ಸಾಕೇತ್ ಎಂಬ ನಕ್ಸಲ್ ನಾಯಕನ ನೆನಪು

ashok
ಛತ್ತೀಸಗಢ್ ರಾಜ್ಯದಲ್ಲಿ ೨೦೦೭ರಲ್ಲಿ ದಂತೇವಾಡಾದಲ್ಲಿ ಮತ್ತು ೨೦೧೦ರಲ್ಲಿ ಅದೇ ದಂತೇವಾಡಾ ಜಿಲ್ಲೆಯ ಚಿಂತಲ್ನಾರ್ ಗ್ರಾಮದ ಬಳಿ ನಡೆದ ದಾಳಿಯ ನಂತರ ಮೊನ್ನೆ ಶನಿವಾರ (೨೫ ಮೇ ೨೦೧೩) ಸಂಜೆ ಮತ್ತೊಂದು ರಕ್ತಸಿಕ್ತ ದಾಳಿ ನಡೆದಿದೆ. ೨೦೧೦ರ ದಾಳಿ ಕೇಂದ್ರ ಮೀಸಲು ಪಡೆಯ ಪೋಲೀಸರನ್ನು ಗುರಿಯಾಗಿಟ್ಟುಕೊಂಡು ನಡೆದಿದ್ದರೆ ಮೊನ್ನೆಯ ದಾಳಿ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಟ್ಟುಕೊಂಡು ನಡೆದಿದೆ. ೨೦೧೦ರಲ್ಲಿ ಎಪ್ಪತ್ತಾರು ಸಶಸ್ತ್ರ ಮೀಸಲು ಪಡೆಯ ಪೋಲಿಸರು ಮತ್ತು ಎಂಟು ನಕ್ಸಲರು ಬಲಿಯಾಗಿದ್ದರೆ ಶನಿವಾರದ ದಾಳಿಯಲ್ಲಿ ಭದ್ರತೆಗೆ ನಿಯೋಜಿತರಾಗಿದ್ದ ಸಿಬ್ಬಂದಿ, ಕಾಂಗ್ರೆಸ್ ರಾಜ್ಯ ಮಟ್ಟದ ನಾಯಕರು ಮತ್ತು ಕಾರ್ಯಕರ್ತರ ಸಮೇತ ಇಪ್ಪತ್ತೊಂಬತ್ತು ಜನ ಹತರಾಗಿದ್ದಾರೆ. ಕೇಂದ್ರದ ಮಾಜಿ ಸಚಿವರೊಬರ ಸಮೇತ ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಇದು ಕಾಂಗ್ರೆಸ್ ಪಕ್ಷವನ್ನು ದಿಗ್ಭ್ರಮೆಗೊಳಿಸಿದ ದಾಳಿ. ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಯು ಪಿ ಎ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಮೊದಲ್ಗೊಂಡು ಎಲ್ಲರೂ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಒಂದಂತೂ ಸತ್ಯ. ಈ ದಾಳಿ ಕೊನೆಯದಲ್ಲ ಮತ್ತು ಬರೀ ಖಂಡನೆ-ಮಂಡನೆಗಳಿಂದ ಪರಿಹಾರವಾಗುವ ಸಮಸ್ಯೆಯೂ ಇದಲ್ಲ.”ಪಕ್ಷಾತೀತವಾಗಿ” ಇದನ್ನು ಎಲ್ಲರೂ ಖಂಡಿಸಿದ್ದರೂ ಎಲ್ಲ ವಿಷಯಗಳಲ್ಲಿ ಆಗುವಂತೆ ಈ ವಿಷಯದಲ್ಲೂ ರಾಜಕೀಕರಣ ಅದಾಗಲೇ ಆಗಿದೆ. ಅದು ಬಿಡಿ, ಅದು ಈ ದೇಶದಲ್ಲಿ ಆಗುವಂಥದ್ದೇ..!.

ಇಂಥ ದಾಳಿಗಳು ನಡೆದಾಗೆಲ್ಲ ಸಾಮಾನ್ಯವಾಗಿ ದೇಶದಲ್ಲಿ ಕೆಲವು ಚಿಂತಕರು, ಮಾನವ ಹಕ್ಕು ಹೋರಾಟಗಾರರು, ಮತ್ತು ಸಮಾಜ ವಿಜ್ಞಾನಿಗಳು ನಕ್ಸಲೀಯರ ಮಾನವ ಹಕ್ಕುಗಳ ಕುರಿತು ವಿಶೇಷ ಒಲವುಳ್ಳವರಾಗಿರುವದನ್ನು ಪ್ರಸ್ತಾಪಿಸುತ್ತ ನಕ್ಸಲೀಯರಿಂದ ಹತರಾಗಿರುವ ಜನರಿಗೆ ಮಾನವ ಹಕ್ಕುಗಳಿರುವದಿಲ್ಲವೇ? ಇದರ ಕುರಿತು ಯಾಕೆ ಅಂಥ ಚಿಂತಕರು ಮೌನ ವಹಿಸುತ್ತಾರೆ? ಎಂಬ ಪ್ರಶ್ನೆಗಳೇಳುತ್ತವೆ.

ಬಿಜೆಪಿಯ ರವಿಶಂಕರ್ ಪ್ರಸಾದ್ ಮೊನ್ನೆ ಈ ಪ್ರಶ್ನೆಯನ್ನು ಕೇಳಿದರು. ಸರಿಯೇ. ಆದರೆ ಇಂಥ ಪ್ರಶ್ನೆಗಳನ್ನು ಕೇಳುವಾಗ ಸಾಮಾನ್ಯವಾಗಿ ನಕ್ಸಲರ ಮಾನವ ಹಕ್ಕುಗಳ ಪರವಾಗಿ ವಾದಿಸುವ ಎಲ್ಲರೂ ನಕ್ಸಲಿಜಂನ ಪರ ಎಂದೋ, ಅವರು ಮಾಡಿದ್ದನ್ನು ಸಮರ್ಥಿಸುತ್ತಾರೆ ಎಂದೋ ಗ್ರಹಿಸಲಾಗಿರುತ್ತದೆ. ಗ್ರಾಮೀಣ ಆದಿವಾಸಿ ಪ್ರದೇಶಗಳಲ್ಲಿನ ಬಡಜನರ ಆರೋಗ್ಯಕ್ಷೇತ್ರದ ಸುಧಾರಣೆಗಳಿಗೆ ಸಂಬಂಧಿಸಿದಂತೆ ಛತ್ತೀಸಗಢ್ ರಾಜ್ಯ ಸರಕಾರದೊಂದಿಗೆ ತೊಡಗಿಕೊಂಡಿದ್ದ ಡಾ. ಸೇನ್ ಅದೇ ಕಾಲಕ್ಕೆ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ರಾಜ್ಯ ಸರಕಾರವನ್ನು ಟೀಕಿಸಿದ್ದರು. ಇದರರ್ಥ ಅವರು ನಕ್ಸಲಿಜಂನ ಪರವಾಗಿದ್ದರೆಂದಲ್ಲ. ಅಹಿಂಸಾತ್ಮಕವಾಗಿ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕೆಂಬುದು ಅವರ ನಿಲುವಾಗಿತ್ತು.

ನಕ್ಸಲರ ಮಾನವ ಹಕ್ಕುಗಳ ಬಗ್ಗೆ ಮಾತಾಡಿದ್ದ ಅವರನ್ನು ನಕ್ಸಲೀಯಪರ ಸಹಾನುಭೂತಿಯುಳ್ಳರೆಂದು ಸೆಡಿಶನ್ ಕೇಸ್ ಹಾಕಿದ ಛತ್ತಿಸಗಢ ಪೋಲಿಸರು ಸುಪ್ರಿಂ ಕೋರ್ಟ್ ನಲ್ಲಿ ಮುಖಭಂಗ ಅನುಭವಿಸಬೇಕಾಯಿತು.

