Prabhasa: Review


ಮಾನವೀಯ ಮಿಡಿತಗಳ ವಿಜ್ಞಾನ ನಾಟಕ : ಪ್ರಭಾಸ


 ಹೀಗೊಂದು ಮೂಲಭೂತ ಪ್ರಶ್ನೆ: ವಿಜ್ಞಾನ ನಾಟಕಗಳ ಮುಖ್ಯ ಉದ್ದೇಶ ವಿಜ್ಞಾನಿಗಳ ಮಾನವೀಯ ಅಂಶಗಳನ್ನು ನಮಗೆ ಕಾಣಿಸುವುದೋ ಅಥವಾ ಅವರು ಸಾಧಿಸಿದ ವಿಜ್ಞಾನ ಸಂಶೋಧನೆಯ ವಿವರಗಳನ್ನು ವಿಜ್ಞಾನವು ವೃತ್ತಿಯಾಗಿಲ್ಲದ ಜನಸಾಮಾನ್ಯರಿಗೆ ಸರಳ ಭಾಷೆ ಮತ್ತು ರೂಪಕಗಳ ಮೂಲಕ ತಲುಪಿಸುವುದೋ? ಕಳೆದ ಆರೇಳು ವರ್ಷಗಳಿಂದ ಮೈಸೂರಿನ ಕಲಾಸುರುಚಿ, ಕುತೂಹಲಿ, ಅರಿವು, ಪರಿವರ್ತನ ಸಂಸ್ಥೆಗಳು ಇತರ ಸಮಾನ ಮನಸ್ಕ ಸಂಸ್ಥೆಗಳ ಜೊತೆಗೂಡಿ ರಚಿಸಿ, ನಿರ್ಮಿಸಿ, ಪ್ರದರ್ಶಿಸುತ್ತಿರುವ  ವಿಜ್ಞಾನ ನಾಟಕಗಳು ಈ ತಂತಿಯ ಮೇಲಿನ ನಡಿಗೆಯನ್ನು ಸಾಧಿಸಲು ನಿರಂತರ ಪ್ರಯತ್ನಿಸುತ್ತಲೇ ಇವೆ.  ಈ ವರ್ಷದ  ಮೈಸೂರು ವಿಜ್ಞಾನ ನಾಟಕೋತ್ಸವದ ಉದ್ಘಾಟನೆ ದಿನ ಜುಲೈ 6 ರಂದು ಧಾರವಾಡದ ಅಭಿನವ ಭಾರತಿ ತಂಡದಿಂದ  ಪ್ರದರ್ಶಿತವಾದ ನಾಟಕ ‘ಪ್ರಭಾಸ’  ನನಗೆ ಕಂಡಿರುವಂತೆ, ಮೇಲ್ನೋಟಕ್ಕೆ ಅಂಥದೇ ಪ್ರಯತ್ನವನ್ನು ಮಾಡಹೊರಟಿದ್ದರೂ ವಸ್ತುವಿಜ್ಞಾನದ  ವಿವರಗಳಿಗಿಂತ ಮಾನವೀಯ ಅಂಶಗಳ ಪಾಲು ಹೆಚ್ಚಾಗಿಯೇ ಕಾಣುವಂತಾಗಿ, ವಿಜ್ಞಾನಿ ದಂಪತಿಗಳ ಹೋರಾಟದ ಜೊತೆ ಜೊತೆಗೆ  ಹೆಣ್ಣಿನ ಹೋರಾಟ, ಜೀವನ ಪ್ರೀತಿಯ ದರ್ಶನವಾಗಿ,  ಹಲವು ಬಗೆಯ ಮಾನವೀಯ ಸಂಬಂಧಗಳ ಕಥನವಾಗಿ ಯಶಸ್ವಿಯಾಗಿ ಮೂಡಿ ಬಂದಿದೆ.


