೧.ಸಂಜೆ ಪಯಣ. ಸಂಜೆ ಬೆಳಕಿನ ನಡುವೆ ಒಂಟಿ ದೀಪವ ಹಿಡಿದು ನಾನು ಹೊರಟಿದ್ದೆನೆ ನಿನ್ನ ಮನೆಗೆ; ದೊರ ಪಯಣ ನೋವು ನನ್ನನಾವರಿಸಿಹುದು ಗವಿಯ ಇನ್ನೋಂದು ಮುಖ ಕಾಣಲಿಲ್ಲ.
ಅದರಾಚೆಗೊಂದು ಉದ್ಯಾನವಿಹುದೆನ್ನುವರು ಪನ್ನೀರ ಚಿಲುಮೆಗಳ ಬಳಸಿನಲ್ಲಿ; ಹೆಜ್ಜೆಯಿಕ್ಕಿದೆ ನಾನು ಬರಿದೆ ಗೋಳಡುವೆನು ಬೆಳ್ಳಿ ಬೆಳಕನು ಕಾಣುವಾಸೆಯಿಂದ.
ಒಣಮರದ ಮೇಲೊಂದು ಕಪ್ಪು ಹಕ್ಕಿಯು ಕುಳಿತು ಹಳೆಯ ಹಾಡನು ಮತ್ತೆ ತೆರೆಯುತಿಹುದು; ಪಯಣವನು ನಿಲ್ಲಿಸಲು ಐದಾರು ಸಲ ನಾನು ಗುಹೆಯ ನಡುವಣ ಹಾದಿಯಲ್ಲಿ ನಿಂತೆ.
ಇನ್ನೊಂದು ಜೀವ ಕೈ ಹಿಡಿದು ಜೊತೆಗೊ ಬಂದು ಬೆಳಕ ತೋರುವೆನೆಂದು ಹೇಳುತಿಹುದು; ಹೊರ ಬಂದೆ, ಮಳೆಬಿಲ್ಲ ಕಂಡೆ ಬಲುದೂರದಲಿ ಈ ಲೋಕ ಹೀಗೆಯೇ ಎಂದುಕೊಂಡೆ.
೨.ಕಾಯುವೆನು ಅವರಿಗಾಗಿ. ನಕ್ಕ ನಿಮಿಷಗಳಿಂದ ನಾನು ಮೌನಕೆ ಬಂದೆ, ದೂರ ದೂರದ ಕನಸ ತುಂಬಿಕೊಂಡು; ಯಾರೊ ಬಂದರು ಎಂದು ನನಗಿವಳು ಹೇಳೀದಳು, ಮುತ್ತುಸಂಜೆಯ ಕಡೆಯ ನಿಮಿಷದಲ್ಲಿ.
ಯಾರು ಬಂದರು ಎಂದು ನನಗೆ ಹೊಳೆಯುತ್ತಿಲ್ಲ, ಇವಳು ನಕ್ಕಳು ನನ್ನ ಕಡೆಗೆ ನೋಡಿ; ನನ್ನನ್ನು ಬಲ್ಲ ಜನ ನನಗುಂಟು ಊರಿನಲಿ, ತಿಳಿದಿಲ್ಲ ನನಗವರ ಇಂಗಿತಗಳು.
ಬಂದವರು ನನ್ನವರು ಎಂದು ತಿಳೀದಿದ್ದೇನೆ, ದೂರದಲಿ ಹಲವು ದನಿ ಕಿವಿಗೆ ಬಿತ್ತು; ಅವರು ಯಾರೇ ಇರಲಿ, ಅವರಿಗೊಳಿತನು ಬಯಸಿ, ಕಾಯುವೆನು ಇದ್ದಲ್ಲೆ ಅವರಿಗಾಗಿ.
೩.ಬದುಕು ಮತ್ತು ಹಾಡು. ಎಲ್ಲಿ ಕತ್ತಲೆಯಿತ್ತೊ ಅಲ್ಲಿ ತನ್ನಿರಿ ಬೆಳಕ ಹಸಿದ ಹೊಟ್ಟೆಯ ಮೇಲೆ ಬೆಳ್ದಿಂಗಳನು ಚೆಲ್ಲಿ ಮುಂಬರಿವ ನಮಗೆ ಶುಭವನ್ನು ತರಲಿ; ಮಲಗಿದರೆ ಕನಸು, ಎದ್ದರೆ ಪಯಣ : ಹೀಗಿದೆ ಬದುಕು ಹಾದಿಯುದ್ದಕು ಹೂವ ಚಲ್ಲುತಿರಲಿ.
