ಮಂದ್ರ ಕುರಿತಂತೆ ಚೈತನ್ಯ ಅವರು ಹೇಳುತ್ತಾರೆ....
ಮೊದಲ ಬಾರಿ ಮಂದ್ರ ಓದಿದ ಮೇಲೆ ನನಗೆ ಅದರ ಬಗ್ಗೆ ಯಾವಾಗಲೂ ಒಂದು ರೀತಿಯ ಲವ್ ಹೇಟ್ ರಿಲೇಷನ್ಶಿಪ್ ಇತ್ತು... ನಂತರ ಆ ಸ್ತರದಿಂದ ಮೇಲೆ ಬಂದು ಮತ್ತೊಮ್ಮೆ ಓದುವಾಗ ಅರಿಯುವಾಗ ಆಹಾ ಏನು ಅದ್ಭುತ ಕೃತಿ ಎನ್ನುವಂತಾಗಿದೆ. ಅದರ ಒಳಗಣ ಸಾರಾಂಶವನ್ನರಿಯಲು ಮಾಡಿದ ಸಣ್ಣ ಪ್ರಯತ್ನ ಇದು. ನನ್ನ ಕಂಡರಿಯುವಿಕೆಗೂ ಮೀರಿ ಇನ್ನೂ ನೂರಾರು ಒಳನೋಟಗಳು ಅಲ್ಲಿವೆ. ಆದರೆ ಸತ್ಯಕಾಮರ ಮಾತಿನಂತೆ ಕಣ್ಣು ಇದ್ದಷ್ಟು ಕಾಣ್ಕೆ ಇದೆ ಎಂಬಂತೆ ನನ್ನ ಶಕ್ತ್ಯಾನುಸಾರ ತಿಳಿದಿದ್ದನ್ನು ಕಂಡರಿದಿದ್ದೇನೆ.
ಮೊದಲೇ ಹೇಳಿಬಿಡುತ್ತೇನೆ. ನಾನು ಈ ಕಾದಂಬರಿಯ ವಿಮರ್ಶೆಗಳನ್ನ ಓದಿಲ್ಲ. ಶತಾವಧಾನಿ ಗಣೇಶರ ವ್ಯಾಖ್ಯಾನವಿರುವ ಕಾರ್ಯಕ್ರಮ ಅರ್ಧಂಬರ್ಧ ಕೇಳಿದ್ದಷ್ಟೇ. ಅದೂ ಸುಮಾರು ಮರೆತುಹೋಗಿದೆ. ಅಷ್ಟರಮಟ್ಟಿಗೆ ಕಾದಂಬರಿಯ ಕುರಿತ ಆಲೋಚನೆಗಳು ಬೇರೆಯವರ ಪ್ರಭಾವದಿಂದ ಅಷ್ಟರಮಟ್ಟಿಗೆ ಸ್ವತಂತ್ರವಾಗಿದೆ ಎನ್ನಬಹುದು. ಮಂದ್ರ ಕಾದಂಬರಿಯು ಇನ್ನಿಲ್ಲದಂತೆ ಕಲೆ, ನೈತಿಕತೆ ಮತ್ತು ಜೀವನ ಮೌಲ್ಯಗಳ ಸಹಸಂಬಂಧದ ಬಗ್ಗೆ ಬಹಳ ಆಳವಾದ ಅಧ್ಯಯನ ತರ್ಕಗಳನ್ನೊಳಗೊಂಡು ಲೇಖಕನ ಕಲ್ಪನಾ ವಿಹಾರದಲ್ಲಿ ಅರಳಿದ ಸಾಹಿತ್ಯ ಕಲಾಕೃತಿಯಾಗಿ, ಅದರಲ್ಲಿ ಪಾತ್ರಗಳ ಆಲೋಚನಾ ಮಾರ್ಗವಾಗಿ, ಆಡುವ ಮಾತಾಗಿ, ಹಾಡುವ ಗೀತೆಯಾಗಿ ಎಲ್ಲೆಲ್ಲೂ ಆ ದ್ವಂದ್ವಕ್ಕಿರುವ ತಿಕ್ಕಾಟದ ಕಿಚ್ಚೇ ಕಾಣಿಸುತ್ತದೆ. ಅದು ಕೆಲವು ಕಡೆ ದಳ್ಳುರಿಯಾದರೆ, ಕೆಲವು ಕಡೆ ದೀಪವಾಗುತ್ತದೆ. ಕೆಲವು ಕಡೆ ಹೊಗೆ ಮುಸುಕಿದ್ದರೆ ಹಲವೆಡೆ ಬಗೆ ತೆರೆದಿದೆ. ನಾನು ಸಂಗೀತದಲ್ಲಿ ಅಷ್ಟು ಪ್ರವೇಶ ಇಲ್ಲದವನಾದ್ದರಿಂದ ಕಾದಂಬರಿಯ ಸಂಗೀತ ಭಾಗವನ್ನು ಬಿಟ್ಟು ಕಲೆ ಮತ್ತು ನೈತಿಕತೆಯ ಹಾಗು ಮೌಲ್ಯದ ಮೂಸೆಯಲ್ಲಿ ಅದು ಹೇಗೆ ವಿಶಿಷ್ಟವಾಗಿ ಹೊರಹೊಮ್ಮುತ್ತದೆ, ಈ ಸಹಸಂಬಂಧದ ಪರಿಣಾಮವು ಕಲಾವಿದನ ಜೀವನದ ಮೇಲೆ, ಕಲೆಯ ಮೇಲೆ, ಕಲಾಭಿಮಾನಿಗಳ ಮೇಲೆ ಪ್ರಭಾವ ಬೀರುತ್ತದೆಯೇ?, ಬೀರಬೇಕೇ , ಬೀರಿದರೂ ಕಲೆಯು ತಾಳಿಕೊಳ್ಳಬಲ್ಲದೇ, ಅದು ಶುದ್ಧ ಕಲೆಯಾಗಿಯೇ ಉಳಿಯುತ್ತದೆಯೇ, ವ್ಯಕ್ತಿಯ ವ್ಯಕ್ತಿತ್ವವೇ ಕಲೆಯಲ್ಲಿ ಹೊರಹೊಮ್ಮುತ್ತದೆಯೋ ಅಥವಾ ಶುದ್ಧಕಲೆಯು ವ್ಯಕ್ತಿತ್ವದ ದೌರ್ಬಲ್ಯದ ಹೊರತಾಗಿಯೂ ಪ್ರಕಾಶವಾಗಲು ಸಾಧ್ಯವೋ... ಮುಂತಾಗಿ ಲೋಕನೀತಿ ಮತ್ತು ಕಲಾವಿದನ ಅಶಿಸ್ತಿನ ನೀತಿಗೆಟ್ಟ ಬದುಕು ಇವೆರಡರ ನಡುವೆ ಅರಳುವ ಕಲೆಯ ಸ್ವರೂಪ ಹೇಗಿರಬಹುದು, ಹೇಗಿದೆ ಎಂಬುದನ್ನು ಲೇಖಕರು ವೈವಿಧ್ಯಮಯವಾಗಿ ಪಾತ್ರಗಳ ಪ್ರಶ್ನಿಸುತ್ತ, ವಿವಿಧ ಸನ್ನಿವೇಶಗಳನ್ನು ಸೃಜಿಸುತ್ತ, ಸಮಸ್ಯೆಯ ವಿಶ್ವರೂಪವನ್ನು ಮತ್ತು ಆ ಅನ್ವೇಷಣೆಯಲ್ಲಿ ತನಗೆ ದೊರೆತಿರುವ ಪರಿಹಾರವನ್ನು ಪಾತ್ರಾಭಿವ್ಯಕ್ತಿಯ ಮೂಲಕ ಕೃತಿಕಾರರು ಪ್ರಕಟಗೊಳಿಸಿರುವುದರ ಬಗ್ಗೆ ನನ್ನ ಗಮನವನ್ನು ಸೀಮಿತಗೊಳಿಸಿದ್ದೇನೆ. "ಮಂದ್ರವೆಂದರೆ ಅಂತರ್ಮುಖತೆ, ಬರೀ ರಾಗದ ಆಳವಲ್ಲ, ಆತ್ಮದ ಆಳಕ್ಕೆ ಇಳಿಯುವ ಅನುಭವ" ಮಧುಮಿತಾ ಧೇನಿಸುವ ಈ ವಾಕ್ಯ ಇಡೀ ಕಾದಂಬರಿಯ ನಾದಾನುಸಂಧಾನಕ್ಕೆ ಏಕತಾರಿಯಾಗಿ ಮಿಡಿಯುತ್ತ ಆಧಾರಶ್ರುತಿಯನ್ನಿತ್ತಿದೆ.
