Roddam Narasimha & Shivanand Kanavi

A CONVERSATION ON INDIAN SCIENCE

"ಭಾರತ ಮತ್ತು ಚೀನಾದ ನಾಗರೀಕತೆಗಳು, ವಿಜ್ಞಾನ-ತಂತ್ರಜ್ಞಾನದ ಕ್ಷೇತ್ರಗಳಲ್ಲಿ, ಸುಮಾರು ೧೪೦೦ ವರ್ಷಗಳ ಕಾಲ ಮುಂಚೂಣಿಯಲ್ಲಿದ್ದವು"

 

ಫ್ರೊಫೆಸರ್ ರೊದ್ದಂ ನರಸಿಂಹ (ಎಫ್.ಆರ್. ಎಸ್.) ಕನ್ನಡ ಮೂಲದ ವೈಮಾನಿಕ ತಂತ್ರಜ್ಞಾನಕ್ಷೇತ್ರದ ಹಿರಿಯ ವಿಜ್ಞಾನಿ ಮಾತ್ರವಲ್ಲದೆ, ರಾಯಲ್ ಸೊಸೈಟಿ,  ಯು. ಎಸ್. ನ್ಯಾಷನಲ್ ಅಕಾಡೆಮಿ ಆಫ್ ಸಾಯನ್ಸಸ್, ಅಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್, ಸಾಯನ್ಸ್  -ನಂಥ ಪ್ರತಿಷ್ಠಿತ ಸಂಸ್ಥೆಗಳಿಗೆ ಆಯ್ಕೆಯಾದ ಮೊದಲ ಭಾರತೀಯರಲ್ಲಿ ಒಬ್ಬರು.  ವೈಮಾನಿಕ ಮತ್ತು ಬಾಹ್ಯಾಕಾಶ ವಿಜ್ಞಾನದಲ್ಲಿ ಇವರು ಅಪಾರ ಕೊಡುಗೆ ನೀಡಿದ್ದಾರೆ. ಸದ್ಯ ಬೆಂಗಳೂರಿನ ಜವಾಹರಲಾಲ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದು,  ಭಾರತದ ಮತ್ತು ಜಾಗತಿಕ ಮಟ್ಟದಲ್ಲಿನ ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದಂತೆ ಮೋಡಗಳ ಆಗುವಿಕೆ ಮತ್ತು ಅವುಗಳಲ್ಲಿನ ಪಲ್ಲಟಗಳನ್ನು  ಅರಿಯುವಲ್ಲಿ ನಿರತರಾಗಿದ್ದಾರೆ. ಪ್ರಾಚೀನ ಭಾರತೀಯರ ವೈಜ್ಞಾನಿಕ ಚಿಂತನಾಕ್ರಮಗಳ ಕುರಿತು ಅವರು ಈಗಾಗಲೇ ಹಲವು ಲೇಖನಗಳನ್ನು ಬರೆದಿದ್ದಾರೆ. (ನೋಡಿ, ‘ವಿಜ್ಞಾನ-ಸಂಸ್ಕೃತಿ: ರೊದ್ದಂ ನರಸಿಂಹ ಅವರ ಆಯ್ದ ಬರಹಗಳು’, ಅಕ್ಷರ ಪ್ರಕಾಶನ, ಹೆಗ್ಗೋಡು).

 

ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್, ಬೆಂಗಳೂರಿಗೆ ಹಂಗಾಮಿ ಪ್ರಾಧ್ಯಾಪಕರಾಗಿರುವ ಶಿವಾನಂದ ಕಣವಿ ಅವರ ಜೊತೆ ಅವರು ನಡೆಸಿರುವ ಮಾತುಕತೆಯ ಆಯ್ದ ಭಾಗಗಳು ಇಲ್ಲಿವೆ:

 

ಎಸ್.ಕೆ.: ಭಾರತೀಯ ವಿಜ್ಞಾನದಲ್ಲಿ ನಿಮಗೆ ಆಸಕ್ತಿ ಹುಟ್ಟಿದ್ದು ಹೇಗೆ ಮತ್ತು ನೀವು ಅದನ್ನು ನೋಡುವ ಬಗೆ ಹೇಗೆ?

 

ಭಾರತೀಯ ವಿಜ್ಞಾನದ ಕುರಿತು ನನ್ನ ಆಸಕ್ತಿ ಪ್ರಾರಂಭವಾದದ್ದನ್ನು ನನ್ನ ವಿದ್ಯಾರ್ಥಿ ದಿನಗಳಲ್ಲಿ, ೧೯೫೦ರ ಸುಮಾರಿನಲ್ಲಿ. ಆಗ ನಾನು ಅಮೇರಿಕೆಯ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಗ್ರ್ಯಾಜುಯೇಟ್ ಏರಾನಾಟಿಕಲ್ ಲ್ಯಾಬರೋಟರಿಯಲ್ಲಿ ಸಂಶೋಧನೆ ಮಾಡುತ್ತಿದ್ದೆ. ಅಲ್ಲಿ ನಮಗೆ ವಿಯೆಟ್ನಾಂ, ಬರ್ಮಾದಿಂದ ಹಿಡಿದು ಯುರೋಪಿನವರೆಗಿನ ಎಲ್ಲಾ ದೇಶಗಳ ವಿದ್ಯಾರ್ಥಿಗಳು ಮತ್ತು ಸಮರ್ಥ ಪ್ರಾಧ್ಯಾಪಕರನ್ನು ಭೇಟಿಮಾಡುವ ಮತ್ತು ಅರಿತುಕೊಳ್ಳುವ ಅವಕಾಶವಿರುತ್ತಿತ್ತು. (ಅಲ್ಲಿ ನಾನು ಪ್ರೊಫೆಸರ್ ಹಾನ್ಸ್ ಲೀಪ್‍ಮನ್ ಎಂಬುವರೊಡನೆ ಕೆಲಸ ಮಾಡುತ್ತಿದ್ದೆ).

 

ಅಲ್ಲಿನ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕ ವರ್ಗದಲ್ಲಿ ಸಾಂಸ್ಕೃತಿಕವಾಗಿ ಅಪಾರ ಭಿನ್ನತೆ ಇದ್ದಾಗಿಯೂ ಕೂಡ ಬುದ್ಧಿಮತ್ತೆಯಲ್ಲಿ ನನಗೆ ಅಂಥಾ ವಿಶೇಷ ವ್ಯತ್ಯಾಸವೇನೂ ಕಾಣುತ್ತಿರಲಿಲ್ಲ. ಬುದ್ಧಿಮತ್ತೆಯು ಜಗತ್ತಿನಾದ್ಯಾಂತ ಸಮವಾಗಿಯೇ ಹಂಚಿಕೆಯಾಗಿರುವಂತೆ ತೋರುತ್ತಿತ್ತು. ಹೀಗಿರುವಾಗ, ವಿಶೇಷವಾಗಿ ಭಾರತವೂ ಸೇರಿದಂತೆ ಇನ್ನು ಹಲವಾರು ದೇಶಗಳು, ಪಶ್ಚಿಮಕ್ಕೆ ಹೋಲಿಸಿದರೆ, ಆರ್ಥಿಕವಾಗಿ ಮತ್ತು ತಂತ್ರಜ್ಞಾನದಲ್ಲಿ ಇಷ್ಟು ಹಿಂದುಳಿದಿರುವುದೇಕೆ? ಅಮೇರಿಕೆಯ ಹಲವಾರು ಖ್ಯಾತ ವಿಜ್ಞಾನಿಗಳನ್ನೂ, ರಿಚರ್ಡ್ ಫೇನ್‍ಮನ್‍ನಂಥ ನೊಬೆಲ್ ಪಾರಿತೋಷಕ ಪಡೆದವರನ್ನು ಭೇಟಿಮಾಡಿದಾಗ, ಅವರು ಲಕ್ಷಕ್ಕೊಬ್ಬರಂತೆ ವಿಶೇಷವಾಗಿ ಕಂಡರೂ, ನನಗೆ ಯಾವತ್ತೂ ಅತಿಮಾನುಷ ವ್ಯಕ್ತಿಗಳಾಗಿ ಕಾಣಲಿಲ್ಲ. ಹಾಗೆಯೇ ಬೆಂಗಳೂರಿನಲ್ಲಿ ನಾನು ಕಲಿತಿದ್ದ ವಿಜ್ಞಾನವು ಕ್ಯಾಲಿಫೋರ್ನಿಯದ ವಿಜ್ಞಾನದಷ್ಟು ಮುಂದುವರೆದದ್ದಾಗಿರಲಿಲ್ಲವಾದರೂ ಸಹಿತ, ಅದೇನೂ ಭಿನ್ನವಾಗಿರಲಿಲ್ಲ, ಮತ್ತದರ ನಾಯಕರು ಬೇರೆಯಾಗಿರಲಿಲ್ಲ. ಅವರೆಲ್ಲರೂ ಪ್ರಮುಖವಾಗಿ ಯುರೋಪ್ ಅಥವಾ ಪಶ್ಚಿಮಕ್ಕೆ ಸೇರಿದವರಾಗಿದ್ದರು.

 

‘ಹಾಗಿದ್ದರೆ ಭಾರತದಲ್ಲಿ ವಿಜ್ಞಾನವೇ ಇರಲಿಲ್ಲವೇ? ಚತುರಮತಿಗಳಾದ ವಿಜ್ಞಾನಿಗಳು ಇರಲಿಲ್ಲವೆ? ಇದ್ದರೆ ಅವರ ಸ್ವರೂಪ ಯಾವ ಬಗೆಯದಾಗಿತ್ತು’ ಎಂಬ ಪ್ರಶ್ನೆಗಳು ನನ್ನನ್ನು ಬಹುವಾಗಿ ಕಾಡಿದವು.

 

ಆಮೇಲೆ ನಾನು ಪ್ರಾಚೀನ ಭಾರತೀಯ ವಿಜ್ಞಾನದ ಕುರಿತು ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ. ಅದೇನೂ ಅಷ್ಟು ಸುಲಭವಾಗಿರಲಿಲ್ಲ. ನಾನಿದ್ದ ಕ್ಯಾಲ್‍ಟೆಕ್ ನಲ್ಲಿ ಈ ವಿಷಯದ ಕುರಿತು ಹೆಚ್ಚಿನ ಪುಸ್ತಕಗಳು ಲಭ್ಯವಿರಲಿಲ್ಲ. ಆದರೂ ಕೆಲವು ಆಸಕ್ತಿ ಹುಟ್ಟಿಸುವಂಥ  ಪುಸ್ತಕಗಳು ದೊರೆತವು ಎನ್ನಬೇಕು. ಅವುಗಳಲ್ಲಿ ಮೊದಲನೆಯದು ಕ್ರಿ.ಶ.೯೭೩-೧೦೫೨ರ ವರೆಗೆ ಜೀವಿಸಿದ್ದ ಪರ್ಶಿಯನ್ ವಿದ್ವಾಂಸನಾಗಿದ್ದ ಅಲ್-ಬಿರೂನಿಯ ಪುಸ್ತಕ, ‘ತಹಕೀಕ್ ಮಾ ಲಿ-ಲ್ ಹಿಂದ್ ಮಿನ್ ಮಕುಲಾ ಮಕ್ಬುಲಾ ಅಲ್-ಅಕಲ್ ಅವ್‍ಮರದುಲ್ಲ-ಭಾರತೀಯರು ಹೇಳುವ ವೈಚಾರಿಕ-ಅವೈಚಾರಿಕ ಎಲ್ಲದರ ಕುರಿತ ಪರೀಕ್ಷಣೆ’ ಎಂಬುದಾಗಿತ್ತು. ಈತ ಘಜನಿಯ ಮೊಹಮ್ಮದನ ಜೊತೆ ಒಂದು ಸಾವಿರ ವರ್ಷಗಳ ಹಿಂದೆ ಭಾರತದಲ್ಲಿ ಸಂಚರಿಸುತ್ತಿದ್ದ ಆಸ್ಥಾನ ವಿದ್ವಾಂಸನಾಗಿದ್ದ. ಅಲ್-ಬಿರುನಿಯ ಈ ಪುಸ್ತಕದ ಹಲವಾರು ಅಧ್ಯಾಯಗಳು ಭಾರತೀಯ ಖಗೋಳ-ಶಾಸ್ತ್ರದ ಕುರಿತಾಗಿದ್ದು ಓದಲು ಆಸಕ್ತಿ ಕೆರಳಿಸುವಂತಿವೆ. ಈ ಪುಸ್ತಕದಲ್ಲಿ, ‘ಹಿಂದೂಗಳು ತಮ್ಮ ಕಲೆ-ವಿಜ್ಞಾನಗಳೇ ಎಲ್ಲದಕ್ಕಿಂತ ಶ್ರೇಷ್ಠವೆಂತಲೂ, ತಮ್ಮ ಸಂಸ್ಕೃತಿಯೇ ಶ್ರೇಷ್ಠವೆಂದೂ’ ಭಾವಿಸಿರುವುದಾಗಿ ಆತ ದೂರುತ್ತಾನೆ. ಇವರ ವಿಜ್ಞಾನದಲ್ಲಿ ಹೊಳೆಯುವ ಮುತ್ತುಗಳಿವೆ ನಿಜ, ಆದರೆ ಅವೆಲ್ಲವೂ (ಪುರಾಣ-ಕಂತೆಗಳ) ಸೆಗಣಿಯಲ್ಲಿ ಹುದುಗಿ ಹೋಗಿವೆ ಎನ್ನುತ್ತಾನೆ.

