Recent site activity

ಗರಿ.

ಭಾವಗೀತೆ: ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ.

ಬೇಂದ್ರೆಯವರು ತಮ್ಮ ಕೆಲವು ಕವನಗಳಲ್ಲಿ ಕಾವ್ಯವು ಸೃಷ್ಟಿಗೊಳ್ಳುವ ವಿಧಾನವನ್ನೇ ಕಡೆದಿದ್ದಾರೆ. ಉದಾಹರಣೆಗೆ ಅವರ ’ಗರಿ’ ಕವನಸಂಕಲನದಲ್ಲಿಯ ಕೊನೆಯ ಕವನ ’ಗರಿ’ಯನ್ನೇ ನೋಡಿರಿ:

“ಎಲ್ಲೆಕಟ್ಟು ಇಲ್ಲದಾ
ಬಾನಬಟ್ಟೆಯಲ್ಲಿದೊ
ಎಂsದೆಂದು ಹಾರುವೀ
ಹಕ್ಕಿ-ಗಾಳಿ ಸಾಗಿದೆ”

’ಕವಿಯ ಕಾವ್ಯಪಕ್ಷಿಯು ಮನೋಆಕಾಶದಲ್ಲಿ ಹಾರುತ್ತಿರುವಾಗ ಉದುರಿದ ಗರಿಗಳೇ ತಮ್ಮ ಕವನಗಳು’ ಎಂದು ಬೇಂದ್ರೆ ಹೇಳುತ್ತಾರೆ. “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ” ಇದೂ ಸಹ ’ಗರಿ’ ಕವನಸಂಕಲನದಲ್ಲಿಯ ಒಂದು ಕವನ. ಈ ಕವನದ ಶೀರ್ಷಿಕೆ: ಭಾವಗೀತೆ.

ಕವಿಕುಲಗುರು ಕಾಳಿದಾಸನು ಬರೆದ ’ಅಭಿಜ್ಞಾನ ಶಾಕುಂತಲಮ್’ ನಾಟಕದಲ್ಲಿ, ನಾಯಕ ಹಾಗು ನಾಯಕಿಯರ ಭೇಟಿಯಾಗುವದೇ ಭೃಂಗದ ನಿಮಿತ್ತವಾಗಿ. ಮಹಾರಾಜಾ ದುಷ್ಯಂತನು ಮೃಗಯಾವಿಹಾರಕ್ಕಾಗಿ ಕಾಡಿಗೆ ತೆರಳಿರುತ್ತಾನೆ. ಅಲ್ಲಿ ಕಣ್ವ ಋಷಿಗಳ ಆಶ್ರಮವಿರುತ್ತದೆ. ಮಲ್ಲಿಗೆ ಬಳ್ಳಿಗೆ ನೀರುಣಿಸಲು ಬಂದ ಶಕುಂತಲೆಯನ್ನು ದುಂಬಿಯೊಂದು ಕಾಡತೊಡಗುತ್ತದೆ. ಆ ಅಸಹಾಯಕ ಸುಕುಮಾರ ಬಾಲೆಯು ದುಂಬಿಯನ್ನು ನಿವಾರಿಸುವ ವ್ಯರ್ಥ ಯತ್ನದಲ್ಲಿದ್ದಾಗ, ದುಷ್ಯಂತನು ಅವಳಿಗೆ ಸಹಾಯಹಸ್ತ ಚಾಚುತ್ತಾನೆ. ಮುಂದಿನ ಕತೆ ಎಲ್ಲರಿಗೂ ಗೊತ್ತಿದ್ದದ್ದೇ.

ಈ ರೀತಿಯಾಗಿ ಕಾಳಿದಾಸನ ಕಲ್ಪನೆ ಭೃಂಗದ ಬೆನ್ನೇರಿ, ವಿಶ್ವಮಾನ್ಯವಾದ ಒಮ್ದು ಶ್ರೇಷ್ಠ ನಾಟಕವನ್ನು ನಿರ್ಮಿಸಿತು. ಬೇಂದ್ರೆಯವರ ಕಲ್ಪನೆಗಳೂ ಸಹ ಅವರ ಮನದಲ್ಲಿ ಅಮೂರ್ತ ರೂಪದಿಂದ ಮೂರ್ತರೂಪಕ್ಕೆ ಕಾವ್ಯವಾಗಿ ಪರಿಣಮಿಸುತ್ತಿದ್ದವು. ಈ process ಅನ್ನೇ ಬೇಂದ್ರೆ ತಮ್ಮ “ಭಾವಗೀತೆ” ಕವನದಲ್ಲಿ ಬಣ್ಣಿಸಿದ್ದಾರೆ.

“ಭಾವಗೀತೆ”

“ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ”
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಏನು ಏನು? ಜೇನು ಜೇನು? ಎನೆ ಗುಂಗುಂ ಗಾನಾ
ಓಂಕಾರದ ಶಂಖನಾದಕಿಂತ ಕಿಂಚಿದೂನಾ
ಕವಿಯ ಏಕತಾನ ಕವನದಂತೆ ನಾದಲೀನಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..


ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ
ತನ್ನ ದೈವರೇಷೆ ಬರೆಯುವಂತೆ ತಾನೆ ಭಾಲಾ
ಉಸಿರಿನಿಂದ ಹುದುಕುವಂತೆ ತನ್ನ ಬಾಳ ಮೇಲಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..


ತಿರುಗತಿತ್ತು ತನ್ನ ಸುತ್ತ ಮೂಕಭಾವ ಯಂತ್ರಾ
ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ
ಮೂಡಿ ಮೂಡಿ ಮುಳುಗಿ ಮುಳುಗಿ ಮೊಳಗುವೊಲು ಸ್ವತಂತ್ರಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..


ಎಲ್ಲೆಲ್ಲೂ ಸೃಷ್ಟಿದೇವಿಗಿಟ್ಟ ಧೂಪ ಧೂಮಾ
ಲಹರಿ ಲಹರಿ ಕಂಪಬಳ್ಳಿ; ಚಿತ್ತರಂಗ ಭೂಮಾ
ದಾಂಗುಡಿಗಳ ಬಿಡುತಲಿತ್ತು, ಅರಳಲಿತ್ತು, ಪ್ರೇಮಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ವಜ್ರಮುಖವ ಚಾಚಿ ಮುತ್ತತಿತ್ತು ಹೂವ ಹೂವಾ
ನೀರ ಹೀರಿ ಹಾರತಿತ್ತು ನೀರಸವಾ ಜಾವಾ
ಅಯ್ಯೊ ನೋವೆ! ಅಹಹ ಸಾವೆ! ವಿಫಲ ಸಫಲ ಜೀವಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..


ಗಾಳಿಯೊಡನೆ ತಿಳ್ಳಿಯಾಡುತದರ ಓಟಾ
ದಿಕ್ತಟಗಳ ಹಾಯುತಿತ್ತು; ಅದರ ಬಿದಿಗೆ ನೋಟಾ
ನಕ್ಕ ನಗುವ ಚಿಕ್ಕೆಯೊಡನೆ ಬೆಳೆಸತಿತ್ತು ಕೂಟಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..


ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ
ಅಲ್ಲು ಇಲ್ಲು ಚೆಲುವು ನಿಂತು ಹಾಕತಿತ್ತು ತಾಳಾ
’ಬಂತೆಲ್ಲಿಗೆ?’ ಕೇಳುತಿದ್ದನೀಯಂತ ಕಾಳಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..


ಮಾತು ಮಾತು ಮಥಿಸಿ ಬಂದ ನಾದದ ನವನೀತಾ
ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಇಂಗ್ಲಿಶ್ ಕವಿಯೊಬ್ಬನು ಕಾವ್ಯಸೃಷ್ಟಿಯನ್ನು “One percent inspiration and ninetynine percent perspiration” ಎಂದು ವರ್ಣಿಸಿದ್ದಾನೆ. ಆದರೆ ಬೇಂದ್ರೆಯವರಿಗೆ ಕಾವ್ಯಸೃಷ್ಟಿ ಉಸಿರಾಟದಷ್ಟೆ ಸಹಜ. ಅವರ ಮನೋರಂಗದಲ್ಲಿ ಕಲ್ಪನೆಗಳು ತೇಲಾಡುತ್ತಿರುತ್ತವೆ.
(“ತೇಲಾಡುವಾಗ ಮನಸು
ಮೇಲಾಡತಾವ ಕನಸು” ನೆನಪಿಸಿಕೊಳ್ಳಿರಿ.)
ಅವರ ಬತ್ತಳಿಕೆಯಲ್ಲಿ ಪದಗಳ ಬಾಣಗಳು ಅಕ್ಷಯವಾಗಿವೆ. ಪ್ರಾಸಕ್ಕಾಗಿ ಅವರು ತಡಕಾಡಲೇ ಬೇಕಿಲ್ಲ. ಇದೆಲ್ಲಕ್ಕೂ ಮೇಲಾಗಿ, ಅವರ ಕವನಗಳು ನಾದದ ಗುಂಗು ಹಿಡಿದು ಹೋಗುತ್ತವೆ.

ಈ ಕವನದ ಮೊದಲ ನುಡಿಯನ್ನೇ ತೆಗೆದುಕೊಳ್ಳಿರಿ:

“ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ”
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಕವಿಕುಲಗುರು ಕಾಳಿದಾಸನ ಕಲ್ಪನೆಯನ್ನೇ ಬಳಸಿಕೊಂಡು, ಆ ಭೃಂಗವನ್ನು ಕವಿಯ ಮನಸ್ಸಿಗೆ ಹೋಲಿಸಿ, ಕಲ್ಪನೆಯ ಚೆಲ್ಲಾಟವನ್ನು ಬೇಂದ್ರೆ ಬಣ್ಣಿಸುತ್ತಾರೆ. ಭೃಂಗದ ಪಕ್ಕಗಳ ಚಲನೆಯಿಂದ ಗಾಳಿಯಲ್ಲಿ ಉಂಟಾಗುವ ಸಹಜ ಚಲನೆಯನ್ನೇ ಬೇಂದ್ರೆ ಪ್ರಾಸಕ್ಕೆ ಹೋಲಿಸುತ್ತಾರೆ. ಈ ಸಂದರ್ಭದಲ್ಲಿ ಕವಿಯ ಮನಸ್ಸಿನಲ್ಲಿ ಕಾವ್ಯಕನ್ನಿಕೆಯ ಮಂದಹಾಸವು ಮಿಂಚಿ ಮಾಯವಾಗುತ್ತದೆ. ಅಂದರೆ ಕವಿಗೆ ಕಾವ್ಯದ ಹೊಳವು ತೋರುತ್ತದೆ.

ಈಗ ಎರಡನೆಯ ನುಡಿಯನ್ನು ನೋಡಿರಿ:

ಏನು ಏನು? ಜೇನು ಜೇನು? ಎನೆ ಗುಂಗುಂ ಗಾನಾ
ಓಂಕಾರದ ಶಂಖನಾದಕಿಂತ ಕಿಂಚಿದೂನಾ
ಕವಿಯ ಏಕತಾನ ಕವನದಂತೆ ನಾದಲೀನಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..