ತುಟಿ ಒಣದವರ ಹಾಡನ್ನು ಕೇಳುವಿರೇನು ? ಆದರೂ ಹಾಡು ಬರುವುದು ಸಂಜೆಯೊಳಗಾಗಿ ಕನಸಿನ ಪರಂಪರೆಯ ನೆಯ್ದು ; ಹಾದಿಬೀದಿಗಳಲ್ಲಿ ಬತ್ತಲೆ ಮಗು ಅತ್ತು ಸಂಜೆಯಾಯಿತು ಎಂಬ ಚಿಂತನೆಯಲಿ.
ಕೆರೆ ಬತ್ತಿದಾಗ ಕಣ್ಣಲ್ಲಿ ನೀರು ಬರುವುದು ರೊಕ್ಕವನು ಕೊಟ್ಟು ಕೊಳ್ಳುವ ಸರಕೆ ಸಂತೋಷ ? ಸಂಗೀತಕ್ಕೆ ಬೇಕು ಶ್ರುತಿ, ಲಯ, ಆಲಾಪನೆ ಹಸಿವ ಹಾಡುವುದೆಂತು, ತಾಳವೆಲ್ಲಿವೆ ಅದಕೆ ?
ಬೀದಿ ದೀಪದ ಕೆಳಗೆ ಸತ್ತ ನಾಯಿಯ ಸುತ್ತ ಹತ್ತಾರು ಮಕ್ಕಳು ಮರಿ ; ಬೀದಿನಲ್ಲಿಯ ತುಟಿಗೆ ಭೃಂಗ ಮುತ್ತಿಕ್ಕುವುದು. ಕುಡಿವ ನೀರಿಗೆ ಸಹಿತ ಕಷ್ಟವಾಗಿರುವಾಗ ಯಾವ ರಾಗದಿ ಹಾಡಿದರೆ ಕೊಡ ತುಂಬುವುದು ? ಬಾಯಿ ತುಂಬುವ ತನಕ ಹಾಡು ತುಂಬುವುದಿಲ್ಲ.
ದೇಗುಲ ಬಾಗಿಲಲಿ ಮಂತ್ರಾಕ್ಷತೆಯ ಚೆಲ್ಲಿ ಹೊರಟು ಹೋಗಿದ್ದಾರೆ ನಂಬುವ ಜನ; ಧಾತು - ಈಶ್ವರಗಳಲಿ ಕ್ಷಾಮ ಬಂದಿತ್ತೆಂದು ಅಜ್ಜಯ್ಯ ಹಾಡುವನು ಮರಿಮಗನಿಗೆ. ಈಗ ಎಲ್ಲೆಲ್ಲು ಹಾಹಾಕಾರವೆದ್ದಿಹುದು, ಈ ಅಶಾಂತಿಯೇ ನಿಮಗೆ ಎಲ್ಲ ಹಾಡು.
ಯಾವ ಹಾಡನು ನೀವು ಕೇಳಬಯಸುತ್ತೀರಿ, ಹಾಡು ಕೇಳುವುದಷ್ಟೆ ಸಂತೋಷವೆ ? ಹಾಡು, ಗೋಡೆಗೆ ಒರಗು, ಕಣ್ಣು ಮುಚ್ಚಿಕೊ ಆಗ ಬರುವುದು ಬುದ್ದಿ!
ಕೆಲವರಿಗೆ ಹಾಡು ಬೇಕಂತೆ, ಕೇಳದ ಒಡನೆ ನಿದ್ದೆ ಬರಬೇಕಂತೆ! ಅದು ಎಲ್ಲಿ ಸಿಕ್ಕುವುದು ? ಬಾಂದಳದ ತನಕ ಕ್ಯೂ ಬೆಳೆದಿರುವುದು, ತಂತಿಗಳ ಕಿತ್ತ ತಂಬೂರಿಯಾಯಿತು ಹಾಡು!
