ಸಂಗೀತದ ವೈಜ್ಞಾನಿಕ ಮೀಮಾಂಸೆ 

ಸಂಗೀತದ ವೈಜ್ಞಾನಿಕ ಮೀಮಾಂಸೆ

 

ಮನೋಹರ ಗಂಥಮಾಲೆ ಧಾರವಾಡದವರು ಪ್ರಕಟಿಸಿರುವ "ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ" ಎಂಬ ಪಾಂಡಿತ್ಯಪೂರ್ಣ ಗ್ರಂಥದಲ್ಲಿ ಲೇಖಕ ಗಿರಿಯವರು, "ಸಾಹಿತ್ಯವನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿ ಅದರ ರಸಸ್ವಾದವನ್ನು ಹಾಳುಮಾಡಿಕೊಳ್ಳುವುದು ವಿವೇಕವೆ?" ಎಂಬ ತಾತ್ವಿಕ ಪ್ರಶ್ನೆಯನ್ನು ಎತ್ತಿಕೊಂಡು, ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಲಾಭವೇ ಹೆಚ್ಚು ಎಂಬ ನಿಲುವು ತಾಳುತ್ತಾರೆ.  ಬದುಕಿನ ಎಲ್ಲಾ ಸಂಗತಿಗಳನ್ನು ಹರಿತವಾದ ವೈಜ್ಞಾನಿಕ ಸಲಕರಣೆಗಳಿಂದ ಚಿಕಿತ್ಸೆಗೆ ಒಳಪಡಿಸುವುದರ ಕಟು ವಿರೋಧಿಯಾಗಿದ್ದ ಶಂಕರ ಮೊಕಾಶಿ ಪುಣೇಕರರು ಗಿರಿಯವರ ಈ ಪುಸ್ತಕವನ್ನು ಒಪ್ಪುವ ಸಾಧ್ಯತೆ ಕಡಿಮೆ. ಸಾಹಿತ್ಯದ ಕಥೆಯೇ ಹೀಗಾದರೆ, ಇನ್ನು ಸಂಗೀತದ ವೈಜ್ಞಾನಿಕ ವಿಷ್ಲೇಷಣೆಗೆ ಬಂದಾಗ ಸಂಗೀತದ ಆರಾಧಕರೂ, ಭಾರತೀಯ ರಸಸಿದ್ಧಾಂತದ ನೆಲೆಯಲ್ಲಿ ಮಾತ್ರ ಸಂಗೀತವನ್ನು ನೋಡಬೇಕು, ಆಲಿಸಬೇಕು ಎಂದು ಭಾವಿಸಿದ್ದ ಪುಣೇಕರರೂ ಮತ್ತು ಆ ಮನೋಧರ್ಮದ ರಸಿಕರು ಸಂಗೀತದ ಬಗೆಗೆ ನಡೆಯುತ್ತಿರುವ ಹಲವಾರು ಬಗೆಯ ವೈಜ್ಞಾನಿಕ ಸಂಶೋಧನೆಗಳನ್ನು, ತಂತ್ರಜ್ಞಾನದ ಆವಿಷ್ಕಾರಗಳನ್ನು ಸುಲಭವಾಗಿ ಒಪ್ಪಲಾರರು. ಆದರೆ ಸಂಗೀತದ ವೈಜ್ಞಾನಿಕ ಅರಿವು ನಮ್ಮ ರಸಾನುಭವವನ್ನೇನೂ ಅಷ್ಟಾಗಿ ಬಾಧಿಸಬೇಕಿಲ್ಲ ಎಂಬುದು ಈ ಲೇಖನದ ನಿಲುವು.  