ಈ ಮಂದಹಾಸದ ಮಿಂಚನ್ನು ಬೇಂದ್ರೆಯವರು ಹಿಡಿಯಲು ಹೋಗುವದು ನಾದದ ಜಾಡಿನ ಬೆನ್ನತ್ತಿ. ಜೇನು ಹುಳವು ಗುಂಯ್ ಗುಂಯ್ ನಾದವನ್ನು ಮಾಡುತ್ತ ಪರಾಗವನ್ನು ಹುಡುಕುವಂತೆ, ಬೇಂದ್ರೆಯವರೂ ಸಹ ನಾದದ ಹಿಂದೆ ಹೊರಡುತ್ತಾರೆ. ಈ ನಾದವು ಓಂಕಾರದ ಶಂಖನಾದಕ್ಕಿಂತ ತುಸುವೇ ಕಡಿಮೆಯದು. ಏಕೆಂದರೆ ಓಂಕಾರದ ಶಂಖನಾದವು ಪಾರಲೌಕಿಕ. ಈ ನಾದವು ಎಷ್ಟೆಂದರೂ ಲೌಕಿಕವೇ. ಆದರೆ ಈ ನಾದವು ಒಂದೇ ಗುಂಗಿನಲ್ಲಿ ಲೀನವಾಗಿದೆ. ಇಲ್ಲಿ ಕವಿಯ ಏಕತಾನದಂತೆ ಅಂದರೆ monotonous ಎನ್ನುವ ಅರ್ಥವಿಲ್ಲ; ಆದರೆ ಒಂದೇ ಗುಂಗಿನ ನಾದ ಎನ್ನುವ ಅರ್ಥವಿದೆ.

ಈಗ ಮೂರನೆಯ ನುಡಿಯನ್ನು ನೋಡಿರಿ:

ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ
ತನ್ನ ದೈವರೇಷೆ ಬರೆಯುವಂತೆ ತಾನೆ ಭಾಲಾ
ಉಸಿರಿನಿಂದ ಹುದುಕುವಂತೆ ತನ್ನ ಬಾಳ ಮೇಲಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..


ಕಾವ್ಯದ ಮೂಲವಸ್ತು ಕವಿಯ ಮನದಲ್ಲೇ ಇರುವಂಥಾದ್ದು. ಉದಾಹರಣೆಗೆ ಪ್ರೇಮ, ಭಕ್ತಿ, ವಾತ್ಸಲ್ಯ ಇತ್ಯಾದಿ. ಜೇಡರ ಹುಳು ತನ್ನ ಮೈಯಿಂದಲೇ ಎಳೆಗಳನ್ನು ತೆಗೆದು ಬಲೆ ಹೆಣೆಯುವಂತೆ, ಕವಿ ತನ್ನ ಮನದಲ್ಲಿ ಇರುವ ಭಾವನೆಗಳಿಂದಲೇ ಕವನವನ್ನು ಹೆಣೆಯುತ್ತಾನೆ. ಆದರೆ ಈ ಕಾವ್ಯದ ಹಣೆಬರಹವನ್ನು ಬರೆಯುವವರು ಯಾರು?
ಸ್ವತಃ ಕವಿತೆಯೇ ತನ್ನ ಭಾಲದ(=ಹಣೆಯ) ಮೇಲಿನ ರೇಖೆಯನ್ನು ಬರೆದುಕೊಳ್ಳುವದು. ನಂತರದಲ್ಲಿ ತನ್ನ ಬಾಳಿನ ಮೇಲಾ(=ಜಾತ್ರೆ, ಪ್ರಪಂಚ)ವನ್ನು ಸಹ ಅದು ತಾನೇ ಹುಡುಕುತ್ತ ಹೋಗುವದು. ಇದರರ್ಥ ಕವನವು ಭಾವಪೂರ್ಣವಾಗಿದ್ದರೆ, ಯಶಸ್ವಿಯಾಗುವದು, ಬಾಳುವದು. ಇಲ್ಲವಾದರೆ………………..!

ಈಗ ನಾಲ್ಕನೆಯ ನುಡಿಯನ್ನು ನೋಡಿರಿ:

ತಿರುಗತಿತ್ತು ತನ್ನ ಸುತ್ತ ಮೂಕಭಾವ ಯಂತ್ರಾ
ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ
ಮೂಡಿ ಮೂಡಿ ಮುಳುಗಿ ಮುಳುಗಿ ಮೊಳಗುವೊಲು ಸ್ವತಂತ್ರಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಕಲ್ಪನೆಯ ಗರ್ಭದಲ್ಲಿ ಕವನ ಮೂಡುತ್ತಿರುವಾಗ ಕವಿ ಏನು ಮಾಡುತ್ತಿರುತ್ತಾನೆ? ಅವನೊಬ್ಬ ಮೂಕಭಾವದ ಯಂತ್ರ. ಕವಿಯ ಮನಸ್ಸಿನ ಗರ್ಭಗುಡಿಯಲ್ಲಿ ಕಾವ್ಯದ ಮಂತ್ರಪಠಣ ನಡೆಯುತ್ತಿದ್ದಾಗ, ಕವಿ ಅದನ್ನು ಗ್ರಹಿಸಲು ಸಿದ್ಧನಾಗಿ ನಿಲ್ಲಬೇಕಷ್ಟೆ. ಇಲ್ಲಿ ವರಕವಿಗಳಿಗೂ ನರಕವಿಗಳಿಗೂ ಇರುವ ಅಂತರವನ್ನು ನಾವು ಲಕ್ಷದಲ್ಲಿಟ್ಟುಕೊಳ್ಳಬೇಕು. ತಮ್ಮ ಕವನಗಳನ್ನು ಅಂಬಿಕಾತನಯದತ್ತ ಕೇಳಿಸಿಕೊಳ್ಳುತ್ತಾನೆ, ಬೇಂದ್ರೆ ಮಾಸ್ತರ ಅದನ್ನು ಬರೆದುಕೊಳ್ಳುತ್ತಾರೆ ಎನ್ನುತ್ತಾರೆ ಬೇಂದ್ರೆಯವರು. ಕುಮಾರವ್ಯಾಸನೂ ಸಹ ತಾನು ಕೇವಲ ಲಿಪಿಕಾರ ಎಂದುಕೊಂಡದ್ದನ್ನು ಗಮನಿಸಬೇಕು.

ಇನ್ನು ಐದನೆಯ ನುಡಿಯನ್ನು ನೋಡಿರಿ:

ಎಲ್ಲೆಲ್ಲೂ ಸೃಷ್ಟಿದೇವಿಗಿಟ್ಟ ಧೂಪ ಧೂಮಾ
ಲಹರಿ ಲಹರಿ ಕಂಪಬಳ್ಳಿ; ಚಿತ್ತರಂಗ ಭೂಮಾ
ದಾಂಗುಡಿಗಳ ಬಿಡುತಲಿತ್ತು, ಅರಳಲಿತ್ತು, ಪ್ರೇಮಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..


ಕವನವು ಕೊನೆಗೊಮ್ಮೆ ಜೀವ ತಳೆದಾಗ ಅದು ಎಲ್ಲೆಲ್ಲೂ ಹರ್ಷದ ವಾತಾವರಣವನ್ನು ಸೃಜಿಸುತ್ತದೆ. ಹೂಬಳ್ಳಿಗಳೆಲ್ಲ ಕಂಪು ಸೂಸುತ್ತವೆ. ಚಿತ್ತವೆಂಬ ರಂಗವು ವಿಶಾಲವಾಗುತ್ತದೆ, ಮಹತ್ತಾಗುತ್ತದೆ, ಅಲ್ಲಿ ಪ್ರೇಮಭಾವನೆಯು ತುಂಬುತ್ತದೆ.

ಆದರೆ, ದುಂಬಿ ಮುತ್ತಿಟ್ಟು ಹೋದ ಹೂವಿನ ಸ್ಥಿತಿ? ಅದನ್ನು ಆರನೆಯ ನುಡಿಯಲ್ಲಿ ನೋಡಬಹುದು:

ವಜ್ರಮುಖವ ಚಾಚಿ ಮುತ್ತತಿತ್ತು ಹೂವ ಹೂವಾ
ನೀರ ಹೀರಿ ಹಾರತಿತ್ತು ನೀರಸವಾ ಜಾವಾ
ಅಯ್ಯೊ ನೋವೆ! ಅಹಹ ಸಾವೆ! ವಿಫಲ ಸಫಲ ಜೀವಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..


ಹೂವು ತನ್ನಲ್ಲಿಯ ಮಕರಂದವನ್ನು ದುಂಬಿಗೆ ಕೊಟ್ಟಂತೆ, ಕವಿಯೂ ಸಹ ತನ್ನ ಮನಸ್ಸಿನಲ್ಲಿದ್ದ ಮೂಲವಸ್ತುಗಳನ್ನು ಕಲ್ಪನೆಯ ದುಂಬಿಗೆ ಕೊಟ್ಟಿರುತ್ತಾನೆ. ಈಗ ದುಂಬಿ ಹಾರಿ ಹೋಗಿದೆ. ಪರಾಗಸ್ಪರ್ಷದಿಂದ ಕಾವ್ಯಶಿಶು ಜನಿಸಿದೆ. ಆದರೆ ಕವಿ ಬರಿದಾಗಿದ್ದಾನೆ. ಅವನ ಸಾಫಲ್ಯ ಅವನ ಎದುರಿಗಿದೆ. ಆದರೆ ಅವನ ಬಾಳಿಗೀಗ ಕೊನೆ ಬಂದಿತೆನ್ನುವ ಭಾವನೆಯಲ್ಲಿ ಆತ ವೈಫಲ್ಯವನ್ನೂ ಅನುಭವಿಸುತ್ತಿದ್ದಾನೆ.

ಇತ್ತ ಈ ಕಲ್ಪನಾಭೃಂಗವೇನು ಮಾಡುತ್ತಿದೆ. ಅದನ್ನು ನೋಡಲು ಏಳನೆಯ ನುಡಿಯನ್ನು ನೋಡಬೇಕು:

ಗಾಳಿಯೊಡನೆ ತಿಳ್ಳಿಯಾಡುತದರ ಓಟಾ
ದಿಕ್ತಟಗಳ ಹಾಯುತಿತ್ತು; ಅದರ ಬಿದಿಗೆ ನೋಟಾ
ನಕ್ಕ ನಗುವ ಚಿಕ್ಕೆಯೊಡನೆ ಬೆಳೆಸತಿತ್ತು ಕೂಟಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..


ಈ ಭೃಂಗವು ಗಾಳಿಯೊಡನೆ ತಿಳ್ಳಿ (=ಒಂದು ಗ್ರಾಮೀಣ ಆಟ) ಆಡುತ್ತ, ಆಡುತ್ತ , ಓಡುತ್ತ, ಓಡುತ್ತ ದಿಕ್ತಟಗಳನ್ನೇ ಹಾಯುತ್ತಿದೆ. (“ಎಲ್ಲೆಕಟ್ಟು ಇಲ್ಲದಾ ಬಾನಬಟ್ಟೆಯಲ್ಲಿದೊ” ಸಾಲನ್ನು ನೆನೆಪಿಸಿಕೊಳ್ಳಬಹುದು). ಅದರ ಬಿದಿಗೆ ಚಂದ್ರಮನ ನೋಟವು ನಕ್ಕು ನಗುವ ಚಿಕ್ಕೆಯನ್ನು (=twinkling star) ಕೂಟಕ್ಕೆ ಕರೆಯುತ್ತಿದೆ(=wooing).