 

ಕೆಲವು ಭಾರತೀಯರು ಅತಿಶಯವಾದ ಮೂಡನಂಬಿಕೆಗಳನ್ನು ಹೊಂದಿರುತ್ತಾರೆಂದೂ, ಆರ್ಯಭಟನಂಥವನ (ಕ್ರಿ.ಶ.೪೭೬-೫೫೦) ತರ್ಕ ಮತ್ತು ವೈಚಾರಿಕತೆಯ ಜೊತೆಗೆ ಅಂಥವುಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಎಂದು ಪರಾಮರ್ಶಿಸುತ್ತಾನೆ. ಅದರಲ್ಲೂ ವಿಶೇಷವಾಗಿ ಗ್ರಹಣಗಳನ್ನು ವಿವರಿಸಲು ರಾಹು-ಕೇತುವಿನ ಕತೆ ಕಟ್ಟುವ ಮೂಲಕ ಉನ್ನತ ವಿಜ್ಞಾನವನ್ನು ಪುರಾಣಕ್ಕೆ ಬಲಿಕೊಟ್ಟದಕ್ಕಾಗಿ ಬ್ರಹ್ಮಗುಪ್ತನನ್ನು(ಕ್ರಿ.ಶ.೫೯೮-೬೭೦) ಕಟುವಾಗಿ ಟೀಕಿಸುತ್ತಾನೆ.

 

ಆದರೆ ಅದೇ ಶತಮಾನಕ್ಕೆ ಸೇರಿದ ಮತ್ತೊಬ್ಬ ವಿದ್ವಾಂಸ ಸೈದ್ ಅಲ್-ಅಂಡಲೂಚಿ (ಸ್ಪ್ಯಾನಿಶ್-ಅರಬ್ ಪ್ರಾಂತ್ಯದವನು, ಕ್ರಿ.ಶ. ೧೦೨೯-೧೦೭೦, ಪುಸ್ತಕ: ಆಲ್-ತರಿಫ್ ಬಿ-ತಬಾಕತ್ ಅಲ್ ಉಮಾಮ್, ವಿವಿಧ ದೇಶದ ತಲೆಮಾರುಗಳ ಸಮೀಕ್ಷೆ), ಭಾರತೀಯ ವಿಜ್ಞಾನದಲ್ಲಿ ಬರೀ ಮುತ್ತುಗಳನ್ನೇ ಕಾಣುವಂತೆ ತೋರುತ್ತಾನೆ. ಜಾಗತಿಕ ವಿಜ್ಞಾನದ ಚರಿತ್ರೆಯ ಪುಸ್ತಕದಲ್ಲಿ ಗ್ರೀಕ್‍, ಈಜಿಪ್ಟ್, ಅರಬ್ ಮತ್ತು ಹಿಂದೂ ಸಮುದಾಯಗಳ ಸಾಧನೆಗಳನ್ನು ಸಮೀಕ್ಷಿಸುತ್ತಾ, ಹಿಂದೂಗಳನ್ನು ಅಗ್ರಸ್ಥಾನದಲ್ಲಿ ಕಾಣುತ್ತಾನೆ. ಅವರು ಅತ್ಯಂತ ಜಾಣರೆಂದೂ, ಪ್ರತಿಭಾವಂತರೆಂದೂ, ಹೊಸತನ್ನು ಹುಡುಕುವ ಸೃಜನಶೀಲರೆಂದೂ, ಅವರ ನಾಡು ದೇವರ ಕೃಪೆ ಪಡೆದ ನಾಡೆಂದೂ ಬಣ್ಣಿಸುತ್ತಾನೆ.

 

ಒಂದು ಕಾಲದಲ್ಲಿ ಅರಬ್ ಪ್ರಾಂತ್ಯವು ಅಂತರ‍್ರಾಷ್ಟ್ರೀಯ ಮಟ್ಟದ ವಿದ್ವತ್ ಕೇಂದ್ರವಾಗಿತ್ತೆಂಬುದನ್ನು ನಾವು ನೆನಪಿಡಬೇಕು. ಅಲ್ಲದೆ ಅರಬ್‍ರು ತಾವು ಇತರ ನಾಗರೀಕತೆಗಳಿಂದ ಪಡೆದುದರ ಕುರಿತು ಅಪಾರ ಔದಾರ್ಯವನ್ನು ತೋರುತ್ತಿದ್ದರೆಂಬುದನ್ನು ಸಹ ನಾನು ಕಾಲಾಂತರದಲ್ಲಿ ಕಂಡುಕೊಂಡೆ. ಆ ಕಾಲದಲ್ಲಿ ಬಾಗ್ದಾದಿನಲ್ಲಿ ಅಂತರ‍್ರಾಷ್ಟ್ರೀಯ ಮಟ್ಟದ ಜ್ಞಾನಭವನವೊಂದಿತ್ತು ಮತ್ತು ಅದರಲ್ಲಿ ನಮ್ಮ ಆರ್ಯಭಟ, ಬ್ರಹ್ಮಗುಪ್ತ, ಚರಕ ಮತ್ತು ಸುಶ್ರುತರಂಥವರ ಗ್ರಂಥಗಳು ಅರೇಬಿಕ್ ಭಾಷೆಗೆ ತರ್ಜುಮೆಗೊಂಡಿದ್ದವು. ಇನ್ನು ಕೆಲವು ಪುಸ್ತಕಗಳು ಪರ್ಶಿಯನ್ ಮತ್ತು ಚೀನಿ ಭಾಷೆಗಳಿಗೂ ಅನುವಾದಿಸಲ್ಪಟ್ಟಿದ್ದವು.

 

ಅಂದರೆ, ಭಾರತವು ಒಂದು ಕಾಲಘಟ್ಟದಲ್ಲಿ ವಿಜ್ಞಾನದಲ್ಲಿ ಬಹು ಮುಖ್ಯ ಪಾತ್ರವಹಿಸಿತ್ತು; ಹಾಗಿದ್ದಲ್ಲಿ ಇದೆಲ್ಲಾ ಯಾವಾಗ ಮತ್ತು ಯಾವ ಕಾರಣಕ್ಕಾಗಿ ಬದಲಾಯಿತು? ಈ ಪ್ರಶ್ನೆ ಹೊತ್ತು ನಾನು ಅಮೇರಿಕೆಯಿಂದ ಭಾರತಕ್ಕೆ ಮರಳಿದ ನಂತರ, ಭಾರತೀಯ ವಿಜ್ಞಾನವನ್ನು ಮೂಲ ಸಂಸ್ಕೃತದಲ್ಲಿ ಓದತೊಡಗಿದೆ. ಅದೂ ಸಹ ಪ್ರಾರಂಭದಲ್ಲಿ ಅಷ್ಟು ಸುಲಭವಾಗಿರಲಿಲ್ಲ. ಆದರೆ ನಿಧಾನವಾಗಿ ಅದು ನನ್ನನ್ನು ತೊಡಗಿಸಿಕೊಂಡಿತು.

 

ಎಸ್.ಕೆ.: ಆರ್ಯಭಟನ ವಿಚಾರ ಕ್ರಮದ ಕುರಿತು ಒಂದು ಉದಾಹರಣೆ ಕೊಡಬಹುದೆ?

 

ಆರ್ಯಭಟನೊಬ್ಬ ಉಚ್ಚ ಮಟ್ಟದ ವೈಚಾರಿಕನಾಗಿದ್ದ. ಆತನ ಬರಹಗಳಲ್ಲಿ ಮೌಢ್ಯವೆಂಬುದು ನಿಮಗೆ ಅಷ್ಟಾಗಿ ಸಿಗಲಾರದು. ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದಾಗ ಸೂರ್ಯಗ್ರಹಣವಾಗುವುದೆಂದೂ, ಮತ್ತು ಚಂದ್ರನು ಭೂಮಿಯ ನೆರಳನ್ನು ಪ್ರವೇಶಿಸಿದಾಗ ಚಂದ್ರಗ್ರಹಣವಾಗುವುದೆಂದೂ ಆತ ಅರಿತಿದ್ದ. ಚಂದ್ರನ ಮೇಲಿನ ನೆರಳಿನ ಆಕಾರದ ನೆರವಿನಿಂದ ಭೂಮಿ ದುಂಡಗಿದೆ ಎಂದು ನೀರ್ಣಯಿಸಿದ. ಇದು ಈಗ ಸಾಮಾನ್ಯ ಜ್ಞಾನ ಎಂಬಂತೆ ತೋರುತ್ತದೆಯಾದರೂ ಆ ಕಾಲಕ್ಕೆ ಹಾಗೆ ಹೇಳುವುದು ವಿದ್ರೋಹವೆನಿಸಿಕೊಳ್ಳುತ್ತಿತ್ತು. ಹಾಗೆಯೇ ಹಗಲು-ರಾತ್ರಿಗಳು ಭೂಮಿಯು ತನ್ನ ಸುತ್ತಲೂ ತಿರುಗುವುದರಿಂದ ಆಗುವವು ಎಂದು ಹೇಳಿದ.

 

ಎಸ್. ಕೆ: ಗ್ರಹಗಳ ವ್ಯವಸ್ಥೆಯು ಸೂರ್ಯ-ಕೇಂದ್ರಿತವೆ ಅಥವಾ ಭೂ-ಕೇಂದ್ರಿತವೆ ಎಂಬುದರ ಕುರಿತಾಗಿ ಆತ ಏನನ್ನಾದರೂ ಹೇಳಿದನೆ?

 

 ಆರ್ಯಭಟನಿಗೆ ಗ್ರಹಗಳ ಸಾಪೇಕ್ಷ ಚಲನೆಯೇ ಅತಿಮುಖ್ಯವಾಗಿತ್ತಾದ್ದರಿಂದ,  ಸೂರ್ಯ-ಕೇಂದ್ರಿತ ಅಥವಾ ಭೂ-ಕೇಂದ್ರಿತ ಪ್ರಶ್ನೆಯ ಕುರಿತಾಗಿ ಆತ ಯಾವುದೆ ನೇರ ಹೇಳಿಕೆಯನ್ನು ಮಾಡುವುದಿಲ್ಲ. ಇವೊತ್ತು ನಾವು ಗೆಲೀಲಿಯನ್ ಸಾಪೇಕ್ಷ ಸೂತ್ರವೆಂದು ಯಾವುದನ್ನು ಕರೆಯುತ್ತೇವೋ ಅದನ್ನು ಬಳಸಿ ಆತ ಒಂದು ಉದಾಹರಣೆ ನೀಡುತ್ತಾನೆ. ನದಿಯೊಂದರಲ್ಲಿ ದೋಣಿಯೊಂದು ತೇಲಿಹೋಗುತ್ತಿರುವಾಗ, ನೆಲದ ಮೇಲಿನ ಮರಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವಂತೆ ಕಾಣುತ್ತವೆ. ‘ಯಾವುದು ಸ್ಥಿರ ಯಾವುದು ಅಸ್ಥಿರ ಎಂದು ಹೇಗೆ ಹೇಳುವುದು?’ ಈ ಪ್ರಶ್ನೆಯ ನಿಖರ ಉತ್ತರವೇ ಆತನಿಗೆ ಅಮುಖ್ಯ.