ನೊಂದ ಜೀವಕ್ಕೆ ಬೇಕಾದ್ದು ಸಿರಿಹಾಡು. ಇಂಪಾದ ಹಾಡು ಚೆಲುವು ಸೂಸುವ ಹಾಡು, ಭಾವಪೂರ್ಣ ಹಾಡು; ದುರ್ಭಿಕ್ಷದಲಿ ನಾವದನು ಪಡೆಯುವುದು ಹೇಗೆ ? ಯಾರೊ ಅತ್ತಂತಾಯ್ತು ಹಾಡು ಮುಗಿದು.
೪.ಆಹ್ವಾನ. ಹೂವ ಚೆಲ್ಲಿದ ಹಾದಿಯಲ್ಲಿ ನಾನಿದ್ದೇನೆ ಸಂಪಿಗೆಯ ನರುಗಂಪು ಅರಳುತಿಹುದು ; ಹಳೆಯ ನೆನೆಪುಗಳಲ್ಲಿ ಚೆಲುವ ಕಂಡಿದ್ದೇನೆ ಹೂವ ಮೇಗಣ ಗಾಳಿ ಬೀಸುತಿಹುದು.
ವರುಷ ಕಳೆದರೆ ವರುಷ ಹೊಸ ದನಿಯ ಪುಟಗಳಲಿ ನಲಿವು ತೆರೆಯುತ್ತಿಹುದು ಪ್ರೀತಿಯಿಂದ ; ಮಾಘ ಮಾಸದ ಸಂಜೆ ನೀನು ಸಿಕ್ಕಿದ್ದೀಯೆ ಹೊಸತು ಏನಾದರೂ ಬೇಕೆನ್ನುವೆ.
ನನ್ನ ಕನ್ನಡಿ ಹಳತು, ಮುಖ ಹೊಸತು, ಓ ಗೆಳೆಯ ನೀನು ಬಂದಿದ್ದೀಗ ಸರಿಹೋಯಿತು ; ಚಿತ್ರ ಮರುಕೊಳಿಸುವುದು, ಚೆಲುವು ಸರಿವುದು ಬಲಕೆ ಗೆಲವು ಬಾವುಟವೆತ್ತಿ ಕಾಯುವುದು.
ಹೊಸ ಕಾಣ್ಕೆ, ಹೊಸ ಕಣ್ಣು ಕೈ ಬೀಸಿ ಕರೆಯುತಿದೆ ಸಂಗೀತ ಹರಿಯುತಿದೆ ಕಣೆವೆಯಲ್ಲಿ; ಕೆಲವು ಹಾಡುಗಳಂತು ಕಣ್ಣೀರ ಸುರಿಸುತ್ತ ಮುಂದೆ ನಡೆವುವು ಮುತ್ತುಸಂಜೆಯಲ್ಲಿ.
ಬಾ ಗೆಳೆಯ, ಗೋಧೂಳಿಯಲ್ಲಿ ಚಾಟಿಯನೆಸೆದು ನೋವು ನಲಿವುಗಳನ್ನು ನೆನೆಯುತ್ತ ಬಾ; ಹಳತು ಹೊಸತಾಗುವುದು ನಮ್ಮೂರ ಬೀದಿಯಲಿ, ನಕ್ಷತ್ರಗಳ ಕೆಳಗೆ ದಾರಿ ಸುಗಮ.
೫.ಕೈಮರದ ಬಳಿ. ಕೆಲವು ಹೂ ರಾತ್ರಿಯಲ್ಲರಳಿ ಕಂಪನು ಬೀರಿ ನೆಲಕೆ ಬೀಳುವುವು; ಮುಂಬೆಳಗಿನಲ್ಲಿ ಹಕ್ಕಿಯ ಹಾಡು ಪರಿಮಳಿಸಿ ಮುಗಿದು ಬಿಡುವುದು; ಕೆಲವು ಮಕ್ಕಳು ಉಂಡೊ ಉಣ್ಣದೆಯೊ ಹೋಗುವುವು ತಂತಮ್ಮ ಶಾಲೆಗಳಿಗೆ; ಬಸಿರಿ ಭಾವಿಗೆ ಬಂದು ಬಿಂದಿಗೆಯ ನೂಕುವಳು ತಳದ ನೀರಿಗೆ; ಅಂಗಡಿಯ ತೆರೆದು ಧೂಳನು ಹೊಡೆದು ಕೂರುವರು ನಮ್ಮೂರ ವರ್ತಕರು; ಊರ ದೇಗುಲದಲ್ಲಿ ಕೇಳಿ ಬರುವುದು ಭಜನೆ, ಅಜ್ನಾತ ಸಂಗೀತ; ಚೈತ್ರಚಿತ್ರೋದಯದ ಗುಂಗಿನಲಿ ನಾನಿದ್ದು ಹೂವಿನಂತಹ ಮಾತು ಬಿಡಿಸುವೆನು ಪ್ರೀತಿಯಲಿ.
