ನೀಲು

                                  ನೀಲು ಕಾವ್ಯ

ಕನಸು, ಕಾತರವಿಲ್ಲದ 
ಪ್ರೇಮ
ತುಂಬೆ ಗಿಡ ಕೂಡ ಇಲ್ಲದ 
ಬಯಲಿನಂತೆ 
 

ತಪಸ್ಸನ್ನು ಮುಕ್ತಿಗಾಗಿ
ಮಾಡುವವರಿಗಿಂತ
ಚಿಂತೆಯನ್ನು ಗೆಳತಿಯ
ಪ್ರತ್ಯಕ್ಷಕ್ಕಾಗಿ ಮಾಡುವವರೇ 
ಹೆಚ್ಚು


ಹೃದಯೇಶ,
ಸೂರ್ಯನಿಗೆ ಒಂದೇ ಒಂದು ಸಲ
ಅಮಲು ಹೆಚ್ಚಾಗಿ
ಅಡಿ ತಪ್ಪಿದರೆ
ನಮ್ಮ ಅಮರ ಪ್ರೇಮ ಸ್ತಬ್ಧ


ಪ್ರೇಮ ಎಂಬ ಮಿಂಚು
ಕಣ್ಮರೆಯಾದ ದಿನ
ಉಣ್ಣಲು ಅನ್ನ, ಇರಲು ಗುಡಿಸಲು
ಬೇಕಾಗುತ್ತದೆ


ನನ್ನ ಕಣ್ಣುಗಳಲ್ಲಿ
ಒಬ್ಬ ಮಾದಕತೆಯನ್ನು
ಇನ್ನೊಬ್ಬ ಮಂದಸ್ನುತವನ್ನು
ಮತೊಬ್ಬ ಮಾಂತ್ರಿಕತೆಯನ್ನು
ಕಂಡರೆ
ನನ್ನವನು
ಸೂಕ್ಷ್ಮ ಶೋಕವನ್ನು ಗಮನಿಸಿದ 


ಹೃದಯದ ಗುಟ್ಟುಗಳನ್ನು
ಇನಿಯನಿಗೆ ಕೂಡ
ಬಿಟ್ಟುಕೊಡಲಾರದ ನನ್ನ
ಕಣ್ಣುಗಳನ್ನು ವಂಚಿಸಿ
ನನ್ನ ಲೇಖನಿ
ಹಾಡಿ ಕುಣಿಯುವುದು


ಪ್ರೀತಿಸುವ ಇಬ್ಬರು
ಮೌನವಾಗಿ ಕೂತು
ನೆಮ್ಮದಿಯಾಗಿರುವುದು
ಸುಖದೃಶ್ಯ


ಮೊಘಲ್ ದೊರೆಗಳಂತೆ
ಪ್ರೇಮಿ ಕೂಡ
ಕೇವಲ ಅಹಂಕಾರತೆ
ನಿನ್ನ ದೊರೆಯಾಗುವ ಅಪಾಯವಿದೆ
-ಎಚ್ಚರಿಕೆ!


ಪ್ರೀತಿಯಿಂದ ನನ್ನ
ಕಾಲ್ಬೆರಳಿಗೆ ಮುತ್ತಿಟ್ಟ ಚೆಲುವ
ನನ್ನ ಹೃದಯ ಸಿಂಹಾಸನವ
ಗೆದ್ದುಕೊಂಡ


ಜನಸಾಮಾನ್ಯನ
ಮೂಕ ಅಳಲಿನಲ್ಲಿ
ಸಾಮ್ರಾಜ್ಯಗಳ ಬೀಲಿಸುವ
ತಪಃಶಕ್ತಿ ಇದೆ


ಚೆಲುವಾ,
ಚಲಿಸುವ ಗೋಳದ ಮೇಲೆ
ನಡೆಯುತ್ತಿರುವ ನಾವು
ಅಚಲ ಪ್ರೇಮದ ಬಗ್ಗೆ
ಪಣತೊಡುವ
ಹಾಸ್ಯಾಸ್ಪದರು ಆಗದಿರೋಣ


ಬಿಸಿಲು, ಸೆಖೆಯ ದಿವಸ
ಹಠಾತ್ತನೆ ಬಿದ್ದ
ಮೂಡಿದ ಕಾಮಾನಬಿಲ್ಲು
ನನ್ನ ಮನಸ್ಸು ಕೂಡ


ನನಗೆ ಅಜ್ಜಿಯ ಹಿತವಚನ:
"ನಿನ್ನ ವಿದ್ಯೆಗೆ ಬದಲು
ನಿನ್ನ ಲಜ್ಜೆ ನಡೆಸಿದಂತೆ
ಬದುಕು"


ಸೊಟ್ಟ ಮೋರೆಯ ಹುಡುಗಿ
ಕನ್ನಡಿಗೆ
ತಾನು ಜೀನತಳೆಂದು
ಮನವೊಲಿಸುವುದು
ಬದುಕಿನ ಮೋಜು


ನನ್ನ ಇನಿಯನ ಹೃದಯದ
ಸ್ಪಂದನಕ್ಕೆ ಕಿವಿ ಸಲ್ಲಿಸಿದ ನನಗೆ
ಬೇರೆ ಸಂಗೀತ
ಕೇವಲ ಗದ್ದಲ


ಯಾವ ವಸಂತದ ಯಾವ ಗಳಿಗೆ
ಕನ್ಯೆಗೆ ಕಾಮನೆ ಮೂಡಿತು,
ಎಂದು ಕೇಳಿದರೆ
ಗ್ರೀಷ್ಮ ಋತು ಕಲಾವಿದನಂತೆ
ವಿನಮ್ರ ಮೌನ ತಾಳಿತು


ಹಕ್ಕಿ ಪ್ರಿಯಕರನಿಗಾಗಿ
ಗೂಡು ಕಟ್ಟಿದರೆ
ನಾನು
ನನ್ನವನಿಗಾಗಿ
ಕವನಗಳ ಕಟ್ಟಿದೆ


ಎರೆ ನೆಲದಿಂದ ಹಬ್ಬಿದ
ಬೆಳ್ಳನೆ ಜಾಜಿಯ ಮೇಲೆ
ಕೆಂಪು ರೆಕ್ಕೆಯ ದುಂಬಿ
ಕಾಮನ ಬಿಲ್ಲಿನಂತೆ ಕೂತಿದೆ


ಪ್ರೇಮಿಸಲು ನಿರ್ಧರಿಸುವ
ಕ್ರಿಯೆಯಲ್ಲಿಯೇ
ಪ್ರೇಮ
ನಿರ್ಗಮಿಸುವ ಸೂಚನೆಗಳಿರುತ್ತವೆ


ಪ್ರೇಮದ ದೋಣೀಯಲ್ಲಿ
ಹುಚ್ಚೆದ್ದು ಪ್ರೇಮಿಸಬೇಡ
ಅಮರ ಪ್ರೇಮದ ದೋಣಿಗೆ
ಮುಳುಗುವ ದುರಭ್ಯಾಸವಿದೆ


ಪ್ರೇಮದ ಸಂಗಮ ಕೆಲವೊಮ್ಮೆ
ಹುಟ್ಟು ಮತ್ತು ಸಾವಿನ
ಬೆತ್ತಲೆ
ಭೇಟಿಯಂತೆ ತೋರುವುದು


ಎಳೆಯ ಹುಡುಗಿಯ
ತುಂಟ ಕೂದಲು
ಮೊನ್ನೆ ಮದುವೆಯ ಮೂಲಕ
ತುರುಬಿನಲ್ಲಿ
ಗಂಭೀರವಾದದ್ದು
ನನ್ನ ಬೇಸರಗೊಳಿಸಿದೆ


ಇಷ್ಟವಿಲ್ಲದವನ
ತುದಿಬೆರಳ
ಸ್ಪರ್ಶದಲ್ಲಿ ಕೂಡ ನರಕವಿದೆ


ಪ್ರೇಮ ಶಿಕ್ಷಣದಲ್ಲಿ ಡಾಕ್ಟರೇಟು ಪಡೆದು
ಪ್ರೇಮಿಸಿದೆ ಹುಡುಗ ಹುಡುಗಿ
ಇಡೀ ರಾತ್ರಿ ಗ್ರಂಥಗಳಿಂದ
ಪ್ರೇಮ ವಾಕ್ಯಗಳನ್ನು ಹೇಳೂತ್ತ
ಬೆರಳಿಗೆ ಬೆರಳು ಕೂಡ ತಾಗಿಸದೆ
ಬೆಳಕು ಹರಿಸಿದರು.


ಹುಟ್ಟು ಹಠಮಾರಿಯೊಬ್ಬ
ಕವಿಯಾಗಲು ಪಣ ತೊಟ್ಟು
ನಿತ್ಯ ಪದಭೇದಿಯಲ್ಲಿ ಬಳಲಿ
ಹಲ್ಲು ಕಡಿಯುತ್ತಿದ್ದಾಗ
ವಸಂತದ ಮಾವಿನ ಮರ
ಕೋಗಿಲೆ ಕಂಠದಲ್ಲಿ ಹಾಡಿ
ತನಗೇ ಗೊತ್ತಿಲ್ಲದೆ
ಕವಿಯಾಯಿತು


ನೀಲು ಯಾರು ಎಂದು ಕೇಳಿದಿರಾ?

ಹುಣ್ಣಿಮೆಯ ಬೆಳದಿಂಗಳು ಕಾಮಿನಿಯಲ್ಲಿ
ಪ್ರೇಮ ಉಕ್ಕಿಸಿದ ವೇಳೆ
ಇನಿಯನಿಲ್ಲದ ಹಾಸಿಗಯಲ್ಲಿ
ಬಿಕ್ಕುಳಿಸಿ ಅತ್ತು ಅವನಿಗಾಗಿ ಕಾದು
ಆತ ಹಿಂದಿರುಗುವ ಹೊತ್ತಿಗೆ ಅಮಾವಾಸೈ
ಕವಿದಿತ್ತು
ಮತ್ತೆ ಬೆಳದಿಂಗಳ ಹುಣ್ಣಿಮೆಗೆ ಕಾಯುತ್ತಾ
ಅವಳು ಇಟ್ಟ ನಿಟ್ಟುಸಿರಲ್ಲಿ
ಹುಟ್ಟಿದವಳು ನೀಲು


ಬೇಂದ್ರೆಯ ಕೆಂಡದಂಥ ತುಟಿ ಮತ್ತು
ಹೂವಿನಂಥ ಕವನ
ನನ್ನಂಥ ಲಂಗದವರ
ಮೈ ಮನಸ್ಸು ಬೆಚ್ಚಗೆ ಚಿಗುರಿಸಿ
ವೈಯ್ಯಾರ ಮತ್ತು ವೈರಾಗ್ಯದ ನಡುವೆ
ಗೆರೆ ಬರೆಯುತ್ತವೆಂದು
ಸದಾ ಕನ್ನಡ ರತ್ನಗಳ ಸುರಿಯುತ್ತವೆಂದು
ತಿಳಿದದ್ದು ಕೊಂಚವೇ ಕೊಂಚ
ಮರುಳಾಯಿತೆಂಬಂತೆ
ತುಟಿಗಳು ತಣ್ಣಗಾದವು


ಅಖಂಡ ಬ್ರಹ್ಮಚಾರಿ ಬಸವ
ತನ್ನ ಅಚಲತೆಯ ಬಗ್ಗೆ ಪರೀಕ್ಷೆ ಮಾಡಲು
ಸುರಸುಂದರಿಯ ಎದೆ ಮೇಲೆ
ತಲೆಯನ್ನಿಟ್ಟು
ಆನಂದದಿಂದ ಆ ಪರೀಕ್ಷೆಯಲ್ಲಿ ಫೇಲಾದ

ಪತ್ರಗಳ ಮೂಲಕ ಪ್ರೇಮ ಕುದುರಿಸಿದ
ನಮ್ಮ ಮಿತ್ರನೊಬ್ಬ ಕೊನೆಗೆ
ಪತ್ರ ಬರೆದವಳನ್ನು ಕಂಡು
ದಿಗ್ಬ್ರಾಂತನಾಗಿ ನಿಂತು, ಪತ್ರಗಳನ್ನು
ಅಪ್ಪಿಕೊಂಡು ಅಳತೊಡಗಿದ


ಪ್ರಿಯ ಸಖ,
ಇಲ್ಲಿಯ ಸುಖದ ಪ್ರತಿಯೊಂದು ಹನಿಗೂ
ದುಃಖದ ಸುಂಕ ಕೊಡಬೇಕಾಗಿರುವುದು
ನಿನ್ನ ಸ್ಪರ್ಶದ ಕಿಡಿಯ ಆಲಿಸಿಲ್ಲ,
ಇದು ನಿಜವಾದ ಮುಗ್ಧತೆ.


