ಬಯಲಲಿ ತೇಲುತ ತಾನು
ಬಯಲಲಿ ತೇಲುತ ತಾನು
ತೀರ್ಪುಗಾರರ ಟಿಪ್ಪಣಿ
ಬಯಲಲಿ ತೇಲುತ ತಾನು ಇದು ಅಕ್ಷಯ ಪಂಡಿತ್ ಅವರ ಮೊದಲ ಕಥಾ ಸಂಕಲನ. ಇದರಲ್ಲಿ ಹತ್ತು ಕಥೆಗಳಿವೆ. ಕಥಾವಸ್ತು, ನಿರೂಪಣಾ ತಂತ್ರ, ಆಶಯ - ಇವುಗಳನ್ನು ಕಥೆಯಿಂದ ಕಥೆಗೆ ಭಿನ್ನವಾಗಿ ನಿರ್ವಹಿಸಲಾಗಿದೆ.
ಸರಳವಾಗಿ ಆರಂಭವಾಗುವ ಕಥೆಗಳು ಓದುತ್ತಾ ಹೋದಂತೆ ಕುತೂಹಲ ಕೆರಳುವಂತೆ ವಸ್ತುವನ್ನು ಸಂಯೋಜಿಸಲಾಗಿದೆ. ಈ ಕುತೂಹಲ ಓದುಗರ ಆಸಕ್ತಿ ಕೆರಳುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಕಳೆದುಹೋದ ಹಳ್ಳಿಯ ಬದುಕಿಗಾಗಿ ಹಲವರು ಹಂಬಲಿಸುತ್ತಾರೆ. ಅದು ಹಂಬಲವಾಗಿ ಮಾತ್ರ ಉಳಿಯುತ್ತದೆ. ಬಹುಜನರು ಬಯಸುವ ನಗರಗಳ ಬದುಕು ಸಹ ಮನುಷ್ಯನಿಗೆ ಸಹ್ಯವೆನಿಸಿಲ್ಲ. ಈ ಎಲ್ಲಾ ಬಗೆಯ ಗೊಂದಲಗಳು ಇಲ್ಲಿನ ಕಥೆಗಳಲ್ಲಿ ಅಭಿವ್ಯಕ್ತಗೊಂಡಿದೆ. ಕಥನ ಶೈಲಿಯು ಆಕರ್ಷಕವಾಗಿದೆ. ಕಥೆಯಿಂದ ಕಥೆಗೆ ತಂತ್ರಗಾರಿಕೆಯು ಬದಲಾಗಿದೆ. ಅನೇಕ ಪಾತ್ರಗಳ ಬಣ್ಣ ಕಳಚುವ ಮೂಲಕ ಓದುಗನು ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಇಲ್ಲಿನ ಕಥೆಗಳು ನಿರೂಪಿತಗೊಂಡಿವೆ.
ವಿದೇಶಿ ನೆಲದಲ್ಲಿ ನಡೆಯುವ ಕೆಲವು ಕಥೆಗಳಿಂದ ಹೊಸಲೋಕದ ಅನುಭವಗಳು ಓದುಗನಿಗೆ ದಕ್ಕುತ್ತವೆ. ಇಲ್ಲಿನ ಕಥೆಗಳು ನಮ್ಮನ್ನು ಮತ್ತೆ ಮತ್ತೆ ಕಾಡುತ್ತವೆ. ಭರವಸೆಯ ಕಥೆಗಾರರಾಗಿ ಅಕ್ಷಯ ಪಂಡಿತ್ ದಕ್ಕಿದ್ದಾರೆ.
- ಡಾ ಶಿವಕುಮಾರ್ ಸಿ
ಕಥೆ ಕಟ್ಟುವ ಕಸುಬುದಾರಿಕೆಯನ್ನು ಕುಶಾಲವಾಗಿ ನಿರ್ವಹಿಸಬಲ್ಲ ಚಾತುರ್ಯ ಹೊಂದಿರುವ ಕಥೆಗಾರನನ್ನು ಇಲ್ಲಿನ ಕಥೆಗಳ ಮೂಲಕ ಕಾಣಬಹುದು. ಅಪ್ಪಟ ಗ್ರಾಮೀಣ ಬದುಕಿನ ವಾಸ್ತವ ಚಿತ್ರಣವನ್ನು ಅಷ್ಟೇ ಸೂಕ್ಷ್ಮ ವಿವರಗಳೊಂದಿಗೆ ನೀಡುತ್ತಾರೆ ಕಥೆಗಾರ. ಕಥೆಯನ್ನು ಕಥೆಯಾಗಿ ಹೆಣೆಯುವ ಶಕ್ತಿ ಕಥೆಗಾರನಿಗಿರುವುದು ಇಲ್ಲಿನ ಕಥೆಗಳ ಯಶಸ್ಸಿಗೆ ಕಾರಣವಾಗಿದೆ.
