About Us
ರಿಚ್ಮಂಡ್ ಕನ್ನಡ ಸಂಘ - ಒಂದು ಕಿರು ಪರಿಚಯ
ಉತ್ತರ ಅಮೇರಿಕದ ಪೂರ್ವ ಭಾಗದ ವರ್ಜೀನಿಯಾ ರಾಜ್ಯದ ರಾಜಧಾನಿ ನಗರವಾದ ರಿಚ್ಮಂಡ್ ನಗರದಲ್ಲಿನ ಕನ್ನಡಿಗ ಸಂಸಾರಗಳು ಒಟ್ಟು ಮನಸ್ಸಿನಿಂದ ಹುಟ್ಟು ಹಾಕಿದ ಸಂಸ್ಥೆಯ ಹೆಸರು "ರಿಚ್ಮಂಡ್ ಕನ್ನಡ ಸಂಘ".
ಸುಮಾರು ೧೯೭0 - ೮0 ರ ದಶಕದಲ್ಲಿ ಕನ್ನಡಿಗ ಸಂಸಾರಗಳು ರಿಚ್ಮಂಡ್ ನಗರಕ್ಕೆ ವಲಸೆ ಬಂದವು. ಇದರಲ್ಲಿ ಮುಖ್ಯವಾಗಿ ಶ್ರೀ ಶರತ್ ಚಂದ್ರ ಕುಟುಂಬ, ಡಾ. ವಿಜಯ ರಾಘವನ್ ಕುಟುಂಬ, ಶ್ರೀ ಮುದ್ದಪ್ಪರಂಗಪ್ಪ ಕುಟುಂಬ, ಶ್ರೀ ನಂಜುಂಡ ರಾಮ್ ಕುಟುಂಬ, ಶ್ರೀ ಈಶ್ವರ್ ರಾಜು ಕುಟುಂಬ, ಶ್ರೀ ಗೋಪಾಲ ಕೃಷ್ಣ ಕುಟುಂಬ, ಶ್ರೀ ಮೂರ್ತಿ ಕುಟುಂಬ, ಶ್ರೀ ಹನುಮಯ್ಯ ಗೌಡ ಕುಟುಂಬ, ಡಾ. ಜಿ.ಎಸ್.ಮೂರ್ತಿ ಕುಟುಂಬ ಮತ್ತು ಇತರೆ ಕುಟುಂಬಗಳು. ಈ ಕುಟುಂಬಗಳು ರಿಚ್ಮಂಡ್ ಕನ್ನಡ ಸಂಘ ವನ್ನು ಅಧಿಕೃತವಾಗಿ ಸ್ಥಾಪಿಸುವ ಮುಂಚಿನಿಂದಲೂ ವಾರಾಂತ್ಯದಲ್ಲೋ ಅಥವಾ ಹಬ್ಬ ಹರಿದಿನಗಳಲ್ಲೋ ಓಟ್ಟಾಗಿ ಸೇರಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿವೆ.
ರಿಚ್ಮಂಡ್ ಕನ್ನಡ ಸಂಘವು ೨೦೦೦ನೇ ಇಸವಿಯಲ್ಲಿ ಆರಂಭವಾಗಿ, ನಂತರ ಅಧಿಕೃತವಾಗಿ ನೋಂದಣಿ ಆಗಿದ್ದು, ಇಂದು ದಿನದಿಂದ ದಿನಕ್ಕೆ ಬೆಳೆಯುತ್ತಿದೆ.
ಇಲ್ಲಿವರೆಗಿನ ಅಂಕಿ ಅಂಶದ ಪ್ರಕಾರ ರಿಚ್ಮಂಡ್ ಕನ್ನಡ ಸಂಘವು ಕನಿಷ್ಟ ಮುನ್ನೂರು ಕನ್ನಡಿಗರ ಸಂಸಾರಗಳನ್ನು ಸದಸ್ಯರನ್ನಾಗಿ ಹೊಂದಿದೆ ಎನ್ನಬಹುದು.
ಕನ್ನಡ ಭಾಷೆಯನ್ನು ಎತ್ತಿ ಹಿಡಿಯುವ, ಮುಂದಿನ ಪೀಳಿಗೆಯಲ್ಲೂ ಕನ್ನಡತನವನ್ನು ಉಳಿಸಿ, ಬೆಳೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೇ ಧ್ಯೇಯವಾಗಿಟ್ಟುಕೊಂಡು ಬೆಳೆಸಿರುವ ಈ ಸಂಸ್ಥೆ 'ಲಾಭ ಉದ್ದೇಶರಹಿತ' ಸಂಸ್ಥೆ (a non-profit organization).
