ಎಲ್ಲರಿಗೂ ತಿಳಿದಿರುವಂತೆ ಗವಿಮಠದ ಅಡ್ಡಣಿಗಿ ಗುಂಡಿನಡಿಯಲ್ಲಿ ಅಶೋಕನ ಕ್ರಿ.ಶ.ಪೂರ್ವ ಮೂರನೆಯ ಶತಮಾನದ ಶಾಸನವಿದೆ.ಇನ್ನೊಂದು ಮಳೆ ಮಲ್ಲೇಶ್ವರ ಬೆಟ್ಟದ ಪಾಲ್ಕಿಗುಂಡಿನಡಿಯಲ್ಲಿದೆ. ‘ನಾನು ಬುದ್ದನ ಅನುಯಾಯಿಯಾಗಿ ಎರಡು ವರ್ಷಗಳಾಗಿವೆ. ಬುದ್ದನ ತತ್ವಗಳು ಹಾಗೂ ಭೋಧನೆಯಿಂದ ಈವರೆಗೆ ದೇವತೆಗಳು ಹಾಗೂ ಮನುಷ್ಯರ ನಡುವೆ ಇದ್ದ ಅಂತರ ಕಡಿಮೆಯಾಗಿದೆ. ತಂದೆ, ತಾಯಿ, ಗುರು, ಹಿರಿಯರ, ವಯೋವೃದ್ಧರ ಸೇವೆಯನ್ನು ಮಾಡಬೇಕು. ಧರ್ಮ ಕಾರ್ಯಗಳಲ್ಲಿ ನಿರತರಾಗಿರಬೇಕೆಂದು ಈ ಶಾಸನದ ಸಾರವಾಗಿದೆ. ಈ ಶಾಸನಗಳು ಬ್ರಾಹ್ಮಿ ಲಿಪಿಯಲ್ಲಿದ್ದು, ಆಗಿನ ಜನರಾಡುತ್ತಿದ್ದ ಪ್ರಾಕೃತ ಭಾಷೆಯಲ್ಲಿವೆ. ಬ್ರಾಹ್ಮಿಲಿಪಿಯನ್ನನುಸರಿಸಿ ಕನ್ನಡ ಹಾಗೂ ತೆಲಗು ಲಿಪಿಗಳು ರೂಪಿತಗೊಂಡಿವೆ. ಪ್ರಪಂಚದ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಕನ್ನಡಕ್ಕೆ ಕೆಂದ್ರ ಸರಕಾರ ಶಾಸ್ತ್ರೀಯ ಸ್ಥಾನಮಾನ ನೀಡಿರುವ ಸಂದರ್ಭದಲ್ಲಿ ಅಮೇರಿಕೆಯ ಅದ್ಯಕ್ಷ ಬರಾಕ ಒಬಾಮಾ ತಮ್ಮಲ್ಲಿ ಸರಕಾರಿ ಉದ್ಯೋಗ ಪಡಿಯಲು ತಿಳಿದಿರಬೇಕಾದ ಪ್ರಪಂಚದ ಭಾಷೆಗಳಲ್ಲಿ ಒಂದಾಗಿದೆಯೆಂದು ಕಡ್ಡಾಯವಾಗಿ ತಿಳಿಸಿದ್ದಾರೆ. ಈ ಐತಿಹಾಸಿಕ ಸಂದರ್ಬದಲ್ಲಿ ಬ್ರಾಹ್ಮಿಲಿಪಿಯಿಂದ ಉಗಮಗೊಂಡ ಕನ್ನಡ ಹೆಮ್ಮೆ ಪಡಬೇಕಾಗಿದೆ. ಈ ಸಂದರ್ಭದಲ್ಲಿ ಬ್ರಾಹ್ಮಲಿಪಿಯಲ್ಲಿರುವ ಅಶೋಕನ ಶಾಸನಗಳು ಮಹತ್ವದವುಗಳಾಗಿ ಕಾಣುತ್ತಿವೆ. ಕನ್ನಡ ಲಿಪಿ ರೂಪಗೊಳ್ಳುವಲ್ಲಿ ಕೊಪ್ಪಳದ ಪ್ರದೇಶದ ನಮ್ಮ ಪೂರ್ವಜರ ಪಾತ್ರ ಹಿರಿದಾಗಿದೆಯೆಂಬುದರತ್ತ ಗಮನ ಹರಿಸಬೇಕಾಗಿದೆ. ಅಶೋಕನ ಚಕ್ರವರ್ತಿ ಯುದ್ದದ ಹಿಂಸೆಗೆ ಹೇಸಿ ಶಾಂತಿಯುತ ಸಹ ಬಾಳ್ವೆಯ ಮೂಲಕ ಪಂಚಶೀಲ ತತ್ವಗಳನ್ನಳವಡಿಸಿ ರಾಜ್ಯಭಾರಮಾಡಿದನು. ಬುದ್ಧನ ಸರಳ ಹಾಗೂ ಸಾಮಾನ್ಯರ ಆಚರಣೆಗೆ ಎಟಕುವ ತತ್ವಗಳನ್ನು ಪ್ರಚಾರ ಮಾಡಲು ಸಾವಿರಾರು ಕಿಲೋಮೀಟರು ದೂರದಲ್ಲಿರುವ ಕೊಪ್ಪಳವನ್ನು ಆಯ್ಕೆಮಾಡಿಕೊಂಡಿರುವುದು ಕೊಪ್ಪಳದ ಬೆಟ್ಟಕ್ಕೆ ಹೊಂದಿಕೊಂಡು ‘ಬಿಚ್ಚಕುಂದಿ’ ಗ್ರಾಮ ಒಂದಿರುವುದು ಇನ್ನೂ ಈ ಸ್ಥಳದ ಪಾವಿತ್ರ್ಯತೆಯನ್ನು ಹೆಚ್ಚಿಸುತ್ತದೆ. ‘ಬಿಚ್ಚು’ ಎಂದರೆ ಬಿಕ್ಕು.ಭಿಕ್ಷು; ಬೌದ್ಧ ಬಿಕ್ಕುಗಳ ನೆಲೆ, ಗ್ರಾಮ, ಬೌದ್ಧ ವಿಹಾರವೊಂದು ಇಲ್ಲಿದ್ದಿರಬೇಕು. ಕ್ರಿ.ಶ,13ನೆಯ ಶತಮಾನದವರೆಗೆ ಈ ಧರ್ಮ ಇಲ್ಲಿ ನೆಲಸಿತ್ತು. ಇತ್ತೀಚಿನ ಮೂವತ್ತು ವರ್ಷಗಳ ಅವಧಿಯಲ್ಲಿ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತಿಯಲ್ಲಿ ಜರುಗಿದ ಉತ್ಖನ್ನನಗಳಲ್ಲಿ ಬೌದ್ದ ವಿಹಾರ ದೊರಕಿದೆ. ಬುದ್ಧನ ಸುಂದರ ಮೂರ್ತಿಗಳು, ಅಶೋಕನು ತನ್ನ ಇಬ್ಬರು ಮಕ್ಕಳೊಡನಿರುವ ಅಪರೂಪದ ಮೂರ್ತಿಶಿಲ್ಪ ಇಲ್ಲಿ ದೊರಕಿವೆ, ಕೊಪ್ಪಳ ಹಾಗೂ ಸನ್ನತಿಯ ನಡುವೆ ಅಶೋಕನ ಮಹತ್ವದ ಶಾಸನವಿರುವ ಮಸ್ಕಿ ಬರುತ್ತದೆ. 24 ಬೌದ್ದ ಮುನಿಗಳಲ್ಲಿ ಒಬ್ಬನಾದ ಕನಕಮುನಿ ಹೆಸರಿನ ಕನಕಗಿರಿ(ಸುವರ್ಣಗಿರಿ) ಕೂಡ ಇಲ್ಲಿದೆ. ಈ ಬೌದ್ದ ನೆಲೆಗಳು ಸಮಕಾಲೀನದವುಗಳಾಗಿರಬೇಕು. ಕ್ರಿ.ಶ, ಪೂರ್ವ ಮೂರು ನೂರು ವರ್ಷಗಳಷ್ಟು ಹಿಂದಿನ ಪ್ರಾಚೀನತೆ ಇಲ್ಲಿಯದಾಗಿದೆ. ಆದರೆ ಇತಿಹಾಸ ಸಂಶೋಧಕರಾದ ಬಿ.ಸಿ. ಪಾಟೀಲರಿಗೆ ಮಳೆಮಲ್ಲೇಶ್ವರ ಬೆಟ್ಟದ ನೆಲೆಯಲ್ಲಿ ದೊರಕಿರುವ ಮಾನವ ಮೂಳೆಯ ಆಯಸ್ಸು 4000 ವರ್ಷಗಳಿದ್ದು, ಐದು ಸಾವಿರವರ್ಷಗಳಿಗಿಂತಲೂ ಹಿಂದಿನಿಂದಲೂ ಈ ನೆಲೆಯಲ್ಲಿ ಆದಿ ಮಾನವನ ವಾಸವಿತ್ತೆಂದು ಇದರಿಂದಾಗಿ ಊಹಿಸಬಹುದು. ಕೊಪ್ಪಳ ತಾಲೂಕಿನ ಇಂದರಗಿ ಗುಡ್ಡ ಗಂಗಾವತಿ ತಾಲೂಕಿನ ಹಿರೇ ಬೆಣಕಲ್ಲ ಗುಡ್ಡ ಹಾಗೂ ಏಳು ಗುಡ್ಡಗಳಲ್ಲಿ ದೊರಕುವ ಗವಿ ವರ್ಣಚಿತ್ರ (ಛಿಚಿve ಠಿಚಿiಟಿಣiಟಿgs ) ಸೂಕ್ಷ್ಮ ಶಿಲಾಯುಗ ಕ್ರಿ.ಶ.ಪೂ10000- ಕ್ರಿ.ಶ.ಪೂ, 4000 ಪೂರ್ವ ಕಾಲವೆಂದು ಇತಿಕಾಸಕಾರರು ಗುರುತಿಸಿದ್ದಾರೆಂದರೆ ಈ ಪ್ರದೇಶದ ಪ್ರಾಚೀನತೆ ತುಂಬ ಹಳೆಯದಾಗಿದೆ; ಹಿರಿಮೆಯದಾಗಿದೆ.
