ಬಾಕು ನಗರದಿಂದ ಬಾಹ್ಯಾಕಾಶದ ನೋಟ 

ಅಜರ್ಬೈಜಾನಿನ ಬಾಕು ನಗರದಿಂದ ಬಾಹ್ಯಾಕಾಶದ ನೋಟ

ಬಾಹ್ಯಾಕಾಶದ ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಬೃಹತ್ ಸಮಾವೇಶವೊಂದನ್ನು (International Astronautical Congress 2023) ಅಂತರ್ರಾಷ್ಟ್ರೀಯ ಗಗನಯಾನದ ಒಕ್ಕೂಟವು  (International Astronautical Federation, IAF) ಈ ಬಾರಿ, ಅಜರ್ಬೈಜಾನ್ ದೇಶದ ಬಾಕು ನಗರದಲ್ಲಿ ಅಕ್ಟೋಬರ್ ಮೊದಲ ವಾರದಲ್ಲಿ ಆಯೋಜಿಸಿತ್ತು. ಸುಮಾರು 120 ದೇಶಗಳ 5000 ಕ್ಕೂ ಹೆಚ್ಚು ವಿಜ್ಞಾನಿಗಳೂ, ತಂತಜ್ಞರೂ, ವಿದ್ಯಾರ್ಥಿಗಳೂ ಸೇರಿದ್ದ ಈ ವಿಶೇಷ ಸಮಾವೇಶದಲ್ಲಿ ಪಾಲ್ಗೊಳ್ಳಲು, ಸುತ್ತೂರಿನ ಶ್ರೀಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿಗಳ ಆಶೀರ್ವಾದದಿಂದ, ಜೆ. ಎಸ್. ಎಸ್. ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ, ಸಂಶೋಧನಾ ಲೇಖನವೊಂದನ್ನು ಮಂಡಿಸಲು ನನಗೆ ದೊರೆತ  ಅವಕಾಶವನ್ನು ಮನ್ನಿಸಿ, ಜೆ. ಎಸ್. ಎಸ್.  ಮಹಾವಿದ್ಯಾಪೀಠದ ಆಡಳಿತ ಮಂಡಳಿ ನನಗೆ ಬೆಂಬಲ ನೀಡಿತ್ತು.   

ಅಮೇರಿಕೆಯ NASA, ಜಪಾನಿನ JAXA, ಯುರೋಪಿನ ESA, ಟರ್ಕಿಯ   TSA, ರಷ್ಯಾದ Roscosmos, ಭಾರತದ ISRO ಹೀಗೆ ಪ್ರತಿಯೊಂದು ದೇಶದ ಬಾಹ್ಯಾಕಾಶ ಸಂಸ್ಥೆಗಳು ಭಾಗವಹಿಸಿದ್ದ ಈ  ಸಮಾವೇಶವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಹೊಣೆಯನ್ನು ಅಜರ್ಬೈಜಾನ್ ದೇಶದ ಸರ್ಕಾರ ಮತ್ತು ಆ ದೇಶದ ಬಾಹ್ಯಾಕಾಶ ಸಂಸ್ಥೆ  Azercosmos ಜಂಟಿಯಾಗಿ ವಹಿಸಿಕೊಂಡಿದ್ದವು.