 

ಎಸ್. ಕೆ: ನೀವು ಸಂಸ್ಕೃತವನ್ನು ಮೊದಲಿನಿಂದಲೂ ಅಭ್ಯಾಸ ಮಾಡಿರುವವರಾ?

 

ಶಾಲೆಯಲ್ಲಿ ಸಂಸ್ಕೃತ ನನ್ನ ಎರಡನೇ ಭಾಷೆಯಾಗಿತ್ತು. ಆದರೆ ಅಲ್ಲಿ ನಾನು ಹೆಚ್ಚಾಗಿ ಕಲಿಯಲಿಲ್ಲ. ಹೀಗಾಗಿ ತಂದೆಯವರ ಒತ್ತಾಯದ ಮೇರೆಗೆ ಗಾಂಧಿಬಜಾರಿನ ದೇವಸ್ಥಾನವೊಂದರಲ್ಲಿ ಬೆಳಗಿನ ಪಾಠಶಾಲೆಯಲ್ಲಿ ಕಲಿಯಲು ಹೋಗುತ್ತಿದ್ದೆ. ಕಾಲೇಜು ಸೇರಿದ ಮೇಲೆ, ಬಸವನಗುಡಿಯ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ದಿವಂಗತ ಡಿ. ವಿ. ಗುಂಡಪ್ಪನವರು ನಡೆಸುತ್ತಿದ್ದ ಬಹುಶಾಸ್ತ್ರೀಯ, ಬಹುಭಾಷೀಯ ಭಾನುವಾರದ ತರಗತಿಗಳಲ್ಲಿ ಸಂಸ್ಕೃತವನ್ನು ಪಡೆದುಕೊಳ್ಳುತ್ತಿದ್ದೆ. ಈ ಸಂಸ್ಕೃತದ ಜೊತೆಗಿನ ಸಂಬಂಧ ನನ್ನ ಅಮೇರಿಕೆಯ ವಾಸದ ಕೊನೆಯ ದಿನಗಳಲ್ಲಿ ಜೀವಂತಗೊಂಡು, ಮನೆಗೆ ಮರಳಿದ ನಂತರ ಸಂಸ್ಕೃತ ಮೂಲದಲ್ಲಿ ಪುಸ್ತಕಗಳನ್ನು ಓದುವ ಯೋಜನೆಯಾಗಿ ರೂಪಗೊಂಡಿತು ಎಂದು ಹೇಳಬಹುದು.

 

ಆಗ ನಿಧಾನವಾಗಿ ಆರ್ಯಭಟ ಮತ್ತು ಭಾಸ್ಕರಾಚಾರ್ಯರು(ಕ್ರಿ.ಶ. ೧೧೧೪-೧೧೮೫, ಗಣಿತಜ್ಞ, ಖಗೋಳಶಾಸ್ತ್ರಜ್ಞ) ಅತ್ಯಂತ ಚಾಣಾಕ್ಷಮತಿಗಳೆಂದೂ, ಜಗತ್ತಿನ ಅತ್ಯುತ್ತಮರಿಗೆ ಸಾಟಿಯಾಗಬಲ್ಲರೆಂದು  ನನಗೆ ಸ್ಪಷ್ಟವಾಯಿತು. ಆದರೆ ಅದೇ ಕಾಲಕ್ಕೆ, ಅವರ ವೈಚಾರಿಕತೆ, ಅವರ ತಾತ್ವಿಕತೆ ಮತ್ತವರು ಯೋಚಿಸುತ್ತಿದ್ದ ರೀತಿಯಲ್ಲಿ ಅನ್ಯ ನಾಗರೀಕತೆಯ ವಿಜ್ಞಾನಿಗಳಿಗಿಂತ ಭಿನ್ನತೆ ಇದೆ ಎಂದು ಅನಿಸತೊಡಗಿತ್ತು.

 

ಹಾಗಿದ್ದಲ್ಲಿ, ಪಶ್ಚಿಮ ಯಾವ ಕಾಲವನ್ನು ಅಂಧಕಾರದ ಯುಗ ಎಂದು ಭಾವಿಸುತ್ತದೆಯೋ, ಅದೇ ಕಾಲದಲ್ಲಿ ಭಾರತದಲ್ಲಿ ವಿಜ್ಞಾನವು ಅದೇಕೆ ಸಶಕ್ತವಾಗಿತ್ತು? ಮತ್ತು ತದನಂತರೆ ಏಕೆ ಸ್ಥಗಿತಗೊಂಡು ಹಿನ್ನಡೆಯಾಯಿತು? ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು.

 

ಎಸ್.ಕೆ.: ಆರ್ಯಭಟ ಮತ್ತು ಬ್ರಹ್ಮಗುಪ್ತರ ನಡುವಿನ ಜಗಳಕ್ಕೆ ಮತ್ತೆ ಹೋಗೋಣವೆ?

 

ರಾಹು ಎಂಬ ದಾನವ ಸೂರ್ಯನನ್ನು ನುಂಗಿದ್ದರಿಂದ ಸೂರ್ಯಗ್ರಹಣವಾಯಿತೆಂದೂ, ಕೇತುವೆಂಬ ಆತನ ಬಾಲ ಚಂದ್ರನನ್ನು ಮುಸುಕಿದ್ದರಿಂದ ಚಂದ್ರ ಗ್ರಹಣವಾಯಿತೆಂಬ ವಿವರಣೆಯನ್ನು ಆರ್ಯಭಟ ಸಾರಾಸಗಾಟವಾಗಿ ತಿರಸ್ಕರಿಸಿದ್ದ. ಗ್ರಹಣಗಳು ಉಂಟಾಗವುದು ನೆರಳಿನಿಂದ ಆದರೆ ನನಗೆಲ್ಲೂ ಬಾಲದ ನೆರಳು ಕಾಣುತ್ತಿಲ್ಲ ಎಂದು ಆತ ವ್ಯಂಗ್ಯದಲ್ಲಿ ಹೇಳಿದ. ಆದರೆ ಮತ್ತೊಂದು ಶತಮಾನದ ನಂತರ ಬಂದ ಬ್ರಹ್ಮಗುಪ್ತ ರಾಹು-ಕೇತು ವಿವರಣೆಯನ್ನು ಆರ್ಯಭಟ ತಿರಸ್ಕರಿಸುವುದನ್ನು ಒಪ್ಪಲಿಲ್ಲ ಮತ್ತು ಆತನನ್ನು ಆತನ ಸಹಚರರನ್ನೂ ಪ್ರತಿಯಾಗಿ ಕಟುವಾಗಿ ಟೀಕಿಸಿದ.

 

ತದನಂತರ ವರಾಹಮಿಹಿರ (ಕ್ರಿ. ಶ. ೫೦೩-೫೮೭) ಬ್ರಹ್ಮಗುಪ್ತನ ವಿವರಣೆಯೂ ನೆರಳಿನ ವಿವರಣೆಯನ್ನೇ ಆಧರಿಸಿದ್ದರಿಂದ, ಆತನ ವಾದಗಳನ್ನು ಅಸಂಬದ್ಧವೆಂದು ತಳ್ಳಿಹಾಅಕಿದ (ಬ್ರಹ್ಮಗುಪ್ತನ ವಾದದಲ್ಲಿನ ಈ ಅಸಂಗತತೆಯೇ ಅಲ್-ಬರುನಿಯ ಟೀಕೆಯ ಮುಖ್ಯ ಗುರಿಯಾಗಿತ್ತು). ಈ ಎಲ್ಲಾ ಚರ್ಚೆಯಿಂದ ನಾನು ಅರಿತದ್ದೇನೆಂದರೆ, ಪುರಾಣ ಮತ್ತು ವೈಚಾರಿಕ ವಿಜ್ಞಾನಗಳ ಚರ್ಚೆ ಭಾರತದಲ್ಲಿ ಆರ್ಯಭಟನ ಕಾಲದಿಂದಲೂ ಇದೆ ಮತ್ತು ಜನಮಾನಸದಲ್ಲಿ ಈಗಲೂ ಮುಂದುವರೆದಿದೆ.

 

ಆರ್ಯಭಟ, ಬ್ರಹ್ಮಗುಪ್ತ, ಪ್ಲೇಟೋ, ನ್ಯೂಟನ್, ರಾಮಾನುಜನ್ ಇಂಥವರನ್ನು ಒಳಗೊಂಡು, ಕಾಲಘಟ್ಟಗಳ ಆಚೆಈಚೆ ನಿಂತು ವಾಗ್ವಾದದಲ್ಲಿ ತೊಡಗಿರುವ ಅದ್ಭುತ ನಾಟಕವೊಂದು ಬರೆಯಿಸಿಕೊಳ್ಳಲು ಕಾಯುತ್ತಿದೆ ಎಂದು ನನಗನ್ನಿಸುತ್ತದೆ.

 

ಈ ವಿವಾದದ ಹೊರತಾಗ್ಯೂ, ಆರ್ಯಭಟ ಮತ್ತು ಬ್ರಹ್ಮಗುಪ್ತರನ್ನು ಸೇರಿದಂತ ನಂತರದ ತಲೆಮಾರಿನ ಅನೇಕ ಭಾರತೀಯ ಗಣಿತಜ್ಞರು, ಖಗೋಳಶಾಸ್ತ್ರಜ್ಞರು ಆರ್ಯಭಟ, ಬ್ರಹ್ಮಗುಪ್ತರನ್ನು ಗೌರವಿಸುತ್ತಲೇ ಬಂದಿದ್ದಾರೆ. ಯುರೋಪಿನಲ್ಲಿ ಆದಂತೆ ಆರ್ಯಭಟನನ್ನು ಯಾರೂ ವಿಚಾರಣೆ ಅಥವಾ ಶಿಕ್ಷೆಗೆ ಒಳಪಡಿಸಲಿಲ್ಲ.

 

ನಾವು ಸಣ್ಣವರಿದ್ದಾಗ, ನಮ್ಮ ತಂದೆಯವರು ಪ್ರತಿ ವರ್ಷ ಯುಗಾದಿಗೆ ಮನೆಗೆ ತರುತ್ತಿದ್ದ ಒಂಟಿಕೊಪ್ಪಲು ಪಂಚಾಂಗವು ತಾನು  ಆರ್ಯಭಟೀಯರೀತ್ಯ ಎಂದು ಹೇಳಿಕೊಳ್ಳುತ್ತಿತ್ತು. ದೃಗ್ಗಣಿತ (ಅಕ್ಷರಗಳು ನನ್ನ ಬಾಲ್ಯದ ಕಿವಿಗೆ ವಿಚಿತ್ರ ಮತ್ತು ಕೌತುಕಮಯ ಎನಿಸುತ್ತಿದ್ದವು) ಎಂದು ಬರೆಯಲ್ಪಟ್ಟಿರುತ್ತಿತ್ತು. ಇದನ್ನೆಲ್ಲಾ ನೋಡಿದಾಗಲೆಲ್ಲಾ ಹಾಗೆಂದರೇನು? ಎಂದು ಕುತೂಹಲ ಹುಟ್ಟುತ್ತಿತ್ತು. ಈ ಎಲ್ಲದರಿಂದ, ಸುಮಾರು ೧,೫೦೦ ವರ್ಷಗಳಿಂದಲೂ ಖಗೋಳಶಾಸ್ತ್ರದ ಭಾರತೀಯ ಚಿಂತನಾಕ್ರಮಕ್ಕೆ ಆರ್ಯಭಟನದ್ದೇ ಬುನಾದಿ ಎಂಬುದಂತೂ ಸ್ಪಷ್ಟವಾಗುತ್ತದೆ.

 

ಎಸ್. ಕೆ.: ದೃಗ್ಗಣಿತ ಎಂದರೇನು?

