು ಪೂರ್ಣಿಮಾ ಎಂದು]ಕಂದಮ್ಮ

ಗುರುವಿನುಪದೇಶವನು ಸ್ಮರಿಸುವುದು ||೭||

ಭೀಮನಮಾವಾಸ್ಯೆಯು, ಕೊಡೆ ಅಮಾವಾಸ್ಯೆಯು |

ಆಷಾಢ ಶ್ರೇಯ ಅಮಾವಾಸ್ಯೆಯು...[ಆಷಾಢ ಶ್ರೇಯ ಅಮಾವಾಸ್ಯೆ]ಕಂದಮ್ಮ

ಅಳಿಯಂದಿರಿಗೆ ಭೂರಿ-ಭೋಜನವು ||೮||

ಶ್ರಾವಣ ಶುಕ್ಲದಿ ನಾಗ-ಪಂಚಮಿ ಹಬ್ಬ|

ನಾಗವೇಣಿಯರ ನಗು ಮೊಗವು...[ನಾಗವೇಣಿಯರ ನಗು ಮೊಗವು]ಕಂದಮ್ಮ

ನಾಡ-ನಾಗಪ್ಪಗೆ ಹಾಲೆರೆವೆವು ||೯||

ನೂಲು ಹುಣ್ಣಿವೆ, ನಾರಳೀ ಪೂರ್ಣಿಮಾ ಎಂದು |

ಶ್ರಾವಣದ ಪೂರ್ಣಿಮೆಯು ಪ್ರಖ್ಯಾತವು...[ಶ್ರಾವಣದ ಪೂರ್ಣಿಮೆಯು ಪ್ರಖ್ಯಾತ]ಕಂದಮ್ಮ

ಗಂಡಸರ ಏಕೈಕ ಹಬ್ಬವಿಹುದು ||೧೦||

ಗೋಕುಲಾಷ್ಟಮಿ ಎಂಬ ಖ್ಯಾತಿಯಲಿ ಈ ಹಬ್ಬ|

ಶ್ರಾವಣ ಬಹುಳ ಅಷ್ಟಮಿಯ ದಿನದಿ...[ಶ್ರಾವಣ ಬಹುಳ ಅಷ್ಟಮಿಯು]ಕಂದಮ್ಮ

ಕೃಷ್ಣನಿಗೆ ಬೆಣ್ಣೆಯನು ತಿನ್ನಿಸುತಲಿ ||೧೧||

ಶ್ರಾವಣದ ಅಮಾವಾಸ್ಯೆ ದರ್ಭೆಯ ಅಮಾವಾಸ್ಯೆ |

ಹೋಮ-ಹವನಕೆ ಅಂದು ದರ್ಭೆ-ಕಟ್ಟು...[ಹೋಮ-ಹವನಕೆ ಅಂದು ದರ್ಭೆಯನು]ಕಂದಮ್ಮ

ತಂದು ಪೂಜೆಯ ಮಾಡಿ ಮನೆಲಿಡುವರು ||೧೨||

ಭಾದ್ರಪದ ಶುಕ್ಲದ ಚವತಿಯ ಶುಭ ದಿನದಿ |

ವಿಘ್ನನಾಶಕನ ಆಗಮನವು...[ವಿಘ್ನನಾಶಕನ ಆಗಮನ]ಕಂದಮ್ಮ

ಮುಂದೆ ಹನ್ನೊಂದು ದಿನ ಆಚರಣೆಯು ||೧೩||

ಪಂಚಖಾದ್ಯವು, ಉಂಡೆ, ಅಪ್ಪಾಲು, ಅತಿರಸವು |

ಚಕ್ಕುಲಿ, ಮೋದಕ ತಿಂಡಿಗಳಿವು...[ಚಕ್ಕುಲಿ, ಮೋದಕ ತಿಂಡಿಗಳು]ಕಂದಮ್ಮ

ಇಪ್ಪತ್ತ-ಒಂದು-ಬಗೆ ಕಜ್ಜಾಯವು ||೧೪||

ಸಂಭ್ರಮದ ರಾಷ್ಟ್ರೀಯ ಈ ಗಣೇಶೋತ್ಸವವು |

ಅನಂತ ಚತುರ್ದಶಿಯಲ್ಲಿ ಸಮಾಪ್ತವು...[ಅನಂತ ಚತುರ್ದಶಿಯಲ್ಲಿ ಸಮಾಪ್ತ]ಕಂದಮ್ಮ

ಲೋಕಮಾನ್ಯರ ಐಕ್ಯತೆಯ ಗುರುತಿದು ||೧೫||

ಪಿತೃ-ಪಕ್ಷದಂತ್ಯದಲಿ ಮಹಾಲಯ-ಅಮಾವಾಸ್ಯ |