ಅಜರ್ಬೈಜಾನ್ ತೈಲ ಉದ್ದಿಮೆಯಿಂದಾಗಿ ಆರ್ಥಿಕವಾಗಿ ಸುಧೃಡವಾದ ದೇಶವಾಗಿದ್ದು, ಸಾಮಾಜಿಕ, ಶೈಕ್ಷಣಿಕ ಹೀಗೆ  ಹಲವು ಕ್ಷೇತ್ರಗಳಲ್ಲಿ ಆಭಿವೃದ್ಧಿ ಹೊಂದಿದೆ. ಭೌಗೋಳಿಕವಾಗಿ ರಷ್ಯಾ, ಟರ್ಕಿ ಮತ್ತು ಇರಾನ್ ದೇಶಗಳಿಂದ ಆವರಿಸಲ್ಪಟ್ಟಿರುವ ಈ ದೇಶವು, ಸಾಂಸ್ಕೃತಿಕವಾಗಿ ಈ ದೇಶಗಳ ಸಂಸ್ಕೃತಿಗಳಿಂದ ಪ್ರಭಾವಿತವಾಗಿಯೂ ತನ್ನದೇ ಅಸ್ಮಿತೆಯನ್ನು ಹೊಂದಿದೆ. ಇಸ್ಲಾಂ ದೇಶದ ಪ್ರಧಾನ ಧರ್ಮವಾಗಿದ್ದರೂ, ಸರಕಾರ ಧರ್ಮ ನಿರಪೇಕ್ಷ ಪ್ರಜಾಸತ್ತಾತ್ಮಕ ಮೌಲ್ಯಗಳ ಜೊತೆಗೆ ಗುರುತಿಸಿಕೊಂಡಿದ್ದು ಸಾಂಪ್ರದಾಯಿಕ ಇಸ್ಲಾಂ-ನ ಕುರುಹುಗಳು ನನಗಂತೂ ಬಾಕು ನಗರದಲ್ಲಿ ಎಲ್ಲಿಯೂ ಕಾಣಸಿಗಲಿಲ್ಲ. ಸೇಬು ಹಣ್ಣು,  ಕಾರ್ಪೆಟ್, ಜಾನಪದ, ಸೂಫಿ ಸಂಗೀತ ಈ  ದೇಶದ ಗ್ರಾಮೀಣ ಭಾಗದ ಪ್ರಮುಖ ಸಾಂಸ್ಕೃತಿಕ ಚಹರೆಗಳೆಂದು ದೇಶದ ಸಾಹಿತ್ಯ ಸಿನೆಮಾಗಳಿಂದ ನನಗೆ ಕಂಡು ಬಂದಿತು.  

       