 

ಖಗೋಳಶಾಸ್ತ್ರದ ಭಾರತೀಯ ತಾತ್ವಿಕತೆಯಲ್ಲಿ ಇದೊಂದು ಬಹುಮುಖ್ಯ ಪರಿಕಲ್ಪನೆ. ಗಣಿತದ ಲೆಕ್ಕಾಚಾರ ಮತ್ತು  ಕಣ್ಣಾರೆ ಕಂಡದ್ದು(ದೃಗ್) ಇವುಗಳ ಮಧ್ಯ ತಾಳೆಯಾಗುವುದನ್ನು ಸಾಧಿಸುವುದು ಇದರ ಬಹುಮುಖ್ಯ ಉದ್ದೇಶ. ಇವೊತ್ತಿನ ಪರಿಭಾಷೆಯಲ್ಲಿ ಹೇಳಬೇಕೆಂದರೆ ಗಣಿತದಿಂದ ಅಪೇಕ್ಷಿತವಾದದ್ದು ಪರಿವೀಕ್ಷಿತಕ್ಕೆ ಒಪ್ಪುವಂಥಿರಬೇಕು ಎಂಬ ಧೋರಣೆ. ಇದೇನೂ ನಮಗೆ ಅಚ್ಚರಿಯನಿಸಬೇಕಿಲ್ಲ.

 

ಆದರೆ ಗ್ರೀಕರು ಗಣಿತದ ಲೆಕ್ಕಾಚಾರಕ್ಕಿಂತ ಮೊದಲು ಹಲವಾರು ಅಂದಾಜುಗಳಿಂದ ಕೂಡಿದ ಒಂದು ಕಲ್ಪಿತ ಮಾದರಿಯೊಂದನ್ನು ನಿರ್ಮಿಸ ಬಯಸುತ್ತಿದ್ದರು. ಈ ಗಣಿತದ ಲೆಕ್ಕಾಚಾರಗಳನ್ನೂ ಸಹ ಅವರು ಹೆಚ್ಚಾಗಿ ಬ್ಯಬಿಲೋನಿಯನ್‍ರಿಂದ ಕಲಿತದ್ದು. ಇಲ್ಲೂ ಸಹ ಪರಿವೀಕ್ಷಿತದ ಜೊತೆ ತಾಳಿಕೆಯಾಗುವುದು (ಅದು ವಿಜ್ಞಾನ ಎನಿಸಿಕೊಳ್ಳಲು) ಅವಶ್ಯವೇ ಆಗಿತ್ತು.  ಆದರೆ ಪ್ಲೇಟೋನಂಥವನಿಗೆ ಇದನ್ನೆಲ್ಲಾ ಒಂದು ಜಾಣ ಜ್ಯಾಮಿತಿ ಯಂತ್ರವು ಬರೀ ತರ್ಕದಿಂದ ಅರಿಯಲು ಸಾಧ್ಯ ಎಂಬ ಖಚಿತ ನಂಬಿಕೆಯಾಗಿತ್ತು.

 

ಭಾರತೀಯ ಖಗೋಳವಿಜ್ಞಾನದ ಈ ಪ್ರಮಾಣ ಪದ್ಧತಿ ಗ್ರೀಕ್‍ರ ಮಾದರಿ ಮಾರ್ಗಕ್ಕೆ ಒತ್ತುಕೊಡದೇ, ಗಣಿತದ ಲೆಕ್ಕಗಳಿಗೆ ಒತ್ತುಕೊಟ್ಟಿತು. ಇದನ್ನು ನಾನು ಇವೊತ್ತಿನ ಭಾಷೆಯಲ್ಲಿ ಕಂಪ್ಯೂಟೇಶನಲ್ ಪಾಸಿಟಿವಿಸಂ ಎನ್ನುತ್ತೇನೆ. ಈ ಪದ್ಧತಿ ನ್ಯೂಟನ್-ನ ನಂತರವೂ ಸುಮಾರು ನೂರು ವರ್ಷಗಳ ಕಾಲ ಜೀವಂತವಾಗಿತ್ತು, ಅಷ್ಟೇ ಅಲ್ಲ ಪರಿವೀಕ್ಷಿತದ ಜೊತೆಗಿನ ತಾಳಿಕೆಯಲ್ಲಿ ಇತರರ ಪದ್ಧತಿಗಿಂತ ಹೆಚ್ಚು ನಿಖರವಾಗಿರುತ್ತಿತ್ತು.

 

ಆದರೆ ಹತ್ತೊಂಬತ್ತನೇ ಶತಮಾನದ ನ್ಯೂಟನ್ನಿನ ಕ್ರಾಂತಿ, ಬೀಜಗಣಿತ ಮತ್ತು ಕಲನಶಾಸ್ತ್ರ(ಕ್ಯಾಲ್ಕುಲಸ್)ದೊಡನೆ ಶೇರಿ, ಖಗೋಳಶಾಸ್ತ್ರ ಮತ್ತು ಇತರ ಭೌತಿಕ ವಿಜ್ಞಾನಗಳನ್ನು ಸಂಪೂರ್ಣ ಬದಲಾಯಿಸಿತು. ಯುರೋಪಿನ ಈ ಬೆಳವಣಿಗೆ ಅದೆಷ್ಟು ತೀವ್ರ ಮತ್ತು ಅದ್ಭುತವಾಗಿತ್ತೆಂದರೆ ನಿಖರತೆಯಲ್ಲಿ ೧೯ನೇ ಶತಮಾನದ ಪ್ರಾರಂಭದ ಹೊತ್ತಿಗೆ ಭಾರತೀಯ ಪದ್ಧತಿಯನ್ನು ಅದೆಷ್ಟೋ ಮೈಲಿ ಹಿಂದೆ ಹಾಕಿತ್ತು.

 

ಎಸ್. ಕೆ.: ಹಾಗಿದ್ದರೆ ಭಾರತದ ವಿಜ್ಞಾನವೆಲ್ಲವೂ ವೈಚಾರಿಕವಾಗಿತ್ತೆಂದು ಹೇಳಬಹುದೆ?

 

ಬ್ರಹ್ಮಗುಪ್ತನ ಕುರಿತು ನಾವು ಈಗಾಗಲೇ ಮಾತಾಡಿದ್ದೇವೆ. ಆದರೂ ಸಾಮಾನ್ಯವಾಗಿ ಭಾರತೀಯ ವಿಜ್ಞಾನವನ್ನು ವೈಚಾರಿಕವೆಂದೇ ಹೇಳಬಹುದು ಮತ್ತು ಅದು ಪುರಾಣದ ಕಥನಗಳ ಜೊತೆ ತನ್ನದೇ ಸಂಘರ್ಷವನ್ನು ಹೊಂದಿತ್ತು ಎಂದು ಹೇಳಬಹುದು.

 

ಹಾಗೆ ನೋಡಿದರೆ, ನ್ಯೂಟನ್ ತನ್ನ ವಿಜ್ಞಾನದ ಬಗ್ಗೆ ವೈಚಾರಿಕನಾಗಿದ್ದರೂ ಕೂಡಾ ಆತ ಗುಟ್ಟಾಗಿ ಬರೆಯುತ್ತಿದ್ದ ಕ್ರಿಶ್ಚಿಯನ್ ಧರ್ಮಶಾಸ್ತ್ರವನ್ನು ಹೆಚ್ಚು ಮುಖ್ಯ ಎಂದು ಭಾವಿಸುತ್ತಿದ್ದ. (ಬಹಳ ಜನರಿಗೆ ಇದರ ಬಗ್ಗೆ ಹೆಚ್ಚು ಗೊತ್ತಿಲ್ಲ ಅಥವಾ ನೆನಪಿಲ್ಲ.) ಏಕೆಂದರೆ ಯುರೋಪಿಗೂ ಮೊದಲು ಏಶಿಯಾ ಮತ್ತು ಆಫ್ರಿಕಾದಲ್ಲಿ ನಾಗರೀಕತೆಗಳು ಇದ್ದವೆಂಬುದು ಅವರ ಅರಿವಿಗೆ ಬರತೊಡಗಿತ್ತು. ಅಷ್ಟೇ ಅಲ್ಲ ಅವುಗಳ ಆಯಸ್ಸು ಬೈಬಲ್ ಹೇಳುವ ಜಗದ ಆಯಸ್ಸಿನ ಜೊತೆಗೆ ಹೊಂದಿಕೆಯಾಗಿ (ಯುರೋಪಿನ ಅಸ್ಮಿತೆಯ ದೃಷ್ಟಿಯಿಂದ) ಬಹು ದೊಡ್ಡ ಸಮಸ್ಯೆಯಾಗಿತ್ತು.

 

ನೀವು ಯುರೋಪಿನಲ್ಲಿ ನವೋದಯಕ್ಕಿಂತ ಮುಂಚಿನ ಅಂಧಕಾರದಯುಗವೆಂದು ಕರೆಯಲ್ಪಡುತ್ತಿದ್ದ ಕಾಲದಲ್ಲಿ ಅಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನೂ, ನಮ್ಮದರ ಜೊತೆ ಹೋಲಿಸಿ ನೋಡಿದರೆ, ಭಾರತೀಯ ವಿಜ್ಞಾನವು ಆ ಕಾಲದ ಯುರೋಪಿನ ವಿಜ್ಞಾನಕ್ಕಿಂತ ಹೆಚ್ಚು ವೈಚಾರಿಕವಾಗಿತ್ತು ಎಂಬುದು ತಿಳಿದುಬರುತ್ತದೆ. ರಾಹು ಕೇತು ಒಂದು ಅಸಂಬದ್ಧ ಕಂತೆ ಎಂದದ್ದಕ್ಕೆ ಯಾರೂ ಆರ್ಯಭಟನನ್ನು ಶಿಕ್ಷೆಗೆ ಒಳಪಡಿಸಲಿಲ್ಲ. ಅದೇ ರೀತಿ ಟೀಕಿಸಲ್ಪಟ್ಟ ಬ್ರಹ್ಮಗುಪ್ತನ ಹಿರಿಮೆಯೆನೂ ಅದರಿಂದಾಗಿ ಕಡಿಮೆಯಾಗಲಿಲ್ಲ. ಅವರಿಬ್ಬರೂ ಮುಖ್ಯವಾಗಿ ಕಂಪ್ಯೂಟೇಶನಲ್ ಪಾಸಿಟಿವಿಸಂನ ಪರಂಪರೆಗೆ ಸೇರಿದವರಾಗಿದ್ದರು, ಹೀಗಾಗಿ ಅವರ ಇತರ ನಿಲುವುಗಳು ಭಿನ್ನ ನಿಲುವುಗಳ ಬಗ್ಗೆ ನಿರ್ಲಕ್ಷ್ಯ ವಹಿಸುವ ಭಾರತದ ಯಾವತ್ತಿನ ಸಹಿಷ್ಣುತೆಯ ಪರಂಪರೆಯಲ್ಲಿ ಲೆಕ್ಕಕ್ಕೆ ಬಾರದೇ ಹೋದವು.


ಡಾ||  ರೊದ್ದಂ ನರಸಿಂಹ 

ಡಾ || ಶಿವಾನಂದ ಕಣವಿ 

ಎಸ್.ಕೆ.: ಹಾಗಿದ್ದರೆ ಈ ಪಾರಂಪರಿಕ ವಿಜ್ಞಾನ ಯಾವ ಕಾಲದವರೆಗೆ ಜೀವಂತವಾಗಿತ್ತು? ಮತ್ತದು ಅವಸಾನ ಗೊಂಡಿದ್ದು ಏಕೆ?