ಕಾದಂಬರಿಯ ನಾಯಕ ಮೋಹನಲಾಲ ಕಲೆ ಮತ್ತು ನೈತಿಕತೆ ಎರಡನ್ನೂ ಮೊದಲು ಬೆರೆಸದ ಮತ್ತು ನಂತರ ಬೆರೆಸುವ, ಬೆರಕೆಯ ಮಥನದಲ್ಲಿ ಶಿಥಿಲವಾಗುವವನು. ಮೌಲ್ಯದ ಗೆರೆಯಿಂದ ದೂರಸರಿದಂತೆ ಅವನ ಕೀಳು ಆಲೋಚನೆಗಳಿಗೂ ಕುಮ್ಮಕ್ಕು ಸಿಕ್ಕಿ ನಂತರ ಮನವೇ ಬರಿದಾಗುವ, ಕಾಮವು ಕಲೆಯಾಗದೇ ಕ್ರಿಯೆಯ ಕಸರತ್ತಿನ ಮಟ್ಟದಲ್ಲೇ ಉಳಿಯುವ ವ್ಯರ್ಥ ಸಾಹಸ, ಬಳಲಿಕೆ. ಹೆಚ್ಚು ಕಡಿಮೆ ನಾಯಿಕೆ ಎಂದು ಗುರುತಿಸಬಹುದಾದ ಮಧುಮಿತಾ ಕಲೆ ಮತ್ತು ನೀತಿ ಎರಡೂ ಪರಸ್ಪರ ಅನ್ಯೋನ್ಯ ಎಂದ ಸಾಮಾನ್ಯ ಜನರಂತೆ ಭಾವಿಸಿ ಜೀವಿಸುವ ಅಥವಾ ಭಾವಿಸದಿದ್ದರೂ ಕಲಾವಿದರನ್ನು ಆರಾಧನಾ ಮನೋಭಾವದಲ್ಲಿ ನೋಡುವ ತೀವ್ರ ಕಲಾಸಕ್ತಳು. ಕಲೆಯ ತೀವ್ರ ಆಕರ್ಷಣೆಗೊಳಗಾಗಿ ಅ ಕಲಾಮಾಧ್ಯಮವು (ಅಂದರೆ ಮೋಹನಲಾಲ) ಅನೈತಿಕತೆಯ ಹಾದಿಯಿದ್ದರೆ ಮಾತ್ರ ತೆರೆದುಕೊಳ್ಳುವುದೆಂಬ ಕಟುಸತ್ಯ ತಿಳಿದು ತನ್ನೊಳಗೇ ತೊಳಲಿ ಬಳಲಿ ಕಡೆಗೆ ಸಮರ್ಪಣೆ / ಗಾಂಧರ್ವ ವಿವಾಹ ಎಂಬ ನೈತಿಕ ಊರುಗೋಲನ್ನು ಸಮರ್ಥಿಸಿ, ಕಲ್ಪಿಸಿಕೊಂಡು ಸಂಗೀತವನ್ನ ಅದರ ಹಿಂದಿನ ಅನೀತಿಯ ಕೈವಾಡದ ಹೊರತಾಗಿಯೂ ಅರಿಯಲು ಟೊಂಕ ಕಟ್ಟಿದಳು. ಅದರಲ್ಲಿ ಬಹುತೇಕ ಯಶಸ್ವಿಯೂ ಆದಳು. ಅಂದರೆ ಅನೈತಿಕ ಅನ್ನಿಸುವ ವಿಚಾರವನ್ನ ಒಂದು ಚೌಕಟ್ಟಿನೊಳಗೆ ತಂದು ತನಗೆ ಬೇಕಾದ ಕಲೆಯನ್ನ ಅರ್ಜಿಸಿದವಳು. ಇತ್ತ ಕಡೆ ಮೋಹನಲಾಲನಾದರೋ ಕಲೆ ಮತ್ತು ನೀತಿ ಎರಡಕ್ಕೂ ಖಂಡತುಂಡವಾಗಿ ಸಂಬಂಧ ಕತ್ತರಿಸಿ ಅದು ಕೇವಲ ಸ್ಫೂರ್ತಿ ಎಂದು ಭಾವಿಸುತ್ತ ಅನೈತಿಕತೆಯ ನೆಲವನ್ನೇ ಕಲಾಭಿವ್ಯಕ್ತಿಯು ಮೊಳಕೆಯೊಡೆಯಲು ಅವಕಾಶವನ್ನಾಗಿ ಮಾಡಿಕೊಂಡ. ಸ್ಫೂರ್ತಿ ಎಂಬುದಿಲ್ಲದೆ ಕಲೆ ಮತ್ತದರ ಭಾವ ಹೊರಹೊಮ್ಮದು ಎಂಬ ವಾಕ್ಯವನ್ನಿಟ್ಟು ಆಲೋಚಿಸಿದರೆ, ಆ ಸ್ಫೂರ್ತಿಯು ಕಲಾವಿದನ ವ್ಯಕ್ತಿತ್ವ ಸಂಬಂಧಿ ವಿಷಯ ಆಗಿರುತ್ತದೆ ಎಂದು ಉತ್ತರ ಬರುತ್ತದೆ. ವ್ಯಕ್ತಿತ್ವವು ಗುಣಗಳ ಸಮೂಹ. ಅದನ್ನ ಇದು ಹೀಗೆ ಇದು ಹೀಗೆ ಅಂತ ಕಂತೆ ಕಂತೆ ಮಾಡಿ ವಿಭಜಿಸಿ ಇಡಲಾಗದ ಸಂಕೀರ್ಣತೆ ಇರುತ್ತೆ. ಹಾಗಾಗಿ ವ್ಯಕ್ತಿತ್ವದಲ್ಲಿ ಅನೈತಿಕತೆಯು ತುಂಬಿದ್ದರೆ ಅದು ಕಲೆಯಲ್ಲಿ ಹೊರಹೊಮ್ಮುತ್ತದೆಯೇ ಎಂದು ನಂತರ ಹುಟ್ಟಿಕೊಳ್ಳುವ ಪ್ರಶ್ನೆಗೆ ಅಹುದು ಮತ್ತು ಇಲ್ಲ ಎಂಬ ಎರಡೂ ಉತ್ತರ ಕೊಡಬಹುದು. ಭೈರಪ್ಪನವರು ಕಾದಂಬರಿಯುದ್ದಕ್ಕೂ ಇದೇ ಸಹಸಂಬಂಧದ ವಿಷಯವಾಗಿ ಅಂತಾದರೂ ಬಾ ಇಂತಾದರೂ ಬಾ ಎಂಬಂತೆ ಎಲ್ಲ ಬಲ್ಲ ಹಾದಿಗಳ ಮೂಲಕ ಕ್ರಮಿಸಿ ದಾರಿಯ ಅಡತಡೆಯ ಬಗ್ಗೆ, ಕಷ್ಟ ನಷ್ಟಗಳ ಬಗ್ಗೆ ಬಗೆಗಾಣಿಸಿದ್ದಾರೆ. ಇಲ್ಲಿ ಒಂದು ಮುಖ್ಯ ಎಳೆಯನ್ನು ನಾವು ವಿಸ್ತಾರವಾಗಿ ಚರ್ಚಿಸಬೇಕಾಗುತ್ತದೆ. ಏನೆಂದರೆ ಮೋಹನಲಾಲ ಮೊದಲಲ್ಲಿ ಜೀವನ ಮೌಲ್ಯಗಳನ್ನ ತೀವ್ರವಾಗಿ ಕಾಪಾಡಿಕೊಂಡೇ ಬಂದವ. ಓಂಕಾರ ಬಾಬಾ ಸೇವೆಯ ಶ್ರದ್ಧೆಯಲ್ಲಿ, ರಾಜಾಸಾಹೇಬರ ಶಿಷ್ಯತ್ವದಲ್ಲಿ, ನಾಗಪುರದಲ್ಲಿ ಸಂಗೀತ ಪ್ರೇಮಿಗಳಿಗೆ ಮನದಣಿಯೆ ಮುದನೀಡುವಲ್ಲಿ, ಮೊದಲನೆ ಹೆಂಡತಿ ರಾಮಕುಮಾರಿಗೆ ಗುಪ್ತವಾಗಿ ಆರ್ಥಿಕ ಸವಲತ್ತು ಒದಗಿಸುವಲ್ಲಿ ಮುಂತಾದ ಕಡೆ ಅವನ ಮೌಲ್ಯಗಳು ಚೆನ್ನಾಗಿ ಒಡೆದು ಕಾಣುತ್ತವೆ. ಆದರೆ ಬೋಳೇತನ ಮತ್ತು ಕಾಮಚಾಪಲ್ಯ ಅವನ ದೌರ್ಬಲ್ಯ. ಅದಕ್ಕಾಗಿ ಅನೀತಿಯ ದಾರಿ ಹಿಡಿದರೂ ಏನೋ ಒಂದು ಸಮರ್ಥನೆ ಕೊಟ್ಟುಕೊಳ್ಳುವಲ್ಲಿ ಆತ್ಮ ಸಮಾಧಾನ ಮಾಡಿಕೊಳ್ಳುವವ.
ಅಥವಾ ಮಾಡಿಕೊಳ್ಳದಿದ್ದರೂ ನೀತಿ ಅನೀತಿಗಳೆಂಬ ಶಿಸ್ತಿಗೆ ಕಟ್ಟು ಬೀಳದಿದ್ದವ. ಚಂಪಾ ಎಂಬ ಅಪಶ್ರುತಿ ಅವನಿಗೆ ತಗುಲಿಕೊಳ್ಳುವ ತನಕ ಅವನ ಜೀವನದಲ್ಲಿ ಅನೈತಿಕತೆ ಇದ್ದರೂ ಅಪಶ್ರುತಿ ಅಥವಾ ಮೌಲ್ಯಗಳ ಅಧಃಪತನ ಇಲ್ಲ. ನಂತರವೇ ಅದರ ದುರಾಕ್ರಮಣ. ತನ್ನ ಯೋಚಿಸದೇ ಮುನ್ನುಗ್ಗುವ ಮೂರ್ಖ ಗುಣವು ಅವನನ್ನು ಅವರ ಖೆಡ್ಡಾಗೆ ಬೀಳುವಂತೆ ಮಾಡಿತು, ಅದು ಜೂಜಿನಲ್ಲೂ ವ್ಯಕ್ತವಾಗಿದೆ. ಜೀವನವೇ ಒಂದು ಜೂಜು ಎಂಬಂತಹ ಧೋರಣೆಯಿಂದ ಅದನ್ನು ಅನ್ವೇಷಿಸ ಹೊರಟ ಭಂಡ ಮೋಹನಲಾಲ. ಆದರೆ ಆ ಧೈರ್ಯದ ಫಲಶ್ರುತಿಯಾಗಿ ಅದೃಷ್ಟ ಒಲಿದು ಅವನಿಗೆ ರಾಜಾಸಾಹೇಬರ ಸರ್ವಶ್ರೇಷ್ಠವಾದ ಗಾಯಕಿಯೇ ಲಭಿಸಿತು. ಅದನ್ನ ಪೂರ್ಣ ಅರಿಯುವ ಹೃದಯಸ್ಥ ಮಾಡಿಕೊಳ್ಳುವ ಮೊದಲೇ ವಿಧಿ ಅವನಿಂದ ಗುರುವನ್ನು ಕಸಿದುಕೊಂಡಿತು. ಗುರುವಿದ್ದಿದ್ದರೆ ಅವನು ಪರಾಂಜಪೆಯ ಮತ್ತು ಚಂಪಾಳ ಮುಲಾಜಿಗೆ ಬೀಳುವ ಪರಿಸ್ಥಿತಿ ಬರದೇ ಇಂದು ನೈತಿಕ ಚೌಕಟ್ಟಿನಲ್ಲಿ ಜೀವಿಸುತ್ತಿದ್ದನೇನೋ. ಅದರೆ ಅವನ ಕಾಮತೃಷೆಯು ಅವನನ್ನು ನುಂಗಿ ನೊಣೆಯುತ್ತಿದ್ದಾಗ ರಾಮಕುಮಾರಿಯೊಟ್ಟಿಗೆ ವೈವಾಹಿಕ ಸಂಬಂಧದ ನೈತಿಕ ಬಂಧ ಅನಿವಾರ್ಯವಾಯಿತು. ಪ್ರಾರಂಭದಲ್ಲಿ ಅವಳೂ ಇವನಿಗೆ ಕಲ್ಯಾಣ ರಾಗದಂತೆಯೇ ಕಂಡಳು. ಆದರೆ ಚಂಪಾಳ ಆಕರ್ಷಣೆ ಇವನಿಗೆ ಅವಳಿಂದ ವಿಮುಖನನ್ನಾಗಿ ಮಾಡಿತು. ರಾಜಾಸಾಹೇಬರು ಹೋದನಂತರ ಭೂಪತರಾಮರು, ಅವರಿದ್ದಿದ್ದರೆ ಅಖಿಲ ಭಾರತ ಮಟ್ಟದ ಅದ್ಧೂರಿ ಪ್ರವೇಶ ಮಾಡುತ್ತಿದ್ದರೇನೋ ಈಗಲೂ ಪರವಾಗಿಲ್ಲ, ನಾಲ್ಕು ದಿನ ತಡವಾಗುತ್ತೆ ಅಷ್ಟೆ ಅನ್ನುತ್ತಾರೆ. ಅದನ್ನೊಪ್ಪಿ ಇವನೂ ಕಷ್ಟದ ಜೀವನವನ್ನೇ ನಡೆಸುತ್ತಿರುವಾಗ ಚಂಪಾಳ ದೃಷ್ಟಿ ಬಿದ್ದು ಬೋದಾಳತನ ಮತ್ತು ತನ್ನ ಕಾಮವಾಂಛೆ, ಆಕರ್ಷಣೆಗಳ ಹಿಡಿತಕ್ಕೆ ಸಿಕ್ಕಿ ಅವರು ನಿರ್ಮಿಸಿದ ಖೆಡ್ಡಾಗೆ ಬಿದ್ದ. ಅದೊಂದು ಸಂಚು ಎಂದು ನೇರವಾಗಿ ಕಾದಂಬರಿಕಾರರು ಹೇಳದಿದ್ದರೂ ಪರೋಕ್ಷವಾಗಿ ಅದರ ಎಲ್ಲ ಸೂಚನೆಗಳನ್ನು ಕೊಟ್ಟಿದ್ದಾರೆ. ಇವನ ಮೊದಲ ಸಭಾಗಾಯನಕ್ಕೆ ತಯಾರು ಮಾಡುವಾಗ ಅವನಿಗೆ ಅನ್ನಿಸಿದೆ, ಇವೆಲ್ಲ ಆಡಂಬರಗಳು ಯಾಕೆ ಅಂತ. ಆದರೆ ಸಿಲುಕಿಕೊಂಡ ವಜ್ರಮುಷ್ಠಿ ಅವನ ಸಮಸ್ತವನ್ನೂ ತನ್ನ ವಶದಲ್ಲಿರಿಸಿಕೊಂಡಿದೆ. ಮಿತ್ತಲ್ ಮನೋಹರಿಗೆ ಹೇಳುವ ತುಲನೆಯೇ ದುಃಖಕ್ಕೆ ಮೂಲ ಎಂಬ ಮಾತು ಮೋಹನಲಾಲನಿಗೆ ಪ್ರತಿಹಂತದಲ್ಲೂ ಅನ್ವಯಿಸುತ್ತದೆ. ತುಲನೆಗೆ ಪಕ್ಕಾಗಿ ಅವನ ಬಾಳು ಮತ್ತು ಅವನನ್ನೇ ನಂಬಿದವರ ಬಾಳು ಗೋಳಾಯಿತು. ಕಲಾವಿದ ಒಂದು ರಚನೆಯನ್ನ ಇನ್ನೊಂದರೊಟ್ಟಿಗೆ ಸದಾ ತುಲನೆ ಮಾಡುತ್ತಿರುವನೆಂಬ ನೋಟವೂ ಇಲ್ಲಿದೆ. ಈ ನಿಟ್ಟಿನಲ್ಲಿ ಮಂದ್ರ ಬಹಳ ಅದು ಲೌಕಿಕಕ್ಕೆ ಬಂದಾಗ ಅದರ ದುಷ್ಪರಿಣಾಮಗಳು ಈ ರೀತಿ ಘೋರವಾಗಿವೆ. ಮನೋಹರಿಯ ಬಗ್ಗೆ ಅವಳಿಗೆ ವಯಸ್ಸಾಯ್ತೆನ್ನುವ ನಿರ್ಲಕ್ಷ್ಯ ಭಾವ ಬಂದದ್ದು ಲಾರೆನ್ ಸ್ಮಿತ್ ನೊಂದೊಗಿನ ಉತ್ಕಟ ಸಂಬಂಧದ ಪರಿಣಾಮದಿಂದ. ಹೀಗೆ ಎಲ್ಲರನ್ನ ರಾಗ ವರ್ಗೀಕರಣದ ಮೂಲಕ ಆದರಿಸುತ್ತಿದ್ದ ಮೋಹನಲಾಲನಿಗೆ ರಾಮಕುಮಾರಿಯಲ್ಲಿ ಅದು ಕಾಣಿಸದಿದ್ದದ್ದು ಅವಳಿಗೆ ಸಂಗೀತದ ಗಂಧ ಇಲ್ಲ ಎಂಬುದರಿಂದ. ಅಂದರೆ ಅವನಿಗೆ ಅವಳು ಕೇವಲ ಭೋಗದ ವಸ್ತು. ಈ ಅಪಮೌಲ್ಯದ ಪರಿಣಾಮವು ಅವನ ಜೀವನ ಸಾಧನೆಗಳಿಗೆ ಭೀಕರವಾಗಿ ತಟ್ಟಿತು. ಎಷ್ಟರಮಟ್ಟಿಗೆಂದರೆ ತನ್ನ ಮಗಳನ್ನೇ ಆಸೆಯ ಕಂಗಳಿಂದ ನೋಡುವ ದುರ್ವಿಚಾರದಿಂದ ಅವನು ಅಪ್ರತಿಭನಾದಂತೆ. ಚಂಪಾ ಎಂಬ ಅಪಶ್ರುತಿಯ ಸಂಪರ್ಕಕ್ಕೆ ಬಂದ ಮೇಲೆ ಆ ಅಡಕತ್ತರಿಯ ಉಕ್ಕಿನ ಹಿಡಿತದಲ್ಲಿ ಸಿಕ್ಕಿ ತೊಳಲಿದ, ಕಲಾಕಾರನಿಗೆ ಸ್ವಾತಂತ್ಯವೇ ಅಭಿವ್ಯಕ್ತಿಗೆ ಮುಖ್ಯ ಸಾಧನ. ಆದರೂ ಈ ಕಪಿಮುಷ್ಠಿಯಿಂದ ಬಿಡುಗಡೆಗೆ ತೊಳಲಾಡುತ್ತಿದ್ದಾಗ ಮತ್ತೊಂದು ಸನ್ನಿಗೆ ಒಳಗಾದ. ಎಲ್ಲವೂ ಸರಿಯಿದ್ದಿದ್ದರೆ ಮೋಹನಲಾಲ ಮನೋಹರಿಯ ಜೊತೆ ಜೀವನ ಪೂರ್ತಿ ಇರಬಹುದಿತ್ತು, ಆದರೆ ಅಲ್ಲಿಯೂ ಏಕತಾನತೆಯ, ದಾಸ್ಯದ ತನ್ನ ಅಭಿವ್ಯಕ್ತಿಯನ್ನೇ ಕಳೆದುಕೊಂಡ ಬಂಧನ ಅವನನ್ನು ಕಾಡಿತು. ಇಬ್ಬರೂ ಮಹತ್ವಾಕಾಂಕ್ಷಿಗಳಾದರೂ ಮೋಹನಲಾಲ ಸುಲಭವಾಗಿ ಮೋಹಕ್ಕೆ ಮಾರುಹೋಗುವವ. ತೀವ್ರ ಲೆಕ್ಕಾಚಾರದ ಮನೋಹರಿಯು ಸೆಳೆತಕ್ಕೊಳಗಾದವಳಿದ್ದರೂ ವಾಸ್ತವದ ಅರಿವಿದ್ದವಳು. ಹಾಗೆ ನೋಡಿದರೆ ಮನೋಹರಿ ಮತ್ತು ಮೋಹನಲಾಲ ಇಬ್ಬರೂ ಅನೈತಿಕ ವ್ಯವಹಾರವನ್ನು ಯಥಾಶಕ್ತಿ ನಡೆಸಿಕೊಂಡು ಬಂದವರು. ಆದರೆ ಕಲೆಯ ವಿಚಾರದಲ್ಲಿ ಅನುಪಮವಾದ ಶ್ರದ್ಧೆ ಮತ್ತು ಸಮರ್ಥ ಗುರುವಿನ ಶಿಕ್ಷಣ ಇಬ್ಬರಲ್ಲೂ ಕಲೆಯ ಅಭಿವ್ಯಕ್ತಿಯು ಉನ್ನತಮಟ್ಟಕ್ಕೇರುವಂತೆ ಮಾಡಿತು. ಮನೋಹರಿಯಾದರೋ ಕಲಿಕೆಯ ಪ್ರಾರಂಭದಿಂದ ಹಿಡಿದು ದೇವರಾಜನಿಂದ ತಿರಸ್ಕರಿಸಿಕೊಳ್ಳುವವರೆಗೆ ಪ್ರಜ್ಞಾಪೂರ್ವಕವಾಗಿಯೇ ನಿರ್ಣಯಗಳನ್ನು ತೆಗೆದುಕೊಂಡು ಅದರ ಹತಾಶೆ-ಸಂತಸಗಳಿಗೆ ಬಾಧ್ಯಸ್ಥಳಾದವಳು. ಮಾಡಬಾರದ್ದು ಮಾಡಿಲ್ಲವೇ ಅಂತ ಗುರು-ಗಂಡ ಕೇಳಿದಾಗ ತನ್ನ ಆತ್ಮಸಾಕ್ಷಿಯೇ ತನಗೆ ಚುಚ್ಚಿ ಮೌಲ್ಯಗಳು ಅಧಃಪತನವಾಗುತ್ತಿವೆ ಎಂಬ ಪಾಪಪ್ರಜ್ಞೆಯಲ್ಲಿ ಕಲೆಯ ವ್ಯಕ್ತಿತ್ವವು ಮಂಕಾಯಿತು. ಆಮೇಲೆ ಗುರುವು ಅವಳಿಂದ ದೂರಾಗವುದು, ಮತ್ತೆ ಗುರುವಿನ ಮಹಾನತೆಗೆ ಶರಣಾಗಿ ಅವರನ್ನು ಕರೆತರುವುದು, ಮತ್ತೆ ಆಂತರ್ಯದ ಅಹಮಿಕೆ ಚಪಲದ ಮೇಲಾಟ.... ಹೀಗೆ ಅವಳ ಜೀವನದುದ್ದಕ್ಕೂ ಲೈಂಗಿಕ ಆಕರ್ಷಣೆ ಸಂಪರ್ಕ ಎನ್ನುವುದು ಡ್ರಗ್ಸ್ ರೀತಿಯಲ್ಲಿ ನಶೆಯಾಗಿ ಆವರಿಸಿದೆ. ಆ ನಶೆ ಬಿಟ್ಟು ಹೋಗುತ್ತಲೇ ಮತ್ತೆ ಅದಕ್ಕೆ ಹುಡುಕಾಟ. ಕಡೆಯಲ್ಲಿ ನಶೆಯ ಗುಂಗಿನಿಂದ ಬೇರಾಗಿ ನಿಯಂತ್ರಿಸಬೇಕು ಎಂಬ ಅರಿವು ಅವಳಿಗೆ ಬರುತ್ತೆ. ಹಾಗಾಗಿಯೇ ಪತ್ರಕರ್ತ ಗುಹಾನಿಗೆ ನಿರಾಸೆಯಾಗುವಂತೆ ನೋಡಿಕೊಂಡು ತನ್ನ ಲೌಕಿಕ ಅಂತಸ್ತನ್ನು ಉಳಿಸಿಕೊಂಡಳು. ಎಲ್ಲ ಲಯ ಗತಿ ಭಾವಗಳೂ ತೊರೆದು ಹೋದಮೇಲೆ ಉಳಿಯುವುದು ಶುಷ್ಕ ಪುನರಾವರ್ತನೆ ಅಷ್ಟೇ, ಅದರ ಅರಿವು ಮನೋಹರಿಗೆ ಆದರೆ ಮತ್ತೆ ಆಗ ಅವಳ ಆಂತರ್ಯದಲ್ಲಿ ಗುಪ್ತವಾಗಿ ತುಂಬುಕೊಂಡಿರುವ ಶುದ್ಧಕಲೆಯು ಮತ್ತು ಪುಟಿದೆದ್ದು ಚಿಮ್ಮಲು ಸಾಧ್ಯ. ಕಾದಂಬರಿಯ ಹೆಸರು ಮಂದ್ರ ಎಂದು ಇಡುವಲ್ಲೇ ಆ ಸಾಕ್ಷಾತ್ಕಾರದ ಸ್ವಾರಸ್ಯವಿದೆ. ಯಾವಾಗ ಅಹಂಕಾರವನ್ನ ಭರ್ತ್ಸನೆಯನ್ನ ಸಮರ್ಥಿಸಿಕೊಳ್ಳುತ್ತ ತನ್ನ ತಪ್ಪುಗಳನ್ನ ಮುಚ್ಚಿಹಾಕಿಕೊಳ್ಳುತ್ತ ಸಾಗುತ್ತೇವೆಯೋ ಅಲ್ಲಿ ಆಂತರ್ಯವು ಬಿಚ್ಚಿಕೊಳ್ಳುವುದಿಲ್ಲ. ಅರಿಯುವ ಒಳಸರಿಯುವ ಕ್ರಿಯೆಯೇ ಮಂದ್ರದ ಆಲಾಪನೆ. ಕೋಮಲರಿಷಭ ಅಸಾವರಿಯ ಮಂದ್ರದೆಡೆಗೆ ಸಾಗುವಲ್ಲಿ ಮೋಹನಲಾಲನಿಗೆ ಅದೇನೂ ಅನ್ನಿಸುವುದಿಲ್ಲ. ಆದರೆ ಮಧುಮಿತಾಗೆ ತನ್ನ ಆಂತರ್ಯದ ನೋವಿನ ಬಿಡುಗಡೆಗೆ ಹಾದಿಯಾಗುತ್ತದೆ.