ಅಶೋಕನ ಅಜ್ಜ ಚಂದ್ರಗುಪ್ತನು ತನ್ನ ಗುರುಗಳಾದ ಭದ್ರಬಾಹು ಭಟಾರರೊಂದಿಗೆ ಮಗಧ ಸಾಮ್ರಾಜ್ಯದಲ್ಲಿ ಹನ್ನೆರಡು ವರ್ಷಗಳ ದೀರ್ಘಕಾಲ ಬರಗಾಲ ಬಿದ್ದುದರಿಂದ ರಾಜದಾನಿ ಪಾಟಲಿಪುತ್ರದಿಂದ ದಕ್ಷಿಣದ ಶ್ರವಣಬೆಳಗೊಳಕ್ಕೆ (ಆಗ ಇದನ್ನು ಕಳ್ಬಪ್ಪು ಎಂದು ಕರೆಯಲಾಗುತ್ತಿತ್ತು) ಹೋಗುವ ಮಾರ್ಗದಲ್ಲಿ ಈ ಬೆಟ್ಟದಲ್ಲಿ ತಂಗಿದ್ದನೆಂಬ ಪ್ರತೀತಿ ಇದೆ. ಹೀಗಾಗಿ ಕೊಪ್ಪಳವು ಜೈನ ಕೇಂದ್ರವಾಯಿತು. ಇಲ್ಲಿ 772 ಜೈನ ಬಸದಿಗಳಿದ್ದವೆಂದು ಹೇಳುತ್ತಾರೆ. ಈಗ ಕೊಪ್ಪಳದಲ್ಲಿ ಪಾಶ್ರ್ವನಾಥ ಬಸದಿಯೊಂದೇ ಸುಸ್ಥಿಯಲ್ಲಿದೆ. ಉಳಿದೆಲ್ಲ ಬಸದಿಗಳು ಕಣ್ಮರೆಯಾಗಿವೆ. ಶಾಸನಗಳಲ್ಲಿ ಕೊಪ್ಪಳವನ್ನು ಕುಪಣ, ಕೊಪಣ, ಕುಪಿನ ತೀರ್ಥ, ಮಹಾತೀರ್ಥ, ಆದಿ ತೀರ್ಥವೆಂದು ಉಲ್ಲೇಖಿಸಲಾಗಿದೆ. 7ನೆಯ ಶತಮಾನದ ಸಂಸ್ಕøತ ವರಾಂಗ ಚರಿತೆಯ ಕರ್ತೃ ಜಟಾಸಿಂಹ ನಂದಿಯ ಪಾದಗಳು ಪಾಲ್ಕಿಗುಂಡಿನ ಅಶೋಕನ ಶಾಸನದ ಅಡಿಯಲ್ಲಿವೆ. ಚಾವುಂಡರಾಯ ಕೋಪಣಾದ್ರೀಂದ್ರವೆಂದಿದ್ದಾನೆ. ರನ್ನನು ಅಜಿತನಾಥ ತೀರ್ಥಂಕರ ಪುರಾಣದಲ್ಲಿ ತನ್ನ ಆಶ್ರಯದಾತೆಯಾದ ಅತ್ತಿಮಬ್ಬೆಯನ್ನು ‘ನೆಗಳ್ದ ಕೊಪಣಾಚಲದಂತೆ ಪವಿತ್ರಮಾದುದತ್ತಿಮಬ್ಬೆಯ ಚರಿತಂ’ ಎಂದು ಬಣ್ಣಿಸಿದ್ದಾನೆ. ಕವಿರಾಜಮಾರ್ಗದಲ್ಲಿ ‘ತಿರುಳ್ಗನ್ನಡನಾಡೆಂದು’ ವಿದಿತ ಮಹಾ ಕೋಪಣನಗರ’ ವೆಂದು ವರ್ಣಿಸಲಾಗಿದೆ.2002ನೆಯ ಇಸ್ವಿಯಲ್ಲಿ ಬೆಳಕು ಕಂಡ ಗುಡ್ಲಾನೂರು ಶಾಸನದಲ್ಲಿ ಅತ್ತಿಮಬ್ಬೆಯನ್ನು ಅತ್ತಿಮಬ್ಬೆಯೆಂದು ಕರೆಯಲಾಗಿದೆ. ಇದರಲ್ಲಿ ಅಳವಂಡಿ, ಬೆಟಗೇರಿ, ಮೈನಳ್ಳಿ ಕಬ್ಬಳ್ಳ, ಗೂಡ್ಲಾನೂರು, ಕಾತರಕಿ, ಹಿರೇ ಸಿಂದೋಗಿ ಮುಂತಾದವುಗಳು ಉಲ್ಲೇಖಗೊಂಡಿವೆ. ಹಿರೇ ಸಿಂದೋಗಿ ಅತ್ತಿಮಬ್ಬೆಯ ಪತಿ ನಾಗದೇವನ ಊರಾಗಿರಬೇಕೆಂದು ಡಾ. ಎಂ.ಎಂ. ಕಲಬುರ್ಗಿಯವರು ಊಹಿಸಿದ್ದಾರೆ. ಇಲ್ಲಿ ‘ಅಣ್ಣಿಗನ ಕೊಳ’ ವೆಂದು ಕರೆಯುವ ಕೆರೆಯ ಅವಶೇಷಗಳಿವೆ. ಕೆರೆಯ ದಂಡೆಯಲ್ಲಿ ಕ್ರಿ.ಶ, 750ರ ರಾಷ್ಟ್ರಕೂಟರ ಕಾಲದ ‘ಸತ್ತೋರ ಕಲ್ಲು, ವೀರಗಲ್ಲು ನಿಲ್ಲಿಸಿದ್ದು ಕಂಡುಬರುತ್ತದೆ. ಅಣ್ಣಿಗೇರಿ, ಡಂಬಳ, ಮೇವುಂಡಿ, ಅಳವಂಡಿ, ಹಿರೇ ಸಿಂದೋಗಿ, ಕೊಪ್ಪಳ, ಆನೆಗುಂದಿ ಇವು ಮಾಸವಾಡಿಯಲ್ಲಿ ಅಂತರ್ಗತಗೊಂಡ ಐತಿಹಾಸಿಕ ಸ್ಥಳಗಳಾಗಿವೆ. ಕವಿ ರನ್ನನಂತೂ ಕೊಪ್ಪಳಕ್ಕೆ ಅತ್ತಿಮಬ್ಬೆಗೆ ಹಾಗೂ ಚಾವುಂಡರಾಯನಿಗೆ ಮಾರುಹೋಗಿದ್ದಾನೆ.
ಗವಿಮಠದ ಬೆಟ್ಟ, ಮಳೆಮಲ್ಲೇಶ್ವರ ಬೆಟ್ಟ, ಶಿಲಾಯುಗ ಸಂಸ್ಕøತಿಯ ಅವಶೇಷಗಳನ್ನು ಹೊದಿದ್ದು ಆದಿಮಾನವನು ಬಿಡಿಸಿದ ಗವಿಚಿತ್ರಗಳು ಇಲ್ಲಿಯ ಗವಿಗಳಲ್ಲಿವೆಯೆಂಬುದನ್ನು 1983 ರಲ್ಲಿ ಪ್ರೊ. ಟಿ. ಶಂಭುಲಿಂಗಪ್ಪನವರು ಗುರುತಿಸಿದ್ದಾರೆ. ಅನಂತರ ಶ್ರೀ ಬಿ.ಸಿ. ಪಾಟೀಲರು ಈ ಬಗ್ಗೆ ಮಹತ್ವದ ಶೋಧನೆ ಮಾಡಿದ್ದಾರೆ. ಮಳೆಮಲ್ಲೇಶ್ವರ ಬೆಟ್ಟದ ಕೊಳ್ಳದಲ್ಲಿ ಶಿಲಾಯುಗದ ಕಾಲದ ಬೇಟೆಯ ಆಯುಧಗಳು ದೊರಕಿವೆ. ಡಾಲಮನ್ಸ್ (ಕಲ್ಗೋರಿ)ಗಳು ನೋಡಲು ಸಿಗುತ್ತವೆ. ಸ್ಥಳೀಯವಾಗಿ ‘ಮೋರೇರ ಅಂಗಡಿ’ ‘ಮೋರೇರ ಅಗಸಿ’ ‘ಪಾಂಡುವರ ವಠಾರ’ವೆಂದು ಕರೆಯುತ್ತಿದ್ದು, ಹಿರೇಬೆಣಕಲ್ಲು, ಆಗೋಲಿ ಗುಡ್ಡದಲ್ಲಿ ಸುಸ್ಥಿತಿಯಲ್ಲಿರುವ ಇಂಥ ಅನೇಕ ಕಲ್ಗೋರಿಗಳು ಇವೆ. ಕ್ರಿ.ಶ. ಪೂ.300/400 ಕಾಲದ ರೋಮನ್ ನಾಣ್ಯಗಳು ಇಲ್ಲಿ ದೊರಕಿದ್ದರಿಂದ ದೂರದ ದೇಶಗಳೊಡನೆ ಇಲ್ಲಿಂದ ವ್ಯಾಪಾರ ವಹಿವಾಟು ನಡೆಯುತ್ತಿತ್ತೆಂದು ತಿಳಿಯುತ್ತದೆ. ಶತವಾಹನರ 5554 ಬೆಳ್ಳಿ ನಾಣ್ಯಗಳು ತಾಲೂಕಿನ ಚಿಕ್ಕ ಸಿಂದೋಗಿಯಲ್ಲಿ ದೊರಕಿದ್ದು, ಅವರ ಆಡಳಿತ ಇಲ್ಲಿತ್ತೆಂದು ತಿಳಿದು ಬರುತ್ತದೆ. ಭೂಗೋಳ ವಿಜ್ಞಾನಿ ಟಾಲಮಿಯ ‘ಭೂಗೋಳದಲ್ಲಿ ಕೊಪ್ಪಳ ದಾಖಲುಗೊಂಡಿದೆ. ಚೀನಿ ಪ್ರವಾಸಿಗಳಾದ ಹುಯೇನ್ತ್ಸಾಂಗ್ ಹಾಗೂ ಫಾಯಿಯಾನರ ಪ್ರವಾಸಿ ದಾಖಲೆಗಳಲ್ಲಿ ಕೊಪ್ಪಳವನ್ನು ಹೆಸರಿಸಲಾಗಿದೆ.