ಮಾನವ ಹಕ್ಕು ಹೋರಾಟಗಾರರು ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾದ ಅಪರಾಧಿಗಳನ್ನೂ ಒಳಗೊಂಡು ಸಮಾಜದ ಯಾವುದೇ ಜನವರ್ಗದ ಮೂಲಭೂತ ಹಕ್ಕುಗಳೇ ಆಗಿರಲಿ ಅವು ನ್ಯಾಯಾಂಗದ ಚೌಕಟ್ಟಿನಲ್ಲಿ ಇತ್ಯರ್ಥಗೊಳ್ಳಬೇಕು ಎಂಬ ನಿಲುವನ್ನು ಹೊಂದಿರುತ್ತಾರೆ. ಒಬ್ಬ ವ್ಯಕ್ತಿ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದವನೇ ಆಗಿದ್ದರೂ ಅವನಿಗೂ ಕೆಲವು ಮೂಲಭೂತ ಮಾನವ ಹಕ್ಕುಗಳಿವೆ. ಅವುಗಳನ್ನು ಪೋಲಿಸರು ಸಾಮಾನ್ಯವಾಗಿ ಉಪೇಕ್ಷಿಸುತ್ತಾರೆ. ಮಹಾರಾಷ್ಟ್ರ ಪೋಲಿಸರು ಪ್ರಾರಂಭಿಸಿದ ಎನ್ ಕೌಂಟರ್ ಕಿಲ್ಲಿಂಗ್ ಎಂಬ ವಿಧಾನ ಈಗ ಎಲ್ಲೆಡೆ “ಪೋಲಿಸಿಂಗ್” ನ ಸಾಮಾನ್ಯ ಲಕ್ಷಣ ಎನ್ನುವಂತಾಗಿದೆ. ಪೋಲೀಸರು ಎನ್ ಕೌಂಟರ್ ನಂತಹ ನ್ಯಾಯಾಂಗಿಕ ಪ್ರಕ್ರಿಯೆಗೆ ಹೊರತಾದ ವಿಧದಲ್ಲಿ (extrajudicial killing) ಆರೋಪಿಗಳನ್ನು ಕೊಂದಾಗ ಸಮಾಜ ಕೂಡ ಅವರು ಮಾಡಿದ ಪಾಪಕೃತ್ಯಕ್ಕೆ ಸರಿಯಾದ ಶಾಸ್ತಿಯಾಯ್ತು ಬಿಡು ಎಂಬಂತೆ ಯೋಚಿಸುತ್ತಿದೆ, ಇದು ತಪ್ಪು.

ಮಾನವ ಹಕ್ಕುಗಳ ಕುರಿತು ಜನರ, ಸಮಾಜದ ಚಿಂತನೆ ಬದಲಾಗಬೇಕಾಗಿದೆ ಎನ್ನುತ್ತಾರೆ ಮಾನವ ಹಕ್ಕುಗಳ ಉಳಿವಿಗೆ ಹೋರಾಡುವವರು. ಒಬ್ಬ ಅಪಾದಿತನನ್ನು ಅಪರಾಧಿ ಎಂದು ಪೋಲಿಸರು ತಾವೇ ನಿರ್ಧರಿಸಿ ಕೊಲ್ಲುವದಾದರೆ ನ್ಯಾಯಾಂಗ ಯಾಕಿರಬೇಕು? ಇದೂ ಕೂಡ ಅವರ ಪ್ರಶ್ನೆ. ನಕ್ಸಲರ ವಿಷಯದಲ್ಲಿ ಎನ್ ಕೌಂಟರ್ ಕಿಲ್ಲಿಂಗ್ ಎಂಬುದನ್ನು ಅವರು ವಿರೋಧಿಸುವದು ಈ ಕಾರಣಕ್ಕಾಗಿ. ಇತ್ತೀಚಿನ ದಿನಗಳಲ್ಲಿ ನಕ್ಸಲರೆಂದೋ,ಉಗ್ರಗಾಮಿಗಳೆಂದೋ ಪೋಲೀಸರು ಬಂಧಿಸಿ, ಆರೋಪಪಟ್ಟಿ ಸಲ್ಲಿಸಿದ ಎಷ್ಟು ಪ್ರಕರಣಗಳಲ್ಲಿ ಸಾಕ್ಷಾಧಾರ ಸಾಲದೇ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದನ್ನು ನಾವು ನೋಡಿಲ್ಲ?

ನಕ್ಸಲೀಯ ಹೋರಾಟದ ಕುರಿತು ವಿಶೇಷ ಸಹಾನುಭೂತಿ ಇಲ್ಲದೆಯೂ ಹಾಗೆ ಎನ್ ಕೌಂಟರ್ ಹತ್ಯೆಗೆ ಒಳಗಾದ ನಕ್ಸಲೀಯ ನಾಯಕನೊಬ್ಬನ ಸಾವಿಗೆ ನಾನು ಕನಿಕರ ಪಟ್ಟ ಕತೆ ಇಲ್ಲಿದೆ. ಆ ನಾಯಕನ ಹೆಸರು ಸಾಕೇತ ರಾಜನ್. ಅವನ ಸಂಗಾತಿಗಳ, ಗೆಳೆಯರ ಪಾಲಿಗೆ ಸಾಕಿ. ನಾನು ಮೊದಲು ಆ ಹೆಸರನ್ನು ಕೇಳಿದ್ದು ದೆಹಲಿಯಲ್ಲಿದ್ದ ವರ್ಷಗಳ ಕೊನೆಕೊನೆಯಲ್ಲಿ ಅಂದರೆ ೧೯೮೪ರಿಂದ ೮೬ರ ಅವಧಿಯಲ್ಲಿ. ನಮ್ಮ ಜೊತೆ ಇರುತ್ತಿದ್ದ ಅಮಿತ್ ಸೇನ್ ಗುಪ್ತಾ ಎಂಬ, ಸೆಂಟರ್ ಫಾರ್ ಪೊಲಿಟಿಕಲ್ ಸ್ಟಡೀಸ್ ನಲ್ಲಿ ಓದುತ್ತ ವಿವಿಧ ಪತ್ರಿಕೆಗಳಿಗೆ ಲೇಖನಗಳನ್ನು ಬರೆದುಕೊಂಡು ಫ್ರೀಲಾನ್ಸರ್ ಆಗಿದ್ದ ಗೆಳೆಯನಿಂದ. ಅವನು ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಶನ್ ಸಂಸ್ಥೆಯಲ್ಲಿ ಪತ್ರಿಕೋದ್ಯಮದ ಕೋರ್ಸ್ ಮಾಡುತ್ತಿದ್ದ ಸಂದರ್ಭದಲ್ಲಿ ಸಾಕೇತ್ ಕೂಡ ಅಲ್ಲಿದ್ದಂತಿತ್ತು. ಸಾಕಿಯ ಕುರಿತು ಅಮಿತ್ ಒಂದೆರಡು ಸಲ ನನ್ನೊಂದಿಗೆ ಮಾತನಾಡಿದ ನೆನಪು ನನಗಿತ್ತು.