ಎಲ್ಲದರ ಆಚೆಗಿನ್ನೊಂದಿಹುದು ಎನ್ನುವರು ಎಲ್ಲತಿಳಿದವರು, ಜೊತೆಗೂ ಬರುವ ಸ್ನೇಹಿತರು; ನೀರು ತಿಳಿಯುವ ತನಕ ಕಾದು ನಿಲ್ಲುವುದಷ್ಟೆ ನಮ್ಮ ಕರ್ತವ್ಯ; ಯಾರು ಕೇಳಲಿ ನಾನು ಗುಡಿಯೊಳಗೆ ಇರುವುದೆ ನಮ್ಮ ದೇವರು ಎಂದು? ಕೈಮರದ ನೆರಳಿನಲಿ ಸರದಿಯಲಿ ಬಂದೆ ಬರುವರು ಎಂದು ನಾನು ನಂಬಿದ್ದೆನೆ; ಹೆಜ್ಜೆಗಂಟಿದ ನೆರಳ ದಾಟಲಾರದೆ ನಾನು ಹಳೆಯ ಹಾಡೊಂದನ್ನು ಹಾಡುತ್ತಲಿದ್ದೇನೆ; ಬಿಸಿಲಕಾವಿಗೆ ನೊಂದು ಸುಖದುಃಖಗಳ ನಡುವೆ ಹಾಡಿಕೊಂಡಿದ್ದೇನೆ.
೬.ನನ್ನ ಮನೆಗೇ ನಾನು ಅತಿಥಿ. ಕತ್ತಲೆಯ ಕೋಣೆಯಿಂದೆದ್ದು ಬಣ್ದವ ನಾನು
ಬಾಗಿಲನು ತೆರೆದು ಹುಣ್ಣಿಮೆಯ ಸಿರಿಗೆ ; ದೂರ ಯಾವುದೊ ಹಕ್ಕಿ ಹೆಮ್ಮರದ ಕೊಂಬೆಯಲಿ ರೆಕ್ಕೆ ಬಡಿಯಿತು ಇರುಳ ಸಂಭ್ರಮದಲಿ.
ಬೆಳಕು ಹರಿಯಿತು, ಹಕ್ಕಿಹಾಡು ಮೊದಲಾಗಿತ್ತು ಕೊಂಬೆ ತುದಿಯಲಿ ಇದ್ದ ಹಣ್ಣ ಕೆಡವಿ ; ಬೆಳಗಾಗ ಕಡಲ ತಡಿಗೋಡಿದೆನು ಆತುರದಿ ಕಂಡೆ ನಾ ಮುನ್ನೀರಿನದ್ಭುತವನು.
ದೋಣಿ ಒಂದೊಂದಾಗಿ ಕಡಲೆದೆಗೆ ನುಗ್ಗಿದವು ಸಂತಸದಿ ಹಾಡಿದಳು ಕಪ್ಪುಹುಡುಗಿ ; ಕಣ್ಣು ಕಪ್ಪೆಯ ಚಿಪ್ಪಿನಗಲದ ದೋಣಿ, ಅದಕ್ಕೆ ಕಂಡ ನೋಟ ಸಮುದ್ರದಂಥ ಪ್ರಾಣಿ.
ಮುನ್ನೀರ ಘೋಷದಲಿ ಬಾಳ ಹಾದಿಯ ಕಂಡೆ, ನಾ ಕಂಡೆ ದೋಣಿಗರ ಸಾಹಸವನು ; ದೂರದೂರದ ದೋಣಿ ಹಾಡ ಕೇಳಿದೆ ನಾನು, ಎದೆ ತುಂಬ ಪ್ರೀತಿಯನು ತುಂಬಿಕೊಂಡೆ.