ಕ್ರಿ.ಶ. 643ರಲ್ಲಿ ಹುಯೇನ್ತ್ಸಾಂನು ಚೀನಾಕ್ಕೆ ಮರು ಪ್ರಯಾಣ ಬೆಳಸಿದಾಗ ತನ್ನ ಜೊತೆಗೆ ಐದುನೂರ ಐವತ್ತಾರು ಮೂಟೆಗಳಲ್ಲಿ ಆರುನೂರ ಐವತ್ತೇಳು ಸೂತ್ರಗಳ ಹಸ್ತಪ್ರತಿಗಳು ಮತ್ತಿತರ ಸಾಮಗ್ರಿಗಳನ್ನೊಯ್ದಿದ್ದನು. ಅವುಗಳಲ್ಲಿ ಕರ್ನಾಟಕದವು ಕೆಲವಾದರೂ ಇರಬಹುದೆಂದು ಡಾ. ಜೋತ್ಸ್ನಾ ಕಾಮತ್ತರು ಊಹಿಸಿರುವುದರಿಂದ ಬೌದ್ಧರ ನೆಲೆಯಾಗಿದ್ದ ಕೊಪ್ಪಳದ ಕೆಲವಾದರೂ ಹಸ್ತಪ್ರತಿಗಳು ಇದ್ದಿರಬಹುದೆಂದು ನಾವು ತರ್ಕಿಸಬಹುದಾಗಿದೆ. ಪ್ರೊ.ಟಿ.ಎಸ್. ವೆಂಕಣ್ಣಯ್ಯನವರು ಜೈನರು ಕನ್ನಡಕ್ಕೆ ಸಾಹಿತ್ಯ ಕೊಡುಗೆ ನೀಡಿದಂತೆ ಬೌದ್ಧರು ಕೂಡ ಕನ್ನಡಕ್ಕೆ ಸಾಹಿತ್ಯಿಕ ಕೊಡುಗೆ ನೀಡಿರಬೇಕೆಂದು ಹೇಳಿರುವುದನ್ನು ನಾವು ನೆನೆದುಕೊಂಡರೆ, ಬೌದ್ಧರ ಕನ್ನಡ ಸಾಹಿತ್ಯ ರಚನೆಯ ಆಡುಂಬೊಲ ಕೊಪ್ಪಳವಾಗುತ್ತದೆ. ಈ ಪ್ರದೇಶ ಮೌರ್ಯರ ಆಡಿಳಿತಕ್ಕೊಳಪಟ್ಟಿರಬೇಕು. ಅಂತೆಯೇ ಕ್ರಿ.ಶ.ಪೂ. 272ರ ಕಾಲದ ಎರಡು ಅಶೋಕ ಶಾಸನಗಳು ಕೊಪ್ಪಳದಲ್ಲಿ ದೊರಕಿವೆ. ಒಂದನೆಯ ಶತಮಾನದ ಶಾತವಾಹನರು, ವಾಕಾಟಕರು, ಚೂಟರು, ಕದಂಬರು, ಚಾಳುಕ್ಯರು, ರಾಷ್ಟ್ರಕೂಟರು, ಗಂಗರು, ಸೇವುಣರು, ಹೊಯ್ಸಳರು, ಕಲ್ಯಾಣಚಾಲುಕ್ಯರು, ಕಳಚೂರ್ಯರು, ಕೊಪಣ ಪುರವಾಧೀಶ್ವರರೆಂದು ಕರೆದುಕೊಂಡ ‘ಶಿಲಹಾರರು’ ಯಾದವರು ಕುಮ್ಮಟದುರ್ಗದ ಕಂಪಿಲರಾಯ-ಗಂಡುಗಲಿ ಕುಮಾರರಾಮರು, ವಿಜಯನಗರದರಸರು, ಆದಿಲ್ ಶಾಹಿ, ಬಹುಮನಿ ಅಸಪ್ಶಾಹಿ (ನಿಜಾಮರು) ಗಳಲ್ಲದೆ, ಮರಾಠರು, ಹೈದರಾಲಿ-ಟಿಪ್ಪುಗಳು ಕೂಡ ಕೊಪ್ಪಳ ಕೋಟೆಯಿಂದ ಆಡಳಿತ ನಡೆಸಿದ್ದಾರೆ.
1506ರಲ್ಲಿ ಮೊಗಲರ ವಶದಲ್ಲಿದ್ದ ಕೊಪ್ಪಳ ಅಬ್ಲುಲ್ ರಹೀಮ್ ಊರ್ಫ್ ಬಹಲೋಲನಿಗೆ ಜಹಾಗೀರಾಗಿ ಬಿಟ್ಟುಕೊಡಲಾಗಿತ್ತು. ಆತನು ತನ್ನ ಸಂಭಂದಿಯಾದ ಹುಸೇನ್ ಮಿಯಾನಿಗೆ ಇದರ ಆಡಳಿತ ವಹಿಸಿದ್ದನು. 1677ರಲ್ಲಿ ಶಿವಾಜಿಯ ದಳಪತಿ ಹಂಬೀರಾವ್ ಇದರ ಮೇಲೆ ದಾಳಿಮಾಡಿದಾಗ ಹುಸೇನ ಮಿಯಾ ಸೋತು, ಶಿವಾಜಿ ಮತ್ತು ಮಗ ಸಂಭಾಜಿ ಆಧೀನಕ್ಕೆ ಬಂದಿತ್ತು. ಕೆಲಕಾಲನಂತರ ಹೈದರಾಬಾದಿನ ನಿಜಾಮರ ಆಡಳಿತಕ್ಕೆ ಬಂದಾಗ ಟಿಪ್ಪು ಸುಲ್ತಾನ ಕೊಪ್ಪಳ ಹಾಗೂ ಬಹಾದ್ದೂರಬಂಡಿ ಕೋಟೆಗಳನ್ನು ವಶಪಡಿಸಿಕೊಂಡನು. ಈತನ ಆಡಳಿತದಲ್ಲಿದ್ದಾಗ ಬಹಾದ್ದೂರಬಂಡಿ ಹಾಗೂ ಕೊಪ್ಪಳ ಕೋಟೆಗಳು ಪ್ರೆಂಚ ಇಂಜನೀಯರ್ರಿಂದ ಪುನರ್ ನಿರ್ಮಾಣಗೊಂಡಿರುವ ಬಗ್ಗೆ ಕೋಟೆಯಲ್ಲಿರುವ ಪರ್ಶಿಯನ್ ಶಾಸನವು ತಿಳಿಸುತ್ತವೆ. 1799ರಲ್ಲಿ ಟಿಪ್ಪುವಿನ ಮರಣಾನಂತರ ಬ್ರಿಟಿಷರಿಂದಾದ ಒಪ್ಪಂದಂತೆ ಕೊಪ್ಪಳವನ್ನು ಹೈದರಾಬಾದ ನಿಜಾಮ್ರಿಗೆ ಬಿಟ್ಟುಕೊಡಲಾಯಿತು.
ಕ್ರಿ.ಶ.1819ರಲ್ಲಿ ಜಮೀನುದಾರ ವೀರಪ್ಪನು ಬ್ರಿಟಿಷರು ಹೆಚ್ಚಿನ ಭೂಕಂದಾಯವನ್ನು ಹೇರಿದಾಗ ಬಹಾದ್ದೂರಬಂಡಿ ಕೋಟೆ ಹಾಗೂ ಕೊಪ್ಪಳಕೋಟೆಯಿಂದ ಹೋರಾಟ ಮಾಡಿದನು. ಇದರಲ್ಲಿ ಆತನು ಸೆರೆಸಿಕ್ಕು ಬ್ರಿಟಿಸಿರಿಂದ ತಪ್ಪಿಸಿಕೊಂಡು ಹೋಗಿ ಕಿತ್ತೂರ ಸೈನ್ಯವನ್ನು ಸೇರಿದನು. 1824ರ ಕಿತ್ತೂರು ವಿಜಯದಲ್ಲಿ ತನ್ನನ್ನು ಕೊಪ್ಪಳದಲ್ಲಿ ಸೆರೆಹಿಡಿದಿದ್ದ ಜನರಲ್ ಡೊವಿಟನ್ನನ್ನು ಹತ್ಯೆಗೈದು ಸೇಡು ತಿರಿಸಿಕೊಂಡನೆಂದು ಹೆಳುತ್ತಾರೆ. ಡೊವಿಟನ್ನನ ಸಮಾಧಿ ದಾರವಾಡದಲ್ಲಿ ಥ್ಯಾಕರೆ ಗೋರಿಯೊಂದಿಗಿದೆ.
1858ರ ಮೇ ತಿಂಗಳು 21ರಂದು ಮುಂಡರಗಿ ಭೀಮರಾಯ, ಹಮ್ಮಿಗಿ ಕೆಂಚಪ್ಪ ದೇಸಾಯಿ, ಕೊಪ್ಪಳದವರೇ ಆದ ಹುಸೇನನಾಯಕ ಸೋದರರಾದ ಮೋದಿನ್ ನಾಯಕ - ಮುಕ್ತುಂನಾಯಕ - ರಾಜನಾಯಕ ಸೋದರರು, ಬಹಾದ್ದೂರಬಂಡಿಯ ಬಹಾದ್ದೂರರು, ಕುಮಾರರಾಮನ ಕುಮ್ಮಟದುರ್ಗದ ವೀರರು, ಶಿವಪುರದ ಕೆಂಚಪ್ಪ, ಮುದ್ದಪ್ಪ ವೆಂಕಣ್ಣ ಮುಂತಾದವರು. ಹೋರಾಟಮಾಡಿ ಹುತಾತ್ಮರಾದರು. ಮೇಜರ್ ಹ್ಯೂಜ್ನು ಸೆರೆಹಿಡಿದುಕೊಂಡು ಹೋದ 77 ವೀರರನ್ನು ರಾಯಚೂರಿನಲ್ಲಿ ಗುಂಡಿಟ್ಟುಕೊಂದರು. ಕೊಪ್ಪಳದ ಅನೇಕ ಹೋರಾಟಗಾರರನ್ನು ಗವಿಮಠದ ಮುಂದಿನ ಬಯಲಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು. ಅವರಲ್ಲಿ ಕೊಪ್ಪಳದ ಹುಸೇನನಾಯಕ ಸೋದರರು ಸೇರಿದವರಾಗಿದ್ದಾರೆ. 1861ರಲ್ಲಿ ಕೊಪ್ಪಳವನ್ನು ಅಸಫ್ಶಾಹಿ ನಿಜಾಮರಿಂದ ಆತನ ಪ್ರಧಾನ ಸಚಿವನೂ ಸಂಭಂದಿಕನು ಆಗಿದ್ದ ನವಾಬ ಸಾಲರಜಂಗ್ನಿಗೆ ಜಹಗೀರ ಜಿಲ್ಲೆಯಾಗಿ ನೀಡಲ್ಪಟ್ಟಿತು. ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಪ್ರಗತಿಗೆ ಕೊಪ್ಪಳ ಶ್ರೀ ಗವಿಮಠ ಆಡೊಂಬಲವಾಗಿದೆ.