ಮೇಲೆ ನಾನಾಗಲೇ ಹೇಳಿದಂತೆ ನನಗೆ ನಕ್ಸಲೀಯ ಚಳುವಳಿಯ ಕುರಿತು ಒಲವೂ ಇಲ್ಲ ನಾನು ಅದರ ಬೆಂಬಲಿಗನೂ ಅಲ್ಲ. ಜೆ ಎನ್ ಯು ನಲ್ಲಿದ್ದಾಗ ನಾನಿದ್ದದ್ದು ನಕ್ಸಲೀಯರನ್ನು ಕಂಡರಾಗದ ಎಸ್.ಎಫ್.ಐ ನಲ್ಲಿ. ಅದರ ಜೆ.ಎನ್.ಯು ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯನೂ ಆಗಿದ್ದೆ. ನಮ್ಮ ಮೀಟಿಂಗುಗಳು ಒಮ್ಮೊಮ್ಮೆ ರಾತ್ರಿ ಒಂದು ಎರಡು ಗಂಟೆಯವರೆಗೆ ನಡೆಯುತ್ತಿದ್ದವು. ಸಿಪಿಐ(ಎಂ) ದೆಹಲಿ ಘಟಕದ ಪ್ರತಿನಿಧಿಯಾಗಿ ಆ ಸಭೆಗಳಿಗೆ ಸಲಹೆ ಸೂಚನೆ ಕೊಡಲು ಅಥವಾ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಒಂದೊಮ್ಮೆ ಜೆ ಎನ್ ಯು ವಿದ್ಯಾರ್ಥಿಯೂ ಎಸ್.ಎಫ್.ಐ. ಧುರೀಣರೂ ಆಗಿದ್ದ (ಈಗ ರಾಜ್ಯಸಭೆಯ ಸದಸ್ಯರಾಗಿರುವ) ಸೀತಾರಾಂ ಯೆಚೂರಿ ಆಗಮಿಸುತ್ತಿದ್ದರು. ಆಮೇಲೆ ನಾನು ನನ್ನ ಕಾರ್ಯಕಾರಿ ಸದಸ್ಯತ್ವಕ್ಕೂ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದೆ. ಅದರ ವಿವರಗಳು ಇಲ್ಲಿ ಅಪ್ರಸ್ತುತ. ನನ್ನದೇ ಹಾಸ್ಟೆಲ್ ನಲ್ಲಿದ್ದ ಟಿ.ಕೆ.ಅರುಣ್ ಮತ್ತು ಒಬ್ಬಿಬ್ಬರು ಕಾಮ್ರೇಡರು ನಾನು ಮನಸು ಬದಲಾಯಿಸುವಂತೆ ಮಾಡುವ ಪ್ರಯತ್ನ ಮಾಡಿದರಾದರೂ ನನ್ನ ನಿರ್ಧಾರ ಅಂತಿಮವಾಗಿತ್ತು. ಆಮೇಲೆ ನನ್ನನ್ನು ಟ್ರಾಟಸ್ಕೈಟ್ ಎಂದರು, ಅನಾರ್ಕಿಸ್ಟ್ ಎಂದರು.

ಸೋಡಾ ಗಾಜಿನ ಕನ್ನಡಕ ಧರಿಸುತ್ತಿದ್ದ ರಾಜೀವ ಲೋಚನ್ ಎಂಬ ಕಾಮ್ರೇಡ್ ನನ್ನ ಮುಂದೆ ನಿಂತು ನನ್ನ ಕಣ್ಣಲ್ಲೇ ಬೆರಳು ತೂರಿಸುತ್ತಾನೋ ಎಂದು ನನಗೆ ಆತಂಕವಾಗುವಂತೆ ನನ್ನತ್ತ ಕೈ ಚಾಚಿ ಚಾಚಿ “ಅಶೋಕ್, ರಿಮೆಂಬರ್, ದಿ ಅಲ್ಟಿಮೇಟ್ ಫೈಟ್ ಈಜ್ ಬಿಟ್ವೀನ್ ಮಾರ್ಕ್ಸಿಸ್ಟ್ಸ್ ಆಂಡ್ ಎಕ್ಸ್ ಮಾರ್ಕ್ಸಿಸ್ಟ್ಸ್” ಎಂದ. ಆಯ್ತು ಬಿಡಪ್ಪ ಅಂದೆ. ಅಂತೂ ಒಂದು ಅಧ್ಯಾಯ ಮುಗಿದಿತ್ತು. ನಮ್ಮ ಕ್ಯಾಂಪಸ್ ನಲ್ಲಿದ್ದ ಪಿ.ಎಸ್.ಓ. ಹಾಗೂ ಪಿ.ಎಸ್.ಎಫ್ ಎಂಬ ಎರಡು ನಕ್ಸಲ್ ಸಂಘಟನೆಗಳ ಕೆಲವರು ನಾನು ಅವರ ಪ್ರಕಾರ “ರಿವಿಜನಿಸ್ಟ್” ಕಮ್ಯುನಿಸ್ಟ್ ಪಕ್ಷವಾದ ಸಿಪಿಐ(ಎಂ) ನ ಒಂದು ಫ್ರಂಟ್ ಸಂಘಟನೆಯ ಸದಸ್ಯನಾದ್ದರಿಂದ ನನ್ನನ್ನು ಹುರುಹುರು ನೋಡುತ್ತಿದ್ದರು. ಒಮ್ಮೆ ಮುಂಜಾನೆ ಬ್ರೆಕ್ ಫಾಸ್ಟ್ ಮಾಡಲು ನಾನು ನಮ್ಮ ಮೆಸ್ ನಲ್ಲಿ ಕುಳಿತಾಗ ನನ್ನೆದುರೇ ಕುಳಿತ ಆಂಧ್ರದ ಒಬ್ಬ ನಕ್ಸಲ್ ವಿದ್ಯಾರ್ಥಿಸಂಘಟಣೆಯ ವ್ಯಕ್ತಿಯು ನನ್ನತ್ತ ಅದೇ ಹುರುಹುರು ತರಹ ನೋಡುತ್ತ “ನನಗೆ ನಿನ್ನ ಕುತ್ತಿಗೆ ಹಿಸುಕಬೇಕೆನ್ನಿಸುತ್ತದೆ” ಎಂದ. ನಾನು ಎರಡು ಬ್ರೆಡ್ ತುಂಡುಗಳ ನಡುವೆ ಸಿಕ್ಕಿಸಿದ್ದ ಆಮ್ಲೇಟ್ ತಿನ್ನುತ್ತ ಸುಮ್ಮನೇ ಅವನತ್ತ ನೋಡುತ್ತಿದ್ದೆ. ನನ್ನನ್ನು ಸುಟ್ಟು ಭಸ್ಮ ಮಾಡುವಂತೆ ನೋಡುತ್ತ ಅವನು ಎದ್ದು ಹೋಗಿದ್ದ.