ಆದರೆ, ಇದು ನಿರಂತರವೆ? ಬೇಂದ್ರೆ ಎಂಟನೆಯ ನುಡಿಯಲ್ಲಿ ಏನು ಹೇಳುತ್ತಾರೆನ್ನುವದನ್ನು ನೋಡೋಣ:

ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ
ಅಲ್ಲು ಇಲ್ಲು ಚೆಲುವು ನಿಂತು ಹಾಕತಿತ್ತು ತಾಳಾ
’ಬಂತೆಲ್ಲಿಗೆ?’ ಕೇಳುತಿದ್ದನೀಯನಂತ ಕಾಳಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಕಾವ್ಯದ ಪ್ರಾಣತಂತು ಈ ರೀತಿಯಾಗಿ ತನ್ನ ಬಾಳನ್ನು ಹೆಣೆಯುತ್ತಿತ್ತು. ಚೆಲುವೂ ಸಹ ಅದಕ್ಕೆ ತಾಳ ಹಾಕುತ್ತಿತ್ತು. ಆದರೆ, ಅನಂತನಾದ ಕಾಲನು ಇವರಿಗೆ ಕೇಳುವ ಪ್ರಶ್ನೆ: “ಬಂತೆಲ್ಲಿಗೆ?” ಅರ್ಥಾತ್, ನಿಮ್ಮ ಕಾಲ ಮುಗಿಯಬಂತು! ಬಾಳಿನಲ್ಲಿ, ಸಂಸಾರದಲ್ಲಿ ಯಾವುದೂ ಸ್ಥಿರವಲ್ಲ. ಶಂಕರಾಚಾರ್ಯರು ಹೇಳುವಂತೆ: ಕಾಲೋ ಜಗದ್ಭಕ್ಷಕಃ.

ಆದರೆ, ಇದಕ್ಕೆ ನಾವು ಹೆದರಿಕೊಳ್ಳಬೇಕೆ? ಸಾವಿಗೆ ಮುಖಾಮುಖಿಯಾಗಿರುವದು ಯಾವದು?—ಹುಟ್ಟು. ಕವನದ ಒಂಬತ್ತನೆಯ ನುಡಿಯನ್ನು ನೋಡಿರಿ:


ಮಾತು ಮಾತು ಮಥಿಸಿ ಬಂದ ನಾದದ ನವನೀತಾ
ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಮಾತು ಅಂದರೆ ವಾಕ್. ಈ ವಾಕ್ಕನ್ನು ಕಡೆದಾಗ ಜನಿಸಿದ್ದು ಈ ನಾದದ ಬೆಣ್ಣೆ(=ನವನೀತ). ಇದೇ ಈಗ ಜನಿಸಿದ ಈ ಸದ್ಯೋಜಾತ ಶಿಶುವು ನಿರುದ್ದಿಶ್ಯವಾಗಿ ಹಿಗ್ಗುತ್ತದೆ;ಜೊತೆಗೆ ಹಿಗ್ಗನ್ನು ಬೀರುತ್ತದೆ. ಅಲ್ಲದೆ ಹಿಗ್ಗುತ್ತದೆ(=ವಿಕಸನಗೊಳ್ಳುತ್ತದೆ). ತನ್ನಲ್ಲಿಯೇ ಪ್ರೀತಿಯನ್ನು ತುಂಬಿಕೊಂಡಿದೆ. ಇದರ ಪ್ರೀತಿಗೆ, ಇದರ ಆಟಕ್ಕೆ ಯಾವುದೇ ಅರ್ಥ(=ಉದ್ದೇಶ) ಬೇಕಾಗಿಲ್ಲ, ಯಾವುದೇ ಸ್ವಾರ್ಥ ಇದಕಿಲ್ಲ. ಭಾವಗೀತೆ ಎಂದರೆ ಹಿಗಿರಬೇಕು.

ಕೊನೆಯ ನುಡಿಯಲ್ಲಿ ಬೇಂದ್ರೆ ಮೊದಲಿನ ನುಡಿಯನ್ನು ಮತ್ತೆ ಬರೆದಿದ್ದಾರೆ. ಭಾವಗೀತೆಯ ಕಲ್ಪನಾವಿಲಾಸವು ಯಾವ ರೀತಿಯಲ್ಲಿ ಕವಿಯನ್ನು, ಓದುಗರನ್ನು ಉಲ್ಲಾಸಗೊಳಿಸುವದು ಎಂದು ತಿಳಿಸುತ್ತಾರೆ. ನಿಜವಾಗಲೂ ಅವರ ಕವನಗಳು ಭೃಂಗದ ಬೆನ್ನೇರಿ ಸಾಗುವದಲ್ಲದೆ, ಓದುಗರನ್ನೂ ಸಹ ಕರೆದೊಯ್ಯುವವು.


ಹೆಚ್ಚಿನ ಓದಿಗೆ : http://sallaap.blogspot.com/2008/04/blog-post_11.html

ಅಷ್ಟು ಪ್ರೀತಿ ಇಷ್ಟು ಪ್ರೀತಿ

‘ಸಖೀಗೀತ’ದಲ್ಲಿ ಬೇಂದ್ರೆಯವರು ತಮ್ಮ ಹೆಂಡತಿಯನ್ನು ‘ವಿಧಿ ತಂದ ವಧು’ ಎಂದು ಬಣ್ಣಿಸಿದ್ದಾರೆ. ಅದೇ ರೀತಿಯಲ್ಲಿ ಅವರ ಹೆಂಡತಿ ಲಕ್ಷ್ಮೀಬಾಯಿಯವರಿಗೆ ಬೇಂದ್ರೆ ‘ವಿಧಿ ತಂದ ವರ’ ಆಗಿರಲಿಕ್ಕೆ ಸಾಕು. ಮದುವೆಯಾದಾಗ ಬೇಂದ್ರೆಯವರಿಗೆ ೨೩ ವರ್ಷ ವಯಸ್ಸು. ಲಕ್ಷ್ಮೀಬಾಯಿ ಕೇವಲ ಹದಿಮೂರು ವರ್ಷದ ಹುಡುಗಿ.ಇತರ ಹುಡುಗಿಯರಿಗೆ ಇರುವಂತೆ ಈ ಹುಡುಗಿಗೂ ತನ್ನ ಸಂಸಾರದ ಬಗೆಗೆ ಬಣ್ಣ ಬಣ್ಣದ ಕನಸುಗಳು ಇದ್ದಿರಬಹುದು.

ಬೇಂದ್ರೆಯವರು ೧೯೨೬ರಲ್ಲಿ ‘ಸ್ವಧರ್ಮ’ ಪತ್ರಿಕೆಯ ಹಾಗೂ ೧೯೨೯ರಲ್ಲಿ ‘ಜಯ ಕರ್ನಾಟಕ’ ಪತ್ರಿಕೆಯ ಸಂಪಾದಕರಾಗಿದ್ದರು. ಇವರು ಬರೆದ ‘ನರಬಲಿ’ ಕವನಕ್ಕಾಗಿ ಬ್ರಿಟಿಶ್ ಸರಕಾರವು ಇವರನ್ನು ೧೯೩೨ರಲ್ಲಿ ಹಿಂಡಲಗಿಯ ಜೇಲಿಗೆ ಕಳುಹಿಸಿತು. ಕೆಲ ಕಾಲ ಮುಗದ ಎನ್ನುವ ಹಳ್ಳಿಯಲ್ಲಿ ದಿಗ್ಬಂಧನದಲ್ಲಿರಿಸಿತು. ಆರು ವರ್ಷಗಳ ವರೆಗೆ ಇವರಿಗೆ ಯಾರೂ ಯಾವುದೇ ನೌಕರಿಯನ್ನು ಕೊಡಕೂಡದೆಂದು ನ್ಯಾಯಾಲಯವು ಆಜ್ಞೆ ಹೊರಡಿಸಿತ್ತು. ಆರು ವರ್ಷಗಳವರೆಗೆ ಬೇಂದ್ರೆಯವರು ನಿರುದ್ಯೋಗಿಯಾಗಿ ಉಳಿಯಬೇಕಾಯಿತು. ಬಳಿಕ ೧೯೩೮ರಲ್ಲಿ ಮಾಸ್ತಿಯವರು ಬೇಂದ್ರೆಯವರನ್ನು ‘ಜೀವನ’ ಪತ್ರಿಕೆಯ ಸಂಪಾದಕರನ್ನಾಗಿ ಮಾಡಿದರು.

ಈ ನಡುವಿನ ಅವಧಿಯಲ್ಲಿ ಬೇಂದ್ರೆಯವರು ಪುಣೆಯಲ್ಲಿ ಎಮ್. ಏ. ಪದವಿಯನ್ನು ಪಡೆದರು. ‘ಗರಿ’ ,‘ಮೂರ್ತಿ’, ’ಕಾಮಕಸ್ತೂರಿ’, ‘ಸಖೀಗೀತ’, ‘ನಾದಲೀಲೆ’ ಹಾಗೂ ‘ಉಯ್ಯಾಲೆ’ ಕವನಸಂಕಲನಗಳನ್ನು ಪ್ರಕಟಿಸಿದರು. ಸಾಹಿತ್ಯಸಮ್ಮೇಳನಗಳಲ್ಲಿ ಭಾಗವಹಿಸಿದರು. ಅವರ ಕೀರ್ತಿಸೂರ್ಯನು ನಡುನೆತ್ತಿಗೇರಿದನು. ಆದರೆ ಸಂಸಾರತಾಪದಲ್ಲಿ ಬೆಂದವರು ಇವರ ಧರ್ಮಪತ್ನಿ.

ಇಂತಹ ಸಹನಾಲಕ್ಷ್ಮಿಯ ಬಗೆಗೂ ಬೇಂದ್ರೆಯವರಿಗೆ ಸಹನೆ ಇರಲಿಲ್ಲ.
ಎಲ್ಲ ಹೆಂಡತಿಯರು ಅಪೇಕ್ಷಿಸುವಂತೆ ಇವಳೂ ಸಹ ಒಡವೆ ಕೊಡಿಸಲು ಬೇಂದ್ರೆಯವರನ್ನು ಯಾವಾಗಲೋ ಕೇಳಿದ್ದಾಳು. ಈ ಕವಿಪುಂಗವರು ಅವಳಿಗೆ ಕೇವಲ ಕವನಗಳ ಒಡವೆಗಳನ್ನಷ್ಟೇ ತೊಡಿಸಿದರು !
“ಆತ ಕೊಟ್ಟ ವಸ್ತು, ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆತುಂಬ ಮುತ್ತು.”

ಬೇಂದ್ರೆಯವರಿಗೆ ತನ್ನ ಕಾವ್ಯಾಲಂಕಾರದ ಮಿತಿ ಗೊತ್ತಿರಲಿಲ್ಲ ಎಂದಲ್ಲ.
ಅವರೇ ತಮ್ಮ ಮತ್ತೊಂದು ಕವನದಲ್ಲಿ
“ ನೀನು ಕೊಡುವೆ ನನಗೆ ದವನ
ನಾನು ಕೊಡುವೆ ನಿನಗೆ ಕವನ
……………………..”
ಎಂದೆಲ್ಲ ಹೇಳುತ್ತ ತಮ್ಮ ಕವನಕ್ಕೆ
“ಬರಿಯ ಮಾತಿನ ಪೋಣಿಕೆ” ಎಂದು ಬಣ್ಣಿಸಿದ್ದಾರೆ.

