ನನ್ನ ಪ್ರೀತಿಯ ವ್ಯಾಲಿ
ನನ್ನ ಪ್ರೀತಿಯ ವ್ಯಾಲಿ
ನನ್ನ ಪ್ರೀತಿಯ ವ್ಯಾಲಿ,
ಪ್ರತೀ ವರ್ಷ ನಿನ್ನ ಪ್ರೌಢ ಕಳೆ ಹೆಚ್ಚತ್ತಲೇ ಇದೆ. ಸ್ವಲ್ಪವೂ ಕುಂದುತ್ತಿಲ್ಲ ನಿನ್ನ, ಚೆಲವು, ಒಲವು , ಸದಾ ಕಾಲ ಹಸಿರು, ತಾಜಾ ಉಸಿರು, ಉತ್ಸಾಹದ ಚಿಲುಮೆ, ಹರಿಸುತ್ತಿರುವಿ ಒಲುಮೆ !! ಸ್ವಲ್ಪವೂ ಬೇಸರಿಸಿಕೊಳ್ಳದೆ ನನ್ನನ್ನು ಬರಮಾಡಿಕೊಂಡೆ, ಮೊಗೆದು ಮೊಗೆದು ಪ್ರೀತಿ ಕೊಟ್ಟೆ ,ಅನುಭವಗಳಿ೦ದ ಬೆಸೆದೆ, ಜೀವ೦ತಿಕೆ ಹರಿಸಿದೆ, ಎಳೆಯ ಮಿಡಿಯಾಗಿದ್ದ ನಾನು ಮರವಾಗುವ ಪ್ರಯತ್ನದತ್ತ ದೂಡಿದೆ, ಧುರಿತ ಸಮಯದಲ್ಲಿ ಕೈ ಹಿಡಿದೆ, ಸಂತೋಷದ ಸಮಯದಲ್ಲಿ ಬರಸೆಳೆದೆ, ನಿನ್ನ ಪ್ರೀತಿಯ ಒರತೆ, ಇಂದಿಗೂ ಅನ್ನಿಸಲಿಲ್ಲ ಕೊರತೆ!
ನಲವತ್ತುನಾಲ್ಕು ವರ್ಷಗಳ ಸುದೀರ್ಘ ಪಯಣ, ಕೊಟ್ಟಿರುವೆ ಎಲ್ಲರಿಗೂ ತಾಣ, ಕಿರಿಕಿರಿಗಳನ್ನು ಕತ್ತರಿಸಿ, ಹೊಸತನವನ್ನು ಬಿತ್ತರಿಸಿ, ಗಿಡ ಮರಗಳಿಗೆ ಪೋಷಣೆಯಿತ್ತು, ಪ್ರಾಣಿ ಪಕ್ಷಿಗಳಿಗೆ ಆಶ್ರಯವನಿತ್ತು, ಕೆರೆ-ಕೊಳಗಳಿಗೆ ಜಾಗವನ್ನಿತ್ತು, ಮನುಕುಲಕ್ಕೆ ವಿಶ್ವಾಸವನಿತ್ತು ಪಾಲಿಸುತ್ತಿರುವ ನಿನಗೆ ಏನೆಂದು ಆಶಿಸಲಿ?
ನನ್ನ ನಿನ್ನ ಒಡನಾಟದ ಈ ಪಯಣದಲಿ , ನೀ ನನಗೆ ಕೊಟ್ಟಿರುವ ಅನುಭವಕ್ಕೆ ಸದಾ ಋಣಿಯೆಂದು ಹೇಳಲೇ? ಅದನ್ನೂ ಬಯಸುವುದಿಲ್ಲ ನೀನು! ಪ್ರತಿ ವರ್ಷ, ಹಳೆಯದೆನ್ನ ಕೊಡವಿ, ಹಳತನ್ನೆಲ್ಲ ಕೆಡವಿ, ಹೊಸತನ ತರುವಿ. ನಿನ್ನ ಈ ಉತ್ಸಾಹ, ಚೈತನ್ಯ ಎಂದಿಗೂ ಬತ್ತದಿರಲಿ, ಬಾಡದಿರಲಿ. ವರ್ಷ ಕಳೆದ೦ತೆ ಸಹಜವಾಗಿ ಮಾಗುವ ನಿನ್ನಯ ಯಶಸ್ಸನ್ನು ಹಾಗೆ ಉಳಿಸಿಕೋ. ನಲವತ್ನಾಲ್ಕರ ಹುಟ್ಟುಹಬ್ಬದ ಶುಭ ಹಾರೈಕೆಗಳು. ನಿನ್ನ ಪ್ರೀತಿ, ಒಡನಾಟ ಮತ್ತಷ್ಟು ಸಿಗಲಿ .
ಓ ಪ್ರೀತಿಯ ವ್ಯಾಲಿ,
ಹೂ,ಗಿಡ ಮರಗಳ ವನಮಾಲಿ,
ನಿನ್ನ ಜೊತೆಗಿನ ಕಲಿ -ನಲಿ
ಬದುಕಿಲ್ಲ ಗಲಿಬಿಲಿ !!
ಪ್ರೀತಿಯಿಂದ,
ಸ್ವಪ್ನಾ