೧೯೮೬ರಲ್ಲಿ ನಾನು ಅಧ್ಯಾಪಕನಾಗಿ ಧಾರವಾಡಕ್ಕೆ ಬಂದ ಹೊಸದರಲ್ಲಿ ಸಿಪಿಐ, ಸಿಪಿಐ(ಎಮ್) ಗಳ ಕುರಿತ ನನ್ನ ವಿಮರ್ಶೆಯಿಂದಾಗಿ ಆ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳ ಹುಡುಗರು ನನ್ನ ಬಳಿ ಬರುವದನ್ನು ನಿಲ್ಲಿಸಿದರು. ಆದರೆ ಆ ಅವಧಿಯಲ್ಲಿ ಇಲ್ಲಿ ಬೇರು ಬಿಡುವ ಉದ್ದೇಶದಿಂದ ಬಂದ ಪ್ರಗತಿಪರ ವಿದ್ಯಾರ್ಥಿ ಸಂಘಟನೆಯೊಂದರ ಒಬ್ಬಿಬ್ಬರು ನನ್ನ ಬಳಿ ಬರತೊಡಗಿದರು. ಕರ್ನಾಟಕ ವಿಮೋಚನಾ ರಂಗ ಎಂಬ ಸಂಘಟನೆಯೊಂದರ ಜೊತೆಗೆ ಅವರಿಗೆ ಸಂಪರ್ಕವಿತ್ತು. ಅವರು ನಕ್ಸಲ್ ಪರ ಒಲವಿನವರು ಎಂಬುದು ನನಗೆ ಗೊತ್ತಾಯಿತು. ಅವರು ವಿಮುಕ್ತಿ ಎಂಬ ಹೆಸರಿನ ಪತ್ರಿಕೆಯೊಂದನ್ನು ಪ್ರಕಟಿಸುತ್ತಿದ್ದರು. ಪ್ರಭಾಕರ ಎಂಬ (ಅದು ಅವನ ನಿಜ ಹೆಸರೋ ಅಲ್ಲವೋ ಅದೂ ನನಗೆ ಗೊತ್ತಿಲ್ಲ) ಯುವಕನೊಬ್ಬನು ಒಂದು ದಿನ ಬಂದು ತಮ್ಮ ಸಂಘಟನೆಯ ಒಬ್ಬರು ಧಾರವಾಡಕ್ಕೆ ಬಂದಿದ್ದಾರೆಂದೂ ಅವರು ನನ್ನ ಬಳಿ ಕೆಲ ವಿಷಯ ಚರ್ಚಿಸಬಯಸಿದ್ದಾರೆ ಎಂದೂ ಹೇಳಿ ನನ್ನನ್ನು ಅತ್ಯಂತ ಗೌಪ್ಯವಾಗಿ ಎಂಬಂತೆ ಧಾರವಾಡದ ಸಪ್ತಾಪೂರ್ ಪೋಸ್ಟ್ ಆಫೀಸ್ ಬಳಿ ಇರುವ ಮಿಚಿಗನ್ ಕಂಪೌಂಡ್ ನ ಕೆಂಪು ಹಂಚಿನ ಮನೆಯೊಂದರ ಮೇಲಂತಸ್ತಿಗೆ ಕರೆದೊಯ್ದ.

ಅಲ್ಲಿ ಒಂದು ಕುರ್ಚಿಯ ಮೇಲೆ ಕುಳಿತಿದ್ದ ಓರ್ವ ಯುವಕ ಮೇಲೆದ್ದು ಹಸ್ತಲಾಘವ ಮಾಡಿದರು. ಅವರು ಸಾಕೇತ ರಾಜನ್. ನೋಡಿದೊಡನೇ ಸ್ನೇಹ ಭಾವ ಉಕ್ಕಿಸುವ ಮುಗುಳ್ನಗು. ಘನತೆ, ಸಜ್ಜನಿಕೆಯನ್ನು ಕ್ಷಣಮಾತ್ರದಲ್ಲಿ ಮನಗಾಣಿಸುವಂತಿದ್ದ ವ್ಯಕ್ತಿತ್ವ ಅವರದು. ಸಾಕೇತ್ ಮಧ್ಯಕಾಲೀನ ಕರ್ನಾಟಕದ ಕೃಷಿವಿಸ್ತರಣೆಯ ಕುರಿತ ನನ್ನ ಲೇಖನವೊಂದನ್ನು ಓದಿರುವದಾಗಿಯೂ ಆ ಕುರಿತು ಚರ್ಚಿಸಬಯಸುವದಾಗಿಯೂ ಹೇಳಿದ್ದಲ್ಲದೆ ಕರ್ನಾಟಕ ಚರಿತ್ರೆಯನ್ನು ಎರಡು ಸಂಪುಟಗಳಲ್ಲಿ ತಮ್ಮ ಹೋರಾಟದ ಭಾಗವಾಗಿ ರಚಿಸಿ ಪ್ರಕಟಿಸುವ ಇಚ್ಚೆ ತಮಗಿರುವದಾಗಿ ಹೇಳಿ ಪೋಲೀಸರ, ಬೇಹುಪಡೆಗಳವರ ನಿಗಾ ತಮ್ಮ ಮೇಲಿರುವದರಿಂದ ತಾವು ವಿಶ್ವವಿದ್ಯಾಲಯ ಅಥವಾ ಯಾವುದೇ ಸಂಶೋಧನ ಸಂಸ್ಥೆಯ ವಾಚನಾಲಯಗಳಲ್ಲಿ ಕುಳಿತುಕೊಂಡು ಮುಕ್ತವಾಗಿ ಓದು ಬರಹ ಮಾಡಿಕೊಂಡಿರುವುದು ಸದ್ಯಕ್ಕೆ ಅಸಾಧ್ಯವೆಂದೂ ಆದುದರಿಂದ ಕೆಲವಷ್ಟು ಪುಸ್ತಕ,ಲೇಖನ ಇತ್ಯಾದಿಗಳನ್ನು ತಮಗೆ ಒದಗಿಸಬೇಕೆಂದೂ ಕೇಳಿಕೊಂಡರು.

ಮಧ್ಯಕಾಲೀನ ಕರ್ನಾಟಕದ ವಿವಿಧ ಧಾರ್ಮಿಕ ಪಂಥಗಳು, ಗ್ರಾಮೀಣ ಸಮಾಜದಲ್ಲಿ ಅವುಗಳಿಗಿದ್ದ ಹಿಡಿತ, ಸಾಮಾಜಿಕ ಆರ್ಥಿಕ ರಚನೆಯ ಒಟ್ಟಾರೆ ಸ್ವರೂಪ ಹಾಗೂ ಲಕ್ಷಣಗಳ ಕುರಿತು ಅವರಿಗೆ ಅವರದೇ ಆದ ಒಂದಷ್ಟು ಗ್ರಹಿಕೆಗಳಿದ್ದವು, ಕೆಲವು ಒಪ್ಪಬಹುದಾದಂಥವು ಕೆಲವು ಒಬ್ಬ ಇತಿಹಾಸದ ವಿದ್ಯಾರ್ಥಿಯಾಗಿ ಹಿಸ್ಟರಿ ಮತ್ತು ಐಡಿಯಾಲಜಿಗಳ ಸಂಬಂಧದ ಸೂಕ್ಷ್ಮಗಳ ಕುರಿತ ನನ್ನ ಗ್ರಹಿಕೆಯ ಹಿನ್ನೆಲೆಯಲ್ಲಿ ಒಪ್ಪಲು ಸಾಧ್ಯವಾಗದಂಥವು. ಆ ದಿನಗಳಲ್ಲಿ ಭಾರತೀಯ ಊಳಿಗಮಾನ್ಯವಾದದ ಕುರಿತು ಇತಿಹಾಸಕಾರ ಆರ್.ಎಸ್.ಶರ್ಮಾ ರೂಪಿಸಿದ್ದ ಪ್ರಮೇಯ ವಿಶೇಷವಾಗಿ ಚರ್ಚೆಗೊಳಪಟ್ಟಿತ್ತು. “ಜರ್ನಲ್ ಅಫ್ ಪೆಸಂಟ್ ಸ್ಟಡೀಸ್” ನ ಒಂದು ಇಡೀ ಸಂಚಿಕೆ ಆ ವಿಷಯದ ಕುರಿತ ವಿವಾದಕ್ಕೆ ಮೀಸಲಾಗಿತ್ತು. ನಾನು ದೆಹಲಿಯಲ್ಲಿದ್ದಾಗ ಆ ವಿಶೇಷ ಸಂಚಿಕೆಯನ್ನು ಇಡಿಯಾಗಿ ಫೋಟೊಕಾಪಿ ಮಾಡಿಸಿಕೊಂಡದ್ದು ನನ್ನ ಬಳಿ ಇತ್ತು. ಅದನ್ನು ಹಾಗೂ ಹಲವಾರು ಇತರ ಲೇಖನಗಳನ್ನು ನಾನು ಅವರಿಗೆ ಕೊಟ್ಟು ಕಳಿಸಿದೆ. ಅದರಲ್ಲಿ ಎಷ್ಟೋ ನನಗೆ ಮರಳಿ ಬರಲಿಲ್ಲ ಆ ಮಾತು ಬೇರೆ.