 

 

ಸ್ವರ, ಶೃತಿ ಮತ್ತು ಸಪ್ತಕ: ಪ್ರಾಥಮಿಕ ಜ್ಞಾನ

 

 

ಸಂಗೀತದ ಮೂಲದಲ್ಲಿರುವುದು ಸ್ವರ; ವೈಜ್ಞಾನಿಕ ನೆಲೆಯಲ್ಲಿ ಅದೊಂದು ತರಂಗ, ಕಂಠದ ನರಗಳನ್ನೋ, ವಾದ್ಯದ ತಂತಿಯನ್ನೋ ಮೀಟಿದಾಗ ಗಾಳಿಯಲ್ಲಿ ಹುಟ್ಟುವ ಅಲೆಗಳ ಪ್ರವಾಹ. ಒಂದು ಸೆಕಂಡಿನಲ್ಲಿ ಎಷ್ಟು ಉಬ್ಬರ-ಇಳಿತದ ಅಲೆಗಳಿರುತ್ತವೆ ಎನ್ನುವುದರ ಅಳತೆಯನ್ನು ತರಂಗ-ಮಾಪಕ ಅಥವಾ ಫ್ರಿಕ್ವೆನ್ಸಿ ಎನ್ನುತ್ತೇವೆ.  ಸ್ವರಗಳಲ್ಲಿ ಸಾಮನ್ಯವಾಗಿ ತರಂಗಗಳು ಮತ್ತು ಉಪತರಂಗಗಳು ಅಡಗಿರುತ್ತವೆ. ಆದರೆ ಶುದ್ಧಸ್ವರಗಳಲ್ಲಿ ಒಂದೇ ಅಳತೆಯ ತರಂಗದ ಪ್ರಮಾಣ ಅಧಿಕವಾಗಿದ್ದು ಉಪತರಂಗಗಳ ಪ್ರಮಾಣ ನಗಣ್ಯವಾಗಿತ್ತದೆ. ಎಲ್ಲರಿಗೂ ತಿಳಿದಂತೆ ಏಳು ಸ್ವರಗಳನ್ನು ಅತಿಶುದ್ಧ ಸ್ವರಗಳೆಂದೂ ಇವುಗಳ ಮಧ್ಯದ ಇನ್ನೂ ಐದು ಸ್ವರ ಸೇರಿಸಿ ಒಟ್ಟೂ ೧೨ ಸ್ವರಗಳನ್ನು ಶುದ್ಧವೆಂದು ಮಾನ್ಯಮಾಡಲಾಗಿದೆ. 



 

ಈ ಸ್ವರಗಳನ್ನು ಮಾಧುರ್ಯದ ಬೇರೆಬೇರೆ ಸ್ತರಗಳಲ್ಲಿ ಹೊಮ್ಮಿಸಬಹುದು ಮತ್ತು ಈ ಸ್ತರವನ್ನೇ ನಾವು ಶೃತಿ ಅಥವಾ ಪಿಚ್ ಎನ್ನುತ್ತೇವೆ ಮತ್ತು ಏಳು ಸ್ವರಗಳನ್ನು ಒಂದು ಸ್ತರದಲ್ಲಿ ನುಡಿಸಿದಾಗ ಅದೊಂದು ಸಪ್ತಕ ಅಥವಾ ಆಕ್ಟೇವ್ ಎನ್ನುತ್ತೇವೆ. ಪಾಶ್ಚಾತ್ಯರು ಪಿಯಾನೋದ ಮಧ್ಯದ ಕೀಯನ್ನು  middle C ಎಂದು ಮಾನ್ಯಮಾಡಿದ್ದು ಅದು ನಮ್ಮ ಭಾರತೀಯ ಹಾರ್ಮೋನಿಯಂನ ಮಧ್ಯ ಸಪ್ತಕದ ಷಡ್ಜಕ್ಕೆ ಹತ್ತಿರವಾಗಿದೆ. ಇದರ ತರಂಗ ಮಾಪನವು 261 Hz ಆಗಿದೆ.