ಸಂಕ್ಷಿಪ್ತವಾಗಿ ಮೇರಿ ಕ್ಯೂರಿಯ ಕಥೆ ಹೇಳುವುದಾದರೆ, ಅವರು ಪೋಲಂಡಿನ  ದೇಶಪ್ರೇಮಿ ಕುಟುಂಬದಲ್ಲಿ ಐದನೇ ಮಗುವಾಗಿ 1867ರಲ್ಲಿ ಜನಿಸಿದವರು.  ಈ ದೇಶಪ್ರೇಮದ ಕಾರಣದಿಂದಾಗಿಯೇ ಇವರ ಅಪ್ಪ ಆಸ್ತಿ ಕಳೆದುಕೊಳ್ಳುವಂತಾಗಿ, ಮತ್ತು ಮೇರಿ ಉಳ್ಳವರ ಮನೆಯಲ್ಲಿ ದಾದಿಯ ಕೆಲಸ ಮಾಡುವ ಸಂಕಷ್ಟಕರ ಸಂದರ್ಭಗಳನ್ನು ಎದುರಿಸುತ್ತಾಳೆ. ಮನೆಯ ಯಜಮಾನನ ಮಗ  ಭವಿಷ್ಯದಲ್ಲಿ ಇನ್ನೋರ್ವ ಮಹಾನ್ ಗಣಿತಜ್ಞನಾಗಲಿದ್ದ ಕಜಿಮೆರಾಜ ಜೋರಾಸ್ಕಿಯ ಒಲವಿಗೆ ಪಾತ್ರಳಾಗುತ್ತಾಳೆ ಮತ್ತು ಆ ಸಂಬಂಧ ವರ್ಗಾಂತರಗಳ ಕಾರಣ ದಾರುಣ ಅಂತ್ಯ ಕಾಣುತ್ತದೆ. ರಷ್ಯನ್ ಆಡಳಿತದಲ್ಲಿದ್ದ ಪೋಲಂಡಿನಲ್ಲಿ ಮಹಿಳೆಯರಿಗೆ ಉನ್ನತ ಶಿಕ್ಷಣಕ್ಕೆ ಅವಕಾಶವಿಲ್ಲದ್ದರಿಂದ ಆಕೆ ಇಂಥವರ ಬೆಂಬಲಕ್ಕಾಗಿಯೇ ಇದ್ದ  ಫ್ಲಾಯಿಂಗ್ ಯುನಿವರ್ಸಿಟಿ ಎಂಬ ಅನಧಿಕೃತ ವಿದ್ಯಾಲಯ ಮತ್ತು ಸ್ವಂತ ಪರಿಶ್ರಮದಿಂದ ಶಿಕ್ಷಣ ಮುಂದುವರೆಸಿ 1891ರಲ್ಲಿ ಪ್ಯಾರಿಸಿಗೆ ಬರುತ್ತಾಳೆ. ಊಟ ನಿದ್ದೆ ಮರೆತು ಓದುವುದು ಮತ್ತು ಕೆಲಸಮಾಡುವುದು ಜಾಯಮಾನವೇ ಆಗಿಬಿಡುವ ಮೇರಿಗೆ 1893 ರಲ್ಲಿ ಪ್ಯಾರೀಸ್ ವಿಶ್ವವಿದ್ಯಾಲಯದಿಂದ  ಮೊದಲ ಡಿಗ್ರಿ ಮತ್ತು 1894 ರಲ್ಲಿ ಎರಡನೇ ಡಿಗ್ರಿ ದೊರೆಯುತ್ತದೆ. ಆಗಲೇ ಅವಳ ಬದುಕಿನಲ್ಲಿ ಅವಳದ್ದೇ  ಸಂಶೋಧನಾ ಆಸಕ್ತಿಯನ್ನು ಹೊಂದಿದ್ದ ಪಿಯರೆ ಕ್ಯೂರಿಯ ಪ್ರವೇಶವಾಗುತ್ತದೆ. ಪಿಚ್ ಬ್ಲೆಂಡ್ ಮತ್ತು ಚಾಲ್ಕೊಲಾಯಿಟ್ ಆದಿರಿನಿಂದ ಥೋರಿಯಂ, ಪೋಲೋನಿಯಂ (ತನ್ನ ತಾಯಿನಾಡಿನ ಪ್ರೀತಿಯಿಂದಾಗಿ ಆಕೆಯೇ ಇಟ್ಟ ಹೆಸರು) ಮತ್ತು ರೇಡಿಯಂ ಎಂಬ ಮೂಲ ಧಾತುಗಳ ಶೋಧನೆಯೇ ಅವರಿಬ್ಬರ ನಿತ್ಯಬದುಕಿನ ಕಾಯಕವಾಗುತ್ತದೆ.1898-1902ರ ನಡುವೆ 30 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಅವರಿಬ್ಬರೂ ಜೊತೆಯಲ್ಲಿ ಪ್ರಕಟಿಸುತ್ತಾರೆ. 1903 ರಲ್ಲಿ ಅವರಿಗೆ ಭೌತಶಾಸ್ತ್ರದಲ್ಲಿ ನೊಬೆಲ್ ಪದವಿ ದೊರೆಯುತ್ತದೆ; ಆದರೆ ಸ್ವೀಡಿಷ್ ಆಕಾಡೆಮಿಯಾಗಲಿ, ರಾಯಲ್ ಸೊಸೈಟಿಯಾಗಲಿ ಮಹಿಳೆಯೆಂಬ ಕಾರಣಕ್ಕೆ ಅವಳಿಗೆ ಕೊಡಬೇಕಾದ ಗೌರಾವವನ್ನು ಕೊಡುವುದಿಲ್ಲ. 1906ರಲ್ಲಿ ಗಂಡ ಪಿಯರ್ ಕ್ಯೂರಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುವುದು ಅವಳ ಮನಸ್ಸಿಗೆ ತೀವ್ರ ಆಘಾತವನ್ನು ಉಂಟುಮಾಡುತ್ತದೆ. 