  ಬಾಕು ನಗರವು ತೀರ ಪ್ರದೇಶದ ಸುಂದರ ರಾಜಧಾನಿಯಾಗಿದ್ದು, ಇತಿಹಾಸದ ಕುರುಹುಗಳನ್ನೂ, ಅತ್ಯಾಧುನಿಕ ಹೆದ್ದಾರಿಗಳನ್ನೂ, ಅಚ್ಚುಕಟ್ಟಾದ ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನೂ ಹೊಂದಿದೆ. ಅಂತರ್ರಾಷ್ಟ್ರೀಯ ಗಗನಯಾನದ ಒಕ್ಕೂಟವು 1978 ರಲ್ಲಿ ಇದೇ ಬಾಹ್ಯಾಕಾಶ ಸಮಾವೇಶವನ್ನು ಬಾಕು ನಗರದಲ್ಲಿ ಏರ್ಪಡಿಸಿತ್ತು. ಆಗ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಈ ಪ್ರಾಂತ್ಯ ಕಮ್ಯುನಿಸ್ಟ್ ಆಡಳಿತದಲ್ಲಿತ್ತು. 1991ರಲ್ಲಿ ಸೋವಿಯತ್ ಒಕ್ಕೂಟದಿಂದ ಸ್ವತಂತ್ರ ಹೊಂದಿದ ಅಜರ್ಬೈಜಾನ್ 1995ರಿಂದ ತನ್ನದೇ ಸಂವಿಧಾನ ಹೊಂದಿತು.. ಆಗ ಅಧಿಕಾರದ ಗದ್ದುಗೆಗೆ ಏರಿದ ಹೈದರ್ ಅಲಿವೇವ್ ಪ್ರಬಲ ನಾಯಕನಾಗಿ ಮೆರೆದು, ಇದೀಗ ದೇಶದ ಹಲವು ಕಟ್ಟಡಗಳು, ಸಂಸ್ಥೆಗಳು,  ವಿಮಾನ, ರೈಲು  ನಿಲ್ದಾಣಗಳು ಇವರ ಹೆಸರನ್ನೇ ಹೊಂದಿವೆ. ಸದ್ಯ ಅಧ್ಯಕ್ಷರಾಗಿರುವ ಇಲ್ಹಾಮ್ ಅಲಿವೇವ್ ಇವರ ಮಗನಾಗಿದ್ದು, ಪ್ರಜಾಸತ್ತಾತ್ಮಕ ಸಂವಿಧಾನವು ಔಪಚಾರಿಕತೆಗೆ ಮಾತ್ರ ಎಂದು ವಿರೋಧಿಗಳು ಹೇಳುತ್ತಾರೆ. ಆರ್ಮೇನಿಯ ದೇಶದ ಜೊತೆ ಸದಾ ಸಂಘರ್ಷದಲ್ಲಿದ್ದ ಅಜರ್ಬೈಜಾನ್,  ವಿವಾದಿತ ಪ್ರದೇಶವಾಗಿದ್ದ ನಗುರ್ನೊ-ಕಾರಬಾಕ್ ಎಂಬ ಪ್ರಾಂತ್ಯವನ್ನು ತನ್ನ ಆಕ್ರಮಣಶೀಲತೆಯಿಂದ ಕಳೆದ ತಿಂಗಳು ಸಂಪೂರ್ಣ ವಶಪಡಿಸಿಕೊಂಡಿದ್ದು ಅಲ್ಲಿ ವಾಸವಾಗಿದ್ದ ಅರ್ಮೇನಿಯನ್ ಕ್ರಿಶ್ಚಿಯನ್ನರು ಗಡಿಪಾರು ಮಾಡುವಂತಾಗಿದೆ. ಹೀಗಾಗಿ ಮಾನವ ಹಕ್ಕು ಸಂಸ್ಥೆಗಳ ಕೆಂಗಣ್ಣಿಗೂ ಈಗ ಇದು ಗುರಿಯಾಗಿ ಸುದ್ದಿಯಲ್ಲಿದೆ.

 ಈ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಅಜರ್ಬೈಜಾನಿ ಭಾಷೆಯನ್ನು ವಿಜ್ಞಾನ ತಂತ್ರಜ್ಞಾದಲ್ಲಿ ಉನ್ನತ ಶಿಕ್ಷಣದ ಮಾಧ್ಯಮವಾಗಿ ಆಯ್ದುಕೊಳ್ಳಲು ಅವಕಾಶವಿದೆ. ಸೋವಿಯತ್ ರಷ್ಯಾದ ವಸಾಹಾತು ಆಗಿದ್ದರಿಂದ ರಷ್ಯನ್ ಭಾಷೆಗೂ ಮನ್ನಣೆ ಇದೆ. ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು, ಅಕಾಡೆಮಿಕ್ ಜರ್ನಲ್-ಗಳು, ಹಾಗೂ ಆಧುನಿಕ ಸಾಹಿತ್ಯದ ಪುಸ್ತಕಗಳು  ಅಜರ್ಬೈಜಾನಿ ಮತ್ತು ರಷ್ಯನ್ ಈ ಎರಡೂ ಭಾಷೆಗಳಲ್ಲಿ ಲಭ್ಯವಿರುತ್ತವೆ.