 

 

ಈ ಸ್ವರಗಳು ತರಂಗಮಾಪನದ ಸಂಖ್ಯೆ 2ರ ಗುಣಲಬ್ಧದಲ್ಲಿ ಆದರೆ ಹೆಚ್ಚಿನ ಸ್ತರದಲ್ಲಿ ಮರುಕಳಿಸುತ್ತವೆ. ಅಂದರೆ 522 Hz ತರಂಗ ಮಾಪನದಲ್ಲಿ ಷಡ್ಜವು ಮತ್ತೇ ಹೆಚ್ಚಿನ ಸ್ತರದಲ್ಲಿ ಕೇಳಿಸಲ್ಪಡುತ್ತದೆ. ವಿಭಿನ್ನ ಸ್ವರಗಳ ತರಂಗಮಾಪನವನ್ನು ತುಲನಾತ್ಮಕವಾಗಿ ಈ ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ [1][2]. 

 

 

ಪಾಶ್ಚಾತ್ಯ ಪಿಯಾನೋ[1]

ತರಂಗ ಮಾಪನ

Hz

ಭಾರತೀಯ ಹಾರ್ಮೋನಿಯಮ್[2]

ತರಂಗ ಮಾಪನ

Hz

Middle C

261.63

260

C#

277.18


ಕೋಮಲ್ ರಿ

280

D

293.66


ಶುದ್ಧ ರಿ

296

D#

311.13


ಕೋಮಲ್ ಗ

314

E

329.63


ಶುದ್ಧ ಗ

332

F

349.23


351

F#

369.99


ತೀವ್ರ ಮ

372

G

392


394

G#

415.3


ಕೋಮಲ್ ಧ

419

A

440


443

A#

466.16


ಕೋಮಲ್ ನಿ

470

B

493.88

ನಿ

500

 

ಕೆಲವು ಆಸಕ್ತಿಕರ ಸಂಶೋಧನಾ ವಸ್ತುಗಳು: ಒಂದು ಉದಾಹರಣೆಯೊಂದಿಗೆ ಪ್ರಾರಂಭಿಸೋಣ. ಗಾಯನವೇ ಆಗಲಿ ವಾದ್ಯಸಂಗೀತವೇ ಆಗಲಿ, ನುರಿತ ರಸಿಕನು ತಾನು ಆಲಿಸುತ್ತಿರುವ ಸಂಗೀತ ಯಾವ ರಾಗಕ್ಕೆ ಸೇರಿದೆ ಅಥವಾ ಯಾವ ತಾಳಲಯದಲ್ಲಿ ನುಡಿಸಲ್ಪಡುತ್ತಿದೆ ಎಂಬುದನ್ನು ಗ್ರಹಿಸಬಲ್ಲವನಾಗಿರುತ್ತಾನೆ. ಇದೀಗ ಭಾರತೀಯ ಆಕಾಶವಾಣಿಯ ಆರ್ಕೈವ್‍ನಲ್ಲಿ ಹಲವು ದಶಕಗಳ ಹಿಂದಿನ ಸಾವಿರಾರು ಸಂಗೀತದ, ಸಂಗೀತಗಾರರ ಹಲವು ಬಗೆಯ ರಿಕಾರ್ಡಿಂಗುಗಳು ಲಭ್ಯವಿವೆ. ಇದೀಗ ಅವುಗಳನ್ನೆಲ್ಲಾ ರಾಗಗಳ ಅನುಸಾರವಾಗಿ ವಿಂಗಡಿಸಬೇಕೆಂದರೆ ಅವುಗಳನ್ನೆಲ್ಲಾ ಆಲಿಸಿ ನಿರ್ಧರಿಸಲು ಹಲವು ತಿಂಗಳುಗಳೇ ಬೇಕು. ಆದರೇ ಇದೇ ಕೆಲಸವನ್ನು ಒಂದು ಕಂಪ್ಯೂಟರ್ ಮಾಡಬಹುದಾದರೆ ಕೆಲವೇ ನಿಮಿಷಗಳಲ್ಲಿ ಇದನ್ನು ಮಾಡಿಮುಗಿಸಿಬಿಡಬಹುದು. ಆದರೆ ಯಾವುದೇ ಸಂಗೀತದ ತುಣುಕು ಮೇಲೆ ಕಾಣಿಸಿದ ಹನ್ನೆರಡು  ಸ್ವರಗಳ ಸರಳ ವಿನ್ಯಾಸ ಮಾತ್ರವಲ್ಲ. ಅದು ಹಲವಾರು ಸೂಕ್ಷ್ಮತರಂಗಗಳ ಸಂಕೀರ್ಣ ವಿನ್ಯಾಸವಾಗಿರುತ್ತದೆ. ಇವುಗಳನ್ನೆಲ್ಲಾ ಕಂಪ್ಯೂಟರ್ ಗ್ರಹಿಸುವುದು ಹೇಗೆ? ಅಷ್ಟೇ ಅಲ್ಲ. ಸಂಗೀತದ ತುಣುಕಿನಲ್ಲಿ ಒಂದೇ ವಾದ್ಯ ಅಥವಾ ಒಬ್ಬನೇ ಗಾಯಕನಿದ್ದರೆ ಸ್ವಲ್ಪ ಸುಲಭ (ಇದನ್ನು ಮೊನೊಫೊನಿಕ್ ಎನ್ನುತ್ತಾರೆ), ಹಲವು ವಾದ್ಯಗಳು ಹಲವು ಗಾಯಕರಿದ್ದರೆ(ಇದನ್ನು ಪಾಲಿಫೊನಿಕ್ ಎನ್ನುತ್ತಾರೆ), ಸ್ವರ ವಿನ್ಯಾಸವನ್ನು ಗುರುತಿಸುವುದಾದರೂ ಹೇಗೆ? ಒಂದು ಸಂಗೀತದ ತುಣುಕಿನಲ್ಲಿರುವ ತಂತಿವಾದ್ಯದ ವಿನ್ಯಾಸವನ್ನೂ, ತಬಲಾ ಅಥವಾ ಮೃದಂಗದ ಲಯವಿನ್ಯಾವನ್ನೂ ಪ್ರತ್ಯೇಕಿಸಲು ಸಾಧ್ಯವೆ?  ಇದುವೇ ಹಲವು ಗಣಕವಿಜ್ಞಾನದ ಸಂಶೋಧಕರು ತಮ್ಮನ್ನು ತೊಡಗಿಸಿಕೊಂಡಿರುವ ಸಂಶೋಧನೆಯ ವಸ್ತು.