1819ರ ಜಮೀನುದಾರ ವೀರಪ್ಪನ ಬಂಡಾಯ, 1858ರ ಮೇ 31ರ ಮುಂಡರಗಿ ಭೀಮರಾಯ, ಹಮ್ಮಿಗಿ ಕೆಂಚಪ್ಪ ದೇಸಾಯರ ಬ್ರಿಟಿಷರೊಡನೆ ನಡೆಸಿದ ಹೋರಾಟಗಳಲ್ಲಿ ಇವರು ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಸ್ವಾಮಿಯ ಆಶೀರ್ವಾದವನ್ನು ಬೇಡಿಯೇ ಹೋರಾಟಗಳನ್ನು ನಡೆಸಿರÀಬೇಕು. ಇಂಥ ಹೋರಾಟಗಳು ಆ ಭಾಗದ ಜಾಗ್ರತ ಸ್ಥಾನದ ಆರಾಧನೆ ಮತ್ತು ಹರಕೆಗಳಿಂದ ಆರಂಭಗೊಳ್ಳುವುದು ಸಹಜ. ಮುಂದೆಯೂ ಭಾರತದ ದೇಶದ ಬಿಡುಗಡೆಯ ಚಲೇಜಾವ್ (ಭಾರತ ಬಿಟ್ಟು ತೊಲಗಿರಿ) ಚಳುವಳಿ, ನಿಜಾಮ್ರಿಂದ ಹೈದರಾಬಾದ ವಿವೇಚನೆಯ ಹೋರಾಟ ಹಾಗೂ ಕರ್ನಾಟಕ ಏಕೀಕರಣದಂಥ ಚಳುವಳಿಗಳಿಗೆ, ಆ ಹೋರಾಟಗಾರರಿಗೆ ಕೊಪ್ಪಳ ಗವಿಮಠವು ಆಶ್ರಯತಾಣವಾಗಿ ರಕ್ಷಣೆ ನೀಡಿದೆ.ನಾಡಿನ ಹೋರಾಟಗಳಿಗೆ ಪ್ರೋತ್ಸಾಹಿಸಿರುದಲ್ಲದೆ ತುಂಬು ಹೃದಯದ ಆಶೀರ್ವಾದ ನೀಡಿರುವುದನ್ನು ಗುರುತಿಸಬಹುದಾಗಿದೆ.
ಕೊಪ್ಪಳ ಕೋಟೆ:
ರಾಜ ಮಹಾರಾಜರು ರಾಜ್ಯಭಾರ ಮಾಡುವುದಕ್ಕಿಂತ ಪೂರ್ವದಲ್ಲಿ ಜನರು ಚಿಕ್ಕ ಚಿಕ್ಕ ಹಟ್ಟಿಗಳಲ್ಲಿ ವಾಸವಾಗಿರುತ್ತಿದ್ದರು. ಇವರು ತಮ್ಮ ಸಂಪತ್ತನ್ನು ಕಳ್ಳರಿಂದ, ವೈರಿಗಳಿಂದ ಹಾಗೂ ತಮ್ಮನ್ನು ಕಾಡು ಪ್ರಾಣಿಗಳಿಂದ ಸಂರಕ್ಷಿಸಿಕೊಳ್ಳಲು ಆರಂಭಿಸಿದರು. ಊರು ಬೆಳೆದು, ಹಲವಾರು ಊರುಗಳು ಒಟ್ಟುಗೂಡಿ ರಾಜ್ಯಗಳು ಸ್ಥಾಪನೆಯಾದ ಮೇಲೆ ಅವುಗಳನ್ನು ರಕ್ಷಿಸಿಕೊಳ್ಳಲು ಬಲವಾದ ಕೋಟೆಗಳನ್ನು ನಿರ್ಮಿಸಿಕೊಂಡರು. ಕೋಟೆಯ ರಕ್ಷಣೆಯಲ್ಲಿ ನಿಂತು ಹೋರಾಟ ಮಾಡುವುದು. ಸುಲಭ ಅಲ್ಲದೆ ವೈರಿಗಳು ಕೋಟೆಯ ಎದುರುನಿಂತು ಯುದ್ದ ಮಾಡುವುದೆಂದರೆ ಅಪಾಯಕ್ಕೆ ಸಿಕ್ಕಿದಂತೆ. ಆದ್ದರಿಂದ ಇಂಥ ಕೋಟೆಗಳ ನಿರ್ಮಾಣ ಕರ್ನಾಟಕದಲ್ಲಿ ನಡೆಯುತ್ತ ಬಂದಿರುವುದನ್ನು ಕಾಣುತ್ತೇವೆ.
ಕರ್ನಾಟಕದ ಚರಿತ್ರೆಯಲ್ಲಿ ಕೋಟೆಗಳನ್ನು ಕಟ್ಟಿಸುವ ಕ್ರಮ ಆರಂಭಿಸಿದರು ಚಾಲುಕ್ಯರೆಂದಾದರೂ ಬನವಾಸಿ ಮೊದಲಾದ ಕಡೆಗೆ ಕದಂಬರು ಇಟ್ಟಿಗೆಯ ಕೋಟೆ ಕಟ್ಟಿಸಿದ್ದಿದೆ. ಕೊಪ್ಪಳ ಕೋಟೆಯ ಆಸ್ತಿಭಾರವೆಂದಾಯಿತೆಂಬುದರ ಬಗ್ಗೆ ದಾಖಲೆಗಳು ದೊರಕಿಲ್ಲ. ನೂರಾರು ಕಿ.ಮೀ. ಅಂತರದಲ್ಲಿರುವ ಬಾದಾಮಿ ಚಾಲುಕ್ಯರ ಕಾಲದಿಂದ ನಿಸರ್ಗಸಹಜವಾದ ಬೆಟ್ಟದ ಮೇಲೆ ಕಟ್ಟಿರುವ ಕೋಟೆಯ ಆರಂಭವಾಗಿರಬೇಕು. ಇದೊಂದು ಗಿರಿದುರ್ಗವಾಗಿದೆ. ಕೊಪ್ಪಳವನ್ನಾಳಿದ ಅರಸು ಮನೆತನಗಳು, ಚಕ್ರವರ್ತಿಗಳು ಕೋಟೆಯನ್ನು ಕಟ್ಟುತ್ತ ಬಂದಿದ್ದಾರೆ. ಏಳು ಸುತ್ತಲಿನ ಕೋಟೆಯನ್ನು ನೆಲಮಟ್ಟದಿಂದ ಬೆಟ್ಟದ ತುದಿಯವರೆಗೆ ವಿವಿಧ ಎತ್ತರಗಳಲ್ಲಿ ಕಟ್ಟಲಾಗಿದೆ. ಕೊನೆಯ ಸುತ್ತಿನ ಕೋಟೆಯ ಗೋಡೆಯ ಆಸ್ತಿಭಾರವನ್ನು ಬಾಲಕಿಯರ ಸರಕಾರಿ ಪ.ಪೂ ಕಾಲೇಜಿನ ಬೆನ್ನುಗೋಡೆಯ ಹತ್ತಿರ ನೋಡಬಹುದಾಗಿತ್ತು. ಸರದಾರ ಗಲ್ಲಿಯವರೆಗೆ ವಿಸ್ತರಿಸಿತ್ತು. ಅದರ ಮೇಲೆ ಮಳಿಗೆಗಳನ್ನು ಈಗ ಕಟ್ಟಲಾಗಿದೆ. ಬೆಟ್ಟದ ಮೇಲೆ ಕಟ್ಟುವಾಗ ಯಾವ ಬಾಗದಲ್ಲಿ ವೈರಿಗಳು ಹತ್ತಲಾರರೊ ಆ ಭಾಗವನ್ನು ಬಿಟ್ಟು ಉಳಿದೆಡೆ ಗೋಡೆಗಳನ್ನು ನಿರ್ಮಿಸಿದ್ದಾರೆ. ಕೋಟೆಯ ಪಶ್ಚಿಮಕ್ಕಿರುವ ಹುಲಿಕೆರೆ (ಹುಲಿಗಳು ಬಂದು ನೀರು ಕುಡಿಯತ್ತಿದ್ದವು), ಉತ್ತರಕ್ಕಿರುವ ಮೋತಿತಲಾಭ್ ನೀರಿನ ಪೂರೈಕೆ ಮಾಡುತ್ತಿದ್ದವು. ಚಾಂದ್ ಕುಂಟವಿದೆ. ಬೆಟ್ಟದ ಮೇಲೆ ನೀರಿನ ಹೊಂಡಗಳಿದ್ದು ಅವುಗಳಿಗೆ ನೀರಿನ ಡೋಣಿಗಳೆಂದು ಕರೆಯುತ್ತಾರೆ. ಕೋಟೆಯ ಪೂರ್ವ ಹಾಗೂ ಬಲಬದಿಯಲ್ಲಿ ಇನ್ನೂ ಕೋಟೆಯ ಬುರುಜು ಹಾಗೂ ಗೋಡೆಗಳಿವೆ. ಸಿದ್ದಿಬುರ್ಜ್ ಬಾಗಿಲ, ಉತ್ತರ ಗೋಡೆಯ ದಿಡ್ಡಿ (ಸಣ್ಣ ಬಾಗಿಲು) ಆಗ್ನೇಯ ಮೂಲೆಯಲ್ಲಿ ದಿಡ್ಡಿ (ಸಣ್ಣ ಬಾಗಿಲು), ಉತ್ತರದಲ್ಲಿ ಮಹಮ್ಮದ್ ಬುರ್ಜಿನ ಗೋಡೆಯಲ್ಲಿ ಬಂದೂಕು ಕಿಂಡಿಗಳು, ತೋಪು ಮತ್ತು ಬಂದೂಕು ಕಿಂಡಿಗಳಿರುವ ತೆನೆಗಳು ಮತ್ತು ಬೋದುಗೆಗಳ ಮೇಲೆ ಮುಂದೆ ಬಾಚಿದ ಚಿಕ್ಕ ಬಾಲ್ಕನಿಗಳಿವೆ. ಬಾಗಿಲ ಹೊರಗೆ ಸೂಫಿಸಂತರಾದ ಸೈಲಾನ್ ಪಾಶಾ(ಖಾದರಲಿಂಗ) ದರ್ಗಾ ಮತ್ತು ಒಳಗೆ ಬಾಗಿಲ ಹತ್ತಿರ ಘಾಜಿಖಾನ ಕಟ್ಟಿಸಿದ ಮಸೀದೆ ಇವೆ. ಕೋಟೆಯ ಗೋಡೆಯ ಬೋದಿಗೆಗಳ ಮೇಲೆ ಸಿಂಹ, ಆನೆ, ಕುದುರೆ, ಸವಾರರು, ನೃತ್ಯ ಮತ್ತು ಸಂಗೀತಗಾರರ ಶಿಲ್ಪಗಳಿವೆ. ಈಶಾನ್ಯ ಮೂಲೆಗಳಲ್ಲಿ ಜೋಗಿ ಬಂಡೆಯಿದೆ. ಬಂಡೆಯ ಮೇಲೆ ಐದು ಬುರ್ಜುಗಳ ಸಂಕೀರ್ಣದ ಒಳಭಾಗದಲ್ಲಿ ಒಂದು ದೊಡ್ಡಭಾವಿ, ಭೂಮಿ ಮಟ್ಟಕ್ಕಿಂತ ಕೆಳಗಿರುವ ಎರಡು ಮದ್ದಿನ ಮನೆಗಳು ಮತ್ತು ಕಾವಲುಗಾರರ ಗೂಡುಗಳಿವೆ. ಭಾವಿಯ ಗೋಡೆಯಲ್ಲಿ ವಿಶ್ರಾಂತಿಗಾಗಿ ಕಟ್ಟಿದ ಎರಡು ಕಂಬಗಳ ಒಂದು ಮಂಟಪವಿದೆ. ಬುರ್ಜ್ಗಳ ಮೇಲಿನ ಬಹಳ ಎತ್ತರದ ತೆನೆಗಳಲ್ಲಿ ದೊಡ್ಡ ಗೂಡುಗಳಿವೆ. ಇಲ್ಲಿನ ಬುರ್ಜಿನ ಮೇಲೆ ಒಂದು ತೋಪಿದೆ. ಎತ್ತರದ ಬತೇರಿಯ ಮೇಲೆ ಇನ್ನೊಂದು ತೋಪಿದೆ.
ಕೋಟೆಯಲ್ಲಿ ಮೆಟ್ಟಿಲುಗಳು, ಭಾವಿ, ಕಾವಲುಗಾರರ ಎರಡು ಮನೆ, ಅವುಗಳ ಮುಂದೆ ಕಮಾನು, ಚೌಕಾಕಾರದ ಕಣಜಗಳು, ಆಳವಾದ ನೀರಿನ ಕೊಳ ಇವೆ. ಹಾಲುಕೋಟೆ ಬಾವಿಯೆಂದು ಇದನ್ನು ಕರೆಯುತ್ತಾರೆ. ಈ ಭಾವಿಗೆ ಹುಲಿಕೆರೆಯಿಂದ ನೀರು ತರುವ ಬದ್ದಿವಂತಿಕೆಯ ತಂತ್ರ ಇಲ್ಲಿ ನೋಡಬಹುದು. ಕಣಜದ ಮೇಲೆ ಚಪ್ಪಡಿ ಕಲ್ಲು ಹಾಸಿದೆ. ಇಲ್ಲಿ ಒಂದು ತೋಪು ಇದೆ. ಇಲ್ಲಿಂದ ದಕ್ಷಿಣಕ್ಕೆ ಮತ್ತೊಂದು ಕೋಟೆ ಇದೆ. ಇಲ್ಲಿಯೂ ಕಾವಲುಗಾರರ ಮನೆಗಳಿವೆ. ಇಲ್ಲಿಂದ ಮೇಲೆ ತೋಪುಗಳನ್ನು ಸಾಗಿಸುದಕ್ಕಾಗಿ ಇಳಿವೋರೆ(ಖಚಿmಠಿ) ಇದೆ. ನಾಲ್ಕನೆಯ ಕೋಟೆಯಲ್ಲಿ ಕಂಬಗಳಿಂದ ನಿರ್ಮಿತವಾದ ಕಟ್ಟಡವಿದೆ. ಸುಲ್ತಾನ ಬಾಗಿಲಿದೆ.
ಐದನೆಯ ಕೋಟೆಯ ಆವರಣದಲ್ಲಿ ಸುಸಜ್ಜಿತವಾದ ಕೊಳವಿದೆ. ಆರನೆಯ ಕೋಟೆಯ ಆವರಣದ ಮುಂದೆ ಸಿಗುತ್ತದೆ. ಬಾಗಿಲಿನ ಪಕ್ಕದಲ್ಲಿ ಚಿಕ್ಕಗುಡಿಯಿದೆ. ಗುಡಿಯ ಬಾಗಿಲಿನ ಚೌಕಟ್ಟಿನ ಮೇಲೆ ಶೈವ ದ್ವಾರಪಾಲರ ಹಾಗೂ ಗಣೇಶ ಶಿಲ್ಪಗಳಿವೆ. ಇಟ್ಟಿಗೆ ಮತ್ತು ಗಾರೆಯ ಎರಡು ದೊಡ್ಡ ಕಟ್ಟಡಗಳು ದುರ್ಗಾ ದೇವಾಲಯ ಹಾಗೂ ಇತರ ಕಟ್ಟಡಗಳಿವೆ. ಮುಂದಿರುವುದೆ ‘ಪಾನೀಮಹಲ್’ ಏಳನೆಯ ಕೋಟೆಯ ಬಾಗಿಲನ್ನು ಮುಕ್ಕಾ ದರ್ವಾಜ ಎನ್ನಲಾಗುತ್ತದೆ. ಕೋಟೆಯ ಒಳಗೆ ಅಕ್ಕ ತಂಗಿ ಕೊಳ ಮತ್ತು ಇತರ ಕೊಳಗಳು, ಮೂರು ಖಣಜಗಳು, ಕಾವಲುಗಾರರ ಮನೆ, ಎರಡು ಭತೇರಿಗಳಿವೆ. ಒಂದು ಕೊಳದಲ್ಲಿ ತೋಪು ಇದೆ. ಭತೇರಿಯನ್ನು ಹೋತ್ತಿರುವ ಬಂಡಿಯ ಮೇಲೆ ಆಕರ್ಷವಾಗಿ ‘ಉಸ್ಮಾನ್’ ಎಂದು ಬರೆಯಲಾಗಿದೆ. ಅಧಿಕಾರಿಯ ಹೆಸರದು.
ಬಿಜಾಪುರ ಆದಿಲ್ ಶಾಯಿ ಅರಸರ ಕಾಲದಲ್ಲಿ ಕಟ್ಟಿದ ಕೋಟೆಯನ್ನು ಹೈದರಾಲಿ ಮತ್ತು ಟಿಪ್ಪು ಸುಲ್ತಾನರು ಬಲಪಡಿಸಿದ್ದಾರೆ. ಹೈದರಾಲಿ ಟಿಪ್ಪು ಸುಲ್ತಾನರು ಪ್ರೆಂಚ ಇಂಜೀನಿಯರನಿಂದ ಕೋಟೆ ರಿಪೇರಿಯಾಗಿದ್ದರೆ ಬಗ್ಗೆ ಪರ್ಷಿಯನ್ ಶಾಸನಗಳಿವೆ.