ನಾನು ಚುಂಬಿಸಲಾರೆ, ಚುಂಬಿಸದೆ ಇರಲಾರೆ ಅಡ್ದ ಗೋಡೆಯ ಮೇಲೆ ದೀಪ ನಾನು ; ನನ್ನ ನಿರ್ಧಾರವನು ಕಡಲ ನೀರಿಗೆ ಬಿಟ್ಟೆ, ಕಪ್ಪೆಚಿಪ್ಪುಗಳನ್ನು ನೀರಿಗೆಸೆದೆ.
ಹಬ್ಬದೂಟಕ್ಕೆಂದು ಮನೆಗೆ ಬಂದರೆ ನಾನು ಕೋಣೆಯೊಳಿರಲಿಲ್ಲ ಅಡುಗೆಯವನು ; ಊಟಕ್ಕೆ ಕರೆದವನು ನಾನೆ, ಬಂದವ ನಾನೆ ನನ್ನ ಮನೆಗೇ ನಾನು ಒಬ್ಬ ಅತಿಥಿ!.
೭.ನನಗೆ ನಂಬಿಕೆ. ಹಣ್ಣು ಹೂವುಗಳಿಂದ ನಿನ್ನನರ್ಚಿಸಲರಿಯೆ,
ಕ್ಷೀರಾಭಿಷೇಕವನು ಮಾಡಲಾರೆ; ಸಂಜೆ ಮುಂಜಾನೆಯಲಿ ನಿನ್ನ ನೆನೆಯುವುದೊಂದೆ ಕರ್ತವ್ಯವೆಂಬುದನು ನಾನು ಬಲ್ಲೆ.
ಶಂಖಗಳ ನಾನೂದೆ, ಜಾಗಟೆಯಾ ಬಾಜಿಸೆನು ಮಂಗಳಾರತಿಯ ನಾ ಬೆಳಗಲರಿಯೆ; ನಿನ್ನ ನೆತ್ತಿಯ ಮೇಲೆ ಸೀಯಾಳವನು ಸುರಿದು ಕರವಸ್ತ್ರದಿಂದದನು ಒರೆಸೆ ನಾನು.
ಶಾಲ್ಯಾನ್ನ ಭೋಜನವ ನಾನು ಒದಗಿಸಲಾರೆ, ನಿನ್ನ ಪ್ರಸಾದವನು ಹಂಚಲಾರೆ; ಬತ್ತಲೆಯ ಮೂಲ ಮೂರ್ತಿಯನು ಕಾಣುವೆ ನಾನು, ಉತ್ಸವದ ಮೂರ್ತಿಯನು ಹೊಗಳಲಾರೆ.
ಹೊರಗಣ್ಣ ಮುಚ್ಚಿದರೆ ಒಳಗಣ್ಣು ತೆರೆಯುವುದು, ಕಾಣುವುದು ಎಲ್ಲೆಲ್ಲು ವಿಶ್ವರೂಪ; ಕಷ್ಟದಲಿ ನೀನೆನ್ನ ಕೈಬಿಟ್ಟೆನೆನ್ನದೆಯೆ ಭಜಿಸುವೆನು, ನನಗಿಲ್ಲ ಇಷ್ಟು ಕೋಪ.
ಕೊನೆಯಿರದ ದಾರಿಯಲಿ ನಾನು ಮುಂಬರಿಯುತ್ತ ನಿನ್ನ ನೆನೆಯುತ್ತೇನೆ ಭಕ್ತಿಯಲ್ಲಿ; ನಿನ್ನೊಲವು ನನ್ನ ಸಂರಕ್ಷಿಸುತ ಬರುತಿಹುದು, ನನಗೆ ನಂಬಿಕೆ ನಿನ್ನ ಶಕ್ತಿಯಲ್ಲಿ.
೮.ಮಳೆ ನಿಂತಿತ್ತು. ಮಳಿ ನಿಂತಿತ್ತು. ಹೂ ಅರಳಿತ್ತು ತಣ್ಣಗೆ ಬೀಸಿತು ಗಾಳಿ ; ಎಲ್ಲರ ಎದೆಯಲಿ ಸಂತಸವಿತ್ತು ಪ್ರೇಮಗೀತೆಯನು ಕೇಳಿ.