 

 ಒಂದು ಸ್ವರವಿನ್ಯಾಸವನ್ನು ಕೃತಕ ಯಂತ್ರವು ಗುರುತಿಸುವಂತೆ ಮಾಡುವುದು ಹೇಗೆ? ಸುಲಭೀಕರಿಸಿ ಹೇಳುವುದಾದರೆ, ಸ್ವರ ಯಾವುದೆಂದು ನಿರ್ಧರಿಸುವ ಮೊದಲು, ಸ್ವರ ಯಾವ ಸಮಯದಲ್ಲಿ ಶುರುವಾಯಿತು ಮತ್ತು ಮುಗಿಯಿತು ಎಂಬುದನ್ನು ನಿರ್ಧರಿಸಲಾಗುತ್ತದೆ. ಸ್ವರದ ಗುಣಲಕ್ಷಣಗಳನ್ನು ಒಂದು ಸಂಖ್ಯೆಯಾಗಿ ನಮೂದಿಸಿ ಉದಾಹರಣೆಗೆ ಅದರ ತರಂಗ ಮಾಪಕವು ನಮಗೆ ಈಗಾಗಲೇ ತಿಳಿದಿರುವ ಸ್ವರದ ಯಾವ ತರಂಗಮಾಪನಕ್ಕೆ ಅತಿ ಹೆಚ್ಚು ಹತ್ತಿರವಾಗಿದೆ ಎನ್ನುವುದರ ಮೂಲಕ ಸ್ವರವನ್ನು ಗುರುತಿಸಬಹುದು. ಇಲ್ಲಿರುವ ಸಮಸ್ಯೇ ಏನೆಂದರೆ, ಈಗಾಗಲೇ ಮೇಲೆ ಹೇಳಿರುವಂತೆ ಪ್ರತಿಯೊಂದು ಸ್ವರಕ್ಕೆ ಒಂದೇ ಖಚಿತ ತರಂಗ ಮಾಪನ ಸಂಖ್ಯೆ ಇಲ್ಲ, ಅದು ಶೃತಿ ಯಾ ಸಪ್ತಕದ ಅನುಸಾರವಾಗಿ ಬೇರೆಬೇರೆಯಾಗಿರುತ್ತದೆ.  ಅದೇ ರೀತಿ ಎರಡು ರಾಗಗಳು ಪರಸ್ಪರ ಹತ್ತಿರವಾಗಿದ್ದು ಅತಿಸೂಕ್ಷ್ಮ ಭಿನ್ನತೆ ಹೊಂದಿದ್ದರೆ (ಉದಾಹರಣೆಗೆ ಶುದ್ಧ ಕಲ್ಯಾಣ್ ಮತ್ತು ಯಮನ್ ಕಲ್ಯಾಣ್) ಯಂತ್ರಕ್ಕೆ ಅದನ್ನು ಗುರುತಿಸುವುದು ಕಷ್ಟವೇ.

