About Sreepad

         ಡಾ. ಶ್ರೀಪಾದ್ ರವರು ರವರು ಶ್ರೀಯುತ ರಾಮಚಂದ್ರರಾವ್ ಶ್ರೀಮತಿ ರಾಜೇಶ್ವರಿ ದಂಪತಿಗಳಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ದಿನಾಂಕ 17.04.1966 ರಂದು ಜನಿಸಿದರು. ಶ್ರೀಯುತರು ಪ್ರಾಥಮಿಕ ಹಾಗೂ ಪ್ರೌಢಶಾಲಾ ವ್ಯಾಸಂಗವನ್ನು ಹುಟ್ಟೂರಿನಲ್ಲಿಯೂ, ಪದವಿ ಪೂರ್ವ ವ್ಯಾಸಂಗವನ್ನು ಮಲ್ಲಾಡಿಹಳ್ಳಿಯಲ್ಲಿಯೂ, ಪದವಿ ವ್ಯಾಸಂಗವನ್ನು ಚಿತ್ರದುರ್ಗದಲ್ಲಿ ಮಾಡಿದರು. ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಮೈಸೂರಿನ ಮಾನಸಗಂಗೋತ್ರಿಯಲ್ಲಿ ಪ್ರಥಮ ರಾಂಕ್ ಹಾಗೂ ಐದು ಚಿನ್ನದ ಪದಕಗಳನ್ನು ಪಡೆಯುವುದರೊಂದಿಗೆ ಮುಗಿಸಿದ ಅವರು, ಅಲ್ಲಿಯೇ ದಿ. ಪ್ರೊ.ಎಸ್. ಗೋಪಾಲ್ ರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ 1992 ರಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದು, ಅದೇ ವರ್ಷ ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ ಆಯ್ಕೆಯಾದರು.

       1995 ರವರೆಗೆ ಕೊಣನೂರಿನ ಬಿ.ಎಂ.ಶೆಟ್ಟಿ ಸರ್ಕಾರಿ ಕಾಲೇಜಿನಲ್ಲಿ, ನಂತರ ಹೊಳೆನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಮಂಡ್ಯ ನಗರದ ಸ್ವಾಯತ್ತ ಸರ್ಕಾರಿ ಮಹಾವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಭೌತಶಾಸ್ತ್ರ ಸ್ನಾತಕೋತ್ತರ ತರಗತಿಗಳಿಗೆ ಬೋಧಿಸುತ್ತಿದ್ದಾರೆ. ರಾಷ್ಟ್ರೀಯ, ಅಂತರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕಗಳಲ್ಲಿ 101 ಹಾಗೂ ವಿಚಾರಸಂಕಿರಣಗಳಲ್ಲಿ 60 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಎಂ.ಫಿಲ್ ಹಾಗೂ ಪಿ.ಎಚ್.ಡಿ ಪದವಿಗಳಿಗೆ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಆಕಾಶವಾಣಿಯಲ್ಲಿ ಕೆಲವು ಕಾರ್ಯಕ್ರಮಗಳನ್ನು ನೀಡಿರುವ ಶ್ರೀಯುತರು ಹಲವಾರು ಕವನಗಳನ್ನೂ ಪ್ರಕಟಿಸಿದ್ದಾರೆ.  ವೃತ್ತಿಜೀವನದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ, ಎನ್.ಸಿ.ಸಿ. ಅಧಿಕಾರಿ ಹಾಗೂ ವಿದ್ಯಾರ್ಥಿ ಆಪ್ತ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೂರು ಭೌತಶಾಸ್ತ್ರ ಪಠ್ಯಹೊತ್ತಿಗೆಗಳಿಗೆ ಬರಹಗಾರರಾಗಿ ಕೊಡುಗೆ ನೀಡಿದ್ದಾರೆ.

        ಪ.ಪೂ. ಶ್ರೀ ಶ್ರೀ ವಿರಜಾನಂದ ಸರಸ್ವತೀ ಸ್ವಾಮೀಜಿಯವರ ಶಿಷ್ಯರಾದ ಶ್ರೀಪಾದ್ ರವರು ಪ.ಪೂ. ಶ್ರೀ ಶ್ರೀ ವಿರಜಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯಕೃಪೆಯಿಂದಾಗಿ ಆಧ್ಯಾತ್ಮಿಕ ವಿಷಯಗಳ ಬರವಣಿಗೆಗೆ ತಿರುಗಿ ಪೂಜ್ಯ ಸ್ವಾಮೀಜಿಯವರು ನೀಡಿದ ಅನೇಕ ಪ್ರವಚನಗಳನ್ನು ಲೇಖನರೂಪಕ್ಕೆ ತಂದು ‘’ಸತ್ಸಂಗಿ’’ ಎಂಬ ಲೇಖನಾಮದೊಂದಿಗೆ  100 ಕ್ಕೂ ಅಧಿಕ ಲೇಖನಗಳನ್ನು ಪ್ರಕಟಿಸಿದ್ದು, ‘ಆನಂದಯಾತ್ರೆ’, ‘ನವರತ್ನಮಾಲೆ’, ‘ಭಕ್ತಾಷ್ಟಕ’ , 'ಉದಯ ರವಿ', ‘ಬೆಲಗೂರಿನ ಅವಧೂತವರೇಣ್ಯ ಶ್ರೀ ಶ್ರೀ ಬಿಂದುಮಾಧವ ಶರ್ಮಾ ಸ್ವಾಮೀಜಿಯವರು - ಒಂದು ಒಳನೋಟ’,  ಹಾಗೂ `ಸಂಸ್ಕಾರ ರಾಜ - ಬ್ರಹ್ಮೋಪದೇಶ', ಸದ್ಗುರು ನಮನ’, ‘ಗುರುಕೃಪಾ ತರಂಗಿಣಿ’, `()ಘೋರಕಷ್ಟೋದ್ಧರಣ ಸ್ತೋತ್ರಅರ್ಥ ಮತ್ತು ವ್ಯಾಖ್ಯಾನ (ಕನ್ನಡಾನುವಾದ)’,  ‘ಗುರುಕೃಪಾಯಾತ್ರೆ ಹಾಗೂ 'ಗುರುಕೃಪಾಂಬರದಲ್ಲಿ ಉದಯರವಿ',‘ಅಧ್ಯಾತ್ಮ ಸೌರಭ’ ಹಾಗೂ ‘ಸರಳ-ಸುಂದರ ಸುಗಮ್ಯ ಆಧ್ಯಾತ್ಮಿಕತೆ’ ಎಂಬ ಹದಿಮೂರು ಕೃತಿಗಳನ್ನು ಸದ್ಗುರುಕೃಪೆಯಿಂದ ಹೊರಹೊಮ್ಮಿಸಿದ್ದಾರೆ.


Subpages (2): Bio-data Sreepad's Books
ą
Sreepad Hr,
Jun 27, 2011, 2:54 AM
ą
Sreepad Hr,
Jun 27, 2011, 2:52 AM
Comments