 

 

ಸುಮಾರು ಇಪ್ಪತ್ತು ವರ್ಷಗಳ ಕೆಳಗೆ, ಜೊಸೆಫ್ ನೀಡ್‍ಹೆಮ್ ಎಂಬ ಬ್ರಿಟೀಷ್ ವಿಜ್ಞಾನಿಯ ಬರಹಗಳ ಸಂಪರ್ಕಕ್ಕೆ ನಾನು ಬಂದೆ. ಆತ ಚೀನಿ ವಿಜ್ಞಾನ-ತಂತ್ರಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿದ್ದವನು, ಜೊತೆಗೆ ಭಾರತೀಯ ವಿಜ್ಞಾನವನ್ನೂ ತಕ್ಕ ಮಟ್ಟಿಗೆ ಅರಿತುಕೊಂಡಿದ್ದವನು. ಪಶ್ಚಿಮವು ಪೌರ್ವಾತ್ಯವಿಜ್ಞಾನವನ್ನು ಹೆಚ್ಚು ಅರಿತುಕೊಂಡಂತೆ, ಈ ಮುಂದಿನ ಪ್ರಶ್ನೆಗೆ ಉತ್ತರವನ್ನೂ ಬೇಡಿತು. “ಸುಮಾರು ೧೪೦೦ ವರ್ಷಗಳಷ್ಟು ಕಾಲ(ಅಂದರೆ ಕ್ರಿ.ಶ. ೨೦೦ ರಿಂದ ಕ್ರಿ.ಶ. ೧೬೦೦ರ ತನಕ), ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪಶ್ಚಿಮಕ್ಕಿಂತಲೂ ಮುಂದಿದ್ದ ಚೀನಾದಲ್ಲಾಗಲಿ, ಭಾರತದಲ್ಲಾಗಲಿ ಆಧುನಿಕ ಸ್ವರೂಪದದ ವಿಜ್ಞಾನವು ಹುಟ್ಟಿಕೊಳ್ಳಲಿಲ್ಲವೇಕೆ?" (ನೀಡ್‍ಹೆಮ್ ಕೇಳಿದ, "ಆಧುನಿಕ ವಿಜ್ಞಾನವು ಪಾಟ್ನಾ ಅಥವಾ ಪೀಕಿನ್ಂಗ್-ನಲ್ಲಿ ಹುಟ್ಟದೇ ಪೀಸಾದಲ್ಲೇಕೆ ಹುಟ್ಟಿತು?")

 

ನನಗೆ ತಿಳಿದಂತೆ, "ಭಾರತ ಮತ್ತು ಚೀನಾ ಹೀಗೆ ೧೪೦೦ ವರ್ಷಗಳಕಾಲ ಪಶ್ಚಿಮಕ್ಕಿಂತ ಮುಂದೆ ಇದ್ದವು" ಎಂಬ ಅಂಶವನ್ನು ಮುಕ್ತವಾಗಿ ಒಪ್ಪಿಕೊಂಡ ಮೊದಲ ಪಾಶ್ಚಾತ್ಯ ವಿದ್ವಾಂಸ, ಈ ಜೊಸೆಫ್ ನೀಡ್‍ಹೆಮ್. ಈ ಪ್ರಶ್ನೆ ಭಾರತದಲ್ಲಿ ಅಷ್ಟು ಚರ್ಚಿತವಾಗಿಲ್ಲ. ಕೆಲವು ಭಾರತೀಯರು ತಮಗೆ ಪೂರ್ವಕಾಲದಲ್ಲೇ ಎಲ್ಲವೂ ಗೊತ್ತಿತ್ತೆಂಬ ಅತಿರೇಕದ ನಿಲುವನ್ನು ತಳೆದರೆ, ಇನ್ನೂ ಕೆಲವರು ನಮ್ಮಲಿದ್ದದೆಲ್ಲವೂ  ಮೂಢನಂಬಿಕೆಗಳು, ಪುರಾಣಕಂತೆಗಳು ಎಂಬ ವಿರುದ್ಧ ದಿಕ್ಕಿನ ಅತಿರೇಕಕ್ಕೆ (ಯುರೋಪಿನ ಒಂದು ಶೆಲ್ಫಿನ ಪುಸ್ತಕವು ಏಶ್ಯಾ, ಅರಬ್-ರ ಒಟ್ಟೂ ಸಾಹಿತ್ಯಕ್ಕೆ ಸಮ ಎಂಬ ಮೆಕಾಲೆಯ ವಸಾಹತುಶಾಹಿ ಪ್ರೇರಿತ ನಿಲುವು) ಹೋಗುತ್ತಾರೆ. ಎರಡೂ ಪಕ್ಷಗಳೂ ಸರಿಯಲ್ಲವೆಂದೂ, ವಿಜ್ಞಾನದ ಇತಿಹಾಸವು ಸರಳ ರೇಖೆಯಾಗಿರದೇ, ಅಡ್ಡಾದಿಡ್ಡಿ ಹೋಗುವಂತಹದೆಂದೂ ನನಗೆ ಆನಂತರ ಸ್ಪಷ್ಟವಾಯಿತು.

 

"ಯುರೋಪಿನ ಅಂಧಕಾರದಯುಗ ನಮಗೆ ಅಂಧಕಾರವಾಗಿರಲಿಲ್ಲ. ನಮ್ಮ ಕತ್ತಲೆಯ ಯುಗ ಶುರುವಾಗಿದ್ದು ಕಳೆದ ಎರಡು-ಮೂರು ಶತಮಾನಗಳಿಂದೀಚೆ." 

 

೧೫-೧೬ನೇ ಶತಮಾನದ ಹೊತ್ತಿಗಿನ ಪಾಶ್ಚಾತ್ಯವಲಯಗಳಲ್ಲಿನ ಅಭಿಪ್ರಾಯಗಳನ್ನು ನಾವು ಗಮನಿಸಿದರೆ, ವೈಜ್ಞಾನಿಕ ಚಿಂತನೆಯಲ್ಲಿ ಪೂರ್ವವು ತಮಗಿಂತ ಮುಂದಿದೆ ಎಂಬುದು ಅವರ ಅರಿವಿಗೆ ಬರತೊಡಗಿತ್ತು ಎಂದು ನಮಗೆ ಗೊತ್ತಾಗುತ್ತದೆ. ೧೧-೧೨ನೇ ಶತಮಾನದ ಧರ್ಮಯುದ್ಧದ ಕಾಲದಲ್ಲಿ ಅವರು ಜ್ಞಾನಸೃಷ್ಟಿಯಲ್ಲಿ ತಮಗಿಂತಲೂ ಮುಂದಿದ್ದ ಅರಬ್-ರನ್ನು ಕಂಡಿದ್ದರು, ನಂತರ ಚೀನಾದ ತಂತ್ರಜ್ಞಾನವನ್ನೂ, ಭಾರತೀಯರ ಸಂಖ್ಯಾಪದ್ಧತಿ, ಬೀಜಗಣಿತಗಳನ್ನೂ ಕಂಡಿದ್ದರು. ಭಾರತದಿಂದ ಬಂದಿದ್ದ ಸಕ್ಕರೆಯೂ ಇದರಲ್ಲಿ ಸೇರಿತ್ತು. ಹೀಗೆ ನಿಧಾನವಾಗಿ ಪೂರ್ವದಲ್ಲಿನ ಉನ್ನತ ಜ್ಞಾನದ ಅರಿವು ಅವರಿಗೆ ಬರತೊಡಗಿತ್ತು.

 

ನೀವು ಫ್ರಾನ್ಸಿಸ್ ಬೇಕನ್-ನನ್ನು ಓದಿದರೆ, ಆತ  ಮುದ್ರಣ ಯಂತ್ರ, ನೌಕಾ ದಿಕ್ಸೂಚಿ, ಸಿಡಿಮದ್ದು ಇಂಥಾ ಹೊಸ ಅನ್ವೇಷಣೆಗಳ ಸಾಮರ್ಥ್ಯ ಯೇನೆಂದು ಅರಿತಿದ್ದ ಎಂಬುದು ನಿಮಗೆ ತಿಳಿಯುತ್ತದೆ. ಅವು ಪ್ರಪಂಚವನ್ನು ಬದಲಿಸಬಲ್ಲ (ಒಂದು ಸಾಮ್ರಾಜ್ಯ ಅಥವಾ ಸಮುದಾಯಕ್ಕಿಂತ ಹೆಚ್ಚಿನ) ಶಕ್ತಿಯನ್ನು ಹೊಂದಿವೆ, ಎಂದು ಅವನು ಹೇಳಿದ. ನಾನು ಮೊದಲ ಬಾರಿ ಅಮೇರಿಕೆಗೆ ಹೋದಾಗ ತಂತ್ರಜ್ಞಾನವನ್ನು ಕಂಡು ಯಾವ ರೀತಿಯ ದಿಗ್ಭ್ರಮೆ ಅನುಭವಿಸಿದ್ದೆನೋ, ಅದೇ ರೀತಿಯ ದಿಗ್ಭ್ರಮೆಯನ್ನು ಆತ ಆಗ ನಮ್ಮದನ್ನು ನೋಡಿ ಅನುಭವಿಸಿದ್ದ.

 

ಯುರೋಪಿನ ಆಗಿನ ಜ್ಞಾನದ ಸ್ಥಿತಿಗೆ ಆತ ಗ್ರೀಕ್‍ರನ್ನು ದೂಷಿಸಿದ. ಪ್ಲೇಟೋ ಮತ್ತು ಅರಿಸ್ಟಾಟಲ್ ಕುರಿತು ಆತನ ಟೀಕೆ ಎಷ್ಟು ಕಟುವಾಗಿತ್ತೆಂದರೆ, ಆತ ಅವರನ್ನು ಖೊಟ್ಟೀ ವಿಜ್ಞಾನಿಗಳೆಂದೂ, ವೇಷಬದಲಿಸುವ ಮೋಸಗಾರರೆಂದೂ ಜರಿದ. ಹೇಗೆ ೧೯-೨೦ ನೇ ಶತಮಾನದಲ್ಲಿ ನಮ್ಮ ವಿಜ್ಞಾನ ಪದ್ಧತಿ ಕುಸಿದು ಬಿದ್ದಾಗ, ನಮ್ಮಲ್ಲಿ ಕೆಲವರು ಹೇಳಲು ತೊಡಗಿದ್ದರೋ, ಹಾಗೆಯೇ ಆತನೂ, "ಯುರೋಪ್ ತಪ್ಪು ದಾರಿ ಹಿಡಿದಿದೆ, ಇದು ತಕ್ಷಣವೇ ಬದಲಾಗಬೇಕು", ಎಂದು ಖಚಿತ ಧ್ವನಿಯಲ್ಲಿ ಹೇಳತೊಡಗಿದ್ದ.

 

ಭಾರತೀಯ ಮತ್ತು ಐರೋಪ್ಯದ ಶಾಸ್ತ್ರೀಯ ಪಠ್ಯಗಳನ್ನು ವಿಶ್ಲೇಷಿಸಲು ತೊಡಗಿದಂತೆ, ಇದು ಆಳದಲ್ಲಿ ಮತ್ತು ಮೂಲದಲ್ಲಿ, ‘ವಿಶ್ವಾಸಾರ್ಹ ಜ್ಞಾನವನ್ನು ಪಡೆಯುವುದು ಹೇಗೆ?’ ಎಂಬ ಪ್ರಶ್ನೆಯ ಬಗೆಗಿನ, ಅಂದರೆ ಇದು ಪ್ರಮಾಣಪದ್ಧತಿಯ ಕುರಿತ ಸಂಗತಿ ಎಂಬುವುದು ನಮಗೆ ಸ್ಪಷ್ಟವಾಗುತ್ತದೆ.

 

ಬೇಕನ್ ಯುರೋಪಿನ ಜ್ಞಾನಪದ್ಧತಿಯಲ್ಲಿ ಯಾವುದು ಆಗಬೇಕು ಎಂದು ಬಯಸುತ್ತಿದ್ದನೋ, ಅದನ್ನು ೧೭ನೇ ಶತಮಾನದ ಹೊತ್ತಿಗೆ ನ್ಯೂಟನ್ ಬಹುತೇಕ ಮಾಡಿಬಿಟ್ಟ. ಹಾಗಿದ್ದರೆ ಆ ಕಾಲದಲ್ಲಿ ಅಂಥದ್ದೇನು ನಡೆಯಿತು? ಎಲ್ಲರೂ ಹೇಳುವ ಸಾಮಾನ್ಯ ಉತ್ತರ: ವಿಜ್ಞಾನದ ಗಣಿತೀಕರಣ. ಆದರೆ ಈ ರೀತಿಯ ಗುರುತಿಸುವಿಕೆ ದಿಕ್ಕುತಪ್ಪಿಸುವಂಥದ್ದು. ಗಣಿತೀಕರಣ ಎಂದರೆ ನೀವು ಏನೆಂದು ಅರ್ಥೈಸುತ್ತೀರಿ ಎಂಬುದರ ಮೇಲೆ ಅದು ಅವಲಂಬಿತವಾಗಿದೆ. ಪ್ರಾಚೀನ ಗ್ರೀಕ್‍ರು ಮತ್ತು ಭಾರತೀಯರು ವಿಜ್ಞಾನದಲ್ಲಿ ಗಣಿತವನ್ನು ಬಳಸುತ್ತಲೇ ಇರಲಿಲ್ಲ ಅನ್ನಲು ಸಾಧ್ಯವೆ?