 

ಸಂಶೋಧಕರು ಇದಕ್ಕಾಗಿ ಸಂಕೇತ ಸಂಸ್ಕರಣೆ (ಸಿಗ್ನಲ್ ಪ್ರೊಸೆಸಿಂಗ್), ಸಂಖ್ಯಾಶಾಸ್ತ್ರ(ಸ್ಟ್ಯಾಟಿಸ್ಟಿಕ್ಸ್) ಮತ್ತು ಕೃತಕ ಮಾಹಿತಿಸಂಸ್ಕರಣನರಮಂಡಲ(ನ್ಯೂರಲ್ ನೆಟ್‍ವರ್ಕ್)ದ ಹಲವು ವಿಧಾನಗಳನ್ನು, ಸಲಕರಣೆಗಳನ್ನು ಬಳಸುತ್ತಾರೆ.  ಬಿಟ್ಸ್-ನಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರ ಪ್ರಾಧ್ಯಾಪಕರಾಗಿರುವ ಸೌಭಿಕ್ ಚಕ್ರಬೊರ್ತಿಯವರ ತಂಡ ಹಿಂದೂಸ್ತಾನಿ ರಾಗಗಳ ವಿಶ್ಲೇಷಣೆ ಮತ್ತು ಯಂತ್ರ ಗ್ರಹಿಕೆಯ ಕುರಿತಂತೆ ಹಲವು ರೀತಿಯ ಸಂಶೋಧನೆಗಳನ್ನು ಮತ್ತು ಪುಸ್ತಕಗಳನ್ನು ಪ್ರಕಟಿಸಿದೆ  [3],[4].

ಇದೇ ರೀತಿ ಪಾಶ್ಚಾತ್ಯ ಸಂಶೋಧಕರು, ಒಂದು ಸಂಗೀತದ ತುಣುಕು ಇದು ಒಪೆರಾವೆ? ಸೊನಾಟವೆ? ಜಾಜ಼್ ಅಥವಾ ಪಾಪ್ ಗುಂಪಿಗೆ ಸೇರಿದ್ದೆ? ಇದು C majorನಲ್ಲಿ ಸಂಯೋಜಿಸಲ್ಪಟ್ಟಿದ್ದೆ? ಅಲ್ಲವೆ? ಇತ್ಯಾದಿಯಾಗಿ ವಿಂಗಡಿಸುವ ಸಂಶೋಧನೆಯಲ್ಲಿ ತೊಡಗಿದ್ದಾರೆ. ಜರ್ಮನಿಯ ಎರ್ಲಾಂಜನ್-ನಲ್ಲಿರುವ ಮೇನಾರ್ಡ್ ಮುಲ್ಲೆರ್-ಎಂಬ ಪ್ರಾಧ್ಯಾಪಕರ ತಂಡ ಸಂಗೀತದ ಕುರಿತಂತೆ ಹಲವಾರು ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನದ ಆವಿಷ್ಕಾರಗಳನ್ನು ಮಾಡಿದೆ[5].