ಹಾಗೆ ಬಿಡುಗಡೆ ಹೊಂದಿದ್ದರಿಂದಲೇ ಶುದ್ಧಕಲ್ಯಾಣದ ಮಂಗಳದ ಆರಂಭ. ಅದೇ ಕೋಮಲರಿಷಭ ಅಸಾವರಿಯಲ್ಲಿ ಮೋಹನಲಾಲ ಓಂಕಾರದ ನಾದ ಹೊಮ್ಮಿಸುವ ತಾಂತ್ರಿಕತೆ ತಿಳಿದರೂ ಅದು ಯಾಂತ್ರಿಕವಾದುದು. ಅವನು ಆ ಕಲೆಯನ್ನಷ್ಟೇ ಅನುಸಂಧಾನ ಮಾಡುತ್ತ ಅಭ್ಯಾಸಬಲದಿಂದ ಹಾಡುವುದೇ ಹೊರತು ಅದರಿಂದ ಆಂತರ್ಯದ ಅನ್ವೇಷಣೆಯಲ್ಲಿ ತೊಡಗಿ ಕಡೆಗೆ ಅದರಿಂದ ಬಿಡುಗಡೆ ಪಡೆದು ಹಾಡುವುದಲ್ಲ. ಹಾಗಾಗಿಯೇ ಆ ತಾಂತ್ರಿಕತೆ ಇವನಿಗೆ ಕೈವಶವಾದರೂ ಮೋಹಾಂಧಕಾರದಿಂದ ತಪೋಭಂಗಕ್ಕೊಳಗಾದ ಮುನಿಯಂತೆ ಇತ್ತ ತಪಸ್ಸಿನ ಅಸಾವರಿಯೂ ಇಲ್ಲ, ಅತ್ತ ಶುದ್ಧಕಲ್ಯಾಣದ ಮಂಗಳವೂ ಇಲ್ಲ ಆಗುತ್ತದೆ. ಅನಾಥ ಭಾವದ ಬೇಗುದಿಗೆ ಲಾಲಸೆಯ ಚಟಕ್ಕೆ ಅಹಮಿಕೆಯ ಹಠಕ್ಕೆ ಬಲಿಬಿದ್ದವನಿಗೆ ಸಾಕ್ಷಾತ್ಕಾರವೆಲ್ಲಿ?
ಮಧ್ಯೆ ಬಕುಲಾ ಬಂದು ನಮ್ಮ ತಂದೆ ನೀವೇನಾ ಅಂತ ಸವಾಲು ಹಾಕಿ ಇವನಿಗೆ ಉತ್ತರ ಕೊಡಲಿಕ್ಕಾಗದಾಗಲೂ ಆಭ್ಯಾಸ ಮಾಡಿಕೊಳ್ಳುವಾಗ ಕೂಡಾ ಇದೇ ಕೋಮಲರಿಷಭ ಅಸಾವರಿಯನ್ನ ಹಾಡುವಾಗ ಜೀವನದ ಸರಿ ತಪ್ಪುಗಳನ್ನ ನಿರ್ಧರಿಸಿಕೊಳ್ಳುವ ದರ್ಶನವಾಗುವ ಮಂದ್ರಷಡ್ಜ ಎಂಬ ಅವಳ ಅಲೋಚನೆಯು ಇವನನ್ನು ಪ್ರಭಾವಿಸಿದ್ದರಿಂದ ಅವನಿಗೂ ಕೋಮಲರಿಷಭವನ್ನು ತಲುಪುವಾಗಲೇ ಕಸಿವಿಸಿ ಆಯಿತು. ಆದರೆ ಕಲೆಯನ್ನ ಕಲೆಯಾಗಿಯೇ ನೋಡಬೇಕು ಎಂದು ಹೇಳಿಕೊಂಡು ದ್ವಂದ್ವವನ್ನು ಪಕ್ಕಕ್ಕಿಟ್ಟು ಹಾಡುವಾಗ ಅವನ ಅಭ್ಯಾಸಬಲದಿಂದ ಅನಾಯಾಸವಾಗಿ ಮಂದ್ರಷಡ್ಜದಲ್ಲಿ ವಿಹರಿಸಿದ್ದಾನೆ. ಆದರೆ ಅದು ಬಹಳ ಕಾಲ ಮುಂದುವರೆಯಲಿಲ್ಲ. ಅಲ್ಲಿಂದ ಮುಂದೆ ಪ್ರತಿ ಸಲ ಹಾಡುವಾಗ ಅವನು ಹೆಣಗಬೇಕಾಗಿ ಬಂತು. ತಂತಾನೇ ಸಂಕಲ್ಪಿಸಿದಾಕ್ಷಣ ದರ್ಶನ ಕೊಡುತ್ತಿದ್ದ ರಾಗಗಳು ಇವನ ಕಲಮಲವಾದ ಮನಸ್ಥಿತಿಯ ಕಾರಣ ಸುಲಭಕ್ಕೆ ಗಂಟಲಿಗಿಳಿಯದಾದವು. ಹೈದ್ರಾಬಾದಿನಲ್ಲಿ ವಜ್ರದೋಲೆಯ ಹೆಣ್ಣು ಪ್ರಭಾ ಇವನನ್ನ ಆಕರ್ಷಿಸಿ ನಂತರ ಖಾಸಗಿ ಬೈಠಕ್ಕಿನಲ್ಲಿ ಕುಳಿತು ಹಾಡಲು ಹೊರಟಾಗ ಅವನಿಗೆ ಅವಳ ಮೈಗಂಪು ತಲೆಗೇರಿ ಸ್ವರ ಹಿಡಿಯಲು ಹೆಣಗಿದ. ಆದರೆ ನಂತರ ಪ್ರಯತ್ನಪೂರ್ವಕವಾಗಿ ಅದನ್ನ ಸಾಧಿಸಿದ. ಆನಂತರದ ದಿನಗಳಲ್ಲಿ ಮುಂದೆ ಈ ಚಾಂಚಲ್ಯ ಪ್ರಭಾವಗಳೇ ಹೆಚ್ಚು ಹೆಚ್ಚು ಆವರಿಸಿಕೊಳ್ಳುತ್ತ ಹೋಯಿತು. ಬ್ರಹ್ಮಗಿರಿಯ ಬೆಟ್ಟದಲ್ಲಿ ರಾಗ ಅವಿಷ್ಕಾರಕ್ಕೆ ಹೋದಾಗ ಅವನು ತನ್ನ ಆಂತರ್ಯವನ್ನು ಮುಕ್ತವಾಗಿ ಮೌಲ್ಯಮಾಪನಕ್ಕೊಡ್ಡಿದ, ತನ್ನ ತಪ್ಪುಗಳನ್ನ ಸರಣಿ ಅವಿವೇಕಗಳನ್ನ ಕುರಿತು ಆಲೋಚಿಸಿದ. ಅಲ್ಲಿ ಅವನಿಗೆ ಅಸಾವರಿಯಲ್ಲಿ ಮಾತ್ರವಲ್ಲ ಎಲ್ಲ ರಾಗದ ಮಂದ್ರಷಡ್ಜದಲ್ಲಿ ಅಂತರಂಗ ಕಾಣಿಸಿಕೊಳ್ಳುತ್ತೆ ಅಂತ ಅನ್ನಿಸಿತು. ಹಾಗೆ ಅನ್ನಿಸಿದ್ದರಿಂದ ಅವನು ಪಡೆಯಬೇಕಾದ ಪಶ್ಚಾತಾಪದ ಭಾವ ಬಿಡುಗಡೆ ಆಗುವ ಬದಲು ಅವನೇ ಅಂದುಕೊಂಡಂತೆ ನೈತಿಕ ಬಂಡೆಗಳು ಜೀವನದ ನದಿ ಪಾತ್ರದಲ್ಲಿ ಅಡೆತಡೆಗಳಾಗಿ ನಿಂತವು. ತಾನೊಬ್ಬ ದೊಡ್ಡ ಗಾಯಕ ಎಂಬ ಅಹಂ ಆ ಬಂಡೆಗಳನ್ನ ಸವರಿ ರಸಪ್ರವಾಹದಲ್ಲಿ ಮುಳುಗಿಸಿ ಹರಿಯಲು ಕೊಡಲೇ ಇಲ್ಲ. ಎಲ್ಲರೂ ದೂರಾದ ಹತಾಶೆಯನ್ನ ಬೇಗುದಿ ಸೋಲುಗಳನ್ನ ಪಾಪಪ್ರಜ್ಞೆಯಿಂದ ನರಳುವಿಕೆಯ ಭಾವವನ್ನ ದೂರಸರಿಸಿ ಕಡೆಯಲ್ಲಿ ಹಾಡಲು ಹೊರಟಷ್ಟೂ ಅವು ಮತ್ತೆ ಮತ್ತೆ ಅವರಿಸಿ ಇವನನ್ನು ಕಾಡಹತ್ತಿದವು. ಹಾಗಾಗಿ ನಾವು ಇಲ್ಲಿ ಪ್ರಶ್ನೆಯನ್ನು ಉಲ್ಟಾ ಕೇಳಿಕೊಳ್ಳಬೇಕು. ಕಲೆ ಮತ್ತು ನೈತಿಕತೆಯು ಎರಡನ್ನೂ ತೂಗಿಯೇ ಅವನ ಕಲೆಯ ವಜನನ್ನು ಅಳೆಯಬೇಕಾ ಅಂತ ಅಲ್ಲ, ಕಲಾವಿದ ಎರಡನ್ನೂ ತೂಗಿ ಅಳೆಯುತ್ತ ಕಲೆಯನ್ನ ಅರಳಿಸ ಹೊರಟರೆ ಅದು ಶುದ್ಧವಾಗಿ ಹೊರಹೊಮ್ಮುತ್ತದೆಯಾ ಅಂತ. ಅವನಿಗೇ ಕಲಮಲವಾದರೆ ಕಲೆ ಹೊರಹೊಮ್ಮುವುದು ಹೇಗೆ. ನಾದವು ಭಾವ ಬಿಡುಗಡೆಯ ಸಾಧನವಾದರೂ ಅದನ್ನೂ ಮೀರಿ ಗಾಯಕ ಬೆಳೆಯಬೇಕು. ಪನ್ವೇಲಿನ ಮಾವಿನ ತೋಪಿಗೆ ಬಂದ ಮೇಲೆ ಮಧುಮಿತಾ ಮೋಹನಲಾಲನ ಪ್ರಭಾವದಿಂದ ಬಿಡಿಸಿಕೊಳ್ಳಲು ಒಂದು ವರ್ಷ ಹೆಣಗಿದ ಮೇಲೆ ಅದರ ಅರಿವಾಗುತ್ತೆ. ತಾನು