 

ನಿಜದಲ್ಲಿ ನಡೆದದ್ದೇನೆಂದರೆ, ಅಲ್ಲಿಯವರೆಗೆ ಯುರೋಪಿನ ಮಟ್ಟಿಗೆ ಗಣಿತವೆಂದರೆ ಯುಕ್ಲಿಡ್ ಮತ್ತು ಜ್ಯಾಮಿತಿ ಎಂದಾಗಿತ್ತು (ಇವನ್ನೂ ಅವರು ಅರಬ್ ಮತ್ತು ಗ್ರೀಕ್ರಿಂದ ಮತ್ತೆ ಅನುವಾದಿಸಿಕೊಂಡು ಪಡೆದುಕೊಂಡಿದ್ದರು). ಆದರೆ ೧೬ನೇ ಶತಮಾನದ ನಂತರ ಇದು ಭಾರತದಿಂದ ಬಂದ ಸಂಖ್ಯಾಗಣಿತ ಮತ್ತು ಬೀಜಗಣಿತಗಳನ್ನು ಒಳಗೊಳ್ಳತೊಡಗಿತು. ಆಲ್ಜಿಬ್ರಾ ಅಥವಾ ಬೀಜಗಣಿತವು ‘ಹೊಸಗಣಿತ’ವಾಗಿ ರೂಪಗೊಂಡಿತ್ತು ಮತ್ತಿದು ಭಾರತದಿಂದ ಸೃಜನಶೀಲ ಅರಬ್ ಮತ್ತು ಪರ್ಶಿಯನ್‍ರ ಮೂಲಕ ಯುರೋಪ್-ನ್ನು ತಲುಪಿದ ಬಗೆಯನ್ನು ಈಗ ನಾವು ಸ್ಪಷ್ಟವಾಗಿ ಗುರುತಿಸಬಹುದು. ಹೀಗೆ ೧೫-೧೬ನೇ ಶತಮಾನದಲ್ಲಿ ಆಲ್ಜಿಬ್ರಾ ಪದವು ಚಾಲ್ತಿಗೆ ಬರತೊಡಗಿ ಜ್ಯಾಮಿಟ್ರಿ ಎಂಬ ಪದದ ಬಳಕೆ ಕಡಿಮೆಯಾಗತೊಡಗಿತ್ತು.  ಇದೀಗ ನಾವು ಯಾವ ಶಾಖೆಯನ್ನು ಅನಲಿಟಿಕಲ್ ಜ್ಯಾಮಿಟ್ರಿ ಎಂದು ಕರೆಯುತ್ತೇವೋ ಅದು ಜ್ಯಾಮಿಟ್ರಿಯನ್ನು  ಬೀಜಗಣಿತವು ಪ್ರಭಾವಿಸಿದ್ದರ ಫಲ.

 

ಅಂದರೆ ಆಗ ನಿಜವಾಗಿ ನಡೆದದ್ದೇನೆಂದರೆ ಗಣಿತದ ಬೀಜಗಣಿತೀಕರಣ ಮತ್ತು ತದನಂತರ ವಿಜ್ಞಾನದ ಅದರಲ್ಲೂ ಭೌತಶಾಸ್ತ್ರದ ಬೀಜಗಣಿತೀಕರಣ. ಖ್ಯಾತ ಭೌತಶಾಸ್ತ್ರಜ್ಞ ಹರ್ಮನ್ ವಾಯ್ಲ್ ಹೇಳಿದಂತೆ, ಯುರೋಪ್ ಗ್ರೀಕ್‍ನ ಮಾರ್ಗ ತೊರೆದು ಭಾರತದ ಮಾರ್ಗವನ್ನು ಹಿಡಿಯಿತು (ಇಲ್ಲಿ ತಾರ್ಕಿಕವಾಗಿ ಜ್ಯಾಮಿತಿಗಿಂತ ಸಂಖ್ಯಾಗಣಿತ ಮೊದಲು). ಈ ತಿರುವು ಯುರೋಪಿನಲ್ಲಿನ ವಿಜ್ಞಾನದ ಪುನರುಜ್ಜೀವನಕ್ಕೆ  ಬಲವಾದ ಕಾರಣ ಎಂದು ನನ್ನ ನಂಬಿಕೆ.

 

ಜ್ಞಾನ=ಅಧಿಕಾರ ಎಂಬ ಬೇಕನ್‍ನ ಸಮೀಕರಣ (ಜ್ಞಾನ=ಮೋಕ್ಷ ಎಂಬ ಭಾರತೀಯ ಸಮೀಕರಣಕ್ಕೆ ಬದಲಾಗಿ)ದಿಂದಾಗಿ ಪೂರ್ವದ ಮೇಲೆ ಪಶ್ಚಿಮವು ಅಧಿಕಾರವನ್ನು ಚಲಾಯಿಸತೊಡಗಿತು. ಆಗ ಯುರೋಪಿಯನ್ ಭಾಷೆಗಳಲ್ಲಿ ಆಲ್ಜಿಬ್ರಾಕ್ಕೆ ಸಮನಾದ ಪದವಿರಲಿಲ್ಲ, ಆದ್ದರಿಂದ ಅವರು ಅರೆಬಿಕ್‍ನ ಅಲ್-ಜಬರ್ ಎಂಬ ಪದದಿಂದ ಕಡತೆಗೆದುಕೊಂಡರು, ನಾವು ಈಗ ಇಂಗ್ಲೀಷಿನ ಟಿವಿ., ರೇಡಿಯೋ ಇತ್ಯಾದಿಗಳನ್ನು ಬಳಸುವಂತೆ. ಡೆಸಾಕ್ರೆಟಸ್ ಒಂದು ಕಡೆ ಆಲ್ಜಿಬ್ರಾವನ್ನು ಅನಾಗರೀಕ ಎಂದು ಕರೆಯುತ್ತಾನೆ. ಅದು ಯುರೋಪಿನ ಅಥವಾ ಗ್ರೀಕ್-ನದ್ದಾಗಿದ್ದರೆ ಆತ ಹಾಗೆ ಕರೆಯುತ್ತಿರಲಿಲ್ಲ. ಹೊಸ ಜ್ಞಾನವೆಲ್ಲಾ ಹೆಚ್ಚಾಗಿ ಪಶ್ಚಿಮದ ಸಾಂಸ್ಕೃತಿಕ ಲೋಕದಿಂದ ಬಂದಿರದೇ, ಬಹುತೇಕ ಪೂರ್ವದಿಂದಲೇ ಬಂದದ್ದೆಂದು ಬೇಕನ್‍ನಿಗೆ ಆಗ ಗೊತ್ತಿತ್ತು.

 

ಎಸ್.ಕೆ.: ಜಗತ್ತನ್ನೇ ಬದಲಾಯಿಸಿದೆ ಎಂದು ನೀವು ಹೇಳುವ ಈ ಭಾರತೀಯ ಪರಿಕಲ್ಪನೆಗಳಾದ ‘ಬೀಜ’ ಮತ್ತು ‘ಗಣಿತ’ದ ಪರಿಕಲ್ಪನೆ ಯೇನು?

 

ಸಂಖ್ಯೆಗಳನ್ನು ಗುರುತಿಸುವದು, ಎಣಿಸುವುದು, ಅವುಗಳನ್ನು ಬಳಸಿ ಲೆಕ್ಕಾಚಾರ ಮಡುವುದು ಇದೇ ‘ಗಣಿತ’, ಸಂಸ್ಕೃತದಲ್ಲಿ ‘ಗಣ’ ಎಂದರೆ ಎಣಿಸುವುದು ಎಂದೇ ಅರ್ಥ. ಪಶ್ಚಿಮದಲ್ಲಿ ಗಣಿತಜ್ಞನನ್ನು ‘ಜಿಯೋಮೀಟರ್’ ಎಂದೂ ಕರೆಯುತ್ತಿದ್ದರು. ಅದೇ ಭಾರತದಲ್ಲಿ ಆತ ಒಬ್ಬ ‘ಗಣಕ’ ಅಥವಾ ‘ಸಂಖ್ಯಾತಜ್ಞ’. ಭಾರತದ ಗಣಿತವು ಮೊದಲು ಸಂಖ್ಯಾ ಕೇಂದ್ರಿತವಾಗಿತ್ತು. ಭಾಸ್ಕರಾಚಾರ್ಯನು ಬೀಜಗಣಿತವನ್ನು ‘ಅವ್ಯಕ್ತ-ಗಣಿತ’ ಎಂದು ಕರೆದ. ಅಂದರೆ ಗೊತ್ತಿಲ್ಲದ ಪರಿಮಾಣಗಳನ್ನು ಗೊತ್ತಿರುವ ಅಂಶಗಳ ಮೂಲಕ ಕಂಡುಕೊಳ್ಳುವುದು ಅಥವಾ ‘ವ್ಯಕ್ತ’ವಾಗಿಸುವುದು. ಈ ‘ಅವ್ಯಕ್ತ’ವೇ ‘ಬೀಜ’.  ಇದೇ ಗಣಿತವೇ ಆಲ್ಜಿಬ್ರಾ ಆಗಿ ಅರಬ್-ರ (ಇವರ ಸೃಜನಶೀಲ ಕೊಡುಗೆಗಳೂ ಅದರಲ್ಲಿ ಸೇರಿಕೊಂಡು) ಮೂಲಕ ಪಶ್ಚಿಮವನ್ನು ಸೇರಿದ್ದು.  ಹೀಗೆ ಪಶ್ಚಿಮದಲ್ಲಿ ಉಂಟಾದ ಆಧುನಿಕ ವಿಜ್ಞಾನದ ಕ್ರಾಂತಿಯನ್ನು ನಾವು ಪೂರ್ವದಿಂದ ಅರಬ್‍ರ ಮೂಲಕ ಹೋದ ಗಣಿತದಲ್ಲಿನ ಅನ್ವೇಷಣೆಗಳು ಮತ್ತು ತಂತ್ರಜ್ಞಾನದ ಅನ್ವೇಷಣೆಗಳು ಇವೆರಡಕ್ಕೆ ಬಂದ ಪ್ರತಿಕ್ರಿಯೆ ಅನ್ನಬಹುದು. ಎರಡು-ಮೂರು ಶತಮಾನದ ಹಿಂದೆ ಅವರ ವಿಜ್ಞಾನ ನಮ್ಮಲ್ಲಿ ದಿಗ್ಭ್ರಮೆ ಹುಟ್ಟಿಸಿದಂತೆ ಅವು ಅವರಲ್ಲಿ ದಿಗ್ಭ್ರಮೆ ಹುಟ್ಟಿಸಿದ್ದವು.

 

ಎಸ್. ಕೆ: ಹಾಗಿದ್ದರೆ ವಿಜ್ಞಾನವನ್ನು ಕಟ್ಟುವ ವಿಧಾನದಲ್ಲಿ ಯುರೋಪಿಗೂ ಭಾರತಕ್ಕೂ ಇರುವ ವ್ಯತ್ಯಾಸವೇನು?  

