ಶ್ರೀ ಸಾಯಿ ಸಚ್ಚರಿತ್ರೆಶ್ರೀ ಗುರುಭ್ಯೋ ನಮಃ

 

ಶ್ರೀ ಮಾತಾಜಿ ಕೃಷ್ಣಪ್ರಿಯರವರು ಶ್ರೀಬಾಬಾ ಅವರ ಚರಿತ್ರೆಯನ್ನು ಪಾರಾಯಣ ಗ್ರಂಥದ ರೂಪದಲ್ಲಿ ತೆಲುಗಿನಲ್ಲಿ ರಚಿಸಿದ್ದಾರೆ. ಶ್ರೀ ಬಾಬಾ ಅವರ ನಿಜ ಜೀವನದ ಅನೇಕ ನಿತ್ಯಘಟನೆಗಳನ್ನು ಓದುಗರಿಗೆ ವಿವರಿಸುತ್ತ ಸದ್ಗುರು ಶ್ರೀ ಮಾತಾಜಿಯವರು ಶ್ರೀಬಾಬಾ ಅವರ ವಿಷೇಶವಾದ ವ್ಯಕ್ತಿತ್ವ, ದೈವತ್ವ, ಭಕ್ತರ ಮೇಲೆ ಅವರಿಗಿರುವ ಅಪಾರವಾದ ಪ್ರೀತಿ ವಾತ್ಸಲ್ಯ, ಅವರ ಬೋಧನಾ ಪದ್ಧತಿ, ಅವರ ವಿಚಾರಗಳು, ಚಮತ್ಕಾರಯುಕ್ತ ಲೀಲೆಗಳು ಮುಂತಾದವುಗಳನ್ನು ಕೃತಿಯುದ್ದಕ್ಕೂ ಮನದಟ್ಟು ಮಾಡಿಕೊಡುತ್ತ ಹೋಗುತ್ತಾರೆ. ಶ್ರೀಬಾಬಾಗೆ ಪ್ರಿಯವಾದ ಏಳು ತತ್ವಗಳಾದ ಪ್ರೇಮ, ದಯೆ, ಭಕ್ತಿ, ವಿಶ್ವಾಸ, ಸಮತೆ, ಕರುಣೆ ಮತ್ತು ಶಾಂತಿಗಳನ್ನು ಓದುಗರಿಗೆ ಅರ್ಥವಾಗುವಂತೆ ಸರಳವಾದ ಮಾತುಗಳಲ್ಲಿ ವಿವರಿಸಿದ್ದಾರೆ.

 

ಮೇಲುನೋಟಕ್ಕೆ ಸಾಧಾರಣ ಕಥೆಗಳಂತೆ ಕಂಡರೂ ಶ್ರೀ ಬಾಬಾ ಅವರು ತಮ್ಮ ಭಕ್ತರಿಗೆ ಹೇಳುವ ಒಂದೊಂದು ಕಥೆಯೂ ನಮ್ಮ ಜೀವನಕ್ಕೆ ಒಂದೊಂದು ದಾರಿದೀಪದಂತಿದೆ. ಅವರು ಬೋಧಿಸಲು ಉಪಯೋಗಿಸಿದ ಈ ಸರಳ ಪದ್ಧತಿ ಎಲ್ಲರ ಮನಸ್ಸನ್ನೂ ಸುಲಭವಾಗಿ ಮುಟ್ಟುತ್ತದಲ್ಲದೇ ಹೆಚ್ಚು ವಿದ್ಯಾವಂತರಲ್ಲದ ಸಾಧಾರಣ ಜನರಿಗೂ ಅವರ ಬೋಧನೆಗಳು ಮನದಟ್ಟಾಗುತ್ತವೆ. ಹಾಗೆಯೇ ಶ್ರೀ ಬಾಬಾ ಅವರ ಲೀಲೆಗಳು ತಮ್ಮ ಭಕ್ತರಿಗೆ ಕರ್ಮಮಾರ್ಗ, ಭಕ್ತಿಮಾರ್ಗ ಹಾಗೂ ಜ್ಞಾನಮಾರ್ಗಗಳನ್ನು ತೋರುವ ದಿಕ್ಸೂಚಿಗಳಾಗಿವೆ.

 

ಬಾಬಾ ಅವರ ತತ್ವಗಳನ್ನು ವಿವರಿಸಲು ಶ್ರೀ ಮಾತಾಜಿಯವರು ಭಗವದ್ಗೀತೆಯ ಅನೇಕ ಶ್ಲೋಕಗಳನ್ನು ಬಳಸಿಕೊಂಡಿದ್ದಾರೆ. ಶ್ರೀ ಬಾಬಾರವರು ಕೂಡ ಭಗವದ್ಗೀತೆಯೊಂದೇ ಅಲ್ಲದೆ ಮತ್ತೇನೇಕ ಭಗವದ್ಗ್ರಂಥಗಳ ಮೂಲಕ ತಮ್ಮ ಶಿಷ್ಯರಿಗೆ ಬೋಧಿಸಿ ಸನ್ಮಾರ್ಗ ತೋರಿಸಿದ್ದಾರೆ. ಆದ್ದರಿಂದ ಈ ಗ್ರಂಥದಲ್ಲಿ ನಮ್ಮ ಪರಂಪರೆಯ ಅನೇಕ ಭಗವದ್ಗ್ರಂಥಗಳ ಸಾರವನ್ನು ಕೂಡ ಕಾಣಬಹುದು.