ಬರ್ನಾಡ್ ಷಾ ತನ್ನ
ಅಮೋಘ ಭಾಷಣದಲ್ಲಿ
ಸಸ್ಯಾಹಾರ ಹೊಗಳುತ್ತಿದ್ದಾಗ
ಹುಡುಗಿ
ಇನಿಯನ
ತುಟಿ ಕಿಚ್ಚಿ ನಕ್ಕಳು


ನಮ್ಮೂರ ಪೋಲಿ ಹುಡುಗರು
ವೈಯ್ಯಾರಿ ರಾಮಿಯ
ಬಣ್ಣಿಸುವ ರೀತಿಃ
"ರಾಮಿಯ ಸೊಂಟವ ಕಂಡು
ಹುಲಿಸೈತ
ಒಂಟಿಗಾಲಲ್ಲಿ ಕೂತು
ಅಂಗಲಾಚಿತು"


ಟಾಂಗ ಹೊಡೆದು ಸೋತು
ಮನೆಗೆ ಬಂದ ಹುಸೇನಿ
ಖುರಾನಿನ ಮೇಲೆ
ನಗುವ ಮಲ್ಲಿಗೆ ಕಂಡು
ದಿಲ್ಲಗಿಯಾಗಿ
ಮಲ್ಲಿಗೆ ಕದ್ದು ತಂದ
ಮಗನ್ನ
ಬೈಯುವುದನ್ನೇ ಮರೆತ


ನಟಭಯಂಕರರ ಭೂಜರ ಬಟನೆಯಿಂದ
ಜನ
ತಲೆರೋಸಿ ಕೂಗುತ್ತಿದ್ದಾಗ
ಮೋಹಕ ನಟಿ ರಂಗಕ್ಕೆ ಬಂದು ಮೈಮುರಿದು ಆಕಳಿಸಿದೊಡನೆ
ಉಲ್ಲಾಸದಿಂದ ಚಪ್ಪಾಳೆ ತಟ್ಟಿದರು


ತುಂಬು ಚಂದಿರ ಮತ್ತು ಹೂವುಗಳು
ಸಂತೈಸುತ್ತಿವೆ
ಹಾಡುತ್ತ ಕಳೆದು
ಕವಿಯ ಅರವತ್ತು ಮೂರ್ಖವರ್ಷಗಳನ್ನ


ಈ ಚಳಿಯ ಎದುರಿಸಲು
ಪಶುಪಕ್ಷಿಗಳಿಗೆ
ರೋಮ, ರೆಕ್ಕೆ ಕೊಟ್ಟ ದೇವರು
ಮನುಷ್ಯನಿಗೆ
ಪ್ರೇಮವನ್ನಾದರೂ ಕೊಡದಿದ್ದರೆ
ಅವನನ್ನು
ಹೇಗೆ ದೇವರೆನ್ನುವುದು?


ಡಿಸೆಂಬರ್ ಬಂತೆಂದರೆ
ಬೆಂಗಳೂರು ಮೋಹಿನಿಯರಿಗೆ
ಗಂಡುಗಳ
ಉಣ್ಣೆ ಉಡುಪು
ಪ್ರೇಮಗೀತೆಯಂತೆ
ಕಾಣುತ್ತದೆ


ಬದುಕಿನ ಘೋರ ದುರಂತ ಯಾವುದೆಂದರೆ
ಚಳಿಯಲ್ಲಿ ಗಂಡನ ಪತ್ರ ಓದುತ್ತಾ
ತವರು ಮನೆಯಲ್ಲಿ ಒಂಟಿಯಾಗಿ
ಮಲಗುವುದು- ಅಂದಳು ಗೆಳತಿ    


ಪ್ರೇಮವಿಲ್ಲದ ಸುಬ್ಬು ಬೆಂಗಳೂರ ಚಳಿಯಲ್ಲಿ
ಬ್ರಿಗೇಡ್ ರೋಡಲ್ಲಿ ತಳಕುಹಾಕಿ ನಡೆವ
ಪ್ರೇಮಿಗಳ ಹಿಂದೆ ಬೆಚ್ಚಗೆ ನಡೆದ


ಕಳೆದ ಐವತ್ತೊಂಭತ್ತು ಚಳಿಗಾಲ ನಲ್ಲೆಯೊಂದೆಗೆ
ಕೆಂಪು ತೋಟದಲ್ಲಿ ನಡೆಯುತ್ತಿದ್ದ ಮುದುಕ
ಈ ಸಲ ಗೆಳತಿ ಇಲ್ಲದೆ
ಒಬ್ಬಂಟಿ ಕೂತು ಕಂಬಳಿ ಹೊದ್ದು ಷಷ್ಟ್ಯಬ್ಭಿ ಆಚರಿಸಿರಿದರು