*(ಶ್ರೀ ಸಿ.ಎಸ್ ಪಾಟೀಲರು ಕರ್ನಾಟಕದ ಕೋಟೆಗಳ ಪುಟ 79)
ಕೊಪ್ಪಳದ ಧಾರ್ಮಿಕ ಸ್ಥಳಗಳು:
ಮಳೆಮಲ್ಲೇಶ್ವರ ಬೆಟ್ಟ, ಗುಮ್ಮಣ್ಣನಗವಿ ಮೊದಲಾದವು ಜನರ ಗಮನ ಸೆಳೆದಿವೆ. ಅರ್ಜುನನು ತಪಸ್ಸು ಮಾಡುವಾಗ ಪೂಜಿಸಿದ ಮಳಲಲಿಂಗವೇ ಮಳೆಮಲ್ಲೇಶ್ವರನೆಂದು, ಶಿವನ ಶಭರ ಶಂಕರನಾಗಿ ಅರ್ಜುನನೊಡನೆ ಯುದ್ದಮಾಡಿ ಪಾಶುಪತಾಸ್ತ್ರ ನೀಡಿದ ಸ್ಥಳವೆಂದು, ಹಂದಿಗಳು ತಮ್ಮ ಮೈ ತಿಕ್ಕಿದ ಹಂದಿ ಗುಂಡುಗಳು, ಹಂದಿ ಕೆರೆಯನ್ನು ಈಗಲೂ ತೋರಿಸುತ್ತಾರೆ. ಹಂದಿ ಕೆರೆಯ ದಂಡೆಗೆ ಹಳೆಯ ವೀರಭದ್ರನ ದೇವಸ್ಥಾನ, ಒಡಕರಾಯನ ಗುಡಿ, ಹತ್ತಿರದಲ್ಲಿಯೇ ದೇವಾಂಗ ಸಮಾಜದವರ ದೇವಾಂಗ ಮಠವಿದೆ. ಅದರ ಪಕ್ಕದಲ್ಲಿಯೇ ಶಿರಸಪ್ಪಯ್ಯನಮಠವಿದೆ. ತಿಂಥಿಣಿ ಮೌನೇಶ್ವರರ ಶಿಷ್ಯ ಪರಂಪರೆಯ ಶಿರಸಪ್ಪಯ್ಯ ಪವಾಡ ಮಾಡಿದ. ಹಿಂದೂ ಮುಸ್ಲಿಂರ ಭಾವೈಕ್ಯತೆಯನ್ನು ಕಾಪಾಡಿಕೊಂಡು ಬಂದನು. ಆತನಿಗೆ ಮೊಹರಂ ಹಬ್ಬದಲ್ಲಿ ಹಿಂದು ಮುಸ್ಲಿಂರು ಸಕ್ಕರೆಯನ್ನು ಓದಿಸುತ್ತಾರೆ. ವಿಶ್ವಕರ್ಮ(ಪಂಚಾಳರು) ಜನಾಂಗದವರಾದ ಶಿರಸಪ್ಪಯ್ಯ ಶ್ರೀಶೈಲನೆಂದು ಹಿಂದುಗಳು ತೆಂಗಿನಕಾಯಿ ಹೊಡೆಸಿ ನಡೆದುಕೊಳ್ಳುತ್ತಾರೆ. ಮೊಹರಂ ಹಬ್ಬದಲ್ಲಿ ಶಿರಸಪ್ಪಯ್ಯನ ಮಠದ ಸ್ವಾಮಿಗಳು ಮುಂದಿನ ಭವಿಷ್ಯ ಹೇಳುವ ಕಾರಣಿಕವನ್ನು ಕತ್ತಲರಾತ್ರಿಯಂದು ಮಾಡುತ್ತಾರೆ. ಅವು ಈಗಲೂ ಸತ್ಯವಾಗುತ್ತ್ತ ಬಂದಿರುವುದರಿಂದ ಜನರು ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ಳುತ್ತಾರೆ.
15ನೆಯ ಶತಮಾನದಲ್ಲಿ ಅಜ್ಮೀರದಿಂದ ಆಗಮಿಸಿದ ಸೂಫಿಸಂತ ಸೈಲಾನ ಪಾಶಾ ದರ್ಗಾವಿದೆ. ಈತನನ್ನು ಭಕ್ತಿಯಿಂದ ಖಾದರಲಿಂಗನೆಂದು ಹಿಂದುಗಳು, ಮುಸ್ಲಿಂರು ಗೌರವಿಸುತ್ತಾರೆ. ಇದೆ ರೀತಿ ಹುಲಿಕೆರೆಗೆ ಹೋಗುವಾಗ ಬಲಕ್ಕೆ ಬೆಟ್ಟದ ಮೇಲೆ ಇರುವ ‘ಮರ್ದಾನಗಾಯಿಬ್’ ದರ್ಗಾವಿದೆ. ಈತನೂ ಕೂಡ ಸೂಫಿಸಂತನಿದ್ದು ಈತನ ಸಮಾಧಿಯು ಮುಸ್ಲಿಂರಂತೆ ದಕ್ಷಿಣೋತ್ತರವಾಗಿ ಇರದೆ ಹಿಂದುಗಳ ಸಮಾಧಿಯಂತೆ ಪೂರ್ವ ಪಶ್ಚಿಮೋತ್ತರವಾಗಿದೆ. ಬಿದ್ದ ದರ್ಗಾವೆಂದು ಕರೆಯಿಸಿಕೊಳ್ಳುವ ಯಮನೂರು ಸಾಹೇಬ ‘ರಾಜಭಕ್ಷಿ ದರ್ಗಾ’ ಇದೆ. ಇಲ್ಲೆಲ್ಲ ವರ್ಷಕ್ಕೊಮ್ಮೆ ಉರುಸು ನಡೆಯುತ್ತಿದ್ದು ಹಿಂದು-ಮುಸ್ಲಿಂರು ಸಕ್ಕರೆÀ ಓದಿಸಿ ತಮ್ಮ ಭಕ್ತಿ ಸಲ್ಲಿಸಿ ಮನಸ್ಸಿನಲ್ಲಿ ಬೇಡಿಕೊಂಡಿದ್ದನ್ನು ಪಡೆದುಕೊಳ್ಳುತ್ತಾರೆ.
ಇದೇ ರೀತಿಯಲ್ಲಿ ಕೊಪ್ಪಳದ ಕೋಟೆಯಲ್ಲಿ ಶ್ರೀರಾಮ ದೇವರ ಮಂದಿರವಿದ್ದು, ರಾಮನವಮಿ ವಿಜೃಂಭಣೆಯಿಂದ ನಡೆಯುತ್ತದೆ. ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಹಬ್ಬ ವೈಭವಪೂರ್ಣವಾಗಿ, ಶಂಭುಲಿಂಗೇಶ್ವರ ಗುಡಿಯಲ್ಲಿ ಶಿವರಾತ್ರಿ ಪೂಜಾ ಸಮಾರಂಭಗಳು ಜರುಗುತ್ತವೆ. ಕೊಪ್ಪಳದಲ್ಲಿ 1955ರಿಂದ ಪ್ರತಿಷ್ಠಾಪನಗೊಂಡಂತೆ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠವಂತೂ ಹನ್ನೆರಡೂ ತಿಂಗಳ ಒಂದಾನೊಂದು ಪೂಜೆಯು ನಡೆಯುತ್ತಿರುದಲ್ಲದೆ. ಶ್ರಾವಣ ಮಾಸದಲ್ಲಿ ರಾಯರ ಆರಾಧನೆ ಮಹೋತ್ಸವ ಭಕ್ತಿ ಪೂರ್ವಕವಾಗಿ ಜಾತ್ರೆ ನಡೆಯುವುದು.
ಜ. ಗವಿಸಿದ್ಧೇಶ್ವರರು:
ಕಲಬುರ್ಗಿ( ಗುಲಬುರ್ಗಾ) ಶ್ರೀ ಶರಣಬಸವೇಶ್ವರರು ಹಾಗೂ ಸೂಫಿ ಸಂತರಾದ ಖ್ವಾಜಾ ಬಂದೇನವಾಜರಿಂದ, ಕೊಟ್ಟರು, ಕೊಟ್ಟೂರು ಬಸವೇಶ್ವರರಿಂದ, ನಾಯಕನ ಹಟ್ಟಿ ತಿಪ್ಪೇರುದ್ರಸ್ವಾಮಿಗಳಿಂದ ಪ್ರಸಿದ್ಧಿಪಡೆಸಿದಂತೆ ಶ್ರೀ ಗವಿಸಿದ್ಧೇಶ್ವರ ಶಿವಯೋಗಿಗಳಿಂದಾಗಿ ಕೊಪ್ಪಳ ಪ್ರಸಿದ್ಧಿ ಪಡೆದಿದೆ. ಕೊಪ್ಪಳ ನಾಡಿನ ಆಧಿದೇವ ಗವಿಸಿದ್ಧೇಶ್ವರನಾಗಿದ್ದಾನೆ.
ಕೊಪ್ಪಳ ಹಾಗೂ ಕೊಪ್ಪಳ ನಾಡಿನ ಅಧಿದೈವತನಾದ ಗವಿಸಿದ್ಧೇಶ್ವರಸ್ವಾಮಿ ಶ್ರೀ ಗವಿಮಠ ಮೂಲ ಕರ್ತೃವೇ ಇದ್ದಿರಬೇಕೆಂಬ ಭಾವನೆಯಿದೆ. ಆದರೆ ಹೀಗಿರದೆ, ಶ್ರೀ ಗವಿಮಠದ ಭವ್ಯ ಪರಂಪರೆಯಲ್ಲಿ ಹನ್ನೊಂದನೆಯ ಶಿವಯೋಗಿಗಳಾಗಿದ್ದಾರೆ; ಮಹಾ ಮಹಿಮ ಪುರುಷರಾಗಿದ್ದಾರೆ. ಅನೇಕ ಉದ್ಧಾರದ ಕಾರ್ಯಗಳನ್ನು ಮಾಡಿದ್ದಾರೆ. ಅವರು ಗೈದ ಕಾರ್ಯಗಳು ಪವಾಡ ಸದೃಶವಾಗಿದೆ. ಇದರಿಂದಾಗಿ ತಮಗಿಂತ ಹಿಂದಿನವರನ್ನು ಮರೆಯಿಸಿ ಬಿಟ್ಟಿದ್ದಾರೆ. ಮುಂದಿನವರಿಗೆ ಭಕ್ತರ ಹೃನ್ಮಂದಿರದಲ್ಲಿ ಶಾಶ್ವತವಾದ ಸ್ಥಾನವನ್ನು ತೆರೆದಿಸಿದ್ದಾರೆ. ಗವಿಸಿದ್ಧೇಶ್ವರರಿಂದ ಶ್ರೀ ಗವಿಮಠವೆಂಬ ಅನ್ವರ್ಥಕ ಹೆಸರಾಯಿತು.