 

ಈ ಪಾರಾಯಣ ಗ್ರಂಥದ ತೆಲುಗಿನ ಅವತರಣಿಕೆಯನ್ನು ಸಾವಿರಾರು ಜನ ಪಾರಾಯಣ ಮಾಡಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಂಡಿದ್ದಾರೆ. ಈಗ ಅಂತಹ ಅವಕಾಶ ಈಗ ಕನ್ನಡದ ಜನತೆಗೂ ಲಭಿಸಿದೆ. ಈ ಗ್ರಂಥದ ಪಾರಾಯಣ ಕ್ರಮವನ್ನು ವಿಶದವಾಗಿ ವಿವರಿಸಲಾಗಿದೆ. ಇದರ ಲಾಭವನ್ನು ಪಡೆದು ಓದುಗರು ಯಾವುದೇ ಶಂಕೆಯಿಲ್ಲದೆ ತಮ್ಮ ಇಷ್ಟಕಾಮ್ಯಗಳನ್ನು ಪೂರ್ತಿಗೊಳಿಸಿಕೊಳ್ಳಬಹುದಾಗಿದೆ. ಎಲ್ಲರೂ ಈ ಸದವಕಾಶವನ್ನು ಉಪಯೋಗಿಸಿಕೊಂಡು ಶ್ರೀ ಸಾಯಿನಾಥನ ಕೃಪೆಗೆ ಪಾತ್ರರಾಗಿ ತಮ್ಮ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವರೆಂದು ಆಶಿಸುತ್ತೇನೆ.

 

ನನಗೆ ಈ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಲು ಅವಕಾಶ ಮಾಡಿಕೊಟ್ಟು, ಶ್ರೀ ಸಾಯಿನಾಥನ ದಿವ್ಯ ಚರಿತ್ರೆಯನ್ನು ಅರಿಯುವ ಸದವಕಾಶವನ್ನು ನೀಡಿದ ಶ್ರೀ ಸಾಯಿಕೃಷ್ಣ ಸೇವಾ ಸಮಿತಿಯವರಿಗೆ ನನ್ನ ಅನಂತಾನಂತ ಧನ್ಯವಾದಗಳು. ಇವರಲ್ಲಿ ಮುಖ್ಯವಾಗಿ ಮಾತಾಜಿಯವರ ಸಹೋದರಿ, ಶಿಷ್ಯೆ ಹಾಗೂ ಸಮಿತಿಯ ಅಧ್ಯಕ್ಷಿಣಿಯವರಾದ ಶ್ರೀಮತಿ ವಕುಳಮಾಲ ಅವರಿಗೆ, ಮಾತಾಜಿಯವರ ಸಹೋದರಿ ಹಾಗೂ ಶಿಷ್ಯೆಯಾದ ಶ್ರೀಮತಿ ಶ್ಯಾಮಲ ಅವರಿಗೆ, ಮತ್ತು ಸಮಿತಿಯ ಸದಸ್ಯರಾದ ಶ್ರೀಯುತ ಸೂರಂಪುಡಿ ವೆಂಕಟೇಶ್ವರ ರಾವ್ ಅವರಿಗೆ ನನ್ನ ಧನ್ಯವಾದಗಳು. ನನ್ನ ಮೂಲಕ ಈ ಗ್ರಂಥವನ್ನು ಹೊರತಂದ ಶ್ರೀ ಸಾಯಿನಾಥನಿಗೆ ನನ್ನ ವಿನಮ್ರ ಪ್ರಣಾಮಗಳು.

 

ಇತಿ

ಸರ್ವಂ ಶ್ರೀ ಸಾಯಿನಾಥಾರ್ಪಣಮಸ್ತು.

 

                                                            - ಎಸ್. ಕೃಷ್ಣಮೂರ್ತಿ

ಈ ಪುಸ್ತಕವನ್ನು ಪಡೆಯಲು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಿ

ಎಸ್. ಶ್ರೀನಿವಾಸ ರಾವ್,                

643, ಮೊದಲನೆ ಮಹಡಿ,                 

3 ನೇ ಅಡ್ಡರಸ್ತೆ, ಮಹಾಲಕ್ಷ್ಮಿ ಲೇಔಟ್,

ಬೆಂಗಳೂರು – 560 086

(ph: 080 23597874                              

            ಶನಿವಾರ ಮತ್ತು ಭಾನುವಾರ

            ಬೆ. 10 ರಿಂದ ಸಂ. 6)


ಈ ಪುಸ್ತಕ ಮಹಾಲಕ್ಷ್ಮಿ ಲೇಔಟ್‍ನ ಆಂಜನೇಯ ದೇವಸ್ಥಾನದ ಪುಸ್ತಕ ಭಂಡಾರದಲ್ಲಿಯೂ ಲಭ್ಯವಿದೆ.


ಬೆಲೆ:  ರೂ 75 ಮಾತ್ರ.