ಭಾದ್ರಪದ ಮಾಸಕ್ಕೆ ಮಂಗಳವು...[ಭಾದ್ರಪದ ಮಾಸಕ್ಕೆ ಮಂಗಳವು]ಕಂದಮ್ಮ

ಪೂರ್ವಜರಿಗೆಲ್ಲ ತಿಥಿಯೂಟವು ||೧೬||

ನವರಾತ್ರಿ ಉತ್ಸವದಿ ಉಲ್ಲಾಸ ಎಲ್ಲೆಲ್ಲೂ |

ಅಶ್ವಯುಜ ಶುಕ್ಲದ ಸಡಗರವು...[ಅಶ್ವಯುಜ ಶುಕ್ಲದ ಸಡಗರವು]ಕಂದಮ್ಮ

ವಿಜಯದಶಮಿಯ "ದಸರಾ" ನಡೆಯುತಿಹುದು ||೧೭||

ಕಾಳಿ-ಸರಸ್ವತಿ-ಲಕ್ಷ್ಮಿ ಅಲ್ಲಿ ಪೂಜೆಯಕೊಂಡು |

ಭಕ್ತಿಯಲಿ ಭಜಿಸಿದ ಜನಕಿಂದು...[ಭಕ್ತಿಯಲಿ ಭಜಿಸಿದ ಜನಕಿಂದು]ಕಂದಮ್ಮ

ಅಷ್ಟ-ಐಶ್ವರ್ಯಗಳ ಕೊಡಿಸೆಂದು ||೧೮||

ಅಶ್ವಯುಜ ಪೂರ್ಣಿಮವು "ಭೂಮಿ-ಹುಣ್ಣಿವೆ"ಯೆಂದು |

ಭೂಮಿ ಪೂಜೆಯನಿಂದು ಮಾಡುವರು...[ಭೂಮಿ ಪೂಜೆಯನು ಮಾಡುವರು]ಕಂದಮ್ಮ

ಉತ್ಕೃಷ್ಟ ಬೆಳೆಯನು/ಫಲಗಳನು ಬೇಡುವರು ||೧೯||

ದೊಡ್ಡ-ಹಬ್ಬವು ಬಂತು ದೀಪಾವಳೀ ತಂತು |

ಆಶ್ವೀನ ಕೃಷ್ಣದ ಬೆಳಕಾಯಿತು...[ಆಶ್ವೀನ ಕೃಷ್ಣದ ಬೆಳಕಾಯ್ತು]ಕಂದಮ್ಮ

"ದುಷ್ಟ-ಹರ, ಶಿಷ್ಟ-ಜಯ" ಝೇಂಕರಿಸಿತು ||೨೦||

ಗಂಗಾ ಅಷ್ಟಮಿಯಿಂದ ನರಕ-ಚತುರ್ದಶಿ ಕೂಡಿ |

ಬಲಿ ಪಾಡ್ಯಮಿಯೊಳು ಕೊನೆಗೊಂಡು...[ಬಲಿ ಪಾಡ್ಯಮಿಯೊಳು ಕೊನೆಗೊಂಡು]ಕಂದಮ್ಮ

ವಾಮನನ ವಿಖ್ಯಾತಿ ನೀ ನೋಡು ||೨೧||

ಯೋಗ-ನಿದ್ದೆಯೊಳಿಮ್ ಇರುತಿಹನು ನರಹರಿಯು |

ಚಾತುರ್ಮಾಸ್ಯವದು ಮಳೆಗಾಲವು...[ಚಾತುರ್ಮಾಸ್ಯವದು ಮಳೆಗಾಲ]ಕಂದಮ್ಮ

ವ್ರತ-ನಿಯಮಗಳು ಎಲ್ಲ ನಡೆಯುತಿರಲು ||೨೨||

ಕಾರ್ತೀಕ ಶುಕ್ಲದಿ ಎದ್ದಿಹನು ಶ್ರೀವಿಷ್ಣು |

ಪ್ರಭೋದನ-ಏಕಾದಶಿಯ ದಿನದಿ...[ಪ್ರಭೋದನ-ಏಕಾದಶಿಯ ದಿನ]ಕಂದಮ್ಮ

ತುಲಸಿಯೊಳು ವಿವಾಹ ದ್ವಾದಶಿಯಲಿ ||೨೩||

ಮಾರ್ಗಶೀರ್ಷಕೆ ಮೆರುಗು ಗೀತಾ ಜಯಂತಿಯದು |

ಶುಕ್ಲ ಏಕಾದಶಿಯ ಪರ್ವ-ದಿನವು...[ಶುಕ್ಲ ಏಕಾದಶಿಯ ಪರ್ವ-ದಿನ]ಕಂದಮ್ಮ

ಗೀತಾ-ಪಾರಾಯಣದಿ ಮನ ಹಿಗ್ಗಿತು ||೨೪||

ಪುಷ್ಯ ಮಾಸವು ಶೂನ್ಯ-ಮಾಸವದು ಅರಿತುಕೋ |

ಹಬ್ಬದ ಬೆಡಗಿಗೆ/ಸಂಭ್ರಮಕೆ ಅನುವಿಲ್ಲ...[ಹಬ್ಬದ ಸಂಭ್ರಮಕೆ ಅನುವಿಲ್ಲ]ಕಂದಮ್ಮ

ಹರಿಯ ನೆನೆಸಲಿಕೆ ತಡೆಯಿಲ್ಲ ||೨೫||

ಮಾಘದಲಿ ಮಕರ-ಸಂಕ್ರಾಂತಿಯದು ಬಂದಿಹುದು |

ಚಳಿಗಾಲವಿನ್ನೂ ಬಿಟ್ಟಿರದು...[ಚಳಿಗಾಲವಿನ್ನೂ ಬಿಟ್ಟಿರದು]ಕಂದಮ್ಮ

ಮಲೆನಾಡ ಪೈರುಗಳು ಶೋಭಿಸಿಹುದು ||೨೬||

ಮಾಘ ತ್ರಯೋದಶಿಯ ರಾತ್ರಿ ಮಹಾ-ಶಿವರಾತ್ರಿ |

ಸಾಧನೆಗೆ ಉಪವಾಸ ವ್ರತ ಬೇಕು...[ಸಾಧನೆಗೆ ಉಪವಾಸ ವ್ರತ ಬೇಕು]ಕಂದಮ್ಮ

ಜಾಗರಣೆ-ಜಪ ಮಾಡು ಸಾಂಬಶಿವನ ||೨೭||

ಫಾಲ್ಗುಣ ಮಾಸದಿ ಹೋಳಿ-ಹುಣ್ಣಿಮೆಯಾಯ್ತು |

ರಂಗ-ಪಂಚಮಿಯ ದಿನ "ಹೋಳಿ" ಹಬ್ಬ...[ರಂಗ-ಪಂಚಮಿಯ "ಹೋಳಿ"ಯದು]ಕಂದಮ್ಮ

ಮೇಲು-ಕೀಳರಿಮೆಯ ಮರೆತಿರುವೊಲೆ ||೨೮||

ವಿಶು, ಬಿಹು, ಬತುಕಮ್ಮ, ಗಂಗೌರ್, ಶಿಗ್ಮೋ |

ಭೋಗಿ, ಲೋಹ್ರಿ, ಓಣಮ್ ಹಬ್ಬಗಳಿವು...[ಭೋಗಿ, ಲೋಹ್ರಿ, ಓಣಮ್ ಹಬ್ಬಗಳು]ಕಂದಮ್ಮ

ಮತ್ತೆಂಟು ವಿಧದ ಹರಿದಿನಗಳು ||೨೯||

ಮನುಜರೊಂದ್ವರುಷವು ಬೊಮ್ಮನಾ ಒಂದು ದಿನ |

ಉತ್ಥಾನದಿಂದ-ಶಯನದ್ವರೆಗೆ...[ಉತ್ಥಾನದಿಂದ-ಶಯನದ್ವರೆಗೆ]ಕಂದಮ್ಮ

ಈ ಎಲ್ಲ ಹಬ್ಬಗಳು ನಡೆದಾವು ||೩೦||

ಇಣುಕು-ನೋಟವ ನೋಡಿ ಅಣಕವಾಡಲು ಬೇಡ |

ವೈವಿಧ್ಯತೆಯೊಳೇಕತೆಯ ತರಲಿವು...[ವೈವಿಧ್ಯತೆಯೊಳು ಏಕತೆಯು]ಕಂದಮ್ಮ

ವೇದ-ಘೋಷದಿ ಧರ್ಮ ಜಯ-ಘೋಷವು ||೩೧||

ಧರ್ಮವನು ರಕ್ಷಿಸುವ ರಕ್ಷಣೆಯ ಪಡೆವವನು |

ವೇದ ನುಡಿಯುತಿದೆ ನೀ ನೋಡ...[ವೇದ ನುಡಿಯುತಿದೆ ನೀ ನೋಡು]ಕಂದಮ್ಮ

ಹಬ್ಬ-ಹರಿದಿನಗಳನು(ವ್ರತ-ನಿಯಮಗಳನು) ಬಿಡಬೇಡ ||೩೨|


ನಮಸ್ಕಾರ,

ರಮೇಶ ಹೆಗಡೆ