ನಮ್ಮ ಪ್ರೀತಿಯ ಹೊಯ್ಸಳ...

2005 ವರ್ಷದಲ್ಲಿ ಒಂದು ಸುದಿನ 
ಕನಸೊಂದು ಮೂಡಿತು ಕನ್ನಡ ಅಭಿಮಾನಿಗಳ ಕಂಗಳಲಿ
 
ಮೂಡಿದ ಕನಸು ಮುದ್ದಿನ ಮಗುವಿನಂತೆ 
ಕಂಡಿದ ಕನಸು ನನಸು ಆಗಿದ್ದು ಕನ್ನಡ ಕೂಟದ ರೂಪದಲ್ಲಿ

ಪ್ರೀತಿಯ ಕನಸಿಗೆ ನಾಮಕರಣ ಆದದ್ದು  ಹೊಯ್ಸಳ... ಹೊಯ್ಸಳ... ಹೊಯ್ಸಳ
ಅದೀಗ ನಮ್ಮ ನಿಮ್ಮೆಲ್ಲರ  ಪ್ರೀತಿಯ ಕನ್ನಡ ಕೂಟ
 
ನಮ್ಮ ನಿಮ್ಮೆಲ್ಲರ  ಕನ್ನಡ ಅಭಿಮಾನಕ್ಕೆ ನೆರಳು ನೀಡಿ, ನೀರು ಎರೆವ ಒಂದು  ಚೇತನ
ನಮ್ಮೆಲ್ಲಾ ಪ್ರತಿಭೆಗಳಿಗೆ  ಅವಕಾಶ ಒದಗಿಸುವುದೇ ಹೊಯ್ಸಳ
ಪುಟ್ಟ ಮಕ್ಕಳಿಗೆ ಕನ್ನಡ ಸಂಸ್ಕೃತಿ ಕಲಿಸಿ , ತೋರಿಸಿ ,  ಪ್ರೋತಹಿಸುವ ಕನ್ನಡ ಕೂಟವೇ ಹೊಯ್ಸಳ
 
ಬನ್ನಿ ..... ನೋಡಿ .... ಭಾಗವಹಿಸಿ
ಕಲಿಯಿರಿ ....ಕಲಿಸಿರಿ ....ಕನ್ನಡದ ಸಿರಿ
ನೀವೂ ಬೆಳಿಯಿರಿ ....ಕೂಟವನ್ನೂ ಬೆಳಿಸಿ
ನೆನಪಿರಲಿ ಚಿನ್ನದಂಥ ಮಾತು .....ಕನ್ನಡಕ್ಕಾಗಿ ಎತ್ಹಿದ ಕೈ ಆಗುವುದು ಕಲ್ಪವೃಕ್ಷ 
  