ಆದರೆ ಅವರ Making History: Karnataka’s People and their Past ಪುಸ್ತಕದ ಮೊದಲ ಸಂಪುಟ ಪ್ರಕಟವಾಗಿ ನನ್ನ ಕೈಸೇರಿದಾಗ ಅವರು ಬಳಸಿಕೊಂಡ ಇತಿಹಾಸ ಪುಸ್ತಕಗಳ ಮತ್ತು ಲೇಖನಗಳ ವ್ಯಾಪ್ತಿ ನನ್ನಲ್ಲಿ ಬೆರಗು ಮೂಡಿಸಿತ್ತು. ಅದರಲ್ಲಿ Early Feudalism ಎಂಬ ಅಧ್ಯಾಯದಲ್ಲಿ ಉತ್ಪಾದನೆ, ಸೇವಾಕಾರ್ಯಗಳು ಮತ್ತು ವ್ಯಾಪಾರಿ ಚಟುವಟಿಕೆಗಳ ಬೆಳವಣಿಗೆಯ ಕುರಿತ ಭಾಗದಲ್ಲಿ ನನ್ನ ಲೇಖನದ ಭಾಗಗಳನ್ನು ಅವರು ಪ್ರಸ್ತಾಪಿಸಿದ್ದರು. ಪ್ರಾಥಮಿಕ ಆಕರಗಳನ್ನು ಅಷ್ಟು ವಿವರವಾಗಿ ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲವಾದರೂ ತಾವು ಬಳಸಿಕೊಂಡ ನೂರಾರು ಪುಸ್ತಕಗಳ ವಿವರಗಳನ್ನು ಅವರು ತಮ್ಮದೇ ಒರ್ಥೊಡಾಕ್ಸ್ ಎನ್ನಬಹುದಾದ ಮಾರ್ಕ್ಸಿಸ್ಟ್ ಚೌಕಟ್ಟಿನಲ್ಲಿ ವ್ಯವಸ್ಥೆಗೊಳಿಸಿದ್ದರು. ಎಲ್ಲ ಮಿತಿಗಳ ನಡುವೆ ನಮ್ಮ ಹಲವು ವೃತ್ತಿಪರ ಇತಿಹಾಸಕಾರರಿಗೆ ಸಾಧ್ಯವಾಗದ ವಿಭಿನ್ನ ಒಳನೋಟಗಳು ಮತ್ತು ಸಂಶ್ಲೇಷಣೆಯನ್ನು ಅವರು ತಮ್ಮ ನಿರೂಪಣೆಯಲ್ಲಿ ಸಾಧಿಸಿದ್ದುದು ನನ್ನ ಗಮನಕ್ಕೆ ಬಂತು. ಮಂಗಳೂರು ವಿಶ್ವವಿದ್ಯಾಲಯದ ಈಗ ನಿವೃತ್ತರಾಗಿರುವ ಪ್ರೊ. ಸುರೇಂದ್ರರಾವ್ ಅವರು ಅದನ್ನು ಸ್ವಲ್ಪ ಸರ್ಕಾಸ್ಟಿಕ್ ಧ್ವನಿಯಲ್ಲಿ, ಆದರೆ ಅದಕ್ಕೆ ಕೊಡಬೇಕಾದ ಕ್ರೆಡಿಟ್ ಕೊಡುವ ರೀತಿಯಲ್ಲಿ ಒಂದು ಜರ್ನಲ್ ನಲ್ಲಿ ಆ ಕೃತಿಯ ವಿಮರ್ಶೆ ಮಾಡಿದ್ದರು.ಅದಕ್ಕೆ ಪ್ರತಿಕ್ರಿಯೆಯಾಗಿ ಅದೇ ಜರ್ನಲ್ ನಲ್ಲಿ ತಾವು ಬರೆದ ಬರಹದಲ್ಲಿ ಸಾಕೇತ್ ಅದನ್ನು ಘನತೆಯಿಂದಲೇ ಸ್ವೀಕರಿಸಿದ್ದರು.

ಮತ್ತೊಮ್ಮೆ ಅವರು ನನ್ನನ್ನು ಕಾಣಲು ನಮ್ಮ ಡಿಪಾರ್ಟಮೆಂಟ್ ಗೇ ಬಂದರು. ಬಹುಶ: ಅದು ೧೯೯೧-೯೨ರಲ್ಲಿ ರಲ್ಲಿ. ಆಗ ಮೈಸೂರು ವಿಶ್ವವಿದ್ಯಾಲಯದಿಂದ ಡಾ. ರಾಮಲಿಂಗಂ ಎಂಬ ಬಾಟನಿ ಪ್ರೊಫೆಸರ್ ರನ್ನು ಎತ್ತಂಗಡಿ ಮಾಡಿ ಒಂಥರ ಶಿಕ್ಷೆಯ ರೂಪದಲ್ಲಿ ನಮ್ಮ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಲಾಗಿತ್ತು. ಅವರೂ ನಕ್ಸಲೀಯ ಒಲವಿನವರೇ. ತಮ್ಮ ಸುತ್ತ ಕೆಲವು ಕಾಲೇಜು ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಸಶಸ್ತ್ರ ಹೋರಾಟದ ಕುರಿತು ಮಾತಾಡುತ್ತ ಇರುತ್ತಿದ್ದರು. ಯಾಕೋ ಸಾಕೇತ್ ರಾಜನ್ ಅವರನ್ನು ಭೇಟಿಯಾಗುವ ಉತ್ಸಾಹ ತೋರಲಿಲ್ಲ. ಸಾಯಂಕಾಲ ವಿಶ್ವವಿದ್ಯಾಲಯದಿಂದ ಕೊಂಚ ದೂರವಿದ್ದ ನಮ್ಮ ಮನೆಯತ್ತ ಹೊರಟಾಗ ಬಾಟನಿ ವಿಭಾಗದ ಮುಂದೆ ರಾಮಲಿಂಗಂ ಅವರ ಆಗಮನ ಆಗಿಯೇ ಬಿಟ್ಟಿತು. ಸ್ವಲ್ಪ ಹೊತ್ತು ಅವರ ಚೇಂಬರ್ ನಲ್ಲಿ ಕುಳಿತು “ಸಂಕ್ರಮಣ” ಕ್ಕೆ ಇಪ್ಪತ್ತೈದು ವರ್ಷ ತುಂಬಿದ ಸಂದರ್ಭದಲ್ಲಿ ತಮಗೂ ಚಂಪಾಗೂ ಆದ ಚಕಮಕಿ, ಅದಕ್ಕೆ ಪ್ರತಿಯಾಗಿ ತಮಗೆ ಚಂಪಾ ಬರೆದ ಕಿಡಿಗೇಡಿ ಪತ್ರ ಇತ್ಯಾದಿ ರಾಮಲಿಂಗಂ ಮಾತನಾಡಿದರು. “ಒಳ್ಳೇ ಸಹವಾಸ ಹಾಗಾದ್ರೆ ನಿಮಗೆ” ಅಂತ ಸಾಕೇತ್ ಅವರ ಜೊತೆ ನಗುನಗುತ್ತ ಸ್ವಲ್ಪ ಹೊತ್ತು ಮಾತನಾಡಿಯಾದ ಮೇಲೆ ಅವರಿಂದ ಬೀಳ್ಕೊಂಡು ನಮ್ಮ ಮನೆಯತ್ತ ಹೊರಟೆವು.