ಕೊಪ್ಪಳದ ಪಶ್ಚಿಮಕ್ಕಿರುವ ಬೆಟ್ಟದ ಹಿಂಬದಿಯಲ್ಲಿ ಮಂಗಳಾಪುರವೆಂಬ ಪುಟ್ಟ ಗ್ರಾಮವಿದೆ. ಇದು ಗವಿಸಿದ್ಧೇಶ್ವರರ ಜನ್ಮಸ್ಥಳ. ಅಲ್ಲಿಯ ಪ್ರತಿಯೊಂದು ಜಾತಿ ಜನಾಂದವರು ಗವಿಸಿದ್ಧೇಶ್ವರರಲ್ಲಿ ಅಪಾರ ಭಕ್ತಿಯನ್ನಿಟ್ಟುಕೊಂಡಿದ್ದಾರೆ. ಸ್ವಾಮಿಯ ಕೈಂಕರ್ಯವನ್ನು ಸದಾ ಮಾಡುವವರಾಗಿದ್ದಾರೆ. ಇಲ್ಲಿಯ ಮುಗ್ದ ದಂಪತಿಗಳಿಗೆ ಬಹಳ ಕಾಲದವರೆಗೆ. ಮಕ್ಕಳಲಾಗಿರಲಿಲ್ಲ. ನಿಸರ್ಗ ರಮಣೀಯ ಸ್ಥಳದಲ್ಲಿ ನೆಲೆಸಿರುವ ಮಳೆಮಲ್ಲೇಶ್ವರನಿಗೆ ಬೇಡಿಕೊಂಡು ಈ ಮಗುವನ್ನು ಪಡೆದರು. ಬಾಲ್ಯನಾಮ ಗುಡದಯ್ಯ. ಸಾಮನ್ಯರಂತೆ ಬೆಳೆದ ಮಗು ಊರಲ್ಲಿಯೇ ಮಠದ ಸ್ವಾಮಿಗಳವರ ಶಾಲೆಯಲ್ಲಿ ಓದು ಬರೆಹ ಕಲಿತು, ಬಹುಭಾವುಕನಾಗಿ ಚೆಲುವಿನ ತಾಣವಾದ ಹಾಗೂ ಆದಿ ಮಾನವನ ನೆಲೆಯಾಗಿದ್ದ ಮಳೆಮಲ್ಲೇಶ್ವರ ಗುಡ್ಡದಲ್ಲಿ ಗುಡ್ಡದಯ್ಯನಾಗಿ, ದನಗಾಹಿಯಾಗಿ ನಿತ್ಯವೂ ಅಲ್ಲಿಗೆ ಬಂದು, ಶಿವಧ್ಯಾನದಲ್ಲಿ ಸಮಾಧಿಸ್ತನಾಗಿ ಕುಳಿತಿರುತ್ತಿದ್ದನ್ನು ಅಲ್ಲಿಗೆ ಮೇಯಲು ಬಂದ ಕೊಪ್ಪಳದ ಮಾಲೀಗೌಡರ ಸತ್ತ ಆಕಳನ್ನು ಬದುಕಿಸಿದನು. ಪೋಲೀಸಗೌಡರ ಎಂಟೆತ್ತಿನ ನೇಗಿಲನ್ನು ಅವರ ಒಂಟೆತ್ತಿನಿಂದ ಜಗ್ಗಿಸಿದನು. ಒಂಟೆತ್ತು ಇಡೀ ದಿನ ಎಂಟರ ನೇಗಿಲನ್ನು ಎಳೆದು ಅಲ್ಲಿ ನೆರೆದ ಜನರನ್ನು ಚಕಿತಗೊಳಸಿತು. ಮಗುವನ್ನು ಮಾಲೀಗೌಡರು ಸಾಮಾನ್ಯನಲ್ಲವೆಂದು ತಮ್ಮ ಮನೆಗೆ ಕರೆದುಕೊಂಡು ಬಂದರು. ಸ್ವಾಭಿಮಾನಿಯಾದ ಗುಡದಯ್ಯ ಕಾಯಕ ಮಹತ್ವವನ್ನು ಸಾರಿ ಹೇಳಿದಂತೆ ಗೌಡರ ಮನೆಯಲ್ಲಿದ್ದು ಕೇವಲ ಊಟ ಮಾಡದೆ, ದನಕಾಯಲು ಗುಡ್ಡಕ್ಕೆ ಹೋಗುತ್ತಿದ್ದ. ಗುಡ್ಡ ಗುಡದಯ್ಯನ ಆಧ್ಯಾತ್ಮ ಸಾಧನೆಯ ಪವಿತ್ರ ತಾಣವಾಗಿತ್ತು. ಅಲ್ಲಿಯೇ ತನ್ನ ವ್ಯಕ್ತಿತ್ವ ವಿಕಸನದ ತೊಡಗಿರುತ್ತಿದ್ದನು.ಈ ಸಾಧನೆ ಕಂಡ ಜನರು ಈತ ಸಾಮನ್ಯರಂತಲ್ಲವೆಂದು ಮಾತಾಡಿಕೊಳ್ಳಹತ್ತಿದರು.
ಕೋಟೆಯಲ್ಲಿ ಗೌಡರ ಮನೆಯಿಂದ ಬಾಲ ಗವಿಸಿದ್ಧನು ಹೊರಟಿದ್ದನು. ಅಲ್ಲಿಯ ಕಮ್ಮಾರ, ಕುಲುಮೆಯಲ್ಲಿ ಚಕ್ಕಡಿ (ಬಂಡಿ)ಯ ಇರಸನ್ನು ನಿಗಿ ನಿಗಿ ಕೆಂಡದಂತೆ ಕಾಯಿಸಿದ್ದ. ಅಲ್ಲಿದ್ದವರು ಗುಡದಯ್ಯನಿಗೆ ಸವಾಲು ಹಾಕಿದರು. ಥಟ್ಟನೆ ಕೆಂಡದಂತೆ ಕಾಯ್ದ ಕಬ್ಬಿಣದ ಇರಸನ್ನು ಕೈಯಲ್ಲಿ ಹಿಡಿದು ದಾಂಡಿನಂತೆ ತಿರುವಿದನು. ಅದೇ ಓಣಿಯ ಮರಾಠರ ಹೆಣ್ಣುಮಗಳ ಸತ್ತ ಬಾಲಕನನ್ನು ಬದುಕಿಸಿದನು. ಈತನೇ ಬಾಲಗವಿಸಿದ್ಧೇಶ್ವರ. ದಿನ ದಿನವೂ ಈತನ ಬಾಲ ಲೀಲೆಗಳು ಜರುಗಹತ್ತಿದವು. ಗೌಡರ ಮನೆಯೇ ಮಠವಾಯಿತು. ಇದನ್ನರಿತ ಗೌಡರು, ‘ಈ ಮಗು ಇನ್ನು ನಮ್ಮಲ್ಲಿರಲು ಯೋಗ್ಯನಲ್ಲ’ ವೆಂದು ಶ್ರೀ ಗವಿಮಠದ ಆಗಿನ 10ನೇ ಪೀಠಾಧಿಪತಿಗಳಾಗಿದ್ದ ಜಗದ್ಗುರು ಚೆನ್ನಬಸವೇಶ್ವರ ಮಹಾಸ್ವಾಮಿಗಳವರ ಸಾನಿಧ್ಯಕ್ಕೆ ಪೋಲೀಸಗೌಡರೊಂದಿಗೆ ಗುಡದಯ್ಯನನ್ನು ತಂದೊಪ್ಪಿಸಿದರು. ಮಾಲೀಗೌಡರ ಮನೆ ತೊರೆದು ಹೋಗುವಾಗ ಮನೆಮಂದಿಯೆಲ್ಲ ಅಗಲಿ ಹೋಗುತ್ತಿರುವ ದುಃಖ ತಡೆಯಲಾರದೆ. ಅಳುತ್ತಾ ಕರೆಯುತ್ತಾ ಅಡ್ಡನಿಂತರು. ಅವರನ್ನು ಸಮಾಧಾನ ಪಡಿಸಿ, ತನ್ನಕುರುಹಾಗಿ ತನ್ನ ಜಡೆಯನ್ನು ಕಿತ್ತುಕೊಟ್ಟನು. ಇಂದಿಗೂ ಅದು ಮಾಲೀಗೌಡರ ಮನೆಯ ದೇವರ ಜಗಲಿಯ ಮೇಲೆ ದೇವರ ಜಗಲಿಯ ಮೇಲೆ ಪೂಜೆಗೋಳ್ಳತ್ತಲಿದೆ. ಮಾಲೀಗೌಡರಿಗೆ ಇದರಿಂದ ಜಡೆಗೌಡರೆಂದು ಹೆಸರಾಯಿತು. ಜೈನರಾದ ಪೋಲೀಸಗೌಡರು ಬಾಲಗವಿಸಿದ್ಧನಲ್ಲಿ ಅಪಾರ ಭಕ್ತಿಯನ್ನು ಹೊಂದಿದ್ದರು. ಆತ ಬಾಲಕನಾಗಿದ್ದಾಗ ಅವರ ಮನೆ ಮುಂದಿನ ಕಟ್ಟೆಯ ಮೇಲೆ ಕುಳಿತಿರುತ್ತಿದ್ದನು. ಆತನು ಇವರನ್ನು ಬಿಟ್ಟು ಗವಿಮಠಕ್ಕೆ ಹೊರಟಿನಿಂತಾಗ ದುಃಖಿಸಲು ತಾನು ದಿನಾಲೂ ಕುಳಿತಿರುತ್ತಿದ್ದ ಸ್ಥಳದಲ್ಲಿಯೇ ಒಂದುಗುಡಿಕಟ್ಟಿಸಿರೆಂದು ತಿಳಿಸಿದನು. ಹಾಗೆ ಅಂದು ಬಾಲಗವಿಸಿದ್ಧೇಶ ಕುಳಿತ ಸ್ಥಳ ಶಿವಮಂದಿರವಾಗಿದೆ. ಜೈನರಾದ ಪೋಲಿಸಗೌಡರು ತಮ್ಮ ಮನೆ ಮುಂದಿರುವ ಈಶ್ವರ ಲಿಂಗಕ್ಕೆ ನಿತ್ಯ ಪೂಜೆ ಸಲ್ಲಿಸುತ್ತಾರೆ. ಗವಿಸಿದ್ಧೇಶ್ವರ ಜಾತ್ರಾ ಕಾಲದಲ್ಲಿ ಉತ್ಸವಮೂರ್ತಿಯು ಮೆರವಣಿಗೆಯೊಂದಿಗೆ ಇಲ್ಲಿಯವರೆಗೆ ಬರುತ್ತದೆ. ಗವಿಸಿದ್ಧೇಶ್ವರ ಬಾಲಕನಾಗಿದ್ದಲೇ ಧಾರ್ಮಿಕ ಸಹಿಷ್ಣುತೆ ಬೋಧಿಸಿದ, ಸಾದಿಸಿದ. ಸಿರಸಪ್ಪಯ್ಯನಮಠ, ಮರ್ದಾನ್ ಗಾಯಿಬ್, ಸೈಲಾನ್ ಪಾಶಾ ದರ್ಗಾ, ರಾಜಾಬಕ್ಷಿ ದರ್ಗಾ, ದೇವಾಂಗಮಠ, ಪಾಶ್ರ್ವನಾಥ ಬಸದಿ, ವೆಂಕಟರಮಣ ದೇವಸ್ಥಾನ, ರಾಮದೇವರ ಮಂದಿರ, ಶಂಭುಲಿಂಗೇಶ್ವರ ಹಾಗೂ ರಾಯರಮಠ ಮುಂತಾದ ದೇವಾಲಯಗಳ, ದರ್ಗಾಗಳ, ಬಸದಿಗಳ ತಾಣವಾಗಿರುವ ಕೊಪ್ಪಳ ಶರಣರ ದಾಸರ, ಸೂಫಸಂತರ ನಾಡಿದು. ವೀರರ ಬಿಡಿದು. ‘ಅವರವರ ಧರ್ಮ ಅವರವರಿಗೆ ಶ್ರೇಷ್ಠ ಯಾರೇ ಆದರೂ ಧರ್ಮಿಷ್ಟರಾಗಿ ಬಾಳಿ ಬದುಕಬೇಕೆಂಬ’ ಗವಿಸಿದ್ಧೇಶ್ವರ ಹಾಕಿಕೊಟ್ಟ ಸಂದೇಶ ಇಂದಿಗೂ ಹುಸಿಯಾಗಿಲ್ಲ.