ದಾರಿಯ ಉದ್ದಕು ಶಾಲೆಯ ಮಕ್ಕಳು ಬಂದರು ನಗುನಗುತ ; ತಣ್ಣನೆ ನೆರಳಲಿ ನಡೆಯುತ್ತಿತ್ತು ಸುಂದರಾಂಗಿಯರ ಕುಣಿತ.
ಕಬ್ಬಿನ ಗದ್ದೆಯ ಒಳಗೂ ಹೊರಗೂ ಕುಣಿಯುವ ನವಿಲಿನ ಕೇಕೆ ; ನಕ್ಕರು ಎಲ್ಲರು, ಈಕೆ ಕೇಳಿದಳು 'ಎಲ್ಲರು ನಗುವುದು ಏಕೆ?'
ಗುಡಿಗೋಪುರಗಳ ಎತ್ತರದಲ್ಲಿ 'ಕೃಷ್ಣಾ' ಎಂದಿತು ಗರುಡ ; ಮೆಟ್ಟಿಲಿನುದ್ದಕು ಕೈಯ ಚಾಚಿದನು ಕಾಸಿನ ಭಿಕ್ಷಕೆ ಕುರುಡ.
ಇರುಳೂ ಮುಗಿಯಿತು, ಬೆಳಕೂ ಹರಿಯಿತು ಇದು ಭಗವಂತನ ಕರುಣೆ ; ದೇವರ ಮನೆಯಲಿ ನಡೆಯುತ್ತಿತ್ತು ಭಗವನ್ನಾಮ ಸ್ಮರಣೆ.
ತಾವರೆ ಅದಳಿದೆ, ನೈದಿಲೆ ಬಾಡಿದೆ ಭಟ್ಟರ ತೋಟದ ಕೊಳದಲ್ಲಿ ; ಸಿರಿಸಂತೋಷವು ಹಬ್ಬುತ್ತಲೆ ಇದೆ ಚೆಲುವು ಚಿಮ್ಮುತಿಹ ನೆಲದಲ್ಲಿ.
ಬೀದಿ ಬೀದಿಯಲು ಶಾಂತಿಯು ನೆಲಸಿದೆ ನೆಮ್ಮದಿ ಕಂಡಿದೆ ಬದುಕು ; ಬಾಗಿಲ ಬಳಿ ಕವಿ ಕೈಯನು ಮುಗಿಯುವೆ ಆದಕೂ ಇದಕೂ ಎದಕು.
೯.ಗೆಳೆಯನಿಗೆ. ನೂರು ಕನಸುಗಳಲ್ಲಿ ನಿನ್ನ ಕಂಡೆನು ನಾನು ನನ್ನೆದೆಯೊಳಚ್ಚಾಯ್ತು ನಿನ್ನ ಹೆಸರು; ನನ್ನೆಲ್ಲ ಒಲವು ಹೂವಾಗಿ ಅರಳಿತು, ನಕ್ಕೆ - ಅರಿಹೋಯಿತು ದೂರ ದೂರ ದೀಪ!
ಓ ಗೆಳೆಯ, ನಾ ನಿನ್ನ ಹುಡುಕುತ್ತಲಿದ್ದೇನೆ ಎಲ್ಲ ಅನುಭವಗಳಲಿ ಒಂಟಿಯಾಗಿ; ಹೋದುದೆಲ್ಲಿಗೆ ನೀನು ತುಂಬಿದ ಜಗತ್ತಿನಲಿ ಹೂಗಳಲಿ ಹಣ್ಗಳಲಿ ಹಾಡಿನಲ್ಲಿ?
ದೂರದರ್ಶನದಲ್ಲಿ ಕೇಳಿ ಬಂದಿತು ಹಾಡು ತಂಪಾಗಿ ಇಂಪಾಗಿ ಮಧುರವಾಗಿ; ಕೆಲವರು ಬಂದರು ಸಭೆಗೆ, ಎದ್ದು ಹೋದರು ಕೆಲರು ಈ ಜಗತ್ತಿನ ಚೆಲುವು ಕಣ್ತುಂಬಿತು.
ನೀನೆಂದು ಬರುವೆ, ಓ ಗೆಳೆಯ, ಉದ್ಯಾನದಲಿ ನೀ ಬರುವ ತನಕ ನಾ ಕಾದಿರುವೆನು.
|