 

           

 

MIDI (ಮಿಡಿ) ಎಂಬ ಮಾದರಿ ವ್ಯಾಕರಣ: ಇಂದಿನ ಯುಗದಲ್ಲಿ ಪ್ರತಿಯೊಂದು ವಾದ್ಯದ ಇಲೆಕ್ಟ್ರಾನಿಕ್ ಸ್ವರೂಪ ಲಭ್ಯವಿದೆ. ಒಂದೇ ಕೀ ಬೋರ್ಡಿನ ಮೂಲಕ ನೂರಾರು ವಾದ್ಯಗಳನ್ನು ನುಡಿಸಬಹುದಲ್ಲವೆ. ವಿವಿಧ ಇಲೆಕ್ಟ್ರಾನಿಕ್ ಯಂತ್ರಗಳು ಸಂಗೀತವನ್ನು ಹೊರಡಿಸಲು ನಾವು ರೂಪಿಸಿರುವ ಮಾದರಿ ವ್ಯಾಕರಣವನ್ನು MIDI (Musical Instrument Digital Interface) ಎನ್ನುತ್ತೇವೆ. ಒಂದು ಸ್ವರ ವಿನ್ಯಾಸದಲ್ಲಿ ಅಥವಾ ರಾಗ ಪ್ರಸ್ತಾವನೆಯಲ್ಲಿ ಯಾವ ಕೀಯನ್ನು ಯಾವಾಗ ಒತ್ತಲಾಯಿತು, ಎಷ್ಟು ವೇಗದಲ್ಲಿ ಒತ್ತಲಾಯಿತು, ಎಷ್ಟು ಅವಧಿಯಕಾಲ ಒತ್ತಲಾಯಿತು ಈ ಎಲ್ಲಾ ಮಾಹಿತಿಯನ್ನು ನೀವು MIDI ವ್ಯಾಕರಣದಂತೆ ನಮೂದಿಸಿದ್ದರೆ, MIDI ವ್ಯಾಕರಣಕ್ಕೆ ಬದ್ಧವಾದ ಇನ್ನಾವುದೇ ಇಲೇಕ್ಟ್ರಾನಿಕ್ ಯಂತ್ರದ ಮೂಲಕ ಇನ್ನೊಂದು ವಾದ್ಯದಲ್ಲಿ ಅದೇ ರಾಗ ಪ್ರಸ್ತಾವನೆಯನ್ನು ಹೊರಡಿಸಬಹುದು[6].

 

               

 

ಹೀಗೆ ತಂತ್ರಜ್ಞಾನದ ವಿಷಯಕ್ಕೆ ಬಂದರೆ, ಒಂದು ಸಂಗೀತ ಕಚೇರಿಯ ಮೂರು ಆಯಾಮದ ಪರಿಸರದಲ್ಲಿ ಪಡೆದ ಸಂಗೀತದ ಅದೇ ಅನುಭವವನ್ನು ನಮ್ಮ ಖಾಸಗಿ ಅವಕಾಶದಲ್ಲಿ ಹೆಡ್ ಫೋನಿನಲ್ಲಿ ಪಡೆಯುವುದು ಸಾಧ್ಯವೆ? ಇದು ಸಂಶೋಧನೆಯ ಇನ್ನೊಂದು ವಸ್ತು. ಇದನ್ನೇ 3D ಆಡಿಯೋ ಎನ್ನುತ್ತೇವೆ. ಸಂಗೀತ ಕಚೇರಿಯ ವೇದಿಕೆಯಲ್ಲಿರುವ ಪ್ರತಿಯೊಬ್ಬ ವಾದಕ ಹೊರಡಿಸುವ ವಾದ್ಯದ ಅಲೆಗಳು ಶ್ರೋತೃವಿನ ಕಿವಿಯನ್ನು ಒಂದು ಕೋನದಲ್ಲಿ ಬಂದು ತಲುಪುತ್ತವೆ. ಈ ಸಂವಹನದ ಗಣಿತದ ಮಾದರಿಯನ್ನು ಕಟ್ಟಲು ಸಾಧ್ಯವಾದರೆ ಅದನ್ನು ಇಲೆಕ್ಟ್ರಾನಿಕ್ ಯಂತ್ರದಲ್ಲಿ ಅಳವಡಿಸುವುದು ಕಷ್ಟವೇನಲ್ಲ. ಈಗಾಗಲೆ ಬೋಸ್ ನಂಥ ಸಂಸ್ಥೆಯವರು ಈ ತಂತ್ರಜ್ಞಾನದಲ್ಲಿ ಬಹಳ ಪ್ರಗತಿ ಸಾಧಿಸಿದ್ದಾರೆ.