*=*=*=*=*=*=*=*=*=*=*=*=*=*=*=*=*=*=*=*=*=*=*=*=*
ಹೊಯ್ಸಳದ ಹಿನ್ನೆಲೆ...
ಹಲವಾರು ದಶಕಗಳಿಂದ ಕರ್ನಾಟಕದಿಂದ ಸಾವಿರಾರು ಮೈಲು ದೂರದಲ್ಲಿರುವ ಅಮೇರಿಕದ ಕನ್ನೆಕ್ಟಿಕಟ್ಟಲ್ಲಿ ವಾಸಿಸುತ್ತಿರುವ ಅನೇಕ ಕನ್ನಡ ಕುಟುಂಬಗಳು ಯುಗಾದಿ, ದೀಪಾವಳಿ ಮತ್ತು ರಾಜ್ಯೋತ್ಸವಗಳಂತ ಹಬ್ಬದ ದಿನಗಳಲ್ಲಿ ಯಾರಾದರು ಸ್ನೇಹಿತರ ಮನೆಯಲ್ಲಿಯೋ ಅಥವ ದೇವಸ್ಥಾನದಲ್ಲೋ ಒಂದುಗೂಡುತ್ತಿದ್ದರು. ಸಂಗೀತ, ನೃತ್ಯ, ಹಾಸ್ಯ ಚಟಾಕಿ, ಇತ್ಯಾದಿ ಮನೋರಂಜನ ಕಾರ್ಯಕ್ರಮಗಳೊಂದಿಗೆ ಹಬ್ಬಗಳನ್ನು ಆಚರಿಸಿ ಸಂಭ್ರಮಿಸುತಿದ್ದರು.
ಇಂತಹ ಒಂದು ಸಂದರ್ಭದಲ್ಲಿ (ದೀಪಾವಳಿ/ರಾಜ್ಯೋತ್ಸವ ೨೦೦೫), ಈ ಕನ್ನಡಾಭಿಮಾನಿ ಕುಟುಂಬಗಳಿಗೆ, ಕನ್ನಡ ಭಾಷೆ, ಇತಿಹಾಸ, ಸಂಸ್ಕೃತಿಯನ್ನು ಕನ್ನೆಕ್ಟಿಕಟ್ ಭಾಗದ ಮುಂದಿನ ಯುವ ಪೀಳಿಗೆಗೆ ಉಳಿಸಿ-ಬೆಳೆಸಲು ಪೂರಕವಾಗುವ ನಿಟ್ಟಿನಲ್ಲಿ ತಮ್ಮ ಈ ಸಾಂಕೇತಿಕ ಸಂಘಟನೆಗೆ ಅಧಿಕೃತ ಸ್ಥಾನ-ಮಾನವನ್ನೇಕೆ ಕಲ್ಪಿಸಬಾರದು ಎಂಬ ಚಿಂತನೆ ಬಂದಾಗ ಉದಯಿಸಿದ್ದು "ಹೊಯ್ಸಳ ಕನ್ನಡ ಕೂಟ, ಕನ್ನೆಕ್ಟಿಕಟ್"
 
ಹೊಯ್ಸಳ ಕನ್ನಡ ಕೂಟವು ೨೦೦೬ ರಲ್ಲಿ ಕನ್ನೆಕ್ಟಿಕಟ್ಟಿನಲ್ಲಿ ಅಧಿಕೃತವಾಗಿ ನೋಂದಾಯಿಸಲ್ಪಟ್ಟಿತು
. Internal Revenue Service ನ ಸೆಕ್ಷನ್ 501 (C)(3) ಪ್ರಕಾರ, ಸೇವಾಸಂಸ್ಥೆಯ ಸ್ಥಾನ-ಮಾನವನ್ನು ಪಡೆದುಕೊಂಡಿದೆ.
೧) ಕನ್ನೆಕ್ಟಿಕಟ್ ಭಾಗದಲ್ಲಿ ಕನ್ನಡ ಭಾಷೆ, ಇತಿಹಾಸ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು,
೨) ಕನ್ನಡ ಭಾಷೆಯ ಬಾಲ್ಯ-ಯುವ-ಪ್ರೌಢ ಜನರಲ್ಲಿನ ಕಲಾ ಪ್ರತಿಭೆಯನ್ನು ಗುರುತಿಸಿ, ಸೂಕ್ತ ವೇದಿಕೆಯಡಿ ಅದನ್ನು ಪ್ರದರ್ಶಿಸುವಂತೆ ಮಾಡಿ ಗೌರವಿಸುವುದು,
೩) ಸಾಹಿತ್ಯ, ಕಲೆ, ಸಂಗೀತ, ನಾಟ್ಯ ಮುಂತಾದ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹೆಸರು ಮಾಡಿದ ವ್ಯಕ್ತಿಗಳ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಕ್ಕಳು ಹಾಗು ಯುವಪ್ರತಿಭೆಗಳಲ್ಲಿ ಕನ್ನಡ ಸಂಸ್ಕೃತಿಯಲ್ಲಿ ಆಸಕ್ತಿಯನ್ನು ಮೂಡಿಸುವುದು,
೪) ದೀನ ದಲಿತರ ನೆರವಿಗೆ ಲಾಭೋದ್ಧೇಶಗಳಲ್ಲದ ಸೇವೆಗಳನ್ನು ಮಾಡುವುದು,
೫) ಸಮಾನ ಅಭಿರುಚಿ ಮತ್ತು ಉದ್ಧೇಶಗಳನ್ನು ಹೊಂದಿದ ಇತರ ರಾಜ್ಯ, ಪ್ರದೇಶ, ಭಾಷಾ ಸಂಸ್ಥೆಗಳೊಂದಿಗೆ ಸಾಂಸ್ಕೃತಿಕ ಹಾಗು ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, 
 
ಇತ್ಯಾದಿ ಸಂಘದ ಮುಖ್ಯ ಉದ್ಧೇಶಗಳು.
 
