Home

ನಾನು ಸುಶ್ರುತ.. ಆ ಹೆಸರು ಕರೆಯಲಿಕ್ಕೆ ಕಷ್ಟ ಅಂತ ನನ್ನನ್ನು ಕೆಲವರು ’ಸುಶ್’ ಅಂತ, ಕೆಲವರು ’ಸುಶೀ’ ಅಂತ, ಊರಿನ ಹುಡುಗರು ’ಸೂರೂ’ ಅಂತ, ಪ್ರೀತಿ ಹೆಚ್ಚಾದವರು ’ಚುಚ್ಚುತಾ’ ಅಂತ, ಸಮಯದ ಅಭಾವವಿರುವವರು ಬರೀ ’ಸು’ ಅಂತ.. ಹೀಗೆ ಅನೇಕ ಹೆಸರುಗಳಿಂದ ಕರೆಯಲ್ಪಟ್ಟು ನಾನು ಹೆಸರು ಮಾಡಿದ್ದೇನೆ. ಅಪ್ಪ ಶ್ರೀಧರಮೂರ್ತಿ. ಅಮ್ಮ ಗೌರಿ. ಹೆಂಡತಿ ದಿವ್ಯಾ.

ದೊಡ್ಡೇರಿ ಎಂಬ ಮಲೆನಾಡ ಹಳ್ಳಿಯಿಂದ ಉದ್ಯೋಗ ಹುಡುಕಿಕೊಂಡು ರಾಜಧಾನಿ ಬೆಂಗಳೂರಿಗೆ ಬಂದಿದ್ದು 2003ರಲ್ಲಿ. ಲಾ ಫರ್ಮ್ ಒಂದರಲ್ಲಿ ಕಾನೂನು ಸಲಹೆಗಾರ. ನಗರ ಜೀವನದ ಏಕತಾನತೆ, ಟ್ರಾಫಿಕ್ಕು, ಸ್ವಂತಕ್ಕೆಂದು ಖರ್ಚು ಮಾಡಲು ಸಮಯವೇ ಸಿಗದ ಜಂಜಡಗಳ ನಡುವೆ, ಕೇವಲ ನಿನ್ನೆಯ ನೆನಪುಗಳು ಮತ್ತು ನಾಳೆಯ ಕನಸುಗಳ ಆಧಾರದ ಮೇಲೆ ’ಇಂದು’ಗಳನ್ನು ತಳ್ಳುತ್ತಿರುವ ಸಾವಿರಾರು ಜನದ ಪೈಕಿ ನಾನು ಮತ್ತೊಬ್ಬ. ದಿನಕ್ಕೊಮ್ಮೆ ಊರಿಗೆ ಫೋನ್ ಮಾಡಿ ಅಮ್ಮ-ಅಪ್ಪರ ಬಳಿ ಮಾತನಾಡದಿದ್ದರೆ ಸಮಾಧಾನವಿಲ್ಲ.

ನಾನು ಮೌನಿ.. ಆಡಬೇಕಾದ ಸಂದರ್ಭ ಬಂದಾಗ ಮಾತ್ರ ಮಾತನಾಡುತ್ತೇನೆ. ಹರಟೆ ಕೊಚ್ಚುವುದಕ್ಕೆ, ಹೊಸಬರ ಜೊತೆ ಬೇಗನೆ ಬೆರೆಯುವುದಕ್ಕೆ ನನಗಾಗುವುದಿಲ್ಲ.

ನಾನು ಭಾವಜೀವಿ.. ಮರದ ಗೆಲ್ಲ ಮೇಲೆ ಸರಿದಾಡುವ ಇಣಿಚಿಯಾಟ ನೋಡುತ್ತಾ ದಿನವಿಡೀ ಕೂತಿರಬಲ್ಲೆ; ಯಾರೋ ಚಂದ ನಾಲ್ಕು ಮಾತಾಡಿದರೆ ಕರಗಿ ಹೋಗುತ್ತೇನೆ; ಚಂದಿರ, ಬೆಳದಿಂಗಳು, ಮಳೆ, ಪ್ರೀತಿ, ಇತ್ಯಾದಿ ಶಬ್ದಗಳು ನನಗೆ ಸುಂದರವೆಂಬಂತೆ ಭಾಸವಾಗುತ್ತವೆ; ’ಮೂಡೌಟು’, ’ಏನೋ ಒಂಥರಾ ಬೇಜಾರು’ ಇತ್ಯಾದಿ ಸಮಸ್ಯೆಗಳು ಆಗಾಗ ಕಾಡುತ್ತವೆ.