ಮರಳಿ ನಮ್ಮ ಬಾಹ್ಯಾಕಾಶ ಸಮಾವೇಶಕ್ಕೆ ಬರುವುದಾದರೆ, ಇದು ನಡೆದಿದ್ದು ಹೈದರ್ ಅಲಿವೇವ್ ಹೆಸರಿನ ಬೃಹತ್  ಸಭಾಂಗಣದಲ್ಲಿಯೇ. ಸಮಾವೇಶದ ಉದ್ಘಾಟನೆಯ ಸಮಾರಂಭದಲ್ಲಿ ಎಲಾನ್ ಮಸ್ಕ್ ಅವರ ಸಾಧನೆಯನ್ನು ಮತ್ತು ಜೇಮ್ಸ್ ವೆಬ್ ಟೆಲಿಸ್ಕೋಪ್ ನಿರ್ಮಿಸಿದ ತಂಡವನ್ನು ಬಾಹ್ಯಾಕಾಶ ವಿಜ್ಞಾನಿಗಳ ಸಮುದಾಯವು ಗೌರವಿಸಿತು. ಖ್ಯಾತ ಲೇಖಕ ಯುವಲ್ ನೋವ ಹರಾರಿ ಮಾತನಾಡಿ ಕೃತಕ ಬುದ್ಧಿಮತ್ತೆಯನ್ನು ವಿವೇಕದಿಂದ ನಿಯಂತ್ರಿಸದಿದ್ದರೆ ಆಗಬಹುದಾದ ಅಪಾಯಗಳ ಬಗ್ಗೆ ವಿಜ್ಞಾನಿಗಳಿಗೆ ಎಚ್ಚರಿಕೆ ನೀಡಿದರು. ಸಮಾವೇಶದಲ್ಲಿ  ನೆರೆದಿದ್ದ ಎಲ್ಲ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ಮನುಕುಲದ ಅಭ್ಯುದಯಕ್ಕಾಗಿ ಪರಸ್ಪರ ಸಹಯೋಗದಲ್ಲಿ  ಈಗಾಗಲೇ ತಾವು ಸಾಧಿಸಿದ ಹಲವು ಯೋಜನೆಗಳನ್ನು ಉಪಾನ್ಯಾಸಗಳಲ್ಲಿ,      

                    ಪ್ರದರ್ಶನ ಮಳಿಗೆಗಳಲ್ಲಿ ಪ್ರಸ್ತುತಪಡಿಸಿದರು. ಇವುಗಳಲ್ಲಿ ಚೀನಾದ ಬಾಹ್ಯಾಕಾಶ ನಿಲ್ದಾಣ, ಚಂದ್ರ ಮತ್ತು ಮಂಗಳನ ಮೇಲೆ ಇವರು ಇಳಿಸಿರುವ ರೋವರ್, ಸೌದಿ ಅರೇಬಿಯಾದ ಗಗನಯಾತ್ರೆ, ಭಾರತದ ಚಂದ್ರಯಾನ ವಿಶೇಷವಾಗಿ ಎಲ್ಲರ ಗಮನ ಸೆಳೆದವು.ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್-ಗೆ ಹೋಗಿ ಅಲ್ಲಿ ಪ್ರಯೋಗಗಳನ್ನು ನಡೆಸಿಬಂದ ವಿಭಿನ್ನ ದೇಶಗಳ ಗಗನಯಾತ್ರಿಗಳು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು. .

ಬರಲಿರುವ ದಶಕದಲ್ಲಿ ಚಂದ್ರನ ಮೇಲೆ ನೆಲೆಯೂರಲು ನಾಸಾ ಸಂಸ್ಥೆ ಭಾರತವೂ ಸೇರಿದಂತೆ ಹಲವು ದೇಶಗಳ ಜೊತೆ ಸೇರಿ ಆರ್ಟೆಮಿಸ್ ಎಂಬ ಯೋಜನೆಯನ್ನು ರೂಪಿಸಿದ್ದು ಹಲವು ಹಂತಗಳಲ್ಲಿ ಇದು ಸಾಕಾರಗೊಳ್ಳಲಿದೆ. ಮುಂದಿನ ಹಂತದಲ್ಲಿ ಚಂದ್ರನ ಸುತ್ತ ಒಂದು ಬಾಹ್ಯಾಕಾಶ ನಿಲ್ದಾಣ ಸ್ಥಾಪನೆಯಾಗಲಿದ್ದು, ಅದರ ಮೂಲಕವೇ ಯಾತ್ರಿಗಳು ಭೂಮಿ ಮತ್ತು ಚಂದ್ರರ ಮಧ್ಯ ಸಂಚರಿಸಲಿದ್ದಾರೆ. ನಾಸಾ ಸಂಸ್ಥೆಯ ವಿಜ್ಞಾನಿಗಳು ಹಲವು ಉಪನ್ಯಾಸಗಳಲ್ಲಿ ಈ ಯೋಜನೆಯ ವಿಭಿನ್ನ ರೂಪುರೇಷೆಗಳನ್ನು ಮಂಡಿಸಿದರು.      