 

೧೫-೧೬ನೇ ಶತಮಾನಕ್ಕೆ ಸೇರಿದ್ದ ನೀಲಕಂಠ ಎಂಬ ಗಣಿತಜ್ಞ ವಿಜ್ಞಾನವನ್ನು ಹೇಗೆ ಮಾಡಬೇಕೆಂದು ಸ್ಪಷ್ಟವಾಗಿ ಹೇಳಿದ್ದಾನೆ. ನಾನು ಆರ್ಯಭಟ ಮತ್ತು ಭಾಸ್ಕರರಿಂದ ಗಣಿತ ಮತ್ತು ವಿಜ್ಞಾನದ ಬಗೆಗಿನ ಅವರ ಧೋರಣೆಯನ್ನು ತಿಳಿಯಲು ಯತ್ನಿಸುತ್ತಿದ್ದಾಗಲೇ ನನ್ನ ಕಣ್ಣಿಗೆ ನೀಲಕಂಠನ ‘ಜ್ಯೋತಿರ್ಮಿಮಾಂಸ’ ಎಂಬ ಪುಸ್ತಕವು ಕಣ್ಣಿಗೆ ಬಿತ್ತು. (ದುರಾದೃಷ್ಟದಿಂದ ಇದಿನ್ನೂ ಇಂಗ್ಲೀಷಿಗೆ ತರ್ಜುಮೆಯಾಗಿಲ್ಲ). ಆತ ಪ್ರಮಾಣಶಾಸ್ತ್ರ ಅಂದರೆ ಜ್ಞಾನವನ್ನು ಕಟ್ಟುವುದರ ಬಗೆಗಿನ ವಿಜ್ಞಾನದ ಬಗ್ಗೆ ಮಾತನಾಡುತ್ತಾನೆ. ಯಾವ ಪ್ರಮಾಣ-ಪದ್ಧತಿಯನ್ನು ಅನುಸರಿಸುವ ಮೂಲಕ ನಾವು ನಿಖರವಾದ, ನಂಬಬಹುದಾದ, ವಿಶ್ವಾಸಾರ್ಹವಾದ ಜ್ಞಾನ್ನವನ್ನು ಪಡೆಯಬಹುದು ಎಂಬುದನ್ನು ವಿವರಿಸುತ್ತಾನೆ. ನೀಲಕಂಠನ ದೃಷ್ಟಿಕೋನವು ವಿಜ್ಞಾನದ ಪ್ರಮಾಣಪದ್ಧತಿಯಲ್ಲಿ ಪಾಶ್ಚಾತ್ಯರಿಗೂ, ಭಾರತೀಯರಿಗೂ ಇರುವ ವ್ಯತ್ಯಾಸದ ಮೇಲೆ ಬೆಳಕು ಚೆಲ್ಲುತ್ತದೆ.

 

ಭಾರತೀಯ ಪದ್ಧತಿಯು ಮುಖ್ಯವಾಗಿ ಪ್ರತ್ಯಕ್ಷ, ಅನುಭವ, ಅನುಮಾನ ಮತ್ತು ಯುಕ್ತಿಯನ್ನು ಆಧರಿಸಿದ್ದರೆ, ಗ್ರೀಕ್‍ರ ಪದ್ಧತಿಯು (ಸ್ವಯಂಸತ್ಯವೆಂದು ಸಿದ್ಧಗೊಂಡ, ಯುಕ್ಲಿಡ್ ಹೇಳಿದ) ಮೂಲವಾಕ್ಯಗಳ ಮೇಲೆ ಅರಿಸ್ಟಟಲಿನ ೧-೦, ನಿಜ-ಸುಳ್ಳು ಎಂಬ ಶುದ್ಧ ತಾರ್ಕಿಕ ನೆಲೆಯಲ್ಲಿ ಕಟ್ಟಲ್ಪಟ್ಟದ್ದು.

 

೧೫-೧೬ನೇ ಶತಮಾನದ ಹೊತ್ತಿಗೆ ಯುರೋಪಿನಲ್ಲಿ ಇವೆರಡರ(ಭಾರತೀಯ ಮತ್ತು ಗ್ರೀಕ್ ಪದ್ಧತಿಗಳ) ಸಮ್ಮಿಲನವಾಗಲು ಶುರುವಾಗಿದ್ದಂತೆ ತೋರುತ್ತದೆ. ಭಾರತೀಯರು ಅಲೆಕ್ಸಾಂಡರ‍್ನ ಕಾಲದಿಂದ ಗ್ರೀಕ್‍ರ ಜೊತೆ ಸಂಪರ್ಕದಲ್ಲಿದ್ದರೂ ಕೂಡಾ ಅವರ ಕೆಲವು ಸಲಕರಣೆಗಳನ್ನು ಪಡೆದರೇ ಹೊರತು, ತಾತ್ವಿಕವಾಗಿ ಅವರನ್ನು ಒಪ್ಪಿರಲಿಲ್ಲ.

 

ಗ್ರೀಕ್‍ರ ತತ್ವಗಳನ್ನು ಧಿಕ್ಕರಿಸಿದ ನಂತರ ಫ್ರಾನ್ಸಿಸ್ ಬೇಕನ್ ಮೂಲವಾಕ್ಯಗಳಿಂದ ನೀರ್ಣಿತವಾದದ್ದರ ಜೊತೆಗೆ ಪ್ರಯೋಗದ ಮೂಲಕ ಅನುಭವ, ಪರಿವೀಕ್ಷಣೆಗಳನ್ನು ಸಂಯೋಜಿಸಿ ಹೊಸದೊಂದು ಪದ್ಧತಿಯನ್ನು ಹುಟ್ಟುಹಾಕಿದ. ಆಗ ಮೂಲವಾಕ್ಯಗಳು ಸ್ವಯಂಸಿದ್ಧ ಸತ್ಯಗಳಾಗದೇ ಸದ್ಯದ ಊಹೆಗಳಾಗಿ ಮಾತ್ರ ಉಳಿದವು.

 

ನ್ಯೂಟನ್ ಈ ಮಿಶ್ರಪದ್ಧತಿಯನ್ನು ಉಪಯೋಗಿಸತೊಡಗಿದ ನಂತರವೇ ಇವೊತ್ತು ಇದೊಂದು ಜಾಗತಿಕ ಉದ್ಯಮ ಸ್ವರೂಪವನ್ನು ಪಡೆದುಕೊಂಡ ಆಧುನಿಕ ವಿಜ್ಞಾನವಾಗಿ ಬೆಳೆದು ನಿಂತಿದೆ.  

 

ವಿಜ್ಞಾನ ಪ್ರಪಂಚಕ್ಕೆ ಮಹತ್ವದ ತಿರುವು ತಂದುಕೊಟ್ಟ ‘ಮ್ಯಾಥೆಮ್ಯಾಟಿಕಲ್ ಪ್ರಿನ್ಸಿಪಲ್ಸ್ ಆಫ್ ನ್ಯಾಚುರಲ್ ಫಿಲಾಸಫಿ’ ಎಂಬ ಪುಸ್ತಕದ ಮೊದಲ ಭಾಗದಲ್ಲಿ, ನ್ಯೂಟನ್ ವಸ್ತುಗಳ ಚಲನೆಗೆ ಸಂಬಂಧಿಸಿದ ತನ್ನ ಮೂರು ಪ್ರಾಥಾಮಿಕ ನಿಯಮಗಳನ್ನು ಹೇಳುವ ಮೂಲಕ, ಯುಕ್ಲಿಡ್ ಮಾದರಿಯಲ್ಲಿಯೇ ಪ್ರಾರಂಭಿಸುತ್ತಾನೆ. ನಂತರ ಪುಸ್ತಕವು ಲೆಮ್ಮಾ (ಸಣ್ಣ ಫಲಿತಾಂಶ), ಥೇರಮ್ (ಸಣ್ಣ ಫಲಿತಾಂಶವನ್ನು ಬಳಸಿ ಕಂಡುಕೊಂಡ ಹೆಚ್ಚಿನ ಮಹತ್ವದ ಫಲಿತಾಂಶ), QED ಇತ್ಯಾದಿಗಳಿಂದ ತುಂಬಲ್ಪಟ್ಟಿದೆ. ಆದರೆ ಪುಸ್ತಕದ ಮೂರನೇ ಭಾಗವು, ತನ್ನ ಸ್ವರೂಪದಲ್ಲಿ ಮೊದಲಿನ ಎರಡು ಭಾಗಕ್ಕಿಂತ ಭಿನ್ನವಾಗಿದೆ. ಇಲ್ಲಿ ಆತ ಪರಿವೀಕ್ಷಣೆಯಿಂದ ಸಂಖ್ಯೆಗಳನ್ನು ಪರಿಚಯಿಸುತ್ತಾ ಮೊದಲೆರಡು ಭಾಗದ ಮೂಲವಾಕ್ಯ ಮತ್ತು ಫಲಿತಾಂಶಗಳ ಬೆಳಕಿನಲ್ಲಿ ನೀರ್ಣಯವನ್ನು ಮಂಡಿಸುತ್ತಾನೆ. ಹೀಗೆ ಈ ಮೂರನೇ ಭಾಗ, ಬರೀ ಯುಕ್ಲಿಡ್-ನ “ಯಾವುದು ತರ್ಕದ ಮೂಲಕ ತೋರಿಸಬೇಕಾಗಿದೆಯೋ" ಎಂದಾಗದೇ, "ಪರಿವೀಕ್ಷಣೆಯ ಆಧಾರದ ಮೇಲೆ ನೀರ್ಣಯಿಸಬಹುದಾಗಿದೆ" ಎನ್ನುವ ಮೂಲಕ ಭಾರತೀಯ ಸ್ಫೂರ್ತಿಯಲ್ಲಿದೆ ಎಂದು ನನಗನಿಸುತ್ತದೆ.

 

ಈ ಮೂರನೇ ಭಾಗವು, ಗ್ರೀಕ್‍ರ ನೆಲೆಯಲ್ಲಿದ್ದಂತಿಲ್ಲ ಎಂದು ನ್ಯೂಟನ್‍ನಿಗೂ ಅನ್ನಿಸಿರಬೇಕು. ಅಂತೆಯೇ ಆತ ಮುನ್ನುಡಿಯಲ್ಲಿ, “ತಾತ್ವಿಕ ವಿಚಾರ-ವಿಮರ್ಶೆಗೆ ಬೇಕಾಗುವ ನಿಯಮಗಳ" ಬಗ್ಗೆ ಸಣ್ಣ ಟಿಪ್ಪಣಿಯನ್ನು ಬರೆದು ತನ್ನ ಹೊಸ ಪದ್ಧತಿಯನ್ನು ಸಮರ್ಥಿಸಿಕೊಳ್ಳುತ್ತಾನೆ. ಅದಕ್ಕಾಗಿ ಆತ ನಾಲ್ಕು ಹೊಸ ನಿಯಮಗಳನ್ನು ಬರೆಯುತ್ತಾನೆ. ಈ ನಾಲ್ಕು ನಿಯಮಗಳಿಗೂ ಗ್ರೀಕ್‍ರ ಆಲೋಚನಾಕ್ರಮಕ್ಕೂ ಯಾವುದೇ ಸಂಬಂಧವಿಲ್ಲ, ಆದರೆ ಇವು ಭಾರತ ಮತ್ತು ಯುರೋಪಿನ ಆಲೋಚನಾಕ್ರಮಗಳಿಗೆ ತುಂಬಾ ಹತ್ತಿರ ಇವೆ.

 

ಇವೊತ್ತಿಗೂ ನಮ್ಮ ಶಾಲೆಗಳಲ್ಲಿ ಕ್ಯಾಲ್ಕುಲಸ್ (ಕಲನಶಾಸ್ತ್ರ)ನ್ನು, ನ್ಯೂಟನ್ ಮತ್ತು ಲಿಬ್ನಿಜ್‍ರ ಹೆಸರಿನೊಡನೇ ಸೇರಿಸಿ, ಇದೊಂದು ಯುರೋಪಿನ  ಅನ್ವೇಷಣೆ ಎಂಬಂತೆ ಕಲಿಸಲಾಗುತ್ತದೆ. ಆದರೆ, ಇದರ ಬಹು ಮುಖ್ಯ ಭಾಗಗಳು ಭಾರತೀಯ ಗಣಿತಜ್ಞರಿಗೆ ಶತಮಾನಗಳ ಹಿಂದೆಯೇ ತಿಳಿದಿದ್ದವು. ಉದಾಹರಣೆಗೆ, ಟೇಲರ್-ಮ್ಯಾಕ್‍ಲಾರಿನ್ ಮಾದರಿಯ ಅನಂತ ಸರಣಿಗಳೂ, ವ್ಯತ್ಯಾಸೀ ಸಮೀಕರಣಗಳೂ, ಲಿಮಿಟ್ (ಮಿತಿಯ) ಪರಿಕಲ್ಪನೆ ಇವೆಲ್ಲವೂ ಅದರಲ್ಲಿ ಸೇರಿವೆ.