ಹೋಗುವ ಮುನ್ನ ನಮ್ಮ ಮನೆಗೆ ಹೋಗುವ ತಿರುವಿನಲ್ಲಿದ್ದ ಕಟ್ಟೆಯೊಂದರ ಮೇಲೆ ಕುಳಿತೆವು. ನಕ್ಸಲ್ ಚಳುವಳಿಯ ಕುರಿತ ನನ್ನ ಟೀಕೆಗಳನ್ನು ನಾನವರಿಗೆ ಹೇಳಿದೆ. ತೀವ್ರತರವಾಗಿ ವಾದಿಸಿ ಮತ್ತೊಬ್ಬರ ಮೇಲೆ ತಮ್ಮ ಸಿದ್ಧಾಂತವನ್ನು ಹೇರುವಂಥದನ್ನು ಸಾಕೇತ್ ಮಾಡುತ್ತಿರಲಿಲ್ಲ. ನನ್ನ ಜೊತೆಗಂತೂ ವಾದಕ್ಕೆ ಬೀಳಲಿಲ್ಲ. ಆದರೆ ದೇಶದ ಮಟ್ಟದಲ್ಲಿ ತಮ್ಮ ಚಳುವಳಿಯ ಕಾರ್ಯಯೋಜನೆಗಳ ಕುರಿತು ಅವರು ಮಾತನಾಡುತ್ತ ಹೋದರು. ಮಧ್ಯೆ ಮಧ್ಯೆ ನಾನು “ಮೈಸೂರಿಗೆ ಹೋಗಿರ್ತೀರಾ? ತಾಯಿಯ ನೆನಪು ಆಗುತ್ತಿರಬೇಕಲ್ಲವೇ?” ಎಂದೆಲ್ಲ ಕೇಳಿದರೆ., “ಯಾಕಾಗುವದಿಲ್ಲ? ಸುಮಾರು ದಿನಗಳಿಂದ ಹೋಗಿಲ್ಲ. ಹೋಗುವದು ಅಷ್ಟು ಸುಲಭ ಸಾಧ್ಯವಲ್ಲ” ಎಂದೆಲ್ಲ ಹೇಳುತ್ತ ಮತ್ತೆ ಮುಂದುವರಿಸುತ್ತಿದ್ದರು…, ಪೀಪಲ್ಸ್ ಆರ್ಮಿ, ಪೀಪಲ್ಸ್ ವಾರ್, ಲಿಬಲೇರೇಟೆಡ್ ಝೋನ್ಸ್..!ಆಕಾಶದತ್ತ ದೃಷ್ಟಿ ನೆಟ್ಟು ಹೀಗೆ ಮಾತನಾಡುತ್ತಿದ್ದ ಸಾಕೇತ್ ಕುರಿತು ಅದೇಕೋ ಗೊತ್ತಿಲ್ಲ ಒಂದು ಕ್ಷಣ ನನ್ನೊಳಗೆ ಒಂದು ದೃಶ್ಯ ಹೊಳೆದುಹೋಯಿತು. ಅದು ಹೀಗೇ.., ಪೋಲಿಸ್ ಪಡೆಯೊಂದಿಗಿನ ಸೆಣಸಾಟವೊಂದರಲ್ಲಿ ಗುಂಡೇಟು ತಿಂದು ಸಾಕೇತ್ ಸತ್ತು ಒರಗಿದ ದೃಶ್ಯ…! ದಂಡಕಾರಣ್ಯ, ಲಿಬರೇಟೆಡ್ ಝೋನ್..,ಹೀಗೆ ಮಾತನಾಡುತ್ತಲೇ ಇದ್ದ ಸಾಕೇತ್ ಗೆ ಬನ್ನಿ ಮನೆಗೆ ಹೋಗೋಣ ಎಂದೆ. ನನ್ನ ಮಗ ಅದೇ ಆಗ ನಡೆದಾಡುವದನ್ನು, ಸ್ವಲ್ಪ ಮಾತನ್ನು ಕಲಿತಿದ್ದ. ಅವನ ಕುರಿತು ಏನೋ ಸ್ವಲ್ಪ ಮಾತು, ಅವನೊಂದಿಗೆ ಸ್ವಲ್ಪ ಆಟ, ಇನ್ನೇನೋ ಚರ್ಚೆ…ಎಲ್ಲ ಆಗಿ “ಸರಿ ನಾನಿನ್ನು ಬರುವೆ”ನೆಂದು ಎದ್ದು ಹೋದರು. ಆಗ ಅವರು ರಾಯಚೂರು ಭಾಗದಲ್ಲಿ ರೈತ ಕೂಲಿಕಾರರ ಸಂಘವೊಂದನ್ನು ಸಂಘಟಿಸುತ್ತಿದ್ದ ಯುವಕ ಎಂದಷ್ಟೆ ಗೊತ್ತಿತ್ತು ನನಗೆ.

ಮೂರನೆಯ ಸಲ ಅವರು ಈ ಭಾಗದಲ್ಲಿ ಇದ್ದ ಸೂಚನೆ ನನಗೆ ೨೦೦೦ ಇಸ್ವಿಯ ಡಿಸೆಂಬರ್ ತಿಂಗಳಲ್ಲಿ ತಿಳಿಯಿತು. ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರ್ತಿ ಚಂದ್ರಿಕಾ ನಾಯ್ಕ್ ಫೋನ್ ಮಾಡಿ ಸಾಕೇತ್ ಬಂದಿರುವ ವಿಷಯ ತಿಳಿಸಿದರು. ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ತಾರೀಖು ಯಾವುದು ಎಂದು ಕೇಳುತ್ತಿದ್ದಾರೆ ಎಂದರು. ಧಾರವಾಡದವರೇ ಆದ ಚಂದ್ರಿಕಾ “ದಿ ವೀಕ್” ಪತ್ರಿಕೆಯಲ್ಲಿ ಕೆಲಸ ಮಾಡುತ್ತ ಬೆಂಗಳೂರಿನಲ್ಲಿದ್ದ ಚಂದ್ರಮೌಳಿ ಎಂಬವರನ್ನು ಮದುವೆಯಾಗಿದ್ದರು. ಈ ಚಂದ್ರಮೌಳಿ ಕೂಡ ನಾನು ಜೆ.ಎನ್.ಯು ನಲ್ಲಿದ್ದಾಗ ಅಲ್ಲಿ ವಿದ್ಯಾರ್ಥಿಯಾಗಿದ್ದವರೇ. ನಕ್ಸಲ್ ಚಳುವಳಿಯೊಂದಿಗೆ ನಂಟಿದ್ದವರು. ಆದರೆ ಅಪಘಾತವೊಂದರಲ್ಲಿ ಅಕಾಲಮೃತ್ಯುವನ್ನಪ್ಪಿದ್ದರು. ಸಂಜೆ ಸಾಕೇತ್ ನಿಮ್ಮ ಮನೆಗೆ ಬರುತ್ತಾರಂತೆ ಎಂದರು ಚಂದ್ರಿಕಾ. ಆ ದಿನಗಳಲ್ಲಿ ನನಗೆ ನರೇಂದ್ರ ಪಾಟೀಲ್ ಎಂಬ ಗೆಳೆಯರೊಬ್ಬರಿದ್ದರು.ಈಗವರು ಉಲ್ಲಾಸ್ ಕಾರಂತರ ಹುಲಿಗಳ ಎಣಿಕೆಗೆ ಸಂಬಂಧಿಸಿದ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದಾರಂತೆ. ಕಾನಪುರ್ ಐಐಟಿಯಲ್ಲಿ ತಮ್ಮ ಡಾಕ್ಟರೇಟ್ ಅಧ್ಯಯನವನ್ನು ಅರ್ಧಕ್ಕೆ ಕೈ ಬಿಟ್ಟು ಬಂದಿದ್ದ ಅವರು ಲಡಾಕ್ ನ ಲೇಹ್ ಪಟ್ಟಣದಲ್ಲಿ ಸ್ಕೂಲೊಂದರಲ್ಲಿ ಶಿಕ್ಷಕರಾಗಿದ್ದರು.