ಎಲ್ಲಕ್ಕೂ ಪಶ್ಚಾತ್ತಾಪವನ್ನೇ ಬೆರೆಸ್ತಾ ಇದ್ದೇನೆ ಅಂತ. ರಾಗ ದ್ವೇಷಗಳನ್ನ ಮೀರಿ ನಿಲ್ಲುವ ಹದವು ಅವಳಿಗೆ ಕ್ರಮೇಣ ಕರಗತವಾಗುತ್ತೆ. ನಡುವೆ ಮತ್ತೆ ವಿಕ್ರಮನ ಪತ್ರ ಪ್ರಹಾರವು ಅವಳನ್ನು ಕಲಕಿದರೂ ತಡೆಹಿಡಿಯಲಾಗದ ರಸೋತ್ಕರ್ಷವು ಅಪ್ರಯತ್ನಪೂರ್ವಕವಾಗಿ ರಾಗದ್ವೇಷಗಳನ್ನು ಮುಂಬರಿದು ನಾದೋಪಾಸನೆಯ ಚಿಲುಮೆಯಾಗುತ್ತೆ. ಮೋಹನಲಾಲನಿಗೆ ಕರಗತವಾದ ವಿದ್ಯೆಯು ತನ್ನ ಅಧಃಪತನದ ಕಾರಣ ಕೈ ಬಿಡುತ್ತದೆ. ಕೆಲವೊಮ್ಮೆ ಹೀಗೂ ಯೋಚಿಸಬಹುದು, ಅದೇನು ಕಲೆಯ ಸಮೀಕರಣವು ಹೀಗೇ ನಡೆಯುತ್ತದೆಯೇ? ಹಾಗೇ ನಡೆಯಬೇಕೇ? ಪ್ರಪಂಚದಲ್ಲಿ ಎಷ್ಟು ಜನ ಕಲಾವಿದರಿಲ್ಲ, ಅವರಲ್ಲೆಷ್ಟು ದೌರ್ಬಲ್ಯ, ಅಧಃಪತನದ ಮೌಲ್ಯಗಳಿಲ್ಲದ ಜನಗಳಿಲ್ಲ. ಅವರೆಲ್ಲ ಹೀಗೆ ಹತಾಶರಾಗಿದ್ದಾರೆಯೇ ಅಂತ. ಉತ್ತರವು ಹಾಗೆ ಇದ್ದರೂ ಆಗಬೇಕಂತೇನಿಲ್ಲ ಅನ್ನಬಹುದು. ಇಲ್ಲಿ ಮೋಹನಲಾಲನ ಅಧಃಪತನದ ಹಾದಿಯು ಬಹಳ ಹಳ್ಳ ತಿಟ್ಟುಗಳ ಕಣಿವೆಯ ಹಾದಿಯಿಂದ ಕೂಡಿದೆ. ಅವನ ಪತನದ ಹಾದಿ ಬಹು ದೀರ್ಘವಾಗಿದೆ. ಅದು ಅವನ ಸಾಮರ್ಥ್ಯಕ್ಕೆ ಬಿಟ್ಟದ್ದು. ಇಲ್ಲಿ ಜೀವನಾನುಭವದಲ್ಲಿ ತೊಳತೊಳಗಿ ಕ್ರಮೇಣ ಒಂದು ವ್ಯಕ್ತಿತ್ವವು ರೂಪುಗೊಳ್ಳುತ್ತದೆ. ಮೋಹನಲಾಳ ಮಂದ್ರ ಕಾದಂಬರಿಯ ಓದು ಒಂದು ಶ್ರೇಷ್ಠ ಸಂಗೀತ ಗಾಯನದಂತೆಯೇ ಭಾಸವಾಗುತ್ತದೆ.
ಶುದ್ಧ ಕಲ್ಯಾಣದಲ್ಲಿ ಮೋಹನವು (ಭೂಪಾಲಿ) ಆರೋಹಣದಲ್ಲಿ ಹೇಗೆ ಹೊಂದಿಕೊಳ್ಳುತ್ತೆ ಅನ್ನುವುದನ್ನು ಜೋಡಿಸಲು ಕಷ್ಟವಾಗಿ ಪುಸ್ತಕದಲ್ಲಿ ನೋಡಿಕೊಳ್ಳಲು ಮೊದಲಲ್ಲಿ ಹವಣಿಸುವ ಮಧುಗೆ ಕಡೆಯಲ್ಲಿ ಆ ರಾಗವೇ ಅವಳ ಸಾರಸರ್ವಸ್ವವನ್ನ ಗುರು ಟಿಪ್ನಿಸ್ ಮುಂದೆ ಪ್ರಸ್ತುತಪಡಿಸಲು ಹೆದ್ದಾರಿಯಾಗುತ್ತದೆ. ಯಾರ ರಸಪ್ರವಾಹವನ್ನು ಹಿಡಿಯಲು ಈಜಿ ಕ್ರೀಡಿಸಲು ಹಪಹಪಿಸಿದ್ದಳೋ ಆತನೇ ಬತ್ತುವ ಕ್ಷಣದಲ್ಲಿ ತಾನೇ ತಲಕಾವೇರಿಯಾಗುತ್ತಾಳೆ. ಈ ಬತ್ತುವ, ಬುಗ್ಗೆಯಾಗುವ ಪರ್ವಕಾಲವೇ ಮಂದ್ರದ ಕಾಲ. ಅವಳು ಮೊದಲಲ್ಲಿ ಅವನ ಬಳಿ ಹೋದಾಗ ನಾನಾಗಿ ಬಲವಂತ ಮಾಡಿಲ್ಲ-ನೀನೇ ಹೌದು ಅಂತಾದರೆ ಮಾತ್ರ. ಬಲವಂತ ಇಲ್ಲ ಎಂಬ ನಯವಾದ ಪ್ರಸ್ತಾಪ. ಸಾರ್ವಜನಿಕ ಕಂಗಳಿಗೆ ಇದು ಅನೈತಿಕವಾದರೂ ವ್ಯಕ್ತಿಗತವಾಗಿ ಸಮ್ಮತವಾದ ಸಂಬಂಧ. ಅವಳ ಕಲಿಕೆಗೆ ಅವಳ ದೇಹವನ್ನು ಬಯಸೋದು ಕೀಳೇ ಹೌದು. ಅವಳಿಂದ ದೊರೆತ ಉತ್ಸಾಹವನ್ನೇ ಕಲೆಯಾಗಿ ಮಾರ್ಪಡಿಸುವ ವಿಧಾನ. ಅನೈತಿಕ ತಳಪಾಯವೇ ಕಲಾಶ್ರೀಗೆ ಮುನ್ನುಡಿ...!! ಕೇಳಲು ಕಸಿವಿಸಿಯಾದರೂ ಇಲ್ಲಿ ಕಲೆ ಮತ್ತು ನೈತಿಕತೆ ಸಹಸಂಬಂಧವು ಪರಸ್ಪರ ಸಮ್ಮತವಿರುವ ಸಂದರ್ಭದಲ್ಲಿ ಲೋಕನೀತಿಯ ಕಾಯದೆ ಕಟ್ಟಲೆಗಳನ್ನು ಮಾನ್ಯ ಮಾಡಬೇಕಿಲ್ಲ, ಸ್ವಚ್ಛಂದವಾಗಿ ವಿಹಾರ ವಲಯವಿದ್ದರೆ ಮಾತ್ರವೇ ಕಲೆಯ ಆಕಾಶ ಪಾತಾಳಗಳನ್ನು ಮುಟ್ಟಿ ಭೂಮಿಯ ಮೇಲೆ ನರ್ತಿಸಬಲ್ಲದೆಂಬ ವಿಚಾರ ಧ್ವನಿತವಾಗಿದೆ. ಮಧುಮಿತಾ ಅದಕ್ಕೆ ಗಾಂಧರ್ವವಿವಾಹ ಎಂಬ ನೈತಿಕತೆಯನ್ನು ಆರೋಪಿಸಿಕೊಂಡು ಪರಸ್ಪರ ಕೂಡುವಿಕೆಯಲ್ಲಿ ತನ್ನ ಮನೋ ಭೂಮಿಕೆಯಲ್ಲಿ ಮನ್ನಣೆ ಇರುವಂತೆ ಮಾಡಿಕೊಂಡಳು. ಇತ್ತ ಲಂಪಟನಾದ ಮೋಹನಲಾಲ ಕೂಡಾ ಅವಳೇ ಒಪ್ಪಿ ಬಂದಿದ್ದಾಳಾದ್ದರಿಂದ ಅನುಭವಿಸುವುದು ತಪ್ಪಲ್ಲ ಮಾತ್ರವಲ್ಲ ತನಗೆ ಉತ್ಸಾಹ, ಸ್ಫೂತಿ ಎಂದು ತಿಳಿದುಕೊಂಡವ. ಹೀಗಾಗಿ ಮೋಹನಲಾಲನಿಗೆ ಇದ್ದ ಹಲವು ಸಂಬಂಧಗಳೂ ಅವನಿಗೆ ಚಿಂತನೆಯ ಮಟ್ಟದಲ್ಲಿ ಅಪರಾಧ ಮನೋಧರ್ಮ ಉಳ್ಳದ್ದಲ್ಲ, ಸ್ಪೂರ್ತಿಯ ಸೆಲೆ. ಮೋಹನಲಾಲನ ಬೆಳೆವಣಿಗೆಯಲ್ಲೇ ಈ ರಸಿಕ ಮನೋಧರ್ಮ ಕಾಣಸಿಗುತ್ತದೆ. ಓಂಕಾರಬಾಬಾರ ಆಶ್ರಮದಲ್ಲಿ ಕಲಿಯುವ ವಿಚಾರದಲ್ಲಿ ಅವನು ಮುಂದಿದ್ದರೂ ಅವನಿಗೆ ಆಧ್ಯಾತ್ಮದ ತುಡಿತದ ಗಾಯನಕ್ಕೆ ಒಲವಿಲ್ಲ. ಹಾಗೆಯೇ ರಸಿಕ ಜನಗಳಲ್ಲೂ ಈ ಗಾಯನಕ್ಕೆ ಅಷ್ಟು ಮಹತ್ವವಿಲ್ಲದ್ದನ್ನ ಕಂಡುಕೊಂಡವನು ತನ್ನನ್ನ ಆಕರ್ಷಿಸಿದ ಶೈಲಿಯ ಕಡೆ ಓಡಿ ಹೋಗುತ್ತಾನೆ. ಆ ಸ್ಪೂರ್ತಿಯಿಂದ ಬರುವ ಕಲಾತ್ಮಕ ಸೌಂದರ್ಯವನ್ನು ಸ್ವತಃ ವಿಮರ್ಶಕಾದ ಗೋರೆಯೇ ಒಪ್ಪಿದ್ದಾರೆ. ಇಲ್ಲಿ ಒಂದು ವಿಷಯವನ್ನ ಸ್ಪಷ್ಟ ಮಾಡಿಕೊಳ್ಳಬೇಕು. ಸ್ಫೂರ್ತಿ ಎಂಬ ವಿಚಾರ ವ್ಯವಹಾರವು ತಂತಾನೇ ಕೆಟ್ಟದ್ದಲ್ಲ. ಆದರೆ ಅದನ್ನ ಮೌಲ್ಯ ಸಂಬಂಧೀ ಅಥವಾ ಲೋಕನೀತಿಯ ಚೌಕಟ್ಟಿಗೆ ಒಳಪಡಿಸುವಾಗ ಅದು ಗೊಂದಲಕ್ಕೆಡೆಮಾಡುತ್ತದೆ. ಇಲ್ಲಿಯೂ ಸಂಬಂಧವು ಅತ್ಯಾಚಾರ/ಬಲಾತ್ಕಾರವಲ್ಲದ್ದರಿಂದ ಅಲ್ಲಿ ಅಧಃಪತನವಿಲ್ಲ. ಸಮರ್ಪಣೆಯ ಸೌಖ್ಯದಲ್ಲಿ ಕಲೆ ಒಡೆದು ವೃದ್ಧಿಸುತ್ತಿದೆ. ಆದರೆ ಮದುವೆಯ ನಂತರ ಮಧುಮಿತಾಳ ನಂಬಿರುವ ಮೌಲ್ಯಗಳು ದಾಂಪತ್ಯದ ದೃಷ್ಟಿಯಿಂದ ತಾನು ಮತ್ತೆ ಮೋಹನಲಾಲನೊಟ್ಟಿಗೆ ಸೇರುವುದು ವಿಕ್ರಮನಿಗೆ ಮಾಡುವ ಮೋಸ ಎಂದನಿಸುತ್ತದೆ. ಅದು ನಿಜವಾಗಿ ಅವನಿಗೆ ಮಾಡುವ ಮೋಸ ಹೌದೋ ಅಲ್ಲವೋ ಆದರೆ ಅವಳಿಗೇ ಆತ್ಮದ್ರೋಹದ ಕಾರ್ಯ ಅನ್ನಿಸುತ್ತದೆ. ಆದರೂ ಅವನು ಪಟ್ಟು ಸಡಲಿಸಲಾರ. ಆಕೆ ಹಾಗಾಗಿಯೇ ಈ ಮೌಲ್ಯಸಂಘರ್ಷಗಳ, ಅನೈತಿಕತೆಯ ಪಾಪಪ್ರಜ್ಞೆಯಿಂದ ಹೊರಬರಲು ಕೈ ಹಿಡಿದ ಗಂಡನನ್ನೂ ಕೈ ಬಿಡಲು ತಯಾರಾದಳು. ಅಂತಹ ಮನಸ್ಥಿತಿ ಉಳ್ಳವರಿಗೆ ಬೇರೆಯ ದಾರಿಯಾದರೂ ಯಾವುದಿತ್ತು? ಸಂಗೀತವನ್ನು ಬಿಟ್ಟು ಬೇರೆ ದಾರಿಯೇ ಅವಳಿಗೆ ಅಸಾಧ್ಯವಾಗಿರುವಾಗ ಏನು ಮಾಡಬೇಕಿತ್ತು? ಮಂದ್ರವೆಂದರೆ ಅಂತರ್ಮುಖತೆ, ಬರೀ ರಾಗದ ಆಳವಲ್ಲ, ಆತ್ಮದ ಆಳಕ್ಕೆ ಇಳಿಯುವ ಅನುಭವ ಎನ್ನುವ ಮಧುಮಿತಾಳಿಗೆ ಗಂಡನಾದ ವಿಕ್ರಮನೇ ಮಂದ್ರಷಡ್ಜವಾಗಿ ಅದನ್ನು ತಲುಪಲು ತನ್ನ ಅವರಿಗೆ ಮಾಡಿರುವ ಮೋಸದ ನೆನಪಾಗಿ ಜೀವಸೌಖ್ಯವನ್ನೇ ಕಳೆದುಕೊಂಡು ಆಕೆ ತೊಳಲಾಡುತ್ತಾಳೆ. ನಂತರ ಕೋಮಲರಿಷಭ ಅಸಾವರಿಯಲ್ಲಿ ಉಕ್ಕಿಬರುವ ನೋವಿನ ಭಾವದಿಂದ ಬಿಡುಗಡೆಗೊಳ್ಳುತ್ತ ನಡೆಯುವ ಪಶ್ಚಾತಾಪಿಯಾಗಿ ಮಂದ್ರಷಡ್ಜವನ್ನು ಮುಟ್ಟುತ್ತಾಳೆ. ಆಕೆಗೆ ಒಮ್ಮೆ ಮಂದ್ರಷಡ್ಜವನ್ನ ಮುಟ್ಟುವಾಗ ವಿಕ್ರಮನೇ ಬಂದ ಹಾಗಾಗುತ್ತದೆ. ಅಂದರೆ ಆ ಮಂದ್ರಷಡ್ಜವೆಂಬ ನೈತಿಕ ತಂತು ಬಾಧಿಸಲು ಬಂದಂತೆ. ಆದರೂ ಅವಳು ಪ್ರಾಪಂಚಿಕದಿಂದ ಬಿಡುಗಡೆ ಬಯಸಿದ ವಿರಾಗಿನಿಯಂತೆ ಅದನ್ನ ಸಾಧಿಸುತ್ತಾಳೆ. ಇಂತಹ ಅನೇಕ ಪ್ರತಿಮಾಸೃಷ್ಟಿಯಿಂದ ಭೈರಪ್ಪನವರು ಸಂಗೀತದ ಪರಿಭಾಷೆಯಲ್ಲಿ ಕಾದಂಬರಿಯನ್ನು ಕಟ್ಟಿದ ಪರಿ, ತಟ್ಟಿದ ಹದ ಅನನ್ಯವಾದುದು. ಮಧುಮಿತಾ ವಿಕ್ರಮನಿಗೆ ಬೇರೆ ಮದುವೆ ಮಾಡಿಕೊಳ್ಳಿ ಎಂಬ ಸಲಹೆಯಿತ್ತಿದ್ದರೂ ತನ್ನ ಮನದೊಳಗಣ ಗೊಂದಲ ತಳಮಳಗಳನ್ನೆಲ್ಲ ಅವನಿಗೆ ತೆರೆದಿಟ್ಟ ಕಾರಣ, ಅವನು ಮತ್ತೆ ಸಂಪರ್ಕಿಸಿಯಾನೆಂಬ ಆಸೆ ಅವಳದ್ದು. ಒಂದು ರೀತಿ ಸಂಪೂರ್ಣವಾಗಿ ಬಲಿಪಶುವಾಗುವ ಪಾತ್ರ ಅವನದ್ದು. ಸಂಗೀತವನ್ನು ಮೆಚ್ಚಿಕೊಂಡು ಮೌಲ್ಯಗಳ ನೆಲದ ಮೇಲೆ ನೀತಿಯ ಚೌಕಟ್ಟಿನಲ್ಲಿ ಬೆಳೆದ ವಿಕ್ರಮನಿಗೆ ಮಧುಮಿತಾ ದೊರೆತದ್ದು ಸುಕೃತದ ಹಾಗೆ ಅಂತ ಅವನಿಗನ್ನಿಸುತ್ತದೆ. ಆದರೆ ಅವನು ಕಲೆ ಮತ್ತು ನೈತಿಕತೆ ಎರಡನ್ನೂ ಏಕತ್ರಗೊಳಿಸಿದ್ದ ಜನಗಳ ಪ್ರತಿನಿಧಿಯ ಹಾಗಿದ್ದಾನೆ. ಒಮ್ಮೊಮ್ಮೆ ಅವನ ಪಾತ್ರ ಪರ್ವದ ಧರ್ಮರಾಯನನ್ನ ಹೋಲುತ್ತೆ. ಧರ್ಮರಾಯನಿಗೆ ಧರ್ಮದ ಅರಿವಿದೆ, ಆದರೆ ಮೌಲ್ಯ ವಿವೇಚನೆ ಇಲ್ಲ. ಅವನು ಮಾತಾಡುವುದು ಕಾನೂನಿನ ಧರ್ಮ. ಅದಕ್ಕೇ ಅಲ್ಲಿ ದ್ರೌಪದಿ ಧರ್ಮರಾಯ ಮಾತೆತ್ತಿದರೆ ಧರ್ಮದ ವಾಸನೆ ಹೊಡೆಯುತ್ತೆ ಅಂತಾಳೆ. ಪರಿಸ್ಥಿತಿಯನ್ನ ಅವಲೋಕಿಸಿ ಮಧುಮಿತಾಳು ನಿರ್ಣಯ ತೆಗೆದುಕೊಳ್ಳಲಾಗದ ಇರುಕಿಗೆ ಸಿಲುಕಿದ್ದಾಳೆ ಅಂತ ಅವನಿಗನ್ನಿಸಲಿಲ್ಲ. ಅವಳು ಮತ್ ಜಾ ಜೋಗಿ ಅನ್ನುವುದು ರಸದ ಆರ್ದ್ರತೆಗೆ ಅನ್ನಿಸಲಿಲ್ಲ, ಆ ರಸವು ವೈಯಕ್ತಿಕವಾದುದು ಅನ್ನಿಸಿತು. ಸಂಬಂಧವು ಅನೈತಿಕವೆಂದು ಕಂಡುಬಂದ ಮೇಲೆ ಅವರ ಸಂಬಂಧಿತವಾದ ಕಲೆಯೂ ಅನೈತಿಕವಾಯಿತು. ಅವಳು ಹೀನಳೆನಿಸದಿದ್ದರೂ ಉತ್ತಮಳೆನಿಸಲಿಲ್ಲ. ನೈತಿಕತೆಯ ಹೆಸರಲ್ಲಿ ತಣ್ಣನೆಯ ಕ್ರೌರ್ಯವು ಅವಳನ್ನು ಇರಿದಿದೆ. ನೈತಿಕತೆಯ ಕಾಮಾಲೆ ಕಣ್ಣಿನಲ್ಲಿ ಎಲ್ಲರೂ ಎಲ್ಲ ಕಾಲಕ್ಕೂ ನೀಚರಾಗೇ ಕಂಡಿದ್ದಾರೆ. ಮೌಲ್ಯಗಳಿಗೆ ಅವನು ಕುರುಡಾದ.