ಬಹುಶ: ‘ಒಂದು ಮುತ್ತಿನ ಸರವನ್ನಾದರೂ ಕೊಡಿಸಿ’ ಎಂದು ಹೆಂಡತಿ ಆಗ್ರಹಪಡಿಸಿದಾಗ, ಈ ಕವಿ ಒಂದು ಉದ್ದವಾದ ಕವನವನ್ನೇ ಹೊಸೆದು ಹೆಂಡತಿಗೆ ಕೊಟ್ಟರು. ಬೇಂದ್ರೆಯವರಿಗೆ ದುಡ್ಡಿನ ಅಭಾವ ಇದ್ದಿರಬಹುದು , ಆದರೆ ಕಲ್ಪನೆಯ ಅಭಾವ ಎಂದೂ ಇರಲಿಲ್ಲ. ಅನಂತ ಕಲ್ಪನಾಸಾಮ್ರಾಜ್ಯದ ಸಾರ್ವಭೌಮರವರು.
‘ಪ್ರೀತಿಯನ್ನು (ಒಡವೆಗಳಿಂದ) ಅಳೆಯಬೇಡ’ ಎಂದು ಹೇಳುವ ಬೇಂದ್ರೆಯವರ ಕವನದ ಪೂರ್ಣಪಾಠ ಹೀಗಿದೆ:

ಅಷ್ಟು ಪ್ರೀತಿ ಇಷ್ಟು ಪ್ರೀತಿ--
ಎಣಿಸಿ ಕಷ್ಟಬಡದಿರು
ಒಲೆದು ಒಲಿಸಿ ಸುಖವಿರು
ಎಷ್ಟೆಯಿರಲಿ ಅಷ್ಟೆ ಮಿಗಿಲು---ತಮ್ಮ ಕಿರಣ ತಮಗೆ ಹಗಲು ;
ಉಳಿದ ಬೆಳಕು ಕತ್ತಲು.
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
ಉಳಿದ ಲೋಕ ಹಿತ್ತಲು.

ಮುತ್ತಿನೆಕ್ಕಸರವನಿಕ್ಕೆ
ಮುದ್ದಿಗೆ ಕಳೆಕಟ್ಟಿತೆ ?
ತೊಯ್ದ ಎವೆಗೆ ಮುದ್ದನಿಡಲು
ಮುದ್ದಿಗೆ ಅದು ತಟ್ಟಿತೆ ?
ಕುದಿದ ಬಂದ ಕಂಬನಿಯಲು
ಕಂಪು ಬರದೆ ಬಿಟ್ಟಿತೆ ?

ಮುತ್ತು ರತುನ ಹೊನ್ನು ಎಲ್ಲ
ಕಲ್ಲು ಮಣ್ಣ ವೈಭವಾ
ಎಲವೊ ಹುಚ್ಚು ಮಾನವಾ
ಒಂದು ಷೋಕು---ಬರಿಯ ಝೋಕು
ಬದುಕಿನೊಂದು ಜಂಬವು
ಒಲವೆ ಮೂಲ ಬಿಂಬವು.

ಸಪ್ತ ನಾಕ ಸಪ್ತ ನರಕ
ಅದರ ಬೆಳಕು ಕತ್ತಲು
ಮನ್ವಂತರ ತನ್ವಂತರ
ಅದರ ಕೋಟೆ ಕೊತ್ತಲು
ಸಿಂಹಾಸನವನೇರಿ ಕುಳಿತೆ ;
ತೊಡೆಗೆ ತೊಡೆಯ ಹಚ್ಚಿದೆ
ಸರಿಯೆ, ಒಲಿದ ತೋಳಿಗಿಂತ
ಅದರೊಳೇನು ಹೆಚ್ಚಿದೆ?

ಎದೆಯ ಕಣ್ಣ ಮುಚ್ಚಿಕೊಂಡು
ಏಕೊ ಏನೊ ಮೆಚ್ಚಿದೆ
ಮರದ ಅಡಿಗೆ ಗುಡಿಸಲಿರಲಿ
ಅಲ್ಲೆ ಒಲವು ಮೆರೆಯದೇ
ನಲಿವು ಮೇರೆವರಿಯದೇ?
................................................

ಬೇಂದ್ರೆಯವರ ಹೆಂಡತಿ ಒಂದು ಲೌಕಿಕ ವಸ್ತುವನ್ನು ಆಸೆಪಟ್ಟು ಕೇಳಿದಾಗ, ಬೇಂದ್ರೆಯವರು ಅದಕ್ಕೊಂದು philosophic ಸಂದೇಶವನ್ನು ನೀಡುತ್ತಿದ್ದಾರೆ. ಮೊದಲನೆಯ ನುಡಿಯನ್ನು ನೋಡಿರಿ :

ಅಷ್ಟು ಪ್ರೀತಿ ಇಷ್ಟು ಪ್ರೀತಿ--
ಎಣಿಸಿ ಕಷ್ಟಬಡದಿರು
ಒಲೆದು ಒಲಿಸಿ ಸುಖವಿರು
ಎಷ್ಟೆಯಿರಲಿ ಅಷ್ಟೆ ಮಿಗಿಲು---ತಮ್ಮ ಕಿರಣ ತಮಗೆ ಹಗಲು ;
ಉಳಿದ ಬೆಳಕು ಕತ್ತಲು.
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
ಉಳಿದ ಲೋಕ ಹಿತ್ತಲು.

ಪ್ರೀತಿಯ ಮಡದಿಯೆ, ನನಗೆ ನಿನ್ನಲ್ಲಿರುವ ಪ್ರೀತಿಯನ್ನು ಇಷ್ಟು , ಇಷ್ಟೇ ಎಂದು ಎಣಿಸಿ ಕಷ್ಟಪಡಬೇಡ. (ಇಲ್ಲಿ ಎಣಿಸು ಎನ್ನುವದಕ್ಕೆ ಎರಡು ಅರ್ಥಗಳಿವೆ. ಎಣಿಸು=counting ಎನ್ನುವದು ಒಂದು ಅರ್ಥವಾದರೆ , ಎಣಿಸು=ಭಾವಿಸುವದು ಎನ್ನುವದು ಎರಡನೆಯ ಅರ್ಥ.)
ನನಗೆ ಒಲೆದು ಎಂದರೆ ನನ್ನಲ್ಲಿ ಅನುರಕ್ತಳಾಗು ; ಒಲಿಸಿ ಎಂದರೆ ನನ್ನನ್ನು ಒಲಿಸಿಕೊಳ್ಳು ಅರ್ಥಾತ್ ನನ್ನ ಒಲವನ್ನು (ಕಷ್ಟಪಟ್ಟು) ಸಂಪಾದಿಸಿಕೊ , ಹಾಗೂ ಸುಖದಿಂದಿರು !

ಕವಿಯು ಪ್ರೀತಿಯ ಈ ವ್ಯಾಪಾರದ ಎಲ್ಲಾ ಭಾರವನ್ನು ಹೆಂಡತಿಯ ಮೇಲೆ ಹಾಕುತ್ತಿದ್ದಾನೆ. ನೀನು ಒಡವೆಯನ್ನು ಕೇಳದೇ ನನ್ನ ಪ್ರೀತಿಯನ್ನು ಪಡೆಯಲು ನೀನೇ ಪ್ರಯತ್ನ ಮಾಡು (!) ಎನ್ನುವದು ಈ ಕವಿಯ ಸಂದೇಶ.
ಇಂತಹ ಸಂದೇಶಕ್ಕೆ ಕವಿ ಕೊಡುವ ತಾತ್ವಿಕ support ಈ ರೀತಿಯಾಗಿದೆ :
“ಎಷ್ಟೆಯಿರಲಿ ಅಷ್ಟೆ ಮಿಗಿಲು ,
ತಮ್ಮ ಕಿರಣ ತಮಗೆ ಹಗಲು ;ಉಳಿದ ಬೆಳಕು ಕತ್ತಲು.”

ಪಾಲಿಗೆ ಬಂದದ್ದು ಪಂಚಾಮೃತ. ನಮ್ಮ ಹಣೆಯಲ್ಲಿ ಎಷ್ಟೇ ಸ್ವಲ್ಪವಿದ್ದರೂ ಅದನ್ನೇ ಬಹಳ ಎಂದು ತಿಳಿಯಬೇಕು. ಯಾಕೆಂದರೆ, “ತಮ್ಮ ಕಿರಣ ತಮಗೆ ಹಗಲು ;ಉಳಿದ ಬೆಳಕು ಕತ್ತಲು.”
ನಮ್ಮ ಮನೆಯ ಕಿಡಕಿಯಿಂದ ಒಳಗೆ ತೂರಿದ ಸೂರ್ಯನ ಒಂದೇ ಕಿರಣವು ನಮ್ಮ ಕತ್ತಲೆ ಕೋಣೆಗೆ ಬೆಳಕು ನೀಡುವದೇ ಹೊರತು, ಇತರ ನಕ್ಷತ್ರಗಳ ಕಿರಣಗಳಿಂದ ನಮ್ಮ ಮನೆಗೆ ಹಗಲು ಸಿಗಲಾರದು. ಆ ಬೆಳಕು ನಮ್ಮ ಮಟ್ಟಿಗೆ ಕತ್ತಲೆಯೇ ಸೈ!
(ನಿನ್ನ ಜೀವನದಲ್ಲಿ ಪ್ರೀತಿಯ ಬೆಳಕನ್ನು ಕಾಣಬೇಕಾಗಿದ್ದರೆ ಹುಚ್ಚು ಹಂಬಲಗಳನ್ನು ಬಿಟ್ಟುಬಿಟ್ಟು, ನಿನ್ನ ಕವೀಶ್ವರ ಪತಿ ಕೊಡುವ ಪ್ರೀತಿಯನ್ನಷ್ಟೇ ನೆಚ್ಚಿಕೊ!)

ವರಕವಿಗಳು ತಮ್ಮ ಕಲ್ಪನಾಶಕ್ತಿಯ ಬಲದಿಂದ ಇನ್ನಿಷ್ಟು ಉದಾಹರಣೆಗಳನ್ನು ಸೃಷ್ಟಿಸುತ್ತಾರೆ:
“ಬಿಟ್ಟಲ್ಲಿಯೆ ಬೀಡು
ಮತ್ತೆ ಆಡಿದಲ್ಲಿ ಅಂಗಳು
ಉಳಿದ ಲೋಕ ಹಿತ್ತಲು.”

ಬೇರೆಯವರ ಅನುಕರಣೆ, ಅನುಸರಣೆ ಬೇಡ ; ನಾವು ಎಲ್ಲಿ ನಿಲ್ಲುತ್ತೇವೆಯೊ ಅದೇ ನಮ್ಮ ಬೀಡು , ಅದೇ ನಮ್ಮ ನೆಲೆ. ನಾವು ಎಲ್ಲಿ ಆಡುತ್ತೇವೊ ಅದೇ ನಮ್ಮ ಮನೆಯ ಅಂಗಳು.
“ ಅಲ್ಲಾ, ಉಳಿದವರು ಎಷ್ಟು ಚೆನ್ನಾಗಿರೊ ಬೀಡಿನಲ್ಲಿ ಇದ್ದಾರಲ್ಲಾ” ಎಂದು ಅವರ ಹೆಂಡತಿ ಏನಾದರೂ ಅನುಮಾನ ವ್ಯಕ್ತ ಪಡಿಸಿದರೆ, ವರಕವಿಗಳ ಉತ್ತರ ಅದಕ್ಕೂ ಸಿದ್ಧವಾಗಿದೆ :
“ಉಳಿದ ಲೋಕ ಹಿತ್ತಲು.”
(=ಅದೆಲ್ಲಾ ನಮ್ಮ ಹಿಂದೆ ಇರೋದು, ನಾವು ಅದನ್ನೆಲ್ಲ ನೋಡೋದು ಬೇಡ !)