ಅಂತರ್ಮುಖಿ.. ಏಕಾಂತ ನನಗಿಷ್ಟ. ದಿನದ ಬಹುಪಾಲು ಸಮಯ ನನ್ನದೇ ಲಹರಿಗಳಲ್ಲಿ ತೇಲುತ್ತಿರುತ್ತೇನೆ. ಎಷ್ಟೆಲ್ಲ ಹೇಳಬೇಕು ಅಂದುಕೊಂಡದ್ದನ್ನು ಹೇಳದೇ ಒಳಗೇ ಇಟ್ಟುಕೊಂಡು, ಅದನ್ನೇ ಮಥಿಸುತ್ತಾ ಒದ್ದಾಡುತ್ತಿರುತ್ತೇನೆ. ಬಹುಶಃ ಅಂತರ್ಮುಖಿಗಳು ಎಂದರೆ ಅರೆಹುಚ್ಚರು.

ಕನಸುಗಾರ.. ಬುದ್ಧಿ ತಿಳಿದಾಗಿನಿಂದ ಮಾಡುತ್ತ ಬಂದಿರುವುದು ಇದೊಂದೇ: ಕನಸು ಕಾಣುವುದು! ’ಅವೆಲ್ಲ ನನಸಾಗಿದ್ದರೆ..’ ಅಂತ ಸಹ ಕನಸು ಕಾಣುವುದು ನನ್ನ ಕನಸು ಕಾಣುವ ಪರಮಾವಧಿ.

ಅಕ್ಷರಮೋಹಿ: ಚಿಕ್ಕವನಿದ್ದಾಗ ನನಗೆ ಅಪ್ಪ ಬಾಲಮಂಗಳ, ಚಂದಮಾಮ ತಂದುಕೊಡುತ್ತಿದ್ದ. ಆಮೇಲೆ, ನಿಧನಿಧಾನವಾಗಿ ಮನೆಗೆ ಬರುತ್ತಿದ್ದ ಬೇರೆ ಮ್ಯಾಗಜೀನುಗಳ ಮೇಲೆ, ಲೈಬ್ರರಿಯಿಂದ ತರುತ್ತಿದ್ದ ಪುಸ್ತಕಗಳ ಮೇಲೆ ಕಣ್ಣಾಡಿಸತೊಡಗಿದೆ. ಒಳ್ಳೆಯ ಪುಸ್ತಕಗಳನ್ನು ಕೊಂಡು ಓದುವ ನನ್ನ ಚಟದಿಂದಾಗಿ ಮನೆಯ ಗೂಡೊಂದು ಲೈಬ್ರರಿಯಾಗಿದೆ. ನಾನು ಓದದೇ ಇರಲಾರೆ.

ಸಂಗೀತ ಪ್ರೇಮಿ: ಕಲಿತಿಲ್ಲ. ರಾಗ-ತಾಳಗಳ ಜ್ಞಾನವೂ ಇಲ್ಲ. ಆದರೆ ಒಳ್ಳೆಯ ಹಾಡು ಕೇಳಿದರೆ ಹೃದಯ ಕುಣಿಯುತ್ತದೆ. ಮನಸು ಗೆಲುವಾಗುತ್ತದೆ. ಭಾವಗೀತೆ, ಒಳ್ಳೆಯ ಸಾಹಿತ್ಯವಿರುವ ಚಿತ್ರಗೀತೆಗಳು ನನ್ನನ್ನು ಬಾತ್‍ರೂಮ್ ಸಿಂಗರ್‌ನನ್ನಾಗಿ ಮಾಡಿವೆ.

ಮೌನಗಾಳ’.. ಅದು ನನ್ನ ಬ್ಲಾಗಿನ ಹೆಸರು. ಹೈಸ್ಕೂಲು ಕಾಲದಿಂದಲೇ ಬರೆಯುತ್ತಿದ್ದೆ. ಬರೆದಾದ ತಕ್ಷಣ ಅದು ಯಾರ ಕಣ್ಣಿಗೂ ಬೀಳದಂತೆ ಮುಚ್ಚಿಡುತ್ತಿದ್ದೆ. ಬೆಂಗಳೂರಿಗೆ ಬಂದು, ಕೆಲಸಕ್ಕೆ ಸೇರಿ, ಇಂಟರ್‌ನೆಟ್ ಎಂಬ ಮಾಯಾಜಾಲದ ಪರಿಚಯವಾಗಿ, ಅದರೊಳಗಿನ ಬ್ಲಾಗ್‍ಲೋಕ ಆಸಕ್ತಿ ಹುಟ್ಟಿಸಿ, ’ಏನಾದರಾಗಲಿ, ನೋಡೇ ಬಿಡೋಣ’ ಎಂದು ಧೈರ್ಯ ಮಾಡಿ ಶುರು ಮಾಡಿದ ಬ್ಲಾಗು ಅದು. ಬ್ಲಾಗು ನನಗೆ ಅನೇಕ ಹೊಸ ಸ್ನೇಹಿತರನ್ನೂ, ಅಕ್ಕರೆಯ ಅಕ್ಕಂದಿರನ್ನೂ, ಬೇಜಾರ ಬರುವಷ್ಟು ತಂಗಿಯರನ್ನೂ, ಮತ್ತೂ ಇನ್ಯಾರ್‍ಯಾರನ್ನೋ ತಂದುಕೊಟ್ಟಿದೆ. ತನ್ನ ಪರಿಮಿತಿಯಲ್ಲೇ ನನಗೊಂದು ’ಐಡೆಂಟಿಟಿ’ ಕೊಟ್ಟಿದೆ. ಪತ್ರಿಕೆಗಳು ನನ್ನ ಕೆಲವು ಕತೆ-ಕವನಗಳನ್ನು ಪ್ರಕಟಿಸಿವೆ.