ಸಂಘದ ಕಾರ್ಯಕಾರಿ ಸಮಿತಿಯಲ್ಲಿ 15 ಸದಸ್ಯ ಕುಟುಂಬಗಳಿವೆ. ಪ್ರಸಕ್ತ ವರ್ಷದಲ್ಲಿ ಸುಮಾರು ೧೦೦ ಕುಟುಂಬಗಳು ನೋಂದಾಯಿತ ಸದಸ್ಯರಾಗಿದ್ದಾರೆ. ಸುಮಾರು ೧೫೦ ಅನೋಂದಾಯಿತ ಸದಸ್ಯರಿದ್ದಾರೆ.
ಕನ್ನಡ ಕೂಟದ ವತಿಯಿಂದ ಯುಗಾದಿ, ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬಗಳನ್ನು ಅದ್ಧೂರಿಯಿಂದ ಆಚರಿಸಲಾಗುತ್ತದೆ. ಯುವಪೀಳಿಗೆ ಸಂಭ್ರಮದಿಂದ ಭಾಗವಹಿಸುವ ವಾರ್ಷಿಕ ವನಭೋಜನವನ್ನು ಬೇಸಿಗೆಯ ಸಮಯದಲ್ಲಿ ಇಡಲಾಗುವುದು. ಕನ್ನಡದ ಗ್ರಾಮೀಣ ಕ್ರೀಡೆಗಳಾದ ಕಬ್ಬಡ್ಡಿ, ಖ್ಹೋ-ಖ್ಹೋ, ಲಗೋರಿಗಳಂತಹ ಪಾರಂಪರಿಕ ಕ್ರೀಡೆಗಳ ಜೊತೆಗೆ ವಾಲಿಬಾಲ್, ಟೆನಿಕಾಯ್ಟ್, ಬ್ಯಾಡ್ಮಿನ್ಟನ್ ಆಟಗಳನ್ನು ಆಡಲಾಗುವುದು. ದಿನದ ಕೊನೆಯಲ್ಲಿ ನಡೆಯುವ ’ಅಂತ್ಯಾಕ್ಷರಿ’, ಸರ್ವ ಜನಪ್ರಿಯ.
 
ಆವಕಾಶ ಸಿಕ್ಕಾಗಲೆಲ್ಲ ಸಂಗೀತ ಕಚೇರಿಗಳನ್ನು ಏರ್ಪಡಿಸುವುದು, ಕನ್ನಡ ಸಿನಿಮಾ ಪ್ರದರ್ಶನ, ವಿನೋದಮಯ ಹಾಗು ವಿಚಾರಯುತ ಚರ್ಚಾಕೂಟಗಳನ್ನು ಏರ್ಪಡಿಸುವುದು, ಮುಂತಾದವುಗಳು ಸಂಘದ ಇತರ ಚಟುವಟಿಕೆಗಳು.
 
"ಸಿರಿಗನ್ನಡಂ ಗೆಲ್ಗೆ-ಬಾಳ್ಗೆ"  
*=*=*=*=*=*=*=*=*=*=*=*=*=*=*=*=*=*=*=*=*=*=*=*=*
 
 ಹೇಮಂತ ಗಾನದ ಹಿನ್ನೆಲೆ...