ಈ ರೀತಿಯಾಗಿ ಹೆಂಡತಿಗೆ general philosophyಯನ್ನು ಹೇಳಿ ಮುಗಿಸಿದ ಕವಿ, ತನ್ನ ಮಾತುಗಳಿಂದ ತಾನೇ ಕಸಿವಿಸಿಗೊಳ್ಳುತ್ತಾನೆ. ಆತನಿಗೆ ಗೊತ್ತು: ತನ್ನ ಹೆಂಡತಿಯ ಒಂದೇ ಒಂದು ಸಣ್ಣ ಹಂಬಲವನ್ನು ತಾನು ಪೂರೈಸುತ್ತಿಲ್ಲ ಎಂದು. ತನ್ನ ಮೇಲೆ ತನಗೇ ಬರುತ್ತಿರುವ ಕೋಪವನ್ನು ಈಗ ಆತ ಅವಳ ಮೆಲೆ ತಿರುಗಿಸುತ್ತಾನೆ. ಹತಾಶನಾದ ಗಂಡ ಹೆಂಡತಿಯ ಮೇಲೆ ಹರಿಹಾಯುವದು ಒಂದು ಸಾಮಾನ್ಯ ಸಂಗತಿ. ‘ಒಂದು ಮುತ್ತಿನ ಸರವನ್ನು ಪಡೆದು, ನೀನು ಏನು ಮಹಾ ಸಾಧಿಸಿಕೊಂಡಂತಾಯ್ತು’ ಎಂದು ಆತ ಅವಳ ಮೇಲೆ ಹಾರಾಡುತ್ತಾನೆ :

ಮುತ್ತಿನೆಕ್ಕಸರವನಿಕ್ಕೆ
ಮುದ್ದಿಗೆ ಕಳೆಕಟ್ಟಿತೆ ?
ತೊಯ್ದ ಎವೆಗೆ ಮುದ್ದನಿಡಲು
ಮುದ್ದಿಗೆ ಅದು ತಟ್ಟಿತೆ ?
ಕುದಿದ ಬಂದ ಕಂಬನಿಯಲು
ಕಂಪು ಬರದೆ ಬಿಟ್ಟಿತೆ ?

ಮುತ್ತಿನ ಸರ ತೊಡಿಸುವದರಿಂದ ಮಾತ್ರ ಪ್ರೀತಿಗೆ ಕಳೆ ಬರುವದೆ? ನಿನ್ನ ಕಣ್ಣೀರಿನಿಂದ ತೊಯ್ದ ರೆಪ್ಪೆಗಳಿಗೆ ನಾನು ಮುತ್ತು ಕೊಟ್ಟರೆ, ಅದು ನಿನ್ನ ಪ್ರೀತಿಗೆ ತಟ್ಟಲಾರದೆ? ನಿನ್ನ ಕುದಿಯುತ್ತಿರುವ ಮನಸ್ಸು ಹೊರಚೆಲ್ಲಿದ ಕಂಬನಿಗಳಲ್ಲಿ ಸಹ ಒಲವಿನ ಕಂಪು ಇಲ್ಲವೆ? ಗಂಡ ಹೆಂಡಿರಲ್ಲಿ ಪರಸ್ಪರ ಒಲವಿನ ಭಾವನೆಗಳೆ ಮುಖ್ಯವಲ್ಲವೆ?
ಇದು ಕವಿಯು ದಾಂಪತ್ಯದ ನೆಲೆಗಟ್ಟಿನಲ್ಲಿ ಮಾಡುತ್ತಿರುವ argument.

ಆದರೆ ಹೆಂಡತಿ ಮುಖವನ್ನು ಬೇರೆಡೆಗೆ ಹೊರಳಿಸಿ ಬಿಟ್ಟಿದ್ದಾಳೆ. Exasperated ಆದ ಕವಿ ಮಾನವ ಕುಲದ ಮೂರ್ಖತನಕ್ಕೆ ಬೇಸತ್ತು , ವ್ಯಥೆಪಟ್ಟು ಉದ್ಗರಿಸುತ್ತಾನೆ:

ಮುತ್ತು ರತುನ ಹೊನ್ನು ಎಲ್ಲ
ಕಲ್ಲು ಮಣ್ಣ ವೈಭವಾ
ಎಲವೊ ಹುಚ್ಚು ಮಾನವಾ
ಒಂದು ಷೋಕು---ಬರಿಯ ಝೋಕು
ಬದುಕಿನೊಂದು ಜಂಬವು
ಒಲವೆ ಮೂಲ ಬಿಂಬವು.

ಈ precious stonesಗಳೆಲ್ಲ earthly glory ಮಾತ್ರ. ಅವು ಸತ್ಯವಲ್ಲ.
(ಟಿಪ್ಪಣಿ : ರತ್ನಗಳು ಭೂಮಿಯ ಒಳಗಡೆ ಸಿಗುವದರಿಂದ ಅವುಗಳಿಗೆ “ಕಲ್ಲು ಮಣ್ಣ ವೈಭವಾ” ಎಂದು ಕರೆಯುವದು ಒಂದು ವ್ಯಂಗ್ಯೋಕ್ತಿ.)
ಇದೆಲ್ಲ ಬರಿಯ ಶೋಕಿ, ಬರಿಯ ಡೌಲು , vanity of life.
ಪ್ರೀತಿಯೇ ಸತ್ಯ, ಬೇರೆ ಎಲ್ಲ ಮಿಥ್ಯ.

ಕವಿ ಮುಂದುವರಿದು ಸಂಪತ್ತಿನ ಸಂಭ್ರಮವನ್ನಷ್ಟೇ ಅಲ್ಲ, ಅಧಿಕಾರದ ವೈಭವವನ್ನೂ ಸಹ ತುಚ್ಛೀಕರಿಸುತ್ತಾನೆ. ಕೇವಲ ಭೂಮಿಯ ಒಡೆತನವಲ್ಲ, ಸಪ್ತಸ್ವರ್ಗ ಹಾಗೂ ಸಪ್ತನರಕಗಳನ್ನು ಒಳಗೊಂಡ ಇಂದ್ರಾಧಿಕಾರದ ವೈಭೋಗಕ್ಕೂ ಸಹ ಏನು ಬೆಲೆಯಿದೆ?

ಸಪ್ತ ನಾಕ ಸಪ್ತ ನರಕ
ಅದರ ಬೆಳಕು ಕತ್ತಲು
ಮನ್ವಂತರ ತನ್ವಂತರ
ಅದರ ಕೋಟೆ ಕೊತ್ತಲು
ಸಿಂಹಾಸನವನೇರಿ ಕುಳಿತೆ ;
ತೊಡೆಗೆ ತೊಡೆಯ ಹಚ್ಚಿದೆ
ಸರಿಯೆ, ಒಲಿದ ತೋಳಿಗಿಂತ
ಅದರೊಳೇನು ಹೆಚ್ಚಿದೆ?

ಕವಿ ತಮ್ಮ ಹೆಂಡತಿಗೆ ಆಹ್ವಾನ ನೀಡುತ್ತಿದ್ದಾರೆ. ಇಂತಹ ಲೋಕಾಧಿಪತಿಯ ಹೆಂಡತಿಯಾಗಿ ನೀನೂ ಸಹ ಸಿಂಹಾಸನವನ್ನೇರಬಹುದು. ಸಾಮ್ರಾಟನ ತೊಡೆಗೆ ತೊಡೆ ಹಚ್ಚಿ ಕುಳಿತುಕೊಳ್ಳಬಹುದು. ಅವನ pomp and powerದಲ್ಲಿ ನೀನೂ ಭಾಗಿಯಾಗಬಹುದು. ಇದೆಲ್ಲ ಸರಿ, ಒಲಿದ ತೋಳುಗಳ ಅಪ್ಪುಗೆಗಿಂತ ಇದೆಲ್ಲ ಹೆಚ್ಚಿನದೆ?

ಕವಿ ತನ್ನೆಲ್ಲ argumentಗಳನ್ನು ತನ್ನ ಅರ್ಧಾಂಗಿಗೆ ಹೇಳಿದ್ದಾನೆ.
ಮುತ್ತಿನ ಹಾರಕ್ಕಿಂತ ಪತಿಯ ಪ್ರೇಮವೇ ಹೆಚ್ಚಿನದು ಎಂದು ಅವಳಿಗೆ ತಿಳಿಸಿದ್ದಾನೆ.
ತನ್ನ ಹತಾಶೆ, ತನ್ನ ಅಸಹಾಯಕತೆಯನ್ನೆಲ್ಲ ಹೊರಕಕ್ಕಿ, ಆತನೀಗ ನಿರುಮ್ಮಳನಾಗಿದ್ದಾನೆ.
ಇಂತಹ ಸಮಾಧಾನದ ಸ್ಥಿತಿಯಲ್ಲಿ ಆತ ಅಂತರ್ಮುಖಿಯಾಗಿ ಏನನ್ನೊ ಧ್ಯಾನಿಸುತ್ತಾನೆ :

ಎದೆಯ ಕಣ್ಣ ಮುಚ್ಚಿಕೊಂಡು
ಏಕೊ ಏನೊ ಮೆಚ್ಚಿದೆ
ಮರದ ಅಡಿಗೆ ಗುಡಿಸಲಿರಲಿ
ಅಲ್ಲೆ ಒಲವು ಮೆರೆಯದೇ
ನಲಿವು ಮೇರೆವರಿಯದೇ?

ನಿಜ, ಒಲವಿನ ವೈಭವಕ್ಕೆ ಲೌಕಿಕ ಸಂಪತ್ತು ಬೇಕಾಗಿಲ್ಲ. ಪುಟ್ಟ ಗುಡಿಸಲಿನಲ್ಲಿಯೂ ಸಹ ಒಲವು ಹಾಗೂ ನಲಿವು ಮಹಾಪೂರದಂತೆ ಹರಿಯಬಲ್ಲವು !
ಹೆಂಡತಿಯ ಆಸೆಯನ್ನು ಪೂರೈಸಲಾಗದ ಬಡ ಕವಿಯು ಕಂಡ ಸತ್ಯವಿದು !

ತೊದಲು ಮಾತಿನ ಶ್ರೀ ಕೇಶವ ಕುಲಕರ್ಣಿಯವರು ಈ ಕವನದ ಕೆಲವು ವೈಶಿಷ್ಟ್ಯಗಳನ್ನು ವಿವರಿಸಿದ್ದಾರೆ. ಅವು ಇಂತಿವೆ:
೧:
ಕವಿತೆ ಮೊದಲಿನಿಂದ ಕೊನೆಯವರೆಗೆ ನೋಡಲು ಒಂದೇ ತರಹದ ಛಂದಸ್ಸಿನಲ್ಲಿ ಬರೆಯಲ್ಪಟ್ಟಂತೆ ಕಂಡರೂ ನುಡಿಯಿಂದ ನುಡಿಗೆ ಶಬ್ದಗಳ ಬಳಕೆಯಲ್ಲಿ ಅದ್ಭುತ ಬದಲಾವಣೆಯಿದೆ. ಮೊದಲ ನುಡಿಯಲ್ಲಿ
"ತಮ್ಮ ಕಿರಣ ತಮಗೆ ಹಗಲು ;
ಉಳಿದ ಬೆಳಕು ಕತ್ತಲು.
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
ಉಳಿದ ಲೋಕ ಹಿತ್ತಲು."
ಎಂಬ ಹೊಸ ರೂಪಕಗಳನ್ನು ಶಬ್ದಗಾರುಡಿಗ ಆರಾಮವಾಗಿ ತಂದು ನಿಲ್ಲಿಸುತ್ತಾರೆ.

ಮುಂದಿನ ನುಡಿ ಬರೀ ಉತ್ತರಗಳನ್ನೇ ಹೇಳುವ ಪ್ರಶ್ನೆಗಳ ನುಡಿ.

ಮೂರನೇ ನುಡಿಯ ಶಬ್ದ ಮತ್ತು ಭಾವಗಳಲ್ಲಿ ಬರೀ ಲೌಕಿಕತೆಯೇ ಇದೆ. ಶೋಕು, ಝೋಕು ಎಂಬ ಹೊಸಕನ್ನಡ ಪದಗಳು ಬರುತ್ತವೆ.