ಇಸ್ರೋದ ಇನ್ ಸ್ಪೇಸ್  ಅಂಗಸಂಸ್ಥೆಯ ನಿರ್ದೇಶಕರಾದ ವಿನೋದ ಕುಮಾರ್, ಇಸ್ರೋ ಚೇರಮನ್ ಎಸ್ ಸೋಮನಾಥ್ ಸೇರಿದಂತೆ ಹಲವು ವಿಜ್ಞಾನಿಗಳನ್ನು ಮುಖತಃ  ಭೇಟಿ ಮಾಡಿ ಸಂವಾದ ನಡೆಸುವ ಅವಕಾಶವೂ ಈ ಸಮಾವೇಶದಿಂದ ನನಗೆ ದೊರಕಿತು.ಚಂದ್ರಯಾನದ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ತಮ್ಮಲ್ಲಿ ಅಳವಡಿಸಲಾಗಿದ್ದ ಸಂವೇದಕಗಳಿಂದ ಸಂಗ್ರಹಿಸಲ್ಪಟ್ಟ ಮಾಹಿತಿಗಳನ್ನು ವಿಶೇಷ ಉಪಾನ್ಯಾಸದಲ್ಲಿ ಇಸ್ರೋ ವಿಜ್ಞಾನಿಗಳು ಮಂಡಿಸಿ ಅಲ್ಲಿ ನೆರೆದಿದ್ದ ಹಲವಾರು  ದೇಶಗಳ ವಿಜ್ಞಾನಿಗಳಿಂದ ಪ್ರಶಂಸೆ ಪಡೆದದ್ದು ಅಭಿಮಾನ ತುಂಬಿದ ಅನುಭವವಾಗಿತ್ತು.             

 ಒಟ್ಟಿನಲ್ಲಿ ಹೇಳುವುದಾದರೆ, ಭೂಮಿಯ ಮೇಲೆ ಇರುವ ಹಲವು ಅಸ್ಮಿತೆಗಳ ರಾಜಕಾರಣದ ಬೇನೆಗಳಿಗೆ ಬಾಹ್ಯಾಕಾಶದ ಬಗೆಗೆ ಮನುಜ ಹೊಂದಿರುವ ಕನಸುಗಳು ಔಷಧಿಯಂತೆ ಕೆಲಸ ಮಾಡಬಹುದು ಎಂಬ ಭರವಸೆಯನ್ನು ಈ ಸಮಾವೇಶ ನನ್ನಲ್ಲಿ ಹುಟ್ಟಿಸಿತು. ನನ್ನ ಪ್ರವಾಸದ ಈ ವಿಶೇಷ ಅನುಭವವನ್ನು ಹೆಚ್ಚಿನ ವಿದ್ಯಾರ್ಥಿಗಳಿಗೆ ಮತ್ತು ಆಸಕ್ತರಿಗೆ ತಲುಪಿಸ ಬೇಕೆನ್ನುವ ತುಡಿತವೇ ಈ ಲೇಖನಕ್ಕೆ ಪ್ರೇರಣೆ. 

-ಡಾ | ಸುದರ್ಶನ ಪಾಟೀಲಕುಲಕರ್ಣಿ

ಪ್ರಾಧ್ಯಾಪಕರು, ಜೆ. ಎಸ್. ಎಸ್. ಎಸ್. ಟಿ. ಯು. ,ಮೈಸೂರು, ಅಕ್ಟೋಬರ್  2023