ಪ್ರಣತಿ’: ಸಮಾನ ಮನಸ್ಕ ಗೆಳೆಯ-ಗೆಳತಿಯರೊಂದಿಗೆ ಸೇರಿ ಸ್ಥಾಪಿಸಿಕೊಂಡಿರುವ ಸಂಸ್ಥೆ. ಸಾಹಿತ್ಯ, ಸಂಸ್ಕೃತಿ ಮತ್ತು ಪ್ರಕೃತಿ -ಇದರ ಧ್ಯೇಯಗಳು.

ಚಿತ್ರಚಾಪ’: ನಾವೈವರು ಮಿತ್ರರು ಸೇರಿ ಬರೆದ ಪರಿಸರದ ಬಗೆಗಿನ ಕಥೆ, ಕವಿತೆ, ಲೇಖನ, ಪ್ರವಾಸ ಕಥನಗಳನ್ನೊಳಗೊಂಡ ಕೃತಿ. ಇದು ’ನಮ್ಮ’ ಮೊದಲ ಪುಸ್ತಕ.

ಹೊಳೆಬಾಗಿಲು’: ’ನನ್ನ’ ಮೊದಲ ಪುಸ್ತಕ. ಕನ್ನಡ ಪುಸ್ತಕ ಪ್ರಾಧಿಕಾರದ ೨೦೦೭ನೇ ಸಾಲಿನ ಯುವ ಬರಹಗಾರರ ಪ್ರೋತ್ಸಾಹ ಪ್ರಕಟಣೆ ವಿಭಾಗದಲ್ಲಿ ಆಯ್ಕೆಯಾದ ಲಲಿತ ಪ್ರಬಂಧಗಳ ಸಂಕಲನ. ಜೋಗಿಯವರ ಮುನ್ನುಡಿಯಿರುವ ಈ ಕೃತಿ, ೯ನೇ ಆಗಸ್ಟ್ ೨೦೦೯ರಂದು ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಲೋಕಾರ್ಪಣೆಯಾಯಿತು. ಸಾಹಿತಿ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಪುಸ್ತಕದ ಬಗ್ಗೆ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಅದಕ್ಕೆ ’ಅರಳು ಪ್ರಶಸ್ತಿ’ ಸಹ ಕೊಟ್ಟಿದೆ.

ಮಿಸಲೇನಿಯಸ್: ಪಿಕಾಸಾದವರು ಫ್ರೀಯಾಗಿ ಸ್ಪೇಸೊದಗಿಸದಿದ್ದರೆ ಇವನ್ನೆಲ್ಲಾ ನಾನು ಅಪ್‍ಲೋಡ್ ಮಾಡುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ. ಅಂತೂ ನನ್ನ ಬದುಕಿನ ತಿರುಗಾಟ ಮತ್ತು ತಿರುಗಾಟದ ಬದುಕಿನ ಒಂದಷ್ಟು ಫೋಟೋಗಳು ಇಲ್ಲಿವೆ. ಚಾರಣ ನನ್ನ ಮತ್ತೊಂದು ಹುಚ್ಚು. ಹೊಸ ಸ್ನೇಹಗಳಿಗೆ ಕೊಂಡಿಯಾಗಲು ಫೇಸ್‌ಬುಕ್ಕಿನಲ್ಲಿ ನನ್ನ ಪ್ರೊಫೈಲಿದೆ. ಟ್ವಿಟರಿನಲ್ಲೂ ಫಾಲೋ ಮಾಡಬಹುದು.

’ನನ್ನ ಬಗ್ಗೆ’ ಎಂದರೆ, ಬಹುಶಃ ಇಷ್ಟೇ..

ಅಥವಾ... ಇನ್ನೂ ತುಂಬಾ ಇರಬಹುದು.
myspace hit counters