ಅ ಮುಂಚೆ ನಾಗಾಲ್ಯಾಂಡ್ ನ ಯಾವುದೋ ಬುದ್ಧಿಸ್ಟ್ ಸಂಸ್ಥೆಯ ಹೈಸ್ಕೂಲ್ ಒಂದರಲ್ಲಿ ಕೆಲ ಕಾಲ ಶಿಕ್ಷಕರಾಗಿದ್ದರು. ಲಡಾಕ್ ನಿಂದ ರಜೆಯಲ್ಲಿ ಬಂದಿದ್ದ ನರೇಂದ್ರ ಕಲಕೇರಿಯ ಅರಣ್ಯ ಮಧ್ಯೆ ಐದು ಎಕರೆ ಜಮೀನು ಖರೀದಿಸಬೇಕೆಂಬ ಯೋಚನೆಯಲ್ಲಿದ್ದರು. . ನಾನು- ಅವರು ವರ್ಷಾಂತ್ಯದ ಸಂಜೆಯನ್ನು ಜೊತೆಯಾಗಿ ಕಳೆಯುವದೆಂದು ತೀರ್ಮಾನವಾಗಿತ್ತು. ನಾನವರಿಗೆ ಫೋನ್ ಮಾಡಿ “ಹೀಗೊಬ್ಬರು ನನ್ನ ಮನೆಗೆ ಬರುತ್ತಿದ್ದಾರೆ. ನಾಳೆ ಬರುವ ಬದಲು ನೀವು ಇಂದೇ ಬಂದು ಬಿಡಿ” ಎಂದೆ. ಸಂಜೆ ನರೇಂದ್ರ ಬಂದರು. ನಾವು ಮಾತನಾಡುತ್ತ ಕುಳಿತಿರಬೇಕಾದರೆ ಸಾಕೇತ್ ಕೂಡ ಬಂದರು. ಮೊದಲಿನ ಎಳೆತನ, ಸೌಂದರ್ಯ ಮಾಸಿ ಕಪ್ಪಿಟ್ಟಿದ್ದಂತಾಗಿದ್ದ ಅವರನ್ನು ನೋಡಿದರೆ ಹೋರಾಟದ ಬದುಕು ಅವರನ್ನು ಘಾಸಿ ಮಾಡಿದೆ ಎಂಬುದು ಗೊತ್ತಾಗುವಂತಿತ್ತು. ನರೇಂದ್ರನಿಗೂ ಸಾಕೇತ್ ಗೂ ಚರ್ಚೆ ಪ್ರಾರಂಭವಾಯಿತು. ನಾಗಾ ಪ್ರತ್ಯೇಕತಾ ಚಳುವಳಿಯ ಕುರಿತು ತಮ್ಮ ಗ್ರಹಿಕೆಗಳನ್ನು ನರೇಂದ್ರ ಹಂಚಿಕೊಳ್ಳುತ್ತಿದರು.

ತಳಮಟ್ಟದಲ್ಲಿ ಪರಿಸ್ಥಿತಿ ಏನಿದೆ ಎಂಬ ಕುರಿತ ಅವರ ಗ್ರಹಿಕೆಯನ್ನು ಸಾಕೇತ್ ಕುತೂಹಲದಿಂದ ಕೇಳುತ್ತಿದ್ದರು. ಟಿವಿ ಆನ್ ಇತ್ತು ಆಗ ಭಾರತದ ಸೆರೆಮನೆಗಳಲ್ಲಿದ್ದ ಮೂವರು ಕುಖ್ಯಾತ ಉಗ್ರಗಾಮಿಗಳನ್ನು ಬಿಡಬೇಕೆನ್ನುವ ಬೇಡಿಕೆ ಇಟ್ಟು ಭಾರತದ ವಿಮಾನವೊಂದನ್ನು ಉಗ್ರರು ಹೈಜಾಕ್ ಮಾಡಿ ಅದು ಕಂದಹಾರ್ ನಲ್ಲಿ ಇಳಿಸಲ್ಪಟ್ಟಿತ್ತು. ಇತ್ತ ಭಾರತದಲ್ಲಿ ಆ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಉಳಿಸುವಂತೆ ಅವರ ಸಂಬಂಧಿಗಳು ಪ್ರಧಾನಮಂತ್ರಿಯಾದಿಯಾಗಿ ವಿವಿಧ ಸಚಿವರ ಮನೆಗಳ ಮುಂದೆ ರೋದಿಸುತ್ತ ಉರುಳಾಡುತ್ತಿದ್ದರು. “Look how they are crying for some hundred plus passengers of a hijacked air craft while the Indian government has held the entire state of kashmir hostage for more than fifty years” ಎಂದರು ಸಾಕೇತ್. ಕಾಶ್ಮೀರ್ ನ ಸ್ವಯಂ ನಿರ್ಣಯಾಧಿಕಾರದ ಹಕ್ಕಿನ ಬಗೆಗಿನ ಅವರ ವಾದ,ನಿಲುವು ಗೊತ್ತಿದ್ದದ್ದೇ ಆಗಿತ್ತು. ನಾನು ಅದರ ಕುರಿತು ಏನೂ ಹೇಳಲಿಲ್ಲ.

ಈ ಮಧ್ಯೆ ನನ್ನ ಹೆಂಡತಿ ಕಲ್ಲಂಗಡಿ ಹಣ್ಣುಗಳನ್ನು ಹೆಚ್ಚಿ ಒಂದು ತಟ್ಟೆಯಲ್ಲಿಟ್ಟು ತಂದಳು. ಕಲ್ಲಂಗಡಿ ಹೋಳುಗಳನ್ನು ತಿನ್ನುತ್ತ ನರೇಂದ್ರ ತೋರಿಸುತ್ತಿದ್ದ ಲಡಾಕ್ ನ ಬೆಟ್ಟ ಗುಡ್ಡಗಳ ಫೋಟೋ ನೋಡುತ್ತ ಕುಳಿತ ಸಾಕೇತ್ “ನಾನಿನ್ನು ಬರುತ್ತೇನೆ” ಎಂದು ಮೇಲೆದ್ದಾಗ “ಹೇಗೂ ಊಟದ ಸಮಯವಾಯಿತು. ಯೂ ಕೆನ್ ಹ್ಯಾವ್ ಯುವರ್ ಡಿನ್ನರ್ ನೌ” ಎಂದೆ. “ನಿಮ್ಮ ಪತ್ನಿ ವಾಟರ್ ಮೆಲೋನ್ ಕೊಟ್ಟರಲ್ಲ? ದ್ಯಾಟ್ಸ್ ಮೈ ಡಿನ್ನರ್ ಫರ್ ದಿ ಡೇ” ಎಂದು ನಕ್ಕರು. ಅವರೊಂದಿಗೆ ನಾವೂ ಸಿಟಿಯ ವರೆಗೆ ಹೋದೆವು. ಅವರು ಬೆಂಗಳೂರು ಕಡೆ ಹೋಗುತ್ತಿದ್ದಾರೆಂಬ ಗ್ರಹಿಕೆಯಲ್ಲಿ ನಾನಿದ್ದೆ. ಇಲ್ಲ ನಾನಿತ್ತ ರಾಯಚೂರು ಕಡೆ ಹೊರಟಿದ್ದೇನೆ ಎಂದರು. ಬೈ ಎಂದು ಬೀಳ್ಕೊಟ್ಟು ಬಂದೆವು.