- ಬಿ ಎಸ್ ಶಿವಕುಮಾರ್
ನಗರ ಬದುಕಿನ ಅದರಲ್ಲೂ ಮಹಾನಗರದ ಐಟಿ ಪ್ರಪಂಚಕ್ಕೆ ಸೇರಿದ ಮನುಷ್ಯನ ಮನಸ್ಥಿತಿಯನ್ನು ಇಲ್ಲಿಯ ಕಥೆಗಳು ಬಿಚ್ಚಿಡುತ್ತವೆ. ಸ್ಮಾರ್ಟ್ ಬದುಕು ಮತ್ತು ಸಾಮಾನ್ಯ ಬದುಕು ಇವೆರಡರ ನಡುವೆ ಸ್ಥಿತ್ಯಂತರಗೊಳ್ಳುವಲ್ಲಿ ಉದ್ಭವಿಸುವ ತುಮುಲ, ಒಳನೋಟಗಳನ್ನು ಕಥೆಗಾರ ಸಶಕ್ತವಾಗಿ ಹಿಡಿದು ನಿಲ್ಲಿಸಿದ್ದಾರೆ. ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಎನ್ನುವ ಇಬ್ಬಂದಿತನದ ಬೇಗುದಿ ಇಲ್ಲಿಯ ಬಹುತೇಕ ಕಥೆಗಳದ್ದಾಗಿದೆ. ಐ ಟಿ, ಕಾರ್ಪೊರೇಟ್ ಹೀಗೆ ಮನುಷ್ಯ ಬದುಕಿನ ನೆಲೆಗಳು ಬದಲಾದರೂ ಅವನ ಸ್ವಭಾವಜನ್ಯ ಗುಣಗಳು ಮಾತ್ರ ಬದಲಾಗದು ಎಂಬುದನ್ನು ಇಲ್ಲಿಯ ಕಥೆಗಳು ಹೇಳುತ್ತವೆ. ಮನುಷ್ಯನ ಆದಿಮ ಬಯಕೆ ಮತ್ತು ಸೆಳೆತಗಳು ಬದಲಾಗಲಾರವು ಎಂಬುದು ಈ ಕಥೆಗಳ ಮೂಲಕ ಸಾಬೀತಾಗುತ್ತದೆ.
ಸಂಕಲನದ ಎಲ್ಲ ಕಥೆಗಳು ಒಂದು ತೂಕವಾದರೆ ಕೃತಿಯ ಶೀರ್ಷಿಕೆಯೂ ಆಗಿರುವ ಬಯಲಲಿ ತೇಲುತ ತಾನು ಒಂದು ತೂಕವಾಗಿ ಗಮನ ಸೆಳೆಯುತ್ತದೆ. ಜಾತ್ರೆಯ ಸಂಭ್ರಮದಲ್ಲಿದ್ದರೂ ಸಂಭ್ರಮಿಸಲಾಗದ ಹುಡುಗನೊಬ್ಬ ಹತಾಶನಾಗಿರುವ ಹೊತ್ತಲ್ಲಿ ಕ್ರಮೇಣ ಅವನು ಸಂಭ್ರಮಿಸಲು ಬಲವಾದ ಕಾರಣವೊಂದು ಕಥೆಯಲ್ಲಿ ಜರುಗುತ್ತದೆ. ಆ ಮೂಲಕ ಹುಡುಗನ ಅಪ್ಪನೂ ಸಂಭ್ರಮಿಸುತ್ತಾನೆ. ಓದುಗನೂ ಕೂಡಾ ಆ ಸಂಭ್ರಮದಲ್ಲಿ ಭಾಗೀದಾರನಾಗುತ್ತಾನೆ.
- ಲಕ್ಷಣ ಬಾದಾಮಿ