ನನ್ನ ಕವನಗಳು


 

 

         ನನ್ನ ಮೊದಲ ಕವನ..

         ನೆನಪುಗಳಲ್ಲಿ ಬದುಕಲಾರೆ,
         ಕಣ್ಣೀರಿಗೆ ಬೆಲೆಕೊಡಲಾರೆ,
         ಆಸೆಗಳಿಗೆ ಜೀವಕೊಡಲಾರೆ,
         ಭಾವಗಳ ಅಲೆಯಲ್ಲಿ ಬದುಕುವ
         ಛಲವ ದೂರಾಗಿಸಿರುವೆ..
         ಬದುಕಿಗೆ ಅರ್ಥವಿದೆಯಾದರೂ
         ಅರ್ಥವು ಅರ್ಥಹೀನವಾಗುವ ಬೇಸರವಿದೆ
..

 

 

         ಏಕೆ ಹೀಗೆ..?

         ಬೆನ್ನ ಹಿಂದಿನ ಛಾಯೆ
         ಮರೆತಾದರೂ ಮರೆವಾಗದು
         ತೀರದ ಬವಣೆ ತಾನಾಗಿ
         ಬೀರುವುದು ಕಾಣದಾದರೂ ಮನಕೆ
         ತಿಳಿಯೆ ನಾ ಏಕೆ ಹೀಗೆ?

 

 

         ಏಕೋ ಇಂತಹ ನಿರಾಸೆ..!

         ಮರೆಯಾದರೂ ಮರೆಯಲಾರೆನು ನಾನು..
         ಮನದಲಿ ಮನಸ ತೋರಿ ಬಂದು,
         ಸ್ನೇಹದಲಿ ಕುಳಿತು ಒಲವ ಧಾರೆಯ ಹರಿಸಿ,
         ಹರಟೆಯಲೊಂದಾದರೂ ಮಾತಾಡದೆ,
         ಮನದ ಮಾತುಗಳ ಮರೆಯಾಗಿಸಿ ಮೌನದಲಿ,
         ಕಣ್ಣಂಚಲಿ ಪ್ರೀತಿಯ ತೋರಿ ಕಿರುನಗೆಯಲೇ
         ಮನತುಂಬಿ ಮಾತನಾಡುವ ಸೌಮ್ಯಮನದ
         ಚಂದದ ಹುಡುಗಿ ಮರೆಯಾಗುವಳೇ ಕಾಣದೆ?

 

 

          ಗೆಳತಿಗಾಗಿ.. 

          ಕೇಳು ಗೆಳತಿ,
          ಕಾಣಲಿಲ್ಲ ನಾ ಸುಮ್ಮನೆ
          ಆ ಕಂಗಳನು..
          ಸ್ನೇಹವಿದೆ, ಪ್ರೀತಿಯಿದೆ, ಅದರಲಿ
          ಮಮತೆಯ ಚಿಲುಮೆಯಿದೆ ಕಾಣದೆ..
          ಸಹನೆಯಿದೆ, ಶಾಂತಿಯಿದೆ, ತನ್ನಲಿ
          ಒಲುಮೆ ತುಂಬಿದ ಹೃದಯ ತೋರುವ
          ಪ್ರತಿ ಭಾವದ ಕಾಂತಿಯಿದೆ..
                     ನೋವುಗಳ ಹಾದಿಯಲಿ
                     ಕಣ್ಣೀರ ಮರೆಯಾಗಿಸಿ ಮೊಗದಲಿ
                     ತುಂಬು ಮನದ ಕಿರುನಗೆಯಾಡಿಸಿ ಮೌನದಲಿ
                     ಮನವ ಸೆಳೆದು ನನ್ನ ನಗಿಸುವ
                     ಆ ಮುಗ್ಧ ಕಂಗಳ ಹೊತ್ತ
                     ಜೀವದ ಜೀವವ ತೊರೆದು
                     ಜೀವಿಸಲಿ ಹೇಗೆ.. ನಾ..
                     ಹೇಳು ಗೆಳತಿ..?

 

 

          ಮರೆಯದಿರು ಈ ಮಾತುಗಳ..