ನಾಕನೇ ನುಡಿಯಲ್ಲಿ ಇದ್ದಕ್ಕಿದ್ದಂತೆ ಶಬ್ದಗಳೆಲ್ಲ ಪುರಾಣದ್ದಾಗುತ್ತವೆ. ಆದರೆ ತಟ್ಟನೇ "ತೊಡೆಗೆ ತೊಡೆಯ ಹಚ್ಚಿದೆ" ಎಂದು ಶುದ್ಧ ಕನ್ನಡ ಬಂದು ಆ ನುಡಿಯಲ್ಲಿ ಶಾಕ್ ಕೊಡುತ್ತದೆ.

ಐದನೇ ನುಡಿ ಧ್ಯಾನದ ಸ್ಥಿತಿಯನ್ನು ತಲುಪುತ್ತದೆ.

೨. "ತೊಡೆಗೆ ತೊಡೆಯ ಹಚ್ಚಿದೆ, ಸರಿಯೆ," ನನಗೆ ಎರಡು ಅರ್ಥ ಕೊಟ್ಟಿತು. ಒಂದು, ನೀವು ಬರೆದಂತೆ "ಸಾಮ್ರಾಟನ ತೊಡೆಗೆ ತೊಡೆ ಹಚ್ಚಿ ಕುಳಿತುಕೊಳ್ಳಬಹುದು.", ಇನ್ನೊಂದು ನನಗನಿಸಿದ್ದು, "ಕಾಮದ ಮದ (ತೊಡೆಗೆ ತೊಡೆ)ಕ್ಕಿಂತ ಪ್ರೀತಿ (ಒಲಿದ ತೋಳು) ಕವಿಗೆ ಮುಖ್ಯವಾಗುತ್ತದೆ.

ಬೇಂದ್ರೆಯವರ ಕವನಗಳು ತಿಳಿದುಕೊಂಡಷ್ಟೂ ಹಿಗ್ಗುತ್ತಲೇ ಹೋಗುತ್ತವೆ! ಜೊತೆಗೆ ನಮ್ಮ ಹಿಗ್ಗೂ ಹೆಚ್ಚುತ್ತಲೇ ಹೋಗುತ್ತದೆ!
*****************************************************
[ ಟಿಪ್ಪಣಿ:
ಕವಿಯ ಲಂಬಿತ ಉದಾಸ ಭಾವಕ್ಕೆ ತಕ್ಕಂತೆ ಹಾಗೂ ಅವನ ಲಂಬಿತ argumentಗಳಿಗೆ ಹೊಂದುವಂತೆ, ಕವನವು ಲಂಬಿತ ಛಂದಸ್ಸಿನಲ್ಲಿ ಇರುವದನ್ನು ಗಮನಿಸಬಹುದು.

ಬೇಂದ್ರೆಯವರು ೧೯೪೩ರಲ್ಲಿ ಕಾಳಿದಾಸನ ‘ಮೇಘದೂತ ’ವನ್ನು ಕನ್ನಡಕ್ಕೆ ಅನುವಾದಿಸಿದರು. ಆ ಅನುವಾದದ ರಾಜಧನದಿಂದ ತಮ್ಮ ಹೆಂಡತಿಗೆ ಮುತ್ತಿನ ಏಕಾಕ್ಷಿ ಸರವನ್ನು ಕೊಡಿಸಿ ಅವಳ ಹಂಬಲವನ್ನು ಪೂರೈಸಿದರು.]
http://sallaap.blogspot.com/2009/05/blog-post.html



ಸಂಜೀಯ ಜಾವಿಗೆ

ಛಂದಸ್ಸು ಬೇಂದ್ರೆಯವರ ಕಾವ್ಯದ ಸಹಜವಾದ ಸಿದ್ಧಿಗಳಲ್ಲಿ ಒಂದು. ಬೇಂದ್ರೆಯವರು ಕವನವನ್ನು ಬರೆಯುತ್ತಿದ್ದಿಲ್ಲ ; ಕವನವು ಅವರ ಮನದಲ್ಲಿ ಮೂಡುತ್ತಿತ್ತು. ಒಂದು ಘಟನೆಯು ಅವರ ಮನದಲ್ಲಿ ಒಂದು ಭಾವವನ್ನು ಉದ್ದೀಪಿಸಿದ ಬಳಿಕ, ಆ ಭಾವಕ್ಕೆ ತಕ್ಕದಾದ ನಾದ ಹಾಗೂ ಛಂದಗಳೊಂದಿಗೆ ಪ್ರಾಸಬದ್ಧ ಪದಗಳು ಅವರ ಮನದಿಂದ ಕವನರೂಪದಲ್ಲಿ ಹೊರಹೊಮ್ಮುತ್ತಿದ್ದವು.
ಇದರ ಒಂದು ಶ್ರೇಷ್ಠ ಉದಾಹರಣೆ ಎಂದರೆ ‘ಪಾತರಗಿತ್ತಿ ಪಕ್ಕ’ ಎನ್ನುವ ಕವನ.

ಪಾತರಗಿತ್ತಿಯು ಎಷ್ಟು ಕ್ಷಿಪ್ರವಾಗಿ ರೆಕ್ಕೆಗಳನ್ನು ಬಡೆಯುವದೊ, ಅಷ್ಟೇ ಕ್ಷಿಪ್ರವಾದ metre ಈ ಕವನಕ್ಕಿದೆ. ಪಾತರಗಿತ್ತಿಯು ಕ್ಷಣಾರ್ಧದಲ್ಲಿ ಎಲ್ಲೆಲ್ಲಿ ಸುತ್ತಾಡುವದೊ, ಈ ಕವನ ಸಹ ಅದೇ ವೇಗದಲ್ಲಿ ಎಲ್ಲೆಲ್ಲೊ ಸುತ್ತಾಡುತ್ತದೆ. (ಕಲ್ಪನೆಯ ರೆಕ್ಕೆಗಳ ಮೂಲಕ ಹಾರಾಡಿದರೂ ಸಹ ಬೇಂದ್ರೆಯವರ ಕವನ ವಾಸ್ತವದ ನೆಲೆಗಳನ್ನು ಬಿಡುವದಿಲ್ಲ.)
ಇಂತಹದೇ ಸಹಜ ಛಂದಸ್ಸಿನ ಮತ್ತೊಂದು ಕವನ : “ಸಂಜೀಯ ಜಾವಿಗೆ ”.

ಮೂರೂಸಂಜೆಯ ಹೊತ್ತಿನಲ್ಲಿ ಬೇಂದ್ರೆಯವರು ತಮ್ಮ ಮನೆಯ ಮುಂಭಾಗದಲ್ಲಿ ಕುಳಿತುಕೊಂಡಿದ್ದಾರೆ. ಅವರ ಪುಟ್ಟ ಮಗಳು ಮಂಗಲಾ ನೀರು ತರುವವರ ಜೊತೆಗೆ ತಾನೂ ಸಹ ಬಾವಿಗೆ ಹೊರಟಿದ್ದಾಳೆ. ಆ ಕಾಲದಲ್ಲಿ ನೀರನ್ನು ಕೆರೆ ಅಥವಾ ಬಾವಿಯಿಂದಲೇ ತರಬೇಕಾಗಿತ್ತು. ಹೊತ್ತು ಮೂಡುವ ಮುನ್ನ ಹಾಗೂ ಹೊತ್ತು ಮುಳುಗುವ ಸಮಯದಲ್ಲಿ ಈ ಕಾರ್ಯಕ್ರಮ ನಡೆಯುತ್ತಿತ್ತು.

ಈ ಪುಟ್ಟ ಬಾಲೆ, ಪುಟ್ಟ ಬಿಂದಿಗೆ ಹೊತ್ತುಕೊಂಡು ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತ ನೀರು ತರಲು ಹೊರಟಾಗ, ಬೇಂದ್ರೆಯವರಿಗೆ ವಿನೋದವೆನಿಸಿದೆ. ಅವರು ಅವಳ ಚಲನವಲನವನ್ನು ಕೌತುಕದಿಂದ ಗಮನಿಸುತ್ತಿದ್ದಾರೆ. ಅವಳ ಪುಟ್ಟ ಹೆಜ್ಜೆಗಳ ತಾಳಕ್ಕೆ ತಕ್ಕಂತೆ ಅವರ ಮನದಲ್ಲಿ ಕವನ ಮೂಡುತ್ತಿದೆ.
ಕವನದ ಪೂರ್ತಿಪಾಠ ಇಂತಿದೆ:

ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||
ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||
ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||
ಒಲಿದಾಡೊ ರೀತಿಗೆ | ಹಾಡ್ಯಾನೊ ಗೀತಿಗೆ ||
ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||

ಸಂಜೆಯ ಜಾವಿಗೆ | ಹೊರಟೀದಿ ಬಾವಿಗೆ ||
ಕಿರಗೀಯ ನೀರಿಗೆ | ಒದೆಯೂತ ದಾರಿಗೆ ||
ಗೆಜ್ಜೀಯು ಗೆಜ್ಜಿಗೆ | ತಾಕ್ಯಾವ ಹೆಜ್ಜಿಗೆ ||
ಏನಾರ ನಡಿಗೆ | ಯಾವೂರ ಹುಡಿಗೆ ||
ಸಂಜೆಯ ಜಾವಿಗೆ | ಹೊರಟಾಳ ಬಾವಿಗೆ ||

ಎರಡೂನು ಸಾಲಿಗೆ | ಹಾದ್ಯುದ್ದ ಬೇಲಿಗೆ ||
ಗುಲಬಾಕ್ಷಿ ಮಲ್ಲಿಗೆ | ಕೇಳತಾವ ಕಲ್ಲಿಗೆ ||
“ ಕಳಸೋದೆ ನೀರಿಗೆ | ಇಂಥ ಸುಕುಮಾರಿಗೆ ||
ಚಾಚ್ಯಾವಂಗಾಲಿಗೆ | ಮುಚ್ಚಂಜಿ ನಾಲಿಗೆ ” ||
ಸಂಜೀಯ ಜಾವಿಗೆ | ಬಂದ್ಯಲ್ಲ ಬಾವಿಗೆ ||

ಮಾತೀಗು ಆಚೆಗೆ | ಮೀರಿದ್ದ ನಾಚಿಗೆ ||
ಮುಸುಕ್ಯಾವ ಹೂವಿಗೆ | ಬಂದೀಯೆ ಬಾವಿಗೆ ||
ಗಿಲುಕೆಂಬೊ ಬಳಿಗೆ | ಕೆಲಸೊಂದೊ ಗಳಿಗೆ ||
ಗೆಳತೇರ ಒಂದಿದೆ | ಸೇದಿದೆ ಬಿಂದಿಗೆ ||
ಸಂಜೀಯ ಜಾವಿಗೆ | ಬಂದೀಯೆ ಬಾವಿಗೆ ||

ಮೂಗಿನ ನೇರಿಗೆ | ಹೊರಳೀದೆ ಊರಿಗೆ ||
ತಲಿಮ್ಯಾಲ ಬಿಂದಿಗೆ | ಕಾಲಾಗ ಅಂದಿಗೆ ||
ತುಂ ತುಮುಕು ತುಂಬಿದೆ | ಬಿಂದೀಗೆ ಅಂತಿದೆ ||
ಝಣ್‍ಝಣ ಅಂದಿಗೆ | ಅಂದಾವ ಹೊಂದಿಗೆ ||
ಸಂಜೀಯ ಜಾವಿಗೆ | ಹೋಗಿದ್ದೆ ಬಾವಿಗೆ ||