 

ಹೀಗೆ ಮನುಷ್ಯನ ಸೃಜನಶೀಲತೆ ಅದ್ಭುತ ಸಂಗೀತವನ್ನೂ ಮತ್ತದಕ್ಕೆ ಪೂರಕವಾದ ವಿಜ್ಞಾನ-ತಂತ್ರಜ್ಞಾನವನ್ನೂ ಸೃಷ್ಟಿಸಿದೆ. ಆದರೆ ಒಂದು ಇಲೆಕ್ಟ್ರಾನಿಕ್ ಯಂತ್ರವು ಉಸ್ತಾದ್ ಅಲಿ ಅಕ್ಬರ ಖಾನ್ ಅಥವಾ ಪಿಟೀಲು ಚೌಡಯ್ಯರಂಥ ಶ್ರೇಷ್ಠ ಸಂಗೀತಗಾರನಿಗೆ ಸಮಾನವಾದ ಸೃಜನಶೀಲ ಸಂಗೀತವನ್ನು ಸೃಷ್ಟಿಸಬಲ್ಲದೆ? ನಮಗೇ ಗೊತ್ತಿರುವಂತೆ ಹಲವು ರಸಿಕರು ಸ್ಪಷ್ಟವಾದ ಸ್ವರಜ್ಞಾನವಿಲ್ಲದಾಗೂ ಬರೀ ಸಂಗೀತದ ಮೂಡ್ ಅಥವಾ ಭಾವದಮೂಲಕ ರಾಗವನ್ನು ಗುರುತಿಸಬಲ್ಲವರಾಗಿರುತ್ತಾರೆ. ಬರೀ ಸಂಕೇತದ ಸಂಖ್ಯೆಗಳನ್ನು ಅವಲಂಬಿಸಿರುವ ಕೃತಕ ಬುದ್ಧಿಮತ್ತೆಯ ಸಲಕರಣೆಗಳು ಮನುಷ್ಯರ ಈ ಬಗೆಯ ಸಾಮರ್ಥ್ಯವನ್ನು ಸೆರೆಹಿಡಿದಾಗ ಮಾತ್ರ ಯಂತ್ರಗಳು ಮನುಷ್ಯನ ಸೃಜನಶೀಲತೆಗೆ ಸಾಟಿಯಾಗಬಲ್ಲವು.

 

[1] The Acoustical Foundations of Music (p. 153), by J. Backus, 1977, New York: W. W. Norton & Company, Inc. Copyright 1977 by W. W. Norton & Company, Inc

[2]Pendekar, Mahajan, Mujumdar, Gunoo,”Harmonium Raga Recognition”, International Journal of Machine Learning and Computing Vol 3(4), 2013

[3] Soubhik Chakraborty, et.al, “Computational Musicology in Hindustani Music”, Springer 2014    

[4] Soubhik Chakraborty et.al, “Signal Analysis of Hindustani Classical Music”, Springer 2017

[5]Meinard Muller, Fundamentals of Music Processing, Springer 2015

[6] R. Sudha, “A tool for identifying ragas using MIDI (musical instrument devices) for CMIR (classical music information retrieval),” in Proc. Eighth IEEE International Conf. on Dependable, Autonomic and Secure Computing, 12-14 December, 2009

 

Pictures source: Internet

 

-ಡಾ|| ಸುದರ್ಶನ್ ಪಾಟೀಲ್ ಕುಲಕರ್ಣಿ

ಮೈಸೂರು

ಸಪ್ಟೆಂಬರ್ ೨೦೧೯