ಹುದುಗಿರುವ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ 'ಸಂಕ್ರಾಂತಿ' ಹಬ್ಬಕ್ಕೆ "ಸಂಗೀತ ಸಂಜೆ" ಕಾರ್ಯಕ್ರಮ, ವರ್ಷದ ಹಬ್ಬ 'ಉಗಾದಿ', ಬೇಸಿಗೆ ರಜೆಯಲ್ಲಿ ಪಿಕ್ನಿಕ್, ಬೆಳಕಿನ ಹಬ್ಬ 'ದೀಪಾವಳಿ' ಹಾಗೂ 'ಕನ್ನಡ ರಾಜ್ಯೋತ್ಸವ' ಇವುಗಳು ಸಂಘದ ಪ್ರಮುಖ ಕಾರ್ಯಕ್ರಮಗಳು. ಇದಲ್ಲದೇ ಸ್ಥಳೀಯ ದೇವಸ್ಥಾನವನ್ನು ಬೆಂಬಲಿಸುವ ಉದ್ದೇಶದಿಂದ ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಭಾರತೀಯ ಸಂಸ್ಕೃತಿಯನ್ನು ಉಳಿಸುವಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಯೇ ಮೊದಲಾದವುಗಳಲ್ಲೂ ಸಂಘವು ಸಕ್ರಿಯ ಪಾತ್ರವಹಿಸಿದೆ.
'ಆಪ್ತಮಿತ್ರ', 'ಮತದಾನ', 'ಮುಂಗಾರು ಮಳೆ', 'ನಾನು ಗಾಂಧಿ', 'ಮಾತಾಡ್ ಮಾತಾಡ್ ಮಲ್ಲಿಗೆ' ಮುಂತಾದ ಚಲನಚಿತ್ರಗಳನ್ನು ರಿಚ್ಮಂಡ್ ಕನ್ನಡಿಗರು ತೆರೆ ಮೇಲೆ ನೋಡುವ ಸೌಭಾಗ್ಯವನ್ನು ಒದಗಿಸಿತ್ತು.
ಚಿತ್ರರಂಗದ ಕಣ್ಮಣಿಗಳಾದ ಶ್ರೀನಾಥ್, ಗೀತ, ಸರಿತ, ಸರೋಜಾದೇವಿ, ನಂಜುಂಡೇಗೌಡ, ನಾಗತಿಹಳ್ಳಿ ಚಂದ್ರಶೇಖರ್, ಬಿ.ಕೆ.ಸುಮಿತ್ರ ಅವರುಗಳನ್ನು ಭೇಟಿ ಮಾಡಿಸುವುದರ ಮೂಲಕ ಚಿತ್ರರಂಗವನ್ನು ಪ್ರೋತ್ಸಾಹಿಸುವ ದಿಶೆಯಲ್ಲೂ ಹೆಜ್ಜೆ ಇಟ್ಟಿದೆ. ಪ್ರೊ.ಕೃಷ್ಣೇಗೌಡರೇ ಮೊದಲಾದ ಸಾಹಿತ್ಯ ಕ್ಷೇತ್ರದವರನ್ನು ಸನ್ಮಾನಿಸಿ ಹೆಮ್ಮೆ ಪಡೆದಿದೆ.
ಆರ್ಥಿಕವಾಗಿ ತೀರಾ ಶಕ್ತಿಯುತವಾಗಿಲ್ಲದ ಕಾರಣ ದೇಣಿಗೆ ನೀಡುವ ಅಥವಾ ಸೇವ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿಲ್ಲ. ಕಾವೇರಿ ಸಂಘದದವರೊಡಗೂಡಿ ಶ್ರೀಯುತರಾದ ಪಿ.ಬಿ.ಶ್ರೀನಿವಾಸ್ ಅವರ ಸಹಾಯ ನಿಧಿಗೆ ದೇಣಿಗೆ ನೀಡಿದೆ. ಅಕ್ಕ ಸಂಸ್ಥೆಯೊಂದಿಗೆ ಕೈಗೂಡಿಸಿ ೨೦೦೮'ರಲ್ಲಿ ದೇಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
'ಕಲಿ-ನಲಿ' ಕಾರ್ಯಕ್ರಮದ ಮೂಲಕ ಸಂಘದ ಮಕ್ಕಳಿಗೆ ಕನ್ನಡ ಪಾಠ ಹೇಳಿಕೊಡುವ ಪ್ರಯತ್ನ ನೆಡೆಸಿದೆ. ಅದಲ್ಲದೆ, ಸಂಘದಲ್ಲಿ ವೈದ್ಯರ ಜ್ಞ್ನಾನವನ್ನು ಉಪಯೋಗಿಸಿಕೊಂಡು ಜನರಲ್ಲಿ ಆರೋಗ್ಯದ ವಿಷಯದಲ್ಲಿ ಅರಿವು ಮೂಡಿಸುವ ಉತ್ತಮ ಪ್ರಯತ್ನವನ್ನೂ ಮಾಡಿದೆ.
ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚು ಸಕ್ರಿಯವಾಗಿ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಉದ್ದೇಶ ಹೊಂದಿದೆ. ಆರ್ಥಿಕವಾಗಿ ಹೆಚ್ಚು ಬಲಯುಕ್ತವಾಗಿ ಅಮೇರಿಕಕ್ಕೆ ಆಗಮನಿಸುವ ಕಲಾವಿದರು / ಸಾಹಿತಿಗಳನ್ನು ನಮ್ಮಲ್ಲಿಗೂ ಕರೆಸಿಕೊಳ್ಳುವುದರ ಮೂಲಕ ಸಾಹಿತ್ಯ, ಕಲೆ, ಸಂಸ್ಕೃತಿಗಳಿಗೆ ತನ್ನ ಬೆಂಬಲ ನೀಡುವ ಸದುದ್ದೇಶವನ್ನು ಹೊಂದಿದೆ.