ಈ ಎಲ್ಲಾ ಘಟನೆಗಳು ಅವಳ ಬದುಕಿನಲ್ಲಿ ನಡೆಯುವಾಗ ಫ್ರಾನ್ಸ್ ದೇಶದ ರಾಜಕೀಯ ಭೂಮಿಕೆ ಈಗಿನ ಕಾಲದಲ್ಲಿ ಇರುವಂತೆಯೇ ಸಾಂಪ್ರದಾಯಿಕ ಪಕ್ಷಗಳಿಗೆ ವಲಸೆ ಬಂದ ವಿದೇಶಿಗರ ಕುರಿತು, ಮಹಿಳಾ ಸಾಧಕಿಯರ ಕುರಿತು ತಿರಸ್ಕಾರ ಮತ್ತು ಅಸಹನೆ ಇದ್ದೇ ಇರುತ್ತದೆ. ಸಾಂಪ್ರದಾಯಿಕ ಮಾಧ್ಯಮಗಳು ಯಾವತ್ತಿನಂತೆ ಆವೊತ್ತೂ ಸಹ ಅಂಥ ವ್ಯಕ್ತಿಗಳ ಬದುಕಿನಲ್ಲಿ  ಕೊಂಕು ಹುಡುಕಲು ಕಾಯುತ್ತಲೇ ನಿಂತ ರಣಹದ್ದುಗಳಯಾಗಿರುತ್ತವೆ.        

ಇಂತಹ ಸಂಕಷ್ಟ ಸಂದರ್ಭದಲ್ಲೂ ಪ್ಯಾರೀಸ್ ಇನ್ಸ್ಟಿಟ್ಯೂಟ್-ನ ಸಹಯೋಗದೊಂದಿಗೆ  1909-ರಲ್ಲಿ ರೇಡಿಯಂ ಇನ್ಸ್ಟಿಟ್ಯೂಟ್ ಸ್ಥಾಪಿಸುತ್ತಾಳೆ. 1910-ರಲ್ಲಿ ಶುದ್ಧ ರೇಡಿಯಂ-ನ್ನು ಆದಿರಿನಿಂದ ಬೇರ್ಪಡಿಸುವಲ್ಲಿ ಸಫಲಳೂ ಆಗುತ್ತಾಳೆ. ಪಿಯರ್-ನ ಕೊರತೆಯಿಂದ ಬರಡಾಗಿದ್ದ ಅವಳ  ವೈಯಕ್ತಿಕ ಬದುಕು ಪ್ರೀತಿಯ ಆಸರೆಗಾಗಿ  ಅವಳ ಇನ್ನೋರ್ವ ಸಹ-ವಿಜ್ಞಾನಿ ವಿವಾಹಿತನಾಗಿದ್ದ ಪಾಲ್ ಲಾಂಗ್ವೀನ್ ಜೊತೆಗೆ ಸ್ನೇಹ ಚಿಗಿಯುವಂತೆ ಮಾಡುತ್ತದೆ. 1911-ರಲ್ಲಿ ಅವಳಿಗೆ ರೇಡಿಯಂ ಶೋಧಿಸಿದ್ದಕ್ಕಾಗಿ  ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಘೋಷಣೆಯಾಗುತ್ತದೆ. ಅವಳ ವೈಯಕ್ತಿಕ ಬದುಕಿನ ವಾಸನೆ ಹಿಡಿದ ಸಾಂಪ್ರದಾಯಿಕ ಮಾಧ್ಯಮ ಅವಳ ಮೇಲೆ ಎರಗುತ್ತಲೇ ಇರುತ್ತದೆ. ಇದಿಷ್ಟೂ ಮೇರಿ ಕ್ಯೂರಿಯ ಬದುಕಿನ ಸ್ಥೂಲ ವಿವರ.

