೧.ಚಿಗರಿಗಂಗಳ ಚೆಲುವಿ
ವಸುಂಧರಾ ಎನ್ನುವದು ನಮ್ಮ ಪುರಾತನ ಕವಿಗಳು ಭೂಮಿತಾಯಿಗೆ ಕೊಟ್ಟ ಹೆಸರು. ವಸು ಎಂದರೆ
ಜೀವಿ. ಭೂಮಿತಾಯಿಯು ಜೀವಿಗಳನ್ನು ಹೊತ್ತವಳು, ಆದುದರಿಂದ ಇವಳು ವಸುಂಧರಾ. ಇವಳಲ್ಲಿ
ಅಡಗಿರುವ ಅನೇಕ ಹಾಗೂ ಅಮೂಲ್ಯ ಸಂಪತ್ತಿನಿಂದಾಗಿ ಇವಳನ್ನು ‘ಬಹುರತ್ನಾ ವಸುಂಧರಾ’ ಎಂದು
ಬಣ್ಣಿಸಲಾಗಿದೆ. ಬೇಂದ್ರೆಯವರು ತಮ್ಮ ಕವನದಲ್ಲಿ ಭೂಮಿತಾಯಿಯನ್ನು ‘ಚಿಗರಿಗಂಗಳ ಚೆಲುವಿ’ ಎಂದು ಕರೆದಿದ್ದಾರೆ. ಚಿಗರಿಯ ಕಣ್ಣುಗಳು ಸೌಂದರ್ಯಕ್ಕೆ ಹೆಸರಾದಂತಹವು. ಸಂಸ್ಕೃತ ಸಾಹಿತ್ಯದಲ್ಲಿಯೂ ಸಹ ಸುಂದರ ಕಣ್ಣುಗಳ ಸ್ತ್ರೀಯನ್ನು ‘ಮೃಗನಯನಿ’ ಎಂದು ಕರೆಯಲಾಗಿದೆ. ಆದರೆ ಈ ಕವನದಲ್ಲಿ ಭೂಮಿತಾಯಿ ಸುಂದರ ಕಣ್ಣುಗಳಿಗಾಗಿ ಚಿಗರಿಗಂಗಳ ಚೆಲುವಿಯಾಗಿಲ್ಲ ; ಅವಳು ಇಲ್ಲಿ ಹೆದರಿದ ಹರಿಣಿ. ಹೆದರಿದ ಹರಿಣಿಯನ್ನು ನೋಡುವವರಿಗೆ ಎದ್ದು ಕಾಣುವ ಸಂಗತಿ ಎಂದರೆ, ಹರಿಣಿಯ ಕಣ್ಣುಗಳು ; ಅತ್ತಿತ್ತ ಚಂಚಲವಾಗಿ ಚಲಿಸುವ ಬೆದರಿದ ಕಣ್ಣುಗಳು. ‘ಚಿಗರಿಗಂಗಳ ಚೆಲುವಿ’ ಈ ಕವನವು ಬೇಂದ್ರೆಯವರ ‘ಸಖೀಗೀತ’ ಕವನಸಂಕಲನದಲ್ಲಿ ಸೇರಿದೆ. ‘ಸಖೀಗೀತ’ವು ೧೯೩೭ರಲ್ಲಿ ಪ್ರಕಟವಾಯಿತು. ……………………………………………………………….. ‘ಚಿಗರಿಗಂಗಳ ಚೆಲುವಿ’ ಕವನವು ಮಾನವನ ವಿಕೃತ, ಜೀವಿರೋಧಿ ನಾಗರಿಕತೆಯ ದುರಂತವನ್ನು ಸೂಚಿಸುವ ಕವನ. ಮಾನವನ ನಾಗರಿಕತೆ ಪ್ರಾರಂಭವಾಗುವ ಮೊದಲು ಈ ಸೃಷ್ಟಿಯು ಒಂದು ಸುಂದರವಾದ ಬನವಾಗಿತ್ತು. ಅಲ್ಲಿರುವ ಸಸ್ಯಸಂಕುಲ ಹಾಗೂ ಪ್ರಾಣಿಸಂಕುಲ ಸಾಮರಸ್ಯದಲ್ಲಿ ಜೀವಿಸುತ್ತಿದ್ದವು. ನಾಗರಿಕತೆ ಪ್ರಾರಂಭವಾದಾಗಿನಿಂದ, ನಿಸರ್ಗದಲ್ಲಿದ್ದ ಸಾಮರಸ್ಯ ಹಾಳಾಯಿತೆನ್ನಬಹುದು. ಮಾನವನ ಸ್ವಾರ್ಥ ಹಾಗೂ ದುರಾಸೆಯ ಮೊದಲ ಪೆಟ್ಟು ಬಿದ್ದದ್ದು ಸಸ್ಯಸಂಕುಲಕ್ಕೆ ಹಾಗೂ ಇತರ ಪ್ರಾಣಿಗಳಿಗೆ. ಬಳಿಕ ಮನುಷ್ಯವರ್ಗದಲ್ಲಿಯೇ ನಡೆದ ಆಂತರಿಕ ಕಲಹಗಳಿಂದಾಗಿ, ಸಂಕಷ್ಟಗಳ ಸರಪಳಿಯೇ ಪ್ರಾರಂಭವಾಯಿತು. ಇದನ್ನು ಈ ಕವನದಲ್ಲಿ ಹಂತ ಹಂತವಾಗಿ ವರ್ಣಿಸಲಾಗಿದೆ. ಬೇಂದ್ರೆಯವರ ಕವನಗಳೆಂದರೆ, ಕವಿಯು ತನ್ನ ಭಾವನೆಗಳನ್ನು, ತನ್ನ ಸುಖ, ದುಃಖಗಳನ್ನು, ತನ್ನ ಅನುಭವಗಳನ್ನು ಎಲ್ಲರೊಡನೆ ಹಂಚಿಕೊಳ್ಳುವ ಕವನಗಳು. ಅವರ ಪ್ರಸಿದ್ಧ ಕವನವಾದ “ ಬೆಳಗು” ಕವನವು ಕೊನೆಗೊಳ್ಳುವದು, “ ಇದು ಬರಿ ಬೆಳಗಲ್ಲೊ ಅಣ್ಣಾ” ಎಂದು ಕವಿ ತನ್ನ ಹಿತಾನುಭವವನ್ನು ಹಂಚಿಕೊಳ್ಳುವದರೊಂದಿಗೆ. “ಚಿಗರಿಗಂಗಳ ಚೆಲುವಿ” ಕವನದಲ್ಲಿಯೂ ಸಹ ಕವಿಯು ತನ್ನ ದುಃಖವನ್ನು, ತನ್ನ ಆಕ್ರೋಶವನ್ನು ತನ್ನ ಗೆಳೆಯನೆದುರಿಗೆ ಹೇಳಿಕೊಳ್ಳುತ್ತಿದ್ದಾನೆ. ಕವನದ ಪೂರ್ತಿಪಾಠ ಹೀಗಿದೆ: ……………………………………………………………… ಚಿಗರಿಗಂಗಳ ಚೆಲುವಿ ಚೆದsರಿ ನಿಂತಾಳ ನೋಡೋ ಬೆದsರಿ ನಿಂತಾಳ ||ಪಲ್ಲವಿ|| ೧ ಹೊಳಿಹಳ್ಳ ತೊರೆದಾವೋ ಗೆಣೆಹಕ್ಕಿ ಬೆರೆದಾವೋ ಆಗದವರ ಹೊಟ್ಟಿ ಉರದಾವೋ ಗೆಣೆಯಾ ಉರದಾವs ಅಂಥವರ ದಿಟ್ಟಿ ಮನಿ ಮುರದಾವ; ಅದನ ತಾ ಕಂಡು ಕೊರಗ್ಯಾsಳೊ ಮರುಗ್ಯಾsಳೊ ಸೊರಗ್ಯಾsಳೋ ಹೂ ಕಾಯಿ ಹಣ್ಣು ತುಂಬಿದ ಬನದಾsಗ || ಚಿಗರಿಗಂಗಳ. . . . ೨ ಬ್ಯಾಟಿ ನಾಯೊದರ್ಯಾವೋ ಹಸುಜೀವ ಬೆದರ್ಯಾವೋ ಗಳಗಳನೆ ಗಿಡದೇಲಿ ಉದರ್ಯಾವೋ ಗೆಣೆಯಾ ಉದರ್ಯಾವs ದಿನ್ನಿ ಮಡ್ಡಿ ಗುಡ್ಡ ಅದರ್ಯಾವ; ಅದನ ತಾ ಕಂಡು ನೊಂದಾsಳೊ ಬೆಂದಾsಳೊ ಅಂದಾsಳೋ ‘ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲs’ || ಚಿಗರಿಗಂಗಳ. . . ೩ ಆಳುಗಳ ಹೋರಾಟ ಆಳುವವರಿಗೆ ಆಟ ಗಾಳಕ್ಕ ಸಿಕ್ಕ ಮೀನದ ಗೋಳಾಟೊ ಗೆಣೆಯಾ ಗೋಳಾಟೋ ಗೆದ್ದವರ ಇದ್ದವರ ಹಾರಾಟ; ಅರೆಸತ್ತ ಜೀವಾ ಕೊಳೆತಾsವೊ ಹುಳತಾsವೊ ಅಳತಾsವೋ ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ || ಚಿಗರಿಗಂಗಳ. . . ೪ ತನ್ನ ತಾ ಸುತ್ತ್ಯಾಳೊ ಹೊತ್ತಿನ ಬೆನ್ಹತ್ತ್ಯಾಳೊ ತಿಂಗಳನ ಬಗಲಾಗೆತ್ತ್ಯಾಳೊ ಗೆಣೆಯಾ ಎತ್ತ್ಯಾಳೊ ಉಕ್ಕುಕ್ಕುವ ದುಃಖ ಒಳಗೊತ್ತ್ಯಾಳೊ; ನಿಂತ ನೆಲವೆಂದು ಕಡಿಲಾsಕೊ ಬಡಿಲಾsಕೊ ಒಡಿಲಾsಕೊ ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾsಳೋ || ಚಿಗರಿಗಂಗಳ. . . ……………………………………………………………. ಕವನದ ಮೊದಲ ನುಡಿ ಹೀಗಿದೆ: ಹೊಳಿಹಳ್ಳ ತೊರೆದಾವೋ ಗೆಣೆಹಕ್ಕಿ ಬೆರೆದಾವೋ ಆಗದವರ ಹೊಟ್ಟಿ ಉರದಾವೋ ಗೆಣೆಯಾ ಉರದಾವs ಅಂಥವರ ದಿಟ್ಟಿ ಮನಿ ಮುರದಾವ; ಅದನ ತಾ ಕಂಡು ಕೊರಗ್ಯಾsಳೊ ಮರುಗ್ಯಾsಳೊ ಸೊರಗ್ಯಾsಳೋ ಹೂ ಕಾಯಿ ಹಣ್ಣು ತುಂಬಿದ ಬನದಾsಗ || ಚಿಗರಿಗಂಗಳ. . . . ಈ ನುಡಿ ಪ್ರಾರಂಭವಾಗುವದು ಸಾಮರಸ್ಯದಿಂದ ಕೂಡಿದ ಸಮೃದ್ಧ ನಿಸರ್ಗದ ವರ್ಣನೆಯೊಂದಿಗೆ : “ಹೊಳಿಹಳ್ಳ ತೊರೆದಾವೋ ಗೆಣೆಹಕ್ಕಿ ಬೆರೆದಾವೋ ” ನಿಸರ್ಗದ ಸಂಪನ್ಮೂಲಗಳಾದ ಹಾಗೂ ಜೀವರಾಶಿಯ ಬೆಳವಣಿಗೆಗೆ ಅವಶ್ಯವಿರುವ ಹೊಳೆಹಳ್ಳಗಳು ತೊರೆಯುತ್ತಿವೆ ಅಂದರೆ ತುಂಬಿಕೊಂಡು ಸಮೃದ್ಧವಾಗಿ ಹರಿಯುತ್ತಿವೆ. ಈ ಸಂಪನ್ಮೂಲಗಳನ್ನು ಭೋಗಿಸುವ ಜೀವರಾಶಿಯಾದ ಹಕ್ಕಿಗಳು ಬೆರೆದಿವೆ ಅಂದರೆ ಹೊಸ ಸೃಷ್ಟಿಯ ಕ್ರಿಯೆಯಲ್ಲಿ ತೊಡಗಿಕೊಂಡಿವೆ. ಇದೆಲ್ಲ ಮನಸ್ಸನ್ನು ಮುದಗೊಳಿಸುವ ನೋಟ. ಆದರೆ ಈ ಸಾಮರಸ್ಯದ ಪರಿಸ್ಥಿತಿಗೆ ಈಗ ಭಂಗ ಬಂದಿದೆ. ಯಾಕೆಂದರೆ: “ಆಗದವರ ಹೊಟ್ಟಿ ಉರದಾವೋ ಗೆಣೆಯಾ ಉರದಾವs ಅಂಥವರ ದಿಟ್ಟಿ ಮನಿ ಮುರದಾವ ” ನಿಸರ್ಗದ ಈ ಸಾಮರಸ್ಯವನ್ನು ಸಹಿಸಲಾರದ ಜೀವಿ ಇಲ್ಲೊಂದಿದೆ. ಅದು ಮಾನವ ಜೀವಿ. ಮಾನವನ ಹೊರತಾಗಿ ಉಳಿದೆಲ್ಲ ಪಶು, ಪಕ್ಷಿಗಳನ್ನು ನಾವು ಆದಿವರ್ಗದ ಜೀವಿಗಳು ಎನ್ನಬಹುದು. ಈ ಅಮಾಯಕ ಜೀವಿಗಳು ನಿಸರ್ಗದೊಡನೆ ಒಂದಾಗಿ ಬಾಳುತ್ತಿವೆ. ಆದರೆ, ಮಾನವ ಎನ್ನುವ ಈ ಜೀವಿಗೆ ದುರಾಸೆ ಬಹಳ. ನಿಸರ್ಗದ ಸಂಪತ್ತನ್ನೆಲ್ಲ ತಾನೇ ಭೋಗಿಸುವ ಸ್ವಾರ್ಥ ಈ ಜೀವಿಗೆ. ಈ ಜೀವಿಗೆ ಬೇರೆ ಜೀವಿಗಳ ಸೌಖ್ಯವನ್ನು ಕಂಡರೆ ಸಹಿಸಲಾಗುವದಿಲ್ಲ. ಇವನಿಗೆ ಉಳಿದ ಜೀವಿಗಳ ಮೇಲೆ ಹೊಟ್ಟೆಕಿಚ್ಚು. ಅದಕ್ಕೆ ಬೇಂದ್ರೆ ಹೇಳುತ್ತಾರೆ: “ಆಗದವರ ಹೊಟ್ಟಿ ಉರದಾವೋ ಗೆಣೆಯಾ ಉರದಾವs” ಇಷ್ಟೇ ಅಲ್ಲ, ಇಂಥವರ ಕೆಟ್ಟ ದೃಷ್ಟಿಯಿಂದಾಗಿ (evil eye) ‘ಮನಿ ಮುರದಾವ’. ಇಲ್ಲಿಯವರೆಗೆ, ಒಂದು ಕ್ರಮದಿಂದ ನಡೆಯುತ್ತಿದ್ದಂತಹ ಸಂಸ್ಥೆ , ಎಲ್ಲ ಜೀವಿಗಳಿಗೆ ನೆಲೆಯಾದ ನಿಸರ್ಗದ ಆಶ್ರಯ (=ಮನಿ) ಈಗ ಭಗ್ನವಾಗುತ್ತಿದೆ. ಆದರೆ ಭೂಮಿತಾಯಿ ನಿಸ್ಸಹಾಯಕಳು. ತನ್ನ ಒಡಲೆಲ್ಲ ಹೂ,ಕಾಯಿ ಹಾಗು ಹಣ್ಣುಗಳಿಂದ ತುಂಬಿದೆ. ಅದನ್ನೆಲ್ಲ ದುರಾಸೆಯಿಂದ ದೋಚುತ್ತಿರುವವರನ್ನು ಅವಳು ತಡೆಯುವದೆಂತು? ಹೀಗಾಗಿ, ಅವಳು ಕೊರಗುತ್ತಿದ್ದಾಳೆ (ಪರಿಸ್ಥಿತಿಯ ಬಗೆಗೆ), ಮರಗುತ್ತಿದ್ದಾಳೆ (ದುರ್ಬಲರ ಬಗೆಗೆ), ಹಾಗೂ ಈ ಶೋಷಣೆಯಿಂದಾಗಿ ಸೊರಗುತ್ತಿದ್ದಾಳೆ (ಸ್ವತಃ). “ಅದನ ತಾ ಕಂಡು ಕೊರಗ್ಯಾsಳೊ ಮರುಗ್ಯಾsಳೊ ಸೊರಗ್ಯಾsಳೋ ಹೂ ಕಾಯಿ ಹಣ್ಣು ತುಂಬಿದ ಬನದಾsಗ || ಚಿಗರಿಗಂಗಳ. . . . .” ಈ ದುರಾಕ್ರಮಣಕ್ಕೆ ಹೆದರಿದ ಅವಳು (ಸ್ಥಿರತೆ=)ಸ್ಥೈರ್ಯವನ್ನು ಕಳೆದುಕೊಂಡಿದ್ದಾಳೆ. ಆದುದರಿಂದ ಧಾವಿಸಲು ಯತ್ನಿಸುವ ಹರಿಣಿಯಂತೆ ಚೆದರಿ(=scattered) ನಿಂತಿದ್ದಾಳೆ. ಯಾವ ಗಳಿಗೆಯಲ್ಲಿ ಯಾರು ಆಕ್ರಮಣ ಮಾಡುತ್ತಾರೊ ಎಂದು ಬೆದರಿ ನಿಂತಿದ್ದಾಳೆ. ಸ್ಥೈರ್ಯ ಹಾಗು ಧೈರ್ಯವನ್ನು ಕಳೆದುಕೊಂಡ ಹರಿಣಿ ಇವಳು. ಇದು ಈ ಕವನದ ಪಲ್ಲವಿ ಅಂದರೆ recurring theme. “ಚಿಗರಿಗಂಗಳ ಚೆಲುವಿ ಚೆದsರಿ ನಿಂತಾಳ ನೋಡೋ ಬೆದsರಿ ನಿಂತಾಳ .” ……………………………………………………………… ಮೊದಲನೆಯ ನುಡಿಯಲ್ಲಿ ಒಂದು static picture ಇದೆ. ತಾನು ಸಮೃದ್ಧವಾದ ಬನದಲ್ಲಿದ್ದೂ, ಮನೆಮುರುಕರ ದುರಾಸೆಯ ‘ಕೆಟ್ಟ ಕಣ್ಣಿ’ನಿಂದ ಹೆದರಿದ, ಎಲ್ಲಿ ಓಡಬೇಕೊ ತಿಳಿಯದ ಅಸಹಾಯಕ ಹರಿಣಿಯ ಚಿತ್ರವಿದೆ. ಎರಡನೆಯ ನುಡಿಯಲ್ಲಿ ಆಕ್ರಮಣದ ಚಿತ್ರವಿದೆ. ಬ್ಯಾಟಿ ನಾಯೊದರ್ಯಾವೋ ಹಸುಜೀವ ಬೆದರ್ಯಾವೋ ಗಳಗಳನೆ ಗಿಡದೇಲಿ ಉದರ್ಯಾವೋ ಗೆಣೆಯಾ ಉದರ್ಯಾವs ದಿನ್ನಿ ಮಡ್ಡಿ ಗುಡ್ಡ ಅದರ್ಯಾವ; ಅದನ ತಾ ಕಂಡು ನೊಂದಾsಳೊ ಬೆಂದಾsಳೊ ಅಂದಾsಳೋ ‘ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲs’ || ಚಿಗರಿಗಂಗಳ. . . ಬೇಂದ್ರೆ ಈ ನುಡಿಯಲ್ಲಿ ಪಳಗಿಸಿದ ಬೇಟೆಯ ನಾಯಿಗಳ ಸಂಕೇತವನ್ನು ಬಳಸುತ್ತಿದ್ದಾರೆ. ಮಾನವನ ನಾಗರಿಕತೆಯಲ್ಲಿ ಜರುಗಿದ revolutionದ, ಅಂದರೆ Hunting stageದ ಚಿತ್ರವಿದು. ಬೇಟೆಯಾಡುವ ಪ್ರಾಣಿಗಳನ್ನು domesticate ಮಾಡಿ, ಅವುಗಳಿಂದ ಬೇಟೆಯಾಡಿಸುವ ಮಾನವ ಬುದ್ಧಿಯ ಚಿತ್ರವಿಲ್ಲಿದೆ. ಈ ಬೇಟೆಗೆ ‘ಹಸುಜೀವ’ ಬೆದರ್ಯಾವೊ. ಹಸು ಇದು ಪಶು ಪದದ ತದ್ಭವವಾಗಿದ್ದರೂ ಸಹ, ರೂಢಿಯಲ್ಲಿ ಹಸು ಅಂದರೆ ಆಕಳು ; ಆದುದರಿಂದ ಹಸುಜೀವ ಅಂದರೆ ಸಾಧು ಪ್ರಾಣಿಗಳು. By indirect implication, ಇದು invaders ಹಾಗು invaded ಜನಾಂಗದವರನ್ನೂ ಸಹ ಸೂಚಿಸುತ್ತಿದೆ. ಭಾರತ ದೇಶವನ್ನೇ ಉದಾಹರಣೆಗೆ ತೆಗೆದುಕೊಳ್ಳಬಹುದು. ಪ್ರಾಚೀನ ಕಾಲದಿಂದಲೂ ಈ ದೇಶದ ಮೇಲೆ ಆಕ್ರಮಣಗಳು ನಡೆಯುತ್ತಲೆ ಇವೆ. ಸುಸಂಸ್ಕೃತರಾದ ಹಾಗು ಆ ಕಾರಣದಿಂದಲೇ ದುರ್ಬಲರಾದ ಇಲ್ಲಿಯ ಜನತೆ, barbarian ಆಕ್ರಮಣಕಾರರಿಂದ ಅತ್ಯಾಚಾರಕ್ಕೊಳಗಾಗುತ್ತಲೆ ಬಂದಿದ್ದಾರೆ. ಈ ಅತ್ಯಾಚಾರದಿಂದ ಪ್ರಕೃತಿಯೂ ಸಹ ಕಂಪಿಸಿದೆ ; ಗಿಡದ ಎಲೆಗಳು ಗಳಗಳನೆ ಉದರಿವೆ. ಅಷ್ಟೇ ಏಕೆ, ನಿರ್ಜೀವ ವಸ್ತುವಾದ ದಿನ್ನಿ, ಮಡ್ಡಿ, ಗುಡ್ಡ ಸಹ ನಡುಗಿವೆ. ಬೇಂದ್ರೆಯವರು ಈ ವರ್ಣನೆಗಳಲ್ಲಿ gradation ಉಪಯೋಗಿಸುವದನ್ನು ಗಮನಿಸಬೇಕು. ಮೊದಲು ಸಾಧುಪ್ರಾಣಿಗಳಿಗಾದ ಆಘಾತ ವರ್ಣಿಸಿ, ಆ ಬಳಿಕ ಸಸ್ಯಗಳಿಗಾದ ಆಘಾತವನ್ನು ಬಣ್ಣಿಸಲಾಗಿದೆ. ಆ ಬಳಿಕ ನಿರ್ಜೀವ ವಸ್ತುಗಳಿಗಾದ ಆಘಾತ ಬಣ್ಣಿಸಲಾಗಿದೆ. ಅಲ್ಲೂ ಸಹ, ಮೊದಲು ‘ದಿನ್ನಿ’, ಬಳಿಕ ಅದಕ್ಕಿಂತ ದೊಡ್ಡದಾದ ‘ಮಡ್ಡಿ’, ಬಳಿಕ ಅದಕ್ಕೂ ದೊಡ್ಡ ವಸ್ತುವಾದ ‘ಗುಡ್ಡ’ವನ್ನು ಬಣ್ಣಿಸಲಾಗಿದೆ. ಈ ರೀತಿಯಾಗಿ ಕಲ್ಪನೆಯಲ್ಲೂ ಸಹ ಕ್ರಮಬದ್ಧತೆಯನ್ನು ಅನುಸರಿಸುವದು ಬೇಂದ್ರೆಯವರ ವೈಶಿಷ್ಟ್ಯವಾಗಿದೆ. ಮೊದಲನೆಯ ನುಡಿಯ ಎರಡನೆಯ ಭಾಗದಲ್ಲಿ ಭೂಮಿತಾಯಿ ಮರುಗಿದಂತೆ, ಇಲ್ಲೂ ಸಹ ಅವಳು ಸಂಕಟಪಡುವ ಚಿತ್ರವಿದೆ: ಅದನ ತಾ ಕಂಡು ನೊಂದಾsಳೊ ಬೆಂದಾsಳೊ ಅಂದಾsಳೋ ‘ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲs’ || ಚಿಗರಿಗಂಗಳ. . . ವಸುಂಧರೆಗೆ ಪ್ರತಿ ಜೀವಿಯೂ,-- ಸಸ್ಯವೇ ಇರಲಿ ಅಥವಾ ಚಿಕ್ಕ ಪ್ರಾಣಿಯೇ ಇರಲಿ,-- ತನ್ನ ಮಗುವೆ. ಹೀಗಾಗಿ ಇಲ್ಲಿ ನಡೆಯುತ್ತಿರುವ ‘ಜೀವದ ಬೇಟೆ’ಯನ್ನು ಕಂಡು ಅವಳು ಶೋಕಿಸುತ್ತಿದ್ದಾಳೆ. ……………………………………………......... ಮೂರನೆಯ ನುಡಿಯಲ್ಲಿ, ಮಾನವನ ಕ್ರಾಂತಿ ಇನ್ನೂ ಮೇಲಕ್ಕೇರಿದೆ. ಇದೀಗ ಆತ ರಾಜ್ಯಗಳನ್ನು ಕಟ್ಟಿಕೊಂಡಿದ್ದಾನೆ. ಪರರಾಜ್ಯಗಳನ್ನು ಆಕ್ರಮಿಸಿ ಚಕ್ರವರ್ತಿಯಾಗುತ್ತಿದ್ದಾನೆ. ಆದರೆ, ನಾಗರಿಕತೆಯ ಈ ಆಟದಲ್ಲಿ ಸ್ವತಃ ಮಾನವನೇ ಬಲಿಯಾಗುತ್ತಿದ್ದಾನೆ. ಆಳುಗಳ ಹೋರಾಟ ಆಳುವವರಿಗೆ ಆಟ ಗಾಳಕ್ಕ ಸಿಕ್ಕ ಮೀನದ ಗೋಳಾಟೊ ಗೆಣೆಯಾ ಗೋಳಾಟೋ ಗೆದ್ದವರ ಇದ್ದವರ ಹಾರಾಟ; ಅರೆಸತ್ತ ಜೀವಾ ಕೊಳೆತಾsವೊ ಹುಳತಾsವೊ ಅಳತಾsವೋ ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ || ಚಿಗರಿಗಂಗಳ. . . ಹೋರಾಟವೆನ್ನುವದು, ರಾಜ್ಯವಿಸ್ತಾರ ಎನ್ನುವದು ಇವೆಲ್ಲ ಆಳುವವರಿಗೆ ಒಂದು ಆಟ. ಆದರೆ ಹೋರಾಟದಲ್ಲಿ ತೊಡಗಿದ ಆಳುಗಳಿಗೆ ಹಾಗೂ ಅಮಾಯಕ ಪ್ರಜೆಗಳಿಗೆ ಈ ಹೋರಾಟವೆನ್ನುವದು ಒಂದು ದುಃಸ್ವಪ್ನವಿದ್ದಂತೆ. ಕೌರವ-ಪಾಂಡವರ ಯುದ್ಧವೇ ಆಗಲಿ, ಜಾಗತಿಕ ಯುದ್ಧವೇ ಆಗಲಿ, ಸಾಮಾನ್ಯ ಜನತೆಗೆ ಅದು ಬೇಕಾಗಿಲ್ಲದ ಯುದ್ಧ. ಅವರು ಗಾಳಕ್ಕೆ ಸಿಕ್ಕ ಮೀನಿನಂತೆ ಚಡಪಡಿಸುತ್ತಾರೆ. ಎಷ್ಟೇ ಕಣ್ಣೀರು ಹಾಕಿದರೇನು, ಗಾಳವು ಮೀನಿಗೆ ದಯೆ ತೋರುವದೆ? ಈ ಹೋರಾಟದಲ್ಲಿ ಗೆದ್ದವರು ಹಾಗು ಬದುಕಿದ್ದವರು ಸತ್ತವರ ಮೇಲೆ ಬಾವುಟ ಹಾರಿಸುತ್ತಾರೆ. ಸೋತು ಬದುಕುಳಿದವರ ಪಾಡು ನಾಯಿಪಾಡು. ಅವರು ಅರೆಸತ್ತಂತವರು. ಅವರ ಬದುಕು ಕೊಳೆತು ಹೋಗುತ್ತದೆ, ಹುಳತು ಹೋಗುತ್ತದೆ, ಅಳುವುದೊಂದೇ ಅವರಿಗೆ ಉಳಿದ ಬದುಕು. ಇದನ್ನು ಕಂಡ ಭೂಮಿತಾಯಿಗೆ ಹೇಗೆ ಅನಿಸುತ್ತದೆ? ನಾನಾ ಜೀವಿಗಳಿಗೆ ಜನ್ಮ ಕೊಡುತ್ತಿರುವ, ಅನ್ನ ಕೊಡುತ್ತಿರುವ, ತಾಯಿ ವಸುಂಧರೆಗೆ ಹೇಗೆನ್ನಿಸುತ್ತದೆ? ‘ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ.’ Her womb is a burial ground for her babies. ಬೇಂದ್ರೆಯವರ ಉಪಮೆಗಳಲ್ಲಿ ಅತಿ ಕಠೋರವಾದ ಉಪಮೆ ಇದು ಎಂದು ಹೇಳಬಹುದು. ಅವರ ಮತ್ತೊಂದು ರಚನೆ ‘ನೀ ಹೀಂಗ ನೋಡಬ್ಯಾಡ ನನ್ನ’ ಕವನದಲ್ಲಿ ಸಹ ಶೋಕರಸದ ಉನ್ನತ ಉಪಮೆಯೊಂದಿದೆ: “ಹುಣ್ಣವಿ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲುತ ಹಗಲs”. ಆದರೆ ಈ ಉಪಮೆಯಲ್ಲಿ ಶೋಕವಷ್ಟೇ ಅಲ್ಲದೆ, ಕ್ರೌರ್ಯವಿದೆ. ………………………………………………………....... ಕೊನೆಯ ನುಡಿಯಲ್ಲಿ, ಭೂಮಿತಾಯಿಯ ಈ ಬವಣೆ, ಕೊನೆಯಿಲ್ಲದ ಬವಣೆ ಎನ್ನುವ ಭಾವನೆಯನ್ನು ಕವಿ ವ್ಯಕ್ತಪಡಿಸುತ್ತಾರೆ: ತನ್ನ ತಾ ಸುತ್ತ್ಯಾಳೊ ಹೊತ್ತಿನ ಬೆನ್ಹತ್ತ್ಯಾಳೊ ತಿಂಗಳನ ಬಗಲಾಗೆತ್ತ್ಯಾಳೊ ಗೆಣೆಯಾ ಎತ್ತ್ಯಾಳೊ ಉಕ್ಕುಕ್ಕುವ ದುಃಖ ಒಳಗೊತ್ತ್ಯಾಳೊ; ನಿಂತ ನೆಲವೆಂದು ಕಡಿಲಾsಕೊ ಬಡಿಲಾsಕೊ ಒಡಿಲಾsಕೊ ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾsಳೋ || ಚಿಗರಿಗಂಗಳ. . . . ವಾಸ್ತವತೆ ಹಾಗು ಕಲ್ಪನೆಗಳನ್ನು ಕರಗಿಸಿ ಒಂದಾಗಿಸುವ ಬೇಂದ್ರೆ ಪ್ರತಿಭೆ ಇಲ್ಲಿ ಮತ್ತೊಮ್ಮೆ ಕಾಣುತ್ತದೆ. ಓರ್ವ ಅಸಹಾಯಕ ಸ್ತ್ರೀ, ಸಂಕಟಗಳಿಂದ ಪಾರಾಗಲು ತನ್ನ ಸೀಮಿತ ಪರಿಧಿಯಲ್ಲಿ ಸುತ್ತುವಳು ಎನ್ನುವ ಅರ್ಥವನ್ನು ಕೊಡುವ ಮೊದಲ ಸಾಲು, ಭೂಮಿಯು ತನ್ನ ಅಕ್ಷದ ಸುತ್ತಲೂ ತಿರುಗುವ ವಾಸ್ತವವನ್ನೂ ಹೇಳುತ್ತದೆ. ಅದರಂತೆ ‘ಹೊತ್ತಿನ ಬೆನ್ಹತ್ತ್ಯಾಳೊ’ ಎನ್ನುವ ಸಾಲು ಅವಳು ತನ್ನ ದುಃಖಗಳನ್ನು ನಿವಾರಿಸಲು ಕಾಲವನ್ನು ಕಾಯುತ್ತಿದ್ದಾಳೆ ಎನ್ನುವ ಅರ್ಥದ ಜೊತೆಗೇ, ಸೂರ್ಯನ (=ಹೊತ್ತಿನ) ಸುತ್ತಲೂ ತಿರುಗುವ ಭೂಮಿಯನ್ನೂ ಸಹ ಸೂಚಿಸುತ್ತದೆ. ‘ತಿಂಗಳನ ಬಗಲಾಗೆತ್ತ್ಯಾಳೊ’ ಎನ್ನುವ ಸಾಲು ಹಸುಗೂಸನ್ನು ಎತ್ತಿಕೊಂಡ ಹೆಂಗಸಿನ ಚಿತ್ರವನ್ನು ಕೊಡುತ್ತದೆ; ಅದರಂತೆಯೇ ಚಂದ್ರನು (=ತಿಂಗಳನು) ಭೂಮಿಯ ಸುತ್ತಲೂ ತಿರುಗುತ್ತಿರುವ ವಾಸ್ತವವನ್ನೂ ಒಳಗೊಂಡಿದೆ. ಇಂತಹ ಭೂಮಿತಾಯಿ ತನ್ನ ದುಃಖವನ್ನು ತನ್ನೊಳಗೇ ಒತ್ತಿ ಹಿಡಿದುಕೊಂಡು, ತನ್ನ ಬುದ್ಧಿಶಾಲಿ (!) ಮಕ್ಕಳಿಗೆ ಅಂದರೆ ಮಾನವರಿಗೆ ಅಂಗಲಾಚುತ್ತಿದ್ದಾಳೆ: ನಿಂತ ನೆಲವೆಂದು ಕಡಿಲಾsಕೊ ಬಡಿಲಾsಕೊ ಒಡಿಲಾsಕೊ ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾsಳೋ. ಆಳುವವರಿಗೆ ಹೆಣ್ಣು, ಹೊನ್ನು, ಮಣ್ಣು ಇವು ತಮ್ಮ ಘನತೆಯನ್ನು ಸಾರುವ ಆಭರಣಗಳು ; ದೊಡ್ಡಸ್ತಿಕೆ ತೋರುವ status- symbols. ನವಾಬನ ಜನಾನಾ ದೊಡ್ಡದಿದ್ದಷ್ಟೂ ಆತ ದೊಡ್ಡ ನವಾಬ. ಆದರೆ, ಆತನ ದೊಡ್ಡಸ್ತಿಕೆಗಾಗಿ ಬಲಿಯಾಗುವ ಜನರ ಕಣ್ಣೀರನ್ನು ಆತ ಗಮನಿಸುವದಿಲ್ಲ. ಇದನ್ನೇ ಭೂತಾಯಿ ಹೀಗೆ ಹೇಳುತ್ತಾಳೆ: ನನ್ನನ್ನು ನಿರ್ಜೀವ ನೆಲವೆಂದು ತಿಳಿದು ಕಡಿಯಬೇಡ; ನಾನು ಕೇವಲ ಒಡವೆ ಅಲ್ಲ, ನಾನು ಉಸಿರಿರುವ ಒಡಲು; ಯಾಕೆಂದರೆ ನನ್ನ ಉಸಿರಿನಿಂದಲೆ ಬದಕುತ್ತಿವೆ ನನ್ನಲ್ಲಿಯ ಕೋಟಿ ಕೋಟಿ ಜೀವಿಗಳು. ‘ಒಡವ್ಯಲ್ಲೊ ಮಗನೆ ಉಸಿರಿದ್ದೊಡಲೊ’! ……………………………………………………....... ಬೇಂದ್ರೆಯವರ ಕಾಲದಲ್ಲಿಯೇ, ಎಲ್ಲಾ ಯುರೋಪಿಯನ್ ದೇಶಗಳು ಏಶಿಯಾ ಹಾಗೂ ಆಫ್ರಿಕಾ ಖಂಡದ ದೇಶಗಳಲ್ಲಿ ಕ್ರೌರ್ಯದಿಂದ ಅಧಿಕಾರ ಸ್ಥಾಪಿಸಿ, ಆ ದೇಶಗಳನ್ನು ಶೋಷಿಸುತ್ತಿದ್ದವು. ಭಾರತವಂತೂ ಪುರಾತನ ಕಾಲದಿಂದಲೇ ಆಕ್ರಮಣಗಳನ್ನು ಎದುರಿಸುತ್ತ ಬಂದ ನಾಡು. ಈ ಎಲ್ಲ ಸಂಗತಿಗಳು ಬೇಂದ್ರೆಯವರಿಗೆ ಈ ಕವನವನ್ನು ಬರೆಯಲು ಪ್ರೇರಣೆ ಕೊಟ್ಟಿರಬೇಕು. ಇಂತಹದೇ ಇನ್ನೊಂದು ಕವನವನ್ನು ಅವರು ರಚಿಸಿದ್ದಾರೆ : ‘ಮೊದಲಗಿತ್ತಿ’ (ಮೊದಲಗಿತ್ತಿಯಂತೆ ಮೆರೆಯುವಿಯೇ ತಾಯಿ| ಮೊದಲಗಿತ್ತಿಯಂತೆ ಮೆರೆಯುತಿಹೆ.) ಮಾನವನ ನಾಗರಿಕತೆ ಬೆಳೆದಂತೆಲ್ಲ ಶೋಷಣೆಯೂ ಹೆಚ್ಚುತ್ತ ಹೋದದ್ದನ್ನು ಅವರು ತಮ್ಮ ‘ಕರಡಿ ಕುಣಿತ’ ಕವನದಲ್ಲಿ ಬಣ್ಣಿಸಿದ್ದಾರೆ: ಯಾವ ಕಾಡಡವಿಯಲ್ಲಿ ಜೇನುಂಡು ಬೆಳೆದಿದ್ದ ಜಾಂಬುವಂತನ ಹಿಡಿದು ತಂದಾನೊ ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ ಧಣಿ ದಾನ ಕೊಡುವನು ಎಂದಾನೊ. ಜಾಂಬುವಂತ ಅಂದರೆ ಮೂಲಜನಾಂಗದ ಪ್ರತಿನಿಧಿ. ಧಣಿ ಅಂದರೆ feudal societyಯ ಪ್ರತಿನಿಧಿ. ಅಡವಿಯಲ್ಲಿ ಸ್ವತಂತ್ರನಾಗಿ, ಜೇನುಂಡು ಬದುಕುತ್ತಿದ್ದ ಕರಡಿಯನ್ನು, ನಾಗರಿಕ ಮಾನವನು ಹಿಡಿದು ತಂದು, ಧಣಿ ಕೊಡುವ ದಾನಕ್ಕಾಗಿ (!) ಸಲಾಮು ಹೊಡಿಸುತ್ತಾನೆ! ಬೇಂದ್ರೆಯವರದು ಭಾರತೀಯ ಆದರ್ಶ, ಈಶಾವಾಸ್ಯ ಉಪನಿಷತ್ದಲ್ಲಿ ಹೇಳುವಂತೆ : “ಈಶಾವಾಸ್ಯಮಿದಮ್ ಸರ್ವಮ್,ಯತ್ಕಿಂಚ ದುರಿತಮ್ ಮಯಿ; ತೇನ ತ್ಯಕ್ತೇನ ಭುಂಜೀಥಾ:, ಮಾ ಗೃಧ: ಕಸ್ಯಸ್ವಿದ್ಧನಮ್. ಈ ಆದರ್ಶವನ್ನು ಬಿಂಬಿಸುವ ಕವನಗಳೂ ಸಹ ಅವರಿಂದ ಹೊಮ್ಮಿವೆ. ಉದಾಹರಣೆಗೆ, ಅವರ ‘ಬೈರಾಗಿಯ ಹಾಡು’ ಎನ್ನುವ ಅತಿ ಚಿಕ್ಕ ಕವನವೊಂದನ್ನು ನೋಡಬಹುದು: ಬೈರಾಗಿಯ ಹಾಡು ಇಕೋ ನೆಲ-ಅಕೋ ಜಲ ಅದರ ಮೇಲೆ ಮರದ ಫಲ ಮನದೊಳಿದೆ ಪಡೆವ ಛಲ ಬೆಳೆವಗೆ ನೆಲವೆಲ್ಲ ಹೊಲ. ಜಲಧಿವರೆಗು ಒಂದೆ ಕುಲ ಅನ್ನವೆ ಧರ್ಮದ ಮೂಲ ಪ್ರೀತಿಯೆ ಮೋಕ್ಷಕ್ಕೆ ಬಲ ಇದೇ ಶೀಲ ಸರ್ವಕಾಲ || ಇಕೋ ನೆಲ….. ………………………………………………....... ಟಿಪ್ಪಣಿ: ಕನಸುಗಾತಿ ತಮ್ಮ blog ಭಾವಸಂಗಮದಲ್ಲಿ, enjabment ಎನ್ನುವ ಒಂದು ಇಂಗ್ಲಿಶ್ ಅಲಂಕಾರದ ಬಗೆಗೆ ವಿವರಿಸಿದ್ದಾರೆ. ನಾನು ತಿಳಿದುಕೊಂಡ ಪ್ರಕಾರ ಕವನದ flow ಅನ್ನು ಒಂದು extra ಸಾಲಿನ ಮೂಲಕ ಇಲ್ಲಿ ಮುರಿಯಲಾಗುತ್ತದೆ. ಬೇಂದ್ರೆ ತಮ್ಮ ಈ ಕವನದಲ್ಲಿ enjambment ಅನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆ. ಮೊದಲನೆಯ ನುಡಿಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ: ಹೊಳಿಹಳ್ಳ ತೊರೆದಾವೋ ಗೆಣೆಹಕ್ಕಿ ಬೆರೆದಾವೋ ಆಗದವರ ಹೊಟ್ಟಿ ಉರದಾವೋ ಗೆಣೆಯಾ ಉರದಾವs ಅಂಥವರ ದಿಟ್ಟಿ ಮನಿ ಮುರದಾವ; ಅದನ ತಾ ಕಂಡು ಕೊರಗ್ಯಾsಳೊ ಮರುಗ್ಯಾsಳೊ ಸೊರಗ್ಯಾsಳೋ ಹೂ ಕಾಯಿ ಹಣ್ಣು ತುಂಬಿದ ಬನದಾsಗ . ಈ ನುಡಿಯ ಮೊದಲ ನಾಲ್ಕು ಸಾಲುಗಳಲ್ಲಿ ಒಂದು ಚಿತ್ರವಿದೆ ; ಕೊನೆಯ ನಾಲ್ಕು ಸಾಲುಗಳಲ್ಲಿ ಭೂಮಿತಾಯಿಯ ಸಂಕಟವಿದೆ. ಇವುಗಳ ಪ್ರವಾಹವನ್ನು ನಡುವಿನ ಸಾಲು ಅಂದರೆ ಐದನೆಯ ಸಾಲು ಮುರಿಯುತ್ತದೆ. ಇದೇ ರೀತಿಯಾಗಿ ಇತರ ನುಡಿಗಳಲ್ಲೂ ಸಹ, ಮೊದಲ ನಾಲ್ಕು ಸಾಲುಗಳನ್ನು ಹಾಗು ಕೊನೆಯ ನಾಲ್ಕು ಸಾಲುಗಳನ್ನು ,ನಡುವಿನ ಅಂದರೆ ಐದನೆಯ ಸಾಲು ಪ್ರತ್ಯೇಕಿಸುತ್ತದೆ. ಈ ಕವನದ ಇನ್ನೊಂದು ರಚನಾವೈಶಿಷ್ಟ್ಯವನ್ನು ಗಮನಿಸಬಹುದು : ಪ್ರತಿಯೊಂದು ನುಡಿಯಲ್ಲಿ ಮೊದಲ ನಾಲ್ಕು ಸಾಲುಗಳು ಭೂಮಿತಾಯಿಯ ಒಂದು ಸ್ಥಿತಿಯನ್ನು ಬಣ್ಣಿಸುತ್ತವೆ. ಕೊನೆಯ ನಾಲ್ಕು ಸಾಲುಗಳು ಅವಳು ದುಃಖಿಸುವದನ್ನು ಬಣ್ಣಿಸುತ್ತವೆ. ಮೊದಲನೆಯ ನುಡಿಯಿಂದ ಕೊನೆಯ ನುಡಿಯವರೆಗೆ, ವಸುಂಧರೆಯ ದುರಂತ ಗಂಭೀರವಾಗುತ್ತ ಹೋಗುವದನ್ನು ವರ್ಣಿಸಲಾಗಿದೆ. “ಚಿಗರಿಗಂಗಳ ಚೆಲುವಿ” ಸ್ವತಃ ಬೇಂದ್ರೆಯವರಿಗೇ ಪ್ರಿಯವಾದ ಕವನವಾಗಿತ್ತು. ಹೆಚ್ಚಿನ ಓದಿಗೆ:http://sallaap.blogspot.com/2008/09/blog-post.html ೨.ಪರಾಗ
’ಪರಾಗ’ ಕವನವು ಬೇಂದ್ರೆಯವರ ಸಖೀಗೀತದಲ್ಲಿ ಸೇರಿದೆ. ಕವನದ ಪೂರ್ತಿಪಾಠವು ಹೀಗಿದೆ: ಬಾ ಭೃಂಗವೆ ಬಾ, ವಿರಾಗಿಯಂದದಿ ಭ್ರಮಿಸುವಿ ನೀನೇಕೆ? ಕಂಪಿನ ಕರೆಯಿದು ಸರಾಗವಾಗಿರೆ ಬೇರೆಯ ಕರೆ ಬೇಕೆ? ಬರಲಿಹ ಕಾಯಿಯ ಪಾಡಿನ ರುಚಿಯೂ ಇದರೊಳು ಮಡಗಿಹುದು. ನಾಳಿನ ಹಣ್ಣಿನ ರಸವಿಲ್ಲಿಯ ಮಕ- ರಂದದೊಳಡಗಿಹುದು. ಕವನ ಕೋಶದೀ ಕಮಲ ಗರ್ಭದಲ್ಲಿ ಪರಾಗವೊರಗಿಹುದು. ನಿನ್ನ ಮುಖಸ್ಪರ್ಶವೂ ಸಾಕು; ಹೊಸ ಸೃಷ್ಟಿಯೆ ಬರಬಹುದು. ಬೇಂದ್ರೆಯವರ ಈ ಕವನವು ಒಂದು ಸರಳವಾದ ಹಾಗು ಅಷ್ಟೇ ಮೋಹಕವಾದ ಕವನ. ಒಂದು ಹೂವು ದುಂಬಿಯನ್ನು ಕರೆಯುತ್ತಿರುವ ಚಿತ್ರ ಈ ಕವನದಲ್ಲಿದೆ. ದುಂಬಿ ತನ್ನನ್ನು ಗಮನಿಸದೆ, ದೂರ ಚಲಿಸಲು, ಈ ಹೂವು ಆ ದುಂಬಿಗೆ ಆಹ್ವಾನವೀಯುತ್ತಿದೆ. ನಾನು ಸೂಸುತ್ತಿರುವ ಕಂಪು ಸರಾಗವಾಗಿದೆ ಎಂದು ಹೂವು ದುಂಬಿಗೆ ಹೇಳುತ್ತಿದೆ. ಇಲ್ಲಿ ಸರಾಗಕ್ಕೆ ಎರಡು ಅರ್ಥಗಳು. ಒಂದು ಅರ್ಥವೆಂದರೆ ತನ್ನ ಸುವಾಸನೆಯಲ್ಲಿ ಅನುರಾಗವಿದೆ; ಎರಡನೆಯ ಅರ್ಥವೆಂದರೆ ದುಂಬಿಯ ಆತಿಥ್ಯಕ್ಕೆ ಹೂವು ಅನುಕೂಲವಾಗಿದೆ. ಹೀಗಿರಲು ದುಂಬಿ ವಿರಾಗಿಯಂತೆ ಭ್ರಮಿಸಬೇಕೆ? ಭ್ರಮಿಸು ಪದಕ್ಕೂ ಎರಡು ಅರ್ಥಗಳಿವೆ. ಒಂದು ಸುತ್ತಾಡು. ಎರಡನೆಯ ಅರ್ಥ ಹುಚ್ಚನಾಗು. So, ನನ್ನ ಬಳಿಗೆ ಬರದೆ ಹುಚ್ಚನಂತೆ ಎಲ್ಲೆಲ್ಲೊ ಹೋಗುತ್ತಿರುವದೇಕೆ? ನನ್ನಲ್ಲಿ ಅನುರಾಗವಿದೆ, ನಾನು ಅನುಕೂಲೆಯಾಗಿದ್ದೇನೆ ಎಂದು ಹೂವು ದುಂಬಿಗೆ ಹೇಳುತ್ತಿದೆ. ಈ ಕರೆ ನೀಡುತ್ತಿರುವ ಉದ್ದೇಶವನ್ನು ಹೂವು ಈಗ ಬಯಲು ಮಾಡುತ್ತಿದೆ. ಅದು ಫಲದ ಸೃಷ್ಟಿ. ನಾಳೆ ಬರುವ ಹಣ್ಣಿನ ರುಚಿ ಈ ಮಕರಂದದಲ್ಲಿ ಅಡಗಿದೆ ಎಂದು ಹೂವು ಹೇಳುವಾಗ ಈ ದುಂಬಿಯ ಕಾರ್ಯವು ದೂತನ ಕಾರ್ಯವೆನ್ನುವದರ ಅರಿವು ಆಗುತ್ತದೆ. (=Pollinating Agent). ಆದರೆ ಈ ಕವನವು ಕೇವಲ ನಿಸರ್ಗದ ಒಂದು ಪ್ರಕ್ರಿಯೆಯನ್ನು ವರ್ಣಿಸುವ ಕವನವಲ್ಲವೆನ್ನುವದು ಮೂರನೆಯ ನುಡಿಯಿಂದ ಗೊತ್ತಾಗುತ್ತದೆ. ’ಕವನ ಕೋಶದೀ ಕಮಲಗರ್ಭದಲಿ ಪರಾಗವೊರಗಿಹುದು’ ಎನ್ನುವ ಸಾಲನ್ನು ಓದಿದಾಗ, ’ಓಹೋ, ಈ ಹೂವು ನಮ್ಮ ಕಣ್ಣಿಗೆ ಬೀಳುವ ಹೂವಲ್ಲ; ಇದು ಕಾವ್ಯವಸ್ತುವೆನ್ನುವ ಹೂವು ಹಾಗು ಭ್ರಮರವೆಂದರೆ ಕವಿ’ ಎನ್ನುವ ಅರ್ಥ ಹೊಳೆಯುವದು. ಕವಿಯ ಮನಸ್ಸು ಕಾವ್ಯರಚನೆಗೆ ವಿಮುಖವಾಗಿ ಎಲ್ಲೆಲ್ಲೊ ಚಲಿಸುತ್ತಿರುವಾಗ ಅವನ ಒಳಗಿರುವ ಕಾವ್ಯವಸ್ತು ಅವನನ್ನು ಕಾವ್ಯಸೃಷ್ಟಿಗೆ ಕರೆಯುತ್ತಿದೆ. ಕವಿಯ ಮನಸ್ಸಿನಲ್ಲಿರುವ ಕಾವ್ಯ ಹೊರಬರಲು ಬೇಕಾದದ್ದು ಕೇವಲ ಆತನ ಮುಖಸ್ಪರ್ಶ ಮಾತ್ರ. ಕವಿಯು ಇಲ್ಲಿ ಕೇವಲ ದೂತನ ಕಾರ್ಯ ನಿರ್ವಹಿಸುತ್ತಿದ್ದಾನೆ ಎಂದು ಈ ಕವನದ ಭಾವ. ಇದೇ ಭಾವವು ಬೇಂದ್ರೆಯವರ ’ಭಾವಗೀತೆ’ ಕವನದಲ್ಲಿಯೂ ಕಾಣಿಸುತ್ತದೆ. “ವಜ್ರಮುಖವ ಚಾಚಿ ಮುತ್ತುತಿತ್ತು ಹೂವ ಹೂವಾ ನೀರ ಹೀರಿ ಹಾರುತಿತ್ತು ನೀರಸವಾ ಜಾವಾ ಅಯ್ಯೊ ನೋವೆ! ಅಹಹ ಸಾವೆ! ವಿಫಲ ಸಫಲ ಜೀವಾ ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ” ಮೇಲಿನ ಸಾಲುಗಳಲ್ಲಿಯೂ ಸಹ ದುಂಬಿಯು ತನ್ನ ವಜ್ರಮುಖದಿಂದ ಹೂ ಹೂವುಗಳ ಮಕರಂದವನ್ನು ಹೀರುವ ವರ್ಣನೆ ಇದೆ. ಈ ಕಾರ್ಯದಿಂದ ಹೊಸ ಸೃಷ್ಟಿ ಅಂದರೆ ಹಣ್ಣು ಹುಟ್ಟುವದು, ಆದರೆ ಹೂವಿನ ಬಾಳು ಕೊನೆಗೊಳ್ಳುವದು(=ವಿಫಲ ಸಫಲ ಜೀವಾ). ಬೇಂದ್ರೆಯವರಿಗೆ ಕಷ್ಟಪಟ್ಟು ಕವನ ಕಟ್ಟಬೇಕಾಗಿರಲಿಲ್ಲ. ಕಾವ್ಯ ಅವರ ಮನಸ್ಸಿನಲ್ಲಿಯೆ ಯಾವಾಗಲೂ ಕುಣಿಯುತ್ತಿದ್ದು, ಅದನ್ನು ಹೊರಗೆ ತರುವದಷ್ಟೆ ತಮ್ಮ ಕಾರ್ಯವೆಂದು ಅವರು ಅನೇಕ ರೀತಿಗಳಲ್ಲಿ ಹೇಳಿದ್ದಾರೆ. ಅವರ ಮತ್ತೊಂದು ಕವನದಲ್ಲಿ ---- “ಕಟ್ಟೋರೆಲ್ಲ ಕವಿಗಳಲ್ಲ, ಹುಟ್ಟೋರೆಲ್ಲ ಭವಿಗಳಲ್ಲ; ಕರು ಕೂಡ ಕಟ್ಟಿದ್ದುಂಟು, ಬಸವಣ್ಣನೂ ಹುಟ್ಟಿದ್ದುಂಟು.” ಎಂದು ಹೇಳುತ್ತಾರೆ. ’ಕರು ಕಟ್ಟುವದು’ ಎಂದರೆ ಆಕಳು ಗರ್ಭ ಧರಿಸುವದು ’ಬಸವಣ್ಣನೂ ಹುಟ್ಟಿದ್ದುಂಟು’ ಎಂದರೆ ಆಕಳಿಗೆ ಹೋರಿಮರಿ ಜನಿಸುವದು. ಇದು ಬೇಂದ್ರೆಯವರ ಮಾತಿನ ಚಮತ್ಕಾರ. ಹೆಚ್ಚಿನ ಓದಿಗೆ : http://sallaap.blogspot.com/2008/04/blog-post_21.html ೩.