 

ಹಾಗೆಯೇ ವಿಜ್ಞಾನ ಪ್ರಾರಂಭವಾದದ್ದು ಗ್ರೀಕ್‍ನ ಆರ್ಕಿಮಿಡೀಸ್‍ನಿಂದಲೇ ಎಂದೋ, ಯುರೋಪಿನ ಬೇಕನ್-ನಿಂದಲೇ ಎಂದೋ, ಅಥವಾ ಭಾರತೀಯರೇ ಪ್ರಾರಂಭಿಸಿದ್ದೆಂದೋ ಹೇಳಲಾಗದು; ಅಲ್ಲಲ್ಲಿ ಅಷ್ಟಿಷ್ಟು ವಿಜ್ಞಾನ ಮೊದಲಿನಿಂದಲೇ ಇತ್ತು. ಬೇರೆ ಬೇರೆ ಸಂಸ್ಕೃತಿಗಳು ಬೇರೆ ಬೇರೆ ಕೊಡುಗೆಗಳನ್ನು ಕೊಟ್ಟವು. ವಿಚಾರಗಳು ಅವೆಲ್ಲರ ಮಧ್ಯ ಹರಿದಾಡಿದವು, ಆದರೆ ಎಲ್ಲಾ ವಿಚಾರಗಳನ್ನು ಸ್ಥಳೀಯ ಸಂಸ್ಕೃತಿಯು  ಒಪ್ಪಿಕೊಳ್ಳುತ್ತಿರಲಿಲ್ಲ. ಉದಾಹರಣೆಗೆ ಭಾರತೀಯರು ಗ್ರೀಕ್‍ರ ಎಪಿಸಾಯಕಲ್ಸ್ ಕಲ್ಪನೆಯನ್ನು ಕಡತೆಗೆದುಕೊಂಡರೂ, ಹೊರವರ್ತುಳದ ಪರಿಧಿಯ ಸುತ್ತಲೂ ತನ್ನ ವ್ಯಾಸವನ್ನು ಹಿಗ್ಗಿಸಿ, ಕುಗ್ಗಿಸಿಕೊಳ್ಳುತ್ತಾ ಸುತ್ತುವ ಒಳವರ್ತುಳವೆಂಬ ಭಾರತೀಯ ಪರಿಕಲ್ಪನೆ ಗ್ರೀಕ್‍ರಿಗೆ ಶಾಕ್ ಕೊಡುವಂತಹದು. ಬರೀ ವೃತ್ತಗಳ ಮಾದರಿಯಲ್ಲಿರುವ ಸಮಪಾರ್ಶ್ವತೆ ಮತ್ತು ಸೌಂದರ್ಯವನ್ನು ಇದು ಹಾಳುಮಾಡುತ್ತಿತ್ತು. ಆದರೆ ಭಾರತೀಯರಿಗೆ, ತನ್ಮೂಲಕ ಉಂಟಾಗುವ ಉದ್ದಗುಂಡು (ಎಲಿಪ್ಸ್) ಗಣಕದ ದೃಷ್ಟಿಯಿಂದ ಸುಲಭವೂ, ಹೆಚ್ಚು ನಿಖರವೂ ಆಗಿತ್ತು. ಭಾಸ್ಕರಾಚಾರ್ಯನ ಮಾತಲ್ಲಿ ಹೇಳಬೇಕೆಂದರೆ ಗಣಿತಜ್ಞರಿಗೆ ‘ಆನಂದ’ ಉಂಟುಮಾಡುವಂಥ ಪರಿಕಲ್ಪನೆ ಅದು!

 

೧೯ನೇ ಶತಮಾನದವರೆಗೆ ಮೆಕಾಲೆ ತನ್ನ ಕಪಾಟಿನಿಂದ ಹೊರತೆಗೆದು ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಅಳವಡಿಸುವವರೆಗೂ, ಭಾರತೀಯರು ಯುಕ್ಲಿಡ್-ನ ಬಗ್ಗೆ ತಲೆಕೆಡಿಕೊಂಡಿರಲಿಲ್ಲ. ಭಾರತೀಯ ನೈಯಾಯಿಕರ ನ್ಯಾಯ ಪದ್ಧತಿಯಲ್ಲಿ ಊಹೆಯಿಂದ ನೀರ್ಣಯಕ್ಕೆ ಶುದ್ಧ ತಾರ್ಕಿಕ ಚೌಕಟ್ಟಿನಲ್ಲಿ ತಲುಪುವುದನ್ನು (ಇದು ಗ್ರೀಕ್‍ರ ಪದ್ಧತಿ ಎಂದು ಅವರೆಲ್ಲಿಯೂ ಹೇಳಿಲ್ಲ) ಒಪ್ಪಲಾಗದು. ನೀವು ಆ ನೀರ್ಣಯವನ್ನು ಪ್ರತ್ಯಕ್ಷ ಪರಿವೀಕ್ಷಣೆಗೆ ಹೋಲಿಸಲೇಬೇಕು ಅಥವಾ ಆಧರಿಸಬೇಕು. ಇಲ್ಲಿಯೇ  ಬೇಕನ್, "ತರ್ಕದಿಂದ ಕಂಡುಕೊಂಡದ್ದು, ಪ್ರತ್ಯಕ್ಷ ಪ್ರಮಾಣದಿಂದ ನೀರ್ಣಯಿಸಬೇಕಾದ ಅನುಮಾನ ಮಾತ್ರವಾಗುತ್ತದೆ", ಎಂಬ ತಾತ್ವಿಕ ಚೌಕಟ್ಟನ್ನು ಒದಗಿಸುವ ಮೂಲಕ ಮಹತ್ವದ್ದನ್ನು ಸಾಧಿಸಿದ್ದು.

 

‘ಪ್ರತ್ಯಕ್ಷ’ವು (ಪರಿವೀಕ್ಷಣೆ, ಪ್ರಯೋಗ) ಎಲ್ಲಾ ಭಾರತೀಯ ತತ್ವಶಾಸ್ತ್ರದ ಶಾಖೆಗಳು ಅಂಗೀಕರಿಸುವ ಮೊಟ್ಟಮೊದಲ ಪ್ರಮಾಣವಾಗಿತ್ತು. ಬಹುಶಃ ನಮ್ಮವರೆಲ್ಲರೂ ಒಪ್ಪುವ ಕೆಲವೇ ಕಲವು ಸಂಗತಿಗಳಲ್ಲಿ ಇದು ಒಂದು. ಹಾಗೆ ಒಪ್ಪಬಹುದಾದ ಎರಡನೇದ್ದು ಬಹುಶಃ ‘ಅನುಮಾನ’, ಲೋಕಾಯತರೊಬ್ಬರನ್ನು ಬಿಟ್ಟು. ನೀಲಕಂಠ ಹೇಳುವಂತೆ, ‘ಪ್ರತ್ಯಕ್ಷೇನ, ಅನುಮಾನೇನ’.

 

ಎಸ್.ಕೆ.: ಹಾಗಿದ್ದರೆ ‘ಆಗಮ ಪ್ರಮಾಣ’ದ ಬಗ್ಗೆ ಏನು ಹೇಳುತ್ತೀರಿ?

 

ಒಂದು ಆಸಕ್ತಿಪೂರ್ಣ ಗಣಿತ ಸಮಸ್ಯೆಯನ್ನು ಪರಿಹರಿಸಿದ ನಂತರ, ನೀಲಕಂಠ  ‘ಏತತ್ ಸರ್ವಮ್ ಯುಕ್ತಿಮೂಲಮ್; ನಾತು ಆಗಮಮೂಲಮ್’; ಇದೆಲ್ಲವನ್ನೂ ಚತುರವೈಚಾರಿಕತೆಯಿಂದ ಸಾಧಿಸಿದ್ದೇ ಹೊರತು ಆಗಮ (ಶೃತಿ)ದಿಂದಲ್ಲ, ಎನ್ನುತ್ತಾನೆ. ಆತನ ಕಾಲದ (ಕ್ರಿ.ಶ. ೧೫ನೇ ಶತಮಾನದ) ಯುರೋಪಿನಲ್ಲಿ ಇಂಥಾ ಮಾತನ್ನು ಹೇಳಲು ಸಾಧ್ಯವಿರಲಿಲ್ಲ.

 

ಎಸ್.ಕೆ.: ಶೃತಿಯಲ್ಲದಿದ್ದರೂ, ಈಗಿನವರೆಗೆ ಸಂಗ್ರಹಿತ ಜ್ಞಾನಮೊತ್ತವನ್ನು, ನೀರ್ಣಾಯಕವಂತಲ್ಲದಿದ್ದರೂ, ಒಂದು ಬಹುಮುಖ್ಯ ‘ಆಗಮ ಪ್ರಮಾಣ’ ಎಂದು ಭಾವಿಸಬಹುದಲ್ಲವೆ?

 

ಕೆಲವು ಮೂಲ ಭಾರತೀಯ ಪದ್ಧತಿಗಳಲ್ಲಿ ಆಗಮವನ್ನು ಮೂರನೇ ಪ್ರಮಾಣವಾಗಿಯೂ ಒಪ್ಪಿಕೊಳ್ಳಲಾಗುತ್ತಿತ್ತು. ನೀವು ಹೇಳುತ್ತಿರುವುದು ಸಾಂಖ್ಯರು ಹೇಳುವ ‘ಆಪ್ತ-ವಚನ’ (ವಿಶ್ವಾಸವಿಡುವವರ ಮಾತು)ಕ್ಕೆ ಹತ್ತಿರವಿದೆ. ಅವರಿದನ್ನು ಪ್ರತ್ಯಕ್ಷ ಮತ್ತು ಅನುಮಾನದ ನಂತರದ ಮೂರನೇ ಪ್ರಮಾಣವಾಗಿ ಒಪ್ಪುತ್ತಾರೆ. ಆದರೆ ವೇದದಲ್ಲಿರುವುದೂ ಮನುಷ್ಯಕೃತವಾದದ್ದರಿಂದ ಅದೂ ಸಹ ಯಾವುದೇ ಮನುಷ್ಯ ನಿರ್ಮಿತದಂತೆ ದೋಷದ ಸಾಧ್ಯತೆ ಹೊದಿರುವಂಥದ್ದು. ನಿರೀಶ್ವರ ಸಾಂಖ್ಯರು ‘ದೇವರು ಇಲ್ಲವೇ ಇಲ್ಲಾ’ ಎನ್ನದಿದ್ದರೂ, ‘ದೇವರು ಇದ್ದಾನೆ ಎಂಬುದಕ್ಕೆ ಪ್ರಮಾಣವಿಲ್ಲ’ ಎನ್ನುತ್ತಾರೆ.

 

ನಮ್ಮ ಪ್ರಾಚೀನ ವಿಜ್ಞಾನಿಗಳು ತಮ್ಮ ವಿಜ್ಞಾನದಲ್ಲಿ ವೇದಶೃತಿಯನ್ನು ಬಳಸಿದವರಲ್ಲ. ಆದರೆ ಅವರಲ್ಲಿ, ನೀಲಕಂಠನೂ ಸೇರಿದಂತೆ, ಬಹುತೇಕರು ವೇದವಿದ್ವಾಂಸರೂ ಆಗಿದ್ದರು. ಸಾಮಾನ್ಯವಾಗಿ ನಮ್ಮ ಚರಕ, ಭಾಸ್ಕರರಿಗೆ ಸಾಂಖ್ಯರ ಆಲೋಚನಾ ಕ್ರಮದ ಬಗ್ಗೆ ಗೌರವವಿತ್ತು. ಇದೆಲ್ಲವನ್ನೂ ಅವೈಚಾರಿಕ ಎಂದು ನೀವು ಹೇಗೆ ಹೇಳುವಿರಿ?

 

ಆಲೋಚನೆಗಳ ಮತ್ತು ಬೌದ್ಧಿಕತೆಯ ಇತಿಹಾಸಕಥನವು ಅಡ್ಡಾದಿಡ್ಡಿಯಾಗಿದೆ, ಮತ್ತು ಹಾಗಿರುವುದರಿಂದಲೇ ಅದು ಹೆಚ್ಚು ರೋಚಕವೂ ಆಗಿದೆ. ರಾಜರುಗಳೂ ಮತ್ತವರ ಯುದ್ಧಗಳಿಗಿಂತಲೂ ಹೆಚ್ಚಾಗಿ!!


-ಕನ್ನಡಕ್ಕೆ ಅನುವಾದಿಸಿದವರು: ಡಾ| ಸುದರ್ಶನ ಪಾಟೀಲಕುಲಕರ್ಣಿ