ಭಾರತದಲ್ಲಿ  ವಿಜ್ಞಾನಕ್ಕೆ ಸಂಬಂಧಿಸಿದ  ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಹಲವರು (ನನ್ನನ್ನೂ ಸೇರಿಸಿ) ತಾವು ಉತ್ಕೃಷ್ಟ ವಿಜ್ಞಾನ ಮಾಡದೇ ಇರಲು ನೆಪವಾಗಿ ಸವಲತ್ತುಗಳ ಕೊರತೆ ಮತ್ತು ನೀತಿನಿಯಮಗಳನ್ನು ಅಂದರೆ ಒಟ್ಟಾರೆ ವ್ಯವಸ್ಥೆ ಅಥವಾ ecosystem-ನ್ನು ದೂಷಿಸುತ್ತಾರೆ; ಆದರೆ ಮೇರಿ ಕ್ಯೂರಿ ವಿಜ್ಞಾನ ಸಂಶೋಧನೆಯ ಬಗ್ಗೆ ಎಷ್ಟೊಂದು ತೀವ್ರ ಆಸಕ್ತಿ ಶ್ರದ್ಧೆ ಹೊಂದಿದ್ದಳೆಂದರೆ ಅದಕ್ಕಾಗಿ ಬೇಕಾಗುವ ವ್ಯವಸ್ಥೆಯನ್ನು ಪ್ರತಿರೋಧಾತ್ಮಕ ಪರಿಸರದಲ್ಲಿ ಅವಳೇ ಕಟ್ಟಿಕೊಳ್ಳುತ್ತಾಳೆ. ಇದು ಅವಳ ಹೆಗ್ಗಳಿಕೆ.    


ಬಹುತೇಕ ಮೇರಿ ಕ್ಯೂರಿಯ ಈ ಎಲ್ಲಾ ಬದುಕಿನ ವಿವರಗಳನ್ನು ಹಲವು ಸೂಕ್ಷ್ಮತೆಗಳೊಡನೆ ರಂಗಕ್ಕೆ ಅಳವಡಿಸುವಲ್ಲಿ ಅಭಿನಯ ಭಾರತೀ ತಂಡ ಯಶಸ್ವಿಯಾಗಿದೆ. ಬಹುತೇಕ ಎಲ್ಲ ನಟರು ಪಾತ್ರಗಳಿಗೆ ಹೇಳಿಮಾಡಿಸಿದಂತೆ ಇದ್ದಾರೆ ಮತ್ತು ನಟಿಸಿದ್ದಾರೆ. ಈ  ಹಿಂದೆ ಇತರ ವಿಜ್ಞಾನ ನಾಟಕಗಳಲ್ಲಿ ಮಲ್ಟಿ ಮೀಡಿಯಾ ಪ್ರೊಜೆಕ್ಟರ್-ನ ಪ್ರಯೋಗ ನಡೆದಿದ್ದರೂ ಈ  ನಾಟಕದಲ್ಲಿ ಅದು ಹೆಚ್ಚು ಪರಿಣಾಮಕಾರಿ ಪಾತ್ರವಾಹಿಸಿದೆ: ಉದಾಹರಣೆಗೆ ರಸ್ತೆ ಅಪಘಾತಕ್ಕೆ  ಪಿಯರ್ ಕ್ಯೂರಿ ಬಲಿಯಾಗುವ ದೃಶ್ಯ; ಸ್ಟಾಕಹೋಮಿಗೆ ರೈಲಿನಲ್ಲಿ ಪ್ರಯಾಣಿಸುವ ದೃಶ್ಯ ಇತ್ಯಾದಿ. ಅದೇ ರೀತಿ ಬೆಳಕು ಕೂಡ ಆಸಕ್ತಿ ಹುಟ್ಟಿಸಿವಂತೆ ಕತೆಗೆ ಪೂರಕವಾಗಿ ಬಳಕೆಯಾಗಿದೆ. ಮೇರಿ ನಾಟಕದ ಮೊದಲ ಭಾಗದಲ್ಲಿ ಪಿಯರ್ ಜೊತೆಗೆ ಹೊಳೆಯುವ ಪೋಲೋನಿಯಂ –ನ ಜೊತೆ ಸಂಭ್ರಮಿಸಿದರೆ ಎರಡನೇ ಭಾಗದಲ್ಲಿ ಗೆಳೆಯ ಪಾಲ್-ನ ಜೊತೆಗೆ ರೇಡಿಯಂ-ನ್ನು ಶೋಧಿಸಿರುವುದನ್ನು ಸಂಭ್ರಮಿಸುತ್ತಾಳೆ. ಈ ಎರಡೂ  ದೃಶ್ಯಗಳನ್ನು  ಬೆಳಕಿನ ಸಂಯೋಜನೆ ಪರಿಣಾಮಕಾರಿಯಾಗಿಸುತ್ತದೆ.

ಮಗಳು ಐರೀನ್-ಳಿಗೆ ಅನಾರೋಗ್ಯವಾದಾಗ ಮೇರಿಯಲ್ಲಿನ ತಾಯಿ ಮತ್ತು ವಿಜ್ಞಾನಿ ಈ ಎರಡೂ ಮುಖಗಳ ದರ್ಶನವಾಗುತ್ತದೆ. ಪಾಲ್ ಲ್ಯಾಂಗ್ವಿನ್ ಮೊದಲಿನಿಂದಲೂ ಮೇರಿಯ ಬಗ್ಗೆ ಆಕರ್ಷಿತನಾಗಿರುವುದು ಮತ್ತು ಸಾಮಾನ್ಯ ಯೋಚನೆ, ಆಸಕ್ತಿಗಳನ್ನು ಹೊಂದಿದ್ದ ತನ್ನ ಹೆಂಡತಿ ಎಮ್ಮಾಳನ್ನು ಎಲ್ಲರೆದುರು ಗೌಣವಾಗಿ ಕಾಣುವುದು ಕೂಡಾ ಹಲವು ದೃಶ್ಯಗಳಲ್ಲಿ ಸೂಕ್ಷ್ಮವಾಗಿ ವ್ಯಕ್ತವಾಗುತ್ತದೆ. ಆದರೆ ಅದೇಕೋ ಎಮ್ಮಾಳ ಪಾತ್ರ ಕೇವಲ ಹಣದ ದುರಾಸೆಯುಳ್ಳ, ಗಂಡನ ಬೌದ್ಧಿಕ ಬದುಕಿನ ಬಗ್ಗೆ ತಿರಸ್ಕಾರವುಳ್ಳ ಕನ್ನಡ ಟೆಲಿ-ಧಾರಾವಾಹಿಯ ವ್ಯಾಂಪ್-ನಂತೆ ಏಕಮುಖಿಯಾಗಿ ಮೂಡಿಬಂದಿದೆ.

ನಾಟಕದ ಎಲ್ಲ ಯಶಸ್ಸಿನ ನಡುವೆ, ಅನ್ಯಭಾಷೆ, ಅನ್ಯದೇಶದ ಪರಿಸರ, ವಿಜ್ಞಾನದ ಕ್ಲಿಷ್ಟ ವಿಷಯಗಳು  ಕನ್ನಡಕ್ಕೆ ತರ್ಜುಮೆಯಾದಾಗ ಭಾಷೆ ಗ್ರಾಂಥಿಕವಾಗಿಬಿಡುವುದು ಅನಿವಾರ್ಯವೇ? ಲೈವ್ ಸಂಗೀತವಿದ್ದರೆ ಆಗ ಅದೊಂದು ಭಾರತೀಯ ವಿಜ್ಞಾನ ನಾಟಕವಾಗಿ ಹೆಚ್ಚು ಲವಲವಿಕೆಯಿಂದ ಹೆಚ್ಚು ಜನರನ್ನು ಸೆಳೆಯಬಹುದೆ? ಎಂಬ ಪ್ರಶ್ನೆಗಳು ನಾಟಕ ಮುಗಿದಾದ ನಂತರವೂ ಕಾಡುತ್ತವೆ.   

-ಡಾ| ಸುದರ್ಶನ ಪಾಟೀಲಕುಲಕರ್ಣಿ

ಮೈಸೂರು, ಜುಲೈ 2023