ಅವನಂತೆಯೇ ಪ್ರವೃತ್ತಿಯ ಸಂಗೀತಪ್ರೇಮವುಳ್ಳ ಗೋರೆಯವರು ಮತ್ತೊಂದು ಧ್ರುವದ ಪ್ರತಿನಿಧಿಯಾಗಿದ್ದಾರೆ. ಮೋಹನಲಾಲನ ಎಲ್ಲ ಹಳವಂಡಗಳು ಗೊತ್ತಿದ್ದರೂ ಅವನ ದೌರ್ಬಲ್ಯಗಳ ಹೊರತಾಗಿಯೂ ಬೆಲೆಕೊಟ್ಟಿದ್ದಾನೆ. ಅವನು ಬಿಟ್ಟ ಸಂಸಾರಕ್ಕೆ ನೆಲೆ ಕಲ್ಪಿಸಿದ್ದಾನೆ. ಆದರೆ ಇಲ್ಲಿ ಗೋರೆಯು ಮೋಹನಲಾಲನಿಂದ ತಿರಸ್ಕೃತಳಾದ ರಾಮಕುಮಾರಿಯಲ್ಲಿಯೂ ಒಂದು ಶ್ರೇಷ್ಠ ರಾಗರಸವನ್ನ ಕಾಣುವುದು ಅವನ ಸಹೃದಯತೆಗೆ ಹಿಡಿದ ಕನ್ನಡಿಯಾಗಿದೆ. ಅಧ್ಯಾಯ ಆರು ಶುರುವಾಗುವ ಮೊದಲ ವಾಕ್ಯ ನೋಡಿ. "ಮೋಹನಲಾಲ ಹೋದಮೇಲೆ ಗೋರೆಯೇ ಎಲ್ಲ ಕೋಣೆಗಳನ್ನೂ ಮುಚ್ಚಿ ಮುಂಭಾಗದ ದೊಡ್ಡಬಾಗಿಲಿಗೆ ಒಳಬೀಗ ಮತ್ತು ಹೊರಬೀಗಗಳನ್ನು ಹಾಕಿದರು." ಎಷ್ಟು ಧ್ವನಿಪೂರ್ಣವಾಗಿದೆ..! ಅವನ ಸಂಸಾರಕ್ಕೆ ಬಂದೋಬಸ್ತು ಮಾಡಿದರು ಅಂತ. ಭೈರಪ್ಪರ ನೆಲೆಯಲ್ಲಿ ಒಂದು ಮಾತು ಬರುತ್ತೆ ಜವರಾಯಿಯ ಪ್ರೇಯಸಿಯಾದ ನರ್ಸ್ ಹೇಳೋದು. "ಗಂಡಿಗೆ ಹೆಣ್ಣು ಇಷ್ಟವಾದರೆ ಅವಳನ್ನ ಕೂಡುವ ಮನಸ್ಸಾಗುತ್ತೆ, ಅದೇ ಹೆಣ್ಣಿಗೆ ಇಷ್ಟವಾದರೆ ಅವನಿಂದ ಒಂದು ಮಗುವನ್ನು ಪಡೆಯುವ ಇಚ್ಛೆಯಾಗುತ್ತೆ" ಅನ್ನೋ ಅರ್ಥದ್ದು ಇದೇ ನೆಲೆಯಲ್ಲಿ ಗೋರೆಯ ರಾಮಕುಮಾರಿ ಬಗೆಗಿನ ಕಾಮನೆಯನ್ನ ಚಿತ್ರಿಸಿದ್ದಾರೆ ಅನ್ನಿಸುತ್ತೆ. ಆದರೆ ಈ ಮಾತಿಗೆ ಏನು ತಳಹದಿ ಎಂಬುದು ನನಗಿನ್ನೂ ಸ್ಪಷ್ಟವಾಗಿ ಅರಿವಾಗಿಲ್ಲ. ಉಳಿದಂತೆ ಗೋರೆಯ ಪಾತ್ರವು ಕಲೆ ಮತ್ತು ಮೌಲ್ಯವನ್ನು ಬೇರೆ ಬೇರೆಯಾಗಿಯೇ ನೋಡುತ್ತಾ ಕಲಾವಿದನಿಗೆ ಕನಿಷ್ಠ ನೈತಿಕತೆಯಾದರೂ ಇರಬೇಕೆಂದು ಮಾತ್ರ ಪ್ರತಿಪಾದಿಸುತ್ತದೆ. ಗೋರೆಯವರು ಅವನ ಚಿಕಾಗೋ ಗಾಯನದಲ್ಲೇ ಅವನ ಶುಷ್ಕತೆ ಕಂಡುಹಿಡಿದಿದ್ದಾರೆ. ಅಂದರೆ, ಮಧುಮಿತಾಳ ಪಾವಿತ್ರ್ಯ ಭಂಗದ ನಂತರ. ಅವನ ತಾಕಲಾಟಗಳು ಅಲ್ಲೇ ಶುರುವಾಗಿವೆ. ಹೀಗೆ ಮಂದ್ರ ಕಾದಂಬರಿಯ ಓದು ಓದಿದಷ್ಟೂ ರಸಾನುಭವವಾಗುವ ಒಳಹೊಕ್ಕಿದಷ್ಟೂ ತಳಕಾಣುವ ಮಹಾನ್ ಕೃತಿ. ಆಲಾಪನೆ ಮಧ್ಯಲಯ ದ್ರುತಗತಿಯು ಕಾದಂಬರಿಯ ಆದಿ ಮಧ್ಯ ಅಂತ್ಯಗಳಲ್ಲಿ ಕಾಣುತ್ತದೆ.
ಮೋಹನಲಾಲನಿಗೆ ಸನಿವೇಲಿನ ಕಾರ್ಯಕ್ರಮ ಮುಗಿಸಿ ವಿಮಾನದಲ್ಲಿ ವಾಪಸ್ಸಾಗುವಾಗ "ಏನು ಇವಳಿಗಿನ್ನೂ ಸ್ವರಸೂಕ್ಷ್ಮಗಳ ನಾಡಿ ತೆರೆದುಕೊಂಡಿಲ್ಲವಾ" ಅಂತ ಪ್ರಶ್ನೆ ಮಾಡಿಕೊಂಡವ ಕಡೆಯಲ್ಲಿ ಅವನಿಗೇ ಸ್ವರಗಳು ಬಾಗಿಲು ಮುಚ್ಚಿ ಬಿಡುತ್ತವೆ. ಕೈ ಹಿಡಿದ ರಾಗಗಳೆಲ್ಲ ಬಿಟ್ಟು ಹೋಗಿದ್ದಾವೆ. ಅಪಸ್ವರವೇ (ಚಂಪಾ) ನಿನ್ನ ಜೊತೆಯಾಗ್ತೀನಿ ಅಂತ ಗೋಗರೆದರೂ ಇವನಿಗೆ ಅದು ಬೇಡ. ಸ್ವರ ಮತ್ತು ಅಪಸ್ವರಗಳ ವ್ಯತ್ಯಾಸದ ಅರಿವು ಅವನಿಗಾಗಿದೆ ಆದರೆ ರಾಗಗಳು ಇವನ ಕೈ ಬಿಟ್ಟಿದ್ದರಿಂದ ಸಿದ್ಧಿಗಳೆಲ್ಲ ಹತತೇಜವಾಗಿವೆ ತನ್ನ ಅನೈತಿಕ ವ್ಯವಹಾರವನ್ನ ಯಾವಾಗ ಕಲೆಗೂ ಅನ್ವಯಿಸ ತೊಡಗಿದನೋ ಆಗಲೇ ಅದೂ ಸ್ವಲ್ಪ ತಿಕ್ಕಾಟಕ್ಕೂ ಮೊದಲಾಯಿಎನ್ನಬಹುದು. ಮಧುಮಿತಾ ಕಲ್ಯಾಣಿ, ಲಾರೆನ್ ಭೂಪಾಲಿ, ಮನೋಹರಿ ಬಾಗೇಶ್ರೀ, ಜವಾಹರಬಾಯಿ ಮಾರೂ ಬಿಹಾಗ್, ಚುನ್ನಿ ಮಲ್ಹಾರ ಹೀಗೆ. ಆದರೆ ಎಲ್ಲ ರಾಗಗಳೂ ಒಂದೊಂದೇ ಅವನ ಕೈ ಬಿಟ್ಟವು. ಅಥವಾ ಇವನ್ನೆ ಕೆಲವನ್ನ ಇವನೇ ಕೈ ಬಿಟ್ಟ. ಮರೂ ಬಿಹಾಗ ಬದಲಾವಣೆಗೆ ಈರ್ಷ್ಯೆಗೊಂಡ, ಮಲ್ಹಾರದ ಮಾರ್ಪಾಡಿಗೆ ದಂಗು ಬಡೆದ. ಭೈರವಿಯಂತಹ ರಾಮಕುಮಾರಿ ಉಗಿದು ಓಡಿಸಿದಳು.(ಪಾಪ ಮೊದಲ ಎಷ್ಟು ಅನುನಯಿಸಿದ್ದಳು ಕೂಡಾ). ಭೂಪಾಲಿಗೆ ಉಗಿದ, ಕಲ್ಯಾಣಿಗೆ ಕೇಡು ಬಗೆದ, ಬಾಗೇಶ್ರಿಯ ಹಿಡಿತ ಅರ್ಥಹೀನ ಅನ್ನಿಸಿತು. ಹೀಗೆ ಎಲ್ಲ ಕಡೆ ಅವನು ಸ್ಪೂರ್ತಿಯನ್ನ ಲೌಕಿಕಕ್ಕೆ ಹೆಣ್ಣಿಗೆ ಆರೋಪಿಸಿ ನಂತರ ಅವಗಳು ವಿವರ್ಣವಾದಂತೆ ಇವನ ಒಳಗಣ ಸರಕೂ ಬರಿದಾಯಿತು. ಯಾಂತ್ರಿಕವಾಯಿತು. ಆಗ ಆಧ್ಯಾತ್ಮದ ನಾದ ಒಂದೇ ಹಿಡಿಯಿತು. ಆದರೆ ಆಧ್ಯಾತ್ಮವನಾದವನ್ನ ಸ್ಥಿರಗೊಳಿಸಲು ಅವನಿಗಾಗಲಿಲ್ಲ. ಚಂಚಲ ಆಕರ್ಷಣೆ(ಹೈದ್ರಾಬಾದಿನ ವಜ್ರದೊಲೆಯ ಹೆಣ್ಣು) ಅವನ ನಾದವು ಸ್ಥಿರವಾಗಿರಲು ಬಿಡಲಿಲ್ಲ. ಹಾಗಾಗಿಯೇ ಕಡೆಯ ಕಾರ್ಯಕ್ರಮದಲ್ಲಿ ಓಂಕಾರದಲ್ಲಿ ನೆಲೆಗೊಳ್ಳಬೇಕೆಂದು ಕೊಂಡರೂ ಅವಳು ಅವನಿಗೆ ಕಾಡುತ್ತಾಳೆ. ಹೀಗೆ ಸಂಗೀತದ ಕಲಾಜಗತ್ತನ್ನ ತನ್ನ ಜೀವನದ ಜಗತ್ತಿಗೆ ಅರ್ಥೈಸಿ ಹೊರಟಾಗ ಆಗಬಹುದಾದ ಅನಾಹುತಗಳನ್ನ ಕಾದಂಬರಿಯಲ್ಲಿ ಸರೆಹಿಡಿಯಲು ಯತ್ನಿಸಿದ್ದಾರೆ. ಇದು ಸಾಹಿತ್ಯವಾದ್ದರಿಂದ ಎಷ್ಟರಮಟ್ಟಿಗೆ ವಾಸ್ತವ ಎಂಬುದು ಕೃತಿಕಾರನ ಕಲ್ಪನೆ, ಪ್ರತೀಕ ಮತ್ತು ಅನುಭವಗಳನ್ನವಲಂಬಿಸಿದೆ. ಅದ್ಭುತವಾದ ಗಾಯನ ಸೌಕರ್ಯವನ್ನು ಸಂಗೀತ ಸಂಸ್ಕಾರವನ್ನು ಹೊಂದಿರುವ ವಿದ್ವಾಂಸರು ತಮ್ಮ ನಿಜ ಜೀವನದಲ್ಲಿ ಕೀಳಾಗಿ/ಅನೈತಿಕವಾಗಿ ನಡೆದುಕೊಳ್ಳುವುದನ್ನ ನೋಡಿದ್ದೇವಲ್ಲ ಎಂದು ವೈರುಧ್ಯವನ್ನು ಕೆಲವರು ಅನುಭವಪೂರ್ವಕ ಹೇಳಬಹುದು. ಆದರೆ ಅವರು ಕಲೆ ಮತ್ತು ನೈತಿಕತೆಯನ್ನ ಪ್ರಯತ್ನ ಅಥವಾ ಅಪ್ರಯತ್ನಪೂರ್ವಕವಾಗಿಯೂ ಬೆಸೆದಿರಲಾರರು ಎಂದು ಊಹಿಸ ಬೇಕಾಗುತ್ತದೆ.