 

ಹೊಯ್ಸಳ ಕನ್ನಡ ಕೂಟ ಹಮ್ಮಿಕೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ’ಹೇಮಂತ ಗಾನ’ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಜನೆವರಿ ತಿಂಗಳಿನ ಚಳಿಯಲ್ಲಿ ನಡೆವ ಈ ಕಾರ್ಯಕ್ರಮದಲ್ಲಿ ಎಲ್ಲಾ ವಯಸ್ಸಿನ ಉತ್ಸುಕರಿಗೆ ತಮ್ಮ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸಲು ಕನ್ನಡ ಕೂಟ ಸಮಾನ ಅವಕಾಶ ಮತ್ತು ವೇದಿಕೆಯನ್ನು ಒದಗಿಸುತ್ತದೆ. ಈ ಕಾರ್ಯಕ್ರಮ ಆರಂಭವಾದ ಬಗೆ ಮತ್ತು ’ಹೇಮಂತ ಗಾನ’ ಹೆಸರಿನ ಹಿಂದಿನ ಘಟನೆಯ ಬಗ್ಗೆ ಒಂದಿಷ್ಟು ವಿಷಯಗಳನ್ನು, ಈ ಕಾರ್ಯಕ್ರಮವನ್ನು ಆರಂಭಿಸಲು ಕಾರಣಕರ್ತರಲ್ಲಿ ಒಬ್ಬರಾದ ಯಶವಂತ್ ಗಡ್ಡಿ ಅವರಿಂದ ತಿಳಿದುಕೊಳ್ಳೋಣ, ಬನ್ನಿ..

 

೨೦೦೯ರ ನವೆಂಬರ್ ದಿನಗಳು.. ಬಹಳಷ್ಟು ಜನರ ತರಹ ನನಗೂ ಶುಕ್ರವಾರದ ಸಂಜೆ, ’ಸವಿಸಂಜೆ’. ಈ ಸವಿಸಂಜೆಯಂದು ಸಮಾನ ಮನಸ್ಕರ ಜೊತೆ ಹರಟೆ ಕೊಚ್ಚುವುದು ನನ್ನ ಅಚ್ಚುಮೆಚ್ಚಿನ ಕಾರ್ಯಕ್ರಮಗಳಲ್ಲೊಂದು. ಆ ದಿನದ ನನ್ನ ಹರಟೆ ಶ್ರೀಮತಿ ಸೌಭಾಗ್ಯ ಕೋಮರ್ಲ ಅವರ ಜೊತೆ. ನಮ್ಮಿಬ್ಬರ ಮಾತುಕತೆಯ ವಿಷಯ ಎಲ್ಲಿಂದ ಆರಂಭವಾದರೂ ಮುಕ್ತಾಯವಾಗುವುದು ನಮ್ಮಿಬ್ಬರಿಗೂ ಪ್ರಿಯವಾದ ಕನ್ನಡ ಭಾವಗೀತೆಗಳು ಮತ್ತು ಹಳೆಯ ಚಲನಚಿತ್ರಗೀತೆಗಳ ವಿಷಯದೊಂದಿಗೆ.

ಈ ಸಂಭಾಷಣೆಯ ಸಮಯದಲ್ಲಿ ನಮ್ಮಂತೆಯೇ ಆಸಕ್ತಿಯುಳ್ಳ ಇತರ ಜನರನ್ನು ಕೂಡಿಸಿ ’ಸಂಗೀತ ಸಂಜೆ’ ಹಮ್ಮಿಕೊಳ್ಳಬಾರದೇಕೆ ಎಂಬ ಉತ್ಸಾಹ ಭಾಗ್ಯ ಅವರಲ್ಲಿ ಮೂಡಿತು, ತಮ್ಮದೇ ಮನೆಯಲ್ಲಿ ಈ ಕಾರ್ಯಕ್ರಮವನ್ನು ಇಟ್ಟುಕೊಳ್ಳಲು ಸಂತೋಷದಿಂದ ಒಪ್ಪಿಕೊಂಡಿದ್ದೂ ಆಯಿತು.

ಸರಿ! ಆಸಕ್ತಿಯುಳ್ಳ ಜನರಿಗೆ ಆಮಂತ್ರಣ ಕಳಿಸುವ ಸರದಿ ನನ್ನದು. ಒಂದೈದು ನಿಮಿಷ ಯೋಚನೆ ಮಾಡಿ ಆಮಂತ್ರಣ ಪತ್ರಿಕೆ ತಯಾರು ಮಾಡಿದೆ; ಹಲವಾರು ಜನರಿಗೆ ಕಳಿಸಿದ್ದೂ ಆಯ್ತು. ನಮ್ಮ ನಿರೀಕ್ಷೆಗೂ ಮೀರಿ ಬಹಳಷ್ಟು ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಆಸಕ್ತಿ ತೋರಿದರು. ಅವರಲ್ಲಿ ನಾವು ಆಮಂತ್ರಣ ಕಳಿಸದ ಜನರೂ ಇದ್ದರು (ಬೋಂಡಾ-ಕಾಫಿಯ ಪ್ರಭಾವವಿರಬಹುದೆ!)