ಒಂದೇನೆ ಬಾರಿಗೆ | ಹೋದೆ ಸೀ-ನೀರಿಗೆ ||
ಬೆವರೀನ ಸಾರಿಗೆ | ತಂದೀದಿ ಯಾರಿಗೆ ||
ಇಬ್ಬನಿ ಹೂವಿಗೆ | ನಸುಕಿನ ಜಾವಿಗೆ ||
ಮುತ್ತ್ಹನಿ ಮಾರಿಗೆ | ಮುತ್ತ್ಯಾವೊ ನಾರಿಗೆ ||
ಸಂಜೀಯ ಜಾವಿಗೆ | ಹೋಗಿಯು ಬಾವಿಗೆ ||

ಕೆಲಸಾನ ಆಟಿಗೆ | ಮಾಡುವ ಸೂಟಿಗೆ |
ಹಸನಾದ ಧರತಿಗೆ | ಮೆಚ್ಚಿದೆ ಗರತಿಗೆ ||
ಕುಣಿಸಿದೆ ಇಂದಿಗೆ | ಕಣ್ಬಿಟ್ಟ ಮಂದಿಗೆ ||
ನೀವಾಳಿ ದಿಟ್ಟಿಗೆ | ಕಣ್ಣೆಲ್ಲ ಒಟ್ಟಿಗೆ ||
ಸಂಜೀಯ ಜಾವಿಗೆ | ಹೋಗಿದ್ದ್ಯೆ ಬಾವಿಗೆ ||

ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||
ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||
ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||
ಒಲಿದಾಡೊ ರೀತಿಗೆ | ಹಾಡ್ಯಾನ ಗೀತಿಗೆ ||
ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||
vvvvvvvvvvvvvvvvvvvvvvvvvvvvvvvvvvvvvvvvvvvvvvv

ಪುಟ್ಟ ಮಂಗಲೆಯನ್ನು ಎತ್ತಿಕೊಂಡು ಆಡುವದರಿಂದ ತಂದೆಗೆ ಸಂತೋಷ ಉಕ್ಕುತ್ತದೆ. ಅವಳನ್ನು ಆತ ಎತ್ತಿ ಎತ್ತಿ ಕುಣಿಸುತ್ತಾನೆ. ಇಬ್ಬರ ಮನಸ್ಸೂ ಆನಂದದ ಆಸೆಯಲ್ಲಿ ಅರಳುತ್ತದೆ. ಕುಣಿಸುವಾಗ ಈತ ಮಾಡುವ ‘ಊ ಊ’ ರಾಗದ ದನಿಗೆ ತಕ್ಕಂತೆ ಅವಳು ತೂಗುತ್ತಾಳೆ. ಒಬ್ಬರಿಗೊಬ್ಬರು ಮಮತೆಯಿಂದ ಸ್ಪಂದಿಸುತ್ತಾರೆ. ಈ ಸ್ಪಂದನದಿಂದ ಉದ್ದೀಪ್ತನಾದ ಕವಿಯಲ್ಲಿ ಹಾಡು ಮೂಡುತ್ತದೆ.

“ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||
ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||
ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||
ಒಲಿದಾಡೊ ರೀತಿಗೆ | ಹಾಡ್ಯಾನೊ ಗೀತಿಗೆ ||
ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||”

ಇಂತಹ ಕಾವ್ಯೋದ್ದೀಪನಕ್ಕೆ ಕಾರಣಳಾಗುವ ಈ ಮಗಳು , ಮಂಗಳೆ ಇದೀಗ ಮೂರೂಸಂಜೆಯ ಹೊತ್ತಿನಲ್ಲಿ ನೀರು ತರಲು ಬಾವಿಗೆ ಹೊರಟಿದ್ದಾಳೆ.
ಈ ಪುಟ್ಟ ಬಾಲೆ ನಡೆಯುತ್ತಿರುವ ಪರಿಯಾದರೂ ಎಂತಹದು? ಅವಸರದಲ್ಲಿ ಧಾವಿಸುತ್ತಿರುವದರಿಂದ ತಾನು ಉಟ್ಟುಕೊಂಡ ಕಿರಿಗೆ (=ಸಣ್ಣ ಸೀರೆ)ಯ ನಿರಿಗೆಗಳನ್ನು ಅವಳು ಚಿಮ್ಮುತ್ತಿದ್ದಾಳೆ. ಈ ಕಿರಿಗೆ ಸಹ ಅವಳಿಗೆ ದೊಡ್ಡದೇ ಆಗಿದೆ. ಅದು ಅವಳ ಅಂಗಾಲುಗಳನ್ನು ದಾಟಿ, ನೆಲವನ್ನು ಸ್ಪರ್ಷಿಸುತ್ತದೆ. ಆದುದರಿಂದ ಕವಿ ಇದನ್ನು ‘ಒದೆಯೂತ ದಾರಿಗೆ’ ಎಂದು ಬಣ್ಣಿಸುತ್ತಾನೆ.

“ಸಂಜೆಯ ಜಾವಿಗೆ | ಹೊರಟೀದಿ ಬಾವಿಗೆ ||
ಕಿರಗೀಯ ನೀರಿಗೆ | ಒದೆಯೂತ ದಾರಿಗೆ ||
ಗೆಜ್ಜೀಯು ಗೆಜ್ಜಿಗೆ | ತಾಕ್ಯಾವ ಹೆಜ್ಜಿಗೆ ||
ಏನಾರ ನಡಿಗೆ | ಯಾವೂರ ಹುಡಿಗೆ ||
ಸಂಜೆಯ ಜಾವಿಗೆ | ಹೊರಟಾಳ ಬಾವಿಗೆ ||”

ಅದರಂತೆ ಅವಳ ಗೆಜ್ಜೆಗಳು ಅವಳ ಹೆಜ್ಜೆಗೆ ತಾಕುತ್ತಿವೆ. ಈ ಪುಟ್ಟ ಚೆಲುವಿಯನ್ನು ಕಂಡ ಕವಿಗೆ ತನ್ನ ಮಗಳಲ್ಲಿಯೇ ಹೊಸದೊಂದು ಸೌಂದರ್ಯ ಕಾಣುತ್ತದೆ. She appears to him as a beautiful stranger! ಅಗಾಧಪಟ್ಟುಕೊಂಡ ಕವಿ, “ಏನಾರ ನಡಿಗೆ, ಯಾವೂರ ಹುಡಿಗೆ!” ಎಂದು ಉದ್ಗಾರವೆತ್ತುತ್ತಾನೆ.

ಇವಳು ಹೋಗುತ್ತಿರುವ ಕಿರುದಾರಿಯ ಎರಡೂ ಬದಿಗೆ ಬೇಲಿ ಹಬ್ಬಿದೆ. ಆ ಬೇಲಿಯಲ್ಲಿ , ಬಾವಿಯ ಸನಿಹದಲ್ಲಿ ಗುಲಬಾಕ್ಷಿ ಹಾಗು ಕಾಡುಮಲ್ಲಿಗೆ ಬೆಳೆದಿವೆ. ಅವೂ ಸಹ ಈ ಬಾಲೆಯನ್ನು ನೋಡುತ್ತವೆ. ತಂದೆಯಲ್ಲಿ ಕೌತುಕವನ್ನು ಹುಟ್ಟಿಸಿದ ಈ ದೃಶ್ಯವು ಹೂವುಗಳಲ್ಲಿ ಕನಿಕರವನ್ನು ಹುಟ್ಟಿಸಿದೆ. ನೈಸರ್ಗಿಕ ವಸ್ತುಗಳಲ್ಲಿ ಹುಟ್ಟುವ ಅನುಕಂಪ ಭಾವನೆಯು, ಮನುಷ್ಯರಲ್ಲಿ ಹುಟ್ಟಲಾರದೇನೊ?

“ಎರಡೂನು ಸಾಲಿಗೆ | ಹಾದ್ಯುದ್ದ ಬೇಲಿಗೆ ||
ಗುಲಬಾಕ್ಷಿ ಮಲ್ಲಿಗೆ | ಕೇಳತಾವ ಕಲ್ಲಿಗೆ ||
“ ಕಳಸೋದೆ ನೀರಿಗೆ | ಇಂಥ ಸುಕುಮಾರಿಗೆ ||
ಚಾಚ್ಯಾವಂಗಾಲಿಗೆ | ಮುಚ್ಚಂಜಿ ನಾಲಿಗೆ ” ||
ಸಂಜೀಯ ಜಾವಿಗೆ | ಬಂದ್ಯಲ್ಲ ಬಾವಿಗೆ || ”

ಹೂವು ಮೃದುತ್ವದ ಪ್ರತೀಕ. ಕಲ್ಲು ಕಾಠಿಣ್ಯದ ಪ್ರತೀಕ.
(‘ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ’ ಎನ್ನುವ ಕಾಳಿದಾಸನ ವಾಕ್ಯವನ್ನು ನೆನಪಿಸಿಕೊಳ್ಳಿ.) ಕಲ್ಲುಮನಸ್ಸಿನ ಕಲ್ಲನ್ನೇ ಈ ಹೂವುಗಳು ಕೇಳುತ್ತವೆ:
“ ಕಳಸೋದೆ ನೀರಿಗೆ , ಇಂಥ ಸುಕುಮಾರಿಗೆ ? ಅದೂ ಸಹ ಇಂತಹ ಮುಚ್ಚಂಜೆಯ ವೇಳೆಯಲ್ಲಿ? ”
ಈ ಪ್ರಶ್ನೆಗೆ ಆ ಕಲ್ಲು ಸಹ ಕರಗಿರಬಹುದೆ?

ಕಾಲವನ್ನು ಗುರುತಿಸಲು ಮನುಷ್ಯರಿಗೆ ಕಾಲಯಂತ್ರವೆನ್ನುವ ಸಾಧನವಿದೆ. ಮರ, ಗಿಡ, ಹೂವು ಮೊದಲಾದ ನೈಸರ್ಗಿಕ ವಸ್ತುಗಳು ಕಾಲವನ್ನು ಹೇಗೆ ಗುರುತಿಸುತ್ತಿವೆ?
“ಚಾಚ್ಯಾವಂಗಾಲಿಗೆ | ಮುಚ್ಚಂಜಿ ನಾಲಿಗೆ ” ||
ಮೂರೂಸಂಜೆಯ ನಾಲಿಗೆ (=ಮುಳುಗುತ್ತಿರುವ ಸೂರ್ಯಕಿರಣಗಳು) ಇವಳ ಅಂಗಾಲನ್ನು ಸ್ಪರ್ಶಿಸುತ್ತಿವೆ. ಇದು ಹೊತ್ತು ಮುಳುಗುವ ಸಮಯ. ಇಂತಹ ಸಮಯದಲ್ಲಿ ಯಾರಾದರೂ ಇಂತಹ ಪುಟ್ಟ ಹುಡುಗೆಯನ್ನು ನೀರು ತರಲು ಕಳಿಸಬಹುದೆ?
ತಮ್ಮ ಪ್ರಶ್ನೆಗೆ ಉತ್ತರಿಸುವರಾರೂ ಇಲ್ಲವೆಂದು ಆ ಹೂವುಗಳು ಆ ಹುಡುಗೆಯನ್ನೇ ಕೇಳುತ್ತವೆ:
“ಯಾಕವ್ವಾ, ಸಂಜೀಯ ಜಾವಿಗೆ ಬಂದ್ಯಲ್ಲ ಬಾವಿಗೆ ? ”

ಯಾರಿಂದಲೂ ಉತ್ತರ ಸಿಗದಿದ್ದಾಗ, ಆ ಹೂವುಗಳು ತಮ್ಮ ಮಾತಿಗಾಗಿ ತಾವೇ ನಾಚಿಕೊಳ್ಳುತ್ತವೆ. (ಹೂವುಗಳು ನಾಚಿಕೊಳ್ಳುವದೆಂದರೇನು? ಕೆಲವು ಹೂವುಗಳು ಸಂಜೆಯಾದಾಗ ಮುಚ್ಚಿಕೊಳ್ಳುತ್ತವೆ.) ಮೃದು ಸ್ವಭಾವದ ಆ ಹೂವುಗಳ ನಾಚಿಗೆಯ ಭಾವನೆಯು ಮಾತಿನಲ್ಲಿ ಹೇಳಲು ಸಾಧ್ಯವಾಗದಂತಹದು. (ಅದಕ್ಕಾಗಿಯೇ ಅವು ಮುಚ್ಚಿಕೊಳ್ಳುವದು.)