ನಮ್ಮ ಮನೆಯಿಂದ ಹೊರಡುವ ಮುನ್ನ Making History ಯ ಎರಡನೆಯ ಸಂಪುಟದ ಡಿಟಿಪಿ ಮಾಡಿ ಬೈಂಡ್ ಮಾಡಿದ್ದ ಪ್ರತಿಯನ್ನು ನನಗಿತ್ತು ಅದನ್ನೋದಿ ಅದರ ಕುರಿತ ನನ್ನ ಸಲಹೆಗಳನ್ನು ಅಲ್ಲೇ ಬೆನ್ನ ಪುಟದ ಖಾಲಿ ಹಾಳೆಗಳ ಮೇಲೆ ಬರೆದಿಡುವಂತೆ ಹೇಳಿ ಮುಂದಿನ ಸಲ ಬಂದಾಗ ಅದನ್ನು ಒಯ್ಯುವೆನೆಂದರು. ಅದು ನನ್ನ ಬಳಿ ಈಗಲೂ ಇದೆ. ನಂತರ ಆ ಪುಸ್ತಕ ಪ್ರಕಟವಾದಾಗ ಈ ಪ್ರತಿಯಲ್ಲಿಲ್ಲದ ಒಂದು ಭಾಗ ಅದರಲ್ಲಿ ಸೇರ್ಪಡೆಯಾಗಿದ್ದು ಅದರಲ್ಲಿ ಉತ್ತರ ಕರ್ನಾಟಕದ ದೇಸಗತ್ ವ್ಯವಸ್ಥೆಯೊಂದರ ಸ್ವರೂಪದ ಕುರಿತು ನಾನು ಬರೆದ ಲೇಖನದ ಕೆಲ ಅಂಶಗಳನ್ನು ಅವರು ಪ್ರಸ್ತಾಪಿಸಿದ್ದು ನೋಡಿದೆ. ಆದರೆ ಮತ್ತೆ ಬಂದಾಗ ಅದನ್ನು ಒಯ್ಯುವೆನೆಂದಿದ್ದರಲ್ಲ, ಅದು ಆಗಲೇ ಇಲ್ಲ.

೨೦೦೫ರ ಫೆಬ್ರುವರಿ ೬ರ ಮುಂಜಾನೆ ಪತ್ರಿಕೆ ತೆಗೆದರೆ ಮೆಣಸಿನಹಾಡ್ಯ ಎಂಬ ಸ್ಥಳದಲ್ಲಿ ಪೋಲೀಸ್ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಗಂಗಾಧರ್ ಎಂಬ ನಕ್ಸಲ್ ನಾಯಕನೊಬ್ಬ ಹತನಾಗಿರುವದಾಗಿ ಸುದ್ದಿ ಇತ್ತು.ಪ್ರೇಂ ಎಂಬುದು ಅವರ ಇನ್ನೊಂದು ಹೆಸರು ಎಂದೂ ಇತ್ತು. ಅವಸರವಸರವಾಗಿ ನನ್ನ ಕಣ್ಣು ಇನ್ನೂ ಮುಂದೆ ಓಡಿದವು. ಆ ವ್ಯಕ್ತಿಯ ನಿಜನಾಮಧೇಯ ಸಾಕೇತ್ ರಾಜನ್ ಎಂದೂ ಇತ್ತು…! ನನ್ನ ಹೆಂಡತಿಗೆ ವಿಷಯ ತಿಳಿಸಿದೆ. ಮೈಸೂರಿನ ಸುಶಿಕ್ಷಿತ, ಸಿರಿವಂತ ಮನೆಯ ಆ ಯುವಕನ ಹೆಣ ಕಾಡಿನ ಮಧ್ಯೆ ಎಲ್ಲೋ ಬಿದ್ದಿದ್ದ ಫೋಟೋ ನೋಡಿ ಆಕೆ ನಮ್ಮ ಮನೆಗೆ ಬಂದು ತಾಸೆರಡು ತಾಸು ನಮ್ಮೊಡನೆ ಮಾತನಾಡುತ್ತ ಕುಳಿತಿದ್ದು ತಾನು ಕೊಟ್ಟ ಕಲ್ಲಂಗಡಿ ಹಣ್ಣಿನ ಹೋಳುಗಳನ್ನು ಇಷ್ಟ ಪಟ್ಟು ತಿಂದಿದ್ದ ಸಾಕೇತ್ ನ ಚಿತ್ರವನ್ನು ನೆನಪಿಗೆ ತಂದುಕೊಂಡು ಮರುಗಿದಳು. ಅದು ಪರಸ್ಪರ ಗುಂಡಿನ ಕಾರ್ಯಾಚರಣೆಯಲ್ಲಿ ಆದ ಸಾವು ಎಂದರು ಕೆಲವರು. ಇಲ್ಲ ಅದು ಎನ್ ಕೌಂಟರ್ ಸಾವು ಎಂದು ಕೆಲವರೆಂದರು….ನನಗೆ ಆಗ ನಕ್ಸಲೀಯ ಚಳುವಳಿಯಲ್ಲಿ ಅವರು ಯಾವ ಎತ್ತರದಲ್ಲಿ ಇದ್ದಾರೆಂದು ಗೊತ್ತಿರಲಿಲ್ಲ. ಆದರೆ ಅವರ ಹತ್ಯೆಯ ಕಂಪನಗಳು ದೇಶದ ಬಹಳ ಕಡೆ ನಕ್ಸಲ್ ಚಳುವಳಿಯ ಕೇಂದ್ರಗಳಲ್ಲಿ ಉಂಟಾದವು.

ಸಾಕೇತ್ ರಂಥ ಹಲವಾರು ನಾಯಕರ ಸಾವುಗಳು ಈಗಲೂ ಸಂಭವಿಸುತ್ತಿವೆ. ಆ ಸಾವಿನ ಪ್ರತಿಕಾರಗಳೂ ಮೊನ್ನೆ ಛತೀಸಗಡ್ ರಾಜ್ಯದ ಬಸ್ತರ್ ನ ದರ್ಬಾಘಾಟಿಯ ದಟ್ಟಾರಣ್ಯದಲ್ಲಿ ನಕ್ಸಲರು ನಡೆಸಿದ ದಾಳಿಗಳ ರೂಪದಲ್ಲಿ ಅನುರಣಿಸುತ್ತಲೇ ಇವೆ. ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪ ಮಾಡುತ್ತಲೇ ಇವೆ. Naxalism is the biggest threat to the internal security of the country ಎಂದು ನಮ್ಮ ಪ್ರಧಾನಿ ವರ್ಷಗಳ ಹಿಂದೆಯೇ ಹೇಳಿದ್ದರು. ನಕ್ಸಲಿಜಂ ನ ಬೆಳವಣಿಗೆಗೆ ಕಾರಣವಾದ ಸ್ಥಿತಿಗತಿಗಳ ಸುಧಾರಣೆಗೆ ಸರಕಾರಗಳು ಏನಾದರೂ ಮಾಡಿವೆಯಾ ಎಂದು ನೋಡಿದರೆ.., ಊಂಹೂ, ಒಂದೋ ನಕ್ಸಲ್ ಸಮಸ್ಯೆ ಬರಿದೇ ಕಾನೂನು ಸುವ್ಯವಸ್ಥೆಯ ಸಮಸ್ಯೆ ಎಂದು ಪರಿಗಣಿಸಿ ಇಂಥ ಘಟನೆಗಳು ಸಂಭವಿಸಿದಾಗ ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಕೈ ತೊಳೆದುಕೊಳ್ಳುತ್ತಿವೆ ಇಲ್ಲವೇ ಹಲವಾರು ಹಗರಣಗಳಲ್ಲಿ ಹೂತು ಹೋಗಿವೆ.

Source :  http://avadhimag.com/

Comments