ನೂರಕ್ಕೂ ಮೀರಿದ ಅತಿಥಿಗಳ ಪಟ್ಟಿ ನೋಡಿ ಭಾಗ್ಯರವರಿಗೆ ನಿಜಕ್ಕೂ ದಿಗಿಲಾಯ್ತು. ಇಷ್ಟೊಂದು ಜನ ಸೇರುವಾಗ ಮನೆಯಲ್ಲಿ ಈ ಕಾರ್ಯಕ್ರಮ ಇಟ್ಟುಕೊಳ್ಳುವುದು ಕಷ್ಟವೆಂದು ಖಾತ್ರಿಯಾಯ್ತು. ಆಗ ನಾವು ವಾಸಮಾಡುತ್ತಿದ್ದ ಅಪಾರ್ಟ್ಮೆಟ್ ನ ಸಮುದಾಯ ಭವನಕ್ಕೆ ಈ ಕಾರ್ಯಕ್ರಮವನ್ನು ವರ್ಗಾಯಿಸಿದೆವು.

ಅಂದುಕೊಂಡಂತೆ ಕಾರ್ಯಕ್ರಮ ಬಹಳ ಚನ್ನಾಗಿ ನೆರವೇರಿತು. ಸುಮಾರು ೨೫-೩೦ ಕುಟುಂಬಗಳು ಭಾಗವಹಿಸಿದ್ದ ಆ ಕಾರ್ಯಕ್ರಮದಲ್ಲಿ ಬಹಳಷ್ಟು ಜನ ತಮಗೆ ಇಷ್ಟವಾದ ಚಲನಚಿತ್ರ ಗೀತೆ-ಭಾವಗೀತೆ-ಭಕ್ತಿಗೀತೆ-ಜನಪದಗೀತೆಗಳನ್ನು ಹಾಡಿದರು.

ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ವರ್ಷಕ್ಕೊಮ್ಮೆ ಹಮ್ಮಿಕೊಳ್ಳುವ ನಿರ್ಧಾರವನ್ನು ಮಾಡಿದೆವು.

ಅಂದು ಬಂದಿದ್ದ ಹೊಯ್ಸಳ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದ ದೀಪಕ್ ಮೂರ್ತಿ, ಕೃಷ್ನಮೂರ್ತಿ ಬೀಮನಕಟ್ಟೆಯವರು ಈ ಕಾರ್ಯಕ್ರಮವನ್ನು ಕನ್ನಡಕೂಟದಿಂದಲೇ ಅಧಿಕೃತವಾಗಿ ನಡೆಸಿಕೊಡುವ ಸಲಹೆ ನೀಡುವುದರೊಂದಿಗೆ ’ಹೇಮಂತ ಗಾನ’ ಹೊಯ್ಸಳ ಕನ್ನಡ ಕೂಟದ ಅಧಿಕೃತ ಕಾರ್ಯಕ್ರಮಗಳ್ಳಲ್ಲೊಂದಾಯ್ತು.

 