“ಮಾತೀಗು ಆಚೆಗೆ | ಮೀರಿದ್ದ ನಾಚಿಗೆ ||
ಮುಸುಕ್ಯಾವ ಹೂವಿಗೆ | ಬಂದೀಯೆ ಬಾವಿಗೆ ||
ಗಿಲುಕೆಂಬೊ ಬಳಿಗೆ | ಕೆಲಸೊಂದೊ ಗಳಿಗೆ ||
ಗೆಳತೇರ ಒಂದಿದೆ | ಸೇದಿದೆ ಬಿಂದಿಗೆ ||
ಸಂಜೀಯ ಜಾವಿಗೆ | ಬಂದೀಯೆ ಬಾವಿಗೆ ||”

ಈ ಬಾಲೆಯಾದರೊ ಬಳೆಗಳನ್ನು ಗಿಲುಕೆನ್ನಿಸುತ್ತ, ಒಂದೇ ಗಳಿಗೆಯಲ್ಲಿ ತನ್ನ ಜೊತೆಗಾತಿಯರೊಡನೆ ನೀರು ಸೇದಿಕೊಂಡು, ತನ್ನ ಬಿಂದಿಗೆಯನ್ನು ತುಂಬಿಕೊಂಡು ಈಗ ಮರಳಿ ಹೋಗುತ್ತಿದ್ದಾಳೆ !

“ಮೂಗಿನ ನೇರಿಗೆ | ಹೊರಳೀದೆ ಊರಿಗೆ ||
ತಲಿಮ್ಯಾಲ ಬಿಂದಿಗೆ | ಕಾಲಾಗ ಅಂದಿಗೆ ||
ತುಂ ತುಮುಕು ತುಂಬಿದೆ | ಬಿಂದೀಗೆ ಅಂತಿದೆ ||
ಝಣ್‍ಝಣ ಅಂದಿಗೆ | ಅಂದಾವ ಹೊಂದಿಗೆ ||
ಸಂಜೀಯ ಜಾವಿಗೆ | ಹೋಗಿದ್ದೆ ಬಾವಿಗೆ || ”

ಮರಳುತ್ತಿರುವ ಈ ಬಾಲೆಯ ತಲೆಯ ಮೇಲೆ ಇರುವದು ಬಿಂದಿಗೆ
ಹಾಗೂ ಕಾಲಲ್ಲಿ ಇರುವದು ಅಂದಿಗೆ ; ಈ ವರ್ಣನೆಯನ್ನು ಆಪಾದಮಸ್ತಕ ವರ್ಣನೆ ಎನ್ನಬಹುದಲ್ಲವೆ?
ತಲೆಯ ಮೇಲಿನ ಬಿಂದಿಗೆಯು ತುಂ ತುಂ ಎಂದು ಧ್ವನಿಸುತ್ತಿದ್ದರೆ, ಕಾಲೊಳಗಿನ ಅಂದಿಗೆಗಳು ಝಣ್ ಝಣ್ ಎನ್ನುತ್ತಿವೆ. ಬಿಂದಿಗೆಯ ಹಾಗೂ ಅಂದಿಗೆಯ ಧ್ವನಿಗಳು ಸಮತಾಳದಲ್ಲಿ ಸಂವಾದಿಯಾಗಿ ಹೊಂದಿಕೊಂಡಿವೆ !

ಕುಡಿಯಲು ಸಿಹಿನೀರು ತರಲು ಹೋದ ಬಾಲೆ ಒಂದು ಸಾರಿಗೆ ನೀರು ತಂದಳು. ಅಷ್ಟೇ ಸಾಕು, ಅವಳ ಮುಖದ ಮೇಲೆಲ್ಲ ಬೆವರಿನ ಹನಿಗಳು ಮೂಡಿವೆ. ತಂದೆಯ ಕಣ್ಣಿಗೆ ಇದು ಮುಂಜಾವಿನಲ್ಲಿ ಹೂವಿಗೆ ಮುಸುಕಿದ ಇಬ್ಬನಿಯಂತೆ ಕಾಣುವದು. ಈ ಬೆವರಿನ ಹನಿಗಳು ಮುತ್ತಿನ ಹನಿಗಳಂತೆ ಅವನಿಗೆ ಕಾಣುವವು.

“ಒಂದೇನೆ ಬಾರಿಗೆ | ಹೋದೆ ಸೀ-ನೀರಿಗೆ ||
ಬೆವರೀನ ಸಾರಿಗೆ | ತಂದೀದಿ ಯಾರಿಗೆ ||
ಇಬ್ಬನಿ ಹೂವಿಗೆ | ನಸುಕಿನ ಜಾವಿಗೆ ||
ಮುತ್ತ್ಹನಿ ಮಾರಿಗೆ | ಮುತ್ತ್ಯಾವೊ ನಾರಿಗೆ ||
ಸಂಜೀಯ ಜಾವಿಗೆ | ಹೋಗಿಯು ಬಾವಿಗೆ ||”

ಸಂಜೆಯ ಸಮಯದಲ್ಲಿ ನೀರು ತಂದರೂ ಸಹ, ಮುಂಜಾನೆಯ ಇಬ್ಬನಿಗಳು ಮುಖದಲ್ಲಿ ಕಾಣುತ್ತಿವೆಯಲ್ಲ ಎಂದು ಅವನಿಗೆ ಅಚ್ಚರಿಯಾಗುತ್ತಿದೆ. ತನ್ನ ಮಗಳ ಮೊಗವು ಮುಂಜಾನೆಯ ಹೂವಿನಂತೆ ಯಾವಾಗಲೂ fresh ಆಗಿಯೇ ಇರುವದು ಎಂದು ಅವನ ಭಾವನೆಯೆ?

ಆಟವಾಡುವ ವಯಸ್ಸಿನ ಬಾಲೆ ಇವಳು. ಇವಳಿಗೆ ಕೆಲಸವೆಲ್ಲವೂ ಆಟವೇ! ಈ ಪುಟ್ಟ ಗರತಿಯ ಇಂತಹ ಅಚ್ಚುಕಟ್ಟಾದ ವಿಧಾನವನ್ನು ತಂದೆ ಮೆಚ್ಚಿಕೊಳ್ಳುತ್ತಾನೆ. ಅವನ ಮನಸ್ಸು ಕುಣಿಯುತ್ತದೆ. ಈ ಆಟವನ್ನು ನೋಡಿದ ಜನರೂ ಅನೇಕರು. ಅವರ ‘ಕಣ್ಣು’ ಇವಳಿಗೆ ತಾಕಬಾರದಲ್ಲ ! ಅದಕ್ಕಾಗಿ ತಂದೆ ಇವಳಿಗೆ ನೀವಾಳಿಸುತ್ತಾನೆ.

“ಕೆಲಸಾನ ಆಟಿಗೆ | ಮಾಡುವ ಸೂಟಿಗೆ |
ಹಸನಾದ ಧರತಿಗೆ | ಮೆಚ್ಚಿದೆ ಗರತಿಗೆ ||
ಕುಣಿಸಿದೆ ಇಂದಿಗೆ | ಕಣ್ಬಿಟ್ಟ ಮಂದಿಗೆ ||
ನೀವಾಳಿ ದಿಟ್ಟಿಗೆ | ಕಣ್ಣೆಲ್ಲ ಒಟ್ಟಿಗೆ ||
ಸಂಜೀಯ ಜಾವಿಗೆ | ಹೋಗಿದ್ದ್ಯೆ ಬಾವಿಗೆ ||”

ಕವಿ ತನ್ನ ಸವಿ ಅನುಭವವನ್ನು ಮತ್ತೆ ನೆನಪಿಸಿಕೊಳ್ಳುತ್ತಾನೆ.
“ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||
ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||
ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||
ಒಲಿದಾಡೊ ರೀತಿಗೆ | ಹಾಡ್ಯಾನ ಗೀತಿಗೆ ||
ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||”

ಮೊದಲನೆಯ ನುಡಿಯು ಕೊನೆಯ ನುಡಿಯಂತೆಯೇ ಕಾಣುತ್ತಿದೆ. ಆದರೆ ಮೊದಲನೆಯ ನುಡಿಯ ನಾಲ್ಕನೆಯ ಸಾಲಿನಲ್ಲಿ “ ಹಾಡ್ಯಾನೊ ಗೀತಿಗೆ ” ಎನ್ನುವ ಉಲ್ಲಾಸಮಯ ಪ್ರಾರಂಭವಿದ್ದರೆ, ಕೊನೆಯ ನುಡಿಯ ನಾಲ್ಕನೆಯ ಸಾಲಿನಲ್ಲಿ “ ಹಾಡ್ಯಾನ ಗೀತಿಗೆ ” ಎನ್ನುವ ಮಂಗಲಮುಕ್ತಾಯವಿದೆ.

ಬೇಂದ್ರೆಯವರ ಈ ಕವನದ ಎರಡು ವೈಶಿಷ್ಟ್ಯಗಳನ್ನು ಇಲ್ಲಿ ಗಮನಿಸಬಹುದು.
ಮೊದಲನೆಯದು ಸಹಜ ಛಂದಸ್ಸು , ಅಂದರೆ ಕಾವ್ಯದ contentಗೆ ಹೊಂದಿಕೊಳ್ಳುವ metre.
ಎರಡನೆಯದು, ನಿಸರ್ಗದ ವಸ್ತುಗಳಾದ ಹೂವು , ಕಲ್ಲು ಇತ್ಯಾದಿಗಳೊಡನೆ ಕವನ ಹೊಂದಿದ ತಾದಾತ್ಮ್ಯ.
ಈ ಕವನವು ಕೇವಲ ಪುಟ್ಟ ಬಾಲೆಯ ಬಗೆಗಿನ ಕವನವಲ್ಲ. ಇದು ನಿಸರ್ಗವಸ್ತುಗಳ ಬಗೆಗಿನ ಕವನವೂ ಹೌದು.
ಅಂತೆಯೇ ಕವನ ಮುಗಿದ ಬಳಿಕವೂ ಸಹ ಕೆಳಗಿನ ಸಾಲುಗಳು ನಮ್ಮ ಮನಸ್ಸಿನಲ್ಲಿ ರಿಂಗಣಿಸುತ್ತಲೇ ಉಳಿದು ಬಿಡುತ್ತವೆ:
“ಗುಲಬಾಕ್ಷಿ, ಮಲ್ಲಿಗೆ ಕೇಳತಾವ ಕಲ್ಲಿಗೆ
ಕಳಸೋದೆ ನೀರಿಗೆ, ಇಂಥ ಸುಕುಮಾರಿಗೆ ?”

http://sallaap.blogspot.com/2009/04/blog-post_26.html