ಹುಬ್ಬಳ್ಳಿಯಾಂವಾ‘ಹುಬ್ಬಳ್ಳಿಯಾಂವಾ’ ಇದು ಬೇಂದ್ರೆಯವರ ಅತ್ಯಂತ ಜನಪ್ರಿಯ ಗೀತೆಗಳಲ್ಲೊಂದು. ಜಾನಪದ ಗೀತೆಗಳ ಸರದಾರ ಎಂದೆನಿಸಿಕೊಂಡ ಹುಕ್ಕೇರಿ ಬಾಳಪ್ಪನವರ ಹಾಡುಗಾರಿಕೆಯಿಂದ ಈ ಹಾಡಿಗೆ ಸಿಕ್ಕಷ್ಟೇ ಪ್ರಸಿದ್ಧಿ, ಈ ಹಾಡಿನಿಂದ ಬಾಳಪ್ಪನವರಿಗೂ ದೊರೆಯಿತು.ಬೇಂದ್ರೆಯವರು ಬರೆಯಬಯಸಿದ ಒಂದು ನಾಟಕದಲ್ಲಿ ಈ ಹಾಡು ಬರುತ್ತದೆ. ಪ್ರಣಯಭಂಗದಿಂದ ಹುಚ್ಚಳಂತಾದ ಸೂಳೆಯೊಬ್ಬಳು ಹಾಡುವ ಹಾಡಿದು. ಹಾಡಿನ ಪೂರ್ತಿಪಾಠ ಇಲ್ಲಿದೆ : ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ ವಾರದಾಗ ಮೂರಸರತಿ ಬಂದು ಹೋದಾಂವಾ ||ಪಲ್ಲ|| ೧ ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ ತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ ಇನ್ನೂ ಯಾಕ………. ೨ ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ ಇನ್ನೂ ಯಾಕ………. ೩ ಇರು ಅಂದರ ಬರತೇನಂತ ಎದ್ದು ಹೊರಡಾಂವಾ ಮಾರೀ ತೆಳಗ ಹಾಕಿತಂದರ ಇದ್ದು ಬಿಡಾಂವಾ ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾ ಖರೇ ಅಂತ ಕೈಮಾಡಿದರ ಹಿಡsದ ಬಿಡಾಂವಾ ಇನ್ನೂ ಯಾಕ………. ೪ ಚಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ ಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾ ಬೆರಳಿಗುಂಗರಾ ಮೂಗಿನಾಗ ಮೂಗಬಟ್ಟಿಟ್ಟಾಂವಾ ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ ಇನ್ನೂ ಯಾಕ………. ೫ ಹುಟ್ಟಾ ಯಾಂವಾ ನಗಿಕ್ಯಾದಗೀ ಮುಡಿಸಿಕೊಂಡಾಂವಾ ಕಂಡ ಹೆಣ್ಣಿಲೆ ಪ್ರೀತಿ ವೀಳ್ಯೆ ಮಡಿಚಿಕೊಂಡಾಂವಾ ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ ಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾ ಇನ್ನೂ ಯಾಕ………. ೬ ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾ ಹಾದಿ ಬೀದಿ ಹುಡುಕತೈತ್ರೇ ಬಿಟ್ಟು ಎಲ್ಲ ಹ್ಯಾಂವಾ ಎಲ್ಲೀ ! ಮಲ್ಲೀ ! ತಾರೀ ! ಪಾರೀ ! ನೋಡೀರೇನವ್ವಾ? ನಿಂಗೀ ! ಸಂಗೀ ! ಸಾವಂತರೀ ! ಎಲ್ಹಾನ ನನ್ನಾಂವಾ ? ಇನ್ನೂ ಯಾಕ ಬರಲಿಲ್ಲಾ ? ಬೇಂದ್ರೆಯವರು ಈ ಗೀತೆಯನ್ನು ೧೯೩೫ರಲ್ಲಿ ರಚಿಸಿದರು. ಆ ಕಾಲದ ಸಮಾಜವ್ಯವಸ್ಥೆ ಹಾಗು ಜನರ ಜೀವನ ಪದ್ಧತಿಗಳು ಈ ಗೀತೆಯಲ್ಲಿ ಪ್ರತಿಬಿಂಬಿತವಾಗಿವೆ. ವ್ಯಾಪಾರ ಕೇಂದ್ರವಾದ ಹುಬ್ಬಳ್ಳಿಯಲ್ಲಿಯ ಒಬ್ಬ ಸಿರಿವಂತ ರಸಿಕ ಹುಡುಗ ವಾರದಲ್ಲಿ ಮೂರು ಸಾರೆ ಧಾರವಾಡಕ್ಕೆ ವ್ಯಾಪಾರದ ನೆವ ಮಾಡಿಕೊಂಡು ಹೋಗುತ್ತಿರುತ್ತಾನೆ. ಅಲ್ಲಿ ಅವನ ‘ಶೋಕಿಯ ಹೆಣ್ಣು’ ಇದ್ದಾಳೆ. ಆದರೆ ಈ ಹುಡುಗ ಕೇವಲ ಹೆಣ್ಣುಗಳ ಚಟದವನಲ್ಲ ; ಈತನದು ರಸಿಕ ಹೃದಯ. ಒಮ್ಮೆ ಇವನಿಗೂ ಅವಳಿಗೂ ನಡೆದಿರುಬಹುದಾದ ಪ್ರಣಯಕಲಹವು ಮನಸ್ತಾಪಕ್ಕೆ ತಿರುಗಿ, ಆತ ಇವಳಲ್ಲಿ ಮತ್ತೆ ಬರುವದಿಲ್ಲ. ಅವಳು ಈತನ ವಿರಹದಲ್ಲಿ ಹುಚ್ಚಿಯಂತಾಗಿ ಹಾಡಿದ ಹಾಡಿದು. ಬೇಂದ್ರೆಯವರು ಬರೆಯುವ ಎಲ್ಲ ಕವನಗಳಲ್ಲಿಯೂ ಒಂದು ಕ್ರಮಬದ್ಧತೆ ಇರುತ್ತದೆ. ಈ ಕವನದಲ್ಲಿಯೂ ಸಹ ಅಂತಹ ಕ್ರಮಬದ್ಧತೆಯನ್ನು ಕಾಣಬಹುದು. “ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ ವಾರದಾಗ ಮೂರಸರತಿ ಬಂದು ಹೋದಾಂವಾ” ಎಂದು ಹಪಹಪಿಸುವ ವಿರಹಿಣಿಯ ವರ್ಣನೆಯಿಂದ ಕವನ ಪ್ರಾರಂಭವಾಗುತ್ತದೆ. ವಿರಹಿಣಿಯ ಒಳಗಣ್ಣಿಗೆ ಮೊದಲು ಕಾಣುವದು ಅವನ physical appearance. “ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ ತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ” ಈ ಸಾಲುಗಳು ಆ ಸೆಟ್ಟರ ಹುಡುಗನ ಡೌಲನ್ನು , ಅವನ ರಸಿಕತೆಯ ಬಾಹ್ಯಲಕ್ಷಣಗಳನ್ನು ತೋರಿಸುವವು. ಆದರೆ ಅವನ ರಸಿಕತೆ ಕೇವಲ ಬಾಹ್ಯಲಕ್ಷಣಗಳಿಗೆ ಸೀಮಿತವಾಗಿಲ್ಲ. ಅವನಲ್ಲಿ ರಸಿಕಹೃದಯವಿದೆ. ಈ ಹೆಣ್ಣು ಅವನ ಪಾಲಿಗೆ ಕೇವಲ ಸೂಳೆಯಲ್ಲ. ಅವಳೊಡನೆ ಆತ ಚೇಷ್ಟೆಯಿಂದ ಮಾತನಾಡುತ್ತಾನೆ ; ಹಾಡು ಕಟ್ಟುತ್ತಾನೆ. “ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ” ಒಬ್ಬ ಸೂಳೆಯ aspirations ಎಷ್ಟಿರಲು ಸಾಧ್ಯ? ಈ ಕವನದ ನಾಯಕಿಯು ಸಾದಾ ಸೂಳೆಯೇನಲ್ಲ ; ಇವಳು “ಯಲ್ಲಮ್ಮನ ಜೋಗತಿ”. ಆದರೆ ಇವಳು ಯಾರ ಹೆಂಡತಿಯೂ ಆಗಲಾರಳು. ಇಂಥವಳಿಗೆ ಈ ರಸಿಕ ಕಟ್ಟಿ ಕೊಡುವ ಕನಸನ್ನು ಅವಳು ಎರಡನೆಯ ನುಡಿಯಲ್ಲಿ ಹಾಡಿಕೊಂಡಿದ್ದಾಳೆ : “ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ” ಜೋಗತಿಯರು ಎಲ್ಲಮ್ಮನ ಹೆಸರಿನಲ್ಲಿ ತಾಳಿಯನ್ನು ಕಟ್ಟಿಕೊಳ್ಳುತ್ತಾರೆ. (ಬಹುಶಃ ಅರಿಸಿಣದ ಬೇರಿನ ತುಂಡು ಮಾತ್ರ.). ತಾಳಿಯ ಮಧ್ಯದಲ್ಲಿರುವ ಎರಡು ಬೇಳೆಗಳು ಕೇವಲ ಮದುವೆಯಾದ ಗರತಿಯ ಸೊತ್ತು. ಗರತಿಯಾಗುವ ಈ ಅಸಾಧ್ಯ ಕನಸನ್ನು—ಹಾಸ್ಯದಲ್ಲಿಯೇ ಆಗಲಿ—ಆತ ಅವಳಿಗೆ ಕಟ್ಟಿಕೊಡುತ್ತಾನೆ. “ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ” ಈ ಜೋಗತಿಯರ ಸಂಪತ್ತೆಂದರೆ ಯಲ್ಲಮ್ಮನ ಗುಡಿಯಿಂದ ತಂದ ಭಂಡಾರ. (ಅರಿಶಿಣ, ಕುಂಕುಮಗಳು). ಆ ಭಂಡಾರವನ್ನು ಬಂಗಾರದ ಹುಡಿಯಿಂದ ತುಂಬುತ್ತೇನೆನ್ನುವ ಔದಾರ್ಯವನ್ನು ಆತ ತೋರುತ್ತಾನೆ. ಈ ಮಾತು ಚೇಷ್ಟೆಯಲ್ಲಿ ಆಡಿದ ಮಾತೇ ಆಗಿರಬಹುದು. ಆದರೆ ಅವಳಲ್ಲಿರುವ ಅವನ ಪ್ರೀತಿ ಬರಿ ಚೇಷ್ಟೆಯದಲ್ಲ. ಮುಂದಿನ ಎರಡು ಸಾಲುಗಳಲ್ಲಿ ಇದು ವ್ಯಕ್ತವಾಗುತ್ತದೆ : “ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ” ತನ್ನ ಮೊದಲ ಹೆಜ್ಜೆಗಳನ್ನು ಈ ಸಿರಿವಂತ ತರುಣನು ಕಸುಬಿನವರ (=professional prostitutes) ಮನೆಗಳಲ್ಲಿ ಹಾಕಿದ್ದಾನೆ ; ಅವರಾದ ಮೇಲೆ ಅದಕ್ಕೂ ಹೆಚ್ಚಿನ ಸ್ತರದ ಬಸವಿಯರ (=ದೇವರಿಗೆ ಬಿಟ್ಟವರು) ತಾಣಗಳನ್ನು ದಾಟಿ ಬಂದಿದ್ದಾನೆ. ಇದೀಗ ಬಸವಿಯರಿಗಿಂತ ಹೆಚ್ಚಿನ ಸ್ತರದಲ್ಲಿರುವ ಜೋಗತಿಯರ ಜೊತೆಗೆ ಇವನ ಸಂಬಂಧ. ಅಂತಹ ಜೋಗತಿಯರೆಲ್ಲರಲ್ಲಿ ಇವಳೇ ಶ್ರೇಷ್ಠಳು ಎಂದು ಆತ ಇವಳನ್ನು ಉಬ್ಬಿಸುತ್ತಾನೆ. ಈ ರಸಿಕನಿಗೆ ಹೆಣ್ಣನ್ನು ಹೊಗಳಿ ಮರಳು ಮಾಡುವ ಕಲೆ ಚೆನ್ನಾಗಿ ಸಿದ್ಧಿಸಿದ ಹಾಗೆ ಕಾಣುತ್ತದೆ. ಇಷ್ಟೆಲ್ಲ ಹೊಗಳುವ ಗಂಡಸಿನ ಮೇಲೆ (--ಆತ ಬರೇ ಗಿರಾಕಿಯಾಗಿದ್ದರೂ ಸಹ--) ಯಾವ ಹೆಣ್ಣಿಗೆ ಒಲುಮೆ ಮೂಡಲಿಕ್ಕಿಲ್ಲ? ಅಂತಲೇ ಅವಳು ಈತನನ್ನು “ಇನ್ನೂ ಇರು, ಯಾತಕ್ಕೆ ಇಷ್ಟು ಬೇಗನೇ ಹೊರಡುತ್ತೀಯಾ?” ಅಂತ ಜುಲುಮೆ ಮಾಡುತ್ತಾಳೆ. ಆತ ಘಾಟಿ ಹುಡುಗ ! ಇವಳ ಬಲುಮೆಗೆ care ಮಾಡದೆ ಎದ್ದು ಬಿಡುತ್ತಾನೆ. (ಅಥವಾ ಹಾಗೆ ನಟಿಸುತ್ತಾನೆ). ಅವಳು ಖಿನ್ನಳಾಗಿ ಅವನತ ಮುಖಳಾದ ಕ್ಷಣವೇ ಈತ ತನ್ನ ನಿರ್ಧಾರವನ್ನು ಬದಲಿಸಿ ಅವಳನ್ನು ಪ್ರಸನ್ನಗೊಳಿಸುತ್ತಾನೆ. “ಇರು ಅಂದರ ಬರತೇನಂತ ಎದ್ದು ಹೊರಡಾಂವಾ ಮಾರೀ ತೆಳಗ ಹಾಕಿತಂದರ ಇದ್ದು ಬಿಡಾಂವಾ” ಮುಂದಿನ ಸಾಲುಗಳಲ್ಲಿ ನಾಯಕಿಯು ಆತನ ರಸಿಕ ಚೇಷ್ಟೆಗಳನ್ನು ನೆನಪಿಸಿಕೊಳ್ಳುತ್ತಾಳೆ : “ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾ ಖರೇ ಅಂತ ಕೈಮಾಡಿದರ ಹಿಡsದ ಬಿಡಾಂವಾ”. ಬೇಂದ್ರೆ ಇಲ್ಲಿ ತಮ್ಮ ಅನ್ಯಾದೃಶ ಚಮತ್ಕಾರೋಕ್ತಿಯನ್ನು ತೋರಿಸಿದ್ದಾರೆ. ತನ್ನ ಬಗಲಬಂಡಿಯ ಕಿಸೆಯಲ್ಲಿ ಕೈಹಾಕಿ ಹಿಡಿಗಟ್ಟಲೆ ರೊಕ್ಕ ತಗದಂತೆ ನಟಿಸುವ ನಾಯಕ, ಈ ಅಮಾಯಕ ಹೆಣ್ಣು ಕೈಮುಂದೆ ಮಾಡಿದಾಗ ತಟ್ಟನೆ ಅವಳ ಕೈಯನ್ನು ಹಿಡಿದುಕೊಳ್ಳುತ್ತಾನೆ. ಬರೀ ಶಬ್ದಚಮತ್ಕಾರ ಮಾತ್ರವಲ್ಲ ; ಇದು ಕಲ್ಪನಾಚಮತ್ಕಾರದ ಪರಾಕಾಷ್ಠೆಯೂ ಹೌದು. ಒಬ್ಬ ಸೂಳೆ ಮತ್ತು ಅವಳ ಗಿರಾಕಿಯ ನಡುವೆ ನಡೆಯುವ ಇಂತಹ ಪ್ರಣಯದೃಶ್ಯ ಯಾವ ಕವಿಯ ಕಲ್ಪನೆಗೆ ಹೊಳೆಯಲು ಸಾಧ್ಯ ? ಏನೇ ಮಾಡಿದರೂ, ಏನೇ ಹೇಳಿದರೂ ಈಕೆ ಅವನಿಗೆಷ್ಟರವಳು? ಅವಳು ಕೇವಲ ವಿನೋದವಸ್ತು ಮಾತ್ರ ಎನ್ನುವದೆ ವಾಸ್ತವತೆ ಅಲ್ಲವೆ? ಈ ವಾಸ್ತವತೆಯನ್ನೆ ಆತ ಎಷ್ಟು ವಿನೋದದಿಂದ ಹೇಳುತ್ತಾನೆ ! “ಚಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ”. ಹೀಗೆಂದರೆ ಅವಳಿಗೆ ಸಿಟ್ಟು ಬರದಿದ್ದೀತೆ? ಮುನಿಸಿಕೊಂಡ ಇವಳನ್ನು ರಮಿಸುವದು ಅವನಿಗೊಂದು ಆಟ. “ಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾ”. ಆದರೆ ಇಷ್ಟಕ್ಕೆಲ್ಲ ಇವಳು ಒಲಿಯುವವಳಲ್ಲ. ಆಗ ಆತ ಅವಳಿಗೆ ಕೊಡುವದು , ಸೂಳೆಯೊಬ್ಬಳಿಗೆ ಸಿಗಬಹುದಾದ ಅತಿ ಹೆಚ್ಚಿನ ಬೆಲೆ :- “ಬೆರಳಿಗುಂಗರಾ ಮೂಗಿನಾಗ ಮೂಗಬಟ್ಟಿಟ್ಟಾಂವಾ” ಹೆಣ್ಣಿನ ಬೆರಳಿಗೆ ಉಂಗುರ ತೊಡಸುವದು ಅವಳ ಮದುವೆ ನಿಶ್ಚಯವಾಗುವಾಗ. ಅವಳಿಗೆ ಮೂಗುತಿ ತೊಡಿಸುವದು ಅವಳ ಮದುವೆಯ ಸಮಯದಲ್ಲಿ. ಆತ ಅವಳಿಗೆ ಇವನ್ನೇ ಕೊಡುತ್ತಾನೆ. ಅವಳಿಗೆ ಗೊತ್ತು : ಈ ಉಂಗುರ, ಈ ಮೂಗುತಿ ಅವಳ status ಅನ್ನು ಬದಲಾಯಿಸುವದಿಲ್ಲ. ಅವಳು ಸಾಯುವವರೆಗೂ ಸೂಳೆಯೇ. ಆದರೂ ಸಹ, ಈ token ಅವನ ಬಗೆಗಿರುವ ಅವಳ ಒಲುಮೆಯನ್ನು ಗಾಢವಾಗಿಸುತ್ತದೆ. ಅವನೀಗ ಅವಳ ಅತ್ಯಂತ ಪ್ರೀತಿಪಾತ್ರ ವ್ಯಕ್ತಿ : “ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ” ಈ ಭಾವನೆಗಳು ಈ ಮುಂದಿನ ನುಡಿಯಲ್ಲಿ ವ್ಯಕ್ತವಾಗುತ್ತವೆ : “ಹುಟ್ಟಾ ಯಾಂವಾ ನಗಿಕ್ಯಾದಗೀ ಮುಡಿಸಿಕೊಂಡಾಂವಾ ಕಂಡ ಹೆಣ್ಣಿಲೆ ಪ್ರೀತಿ ವೀಳ್ಯೆ ಮಡಿಚಿಕೊಂಡಾಂವಾ ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ ಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾ” ಈತ ಹುಟ್ಟುತ್ತಲೆ ನಗಿಕ್ಯಾದಗಿ ಮುಡಿಸಿಕೊಂಡು ಬಂದಂಥವನು, ಸತತ ನಗೆಮೊಗದವನು. ಹೆಣ್ಣುಗಳ ಪ್ರೀತಿ ಸಂಪಾದಿಸುವದು ಇವನಿಗೊಂದು ಆಟ.ಯಾಕೆಂದರೆ ಹೆಣ್ಣುಗಳೇ ಇವನ ಮೇಲೆ ಮುಗಿ ಬೀಳುತ್ತವೆ. ಇಂಥವನಿಂದ ಇಷ್ಟೊಂದು ಪ್ರೀತಿ ಪಡೆದದ್ದೇ ತನ್ನದೊಂದು ದೊಡ್ಡ ಭಾಗ್ಯ. ಇವನ ಹೆಂಡತಿಯಾಗುವ ಭಾಗ್ಯ ತನಗೆ ಯಾವ ಜನ್ಮದಲ್ಲೂ ಸಾಧ್ಯವಿಲ್ಲ. ಹಾಗಿದ್ದರೆ, next best? ತನ್ನೆಲ್ಲ ಜನ್ಮಗಳಲ್ಲಿಯೂ ಈತನೇ ತನಗೆ “ಗೆಣೆಯ” ನಾಗಿ ಸಿಕ್ಕರೆ ಸಾಕು. ಅದು ಆತ ಕೊಡುತ್ತಿರುವ ವಚನ ! ತನ್ನ ಅತ್ಯಂತ ಪ್ರೀತಿಯ “ಗೆಣತಿ”ಯ ಪಟ್ಟ ಇವಳಿಗೇ ! (ಶರೀರದ ಮೇಲಿನ ಕೆಂಪು ಅಥವಾ ಕಪ್ಪು moleಗೆ ‘ಗೆಳತಿ’ ಎಂದು ಕರೆಯುತ್ತಾರೆ). ಇಂತಹ ನೆಚ್ಚಿನ ಗೆಣೆಯನೊಡನೆ ಯಾವ ಕಾರಣಕ್ಕಾಗಿ ಮನಸ್ತಾಪ ಬಂತೊ ಏನೊ? ಆತ ಇವಳ ಕಡೆಗೆ ಬೆನ್ನು ತಿರುಗಿಸಿದ್ದಾನೆ. ಅವನ ದರುಶನವೇ ಇಲ್ಲ. ತನ್ನೆಲ್ಲ ಹ್ಯಾಂವ ಬಿಟ್ಟು ಅವಳು ಇವನಿಗಾಗಿ ಹಲಬುತ್ತಾಳೆ, ಹಂಬಲಿಸುತ್ತಾಳೆ. ಹುಚ್ಚಿಯಂತೆ ಹಾಡಿಕೊಳ್ಳುತ್ತ ಹಾದಿ-ಬೀದಿಗಳಲ್ಲಿ ತಿರುಗುತ್ತಾಳೆ : “ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾ ಹಾದಿ ಬೀದಿ ಹುಡುಕತೈತರೇ ಬಿಟ್ಟು ಎಲ್ಲ ಹ್ಯಾಂವಾ ಎಲ್ಲೀ ! ಮಲ್ಲೀ ! ತಾರೀ ! ಪಾರೀ ! ನೋಡೀರೇನವ್ವಾ? ನಿಂಗೀ ! ಸಂಗೀ ! ಸಾವಂತರೀ ! ಎಲ್ಹಾನ ನನ್ನಾಂವಾ ? ಇನ್ನೂ ಯಾಕ ಬರಲಿಲ್ಲಾ ?” ಆತ ತನ್ನ ಮೇಲಿನ ಸಿಟ್ಟನ್ನು ಮರೆತು ಬಂದಾನೇ? ಇಲ್ಲಿ ಮತ್ತೊಂದು ವ್ಯಂಗ್ಯವನ್ನು ಗುರುತಿಸಬೇಕು. ಈತ ಸೆಟ್ಟರ ಹುಡುಗ. ಈತ ಸೆಡುವು ಮಾಡಿಕೊಂಡು ಹೋದರೆ ಈಕೆಯ ಬದುಕು ನಡೆಯುವದು ಹೇಗೆ? ಅದು ಕಟು ವಾಸ್ತವ. ಬೇಂದ್ರೆಯವರ ಕಲ್ಪನೆ ಅಗಾಧವಾಗಿದ್ದರೂ ಸಹ, ಅವರ ಕವನಗಳು ಯಾವಾಗಲೂ ವಾಸ್ತವತೆಯ ಅಂಚನ್ನು ದಾಟುವದಿಲ್ಲ. ಹೀಗಾಗಿ ಅವರ ಅನೇಕ ಕವನಗಳಿಗೆ documentary value ಬರುತ್ತದೆ. “ಹುಬ್ಬಳ್ಳಿಯಾಂವಾ” ಕವನದಲ್ಲಿ ವಾಸ್ತವತೆಯ ಇಂತಹ ನೋಟಗಳನ್ನು ಕಾಣಬಹುದು. ಉದಾಹರಣೆಗೆ ಸೂಳೆಯರ ಶ್ರೇಣೀಕರಣ: ಮೊದಲಲ್ಲಿ ಕಸಬೆಯರು, ಅವರ ಮೇಲೆ ಬಸವಿಯರು, ಅವರಿಗಿಂತಲೂ ಮೇಲಿನ ಸ್ಥಾನದಲ್ಲಿ ಜೋಗತಿಯರು. [ಇಂತಹದೇ ಒಂದು ಉದಾಹರಣೆಯನ್ನು ಅವರ ಮತ್ತೊಂದು ಕವನ “ಬಾರೊ ಸಾಧನಕೇರಿಗೆ “ ಕವನದಲ್ಲಿ ಕಾಣಬಹುದು. ಆ ಕವನದ “ಬೇಲಿಗೂ ಹೂಬೆರಳಿದೆ ” ಎನ್ನುವ ಸಾಲು ಆ ಕಾಲದಲ್ಲಿ ಧಾರವಾಡದಲ್ಲಿಯ ಅನೇಕ ಮನೆಗಳಿಗಿದ್ದ blue-bell ಬಳ್ಳಿಯ ಬೇಲಿಯ ವಾಸ್ತವದ ಚಿತ್ರಣ. ಈ fence ಮಾಡಬೇಕಾದ ಕೆಲಸ defence ; ಆದರೆ ಇದು ಮಾಡುತ್ತಿರುವದು ಸ್ವಾಗತಕಾರನ ಕೆಲಸ (--ಹೂ ಬೆರಳಿದೆ--). ಇದೊಂದು ಚಮತ್ಕಾರೋಕ್ತಿಯೂ ಆಗಿದೆ. ಎರಡನೆಯ ಉದಾಹರಣೆ ಎಂದರೆ, “ಹಕ್ಕಿ ಹಾರುತಿದೆ” ಕವನದ “ಎವೆ ತೆರೆದಿಕ್ಕುವ ಹೊತ್ತಿನ ಒಳಗೆ” ಎನ್ನುವ ಸಾಲು. ‘ನಿಮಿಷ’ ಅನ್ನುವದರ ಅಳತೆ ಎವೆ ತೆರೆದಿಕ್ಕುವ ಹೊತ್ತು ಎನ್ನುವದು ವಾಸ್ತವತೆ. ಮೂರನೆಯದಾಗಿ “ಕುಣಿ ಕುಣಿ ನವಿಲೆ” ಕವನದ “ಬೇಸಗೆ ಬಿಸಿಲಿಗೆ ಬಾಯ್ಬಿಡುತಿದೆ ಧರೆ “ ಎನ್ನುವ ಸಾಲನ್ನು ಉದಾಹರಿಸಬಹುದು. ಬೇಸಿಗೆಯಲ್ಲಿ ಎರೆ ಮಣ್ಣಿನ ಭೂಮಿಯಲ್ಲಿ ಆದಂತಹ cracksಗಳನ್ನು ಕಂಡಾಗ ಕಲ್ಪಕತೆ ಹಾಗು ವಾಸ್ತವತೆಯನ್ನು ಒಂದೇ ಸಾಲಿನಲ್ಲಿ ಜೋಡಿಸಿದ ಬೇಂದ್ರೆ ಪ್ರತಿಭೆ ಅರಿವಾಗುತ್ತದೆ.] ಬೇಂದ್ರೆಯವರ ಕವನಗಳಲ್ಲಿ ಬರುವ ಆಡುನುಡಿಯ ಪದಪುಂಜಗಳು, ಅವರ ಕವನಗಳಿಗೆ ಹೆಚ್ಚಿನ ಸೊಬಗನ್ನು ಕೊಡುತ್ತವೆ. ಇದೇ ಕವನದಲ್ಲಿಯ ಕೆಲವು ಸಾಲುಗಳನ್ನು ಉದಾಹರಣೆಗಳೆಂದು ನೋಡಬಹುದು : “ಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾ” “ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ” ಇಂತಹದೇ ಇನ್ನೊಂದು ಉದಾಹರಣೆಯನ್ನು ಅವರ “ಪಾತರಗಿತ್ತಿ ಪಕ್ಕಾ” ಕವನದಲ್ಲಿ ನೋಡಬಹುದು : “ಹೂವಿಗೆ ಹೋಗತಾವ ಗಲ್ಲಾ ತಿವೀತಾವ. ” ಹೆಚ್ಚಿನ ಓದಿಗೆ : http://sallaap.blogspot.com/2008/07/blog-post_24.html |