ಯಶವಂತ್ ಗಡ್ಡಿ
 
ಪ್ರತಿಯೊಂದು ಯಾತ್ರೆಯ ಕಥೆಯೂ ಆರಂಭವಾಗುವುದು ಮೊದಲ ಹೆಜ್ಜೆ ಇಂದಲೇ ಅಲ್ಲವೇ ...
ಶ್ರೀಮತಿ ಸೌಭಾಗ್ಯ ಕೋಮರ್ಲ , ಯಶವಂತ್ ಗಡ್ಡಿ ಹಾಗೂ ಇನ್ನೂ ಬಹಳ ಜನರ ಸಂಗೀತ ಪ್ರೇಮವೇ  ....ಇಂದಿನ  ಹೊಯ್ಸಳದ ಹೆಮ್ಮೆಯ ಕಾರ್ಯಕ್ರಮ ಹೇಮಂತ ಗಾನ , 
ಹಾಗೆ ಇಲ್ಲಿ ಸೇರಿಸಿರುವ ಮೊದಲ ಆಮಂತ್ರಣ ಪತ್ರಿಕೆ ನಮೆಲ್ಲರ ಹೆಮ್ಮೆಯ  "ಹೇಮಂತ ಗಾನ" ದ ಮೊದಲ ಹೆಜ್ಜೆ..ಓದಿ ...ನೋಡಿ... ಆನಂದಿಸಿ

ಯುವ ಹೊಯ್ಸಳ 

ಹೊಯ್ಸಳ ಕನ್ನಡ ಕೂಟ ೨೦೧೪ ರಲ್ಲಿ ಮೊದಲ ಬಾರಿಗೆ "ಯುವ ಹೊಯ್ಸಳ " ಕಾರ್ಯಕ್ರಮವನ್ನು ಪ್ರಾರಂಭಿಸಿ ಯುವ ಸಮುದಾಯಕ್ಕೆ ಹೊಯ್ಸಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಮಾಜ ಸೇವೆ ಮಾಡುವ ಅವಕಾಶವನ್ನು ಒದಗಿಸಿಕೊಟ್ಟಿದೆ  . ಹೊಯ್ಸಳ ಕನ್ನಡ ಕೂಟದ ಸದಸ್ಯರ ಕುಟುಂಬದ ೧೨ ವರ್ಷ ದಾಟಿದ ಯಾವುದೇ  ಯುವ ಸದಸ್ಯರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು . ಇದರಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ Volunteer  Appriciation  Certificate ಕೊಡಲಾಗುತ್ತದೆ . 

೨೦೧೩ ಬೇಸಿಗೆ ವನಭೋಜನ ಕಾರ್ಯಕ್ರಮದಲ್ಲಿ ಈ ಯುವ ಸದಸ್ಯರು ಜೊತೆಗೂಡಿ ನಡೆಸಿದ "ಅಜ್ಜಿ ಮನೆ" ಹಾಗೂ   "ಜಾತ್ರೆ"  ಬಹಳವಾದ ಜನಪ್ರಿಯತೆಯನ್ನು ಗಳಿಸಿತು . "ಅಜ್ಜಿ ಮನೆ" ಯಲ್ಲಿ ಸದಸ್ಯರು 'ಕವಡೆ', 'ಪಗಡೆ', ಚೌಕಭಾರ, ಕೇರಂ,ಅಳುಗುಳೆಮನೆ ಮೊದಲಾದ ಭಾರತೀಯ ಮನೆ ಆಟಗಳನ್ನು ಆಡುವ ಅವಕಾಶ ಒದಗಿಸಿತು.  "ಜಾತ್ರೆ" ಅಂತೂ ನಮಗೆಲ್ಲ ನಮ್ಮ ಊರಿನ ಜಾತ್ರೆ ನೆನಪಿಗೆ ತಂದಿತು , ಇವೆಲ್ಲರ ಮೂಲಕ ಸಂಗ್ರಹಿಸಿದ ಹಣವನ್ನು ಮಹಿಳೆಯರು ಮತ್ತು ಮಕ್ಕಳ ಸಹಾಯಕ್ಕಾಗಿ ದುಡಿಯುವ ಸಂಘಕ್ಕೆ ಕೊಡಲಾಯಿತು . 

ಯುಗಾದಿ & ದೀಪಾವಳಿ ಕಾರ್ಯಕ್ರಮಗಳಲ್ಲಿ ಯುವ ಹೊಯ್ಸಳ ತಂಡವು  ಮುಖ್ಯ ಸದಸ್ಯರ ಜೊತೆಗೂಡಿ ಕಾರ್ಯಕ್ರಮದ ಯಶಸ್ಸಿಗೆ ಸಹಾಯ ಮಾಡುತ್ತಾರೆ.
Ċ
Swarna modi,
Apr 7, 2013, 8:22 PM