ಕೆಲವು ತಗಾದೆಗಳಿವೆ. ಭೈರಪ್ಪನವರು ಓಂಕಾರಾಶ್ರಮದ ಬಗ್ಗೆ ಹೇಳುವಾಗ ಬಾಬಾ ಅವರ ಸಂಗೀತವು ಒಂದು ರೀತಿಯ ಏಕತಾನತೆ ಸಿಕ್ಕಿ ಆಧ್ಯಾತ್ಮದ ಹೆಸರಲ್ಲಿ ಸಂಗೀತವು ತನ್ನ ಮಹತ್ವ ಕಳೆದು ಕೊಂಡಿರದೆ ಎಂಬಂತ ಸನ್ನಿವೇಶವನ್ನ ಚಿತ್ರಿಸುತ್ತಾರೆ. ಆದರೆ ಅದು ಸಂಪೂರ್ಣ ನಿಜವೇ ಸಂಗೀತದಲ್ಲಿ ಆಧ್ಯಾತ್ಮವನ್ನ ಕಂಡುಕೊಳ್ಳುವ ಮಾರ್ಗ ಪೇಲವವೇ? ದಾಸರ ಪದ, ಕೀರ್ತನೆಗಳಿಗೆ ಸಂಗೀತದ ಮಟ್ಟುಗಳಿಲ್ಲದ್ದರಿಂದ ಅವು ಸಂಗೀತದ ಕ್ಷೇತ್ರದಲ್ಲಿ ಪ್ರಚಲಿತದಲ್ಲಿಲ್ಲದಿರಬಹುದು. ಆದರೆ ಅವರನ್ನು ದೇವರನಾಮ ಹಾಡುವವರು ಎಂದು ಚೌಕಟ್ಟಿನಲ್ಲಿಡವಂತಹದ್ದೇ ಎಂದು ಪ್ರಶ್ನೆಗಳೇಳುತ್ತವೆ. ನೈತಿಕತೆ -ಭಕ್ತಿ ಆಧ್ಯಾತ್ಮ ಎಂದು ಉಲಿಯುತ್ತ ಸಂಗೀತ ಸಾಧನೆ ಎಂದರೆ ಯೋಗ-ಸಂಗೀತ ಎಂದರೆ ನಾದಬ್ರಹ್ಮನ ಆರಾಧನೆ ಮುಂತಾಗಿ ಹೇಳುವುದು ಇವೆಲ್ಲ ಒಂದು ಪರಧಿಗಷ್ಟೇ ಸೀಮಿತ ಎಂಬಂತೆ ಬಾಬಾರ ಜೀವನ ಇಲ್ಲಿ ಧ್ವನಿಸಿದೆ. ಇದು ಎಷ್ಟರ ಮಟ್ಟಿಗೆ ನಿಜ? ಕಲ್ಪನೆ ಮಟ್ಟದಲ್ಲಿ ಮಾತ್ರವೇ ಎಂಬುದು ತಿಳಿದುಕೊಳ್ಳಬೇಕಾದ ಪ್ರಶ್ನಾರ್ಹವಾದ ಸಂಗತಿ. ಇದರ ನಂತರ ಅವನ ಜೀವನ ಅಲೆಮಾರಿ/ಜೂಜಿನ ಜೀವನ. ಮತ್ತೆ ವಾಪಸ್ಸು ತನ್ನ ಮೂಲ ಬೇರಾದ ಹರಿದ್ವಾರಕ್ಕೇ ಗುರುಗಳ ಆಶ್ರಮವನ್ನ ತನ್ನ ಕರ್ಮಭೂಮಿ ಮಾಡಿಕೊಳ್ಳುವ ಆಶಯದೊಂದಿಗೆ ಕತೆಯು ಮುಕ್ತಾಯಕ್ಕೆ ಬರುತ್ತದೆ. ಯಾವುದು ಕಲಿಕೆಗೆ ಸ್ಥಗಿತ ಎಂದು ಭಾವಿಸುತ್ತಾನೋ ಅದೇ ಅವನ ಸ್ವರನಿಧಿಗೆ ಸ್ಥಿರಸ್ಥಾನ ಅಂತಾನ್ನಿಸುತ್ತದೆ. ಅದು ಅವನು ಪರ್ಯಾಯವಿಲ್ಲದೇ ಕಂಡುಕೊಂಡ ಮಾರ್ಗ ಅಂತಲೂ ಅಲ್ಲಿ ಧ್ವನಿಸುವುದುಂಟು. ಏನೇ ಇರಲಿ, ಆಧ್ಯಾತ್ಮದ ಒಸರಿನ ಸಂಗೀತವನ್ನ ಬೆಳೆಸಬೇಕೆನ್ನುವುದು ಒಂದು ವೈರುಧ್ಯವಾಗಿ ಚಿತ್ರಿಸಿದ್ದಾರೆ.
ಹೆಣ್ಣು ಮತ್ತು ರಾಗವನ್ನ ಸಮೀಕರಿಸುವ ಕಾರ್ಯ ಅವನಿಂದ ಅನೇಕ ಕಡೆ ಆಗಿದೆ. ವೈಯಕ್ತಿಕವಾಗಿ ನನ್ನ ಅಸಮಾಧಾನ ಇರುವುದು ಸಂಗೀತವನ್ನ ಅದರ ರಾಗ ಲಕ್ಷಣವನ್ನ ಕಲಾಕೃತಿಯಾಗಿ ಸಾಹಿತ್ಯದ ರಸಘಟ್ಟಿಗೆ ಒಗ್ಗಿಸುವಾಗ ಈ ರೀತಿಯ ಅನೈತಿಕ ಸಂಬಂಧಗಳ ವ್ಯವಹಾರದ ಮೂಲಕವೇ ಅರಿಯುವ ಅನಿವಾರ್ಯತೆ ಇತ್ತೇ ಎಂದು. ರಾಗದಲ್ಲಿ ಈ ರಾಗ ಹೆಚ್ಚು ಈ ರಾಗ ಕಡಿಮೆ ಎಂದು ವರ್ಗೀಕರಿಸುವುದೇ ಮೂರ್ಖತನ, ಅದಕ್ಕೆ ಅದರದ್ದೇ ವೈಶಿಷ್ಟ್ಯವಿರುತ್ತೆ ಎಂದುಕೊಳ್ಳುತ್ತ ಎಲ್ಲ ಹೆಣ್ಣುಗಳೂ ಯಾಕೆ ಹೆಣ್ಣುಗಳೂ ಆ ಉತ್ಕಟತೆಯ ಮಟ್ಟಕ್ಕೆ ಬರಲ್ಲ ಎಂದೂ ಅಂದುಕೊಂಡು ಮೋಹನಲಾಲನಿಗೆ ಗೋಜಲಾಗುತ್ತದೆ. ಸಂಗೀತದ ಪರಿಭಾಷೆಯಲ್ಲಿ ಕೃತಿಯು ಹೊರಹೊಮ್ಮುತ್ತಿರುವಾಗ ಅದು ಮೌಲ್ಯ ಮತ್ತು ಕಲೆಗಳ ನಡುವೆ ಸಾಮರಸ್ಯವನ್ನ ವೈಪರೀತ್ಯವನ್ನ ಕಂಡುಕೊಳ್ಳುವಲ್ಲಿ ಜಟಾಪಟಿಗಳಾಗುತ್ತಿರುವಾಗ, ಒಂದು ಅಧಃಪತನ ಹೊಂದುವ ಪಾತ್ರದ ಮೂಲಕ ತತ್ವಜ್ಞಾನವನ್ನ ಒಳನೋಟವನ್ನ ತಿಳಿಸಿದ್ರೆ ಅದು ಸ್ವೀಕಾರಾರ್ಹವೋ ಅಲ್ಲವೋ, ಅದನ್ನ ತೆಕ್ಕೊಳ್ಳಬೇಕಾದ ಬಗೆ ಹೇಗೆ ಎಂಬುದು ಒಂದು ಮೌಲಿಕ ಪ್ರಶ್ನೆಯಾಗಿ ಉಳಿಯುತ್ತೆ.
ನೀವು ಓದಿದ ಪುಸ್ತಕದ ವಿಮರ್ಶೆಗಳನ್ನು ಕರಮಧ್ಯೇ ಸರಸ್ವತೀ ಗೆ ಮಿಂಚಂಚೆ ಮಾಡಿ...