          ಕಾಣದಾದರೂ ಕಾಣುತಿರು
          ಮರೆಯಾದರೂ ಮರೆಯದಿರು
          ಮನದಲಿ ಮನೆಯಾದ ಮೇಲೆ
          ಮರೆಯಲಿ ಹೇಗೆ ಗೆಳತಿ ನಿನ್ನನು..
          ತೋರುತಿರು ಒಲವ ಮಾತಿನಲಿ
          ಕಾಣುತಿರಲಿ ಪ್ರೀತಿ ನನ್ನಲಿ
          ತಪ್ಪಿ ತೋಯಿಸದಿರು ಮನವ
          ಕಾರಣ ಭಾವಗಳ ಬಲೆಯೊಳಗೆ
          ಜೀವಿಸುವ ಪ್ರಾಣಿ ನಾನು..

 

 

          ಬದುಕು ಏಕೆ ಹೀಗೆ..?

          ಮನವು ಉಕ್ಕಿದರೂ ನದಿಯ ಆಸರೆಯಿಲ್ಲ
          ಮಾತುಗಳು ಬೆಂದರೂ
          ಮೌನ ಹಸಿಯಾಗಿದೆ.. ಅದಕೆ ಅರ್ಥವಿಲ್ಲ!
          ಬದುಕು ಏಕೆ ಹೀಗೆ..?

 

 

          ಹೃದಯವೇ..

          ದೂರಾಗುವೆ ಏಕೆ ಹೀಗೆ ಹೃದಯವೇ..
          ನನಗಾಗಿ ನನಸಾಗಿ ಬರುವೆಯೆಂದು
          ನೀ ಬರುವ ಪ್ರತಿ ಹೆಜ್ಜೆಗಳಿಗೂ
          ನನ್ನೆದೆಯ ಸಂಭ್ರಮದ ಕಲ್ಪನೆಗಳನಿಟ್ಟು
          ಹಾಡುತ್ತ ಕುಳಿತ ನನ್ನೊಳ ಭಾವಗಳಿಗೆ
          ಅರ್ಥವೇ ಇಲ್ಲವಾಯಿತೇ..?

 

 

          ಮನದಾಳದ ಮಾತು..

          ಕನಸುಗಳು ಅಳಿದು
          ಕಾಲದಲಿ ಕೊನೆಯಾಗಿ
          ಮನದ ಭಾವವು ಬತ್ತಿ
          ಹೃದಯ ಬರಡಾಯಿತೆಂದರೂ..
          ಕನಸುಗಳ ಸಂಗೀತಕೆ
          ಒಡಲ ಧ್ವನಿಕೂಡದೆಂದರೂ..
          ನನ್ನೊಳು ನೀನಿರುವ ಪ್ರತಿ ಅಣುವ ಸಾಕ್ಷಿಗಳು
          ಸುಳ್ಳಾಡವು ಗೆಳತಿ..

 


          ಕೊಂಚ ಬೇಸರವಿದೆ..

          ಕೊಂಚ ಬೇಸರವಿದೆ.. ಬದುಕಲ್ಲಿ..

          ಅದೆಷ್ಟು ಭಾವಗಳ ಮನದಾಳದಲಿ ಉಸಿರುಕಟ್ಟಿಸಿ ಕೂರಿಸಬೇಕು..!?

          ಅದೆಷ್ಟು ನೋವುಗಳ ನಗುವ ಹಿಂದೆ ಅಡಗಿಸಿ ಮರೆಯಾಗಿಸಬೇಕು..!?

          ಅದೆಷ್ಟು ನೆನಪುಗಳನ್ನು ಕಾಲದ ಹಾದಿಯಲಿ ತುಳಿದು ಸಾಗಬೇಕು..!?

 

 

ಮತ್ತೆ ಸ್ವಲ್ಪ ಕವನಗಳನ್ನ ಗೀಚ್ತೀನಿ ಕಣ್ರೀ!!! ಟೈಮ್ ಸಿಕ್ಕಾಗ ಇನ್ನೊಂದು ಸಲ ಈ ಪೇಜ್ ನ ವಿಸಿಟ್   ಮಾಡಿ.

ನಿಮ್ಮವ,
ಪನ್ನಗ ಕುಮಾರ್ ಕೆ ಎಸ್

 

 

BACK  2   3   4   5