ಗವಿಸಿದ್ಧೇಶ್ವರರು ಅಮವಾಸ್ಯೆಯೆಂದು ಆಕಾಶದಲ್ಲಿ ಪೂರ್ಣ ಚಂದ್ರ ಉದಸಿದ್ದನ್ನು ತೋರಿಸಿದರು. ಹುಣಶಿಹಾಳ ಗೌಡರ ಮನೆಯ ಹೆಣ್ಣು ಕೂಸು ಗಂಡು ಕೂಸಾದುದು ಜನಜನಿತವಾಗಿದೆ. ಇಂದಿಗೂ ಆ ಮನೆತನದವರು ಗವಿಮಠಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಶ್ರೀ ಗವಿಮಠದ ಪರಂಪರೆಯಲ್ಲಿ ಆಯುರ್ವೇದಕ್ಕೆ ಹಿರಿಯದಾದ ಸ್ಥಾನವಿದೆ. ತಮ್ಮ ಆಯುರ್ವೇದ ಚಿಕಿತ್ಸಾಪದ್ದತಿಯಿಂದಾಗಿ, ಮಠದ ಪ್ರಸಾದ ಮಹಿಮೆಯಿಂದಾಗಿ, ಗವಿಸಿದ್ಧೇಶ್ವರರ ತಪಸ್ಸಿನ ಸಿದ್ಧಯಿಂದಾಗಿ, ಹೈದರಾಬಾದಿನ ನವಾಬ ಮೀರಾಲಂ ಬಹಾದ್ದೂರರÀ ಕುಷ್ಠರೋಗ ನಿವಾರಣೆಯಾಗಿದ್ದರಿಂದ ಹಿರೇಬಗನಾಳ ಗ್ರಾಮವನ್ನು ‘ಜಹಾಗೀರಾಗಿ ಗವಿಮಠಕ್ಕೆ 1801ರಲ್ಲಿ ನೀಡಿದನು ಅಂದಿನಿಂದ ಗವಿಮಠ ಸಂಸ್ಥಾನ ಗವಿಮಠದೊಂದಿಗೆ ‘ಜಹಾಗೀರ ಮಠ’ ವೆಂದು ಪ್ರಸಿದ್ದಿ ಪಡೆಯಿತು. ಆಗಿನ ಕಾಲದ ಜಹಾಗೀರದಾರರಿಗಿದ್ದ ಮಾನ, ಸನ್ಮಾನಗಳು ಬಿರುದು ಬಾವಲಿಗಳು ಇಲ್ಲಿಯ ಮಠಾಧೀಶರಿಗೆ ದೊರಕಿದ್ದತ್ತಿದ್ದವು.
ತಿಮ್ಮಾಪುರದ ಕುರಬರ ಬೀರಪ್ಪನ ಮಗನಿಗೆ ಹನ್ನೇರಡು ವರ್ಷವಾಗಿದ್ದರೂ ಮಾತನ್ನಾಡಲೂ ಬರುತ್ತಿರಲಿಲ್ಲ. ಗವಿಸಿದ್ದೇಶ್ವರರು ಅನುಗ್ರಹಿಸಲು ಮಾತಡ ಹತ್ತಿದನು. ಇದೇ ಬಾಗದ ಕಳ್ಳರ ಗುಂಪೊಂದು ಕಳ್ಳತನ ಮಾಡಲು ಶ್ರೀಮಠಕ್ಕೆ ಬಂದಿತು. ಕಳ್ಳರ ಹಿರಿಯನನ್ನು ಮಠದ ಗುರುವನ್ನಾಗಿ ಮಾಡಿ ತಮ್ಮ ಶಾಖಾ ಮಠವೊಂದಕ್ಕೆ ಕಳಿಸಿಕೊಟ್ಟು ಕಳ್ಳರನ್ನು ಉದ್ಧರಿಸಿದರು. ಕುರುಡರು ಗದ್ದುಗೆಯನ್ನು ಕಟ್ಟಿ ಕಣ್ಣನ್ನು ಪಡೆದರು. ಹಿರೇಸಿಂದೋಗಿ ಭರಮಪ್ಪನ ಜೋಳದರಾಶಿ ಹುಲುಸಾಯಿತು. ಗಜೇಂದ್ರಗಡ ದೊರೆಗಳ ಕುಮಾರಿಗೆ ಹಿಡಿದ ಬ್ರಹ್ಮರಾಕ್ಷಸವನ್ನು ತಮ್ಮ ಸಾಮಾಥ್ರ್ಯದಿಂದ ಬಿಡಿಸಿದರು. ಇದರಿಂದಾಗಿ ಗವಿಮಠದಲ್ಲಿ ಪಾಠಶಾಲೆ, ಪ್ರಸಾದ ನಿಲಯ ಇವೆ. ಅಳವಂಡಿಯ ಆರೇರ (ಮರಾಠ) ಮನೆತನಕ್ಕೆ ಸೇರಿದ ಬಂಜೆಯ ಗುಪ್ತ ಭಕ್ತಿಗೆ ಮೆಚ್ಚಿ ಗಂಡು ಮಗುವನ್ನು ಕರುಣಿಸಿದರು. ಈ ಸವಿನೆನಪಿಗಾಗಿ ಇಂದಿಗೂ ಅಳವಂಡಿಯಲ್ಲಿ ಸಣ್ಣ ಶ್ರಾವಣ ಸೋಮವಾರದಂದು ಗವಿಸಿದ್ಧೇಶ್ವರನ ವೈಭವಯುತ ಉತ್ಸವವು ಜರುಗುವುದು.
ಗವಿಸಿದ್ಧೇಶ್ವರ ಸಜೀವ ಸಮಾಧಿ:
ಗವಿಸಿದ್ಧೇಶ್ವರ ಸಜೀವವಾಗಿ ಶ್ರೀಮಠದಲ್ಲಿ ನೆಲೆಸಿದ್ದಾನೆ. ಹೀಗಾಗಿ ಜಾಗೃತಸ್ಥಾನವೆಂದು, ಪುಣ್ಯಕ್ಷೇತ್ರವೆಂದು ಭಕ್ತರು ನಂಬಿದ್ದಾರೆ. ಗವಿಸಿದ್ಧೇಶ್ವರರು ತಮ್ಮ ಗುರುಗಳಾದ ಜ. ಚೆನ್ನಬಸವ ಮಹಾಸ್ವಾಮಿಗಳವರು ತಾವು ಲಿಂಗದಲ್ಲಿ ಬೆರಯುವ ವಿಷಯ ತಿಳಿಸಲು, ಗುರುಗಳ ಅಗಲಿಕೆಯ ಅನುತಾಪ, ಅವರ ಸೇವೆಯು ಅಲಭ್ಯವಾಗುವುದೆಂದು ಮನನೊಂದು, ಗುರುಗಳಿಗಾಗಿ ಸಿದ್ದ ಪಡಿಸಿದ ಸಮಾಧಿಯನ್ನು ಪ್ರವೇಶಿಸಿ, ಲಿಂಗ ಪೂಜೆಯಲ್ಲಿ ಕುಳಿತು ಬಿಟ್ಟನು. ಅಂದು ಶಾಲಿವಾನಶಕೆ 1735, ಶ್ರೀಮುಖ ಸಂವತ್ಸರ ಪುಷ್ಯ ಬಹುಳ ಬಿದಿಗೆ ಕ್ರಿ.ಶ. 11-1-1813 ಬುಧವಾರದಂದು ತಮ್ಮ ಪ್ರಾಣವನ್ನು ಬ್ರಹ್ಮರಂಧ್ರವಕ್ಕೇರಿಸಿ ಸಜೀವ ಸಮಾಧಿ ಸ್ಥಿತಿಯನ್ನು ಹೊಂದಿದರು. ಅನಿವಾರ್ಯವಾಗಿ ಗುರುಗಳೇ ನಿಂತು ಶಿಷ್ಯನ ಸಮಾಧಿ ಮಾಡಿದರು. ಸಜೀವ ಸಮಾಧಿ ಸ್ಥಿತಿ ಪಡೆದ ದಿನದಿಂದ ಗುರಗಳೇ ನಿಂತು ಜಾತ್ರಾ ಮಹೋತ್ಸವವನ್ನು ನೆರವೇರಿಸ ಹತ್ತಿದರು. ಗುರುಗಳಿಂದಲೇ ಗೌರವ ಪಡೆದುಕೊಂಡ ಮಹಾಶಿವಯೋಗಿ ಸಜೀವ ಸಮಾಧಿ ಸಂಯುತ ಜಗದ್ಗುರು ಗವಿಸಿದ್ಧೇಶ್ವರ! ಇದು ಜಾಗೃತ ಸ್ಥಾನವಾಗಿರುವದರಿಂದ ಭಕ್ತರು ಶ್ರದ್ಧೆಯಿಂದ ನಡೆದುಕೊಳ್ಳತ್ತಾರೆ; ತಮ್ಮ ಇತ್ಯಾರ್ಥ, ಸಿದ್ಧಿಗಳನ್ನು ಪಡೆದುಕೊಳ್ಳುತ್ತಾರೆ.