ಮೂವತ್ತೈದು ವರ್ಷ ನಿಷ್ಠೆಯಿಂದ ಗುಮಾಸ್ತೆಯಾಗಿದ್ದು
ಮೊನ್ನೆ ನಿವೃತ್ತನಾದ ನಮ್ಮ ಸುಬ್ಬಣ್ಣನ
ಒಂದೇ ಒಂದು ಪ್ರೇಮಪ್ರಕರಣ ಯಾವುದೆಂದರೆ,
ಅವನನ್ನು ಆಫೀಸಿನಿಂದ ಬೀಳ್ಕೊಡುವ ಸಭೆಯಲ್ಲಿ
ಟೈಪಿಸ್ಟ್ ಪ್ರೇಮಲೀಳಾ ಹೂಮಾಲೆ ಹಾಕಿ, ಅವನ
ಕೈ ಕುಲುಕಿದ್ದು


ಮೊನ್ನೆ ಜನವರಿ ಒಂದನೆಯ ತಾರೀಖು
ಮತ್ತೊಂದು ವರ್ಷ ಕಳೆದುಹೋದ ಬಗ್ಗೆ
ಪರಿತಪಿಸಿದ ನನ್ನನ್ನು
ಪ್ರೀತಿಯಿಂದ ನೋಡಿದ ಆತ ಕಲಿಸಿದ್ದು:
ಎಲ್ಲರೂ ಮುಪ್ಪನ್ನು ಗೆಲ್ಲುವುದ್
ಪ್ರೀತಿಯಿಂದ ಮಾತ್ರ


"ತಮ್ಮ ರಾಜಕೀಯ ಸಿದ್ಧಾಂತವೇನು?" ಎಂದು
ಮಂಡ್ಯದ ನಾಯಕರನ್ನು ಕೇಳಿದರೆ ತಬ್ಬಿಬ್ಬಾಗಿ
"ಸಿದ್ಧಾಂತವಾ?
ನಾನು ಯಾವುದಕ್ಕೂ ಸೊದ್ಧ" ಎಂದು ಟವಲು ಕೊಡವಿ
ರೆಡಿಯಾದರು


ಪ್ರತಿಯೊಬ್ಬ ಅಧಿಕಾರವಂತನನ್ನೂ
ದುರ್ಬಲಗೊಳಿಸುವುದು ಯಾವುದು ಎಂದು ನೋಡಿದರೆ
ಆತನನ್ನು ಜನರಿಂದಲೇ ದೂರವಿಡುವ
ಅಧಿಕಾರ
ಎಂಬುದು ಅಚ್ಚರಿಯ ವಿಷಯವಲ್ಲವೆ?


ಪಂಚಾಂಗ, ನಕ್ಷತ್ರಗಳನ್ನು ನೋಡಿ ಪ್ರೇಮಿಸಿ
ಮಕ್ಕಳ್ಳಿಲ್ಲದೆ ನಶಿಸಿದವರ ಕಂಡು
ಆಕಾಶದ ಚುಕ್ಕಿಗಳು ಕೂಡ ನಕ್ಕವು


ಸಮುದ್ರದಲ್ಲಿ ಕೊಬ್ಬಿನಿಂದ ಮೆರೆವ
ಅಂಬಿಗನಿಗೆ
ಚಂಡಮಾರುತ
ಕಲಿಸಿದ ಮಾರುತ ಪಾಠ
ವಿನಯ


ಹೆಂಡತಿ ಸತ್ತ ದಿವಸ ದುಃಖ ತಡೆಯಲಾರದೆ
ಮದ್ಯಪಾನ ಮಾಡುತ್ತ ಕೂತ ಶ್ರೀಕಂಠ
ಏಳುವಷ್ಟರಲ್ಲಿ
ಸತ್ತದ್ದು ಯಾರೆಂದು ಎಲ್ಲರನ್ನೂ ಕೇಳಿದ


ಮುಪ್ಪು ಸಾವಿನ ತೀವ್ರ ಭಯವಿಲ್ಲದ
ದುಡಿವ ಬಡವನಾಗಿ ಜೀವಿಸತೊಡಗಿದ
ಖ್ಯಾತ ಟಾಲ್ ಸ್ಟಾಯ್ ಕಂಡುಕೊಂಡದ್ದು,
ಸಾವಿನ ಭಯವೇ
ಎಲ್ಲ ಕಲೆಗಳ, ಚಿಂತನೆಗಳ ಸ್ಪೂರ್ತಿComments